ಕೇವಲ ಮೂರು ತಾಸಿನೊಳಗೆ
ಯಾರಿಗೂ ತ್ರಾಸು ಕೊಡದೆ
ಇದ್ದಕ್ಕಿದ್ದಂತೆ, ಅವಸರದಲ್ಲಿ
ಎದ್ದುಹೋದುದು ಎಲ್ಲಿಗೆ
ಯಾವ ಮೋಹನ ಮುರಳಿ ಕರೆಯಿತು
ಯಾವ ತೀರಕೆ ನಿನ್ನನು
ಯಾರ ಮೇಲೀ ಮುನಿಸು
ಯಾಕೆ ನೊಂದಿತು ಮನಸು
ನಿನ್ನ ನಿರ್ಗಮನದಿಂದ
ಘಾಸಿಗೊಂಡ ಭಾನು ಕಳೆಗುಂದಿತು
ನಿರಂತರ ಸುರಿದ ಕಂಬನಿಗೆ
ಭೂಮಿ ಬಿರಿಯಿತು
ಮೇಘವರ್ಷದ ಈ ರಂಪಕ್ಕೆ
ಚಿತ್ರಗಳು ತತ್ತರಿಸಿದವು
ಏಕೀ ರುಷ್ಠತೆ……
ಹತ್ತಿರದ ಮನಸುಗಳ ಭೇದಿಸಿ
ಜತೆಬಿಟ್ಟು ಕತೆಬಿಟ್ಟು,
ಎತ್ತಣ ಪಯಣ!
ನಾಕವೆ ನರಕವೆ?
ಅಲ್ಲಿ ಏನಿದೆಯೆಂದು
ಯಾವ ಮರುಳಿಗೆ
ಇಲ್ಲಿಯ ನಂಟು, ಗಂಟು
ಬಂಧನಗಳ ತೊರೆದು
ತೋರಿಸಿದ ಅವಸರಕ್ಕೆ ಏನರ್ಥ
ಮರಳಿ ಬಾರದ, ಕಾಣದ
ಉಲಿಯದ ನಲಿಯದ ನಿರಾಕಾರಕ್ಕೆ
ನಿನ್ನ ನಿಯಮ, ನಿನ್ನ ನಮನಗಳು
ನಿನ್ನ ಭಾವಸುಮನಗಳಾಗಿ
ಆಕಾಶದ ನೆಲೆಯ ಶೋಧನೆಯಲ್ಲಿ ಹೊರಟದ್ದು
ಅದೆಂಥಾ ನಿರ್ವಾಣದೆಡೆಗೆ
ನಾನು- ನೀನಿಲ್ಲದ
ಭಾವಲೋಕದ ಅಂಚಿಗೆ….!
*****