ನಾನೇರಿದೆತ್ತರಕೆ

ತುಲೋಸಿನ ರಮೋನ್‌ ವಿಲ್ಲೆಯ ಹೋಟೆಲ್‌ ಕಂಫರ್ಟ್ ಇನ್ನ್‌ನಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅಪರಾಹ್ನ ಮೂರಕ್ಕೆ ನಾವು ಹೊರಟದ್ದು ಲೂರ್ದ್‌ಗೆ. ಅಂದು ಎಪ್ರಿಲ್‌ 25. ಮತ್ತೆ ಎರಡೇ ದಿನಗಳಲ್ಲಿ ನಾವು ತುಲೋಸಿಗೇ ವಾಪಾಸಾಗಲಿದ್ದೆವು. ಆದುದರಿಂದ ನಮ್ಮ ಲಗ್ಗೇಜುಗಳನ್ನೆಲ್ಲಾ ಜುವಾನ್‌ಬುಯೋನ ಮನೆಯಲ್ಲಿ ಡಂಪ್‌ ಮಾಡಿ, ಎರಡು ದಿವಸಗಳಿಗೆ ಏನೇನು ಬೇಕೋ ಅವನ್ನೆಲ್ಲಾ ಸಣ್ಣ ಬ್ಯಾಗುಗಳಲ್ಲಿ ಹಾಕಿಕೊಂಡು ಹೊರಟೆವು. ನಮ್ಮ ಪ್ರಯಾಣಕ್ಕಾಗಿ ಬುಯೋ ಟೆಂಪೋ ಒಂದನ್ನು ಸಿದ್ಧಪಡಿಸಿದ್ದ. ನಮಗೀಗ ತುಲೋಸು ಪರಿಚಿತ ನಗರವಾಗಿತ್ತು. ಜಾನ್‌ ಬುಯೋ ‘ನಮ್ಮವನೇ’ ಆಗಿಬಿಟ್ಟಿದ್ದ. ಬುಯೋ ಜತೆ ಭಾರತಕ್ಕೆ ಬಂದಿದ್ದ ತಂಡದ ಅತಿ ಕಿರಿಯ ಸದಸ್ಯ ಅಲನ್‌ ಲೂರ್ದ್‌ನವ. ಆತ ಪಿರನಿ ಪರ್ವತವೊಂದಕ್ಕೆ ನಮ್ಮನ್ನು ಕರೆದೊಯ್ಯುವುದಾಗಿ ತುಲೋಸ್‌ ಕಾನೇರೆನ್ಸಿನ ಸಂದರ್ಭದಲ್ಲೇ ವಚನವಿತ್ತಿದ್ದ. ಈಗ ಸ್ವಯಂ ಬುಯೋನೇ ಗಾಡಿ ಓಡಿಸುತ್ತಾ ನಮ್ಮಲ್ಲಿ ಹರಟುತ್ತಿದ್ದ. ತುಲೋಸಿನಿಂದ ಹೊರಟ ನಾವು ಎರಡೂವರೆ ಗಂಟೆಗಳಲ್ಲಿ ಲೂರ್ದ್‌ ಸೇರಿದಾಗ ‘ಎಲ್ಲಾ ಹಾದಿ ಇಷ್ಟು ಬೇಗ ಕ್ರಮಿಸಿಯಾಯಿತೇ’ ಎಂದು ಪ್ರಶ್ನಿಸುವಷ್ಟು ಚೇತೋಹಾರಿಯಾಗಿತ್ತು ನಮ್ಮ ಪಯಣ.

ಲೂರ್ದ್‌  ಫ್ರೆಂಚರ ಬೆತ್ಲೆಹಾಂ

ಕ್ರೈಸ್ತರಿಗೆ ಬೆತ್ಲೆಹಾಂನ ಬಳಿಕ ಅತ್ಯಂತ ಪವಿತ್ರ ಕೇತ್ರವೆಂದರೆ ಈ ಲೂರ್ದ್‌. ಆದರೆ ಫ್ರೆಂಚರಿಗೆ ಇದುವೇ ಬೆತ್ಲೆಹಾಂ. ಪಿರನೀಸ್‌ ಪ್ರಾಂತ್ಯಕ್ಷ್ಕೆ ಸೇರಿದ ಲೂರ್ದ್‌ನ ಜನಸಂಖ್ಯೆ 19000 ಮಾತ್ರ. ವರ್ಷಂಪ್ರತಿ ಇಲ್ಲಿಗೆ ಬರುವ ಭಕ್ತರ ಮತ್ತು ಸಂದರ್ಶಕರ ಸಂಖ್ಯೆ ಸುಮಾರು ಒಂದು ಕೋಟಿಯಷ್ಟು. ಸಮುದ್ರಮಟ್ಟಕ್ಕಿಂತ 420 ಮೀಟರುಗಳಷ್ಟು ಎತ್ತರದಲ್ಲಿರುವ ಲೂರ್ದ್ಅನ್ನು ಗಾವ್‌ (GAVE) ನದಿ ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಮೇಲ್ಭಾಗದಲ್ಲಿ ನಗರ ಮತ್ತು ಅರಮನೆಗಳಿದ್ದರೆ, ಕೆಳಭಾಗದಲ್ಲಿ ದೇವಾಲಯಗಳು ಮತ್ತು ಹೋಟೆಲುಗಳಿವೆ.

ಇಲ್ಲಿ ರೋಮನ್ನರು ಅರಮನೆ ಮತ್ತು ಕೋಟೆಯನ್ನು ಕಟ್ಟುವುದರೊದಿಗೆ ಲೂರ್ದ್‌ನ ಇತಿಹಾಸ ಆರಂಭವಾಗುತ್ತದೆ. 42 ಮೀಟರು ಎತ್ತರಕ್ಕಿರುವ ಬೃಹತ್‌ ಬಂಡೆಯ ಮೇಲೆ ಕಟ್ಟಲಾದ ಈ ಕೋಟೆ, ಈಗ ಒಂದು ಸ್ಮಾರಕವಾಗಿಬಿಟ್ಟಿದೆ. ಕ್ರಿ.ಶ.1920ರಲ್ಲಿ ಇದನ್ನು ಪಿರನೀಸ್‌ ಮ್ಯೂಸಿಯಮ್ಯಾಗಿ ಪರಿವರ್ತಿಸಲಾಯಿತು. ಕ್ರಿ.ಶ.1858ರ ಫೆಬ್ರವರಿ 11ರಂದು ಬೆರ್ನಡೆಟ್ಟ್‌ ಸೌಬಿರೋ ಎಂಬ ಕನ್ಯೆಗೆ ಗುಹೆಯೊಂದರಲ್ಲಿ ಏಸುವಿನ ತಾಯಿ ಮೇರಿಯ ದರ್ಶನವಾಯಿತಂತೆ! ಆ ಬಳಿಕ ಲೂರ್ದ್‌ನ ಶುಕ್ರದೆಸೆ ಆರಂಭವಾಯಿತು. ಇದೊಂದು ನಂಬಿಕೆಯ ತಾಣವಾಗಿ ವಿಶ್ವದ ಎಲ್ಲೆಡೆಯಿಂದ ಯಾತ್ರಿಕರು ಲೂರ್ದ್‌ಗೆ ಬರಲಾರಂಭಿಸಿದರು. ವರ್ಷಕ್ಕೆ ಸುಮಾರು ಒಂದು ಕೋಟಿಯಷ್ಟು ಭಕ್ತರನ್ನು ಮತ್ತು ಪ್ರವಾಸಿಗರನ್ನು ಲೂರ್ದ್‌ ಆಕರ್ಷಿಸುತ್ತದೆ. ಅವರಲ್ಲಿ ಸುಮಾರು ಐದು ಲಕ್ಷ ಮಂದಿಗಳು ವಾಸಿ ಮಾಡಲಾಗದ ರೋಗಿಗಳು ಮತ್ತು ಶಾಶ್ವತ ಅಂಗವಿಕಲರು. ಅವರ ಸಹಾಯಕ್ಕಾಗಿ ಸರಿಸುಮಾರು ಅಷ್ಟೇ ಮಂದಿ ಅವರ ಜತೆಗಿರುತ್ತಾರೆ. ಅವರಿಗಾಗಿ ಆಸ್ಪತ್ರೆಗಳಿವೆ, ಛತ್ರಗಳಿವೆ.

ಯುವಜನತೆಗಾಗಿ ಇಲ್ಲಿ ಆಗಾಗ ಬೇರೆ ಬೇರೆ ಶಿಬಿರಗಳನ್ನು ಸಂಘಟಿಸಲಾಗುತ್ತದೆ. ಒಟ್ಟಿನಲ್ಲಿ ಲೂರ್ದ್‌ ಸದಾ ಜನರಿಂದ ತುಂಬಿ ತುಳುಕುವ ಕೇತ್ರವಾಗಿ ಬಿಟ್ಟಿದೆ.

ಪಿರನಿ ಪರ್ವತಶ್ರೇಣಿಯ ಹೃದಯ ಭಾಗದಲ್ಲಿರುವ ಲೂರ್ದ್‌ ಚಾರಣಿಗರ ಮತ್ತು ಸಾಹಸಪ್ರಿಯರ ನೆಚ್ಚಿನ ತಾಣ. ಸಿರ್ಕ್‌ ಡಿ ಗವರ್ನಿ ಮತ್ತದರ ಹಿಮನದಿಗಳು, ನಯನ ಮನೋಹರವಾದ ಜಲಪಾತಗಳ ಸ್ಪಾನಿಷ್‌ ಸೇತುವೆ, ಆರ್‌ಟೋಸ್ಟ್‌ ಮತ್ತು ಗಾಬ್‌ ಸರೋವರಗಳಿಂದಾಗಿ ಅತ್ಯಾಕರ್ಷಕವೆನಿಸಿರುವ ಪಿರನೀಸ್‌ ನ್ಯಾಶನಲ್‌ ಪಾರ್ಕ್‌, ಅಸ್ಪಿನ್‌ ಕಣಿವೆಮಾರ್ಗ, ಅಬಿಸ್ಕ್‌, ಟೂರ್ಮಲೆ ಮತ್ತು ಪಿರೆಸೋಡ್‌ ಗುಡ್ಡಗಳು  ಪ್ರವಾಸಿಗರ ಆಕರ್ಷಣಾ ಕೇಂದ್ರಗಳೆನಿಸಿವೆ. ಚಳಿಗಾಲದಲ್ಲಿ ಸ್ಕೈಯಿಂಗ್‌ ಮಾಡಲು ಅರೆನ್ಸ್‌, ಬ್ಯಾರೆಜೆಸ್‌, ಕಟರೆಟ್ಸ್‌, ಗವರ್ನಿ ಲೆ ಇಸ್ಪೆಸಿರೆಸ್‌, ಹಾಟಕಾಂ, ಲುಜ್‌  ಆರ್ಡಿನೆನ್‌, ಲಾ ಮೋಂಗಿ, ಪಿಯಾ ಎಂಗಲಿ, ಸೇಂಟ್‌ ಲ್ಯಾರಿ ಎಂಬ ಒಂಬತ್ತು ಸ್ಕೈಯಿಂಗ್‌ ಧಾಮಗಳಿವೆ. ಇವೆಲ್ಲಾ 50 ಕಿ.ಮೀ ವ್ಯಾಪ್ತಿಯಲ್ಲಿರುವ ಸ್ಥಳಗಳು. ಬೇಸಿಗೆ ಕಾಲದ ವಿಶ್ರಾಂತಿ ಧಾಮಗಳಾಗಿ ಅರ್ಗೆಲ್‌ ಗಜೋಸ್ತ್‌, ಬನೆರೆಸ್‌ ಡಿ  ಬಗೋರ್‌, ಬರೇಜೆಸ್‌, ಬ್ಯುಸೆನ್ಸ್‌, ಕ್ಯಾಪ್‌ವೆರ್ನ್‌, ಕಟರೆಟ್ಸ್‌, ಲೂರ್ಸ್‌ ಬರ್ಬೆಜಾನ್‌ ಮತ್ತು ಸೇಂಟ್‌ ಸಾವಿಯರ್‌ ಖ್ಯಾತಿಗಳಿಸಿವೆ.

ಲೂರ್ದ್‌ ಪುಣ್ಯಕ್ಷೇತ್ರ ಮಾತ್ರವಲ್ಲ, ಸುಂದರವಾದ ಸ್ಥಳವೂ ಕೂಡಾ. ಲೂರ್ದ್‌ನ ಸಮೀಪದಲ್ಲಿ ಸಂರಕಿತ ಅರಣ್ಯ ಪ್ರದೇಶಗಳು ಇದ್ದು, ಅವು ಪಿಕಿನಕ್ಕಿಗೆ ಹೇಳಿ ಮಾಡಿಸಿದಂತಹ ತಾಣಗಳಾಗಿವೆ. ಲೂರ್ದ್‌ನಲ್ಲಿ ಬಿಸಿನೀರಿನ ಈಜುಕೊಳಗಳಿವೆ. ನಾಲ್ಕು ಸಾವಿರ ಜನ ಹಿಡಿಸುವ ವಿವಿಧೋದ್ದೇಶಗಳ ಬೃಹತ್‌ ಸಭಾಭವನವಿದೆ. ಕಾಂಗ್ರೆಸ್‌ ಹಾಲ್‌, ಪಿರನೀಸ್‌ ಮ್ಯೂಸಿಯಂ, ಮೇಣದ ಮೂರ್ತಿಗಳ ಮ್ಯೂಸಿಯಂ, ಲಿಟಲ್‌ ಲೂರ್ದ್‌ ಮ್ಯೂಸಿಯಂ  ನೋಡಲೇ ಬೇಕಾದ ಸಂಗ್ರಹಾಲಯಗಳು. ವಿನೋದಪ್ರಿಯರಿಗಾಗಿ ಇಲ್ಲಿ ಕೇಬಲ್‌ಕಾರ್‌ನ ವ್ಯವಸ್ಥೆಯಿದೆ. ಲೂರ್ದ್‌ನಿಂದ ಎರಡು ಕಿ.ಮೀ. ದೂರದಲ್ಲಿ ಅಪೂರ್ವ ಸೌಂದರ್ಯದ ವಿಶಾಲ ಕೆರೆಯೊಂದಿದೆ. ಹದಿಮೂರು ಕಿ.ಮೀ. ದೂರದಲ್ಲಿರುವ ಬೆಥರಂ ಗುಹೆಗಳು, ಚಾರಣ ಪ್ರಿಯರ ನೆಚ್ಚಿನ ತಾಣಗಳಾಗಿವೆ.

ಲೂರ್ದ್‌ನ ಮಹಾಮಾತೆ ಬೆರ್ನ್‌ಡೆಟ್ಟಾ

ಲೂರ್ದ್‌ ಒಂದು ಪುಣ್ಯಕ್ಷೇತ್ರವಾಗಲು ಬೆರ್ನ್‌ಡೆಟ್ಟಾ ಎಂಬ ಮಹಿಳೆ ಕಾರಣಳು. ಲೂರ್ದ್‌ನ ಫ್ರಾಂಕೋ ಸೆಬಿರೋ ಮತ್ತು ಲೂಯಿ ಕೆಸ್ತೆರೋ ದಂಪತಿಯರ ಮಗಳಾಗಿ ಕ್ರಿ.ಶ.1844ರ ಜನವರಿ ಏಳರಂದು ಬೆರ್ನಡೆಟ್ಟಾಳ ಜನನವಾಯಿತು. ಅವಳ ತಂದೆ ಸಣ್ಣ ಹಿಟ್ಟು ಗಿರಣಿಯೊಂದರ ಮಾಲಿಕ. ಆತನ ಗಳಿಕೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಆದರೂ ಬೇರೆಯವರಿಗೆ ಹೊರೆಯಾಗದ ಸ್ವಾವಲಂಬಿ ಕುಟುಂಬ ಅವರದು. ಅಂತಹ ಕುಟುಂಬದಲ್ಲಿ ಹುಟ್ಟಿದ ಬೆರ್ನಡೆಟ್ಟಾ 10 ತಿಂಗಳ ಶಿಶುವಾಗಿದ್ದಾಗ, ಅವಳ ತಾಯಿಯ ಮೊಲೆ ಬತ್ತಿಹೋಯಿತು. ತನ್ನ ನವಜಾತ ಶಿಶುವನ್ನು ಕಳೆದುಕೊಂಡಿದ್ದ ಬ್ಯಾಟ್ರೆಸ್ಸಿನ ನರ್ಸ್‌ ಒಬ್ಬಳು ಹಾಲೂಡಿ ಬೆರ್ನಡೆಟ್ಟಾಳನ್ನು ಪೊರೆದಳು. ಎರಡು ವರ್ಷ ತುಂಬಿದ ಬಳಿಕ ಸೊಬಿರೋ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಬಂದ. ಮತ್ತೆ ಎಂಟು ವರ್ಷ ಬೆರ್ನ್‌ಡೆಟ್ಟಾ ಅಪ್ಪ ಅಮ್ಮಂದಿರ ಜತೆಯಲ್ಲಿ ಕಳೆದಳು.

ಕ್ರಿ.ಶ.1853ರಲ್ಲಿ ಫ್ರಾನ್ಸಿನಾದ್ಯಂತ ಬದಲಾವಣೆಯ ಗಾಳಿ, ಕೈಗಾರಿಕಾ ಕ್ರಾಂತಿಯ ರೂಪದಲ್ಲಿ ಬೀಸಿತು. ಉಗಿಯಂತ್ರಗಳು ಬಳಕೆಗೆ ಬಂದು, ಸೊಬಿರೋನ ಹಳೆಯ ಹಿಟ್ಟಿನ ಯಂತ್ರ ಜನಾಕರ್ಷಣೆಯನ್ನು ಕಳೆದುಕೊಂಡಿತು. ಅಂತಹ ಕಷ್ಟಕರ ಸಂದರ್ಭದಲ್ಲಿ ಲೂರ್ದ್‌ನ ಸುತ್ತಮುತ್ತಲೆಲ್ಲಾ ಕರಾಳವಾದ ಕ್ಷಾಮ ತಲೆದೋರಿ ಜನ ಕಂಗಾಲಾದರು. ಸೊಬಿರೋ ಕೇಳಿದವರಿಗೆಲ್ಲಾ ಸಾಲ ಕೊಟ್ಟು ಕೋಡಂಗಿಯಾದ. 1854ರಲ್ಲಿ ಸೊಬಿರೋ ಮನೆಯ ಬಾಡಿಗೆ ಕೊಡಲಾಗದ ಪರಿಸ್ಥತಿ ಉಂಟಾಗಿ, ಆತ ಪುಟ್ಟ ಮನೆಯೊಂದಕ್ಕೆ ತನ್ನ ಕುಟುಂಬದೊಡನೆ ಹೋಗಬೇಕಾಗಿ ಬಂತು. 1855ರಲ್ಲಿ ಪ್ಲೇಗ್‌ ಮಾರಿ ತನ್ನ ಉರಿನಾಲಗೆಯನ್ನು ಚಾಚಿ ಅನೇಕರನ್ನು ಬಲಿತೆಗೆದುಕೊಂಡಿತು. ಬೆರ್ನಡೆಟ್ಟ ಪ್ಲೇಗಿಗೆ ತುತ್ತಾಗಿ ಬದುಕುಳಿದರೂ ಶಾಶ್ವತ ಅಸ್ತಮಾ ಪೀಡಿತಳಾದಳು. ಬೆಂಬಿಡದ ಬಡತನ ಮತ್ತು ಸದಾಕಾಡುವ ರೋಗಗಳಿಂದಾಗಿ ಸೊಬಿರೋ ಕುಟುಂಬ ಲೂರ್ದ್‌ನಿಂದ ಅರ್ಸಿಜ್ಯಾಕಿಗೆ ವಲಸೆ ಹೋಗಬೇಕಾಗಿ ಬಂತು. ಅಲ್ಲಿ ಸೊಬಿರೋನ ಹಳೆಯ ಹಿಟ್ಟುಯಂತ್ರ ಕಾರ್ಯಾರಂಭ ಮಾಡಿತು.

