ಓರ್ವ ವಿರಹಿ ಪ್ರೇಮಿಗೆ ದಿನವೂ ಒಂದು ಕನಸು ಬೀಳುತ್ತಿತ್ತು. ಅವನು ತನ್ನ ಪ್ರೀತಿ ಪುತ್ಥಳಿಯನ್ನು ಹಿಂಬಾಲಿಸಿ ನಡೆಯುತ್ತಲೇ ಇದ್ದ. ಮೈಲಿ ಮೈಲಿಗೂ ಅವಳು ನಿಂತಂತೆ ಅನಿಸಿ ಮತ್ತೆ ಮುಂದೆ ಸಾಗುತ್ತಿದ್ದಳು. ಅದೇ ವೇಗದಲ್ಲಿ ಅವನೂ ಸಾಗುತ್ತಿದ್ದ. ಕನಸಿನ ಹಾದಿಯಲ್ಲಿ ಪ್ರೀತಿಯ ಸೆರಗು ಹಾರಿ ಹಾರಿ ನಡಿಗೆ ಮುಂದುವರಿಸಲು ಕರೆ ನೀಡುತ್ತಿತ್ತು. ಎಚ್ಚೆತ್ತು ದಿನದ ಬೆಳಗಲ್ಲಿ ಅದೇ ಹಾದಿಯಲ್ಲಿ ಪ್ರೀತಿ ಹುಡುಕಿ ಸಾಗಿದ. ಅವನಿಗೆ ಕಂಡದ್ದು ಮೈಲಿ ಮೈಲಿಗೂ ದಿಟ್ಟ ನಿಲುವಲ್ಲಿ ನಿಂತ ಮೈಲಿ ಗಲ್ಲುಗಳು. ಅವುಗಳ ನಿಲುವಿನ ಬಿಂಬದಲ್ಲಿ ಅವನು ಕಂಡದ್ದು ತಾಯಿ, ತಂದೆ, ಅಕ್ಕ, ತಂಗಿ, ಅಣ್ಣ, ತಮ್ಮ, ಬಂಧುಬಳಗ ಮತ್ತೂ ತನ್ನ ಪ್ರೇಯಸಿಯನ್ನು. ಇವರೆಲ್ಲರೂ ತನ್ನ ಬಾಳಿನುದ್ದಕ್ಕೂ ನಡೆಸಿದ ಮೈಲಿಗಲ್ಲುಗಳಲ್ಲವೇ? ಎಂಬ ಅರಿವು ಪ್ರೇಯಸಿಯ ವಿರಹಕ್ಕೆ ತಂಪೆರಚಿತು.
*****