ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ

ನಡೆದರು ಮುಗಿಯದ ಕಾಡಿನ ಹಾದಿ
ಕಾಣಿಸಿತೊಂದು ಗುಡಿಸಲ ಬಿಡದಿ

ಮೀಯಲು ಬೆಚ್ಚನೆ ಬಿಸಿ ನೀರಿತ್ತು
ಕುಡಿಯಲು ಪನ್ನೀರಿನ ಷರಬತ್ತು

ಒಲೆಯ ಮೇಲೊಂದು ಮಾಯಾ ಗಡಿಗೆ
ಬಯಸಿದ ತಕ್ಷಣ ಪಾಯಸದಡಿಗೆ

ಆ ದಿನ ಅಲ್ಲೇ ನಮ್ಮ ಠಿಕಾಣಿ
ದಿಂಬಿನ ಬದಿಗೇ ನೂಲಿನ ಏಣಿ

ಮಲಗಿರಲೇನದು ಯಾರೋ ಎದ್ದು
ಮನೆಯೊಳಗೆಲ್ಲೋ ನಡೆಯುವ ಸದ್ದು

ಕನಸೋ ನೆನಸೊ ಯಾರಿಗೆ ಗೊತ್ತು
ರಾತ್ರಿ ತುಂಬಾ ಹೊತ್ತಾಗಿತ್ತು

ಅಜ್ಜೀ ಅಜ್ಜೀ ಏನಜ್ಜೀ
ನಡೆಯುವ ಸದ್ದು ಯಾರಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಹೇಳುವೆನೊಂದು ಸುದ್ದಿಯ ನಿಮಗೆ
ಕಣ್ಣಿಗೆ ಮಂಪರು ಹತ್ತುವವರೆಗೆ

ತುಂಬಾ ಚೆಲುವೆ ರಾಜನ ಮಗಳು
ಕಾಲಿನವರೆಗೂ ಇಳಿಯುವ ಹೆರಳು

ಆದರೆ ಒಬ್ಬ ಮಾಂತ್ರಿಕ ಬಂದು
ಪೀಡಿಸುತಿರುವನು ಆಕೆಯನಿಂದು

ತಾನೇ ಹಿಡಿದು ಆಕೆಯ ಕೈಯ
ರಾಜ್ಯವ ಪಡೆವುದು ಅವನ ಉಪಾಯ

ನಾಳೆ ಹೇಳುವೆ ಇನ್ನುಳಿದದ್ದು
ಮಲಗಿರಿ ಈಗ ಕಂಬಳಿ ಹೊದ್ದು

ಅಜ್ಜೀ ಅಜ್ಜೀ ಹೇಳಜ್ಜೀ
ಆತನ ಕೊಲುವುದು ಹೇಗಜ್ಜೀ

ಬಂದಿಲ್ಲವೆ ಮಕ್ಕಳೆ ಇನ್ನೂ ನಿದ್ದೆ
ಬಂದಿದೆಯೆಂದೇ ನಾ ತಿಳಿದಿದ್ದೆ

ಏಳು ಸಮುದ್ರಗಳಾಚೆಗೆ ದ್ವೀಪ
ಉರಿಯುವುದಲ್ಲಿ ನಂದಾದೀಪ

ಅಲ್ಲೇ ಇರುವುದು ಮಾಂತ್ರಿಕ ಜೀವ
ಆರಿಸಲೆಂದೇ ಆತನು ಸಾವ

ಆದರೆ ಮಾತ್ರ ದ್ವೀಪದ ಸುತ್ತಲು
ರಕ್ಕಸನೊಬ್ಬ ಇರುವನು ಕಾವಲು

ನಾಳೆ ಹೇಳುವೆ ಆತನ ಗುಟ್ಟು
ಮಲಗಿರಿ ಈಗ ಗಾಬರಿ ಬಿಟ್ಟು

ಭಾರೀ ನಿದ್ದೆಯೆ ಬಿದ್ದಿರಬೇಕು
ಎಚ್ಚರವಾಗಲು ಸೂರ್ಯನ ಬೆಳಕು

ಸುತ್ತ ನೋಡಿದರೆ ಉರಿಗಣ್ಣುಜ್ಜಿ
ಎಲ್ಲೂ ಇಲ್ಲದ ಅಡಗೂಲಜ್ಜಿ

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ
ಎಲ್ಲ ಗುರುತುಗಳನು ಒಮ್ಮೆಲೆ ಉಜ್ಜಿ
*****