ಬಾ ಗೆಳೆಯ ಬಾ
ಹೃದಯದಂಗಳದಲ್ಲಿ
ಚಿತ್ತಾರ ಬಿಡಿಸು ಬಾ
ಬಾನಿನಂಗಳದಲ್ಲಿ
ಚಂದಿರ ನೀನಾಗು ಬಾ
ನೀ ಬರುವಿಯೆಂದು
ಕಾಯುತಿರುವೆ ಕಾತುರದೆ
ಇಹಪರವ ಮರೆತು
ಹೃದಯ ಬಾಗಿಲು ತೆರೆದು
ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ
ಮುಗುಳ್ಳಗೆಯ ಮಲ್ಲಿಗೆ ಮುಡಿದು
ಮೌನ ಬಂಗಾರದ ಒಡವೆ ತೊಟ್ಟು
ನಿನ್ನ ದಾರಿಗೆ ಹೂ ಚೆಲ್ಲಲು
ಮನದ ಕತ್ತಲೆ ಕಳೆವ
ಜೀವ ಜ್ಯೋತಿ ನೀನಾಗು ಬಾ.
ಬರಡಾದ ಬದುಕಿಗೆ
ಚೈತನ್ಯ ಚಿಲುಮೆಯಾಗು ಬಾ
ಬಯಕೆಗಳ ಬೆಂಕಿಗೆ
ವರುಣ ನೀನಾಗು ಬಾ
ಏಕತಾನದ ಬಾಳಿನಲ್ಲಿ
ಸುಸ್ವರವ ನುಡಿಸು ಬಾ
ರಾಮನಿಗೆ ಕಾಯ್ದ ಶಬರಿಯಂತೆ
ಚಂದ್ರಮಗೆ ಕಾಯುವ ಚಕೋರಿಯಂತೆ
ಭ್ರಮರಂಗೆ ಪರಿತಪಿಸುವ ಹೂವಿನಂತೆ
ಭಕ್ತನಿಗೆ ಕಾಯುವ ಭಗವಂತನಂತೆ
ಬಾ ಗೆಳೆಯ ಬಾ
ಹೃದಯಂಗಳದಲ್ಲಿ
ಚಿತ್ತಾರ ಬಿಡಿಸು ಬಾ.
*****