ಕಾಲಾಳುಗಳು ಕಲ್ಲಾಳಕ್ಕೆ

ಕಲ್ಲಾಳದ ಜಲಪಾತ ಇನ್ನೂ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು.

ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸುರನೆನ್ನ ಮುಂದೆ ತಂದ ಪಸರಿಸದಿರಯ್ಯ. ಪಶುವೇನ ಬಲ್ಲುದು? ಸನ್ನದ್ಧನಾಗಿಬಿಟ್ಟೆ. ನಮ್ಮ ಹುಡುಗರು ನನಗಿಂತ ಮೊದಲೇ ಗೆಜ್ಜೆ ಕಟ್ಟಿದ್ದರು. ನಾಟಿಕಲ್ಲಿಗೆ ಬಾರದಿದ್ದ ವಶಿಷ್ಠ ಶ್ರೀವತ್ಸ, ಬಹಳ ಬೇಗ ಸಿಟ್ಟಿಗೇಳುವ ವಿಶ್ವಾಮಿತ್ರ ರಂಜನ್‌, ಪಾಠಕ್ಕಿಂತ ಆಟ ಮುಖ್ಯವೆಂದು ಬಲವಾಗಿ ನಂಬಿರುವ ರವಿರಾಜ ಮತ್ತೆ ತಂಡ ಸೇರಿಕೊಂಡರು. ದತ್ತಪೀಠಕ್ಕೆ ಹೋಗಿ ಬಂದಿದ್ದ ಚಂದ್ರಜಿತ್‌, ತೊಡಿಕ್ಕಾನದಲ್ಲಿ ಬಿಸ್ಕತ್ತು ನೀಡಿಯೇ ಹೊಟ್ಟೆ ತುಂಬಿಸಿದ್ದ ಚೇತನಕುಮಾರ್‌ ಈ ಬಾರಿ ಕೈಕೊಟ್ಟಿದ್ದರು. ನಕಲೀ ಶ್ಯಾಮ ಕಮಲಾಕ ಎನ್‌.ಸಿ.ಸಿ. ಕ್ಯಾಂಪಿನಲ್ಲಿದ್ದ. ಸಾಹಸ ಕಾರ್ಯಗಳಿಗೆ ನಾಲಾಯಕ್ಕು ಎಂದು ನಾವು ಬಲವಾಗಿ ನಂಬಿದ್ದ ಫೈಸಲ್‌ ನಮ್ಮನ್ನು ಮೊದಲ ಬಾರಿಗೆ ಸೇರಿಕೊಂಡಿದ್ದ.

ಕೋಯನಾಡಿನ ಕಲ್ತಪ್ಪ

ಸುಳ್ಯದಿಂದ ಇಪ್ಪತ್ತೇಳು ಕಿ. ಮೀ. ದೂರದಲ್ಲಿ ಮಡಿಕೇರಿ ರಸ್ತೆಯಲ್ಲಿ ಕೋಯನಾಡು ಸಿಗುತ್ತದೆ. ಅಲ್ಲಿಂದ ಕಲ್ಲಾಳಕ್ಕೆ ಏಳು ಕಿ. ಮೀ. ನಡೆಯಬೇಕು. ಮೈಸೂರು-ಮಂಗಳೂರು ಹಾದಿಯಲ್ಲಿ ಪಯಣಿಸುವವರಿಗೆ ಕೋಯನಾಡಿನ ಗಣಪತಿ ದೇಗುಲದ ಪರಿಚಯವಿದ್ದೇ ಇರುತ್ತದೆ. ಕೋಯನಾಡಿನಿಂದ ಸ್ವಲ್ಪ ಮುಂದಕ್ಕೆ ಘಾಟಿ ಆರಂಭವಾಗುವುದರಿಂದ ಇಲ್ಲಿ ವಾಹನ ನಿಲ್ಲಿಸಿ ಗಣಪತಿ ಹುಂಡಿಗೆ ಚಿಲ್ಲರೆ ಹಾಕಿ, ತಟ್ಟೆಯಲ್ಲಿರುವ ಕುಂಕುಮವನ್ನು ಢಾಳಾಗಿ ಹಣೆಗೆ ಬಳಿದುಕೊಂಡು ವಾಹನ ಚಾಲಕರು ನಿರ್ಭಯರಾಗಿ ಪ್ರಯಾಣ ಮುಂದುವರಿಸುತ್ತಾರೆ.

ಇಂದು ಮಕ್ಕಳ ದಿನಾಚರಣೆ. ಮಧ್ಯಾವಧಿ ರಜೆ ಮುಗಿದಿಲ್ಲದ ಕಾರಣ ಈ ಚಾರಣಕ್ಕೂ ಪ್ರಾಚಾರ್ಯರ ಅನುಮತಿಯ ಅಗತ್ಯವಿರಲಿಲ್ಲ. ಆದರೆ ಮುಖ್ಯಸ್ಥರಿಗೆ ತಿಳಿಸದೆ ಕುಟುಂಬದಲ್ಲಿ ಕಾರ್ಯಕ್ರಮ ನಡೆಸಿದರೆ ಚೆನ್ನಾಗಿರುತ್ತದೆಯೆ ? ಕೇಳಿದ್ದಕ್ಕೆ ಅವರಿಗೆ ಖುಷಿಯಾಯಿತು. ಹುಡುಗರಿಗೆ ರಾತ್ರೆ ತಂಗಲು ಸ್ಥಳವೂ ಸಿಕ್ಕಿತು.

ವ್ಯಾನಲ್ಲಿ ಸುಳ್ಯದಿಂದ ಹೊರಟು ಬೆಳಗ್ಗೆ 7.20ಕ್ಕೆ ಕೋಯನಾಡಲ್ಲಿ ಇಳಿದೆವು. ರಸ್ತೆಯ ಬದಿಯ ಹೋಟೆಲಿಗೆ ನುಗ್ಗಿದೆವು. ಇಲ್ಲಿ ನನ್ನ ಸಂಬಂಧಿಕರೊಬ್ಬರಿದ್ದಾರೆ  ಎಂದು ಮಡಪ್ಪಾಡಿ ಪ್ರವೀಣ ಹೆಮ್ಮೆಯಿಂದ ಹೇಳಿಕೊಂಡ. ನಾನೂ ಸೇರಿದಂತೆ ಹತ್ತೊಂಬತ್ತು ಮಂದಿಯ ನಮ್ಮ ತಂಡಕ್ಕೆ ಹೊಟ್ಟೆ ತುಂಬಾ ತಿಂಡಿ ಒದಗಿಸಲು ಹೋಟೆಲಿನವರಿಂದಾಗಲಿಲ್ಲ. ಆರಂಭದವರಿಗೆ ಪುಂಡಿ, ದೋಸೆ ಸಿಕ್ಕಿತು. ಕೊನೆಯವರಿಗೆ ದೋಸೆ ಮಾತ್ರ. ಅದೂ ಸಾಕಷ್ಟಿರಲಿಲ್ಲ. ನಿನ್ನೆಯ ಕಲ್ತಪ್ಪದ ನಾಲ್ಕು ತುಂಡುಗಳಿದ್ದವು. ಅದೂ ಕೊನೆಯವರಿಗೆ ದಕ್ಕಲಿಲ್ಲ.

ಕಲ್ತಪ್ಪ ನನಗೆ ತುಂಬಾ ಪ್ರಿಯವಾದ ತಿಂಡಿ. ಅಕ್ಕಿ ಹಿಟ್ಟನ್ನು ಮೆಣಸು, ನೀರುಳ್ಳಿ, ತೆಂಗಿನೆಂಣೆ ಒಗ್ಗರಣೆಯ ಬಾಣಲೆಗೆ ಹೊಯ್ದು, ಕೆಳಗಿನಿಂದ ಧಗಧಗ ಬೆಂಕಿ ಉರಿಸಿ, ಮುಚ್ಚಳದ ಮೇಲೂ ನಿಗಿನಿಗಿ ಕೆಂಡ ಹಾಕಿ ಒಂದಷ್ಟು ಹೊತ್ತು ಬೇಯಿಸಿದರೆ ಕಲ್ತಪ್ಪ ಸಿದ್ಧಗೊಳ್ಳುತ್ತದೆ. ಮಳೆಗಾಲದಲ್ಲಷ್ಟೇ ಲಭ್ಯವಾಗುವ ಕನ್ನಡ ಜಿಲ್ಲೆಯ ಮುಳ್ಳು ಸೌತೆ ಹಾಕಿದರಂತೂ ಆಹಾ ಅದರ ಗಮಗಮ ಕೇಳುವುದೇ ಬೇಡ. ಕಲ್ತಪ್ಪ ನಾಗರಿಕತೆಯ ಹುಚ್ಚು ಹೊಳೆಯಲ್ಲಿ ಕಣ್ಮರೆಯಾಗುತ್ತಿರುವ ಅಪ್ಪಟ ಜಾನಪದೀಯ ತಿಂಡಿ. ಮುಸಲ್ಮಾನರಿಗೆ ಕಲ್ತಪ್ಪವೆಂದರೆ ವಿಶೇಷ ಪ್ರೀತಿ. ಸುಳ್ಯ ಪುತ್ತೂರು ರಸ್ತೆಯ ಅಮ್ಚಮಿನಡ್ಕದ ಕಲ್ತಪ್ಪ ಭವನ ಮತ್ತು ಸುಳ್ಯ ಮಡಿಕೇರಿ ರಸ್ತೆಯ ಕೋಯನಾಡಿನ ಈ ಹೊಟೇಲು ಕಲ್ತಪ್ಪದಿಂದಾಗಿ ಲಾರಿಡ್ರೈವರುಗಳ ವಲಯದಲ್ಲಿ ಜಗತ್ಪ್ರಸಿದ್ಧಿಯನ್ನು ಪಡೆದಿವೆ. ಒಂಟಿ ಬ್ಯಾರಿಯೂ ಅವಭೃತ ಉತ್ಸವವೂ ಎಂಬ ಕತೆಯಲ್ಲಿ ಕಲ್ತಪ್ಪಕ್ಕೆ ವಿಶೇಷ ಮನ್ನಣೆ ನೀಡಿದ್ದೇನೆ. ಇಲ್ಲಿ ಕಲ್ತಪ್ಪ ಅಪರೂಪಕ್ಕೆ ನೋಡುವಾಗ ಆಸೆಯಾಯಿತು. ನಿನ್ನೆಯ ಕಲ್ತಪ್ಪ ಎಂದು ಹೋಟೆಲಿನವನು ಹೇಳಬೇಕಾದರೆ ಅದು ಮೊನ್ನೆ ರಾತ್ರಿ ಸಿದ್ಧಗೊಂಡಿರಬೇಕು. ಹೇಗಿರುತ್ತದೇನೋ ಎಂದು ನಾನು ಮೀನ ಮೇಷ ಎಣಿಸುವಾಗ ಹುಡುಗರು ಅದನ್ನೂ ಮುಗಿಸಿಬಿಟ್ಟರು. ಚಾ ಕುಡಿದು ಬಿಲ್ಲು ಪಾವತಿಸುವಾಗ ಮಡಪ್ಪಾಡಿಯ ನೆಂಟನಲ್ಲಿ ಹೇಳಿದೆ.  ತಿಂಡಿ ಖಾಲಿಯಾಯಿತಲ್ಲಾ ? ಬಾಗಿಲು ಹಾಕಿ ಬಿಡು. ನಾಳೆ ತೆರೆದರೆ ಸಾಕು.  ಅವನು ಪೆಚ್ಚಾಗಿ ತನ್ನ ತಂಬಾಕುರಂಜಿತ ದಂತ ಪಂಕ್ತಿಗಳನ್ನು ಪ್ರದರ್ಶಿಸುತ್ತಾ ನಿಂತುಬಿಟ್ಟ.

ಅಷ್ಟರಲ್ಲಿ ಪಾಪ್ಯುಲರ್‌ ಬೇಕರಿಯ ವ್ಯಾನು ಬಂತು. ಮಕ್ಕಳು ಅದನ್ನು ನಿಲ್ಲಿಸಿ ಬ್ರೆಡ್ಡು ಕೊಳ್ಳ ತೊಡಗಿದವು.  ಹಾಳು ಬ್ರೆಡ್ಡು ಯಾಕಯ್ಯ ? ಊಟ ಹೇಗೂ ನಿನ್ನ ಮನೆಯಲ್ಲಿ ತಾನೆ! ಎಂದು ಪಾವನಕೃಷ್ಣನನ್ನು ಪ್ರಶ್ನಿಸಿದೆ. ನನ್ನ ಐಡಿಯಾ ಇದ್ದದ್ದು ಹಾಗೇ ಸರ್‌. ಜಲಪಾತದಿಂದ ನಾಲ್ಕು ಕಿ. ಮೀ. ಒಳ ಹಾದಿಯಲ್ಲಿ ನಡೆಯಬೇಕಾಗುತ್ತದೆ. ಅಲ್ಲಿಂದ ಸಂಪಾಜೆಗೆ ಹತ್ತಿರವಾಗುತ್ತದೆ. ಅಲ್ಲಿಗೆ ಹೋದರೆ ಕೋಯನಾಡಿನಲ್ಲಿ ನಮ್ಮ ಸ್ನಾನದ ಪ್ರೋಗ್ರಾಂ ಇಲ್ಲವಾಗುತ್ತದೆ. ಇವರ್ಯಾರೂ ಕೋಯನಾಡು ಪ್ರೋಗ್ರಾಂ ಬಿಡಲು ಒಪ್ಪುತ್ತಿಲ್ಲು ಎಂದು ಪಾವನಕೃಷ್ಣ ತನ್ನ ಅಸಹಾಯಕತೆ ತೋಡಿಕೊಂಡ. ನಾನು ಪೆಚ್ಚಾದೆ.

ನನಗೆ ಮಧ್ಯಾಹನಕ್ಕೆ ಬೇರೇನಾದರೂ ಬೇಕೆನಿಸಿತು. ತೆರೆದಿರುವ ಒಂದೇ ಹೊಟೇಲು ಈಗಲೇ ಮುಚ್ಚುವ ಸ್ಥತಿಯಲ್ಲಿದೆ. ಏನು ಮಾಡಲಿ ಎಂದು ಅಸಹಾಯಕತೆಯಿಂದ ಅತ್ತಿತ್ತ ನೋಡುವಾಗ ಬಸ್‌ಸ್ಟ್ಯಾಂಡಿನಲ್ಲಿ ಅಂಗಡಿಯೊಂದು ಗೋಚರಿಸಿತು. ಅಲ್ಲಿಂದ ಸ್ವೀಟ್ಸು ಮತ್ತು ಖಾರ ಕಟ್ಟಿಸಿಕೊಂಡೆ. ನನ್ನ ಜತೆಯಲ್ಲೇ ಇದ್ದ ಶಿವಪ್ರಸಾದನಿಗೆ ಆ ಪೊಟ್ಟಣ ನೀಡಿದೆ. ಅವ ಖುಷಿಯಿಂದ ಅದನ್ನು ತೆಗೆದುಕೊಂಡ.

ಹಾಳೆ ಟೋಪಿ ಅಂಡ್‌ ಸನ್ಸ್‌

ಈ ಶಿವಪ್ರಸಾದ ಒಳ್ಳೆಯ ಹುಡುಗ. ಒಳ್ಳೆಯವರೆಲ್ಲಾ ಬುದ್ಧಿವಂತರಾಗಲೇಬೇಕೆಂದೇನೂ ಇಲ್ಲ. ಕಾಲೇಜಲ್ಲಿ ಸಭೆ ಸಮಾರಂಭಗಳಲ್ಲಿ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡಲು ಸಾಮ, ದಾನ, ಭೇದ, ದಂಡ ಹೀಗೆ ಚತುರೋಪಾಯಗಳನ್ನು ಬಳಸಬೇಕಾಗುತ್ತದೆ. ಇವ ಹಾಗಲ್ಲ.

ಎಲ್ಲಾ ಸಮಾರಂಭಗಳಿಗೂ ಇವನೊಬ್ಬ ಪರಮನೆಂಟು ಅಸೆಟ್ಟು! ಸಮಾರಂಭದ ಮಧ್ಯೆ ಎದ್ದು ಹೋಗಿ ಆಭಾಸ ಉಂಟು ಮಾಡುವವನಲ್ಲ. ಇವನ ತಲೆಯೊಳಗೆ ವಿಷಯಗಳು ಹೋಗುವ ಬಗ್ಗೆ ನನ್ನಲ್ಲಿ ಅನುಮಾನಗಳಿವೆ. ಆದರೆ ಇವನ ನಿಷ್ಠೆಯನ್ನು ಪ್ರಶ್ನಿಸುವಂತೆಯೇ ಇಲ್ಲ.

ಉದ್ಯಮ ಅರ್ಥಶಾಸ್ತ್ರದ ಬಗ್ಗೆ ಈ ಮಲೆನಾಡ ರೈತ ಕುಟುಂಬದ ಮಕ್ಕಳಿಗೆ ತಿಳಿಹೇಳುವುದು ಒಂದು ಭಗೀರಥ ಸಾಹಸ. ಕೈಗಾರಿಕೆಗಳೇ ಇಲ್ಲದ ಊರಲ್ಲಿ, ಕೈಗಾರಿಕೆಗಳನ್ನೇ ನೋಡದ ಮಕ್ಕಳಿಗೆ ಕೈಗಾರಿಕೆಗಳ ಬಗ್ಗೆ ನಾನು ಹೇಳಲೇಬೇಕು ! ಅದಕ್ಕಾಗಿ ಕಾಲ್ಪನಿಕ ಉದಾಹರಣೆಯೊಂದನ್ನು ನೀಡಿದ್ದೆ. ಅದರಲ್ಲಿ ನಮ್ಮ ಶಿವಪ್ರಸಾದ ಹಾಳೆಟೋಪಿ ಉದ್ದಿಮೆಯೊಂದನ್ನು ಸುಬ್ರಹ್ಮಣ್ಯದಲ್ಲಿ ಆರಂಭಿಸುತ್ತಾನೆ. ಅಲ್ಲಿಗೆ ಯಾವ್ಯಾವುದೋ ಊರುಗಳಿಂದ ಬಂದು ನುಣ್ಣಗೆ ತಲೆ ಬೋಳಿಸಿಕೊಂಡು ಹೋಗುವ ಭಕ್ತರು ಶಿವಪ್ರಸಾದ ತಯಾರಿಸುವ ಬಣ್ಣಬಣ್ಣದ ವೈವಿಧ್ಯಮಯ ಟೋಪಿಗಳನ್ನು ಕೊಂಡುಕೊಳ್ಳುತ್ತಾರೆ. ಶಿವಪ್ರಸಾದ ಹರಿಕೆ ಮಂಡೆಯವರಿಗೆ ಟೋಪಿ ಹಾಕುತ್ತಾನೆ ಅ ಅವನ ಕಂಪೆನಿಯ ಹೆಸರು ಶಿವಪ್ರಸಾದ ಅಂಡ್‌ ಸನ್ಸ್‌. ಅರೆಕಾನಟ್‌ ಲೀಪ್‌ ಕಫ್‌ ಕ್ಯಾಪ್‌ ಇಂಡಸ್ಟ್ರೀಸ್‌ ಸುಬ್ರಹ್ಮಣ್ಯ.

ಪದೇ ಪದೇ ಇದೇ ಉದಾಹರಣೆ ನೀಡುವಾಗ ಶಿವಪ್ರಸಾದನಿಗೆ ಸಂತೋಷವಾಗುತ್ತಿದ್ದರೂ ಮಹಿಳಾಮಣಿಯರ ಮುಖ ಬಾಡುತ್ತಿತ್ತು. ನೀವು ಮಹಿಳಾ ದ್ವೇಷಿ. ಮಹಿಳೆಯರ್ಯಾಕೆ ಉದ್ಯಮ ಮಾಡಬಾರದು ? ಎಂದು ರಮ್ಯಾ ಕೇಳಿದಳು. ತಾಹಿರಾ, ಶಹನಾಜ್‌, ನಿರಂಜಿನಿ, ಮಾಲತಿ ಮತ್ತು ರೇಶ್ಮಾ ಅದಕ್ಕೆ ದನಿಗೂಡಿಸಿಬಿಟ್ಟರು. ಅಂದು ತರಗತಿಯಲ್ಲಿ ಹುಟ್ಟಿಕೊಂಡವು ಮೂರು ಉದ್ದಿಮೆಗಳು. ಲೀಲಾ ಪಿಕಲ್‌ ತೊಡಿಕ್ಕಾನ, ಆಶಾ ಪಪ್ಪಡಂ ನಾಪೊಕ್ಲು, ಗಾಯತ್ರಿ ಶೆಂಡಿಗೆ ಮಡಿಕೇರಿ. ಈಗ ಹುಡುಗರಿಂದ ಪ್ರತಿಭಟನೆ ಬಂತು.  ನೀವು ಮಹಿಳಾ ಪಕ್ಷಪಾತಿ ಸರ್‌. ನಮಗೆ ಒಂದೇ ಇಂಡಸ್ಟ್ರೀ ನೀಡಿ ಹುಡುಗಿಯರಿಗೆ ಮೂರು ದಯಪಾಲಿಸಿದ್ದೀರಿ. ನಾನಾಗ ಆದರೆ ಅವು ಗುಡಿಕೈಗಾರಿಕೆಗಳು. ನೀವೆಲ್ಲಾ ಶಿವಪ್ರಸಾದನ ಲಾರ್ಜ್ ಸ್ಕೇಲ್‌ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಸೇರಿಕೊಂಡರಾಯ್ತಪ್ಪ  ಎಂದು ಸಮಜಾಯಿಸಿ ನೀಡಿದೆ. ಶಿವಪ್ರಸಾದ ತಾನೊಬ್ಬ ಬಾಸ್‌ ಎಂಬಂತೆ ಬೀಗಿ ಬಾಯಿಯನ್ನು ಊರಗಲ ಮಾಡಿದವನು ತರಗತಿ ಮುಗಿಯುವವರೆಗೂ ಮುಚ್ಚಲು ಮರೆತ!.

ಮೊದಲ ವರ್ಷ ಅವ ನನ್ನ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಎರಡನೆಯ ವರ್ಷ ಸ್ವಲ್ಪ ಧೈರ್ಯದಿಂದ ಓಡಾಡತೊಡಗಿದ. ಈ ವರ್ಷ ಅವನು ನಿಂತು ಮಾತಾಡುವಷ್ಟು ಧೈರ್ಯ ಬೆಳೆಸಿಕೊಂಡ. ಅವನೆಲ್ಲಾದರೂ ಹಲ್ಲು ಕಿರಿಯದೆ ತಲೆತಗ್ಗಿಸಿ ನಡೆದರೆ ಬೆನ್ನಿಗೊಂದೇಟು ಹಾಕಿ ಏನಿಯಾ ಅಂಡೆ ಎನ್ನುವುದು ನನ್ನ ರೂಢಿ. ಮೊನ್ನೆ ನಾಟಿಕಲ್ಲಿನ ಚಾರಣಕಾಲದಲ್ಲಿ ಹಾಕಿದ್ದ ಉಂಗುಷ್ಠ ಕಿತ್ತು ಹೋದ ಚಪ್ಪಲಿಯನ್ನೇ ಅವನು ಇಂದೂ ಹಾಕಿದ್ದ. ಅವನ ಹೆಗಲಿಗೆ ಕೈ ಹಾಕಿ ಚಪ್ಪಲಿ ಬದಲಾಯಿಸಿಲ್ವಾ ಹಣ ಕೊಡುತ್ತೇನೆ. ಹೊಸದು ತೆಗೆದುಕೋ  ಎಂದೆ. ಅವನೋ ಮಹಾ ಸ್ವಾಭಿಮಾನಿ. ಛೆ!ಛೆ! ಹೊಲಿಸಲು ಪುರುಸತ್ತು ಸಿಗಲಿಲ್ಲ. ಈಗ ಅಡಿಕೆಯ ರೇಟು ಚೆನ್ನಾಗಿದೆ. ಮುಂದಿನ ಚಾರಣಕ್ಕಾಗುವಾಗ ಹೊಸ ಚಪ್ಪಲು ಹಾಕಿಕೊಂಡು ಬರುತ್ತೇನೆ ಎಂದ.

ದೇವರ ಗುಂಡಿಗೆ ಹೋಗುವಾಗ ನಾವು ಚಕ್ರವರ್ತಿಗಳಾಗಿದ್ದೆವು. ಈಗ ಕೋಯನಾಡಿನಿಂದ ಕಲ್ಲಾಳಕ್ಕೆ ಕಾಲಾಳುಗಳ ದಂಡು. ಕಲ್ಲಾಳಕ್ಕೆ ಬೈಕು, ಫೋರ್‌ ವೀಲು ಜೀಪು ಹೋಗಬಹುದು.

ರಸ್ತೆಯಿರುವುದರಿಂದ ನಡಿಗೆ ಆರಾಮವಾಗಿರಬಹುದೆಂದು ನಾನು ಅಂದುಕೊಂಡಿದ್ದೆ. ಅದು ಪರ್ವತದ ಮೇಲಿರುವ ಪ್ರದೇಶ. ನಮ್ಮದು ಇಂದು ಕೂಡಾ ಆರೋಹಣ ಅ ಆರಂಭದಲ್ಲಿ ರಬ್ಬರ್‌ ತೋಟದ ನಡುವೆ ದಾರಿ. ಒಂದಷ್ಟು ದೂರ ಜುಳು ಜುಳು ಹರಿಯುವ ಪುಟ್ಟ ಹೊಳೆಯ ನಿನಾದ. ಏರುತ್ತಾ ಹೋದಂತೆ ಇಕ್ಕೆಲಗಳಲ್ಲಿ ದೊಡ್ಡ ಕಾಡು. ಈ ಹಾದಿ ಮುಗಿಯುವುದೇ ಇಲ್ಲವೇನೋ ಎಂಬ ಆತಂಕ ಮೂಡುತ್ತದೆ.

ಏರು ರಕ್ತದೊತ್ತಡದ ನನಗೆ ಈ ಏರುವಿಕೆಯಿಂದ ತಲೆ ಗಿರ್ರನೆ ತಿರುಗತೊಡಗಿತು. ರಕ್ತದೊತ್ತಡದ ತುರೀಯಾವಸ್ಥೆಗೆ ಬ್ರೆಯಿನ್ನು ಹ್ಯಾಮರೇಜೆಂದು ಹೆಸರು ಅ ಇನ್ನು ನಡಿಗೆ ಸಾಧ್ಯವೇ ಇಲ್ಲವೆಂದಾಯಿತು. ಕಣ್ಣು ಮಂಜಾಗತೊಡಗಿತು. ಹಣೆ ವಿಪರೀತ ಬೆವರಿತು. ಹೇಳಲಾರೆನು, ಹೇಳದುಳಿಯಲಾರೆನು ಅರಸ್ತೆಯ ಮಧ್ಯದಲ್ಲೇ ಕೂತು ಬಿಟ್ಟೆ. ನಡೆದು ಅಭ್ಯಾಸವೇ ಇಲ್ಲದ ಫೈಸಲು, ವಿನಯ, ಮಡಪ್ಪಾಡಿ ಬಹಳ ಹಿಂದಿದ್ದರು. ನಿನ್ನೆ ರಾತ್ರಿ ಸುಖ ನಿದ್ದೆ ಬರುತ್ತಿದ್ದರೆ ಇಂದು ಈ ಪರಿಸ್ಥತಿ ಎದುರಾಗುತ್ತಿರಲಿಲ್ಲ.

