ಯಾರು ಕಲಿಸಿದರು ಗೆಳತಿ ಹಾಡುವುದ ಹೇಳೆ
ನನಗಿಷ್ಟು ಕಲಿಸುವೆಯ ಹಾಡಿನ ಲೀಲೆ
ಮರಗಳಲಿ ಕುಳಿತಿರುವೆ ಕಾಣದಾ ಕೊಂಬೆಯೊಳು
ಸುಖ ದುಃಖದಿಂ ದೂರ ನೆಲದಿಂದ ಮೇಲೆ
ಸಿಹಿಕಹಿಗಳೊಳಗಿನಿತು ಬೆರೆಯದೇ
ಶುದ್ಧ ಸಲಿಲದ ರೀತಿ ಇಹುದು ನಿನ್ನಯ ಗಾನ
ಹುಟ್ಟು ಸಾವುಗಳ ನೆರಳು ಬೆಳಕುಗಳಿಂದ
ಆಚೆಗಿಹ ವಿಶ್ವಚೇತನದ ವರದಾನಾ
ತಾಳವಿಲ್ಲ ಪಕ್ಕವಾದ್ಯವೊಂದು ಇಲ್ಲದಿದ್ದರು
ಕೇಳುವವರ ಸಭೆಯು ಇಲ್ಲ ಕೇಳಿ ಆಹ ಎನ್ನಲು
ಆದರೂ ಎಂಥ ಮಧುರ ಸಕ್ಕರೆಯ ಬೇನು
ಕಲಿಯಲಿಕ್ಕೆ ಇಷ್ಟು ಕಾಲ ಹೋಗಿದ್ದೆ ಏನು
ಒಂದೇ ಸ್ವರದಲಿ ಜೇನಿನ ಮಳೆಯನು
ಸುರಿಯುವಿ ಬೇಸರವಿಲ್ಲದೆ ನೀನು
ಇಲ್ಲಿಯ ಸರಗಳ ಕೇಳುತ ದಣಿದಿಹೆ
ಅಲ್ಲಿಯ ರಾಗವ ಕೇಳಲು ಕಾದಿಹೆ
ನಿನಗಾಗಿಯೆ ನೀ ಹಾಡಲು ನನಗಿರುವುದು ಲಾಭ
ತನಗಾಗಿಯೆ ಸೂರ್ಯನಿರಲು ಬೆಳಕೆನ್ನೆಯ ಲಾಭ
*****
Latest posts by ವೃಷಭೇಂದ್ರಾಚಾರ್ ಅರ್ಕಸಾಲಿ (see all)
- ಎಲ್ಲಿಗೆ ಓಡುವುದು - April 5, 2018
- ವೇಸ್ಟ್ ಬಾಡೀಸ್ - March 29, 2018
- ದೀಪ ಆರದಿರಲಿ - March 22, 2018