ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ
ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು
ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ||

ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ
ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾವೆ
ನನ್ನ ಪಾಡು ನೀ ಹಾಡು ನೋಡು ಎಂದೆನುತ ತುಡಿಯುತಾವೆ ||೧||

ಹಕ್ಕಿಯಾಗಿದೀವಿ ಪಂಜರದೊಳಗೆ ಸಿಕ್ಕಿದೀವಿ
ರೆಕ್ಕೆಗೆದರಿ ಆಕಾಶದಾಗೆ ನಾವ್
ನಕ್ಕು ಹಾರುತೀವಿ ಬಿಡು ಬಿಡು ನಕ್ಕು ಹಾರುತೀವಿ              ||೨||

ಚಿಕ್ಕಿಯಾಗಿದೀವಿ ಹಗಲಲಿ ಬಿಕ್ಕೆ ಬೇಡುತೀವಿ
ಸೊಕ್ಕಿ ಉರಿವ ಆ ಸೂರ್ಯಗಿಂತ ಬಲು
ಹಕ್ಕು ದೊಡ್ಡದೈತೆ ನಮ್ಮದು ಹಕ್ಕು ದೊಡ್ಡದೈತೆ                ||೩||

ಪ್ರಾಣಿ ಅಂತಿಯಲ್ಲೋ ನರ ನಿನ್ನ ತ್ರಾಣವೇನು ಹೆಚ್ಚೋ
ಜಾಣನಾಗಿ ಏಣಿಯಲಿ ಮ್ಯಾಲೆ ನೀ
ಕೋಣನಾಗಿ ಕುಂತಿ ಶಾಂತಿಯ ಕಾಣದಂತೆ ಸೋತಿ          ||೪||

ಮಣ್ಣು ಕಲ್ಲು ಎಂದು ತುಳಿಯುವಿ ಕಣ್ಣು ಮ್ಯಾಲೆ ಬಂದು
ಮಣ್ಣ ಜೊತೆಗೆ ಆ ಗಾಳಿ ನೀರುಗಳ
ಬಣ್ಣ ಸೇರಿದಾಗ ಮೆರೆಯುವಿ ಮಣ್ಣು ಸೇರೊವರೆಗೆ            ||೫||

ಹೆಣ್ಣು ಸಣ್ಣದೆಂದಿ ಗಂಡಿನ ಉನ್ನತಿಯನೆ ನಡೆಸಿ
ತಣ್ಣ ಸಾಗರದ ಸಣ್ಣ ಕೆಂಡ ಪುಂಡಾಟ ನಡೆಸಿದಂತೆ
ಕರಗುವಿ ಹೆಣ್ಣ ಕಣ್ಣಿನೊಳಗೆ                                     ||೬||

ಬಟ್ಟೆ ಭ್ರಮೆಯ ನೆಚ್ಚಿ ರೊಕ್ಕದ ಹೊಟ್ಟುರವುದೆ ಮುಚ್ಚಿ
ಹೊಟ್ಟೆ ರಟ್ಟೆಗಳ ಕಾಲ ಕೆಳಗೆ ತುಳಿದಿಟ್ಟು ಮೆರೆವ ಮಳ್ಳ ನೀನು
ಸುಟ್ಟು ಹೋಗುತೀಯ ಎಚ್ಚರ ಸುಟ್ಟು ಹೋಗುತೀಯ         ||೭||

ಕಂಡುದನ್ನೆ ನಿಜವು ಅಂತಾ ಉಂಡು ತಿಂದು ಕೊಬ್ಬಿ
ಭಂಡತನದಿ ಉದ್ದಂಡನಾಗಿ ಕಂಡಿರದ ಸತ್ಯ ಬಿಟ್ಟಿ ಬರಿಯ
ತುಂಡು ಬಟ್ಟೆ ಆದೀ ಬರಿಯ ತುಂಡು ಬಟ್ಟೆ ಆದಿ               ||೮||

******************************
೧೯೮೪