ರೋಟರಿ ಅಧ್ಯಕತೆಯಿಂದಾಗಿ ವಿಪರೀತ ಕೆಲಸದೊತ್ತಡ. ಶತಮಾನಗಳಿಂದ ತೊಂದರೆಗೊಳಗಾಗಿದ್ದ ದೊಡ್ಡೇರಿ ಬುಡಕಟ್ಟು ಜನಾಂಗದವರಿಗಾಗಿ ರೋಟರಿ ಕ್ಲಬ್ಬು ಹದಿನೈದು ಲಕ ವೆಚ್ಚದ ತೂಗುಸೇತುವೆ ನಿರ್ಮಾಣ ಮಾಡಬೇಕಿತ್ತು. ಕ್ಲಬ್ಬು ನಡೆಸುತ್ತಿರುವ ಶಾಲೆಗಾಗಿ ಹದಿನೈದು ಲಕ್ಷದ ರಜತಮಹೋತ್ಸವ ಭವನ ನಿರ್ಮಾಣವಾಗಬೇಕಿತ್ತು. ವಾರಕ್ಕೊಂದು ಕಾರ್ಯಕ್ರಮ ಕ್ಲಬ್ಬಲ್ಲಿ ನಡೆಸಲೇಬೇಕು. ಕಾಲೇಜಿನ ಕರ್ತವ್ಯಗಳು ಎಲ್ಲಕ್ಕಿಂತ ಮುಖ್ಯ. ಹಣ, ಸಮಯ ಎರಡೂ ಇಲ್ಲದ ಒದ್ದಾಟ. ಈ ನಡುವೆ ರಿಸರ್ಚು, ಕತೆ, ಲೇಖನ, ಕೇತ್ರಾಧ್ಯಯನವೆಂದು ಮಾರ್ಗದರ್ಶನಕ್ಕೆ ಬರುವವರು. ಹೆಸರು ಯಾರಿಗೋ? ಸಮಾಜಸೇವೆ ಎಂಬುದು ಥ್ಯಾಂಕ್ಲೆಸ್ಸ್‌ ಜಾಬ್‌ ಎಂದು ಹಾಸ್ಯ ಚಕ್ರವರ್ತಿ ಬೀಚಿ ಸಂಪಾಜೆ ದೇವಿಪ್ರಸಾದರಲ್ಲಿ ಹೇಳಿದ್ದನ್ನು ಅವರು ಸಂದರ್ಭ ಸಾಧಿಸಿ ಅನೇಕ ಬಾರಿ ನನ್ನಲ್ಲಿ ಹೇಳಿದ್ದರು. ಅದು ನಿಜವೇ. ಆದರೆ ಬಿಟ್ಟೆನೆಂದರೂ ಬಿಡದೀ ಮಾಯೆ !

ದಾರಿಯಲ್ಲಿ ನಿವೃತ್ತ ಕರ್ನಲ್ಲು ಒಬ್ಬರು ಎದುರಾದರು. ಏನು, ಎತ್ತ ವಿಚಾರಿಸಿ ಗುಡ್‌. ಕಲ್ಲಾಳ ಜಲಪಾತದ ಹಾದಿಯ ಮುಳ್ಳು, ಪೊದೆ ನಿನ್ನೆ ಸವರಿದ್ದೇವೆ. ಇಳಿಯುವಾಗ ಎಚ್ಚರವಹಿಸಿ. ಎಜುಕೇಶನಲ್ಲು ಟೂರು ಎಂದು ಬಸ್ಸ್‌ ಪ್ರಯಾಣ ಮತ್ತು ಶಾಪಿಂಗ್‌ನಲ್ಲೇ ದಿನ ಮುಗಿಸುವುದಕ್ಕಿಂತ ನಮ್ಮ ಪರಿಸರವನ್ನು ತಿಳಿದುಕೊಳ್ಳುವುದು ಎಷ್ಟೋ ಮೇಲು. ಗುಡ್‌ಲಕ್ ಎಂದು ಕೈ ಕುಲುಕಿದರು.

ಕಲ್ಲಾಳದ ಹಾದಿಯ ಇಕ್ಕೆಲಗಳ ಬೃಹದಾಕಾರದ ವೃಕಗಳು ಮಾನವನ ಕುಬ್ಜತೆಯ ಅರಿವು ಮೂಡಿಸುತ್ತವೆ. ಇಲ್ಲಿ ಕೊಲೆ ನಡೆದರೆ ಪತ್ತೆಯಾಗುವ ಸಂಭವವೇ ಇಲ್ಲ. ಕೆಲವು ಪ್ರದೇಶಗಳು ಸುಯಿಸಾಯಿಡಲ್ಲು ಪಾಯಿಂಟ್ಸು! ಮುಗಿಲಿಗೆ ಮೊಗವೊಡ್ಡಿ ಅಧರಾಮೃತ ಪಾನ ಸುಖದಲ್ಲಿ ಮೈಮರೆತಿರುವ ದೈತ್ಯಾಕಾರದ ವೃಕಗಳ ನಡುವಣ ಗ್ಯಾಪಿನಲ್ಲಿ ಮೊನ್ನೆ ಮೊನ್ನೆ ನಾವು ಕುಣಿದು ಕುಪ್ಪಳಿಸಿ ಆನಂದಿಸಿದ್ದ ನಾಟಿಕಲ್ಲು ಪರ್ವತ ಕಾಣಸಿಕ್ಕಿತು. ದೂರದ ಬೆಟ್ಟ ನುಣ್ಣಗೆ ! ‘ನಾವೀಗ ಅಷ್ಟೇ ಎತ್ತರದಲ್ಲಿದ್ದೇವೆ’ ಎಂದು ನಾಯಕ ಪಾವನಕೃಷ್ಣ ಘಂಟಾಫೋಷವಾಗಿ ಸಾರಿದ. ರಸ್ತೆಯಿರದಿರುತ್ತಿದ್ದರೆ ಕಲ್ಲಾಳ ಆರೋಹಣವು ನಾಟಿಕಲ್ಲು ಪರ್ವತಾರೋಹಣದ ಹತ್ತು ಪಟ್ಟು ಅಧಿಕ ಸಾಹಸಮಯವಾಗುತ್ತಿತ್ತು.

ಎಲ್ಲರೂ ಏದುಸಿರು ಬಿಡುತ್ತಿದ್ದುದರಿಂದ ಪುಟ್ಟ ರೇಡಿಯೋ ಹೊರತೆಗೆದೆ. ನಮಗೆ ಸುಳ್ಯದ ಭಾಗದವರಿಗೆ ಮಡಿಕೇರಿ ಸ್ಟೇಶನೆನಂದರೆ ಅಚ್ಚುಮೆಚ್ಚು. ಒಳ್ಳೆಯ ಕಾರ್ಯಕ್ರಮಗಳು ಮತ್ತು ಸ್ಪಷ್ಟತೆ ಅದಕ್ಕೆ ಕಾರಣ. ನಮ್ಮ ಕಾಲೇಜಲ್ಲೇ ಕಲಿತು ಕನ್ನಡ ಓದಿ, ಪುಟ್ಟಕ್ಕ ಕಾದಂಬರಿ ಬರೆದ ಭಾಗವತ ಸಂಪಾಜೆ ಸುಬ್ರಾಯ ಅಲ್ಲಿ ಉದ್ಯೋಗಿಯಾಗಿ ಕೊಡಗರಿಗೂ ಯಕಗಾನದ ಹುಚ್ಚು ಹಿಡಿಸಿದ್ದ. ಮಡಿಕೇರಿ ಸ್ಟೇಶನಿನ್ನಿಂದ ಆಗ ಮಕ್ಕಳ ಯಕ್ಷಗಾನ ಪ್ರಸಾರವಾಗುತ್ತಿತ್ತು. ಪ್ರಸಂಗ ಸುಧನ್ವಾರ್ಜುನ. 1980ರಲ್ಲಿ ಆ ಪ್ರಸಂಗವನ್ನು ರಾಜ ರಾಜೇಶ್ವರಿ ಹೆಮ್ಮಕ್ಕಳ ತಂಡಕ್ಕೆ ನಾಟ್ಯಗುರುವಾಗಿ ನಾನು ದಿಗ್ದರ್ಶಿಸಿದ್ದೆ. ಡಾಜ ದಾಮ್ಮೆ ಸುಧನ್ವನಾಗಿ ನಾನು ಅರ್ಜುನನಾಗಿ ಕಳೆದೆರಡು ದಶಕಗಳಲ್ಲಿ ರಂಗದಲ್ಲಿ ಮಿಂಚಿದ್ದೆವು. ಆ ಪ್ರಸಂಗದ ಅರ್ಜುನ ನನ್ನ ಇಷ್ಟದ ಪಾತ್ರಗಳಲ್ಲೊಂದು. ಕುರುಕೇತ್ರ ಯುದ್ಧದಲ್ಲಿ ಮಗ ಅಭಿಮನ್ಯುವನ್ನು ಕಳಕೊಂಡ ಅರ್ಜುನ ಅಶ್ವಮೇಧವೆಂಬ ಅರ್ಥಹೀನ ರಕ್ತಪಾತದ ಹೆಸರಲ್ಲಿ ಅಭಿಮನ್ಯುವಿನದೇ ಪ್ರಾಯದ ಸುಧನ್ವನನ್ನು ಎದುರಿಸಬೇಕಾದ ಮತ್ತು ಕೊಲ್ಲಲೇ ಬೇಕಾದ ಅನಿವಾರ್ಯ ಸಂದರ್ಭವದು. ಮನಸ್ಸಿಗೆ ಒಗ್ಗದ, ಧರ್ಮದ ಹೆಸರಲ್ಲಿ ಮಾಡಬೇಕಾದ ಅಕೃತ್ಯವನ್ನು ಸಮರ್ಥಿಸಿಕೊಳ್ಳಲಾಗದ ತೊಳಲಾಟ ಎಲ್ಲರ ಜೀವನದ ಅನುಭವ ಎಂಬ ಕಾರಣಕ್ಕೆ ನನಗದು ಪ್ರಿಯವಾಗಿತ್ತು.

ಏರುವಿಕೆ ನಿಂತು ಮಟ್ಟಸವಾದ ಜಾಗ ಎದುರಾಯಿತು. ತೋಟ ಮತ್ತು ಮನೆಯೊಂದು ಕಾಣಿಸಿತು. ಅದರ ಯಜಮಾನ ಒಬ್ಬಂಟಿಯಾಗಿ ಪತ್ನೀಪೀಡೆಯಿಲ್ಲದೆ ಹಾಯಾಗಿ ಪರ್ವತದ ಪರಿಶುದ್ಧ ಗಾಳಿ ಸೇವಿಸುತ್ತಿದ್ದರು. ನಮಗೆ ಹೊಟ್ಟೆ ತುಂಬಾ ಕೊಟ್ಟರು, ತಣ್ಣೀರು. ಔಷಧ ಜಾಹನವೀತೋಯಂ! ನಾಲ್ಕು ಹೆಜ್ಜೆ ಮುಂದಕ್ಕೆ ಕ್ರಮಿಸಿದರೆ ಬಲಬದಿಯಲ್ಲಿ ಮರದ ಮೇಲೊಂದು ಹಲಗೆ  ಕಲ್ಲಾಳಕ್ಕೆ ದಾರಿ  ಎಂದು ತೋರಿಸುತ್ತಿತ್ತು. ಕೆಳಗೆಲ್ಲೋ ಧುಮ್ಮಮಿಕ್ಕುವ ಜಲಪಾತದ ಸದ್ದು ನಮ್ಮ ಆವರೆಗಿನ ದಣಿವನ್ನು ಹೊಡೆದಟ್ಟಿ ಬಿಟ್ಟಿತು.

ನಿತ್ಯೋತ್ಸವದಲ್ಲಿ ನೆನಪುಗಳು

ಜಲಪಾತಕ್ಕೆ ಮೊದಲೇ ದರ್ಶನವಾಗುತ್ತದೆ ಕಲ್ಲಾಳ ಹೊಳೆಯದ್ದು. ದಟ್ಟ ಕಾಡಿನ ಮಧ್ಯೆ ಹರಿಯುವ ಶುಭ್ರ ಶ್ವೇತ ಜಲ. ಒಮ್ಮಮಿಂದೊಮ್ಮೆಲೇ ಎದುರಾಗುತ್ತದೆ ನೀರು ಧುಮ್ಮಮಿಕ್ಕುವ ಕಡಿದಾದ ಬಂಡೆ. ಅದುವೇ ಜಲಪಾತದ ತುದಿ. ಅಲ್ಲಿ, ಎಡಕ್ಕೆ, ಬಲಕ್ಕೆ, ಹಿಂದಕ್ಕೆ, ಮುಂದಕ್ಕೆ, ದೂರಕ್ಕೆ ಎಲ್ಲೆಲ್ಲೂ ಹಸಿರೋ ಹಸಿರು. ನಿತ್ಯೋತ್ಸವ !

ಜಲಪಾತದ ಬುಡಕ್ಕಿಳಿಯುವುದು ರೋಮಾಂಚಕ ಅನುಭವ. ಅದು ಅತ್ಯಂತ ಅಪಾಯಕಾರಿ ಪ್ರಪಾತ. ನಾಟಿಕಲ್ಲು ಪರ್ವತದಿಂದ ಬಾಣ ಮತ್ತು ಅರ್ಬಿ ಜಲಪಾತಗಳಿಗಿಳಿಯುವಾಗ ಆಧಾರಕ್ಕೆ ಗಿಡ, ಪೊದೆ, ಬಳ್ಳಿಗಳು ಸಿಗುತ್ತವೆ. ಇಲ್ಲಿರುವುದು ಸಣ್ಣಸಣ್ಣ ಬಂಡೆಗಳು. ಎಲ್ಲೋ ಅಪರೂಪಕ್ಕೆ ಒಂದೆರಡು ಗಿಡಗಳು. ಪಾವನಕೃಷ್ಣ ಹಿಂದಿನಿಂದ, ಶಿವಪ್ರಸಾದ ಮುಂದಿನಿಂದ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸುತ್ತಾ ಜಲಪಾತದ ಬುಡಕ್ಕೆ ತಂದು ಮುಟ್ಟಿಸಿದರು. ನೀರು ಕೋರೈಸುತ್ತಿತ್ತು. ಆ ಅಸಾಧ್ಯ ಚಳಿಯಲ್ಲೂ ಪಡ್ಡೆಗಳು ನೀರಿಗಿಳಿದಿದ್ದರು. ಜಲಪಾತದ ಬುಡದಿಂದ ಸ್ವಲ್ಪ ದೂರದಲ್ಲಿ ಕಂದರ, ಕಾನನ, ಅದರಾಚೆ ಬಯಲು ಮತ್ತು ತೋಟ. ಅಲ್ಲೇ ಒಂದು ರಾಶಿ ಕಾಣುತ್ತದಲ್ಲಾ ಹೈಗೆಯದ್ದುದ ಅಲ್ಲೇ ನಮ್ಮ ಮನೆ ಎಂದು ಪಾವನಕೃಷ್ಣ ಬೆರಳು ತೋರಿಸಿದ. ಅವನ ಬೆರಳಿನ ತುದಿಯನ್ನು ನೋಡಿ ಮಕ್ಕಳು ‘ಹೌದು ಹೌದು’ ಎಂದರು. ನನ್ನಿಂದ ಪ್ರತಿಕ್ರಿಯೆ ಬಾರದಿದ್ದಾಗ ಪಾವನಕೃಷ್ಣ ಮತ್ತೊಮ್ಮೆ ತೋರಿಸಿದ. ಅವನಿಗೆ ಬೇಸರವೇಕೆಂದು ನಾನೂ ಕೂಡಾ ಹೌದೆಂದೆ. ಏನಾದರೇನು ? ಇಂದು ಮಧ್ಯಾಹ್ನ ಅವನ ಮನೆಯೂಟದ ಯೋಗ ನಮಗಿರಲಿಲ್ಲವಲ್ಲಾ !

ಕಲ್ಲಾಳದ ಜಲಪಾತ ಮನಮೋಹಕ. ಅದಕ್ಕೆ ಬಂಡೆಯಿಂದ ದೂರಕ್ಕೆ ಧುಮ್ಮಮಿಕ್ಕುವುದಕ್ಕೆ ಮನಸ್ಸೇ ಇಲ್ಲ. ಉದ್ದಕ್ಕೂ ಬಂಡೆಯ ಮೇಲಿಂದ ವೈಯ್ಯಾರದಿಂದ ಹರಿದು ಬರುತ್ತದೆ. ಕೆಲವೆಡೆ ಬಂಡೆಯ ಪೀನಮಧ್ಯಾಕೃತಿಗಳಲ್ಲಿ ಹೊರಧುಮ್ಮಕ್ಕುವುದನ್ನು ಬಿಟ್ಟರೆ ಅದು ಪ್ರಿಯಕರನ ಆಲಿಂಗನದಿಂದ ಮುಕ್ತಳಾಗಲೊಲ್ಲದ ಪ್ರೇಯಸಿಯಂತೆ ಅ ಪಡ್ಡೆಗಳು ಬಂಡೆಯ ಬಲಬದಿಯಿಂದ ಮೇಲಕ್ಕೇರಿ ಜಲಪಾತದ ತುದಿ ಮುಟ್ಟಲು ಯತ್ನಿಸುತ್ತಿದ್ದರು. ಶಿವಪ್ರಸಾದ ಕನಿಷ್ಠ ಉಡುಪಿನಿಂದಾಗಿ ಥೇಟ್‌ ಆದಿ ಮಾನವನ ಗೆಟಪ್ಪಿನಲ್ಲಿ ಕಂಗೊಳಿಸುತ್ತಿದ್ದ. ಅವರ ಸಾಹಸವನ್ನು ನಾನು ಮಾಡುವಂತಿರಲಿಲ್ಲ. ಕನ್ನಡಕ ಹಾಕದೆ ಮೇಲೇರುವಂತಿಲ್ಲ. ಕನ್ನಡಕ್ಕಕ್ಕೇನಾದರೂ ಆದರೆ ಮತ್ತೆ ಕೆಳಗಿಳಿಯುವಂತಿಲ್ಲ. ತ್ರಿಶಂಕು ಸ್ವರ್ಗ ಅ ತೀರಾ ಮೇಲೇರಿದಾಗ ಎಲ್ಲಾದರೂ ಜಾರಿ ಬಿದ್ದರೆ ಈ ಪಡ್ಡೆಗಳು ನನ್ನ ಎಲುಬುಗಳನ್ನು ಹುಡುಕಬೇಕಾಗುತ್ತದೆ. ಅವರಿಗ್ಯಾಕೆ ಆ ಸಂಕಷ್ಟ ! ಸ್ವಲ್ಪವೇ ಮೇಲೇರಿ ನೀರು ಬಂಡೆಯಪ್ಪುಗೆಯಿಂದ ಹೊರಧುಮ್ಮಮಿಕ್ಕುವಲ್ಲಿ ತಲೆಯೊಡ್ಡಿದೆ ಮೈಯೊಡ್ಡಿದೆ ಮೈಮರೆತೆ.

ಸುಳ್ಯದಲ್ಲೇ ಕಳೆದುಹೋದ ಅಷ್ಟೂ ವರ್ಷಗಳು ನೆನಪಾದವು. ಹೀಗೆ ನಿಸರ್ಗದೊಡನೆ ಅನುಸಂಧಾನಕ್ಕೆ ಅವಕಾಶಗಳೇ ಸಿಕ್ಕಿರಲಿಲ್ಲ. ಈಗ ದೆಹಲಿಯಲ್ಲಿರುವ ಜೀವದ ಗೆಳೆಯ ಡಾ|| ಪುರುಷೋತ್ತಮ ಬಿಳಿಮಲೆಯ ಮನೆಯಿರುವುದು ಬಂಟಮಲೆಯ ಸೆರಗಿನಲ್ಲಿ. ಪಂಜದಿಂದ ಅಲ್ಲಿಗೊಮ್ಮೆ ನಡಕೊಂಡು ಹೋಗಿದ್ದೆ. ಇನ್ನೊಮ್ಮೆ ವಳಲಂಬೆಯಿಂದ ಏಕಾಂಗಿಯಾಗಿ ಬಂಟಮಲೆ ಹತ್ತಿ ಬಿಳಿಮಲೆಗೆ ಇಳಿದಿದ್ದೆ. ಬಡ್ಡಡ್ಕದಲ್ಲಿ ಅಪ್ಪಯ್ಯ ಗೌಡರೆಂಬ ಖ್ಯಾತ ಮೃಗಯಾವಿಹಾರಿ ಒಬ್ಬರಿದ್ದರು. ಅವರ ಅನುಭವಗಳ ಬಗ್ಗೆ ಕೃತಿ ರಚಿಸುವ ಉದ್ದೇಶದಿಂದ ಮೂರು ಬಾರಿ ಬಡ್ಡಡ್ಕಕ್ಕೆ ಹೋಗಿದ್ದೆ. ಆಗ ಬಡ್ಡಡ್ಕಕ್ಕೆ ವಾಹನಗಳಿಲ್ಲದ್ದುದರಿಂದ ಚಾರಣ ಅನಿವಾರ್ಯವಾಗಿತ್ತು. ಕೃತಿ ರಚನೆಗಾಗಿ ಅವರು ಬೇಟೆಯಾಡಿದ್ದ ತಲಕಳ ಗುಡ್ಡ, ಭೂತಕಲ್ಲು ಗುಡ್ಡ ಮತ್ತು ರಂಗತ್ತಮಲೆ ಗುಡ್ಡ ಅಲೆದಿದ್ದೆ. ಬಡ್ಡಡ್ಕ ಇಂದಿರಾ ಟೀಚರು ಆ ಅನುಭವನಗಳನ್ನು ಪ್ರಕಟಿಸಿದ್ದರು. ಹಾಗೆ ಹೊರ ಬಂದ ಕೃತಿ ಶಿಕಾರಿಯ ಸೀಳುನೋಟ. ಅದನ್ನು ಓದಿದವರಿಗೆಲ್ಲಾ ಅದು ಇಷ್ಟವಾಗಿತ್ತು.

ಐದು ವರ್ಷಗಳ ಹಿಂದೆ ಮಂಡೆಕೋಲಿನ ಯುವಕರನ್ನು ಸಂಘಟಿಸಿ ಮಂಚ, ಶಶಿ, ಮಾವಂಜಿ, ಮೀನಗದ್ದೆ, ಕಣಮರಡ್ಕ, ಕೇನಾಜೆ ಮುಂತಾದವರ ಉತ್ಸಾಹದಿಂದಾಗಿ ಒಂದು ಗುಹೆಯನ್ನು ಹೊಕ್ಕು ಅಪಾಯದಲ್ಲಿ ಸಿಕ್ಕು ಬದುಕಿ ಬಂದಿದ್ದೆ. ಅನೇಕ ಐತಿಹ್ಯ ಮತ್ತು ದಂತಕತೆಗಳಿರುವ, ಕಳ್ಳ ಭಟ್ಟಿ ತಯಾರಕರ ಸ್ವರ್ಗವಾಗಿರುವ ಭಯಾನಕ ಕೌಡಿಕ್ಕಾನ ದುರ್ಗಮ ಅರಣ್ಯಕ್ಕೆ ನಮ್ಮ ತಂಡ ಯಶಸ್ವೀ ಚಾರಣ ಹಮ್ಮಮಿಕೊಂಡಿತ್ತು. ಅಷ್ಟರಲ್ಲಿ ಯಾವುದೋ ಚುನಾವಣೆ ಬಂತು. ಮಂಡೆಕೋಲು ಅನ್ವೇಷಣಾ ಬಳಗ ಇಭ್ಭಾಗವಾಯಿತು. ಮಿತ್ರರಾಗಿದ್ದವರು ಯಾರ್ಯಾರಿಗಾಗಿಯೋ ಹೊಡೆದಾಡಿಕೊಂಡರು. ಜಾತಿ ಮತ್ತು ಧರ್ಮಗಳಿಗಿಂತಲೂ ಪ್ರಬಲವಾದದ್ದು ರಾಜಕೀಯ !

ಈ ವರ್ಷದ ಚಾರಣಗಳು ನಿಜಕ್ಕೂ ಅತ್ಯಪೂರ್ವ. ಈ ಹಿಂದೆ ಗುಡ್ಡ ಏರಿದ್ದು, ಕಾಡು ಸುತ್ತಿದ್ದು ಸಾಹಸಗಳೇನೋ ಹೌದು. ಆದರೆ ಅಲ್ಲೆಲ್ಲೂ ಜಲಪಾತಗಳಿರಲಿಲ್ಲ. ಈ ವರ್ಷ ಬಂಪರ್‌, ದೇವರಗುಂಡಿ, ಬಾಣ, ಅರ್ಬಿ, ಲೈನ್ಕಜೆ ಮತ್ತೀಗ ಕಲ್ಲಾಳ. ನಲುವತ್ತು ದಿನಗಳ ಅಂತರದಲ್ಲಿ ಐದು ಜಲಪಾತಗಳು. ನೀರಿಲ್ಲದ ಪ್ರಕೃತಿ ನಮ್ಮನ್ನು ಬಹಳ ಹೊತ್ತು ಮೈಮರೆಯುವಂತೆ ಮಾಡಲಾರದು. ಇಲ್ಲಿ ನೀರ ಸದ್ದು ಬಿಟ್ಟರೆ ಬೇರೇನೂ ಕೇಳಿಸದ ಜಲಪಾತದ ಗರ್ಭದಲ್ಲಿ ತಾದ್ಯಾತ್ಮ ಸಾಧ್ಯವಾಗುತ್ತಿದೆ. ಹಾಗೇ ಕಣ್ಣುಮುಚ್ಚಿಕೊಂಡೆ.

ಈಗ ನನ್ನೊಡನಿರುವ ಪಡ್ಡೆಗಳನ್ನು ಕಳೆದ ವರ್ಷ ಯಾರಿಂದಲೂ ನಿಯಂತ್ರಿಸಲಾಗಿರಲಿಲ್ಲ. ಇವರ ತಲೆಯೊಳಗೆ ಎಕನಾಮಿಕ್ಸ್‌ ತುರುಕುವುದು ಮಂಗಳನಲ್ಲಿ ಮನೆಕಟ್ಟುವಷ್ಟೇ ಪ್ರಯಾಸದ ಸಾಹಸ. ಕಳೆದ ವರ್ಷ ಯತಿರಾಜ ಮತ್ತು ಹಮೀದ್‌ ಬಡಿದಾಡಿಕೊಂಡರು. ಕುಳ್ಳ ಹಮೀದ, ಅಡಿಕೆ ಮರದಷ್ಟೆತ್ತರಕ್ಕಿರುವ ಯತಿರಾಜನ ಮೂಗಿಗೆ ಅದು ಹೇಗೆ ಹಾರಿ ಬಡಿದನೋ, ರಕ್ತ ಬಂದು ಬಿಟ್ಟಿತು. ಎಲ್ಲರೂ ಸೇರಿ ಹಮೀದನಿಗೆ ಸರೀ ಬಾರಿಸಿದರು. ಪ್ರಕರಣ ಅಷ್ಟಕ್ಕೇ ಮುಗಿಯಲಿಲ್ಲ. ಬಿಸಿಲೇರುತ್ತಿದ್ದಂತೆ ಅದಕ್ಕೆ ಬೇರೆ ರಂಗು ಬಂತು. ಹೊರಗಿನಿಂದ ಅನಪೇಕಿತರೂ, ಅಪರಿಚಿತರೂ ಬಂದು ಬಿಟ್ಟರು. ಸಾಕಿದ ಆನೆಯಂತೆ ಈಗ ಇಲ್ಲೇ ನೀರಲ್ಲಿ ಚೆಲ್ಲಾಟವಾಡುತ್ತಿರುವ ರಂಜನ್‌ ಅಂದು ಸಿಟ್ಟಿನಿಂದ ಒಗ್ಗರಣೆಯ ಸಾಸಿವೆಯಂತೆ ಸಿಡಿಯುತ್ತಿದ್ದ. ಅವನೊಟ್ಟಿಗೆ ವಶಿಷ್ಠ, ಮಡಪ್ಪಾಡಿ ಅ ನಾವು ಅಧ್ಯಾಪಕರು ಹಮೀದನನ್ನು ಆಫೀಸು ಕೋಣೆಯೊಳಕ್ಕೆ ದೂಡಿ ಬಾಗಿಲಿಗಡ್ಡ ನಿಂತೆವು. ಹಮೀದ ಗಡಗಡಗಡ ನಡುಗುತ್ತಿದ್ದ. ಈ ರಂಜನ್‌ ಮತ್ತು ಅವನ ಸೈಜಿನ ಏಳೆಂಟು ದಡಿಯರು ಹಮೀದನಿಗೆ ವಾಚಾಮಗೋಚರ ಬಯ್ದರು. ಕೆಲವಂತೂ ವಿಪರೀತ ಕುಡಿದವರ ಬಾಯಿಯಿಂದ ಬರುವಂಥವು. ಅವರ ಹಿಂದಿದ್ದ ಅನಪೇಕಿತ ಮತ್ತು ಅಪರಿಚಿತ ವ್ಯಕ್ತಿಗಳೂ ಬಯ್ಯತೊಡಗಿದರು. ಅವರು ಹಮೀದನಿಗೆ ಮಾತ್ರವೇ ಬಯ್ಯಲು ಸಾಧ್ಯವಿರಲಿಲ್ಲ ಅ ಪುಸ್ತಕ ಓದುವ ಅಭ್ಯಾಸವೇ ಇಲ್ಲದ, ವೈಚಾರಿಕತೆ, ಚಿಂತನೆಗಳಿಲ್ಲದ ಮಂದಿಗಳಲ್ಲಿ ಜಾತಿ ಮತ್ತು ಕೋಮು ಭಾವನೆ ಪ್ರಚೋದಿಸುವುದು ಬಹಳ ಸುಲಭ. ಹಮೀದನೇನಾದರೂ ಆ ಗುಂಪಿನ ಕೈಗೆ ಅಂದು ಸಿಕ್ಕಿಬಿಡುತ್ತಿದ್ದರೆ ಬದುಕುಳಿಯಲು ಸಾಧ್ಯವೇ ಇರಲಿಲ್ಲ.

ಅಂದು ಹೇಗೋ ಬಚಾವಾದ ಹಮೀದ ಮುಂದೆಂದೂ ಕಾಲೇಜಲ್ಲಿ ಕಾಣಸಿಗಲಿಲ್ಲ. ಅವನದು ನಮ್ಮೆಲ್ಲರ ಪೂರ್ವಜರನ್ನು ನೆನಪಿಸುವ ಸುಂದರ ವದನಾರವಿಂದ. ನನ್ನ ಒತ್ತಾಯಕ್ಕೆ ಎದುರು ಬೆಂಚಲ್ಲಿ ಕೂತರೂ ತಲೆಯೊಳಗೆ ಪಾಠ ಹೋಗದಂತೆ ಭದ್ರವಾದ ರಕ್ಷಣಾ ಬೇಲಿ ನಿರ್ಮಿಸಿಕೊಂಡಿದ್ದ. ದಿನಾ ಬಂದರೆ ಮೇಸ್ಟ್ರಿಗೆ ತೊಂದರೆಯೆಂದು ಆಗಾಗ ತರಗತಿಗೂ ತಪ್ಪಿಸುತ್ತಿದ್ದ. ಹೈಸ್ಕೂಲಿನಲ್ಲಾಗಿದ್ದರೆ ಕ್ಲಾಸಿಗೆ ಚಕ್ಕರ್‌ ಹೊಡಿಯುವುದಕ್ಕೆ ನಾನೇ ಅವನಿಗೆ ಬಿಗಿದುಬಿಡುತ್ತಿದ್ದೆ. ಆದರಿದು ಕಾಲೇಜು!

ಕಾವು ಶಾಲೆಯಲ್ಲಿ ನನ್ನ ಭಾಷಣ ಕಾರ್ಯಕ್ರಮದಂದು ಹಮೀದ ಮತ್ತೆ ಪ್ರತ್ಯಕ್ಷನಾದ. ಅವನೊಡನೆ ಸಿದ್ಧಿಕಿ ಇದ್ದ. ಹಮೀದನ ಕಣ್ಣುಗಳಲ್ಲಿ ಈಗಲೂ ಭೀತಿಯಿತ್ತು. ನಿಮ್ಮನ್ನು ನೋಡಲೆಂದೇ ಬಂದೆ. ಅಂದು ನೀವೆಲ್ಲಾ ಸೇರಿ ನನ್ನನ್ನು ಬದುಕಿಸಿದಿರಿ ಸರ್‌ ಎಂದು ಅತ್ತೇಬಿಟ್ಟ. ಅದು ನಮ್ಮ ಕಾಲೇಜಿನ ಸಂಪ್ರದಾಯ. ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದರೆ ನಾವೆಲ್ಲಾ ಮಧ್ಯ ಪ್ರವೇಶಿಸುತ್ತೇವೆ. ನಮ್ಮ ಕಣ್ಣೆದುರೇ ನಮ್ಮ ವಿದ್ಯಾರ್ಥಿಗಳ ಹೆಣ ಉರುಳಿದರೆ ನಾವು ಬದುಕಿ ಫಲವೇನು  ಎಂದಿದ್ದೆ. ಹಮೀದ ಮುಂದೆ ಗಲೀಗೆ ಹೋಗುತ್ತೇನೆಂದ. ಒಂದು ಬಾರಿ ರಂಜನ್‌ ಮತ್ತವನ ಬಳಗದೊಡನೆ ಕೇಳಿದ್ದೆ. ಹಾಗೆ ಅಂದು ಹಮೀದನನ್ನು ಓಡಿಸಿಬಿಟ್ರಲ್ಲಾ ಅವರು ತಲೆತಗ್ಗಿಸಿದರು. ಮುಖದಲ್ಲಿ ವಿಷಾದವಿತ್ತು. ಹುಡುಗುಬುದ್ಧಿ !

ಫೈಸಲ್ಲಿಗೆ ನಾನೇರಿದೆತ್ತರಕ್ಕೆ ಏರಲಾಗಲಿಲ್ಲ. ಕೆಳಗಿನಿಂದಲೇ ಒಂದೆರಡು ಫೋಟೋ ತೆಗೆದ. ನೋಡಲು ಚೆನ್ನಾಗಿಯೇ ಇದ್ದಾನೆ ಇವ. ಸಾಹಸಕಾರ್ಯಗಳಿಗೆ. ಇಂದು ಮಡಪ್ಪಾಡಿಗೆ ಜತೆಗಾರನಾಗಿ ಕಾಲೆಳೆದುಕೊಂಡು ಬರುತ್ತಿದ್ದುದೇ ಇವನು. ಚಿತ್ರವಿಚಿತ್ರ ಡ್ರೆಸ್ಸು ಹಾಕಿದರೆ, ತಲೆ ಖಾಲಿಯಿದ್ದರೂ ಮದನಾಕಿಯರ ಮನಗೆಲ್ಲಬಹುದೆಂಬ ಥಿಯರಿಯವನು. ಇವನಲ್ಲೊಂದು ಬಿಳಿ ಶರ್ಟಿದೆ. ಅದರ ಬೆನನಲ್ಲಿ ಕೆಂಪು ತುಟಿಗಳ ಪಡಿಯಚ್ಚು ಮತ್ತು ಊಹಿಸಿ ಎಂಬ ಬರಹ. ಇವನಿಗೇ ಅದರ ಅರ್ಥ ಗೊತ್ತಿದೆಯೋ ಇಲ್ಲವೊ? ಇವನು ಕೆಲವರ ಹೃದಯಗೆಲ್ಲುವ ಯತನ ನಡೆಸುತ್ತಿದ್ದಾನೆಂದು ಗುಲ್ಲುಹಬ್ಬಿತ್ತು. ಹೃದಯಗೆಲ್ಲುವ ಅವ್ಯಾಹತ ಪ್ರಯತನದಲ್ಲಿ ಸದಾ ವಿಫಲರಾದವರು ಸಂಘ ರಚಿಸಿಕೊಂಡು ಅವನಿಗೊಮ್ಮೆ ತದುಕುವ ಬೃಹತ್‌ ಯೋಜನೆಯನ್ನು ರೂಪಿಸಿದ್ದರು. ಅಧ್ಯಾಪಕರುಗಳ ಸಕಾಲಿಕ ಮುನ್ನೆಚ್ಚರಿಕೆಯಿಂದ ಆ ಯೋಜನೆ ವಿಫಲವಾಗಿತ್ತು. ಇಂದಿನ ಸಾಹಸ ನೋಡುವಾಗ ಮುಂದೆ ಇವನು ನಮ್ಮೊಡನೆ ಬರಲಾರ ಎಂದೆನಿನಸಿತು. ಅದು ನಿಜವೂ ಆಯಿತು.

ಜಲಧಾರೆಯಲ್ಲಿ ರಿಂಗಿಣ

ಅದೆಷ್ಟು ಹೊತ್ತು ಜಲಧಾರೆಯಲ್ಲಿ ಮೈ ಮರೆತಿದ್ದೆನೊ, ಆದಿಮಾನವನ ಗೆಟಪ್ಪಿನಲ್ಲಿದ್ದ ಶಿವಪ್ರಸಾದ ಕಟಕಟೆಂದು ಹಲ್ಲು ಕಡಿಯುತ್ತಾ ‘ ಸಾಕೋ ಸಾಕು. ಇನ್ನು ಹೋಗುವಾ ‘ ಎಂದ. ಜಲಧಾರೆಯಿಂದ ಹೊರಬಂದೆ. ನಡುಗುವಷ್ಟು ಚಳಿ ನನಗಾಗಿರಲಿಲ್ಲ. ಮೊಬೈಲು ನೋಡಿದೆ. ನಾಲ್ಕು ಮಿಸ್ಸುಡು ಕಾಲ್ಸು. ಜಲಪಾತದ ಅಬ್ಬರದಲ್ಲಿ ಮೊಬೈಲು ರಿಂಗಿಣ ಕೇಳಿಸಿರಲಿಲ್ಲ.

ದೊಡ್ಡೇರಿತೂಗು ಸೇತುವೆ ಬಗ್ಗೆ ಸುಳ್ಯದಿಂದ ಗಿರೀಶ್‌ ಭಾರದ್ವಾಜ್‌ ಮತ್ತು ಆಗ್ರೋ ರಾಮಚಂದ್ರರು, ಶಿವಮೊಗ್ಗೆಯಿಂದ ಚಂದ್ರಶೇಖರ್‌ ಮತ್ತು ಪ್ರಕಾಶ್‌ ಫೋನು ಮಾಡಿದ್ದರು. ‘ಎಂತಹ ಟೇಸ್ಟು ಮಾರಾಯ್ರಯೆ ನಿಮ್ಮದು’ ಎಂದು ಚಂದ್ರಶೇಖರ್‌ ಶಿವಮೊಗ್ಗೆಯಲ್ಲಿ ನೆಗಾಡಿದ್ದು ಕಲ್ಲಾಳದಲ್ಲಿ ನನ್ನ ಕಿವಿಗಪ್ಪಳಿಸಿತು. ಜಲಪಾತದಿಂದಲೇ ಪ್ರಾಚಾರ್ಯ ದಾಮೋದರ ಗೌಡರಿಗೆ ವರದಿಯೊಪ್ಪಿಸಿದೆ. ‘ ಜಾಗ್ರತೆ ಮಾರಾಯರೇ. ಅಪಾಯ’ ಎಂದು ಎಚ್ಚರಿಸಿದರು. ‘ಹೆದರಬೇಡಿ ಸರ್‌. ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ನಿಮಗೆ ಅವಕಾಶ ಕಲ್ಪಿಸುವುದಿಲ್ಲ’ ಎಂದೆ. ಅವರು ಮುಂದಕ್ಕೆ ಮಾತಾಡಲಿಲ್ಲ!

ನಾನು ಮಾತು ಮುಗಿಸುತ್ತಿರುವಂತೆ ವಶಿಷ್ಠ ‘ಹೋಯಿತು ಹೋಯಿತು’ಎಂದು ಬೊಬ್ಬಿಟ್ಟ. ಏನೆಂದು ನಾವು ಅವನತ್ತ ನೋಡಿದೆವು. ‘ನೀರ ಸ್ಪೀಡಿಗೆ ನನ್ನ ಹಳೆ ಜನಿವಾರ ಕಟ್ಟಾಗಿ ನೀರಿನೊಂದಿಗೆ ಹೋಗಿಯೇ ಬಿಟ್ಟಿತು’ ಎಂದು ಅವನು ಹೇತ್ಲಾಂಡಿ ಮುಖ ಮಾಡಿದ. ನಮಗೇನು ಹೇಳಬೇಕೋ ತಿಳಿಯಲಿಲ್ಲ. ನಾವು ಹೊರಡಲುದ್ಯುಕ್ತರಾದಾಗ ಮತ್ತೆ ಅವನ ಬೊಬ್ಬೆ ಕೇಳಿಸಿತು. ‘ಸಿಕ್ಕಿತು ಸಿಕ್ಕಿತು ಸರ್‌. ಚಡ್ಡಿಯೊಳಗೆ ಸೇರಿಕೊಂಡಿತ್ತು’!

ಕಲ್ಲಾಳ ಜಲಪಾತದಿಂದ ಮಡಪ್ಪಾಡಿ ಯಾರ್ಯಾರಿಗೋ ಫೋನು ಮಾಡುತ್ತಿದ್ದ. ಆ ಸಂದರ್ಭದಲ್ಲಿ ಅವನು ಎಲ್ಲರನ್ನೂ ದೂರವಿಡುತ್ತಿದ್ದ. ಕೊನೆಗೊಮ್ಮೆ ನನ್ನ ಕೈಗೆ ಫೋನಿತ್ತ. ಅವನ ಅಕ್ಕ, ಆರು ತಿಂಗಳ ಹಿಂದೆ ಮದುವೆಯಾದ ವೀಣಾ ಬೆಂಗಳೂರಿನಿಂದ ಮಾತಾಡುತ್ತಿದ್ದಳು. ‘ಏನು ಸಾರ್‌ ನೀವು ! ನಮ್ಮ ಬ್ಯಾಚನ್ನು ಎಲ್ಲಿಗೂ ಕರಕೊಂಡು ಹೋಗಲಿಲ್ಲ. ತಮ್ಮನಿಗೆ ಇದು ಮೂರನೆಯ ಟ್ರೆಕ್ಕಿಂಗಂತೆ ?

ಅವಳಿಗೆ ಭರತ ನಾಟ್ಯದ ಹುಚ್ಚು. ಐದು ವರ್ಷ ಎನ್ನೆಂಸಿಯ ವಿದ್ಯಾರ್ಥಿನಿಯಾಗಿ ಸಾಹಿತ್ಯದ ಗೀಳು ಹಚ್ಚಿಕೊಂಡವಳು. ಅವಳ ಸಂಗ್ರಹದಲ್ಲಿ 6000ಕ್ಕಿಂತ ಹೆಚ್ಚು ಚಿಂತನೆಗಳಿದ್ದವು. ಕೆಲವು ಕತೆ, ಕವನ ಬರೆದು ಸದಾ ನನ್ನ ತಲೆ ತಿನ್ನುತ್ತಿದ್ದಳು. ಇನ್ನೊಬ್ಬಾಕೆ ಕುರುಂಜಿ ಅನುರಾಧಳಲ್ಲೂ ಚಿಂತನೆಗಳ ದೊಡ್ಡ ಸಂಗ್ರಹವಿತ್ತು. ಇಬ್ಬರ ಸಂಗ್ರಹದಿಂದ ಒಂದಷ್ಟನ್ನು ಆಯ್ದು, ವರ್ಗೀಕರಿಸಿ ಚಿಂತನವಾಹಿನಿ ಎಂಬ ಕೃತಿ ಅವರ ಹೆಸರಲ್ಲಿ ಪ್ರಕಟಿಸಿದ್ದೆ. ವಿದ್ಯಾರ್ಥಿ ದಿಸೆಯಲ್ಲೇ ಪುಸ್ತಕ ಪ್ರಕಟವಾಗಿ ವೀಣಾ ಒಂದು ‘ಜನ’ ಅಂತಾದಳು. ಅವಳು ಕಾನೂನು ಕಾಲೇಜಿಗೆ ಹೋಗತೊಡಗಿದಳು. ಅದರ ತಲೆಬುಡ ಅವಳಿಗರ್ಥವಾಗಲಿಲ್ಲ. ಭರತನಾಟ್ಯ ತರಗತಿಯೊಂದನ್ನು ನನ್ನಿಂದಲೇ ಉದ್ಛಾಟಿಸಿ, ಸಾರ್ವಜನಿಕವಾಗಿ ಕಾಲಿಗೇ ಬಿದ್ದು ಆಶೀರ್ವಾದ ಪಡೆದು ಸಾಯುಜ್ಯಕ್ಕೆ ಸೆಂಟ್‌ ಪರ್ಸೆಂಟ್‌ ಅರ್ಹಳಾಗಿಬಿಟ್ಟಳು! ಆದರೆ ಅವಳ ಭರತನಾಟ್ಯ ಕ್ಲಾಸು ಬರ್ಕತ್ತಾಗಲಿಲ್ಲ. ಸದ್ಯ ನಿಮ್ಮ ಕೈಗುಣ ಎಂದು ಹೇಳದ್ದು ನನ್ನ ಭಾಗ್ಯ. ಅವಳಿಗೆ ರೋಟರಿ ಶಾಲೆಯಲ್ಲಿ ಉದ್ಯೋಗ ಸಿಕ್ಕಿತು. ಹಿಂದಿ ಟೀಚರು. ಮತ್ತೆ ಅನಿವಾರ್ಯವಾಗಿ ಸಾಹಿತ್ಯದ ಗೀಳು ಅಂಟಿಕೊಂಡಿತು. ಒಂದಷ್ಟು ಕತೆ ಬರೆದು ತಿದ್ದಿಸಿಕೊಂಡಳು. ಇನ್ನೆರಡು ಕತೆ ಬರೆದರೆ ಸಂಕಲನ ಪ್ರಕಟಿಸಬಹುದೆಂದು ಪ್ರಕಾಶಕನೊಬ್ಬ ಹೇಳಿದ. ಅಷ್ಟರಲ್ಲಿ ಮದುವೆಯಾಯಿತು. ಅಲ್ಲಿಗೆ ಭರತನಾಟ್ಯ ಮತ್ತು ಸಾಹಿತ್ಯಕ್ಕೆ ಜಯಮಂಗಳಂ !

ಜಲಪಾತದ ತುದಿಗೆ ಆರೋಹಣಗೈದು ಹೊಳೆ ಮಧ್ಯದ ಬಂಡೆಯೊಂದರಲ್ಲಿ ಕೂತು ತಿಂಡಿ ತಿಂದೆವು. ಮಕ್ಕಳು ಹಾಡಿದರು, ಕುಣಿದರು. ‘ಎಷ್ಟು ಚೆನ್ನಾಗಿತ್ತಲ್ವಾ ಸರ್‌’ ಎಂದು ಕೇಳಿದರು. ಯಾಕೋ ಭಾವಪರವಶನಾಗಿ ‘ನನ್ನ ಶ್ರದ್ದಾಂಜಲಿ ಕಾರ್ಯಕ್ರಮದಂದು ಇದನ್ನೆಲ್ಲಾ ನೆನಪಿಸಿಕೊಳ್ತೀರಾ ಮಕ್ಕಳೇ’ ಎಂದು ಕೇಳಿಬಿಟ್ಟೆ. ಅವರ ನಗು, ಕೇಕೆ ನಿಂತುಹೋಯಿತು. ಒಮ್ಮೊಮ್ಮೆ ಎಲ್ಲೋ ಸಾವು ಹತ್ತಿರದಲ್ಲೇ ಹೊಂಚು ಹಾಕಿ ಕೂತಿದೆ ಎಂಬ ಭಾವನೆ ಮೂಡುವುದುಂಟು. ಆದರೂ ಈ ಪಡ್ಡೆಗಳೆದುರು ಆ ಪದ ಬಳಸಬಾರದಿತ್ತು ಎಂದೆನಿನಸಿತು.

ಮತ್ತೆ ಫೋನು ರಿಂಗಿಣಿಸಿತು. ಉಷಾಕಿರಣದ ಉಪಸಂಪಾದಕ ಮಂಡೆಕೋಲು ಚಂದ್ರಶೇಖರ ಮಂಚದಿ ಮಂಗಳೂರಿನಿಂದ ನನ್ನಯೋಗಕೇಮ ಕೇಳುತ್ತಿದ್ದ. ಅವ ವಿದ್ಯಾರ್ಥಿಯಾಗಿದ್ದಾಗ ವಾರಕ್ಕೊಮ್ಮೆ ಮನೆಗೇ ಬಂದು ಬಿಡುತ್ತಿದ್ದ. ಯಾವ್ಯಾವುದೋ ಭೂತದಕೋಲ, ಪಾಳುದೇಗುಲ, ಗುಹೆಗಂಹ್ವರಗಳಿಗೆ ಕರೆದೊಯ್ಯುತ್ತಿದ್ದ. ಕರೆದೊಯ್ಯುವುದು ನಾನೇ ನನ್ನ ಸ್ಕೂಟರಲ್ಲಿ ಅ ಕೊನೆಗೆ ಒಂದಷ್ಟು ಲೇಖನ ಬರೆದು ದಿನಗಟ್ಟಲೆ ನನ್ನ ತಲೆ ತಿಂದ. ‘ಅನ್ವೇಷಣೆ’ ಎಂಬ ಪುಸ್ತಕ ಹೊರತಂದು ಅಕಾಡೆಮಿ ಬಹುಮಾನ ಪಡೆದ. ಕನ್ನಡ ಎಂ. ಎ. ಮಾಡಿದ. ಪತ್ರಿಕೆ ಸೇರಿಕೊಂಡ. ಜಾನಪದ ಅಧ್ಯಯನ ಕೇತ್ರದಲ್ಲಿ ಹೆಸರು ಗಳಿಸಿದ. ಅವನಿಗೆ ನಮ್ಮ ಸಾಹಸ ಇಷ್ಟವಾಗಿ “ಈಗ ನಿಮ್ಮೊಡನಿರಬೇಕೆಂದಿನಿನಸುತ್ತಿದೆ ಸರ್‌” ಎಂದ.

ಕಲ್ಲಾಳದಿಂದ ಕೋಯನಾಡಿಗೆ ಬರುವಾಗ ತುಂಬಾ ಖುಷಿಯಾಗುತ್ತದೆ. ಅದು ಇಳಿಯುವ ಹಾದಿ. ಒಬ್ಬಾಕೆ ಮಧ್ಯವಯಸ್ಸು ದಾಟಿದ ಮಹಿಳೆ ಪಾಪ ಏದುಸಿರು ಬಿಡುತ್ತಾ, ಅಲ್ಲಲ್ಲಿ ನಿಂತುಕೊಂಡು ಮೇಲಕ್ಕೆ ಹತ್ತಿ ಬರುತ್ತಿದ್ದಳು. ನಮ್ಮನ್ನು ನೋಡಿ ಹಲ್ಲು ಕಿರಿದು ಮಾತಾಡಿಸಿದಳು. ನಮ್ಮ ಪೆರಾಜೆ ಜಯಪ್ರಕಾಶನ ಸಂಬಂಧಿಕರೊಬ್ಬರು ಕಲ್ಲಾಳದವರು. ಅವರ ಹೆಸರು ಹೇಳಿದಾಗ ಅವಳ ವದನ ಇನ್ನಷ್ಟು ವಿಕಸಿಸಿತು. ‘ನೀವೆಲ್ಲರೂ ಜಯಪ್ರಕಾಶನ ಸಂಬಂಧಿಕರಾ’ ಎಂದವಳು ಆಶ್ಚರ್ಯ ವ್ಯಕ್ತಪಡಿಸಿದಳು.  ಅವನಿಗೆ ಮಾತ್ರವಲ್ಲ, ನಿಮಗೂ ನಾವು ಸಂಬಂಧಿಕರು. ವಸುಧೈವ ಕುಟುಂಬಕಂ. ಮನುಜಕುಲಂ ತಾನೊಂದೆ ವಲು ಎಂದೆ. ಅವಳಿಗೆಷ್ಟು ಅರ್ಥವಾಯಿತೋ? ಚೊಕ್ಕಾಡಿ ವಿನಯ ಮಾತ್ರ ‘ಗುರುಗಳ ಮುಂದಿನ ಕೃತಿಯ ಹೆಸರು ಜಾತಿ ಯಾವುದಾದರೇನು’ ಎಂದು ಘೋಷಿಸಿದ. ಒಮ್ಮೆಲೇ ಎದ್ದ ನಗುವಿನಿಂದ ಕಕ್ಕಾಬಿಕ್ಕಿಯಾದ ಮಹಿಳೆ ಹಾಗೇ ಅಲ್ಲಿ ನಿಂತು ನಮ್ಮನ್ನು ವಿಚಿತ್ರವಾಗಿ ನೋಡುತ್ತಿರುವಂತೆ ನಾವು ಕೋಯನಾಡಿನತ್ತ ಸಾಗಿದೆವು. ಬರುವಾಗ ನಾನೆಂದೆ. ‘ನಿಜಕ್ಕೂ ನಾವೆಲ್ಲಾ ಸಂಬಂಧಿಕರೇ. ಬಹಳ ಹಿಂದಕ್ಕೆ ಹೋಗಿ. ನಾವೆಲ್ಲರೂ ಒಂದೇ ಮೂಲದಿಂದ ಬಂದವರು. ಬೇಕಾದರೆ ಕನ್ನಡಿ ನೋಡಿಕೊಳ್ಳಿ!’

ಮಗದೊಮ್ಮೆ ಕೇಳಿಸಿತು ರಿಂಗಿಣ. ಈಗ ಪ್ರತಿಮಾ ಮಾತಾಡುತ್ತಿದ್ದಳು. ಅವಳು ಬಿ. ಎ. ಯಲ್ಲಿರುವಾಗಲೇ ‘ಮೌನವನು ಮುರಿದು’ ಎಂಬ ಕಥಾಸಂಕಲನವೊಂದನ್ನು ಹೊರತಂದು ಕೆಲವು ವಲಯಗಳಲ್ಲಿ ಜಗತ್ಪ್ರಸಿದ್ಧಿ ಪಡೆದಿದ್ದಳು. ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಉದ್ಯೋಗದಲ್ಲಿದ್ದಾಳೆ. ‘ಎಂ. ಎ. ಪರೀಕ್ಷೆ ಸುಲಭವಿತ್ತು. ನಿಮ್ಮ ಪುಸ್ತಕ ಹಿಂದಿರುಗಿಸಲಿಕ್ಕಿದೆ. ಬಿಡುವಿದ್ದರೆ ಹೇಳಿ.’

ಎರಡು ಕತೆ ಬರೆದಿದ್ದೇನೆ. ಈಗ ನಾನೆಲ್ಲಿದ್ದೇನೆಂದು ತಿಳಿಸಿ ಜಲಪಾತದ ಬಗ್ಗೆ ನೀರೂರುವಂತೆ ವರ್ಣಿಸಿದೆ. ಅವಳದಕ್ಕೆ ;ನೀವೂ ಪುರುಷ ಪಕ್ಷಪಾತಿಯಾಗಿಬಿಟ್ಟಿರಿ ಸರ್‌. ನಮ್ಮನ್ನು ಯಾವ ಜಲಪಾತಕ್ಕೂ ಕರೆದೊಯ್ದಿರಲಿಲ್ಲ’ ಎಂದು ಆಕೇಪಿಸಿಯೇ ಬಿಟ್ಟಳು.

ಕೋಯನಾಡಿಗೆ ಮುಟ್ಟಿದೆವು. ಮಡಪ್ಪಾಡಿ ನೇತೃತ್ವದ ಹಿಂದುಳಿದವರ ಒಕ್ಕೂಟ ಕೊನೆಗೂ ನಮ್ಮನ್ನು ಸೇರಿಕೊಂಡು ಉಸ್ಸಪ್ಪ ಎಂದು ಉಸಿರುಬಿಟ್ಟಿತು. ಈ ಬಾರಿ ಫೈಸಲ್ಲ್‌ ಅದಕ್ಕೆ ಹೊಸ ಸೇರ್ಪಡೆಯಾದುದರಿಂದ ಅದು ಇನ್ನಷ್ಟು ಬಲಿಷ್ಠವಾಗಿತ್ತು. ಕಾಂತಮಂಗಲದ ವಿನಯ ‘ಇವ ಈ ಮಡಪ್ಪಾಡಿ ಆಗಾಗ ಯಾರಿಗೋ ಫೋನು ಮಾಡುತ್ತಿದ್ದ. ಅದಕ್ಕೇ ಲೇಟಾಯಿತು’ ಎಂದು ದೂರಿದ. ಮಡಪ್ಪಾಡಿಯದಕ್ಕೆ ‘ಅಲ್ಲ ಸರ್‌. ಈ ಲಾಚಾರು ಲಾಟುಪೋಟ್‌ ಮನುಷ್ಯನಿಗೆ ನಡೆಯಲಿಕ್ಕೇ ಆಗುವುದಿಲ್ಲ. ಇವನನ್ನು ಬಿಟ್ಟು ಬರಲಿಕ್ಕಾಗುತ್ತದಾ ! ನೋಡಿ. ಇದನ್ನೇ ಉಪಕಾರ ಮಾಡಿದವ ಮೂಸೆಯಾದ ಎನ್ನುವುದು’ ಎಂದು ತಿರುಗೇಟು ನೀಡಿದ.

ಅಮ್ಮ ನಿನ್ನ ತೋಳಿನಲ್ಲಿ

ತೀರಾ ಹಸಿದವರು ಕೋಯನಾಡಿನ ಮಾಪಿಳ್ಳೆಯ ಮಾಂಸದ ಹೋಟೆಲಲ್ಲಿ ಉಂಡರು. ಒಂದು ಸ್ಟ್ರಾಂಗು ಚಾದಲ್ಲಿ ನಾನು ಸುಧಾರಿಸಿಕೊಂಡೆ. ಟೀ ಕುಡಿದು ಚಲಿಸುವವನೇ ಟೀಚರ ಅ ಮಡಿಕೇರಿ ಹಾದಿಯಲ್ಲಿ ಎರಡು ಕಿ. ಮೀ. ಮುಂದುವರಿದಾಗ ಎಡಬದಿಯಲ್ಲಿ ಫಾರೆಸ್ಟ್‌ ಡಿಪಾರ್ಟಿಮೆಂಟಿನ ನರ್ಸರಿ ಮತ್ತು ತಂಗುದಾಣ ಸಿಗುತ್ತದೆ. ಇನ್ನೂ ಸ್ವಲ್ಪ ಮೇಲಕ್ಕೆ ಹೋಗಿ ಪಯಸ್ವಿನಿಗೆ ಇಳಿದೆವು.

ಇಲ್ಲಿ ಪಯಸ್ವಿನಿಯದು ಮೋಹಕ ಹರಿವು. ಸುತ್ತ ಬಂಡೆಗಳ ನಡುವೆ ಬಿಳಿನೊರೆ ಉಕ್ಕಿಸುತ್ತಾ ಸಪ್ತಸ್ವರಮಯಿಯಾಗಿ ನಾದ ಪಯಸ್ವಿನಿ ಹರಿಯುತ್ತಾಳೆ. ಮೋಹಕ ವೈಯಯ್ಯರದಿಂದ ಹರಿಯುವ ನದಿಯ ಮಧ್ಯ ಆಳವಾಗಿದೆ. ಮಳೆಗಾಲದ ಕೊನೆಯ ದಿನಗಳಾದುದರಿಂದ ನೀರಿಗೆ ತುಂಬಾ ಸೆಳೆತವೂ ಇತ್ತು. ಪಯಸ್ವಿನಿ ಇನ್ನು ಮುಂದೆ ಇಷ್ಟು ನಿರ್ಮಲವಾಗಿ- ರುವುದಿಲ್ಲ. ಆದರೆ ಅಲ್ಲೂ ಪ್ರವಾಸಿಗರು ಒಂದೆರಡು ಕಡೆ ವಿಸರ್ಜನೆ ಮಾಡಿ ಬಿಟ್ಟಿದ್ದರು.

ಒಂದು ಬಾರಿ ಭಾರತ ಸುತ್ತಿದ ಜರ್ಮನ್‌ ಪ್ರವಾಸಿಗನನ್ನು ದೆಹಲಿಯ ಪತ್ರಕರ್ತರು ‘ಭಾರತದ ವೈಶಿಷ್ಟ್ಯವೇನು’ ಎಂದು ಪ್ರಶ್ನಿಸಿದರು. ಅದಕ್ಕವನು ‘ಇಡೀ ಭಾರತವೇ ಒಂದು ಪಾಯಖಾನೆ’ ಎಂದಿದ್ದ ಅ ಕನ್ಯಾಕುಮಾರಿಗೆ ಹೋಗಿದ್ದ ನಮ್ಮ ಪ್ರವಾಸ ತಂಡ ಕಡಲಕಿನಾರೆಯಲ್ಲಿ ಸೂರ್ಯಾಸ್ತ ನೋಡಿ ಬರುವಾಗ ಎಲ್ಲರ ಕಾಲುಗಳಿಗೆ ಮಾನವ ವಿಸರ್ಜನೆ ಮೆತ್ತಿಕೊಂಡಿತ್ತು. ಐಹೊಳೆ, ಪಟ್ಟದಕಲ್ಲುಗಳನ್ನು ಶಿವರಾಮ ಕಾರಂತರು ವಿಶ್ವದ ಶಿಲ್ಪಕಲೆಯ ತೊಟ್ಟಿಲು ಎಂದು ಕರೆದಿದ್ದರು. ಅಲ್ಲಿನ ಅಮೂಲ್ಯ ಶಿಲ್ಪಗಳು ಮಾನವ ವಿಸರ್ಜನೆಗೆ ಬಳಕೆಯಾಗುವುದನ್ನು ಕಂಡಿದ್ದೆ. ವಿಜಯನಗರದ ಪತನಕ್ಕೆ ಕಾರಣವಾದ ಫಿರಂಗಿಯನ್ನು ಬಿಜಾಪುರದಲ್ಲಿ ನೋಡಿದ್ದೆ. ಅದರ ಸುತ್ತಮುತ್ತ ಮಾನವ ವಿಸರ್ಜನೆಯ ತರಹೇವಾರಿ ಗುಡ್ಡೆಗಳು. ಮೇರಾ ಭಾರತ್‌ ಮಹಾನ್‌ !

ಪಾವನಕೃಷ್ಣನೊಡನೆ ನಾನು ನದಿಗೆ ಧುಮುಕಿದೆ. ಅಲ್ಲಿಗೆ ನಮ್ಮ ಕಾಲೇಜು ಅಧ್ಯಾಪಕರ ತಂಡ ಕೆಲವು ವರ್ಷಗಳ ಹಿಂದೆ ಸಂದರ್ಶನ ನೀಡಿತ್ತು. ಅಲ್ಲೇ ದಡದಲ್ಲಿ ನಾವು ವನಭೋಜನ ಮಾಡಿದ್ದೆವು. ಬೆಳ್ಳಿಯಪ್ಪರು ತಲೆಗೆ ರುಮಾಲು ಸುತ್ತಿ, ಪಂಚೆ ಎತ್ತಿಕಟ್ಟಿ ಗುರಿಕ್ಕಾರರ ಗತ್ತಿನಲಿ ಊಟದ ವ್ಯವಸ್ಥೆ ನೋಡಿಕೊಂಡಿದ್ದರು. ದಾಮೋದರ ಗೌಡರು, ಶ್ರೀಕೃಷ್ಣ ಭಟ್‌, ಪೀಡಿ, ಬೆಟ್ಟಯ್ಯ, ಕುಮಾರಸ್ವಾಮಿ, ದಾಮ್ಮೆ, ಪೂವಪ್ಪ, ದೇವಿಪ್ರಸಾದ್‌, ಗಿರಿಧರ್‌, ಸುಧಾಕರ್‌ ನಾನು ಮತ್ತು ಇತರ ಅಧ್ಯಾಪಕರು ನೀರಲ್ಲಿ ಚಿನ್ನಾಟ ಆಡಿದ್ದೆವು. ತಂಗಕ್ಕ ಹೊನ್ನಮ್ಮ, ಸುಮಂಗಲಾ, ಯಶೋದಾ, ಸುರೇಖಾ, ಜೂಲಿಯಾನಾ ಮುಂತಾದ ಮೇಡಮ್ಮಂದಿರು ರಂಗು ರಂಗಿನ ಸೀರೆಗಳನ್ನುಟ್ಟು ಪರಿಸರಕ್ಕೆ ಇನನಷ್ಟು ಚೆಲುವು ಮೂಡಿಸಿದ್ದರು. ಸಂಪಾಜೆ ದೇವಿಪ್ರಸಾದರ ಟೆಲಿಫಿಲಂ ತಂಡದಲ್ಲೊಬ್ಬನಾಗಿ ಅಲ್ಲಿಗೆ ಮತ್ತೆರಡು ಸಲ ಬಂದಿದ್ದೆ. ನದಿಯ ಆಳ, ವಿಸ್ತಾರ ಚೆನ್ನಾಗಿ ಗೊತ್ತಿದ್ದುದರಿಂದ ಹೆದರಿಕೆಯೇನೂ ಇರಲಿಲ್ಲ. ಈಜು ಬಾರದವರನ್ನು ಮಾತ್ರ ನದಿಯ ಮಧ್ಯಕ್ಕೆ ಬರಲು ಬಿಡಲಿಲ್ಲ. ಸ್ನಾನದ ಬಗ್ಗೆ ಪಾಠದಷ್ಟೇ ಅಕ್ಕರೆ ತೋರುವ ಮಡಪ್ಪಾಡಿಯ ಹಿಂದುಳಿದವರ ಒಕ್ಕೂಟ ನನ್ನ ಆಜ್ಞೆಯನ್ನು ಶಿರಸಾವಹಿಸಿ ಬಂಡೆಗಳ ಮೇಲೆ ಪವಡಿಸಿತು. ರಂಜನ್‌, ಶಿವಪ್ರಸಾದ ಮತ್ತು ಗಿರೀಶ ನಮ್ಮೊಡನೆ ಈಜಿನ ಮೋಜು ಅನುಭವಿಸತೊಡಗಿದರು.

ಶಿಶಿಲದಲ್ಲಿ ನಮ್ಮ ಮನೆಯ ಹತ್ತಿರವೇ ಹರಿಯುತ್ತದೆ ಕಪಿಲಾನದಿ. ಹಾಗೆ ನನಗೆ ಈಜು ಬಂದದ್ದು. ಬೇಸಿಗೆಯಲ್ಲಿ ಅಲ್ಲೇ ಸಣ್ಣ ಅಣೆಕಟ್ಟು ಕಟ್ಟುತ್ತಾರೆ. ಈಜಲು ಸಾಕಷ್ಟು ನೀರಿರುತ್ತದೆ. ಹಾಸು ಬಂಡೆಗಳಿಂದಾಗಿ ನದೀತಳ ಶುಭ್ರವಾಗಿದೆ. ಅಲ್ಲಿನ ಬಂಡೆಗಳು ನನ್ನ ಬಾಲ್ಯಕ್ಕೆ ಸಾಕ್ಷ್ಯ ಹೇಳುತ್ತವೆ. ಆ ನದಿ, ಸುತ್ತಮುತ್ತಣ ಗಿರಿ ಕಾನನಗಳು ದಿನಾ ನನ್ನನ್ನು ಕಾಡುತ್ತವೆ. ದೊಡ್ಡ ಮಾವ ಶಿಶಿಲದ ಆಸ್ತಿಯನ್ನು ಉದ್ಯಮಿಯೊಬ್ಬರಿಗೆ ಮಾರಿ, ರಸ್ತೆ ಬದಿಯಲ್ಲಿ ಮನೆ ಕಟ್ಟಿಕೊಂಡು ಕೂತರು. ಪುಣ್ಯಾತ್ಮ ಹೊಳೆಬದಿಯಲ್ಲಿ ಒಂದು ಚೂರು ಜಾಗ ಅವರಿಗಾಗಿ ಉಳಿಸಿಕೊಳ್ಳಲಿಲ್ಲ. ಈಗ ಹೊಳೆಗೆ ಹೋಗಬೇಕಾದರೆ ಉದ್ಯಮಿಯ ಅನುಮತಿ ಯಾಚಿಸಬೇಕು. ಹಾಗೂ ಶಿಶಿಲಕ್ಕೆ ಮತ್ತೆ ನಾಲ್ಕು ಸಲ ಹೋದೆ. ನನ್ನ ಬಾಲ್ಯದ ದಿನಗಳೇ ಮಾರಾಟವಾಗಿ ಹೋದವೆಂದೆನಿಸಿ ನೋವು ಹೆಚ್ಚಾಯಿತು. ತೀರಾ ಇತ್ತೀಚೆಗೆ ಮಗಳು ಪ್ರತೀಕ್ಷಾಳನ್ನು ಬೆನ್ನಿಗೆ ಹಾಕಿಕೊಂಡು ಸ್ಕೂಟರಲ್ಲಿ ಅಲ್ಲಿಗೆ ಹೋದೆ. ಹೊಳೆಯಲ್ಲಿ ಗಂಟೆಗಟ್ಟಲೆ ಈಜಿದೆ. ಬಂಡೆಗಳನ್ನು ಮುಟ್ಟಿ ಮುಟ್ಟಿ ಮಾತಾಡಿಸಿದೆ. ಕಣ್ಣು ಮಂಜಾಯಿತು. ಇನ್ನು ಇವನ್ನೆಲ್ಲಾ ನನ್ನದು ಎಂದುಕೊಳ್ಳುವುದರಲ್ಲಿ ಯಾವ ಅರ್ಥವೂ ಇರಲಿಲ್ಲ.

ಸುಳ್ಯಕ್ಕೆ ಬಂದ ಹೊಸದರಲ್ಲಿ ಜಯಾನಂದ, ಬೆಟ್ಟಯ್ಯ, ರಮೇಶಂಣ, ಸೆಬಾಸ್ಟಿಯನ್ನು, ನಾನು, ಕುಮಾರಸ್ವಾಮಿ  ಆಗಾಗ ಕಾಂತಮಂಗಲ ದೋಣಿ ಕಡವಿನಲ್ಲಿ, ಕುರುಂಜಿ ಕಯದಲ್ಲಿ ಈಜುತ್ತಿದ್ದೆವು. ಕುರುಂಜಿ ಕಯ ಆಳವರಿಯದ ಗುಂಡಿ. ಈಜು ಬಾರದ ನಮ್ಮ ಕಾಲೇಜಿನ ಹುಡುಗನೊಬ್ಬ ಅಲ್ಲಿ ಮುಳುಗಿಬಿಟ್ಟ. ನಮ್ಮ ಈಜು ಪಡೆಯಿಂದ ಅವನೆಲ್ಲಿದ್ದಾನೆಂದು ಕಂಡು ಹಿಡಿಯಲಾಗಲಿಲ್ಲ. ಅಗಿನಶಾಮಕ ದಳದವರು ಬಂದು ಪಾತಾಳಗರಡಿ ಹಾಕಿ ಜಾಲಾಡಿದರೂ ಪ್ರಯೋಜನವಾಗಲಿಲ್ಲ. ಕಾಲೇಜು ಸ್ಥಾಪಕ ಡಾಜ ಕುರುಂಜಿ ವೆಂಕಟ್ರಮಣ ಗೌಡರು *ದೇಹ ತೇಲಿ ಹೋಗದಂತೆ ಯಾರಾದರೂ ಇಲ್ಲಿ ಕಾವಲು ಕಾಯಬೇಕು* ಎಂದರು. ಈಗಾಗಲೇ ಡಜನ್ನುಗಟ್ಟಲೆ ಜನರನ್ನು ಬಲಿತೆಗೆದುಕೊಂಡ ಗುಂಡಿಯ ಬಳಿ ರಾತ್ರಿ ಕಾವಲು ಕಾಯಲು ಯಾರು ಒಪ್ಪುತ್ತಾರೆ ? ನಾನು, ಪೆರಾಜೆ ಪ್ರಭಾಕರ ರೈ, ಮತ್ತಿನ್ಯಾರೋ ಮೂವರು ಪೆಟ್ರೋಮಾ್ಮಾಕ್ಸು ಹಚ್ಚಿ ರಾತ್ರಿಯಿಡೀ ಬಂಡೆಯ ಮೇಲೆ ಜಾಗರಣೆ ಮಾಡಿದೆವು. ನಿದ್ರೆ ತಡೆಯದಾದಾಗ ಪಿಂಡಿಯಲ್ಲಿ ಪಯಸ್ವಿನಿಯನ್ನು ಜಾಲಾಡಿದೆವು. ಮರುದಿನ ಬೆಳಿಗ್ಗೆ, ನಿನ್ನೆ ಮುಳುಗಿದಷ್ಟೇ ಹೊತ್ತಿಗೆ, ಆ ಬಡಪಾಯಿಯ ದೇಹ ತಾನಾಗಿಯೇ ಮೇಲಕ್ಕೆ ಬಂತು.

ಮತ್ತೆ ಒಂದಷ್ಟು ದಿನ ಪಯಸ್ವಿನಿಯಲ್ಲಿ ಈಜಲು ಮನಸ್ಸಾಗಲಿಲ್ಲ. ಸುಳ್ಯ ಬೆಳೆಯತೊಡಗಿತು. ಪ್ಲಾಸ್ಟಿಕ್ಕು, ಬಾಟಲು, ಕೊಳಕು ಬಟ್ಟೆ, ಹರಿದ ಚಪ್ಪಲು ಶೂ, ಫಾರಂ ಕೋಳಿಗಳ ಅಂಗಾಂಗಗಳು ಪಯಸ್ವಿನಿಯ ಒಡಲನ್ನು ತುಂಬ ತೊಡಗಿದವು. ದಿನಾ ಪಯಸ್ವಿನಿಯನ್ನು ದಾಟಬೇಕು ನಾನು. ಸೇತುವೆ ಇರುವುದರಿಂದ ನದಿಯ ಸ್ಪರ್ಶವೇ ತಪ್ಪಿಹೋಯಿತು. ಒಂದು ದಿನ ಕುಡಿದು ಜ್ಞಾನತಪ್ಪಿ ಬಿದ್ದಿದ್ದವನೊಬ್ಬ ಮರುದಿನ ನದಿಯಲ್ಲಿ ಹೆಣವಾಗಿ ತೇಲುತ್ತಿದ್ದ. ಮಹಾಮಾತೆಯೊಬ್ಬಳು ಪ್ರಿಯಕರನಿಗಾಗಿ ಕರುಳ ಕುಡಿಯನ್ನು ಸೇತುವೆಯಿಂದಲೇ ಕೆಳಗೆಸೆದು ಕೊಂದುಬಿಟ್ಟಳು. ಇತ್ತೀಚೆಗೆ ಎಳೆ ತರುಣಿ ಮತ್ತವಳ ಮೂರು ವರ್ಷದ ಮಗುವಿನ ಶವ ಪಯಸ್ವಿನಿಯಲ್ಲಿ ಸಿಕ್ಕಿತು. ಊರು ಬೆಳೆಯಿತು. ಅದರೊಂದಿಗೆ ಅಪರಾಧಗಳೂ. ತಮಗಾಗದವರನ್ನು ನದಿಗೆಸೆದು ನಿವಾರಿಸುವ ಪ್ರವೃತ್ತಿ ಬೆಳೆಯುತ್ತಿದೆ. ಈ ತುಮುಲ ದನಿಗಳು ದೊಂಬಿಗೆ ಹೋಗಿದ್ದಾರೆ  ಎಂಬ ಕತೆಯಾಯಿತು. ಪಯಸ್ವಿನಿಯಲ್ಲಿ ಈಜ ಹೋದಾಗ ಹೆತ್ತವರಿಂದಲೇ ಕತ್ತು ಹಿಚುಕಲ್ಪಟ್ಟ ಎಳೆ ಕಂದಮ್ಮಗಳ, ಗಂಡಂದಿರಿಂದಲೇ ನಿರ್ದಾಕ್ಷಿಣ್ಯ ಕೊಲೆಗೀಡಾಗಿ ನದಿಗೆಸೆಯಲ್ಪಟ್ಟ ಎಳೆ ತರುಣಿಯರ ಅಮಾಯಕ ಮುಖಗಳು ಗೋಚರಿಸುವಾಗ ಈಜುವುದಾದರೂ ಹೇಗೆ ?

ಆದರೆ ನೀರ ಮೋಹ ಮೀರಲಸದಳ. ಮೋಹ ಅತಿಯಾದಾಗ ಅರಂಬೂರು ತೂಗು ಸೇತುವೆಗಿಂತ ಸ್ವಲ್ಪ ಮುಂದಕ್ಕೆ ಹೋಗಿ ಪಯಸ್ವಿನಿಯಲ್ಲಿ ಈಜಿ ಬರುತ್ತೇನೆ. ಪೃಥ್ಥಿ, ಪ್ರತೀಕ್ಷಾ ಕಂಪೆನಿ ಕೊಡುತ್ತಾರೆ.

ನದಿ ಯಾವುದಾದರೇನಂತೆ !

ಈಜುವಾಗೆಲ್ಲಾ ತಾಯತೋಳಲ್ಲಿ ಕಂದನಾದಂತೆ

ಆದರೂ ಆಗಾಗ ಕಾಡುತ್ತದೆ ಚಿಂತೆ

ಆದೀತೇ ಪಯಸ್ವಿನಿ ಮೊದಲಿನಂತೆ !

ಸ್ನಾನ ಮುಗಿಸಿ ಮೇಲಕ್ಕೆ ಬಂದೆವು. ಜ್ವರದಿಂದ ಬಳಲುತ್ತಿದ್ದ ಮರ್ಕಂಜ ಗಿರೀಶ ಮೊದಲೇ ಬಸ್ಸು ಹತ್ತಿದ್ದ. ನಾವು ಸರಕಾರಿ ನರ್ಸರಿ ಬಳಿಗೆ ಬಂದು ತಂಗುದಾಣದಲ್ಲಿ ಬಸ್ಸಿಗಾಗಿ ಕಾದೆವು. ಅಲ್ಲೊಬ್ಬ ಸಣ್ಣ ಹುಡುಗ ತಂದೆಯೊಡನೆ ಕೂತಿದ್ದ. ನಮ್ಮನ್ನು ನೋಡಿ ಅವನ ಮುಖ ವಿವರ್ಣವಾಯಿತು. ರಂಜನ್‌ ಅವನ ಬಳಿಗೆ ಹೋದಾಗ ದೊಡ್ಡ ದನಿತೆಗೆದು ಅಳ ತೊಡಗಿದ. ಅವನಿಗೆ ಬಿಸ್ಕತ್ತು ನೀಡಿ ರಮಿಸಿ ಕೇಳಿದೆ. “ಇವತ್ತು ಮಕ್ಕಳ ದಿನ. ಶಾಲೆಯಲ್ಲಿ ದಿನಾಚರಣೆ ಇಲ್ವಾ?’ ಅವನು ಕಾಲು ತೋರಿಸಿದ. ಪಾದದಲ್ಲಿ ಗ್ಲಾಸಿನಿಂದಾದ ಆಳವಾದ ಗಾಯವಿತ್ತು. ಅದಕ್ಕಾಗಿ ಶಾಲೆ ತಪ್ಪಿಸಿದ್ದ. ನಾವೆಲ್ಲಾ ಸೇರಿ ಅವನನ್ನು ಶಾಲೆಗೆ ಎಳಕೊಂಡು ಹೋಗಿ ಬಿಡಬಹುದು ಎಂಬ ಭೀತಿಯಿಂದ ಅವನು ಅತ್ತಿದ್ದ. ಈಗ ಇಕಬಾಲ್‌ ಕೇಳಿದ. ಮಕ್ಕಳ ದಿನಾಚರಣೆಯಂದು ನಮಗೇನು ಕೊಡುತ್ತೀರಿ ಸರ್‌?. ತಣ್ಣನೆಯ ಸ್ವರದಲ್ಲಿ ಹೇಳಿದೆ. ಕೋಣಗಳ ದಿನಾಚರಣೆಯಂದು ನೋಡೋಣು.

ಅಷ್ಟರಲ್ಲಿ ಬಸ್ಸು ಕಾಣಿಸಿಕೊಂಡಿತು. ಬಸ್ಸನ್ನೇರುವ ಮುನ್ನ ಮಕ್ಕಳು ವಿನೀತರಾಗಿ ಅಂಗಲಾಚಿದರು. ವರ್ಷ ಮುಗಿಯುತ್ತಾ ಬಂತು. ಹೀಗೆ ಆಗಾಗ ಎಲ್ಲಿಗಾದರೂ ಹೋಗಿ ಬರೋಣ. ಕರ್ಕೋಂಡು ಹೋಗಿ ಸರ್‌!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವಿಷ್ಯದ ಕ್ರಾಂತಿಕಾರದ ಔಷಧಿಗಳು
Next post ಶ್ರೀಮಂತ ತೈಲ

ಸಣ್ಣ ಕತೆ

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys