ಮಾಟಗಾರ ಸುಬ್ಬ

ಮಾಟಗಾರ ಸುಬ್ಬ

ಸುಬ್ಬನು “ಸುಗುಣಗಂಭೀರ”. ಜನರನ್ನುತಿದ್ದರು- “ಹೆಂಡತಿಯನ್ನು ಅಂಕೆಯಲ್ಲಿಟ್ಟು ಆಳುವುದನ್ನು ಸುಬ್ಬನಿಂದಲೇ ಕಲಿಯಬೇಕು” ಎಂದು, ನಿಜಕ್ಕೂ ಅಹುದು, ಸುಬ್ಬನ ಮೊದಲನೆ ಮಡದಿಯು ಆ ಗಂಭೀರದ ಪ್ರಖರತೆಗೆ ಸುಟ್ಟು ಭಸ್ಮವಾಗಿದ್ದಳು. ದ್ವಿತೀಯ ಪತ್ನಿಯು-ಸುಂದರಿ-ಕ್ಷಯದ ಮೆಟ್ಟಿಲಲ್ಲಿ ನಿಂತು, ಮೃತ್ಯು ಮಂದಿರದೊಳಗೆ ಇಣಕುತಿದ್ದಳು.

ಆಕೆಗೊಂದು ಮಗು ಹುಟ್ಟಿತು!

ನಿತ್ಯ ರೋಗೀ ಸ್ತ್ರೀಗೆ ತವರುಮನೆಗಿಂತ ಉತ್ತಮವಾದ ಆಸ್ಪತ್ರೆಯಿಲ್ಲ. ಸುಗುಣಗಂಭೀರ ಸುಬ್ಬನು ಇದನ್ನು ಬಲ್ಲಷ್ಟು ಚೆನ್ನಾಗಿ ಮತ್ತಾರೂ ಅರಿಯರು. “ಉತ್ತಮವಾದ ಹವೆಯ ಸುಖಪಡೆದು, ಆರೋಗ್ಯ ಹೊಂದುತ್ತಿರು” ಎಂದು ಹರಸಿ, ಆಕೆಯನ್ನು ಪುತ್ತೂರಿಗೆ, ತವರುಮನೆಗೆ ಕಳುಹಿಸಿಕೊಟ್ಟು ಒಂದು ನಿಟ್ಟುಸಿರು ಬಿಟ್ಟನು:-

“ನಿತ್ಯ ರೋಗೀ ಹೆಂಡತಿ ಯಿ೦ದ ಗಂಡನಿಗೇನು ಪ್ರಯೋಜನ?”

ಅದೊಂದು ಪ್ರಶ್ನೆಯಲ್ಲಿ ಜಗತ್ತೇ ಅಡಕವಾಗಿತ್ತು. ಸುಜ್ಞಾನಿಗಳಾದ ನೀವೆಲ್ಲರೂ ಅದನ್ನು ಚೆನ್ನಾಗಿ ಬಲ್ಲಿರಿ.

ಸುಂದರಿಯ ತವರುಮನೆಯ ನೆರೆಕರೆಯವರು ಆಕೆಯ ಪತಿಗೃಹದ ಸೌಭಾಗ್ಯವನ್ನು ಹೊಗಳುತ್ತ, ಒಳಗಿಂದೊಳಗೆ ಮತ್ಸರಪಡೆಯುತ್ತಿರುವಾಗ, ಇತ್ತ ಕಾರ್ಕಳದ ನಾರಾಯಣ ಕಾಮತರು ಸುಬ್ಬನ ಸುದೀರ್ಘ ಪತ್ರವೊಂದನ್ನು ಪಡೆದು ಓದಿದರು:-

“ಸುಬ್ಬನ ನಮಸ್ಕಾರಗಳು. ನಾನು ನನ್ನ ದ್ವಿತೀಯಪತ್ನಿಯ ಸಂಬಂಧವನ್ನು ತೊರೆಯಬೇಕಾಗಿ ಬಂದಿದೆ. ಕಾರಣಗಳಿವೆ. ಈಗ ಹೇಳಲಾರೆ. ನಾನು ತೃತೀಯ ಸಂಬಂಧವನ್ನು ಮಾಡಿಕೊಳ್ಳಲು ಸಿದ್ಧನಿದ್ದೇನೆ. ಒಳ್ಳೆ ರೂಪವತಿ ಹೆಣ್ಣೊಂದನ್ನು-ಸುದೃಢಕಾಯದ-ಸುಗುಣ-ಕನ್ನಿಕೆಯನ್ನು ಬಯಸುತ್ತೇನೆ. ಕಾರ್ಕಳದಲ್ಲಿ ತಮ್ಮ ಪರಿಚಯದವರಾರಾದರೂ ಇದ್ದರೆ ತಿಳಿಸಿರಿ. ವರದಕ್ಷಿಣೆಯನ್ನು ಬಯಸುವವನಲ್ಲ”

ನಾರಾಯಣ ಕಾಮತರು ತಮ್ಮ ಅಂಗಡಿಯ ಎದುರಿನ ಮನೆಯ ಕಡೆ ನೋಡಿದರು. ಬಳಕುವ ಜವ್ವನೆ ನೀಲೆಯು, ಕಿಟಕಿಯ ಬಳಿ ಕುಳಿತು, ಯೋಚನಾಮಗ್ನಳಾಗಿದ್ದಳು, ಸುಬ್ಬನಿಗೆ ಈ ನೀಲೆಯನ್ನು ಕೊಟ್ಟರಾಗದೇ?

“ಬಡವೆ; ಪ್ರಾಪ್ತ ವಯಸ್ಕಳು!” ಎಂದು ತಮ್ಮೊಳಗೆ ಆಡಿಕೊಳ್ಳುತ್ತ, ನಾರಾಯಣ ಕಾಮತರು, ಅಂಗಡಿಯನ್ನು ಪರಮಾತ್ಮನ ರಕ್ಷಣೆಗೆ ತೊರೆದು, ಕೆಳಗಿಳಿದು, ನೀಲೆಯ ಮನೆಯನ್ನು ಪ್ರವೇಶಿಸಿ, ಆಕೆಯ ತಾಯಿಯನ್ನು ಕರೆದು, ಪತ್ರದ ಅಭಿಪ್ರಾಯವನ್ನು ತಿಳಿಸಿದರು. ನೀಲೆಯ ತಾಯಿ ಸಂತೋಷದಿಂದ ಒಪ್ಪಿಕೊಂಡಳು.

ಮರುದಿನದ ಟಪ್ಪಾಲಿನಲ್ಲಿ ಸುಬ್ಬನು ಈ ಸಾರಾಂಶವನ್ನುಳ್ಳ ಪತ್ರವನ್ನು ಪಡೆದು, ಓದಿದನು:-

“…ಹುಡುಗಿಯ ಹೆಸರು ನೀಲೆ ಸುರೂಪಿ; ಸುಶಿಕ್ಷಿತ; ಸುದೃಢೆ; ಸುಗುಣಿ.”

ಸುಗುಣಗಂಭೀರ ಸುಬ್ಬನು ಉಬ್ಬಿದನು. “ರೋಗರತ್ನ ಸುಂದರಿಯನ್ನು ಪುತ್ತೂರಿನ ವೈದ್ಯರತ್ನಗಳ ಆರೈಕೆಯಲ್ಲಿರಲಿ!” ಎಂದು, ದೂರದಿಂದ ತನ್ನ ದ್ವಿತೀಯ ಪತ್ನಿಯನ್ನು ಹರಸಿದನು, ತೃತೀಯ ಪತ್ನಿಯ ಸಿದ್ಧತೆಗಾಗಿ ತನ್ನ ಕಿಸೆಯಿಂದ ಬಹು ಮೌಲ್ಯದ ಘ೦ಟನ್ ಪೆನ್ನನ್ನು ತೆಗೆದು, ಕಾರ್ಕಳ ನಾರಾಯಣಕಾಮತರಿಗೆ ತನ್ನ ಗಂಭೀರ್‍ಯಕ್ಕೊಪ್ಪುವ ಉತ್ತರವನ್ನು ಬರೆದನು.

ಟಪ್ಪಾಲು ಇಲಾಖೆಯ ಒಂದು ಲಕ್ಷಣೀಯ ವಿಚಿತ್ರವೆಂದರೆ, ಕೆಲವು ಪತ್ರಗಳು ಸಕಾಲದಲ್ಲಿ ಖಂಡಿತವಾಗಿ ತಲಪುವುವು! ಅಂತಹ ಭಾಗ್ಯಶಾಲಿ ಪತ್ರಗಳಲ್ಲಿ ಸುಬ್ಬಣ್ಣನದೂ ಒಂದು!

ನಾರಾಯಣ ಕಾಮತರಿಗೆ, ಅಂಚೆಯವನನ್ನು ನೋಡಿದ ಕೂಡಲೇ ಎದೆ ಝಲ್ಲೆನಿಸುವಂತಹ ಆನಂದಲಹರಿಯ ಅನುಭವವಾಗಲಿಲ್ಲವಾದರೂ ಕುತೂಹಲವೂ ನಿಜವಾಗಿಯೂ ವಿಶೇಷವಾಗಿತ್ತು. ಅಂಚೆಯವನು ಪತ್ರವನ್ನು ಅವರ ಕೈಗೆ ಕೊಡುವ ಮೊದಲೇ, ಇವರೇ ಕಿತ್ತುಕೊಂಡು,- ಗಲ್ಲಿಗೇರಿಸಲು ಪಾಸಿಕಂಭದ ಕೆಳಗೆ ನಿಲ್ಲಸಲ್ಪಟ್ಟಿರುವವನ ಬಳಿಗೆ ಬಂಧ ವಿಮೋಚನೆಯ ಹುಕುಮಿನ ಪತ್ರವನ್ನು ಒಯ್ಯುವವನ ವೇಗದಿಂದ ಉನ್ಮಾದನಂತೆ ಓಡಿ,- ಪತ್ರವನ್ನು ನೀಲೆಯ ತಾಯಿಯ ಕೈಗೆ ಇತ್ತು, ಪರೋಪಕಾರಮಾಡಿದ ಚರ್ಯೆಯಿಂದ ಮುಖವರಳಿಸಿದರು.

ನೀಲೆಯ ತಾಯಿಯು ಸುಗುಣಗಂಭೀರ ಸುಬ್ಬನ ಪತ್ರವನ್ನೊಡೆದು ಓದಿದಳು:-

“ಸಂತೋಷವಾಯಿತು; ಒಪ್ಪಿದೆ. ಆದರೆ, ಹುಡುಗಿಯು, ಮುಂದೆ ನಾನು ಹೇಳಿದಂತೆ ಕೇಳದಿದ್ದರೆ ಮಾಟ ಮಾಡಿ ಕೊಲ್ಲಿಸ್ಯೇನು!……” ಏನಿದು!-ನೀಲೆಯ ತಾಯಿಯು ಮುಂದೆ ಓದಲಿಲ್ಲ. ಆಶ್ಚರ್ಯ-ಕ್ರೋಧ ದುಃಖಗಳಿ೦ದ ಅಂಧೆಯಾದಳು. ಆಕೆಯ ಮನೋಮಂದಿರಗಳೆಲ್ಲ ಅವೆರಡು ಶಬ್ದಗಳಿಂದ ಒಡೆದು ಚೂರಾದವು. ಒಲೆಯ ಬಳಿಯಲ್ಲೇ ಕುಳಿತಿದ್ದಳಾದ ಕಾರಣ, ದೂರಕ್ಕೆ ನಡೆದು ಹೋಗಬೇಕಾದ ಶ್ರಮವೇನೂ ಇಲ್ಲದೆ, ಅದನ್ನು ಆಗಲೇ ಒಲೆಗೆ ಬಿಸುಡಿ, ಅದನ್ನು ಹಿಡಿದಿದ್ದ ಕೈ ಬೆರಳುಗಳನ್ನು ಒಂದು ಕ್ಷಣ ಬೆಂಕಿಯಮೇಲೆ ಹಿಡಿದು, ಮಾಟದ “ಅಣು”ಗಳಾವುವಾದರೂ ಇದ್ದಿದ್ದರೆ ಅವುಗಳನ್ನು ನಾಶಪಡಿಸಿ, ಪರಿಶುದ್ಧಳಾಗಿ, ಸುಗುಣಗಂಭೀರನಿಗೆ ತಾನೇ ಪತ್ರ ಬರೆದಳು.

ಮರುದಿನದ ಟಪ್ಪಾಲಿನವನನ್ನು ದಾರಿಯಲ್ಲಿ ಹೊಂಚು ಹಾಕಿ ಸುಗುಣಗಂಭೀರ ಸುಬ್ಬನು, ಆತನಿಂದ ಪತ್ರ ಪಡೆದು ಓದಿದನು. ಮೊದಲು ಓದಿದುದು ತನ್ನ ವಿಳಾಸವನ್ನು. ಹೀಗಿತ್ತು:-

“ಮಾಟಗಾರ ಸುಬ್ಬನಿಗೆ. . . . . . .”
ಮಾಟಗಾರ ಸುಬ್ಬ? ಎಂಥ ಹೆಸರು!

ಆ ಮೇಲೆ, ಪತ್ರದೊಳಗಿನ ಪಂಕ್ತಿಗಳು ಇವಿಷ್ಟು:-

“ನಿಮಗೆ ಮಾಟಮಾಡಿಸುವ ಶಕ್ತಿಯಿದೆಯೆಂದು ತಿಳಿಯಲು ಆನಂದವಾಗುತ್ತದೆ. ಮಾಟಮಾಡಿಸುವ ಬಗ್ಗೆ ನಿಮಗೆ ಹೆಣ್ಣು ಬೇಕಾಗಿದ್ದರೆ ಜಪಾನ್ ಗೊಂಬೆಗಳ ಅಂಗಡಿಗಾರರಿಗೆ ಬರೆದು ತರಿಸಿ, ಅವುಗಳ ಮೇಲೆ ನಿಮ್ಮ ಶಕ್ತಿಯನ್ನು ಉಪಯೋಗಿಸಿರಿ”

ಸುಬ್ಬನನ್ನೀಗ ನಾವೆಲ್ಲ “ಮಾಟಗಾರ ಸುಬ್ಬ”ನೆಂದು ಕರೆಯುತ್ತಿರುವೆವು. “ಮಾಟ” ಮತ್ತು “ಜಪಾನಗೊಂಬೆ” ಎನ್ನುತ್ತಲೇ ಸುಬ್ಬನು ಕೋಪದಿಂದ ಮೂರ್‍ಚೆಹೋಗುವನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪ ಬೆಳಗಿಸು
Next post ಭಾವವೆಂಬ ಗಿಡ ಬಳ್ಳಿಯಲಿ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…