ಒಂದು ಸುಂದರ ಸರೋವರ. ಅದರ ಸನಿಹದಲ್ಲಿ ಹಸಿರು ಸೊಂಪಿನಿಂದ ಕಂಗೊಳಿಸುವ ಒಂದು ದೊಡ್ಡ ಮರ. ಅದರಲ್ಲಿ ಇದ್ದ ಎರಡು ಹಕ್ಕಿಗಳಲ್ಲಿ ವಿವಾದ ಬಂದಿತು. ಒಂದು ಹಕ್ಕಿ ಹೇಳಿತು- “ಪ್ರಾರ್ಥನೆಯೇ ಶ್ರೇಷ್ಠವಾದುದು” ಎಂದು. ಇನ್ನೊಂದು ಹಕ್ಕಿ ಹೇಳಿತು “ಧ್ಯಾನವೇ ಪರಮ ಶ್ರೇಷ್ಠವಾದುದು” ಎಂದಿತು. ಎರಡೂ ವಿವಾದ ಮಾಡಿ ಕೊನೆಗೆ ಸರೋವರದಲ್ಲಿ ಅರಳಿದ ಕಮಲದ ಬಳಿ ಬಂದು ಕೇಳಿದವು.

ಕಮಲ ಹೇಳಿತು- “ನಾನು ಮೊಗ್ಗಾಗಿ ಇರುವಾಗ ದಳಗಳನ್ನು ಜೋಡಿಸಿ ಪ್ರಾರ್ಥಿಸುವೆ. ನಾನು ಅರಳಿ ಧ್ಯಾನಸ್ತವಾದಾಗ ನನಗೆ ಸೂರ್ಯನ ಸತ್ಯ ದರ್ಶನ ವಾಗುವುದು. ಪ್ರಾರ್ಥನೆ, ಧ್ಯಾನ ಇವೆರಡರಿಂದ ನಾನು ಪೂರ್ಣತೆ ಪಡೆದಿರುವೆ” ಎಂದಿತು. ಹಕ್ಕಿಗಳು ವಿವಾದ ನಿಲ್ಲಿಸಿ ಅರಿವು ಪಡೆದು ಹಾರಿ ಹೋದವು.
*****