ಸೌದಿ ಪೇಟೆಗಳು

ತೈಲ ಸಮೃದ್ಧಿಯಿಂದ ಬಂದ ಸಂಪತ್ತಿನಿಂದ ಇಲ್ಲಿಯ ಪೇಟೆಗಳು ಒಂದಕ್ಕಿಂತ ಮತ್ತೊಂದು ಆಕರ್ಷಕವಾಗಿವೆ.  ಜೆಡ್ಡಾದಲ್ಲಿ ಕೆಲವೊಂದು ನೋಡಲೇ ಬೇಕಾದಂತಹ ವಾಣಿಜ್ಯ ಸಂಕೀರ್ಣಗಳಿವೆ. ಏನೂ ಕೊಂಡುಕೊಳ್ಳದೇ  ಹೋದರೂ ಯಾರು ಏನೂ ಅನ್ನುವುದಿಲ್ಲ. ಸಮಯ ಹೊಂದಿಸಿಕೊಂಡು ಸುತ್ತಾಡಬೇಕಷ್ಟೆ. ಇಲ್ಲಿ  ಹದಿನೈದು ವರ್ಷಗಳಲ್ಲಿ ಒಂದನ್ನೂ ಬಿಡದೇ ತಿರುಗಿದ್ದೇ ತಿರುಗಿದ್ದು.

ಇಲ್ಲಿ ಶಾಪಿಂಗ್ ಮಾಡುವದೇ, ಬಹಳ ಖುಷಿ. ಅವರವರ ಹಣಕಾಸಿಗೆ ಹೊಂದುವಂತಹ ನೂರಾರು, ಸಾವಿರಾರು ಅಂಗಡಿಗಳಿವೆ. ಇತ್ತೀಚಿನ ಕೆಲವೇ ಸ್ವದೇಶಿ ಉತ್ಪಾದನೆಗಳನ್ನು ಬಿಟ್ಟರೆ ಉಳಿದೆವಲ್ಲಾ ವಿದೇಶೀ ಸಾಮಾನುಗಳನ್ನೇ ಕಾಣುತ್ತೇವೆ. ನೋಡಿದತ್ತೆಲ್ಲ ಝಗಮಗಿಸುವ ವಾತಾರವಣ. ಇಲೆಕ್ಟ್ರಾನಿಕ್ಸ್ ವಸ್ತುಗಳಿಂದ ಹಿಡಿದು ಚಪ್ಪಲಿಗಳವರೆಗೆಲ್ಲ ಜಗತ್ತಿನ ಬೇರೆ ಬೇರೆ ದೇಶಗಳಿಂದ ಬಂದವೇ. ಇಲ್ಲಿ ಕೊಳ್ಳುವ ಯಾವ ವಸ್ತುವಿಗೂ ಸೇಲ್ಸ್ ಟ್ಯಾಕ್ಸ್ ಕೂಡಬೇಕಾಗಿಲ್ಲ. ನಮ್ಮಲ್ಲಿ ಒಂದಿಷ್ಟು ಭಾಗ ತೆರಿಗೆ, ಸಾಗಾಣಿಕೆ ವೆಚ್ಚ ಎಂದೆಲ್ಲ ಗದ್ದಲದಿಂದ ಒಂದೊಂದು ಸಲ ಮನ ಬಿಚ್ಹಿಕೊಳ್ಳಬೇಕೆ
ನಿಸುವುದೇ ಇಲ್ಲ. ಬಂಗಾರ-ವಜ್ರಗಳಿಗೂ ಇಲ್ಲಿ ಯಾವ ತೆರಿಗೆಯೂ .ಇಲ್ಲ. ಶೇ 100 ರಷ್ಟು ಶುದ್ಧ ಅದದ್ದು. ಮುಕ್ತ ಪೇಟೆಯಲ್ಲಿ ಗ್ಯಾರೆಂಟಿ ಕಾರ್ಡ್‌ಗಳೊಂದಿಗೆ ಕಿಲೋಕಿಲೋ ಗಳನ್ನು ಕೊಳ್ಳಬಹುದು. ಅದರೆ ಬಾಂಬೆ ಕಷ್ಟಂದ ಬಿಗಿ ವಾತಾವರಣಕ್ಕೆ ಸಾಮಾನ್ಯರು ಯಾರೂ ಕೊಳ್ಳುವದಿಲ್ಲ. ಆದರೆ ಕಳ್ಳಸಾಗಾಣಿಕೆದಾರರು ತಮ್ಮದೇ ಹಾದಿ ಹುಡುಕಿ
ಕೊಳ್ಳುತ್ತಾರೆ.

ಇಲ್ಲಿನ “ಕ್ವೀನ್ಸ್ ಬಿಲ್ಡಿಂಗ್” ಹತ್ತಿರದಲ್ಲಿರುವ ಬಂಗಾರ ಪೇಟೆಯಂತೂ ನಾನು ಮರೆಯಲು ಸಾಧ್ಯವೇ ಇಲ್ಲ.  ದೊಡ್ಡ ಅಂಗಡಿಗಳೆಲ್ಲ ಬಂಗಾರ ಒಡವೆಗಳಿಂದ ತುಂಬಿ ಹೋಗಿರುತ್ತವೆ. ಒಂದೂಂದು ಅಂಗಡಿಯಲ್ಲಿಯ ಅಭರಣಗಳನ್ನೆಲ್ಲ ತೂಗಿದರೆ ಟನ್ ಟನ್ಗಳಷ್ಟು ಹೊರಬೀಳುತ್ತದೆ. ಅಂದರೆ ಬಂಗಾರದ ಪೇಟೆಯಲ್ಲಿ ನೂರು-ಸಾವಿರ ಟನ್‌ಗಳಷ್ಟು ಇರಬಹುದು ಒಂದು ಯೋಚಸಬಹುದು.

ನಾನು ಮೊದಲನೆಯ ಸಲ ಝಗಝಗಿಸುವ ಪೇಟೆ ನೋಡುವಾಗ ಪೆದ್ಧಾಗಿ ಹೋಗಿದ್ದೆ. ಯಾವುದೋಕನಸಿನ, ಯಾವುದೋ ನಗರಿಯೊಳಗೆ ಅಡ್ಡಾಡಿದ ಅನುಭವ ವಾಗುತ್ತಿತ್ತು. ವಿಸ್ಮಯಲೋಕದಲ್ಲಿ ಕಳೆದುಹೋದ (Alice) ಅಲಿಸಳಂತಾಗಿತ್ತು ನನ್ನ ಸ್ಥಿತಿ. ಶುದ್ಧ 99.99 ಸ್ವಿಸ್‌ಮೇಡ್ ಬಿಸ್ಕಟ್‌‌ಗಳಂತೂ 5 ಗ್ರಾಂ ದಿಂದ 10 ತೊಲೆ ಭಾರದವರಗೆ
ಇಟ್ಟಿಗೆಯಂತೆ ಸಾಲಾಗಿ ಒಂದರ ಮೇಲೊಂದು ಜೋಡಿಸಿ ಇಟ್ಟರುತ್ತಾರೆ. ರಾಜ-ರಾಣಿಯರ ಮುಖ ಚಿತ್ರವಿರುವ ಬಂಗಾರ ನಾಣ್ಯಗಳಿಗಿಲ್ಲೇನೊ ಕೊರತೆ ಇಲ್ಲ. ಖುಷಿಗೆಂದು ಚೈನಿನಲ್ಲಿ ಹಾಕಿಕೊಳ್ಳಲು, ಉಂಗುರದಲ್ಲಿಟ್ಟುಕೊಳ್ಳಲು ಅಥವಾ ಯಾರಿಗಾದರೂ ಉಡುಗೊರೆ ಕೊಡಬೇಕೆಂದಿದ್ದಲ್ಲಿ ಇಲ್ಲಿ ನೇರವಾಗಿ ಈ ನಾಣ್ಯಗಳನ್ನು ಕೊಂಡುಕೊಳ್ಳುತ್ತಾರೆ. ಯಾವ ನಿರ್ಬಂಧವೂ ಇಲ್ಲಿಲ್ಲ.

ಸರ, ಬಳೆಗಳ ವಿವಿಧ ವಿನ್ಯಾಸ ಅಚ್ಚರಿಪಡುವಂತಿದೆ; ನಮ್ಮಲ್ಲಿಯ ಬಳೆಗಾರನ ಅಂಗಡಿಯಲ್ಲಿ ಗಾಜಿನ ಬಳೆಗಳು ಅಂಗಡಿ ಪೂರ್ತಿ ತುಂಬಿರುವಂತೆ ಇಲ್ಲಿ ಬಂಗಾರ ಬಳೆಗಳದೇ ಪೂರ್ತಿ ಅಂಗಡಿ. ಚಿನ್ನದ ಸರಗಳನ್ನೆಂತೂ ಸಣ್ಣ – ದೊಡ್ಡವೆಲ್ಲ ತೂಗು ಹಾಕಿರುತ್ತಾರೆ. ಕೆಲವು ನಿಜಕ್ಕೂ ಹಗ್ಗದಷ್ಟು ದಪ್ಪವಾಗಿರುತ್ತವೆಯೆಂದರೆ ನಂಬಲು ಸಾಧ್ಯವೇ ಇಲ್ಲ. ಅಷ್ಟೇ ಏಕೆ ಚೈನುಗಳ ನೂರಾರು ಮೀಟರುಗಳಷ್ಟನ್ನು ಉಂಡೆಯಂತೆ ಸುತ್ತಿಟ್ಟಿರುವರು. ಯಾರಿಗೆ ತಮಗೆಷ್ಟು ಉದ್ಧಬೇಕೋ ಅಷ್ಟನ್ನು ಹೇಳಿದರಾಯ್ತು. ಅಷ್ಟು ಆ ಉಂಡೆಯಿಂದ ಕತ್ತರಿಸಿ ಮುಂದಿನ 5-10 ನಿಮಿಷಗಳಲ್ಲಿ ಅದಕ್ಕೆ
ಹುಕ್ ಹಾಕಿಕೊಟ್ಟುಬಿಡುವರು. ನಮ್ಮಲ್ಲಿಯಂತೆ ಒಂದು ಉಂಗುರ, ಚೈನುಗಳಿಗೆ ನೂರಾರು ಸಲ ಪತ್ತಾರನ ಅಂಗಡಿಗೆ ಎಡತಾಕಬೇಕಿಲ್ಲ. ಮೇಲಾಗಿ ‘ನಮ್ಮದು ಇಷ್ಟು ಬಂಗಾರ ಹೊಡಕೊಂಡ ಅಥವಾ ತಿಂದ’ ಎಂದು ಪತ್ತಾರನನ್ನು ಶಪಿಸಲೂ ಬೇಕಿಲ್ಲ ಇಲ್ಲಿ. ಪ್ರತಿ ಅಭರಣಕ್ಕೆ ಅದೆಷ್ಟು ಕ್ಯಾರೆಟ್‌ದು  ಎನ್ನುವ ಗುರುತಿನ ಸಿಕ್ಕ ಒಳಭಾಗಕ್ಕೆ ಇದ್ದೇ ಇರುತ್ತದೆ. 10, 12, 18, 22 ಈ ತರಹ ನೋಡಿ ಕೊಂಡುಕೊಳ್ಳಬಹುದು. ನಮಗೆ ಬೇಡವಾದಾಗಲೂ ಕೂಡಾ ಆಯಾ ಕ್ಯಾರೆಟ್ಟಿಗೆ ಅಂದಿನ ಬೆಲೆಗೆ ಮಾರಲೂಬಹುದು. ಇಲ್ಲಿಯ ಪತ್ತಾರ ‘ನಿಮ್ಮ ಬಂಗಾರ ಕರಗಿಸಿಕೊಂಡು ಬನ್ನಿ’ ಎಂದು
ಅನ್ನುವದಿಲ್ಲ.  ಎಷ್ಟೋ ವಿಷಯಗಳಲ್ಲಿ ನಮ್ಮಲ್ಲಿ ಸಣ್ಣ ಸಣ್ಣ ವಿಷಯಕ್ಕೆ ತಲೆಕೆಡುವುದುಂಟು. ನಾವು ಭಾರತೀಯರಿ- ಗಂತೂ 24 ಕ್ಯಾರೆಟಿನ ಆಭರಣಗಳೇ ಬೇಕು. ಅಂದರೆ ಮಾತ್ರ ಅಪ್ಪಟ ಚಿನ್ನದ ಆಭರಣಯೆಂಬ ಹೆಮ್ಮೆ. ಆದರೆ ಇಲ್ಲಿಯ
ಯೂರೋಪಿಯನ್ನರು, ಅಮೇರಿಕನ್ನರು ಇದಕ್ಕೆ ಪೂರ್ತಿ ವಿರುದ್ದ. ಕೇವಲ 8 ಕ್ಯಾರೆಟ್ಟಿನ ಚೈನುಗಳಷ್ಟು ಹಾಕಿಕೊಂಡು ಅದೆಷ್ಟು ಖುಷಿಪಡುತ್ತಾರೆನ್ನುವದು ನನಗಿಲ್ಲಿ ಬಂದ ಮೇಲೆಯೇ ಗೊತ್ತಾಯಿತು. ನಾನು ಸಾಕಷ್ಟು ಅಮೇರಿಕನ್ ಮಹಿಳೆಯರನ್ನು ಸಾಕಷ್ಟು ವರ್ಷಗಳಿಂದ ನೋಡಿದರೂ, ಅವರೆಂದೂ ಬಂಗಾರ ಹಾಗೆ ಹೀಗೆ ಇರಬೇಕೆನ್ನುವ ಅಭಿಪ್ರಾಯಕ್ಕೆ ಬರಲೇ ಇಲ್ಲ. ನನಗದೆಷ್ಟೋ ಸಲ ಅವರ ಅಭಿಪ್ರಾಯ ಹಿಡಿಸಿದರೂ ನನಗೆ ಮಾತ್ರ ಆಭರಣ ಕೊಂಡು- ಕೊಳ್ಳುವ ಪ್ರಸಂಗ ಬಂದಾಗೆಲ್ಲ 22-23 ಕ್ಯಾರಟ್ಟಿನದೇ ಇರಬೇಕೆನ್ನುವ ನನ್ನ ಹುಚ್ಚು ಅಭಿಪ್ರಾಯ ಮಾತ್ರ ಬದಲಾಗಲೇ ಇಲ್ಲ. ಇಂತಹ ಕೆಲವು ಭಿನ್ನಾಭಿಪ್ರಾಯಗಳಿಗೆ ನನ್ನವರು ತಲೆ ಕೆಡಿಸಿಕೊಳ್ಳದೆ ‘ಏನಾದರೂ
ತೆಗೆದುಕೋ’ ಎಂದು ಸುಮ್ಮನಿರುತ್ತಿದ್ದರು.

ಭಾರತೀಯ ವಿವಿಧ ವಿನ್ಯಾಸದ  ಕುಸುರಿನ ಅಭರಣಗಳಿಗೆ ಇಲ್ಲಿ ಬಹಳ ಬೇಡಿಕೆ, ಹೀಗಾಗಿ ಬಾಂಬೆ- ದಿಲ್ಲಿಗಳಿಂದ ಚಿತ್ತಾರದ ಕಿವಿಯೋಲೆಗಳು, ನೆಕ್ಲಸ್, ನಡಪಟ್ಟಿ, ಕೈಕಡಗಗಳು ಬಹಳ ಆಕರ್ಷಕವಾದವುಗಳು ಇಲ್ಲಿ ತುಂಬಿವೆ. ಅವುಗಳನ್ನೆಲ್ಹಾ ಅಂಗಡಿಯ ಕನ್ನಡಿಯಲ್ಲಿ ಹೊಂದಿಸಿಡುವ, ಅದರ ಮೇಲೆ ಬೆಳಕನ್ನು ಹರಿದಾಡಿಸುವ ವಿನ್ಯಾಸ ವೈಖರಿಗಳೂ ಮೆಚ್ಚಲೇಬೇಕಾದವುಗಳು. ಇವೆಲ್ಲ 23 ಕ್ಯಾರೆಟ್ಟನ ಆಭರಣಗಳು ಏಷ್ಯನ್ನರಾದ ನಾವುಗಳು ಇಂತಹವು- ಗಳನ್ನೆಲ್ಲಾ ಇಷ್ಟಪಟ್ಟುಕೊಂಡು ಹಣ ದಂಡಮಾಡಿ ಬ್ಯಾಂಕಿನಲ್ಲಿಡುತ್ತೇವೆ. ಅದರೆ ಪಾಶ್ಚಾತ್ಯರು ಯಾರೂ ಇಂತಹದರಲ್ಲಿ ಹಣ ತೊಡಗಿ ಸುವದಿಲ್ಲ. ಅವರ ಯೋಜನೆಗಳೇ ಬೇರೆ.

ಇಷ್ಟೆಲ್ಲಾ ಗೊತ್ತಿದ್ದರೂ ಬಣ್ಣದ ಹರಳುಗಳ – ಮುತ್ತುಗಳ – ವಜ್ರಗಳ ಅಂಗಡಿಗಳನ್ನು ಹೊಕ್ಕರಂತೂ ಹಾಗೇ ಬರಲಿಕ್ಕೆ ಮನಸ್ಸಾಗುವದೇ ಇಲ್ಲ. ಏನೆಲ್ಲ ಅಭರಣಗಳು, ಮಶೀನಿನಿಂದ ತಯಾರಿಸಿದವುಗಳು; ಇಲ್ಲಿಯ ಒಂದು ಪದ್ಧತಿಯೆಂದರೆ
ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಅಥವಾ ಇನ್ನೇನಾದರೂ ವಿಶೇಷ ದಿನಗಳಿದ್ದಲ್ಲಿ ಸಂಬಂಧೀಕರು, ಸ್ನೇಹಿತರು ಚಿನ್ನದ ಉಂಗುರ-ಚೈನುಗಳನ್ನೂ ಕಿವಿಯೋಲೆ ಗಳನ್ನೂ ಕೊಡುತ್ತಾರೆ. ಹೀಗೆ ಒಬ್ಬರು ಮತ್ತೊಬ್ಬರು ಚಿನ್ನದ ಉಡುಗೊರೆ ಕೊಡುವಲ್ಲಿ ಖುಷಿ ಕಂಡುಕೊಳ್ಳುವರು. ನಮಗಿದೆಲ್ಲ ಅನುಭವವಾದಾಗ, ನಮ್ಮಲ್ಲಿಯೂ ಎಂದಾದರೂ ಈ ತರಹದ ಆನಂದದ – ಶ್ರೀಮಂತರ ವಾತಾವರಣ ಬರುವದೇ ಎಂದು ಯೋಚಿಸುವಂತಾಗುತ್ತದೆ. ಅಥವಾ ಹಿಂದೆ ವಿಜಯನಗರದರಸರ ಕಾಲದಲ್ಲಿ ಇಂಥದೇ ಸ್ಥಿತಿ ಇತ್ತೋ ಏನೋ, ಯಾರು ಬಲ್ಲರು? ಕವಿ ಗೋಕಾಕರ ಪದ್ಯದ
ಸಾಲುಗಳ ನೆನಪಾಗುತ್ತವೆ.

‘ಹಿಂದೆ ಹಾಯ್ದಿತ್ತೊಮ್ಮೆ ಚಂದನದ ಹೊಗೆಯು;
ಹಿಂದೆ ಕೇಳಿತ್ತೊಮ್ಮೆ ನಾಡವರ ನಗೆಯು;
ಮುಂದುಗಾಣವು ಇಂದು ಹೆಚ್ಚುತ್ತಿದೆ ಹಗೆಯು
ಹಿಂದು ಮುಂದಿಲ್ಲದಲೆ ನೊಂದಿಹುದು ಬಗೆಯು.

ಜೆಡ್ಡಾದ ‘ಕಂದಾರಾ ಬಂಗಾರ ಪೇಟೆ’ ಬಹಳ ಪ್ರಸಿದ್ಧಿ ಪಡೆದಿದೆ. ಇಲ್ಲೆಲ್ಲ ಬಂಗಾರದ ದಿನ್ನೆಗಳೇ ಇವೆ. ಅರೇಬಿಯೆನ್ ಸ್ತ್ರೀಯರು ಆಭರಣ ಪ್ರಿಯರು. ಅವರ ಒಂದೊಂದು ಕೊರಳಹಾರಗಳು 30-40 ತೊಲೆಗಳಲ್ಲಿರುತ್ತವೆ, ನಡಪಟ್ಟಿಗಳೂ ಅಷ್ಟೇ. ಇವರು ಮದುವೆ ಸಮಯದಲ್ಲಿ ಉಪಯೋಗಿಸುವ ಕೆಲವು ಆಭರಣಗಳು ವಿಶಿಷ್ಟ ವಾದವುಗಳು. ಮೈ ಕೈಯೆಲ್ಲಾ ಅಭರಣಗಳಿಂದ ಮುಚ್ಚಲೇಬೇಕು. ಕಣ್ಣು ಕೋರೈಸುವ ನೂರಾರು ಸಾವಿರಾರು ಚಿತ್ತಾರದ ಅಭರಣಗಳು ಯಾವ ಕಳ್ಳರ ಹೆದರಿಕೆಯಿಲ್ಲದೆ ತೆರೆದ ಅಂಗಡಿಯಲ್ಲಿ ತೂಗಾಡುತ್ತಿರುತ್ತವೆ.

ಬಟ್ಟೆಗಳ ಅಂಗಡಿಗಳಲ್ಲಿಯೂ ಜನ ಗಿಜಗುಡುತ್ತಿರುತ್ತಾರೆ. ಪ್ಯಾರಿಸಿನ ಫ್ಯಾನ್ಸಿ ಬಟ್ಟೆಗಳಿಂದ ಹಿಡಿದು  ಇಂಡೋ- ನೇಶಿಯದ ಸಾದಾ ಕಾಟನ್ ಬಟ್ಟೆಗಳವರೆಗೂ ಏನೆಲ್ಲ ಅಂದಚಂದದ ಉಡುಗೆಗಳನ್ನೆಲ್ಲ ನೋಡಬಹುದು, ಕೊಳ್ಳಬಹುದು. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಬೆಲೆಯುಳ್ಳ ಬಟ್ಟೆಗಳಿದ್ದರೆ ಜನ ಸಾಮಾನ್ಯರಿಗೆ ಕೈಗೆಟುಕುವಂತೆ ಸಿಗುವ
ಬಟ್ಟೆ ಪೇಟೆಗಳಿಗೆ- ಟ್ರಕ್‌ಸೂಕ್, ಬವಾದಿಸೂಕ್, ಯಮಾನಿಸೂಕ್, ಮಟೆರಿಯಲ್ ಸೂಕ್ ಮುಂತಾದವುಗಳನ್ನು ಹೆಸರಿಸಬಹುದು. ಇಲ್ಲಿ ‘ಸೂಕ್’ ಎನ್ನುವ ಅರಬ್ಬೀ ಪದದ ಅರ್ಥ “ಪೇಟೆ” ಎಂದು. ಇಲ್ಲೆಲ್ಲ ಹಣ ದುಬಾರಿ ವಿಂದು ಚಿಂತಿಸುವದೇಬೇಡ. ಇಲ್ಲೆಲ್ಲ ಹೆಚ್ಚಾಗಿ  ಸಿಂಗಾಪೂರ, ಕೊರಿಯಾ, ಥೈಲ್ಯಾಂಡ್ ಸಾಮಾನುಗಳು ಕಡಿಮೆ
ಹಣದಲ್ಲಿ ಸಿಗುವವು. ಹಣ ಕಡಿಮೆಯಾದರೂ ಗುಣಮಟ್ಟ ಚೆನ್ನಾಗಿರುತ್ತವೆ. ಮಕ್ಕಳಿಗಂತೂ ಬಣ್ಣ ಬಣ್ಣದ ಬಟ್ಟೆಗಳು, ಆಟಗೆ ಸಾಮಾನುಗಳು ಹೇಳತೀರದಷ್ಟು! ಮಶೀನ್‌ನಲ್ಲಿ ತಯಾರಿಸಿದ ಕಾರ್ಪೆಟ್‌ಗಳಂತೂ ಅತೀ ಸೋವಿ. ವರ್ಷದ ಕೊನೆಗೆ ಊರಿಗೆ ಹೋಗುವ ಜನರಂತೂ ಇಲ್ಲಿ ಯಾವತ್ತೂ ತುಂಬಿರುತ್ತಾರೆ.

ಜಪಾನಿನ ಬಟ್ಟೆಗಳೇ ಇಲ್ಲಿ ಹೆಚ್ಚು. ಜಾರ್ಜೆಟ್ -. ನೈಲಾನ್ ಬಟ್ಟೆಗಳಂತೂ ವಿಪರೀತ. ಜಪಾನಿನ ಸಿಲ್ಕ್ ಬಟ್ಟೆಗಳನ್ನು ಇಲ್ಲಿ ನೋಡಿದರೂ ಅವು ಮೃದುವಾಗಿ, ಅಕರ್ಷಕವಾಗಿ ಇದ್ದರೂ ರೇಷ್ಮೆಯಲ್ಲಿ ನಮ್ಮ ಬೆಂಗಳೂರು ಮೈಸೂರು ರೇಷ್ಮೆಯೇ ಅಪ್ಪಟ ಬೆಲೆಯುಳ್ಳದ್ದು. ಇಂಡಿಯಾದ ರೇಶ್ಮೆ ಸೀರೆಗಳ ಮುಂದೆ ಇಲ್ಲಿಯವು ಏನೂ ಅಲ್ಲ.

ಒಳ್ಳೊಳ್ಳೆಯ ಬಣ್ಣ ಗಳ ಜಪಾನಿನ ತಯಾರಿಕೆಯ ಬಟ್ಟೆಗಳು, ಮ್ಯಾಕ್ಸಿಗಳು ಇಂಡೋನೇಶಿಯದ ಕಾಟನ್ ಬಾಟಿಕ್ ಮ್ಯಾಕ್ಸಿಗಳನ್ನು ಹಾಕಿಕೊಳ್ಳುವದು ಯೂರೋ ಅಮೇರಿಕನ್ ಮಹಿಳೆಯರಿಗೆ ವಿಪರೀತ ಹುಚ್ಚು.

ಒಳ್ಳೊಳ್ಳೆಯ ಸೂಪರ್‌ಮಾರ್ಕೆಟ್‌ಗಳ  ಒಂದಿಷ್ಟು ಹೇಳಲೇಬೇಕು ಸೂಪರ್ ಮಾರ್ಕೆಟ್ ಒಳಗಡೆ ಹೊಕ್ಕರೆ ಒಂದೇ ವಿಶಾಲ ಅಂಗಣದಲ್ಲಿ ಏನು ಬೇಕೆಲ್ಲ ಕೊಂಡುಕೊಳ್ಳಬಹುದು. ಅಡುಗೆ ಮನೆಯ ಪಾತ್ರೆ ಪಡಗಗಳಿಂದ ತಿಂಡಿ ತೀರ್ಥಗಳ೨, ಹಾಲು-ಮೊಸರು, ಐಸ್‌ಕ್ರೀಂ, ಬೆಣ್ಣೆ-ಚೀಸ್ (ಗಿಣ್ಣ) ಕೇಕ್-ಕ್ರೀಂಗಳು, ಟಿನ್‌ಫುಡ್‌ಗಳಂತೂ ಸಾಕಷ್ಟು. ಇಲ್ಲಿ ಆಕಳು  ಹಾಲು ದಿನಾಲೂ ಸಿಗುವುದಿಲ್ಲ. ಈ ದೇಶದಲ್ಲಿ ಅಕಳು-ಎಮ್ಮೆಗಳು ಇಲ್ಲವೇ ಇಲ್ಲ. ಆದರೆ ಇತ್ತೀಚೆಗೆ ಕೇಳಿದ್ದೇವೆಂದರೆ ಇಲ್ಲಿಯೂ ಕೂಡ Halland Denmarkದವರ ಸಹಯೋಗದಿಂದ ಶ್ರೀಮಂತ ಉದ್ದಿಮೆದಾರರು ದೊಡ್ಡ ದೊಡ್ಡ ಡೈರಿಗಳನ್ನು ತೆಗೆದು ಸಾಕಷ್ಟು ಪ್ರಮಾಣದಲ್ಲಿ ದೇಶದಲ್ಲಿಯೇ ಹಾಲಿನ  ತಯಾರಿ ಮಾಡುತ್ತಾರೆಂದು ಅಲ್ಲದೇ ಪಕ್ಕದ ದೇಶಗಳಿಗೆ ನಿರ್ಯಾತ ಕೂಡ ಮಾಡುತ್ತಾರೆಂದು. ಹಾಲು ಹಾಗೂ ಉಳಿದ ಹಾಲಿನ
ಉತ್ಪನ್ನಗಳೆಲ್ಲ ಡಬ್ಬಗಳಲ್ಲಿ ಹಾಲೆಂಡ್‌ದಿಂದ ಬರುತ್ತವೆ. ಹಾಗೆಯೇ ಟಿನ್ ತರಕಾರಿ ಕೂಡ ಉಪಯೋಗಿಸಬಹುದು. ಕಾಳು ಕಡಿಗಳು, ಬೀಸಿದ ಎಲ್ಲ ಕಾಳುಗಳ ಹಿಟ್ಟುಗಳು ಸಾಮಾನುಗಳು ನೀಟಾಗಿ ಇಟ್ಟಿರುವರು. ಅದರಂತೆ ಒಣಹಣ್ಣುಗಳನ್ನು ದೊಡ್ಡದೊಡ್ಡ ಬುಟ್ಟಿಯಲ್ಲಿ ತುಂಬಿಟ್ಟಿರುವರು. ಹಣ್ಣಿನ ರಸಗಳು ಹಾಗೂ ತಂಪು ಪಾನೀಯಗಳು ಹೆಸರಿನ ಪಟ್ಟಿ ಬರೆದಲ್ಲಿ 2-3 ಪುಟವಾದಿಕತು.  ಹಣ್ಣಿನ ಹಾಗೂ ತಂಪು ಪಾನೀಯಗಳು ರುಚಿ ಒಂದನ್ನೂ ಬಿಡದೆ ಹದಿನೈದು ವರ್ಷ ಕಾಲ  ಅನುಭವಿಸಿದ್ದೇವೆ.

ಪಾಶ್ಚಾತ್ಯರು ಅರೋಗ್ಯದ ಕಡೆಗೆ ಯಾವಾಗಲೂ ಕಾಳಜಿ ಕೊಡುವದರಿಂದ ಪ್ರತಿಯೊಂದು ತಿಂಡಿಯ ಡಬ್ಬದ ಮೇಲಿರುವ ಕ್ಯಾಲರಿಗಳ ವಿವರ ನೋಡಿ ತೆಗೆದುಕೊಳ್ಳುವರು. ಅದರೆ ಸ್ವಳೀಯ ಸೌದಿಗಳು ಮಾತ್ರ ಏನೂ ಲೆಕ್ಕಿಸದೆ ತೆಗೆದು ಕೊಳ್ಳುತ್ತಿರುತ್ತಾರೆ.

ಸೂಪರ್ ಮಾರ್ಕೆಟ್ ಪ್ರವೇಶಿಸುತ್ತಿದ್ದಂತೆಯೇ ಒಂದು ಬದಿಗೆ ನೂರಾರು ಟ್ರಾಲಿಗಳಿರುತ್ತವೆ. ಈ ನೂಕು ಬಂಡಿಯಲ್ಲಿ ಸಣ್ಣ ಮಕ್ಕಳನ್ನು ಕೂಡಿಸಲು ಬರುವಂತೆ ವ್ಯವಸ್ಥೆಯೂ ಇರುತ್ತದೆ. ಒಂದಷ್ಟು ಎಳೆದುಕೊಂಡು ಸ್ಟಾರ್ಟಿಂಗ್ ಪಾಯಿಂಟ್‌ದಿಂದ ಹೊರಟು ಬೇಕಾದದ್ದನ್ನೆಲ್ಲಾ ತುಂಬಬಹುದು. ಮೇಲೆ ಹೇಳಿದಂತೆ ತಿಂಡಿ ರ್ತಿರ್ಥಗಳಿಂದ
ಹಿಡಿದು ಬಟ್ಟೆಗಳು, ಬೂಟು. ಸಾಕ್ಸ್, ಮಕ್ಕಳ ಹಾಗೂ ದೊಡ್ಡವರ ಆಟಿಕೆಗಳು, ಇಲೆಕ್ಟ್ರಿಕ್-ಇಲೆಕ್ಟ್ರಾನಿಕ್ಸ್‌ದಲ್ಲಿ ಬರುವ ಪ್ರಸಿದ್ದ ವಸ್ತುಗಳು, ಸ್ತ್ರೀಯರ ಫ್ಯಾನ್ಸಿ ವಸ್ತುಗಳಿಂದ ಸುಗಂಧ ದ್ರವ್ಯಗಳವರೆಗೆ, ಪುಸ್ತಕ ಪೇಪರ್‌ ಮ್ಯಾಗಝಿನ್ ಮಳಿಗೆಗಳು, ಬಂಗಾರ ಬೆಳ್ಳಿಯ ಅಭರಣಗಳು, ಚೆಂದದ ವಸ್ತುಗಳು, ಉಡುಗೊರೆ ವಸ್ತುಗಳು ನೂರಾರು ನೂರಾರು ಸಾಮಾನುಗಳಿರುತ್ತವೆ. ಇಷ್ಟೇ ಅಲ್ಲದೇ ಕೆಲವು ಸೂಪರ್ ಮಾರ್ಕೆಟ್‌ಗಳಲ್ಲಿ ಒಳ್ಳೊಳ್ಳೆಯ ಗಾರ್ಡನ್ ಗಿಡ-ಬಳ್ಳಿಗಳು, ಮಣ್ಣು ಗೊಬ್ಬರಗಳು ಸಿಗುವವು. ಹಾಗೆಯೇ ಸಾಕು ಪ್ರಾಣಿಗಳಾದ ಬೆಕ್ಕು, ಮೊಲ, ಪಕ್ಷಿಗಳು, ಮೀನುಗಳು ಅವಕ್ಕೆ ಬೇಕಾದ ಬಲೆಗಳು, ತಿಂಡಿಗಳೂ ಸಿಗುವವು. ಇವೆಲ್ಲ ಭಾರೀ ಬೆಲೆಯುಳ್ಳವು. ಹೀಗೆ ಬೇಕಾದದ್ದೆಲ್ಲಾ ಟ್ರಾಲಿಯಲ್ಲಿ ಇಟ್ಟುಕೊಂಡು ಕೊನೆಗೆ ಗಣಕಯಂತ್ರದೆಡೆಗೆ ಬರಬೇಕು. ಪ್ರತಿ ಸಾಮಾನುಗಳ ಪಾಕೀಟಿನ ಮೇಲೆ ಮೊದಲೇ ಅಳತೆಯೆ-ಹಣ ಎಲ್ಲ ಇದ್ದೇ ಇರುತ್ತದೆ. ಗಣಕದ ಸಹಾಯದಿಂದ ಅಲ್ಲಿಯ ಸಹಾಯಕ ಬೆಲೆ ಕೂಡಿಸಿ  ಕೊಡುವನು. ನಂತರ ನಮ್ಮ ಸಾಮಾನು ಹೊಂದಿದ ಟ್ರಾಲಿಯೊಂದಿಗೆ ನಮ್ಮ ಕಾರಿನವರೆಗೆ ಒಯ್ದು ಎಲ್ಲ ಕಾರಿನಲ್ಲಿಟ್ಟುಕೊಂಡು ಟ್ರಾಲಿ ಅಲ್ಲಿಯೇ ಒಂದು ಕಡೆಗೆ  ಸರಿಸಿದರಾಯ್ತು. ಒಟ್ಟಿನ ಮೇಲೆ ಇಲ್ಲಿ ಯಾವ ವಿಷಯಕ್ಕೂ ಚರ್ಚೆಯೇ ಇಲ್ಲ.
ಅಕಸ್ಮಿಕವಾಗಿ ದೂರುಗಳೇನಾದರೂ ಇದ್ದಲ್ಲಿ ಅಡಳಿತ ಮುಖ್ಯಸ್ಥನ ಹತ್ತಿರ ಚರ್ಚಿಸಿದರಾಯ್ತು.

ಇಲ್ಲಿ ಹೆಸರಿಸಬಹುದಾದ ಒಳ್ಳೊಳೆಯ ಮಾರ್ಕೆಟ್‌ಗಳೆಂದರೆ, ಇಂಟರ್ ನ್ಯಾಷನಲ್ ಮಾರ್ಕೆಟ್, ಸೇಫ್‌ವೇ ಕಾರವಾನ್… ಇವೆಲ್ಲ ದಿನನಿತ್ಯದ ದಿನಸಿ ಷಾಷಿಂಗ್‌ಕ್ಕೆ ಪ್ರಸಿದ್ಧವಾಗಿದ್ದರೆ ಮಿಡಲ್ ಈಸ್ಟ್‌, ಫೆತಾಯ್‌ಕಾಂಪ್ಲೆಕ್ಸ್ Gazaz, IKEA Complex,ಗಳೆಲ್ಲ ಒಳ್ಳೆ ಪ್ಯಾರಿಸ್ ಶೈಲಿ ಪಡೆದಿವೆ. ಎರಡು ಮಾದರಿ ಅಂತಸ್ತಿನ ಮೂರಂತಸ್ತಿನ- ವರೆಗೆ ಲಿಫ್ಟ್ ಮೂಲಕ ಏರಿಳಿದು ಸುಂದರ ಕಾರಂಜಿಗಳ ಸೌಂದರ್ಯ ಅನುಭವಿಸುತ್ತ ಭಾರೀ ಭಾರೀ ಸಾಮಾನುಗಳೆಲ್ಲ ನೋಡುವದರೊಂದಿಗೆ ಕೊಂಡುಕೊಳ್ಳಬಹುದು. ಬಹುಶಃ ಇಂತಹ ಕಡೆಗೆಲ್ಲ  ಜನರು ಕಾಣುವದೇ ಇಲ್ಲ. Fithai Complex ಹೊರನೋಟದಲ್ಲೇ ರಾಯಲ್ ಆಗಿದೆ. ಕೋಟ್ಯಾಧೀಶರಿಗೇ ಮಾಡಿಟ್ಟರಬಹುದು. ಸೌದಿ ರಾಯಲ್ ಫ್ಯಾಮಿಲೀಸ್‌ಗೇ ಹೇಳಿ ಮಾಡಿಸಿದಂತಿದೆ. ಒಳಗೆಲ್ಲ ಸ್ವೀಡನ್ನಿನ ಸಾಮಾನುಗಳಿಂದ ಹಿಡಿದು ಬಂಗಾರ ವಜ್ರಗಳ ಚಮಚಗಳವರೆಗೆಲ್ಲ ಸಿಗುವವು. ಕೆಲವೊಂದು ಸಲ ನೋಡುವದೇ ಒಂದು ಆನಂದ, ಹೀಗೂ ಜಗತ್ತು ಜನ
ಇರುವರೇ ಎಂದು ಬಹಳ ಆಶ್ಚರ್ಯವಾಗುವುದು. ಹಣ ಸಿಕ್ಕಾಪಟ್ಟೆ ಖರ್ಚು ಮಾಡಿ ಬೇಕೆಂದದ್ದು ವಿಚಾರಿಸದೇ ಕೊಂಡುಕೊಂಡು ಬಿಡುವವರು ಇಲ್ಲಿ ಸಾಕಷ್ಟು.

ಮಕ್ಕಳಿಗೇ ಪ್ರಿಯವಾದ ದೊಡ್ಡ ಎರಡು ಆಂಗಡಿಗಳಿವೆ. ಇವೆರಡೂ ‘ಟಾಯ್‌ಲ್ಯಾಂಡ್’ ಎಂದೇ ಹೆಸರಿನವು. ‘ಟಾಯ್‌ಲ್ಯಾಂಡ್‌ಗೇ ಹೋಗುವದು’ ಎಂದು ಉಸುರಿದರೆ ಆಯ್ತು – ಮಕ್ಕಳಿಗಿದ್ದ ಜ್ವರ, ಬೇಸರ ಎಲ್ಲ ಓಡಿಹೋಗುತ್ತದೆ. ಮಕ್ಕಳನ್ನು ಕರದುಕೊಂಡು ಒಳಗೆ ಹೆಜ್ಜೆ ಹಾಕಿದರಾಯ್ತು, ಒಂದರ್ಥದಲ್ಲಿ ನಮ್ಮನ್ನು ಮರೆತೇ ಬಿಡುತ್ತಾರೆ. ಗೋಟಿ-ಪತಂಗಳಿಂದ ಹಿಡಿದು ಇಂದಿನ ರೊಬೋಟ್‌ಗಳ ವರೆಗೆ ಏನೆಲ್ಲ ಖರೀದಿಸಬಹುದು. ನೋಡಲು ಒಂದಕ್ಕಿಂತ ಒಂದು ಆಕರ್ಷಕ ಸಾಮಾನುಗಳು, ಬೆಲೆ ದುಬಾರಿಯಾದರೂ ಒಳ್ಳೆ ಗುಣಮಟ್ಟದವು. Remote control ದೂರ
ನಿಯಂತ್ರಿತ ಆಟಿಕೆಗಳಂತೂ ಸಾಕಷ್ಟು. ಕಾರು-ವಿಮಾನುಗಳು, ರೊಬೋಟ್‌ಗಳೆಲ್ಲ ಸೆಲ್ ಮುಖಾಂತರ ಕುಳಿತಲ್ಲಿಂದಲೇ ಓಡಾಡಿಸುವರತಹುಗಳು ಹುಡುಗರಿಗೆ ಹುಚ್ಚು ಹಿಡಿಸಿದರೆ, ಹುಡುಗಿಯರಿಗೆ ಬಾರ್ಬಿ-ಕೆನ್ ಗೊಂಬೆಗಳ ಜೊತೆ ಅವರ ಸಂಸಾರದ ಬೇಡ್‌ರೂಂ, ಕಿಚನ್, ಡ್ರೆಸ್ಸಿಂಗ್ ಮಿರರ್, ಸ್ವಿಮಿಂಗ್ ಪೂಲ್, ಮುಂತಾದ ಸೆಟ್‌ಗಳ ಬೆಲೆ
8-10 ಸಾವಿರ ರೂಪಾಯಿಗಳಷ್ಟಾಗುತ್ತದೆ. ಮಕ್ಕಳು ನ್ಯಾಯ ಮಾಡಿ ಪ್ರತಿ ಸಲ ಹೋದಾಗ ಒಂದೊಂದು ಕೊಂಡು ಕೊಡಿಸಿಕೊಳ್ಳುವರು.

ನೋಡಿದ್ದೆಲ್ಲ ಬೇಕೆನ್ನುವ ಕೆಲವು ರಂಪಾಟದ ಹುಡುಗರು ಅವರ ತಂದೆ-ತಾಯಿಯರ ರಮಿಸುವಿಕೆಯಾಗಲಿ ಸಿಟ್ಟಿನ ಮಾತಾಗಲೀ ಲೆಕ್ಕಿಸದೇ ನ್ಯಾಯ ಮಾಡುವ ಮಕ್ಕಳ- ಮುಗ್ಧ ಮುಖಗಳು ನೋಡುವಂತಿರುತ್ತವೆ. ಇವು ಕಾಯಿಸಿದ ಹಾಲಕೆನೆ ಬೇಡಿ ಅಳುವ ಮಕ್ಕಳಲ್ಲ, ಎಟುಕದ ಬೆಲೆಯ ವಸ್ತುಗಳಿಗಾಗಿ ಅಳುವ ಹವಳದ ಕುಡಿಯಂಥ ತುಟಿಯ ಮಕ್ಕಳು. ಮಕ್ಕಳಿಗೆ ಅನುಕೂಲವಾಗುವ ಪ್ರಯೋಗಶಾಲೆಯ ಸಾಮಾನು ಗಳು, ಕೇರಮ್, ಚೆಸ್‌ಗಳು, ಕೊಳಲು, ಪೇಟೆ, ಸಾರಂಗ ಮುಂತಾದ ವಾದ್ಯ ಸಂಗೀತ, ಸಾಮಾನುಗಳು, ಪ್ರಾಣಿ ಪಕ್ಷಿಲೋಕದ ಅಟಿಕೆಗಳು, ಜೊತೆಗೆ ಆಕರ್ಷಕ ತರ್ಕಬದ್ಧ ಮಕ್ಕಳ ಪುಸ್ತಕಗಳು, ಹುಟ್ಟುಹಬ್ಬಕ್ಕೆ ಬೇಕಾಗುವ ಕಾರ್ಡು, ಪ್ಲೇಟು, ಕಪ್‌ಗಳು ಇನ್ನೂ ನೂರಾರು. ಇಂಥ ಅನೇಕ ಸಾಮಾನುಗಳಿಂದ ಅಂಗಡಿ ತುಂಬಿರುತ್ತದೆ. ಅಷ್ಟೇ ಮಕ್ಕಳೂ ತುಂಬಿರುತ್ತಾರೆ. ವಾರದ ಕೊನೆಗಂತೂ ಅಲ್ಲಿ ಮಕ್ಕಳ ಜಾತ್ರೆಯೇ ಇದ್ಧಂತೆ.

ಕಾಯಿಪಲ್ಲೆ ಹಣ್ಣುಗಳು :-

ಶಾಖಾಹಾರಿಯಾದ ನಮಗೆ ತರಕಾರಿ ಹಣ್ಣುಗಳ ಸಮಸ್ಯೆಯಾಗಹುದೇನೋ ಅಂದು ಕೊಂಡಿದ್ದೆವು. ಆದರೆ ಇಲ್ಲಿಯ ಮುಖ್ಯ ತರಕಾರಿ ಪೇಟೆಗೆ ಭೆಟ್ಟಿಕೊಟ್ಟಾಗ ಆನಂದಕ್ಕೆ ಪಾರವೇ ಇಲ್ಲ. ಜಗತ್ತಿನಲ್ಲಿ ಸಿಗುವ ಎಲ್ಲ ತರಹದ ಹಣ್ಣುಗಳಿಗೇನೂ ಇಲ್ಲಿ ಕೊರತೆ ಇಲ್ಲ. ತೊಪ್ಪಲು ತರಕಾರಿಗಳನ್ನು ಬಿಟ್ಟು ಉಳಿದಂತೆ ಇಂಡಿಯದಲ್ಲಿ ಸಿಗುವ ಎಲ್ಲ ತರಕಾರಿಗಳೂ ಇಲ್ಲಿ ಸಿಗುತ್ತವೆ. ಬೆಲೆಯಲ್ಲಿ ಸ್ವಲ್ಪ ಹೆಚ್ಚು. ಉದಾ: ಒಂದು ಕಿ.ಲೊ. ಬೆಂಡಿಕಾಯಿಗೆ 65ರೂಪಾಯಿಗಳು. ಒಂದು ಡಜನ್ ಬಾಳೆಹಣ್ಣುಗಳಿಗೆ 50 ರೂ. ಒಂದು ತೆಂಗಿನಕಾಯಿಗೆ ರೂ. 40. ಹೀಗೆ. ಅದೇ ಅಂಗಡಿಯಲ್ಲಿ ಸಿಗುವ ಒಣಕಾಳುಗಳ ಬೆಲೆ ಸಾಮಾನ್ಯವಾಗಿರುವವು. 1 ಕೆಜಿ ಬಾಸುಮತಿಗೆ 20 ರೂ 1 ಕೆಜಿ. ಸಕ್ಕರೆಗೆ 15 ರೂ ದಂತೆ ಹೀಗೆ ಇನ್ನೊ ಅನೇಕ.

ಸೌದಿಯ ಹಸಿರು ಪ್ರದೇಶಗಳಾದ ಟೈಫ್ (Taif) ಖಸೀಮ್, ತಬುಕ್, ಹೈಲ್, ತೋಟಗಳಿಂದ ಸಾಕಷ್ಟು ತರಕಾರಿ ಹಣ್ಣುಗಳು ಪೇಟೆಗೆ ಇತ್ತೀಚಿನ ವರ್ಷ ಗಳಲ್ಲಿ ಸಾಕಷ್ಟು ಬಂದು ಬೀಳುತ್ತಿವೆ. ಸಗಟು ಪೇಟೆಗಳಲ್ಲಿ ಸ್ಥಳೀಯ ತರಕಾರಿಗಳು
ಸಾಮಾನ್ಯ ಬೆಲೆಯಲ್ಲಿ ಸಿಗುವವು. ರಟ್ಟಿನ ಪೆಟ್ಟಿಗೆ ಅಥವಾ ಕಟ್ಟಿಗೆ ಪೆಟ್ಟಿಗೆಗಳಲ್ಲಿ ಎರಡು ಹಾಗೂ ನಾಲ್ಕು ಕಿಲೋ ತರಕಾರೀ ಹಣ್ಣುಗಳನ್ನು ಹಾಕಿ ಮಾರಾಟಕ್ಕೆ ತಯಾರಿಯಲ್ಲಿಯೇ ಇಟ್ಟಿರುತ್ತಾರೆ. ಶೀತಾಗಾರಗಳಲ್ಲಿ ವಿದೇಶೀ ತರಕಾರಿ ಹಣ್ಣು ಹಂಪಲಗಳನ್ನಿಟ್ಟು ಎಷ್ಟೆಷ್ಟು ಬೇಕೋ ಅಷ್ಟೇ ತೆಗೆದು ಮಾರುವರು. ಹೀಗಾಗಿ ಅದರಲ್ಲಿನ ಪ್ರೋಟೀನ್‌ಗಳಾಗಲೀ,
ತಾಜಾತನವಾಗಲೀ ಕಳೆದುಕೊಳ್ಳದೇ ಹಸಿರಾಗಿಯೇ ಇರುತ್ತವೆ. ಅದಕ್ಕೆಂದೇ ಮೊದಲೇ ಒಳ್ಳೆ ಜಾತಿಯ ಹಣ್ಣು ತರಕಾರಿಗಳನ್ನಷ್ಟೇ ದೂರ ದೇಶಗಳಿಂದ ತರಿಸಿಕೊಳ್ಳುವರು. ಹೀಗಾಗಿ ವಿಮಾನದಲ್ಲಿಯ ಸಾಗಾಣಿಕೆ ವೆಚ್ಚ ಮಾರಾಟ  ಅದು ಇದು ಎಂದು ಕೊನೆಗೆ ಹಣ್ಣುಗಳು ತುಟ್ಟಿಯಾಗಿ ಪೇಟೆಗೆ ಬರುವವು. ಅದರೆ ಅರಬ್ ನಾಡುಗಳಲ್ಲಿ ಎಲ್ಲರೂ ಚೆನ್ನಾಗಿ ಗಳಿಸುವವರೇ. ಹೀಗಾಗಿ ಕೊಳ್ಳುವಲ್ಲಿ ಹಿಂದೆ ಮುಂದೆ ಮಾಡುವ ದಾಗಲೀ ಕಡಿಮೆ ಬೆಲೆಯಲ್ಲಿ ಬೇಡುವವಾಗಲಿ ಮಾಡುವದೇ ಇಲ್ಲ. ಅಲ್ಲಿಯ ಗಳಿಕೆಯ ಪ್ರಕಾರ ಈ ಬೆಲೆಗಳು ಅಂತಹ ಭಾರೀ ಅನಿಸುವದೂ ಇಲ್ಲ. ಎಲ್ಲ ತರಕಾರಿ ಮಾರು ಕಟ್ಟೆಗಳಲ್ಲಿ ಪ್ರತಿಯೊಂದರ ಬೆಲೆ ಬೋರ್ಡ್‌ಗಳ ಮೇಲೆ ಬರೆದಿರುತ್ತಾರೆ. ಹೀಗಾಗಿ ಮಾತು ಬರೆದವರು ಕೈ ಸನ್ನೆಯಿಂದ ಒಂದು-ಎರಡು ಕೆಜಿ. ಬೇಕೆಂದು ಹೇಳಿದರಷ್ಟೇ ಅಯ್ತು, ಸಂತೆ ಮಾಡಿದಂಗಾಯ್ತು.

ಕೆಲವೊಂದು ತರಕಾರಿಗಳ ಹೆಸರು ಅರೆಬಿಕ್ ಪದಗಳಲ್ಲಿ ಕನ್ನಡದ ಪದಗಳನ್ನೇ ಹೋಲುವಂತಿವೆ. ಸೌತಿಕಾಯಿಗೆ ‘ಕೈಯಾರ ಕೂಸು’ ಎಂದೂ, ಗೊಂಜಾಳಿಗೆ “ಅಮರಾವತಿ ಎಂದೂ ತೊಗರಿಬೇಳೆಗೆ ‘ಹರಹರಾ’ ಎಂದೂ ಕರೆಯುತ್ತಾರೆ.

ನಮ್ಮ ಭಾರತದಿಂದ ಒಳ್ಳೆ ಹೆಸರಿನ ಆಲ್‌ಫೋನ್ಸ್ (ಆಪೂಸ್) ಮಾವಿನ ಹಣ್ಣುಗಳು ಎರಡು ಡಜನ್ ಅಥವಾ ನಾಲ್ಕು ಡಜನ್ ಪ್ಯಾಕಿನಲ್ಲಿ ಬಂದಿರುತ್ತವೆ. ಭಾರತೀಯರಿ ಗದೇನು ಸಡಗರ. ಬಾಂಬೆಯ ಹಣ್ಣು ನಿರ್ಯಾತದಾರರಿಗೊಂದು ದೊಡ್ಡ ಸುಗ್ಗಿ. ರಟ್ಟನ ಪೆಟ್ಟಿಗೆ ಒಳಗಡೆ ಹುಲ್ಲು, ಮಿಂಚು, ಜರಿ, ಬಣ್ಣಗಳಿಂದ ಮನಮೋಹಕವಾಗುವಂತೆ ಪೆಟ್ಟಗೆಗಳು ಮಾಡಿರುವರು. ಬೆಲೆಯಲ್ಲಿಯೂ ಕೂಡಾ ಬಹಳವಿರುವುದಿಲ್ಲ. (ಇಲ್ಲಿಯ ಹಣಕ್ಕೆ ಹೋಲಿಸಿದರೆ) 350-400-450 ರೂಗೆ ಒಂದು ಡಜನ್. ಅಲ್ಲೇ ಖುಷಿ ಪಟ್ಟು ಮಾವಿನ ಹಣ್ಣಿನ ಪೆಟ್ಟಿಗೆ ಒಯ್ಯಬೇಕೆನಿಸುತ್ತದೆ. ಮನೆಗೆ ಬಂದು ನೋಡಿದರೆ
ಹಣ್ಣುಗಳೆಲ್ಲ ಮೇಲ್ನೋಟಕ್ಕೆ ಚೆನ್ನಾಗಿದ್ದರೂ ಒಳಗೆಲ್ಲ ಕೊಳೆತವುಗಳು! ಹಣ್ಣಿಗೆ ಬರುವದಕ್ಕಿಂತ ಮೊದಲೇ ಕಾಯಿಗಳನ್ನು ಕಿತ್ತು ಹಣ್ಣಿಗೆ ಹಾಕಿ ಕೆಲವೊಂದು ರಾಸಾಯನಿಕ ಗಳನ್ನು ಉಪಯೋಗಿಸಿ ಬಣ್ಣಬರುವಂತೆ ಮಾಡಿ ಜನರಷ್ಟು ಮೊಸಮಾಡುವ ಕಲೆ ಇದೆಂದು ತಿಳಿಯಿತು. ಇತ್ತೀಚಿನ 5-6 ವರ್ಷಗಳಿಂದ ಪೇಟೆಗೆ ಹಣ್ಣುಗಳು ಬರುತ್ತಿವೆ.
ನಾವು ಪ್ರತಿವರ್ಷವೂ ಗೊತ್ತಿದ್ದರೂ ಏನೊ? ಮತ್ತೆ ಮತ್ತೆ ಅಸೆಯಿಂದ ಕೊಂಡು ಮೋಸಹೋಗುತ್ತಿದ್ದೆವು. ಒಮ್ಮೆಯೂ ಒಂದೂ ಹಣ್ಣು ಸರಿಯಾಗಿ ಸಿಗಲೇ ಇಲ್ಲ. ಮೋಸಮಾಡಲಿಕ್ಕೂ ಒಂದು ಮಿತಿ ಇರುತ್ತದೆ.  ಅತಿಯಾಯ್ತು. ನಾವೇ ಇಂತಹ ಭಾರತೀಯ ಮೋಸಗಾರಿಕೆಗೆ ಇಷ್ಟು ಉಗುಳಿದರೆ ಬೇರೆ ವಿದೇಶಿಗಳು ಇನ್ನೆಷ್ಟು ಉಗುಳಬಹುದು ಇವರಿಗೆ? ‘ಇಂಡಿಯನ್ ಮ್ಯಾಂಗೋಸ್‌’ ಅಂದರೆ ಅಮೇರಿಕನ್ನರು ನಗುತ್ತಾರೆ. ಜೊತೆಗೆ ಹೊಲಸು ಶಬ್ದಗಳನ್ನೂ ಉಪಯೋಗಿಸುತ್ತಾರೆ. ಭಾರತೀಯ ರಾಯಭಾರಿದೂತರು ಮಾತ್ರ ಭಾರತದಿಂದ ಬರುವ ಸಾಮಾನುಗಳ ಗುಣಮಟ್ಟ
ಕಡೆಗೆ ಗಮನಕೊಡದೇ ಸುಮ್ಮನಿರುವದನ್ನು ನಾವಿಲ್ಲಿ ನೋಡುತ್ತೇವೆ. ಬೇಸರ ವಾಗುತ್ತದೆ. ಆದರೆ ಏನೂ ಮಾಡಲಾಗದೆ ಕೈ ಹಿಸುಕಿಕೊಳ್ಳುತ್ತೇವೆ. ದೇಶದ ಗೌರವವನ್ನೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹರಾಜು ಹಾಕುತ್ತಿದ್ದಾರೆ. ಈ ಮಾವಿನ ಹಣ್ಣಿನ ರಫ್ತುದಾರರು.

ಸುವಾಸಿದ್ರವ್ಯಗಳು:-

ಜಗತ್ಪ್ರಸಿದ್ಧ ಸುವಾಸಿ ದ್ರವ್ಯಗಳ ಪೇಟೆಗಳು ಅಲ್ಲಲ್ಲಿ ಸಾಕಷ್ಟಿವೆ. ನಮ್ಮ ಕಡೆಗೆ ಅತ್ತರ ಎಣ್ಣೆ ಎಂದು ಪ್ರಸಿದ್ಧವಾಗಿರುವದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಅಂತೆಯೇ ಇಲ್ಲಿ “ಅತ್ತರ ಸೂಕ್” (ಅತ್ತರ ಎಣ್ಣೆ ಪೇಟೆ)ಗಳಂದೇ ಹೆಸರಿನ
ಪೇಟೆಗಳಿವೆ. Paris Perfumeಗಳಿಗೂ ಇವುಗಳಿಗೂ ಬಹಳ ಅಂತರ. ಪ್ಯಾರಿಸ್‌ನ ಸುವಾಸಿ ದ್ರವ್ಯಗಳನ್ನು ಹಚ್ಚಿಕೊಂಡಾಗೆಲ್ಲ ಮೃದುತ್ವ  ಅನುಭವವಾದರೆ ಇಲ್ಲಿಯ ಈ ಅತ್ತರದ ದ್ರವ್ಯಗಳು ಬಹಳ ಘಾಟು: ತಲೆ ನೋಯಿಸುವಂಥವು. ಜಗತ್ಪ್ರಸಿದ್ಧ ಸುವಾಸಿ ದ್ರವ್ಯಗಳು ಇಲ್ಲಿದ್ದರೂ ಮುಸ್ಲಿಂರಿಗೆ ಅತ್ತರ  ಅಂದರೇನೆ ಬಹಳ ಪ್ರೀತಿ.

ಗುಲಾಬಿ, ಮಲ್ಲಿಗೆ ಪನ್ನಿರುಗಳಿಗೆವನೂ ಕೊರತೆ ಇಲ್ಲಿಲ್ಲ. ಇಂದು ನಾವು ಉಪಯೋಗಿಸುವ ಗುಲಾಬಿ ಪನ್ನೀರು 13ನೆಯ ಶತಮಾನದ ಪೂರ್ವಾರ್ಧದಲ್ಲಿಯೇ ಕಂಡುಹಿಡಿದಿದ್ದುದಾಗಿ ಅಂದಿನ ಸಿರಿಯನ್ ಬರಹಗಾರರಾದ ಅದಮಿನ್ ಹಾಗೂ
ದಿಮಾಸ್ಕಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಅದನ್ನು ಹೇಗೆ ತಯಾರಿಸುತ್ತಿದ್ದರೆನ್ನು ವದನ್ನೂ ಹೇಳಿರುವರು. ಅಂದು ಯುಫ್ರಟೀಸ್-ಟೈಗ್ರಿಸ್ ನದಿಯ ಫಲವತ್ತತೆಯಲ್ಲಿ ಬೆಳೆದ (ಇಂದಿನ ಇರಾಕ) ‘ಮೈಸಪೊಟೋಮಿಯಾ’ದಿಂದ ಗುಲಾಬಿ ಹೂಗಳನ್ನು ತರಿಸಿಕೊಂಡು ಇಡೀ ರಾತ್ರಿಯೆಲ್ಲ  ನೀರಿನಲ್ಲಿ ನೆನೆಹಾಕುತ್ತಿದ್ದರಂತೆ. ನಂತರ ಅದರಲ್ಲಿ ಯಾಲಕ್ಕಿ ಲವಂಗ ಹಾಗೂ ಕಸ್ತೂರಿ ಸೇರಿಸಿ ಜೊತೆಗೆ ಅರಳುವ ಮೊಗ್ಗುಗಳನ್ನು ಹಾಕಿ ಮಂದ ಉರಿಯಲ್ಲಿ  ಕುದಿಸುತ್ತಿದ್ದರಂತೆ. ಅದರಿಂದ ಬಂದ ಅವಿಯಾದ ನೀರನ್ನು ತೆಗೆದುಕೊಂಡು ಸಣ್ಣ ಕಂಠದ ಬಾಟಲಿಯಲ್ಲಿ ಹಾಕಿ ಹವೆ ಪ್ರವೇಶಿಸಿದಂತೆ  ಸುತ್ತಿ
ಇಡುತ್ತಿದ್ದರಂತೆ. ಇದನ್ನು ಓದಿದಾಗ ಆಗಲೇ ಅವರಿಗೂ ಸುವಾಸಿ ದ್ರವ್ಯಗಳ ಬಗೆಗೆ ಸಾಕಷ್ಟು ಪ್ರಜ್ಞೆ ಇತ್ತು-ಅಷ್ಟೇ ಅಲ್ಲ, ಅವರೂ ಶೃಂಗಾರ ಪ್ರಿಯರಿದ್ದರೆಂಬುದು ತಿಳಿದು ಬರುತ್ತದೆ. ಇನ್ನೂ ಇಜಿಪ್ತದ ಮೂಲಕ್ಕೆ ಹೋದರಂತೂ ಬಹಳ ಅಶ್ಚರ್ಯವಾಗುತ್ತದೆ.

ಐದು ಸಾವಿರ ವರ್ಷಗಳ ಹಿಂದೆಯೇ ಇಜಿಪ್ತದವರು ಸುವಾಸಿ ದ್ರವ್ಯಗಳನ್ನು ತಯಾರಿಸುವ ವಿಧಾನ ಕಂಡು ಹಿಡಿದರೆನ್ನುವ ಉಲ್ಲೇಖ ಒಂದು ಕಡೆಗೆ ಓದುತ್ತೇವೆ. ಒಳ್ಳೊಳ್ಳೆಯ ಹೂವುಗಳಿಂದ ತಯಾರಿಸಿ ಬಹಳ ವರ್ಷಗಳ ವರೆಗೆ ಸುವಾಸನೆ ಕೆಡದಂತೆ ಇಡುವದನ್ನೂ ಕಂಡುಕೊಂಡಿದ್ಧರು. ಅಂತೆಯೇ ಇಜಿಪ್ತದ ಮಮ್ಮಿಗಳನ್ನು ರಾಸಾಯನಿಕ
ದ್ರವಗಳೊಂದಿಗೆ ಸುವಾಸಿದ್ರವ್ಯಗಳಲ್ಲಿ ಎದ್ದಿಟ್ಟಿದ್ಧಾಗಿಯೂ ತಿಳಿಯುವದು.

ಹೀಗಾಗಿ ಅರಬ್ ನಾಡಿನಲ್ಲಿ ಇಂದಿಗೂ ಸಾಂಪ್ರದಾಯಕ ಸುವಾಸಿದ್ರವ್ಯಗಳನ್ನು, ತಯಾರಿಸಿ ಕೆಡದಂತೆ ಬಹಳ ವರ್ಷಗಳವರೆಗೆ ಇಟ್ಟಿರುವದನ್ನು ನಾವು ನೋಡುತ್ತೇವೆ. ಪೇಟೆಗಳಲ್ಲ ಸಂಪ್ರದಾಯಕ ಅತ್ತರುಗಳಿಂದ  ಮಘಮಿಸುತ್ತವೆ. ಇದೊಂದು ತರಹದ ಅತ್ತರಸೂಕ್‌ಗಳಾದರೆ Paris perfumesಗಳ ಸುವಾಸನೆಯ ಚೆಂದಗಾರಿಕೆಯೇ ಬೇರೆ. ಅತ್ತರ ಸಣ್ಣ ಸಣ್ಣ ಬಾಟಲಗಳಲ್ಲಿ ತುಂಬಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಮಾರುತ್ತಿದ್ದರೆ, ಈ
ಸುಗಂಧ ದ್ರವ್ಯಗಳ ಬಾಟಲ್‌ಗಳ ವಿನ್ಯಾಸಗಳೇ ಬೇರೆ ಬೇರೆ. ನೋಡುವಂಥವು. ಜೊತೆಗೆ ಅವುಗಳನ್ನು ಶೋಕೇಸ್‌ನಲ್ಲಿ ಇಡುವ ನೆಳಲು ಬೆಳಕು ಕೊಡುವ ಚಳಕವೂ ಅಷ್ಟೇ ಆಕರ್ಷಕ. ಇಲ್ಲಿಯ Gazaz, Mosadia Plaza centerಗಳಿಗೆ ಭೆಟ್ಟಿಕೊಟ್ಟಿದ್ದೇನೆ ಅದರ ಅಳ, ಅರ್ಥ ಎಲ್ಲ ಗೊತ್ತಾಗುತ್ತದೆ.

ಒಂದೊಂದು – ಸುಮಾರು 500 ಗ್ರಾಂನ ಸುಗಂಧ ದ್ರವ್ಯದ ಬಾಟಲಿನ ಬೆಲೆ 50,000 ರೂದಿಂದ ಹತ್ತು ಲಕ್ಷ ರೂಗಳ ವರೆಗಿರುತ್ತವೆ. (ಎಲ್ಲಾ ಅತ್ತರಗಳಲ್ಲೂ ಭಾರತದೇಶದಿಂದ ಬರುವ ಅತ್ತರಗಳಿಗೆ ಭಾರಿ ಬೇಡಿಕೆ ಇದೆ. ಜಗತ್ತಿನಲ್ಲೇ ಅತೀ ಶ್ರೇಷ್ಟ ಮತ್ತು ಪರಿಶುದ್ದ ಎಷ್ಟುವ ಮಹಾನಂಬಿಕೆ ಸೌದಿಗಳಿಗಿದೆ). ಬಹಳ ಅಶ್ಚರ್ಯ ಅಲ್ಲವೆ? ಹೌದು.ದ್ರವ್ಯಗಳಲ್ಲಿ ಬಂಗಾರದ ಎರಕ ಕೂಡಾ ಇರುತ್ತದೆ. ಬಾಟಲಿಯನ್ನು ಸರಿಯಾಗಿ ಅಲುಗಾಡಿಸಿ ಮೈಗೆ ಸಿಂಪಡಿಸಿಕೊಂಡರೆ ದ್ರವ್ಯದ ಜೊತೆಗೆ ಬಂಗಾರ ಮಿಂಚಿನ ಕಣಗಳು ಅಂಟಿಕೊಳ್ಳುತ್ತವೆ. ಇಂತಹವುಗಳನ್ನು ಕೊಳ್ಳುವವರು ಕೋಟ್ಯಾಧೀಶರು.
ಅದರೆ ಅದನ್ನು ನೋಡಲು, ಮುಟ್ಟಲು, ಅಥವಾ ಅದರ ಸ್ಯಾಂಪಲ್ ಕೇಳಲು ಸಂಕೋಚವಿಲ್ಲದಿದ್ದರೆ ಸ್ವಲ್ಪ ಮಟ್ಟಗಾದರೂ ಖುಷಿಪಡಬಹುದು.

ಕೇವಲ ಹೂವು ಗಳಿಂದಷ್ಟೇ ಸುವಾಸಿ ದ್ರವ್ಯಗಳನ್ನು ತಯಾರಿಸುತ್ತಾರೆ ಎಂದು ಕೇಳಿದ್ದ, ಓದಿದ್ದ ನಮಗೆ ಇಲ್ಲಿ ತಿಳಿದ ಇನ್ನೊಂದು ಆಶ್ಚರ್ಯವೆಂದರೆ ಪ್ರಾಣಿಗಳ ಶರೀರದಿಂದ ಸ್ರವಿಸುವ ದ್ರವಗಳಿಂದಲೂ ಸುವಾಸಿ ದೃವ್ಯ ತಯಾರಿಸುವದು ಎಂಬುದು. ಸಮುದ್ರದಲ್ಲಿರುವ ತಿಮಿಂಗಲಗಳ ವೀರ್ಯ ಸುಗಂಧ ದ್ರವ್ಯವಾಗಿರುವಂತೆ, ಹಿಮಾಲಯದ ಚಿಗರೆಗಳು
ಅಥವಾ ಕಸ್ತೂರಿ ಮೈಗಗಳಿಂದ ಕಸ್ತೂರಿ, ಅದರಂತೆ ಪುನಗಿನ ಬೆಕ್ಕಿನಿಂದ ಹೊರಡುವ ಪುನಗುದ್ರವ್ಯ, ನೀರು ನಾಯಿ ಚರ್ಮದಿಂದ ಸೂಸುವ ಎಣ್ಣೆ ಇವೆಲ್ಲ ವಿಚಿತ್ರ ವಿಚಿತ್ರ ಸುವಾಸನೆಗಳು ಹೊಂದಿರುವಂತೆ ಪೇಟೆಯಲ್ಲಿ ಅವೆಲ್ಲ ಬೇರೆ ಬೇರೆ ಆಕರ್ಪಕ ಹೆಸರಿನ ಲೇಬಲ್‌ಗಳನ್ನು ಅಂಟಿಸಿಕೊಂಡು ಶೋಕೇಸಿನಲ್ಲಿ ಮಾರಾಟಕ್ಕೆ ತಯಾರಾಗಿರುತ್ತವೆ.
ಸುವಾಸನಾ ಪ್ರಿಯರು ಸುಮ್ಮನೆ ಕೊಂಡು ಲೇಪಿಸಿಕೊಂಡು ಖುಷಿಪಟ್ಟರಷ್ಟೇ ಒಳ್ಳೆಯದು. ಅದರ ಅಳ ತಿಳಿದರೆ ಬಹುಶಃ ಅಸಹ್ಯ ಅನಿಸಿದರೊ ಅನಿಸಬಹುದು.

ಹಾಗೆಯೇ ಶ್ರೀಗಂಧ, ದೇವದಾರ ಗಿಡಗಳಿಂದ ಎಣ್ಣೆ ಅಷ್ಟೇ ಅಲ್ಲದೆ ಯಾಲಕ್ಕಿ, ಲವಂಗ ಮುಂತಾದ ವನಸ್ಪತಿ- ಗಳಿಂದಲೂ ಸುವಾಸಿ ಎಣ್ಣೆಗಳನ್ನು ತೆಗೆದುಕೊಂಡು ಪ್ರಯೋಗಾಲಯದಲ್ಲಿ ರಾಸಾಯನಿಕ ಹಾಗೂ ಸುಗಂಧ ದ್ರವ್ಯಗಳಲ್ಲಿ ಅನುಭವ ಇರುವ ವಿಜ್ಞಾನಿಗಳ ಮುಖಾಂತರ ಒಂದೊಂದನ್ನು ಒಂದೊಂದರಲ್ಲಿ ಬೆರೆಸಿ (ಕೂಡಿಸಿ) ಕೊನೆಗೊಂದು ಪ್ರಕಾರದಲ್ಲಿ ಹೆಸರಿಸಿಕೊಂಡು ಪೇಟೆಯಲ್ಲಿ ಬಂದಿರುವದನ್ನು ಇಂದು ನಾವು ಸಾಮಾನ್ಯವಾಗಿ ಎಲ್ಲ ಕಡೆಗೂ ನೋಡುತ್ತೇವೆ.

ಇಂದು ನಾವು ನೋಡುವ ನೂರಾರು ತರಹದ ಸುಗಂಧ ದ್ರವ್ಯಗಳು ಹೊಂದಾಣಿಕೆಯಲ್ಲಿ ಐದು ಸಾವಿರಕ್ಕೂ ಮೇಲ್ಪಟ್ಟು ಹೂವುಗಳ ಹಾಗೂ ಬೇರೆ ಬೇರೆ ಮಸಾಲೆ ಸಾಮಾನುಗಳ ಹೊಂದಾಣಿಕೆ ಮಾಡಿ ಅದಕ್ಕೊಂದು ಕಂಪು ಕೊಡುತ್ತಾರೆ ಎಂದು ಪ್ರತೀತದಲ್ಲಿದೆ. ಸುಮಾರು ಒಂದು ಲಕ್ಷ ಇಪ್ತತ್ತು ಸಾವಿರ ಗುಲಾಬಿ ಹೂವುಗಳಿಂದ ಅಥವಾ ಒಂದು ಟನ್‌ಗಳಷ್ಟು ಗುಲಾಬಿ ಪಕಳೆಗಳಿಂದ ಒಂದು ಕಿಲೋದಷ್ಟು ಗುಲಾಬಿ ಪನ್ನೀರು ಅಥವಾ ಎಣ್ಣೆ ತೆಗೆಯುತ್ತಾರೆಂದು ಫ್ರಾನ್ಸ್ ದ್ರವ್ಯ ತಯಾರಕರು ಅಂದಾಜು ಕೊಡುವರು. ಫ್ರಾನ್ಸ್‌ದಲ್ಲಿಯೇ30 ಫ್ರಾಕ್ಟರಿಗಳಿವೆ. ಅಲ್ಲಿ ಯ 600-700 ಹೂವು ಬೆಳೆಗಾರರು ತಾವು ಬೆಳೆಸಿದ ಮಲ್ಲಿಗೆ, ಗುಲಾಬಿ, ಸುಗಂಧ, ಲ್ಯಾವೆಂಡರ್ ಮುಂತಾದವುಗಳನ್ನು ಈ ಕಾರ್ಖಾನೆಗಳಿಗೆ ಕಳಿಸುವರೆಂದು ನಾವು ಪ್ಯಾರಿಸ್‌ನಲ್ಲಿದ್ದಾಗ ತಿಳಿದುಕೊಂಡೆವು.

ಮೂಲ ವಸ್ತುಗಳಿಂದ ತಯಾರಿಸಿದ ಸುಗಂಧ ದ್ರವ್ಯಗಳನ್ನು ಉಪಯೋಗಿಸಿ ದಾಗ ಬಹಳ ಆನಂದವೆನಿಸುವದು. ಇವುಗಳಲ್ಲಿ ಯೂ ಮಧುರವಾದವುಗಳು, ಫಾಟಿ ಯಾದವುಗಳನ್ನು, ಒಗರಾಗಿ, ಹುಳಿಯಾಗಿ ಏನೇನೋ ವಾಸನೆಗಳಿರುತ್ತವೆ. ಒಳ್ಳೊಳ್ಳೆಯ ಹೆಸರುವಾಸಿ ಕಂಪನಿಗಳು ಸ್ತ್ರೀ ಪುರುಷರಿಗೆಂದು ಬೇರೆ ಬೇರೆಯೇ ತಯಾರಿಸಿರುತ್ತಾರೆ.

ಜಗತ್ಪ್ರಸಿದ್ಧ ಹೆಸರಿನ ಸುಗಂಧದ್ರವ್ಯಗಳ ಸಂಗ್ರಹದ ಹುಚ್ಚು ನಮಗಿದೆ. ಹೀಗಾಗಿ ಪ್ರತಿ ವರ್ಷದ ಮದುವೆ ದಿನಕ್ಕೆ, ಹುಟ್ಟಿದ ದಿನದಂದೋ ತಂದೇಬಿಡುವದೊಂದು ರೂಢಿಯಾಗಿದೆ. ಇಲ್ಲಿ ಕೆಲವೊಂದನ್ನು ಹೆಸರಿಸುತ್ತೇನೆ. ನಿನಾರಿಖಿ, ದಹಾಲಿಯ, ವೆಸ್‌ಸಿಂಟ್ ಲಾರೆಂಟ್, ಟೆರೋಜ್, ಅಬಸೋಲು, ಮ್ಯಾಡಮ್ ರೋಛಾಸ್, ದಿವಾ, ವ್ಯಾನಕ್ಲೀಪ
ಅಂಡ್ ಅರ್ಪಲ್ಸ್.  ಚಾರ್ಲಿ, ಯಾರ್ಡಲಿ. ಆನೈಸ, ಮಾಜ, ಜಿನ್ ಪಟಾವ್, ಜೀನ್ ಶೇಕರ್, ಕ್ರಿಶ್ಚಿಯನ ಡಯೊರ್, ಪಲೋಮಾ ಐಕ್ಯಾಸೋ, ಚಾನಲ್ 5, ವೈಲಂಟನ್ ಮುಂತಾದವುಗಳು.

ಇತರ ಪೇಟೆಗಳು

ಕುತೂಹಲದಿಂದ ಎಲ್ಲ ಅಂಗಡಿಗಳಿಗೂ ಭೆಟ್ಟಿಕೊಡುವದು. ಅಲ್ಲಿಯ ಹೊಸ ಹೊಸ ವಸ್ತು ನೋಡುವದು, ಬಹಳ ಖುಷಿ ಅನಿಸುತ್ತದೆ. ಚೈನಾ ಜಪಾನಗಳೆರಡೂ ಐತಿಹಾಸಿಕ ಕಾಲದಿಂದ ಜೇಡಿಮಣ್ಣನ ಅಲಂಕಾರಿಕ ಪಾತ್ರೆಗಳಿಗೆ ಹೆಸರಾದವುಗಳು. ಶೋಕೇಸ್ ಪ್ರಿಯರಿಗಿದೊಂದು ಹಬ್ಬ. ಜೇಡಿ ಮಣ್ಣಿನಿಂದ ತಯಾರಿಸಿದ ಅವುಗಳ ಮೇಲೆ ಸುಂದರ ಹೂ ಬಳ್ಳಿ ಪ್ರಾಣಿ ಪಕ್ಷಿಗಳಿರುವ ಹೂದಾನಿಗಳು, ಪ್ಲೇಟ್‌ಗಳು ಸಾಕಷ್ಟು. ವಿವಿಧ ನಿಸರ್ಗ ಚಿತ್ರಗಳನ್ನು ಬಿಡಿಸಿ ಒಳ್ಳೆ ಬಣ್ಣಗಳಿಂದ ಸಂಯೋಜಿಸಿದ್ದಷ್ಟೇ ಅಲ್ಲದೆ ಈ ಹೂಜಿ ಅಥವಾ ತಟ್ಟೆಗಳಿಗೆ ಆಕರ್ಷಕ ಮಿರುಗು ಅಥವಾ ಹೊಳವುಗಳಿದ್ದು
ತಿಳಿಬಣ್ಣಗಳಿಂದ ದಟ್ಟ ಬಣ್ಣಗಳವರೆಗೆ ಒಂದಕ್ಕಿಂತ ಒಂದು ಅಕರ್ಷಕವಾಗಿರುತ್ತವೆ. ಕರಕುಶಲದವುಗಳು, ಯಂತ್ರಗಳಿಂದ ತಯಾರಿಸಿದವುಗಳೂ ಇರುತ್ತವೆ. ಕಲಾಪ್ರೇಮಿಗಳು ಅಥವಾ ಅದರ ಬಗೆಗೆ ಜ್ಞಾನ ಇದ್ದವರು ಕರ ಕುಶಲದಿಂದ ತಯಾರಿಸಿದ ವಸ್ತುಗಳನ್ನೇ ಕೊಳ್ಳುವರು. ಹಣದಲ್ಲಿ ಕಮ್ಮಿ ಏನಿಲ್ಲ. ಟ್ಯಾಕ್ಸ್ ಇಲ್ಲದೆಯೇ ದುಬಾರಿ ಅನಿಸುವವು. ಡಿನ್ನರ್ ಸೆಟ್, ಟೀ ಸೆಟ್, ವೇಸ್, ಪ್ಲೇಟ್‌ಗಳ ಮೇಲಿನ ಸೂಕ್ಷ್ಮ ಕರಕುಶಲಕ್ಕೆ ಮೆಚ್ಚಿ ಕೊಂಡರೆ ಹಣ ಹೋದದ್ದಕ್ಕೇನೊ ಹಳಹಳಿ ಅನಿಸುವುದಿಲ್ಲ. ಇಲ್ಲಿ ಜಪಾನಿನ ಛತ್ರಿಗಳು (Umbrella), ಟೇಬಲ್‌ಲ್ಯಂಪುಗಳು ಅಷ್ಟೇ ಅಕರ್ಷಕ. ಯುರೋಪಿನಲ್ಲಿಂತೂ ಈ ಪಿಂಗಾಣಿ ಪಾತ್ರೆಗಳು, ಹೂಜಿಗಳಿಗೆ ಬಹಳೇ ಬೇಡಿಕೆ ಇದೆ.

ಹಾಗೆಯೇ ವಿದ್ಯುತ್ ಉಪಕರಣಗಳ ಪೇಟೆಗಳನ್ನು ಹೊಕ್ಕರಂತೂ ಮುಗಿದೇ ಹೋಯಿತು. ಮನುಷ್ಯನಿಗೆ ಅದೇನೇನು ಸೌಲಭ್ಯಗಳು ಬೇಕೋ ಅವೆಲ್ಲ ಇಲ್ಲಿ ಸಿಗುತ್ತವೆ. ಮಿಕ್ಸರ್ ಜೂಸರ್, ಪಾಪ್‌ಕಾರ್ನ್ ಮೇಕರ್, ಐರನ್‌ಬಾಕ್ಸ್, ಟಿ.ವಿ., ವಿ.ಸಿ.ಆರ್., ಐಸ್‌ಕ್ರೀಮ್ ಮೇಕರ್, ಹೇರ್‌ಡ್ರೈಯರ್, ಮೆಸಾಜರ್ಸ್, ವ್ಯಾಕ್ಯೂಮ್ ಕ್ಲೀನರ್ಸ್, ಸ್ಟೀರಿಯೋ, ಫೋನ್, ಬ್ಯಾಟರೀಸ್,  ಕುಕ್ಕರ್, ನೂರಾರು ನೂರಾರು ಬಗೆಯವು. ಜಪಾನಿನ ಸಾಮಾನುಗಳ ಜೊತೆಗೆ ಟೈವಾನ್, ಸಿಂಗಪುರ ದೇಶಗಳ ಕಡಿಮೆ ಬೆಲೆಯ ಸಾಮಾನುಗಳನ್ನು ಇಟ್ಟಿರುವರು. ಪ್ರತಿ ಸಲ ಪೇಟೆಗೆ ಹೋದಾಗ ಅದೇನೇನೊ ಹೊಸ ಹೊಸ ವಿದ್ಯುತ್ ಉಪಕರಣ ವಸ್ತುಗಳು ಬಂದೆ ಇರುತ್ತವೆ.

ಪರ್ಷಿಯನ್ ರತ್ನಗಂಬಳಿಗಳು ಜಗತ್ಪ್ರಸಿದ್ಧ. ಕರಕೌಶಲ್ಯದಿಂದ ತಯಾರಿಸಿದ ನೆಲ ಹಾಸುಗೆಗಳು ಬಹಳೇ ಬೆಲೆಯುಳ್ಳವು. ಕಾರ್ಪೆಟ್‌ನ ದೊಡ್ಡ ದೊಡ್ಡ ಅಂಗಡಿಗಳನ್ನು ಹೊಕ್ಕರೆ ಒಳ್ಳೆ ಐಶಾರಾಮಿ ಅನುಭವವಾಗುತ್ತದೆ. ಪರ್ಷಿಯನ್ನರಿಗೆ ಸಾವಿರಾರು ವರ್ಷಗಳಿಂದ ಬಂದ ಸುಂದರ ಕಲೆ ಇದು, ಇಲ್ಲಿ ಪರ್ಷಿಯನ್ ನೆಲಹಾಸುಗೆಗಳೊಂದಿಗೆ
ಸಾದಾ ಅಕ್ರಿಲಿಕ್ (ನೈಲಾನ್ ಎಳೆಗಳ) ಹಾಸುಗೆಗಳೂ ವಿಪರೀತ ಬೆಲೆಯುಳ್ಳವು. ಟರ್ಕಿ, ಇರಾನ್, ಕಾರ್ಪೆಟ್‌ಗಳೇ ಎಲ್ಲರಿಗೆ ಇಷ್ಟ. ಇವುಗಳ ಮೇಲೆ ಬಿಡಿಸಿದ ಚಿತ್ತಾರಗಳು-ಬಣ್ಣ- ದಪ್ಪ-ಆಯ ಅಳತೆಗೆ ತಕ್ಕಂತೆ ಹಣ. ಸಾದಾ ಹಾಸುಗೆಗಳು 500-600 ರೂಪಾಯಿಯಿಂದ ಶುರುವಾದರೆ ಪರ್ಷಿಯನ್ ಕಂಬಳಿಗಳಲ್ಲಿ ಅತೀ ಸಣ್ಣವು 2-3 ಸಾವಿರ
ರೂಪಾಯಿಗಳಿಂದ ಶುರುವಾಗುವವು. ಅಂಗಡಿಯ ಒಳಹೊಕ್ಕರೆ ಮೆತ್ತನೆಯ ಸ್ಪಂಜಿನಂತಹ ಅಥವಾ ರೇಶ್ಮೆಯ ಮೃದುತ್ವದ ಅನುಭವ ಅದರ ಮೇಲೆ ನಡೆದಾಡುವಾಗ ಆಗುವದು.

ಅತಿ ಅನುಭುಗಳಾದವರು ಕೊಳ್ಳುವಾಗ ಅವುಗಳಲ್ಲಿರುವ ಗಂಟುಗಳು, ದಪ್ಪದಾರ, -ಮುಂತಾದವುಗಳನ್ನು ಕೂಲಂಕುಷವಾಗಿ ಹಿಂದೆ ಮುಂದೆ ತಿರುಗಿಸಿ ನೋಡುತ್ತ ಕೊಳ್ಳುವರು. ಗೊಡೆಗೆ ತೂಗುಹಾಕುವ ಚಿತ್ರದ ಕಾರ್ಪಟ್‌ಗಳೂ ಕೂಡಾ ಅಷ್ಟೇ ಸುಂದರ.

ಅರಬರಿಗೆ ಪ್ರತಿ ವರ್ಷವೂ ಹೊಸ ಹೊಸ ನೆಲಹಾಸುಗೆಗಳು ಬೇಕೇಬೇಕು. ಅದಕ್ಕೆಂದೇ ಸಾಮಾನ್ಯರು ಪರ್ಷಿಯನ್ ಕಾರ್ಪೆಟ್‌ಗಳನ್ನು ಇಚ್ಛಿಸದೆ ಸಾಧಾರಣ ಬೆಲೆಯುಳ್ಳ ನೈಲಾನ್‌ದವನ್ನೇ ಕೊಂಡುಕೊಳ್ಳುವರು. ಒಂದು ವರ್ಷ ಉಪಯೋಗಿಸಿ ತೆಗೆದೊಗೆಯುತ್ತಾರೆ. ಅಷ್ಟೇ ಅಲ್ಲ-ಸೋಫಾ, ಬೆಡ್‌ಗಳನ್ನೂ ಕೂಡಾ ಒಂದು ವರ್ಷ ಉಪಯೋಗಿಸಿ ಎತ್ತಿ ಒಗೆಯುತ್ತಾರೆ. ಅದರೆ ನಾವು ನಮ್ಮ ಮೊಮ್ಮಕ್ಕಳಿಗೂ ಬರಲೆಂದು ಸೋಫಾಗಳು ಮುರಿದರೂ ಬಡಿಗನಿಂದ ರಿಪೇರಿಸಿ ಜತನದಿಲದ ಕಾಯ್ದುಕೊಳ್ಳುತ್ತೇವೆ. ಎಲ್ಲಾ ಹಣದ ಪ್ರಭಾವ.

ನಾವು ಇಲ್ಲಿಂದ ಹೋದ ವರ್ಷದ ಕೊನೆಗೆ ಇಲ್ಲಿ ಅಂತರರಾಷ್ಟಿಯ ವಸ್ತು ಪ್ರದರ್ಶನ ನಡೆಸಿದ್ದರು. ಅದರಂತೆ 83 ವಿಶ್ವ ವ್ಯಾಪಾರಿ ಪ್ರದರ್ಶನ ಕೂಡಾ ಏರ್ಪಡಿಸಿದ್ದರು. ಸೌದಿ ಅರೇಬಿಯದಲ್ಲಿ ಈ ವರೆಗೆ ಹಾಗೂ ಮುಂದೆಯೂ ಒಳ್ಳೇ ವ್ಯಾಪಾರ ನಡೆಸುವ ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸುವ ಒಳ್ಳೆಯ ಪ್ರದರ್ಶನ ಅದು. ಇದರಲ್ಲಿ ಅಮೇರಿಕ-ಯುರೋಪದ ದೇಶಗಳು ತಮ್ಮ ತಮ್ಮ ವಿಜ್ಞಾನದ ಸಾಧನೆಯನ್ನು ಪ್ರದರ್ಶಿಸಿದ್ದವು. ಅದರಂತೆ ಜಪಾನ ಸಿಂಗಾಪುರ, ಮಲೇಶಿಯಾ, ಕೂಡಾ ಸ್ಪರ್ಧಿಸಿದ್ದವು.

ಅಂತರರಾಷ್ಟೀಯ ಪೇಟೆಗಳಲ್ಲಿ ಕಾಣುವ ಯಂತ್ರೋಪಕರಣಗಳು, ಇಲೆಕ್ಟ್ರಾನಿಕ್ಸ್ ವಸ್ತುಗಳು, ಇವನ್ನೆಲ್ಲ ಸಾಕಷ್ಟು ಪ್ರಮಾಣದಲ್ಲಿ ಪ್ರದರ್ಶಿಸಿದ್ದರು. ಇಲ್ಲೆಲ್ಲ ಸೌದಿಯ ಬಿಸಿನೆಸ್ ಜನರ ಆರ್ಡರ್ ಕೊಡುವದರ- ತೆಗೆದುಕೊಳ್ಳುವದರ ಚರ್ಚೆಗಳು, ಕಾಂಟ್ರ್ಯಾಕ್ಟ್‌ಗಳು ನಡೆದೇ ಇದ್ದವು.

ಇಂಥದರಲ್ಲಿ ನಮ್ಮ ಭಾರತೀಯ ಮಳಿಗೆ ಕೂಡಾ ಒಂದಿತ್ತು. ಧಾವಿಸಿದೆವು. ಇಲ್ಲೆಲ್ಲ ಮಸಾಲೆ ಸಾಮಾನುಗಳು, ಉಪ್ಪಿನಕಾಯಿ-ಹಪ್ಪಳ ಊದಿನ ಕಡ್ಡಿಗಳು ಒಳ್ಳೆ ಚಿತ್ತಾರದ ಬೆಡ್‌ಶೀಟ್‌ಗಳು, ಬೆತ್ತದ- ಹೆಣಿಕೆಯ ಆಕರ್ಷಕ ಸಾಮಾನುಗಳು ಇದ್ದವು.

ಈ ಜಾಗತಿಕ  ಪ್ರದರ್ಶನಗಳಲ್ಲಿ ಪಾಶ್ಚಾತ್ಯರ ವಿಜ್ಞಾನ ಯಂತ್ತೋಪಕರಣ ಗಳ ಪ್ರದರ್ಶನ ಬೃಹತ್ತಾಗಿ ನೋಡಿದ ಮೇಲೆ ನಮ್ಮ ಭಾರತದ್ದು ಕೇವಲ ಮಸಾಲೆ ಊದಿನಕಡ್ಡಿ ಇಷ್ಟಕ್ಕೇ ಸೀಮಿತವೇ ಎಂದು ಬೇಸರವೂ ಆಗುತ್ತದೆ. ನಮ್ಮ ಉದ್ದಿಮೆದಾರ ರಲ್ಲಿ, ಸರಕಾರದ ಅಧಿಕಾರಿಗಳಲ್ಲಿ ನಮ್ಮ ಉತ್ತಮ ಸಾಮಾನುಗಳನ್ನು ಪ್ರದರ್ಶಸಿರುವ ಹವ್ಯಾಸ ಕಡಿಮೆ. “ಪ್ರೆಸೆಂಟೇಶನ್”ದಲ್ಲಿ ಎಲ್ಲರಕ್ಕಿಂತ ಹಿಂದುಳಿದವರು ಭಾರತೀಯರು.

ಇತ್ತೀಚೆಗೆ ಇಲ್ಲಿ ಸಾಕಷ್ಟು ಕೇರಳಿ ಅಂಗಡಿಗಳಾಗುತ್ತಿವೆ. ಅಂದರೆ ಅಂಗಡಿಯ ಮಾಲಿಕರು ಅರಬರು. ತಮ್ಮ ಅಂಗಡಿಗಳ ಸ್ವಳಗಳನ್ನು ಭಾರತೀಯ ಹೋಟೆಲ್ಗಳಿಗಾಗಿ, ಕಿರಾಣ ಅಂಗಡಿಗಳಿಗಾಗಿ, ಪೇಪರ್ ಸ್ಟಾಲ್‌ಗಳಿಗಾಗಿಯೂ ಅಥವಾ ಟಿ.ವಿ., ವಿ.ಸಿ.ಅರ್. ಇನ್ನಿತರ ಎಲೆಕ್ಟ್ರಾನಿಕ್ ಸಾಮಾನುಗಳ ಅಂಗಡಿಗಳಿಗಾಗಿಯೂ ಬಾಡಿಗೆಯಿಂದ ಕೊಟ್ಟಿರು
ತ್ತಾರಷ್ಟೆ. ಇಂತಹ ಕಡೆಗಳಲ್ಲೆಲ್ಲ ಭಾರತೀಯ ಸಿಹಿ ತಿಂಡಿ ತಿನಿಸುಗಳು, ವಿಶೇಷ ಸಾಮಾನುಗಳು, ಸಿನೇಮ ಕ್ಯಾಸೆಟ್‌ಗಳು ಟೇಪ್‌ಕ್ಯಾಸೆಟ್‌ಗಳು ಸಿಗುವವು. ಭಾರತದಲ್ಲಿ ಬಿಡುಗಡೆಯಾಗುವದಕ್ಕಿಂತ ಮೊದಲು ಸಿನೇಮಗಳನ್ನು ಇಲ್ಲಿ ನೋಡಬಹುದು. ಸಿಂಗಾಪೂರದ ಕ್ಯಾಸೆಟ್ ರಿಕಾರ್ಡರರ ದೊಡ್ಡ ಜಾಲ ಜಗತ್ತಿನ ತುಂಬೆಲ್ಲ ಹರಡಿದೆ. ಅಲ್ಲಿಂದಲೇ
ಒಂದು ವಾರದೊಳಗಾಗಿ ಯುರೋಪು ಅಮೇರಿಕಗಳಿಗಲ್ಲ ತಲುಪಿರುತ್ತವೆ. ಅದರಂತೆ ಟೇಪ್ ರಿಕಾರ್ಡರ್ ಕ್ಯಾಸೆಟ್‌ಗಳೂ ಕೂಡಾ ಸಾಕಷ್ಟು. ಪೇಟೆಯಲ್ಲಿ ಅಡ್ಡಾಡುವಾಗೆಲ್ಲ ಭಾರತೀಯ ಸಿನೇಮ ಹಾಗೂ ಗಝಲ್‌ಗಳ ಹಾಡುಗಳು ತೇಲಬರುತ್ತಿದ್ದು ಕೇಳುವಾಗೆಲ್ಲ ನಮ್ಮ ಊರಲ್ಲೇ ಇದ್ದೆವೇನೋ ಅನಿಸುವ ವಾತಾವರಣದಿಂದ ಖುಷಿಪಡುತ್ತೇವೆ.

ಪೇಪರ್ ಸ್ಟಾಲ್‌ಗಳಲ್ಲಿ ಬಹುತೇಕ ಎಲ್ಲ ಭಾಷೆಗಳ ಪತ್ರಿಕೆಗಳು ಸಿಗುತ್ತವೆ. ಕೇರಳಿಗರಿಗೆ, ಬಾಂಬೆ, ದಿಲ್ಲಿಯವರಿಗೆ ತಮಗೆ ಬೇಕಾದ ಪತ್ರಿಕೆಗಳೆಲ್ಲ ಸಿಗುತ್ತವೆಯೆಂದು ಬಹಳ ಖುಷಿ. ಅದರೆ ಈವರೆಗೆ ಕನ್ನಡದ ಒಂದೂ ಪತ್ರಿಕೆ ಬುಕ್ ಸ್ಟಾಲ್‌ನಲ್ಲಿ ಕಾಣಿಸಲೇ ಇಲ್ಲ. ‘ಕನ್ನಡಿಗರು ಸಾಕಷ್ಟಿದ್ದಾರೆ. ಆದರೆ ಓದುಗರಿಲ್ಲ’ – ಎಂದು ನನಗನಿಸಿತು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಮರಣೆಯೊಂದೇ ಸಾಲದೆ ?
Next post ನ್ಯಾಯ ಬೇಡುತಾವೆ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…