ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ
ಆನಂದಿಸುವ ಕನಸನ್ನು
ಚಿರುಗುಮೀಸೆಯ ಹುಡುಗ ಕಾಣದಿದ್ದರೆ,

ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು,
ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ
ಹೋಲಿರಂಗು,
ಇವನೆಲ್ಲ ಮೊಗ್ಗು ಹುಡುಗಿ ಕನಸದಿದ್ದರೆ,

ಕೂಸಿನ ಹಾಲು ನಗು, ಜೇನು ತೊದಲು,
ಅವ್ವು-ಅಮ್ಮಿ ಇವನೆಲ್ಲ
ಗರ್ಭಿಣಿಯು ಕನಸು ಕಾಣದಿದ್ದರೆ,

ತನ್ನ ಮಗನ ನಿಲುವಂಗಿ-ಡಿಗ್ರಿ, ಆಫೀಸರ್ ಗಿರಿ
ಅವನ ಸೂಟು-ನೋಟು
ಇವನ್ನು ತನ್ನ ಮೀಸೆ ತಿರುವಿನಲ್ಲಿ ಬೀಗಿ ತಂದೆಯು ಕಲ್ಪಿಸದಿದ್ದರೆ,

ತನ್ನ ಮಗನ ಹೆಂಡತಿ ತನ್ನನೋಲೈಸಿ ಸೇವೆ ಮಾಡಿ,
ಬಯ್ದರೂ-ತಿವಿದರೂ ತಲೆ‌ಎತ್ತದೆ ಬಾಗಿ ನಡಕೊಳ್ಳುವ
ಅತ್ತೆತನವ ತಾಯಿ ತನ್ನ ಮಗುವಿನ ಮುಂದೆ ಊಹಿಸಿ ಉಬ್ಬದಿದ್ದರೆ,

ಇಷ್ಟೆಲ್ಲ ಆಗಿ ತನ್ನ ಒಣಕೈಯಲ್ಲಿ
ಒಂದು ಹಸುಗೂಸು ತನ್ನಂತೆ ಬೊಚ್ಚು ಬಾಯಿ ತೆರೆದು
ಹಾಲುಗುಳುತ್ತ ಜಾಜಾ ಜೀಜೀ ಎಂಬುದನ್ನು
ಮೊಮ್ಮಗನ ಪಡೆಯದ ಅತ್ತೆ ಆಶಿಸದಿದ್ದರೆ,

ಕೂಸಾಗಿ-ಬೆಳೆದು-ನಂತರ
ಜೋಡಿ ಪಾರಿವಾಳಗಳಂತೆ ಒಂದು ಪುಟ್ಟ ಹೆಣ್ಣಿನೊಡನೆ ತನ್ನ
ಮುಂದೆ ಹಸೆಮೇಲೆ ಕುಳಿತಿರುವುದನ್ನು
ಮುದುಕಿ ತನ್ನ ಮಬ್ಬುಗಣ್ಣಿನಿದಿರು ಕಟ್ಟಿಕೊಳ್ಳದಿದ್ದರೆ

ಮನುಜರೆಲ್ಲ ತಮಗಿರುವುದಕ್ಕಿಂತ
ಇನ್ನು ಹೆಚ್ಚು ಹೆಚ್ಚು ಸುಖಗಳಿಗಾಗಿ ಹಂಬಲಿಸಿ-ಕನಸಿ-ನನಸದಿದ್ದರೆ
ಈ ಬದುಕಿನಲ್ಲಿ ಬಾಳಬೇಕು ಎಂಬಂಥಾದ್ದು ಏನಿದ್ದಿತು
ಇಲ್ಲ-ಬದುಕನ್ನು ನಡೆಸುವುದೇ ಕನಸು
ನಾಳಿನ ಸವಿಗನಸು
*****