ಪ್ರಿಯ ಸಖಿ,
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ ‘ಕೆಟ್ಟ ಬಿಸಿಲೆಂ’ದರು
ಮಳೆ ಬಿತ್ತೋ ‘ಬಿಡದಲ್ಲ ಶನಿ’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.
ಕವಿ ಕೆ. ಎಸ್. ನರಸಿಂಹಸ್ವಾಮಿಯವರ ‘ಇಕ್ಕಳ’ ಕವನದ ಈ ಸಾಲುಗಳು ವಿಕ್ಷಿಪ್ತ ಮನೋಭಾವದ ವ್ಯಕ್ತಿಗಳ ಮನೋಭಾವವನ್ನು ಕುರಿತ ಚಿತ್ರಣವನ್ನು ನೀಡುತ್ತದೆ. ಸದಾ ಟೀಕಿಸುವುದನ್ನೇ ಗುರಿಯಾಗಿ ಇಟ್ಟುಕೊಂಡ ಇಂತವರಿಗೆ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ ಪ್ರವೃತ್ತಿ, ಟೀಕೆ ಮಾಡಿ ಗೊಣಗಾಡದಿದ್ದರೆ ಇವರಿಗೆ ಸಮಾಧಾನವೇ ಇಲ್ಲ. ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಎಲ್ಲದರ ಬಗೆಗೂ ಇವರಿಗೆ ಅಸಮಾಧಾನವೇ. ಕವನವಮ್ನ ಮುಂದುವರೆಸುತ್ತಾ ಕವಿ
ನಿಂತವರ ಕೇಳುವರು, ನೀನೇಕೆ ನಿಂತೆ?
ಮಲಗಿದರೆ ಗೊಣಗುವರು. ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ!
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಯಾವುದನ್ನೂ ಒಪ್ಪದ ಇವರಿಗೆ ನಿಂತರೂ ತಪ್ಪು ಮಲಗಿದರೂ ತಪ್ಪು, ಓಡಿದರೂ ತಪ್ಪು! ಒಟ್ಟಿನಲ್ಲಿ ಯಾವ ವಸ್ತುವನ್ನೇ ಆಗಲಿ ಪರಿಸ್ಥಿತಿಯನ್ನೇ ಆಗಲಿ, ಕಾಲವನ್ನೇ ಆಗಲಿ, ವ್ಯಕ್ತಿಯನ್ನೇ ಆಗಲಿ ಟೇಕಿಸುತ್ತಲೇ ಇರುವುದು ಇವರ ಸ್ವಭಾವ. ಇದೊಂದು ರೀತಿಯ ಮನೋರೋಗವೂ ಹೌದು. ಅತೃಪ್ತ ಮನಸ್ಸಿಗೆ ಸದಾಲೋಕವೇ ಡೊಂಕಾಗಿ ಕಾಣುತ್ತದೆ. ಯಾವುದರಿಂದಲೂ ತೃಪ್ತಿ ಹೊಂದದ ವಿಲಕ್ಷಣ ವ್ಯಕ್ತಿಗಳೊಂದಗಿನ ಬಾಳೂ ಅಸಹನೀಯವೇ.

ಇಂತಹವರ ಕೈಗಳಿಗೆ ಸಿಕ್ಕಿಕೊಂಡ ವ್ಯಕ್ತಿ ಇಕ್ಕಳದ ಮಧ್ಯೆ ಸಿಕ್ಕಂತೆ ಚಡಪಡಿಸ ಬೇಕಾಗುತ್ತದೆ. ಯಾವುದು ಸರಿಯೋ? ಯಾವುದು ತಪ್ಪೋ? ಯಾವುದನ್ನು ಮಾಡಬೇಕು? ಯಾವುದನ್ನು ಬಿಡಬೇಕು? ಹೇಗೆ ನಡೆದುಕೊಂಡರೆ ಸರಿ? ಎಂದು ಅರಿಯದೇ ಚಡಪಡಿಸಿ, ಗೊಂದಲಕ್ಕೊಳಗಾಗುತ್ತಾನೆ. ಆದರೆ ಇಂತಹ ಅತೃಪ್ತ ಮನಸ್ಸಿನವರ ಟೀಕೆಗೆ ಕಿವಿಗೊಟ್ಟು ಮಾನಸಿಕ ಕ್ಷೋಭೆಗೊಳಗಾಗುವುದಕ್ಕಿಂತಾ, ಅವರನ್ನು ಅವರ ಪಾಡಿಗೆ ಟೀಕಿಸಲು ಬಿಟ್ಟು, ನಮ್ಮ ವಿವೇಚನೆಯಿಂದ ಸರಿ ತಪ್ಪನ್ನು ತಿಳಿದುಕೊಂಡು ಅವರ ಮಾತುಗಳಿಗೆ ಜಾಣ ಕಿವುಡು ನಟಿಸುವುದೇ ಉತ್ತಮವಾದ ಮಾರ್ಗ ಎಂದು ನನಗನ್ನಿಸುತ್ತದೆ. ನಿನ್ನ ಅಭಿಪ್ರಾಯವೇನು ಸಖಿ?
*****