ದೋಸ್ತಿ ಸರ್ಕಾರ ಗೋಡ್ರ ಹಿಕ್‌ಮತ್‌ನಿಂದಾಗಿ ಪಲ್ಟಿ ಹೊಡೆದೋತಲ್ರಿ. ಸರ್ಕಾರದ ಓಲ್ಡ್ ಮ್ಯಾನ್‌ಗಳಾದ ಪ್ರಕಾಸು, ಸಿಂಧ್ಯ, ಮಂಜುನಾಥ, ಮಾದೇವರೆಲ್ಲಾ ಅನಾಥರಾಗಿ ಮೊಲೆಗೆ ಬಿದ್ದಾರೆ. ಎಳೆ ಹುಡುಗರ ಗುಂಪು ಕಟ್ಕೊಂಡು ರಾಜ್ಯ ಆಳೋಕೆ ಹೊಂಟಾನೆ ಗಂಡುಗಲಿ ಕುಮಾರಣ್ಣ. ಕಾಂಗೈನಾಗೆ ಅಧಿಕಾರ ಕಳ್ಕೊಂಡ ಹೋಪ್‌ಲೆಸ್ ಫೆಲೋಗಳೂ ಆಂಡ್ ದೆನ್ ಅಧಿಕಾರಕ್ಕಾಗಿ ರಣಹದ್ದಿನಂಗೆ ಬಾಯಿ ಬಿಡ್ತಿರೋ ಬಿಜೆಪಿಗಳು ಎಲ್ಲಾ ಸೇರ್ಕೊಂಡು ಫ್ಯಾಶನ್ ಸಾಂಗ್, ಪಾಪ್ ಸಾಂಗ್, ಐಟಂ ಸಾಂಗ್ ಹಾಡ್ಲಿಕತ್ತಾರೆ. ಕೆಲವರ್ದು ಪ್ಯಾಥಸ್ ಸಾಂಗು ಒಂದಿಷ್ಟು ಸ್ಯಾಂಪಲ್ ಕೊಟ್ಟೀನಿ ಓದ್ಕಳಿ ಇಲ್ಲ ಹಾಡ್ಕಳಿ ಪ್ಲೀಸ್.

ದೋಸ್ತು ದೋಸ್ತು ನ ರಹಾ| ಗೋಡ್ರ ಪ್ಯಾರು ನ ರಹಾ
ಜಿಂದಗಿ ಮೆ ಗೌಡನ್ನಂಬಿ ಮೋಸ ಹೋದೆನಲ್ಲೇ ತುಂಬಿ
ದೋಸ್ತು ದೋಸ್ತು ನ ರಹಾ| ಅಂತ ಧರ್ಮುದಾದ ಮೊಮ್ಮಕಳ್ಳ ಸಂಗಡ ಕುಂತು ಕೋರಸ್
ಹಾಡ್ಲಿಕತ್ತದೆ. ದರ್ಬರಿ ಮೋರೆನಾಗೆ ಆರ್ಟಿಫಿಶಿಯಲ್ ನಗೆ ಮಾತ್ರ ಉಳ್ಕಂಡದೆ.
ನಾನಿರುವುದೆ ನಿಮಗಾಗಿ| ನಾಡಿರುವುದೆ ನನಗಾಗಿ
ಕೋಟಿ ಹೊಡೆಯುವೆ| ಲೂಟಿ ಮಾಡುವೆ
ಅಪ್ಪನ ನಾಟಕ ಮುಂದುವರೆಸುವೆ|| ನಾನಿರು||
ಒಂದೇ ತಾಯಿಯ ಮಕ್ಕಳ ಹಾಗೆ| ಯಡೂರಿ ಈಶ್ವರಿ ನಾವೆಲ್ಲಾ
ನಮ್ಮೊಡನಿಂದು ಗೋಡರು ಬಂದು| ಹೆಜ್ಜೆ ಹಾಕಿದರೆ ತಪ್ಪಿಲ್ಲ.
ಭರವಸೆ ನೀಡುವೆನಿಂದು| ೨೦ ತಿಂಗಳು ಆಳುವೆನೆಂದು
ತಾಯಿಯ ಆಣೆ ಸೀ‌ಎಂ ಆಗಲು ಯಡಿಯೂರಿಗೆ ಬಿಡೋದಿಲ್ಲ.

ಚುನಾವಣೆ ತಪ್ಪಿದ್ದಲ್ಲ . ಕುಮಾರನೆಂಬ ಆಸಾಮಿ ತನ್ನ ಶಾಸಕರಿಗೆ ಭರವಸೆ ಕೊಡುತ್ತಾ ಅಂತರಂಗದಲ್ಲಿ ತಂದೆ ಉಪದೇಶ ಪಡೀಲಿಕತ್ತಾನೆ.

ಯಾರೇ ಕೂಗಾಡಲಿ ಊರೇ ಹೋರಾಡಲಿ
ಗೌಡನ ನೆಮ್ಮದಿಗೆ ಭಂಗವಿಲ್ಲ| ಕುತಂತ್ರಕ್ಕೆಂದು ಕೊನೆಯೇ ಇಲ್ಲ
ಕಾಂಗೈ ಸಿದ್ದು ಬಿಜೆಪಿಗಳಿಗೆ ನಾ ಅಳುಕದ ಪಟ್ಟ ಹೊಡೆಸುವೆ||
ಅರೆ ಹೊಂಯ್ – ಗೌಡರು ಹೋಮ ಮಾಡಿಸುತ್ತಾ ಮಂತ್ರದ ಬದಲು ಈ ಸಾಂಗ್ನೆ ಸಿಂಗ್ ಮಾಡ್ತಾ ಅವರೆ ಕಣ್ರಿ. ಇನ್ನು ಎಂ.ಪಿ.ಪ್ರಕಾಸು ತನ್ನ ಪ್ಲೇಸು ಫೋಜಿಶನ್ನು ಎಲ್ಲಿ ಐತೆ ಅಂತ್ಲೆ ತಿಳಿದೆ ಹಿಂಗೆ ಹಾಡ್ಲಿ ಕತ್ತೇತೆ ಅಂತಾರ್ರಿ ಮಂದಿ.

ಇದು ಯಾರು ಬರೆದ ಕಥೋಯೋ| ನನಗಾಗಿ ಬಂದ ವ್ಯಥೆಯೋ ಕೊನೆ ಹೆಂಗೋ ಅರಿಯಲಾರೆ|
ಗೌಡಪ್ಪನ್ನ ನಂಬಲಾರೆ||

ಸಿಂಧ್ಯ ಅಂಬೋ ಮನುಷ್ಯಾನೂ ಶ್ಯಾನೆ ಡಿಪ್ರೆಶನ್ ಆಗವ್ನೆ ಕಣ್ರಿ.
ನೀನೆಲ್ಲಿ ನಡೆವೆ ದೂರ| ಎಲ್ಲೆಲ್ಲೂ ದ್ರೋಹವೆ
ಈ ಗೌಡನ ಪ್ಲಾನು ಘೋರ| ಕುಮಾರಂದೇ ದರ್ಬಾರ|
ನಾನಂತೂ ಮೈಲಿದೂರ| ಅಂತಾ ಅವ್ನೆ ಸಿಂಧ್ಯನೆಂಬ ಶೂರ.
ಜೀನಾ ಯಹಾಂ ಮರ್ನಾ ಯಹಾಂ| ಇಸ್ಕೆ ಸಿವಾ ಜಾನಾ ಕಹಾಂ

ಹಿರಿತನಕೆ ಇಲ್ಲಿ ಬೆಲೆ ಇಲ್ಲವೆ| ಹಿರಿಯೂರು ಬಸ್ಸ ನಾ ಹತ್ತುವೆ – ಅನ್ನಲಿಕತ್ತದೆ ಡಿ. ಮಂಜುನಾಥ
ಹಾವಿನ ದ್ವೇಷ ಹನ್ನೆರಡು ವರುಷ| ನನ್ನ ರೋಷ ಥವಸೆಂಡು ವರುಷ

ಯಡಿಯೂರಿಗೆ ಇನ್ನು ಸೋಲೇ ಇಲ್ಲ| ಹಿಂದುತ್ವ ಬಿಡೋದಿಲ್ಲ
ಖಜಾನೆಯ ಉಳಿಸೋಲ್ಲ| ಅಡ್ವಾಣಿಯ ಬಲದವನು|
ವಾಜಪೇಯಿಯ ಛಲದವನು| ಬಿಜೆಪಿಯ ಹುಲಿಯಿವನು – ಇವನು ಯಾವನೂಂತ ಗೊತ್ತಾತಲ್ಲ?

ದೀನ ನಾ ಬಂದಿರುವೆ| ಬಾಗಿಲಲಿ ನಿಂದಿರುವೆ
ಮಂತ್ರಿ ಸೀಟನು ನೀಡಿ| ದಯ ತೋರೊ ಯಡಿಯೂರಿ ಎಂದು ಅಳ್ಳಿಕತ್ತಾನೆ ಡಿ.ಹೆಚ್. ಶಂಕರಮೂತ್ರಿ.

ಹೆಸರ್ನಾಗ ಮಾತ್ರ ಖಾಯಂ ಮುಖ್ಯಮಂತ್ರಿ ಆಗಿರೋ ಚಂದ್ರು ಆಕ್ಟಿಂಗ್ ವಿಥ್ ಸಾಂಗ್ ಹಿಂಗೈತೆ ನೋಡ್ರಿ.
ಎಲ್ಲೋ ಯಡೂರಪ್ಪ ನನ್ನ ಮಂತ್ರಿ ಸೀಟು| ಕೊಡದಿದ್ರೆ ನಿನ್ನ ಬುರುಡೆಗೆ ಹಾಕ್ತೀನ್ ಏಟು|
ಎಲ್ಲೋ ಯಡೂರಪ್ಪ ನನ್ನ ಮಂತ್ರಿ ಸೀಟು

ನಾನೂ ನೀನು ಒಂದಾದ ಮೇಲೆ| ಹಿಂಗ್ಯಾಕೆ ನೀ ದೂರ ಓಡುವೆ
ನಾ ನಿನ್ನ ನಲ್ಲೆ ಕಬ್ಬಿನ ಜಲ್ಲೆ! ನಂಬಿರುವೆ ನಿನ್ನ ಮಂತ್ರಿ ಮಾಡು ಚಿನ್ನ
ಸೆರಗ್ಲಾಗಿಟ್ಕೊಂಡು ಕಾಪಾಡುವೆ – ಅಂತ ಶೋಭಾ ಕರಂದ್ಲಾಜೆಯ ಪ್ರಣಯ ಗೀತೆ ಹಾಡಿದ್ರೂ

ಯಡೂರಿ ಮರುಳಾಗದಂತೆ ಓಲ್ಡ್ ಮ್ಯಾನ್‌ಗಳು ಬ್ರೇಕ್ ಹಾಕವರೆ
ಯಾರು ಏನು ಮಾಡುವರೋ| ನನಗೆಂತ ಕೇಡು ಮಾಡುವರೋ
ಅಪ್ಪನು ನನ್ನ ಹಿಂದಿರುವಾಗ| ತಮ್ಮನೆ ಸಿ.ಎಂ. ಆಗಿರೋವಾಗ . ಹಿಂಗಂತ ಹೆಚ್.ಡಿ. ರೇವಣ್ಣ ಆರಾಮಾಗಿ ಗೊರಕೆ ಹೊಡಿಲಿಕತ್ತಾನ್ರಿ.

ಬೇಡುವೆನು ವರವನ್ನು| ಮಾಡೆನೆಗೆ ಮಂತ್ರಿಯನು
ಕಡೆತನಕ ಮರೆಯಲ್ಲ ಯಡೊರಿ| ದತ್ತ ಜಯಂತಿಗೆ ನಾನು ತಯಾರಿ
ಹಿಂಗಂತ ಓವರ್ ಆಕ್ಟಿಂಗ್ ಸಿಟಿ ರವಿ ಬೇಡ್ಲಿಕತ್ತಾನೆ

ಡೇಂಜರ್ ಗೌಡನ ಫ್ರೆಂಡ್‌ಶಿಪ್ಪೇ ಡೇಂಜರ್| ಕುಮಾರಸ್ವಾಮಿಯೂ ಸ್ಟ್ರೇಂಜರ್
ಹಂಗಾದ್ರೂ ಅದನಲ್ಲೋ ಸಿಯಂ| ಲೈಫ್ನಾ ನನಗಿಲ್ಲ ಚಾರಂ
ಸಿಯಮ್ಮು ಸೀಟ್ ನನ್ಗೆ ಬರಿ ಡ್ರೀಂ| ಪಂಚೇರು ಆಗೋದೆ ಶೇಮ್ ಶೇಮ್
ಇದು ಮಲ್ಲಿಕಾರ್ಜುನ ಖರ್ಗೆಯ ಶೋಕಗೀತೆ ಅನ್ಲಿಕತ್ತಾರೆ ಫೋಲಿಟೀಶಿಯನ್ನು

ರೆಡಿರೆಡಿ ರೆಡಿರೆಡಿ ಎಂದೂ ರೆಡಿ| ಪ್ರತಿಪಕ್ಷದ ಲೀಡರ್ ಆಗೋಕೆಂದೂ ರೆಡಿ|
ಕುಮಾರಂಗೆ ಇರೋದೇ ಒಂದೇ ಮೀಟರ್| ನನ್ನ ಬಾಡಿಗೆ ಡಬ್ಬಲ್ ಮೀಟರ್
ನಾನು ಡಿಕೆ ಶಿವ| ತಡವಿಕೊಂಡೋನ್ ಶವ – ಅಂತ ರೋಷಾವೇಶದಿಂವ ಅಬ್ಬರಿಸ್ಲಿಕತ್ತಾನೆ ಡಿಕೆ ಶಿವ್ಕುಮಾರನೆಂಬ ಗಮಾರ.

ಸಂತೋಷ ಆಹಾ ಓಹೋ ಸಂತೋಷ|
ರಸಮಯ ಸಂಗೀತ ಸರ್ಕಾರ ಹೊಡೀತು ಗೋತಾ|
ಹೊಸ ಹೊಸ ಸ್ಕೆಚ್ಚು ಹಾಕಿ
ಮುಂದೆ ನಾನೇ ಸಿ‌ಎಂ ಆಗಿ|
ಸೀಟೂ ಏರುವೆ…
ಓಹೋ – ಎಂದು ಅಡ್ವಾನ್ಸಾಗಿ ಕನಸು ಕಾಣಲಿಕ್ಕತ್ತಾನೆ ಮಾಜಿ ಸಿ.ಎಂ. ವಿಗ್ ಗಿರಾಕಿ ಪಿಳ್ಳಂಗೋವಿ ಕೃಷ್ಣ.

ನಗುವುದೋ ಅಳುವುದೋ ನೀವೇ ಹೇಳಿ| ಇರುವುದೋ ಬಿಡುವುದೋ ಕರ್ನಾಟಕದಿ
ಈ ಭಂಡರ ಸರ್ಕಾರ ಜೊತೆ ಹೇಗೆ ಬಾಳಲಿ
ನಗುವುದೋ ಅಳುವುದೋ ಈಗ ಏನು ಮಾಡಲಿ? ಅಂತ ಕರ್ನಾಟಕದ ಸತ್‌ಪ್ರಜೆ ಕಣ್ಣೀರು ಹಾಕ್ಲಿಕತ್ತಾನೆ. ಕಣ್ಣೀರು ಒರೆಸೋ ಕೈ ಮಾತ್ರ ಕಾಣ್ತಾ ಇಲ್ರಿ! ಮುಂದೆ ಹೆಂಗೋ ಏನೋ ಬಲ್ಲರೋ ಯಾರ್ರಿ?
*****
(ದಿ. ೧೩-೦೨-೨೦೦೬)