ಸಂಕಟಗಳು ಒಟ್ಟಿಗೇ ಬರುತ್ತವೆ ಎಂಬ ಲೋಕೋಕ್ತಿ ಸೊಬಿರೋ ಪಾಲಿಗೆ ಅಕರಶಃ ನಿಜವಾಗಿಬಿಟ್ಟಿತು. ಫ್ರಾನ್ಸನ್ನು ಆವರಿಸಿದ ಕ್ಷಾಮ ಕ್ರಿ.ಶ.1856ರ ವರೆಗೂ ನಿವಾರಣೆಯಾಗದ ಕಾರಣ ಸರಕಾರ ಜನರಿಗೆ ಗೋಧಿಹಿಟ್ಟನ್ನು ಉಚಿತವಾಗಿ ಹಂಚತೊಡಗಿತು. ಇದರಿಂದಾಗಿ ಸೊಬಿರೋನ ಹಿಟ್ಟುಯಂತ್ರ ಕೆಲಸ ನಿಲ್ಲಿಸಲೇಬೇಕಾಯಿತು. ನಾಲ್ಕು ಮಕ್ಕಳ ತಾಯಿ ಲೂಯಿ ಕೆಸ್ತೆರೋ, ಯಾರದೋ ಮನೆಚಾಕರಿ ಮಾಡಬೇಕಾಗಿ ಬಂತು. ಬೆರ್ನಡೆಟ್ಟ ಹೋಟೆಲೊಂದರಲ್ಲಿ ಪರಿಚಾರಿಕೆಯಾಗಿ ಕೆಲಸಕ್ಕೆ ಸೇರಿಕೊಂಡಳು. ಹಾಗಾಗಿ ಔಪಚಾರಿಕ ಶಿಕಣವನ್ನು ಪಡೆಯುವ ಭಾಗ್ಯ ಅವಳಿಗಿರಲಿಲ್ಲ.

ಎಷ್ಟು ದುಡಿದು ಸಂಪಾದಿಸಿದರೂ, ಸೊಬಿರೋ ಕುಟುಂಬಕ್ಕೆ ತಾನು ವಾಸಿಸುತ್ತಿದ್ದ ಮನೆಯ ಬಾಡಿಗೆ ಕೊಡಲು ಸಾಧ್ಯವಾಗಲಿಲ್ಲ. ಆದುದರಿಂದ ಆ ಮನೆಯನ್ನು ಬಿಟ್ಟು, 1857ರಲ್ಲಿ ಲೂರ್ದ್‌ನ ಹಳೇಜೈಲಲ್ಲಿ ಸೊಬಿರೋ ಕುಟುಂಬ ಆಶ್ರಯಪಡೆಯಬೇಕಾಗಿ ಬಂತು. ಹಗ್ಗವೂ ಹಾವಾಗುತ್ತಿದ್ದ ಕಾಲ ಅದು. ಒಮ್ಮೆ ಒಂದು ಗೋಣಿ ಗೋಧಿಹಿಟ್ಟನ್ನು ಕದ್ದನೆಂಬ ಸುಳ್ಳು ಆಪಾದನೆಗೆ ಒಳಗಾಗಿ, ಸೊಬಿರೋ ಒಂದು ವಾರ ಕಾರಾಗೃಹಶಿಕೆ ಅನುಭವಿಸಬೇಕಾಯಿತು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಸೊಬಿರೋ, ಕಾರಾಗೃಹದಿಂದ ಹೊರ ಬಂದ ಬಳಿಕ ಬೆರ್ನಡಿಟ್ಟಳನ್ನು ಬಾರ್‌ಟ್ರೆಸ್ಸಿನ ಒಬ್ಬ ಶ್ರೀಮಂತನಲ್ಲಿಗೆ ಕೆಲಸಕ್ಕೆ ಕಳುಹಿಸತೊಡಗಿದ. ಬೆರ್ನಡೆಟ್ಟಳಿಗೆ ಹಗಲಿಡೀ ಕುರಿಗಳನ್ನು ಮೇಯಿಸುವ, ಸಂಜೆ ಆ ಶ್ರೀಮಂತನ ಮಕ್ಕಳ ಲಾಲನೆ  ಪಾಲನೆ ಮಾಡುವ, ಬಿಡುವಿರದ ಕೆಲಸ ದೊರಕಿತು. ಕಷ್ಟ ಬಂತೆಂದು ಹಾದಿ ತಪ್ಪದ ಬೆರ್ನಡೆಟ್ಟ ಅಂತಹ ಪರಿಸ್ಥತಿಯಲ್ಲೂ ಸುಸಂಸ್ಕೃತ ಸ್ವಭಾವದವಳಾಗಿ ಬೆಳೆದಳು.

ಆ ಶ್ರೀಮಂತನ ಮನೆಯಲ್ಲಿನ ಅವಿಶ್ರಾಂತ ದುಡಿಮೆ ಮತ್ತು ತನ್ನ ತಂದೆ  ತಾಯಿ, ಸೋದರ  ಸೋದರಿಯರಲ್ಲಿನ ಅನುಪಮ ಪ್ರೀತಿ ಬೆರ್ನಡೆಟ್ಟಳನ್ನು ಲೂರ್ದ್‌ಗೆ ವಾಪಾಸಾಗುವಂತೆ ಪ್ರೇರೇಪಿಸಿದವು. ಕ್ರಿ.ಶ.1858ರ ಜನವರಿಯಲ್ಲಿ ಆಕೆ ಹಳೇ ಜೈಲಿನ ತನ್ನ ನಿವಾಸಕ್ಕೆ ವಾಪಾಸಾದಳು. ಅದೇ ವರ್ಷದ ಫೆಬ್ರವರಿ 11ರಂದು ಆಕೆ ತನ್ನ ತಂಗಿ ಆ್ಯಂಟನೆಟ್ಟ್‌ ಮತ್ತು ಸ್ನೇಹಿತೆ ಜೀನ್‌ ಅಬೇದಿ ಜತೆ ಸೌದೆ ಸಂಗ್ರಹಿಸಲೆಂದು ಮಸ್ಸಬೀಲ್‌ ಪ್ರದೇಶಕ್ಕೆ ಹೋದಳು. ಅಲ್ಲಿನ ಗವಿಯಲ್ಲಿ ಆಕೆಗೆ ಬಿಳಿಸೀರೆ ಉಟ್ಟ ದಿವ್ಯ ಮಹಿಳೆಯೊಬ್ಬಳ ದರ್ಶನವಾಯಿತು. ಆಗ ಬೆರ್ನಡೆಟ್ಟ ಹದಿನಾಲ್ಕು ವರ್ಷದ ಹುಡುಗಿ. ಆಕೆಗೆ ಅದೇ ಗವಿಯಲ್ಲಿ ಹದಿನೆಂಟು ಬಾರಿ ಆ ಬಿಳಿಸೀರೆಯ ಸ್ತ್ರೀಯ ದರ್ಶನವಾಯಿತು. ಆಕೆ ಬೆರ್ನೆಡೆಟ್ಟಾಳಿಗೆ ಲೂರ್ದ್‌ನಲ್ಲಿ ತನ್ನದೊಂದು ಚರ್ಚು ನಿರ್ಮಿಸಬೇಕು ಎಂದಳಂತೆ. ಹಾಗೆ ಕಂಡ ದಿವ್ಯಸ್ತ್ರೀ ಯೇಸುವಿನ ತಾಯಿಯಾದ ಮೇರಿ ಎಂದು ಅಲ್ಲಿನವರು ನಂಬಿದರು. ಹಾಗಾಗಿ ಲೂರ್ದ್‌ನಲ್ಲೊಂದು ಬೃಹತ್‌ ದೇಗುಲ ನಿರ್ಮಾಣವಾಯಿತು. ಗವಿಯು ಅತ್ಯಂತ ಪವಿತ್ರ ತಾಣವಾಯಿತು.

ಕ್ರಿ.ಶ.1866ರಲ್ಲಿ ಸನ್ಯಾಸಿನಿಯಾದ ಬರ್ನಡೆಟ್ಟ, ಆ ಬಳಿಕ ಬಡಬಗ್ಗರ ಸೇವೆಗಾಗಿ ತನ್ನ ಜೀವನವನ್ನು ಮೀಸಲಿಟ್ಟಳು. ಜೀವನದುದ್ದಕ್ಕೂ ಅಸ್ತಮಾ ಆಕೆಯನ್ನು ಕಾಡುತ್ತಲೇ ಇತ್ತು. ಕ್ರಿ.ಶ.1859ರ ಎಪ್ರಿಲ್‌ 16ರಂದು ತೀವ್ರ ಅಸ್ತಮಾ ಮತ್ತು ಎಲುಬು ಕಯದಿಂದ ಆಕೆ ಕೊನೆಯುಸಿರೆಳೆದಳು. ಆಕೆಯ ನಿಸ್ವಾರ್ಥ ಸೇವೆಗಾಗಿ ಕ್ರಿ.ಶ.1933ರ ಡಿಸೆಂಬರ್‌ 8ರಂದು, ಹನ್ನೊಂದನೆಯ ಪೋಪು ಆಕೆಗೆ ಸನ್ಯಾಸಿನಿ ಪಟ್ಟ ನೀಡಿ ಗೌರವಿಸಿದ. ಆಕೆಯಿಂದಾಗಿ ಪ್ರಸಿದ್ಧವಾದ ಲೂರ್ದ್‌ ಆಕೆಗೆ, ಏಸುವಿನ ತಾಯಿ ಮೇರಿಗೆ ನೀಡುವಷ್ಟೇ ಗೌರವ ನೀಡುತ್ತದೆ. ಆಕೆ ಬಾಳಿದ ಮನೆ, ಆಕೆಯ ಮನೆಯ ಪೀಠೋಪಕರಣ, ಆಕೆಯ ತಂದೆಯ ಹಿಟ್ಟು ಯಂತ್ರ, ಆಕೆಯ ಕುಟುಂಬ ವಾಸಿಸಿದ ಜೈಲು  ಇಂದು ಪವಿತ್ರವಾದ ಸಂದರ್ಶನ ಸ್ಥಳಗಳಾಗಿವೆ.

ಬೆರ್ನಡೆಟ್ಟಳಿಗೆ ಮೇರಿ ಹದಿನೆಂಟು ಬಾರಿ ಕಂಡಳೆಂದು ಹೇಳಲಾಗುವ ಗವಿಯ ಸಂದರ್ಶನಕ್ಕೆ ಸದಾಕಾಲ ಉದ್ದನೆಯ ಕ್ಯೂ ಇರುತ್ತದೆ. ಅದರೆದುರು ಕಬ್ಬಿಣದ ವೃತ್ತಾಕಾರದ ರಚನೆಗಳಲ್ಲಿ, ಆರು ಸಾಲುಗಳಲ್ಲಿ ಉದ್ದನೆಯ ಮೋಂಬತ್ತಿಗಳನ್ನು ಭಕ್ತರು ಹಚ್ಚಿ ತಂದಿಡುತ್ತಲೇ ಇರುತ್ತಾರೆ. ಗವಿಯ ಬಲಭಾಗದಲ್ಲಿ ಎತ್ತರಕ್ಕೆ ಮೇರಿಯ ವಿಗ್ರಹವೊಂದಿದೆ. ಆ ಕಲ್ಲಿನ ಗವಿಯಲ್ಲಿ ಅಲ್ಲಲ್ಲಿ ಪರಿಶುದ್ಧವಾದ ನೀರು ಒಸರುತ್ತಿರುತ್ತದೆ. ಗವಿಗೆ ಯಾವುದೇ ಅಡ್ಡಗಳಿಲ್ಲದ ಕಾರಣ ಹೊರಗಿನಿಂದಲೇ ಒಳಗಿನದೆಲ್ಲವೂ ಪೂರ್ತಿಯಾಗಿ ಕಾಣುತ್ತದೆ. ಗವಿಯ ಬಲಬದಿಯಲ್ಲಿ 20 ನೀರ ನಳ್ಳಿಗಳಿವೆ. ನಳ್ಳಿಯಲ್ಲಿ ಸದಾಕಾಲ ಬರುವ ಪರಿಶುದ್ಧ ನೀರು ಭಾವುಕರಿಗೆ ತೀರ್ಥವಾಗುತ್ತದೆ. ಪ್ಲಾಸ್ಟಿಕ್ಕು ಬಾಟಲಿಗಳಲ್ಲಿ ತುಂಬಿಸಲ್ಪಟ್ಟ ತೀರ್ಥ ವಿಶ್ವದ ನಾನಾಭಾಗಗಳಿಗೆ ಒಯ್ಯಲ್ಪಡುತ್ತದೆ.

ಪವಿತ್ರ ಜಲ ಮತ್ತು ಪವಾಡಗಳು : ಲೂರ್ದ್‌ನ ಗವಿಯೊಳಗಿನ ಚಿಲುಮೆಯ ನೀರು ಅತ್ಯಂತ ಪವಿತ್ರವಾದುದೆಂದು ಇಲ್ಲಿನವರು ನಂಬುತ್ತಾರೆ. ಈ ನೀರನ್ನು ಸೇಟಿಕದ ಮೂಲಕ ಬೀಳುವಂತೆ ಮಾಡಲಾಗಿದೆ. ದೀಪಗಳ ಅಲಂಕಾರದಿಂದ ಶುಭ್ರವಾದ ಜಲವು ಕೆಳಗಿಳಿಯುವಾಗ ಬಣ್ಣದ ಚಿತ್ತಾರ ಮೂಡುತ್ತದೆ. ಬಂಡೆಯಿಂದ ನೀರು ಹರಿಯುವುದನ್ನು ತೋರಿಸಲು ಇವೆಲ್ಲಾ ವ್ಯವಸ್ಥೆಗಳು.

ಈ ನೀರ ಚಿಲುಮೆಯನ್ನು ಕ್ರಿ.ಶ.1858ರ ಫೆಬ್ರವರಿ 25ರಂದು ಬೆರ್ನಡೆಟ್ಟ ಕಂಡುಹಿಡಿದಳು. ಬೆರ್ನಡಿಟ್ಟಳೇ ಹೇಳುವ ಹಾಗೆ ‘ಒಂದು ದಿನ ಆ ದಿವ್ಯ ಸ್ತ್ರೀಯು ಚಿಲುಮೆಯಲ್ಲಿಗೆ ಹೋಗಿ ಕೈಕಾಲು ತೊಳೆದುಕೊಂಡು ನೀರು ಕುಡಿಯಲು ಹೇಳಿದಳು. ನನಗೆ ಚಿಲುಮೆ ಕಾಣಿಸದ ಕಾರಣ ನಾನು ನೀರು ಕುಡಿಯಲು ನದಿಯ ಕಡೆಗೆ ಹೋದೆನು. ಆಗ ಆ ದಿವ್ಯ ಸ್ತ್ರೀಯು ನೀರು ಗವಿಯ ಒಳಗೆ, ಬಂಡೆಯ ಕೆಳಗಿದೆಯೆಂದು ಬೊಟ್ಟು ಮಾಡಿ ತೋರಿಸಿದಳು. ನಾನು ನನ್ನ ಕೈಗಳಿಂದ ಬಂಡೆಯ ಬುಡವನ್ನು ಬಿಡಿಸತೊಡಗಿದೆ. ಮೊದಲು ಕೆಸರು ನೀರು ಕಾಣಿಸಿಕೊಂಡಿತು. ನನ್ನ ನಾಲ್ಕನೆಯ ಪ್ರಯತ್ನದಲ್ಲಿ ಶುಭ್ರವಾದ ನೀರು ಸಿಕ್ಕಿತು. ನಾನು ಅದರಲ್ಲಿ ಕೈಕಾಲು ತೊಳೆದುಕೊಂಡೆ. ಕೊನೆಗೆ ಪವಿತ್ರ ಜಲವನ್ನು ಕುಡಿದೆ.’

ಚಿಲುಮೆಯ ಪವಿತ್ರ ಜಲಸ್ನಾನದಿಂದ ಸಂಭವಿಸಿದ ಪವಾಡಗಳನ್ನು ಇಲ್ಲಿ ದಾಖಲಿಸಿ ಇಡಲಾಗಿದೆ. ಲೂಯಿ ಬೊರೀಟ್‌ ಎಂಬ ಕಲ್ಲೊಡ್ಡನ ಕಣ್ಣಿನೊಳಗೆ ಸೇರಿಕೊಂಡು, ಅಸಾಧ್ಯ ಯಾತನೆ ಉಂಟು ಮಾಡುತ್ತಿದ್ದ ಕಲ್ಲಿನ ಚೂರು, ಆತ ಇಲ್ಲಿಗೆ ಬಂದು ಈ ಚಿಲುಮೆಯಲ್ಲಿ ಕಣ್ಣು ತೊಳೆದುಕೊಂಡ ದಿನ ಹೊರಬಂತು. ಆತನ ಕಣ್ಣು ನೋವು ವಾಸಿಯಾಯಿತು. ಇದು ಕ್ರಿ.ಶ.1859ರ ಫೆಬ್ರವರಿ 25ರಂದು ನಡೆದ ಘಟನೆ. ಅದೇ ಫೆಬ್ರವರಿ 28ರಂದು ಮರಣ ಶಯ್ಯಯೆಯಲ್ಲಿದ್ದ ಬಾಲಕ ಜಸ್ಟಿನ್‌ ಡ್ಯುಕೋಂತ್‌ ಎಂಬಾತನನ್ನು ಚಿಲುಮೆಯ ನೀರಿನಲ್ಲಿ ಸ್ನಾನ ಮಾಡಿಸಲಾಯಿತು. ಆಶ್ಚರ್ಯಕರವಾಗಿ ಆತನ ಕಾಯಿಲೆ ವಾಸಿಯಾಗಿ ಆತ ಬದುಕಿಕೊಂಡ.

ಇಲ್ಲಿ ಸಂಭವಿಸಿದ ಇಂತಹ ಘಟನೆಗಳನ್ನು ದಾಖಲು ಮಾಡಿಡಲಾಗಿದೆ. ಕ್ರಿ.ಶ.1858 ರಿಂದ 1989ರ ವರೆಗೆ ಹೀಗೆ ದಾಖಲಾದ ‘ಪವಾಡಗಳು’ ಅರುವತ್ತೈದು. ಇಲ್ಲಿನ ಘಟನೆಗಳನ್ನು ಪವಾಡಗಳೆಂದು ತೀರ್ಮಾನ ಮಾಡುವ ವಿಧಾನ ಸ್ವಾರಸ್ಯಕರವಾದುದು. ಕ್ರಿ.ಶ.1882ರಲ್ಲಿ ಲೂರ್ದ್‌ನಲ್ಲಿ ಮೆಡಿಕಲ್‌ ಬ್ಯೂರೋದ ಸ್ಥಾಪನೆಯಾಯಿತು. ಲೂರ್ದ್‌ನಲ್ಲಿರುವ ವೈದ್ಯರುಗಳು ಅದರ ಸದಸ್ಯರು. ಲೂರ್ದ್‌ನ ಜಲಪಾನ ಮತ್ತು ಜಲಸ್ನಾನದಿಂದ ಗುಣವಾದ ವ್ಯಕ್ತಿಗಳನ್ನು ಪರಿಶೀಲಿಸುವುದು ಈ ಬ್ಯೂರೋದ ಕಾರ್ಯವಾಗಿತ್ತು. ಕ್ರಿ.ಶ.1947ರಲ್ಲಿ ಪ್ಯಾರಿಸ್ಸಿನಲ್ಲಿ 30 ಡಾಕ್ಟರುಗಳ ಪವಾಡ ಪರೀಕ್ಷಾ ತಂಡವೊಂದನ್ನು ರೂಪಿಸಲಾಯಿತು. ಅದೀಗ ಒಂದು ಶಾಶ್ವತ ಸಮಿತಿಯಾಗಿ ಉಳಿದುಕೊಂಡಿದೆ. ಲೂರ್ದ್‌ಗೆ ಬರುವ ರೋಗಿಗಳನ್ನು ಆ ತಂಡ ಮೊದಲು ಪರೀಕ್ಷಿಸಿ ಕಾಯಿಲೆಯ ವಿವರಗಳನ್ನು, ಅದಕ್ಕೆ ಮಾಡಲಾದ ಔಷಧೋಪಚಾರಗಳನ್ನು ಬರೆದಿಡುತ್ತದೆ. ಆ ರೋಗಿಗಳ ಜಲಸ್ನಾನ ಆದ ಬಳಿಕ, ಕಾಯಿಲೆ ವಾಸಿಯಾಗಿಬಿಟ್ಟರೆ ಮತ್ತೆ ಆ ರೋಗಿಗಳು ತಂಡದ ತಪಾಸಣೆಗೆ ಒಳಪಡುತ್ತಾರೆ. ಕಾಯಿಲೆ ವಾಸಿಯಾದುದಕ್ಕೆ ವೈದ್ಯಕೀಯ ವಿವರಣೆ ನೀಡಲು ಸಾಧ್ಯವಾಗದೆ ಇದ್ದರೆ, ಅದನ್ನು ‘ಪವಾಡ’ ಎಂದು ಪರಿಗಣಿಸಲಾಗುತ್ತದೆ. ಅಂತಹ ಪವಾಡಗಳು ‘ಪವಾಡ ಪುಸ್ತಕ’ದಲ್ಲಿ ದಾಖಲಾಗುತ್ತವೆ.

ಲೂರ್ದ್‌ನ ಚಿಲುಮೆಯ ಸಹಜ ಭೌಗೋಳಿಕ ನೆಲೆಯನ್ನು ಅರಸುವ ಕಾರ್ಯ, ಕ್ರಿ.ಶ.1858ರ ಎಪ್ರಿಲ್‌ 24ರಂದು ಆರಂಭಗೊಂಡಿತು. ಕ್ರಿ.ಶ.1862ರ ಫೆಬ್ರವರಿ 22 ರಂದು, ಗವಿಯ ಬುಡವನ್ನು ಸ್ವಚ್ಢಗೊಳಿಸಿ ನೀರು ನೇರವಾಗಿ ಹರಿದುಬರುವಂತೆ ಮಾಡಲಾಯಿತು. ಕ್ರಿ.ಶ.1948ರ ನವೆಂಬರ್‌ 11ರಂದು ಲೂರ್ದ್‌ನ ಬಿಷಪ್ಪು, ಚಿಲುಮೆಯ ಮೂಲನೆಲೆಯನ್ನು ಶೋಧಿಸುವ ಕಾರ್ಯಕ್ಷ್ಕೆ ಒತ್ತಾಸೆ ನೀಡಿದ. ಈ ಕಾರ್ಯವನ್ನು ಹೈಡ್ರಾಲಜಿ ತಜ್ಞನಾದ ಮೈಲೆಟ್ಟನಿಗೆ ವಹಿಸಿಕೊಡಲಾಯಿತು. ಕ್ರಿ.ಶ.1949ರ ಫೆಬ್ರವರಿಯಲ್ಲಿ ಆತ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ. ಈಗ ವಾತಾವರಣವನ್ನು ಹೊಂದಿಕೊಂಡು, ದಿನಕ್ಕೆ ಹದಿನೇಳು ಸಾವಿರದಿಂದ ಎಪ್ಪತ್ತೆರಡು ಸಾವಿರ ಲೀಟರು ನೀರು ಚಿಲುಮೆಯಿಂದ ಪ್ರವಹಿಸುತ್ತದೆ. ಬೇಸಿಗೆಯಲ್ಲಿ ಸಹಜವಾಗಿ ಪ್ರವಾಹ ಕಡಿಮೆ. ರೋಸರಿ ಬ್ಯಾಸಿಲಿಕಾದ ಕೆಳಗಡೆಯಲ್ಲಿ ನಿರ್ಮಿಸಲಾದ 450 ಸಾವಿರ ಲೀಟರ್‌ ಸಾಮರ್ಥ್ಯದ ಜಲಾಶಯಕ್ಕೆ, ಚಿಲುಮೆಯ ನೀರನ್ನು ಹರಿಯಬಿಡಲಾಗುತ್ತದೆ. ಗವಿಯ ಬಲಬದಿಯಲ್ಲಿರುವ 20 ನಳ್ಳಿಗಳಿಗೆ ಮತ್ತು ಎಡಬದಿಯಲ್ಲಿರುವ 16 ಸ್ನಾನದ ತೊಟ್ಟಿಗಳಿಗೆ ಇದರಿಂದ ನೀರು ಪೂರೈಕೆಯಾಗುತ್ತದೆ. ಲಕ್ಷಗಟ್ಟಲೆ ಜನ ಈ ಸ್ನಾನದ ತೊಟ್ಟಿಗಳಲ್ಲಿ ಸ್ನಾನ ಮಾಡಿ ತಮ್ಮ ಮನೆಗಳಿಗೆ ಹೋಗುತ್ತಾರೆ. ಕಾಯಿಲೆ ವಾಸಿಯಾದರೆ ದೇವರ ಕೃಪೆಯೆಂದು ಅದನ್ನು ಇನ್ನಷ್ಟು ಮಂದಿಗೆ ಹೇಳಿ, ಮತ್ತಷ್ಟು ಜನರು ಲೂರ್ದ್‌ಗೆ ಬರಲು ಕಾರಣರಾಗುತ್ತಾರೆ. ಅದೇನೇ ಇದ್ದರೂ ಅಲ್ಲಿನ ತಣ್ಣನೆಯ ಶುದ್ಧವಾದ ಚಿಲುಮೆಯ ಜಲಸೇವನೆ ಚೇತೋಹಾರಿಯಾಗಿರುತ್ತದೆ ಎನ್ನುವುದು ಮಾತ್ರ ವಿವಾದಾತೀತ.

ಶಿಲುಬೆಯ ಹಾದಿ : ಲೂರ್ದ್‌ನಲ್ಲಿ ಅತ್ಯಂತ ಹೃದಯಸ್ಪರ್ಶಿಯಾದ ಸ್ಮಾರಕವೇ ಈ ಶಿಲುಬೆಯ ಹಾದಿ! (The way of The Cross) ಏಸುವಿನ ಶಿಕ್ಷೆಯ ಕಣಗಳನ್ನು ಮತ್ತು ಶಿಲುಬೆಗೇರಿದ ಏಸು ಗುಹೆಯಲ್ಲಿ ಕಾಣಿಸಿಕೊಳ್ಳುವುದನ್ನು ಹದಿನೈದು ಹಂತಗಳಲ್ಲಿ ಇಲ್ಲಿ ತೋರಿಸಲಾಗಿದೆ. ಇಮಾಕ್ಯುಲೇಟ್‌ ಕನ್‌ಸೆಪ್‌ಶನ್‌ ಬ್ಯಾಸಿಲಿಕಾದ ಹಿಂಬದಿಯ ಹಚ್ಚನೆಯ ಹಸಿರ ಗುಡ್ಡದಲ್ಲಿ, 1500 ಮೀಟರ್‌ ವ್ಯಾಪ್ತಿಯಲ್ಲಿ ಶಿಲುಬೆಯ ಹಾದಿಯನ್ನು ತೋರಿಸುವ ಮೂರ್ತಿಗಳನ್ನು ಹದಿನೈದು ಹಂತಗಳಲ್ಲಿ ಘಟನೆಗಳಿಗನುಸಾರವಾಗಿ ಜೋಡಿಸಲಾಗಿದೆ.

‘ಶಿಲುಬೆಯ ಹಾದಿ’ಯ ಪ್ರಥಮ ಹಂತಕ್ಕೆ ಮೊದಲು ಮೌಲಿನ್ಸ್‌ ಸ್ಮಾರಕವಿದೆ. ಫ್ರಾನ್ಸಿನ ಮೌಲಿನ್ಸ್‌ನಿಂದ ಲೂರ್ದ್‌ಗೆ ಬರುತ್ತಿದ್ದ ಯಾತ್ರಿಕರಲ್ಲಿ 33 ಮಂದಿ ರೈಲು ಅಪಘಾತದಲ್ಲಿ ಮೃತಪಟ್ಟರು. ಅವರ ಸ್ಮರಣಾರ್ಥ ನಿರ್ಮಿಸಿದ ಸ್ಮಾರಕವದು. ಪ್ರಥಮ ಹಂತದ ಬಳಿಯಲ್ಲಿ 12 ಮೀಟರ್‌ ಎತ್ತರದ ಬೃಹತ್‌ ಶಿಲುಬೆಯಿದೆ. ಶಿಲುಬೆಯ ಹಾದಿಯನ್ನು ತೋರಿಸುವ ಮೂರ್ತಿಗಳನ್ನು ಗಡುಸಾದ ಕಬ್ಬಿಣದಿಂದ ಮಾಡಲಾಗಿದೆ. ಎರಡು ಮೀಟರ್‌ ಎತ್ತರದ ಈ ಮೂರ್ತಿಗಳನ್ನು ನಿರ್ಮಿಸಿದವನು ಪ್ಯಾರಿಸ್ಸಿನ ರ್ಯಾಫಲ್‌ ಎಂಬ ಶಿಲ್ಪಿ. ಈ ಮೂರ್ತಿಗಳೆಲ್ಲಾ ದಾನರೂಪದಿಂದ ಬಂದವುಗಳು. ದಾನಿಗಳಲ್ಲಿ ಫ್ರೆಂಚರು ಮಾತ್ರವಲ್ಲದೆ ಜರ್ಮನಿ, ಹಂಗರಿ ಮತ್ತು ಇಟೆಲಿಯ ಭಕ್ತರೂ ಒಳಗೊಂಡಿದ್ದಾರೆ.

ಶಿಲುಬೆಯ ಹಾದಿಯ ಪ್ರಥಮಹಂತದಲ್ಲಿ ತನ್ನ ಶಿಕ್ಷೆಯನ್ನು ಶಾಂತಿಯಿಂದ ಏಸು ಆಲಿಸುತ್ತಾನೆ. ಆತನ ಹಿಂದೆ ಇಬ್ಬರು ಸೈನಿಕರು ನಿಂತಿದ್ದಾರೆ. ಅವರಿಗಿಂತಲೂ ಹಿಂದೆ ಒಬ್ಬ ಪುಟ್ಟ ವ್ಯಕ್ತಿ ಇದ್ದಾನೆ. ಎರಡನೇ ಹಂತದಲ್ಲಿ ಈ ಮೂವರು ಏಸುವಿಗೆ ಹೊರಲು ಶಿಲುಬೆಯನ್ನು ನೀಡುತ್ತಾರೆ. ಮೂರನೇ ಹಂತದಲ್ಲಿ ಶಿಲುಬೆಯ ಭಾರ ಹೊರಲಾಗದ ಏಸು ಮೊದಲ ಬಾರಿಗೆ ಮುಗ್ಗರಿಸುತ್ತಾನೆ. ನಾಲ್ಕನೆಯ ಹಂತದಲ್ಲಿ ಏಸುವಿನ ತಾಯಿ ಮೇರಿ ಅವನನ್ನು ಭೇಟಿಯಾಗುತ್ತಾಳೆ. ಐದನೆಯ ಹಂತದಲ್ಲಿ ಶಿಲುಬೆಯನ್ನು ಒಯ್ಯಲು ಏಸುವಿಗೆ ಸೈಮನ್‌ ಸಹಾಯಮಾಡುತ್ತಾನೆ. ಆರನೆಯ ಹಂತದಲ್ಲಿ ಓರ್ವ ಪವಿತ್ರ ಮಹಿಳೆ ಏಸುವಿನ ಮುಖವನ್ನು ಬಟ್ಟೆಯಿಂದ ಉಜ್ಜುತ್ತಾಳೆ. ಏಳನೆಯ ಹಂತದಲ್ಲಿ ಶಿಲುಬೆಯ ಭಾರಕ್ಕೆ ಏಸು ಎರಡನೇ ಬಾರಿ ಮುಗ್ಗರಿಸಿ ಬೀಳುತ್ತಾನೆ. ಎಂಟನೇ ಹಂತದಲ್ಲಿ ಏಸು ಜೆರುಸಲೇಮಿನ ತರುಣಿ ಮತ್ತು ಅವಳ ಮಗುವಿಗೆ ಸಾಂತ್ವನ ನೀಡುತ್ತಾನೆ. ಒಂಬತ್ತನೇ ಹಂತದಲ್ಲಿ ಮೂರನೆಯ ಬಾರಿಗೆ ಮುಗ್ಗರಿಸಿ ಬೀಳುತ್ತಾನೆ. ಹತ್ತನೇ ಹಂತದಲ್ಲಿ ಏಸುವಿನ ಬಟ್ಟೆಯನ್ನು ಕಳಚಲಾಗುತ್ತದೆ. ಹನ್ನೊಂದನೇ ಹಂತದಲ್ಲಿ ಏಸುವನ್ನು ಶಿಲುಬೆಯ ಮೇಲೆ ಮಲಗಿಸಿ ಕೈಕಾಲುಗಳಿಗೆ ಮೊಳೆ ಜಡಿಯಲಾಗುತ್ತದೆ. ಹನ್ನೆರಡನೇ ಹಂತದಲ್ಲಿ ಏಸುವಿನ ಶಿಲುಬೆಯನ್ನು ನೆಟ್ಟಗೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ಇಬ್ಬರು ಕಳ್ಳರನ್ನು ಕೂಡಾ ಶಿಲುಬೆಗೇರಿಸಲಾಗಿದೆ. ಹದಿಮೂರನೆಯ ಹಂತದಲ್ಲಿ ಏಸುವನ್ನು ಶಿಲುಬೆಯಿಂದ ಕೆಳಗಿಳಿಸಲಾಗುತ್ತದೆ. ಹದಿನಾಲ್ಕನೆಯ ಹಂತದಲ್ಲಿ ಏಸುವನ್ನು ಗುಹೆಯ ಒಳಗಡೆ ಸಾಗಿಸಲಾಗುತ್ತದೆ. ಹದಿನೈದನೆಯ ಹಂತದಲ್ಲಿ ಏಸು ಜೀವಂತ ಕಾಣಿಸಿಕೊಳ್ಳುತ್ತಾನೆ. ಇದುವೇ ಶಿಲುಬೆಯ ಹಾದಿಯ ಕತೆ.

ಈ ನಾಲ್ಕು ದೇಗುಲಗಳು : ಇಲ್ಲಿನ ದೇಗುಲಗಳಲ್ಲಿ ದರ್ಶನದ ಗವಿಗಿಂತ ಮೊದಲೇ ಸಿಗುವ ಬೃಹತ್‌ ರೋಸರಿ ಬ್ಯಾಸಿಲಿಕಾ ಪ್ರಮುಖವಾದುದು. ಅದರ ಪ್ರವೇಶದ್ವಾರದ ವಿನ್ಯಾಸ, ಭಾರತೀಯ ದೇಗುಲಗಳ ಪ್ರವೇಶದ್ವಾರಗಳ ವಿನ್ಯಾಸವನ್ನೇ ಹೋಲುತ್ತದೆ. ಕ್ರಿ.ಶ.1874ರಿಂದ 1887ರ ಅವಧಿಯಲ್ಲಿ ಕಟ್ಟಲಾದ ಈ ಇಗರ್ಜಿ, 1889ರಲ್ಲಿ ಉದ್ಛಾಟನೆಗೊಂಡಿತು. 52 ಮೀಟರ್‌ ಉದ್ದ ಮತ್ತು 42 ಮೀಟರ್‌ ಅಗಲದ ಈ ಇಗರ್ಜಿಯಲ್ಲಿ 2000 ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆಯಿದೆ. ಚರ್ಚಿನ ಮೂರು ಗೋಪುರಗಳು ಸುಂದರ ಕಲಾಕೃತಿಗೆ ಉತ್ಕೃಷ್ಟ ಉದಾಹರಣೆಗಳಾಗಿವೆ. ಇಗರ್ಜಿಯ ಎದುರುಭಾಗದಲ್ಲಿ ಸುಮಾರು 70 ಮೀಟರ್‌ ದೂರದಲ್ಲಿ ಇಗರ್ಜಿಗೆ ಅಭಿಮುಖಳಾಗಿ ನಿಂತ ಮೇರಿಯ ಅಮೃತಶಿಲಾ ಮೂರ್ತಿಯಿದೆ. ಅದರ ಸುತ್ತ ಸುಂದರವಾದ ಉದ್ಯಾನವನ್ನು ನಿರ್ಮಿಸಲಾಗಿದೆ.

ರೋಸರಿ ಬ್ಯಾಸಿಲಿಕಾಗಿಂತ ಸ್ವಲ್ಪ ಮೊದಲು, ಅಂದರೆ ಕ್ರಿ.ಶ.1866ರಲ್ಲಿ ಕಟ್ಟಲು ಆರಂಭಿಸಿ, 1871ರಲ್ಲಿ ಮುಕ್ತಾಯಗೊಳಿಸಿದ ಎಮಾಕ್ಯುಲೇಟ್‌ ಕನ್‌ಸೆಪ್‌ಶನಿನ್ನ ಇಗರ್ಜಿಗೆ ಮೇಲಿನ ಇಗರ್ಜಿ ಎಂಬ ಹೆಸರಿದೆ. ರೋಸರಿ ಬ್ಯಾಸಿಲಿಕಾಗಿಂತ ಇದು ಮೇಲ್ಭಾಗದಲ್ಲಿರುವುದರಿಂದ ಈ ಹೆಸರು. ಕ್ರಿ.ಶ.1871ರ ಅಗೋಸ್ತು 15ರಂದು, ಮೇಲಿನ ಇಗರ್ಜಿಯನ್ನು ಆರಾಧನೆಗಾಗಿ ತೆರೆದಿಡಲಾಯಿತು. 51 ಮೀಟರು ಉದ್ದ ಮತ್ತು 21 ಮೀಟರ್‌ ಅಗಲದ ಈ ಇಗರ್ಜಿಯಲ್ಲಿ 600 ಜನರಿಗೆ ಸ್ಥಳಾವಕಾಶವಿದೆ. ಕ್ರಿ.ಶ.1988ರಲ್ಲಿ ನಿರ್ಮಾಣವಾದ ಸೇಂಟ್‌ ಬೆರ್ನಡೆಟ್ಟ್‌ ಚರ್ಚು 5000 ಜನರಿಗೆ ಸ್ಥಳಾವಕಾಶ ಒದಗಿಸುತ್ತದೆ. ಚರ್ಚನಲ್ಲಿ 100 ಮೀಟರ್‌ ಉದ್ದ ಮತ್ತು 80 ಮೀಟರ್‌ ಅಗಲದ ಎರಡು ಭಾಗಗಳಿವೆ. ಅಲ್ಲದೆ 40 ರಿಂದ 500ರರಷ್ಟು ಮಂದಿ ಕುಳಿತುಕೊಳ್ಳಬಹುದಾದ ಅನೇಕ ಕೋಣೆಗಳಿವೆ.

ಉತ್ಕೃಷ್ಟ ತಾಂತ್ರಿಕ ಪರಿಣತಿಯ ಹತ್ತನೇ ಸೇಂಟ್‌ ಪಿಯೂ ಬ್ಯಾಸಿಲಿಕಾ ಒಂದು ಭೂಗತ ಇಗರ್ಜಿ. ಬೃಹತ್‌ ಹಡಗೊಂದನ್ನು ಬೋರಲಾಗಿ ಇಟ್ಟಂತೆ ಕಾಣುವ ಈ ಇಗರ್ಜಿಗೆ, ಭಕ್ತಾದಿಗಳು ಸುಲಭವಾಗಿ ಪ್ರವೇಶಿಸಲು ಮತ್ತು ನಿರ್ಗಮಿಸಲು ಸಾಧ್ಯವಾಗುವಂತೆ ಆರು ದ್ವಾರಗಳನ್ನು ನಿರ್ಮಿಸಲಾಗಿದೆ. 1958ರ ಮಾರ್ಚ್‌9 15ರಂದು ಈ ಇಗರ್ಜಿಯ ಪ್ರತಿಷ್ಠಾ ಕಾರ್ಯ ನೆರವೇರಿತು. ಪಿಯರೆ ಪಿನ್ಸಾರ್ದ್‌, ಆ್ಯಂಡ್ರೆ ದೋನೆತ್‌ ಮತ್ತು ಪಿಯರೆ ವ್ಯಾಗೋ ಎಂಬ ಮೂವರು ಶಿಲ್ಪಿಗಳ ಅಪೂರ್ವ ಕೃತಿ ಎನ್ನಬಹುದಾದ ಈ ಇಗರ್ಜಿಯ ಉದ್ದ 201 ಮೀಟರ್‌ ಮತ್ತು ಅಗಲ 81 ಮೀಟರ್‌. ಇದರೊಳಗೆ 27000 ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದು !ಇಗರ್ಜಿಯ ಮಧ್ಯಭಾಗದಲ್ಲಿ ಬೃಹತ್ತಾದ ಪೂಜಾವೇದಿಕೆಯಿದೆ. ಯಾತ್ರಾ ಸೀಜನಿನ್ನಲ್ಲಿ ಪ್ರತಿ ಭಾನುವಾರ ಮತ್ತು ಬುಧವಾರ ಇಲ್ಲಿ ‘ವಿಶ್ವಪೂಜೆ’ ನಡೆಯುತ್ತದೆ. ವಿಶ್ವದ ಎಲ್ಲೆಡೆಯಿಂದ ಬಂದ ಭಕ್ತರು ಈ ವಿಶ್ವಪೂಜೆಯಲ್ಲಿ (International Mass)  ಶ್ರದ್ಧಿ, ಭಕ್ತಿ ಮತ್ತು ಕುತೂಹಲಗಳಿಂದ ಪಾಲ್ಗೊಳ್ಳುತ್ತಾರೆ.

ಬಿಡಲಾರೆ ಎಂದೂ ನಿನ್ನ : ಪವಾಡಗಳ ಸಂಗತಿಯನ್ನು ಒತ್ತಟ್ಟಿಗಿಟ್ಟು ನೋಡಿದರೂ, ಲೂರ್ದ್‌ನ ಮಹತ್ವ ಕಡಿಮೆಯಾಗುವುದಿಲ್ಲ. ಲಕ್ಷಗಟ್ಟಲೆ ಜನ ಬಂದು ಹೋಗುವ ಲೂರ್ದ್‌ನಲ್ಲಿ ಪರಿಸರ ಮಾಲಿನ್ಯವೆಂಬುದೇ ಇಲ್ಲ. ಬೀದಿಯಲ್ಲಿ ಕಸಕಡ್ಡಿಗಳಿಲ್ಲ. ಅಲ್ಲಲ್ಲಿ ಕಾಲಿಗಂಟುವ ಮಲಮೂತ್ರಗಳಿಲ್ಲ. ಚಿಲುಮೆಯ ಪರಿಶುದ್ಧನೀರು, ಪಿರನಿಯ ಪರಿಶುದ್ಧ ಗಾಳಿ, ಹೋಟೆಲುಗಳ ಪರಿಶುದ್ಧ ಆಹಾರದಿಂದಾಗಿ ಲೂರ್ದ್‌ಗೆ ಹೋದವರ ಸಣ್ಣಪುಟ್ಟ ಕಾಯಿಲೆಗಳು ತಾವಾಗಿಯೇ ಮಾಯವಾಗಿಬಿಡುತ್ತವೆ!

ಲೂರ್ದ್‌ನ ದರ್ಶನ ಗವಿ ನೋಡಲು ನಾವು ಹೋದಂದು ಮಳೆ ಸುರಿದು, ಅಸಾಧ್ಯ ಚಳಿಯಿತ್ತು. ಅಂದು ಯಾವತ್ತಿನಂತೆ ಅಪಾರ ಜನಜಂಗುಳಿ ಬೇರೆ. ಅಲೆನ್‌ ನಮ್ಮ ಮಾರ್ಗದರ್ಶಕ. ಜನಜಂಗುಳಿಯಲ್ಲಿ ಹಾದಿ ಮಾಡಿಕೊಂಡು ಅಲೆನ್‌ ನಮಗಿಂತ ಮುಂದೆ ಸಾಗುತ್ತಿದ್ದ. ಆ ಜನಜಂಗುಳಿಯಲ್ಲಿ ನಾವು ಕಳೆದುಹೋಗದಂತೆ ಎಚ್ಚರಿಕೆಯಿಂದ ಸಾಗುತ್ತಿದ್ದಾಗ ನನ್ನನ್ನು ತರುಣಿಯೊಬ್ಬಳು ತಡೆದು ನಿಲ್ಲಿಸಿದಳು.

ಆಕೆಯ ಕಂಕುಳಲ್ಲಿ ಏಳೆಂಟು ತಿಂಗಳುಗಳ ಒಂದು ಮಗುವಿತ್ತು. ಆಕೆಗೆ ಇಪ್ಪತ್ತೈದಕ್ಕಿಂತ ಹೆಚ್ಚು ವಯಸ್ಸಾಗಿರಲಿಕ್ಕಿಲ್ಲ. ಯವ್ವನ, ಚೆಲುವು ಎರಡೂ ಮೇಳೈಸಿ ಯಾರನ್ನೂ ಆಕರ್ಷಿಸಬಲ್ಲ ವ್ಯಕ್ತಿತ್ವ. ಅವಳು ನನಗೆ ಒಂದಿನಿತೂ ಅರ್ಥವಾಗದ ಭಾಷೆಯಲ್ಲಿ ಏನೇನೋ ಹೇಳತೊಡಗಿದಳು. ಅವಳ ಮಗುವನ್ನು ತೋರಿಸಿ ಕಣ್ಣೀರು ಹಾಕಿದಳು. ಆಕೆ ಭಿಕೆ ಬೇಡುತ್ತಿದ್ದಾಳೋ ಅಥವಾ ಜನಜಂಗುಳಿಯಲ್ಲಿ ಹಣ ಕಳಕೊಂಡಿದ್ದಾಳೊ ? ಅವಳ ಮಗುವಿಗೆ ಏನಾದರೂ ವಾಸಿಯಾಗದ ಕಾಯಿಲೆ ಬಾಧಿಸುತ್ತಿದೆಯೋ ಏನೋ? ಯಾರಲ್ಲಿ ಕೇಳುವುದು? ಅಲೆನ್‌ನಲ್ಲಿ ಕೇಳೋಣವೆಂದರೆ ಆ ಅಸಾಧ್ಯ ಜನ ಜಂಗುಳಿಯಲ್ಲಿ ಅವನು ನನಗಿಂತ ಎಷ್ಟೋ ಮುಂದಕ್ಕೆ ಹೋಗಿಯಾಗಿತ್ತು. ಏನು ಮಾಡುವುದು ಎಂದು ತೋಚದೆ ಅಭ್ಯಾಸ ಬಲದಿಂದ ಜೇಬಿಗೆ ಕೈ ಹಾಕಿದೆ. ಕೈಗೆ ಸಿಕ್ಕ ಐದು ಫ್ರಾಂಕಿನ ನಾಣ್ಯವನ್ನು ಅವಳಿಗೆ ಕೊಟ್ಟೆ. ಅವಳೊಂದು ನೋಟು ತೋರಿಸಿ ಮತ್ತೂ ಏನನ್ನೋ ಹೇಳತೊಡಗಿದಳು. ಬಹುಶಃ ನಾನು ನೋಟು ಕೊಡಬೇಕೆಂದು ಬಯಸುತ್ತಿರಬೇಕೆಂದು ಭಾವಿಸಿ ಇನ್ನೊಂದು ಸಲ ಜೇಬಿಗೆ ಕೈ ಹಾಕಿ, 5 ಫ್ರಾಂಕುಗಳ ಇನ್ನೊಂದು ನಾಣ್ಯ ಕೊಟ್ಟೆ. ಅಂದರೆ ಒಟ್ಟು 70 ರೂಪಾಯಿ ಭಿಕೆ ನೀಡಿದಂತಾಯಿತು! ಅವಳು ಮತ್ತೂ ಅವಳ ನೋಟನ್ನು ತೋರಿಸಿ ಏನೋ ಹೇಳತೊಡಗಿದಳು. ಅಷ್ಟು ಕೊಟ್ಟ ಮೇಲೂ ಅವಳ ಬೇಡಿಕೆ ಮುಗಿಯದ ಕಾರಣ, ಅವಳನ್ನು ನನ್ನಿಂದ ತೃಪ್ತಿಪಡಿಸಲು ಸಾಧ್ಯವಿಲ್ಲವೆನ್ನುವುದು ಖಾತ್ರಿಯಾಗಿ ಅವಳನ್ನು ಬದಿಗೆ ಸರಿಸಿ ದಾಪುಗಾಲು ಹಾಕಿದೆ.

ಅಷ್ಟು ದೂರದಲ್ಲಿ ನಮ್ಮ ತಂಡ ನನಗಾಗಿ ಕಾಯುತ್ತಿತ್ತು. ನಡೆದ ಘಟನೆಯನ್ನು ಕೇಳಿದ ಅಲೆನ್‌ ಹೇಳಿದ. ‘ಪುಣ್ಯಕ್ಷೇತ್ರಗಳಲ್ಲಿ ನೀನು ಯಾರನ್ನೂ ನಂಬಬೇಡ. ಇನ್ನೂ ಸ್ವಲ್ಪ ಹೊತ್ತು ನೀನಲ್ಲಿರುತ್ತಿದ್ದರೆ ನಿನ್ನನನವಳು ಪೂರ್ತಿಯಾಗಿ ಬೋಳಿಸಿಬಿಡುತ್ತಿದ್ದಳು. ‘

ಮಾತಿಗೆ ಮುಕ್ತಾಯವೆಂಬಂತೆ ಹೆಬ್ಬಾರರೆಂದರು : ‘ಉದರನಿಮಿತ್ತಂ ಬಹುಕೃತ ವೇಷಂ!’

ಪಿರನಿಗೊಂದು ಚಾರಣ

ಲ್ಯಾಂಗ್‌ಡಕ್ಕ್‌  ರೌಸಿಲನ್‌ ಮತ್ತು ಮಿಡಿಪಿರನೀಸ್‌ ಪ್ಯಾಂತ್ಯಗಳಲ್ಲಿ ಫ್ರಾನ್ಸ್‌ ಮತ್ತು ಸ್ಪೈನ್‌ ನಡುವೆ ಸಿಗುವ ಪಿರನಿ ಪರ್ವತಶ್ರೇಣಿಯನ್ನು ಹಿಮಾಲಯ ಪರ್ವತ ಶ್ರೇಣಿಗೆ ಹೋಲಿಸಬಹುದು. ಹಿಮಾಲಯದಷ್ಟು ಎತ್ತರವಿಲ್ಲದಿದ್ದರೂ, ವರ್ಷದಲ್ಲಿ ಹತ್ತು ತಿಂಗಳು ಹಿಮಚ್ಢಾದಿತವಾಗಿರುವ ಪಿರನಿ ಪರ್ವತಗಳು ಫ್ರೆಂಚರ ಸಾಹಸಕ್ಕೆ ಹೊಸ ಆಯಾಮ ನೀಡುತ್ತವೆ. ಪಿರನಿ ಪರ್ವತಗಳ ಚಾರಣ ಮತ್ತು ಸ್ಕೇಯಿಂಗ್‌ ಅಂದರೆ ಪ್ರೆಂಚರಿಗೆ ಜೀವ. ಲೂರ್ದ್‌ನಿಂದ ಕೇವಲ 50 ರಿಂದ 55 ಕಿ.ಮೀ. ದೂರದಲ್ಲಿರುವ ಪಿರನಿ ಪರ್ವತಗಳು, ಲೂರ್ದ್ಅನ್ನು ಸಾಹಸಿಗರು ಕೂಡಾ ಸಂದರ್ಶಿಸುವಂತೆ ಮಾಡಿವೆ. ಬೈಗೋರ್‌, ಟರ್ಮಾಲ್‌, ಹೌತಕಂ, ಪೆರ್ದು, ಮಾರ್ಬರ್‌, ಗವರ್ನಿ, ರೋಲಂಡ್‌, ಟೈಲೋಸ್‌, ಆರ್ದಿದೆನ್‌, ವಿಸ್ಕೋಸ್‌, ಲಬಾಸ್‌ ಸೇದ್‌, ವಿನ್‌ಮೇಲ್‌, ಗಬ್‌, ಗ್ಯಾಬಲಿರಸ್‌, ಮರ್ಕದು, ಆ್ಯರೆನ್ಸ್‌, ಬಲೈಟಸ್‌, ಗೋಬಿಜೋಸ್‌ ಮತ್ತು ಅಬಿಸ್ಕು ಪರ್ವತಗಳು ಸಾಹಸಿಗರನ್ನು ಸದಾಕಾಲ ಕೈಬೀಸಿ ಕರೆಯುತ್ತವೆ.

ಪಿರನಿ ಪರ್ವತಗಳಲ್ಲಿ ಒಂದಾದ ಗವರ್ನಿಗೆ ನಾವು ಚಾರಣಗೈದದ್ದು ಎಪ್ರಿಲ್‌ 27ರಂದು. ಅಲೆನ್‌ ನಮ್ಮ ಚಾರಣಕ್ಕೆ ಬೇಕಾದ ಎಲ್ಲಾ ಏರ್ಪಾಟುಗಳನ್ನು ಮಾಡಿದ್ದ. ಪರ್ವತ ಶಿಖರಕ್ಕೆ ಹೋಗಲು ತರಬೇತಿ, ಹಿಮನಡಿಗೆಯ ಸಲಕರಣೆ ಮತ್ತು ವೇಷಭೂಷಣಗಳು ಬೇಕು. ಅವೆಲ್ಲ ನಮಗೆ ನಿಲುಕುವಂತಹದ್ದಲ್ಲವೆಂದು ಅಲೆನ್‌ ಗವರ್ನಿಯ ಬುಡಕ್ಕಷ್ಟೇ ನಮ್ಮ ಚಾರಣು ಎಂದಿದ್ದ. ಇಪ್ಪತ್ತೊಂಬತ್ತರ ಹರೆಯದ ಅಲೆನ್‌, ಗವರ್ನಿಗೆ ತನ್ನ ಹದಿನಾರರ ಹರೆಯದಲ್ಲೊಮ್ಮೆ ಚಾರಣಗೈದದ್ದು ಬಿಟ್ಟರೆ ಮತ್ತೆಂದೂ ಹೋಗಿರಲಿಲ್ಲ. ಆದರೆ ಅವನಲ್ಲಿ ಉತ್ಸಾಹಕ್ಕೆ ಬರವಿರಲಿಲ್ಲ. ಅಲೆನ್‌ ನಮಗಾಗಿ ವ್ಯಾನ್‌ ಒಂದನ್ನು ಸಿದ್ಧಪಡಿಸಿದ. ಅವನ ಅಕ್ಕ ಮೆರಿಲೂ ತಿಂಡಿ ತೀರ್ಥಗಳನ್ನು ತಯಾರಿಸಿ ಒಂದು ದೊಡ್ಡ ಹ್ಯಾವರ್‌ಸಾಕಿಗೆ ಹಾಕಿಟ್ಟಳು. ಸಕಲ ಸಿದ್ಧತೆಗಳೊಂದಿಗೆ ನಮ್ಮ ದಂಡು ಅಲೆನ್‌ನ ಸಾರಥ್ಯ ಮತ್ತು ಮೆರಿಲೂಳ ನಿರ್ದೇಶಕತ್ವದಲ್ಲಿ ಗವರ್ನಿಯ ಕಡೆಗೆ ವ್ಯಾನಿನಲ್ಲಿ ಧಾವಿಸಿತು.

ಗವರ್ನಿಗೆ ಲೂರ್ದ್‌ನಿಂದ 53 ಕಿ.ಮೀ. ದೂರ. ಪರ್ವತ ಪ್ರದೇಶದ ಇಕ್ಕಟ್ಟಾದ ಮತ್ತು ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ವ್ಯಾನನ್ನು ವೇಗವಾಗಿ ಓಡಿಸುವಂತಿರಲಿಲ್ಲ. ಹಾದಿಯುದ್ದಕ್ಕೂ ಚಿಕ್ಕಪುಟ್ಟ ಬೆಟ್ಟಗಳು, ತೊರೆಗಳು, ಜಲಪಾತಗಳು ಮತ್ತು ಕೊಳಗಳು. ಗವರ್ನಿಯಿಂದ ಲೂರ್ದ್‌ಗೆ ಹರಿದು ಬರುವ ಗಾವ್‌ ದಿ ಪೋವ್‌ ಎಂಬ ಶುಭ್ರ ಸೇಟಿಕ ಹೊಳೆ ಹಾದಿಯುದ್ದಕ್ಕೂ ನಮಗೆ ದರ್ಶನವೀಯುತ್ತಿತ್ತು. ಅದರ ಥಳಕು  ಬಳಕು, ಒನಪು  ಒಯಯ್ಯರಗಳನ್ನು ನೋಡಲೆಂದು ಒಂದೆಡೆ ವ್ಯಾನ್‌ ನಿಲ್ಲಿಸಿದಾಗ, ಅದೆಲ್ಲಿಂದಲೋ ಎರಡು ದೈತ್ಯಗಾತ್ರದ ನಾಯಿಗಳು ನಮ್ಮತ್ತ ಬರತೊಡಗಿದವು. ಅವು ಬೊಗಳುತ್ತಿರಲಿಲ್ಲ. ಬೊಗಳದ ನಾಯಿ ಕಚ್ಚುತ್ತದೆ!

ನಾವು ಗಾಬರಿಯಲ್ಲಿದ್ದಾಗ ಅವು ಸೀದಾ ಬಂದು ನಮ್ಮನ್ನು ಮೂಸತೊಡಗಿದವು. ನಾವು ತಲೆ ನೇವರಿಸಿದಾಗ ಅವು ನಮ್ಮನ್ನು ನೆಕ್ಕತೊಡಗಿದವು. ನಾಯಿ ಯಾವ ದೇಶದ್ದಾದರೇನಂತೆ? ಅವು ಪಾಪ ಹಸಿದಿರಬೇಕು. ಹಾಗಂತ ಅವಕ್ಕೇನಾದರೂ ತಿನ್ನಲು ಕೊಟ್ಟರೆ ಅಲ್ಲೇ ಹತ್ತಿರದಲ್ಲೆಲ್ಲೋ ಇರಬಹುದಾದ ಅವುಗಳ ಯಜಮಾನ ಅಥವಾ ಯಜಮಾನತಿ ನಮಗೆ ಸಹಸ್ರನಾಮಾರ್ಚನೆ ಮಾಡದೆ ಇರಲಿಕ್ಕಿಲ್ಲ. ಫ್ರಾನ್ಸಿನಲ್ಲಿ 10 ದಶಲಕ್ಷ ನಾಯಿಗಳು ಮತ್ತು 6 ದಶಲಕ್ಷ ಬೆಕ್ಕುಗಳಿವೆಯೆಂದು ನಾಬೋನಿನ್ನ ಪೇಜಸ್‌ ಜುವಾನ್‌ ಹೇಳಿದ್ದ. ಮನುಷ್ಯರಿಗಿಂತ ಜತನದಿಂದ ನಾಯಿ ಮತ್ತು ಬೆಕ್ಕುಗಳಿಗೆ ಪ್ರತ್ಯೇಕ ಆಹಾರ ನೀಡಿ ಮಾಲಿಕರು ಅವನ್ನು ಪೋಷಿಸುತ್ತಾರೆ. ನಾಯಿ ಮತ್ತು ಬೆಕ್ಕುಗಳ ಆಹಾರ ತಯಾರಿ ಫ್ರಾನ್ಸಿನ ದೊಡ್ಡ ಉದ್ದಿಮೆಗಳಲ್ಲಿ ಒಂದು. ನಮ್ಮಲ್ಲಿದ್ದುದು ಮನುಷ್ಯರ ಆಹಾರ. ನಾಯಿಗಳಿಗೆ ಅದು ಅಪಥ್ಯ! ಜುವಾನ್‌ ಬುಯೋ ಇದನ್ನು ತುಲೋಸಿಗೆ ಕಾಲಿಟ್ಟಂದೇ ಹೇಳಿದ್ದ. ಹಾಗಾಗಿ ನಾಯಿಗಳ ತಲೆ ನೇವರಿಸುವಷ್ಟಕ್ಕೇ ನಮ್ಮ ಪ್ರಾಣಿದಯೆಯನ್ನು ಸೀಮಿತಗೊಳಿಸಬೇಕಾಗಿ ಬಂತು.

ನಾವು ಲೂರ್ದ್‌ ಬಿಟ್ಟದ್ದು ಬೆಳಗ್ಗಿನ ಒಂಬತ್ತೂವರೆಗೆ. ಕಿರ್ಕ್‌ ಡಿ ಗವರ್ನಿ ಪರ್ವತದ ಸಮೀಪದ ಪುಟ್ಟ ಊರಾದ ಗವರ್ನಿಯನ್ನು ತಲುಪುವಾಗ ಹನ್ನೊಂದು ಗಂಟೆ. ಪ್ರವಾಸಿಗರಿಂದಾಗಿ ಆ ಊರು ಉಸಿರಾಡುತ್ತದೆ. ವರ್ಷದ ಹತ್ತು ತಿಂಗಳು ಹಿಮ ಬೀಳುವಲ್ಲಿ ಏನನ್ನು ಬೆಳೆಯಲು ಸಾಧ್ಯ? ಊರಿಂದ ಮುಂದಕ್ಕೆ ವಾಹನ ಒಯ್ಯುವಂತಿಲ್ಲ. ಪರ್ವತದ ಬುಡಕ್ಕೆ ಅಲ್ಲಿಂದ 5 ಕಿ.ಮೀ. ದೂರ. 20 ಕೆ.ಜಿ.ಯಷ್ಟು ಭಾರದ ಊಟದ ಸಾಮಗ್ರಿಗಳ ಹ್ಯಾವರ್‌ಸಾಕನ್ನು ಹೆಗಲಿಗೇರಿಸಿಕೊಂಡು, ಕಡ್ಡಿ ಪೈಲ್ವಾನನಂತಿರುವ ಅಲೆನ್‌ ನಮ್ಮೆಲ್ಲರಿಗಿಂತ ಮುಂದೆ ನಡೆದ. ಅವನ ಹಿಂದಿನಿಂದ ನಾವು ಐವರು ಮತ್ತು ಮೆರಿಲೂ. ತುಂತುರು ಮಳೆ ಮತ್ತು ಹಿಮದ ಚಳಿ, ನಡೆಯುತ್ತಿದ್ದ ನಮ್ಮಲ್ಲಿ ನಡುಕ ಹುಟ್ಟಿಸಲಿಲ್ಲ.

ಅಲೆನ್‌ ಮತ್ತು ಮೆರಿಲೂ ಹದಿಹರೆಯದಲ್ಲಿ ಅಲ್ಲಿಗೆ ಬಂದಾಗಿನ ನೆನಪುಗಳನ್ನು ಕೆದಕುತ್ತಾ ನಡೆದರು. ಗವರ್ನಿ ಪರ್ವತದ ಬುಡದವರೆಗೆ ಒಂದು ಕಚ್ಢಾರಸ್ತೆಯಿದೆ. ಅಲೆನ್‌ ಮತ್ತು ಮೆರಿಲೂ ಹದಿಹರೆಯದಲ್ಲಿ ಅಲ್ಲಿಗೆ ಬಂದಾಗಿನ ನೆನಪುಗಳನ್ನು ಕೆದಕುತ್ತಾ ನಡೆದರು. ಗವರ್ನಿ ಪರ್ವತದ ಬುಡದವರೆಗೆ ಒಂದು ಕಚ್ಢಾರಸ್ತೆಯಿದೆ ಆದರೆ ಅಲೆನ್‌ ‘ಅಡ್ಡದಾರಿಯಿಂದ ಹೋದರೆ ಹೆಚ್ಚು ನಡೆಯಬೇಕಾಗಿಲ್ಲ’ ಎಂಬ ಆಮಿಷ ಒಡ್ಡಿ ನಮ್ಮನ್ನು ಬೇರೆ ದಾರಿಯಲ್ಲಿ ಮುನ್ನಡೆಸಿದ. ಅವನ ನಿಷ್ಠಾವಂತ ಅನುಯಾಯಿಗಳಾಗಿ ನಾವು, ಅವನ ಹೆಜ್ಜೆಯ ಮೇಲೆ ಹೆಜ್ಜೆಯನ್ನಿನಕ್ಕುತ್ತಾ ಹೋದಂತೆ ನಮಗೆ ಗಾವ್‌ ದಿ ಪೋವ್‌ ನದಿ ಎದುರಾಯಿತು. ಈಗ ಅದು ಒಂದು ತೋಡಿನಷ್ಟಕ್ಕಿತ್ತು. ಆದರೆ ಅದು ವೇಗವಾಗಿ ಹರಿಯುತ್ತಿತ್ತು. ಕನಿಷ್ಠವೆಂದರೂ ತೋಡು ಮೂರಡಿ ಆಳವಿತ್ತು. ದಾಟಿದರೆ ಒದ್ದೆಯಾಗುವುದು ಖಂಡಿತವೆಂದು ನದಿಯಗುಂಟ ಸ್ವಲ್ಪ ಕೆಳಕ್ಕೆ ಬಂದೆವು. ಅದು ಸುಮಾರು ಒಂದೂವರೆ ಅಡಿ ಆಳ ಇರಬಹುದಾದ ಪ್ರದೇಶ. ಅಲ್ಲಿ ಸುಲಭವಾಗಿ ದಾಟಬಹುದೆಂದುಕೊಂಡು ಶೂ ಕಳಚಿ ನಾನು ನೀರಿಗಿಳಿದೆ. ಹಿಮನದಿ ಗಾವ್‌ನ ತಣ್ಣನೆಯ ಸ್ಪರ್ಶದೊಡನೆ ಚಳುಕೊಂದು ಪಾದದಿಂದ ತಲೆಯವರೆಗೆ ಹರಿದಂತಾಯ್ತು. ಇದೂ ಒಂದು ಅನುಭವ! ನಾನು ಸರಾಗವಾಗಿ ಹೊಳೆ ದಾಟಿ ಆಚೆ ದಡ ಮುಟ್ಟಿದಾಗ ತಂಡದವರಿಗೆ ಧೈರ್ಯ ಬಂತು. ಎಲ್ಲರಿಗಿಂತ ಮೊದಲು ನೀರಿಗಿಳಿದ ಹೆಬ್ಬಾರರು ಅಚ್ಚಗನನಡದಲ್ಲಿ ‘ಅಯ್ಯಯ್ಯಪ್ಪಾ, ಏನು ಚಳಿ’ ಎಂದುಕೊಂಡೇ ಹೊಳೆ ದಾಟಿದರು. ಮಹಿಳಾ ಮಣಿಯರಿಬ್ಬರು ಕಷ್ಟಪಟ್ಟು ಅರ್ಧದವರೆಗೆ ಬಂದವರು ಆಚೆ ಹೋಗಲೂ ಆಗದೆ ಈಚೆ ಬರಲೂ ಆಗದೆ ಹಾಗೆಯೇ ನೀರಲ್ಲಿ ನಿಂತುಬಿಟ್ಟರು. ಇನ್ನು ಸ್ವಲ್ಪ ಹೊತ್ತಾದರೆ ಅವರು ಮರಗಟ್ಟಿ ಹೋಗುತ್ತಾರೆ ಎನ್ನುವುದು ಖಚಿತವಾಗಿ ನೀರಿಗಿಳಿದು ಅವರಿಬ್ಬರನ್ನು ಹೆಚ್ಚು ಕಡಿಮೆ ಎಳೆದುಕೊಂಡೇ ಬಂದೆ. ಅವರ ಉಡುಪು ಒದ್ದೆಯಾಯಿತು. ನನ್ನ ಪಾದಗಳು ಜೊಮ್ಮುಗಟ್ಟಿದವು. ಅನಿವಾರ್ಯವಾಗಿ ಹತ್ತು ನಿಮಿಷ ನಾವಲ್ಲಿ ಕುಳಿತುಕೊಳ್ಳಲೇಬೇಕಾಯಿತು.

ಬಳಿಕ ನಾವು ನಿಧಾನವಾಗಿ ಮುಂದುವರಿದೆವು. ನಮ್ಮ ಎಡ, ಬಲ ಮತ್ತು ಎದುರುಭಾಗ  ಹೀಗೆ ಮೂರು ಪಾರ್ಶ್ವಗಳಲ್ಲೂ ಪರ್ವತಗಳು. ಈಗ ಬಲಬದಿಯ ಕಣಿವೆಯಾಳದಲ್ಲಿ ಗಾವ್‌ ದಿ ಪೋವ್‌ ನದಿ ಹರಿಯುತ್ತಿತ್ತು. ಅದರ ಬಲಬದಿಗೆ ಅತ್ಯಂತ ಕಡಿದಾದ ಒಂದು ಶಿಖರ. ಅದನ್ನೇರಲು ಯಾವ ಪರ್ವತಾರೋಹಿಯಿಂದಲೂ ಸಾಧ್ಯವಿಲ್ಲ. ನಮ್ಮ ಎಡಭಾಗದಲ್ಲಿ ಎತ್ತರಕ್ಕೆ ಇಳಿದಿದ್ದ ಹಿಮಧಾರೆ ನಮ್ಮನ್ನು ಆಕರ್ಷಿಸಿತು. ಹಿಮವನ್ನು ಸ್ಪರ್ಶಿಸುವ ಚಪಲದಿಂದ ನಾವು ನೇರದಾರಿಯನ್ನು ಬಿಟ್ಟು ಎಡಕ್ಕೆ ಏರತೊಡಗಿದೆವು. ಸ್ವಲ್ಪ ದೂರ ಕ್ರಮಿಸುವಾಗ ಎಲೈನ್‌ ಮತ್ತು ಮೆರಿಲೂ ‘ಉಸ್ಸಪ್ಪಾ’ ಎಂದು ಕೂತುಬಿಟ್ಟರು. ಹಾಗೂ ಹೀಗೂ ಅನಿತಾ ಮತ್ತಷ್ಟು ದೂರ ಬಂದಳು. ಆದರೆ ಒದ್ದೆಯಾಗಿದ್ದ ಅವಳ ಕ್ಯಾನ್‌ವಾಸ್‌ನಿಂದಾಗಿ ಅವಳಿಗೆ ಮೇಲಕ್ಕೇರಲಾಗಲಿಲ್ಲ. ತನ್ನ ಬೆನ್ನಲ್ಲಿದ್ದ ಹ್ಯಾವರ್‌ಸಾಕನ್ನು ಅವಳಲ್ಲಿ ಕೊಟ್ಟು ಅಲೆನ್‌ ನಮ್ಮನ್ನು ಸೇರಿಕೊಂಡ. ಹಿಮದ ಮೇಲೆ ನಮ್ಮ ನಡೆತ ಆರಂಭವಾಯಿತು. ಹಾಗೆ ಒಂದಷ್ಟು ಹೊತ್ತು ಏರಿ ಬಲಕ್ಕೆ ತಿರುಗಿದರೆ ಗವರ್ನಿಯ ಬುಡ. ಅಲ್ಲಿ ಹೆಪ್ಪುಗಟ್ಟಿದ ಶುಭ್ರಶ್ವೇತ ಬಣ್ಣದ ಹಿಮ ಕಾಣಿಸಿತು. ಹೆಚ್ಚೆಂದರೆ ಒಂದು ಕಿಲೋಮೀಟರ್‌ ದೂರ. ನಾವು ಬಲಕ್ಕೆ ತಿರುಗಿ ಎಚ್ಚರದಿಂದ ಹತ್ತಿ ಇಳಿದು ಸಾಗಿದಾಗ ಗವರ್ನಿಯ ಬುಡಕ್ಕೆ ಹೋಗುವ ಕಾಲ್ದಾರಿ ಸಿಕ್ಕಿತು. ಪ್ರಥಮ ಬಾರಿಗೆ ಹಿಮದರ್ಶನವಾದಾಗ ಹುಚ್ಚು ಗಟ್ಟಿ ಎಡಕ್ಕೆ ಹತ್ತದೆ ಕಾಲ್ದಾರಿಯಲ್ಲಿಯೇ ನಾವು ಮುಂದುವರಿಯುತ್ತಿದ್ದರೆ, ಈಗಿನ ಹಾಗೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಪ್ರಮೇಯ ಬರುತ್ತಿರಲಿಲ್ಲ. ಅಲ್ಲದೆ ನಮ್ಮ ಮಹಿಳಾಮಣಿಯರಿಗೂ ಗವರ್ನಿಯ ಹಿಮತಪ್ಪಲಿಗೆ ಬರಲು ಸಾಧ್ಯವಾಗುತ್ತಿತ್ತು. ಆದರೆ ಅವರಿಗೆ ನಾವೇರಿದೆತ್ತರಕೆ ಏರುವ ಭಾಗ್ಯವಿರಲಿಲ್ಲ!

ಈಗ ನಮ್ಮೆದುರು ಮಂಜಿನುಡಿಗೆ ಉಟ್ಟ ಗವರ್ನಿ ಪರ್ವತ, ಭೂಮಾಕಾರದಲ್ಲಿ ನಿಂತಿತ್ತು. ಎಂತಹ ಶುಭ್ರಶ್ವೇತ ಹಿಮ! ಎಚ್ಚರಿಕೆಯಿಂದ ಹಿಮದ ಮೇಲೆ ಕಾಲಿಡುತ್ತಾ ಮುಂದುವರಿದೆವು. ಹಿಮ ಕರಗಲು ಪ್ರಾರಂಭವಾಗಿದ್ದರೆ ಮುಂದಕ್ಕೆ ಹೋಗಲು ಸಾಧ್ಯವೇ ಇರಲಿಲ್ಲ ಈಗಲೂ ಕಷ್ಟವೇ. ಹಿಮವೆಲ್ಲಿಯಾದರೂ ಬಿರುಕುಬಿಟ್ಟಿದ್ದರೆ ಅರಿಯದೆ ಕಾಲಿಡುವ ನಾವು ಜೀವಂತ ಸಮಾಧಿಯಾಗುವ ಎಲ್ಲಾ ಸಾಧ್ಯತೆಗಳಿದ್ದವು. ಅಥವಾ ಕಾಲುಜಾರಿ ಬಲಬದಿಯ ಪ್ರಪಾತಕ್ಕೆ ಉರುಳಿಬಿದ್ದರೆ ನಮ್ಮ ಎಲುಬೂ ಸಿಗಲಾರದು. ಹಾಗಾಗಿ ನಿಧಾನವಾಗಿ ನಾವು ಮುಂದುವರಿದೆವು.

ನಾನು, ಅಲೆನ್‌ ಮತ್ತು ಗುರು ಗವರ್ನಿಯ ಪ್ರಥಮ ಹಂತವನ್ನು ಏರಿ ಹಿಮದಲ್ಲಿ ಹೊರಳಾಡಿ ಸುಖಪಟ್ಟೆವು. ಅಲ್ಲಿಂದ ಮೇಲಕ್ಕೇರಲು ಹಿಮನಡಿಗೆಯ ಮತ್ತು ಪರ್ವತಾರೋಹಣದ ಸಲಕರಣೆಗಳಿಲ್ಲದೆ ಸಾಧ್ಯವೇ ಇಲ್ಲ. ಗಾಬರಿಯಿಂದ ‘ಬೇಡಾ… ಬೇಡಾ… ಸಾಕು’ ಎಂದು ಎಚ್ಚರಿಸುತ್ತಿದ್ದ ಹೆಬ್ಬಾರರಿಗೆ ನಮ್ಮ ಹಿಮದಾಟ ನೋಡಿ ಸಹಿಸಲು ಸಾಧ್ಯವಾಗದೆ ನಾವಿದ್ದಲ್ಲಿಗೆ ಬರತೊಡಗಿದರು. ಲೆದರ್‌ ಶೂ ಹಾಕಿದ್ದ ಅವರು ನಾಲ್ಕೈದು ಕಡೆ ಜಾರಿ ಬಿದ್ದರು. ನಾವು ಆತಂಕದಿಂದ ‘ಬರಬೇಡಿ ಬರಬೇಡಿ’ ಎಂದು ಕೂಗಿಕೊಳ್ಳುತ್ತಿದ್ದಂತೆ ಅವರು ನಮ್ಮನ್ನು ಸೇರಿಕೊಂಡು, ನಿಮಗಿಂತ ನಾನೇನು ಕಮ್ಮಿಯಿಲ್ಲ ಎಂಬಂತೆ ನಮ್ಮನ್ನು ನೋಡಿದರು. ಅವರು ಹಾಕಿದ್ದ ಹಳದಿ ಓವರ್‌ಕೋಟಿನಿಂದಾಗಿ ಅವರು ಓರ್ವ ಪರ್ವತಾರೋಹಿಯಂತೆ ಕಾಣಿಸುತ್ತಿದ್ದರು. ನಾನವರನ್ನು ‘ತೇನ್‌ಸಿಂಗ್‌’ ಎಂದು ಕರೆದಾಗ ‘ಸರಿ, ಹಾಗಾದರೆ ಇಲ್ಲಿ ಭಾರತದ ಧ್ವಜ ಹಾರಿಸುವಾ’ ಎಂದರು. ಗವರ್ನಿಯ ಹತ್ತನೇ ಒಂದು ಭಾಗವನ್ನಷ್ಟೇ ಏರಿದ್ದ ನಾವು ಯಾವ ಸಾಧನೆಗೆಂದು ಧ್ವಜ ಹಾರಿಸುವುದು? ಅಲ್ಲದೆ ಅದೆಷ್ಟು ಸಾಹಸಿಗರು ಅದೆಷ್ಟು ಬಾರಿ ಅದೆಷ್ಟು ಲೀಲಾಜಾಲವಾಗಿ ಗವರ್ನಿಯ ಶಿಖರವನ್ನು ಏರಿದ್ದಾರೋ? ಆದರೂ ನಮಗೆ ಇಷ್ಟಾದರೂ ದಕ್ಕಿತಲ್ಲಾ ಎಂದು ನಾವು ತೃಪ್ತಿಪಟ್ಟುಕೊಂಡೆವು.

ನಾವು ಹಿಮದಲ್ಲಿ ನಡೆಯುತ್ತಿರುವುದು ಅದೇ ಮೊದಲು. ಅಲ್ಲಿ ಅಸಾಧ್ಯ ಚಳಿ ಇರಬಹುದೆಂಬ ನಮ್ಮ ಭಾವನೆ ಹುಸಿಯಾಗಿತ್ತು. ಎತ್ತರಕ್ಕೆ ಏರಿ ಬಂದುದರಿಂದ ‘ಹಿಮದೊಳಿರ್ದುಂ ಬೆಮರ್ದನ್‌’ ಎಂಬಂತಾಗಿತ್ತು ನಮ್ಮ ಪರಿಸ್ಥತಿ. ಹಿಮದಲ್ಲಿ ಕೂತಾಗ ಅಲ್ಲಿಯವರೆಗಾಗಿದ್ದ ಆಯಾಸವೆಲ್ಲಾ ಪರಿಹಾರವಾಗಿ, ಮನಸ್ಸಿಗೆ ವರ್ಣಿಸಲಾಗದ ಆಹ್ಲಾದತೆಯುಂಟಾಯಿತು. ಅದೇನೋ ಅಪೂರ್ವವಾದ ಅನುಭೂತಿ. ಹಿಮಾಲಯದಲ್ಲಿ ತಪಸ್ಸು ಮಾಡುವವರಿಗೆ ಇಂತಹದ್ದೇ ಅನುಭೂತಿ ದೊರೆಯುತ್ತಿರಬೇಕು. ಹಿಮದಲ್ಲಿ ನಾನು ಮತ್ತು ಗುರು ಹುಚ್ಚರಂತೆ ಕುಣಿದೆವು. ಎಳೆಯ ಮಕ್ಕಳಂತೆ ಜಾರು ಬಂಡಿ ಆಡಿದೆವು. ‘ಇನ್ನು ಸಾಕು’ ಎಂದು ಹೆಬ್ಬಾರರು ಹೇಳಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು. ಹಿಂದಿರುಗುವಾಗಿ ಗುರುವೊಮ್ಮೆ, ಹೆಬ್ಬಾರರು ಎರಡು ಬಾರಿ ಜಾರಿ ಬಿದ್ದರು. ಅದೂ ಒಂದು ಆಟದಂತಾಗಿತ್ತು ನಮಗೆ.

ಕಾಲ್ದಾರಿಯಲ್ಲೇ ನಡೆದು ನಾವು ನಮ್ಮ ಮೂವರು ಮಹಿಳಾಮಣಿಯರನ್ನು ಸೇರಿಕೊಂಡೆವು. ನಮ್ಮ ಅನುಭವಗಳಿಗೆ ಬಣ್ಣ ಹಚ್ಚಿ ಹೇಳಿದಾಗ ತಮಗೆ ಅಂತಹ ಅನುಭವ ದೊರಕಲಿಲ್ಲವಲ್ಲಾ ಎಂದು ಅವರಿಗೆ ವಿಷಾದವಾಯಿತು. ‘ಪರ್ವತ ಏರಲು ಗಂಡಸರಿಗೆ ಮಾತ್ರ ಸಾಧ್ಯ. ನಾನೇರಿದೆತ್ತರಕ್ಕೆ ನಿಮ್ಮಿಂದೇರಲು ಎಲ್ಲಿ ಸಾಧ್ಯ?’ ಎಂದು ಗುರು ಅವರನ್ನು ಛೇಡಿಸಿದಾಗ, ಎಲೈನ್‌ ‘ಸುಮ್ಮನಿರೆಲೋ ಮಂಗ. ಬಚೇಂದ್ರಿಪಾಲ್‌ ಎರಡು ಬಾರಿ ಎವರೆಸ್ಟ್‌ ಏರಿದ್ದಾಳೆ. ನಿನ್ನ ಜೀವನದಲ್ಲಿ ಒಂದು ಪುಟ್ಟ ಪರ್ವತವನ್ನಾದರೂ ಏರಲು ನಿನ್ನಿಂದ ಸಾಧ್ಯವಾಗಿದೆಯೇ’ ಎಂದು ತಿರುಗೇಟು ನೀಡಿದಳು. ನಾವು ಊಟಕ್ಕೆ ಅಣಿ ಮಾಡಬೇಕು ಎನ್ನುವಷ್ಟರಲ್ಲಿ ಹೆಬ್ಬಾರರ ಮುಖ ಕಪ್ಪಿಡುತ್ತಾ ಹೋಯಿತು. ನಮಗೆ ಗಾಬರಿಯಾಗಿ ನಾವೆಲ್ಲಾ ಅವರ ಸುತ್ತ ನೆರೆದೆವು. ಸ್ವಲ್ಪ ಹೊತ್ತಲ್ಲಿ ಅವರು ಮಾಮೂಲು ಸ್ಥತಿಗೆ ಬಂದರು. ಆಮ್ಮಜನಕದ ಕೊರತೆಯ ತೊಂದರೆ ಅವರನ್ನು ಬಾಧಿಸುತ್ತಿತ್ತು. ಪ್ರಾಯಶಃ ಇನ್ನರ್ಧ ಗಂಟೆ ಹಿಮದಲ್ಲಿ ಕಳೆಯುತ್ತಿದ್ದರೆ ನಾವು ಹೆಬ್ಬಾರರ ಆಸೆಯನ್ನೇ ಬಿಡಬೇಕಾಗುತ್ತಿತ್ತು !

ಮಧ್ಯಾಹ್ನದ ಊಟಕ್ಕೆ ಮೆರಿಲೂ ಅನ್ನ, ಸಾರು, ಮೊಸರು, ಆಮ್ಮೆಟ್ಟುಗಳನ್ನು ಸಿದ್ಧಪಡಿಸಿ ತಂದಿದ್ದಳು. ಬ್ರೆಡ್ಡ್‌, ಬಾಳೆಹಣ್ಣು, ಆ್ಯಪಲ್‌ ಮತ್ತು ಕೋಕೋ ಕೋಲಾಗಳನ್ನು ಅಲೆನ್‌ ಕೊಂಡುತಂದಿದ್ದ. ಹರಟೆ ಕೊಚ್ಚುತ್ತಾ ನಮ್ಮಮಿಂದ ಸಾಧ್ಯವಾದಷ್ಟನ್ನು ನಾವು ಮುಗಿಸಿದೆವು. ಆದರೆ ತಂದುದರಲ್ಲಿ ಅರ್ಧಾಂಶಕ್ಕಿಂತಲೂ ಹೆಚ್ಚು ಹಾಗೇ ಉಳಿದುಕೊಂಡಿತು.

ಅವೆಲ್ಲಾ ಹಾಗೇ ಹ್ಯಾವರ್‌ಸಾಕಿನಲ್ಲಿ ತುಂಬಿಸಲ್ಪಟ್ಟವು. ವಾಪಸ್ಸು ಬರುವಾಗ ಅದನ್ನು ನಾನು ಹೆಗಲಿಗೇರಿಸಿಕೊಂಡೆ. ಈಗಲೂ ಅದು ಸಾಕಷ್ಟು ಭಾರವಾಗಿಯೇ ಇತ್ತು. ನಾವೀಗ ಅಲೆನ್‌ನ ಅಡ್ಡ ಹಾದಿ ಹಿಡಿಯದೆ ನೇರ ಹಾದಿಯಲ್ಲೇ ಬಂದೆವು. ಪ್ಯಾಂಟು ಒದ್ದೆ ಮಾಡಿಕೊಂಡಿದ್ದ ಗುರು, ಒಂದು ಬಾತ್‌ ಟವೆಲ್‌ ಮಾತ್ರ ಉಟ್ಟುಕೊಂಡು ಬರಬೇಕಾಯಿತು. ಅನಿತಾಳದ್ದೂ ಅದೇ ಅವಸ್ಥೆ. ಅವರಿಬ್ಬರ ಆಗಿನ ವೇಷವನ್ನು ನೋಡಿದರೆ, ಅವರನ್ನು ಗಂಡಸರ ಸಾಲಿಗೆ ಸೇರಿಸುವುದೋ ಅಥವಾ ಹೆಂಗಸರ ಸಾಲಿಗೋ ಎಂಬ ಸಂದೇಹ ಯಾರಿಗಾದರೂ ಮೂಡಲೇಬೇಕು.

ಗವರ್ನಿಯಿಂದ ವಾಪಾಸಾಗುವಾಗ ನಮಗೆ ಮೆಚ್ಚುಗೆಯಾಗುವುದು ಚಾರಣಿಗರು ಅಲ್ಲಿನ ಪರಿಸರವನ್ನು ಗೌರವಿಸುವ ಕ್ರಮ. ಏನಿಲ್ಲವೆಂದರೂ ಅಂದು ಅಲ್ಲಿ 50ಕ್ಕೂ ಮಿಕ್ಕ ಚಾರಣಿಗರಿದ್ದರು. ಅವರೆಲ್ಲಾ ಅಲ್ಲೇ ಉಂಡು, ತಿಂದು, ಕುಡಿದು ಕುಣಿದಿದ್ದಾರೆ. ಆದರೆ ಗವರ್ನಿ ಊರಿನಿಂದ ಪರ್ವತದ ಬುಡದವರೆಗಿನ 5 ಕಿ.ಮೀ. ದೂರದಲ್ಲಿ ಎಲ್ಲೂ ಒಂದು ಚೂರು ಪ್ಲಾಸ್ಟಿಕ್ಕು, ಒಂದು ಬಾಟಲಿ, ಒಂದು ತುಂಡು ಸಿಗರೇಟು ಅಥವಾ ಬೆಂಕಿಕಡ್ಡಿ ನಮಗೆ ಕಾಣಸಿಕ್ಕಿರಲಿಲ್ಲ. ನಾವು ಕೊಕ್ಕೋ ಕೋಲಾ ಕುಡಿದು ಮುಗಿಸಿದ್ದರೂ ಮೆರಿಲೂ ಬಾಟಲಿಯನ್ನು ಹ್ಯಾವರ್‌ಸಾಕಿಗೆ ತುರುಕಿದ್ದಳು. ಇನ್ನು ಎಲೆಯಡಿಕೆ ತಿನ್ನುವ ಅಭ್ಯಾಸವೇ ಇಲ್ಲದ ಫ್ರೆಂಚರು ಕವಳ ಜಗಿದು ಕೆಂಪನೆಯ ರಸವನ್ನು ಎಲ್ಲೆಂದರಲ್ಲಿ ಉಗಿಯಲು ಸಾಧ್ಯವೇ ಇಲ್ಲವಲ್ಲಾ?

ಪೂಲನ್‌ ಮತ್ತು ಭಾರತ

ಫ್ರಾನ್ಸ್‌ನಲ್ಲಿ ಗಾಂಧೀಜಿ, ತೆರೆಸಾ, ಸತ್ಯಜಿತ್‌ ರೇ ಮತ್ತು ಸಿತಾರ್‌ ರವಿಶಂಕರ್‌ ಬಗ್ಗೆ ಅದೆಷ್ಟೋ ಪ್ರಶ್ನೆಗಳಿಗೆ ನಾವು ಉತ್ತರಿಸಬೇಕಾಗಿ ಬರುತ್ತಿತ್ತು. ಕೆಲವೊಂದು ಪ್ರಶ್ನೆಗಳು ಅತ್ಯಂತ ಜಟಿಲವಾದವುಗಳು. ಆದರೂ ನಾವು ಅವುಗಳನ್ನು ಹೇಗಾದರೂ ನಿಭಾಯಿಸಿಬಿಡುತ್ತಿದ್ದೆವು. ಲೂರ್ದ್‌ನಲ್ಲಿ ನಾನು ಒಂದಿನಿತೂ ನಿರೀಕ್ಷಿಸಿರದ ಒಬ್ಬಾಕೆಯ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿ ಬಂತು. ಆಕೆ ಪೂಲನ್‌ ದೇವಿ !

ಲೂರ್ದ್‌ನಲ್ಲಿ ನನ್ನ ಅತಿಥೇಯನಾಗಿದ್ದ ಜುವಾನ್‌ ಬಿಲ್ಡ್‌ಸ್ಟೈನ್‌ ಅಲ್ಲಿನ ರೋಟರಿ ಅಧ್ಯಕ್ಷ್ಷ. ವೃತ್ತಿಯಲ್ಲಿ ವೈದ್ಯನಾಗಿರುವ ಆತ ಒಂದು ಔಷಧದ ಅಂಗಡಿ ಇಟ್ಟುಕೊಂಡಿದ್ದಾನೆ. ಫಾರ್ಮಾಸಿಸ್ಟಾದ ಆತನ ಹೆಂಡತಿ ಮೆಡಿಕಲ್‌ಶಾಪ್‌ ನೋಡಿಕೊಳ್ಳುತ್ತಾಳೆ. ಇಬ್ಬರು ಮಕ್ಕಳಲ್ಲಿ ಹಿರಿಯಾಕೆ ಬೋರ್ಡೋ ನಗರದಲ್ಲಿ ಸರ್ಜನ್‌ ಆಗಿದ್ದಾಳೆ. ಕಿರಿಯವಳು ಇನ್ಯಾವುದೋ ಒಂದು ಪಟ್ಟಣದಲ್ಲಿ ಡಾಕ್ಟರಿಕೆ ಮಾಡುತ್ತಾಳೆ. ಗಂಡ ಹೆಂಡತಿ ಸಾಕಷ್ಟು ಗಳಿಸಿ ಆರಾಮ ಜೀವನ ಸಾಗಿಸುತ್ತಾರೆ.

ಬಿಲ್ಡ್‌ಸ್ಟೈನ್‌ ಪೂಲನ್‌ದೇವಿಯ ಬಗ್ಗೆ ಫ್ರೆಂಚಿನಲ್ಲಿ ಪ್ರಕಟವಾದ ಪುಸ್ತಕವೊಂದನ್ನು ಓದಿದ್ದ. ಆ ಬಳಿಕ ಅವನಲ್ಲಿ ಅನೇಕ ಸಂಶಯಗಳು ಹುಟ್ಟಿಕೊಂಡಿದ್ದವು. ಅವನ್ನೆಲ್ಲಾ ನಿವಾರಿಸಿಕೊಳ್ಳಲು ಅವನು ಒಬ್ಬ ಭಾರತೀಯನಿಗಾಗಿ ಕಾದಿದ್ದ. ನಾನೀಗ ಅವನ ಕೈಯಲ್ಲಿ ಸಿಕ್ಕಿಹಾಕ್ಕೊಂಡಿದ್ದೆ.

ತನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ‘ಕಫೆ ಅವೆಕ್‌ ದ್ಹುಲೇ’ (ಹಾಲಿನೊಡನೆ ಕಾಫಿ) ನೀಡಿ ಅವನು ಕೇಳಿದ ಮೊದಲ ಪ್ರಶ್ನೆತ ‘ಭಾರತದಲ್ಲಿ ಈಗಲೂ ದರೋಡೆಕೋರರು ಇದ್ದಾರಾ?’

ಈ ನಮ್ಮ ಪುಣ್ಯ ದೇಶದಲ್ಲಿ ಅದೆಷ್ಟೊಂದು ಬಗೆಯಲ್ಲಿ ಯಾವಾಗಲೂ ದರೋಡೆ ಮಾಡುವವರಿದ್ದಾರೆ ಎನ್ನುವ ಸಾರ್ವಕಾಲಿಕ ಸತ್ಯವನ್ನು, ಆ ಬಡಪಾಯಿಗೆ ತಿಳಿಸಲು ನನಗೆ ಮನಸ್ಸು ಬರಲಿಲ್ಲ. ಹಾಗಾಗಿ ಹೇಳಿದೆ: ‘ಚಂಬಲ್‌ ಕಣಿವೆಯಲ್ಲಿ ರಾಜಾ ಮಾನಸಿಂಗ್‌ ಪುತಲೀಬಾಯಿ, ಪೂಲನ್‌ದೇವಿಯರಂತಹಾ ಮಹಾ ದರೋಡೆಕೋರರಿಲ್ಲ. ಈಗ ಅಲ್ಲಿರುವವರೆಲ್ಲಾ ಸಣ್ಣಪುಟ್ಟ ದರೋಡೆಕೋರರು. ಬಹುತೇಕವಾಗಿ ಬೇರೆ ಕೆಲಸ ಸಿಗದೆ ದರೋಡೆಗಿಳಿದವರು.’

ಭಾರತಕ್ಕೆ ಯಾವತ್ತಾದರೂ ಹೋದೇನೆಂಬ ದೂರದ ಆಸೆಯೊಂದನ್ನು ಇಟ್ಟುಕೊಂಡಿರುವ ಬಿಲ್ಡ್‌ಸ್ಟೈನ್‌ ‘ಪೂಲನ್‌ದೇವಿಯ ಕತೆ ನಿಜವಾ?’ ಎಂದು ಕೇಳಿದ. ‘ಪೂಲನ್‌ ದೇವಿಯದ್ದು ಕತೆಯೇ ಅಲ್ಲ ಮಾರಾಯ. ಅದು ನೈಜ ಘಟನೆಗಳ ವಿವರಣೆ’ ಅಂದೆ ನಾನು. ಈಗವನ ಹುಬ್ಬು ಮೇಲೇರಿತು: ‘ಅಂದರೆ ನಿಮ್ಮಲ್ಲಿ ಶ್ರೀಮಂತರು ಮತ್ತು ಪೋಲೀಸರು ಬಡಪಾಯಿ ಹೆಣ್ಣುಗಳನ್ನು ಹಾಗೆ ಶೋಷಿಸುತ್ತಾರಾ?’

ನನಗೀಗ ಸಂಕಟಕ್ಕಿಟ್ಟುಕೊಂಡಿತು. ಪುಣ್ಯಕ್ಕೆ ಆತ ದೇವದಾಸಿ, ವೆಂಕಟಸಾನಿಯರ ಬಗ್ಗೆ, ಬೆತ್ತಲೆ ಸೇವೆ ಬಗ್ಗೆ ಓದಿರಲಿಲ್ಲ. ಕಾಮಾಟಿಪುರದ ಬಗ್ಗೆಯೂ ಅವನಿಗೆ ಗೊತ್ತಿರಲಿಲ್ಲ. ಆದರೂ ಅವನೀಗ ಎಸೆದದ್ದು ಪ್ರಶ್ನೆಯಲ್ಲ, ಕೂರಂಬು! ನಮ್ಮ ದೇಶದ ಬಗ್ಗೆ ತಪ್ಪು ಕಲ್ಪನೆ ಉಳಿಯದಂತೆ ಸತ್ಯವನ್ನು ಹೇಳುವುದು, ಅಷ್ಟು ಸುಲಭವಲ್ಲ. ಹಾಗಾಗಿ ಅವನ ಪ್ರಶ್ನೆಗೆ ನೇರವಾಗಿ ಉತ್ತರಿಸದೆ ಫ್ರಾನ್ಸ್‌ ಪ್ರವಾಸಕಾಲದಲ್ಲಿ ನನ್ನ ಅನುಭವಕ್ಕೆ ಬಂದ ವಿಷಯವೊಂದರ ಬಗ್ಗೆ ಕೇಳಿದೆ. ‘ನಿನ್ನ ದೇಶದ ರೋಟರಿ ಕ್ಲಬ್ಬುಗಳಲ್ಲಿ ಮಹಿಳಾ ಸದಸ್ಯೆಯರಿಲ್ಲವಲ್ಲಾ, ಯಾಕೆ?’

‘ಮಹಿಳೆಯರಿಗಾಗಿ ಇನ್ನರ್‌ವೀಲ್‌ ಇದೆಯಲ್ಲಾ? ಹಾಗಿರುವಾಗ ಅವರು ರೋಟರಿ ಸದಸ್ಯೆಯರು ಏಕಾಗಬೇಕು?’

‘ನಮ್ಮ ರೋಟರಿ ಜಿಲ್ಲೆಯ ರೋಟರಿ ಕ್ಲಬ್ಬುಗಳಲ್ಲಿ ಸಾಕಷ್ಟು ಮಹಿಳಾ ಸದಸ್ಯೆಯರಿದ್ದಾರೆ. ಮೂರು ಕ್ಲಬ್ಬುಗಳ ಪ್ರೆಸಿಡೆಂಟರು ಮಹಿಳೆಯರು’ ಅಂದೆ. ‘ಆದರೆ ಇದು ನನ್ನ ಪ್ರಶ್ನೆಗೆ ಉತ್ತರವಾಗಲಿಲ್ಲ’ಎಂದ ಆತ ಅಸಹನೆಯಿಂದ. ‘ಅದು ಹೌದು ಮಾರಾಯ. ನಿನ್ನ ಪ್ರಶ್ನೆಗೆ ನಾನು ಬೇರೊಂದು ರೀತಿಯಲ್ಲಿ ಉತ್ತರಿಸಲು ಯತ್ನಿಸಿದೆ ಅಷ್ಟೆ. ವ್ಯಕ್ಷ್ತಿ ಸ್ವಾತಂತ್ರ್ಯಕ್ಕೆ ಇಷ್ಟೊಂದು ಮಹತ್ವ ನೀಡುವ ನಿಮ್ಮಲ್ಲಿ ಮಹಿಳೆಯರು ರೋಟರಿ ಸದಸ್ಯರಾಗಲು ಸಾಧ್ಯವಿಲ್ಲವೆಂದರೆ ಅದು ಕೂಡಾ ಶೋಷಣೆಯೇ ಅಲ್ಲವೇ? ಹೆಣ್ಣಿನ ಶೋಷಣೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಕಡೆಗಳಲ್ಲೂ ನಡೆಯುತ್ತದೆ. ಆದರೆ ಪೂಲನ್‌ದೇವಿಯದ್ದು ಒಂದು ಸಾರ್ವತ್ರಿಕ ಪ್ರಕರಣವಲ್ಲ. ಅದೊಂದು ವಿಶಿಷ್ಟ ವಿದ್ಯಮಾನ’ ಎಂದೆ.

‘ಆದರೆ ನಿಮ್ಮಲ್ಲಿ ಗಂಡ ಸತ್ತಾಗ ಹೆಣ್ಣನ್ನು ಅವಳ ಇಷ್ಟಕ್ಕೆ ವಿರುದ್ಧವಾಗಿ, ಬೆಂಕಿಗೆ ಎಸೆದು ಸುಡುತ್ತಾರಂತಲ್ಲಾ ? ಕೆಲವು ವರ್ಷಗಳ ಹಿಂದೆ ನಾನು ಇದನ್ನು ಪತ್ರಿಕೆಯಲ್ಲಿ ಓದಿದ್ದೆ.’

ಈತ ರೂಪಾ ಕನ್ವರಳ ಬಗ್ಗೆ ಹೇಳುತ್ತಿದ್ದಾನೆ! ರಾಜಸ್ಥಾನದ ಬಡಪಾಯಿ ರೂಪಾ ಕನ್ವರ್‌ ಹದಿನೆಂಟರ ತುಂಬು ತಾರುಣ್ಯದಲ್ಲಿ ಗಂಡನನ್ನು ಕಳಕೊಂಡಳು. ರೋಗಿಷ್ಠ ಗಂಡ ಸತ್ತಾಗ, ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಆಕೆಯನ್ನು ‘ಸತಿ’ಯನ್ನಾಗಿಸಿ ಕೆಲವರು, ಆಕೆಯ ಹೆಸರಲ್ಲಿ ದೇವಸ್ಥಾನ ಕಟ್ಟಲು ಹೋಗಿ ಸಾಕಷ್ಟು ಹಣ ಮಾಡಿಕೊಂಡಿದ್ದರು. ನಾಗರಿಕ ಸಮಾಜಕ್ಕೊಂದು ಬರ್ಬರ ಸವಾಲು ಆ ಪ್ರಕರಣ. ವಿದೇಶೀಯರಿಗೆ ಭಾರತದ ಬಗ್ಗೆ ಮೊದಲಿಗೆ ಸಿಗುವುದೇ ಇಂತಹ ವಿಷಯಗಳು. ಏನು ಮಾಡುವುದು? ನಾನು ಸಮಾಧಾನದಿಂದಲೇ ಉತ್ತರಿಸಬೇಕಾಯಿತು’ ಈಗ ನೀನು ಹೇಳಿದ್ದು ಕೂಡಾ ಒಂದು ವಿಶಿಷ್ಟ ಪ್ರಕರಣ. ಐನೂರು ವರ್ಷಗಳ ಹಿಂದೆ ನಮ್ಮಲ್ಲಿ ‘ಸತಿ ಸಹಗಮನ’ ಪದ್ಧಿತಿ ಕೆಲವು ಕಡೆ ಇತ್ತು. ಅದು ಅನ್ಯರು ಆಕ್ರಮಣ ಮಾಡಿದಾಗ ಹೆಂಗಸರ ಮಾನ ಕಾಪಾಡುವ ಒಂದು ತಂತ್ರ ಅಷ್ಟೆ. ಆಗಲೂ ಅದು ಸಾರ್ವತ್ರಿಕವಾಗಿರಲಿಲ್ಲ. ತಮ್ಮ ಗಂಡ ಸತ್ತ ಮೇಲೆ ಗುರುತು ಪರಿಚಯ ಇಲ್ಲದ ಆಕ್ರಮಣಕೋರರ ಭೋಗದ ತೊತ್ತಾಗುವುದಕ್ಕಿಂತ, ಸಾಯುವುದೇ ಲೇಸೆಂದು ತಿಳಿದುಕೊಂಡು ಕೆಲವರು ಹಾಗೆ ಮಾಡುತ್ತಿದ್ದವರಿದ್ದರು. ಆದರೆ ನೀನು ಕೇಳಿದ ರೂಪಾ ಕನ್ವರಳದು ತೀರಾ ವಿಚಿತ್ರವಾದ ಒಂದು ಪ್ರಕರಣ. ಕೆಲವು ಅತಿರೇಕವಾದಿಗಳು ಎಲ್ಲಾ ಕಾಲಗಳಲ್ಲಿ ಎಲ್ಲಾ ಸ್ಥಳಗಳಲ್ಲಿ ಇದ್ದೇ ಇರುತ್ತಾರೆ. ಅಂತಹ ಅತಿರೇಕತೆಗೆ ಧರ್ಮದ, ಸಮಾಜದ ಅಥವಾ ಕಾನೂನಿನ ಸಮ್ಮತಿ ಇರುವುದಿಲ್ಲ. ರೂಪಾ ಕನ್ವರಳ ಪ್ರಕರಣಕ್ಕೆ ಕಾರಣರಾದವರ ಮೇಲೆ ಕಾನೂನಿನ ಕ್ರಮ ಕೂಡಾ ಜರುಗಿಸಲಾಗಿದೆ’ ಎಂದೆ.

ಅದಕ್ಕವನು ‘ಏನೋ ಮಾರಾಯ! ನಿನ್ನ ಭಾರತವೆಂದರೆ ಹಲವು ವಿಚಿತ್ರಗಳ ನಾಡಾಗಿ ನನಗೆ ಕಾಣಿಸುತ್ತದೆ’ ಎಂದ. ತಕ್ಷಣ ನಾನು ‘ವಿಚಿತ್ರ ಅನ್ನಬೇಡ, ವೈವಿಧ್ಯ ಅನ್ನು. ವೈವಿಧ್ಯವೇ ನಮ್ಮ ಸಂಸ್ಕೃತಿಯ ಮುಖ್ಯ ಲಕ್ಷಣ. ಆದರೂ ದೇಶದ ಪ್ರಶ್ನೆ ಬಂದಾಗ ನಾವು ನೂರುಕೋಟಿ ಕೂಡಾ ಒಂದೇ ಆಗಿ ಎದ್ದು ನಿಲ್ಲುತ್ತೇವೆ. ನೀನು ಭಾರತಕ್ಕೆ ಬಂದು ಕಾಣಬೇಕು ಈ ಸತ್ಯವನ್ನು’ ಎಂದೆ. ಆಗವನು ‘ನೀನು ಹೇಳಿದ್ದು ನಿಜ. ಕೇವಲ ಪತ್ರಿಕಾ ವರದಿ ಅಥವಾ ಪುಸ್ತಕಗಳ ಮೂಲಕ ಒಂದು ದೇಶದ ಬಗ್ಗೆ ಖಚಿತ ತೀರ್ಮಾನಕ್ಕೆ ಬರುವುದು ಸರಿಯಲ್ಲ ಅನ್ನುವುದನ್ನು ನೀನು ಪರೋಕ್ಷವಾಗಿ ಹೇಳಿದ್ದೀಯಾ ಗುಡ್‌. ನಿನ್ನ ಭಾರತವನ್ನು ಆದಷ್ಟು ಬೇಗ ನೋಡಬೇಕು ನಾನು’ ಎಂದ.
‘ಖಂಡಿತಾ ಬಾ. ನಿನ್ನ ದೇಶವನ್ನು ನೋಡುತ್ತಿರುವಾಗ ಒಂದಂಶವನ್ನು ನಾನು ಗುರುತಿಸಿದ್ದೇನೆ. ಮಾಂಪಿಲಿಯೇ, ನಾಬೋನ್‌ ಮತ್ತು ಪರ್ಪಿನ್ಯಾದವರು ಹೆಚ್ಚಾಗಿ ಸ್ಪಾನಿಷ್‌ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ಪರ್ಪಿನ್ಯಾದವರಂತೂ ನಮ್ಮದು ಕ್ಯಾಟಲನ್‌ ಸಂಸ್ಕೃತಿ ಎಂದು ಹೆಮ್ಮೆ ಪಡುತ್ತಾರೆ. ಕಾಲಘಟ್ಟವೊಂದರಲ್ಲಿ ಕ್ಯಾಥಲಿಕ್ಕರಾಗಿ ಹೋದ ನಿಮ್ಮಲ್ಲಿ ಸಾಂಸ್ಕೃತಿಕ ಏಕತಾನತೆಯ ಬಗ್ಗೆ ಅಸಹನೆಯಿದೆ. ನಮ್ಮಲ್ಲಿ ಏಕಸಂಸ್ಕೃತಿ ಇಲ್ಲ. ಹಾಗಾಗಿ ಸಾಂಸ್ಕೃತಿಕ ಏಕತಾನತೆಯೂ ಇಲ್ಲ. ಭಾಷೆ, ಆಹಾರ, ಉಡುಗೆ  ತೊಡುಗೆ, ಹವಾಮಾನ  ಹೀಗೆ ಎಲ್ಲವೂ ವೈವಿಧ್ಯಮಯವಾಗಿರುವುದರಿಂದ ನಮ್ಮಲ್ಲಿನ್ನೂ ನೂರಾರು ದೇವರುಗಳಿದ್ದಾರೆ. ಮಹಾಕಾವ್ಯಗಳ ನೂರಾರು ಪಠ್ಯಗಳು ದೊರೆಯುತ್ತವೆ. ಸಾಂಸ್ಕೃತಿಕವಾಗಿ ನಾವೆಲ್ಲಾ ಜೀವಂತಿಕೆ ಉಳಿಸಿಕೊಂಡಿದ್ದೇವೆ. ಭಾರತದ ಬಗ್ಗೆ ನೀನು ಏನು ಬೇಕಾದರೂ ಅಂದುಕೋ. ಆದರೆ ಅಲ್ಲಿನ ಸಾಂಸ್ಕೃತಿಕ ಜೀವಂತಿಕೆಯನ್ನು ಇಲ್ಲಿ ಕಾಣಲು ನನಗೆ ಸಾಧ್ಯವಾಗಲಿಲ್ಲ’ ಎಂದೆ.
ಅವನಾಗ ನಕ್ಕ. ‘ನೀನಂದದ್ದು ನಿಜ. ನಮಗೆ ಫ್ರೆಂಚ್‌ ಜಾನಪದ ಹಾಡುಗಳು ನೀಡುವ ಸಂತೋಷವನ್ನು ಆಧುನಿಕ ಹಾಡುಗಳು ನೀಡುವುದಿಲ್ಲ. ಒಂದು ಕಾಲದಲ್ಲಿ ನಾವೆಲ್ಲಾ ಕ್ಯಾಥಲಿಕ್ಕರಾದುದು ಕೂಡಾ ನಿಜವೇ. ಆದರೆ ನಮ್ಮಲ್ಲಿ ಚರ್ಚುಗಳಿಗೆ ಹೋಗುವವರ ಸಂಖ್ಯೆಯನ್ನು ನೀನು ಗಮನಿಸಿರಬಹುದು. ದೇವರ ಹೆಸರು ಹೇಳಿ ನಮ್ಮನ್ನು ಮೋಸ ಮಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಲೂರ್ದ್‌ನ ಪವಾಡಗಳ ಬಗ್ಗೆಯೂ ಅಷ್ಟೆ. ವೈಜ್ಞಾನಿಕ ವಿವರಣೆಗೆ ನಿಲುಕದ್ದನ್ನು ನಾವು ಪವಾಡ ಎನ್ನುತ್ತೇವೆ. ಮುಂದೊಂದು ದಿನ ಅದಕ್ಕೆ ವಿವರಣೆ ಸಿಕ್ಕರೆ ಅದು ಪವಾಡವಾಗಿ ಉಳಿಯುವುದಿಲ್ಲ’ ಅಂದ.

ನಮ್ಮಲ್ಲಿ ಹೊಸ ದೇವರುಗಳು ಈಗಲೂ ಹುಟ್ಟುತ್ತಲೇ ಇರುವುದರಿಂದ ಈ ಮಾತನ್ನು ನಾನು ಬೆಳೆಯಗೊಡಲಿಲ್ಲ!

ವೈದ್ಯನಿಗೆ ವ್ಯಾಯಾಮ :  ‘ನನ್ನ ಮನೆಗೆ ಬಂದ ಮೊದಲ ಭಾರತೀಯ ನೀನು. ನಿನ್ನ ಸಂಸ್ಕೃತಿಯ ವೈಶಿಷ್ಟ್ಯದ ಬಗ್ಗೆ ಅಷ್ಟೊಂದು ಹೇಳಿದೆ. ನಿನ್ನ ಸಂಸ್ಕೃತಿಯ ತುಣುಕೊಂದನ್ನು ನನಗೆ ತೋರಿಸಬಲ್ಲೆಯಾಲು ಎಂದು ಸಂಜೆ ನನ್ನ ಅತಿಥೇಯ ಬಿಲ್ಡ್‌ಸ್ಟೈನ್‌ ಕೇಳಿದ.
‘ಓಹೋ ಧಾರಾಳವಾಗಿ. ಆದರೆ ನಾನು ತೋರಿಸಿದ್ದನ್ನು ನೀನು ಮಾಡುವುದಿದ್ದರೆ ಮಾತ್ರ’ ಎಂದು ಉತ್ತರಿಸಿದೆ. ಅವನ ಕುತೂಹಲ ಕೆರಳಿತು. ‘ಅದೇನದು?’ ಎಂದು ಕೇಳಿದ.  ‘ಯೋಗಾಸನ ‘ ‘ಓ! ಯೋಗ! ಅದರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಆದರೆ ನಾನು ಇಷ್ಟು ತೆಳ್ಳಗಿದ್ದೇನೆ. ನನಗೆ ಯೋಗ ಯಾಕೆ?’ ಎಂದು ಅವನು ಪ್ರಶ್ನಿಸಿದ. ‘ಯೋಗ ಅಲ್ಲವೋ ಮಾರಾಯ. ಯೋಗಾಸನ. ಅದು ನಿನ್ನನ್ನು ಯಾವಾಗಲೂ ಆರೋಗ್ಯವಂತನ್ನ್ನಾಗಿಡುತ್ತದೆ. ತೆಳ್ಳಗಿದ್ದ ಮಾತ್ರಕ್ಕೇ ಆರೋಗ್ಯ ಸರಿಯಾಗಿರಬೇಕೆಂದೇನೂ ಇಲ್ಲವಲ್ಲಾ?’ ಎಂದೆ. ಅವನು ಅದಕ್ಕೆ ನಕ್ಕು ‘ಹಾಗಾದರೆ ಯೋಗ ಅಂದರೇನು?’ ಎಂದು ಕೇಳಿದ.
‘ಸರಳವಾಗಿ ಹೇಳುವುದಿದ್ದರೆ ಅದು ದೇಹ ಮತ್ತು ಮನಸ್ಸಿನ ಮೇಲೆ ಹತೋಟಿ ಸಾಧಿಸುವ ಒಂದು ಮಾರ್ಗ. ಡಾಕ್ಟರನಾದ ನಿನಗೆ ಗೊತ್ತಿರಲೇಬೇಕು. ನಮ್ಮ ಬಹುತೇಕ ಕಾಯಿಲೆಗಳಿಗೂ ಮನಸ್ಸಿಗೂ ಸಂಬಂಧವಿದೆಯೆನ್ನುವುದು. ನೀನು ದೇಹದ ಕಾಯಿಲೆಗಳಿಗೇನೋ ಮದ್ದು ಕೊಡುತ್ತಿ. ಮನಸ್ಸಿನ ಕಾಯಿಲೆಗೆ ಏನು ಮಾಡುತ್ತಿ? ಅದಕ್ಕೆ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನಗಳೇ ಮದ್ದು’ ಎಂದೆ. ಅದಕ್ಕವನು ‘ಸರಿಯಾಗಿ ಹೇಳಿದೆ’ ಎಂದು ನನ್ನೊಡನೆ ತಯಾರಾದ. ಹೆಂಡತಿ ತನ್ನ ಸಾಹಸ ನೋಡಲೆಂದು ಆಕೆಯನ್ನೂ ಕರೆದು ನನ್ನಿಂದ ಆಸನಗಳನ್ನು ಕಲಿಯತೊಡಗಿದ. ಈ ವಿಶಿಷ್ಟ ಸಂದರ್ಭವನ್ನು ಅವನ ಮುದ್ದಿನ ಮಡದಿ ಕ್ಯಾಮೆರಾದಲ್ಲಿ ಸೆರೆಹಿಡಿಯತೊಡಗಿದಳು. ಕೊನೆಯಲ್ಲಿ ‘ನೋಡುತ್ತಿರು, ಭಾರತಕ್ಕೆ ಬರುವಾಗ ಈ ನನ್ನ ಗಂಡ ತರುಣನಾಗಿರುತ್ತಾನೆ’ ಎಂದು ಹಾಸ್ಯಚಟಾಕಿ ಹಾರಿಸಿದಳು.

ಹೃದಯ ಹೀನರು : ಲೂರ್ದ್‌ನಿಂದ ಹೊರಡುವ ಮೊದಲು ಪರ್ಪಿನ್ಯಾದ ಫಿಲಿಪ್‌ ನನಗೆ ಉಡುಗೊರೆಯಾಗಿ ನೀಡಿದ್ದ ವೈನನ್ನು ಬಿಲ್ಡೆಸ್ಟೈನನಿಗೆ ಕೊಟ್ಟೆ. ಅದನ್ನು ನೋಡಿದ ಅವನ ಹುಬ್ಬು ಮೇಲೇರಿತು. ‘ಇಷ್ಟೊಂದು ಬೆಲೆಯ ವೈನ್‌ ನನಗಾಗಿ ತಂದೆಯಾ?’ ಎಂದು ಕೇಳಿದ.  ‘ವೈನ್‌ನ ಬಗ್ಗೆ ಏನೂ ಗೊತ್ತಿಲ್ಲದ ನಾನು, ವೈನಿನ ನಾಡಲ್ಲೇ ಇರುವ ನಿನಗೆ ವೈನನ್ನು
ಕೊಡುವುದೆಂದರೆ ಅದು ಬೆಟ್ಟಕ್ಕೆ ಮಣ್ಣು ಹೊತ್ತಂತೆ. ಇದನ್ನು ನನಗ್ಯಾರೋ ಕೊಟ್ಟರು. ನನಗಿದು ಬೇಡ. ನಾನಿದನ್ನು ಯಾರಿಗೂ ಕೊಡಬಹುದಿತ್ತು. ಆದರೆ ನಿನ್ನ ಚಿಂತನಾಕ್ರಮ ನನಗೆ ತುಂಬಾ ಇಷ್ಟವಾಯಿತು. ಅದಕ್ಕೆ ನಿನಗೇ ಕೊಡುತ್ತಿದ್ದೇನೆ’ ಎಂದೆ. ಅವನದಕ್ಕೆ ನಕ್ಕು ಬಿಟ್ಟ. ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ಎಂಬ ನಗು ಅದು!

ವೈನ್‌ ಬಾಟಲನ್ನು ಒಳಗಿಟ್ಟು ಬಂದು ಅವನು ಹೇಳಿದ. ‘ನಿನಗೆ ಗೊತ್ತಿದೆಯೋ ಏನೋ? ಇತ್ತೀಚೆಗೆ ಟ್ರಿಬ್ಯೂನ್‌ನಲ್ಲಿ ಒಂದು ಸಂಶೋಧನಾ ವರದಿ ಪ್ರಕಟವಾಯಿತು. ಯುರೋಪಿನಲ್ಲಿ ಅತ್ಯಂತ ಕಡಿಮೆ ಹೃದಯಾಘಾತ ಪ್ರಕರಣಗಳು ವರದಿಯಾಗುವುದು ಫ್ರಾನ್ಸಿನಿಂದ. ಅದಕ್ಕೆ ಫ್ರೆಂಚರು ಸೇವಿಸುವ ರೆಡ್‌ವೈನ್‌ ಕಾರಣವೆಂದು ಈ ಸಂಶೋಧನಾ ವರದಿ ತಿಳಿಸಿದೆ. ನೋಡು ಮುಂದೊಂದು ದಿನ ನಾವು ಅದೆಂತಹಾ ವೈನ್‌ ಉತ್ಪಾದನೆ ಮಾಡುತ್ತೇವೆನ್ನುವುದನ್ನು. ಅದನ್ನು ಕುಡಿದವರು ಅಮರರಾಗಬೇಕು. ಅಂತಹಾ ವೈನ್‌ ಉತ್ಪಾದಿಸುತ್ತೇವೆ! ನಮಗೆ ವೈನಿನಿಂದಾಗಿ ಹೃದಯಾಘಾತವೇ ಆಗುವುದಿಲ್ಲು ಎಂದು ‘ವೈನ್‌ ಮಹಾತ್ಮೆ’ಯನ್ನು ವಿವರಿಸತೊಡಗಿದ.
ಅವನ ಮಾತು ಮುಗಿದಾಗ ನಾನೆಂದೆ. ‘ಹೌದು, ಹೃದಯವೇ ಇಲ್ಲದವರಿಗೆ ಆಘಾತ ಎಲ್ಲಾಗಬೇಕು?’

ಈಗ ಬಿಲ್ಡ್‌ಸ್ಟೈನ್‌ ಗಹಿಗಹಿಸಿ ನಕ್ಕುಬಿಟ್ಟ. ಅವನ ಹೆಂಡತಿಯೂ ಮುಕ್ತವಾಗಿ ನಕ್ಕಳು. ಆ ಬಳಿಕ ಬಿಲ್ಡೆಸ್ಟೈನ್‌ ವೈನ್‌ ಮಹಾತ್ಮೆಯನ್ನು ಮುಂದುವರೆಸಲಿಲ್ಲ.

ಉದ್ದನೆಯ, ತೆಳ್ಳಗಿನ ಕೆಂಪು ಮುಖದ ಬಿಲ್ಡೆಸ್ಟೈನ್‌ ಒಳ್ಳೆಯ ಮನುಷ್ಯ. ನನ್ನನ್ನು ತನ್ನ ವಾಹನದಲ್ಲಿ ಇಡೀ ಲೂರ್ದ್‌ ಸುತ್ತಿಸಿದ. ಲೂರ್ದ್‌ ಬಿಡುವಾಗ ಲೂರ್ದ್‌ನ ಬಗೆಗಿನ ಸುಂದರವಾದ ಹೊತ್ತಗೆಯೊಂದನ್ನು ಉಡುಗೊರೆಯಾಗಿ ನೀಡಿದ. ‘ನೀನು ಕುಡಿಯುವವನಾಗಿದ್ದರೆ ಇಲ್ಲಿನ ಅತಿವಿಶಿಷ್ಟ ವೈನ್‌ ಉಡುಗೊರೆ ಕೊಡುತ್ತಿದ್ದೆ’ ಎಂದು ನಕ್ಕ.  ‘ಮಾರಾಯ. ವೈನಾದರೆ ಕುಡಿದು ಮುಗಿದುಹೋಗುತ್ತದೆ. ಆದರೆ ಇದು, ಈ ಪುಸ್ತಕ ನನಗೆ ನಿನ್ನನ್ನು, ನಿನ್ನ ಈ ಲೂರ್ದ್‌ ಪಟ್ಟಣವನ್ನು ಸದಾಕಾಲ ನೆನಪಲ್ಲಿ ಉಳಿಯುವಂತೆ ಮಾಡುತ್ತದೆ. ಭಾರತದಲ್ಲಿ ಮದುವೆಯಾಗುವಾಗ ಉಡುಗೊರೆ ನೀಡುವ ಕ್ರಮವಿದೆ. ನಾನು ಮದುವೆಗಳಿಗೆ ಹೋಗುವುದು ಕಡಿಮೆ. ಹೋದರೆ ಪುಸ್ತಕಗಳನ್ನೇ ಉಡುಗೊರೆಯಾಗಿ ಕೊಡುವುದು. ಹಾಗಾದರೂ ಓದುವ ಅಭ್ಯಾಸ ಬೆಳೆಯಲಿ ಎಂದ.’ ಯಾವುದೇ ಉಡುಗೊರೆಗಳ ಮೌಲ್ಯವನ್ನು ಅಳೆಯಬಹುದು. ಪುಸ್ತಕದ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲವಲ್ಲಾ?’ ಅಂದೆ. ಅವನದಕ್ಕೆ ತಲೆದೂಗಿ ‘ಹೌದು. ಪುಸ್ತಕ ಪ್ರೀತಿ  ಇಲ್ಲದವರ ಬದುಕು ವ್ಯರ್ಥ. ನೋಡು ನಾನು ಎಷ್ಟು ಪುಸ್ತಕ ಸಂಗ್ರಹಿಸಿಟ್ಟಿದ್ದೇನೆಂದು’ ಎಂದು ವಿಶಾಲಕೋಣೆಯೊಂದಕ್ಕೆ ನನ್ನನ್ನು ಕರೆದೊಯ್ದು. ಅಲ್ಲಿ ಹತ್ತು ಕಪಾಟುಗಳಲ್ಲಿ ಭರ್ತಿ ಪುಸ್ತಕಗಳು! ಬಿಲ್ಡೆಸ್ಟೈನನ ಈ ಹವ್ಯಾಸವನ್ನು ನಾನು ಬಹುವಾಗಿ ಮೆಚ್ಚಿಕೊಂಡೆ.

ಎಪ್ರಿಲ್‌ 27ರಂದು ನಾವು ಲೂರ್ದ್‌ ಬಿಟ್ಟೆವು. ಅಲನ್‌ ಗವರ್ನಿ ಪರ್ವತಕ್ಕೆ ಒಯ್ದಯಿದ್ದ ಅದೇ ವ್ಯಾನಿನಲ್ಲಿ ನಮ್ಮನ್ನು ತುಲೋಸಿಗೆ ತಂದುಬಿಟ್ಟ. ಹಾದಿಯುದ್ದಕ್ಕೂ ನಾವು ಹಾಡುತ್ತಾ ಬಂದೆವು. ಅಲನ್‌ ಫ್ರಾನ್ಸಿನ ಕೆ.ಜಿ. ತರಗತಿಗಳ ಜನಪ್ರಿಯ ಹಾಡು ‘ಆಲುವೆತ್ತಾ ಝುಂತಿ ಆಲುವೆತ್ತಾ’ ಹಾಡಿದ. ಅದನ್ನು ಶಿವಮೊಗ್ಗೆಯಲ್ಲಿ ನಾವು ಜನವರಿ ತಿಂಗಳಲ್ಲಿ ಅದೇ ಅಲನ್‌ ಬಾಯಿಯಿಂದ ಕೇಳಿದ್ದೆವು. ಈಗ ಅದೇ ಅಲನ್‌ ಹಾಡುವಾಗ ನಾವದಕ್ಕೆ ನಮ್ಮ ಸ್ವರವನ್ನೂ ಸೇರಿಸಿದೆವು. ಸರಿಯಾಗಿ ಸಂಜೆ ಐದು ಗಂಟೆಗೆ ನಾವು ಚಿರಪರಿಚಿತ ಹೋಟೆಲ್‌ ಕಂಫರ್ಟ್ ಇನ್ನ್‌ ಸೇರಿದೆವು. ಅಲ್ಲಿ ಜುವಾನ್‌ ಬುಯೋ ನಮಗಾಗಿ ಕಾದಿದ್ದ. ಸ್ವಲ್ಪ ಹೊತ್ತಿನಲ್ಲಿ ನಮ್ಮ ಅತಿಥೇಯರುಗಳು ಹಾಜರಾದರು. ಇನ್ನುಳಿದ ಎರಡೂವರೆ ದಿನಗಳ ತುಲೋಸ್‌ ವಾಸ್ತವ್ಯಕ್ಕಾಗಿ ನಾನು ನನ್ನ ಅತಿಥೇಯ ಮಿಷೇಲನ ಕಾರಲ್ಲಿ ಅವನ ಮನೆಯತ್ತ ಧಾವಿಸಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸ್ತಮಾರೋಗಕ್ಕೆ ಸಂಜೀವಿನಿ ಸೂಜಿಮದ್ದು
Next post ವಿಶಿಷ್ಟ ವಸ್ತು ಸಂಗ್ರಹಾಲಯ

ಸಣ್ಣ ಕತೆ

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys