ಮನಸ್ಸಿದು ಅಸ್ತವ್ಯಸ್ತ ಯಾಕೆ?

ಮನಸ್ಸಿದು ಅಸ್ತವ್ಯಸ್ತ ಯಾಕೆ?

ಕೆಲವು ದಿನಗಳ ಹಿಂದೆ ಪೇಪರಿನಲ್ಲಿ ಬಂದ ಒಂದು ವರದಿ ನೋಡಿ ಮನಸ್ಸಿಗೆ ಬಹಳ ಖೇದವಾಯಿತು. ಹದಿಹರೆಯದ ಮಕ್ಕಳಿಬ್ಬರು ಟಿ.ವಿ. ನೋಡುವಾಗ ತಮ್ಮ ಆಯ್ಕೆಯ ಚಾನೆಲ್‌ಗಾಗಿ ಯಾವಾಗಲೂ ಜಗಳಾಡುತಿದ್ದುದ್ದನ್ನು ನೋಡಿ, ನೋಡಿ ಬೇಸತ್ತಿದ್ದ ತಾಯಿ ಅವರಿಬ್ಬರಿಗೂ ಬೈದು ಟಿ.ವಿ. ಆಫ್ ಮಾಡಿ ಯಾವುದೋ ಕಾರ್ಯನಿಮಿತ್ತ ಸ್ವಲ್ಪ ಹೊತ್ತು ಹೊರಗೆ ಹೋಗಿ ಬರುವಷ್ಟರಲ್ಲಿ ಹದಿನಾರು ವರುಷದ ಮಗಳು ತನ್ನ ದುಪ್ಪಟದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಳು. ಹದಿನೆಂಟು ವರುಷದ ಅಣ್ಣ ಜಗಳಾಡಿದ ಮೇಲೆ ಹೊರಗೆ ಹೋಗಿದ್ದ.

ಮನಸ್ಸಿಗೆ ಆಘಾತವಾಗುವಂತಹ ಇಂತಹ ವರದಿಗಳು ಬರುತ್ತಲೇ ಇರುತ್ತವೆ. ನಾವು ಓದುತ್ತಲೇ, ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಹತ್ತಿರದಲ್ಲಿ ನಡೆದುದನ್ನು ನೋಡುತ್ತಲೂ ಇರುತ್ತೇವೆ. ಸ್ವಲ್ಪ ದಿನದಲ್ಲಿ ಅದನ್ನು ಮರೆತೂ ಬಿಡುತ್ತೇವೆ. ಆದರೆ ಅಂತಹ ಸುದ್ದಿಗಳು ಹೃದಯಕ್ಕೆ ಹಾಕಿದ ಬರೆಯ ಕಲೆ ಅಲ್ಲೇ ಉಳಿದು ಬಿಡುತ್ತದೆ. ಅಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆ ಬರೆ ದೊಡ್ಡದಾಗುತ್ತಲೇ ಹೋಗುತ್ತದೆ.

ತಂದೆ-ತಾಯಿ ಬೈದರೆಂದು, ಒಳ್ಳೆಯ ಮಾರ್ಕು ಸಿಗಲಿಲ್ಲವೆಂದು, ಪರೀಕ್ಷೆಯಾದ ಮೇಲೆ ರಿಸಲ್ಟ್ ಬರುವ ಮುಂಚಿನ ಟೆನ್‌ಶನ್ ಎಂದು, ತಾನೆಲ್ಲಾದರೂ ಫೇಲ್ ಆದರೆ ಎನ್ನುವ ಹೆದರಿಕೆ ಎಂದು, ಯಾರೋ ತಮಾಷೆ ಮಾಡಿದರೆಂದು, ತನಗೆ ಇಷ್ಟವಾದ ಉಡುಪನ್ನು ತೆಗೆದು ಕೊಡಲಿಲ್ಲವೆಂದು, ಗೆಳೆಯರೊಡನೆ ರಾತ್ರಿ ಪಾರ್ಟಿಗೆ ಹೋಗಲು ಬಿಡಲಿಲ್ಲ ವೆಂದು, ಪ್ರೀತಿಸಿದವನನ್ನು ಮದುವೆಯಾಗಲು ಬಿಡಲಿಲ್ಲವೆಂದು, ಪ್ರೀತಿಸಿದವನು ಮೋಸ ಮಾಡಿದನೆಂದು, ಗಂಡನೊಡನೆ ಜಗಳವಾಯಿತೆಂದು, ಗಂಡನ ಅಟೆನ್‌ಶನ್ ಕಡಿಮೆಯಾಯಿತೆಂದು, ಒಂದೇ ಎರಡೇ? ಅಬ್ಬಬ್ಬಾ ಎಷ್ಟೊಂದು ಕ್ಷುಲ್ಲಕ ಕಾರಣಗಳು ತನ್ನನ್ನು ತಾನೆ ಕೊಂದು ಕೊಳ್ಳಲು! ಇದು ಹೆಣ್ಣು ಮಕ್ಕಳನ್ನು ಮಾತ್ರ ಕಾಡುವ ಸಮಸ್ಯೆಯಲ್ಲ. ಗಂಡು ಮಕ್ಕಳೂ ಆತ್ಮಹತ್ಯೆಗೆ ಶರಣಾಗುತ್ತಾರೆ. ಎಸ್.ಎಸ್.ಎಲ್.ಸಿ., ಪಿ.ಯೂ.ಸಿ. ರಿಸಲ್ಟ್ ಬಂದ ಸಮಯದಲ್ಲಂತೂ ಪೇಪರ್ ತೆರೆಯಲೂ ಭಯ.

ಯಾಕೆ ನಮ್ಮ ಯುವ ಜನಾಂಗ ಇಷ್ಟೊಂದು ದುರ್ಬಲವಾಗುತ್ತಿದೆ? ಈ ದುರ್ಬಲತೆಗೆ ಕಾರಣವೇನು?

ಹಿಂದೆ ಇಷ್ಟೊಂದು ಆತ್ಮಹತ್ಯೆಗಳು ಆಗುತ್ತಿರಲಿಲ್ಲ. ಮಕ್ಕಳಂತೂ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ. ಈಗ ಹುಟ್ಟು, ಸಾವಿನ ಅರ್ಥವೂ ಗೊತ್ತಿಲ್ಲದ ಏಳೆಂಟು ವರುಷದ ಮಕ್ಕಳೂ ನಾನು ಹುಟ್ಟ ಬಾರದಿತ್ತು. ನಾನು ಸಾಯಬೇಕು ಎನ್ನುವುದನ್ನು ಕೇಳುತ್ತೇವೆ. ಆಗಿನ ಮಕ್ಕಳಿಗೆ ಹೆತ್ತವರ ಬೈಗಳು ಇರಲಿಲ್ಲವೇ? ಇತ್ತು. ಬಹಳ ಕೆಟ್ಟ ಮಾತುಗಳ ಬೈಗಳು ಇತ್ತು. ಪೆಟ್ಟು ಚೆನ್ನಾಗಿ ಬೀಳುತ್ತಿತ್ತು. ಅದೂ ನಾಗರಬೆತ್ತದ ಪೆಟ್ಟು, ಮನೆಯಲ್ಲಿ ಗಲಾಟೆಗಳಾದಾಗ ಹೆಚ್ಚೆಂದರೆ ಮಕ್ಕಳು ಮನೆಬಿಟ್ಟು ಓಡಿ ಹೋಗುತ್ತಿದ್ದರು. ಹಾಗೆ ಹೋದವರು ಸೋತು ಸಾವಿಗೆ ಶರಣಾಗುತ್ತಿರಲಿಲ್ಲ. ಏನಾದರೂ ಸಾಧನೆ ಮಾಡಿ ಹಿಂತಿರುಗಿ ಬಂದು ಮುಖ ತೋರಿಸುತ್ತಿದ್ದರು. ಹೆತ್ತವರಿಗೆ ಆಸರೆಯೂ ಆಗುತ್ತಿದ್ದರು.

ಮನೆಬಿಟ್ಟು ಬೊಂಬಾಯಿಗೆ ಹೋದ ಎಷ್ಟೋ ಮಕ್ಕಳು ಅಲ್ಲಿ ಹೊಟೇಲಲ್ಲಿ ತಟ್ಟೆ ತೊಳೆದು ರಾತ್ರಿ ಶಾಲೆಗೆ ಹೋಗಿ ರಸ್ತೆ ದೀಪದಲ್ಲಿ ಓದಿ, ಕಲಿತು ದೊಡ್ಡ, ದೊಡ್ಡ ವ್ಯಕ್ತಿಗಳಾಗಿದ್ದನ್ನು ನೋಡಿದ್ದೇವೆ. ಕೇಳಿದ್ದೇವೆ. ಅವರಲ್ಲಿ ಅಷ್ಟೊಂದು ಛಲವಿರುತ್ತಿತ್ತು. ಜೀವಿಸುವ ಹಟವಿರುತ್ತಿತ್ತು.

ಅಸಮ ದಾಂಪತ್ಯವಂತೂ ಲೆಖ್ಖವಿಲ್ಲದಷ್ಟು ಇದ್ದುವು. ಆದರೆ ಮನೆಯ ನಾಲ್ಕು ಗೋಡೆಯ ಒಳಗೇ ಮಕ್ಕಳ ಮುಖ ನೋಡಿ ಸಹನೆ ಮತ್ತು ಮರ್ಯಾದೆ ಎನ್ನುವ ಚೌಕಟ್ಟಿನಲ್ಲಿ ಉಳಿಯುತ್ತಿದ್ದುವು. ಏನಾದರೂ ಅವರೆಲ್ಲಾ ಜೀವನಕ್ಕೆ ಹೆದರಿ ಓಡುತ್ತಿರಲಿಲ್ಲ. ಎಲ್ಲಾ ಕಷ್ಟಗಳೊಡನೆ ಜೀವಿಸುತ್ತಿದ್ದರು. ಎಲ್ಲವನ್ನೂ ಎದುರಿಸಿ ಜೀವಿಸುವ ಕೆಚ್ಚು ಅವರಿಗಿತ್ತು.

ಈಗ ಅಂತಹ ಹಟವಾಗಲೀ ಜೀವನ ಪ್ರೀತಿಯಾಗಲೀ ಏಕಿಲ್ಲ? ಆಗ ಮಾನಸಿಕ ತರಬೇತಿ ನೀಡುವ ಕೇಂದ್ರಗಳಾಗಲೀ ಹೇಗೆ ಜೀವಿಸಬೇಕು ಎಂದು ಹೇಳಿಕೊಡುವ ಕೌನ್ಸಿಲಿಂಗ್ ಸೆಂಟರ್‌ಗಳಾಗಲೀ, ಹೀಗೆ ಜೀವಿಸಿ ಎಂದು ಮಾರ್ಗದರ್ಶನ ನೀಡುವ ಪುಸ್ತಕಗಳಾಗಲೀ ಇರಲಿಲ್ಲ. ಆದರೂ ಅವರು ಎಲ್ಲ ಕಷ್ಟಗಳನ್ನೂ ಮೆಟ್ಟಿನಿಂತು ಜೀವಿಸುತ್ತಿದ್ದರು.

ಈಗಿನ ಪರಿಸ್ಥಿತಿಯನ್ನು ನೋಡುವಾಗ ಎಷ್ಟೋ ಸಲ ಅನಿಸುತ್ತದೆ ಈಗ ಮಕ್ಕಳನ್ನು ಬೆಳೆಸುತ್ತಿರುವ ರೀತಿಯೇ ಸರಿ ಇಲ್ಲವೇನೋ ಎಂದು. ಮಕ್ಕಳನ್ನು ರಫ್ ಅಂಡ್ ಟಫ್ ಆಗಿ ಬೆಳೆಸುತ್ತಿಲ್ಲ. ಕಷ್ಟ-ಸುಖ ಎರಡೂ ಇದೆ ಎನ್ನುವ ಅರಿವನ್ನು ಅವರಲ್ಲಿ ಮೂಡಿಸುವುದಿಲ್ಲ. ಬಯಸಿದ್ದೆಲ್ಲವೂ ಸಿಗುವುದಿಲ್ಲ ಎನ್ನುವ ಸತ್ಯವನ್ನು ಅವರಿಗೆ ಮನದಟ್ಟು ಮಾಡುವುದಿಲ್ಲ. ಜೀವನವನ್ನು ಎದುರಿಸುವ ಛಲವನ್ನು ಅವರಲ್ಲಿ ಹುಟ್ಟಿಸುವುದಿಲ್ಲ. ಜೀವನದಲ್ಲಿರುವ ಹಲವಾರು ಆಯ್ಕೆಗಳ ಬಗೆಗಿನ ಸಾಮಾನ್ಯ ತಿಳುವಳಿಕೆಯನ್ನೂ ಅವರಿಗೆ ಕೊಟ್ಟಿರುವುದಿಲ್ಲ. ಕಾಮನ್‌ಸೆನ್ಸ್ ಅನ್ನುವುದು ಏನೆಂದು ಅವರಿಗೆ ಗೊತ್ತೇ ಇಲ್ಲ. ಹೆಚ್ಚು ಮಾರ್‍ಕುಗಳನ್ನು ತೆಗೆಯಬೇಕೆನ್ನುವ ಒತ್ತಡದಲ್ಲಿ ಬರೇ ಪುಸ್ತಕದ ಬದನೆಕಾಯಿಗಳನ್ನಾಗಿ ಬೆಳೆಸುತ್ತಿದ್ದೇವೆ. ಮಾರ್ಕುಗಳಿಂದ ಒಳ್ಳೆಯ ಡಿಗ್ರಿಗಳನ್ನು ಪಡೆಯಬಹುದು ಆದರೆ ಜೀವಿಸುವ ಉತ್ಸಾಹವನ್ನಲ್ಲ; ಸೋಲನ್ನು ಎದುರಿಸುವ ಛಲವನ್ನಲ್ಲ.

ಮತ್ತೂ ಒಂದು ಸಂಗತಿ ಈಗಿನ ಮಕ್ಕಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ. ಏನು ಬೇಕಾದರೂ ಕೇಳಿದ ಕೂಡಲೇ ಸಿಗುತ್ತದೆ. ಕೆಲವೊಮ್ಮೆ ಅತ್ಯಂತ ದುಬಾರಿ ಬೆಲೆಯ ವಸ್ತುಗಳನ್ನು ಅವರು ಕೇಳುವ ಮುಂಚೆಯೇ ತೆಗೆಸಿ ಕೊಡುವುದನ್ನೂ ನೋಡುತ್ತೇವೆ. ‘ಇಲ್ಲ’ ಎನ್ನುವುದರ ಅರ್ಥವೇ ಈಗಿನ ಮಕ್ಕಳಿಗೆ ಗೊತ್ತಿರುವುದಿಲ್ಲ. ಹಾಗೆ ಬೆಳೆದ ಮೇಲೆ ಒಮ್ಮೆ ‘ಇಲ್ಲ’ ಅಥವಾ ‘ಬೇಡ’ ಎಂದರೆ ಅದನ್ನು ಸಹಿಸುವ ಸಹನೆ ಅವರಿಗಿರುವುದಿಲ್ಲ. ಸ್ವಲ್ಪ ನಿರಾಸೆಯನ್ನೂ ತಡೆದುಕೊಳ್ಳುವ ಮಾನಸಿಕ ಸ್ಥೈರ್‍ಯ ಅವರಲ್ಲಿರುವುದಿಲ್ಲ. ಇದರ ಹೊಣೆ ಯಾರದ್ದು?

ಹೆತ್ತವರಿಬ್ಬರೂ ದುಡಿಯುತ್ತಿರುವಾಗ ಮಕ್ಕಳಿಗೆ ಸಾಕಷ್ಟು ಲಕ್ಷ್ಯ ಸಿಗುವುದಿಲ್ಲ ಎನ್ನುವ ಪಾಪಪ್ರಜ್ಞೆಯಿಂದಲೋ, ಕೆಲವೊಮ್ಮೆ ತಂದೆ ತಾಯಿ ಬೇರೆಬೇರೆಯಾಗಿದ್ದು ಒಬ್ಬರೇ ಮಕ್ಕಳನ್ನು ಬೆಳೆಸುವಾಗ ಮಕ್ಕಳಿಗೆ ಇನ್ನೊಬ್ಬರ ಅನುಪಸ್ಥಿತಿಯ ನೋವು ಆಗಬಾರದೆಂದೋ ಮಕ್ಕಳನ್ನು ತುಂಬಾ ಡಿಪೆಂಡೆಂಟ್ ಆಗಿ ಬೆಳೆಸುವುದನ್ನು ಕಾಣುತ್ತೇವೆ. ಎಲ್ಲವನ್ನೂ ಹಿರಿಯರೇ ಮಾಡಿ ಅಥವಾ ಕೆಲಸದವರಿಂದ ಮಾಡಿಸಿ ಅವರವರ ಕೆಲಸ ಅವರವರು ಮಾಡಲಾಗದಷ್ಟು ಪರಾವಲಂಬನೆ ಅವರಲ್ಲಿ ಬೆಳೆಸುವುದನ್ನೂ ನೋಡುತ್ತೇವೆ. ಇದು ಖಂಡಿತಕ್ಕೂ ಆರೋಗ್ಯಕಾರಿ ಬೆಳವಣಿಗೆಯಲ್ಲ.

ಚಿಕ್ಕಮಕ್ಕಳಿರುವಾಗಲೇ ಮಕ್ಕಳಿಗೆ ‘ಬೇಡ’ ಮತ್ತು ‘ಇಲ್ಲ’ವೆನ್ನುವುದರ ಪರಿಚಯ ಮಾಡಿಕೊಡುವುದು ಬಹಳ ಅಗತ್ಯ. ಅಪೇಕ್ಷಿಸಿದ್ದೆಲ್ಲವೂ ಸಿಗುವುದಿಲ್ಲ ಎನ್ನುವ ಅರಿವು ಬಾಲ್ಯದಿಂದಲೇ ಇರಬೇಕು. ಬಾಲ್ಯದಲ್ಲಿ ಈ ಶಬ್ದಗಳ ಅರ್ಥ ಕಲಿಯದಿದ್ದರೆ ಮುಂದೆ ಈ ಶಬ್ದಗಳೇ ಆತ್ಮಹತ್ಯೆಯಂತಹ ಮನೋದೌರ್ಬ್ಯಲ್ಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಹೆತ್ತವರು ಮರೆಯಬಾರದು. ಈಗಿನ ಮಕ್ಕಳು ದೈಹಿಕವಾಗಿ ಆರೋಗ್ಯವಂತರಾಗಿದ್ದೂ, ಮಾನಸಿಕವಾಗಿ ದುರ್ಬಲರಾಗಿರುವುದಕ್ಕೆ ಇದೇ ಕಾರಣ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಕನಸುಗಳು ಇರಬೇಕು. ಆದರೆ ಕನಸುಗಳು ನೆನಸಾಗದಾಗ ಅದನ್ನು ಎದುರಿಸುವ ಮನೋದಾರ್ಡ್ಯತೆಯೂ ಬೇಕು ಎನ್ನುವುದನ್ನು ಮಕ್ಕಳಲ್ಲಿ ಮನದಟ್ಟು ಮಾಡಿಕೊಡಬೇಕು.

ಜೀವನದಲ್ಲಿ ಒಂದೇ ದಾರಿಯಲ್ಲ. ಹಲವಾರು ದಾರಿಗಳಿವೆ. ಕವಲುದಾರಿಗಳಂತೂ ಬಹಳವಿವೆ. ಒಂದು ದಾರಿ ಮುಚ್ಚಿದರೆ ಇನ್ನೊಂದು ದಾರಿಯಲ್ಲಿ ಹೋಗಿ ಜೀವನದಲ್ಲಿ ಗೆಲ್ಲುವ ಆತ್ಮವಿಶ್ವಾಸ ಮುಖ್ಯ ಎನ್ನುವುದನ್ನು ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ತಿಳಿಸಿದರೆ ಸ್ವಲ್ಪ ಸೋತಲ್ಲಿ ಆತ್ಮಹತ್ಯೆಗೆ ಶರಣಾಗುವುದು ಕಡಿಮೆಯಾಗಬಹುದು.

ಜೀವನದಲ್ಲಿ ಎದುರಾಗುವ ಅಡಚಣೆಗಳು, ಸೋಲುಗಳು, ನೋವುಗಳು ನಮ್ಮ ತಿಳುವಳಿಕೆಯನ್ನು ಧೈರ್ಯವನ್ನು ಬೆಳೆಸುತ್ತವೆ ಎನ್ನುವ ಅರಿವು ಮುಖ್ಯ ಸೋಲುಗಳು ಗೆಲುವಿನ ಕಡೆಗೆ ಸೋಪಾನಗಳು ಎನ್ನುವ ಅನುಭವದ ಮಾತುಗಳು ಯಾವತ್ತಿಗೂ ಸತ್ಯ!
*****
೫-೭-೨೦೦೯

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದಿರ
Next post ಸೋಸೋದು

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys