ಸ್ಮರಣೆಯೊಂದೇ ಸಾಲದೆ ?

ಅಲಿಪ್‌ಗೆ ತುಲೋಸಿನಿಂದ ಸುಮಾರು ಎಪ್ಪತ್ತು ಕಿಲೋಮೀಟರ್‌ ದೂರ. ಇದು ತಾರ್ನ್‌ ಪ್ರದೇಶದ ಪ್ರಮುಖ ನಗರ. ತಾರ್ನ್‌ ಒಂದು ನದಿಯ ಹೆಸರು. ತುಂಬಾ ಚೆಲುವಿನ ತಾರ್ನ್‌ ನದಿ ಸಾಹಸಿ ಫ್ರೆಂಚರ ಜಲಕ್ರೀಡೆಗಳಿಗೆ ಇಂಬು ನೀಡುತ್ತದೆ. ನದಿ ಹರಿದು ಹಚ್ಚ ಹಸಿರಾಗಿಸುವ ಪ್ರದೇಶಕ್ಕೆ ನದಿಯದೇ ಹೆಸರು ಇಡಲಾಗಿದೆ. ಅಲಿಪ್‌ ತಾರ್ನ್‌ ನದಿ ದಂಡೆಯ ಮೇಲಣ ಒಂದು ಪುಟ್ಟ ಪಟ್ಟಣ. ಅದೊಂದು ನದಿ ಮತ್ತು ಭೂಮಾಕಾರದ ಸೇಂಟ್‌ ಸಿಸಿಲ್‌ ಬ್ಯಾಸಿಲಿಕಾ ಎಂಬ ದೇವಾಲಯ ಇಲ್ಲದೆ ಇರುತ್ತಿದ್ದರೆ ಅಲಿಪ್‌ ಒಂದು ಪ್ರಮುಖ ಪ್ರವಾಸೀ ಕೇಂದ್ರವಾಗಲು ಸಾಧ್ಯವಿರಲಿಲ್ಲ.

ತಾರ್ನ್‌ ನದಿಯ ಎಡದಂಡೆಯಲ್ಲಿ ಹಳೆಯ ಅಲಿಪ್‌ ನಗರವಿದೆ. ಬಲದಂಡೆಯಲ್ಲಿ ಹೊಸ ಅಲಿಪ್‌ ಬೆಳೆದಿದೆ. ಈ ಪುಟ್ಟ ಪಟ್ಟಣಕ್ಕೆ ದೊಡ್ಡದಾದ ಇತಿಹಾಸವಿದೆ. ಅಲಿಪಿಯನ್‌ ನಾಗರಿಕತೆಯನ್ನು ಕ್ರಿ.ಪೂ. 100ರಲ್ಲಿ ರೋಮನ್ನರು ಹುಟ್ಟು ಹಾಕಿದರೆಂದು ಇತಿಹಾಸ ಹೇಳುತ್ತದೆ. ರೋಮನ್ನರು ನಿರ್ಮಿಸಿದ ರಸ್ತೆಗಳನ್ನು ಅಲಿಪಿಯನ್ನರು ಇತಿಹಾಸದ ಹೆಗ್ಗುರುತಾಗಿ ಉಳಿಸಿಕೊಂಡು ಬಂದಿದ್ದಾರೆ. ತಾರ್ನ್‌ ನದಿಯ ಧಕ್ಕೆಗಳು ಮತ್ತು ರೋಮನ್ನರ ರಸ್ತೆಗಳು ಅಲಿಪ್‌ಯನ್ನು ಒಂದು ವ್ಯಾಪಾರ ಕೇಂದ್ರವಾಗಿ ರೂಪಿಸಿದವು. ಕ್ರಿ.ಶ. 1040ರಲ್ಲಿ ತಾರ್ನ್‌ಗೆ ಅಡ್ಡಲಾಗಿ ಕೆಂಪು ಇಟ್ಟಿಗೆಗಳಿಂದಲೇ ನಿರ್ಮಿಸಿದ ಸೇತುವೆ, ಅಲಿಪ್‌ಯ ವಾಣಿಜ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ಫ್ರಾನ್ಸಿನಲ್ಲಿ ಬಳಕೆಯಲ್ಲಿರುವ ಅತ್ಯಂತ ಪುರಾತನ ಸೇತುವೆಗಳಲ್ಲಿ ಇದೂ ಒಂದು. ಅಲಿಪಿಯಲ್ಲಿ ತಾರ್ನ್‌ಗೆ ಅಡ್ಡಲಾಗಿ ಹೊಸತೊಂದು ಸೇತುವೆ ನಿರ್ಮಾಣವಾಗಿದೆ. ಆದರೆ ಅಲಿಪಿಯನ್ನರಿಗೆ ಹಳೆ ಸೇತುವೆ (Pont Vieux) ಅಂದರೆ ಇಂದಿಗೂ ಇನ್ನಿಲ್ಲದ ಮಮತೆ.

ಅಲಿಪ್ ಒಂದು ಕಾಲದಲ್ಲಿ ಕಥಾರರ ನೆಲೆಯಾಗಿತ್ತು. ಲ್ಯಾಂಗ್‌ಡಕ್ಕ್‌ ಪ್ರಾಂತ್ಯದೆಲ್ಲೆಡೆ ಕ್ಯಾಥೋಲಿಕ್ಕರು ಕಥಾರರ ನರಮೇಧ ನಡೆಸುತ್ತಿದ್ದಾಗ ಅಲಿಪ್ ಯುದ್ಧವೇ ಇಲ್ಲದೆ ಕ್ಯಾಥೋಲಿಕ್ಕರಿಗೆ ಶರಣಾಗಿ ವಿನಾಶದಿಂದ ತನ್ನನ್ನು ಬಚಾಯಿಸಿಕೊಂಡಿತು. ಆಮೇಲೆ ಕ್ಯಾಥೋಲಿಕ್ಕರ ಧರ್ಮಯುದ್ಧ ಪಡೆಯೊಂದಿಗೆ ತಾನೂ ಸೇರಿಕೊಂಡು, ಪೋಪನಿಗೆ ತನ್ನ ಅಚಲ ನಿಷ್ಠೆಯನ್ನು ತೋರ್ಪಡಿಸಿತು. ಆದರೆ ಕ್ರಿ.ಶ.1216ರಲ್ಲಿ ಧರ್ಮಯುದ್ಧ ಪಡೆ ಸಂಕಷ್ಟದಲ್ಲಿದ್ದಾಗ ಅಲಿಪ್‌ಯು ತುಲೋಸಿನ ಕೌಂಟನಿಗೆ ತನ್ನ ನಿಷ್ಠೆಯನ್ನು ಬದಲಾಯಿಸಿತು. ಆ ಮೂಲಕ ಮತ್ತೊಮ್ಮೆ ವಿನಾಶದಿಂದ ತನ್ನನ್ನು ಸಂರಕಿಸಿಕೊಂಡಿತು. ಆದರೆ ಫ್ರೆಂಚ್‌ ರಾಜನ ಸೇನೆ ಲ್ಯಾಂಗ್‌ಡಕ್ಕಿಗೆ ದಾಳಿಗೈದಾಗ ಮತ್ತೆ ಅಲಿಪ್‌ ತನ್ನ ನಿಷ್ಠೆಯನ್ನು ಪೋಪನಿಗೆ ವರ್ಗಾಯಿಸಿತು. ಇದೆಲ್ಲಾ ಇಂದಿನ ರಾಜಕಾರಣಿಗಳ ಪಕ್ಷಾಂತರದಂತೆ ಎಂದು ನಮಗೆ ಒಂದು ಕ್ಷಣಕ್ಕೆ ಅನಿಸಬಹುದು. ಅಲಿಪ್‌ಯು ತನ್ನ ನಿಷ್ಠೆಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸದೆ ಇರುತ್ತಿದ್ದರೆ ಹಳೆ ಸೇತುವೆ ಮತ್ತು ಸಿಸಿಲ್‌ ದೇವಾಲಯ  ಹಾಗೆ ಉಳಿಯುತ್ತಿರಲಿಲ್ಲ. ಅಲಿಪ್‌ಯ ವಿರುದ್ಧ ಯಾವ ಯುದ್ಧವೂ ನಡೆದಿರಲಿಲ್ಲ. ಹಾಗಿದ್ದರೂ, ಕಥಾರ್‌ಗಳ ಸಾಮೂಹಿಕ ವಧೆಗೆ ಅಲಿಪೀಜಿಯನ್ನರ ವಿರುದ್ಧದ ಧರ್ಮಯುದ್ಧ ಎಂಬ ಹೆಸರು ಬಂದಿರುವುದಂತೂ ಒಂದು ವಿಚಿತ್ರವೇ.

ಆದರೆ ಕ್ಯಾಥಲಿಕ್ಕ್‌ರ ಮತ್ತು ಪ್ರೊಟಸ್ಟಂಟರ ನಡುವಣ ನೂರು ವರ್ಷಗಳ ಯುದ್ಧದ ಕರಾಳ ಛಾಯೆಯಿಂದ ಅಲಿಪ್‌ಗೆ ತನ್ನನ್ನು ರಕಿಸಿಕೊಳ್ಳಲಾಗಲಿಲ್ಲ. ಪ್ಲೇಗ್‌ ಮಾರಿ ಅಲಿಪ್‌ಯನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟಿತು. ಆ ಬಳಿಕ ಪ್ರತಿ ಏಳು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಯಾವುದಾದರೊಂದು ಸಾಂಕ್ರಾಮಿಕ ರೋಗ ಅಲಿಪ್‌ ಮತ್ತು ಅದರ ಸುತ್ತುಮುತ್ತಣ ಸಾವಿರಾರು ಜನರನ್ನು ಆಪೋಶನ ತೆಗೆದುಕೊಳ್ಳತೊಡಗಿತು. ಹದಿನಾರನೆಯ ಶತಮಾನದಂತ್ಯ- ಕ್ಕಾಗುವಾಗ ಈ ಸಮಸ್ಯೆಗಳೆಲ್ಲಾ ನಿವಾರಣೆಯಾದವು.

ಈ ಕಾಲದಲ್ಲಿ ಪ್ಯಾಸ್ಟೆಲ್‌ ಅಥವಾ ವೋಡ್‌ ಎಂಬ ನೀಲಿ ದ್ರವವನ್ನು ನೀಡುವ ಗಿಡಗಳನ್ನು ಅಲಿಪ್‌ಯನ್ನರು ಬೆಳೆಯತೊಡಗಿದರು. ನೀಲಿದ್ರವ ನಿರ್ಯಾತದಿಂದ ಅಲಿಪ್‌ಯು ಭೌತಿಕವಾಗಿ ಸುಧಾರಿತವಾಗತೊಡಗಿತು. ಆಗ ಅಲಿಪ್‌ಗೆ ‘ಸಮೃದ್ಧಿಯ ಭೂಮಿ’ ಎಂಬ ನಾಮವಿಶೇಷಣ ನೀಡಲಾಯಿತು. ಆ ಬಳಿಕ ಅಲಿಪ್‌ ನಿಧಾನವಾಗಿ ಆದರೆ ದೃಢವಾಗಿ ಉತ್ಕರ್ಷದ ಪಥದಲ್ಲಿ ಮುನ್ನಡೆಯತೊಡಗಿತು.

ನಾಮದ ಬಲ

ಅಲಿಪ್‌ಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ಆರು ಮಂದಿಗಳನ್ನು ಅಲಿಪಿಯನ್ನರು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಅವರ ಬಗ್ಗೆ ಹೇಳುವಾಗ ಅಲಿಪ್‌ಯನ್ನರ ಮುಖದಲ್ಲಿ ಮೂಡುವ ಭಾವವನ್ನು ನೋಡಬೇಕು. ಅಭಿಮಾನವೆಂದರೆ ಅದು! ಅಲಿಪ್‌ಯನ್ನರ ಹೆಮ್ಮೆಗೆ ಕಾರಣರಾದ ಆರು ಮಂದಿಗಳಲ್ಲಿ ಮೊದಲನೆಯವನು ಬರ್ನಾಡ್‌ ಡಿ ಕ್ಯಾಸ್ಟನೆಟ್‌. ಆತ ಹದಿಮೂರನೆಯ ಶತಮಾನದಲ್ಲಿ ಅಲಿಪ್‌ಯ ಬಿಷಪ್ಪನಾಗಿದ್ದ. ಅಲಿಪ್‌ಗೆ ಮಹೋನ್ನತ ಖ್ಯಾತಿಯನ್ನು ತಂದುಕೊಟ್ಟ ಸೇಂಟ್‌ ಸಿಸಿಲ್‌ ಬ್ಯಾಸಿಲಿಕಾದ ನಿರ್ಮಾಣ ಕಾರ್ಯವನ್ನು ಆರಂಭಿಸಿದವ ಆತನೇ. ಅದಕ್ಕಾಗಿಯೇ ಆತ ಅಲಿಪ್‌ಯನ್ನರ ನೆನಪಿನ ಪದರಗಳಲ್ಲಿ ಉಳಕೊಂಡು ಬಿಟ್ಟ. ಈ ಬ್ಯಾಸಿಲಿಕಾದ ನಿರ್ಮಾಣ ಕಾರ್ಯ ಮುಗಿದದ್ದು ಬಿಷಪ್ಪ್‌ ಒಂದನೇ ಲೂಯಿ ಎಂಬಾತನ ಕಾಲದಲ್ಲಿ. ಹಾಗಾಗಿ ಒಂದನೇ ಲೂಯಿ ಕೂಡಾ ಅಲಿಪ್‌ಯನ್ನರಿಗೆ ಪ್ರಾತಃ ಸ್ಮರಣೀಯನಾದ.

ಜುವಾನ್‌ ಫ್ರಾಂಸೆ ಡಿ ಗಲಾಪ್‌ ಎಂಬಾತ ತನ್ನ ಅಸೀಮ ಧೈರ್ಯ ಸಾಹಸಗಳಿಂದಾಗಿ ಅಲಿಪ್‌ಯನ್ನರ ಹೃದಯದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿದ್ದಾನೆ. ಆತ ಹದಿನೆಂಟನೇ ಶತಮಾನದಲ್ಲಿ ಲಾಪೆರೋಸ್‌ನ ಕೌಂಟನಾಗಿದ್ದವ. ಅಮೇರಿಕಾದ ಸ್ವಾತಂತ್ರ ಸಂಗ್ರಾಮ ಕಾಲದಲ್ಲಿ ತನ್ನ ಯುದ್ಧ ಚಾತುರ್ಯದಿಂದ ಜಗದ್ವಿಖ್ಯಾತನಾದ ಆತನ ಕಾಲ ಕ್ರಿ.ಶ.1741 ರಿಂದ 1788. ಯುದ್ಧಾ ನಂತರ ಪೆಸಿಫಿಕ್‌ ಸಾಗರದಲ್ಲಿ ಸಾಹಸ ಯಾತ್ರೆ ಕೈಗೊಂಡು ವ್ಯಾನಿಕೊರೋ ದ್ವೀಪದಲ್ಲಿಳಿದಾಗ, ಅಲ್ಲಿನ ನರಭಕಕರ ಕೈಗೆ ಸಿಕ್ಕಿ ಬಿದ್ದು ಆತ ಅವರ ಹೊಟ್ಟೆ ಸೇರಬೇಕಾಯಿತು. 47 ವರ್ಷಗಳ ಸಾರ್ಥಕ ಜೀವನ ಸಾಗಿಸಿದ ಲಾಪೆರೋಸನ ಭವ್ಯ ಪ್ರತಿಮೆಯೊಂದನ್ನು ಅಲಿಪ್‌ಯ ಹೃದಯ ಭಾಗದಲ್ಲಿ ನಿಲ್ಲಿಸಲಾಗಿದೆ. ಅಲಿಪ್‌ಯನ್ನರು ಆತನ ಹೆಸರಲ್ಲಿ ಒಂದು ಉನ್ನತ ಮಟ್ಟದ ಶಿಕಣ ಸಂಸ್ಥೆಯನ್ನು ರಚಿಸುವ ಮೂಲಕ ಆತನಿಗೆ ಚರಮಾಂಜಲಿ ನೀಡಿದ್ದಾರೆ.

ಫ್ರಾನ್ಸಿನ ನೌಕಾಪಡೆಯ ರಿಯರ್‌ ಅಡ್ಮಿರಲ್‌ ಪಾಸ್ಕಲ್‌ ಡಿ ರೋಸ್‌ ಗ್ಯುಡ್‌ (ಕ್ರಿ.ಶ.1741-1834)ಏ ಅಲಿಪ್‌ಯ ಇನ್ನೊಬ್ಬ ಮಹಾನ್‌ ಯೋಧ. ಆತ ಫ್ರೆಂಚ್‌ ಕ್ರಾಂತಿಯ ಭೀಕರತೆಗೆ ಮತ್ತು ನೆಪೋಲಿಯನ್ನನ ಉದಯಕ್ಕೆ ಸಾಕಿಯಾಗಿದ್ದವ. ಅಂತ್ಯಕಾಲದಲ್ಲಿ ತನ್ನ ಖಾಸಗಿ ನಿವಾಸವನ್ನು ಆತ ಅಲಿಪ್‌ಯ ಜನತೆಗೆ ಅರ್ಪಿಸಿದ. ಅದೀಗ ಮುನಿಸಪಲ್‌ ಗ್ರಂಥಾಲಯವಾಗಿ ಮಾರ್ಪಟ್ಟು ಜನರ ಜ್ಞಾನದಾಹವನ್ನು ಇಂಗಿಸುವ ಯತ್ನ ಮಾಡುತ್ತಿದೆ.

ಅಲಿಪ್‌ಯನ್ನರು ಮಾತ್ರವಲ್ಲದೆ ಸಮಸ್ತ ಫ್ರೆಂಚ್‌ ಜನತೆ ಸದಾಕಾಲ ನೆನಪಿಟ್ಟುಕೊಳ್ಳುವ ಚಿತ್ರಕಲಾ ಜಗತ್ತಿನ ಮಹಾನ್‌ ಪ್ರತಿಭೆ ತುಲೋಸ್‌ ಲ್ಯಾಟ್ರೆಕ್‌ ಅಲಿಪ್‌ಯ ಜನರ ಜೀವನದ ಒಂದು ಭಾಗವೇ ಆಗಿ ಹೋಗಿದ್ದಾನೆ. ಕ್ರಿ.ಶ.1864 ರಿಂದ 1901ರ ವರೆಗೆ ಜೀವಿಸಿದ್ದ ಆತ ಕುಂಚದ ಮೂಲಕ ಸಾಂಸ್ಕೃತಿಕ ಕ್ರಾಂತಿಯನ್ನು ಸಾಧಿಸಿದವನು. ಕೇವಲ 37 ವರ್ಷ ಮಾತ್ರವೇ ಬದುಕಿದ್ದ ಆತ ಅಸಾಂಪ್ರದಾಯಿಕ ಚಿತ್ರಕಲೆಯ ಮೂಲಕ ವಿಶ್ವದ ಕಲಾಗಾರರ ಗಮನವನ್ನು ಸೆಳೆದ. ಫ್ರಾನ್ಸಿನಲ್ಲಿ ಪೋಸ್ಟರ್‌ ಚಿತ್ರ ಮತ್ತು ಬರಹಗಳನ್ನು ಆರಂಭಿಸಿದ್ದೇ ಆತ. ಎಳವೆಯಲ್ಲೇ ಅಪಘಾತದಿಂದಾಗಿ ಕುಂಟನಾಗಿ ಹೋದ ಲ್ಯಾಟ್ರೆಕ್ಕನ ವಿಭಿನ್ನ ಚಿಂತನಾ ಕ್ರಮದಿಂದಾಗಿ ಬಂಧು ಬಾಂಧವರು ಅವನ್ನು ಮಾರು ದೂರ ಇರಿಸಿದರು. ತಾಯಿಯ ಪ್ರೀತಿಯೊಂದೇ ಆಧಾರವಾಗಿ ಲ್ಯಾಟ್ರೆಕ್‌ ಅದ್ಹೇಗೋ ಬದುಕಿಕೊಂಡ. ಆಗ ಹೆಣ್ಣು ಅವನ ಕಲಾಮಾಧ್ಯಮ- ವಾದಳು. ಯಾವ ಹೆಣ್ಣು ಸಂದರ್ಭಗಳ ಅನಿವಾರ್ಯತೆಗಳಿಗೆ ಬಲಿಪಶುವಾಗಿ ನರ್ತಕಿಯಾದ, ವಾರಾಂಗನೆಯಾದ ಹೆಣ್ಣು ಮೊತ್ತ ಮೊದಲ ಬಾರಿಗೆ ಹೆಣ್ಣಿನ ಶೋಷಣೆ ಕುಂಚದ ಮೂಲಕ ಮೂಡಿ ಬಂತು. ಲ್ಯಾಟ್ರೆಕ್‌ ಕ್ಯಾಬರೇಗೃಹಗಳ ನರ್ತಕಿಯರ, ಮೈಮಾರಿ ಬದುಕುವ ವಾರಾಂಗನೆಯರ ನಡುವೆ ಕಾಲ ಕಳೆದ. ಅವರ ದುರ್ಭರ ಬದುಕನ್ನು ಬಣ್ಣದ ಮೂಲಕ ಜಗತ್ತಿಗೆ ಪರಿಚಯಿಸಿದ. ಆತನ ಅಪ್ಪಟ ಪ್ರಾಮಾಣಿಕತೆಗೆ ಸೋಗಲಾಡಿ ಸಮಾಜ ಬೆಚ್ಚಿ ಬಿತ್ತು. ನೋವುಗಳ ಮಧ್ಯದಲ್ಲಿ ಬದುಕಿದ ಲ್ಯಾಟ್ರೆಕ್‌ ನೋವು ಮರೆಯಲು ಕುಡಿತಕ್ಕೆ ಶರಣಾದ. ಕುಡಿದೂ ಕುಡಿದೂ ಕೊನೆಗೊಂದು ದಿನ ಸತ್ತುಹೋದ. ಸತ್ತ ಬಳಿಕ ಬಹುದೊಡ್ಡ ಕಲಾವಿದನಾಗಿ ಜನರ ನಡುವೆ ಬದುಕುಳಿದ.

ಅಲಿಪ್‌ಯನ್ನರ ಹೆಮ್ಮೆಗೆ ಪಾತ್ರನಾದ ಇನ್ನೋರ್ವ ಮಹಾನುಭಾವನೆಂದರೆ ಜಾರ್ಜೆಸ್‌ ಪಾಂಪಿಡೋ. ಕ್ರಿ.ಶ.1911ರಲ್ಲಿ ಜನಿಸಿದ ಈತ ಓದಿದ್ದು ಕೂಡಾ ಅಲಿಪ್‌ಯ ಲಾಪೆರೋಸ್‌ ಶಿಕಣ ಸಂಸ್ಥೆಯಲ್ಲಿ. ಸಾಧನೆಗಳ ಮೆಟ್ಟಿಲುಗಳನ್ನು  ಸ್ವಪ್ರಯತ್ನದಿಂದ ಏರುತ್ತಾ ಹೋದ ಈತ ಮುಂದೊಂದು ದಿನ ಫ್ರಾನ್ಸಿನ ಅಧ್ಯಕನಾದ. 1973ರಲ್ಲಿ ಈತ  ತೀರಿಕೊಂಡರೂ ಜನರ ಹೃದಯಗಳಲ್ಲಿ ಚಿರಂಜೀವಿಯಾಗಿ ಉಳಿದಿದ್ದಾನೆ.

ಅಲಿಪ್‌ಯನ್ನು ಸೇಂಟ್‌ ಸಿಸಿಲ್‌ ಬ್ಯಾಸಿಲಿಕಾ ಎಂದು ಕರೆಯಲ್ಪಡುವ ಕಲಾತ್ಮಕ ದೇಗುಲದೊಡನೆ ಸಮೀಕರಿಸುವುದು ಫ್ರೆಂಚರ ವಾಡಿಕೆ. ಈ ಭೂಮ ದೇಗುಲದ ಉದ್ದ 114 ಮೀಟರ್‌, ಅಗಲ 35 ಮೀಟರ್‌ ಮತ್ತು ಗೋಡೆಗಳ ಎತ್ತರ 40 ಮೀಟರ್‌. 78 ಮೀಟರ್‌ ಎತ್ತರದ ಗಂಟಾಗೋಪುರ ಅಲಿಪ್‌ಯನ್ನು ಅದೆಷ್ಟೋ ಮೈಲಿ ದೂರದಿಂದ ಗುರುತಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಈ ದೇಗುಲದ ನಿರ್ಮಾಣ ಕಾರ್ಯ ಬರ್ನಾಡ್ರ್‌ ಡಿ ಕ್ಯಾಸ್ಟೆನೆಟ್ಟ್‌ ಎಂಬ ಬಿಷಪ್ಪನಿಂದ ಕ್ರಿ.ಶ.1281ರ ಅಗೋಸ್ತು 15ರಂದು ಆರಂಭವಾಗಿ, ಕ್ರಿ.ಶ.1480ರ ಎಪ್ರಿಲ್‌ 23ರಂದು ಬಿಷಪ್‌ ಒಂದನೇ ಲೂಯಿಯ ಕಾಲಕ್ಕೆ ಮುಕ್ತಾಯವಾಯಿತು. ಅಂದರೆ ದೇಗುಲದ ನಿರ್ಮಾಣಕ್ಕೆ ಇನ್ನೂರು ವರ್ಷ ಬೇಕಾಯಿತು!

ತನ್ನ ಭೌಮಾಕೃತಿ ಮತ್ತು ಸುಂದರ ವಾಸ್ತುಶಿಲ್ಪದಿಂದ ದೇಗುಲವು ಹೊರನೋಟಕ್ಕೇ ನಮ್ಮನ್ನು ದಂಗು ಬಡಿಸುತ್ತದೆ. ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟ, ಮೆರಿಡಿಯೋನಲ್‌ ಗೋಥಿಕ್‌ ಶೈಲಿಯ ವಿಶ್ವದ ಅತ್ಯುತ್ಕೃಷ್ಟ ದೇಗುಲ ಎಂಬ ಅಭಿದಾನಕ್ಕೆ ಅದು ಪಾತ್ರವಾಗಿದೆ. ಅದರ ಮಧ್ಯಾಂಗಣದಲ್ಲಿರುವ 12 ಕಮಾನುಗಳು ಏಸುವಿನ ಹನ್ನೆರಡು ಮಂದಿ ಶಿಷ್ಯರನ್ನು ಪ್ರತಿನಿಧಿಸುತ್ತವೆ. ದೇಗುಲದ ಬೃಹತ್‌ ಗೋಡೆಗಳ ಆಧಾರದಲ್ಲಿ ನಿಂತಿರುವ ಕಮಾನುಗಳಿವು. ಕಮಾನು ಚಾವಣಿಯಲ್ಲಿ ಬೊಲೋನ್‌ ಪ್ರಾಂತ್ಯದ ಇತಾಲಿಯನ್‌ ಕಲಾವಿದರು ಕ್ರಿ.ಶ.1509 ರಿಂದ 1512ರ ಅವಧಿಯಲ್ಲಿ ಬಿಡಿಸಿದ ಸುಂದರ ವರ್ಣಚಿತ್ರಗಳಿವೆ. ದೇಗುಲದ ಉಳಿದೆಡೆಗಳಲ್ಲಿ ಹಳೆಯ ಮತ್ತು ಹೊಸ ಒಡಂಬಡಿಕೆಗಳಿಗೆ ಸಂಬಂಧಿಸಿದ ನಯನ ಮನೋಹರ ಚಿತ್ರಗಳಿವೆ. ಇವುಗಳೊಂದಿಗೆ ದೇಗುಲದೊಳಗಿರುವ ಜಾಲರಿಗಳು, ಬಲಿಪೀಠ, ಗಾಯಕರ ಪೀಠಗಳು, ಅದ್ಭುತವಾದ ವರ್ಣಚಿತ್ರಗಳು, ಅಲ್ಲಿನ ಪ್ರಶಾಂತತೆ ನಮಗೆ ಅಲೌಕಿಕವಾದ ಅನುಭವವನ್ನು ಕೊಡುತ್ತವೆ.

ದೇಗುಲದ ಉತ್ತರ ಭಾಗದಲ್ಲಿ ಅದಕ್ಕೆ ತಾಗಿಕೊಂಡಂತೆ ಇದೆ ಲಾ ಬೆರ್ಬೀ ಅರಮನೆ. ಇದು ಬಿಷಪ್ಪನ ನಿವಾಸ. ಅರಮನೆಯ ಗೋಪುರದ ಎತ್ತರ 34 ಮೀಟರ್‌. ಅದು ಈಗ ಒಂದು ಸ್ಮಾರಕವಾಗಿದೆ. ಆ ಅರಮನೆಗೆ  ತಾಗಿಕೊಂಡಂತೇ ಇದೆ ತುಲೋಸ್‌ ಲ್ಯಾಟ್ರಿಕ್ಕನ ಚಿತ್ರ ಸಂಗ್ರಹಾಲಯ. ಅದರ ಹಿಂದೆ ಸುಂದರವಾದ ಉದ್ಯಾನವಿದೆ. ಆ ಉದ್ಯಾನವನ್ನು ‘ಲ್ಯಾಟ್ರಿಕ್ಕನ ಕಲೆಗೆ ಅಲಿಪ್‌ಯ ಜನರ ಗೌರವ’ವೆಂದು ಪರಿಗಣಿಸಲಾಗುತ್ತದೆ. ಉದ್ಯಾನದ ಬಳಿಕ ನೂರು ಹೆಜ್ಜೆ ನಡೆದರೆ ನಿಮ್ಮ ಕಾಲುಗಳು ನಿಮ್ಮನ್ನು ಒಯ್ಯುವುದು ತಾರ್ನ್‌ ನದಿಗೆ.

ತಾರ್ನ್‌ ನದಿಯ ನೈಜ ಸೌಂದರ್ಯವನ್ನು ಕಾಣಲು ಅಲಿಪ್‌ಯಿಂದ 25ಕಿ.ಮೀ. ದೂರದಲ್ಲಿರುವ ಅಂಬಿಯಾಲೆಟ್ಟಿಗೆ ಹೋಗಬೇಕು. ಹಿಂದೆ ಇಲ್ಲಿಗೆ ರೈಲು ಸಂಪರ್ಕವಿತ್ತು. ಪರ್ವತ ಪ್ರದೇಶದ ಅಂಬಿಯಾಲೆಟ್ಟಿಗೆ ಹೋಗಲು ಸುರಂಗ ರೈಲು ಮಾರ್ಗಗಳಿದ್ದವು. ಈಗ ನಿಸರ್ಗದ ಸಹಜತೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ, ರೈಲು ಸಂಪರ್ಕವನ್ನು ನಿಲ್ಲಿಸಲಾಗಿದೆ. ರೈಲು ಮಾರ್ಗಗಳು ರಸ್ತೆಗಳಾಗಿ ರೂಪಾಂತರಗೊಂಡಿವೆ. ಅಲ್ಲಿನ ಸುರಂಗ ಮಾರ್ಗಗಳಲ್ಲಿ ಪಯಣಿಸುವುದು ಒಂದು ರೋಮಾಂಚಕಾರೀ ಅನುಭವ. ಉರುಳುವ ಭಂಗಿಯಲ್ಲಿರುವ ಬೃಹತ್‌ ಬಂಡೆಕಲ್ಲಿನ ಬುಡವನ್ನು ಕೊರೆದು ಮಾಡಿದ ಸುರಂಗ ಮಾರ್ಗದ ಮೂಲಕ ಹಾದು ಹೋಗುವಾಗ ನಿಜಕ್ಕೂ ಹೆದರಿಕೆಯಾಗುತ್ತದೆ.

ಅಂಬಿಯಾಲೆಟ್ಟಿನ ಹಾದಿಯಲ್ಲಿ ಕಥಾರರ ಕೋಟೆಗಳು ಕಾಣ ಸಿಗುತ್ತವೆ. ಕ್ಯಾಥಲಿಕ್ಕರ ಬರ್ಬರ ಆಕ್ರಮಣಕ್ಕೆ ಸಿಕ್ಕು ಭಗ್ನಾವಶೇಷಗಳಾಗಿ ಉಳಿದಿರುವ ಈ ಕೋಟೆಗಳ ಕಲ್ಲುಕಲ್ಲುಗಳಲ್ಲಿ ಅದೆಷ್ಟು ಕತೆಗಳಿವೆಯೊ? ಅಂಬಿಯಾಲೆಟ್ಟನ್ನು ಬಳಸಿ ಹರಿಯುವ ತಾರ್ನ್‌ ನದಿ ಅದನ್ನೊಂದು ದ್ವೀಪವಾಗಿ ಪರಿವರ್ತಿಸಿದೆ. ಅಂಬಿಯಾಲೆಟ್ಟಿನ ಗುಡ್ಡದಿಂದ ದೂರಕ್ಕೆ ನೋಡಿದರೆ ತಾರ್ನ್‌ನದಿ ಘಟ್ಟ ಪ್ರದೇಶದಿಂದ ಹಾವಿನಂತೆ ಹರಿದು ಬರುವ ರಮಣೀಯ ದೃಶ್ಯ ಕಾಣುತ್ತದೆ. ಅಂಬಿಯಾಲೆಟ್ಟಿನ ಗುಡ್ಡದ ನೆತ್ತಿಯಲ್ಲೊಂದು ಹಳೆಯ ಚರ್ಚು ಇದೆ. ಅದರ ಎಡ ಪಾಶ್ರ್ವದಲ್ಲಿ ಸ್ಮಶಾನವಿದೆ. ಸತ್ತವರ ಆರ್ಥಿಕ ಅಂತಸ್ತಿಗೆ ತಕ್ಕಂತೆ ಅಲ್ಲಿ ಗೋರಿಗಳ ನಿರ್ಮಾಣವಾಗಿದೆ. ಬದುಕಿನುದ್ದಕ್ಕೂ ಒಣಪ್ರತಿಷ್ಠೆಠಯಲ್ಲಿ ಬದುಕಿ ಕೊನೆಗೆ ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹಕ್ಕೆ ಸತ್ತ ಮೇಲೂ ಒಂದು ಅಂತಸ್ತು!

ಮೀಸೆ ಫರೆಂಕ್‌ ಮತ್ತು ಮನು

ಅಲಿಪ್‌ಯಲ್ಲಿ ನಾನು ಉಳಿದುಕೊಂಡದ್ದು ಫರೆಂಕನ ಮನೆಯಲ್ಲಿ. ಈತನಿಗೆ ದಂತಚೋರ ವೀರಪ್ಪನ್‌ ತರಹದ ಮೀಸೆಯಿರುವುದರಿಂದ ಅಲಿಪ್‌ಯಲ್ಲಿ ಆತನ್ನು ಮೀಸೆ ಫರೆಂಕ್‌ ಎಂದೇ ಕರೆಯುತ್ತಾರೆ. ನಲ್ವತ್ತೇಳರ ಹರೆಯದ ಮೀಸೆ ಫರೆಂಕನ ಹೊಟ್ಟೆ, ಸ್ವಲ್ಪ ಮುಂದಕ್ಕೆ ಬಂದಿದೆ. ಪಶು ಸಂಗೋಪನೆಯೊಂದಿಗೆ ಪಶುವೈದ್ಯಕೀಯವನ್ನೂ ಮಾಡುತ್ತಿರುವ ಆತನ ಕಾರ್ಯಕೇತ್ರಕ್ಕೆ ಅಲಿಪ್‌ಯಿಂದ ಹದಿನೈದು ಕಿ.ಮೀ. ದೂರವಿದೆ. ಬಳಕುವ ಶರೀರದ ಅವನ ಮಡದಿ ಸೆಲ್ವಿ ಅಲಿಪ್‌ಯಲ್ಲಿ ಮದ್ದಿನ ಅಂಗಡಿ ಇಟ್ಟುಕೊಂಡಿದ್ದಾಳೆ. ಹದಿನೈದರ ಹರೆಯದ ಮಗ ತುಲೋಸಲ್ಲಿ ಓದುತ್ತಿದ್ದಾನೆ. ಮಗಳು ಮನು ಅಪ್ಪಅಮ್ಮಂದಿರೊಟ್ಟಿಗಿದ್ದಾಳೆ.

‘ಇವಳಿಗೀಗ ಬರೇ ಹನ್ನೊಂದು ವರ್ಷ. ನೋಡಿದರೆ ಹದಿನಾಲ್ಕು ದಾಟಿದವಳಂತಿದ್ದಾಳೆ. ನನಗಿದೇ ಚಿಂತೆಯಾಗಿದೆ’ ಎಂದು ಸೆಲ್ವಿ ಮನುವನ್ನು ತೋರಿಸುತ್ತಾ ನನ್ನಲ್ಲಿ ಹೇಳಿದಳು. ಮನು ಅನ್ನುವುದು ಭಾರತೀಯ ಹೆಸರೆಂದು ಹೇಳಿದಾಗ ಸೆಲ್ವಿಗೆ ಖುಷಿಯಾಗಿತ್ತು. ಸೆಲ್ವಿಯ ಮಾತಿಗೆ ಫರೆಂಕ್‌ ಮೀಸೆಯಡಿಯಲ್ಲಿಯೇ ನಕ್ಕ. ‘ನಗು. ನೀನು ಕೂಡಾ ಉಬ್ಬುತ್ತಾ ಹೋಗುತ್ತಿದ್ದೀಯೆ. ಒಂದು ದಿನ ನಿನ್ನ ಹೊಟ್ಟೆ ಬಲೂನಿನ ಹಾಗೆ ಒಡೆದು ಹೋಗುತ್ತದೆ’ ಎಂದು ಸೆಲ್ವಿ ಪ್ರೀತಿಯಿಂದ ಗಂಡನ್ನು ಛೇಡಿಸಿದಳು. ಅವನೀಗ ಹೊಟ್ಟೆ ಕುಲುಕುವಷ್ಟು ಗಟ್ಟಿಯಾಗಿ ನಕ್ಕ.

‘ನೀನೂ ಎರಡು ಮಕ್ಕಳ ಅಪ್ಪ. ಆದರೆ ಒಳ್ಳೆ ಅಥ್ಲೆಟ್‌ತರ ಕಾಣುತ್ತಿದ್ದೀಯಾ! ಅದು ಹೇಗೆ?’ ಎಂದು ಸೆಲ್ವಿ  ರವಾಗಿಯೇ ನನ್ನಲ್ಲಿ ಕೇಳಿದಳು. ಅದೂ ಗಂಡನ ಎದುರಲ್ಲೇ! ಮೀಸೆ ಫರೆಂಕ್‌ ಈಗಲೂ ನಗುತ್ತಿದ್ದ.’ ನಾನು ದಿನಾ ಜಾಗಿಂಗ್‌ ಮಾಡುತ್ತೇನೆ. ಬಿಡುವಿದ್ದಾಗ ಯೋಗಾಸನ ಕೂಡಾ. ಮಿತ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಎಂತಹ ಹೊಟ್ಟೆಯನ್ನೂ ಕರಗಿಸಬಹುದು’ ಎಂದೆ.

ಮನುವಿನ ಕಣ್ಣುಗಳು ಮಿನುಗಿದವು. ‘ನಾನು ಯೋಗಾಸನ ನೋಡಬೇಕಲ್ಲಾ? ತೋರಿಸ್ತೀಯಾ?’ ಎಂದು ದುಂಬಾಲು ಬಿದ್ದಳು. ಅವಳಷ್ಟೇ ಎತ್ತರಕ್ಕೆ ಬೆಳೆದಿದ್ದ ಅವಳ ಎರಡು ವರ್ಷದ ಹೆಣ್ಣು ನಾಯಿ ದಿಶಿ ಬಾಲ ಅಲ್ಲಾಡಿಸುತ್ತಾ ನನಗೆ ಪ್ರದಕ್ಷಿಣೆ ಹಾಕಿತು. ಫರೆಂಕ್‌ ‘ನೋಡುವಾ. ನನ್ನ ಹೊಟ್ಟೆ ಸಣ್ಣಗಾಗುವುದಾದರೆ ಆಗಲಿ’ ಎಂದು ಮುಂದಿನದಕ್ಕೆ ಸಿದ್ಧನಾದ.

ವಾಸ್ತವವಾಗಿ ನಾನು ಯೋಗಾಸನ ತಜ್ಞನೇನಲ್ಲ. ಸಣ್ಣವನಿರುವಾಗ ಕೆಲವು ಆಸನಗಳನ್ನು ಏಕಲವ್ಯನಂತೆ ಕಲಿತದ್ದೇ ನನ್ನ ಯೋಗಾಸನ ಶಿಕಣ. ಕೆಲವು ವರ್ಷಗಳ ಹಿಂದೆ ಸುಳ್ಯದಲ್ಲಿ ಮೈಸೂರಿನ ರಾಮಕೃಷ್ಣಾಶ್ರಮದವರು ಹತ್ತು ದಿನಗಳ ಯೋಗಾಸನ ಶಿಬಿರವೊಂದನ್ನು ಸಂಘಟಿಸಿದ್ದರು. ನಾನದರಲ್ಲಿ ಪಾಲ್ಗೊಂಡು ನನಗೆ ಗೊತ್ತಿದ್ದುದನ್ನು ಗಟ್ಟಿ ಮಾಡಿಕೊಂಡಿದ್ದೆ. 1976ರಲ್ಲಿ ಸಾಕ್ಷಾತ್‌ ತಿರುಮಲ ಬೆಟ್ಟದಲ್ಲಿ ಮಹರ್ಷಿ ಮಹೇಶ ಯೋಗಿಯ ಎರಡು ತಿಂಗಳ ಅತೀಂದ್ರಿಯ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ಆಸನವಿಲ್ಲದೆ ಧ್ಯಾನ ಸಲ್ಲ ಎಂಬ ಪಾಠವೇನೋ ಸಿಕ್ಕಿತ್ತು. ಅಲ್ಲೂ ಯೋಗಾಸನಗಳನ್ನು ಹೇಳಿಕೊಡುವವರಿಲ್ಲದೆ ಶಿಬಿರ ಒಟ್ಟಾರೆಯಾಗಿ ಮುಗಿದಿತ್ತೇ ಹೊರತು ಅದರಿಂದ ಕಿಲುಬುಗಾಸು ಪ್ರಯೋಜನ ಸಿಕ್ಕಿರಲಿಲ್ಲ. ಆದರೆ ಯೋಗಾಸನ ಬಾರದವರ ಹಾಳೂರಿಗೆ ನಾನೇ ಗೌಡ! ಜೋಧಪುರದಲ್ಲಿ 1993ರಲ್ಲಿ ಮೂರು ವಾರಗಳ ಕಾಲೇಜು ಶಿಕಕರ ಪುನರ್ನವೀಕರಣ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ನನಗೆ ಗೊತ್ತಿರುವ ನಾಲ್ಕೈದು ಆಸನಗಳಿಂದ ಉಳಿದವರನ್ನು ದಂಗು ಬಡಿಸಿದ್ದೆ. ಇದೀಗ ಭಾರತದಿಂದ ಸುಮಾರು ಎಂಟು ಸಾವಿರ ಕಿ.ಮೀ. ದೂರದ ಅಲಿಪ್‌ಯಲ್ಲಿ ಮಿಂಚಲಿಕ್ಕೊಂದು ಅವಕಾಶ.

ನಾನು ಪದ್ಮಾಸನ ಹಾಕಿ ಅದರ ಪ್ರಯೋಜನಗಳನ್ನು ವಿವರಿಸಿದೆ. ಸೆಲ್ವಿ ನೋಟ್ಸು ಬರಕೊಳ್ಳತೊಡಗಿದಳು. ಅಪ್ಪ ಮಗಳಿಗೆ ಪದ್ಮಾಸನ ಬಿಡಿ, ಚಕಳಂಬಕ್ಕಳ ಹಾಕಿ ಕುಳಿತುಕೊಳ್ಳಲು ಕೂಡಾ ಸಾಧ್ಯವಾಗಲಿಲ್ಲ. ಅತ್ಯಂತ ಸುಲಭವಾದ ವಜ್ರಾಸನ ಮತ್ತು ಶಶಾಂಕಾಸನಗಳನ್ನು ಫರೆಂಕನೂ ಮಾಡಿದ. ಮನುವೂ ಮಾಡಿ ‘ಇಷ್ಟೇನಾ?’ ಎಂದಳು! ಸರ್ವಾಂಗಾಸನದಲ್ಲಿ ನಾನಿದ್ದಾಗ ಮನುವಿನ ನಾಯಿ ದಿಶಿ ನನಗೊಂದು ಸುತ್ತು ಬಂದು ತನ್ನ ನಾಲಗೆಯಿಂದ ನನ್ನ ಕೆನ್ನೆಯನ್ನು ನೆಕ್ಕತೊಡಗಿತು. ‘ಇದನ್ನು ಖಂಡಿತಾ ಮಾಡಬಲ್ಲೆವು’ ಎಂದು ಅಪ್ಪಮಗಳು ಬಡಿವಾರ ಕೊಚ್ಚುವು- ದರೊಂದಿಗೆ ಸರ್ವಾಂಗಾಸನದ ಕತೆ ಮುಗಿಯಿತು. ಮತ್ತೆ ಮಯೂರಾಸನವನ್ನು ಮಾಡಿ ತೋರಿಸಿ ‘ನಿನ್ನ ಹೊಟ್ಟೆ ಕರಗಲು ಇದೇ ಮದ್ದು’ ಎಂದು ಫರೆಂಕನಿಗೆ ಹೇಳಿದೆ. ಅವನು ಅದನ್ನು ನೋಡಿಯೇ ಸುಸ್ತು ಹೊಡೆದಿದ್ದ! ಮನು ಅಪ್ಪನಿಗೆ ಒರಗಿ ನಿಂತು ಬಿಡುಗಣ್ಣುಗಳಿಂದ ನನ್ನನ್ನು ನೋಡುತ್ತಿದ್ದಳು. ಕೊನೆಯಲ್ಲಿ ನಾನು ಶೀರ್ಷಾಸನ ಮಾಡಿ ತೋರಿಸಿದೆ. ‘ಓಲಲಾ! ಇದು ನನ್ನ ಜನ್ಮದಲ್ಲಿ ಸಾಧ್ಯವಿಲ್ಲ’ ಎಂದು ಫರೆಂಕ್‌ ಉದ್ಗರಿಸಿದ. ನನ್ನ ಫೋಟೋ ತೆಗೆಯುತ್ತಿದ್ದ ಸೆಲ್ವಿ ಗಂಡನ್ನು ತಿವಿದಳು. ‘ನಿನಗೆ ಮನಸ್ಸಿಲ್ಲಾ ಅನ್ನು. ಶುದ್ಧ ಶೋಂಬೇರಿ.’ ಕಾಲು ಮೇಲಕ್ಕೆ ಮಾಡಿ ತಲೆಯಲ್ಲಿ ನಿಂತಿದ್ದ ನ್ನಗೆ ನಗು ತಡೆಯಲಿಕ್ಕಾಗದೆ ಸಮತೋಲನ ತಪ್ಪಿ ಬಿದ್ದೆ. ಪುಣ್ಯಕ್ಕೆ ಅನಾಹುತವೇನೂ ಆಗಲಿಲ್ಲ.

ಕೊನೆಯಲ್ಲಿ ಶವಾಸನ ಸ್ಥತಿಯನ್ನು ಮಾಡಿ ತೋರಿಸಿ ಅದರ ಮಹತ್ವವನ್ನು ತಿಳಿಸಿದೆ.’ಇದೇನು ಮಹಾ?’ ಎಂದು ಫರೆಂಕ್‌ ಮಲಗಿಯೇ ಬಿಟ್ಟ. ಅವನ ನಾಯಿ ದಿಶಿ ಪ್ರೀತಿಯಿಂದ ಅವನ ಮುಖವನ್ನು ನೆಕ್ಕತೊಡಗಿತು. ‘ಇದೊಂದನ್ನು ಮಾತ್ರವೇ ಮಾಡಿ ನೀನು ಡುಮ್ಮನಾದದ್ದು’ ಎಂದು ಸೆಲ್ವಿ ಅವನ್ನು ಮತ್ತೊಮ್ಮೆ ತಿವಿದಳು. ಅವಳ ಧ್ವನಿಯಲ್ಲಿ ಪ್ರೀತಿಯಿತ್ತು, ಮಾರ್ದವತೆ ಇತ್ತು. ‘ಅವನು ಡುಮ್ಮನಾದರೆ ನೀನು ಸಣಕಲಿ. ಜತೆ ಸರಿಯಾಯಿತಲ್ಲಾ?’ ಎಂದು ನಾನು ಹೇಳಿದಾಗ ಶವಾಸನದಲ್ಲೇ ಇದ್ದ ಫರೆಂಕ್‌ ಹೊಟ್ಟೆ ಕುಣಿಸಿ ನಕ್ಕ. ಕೆಂಪು ಸೆಲ್ವಿ ಇನ್ನಷ್ಟು ಕೆಂಪಗಾದಳು!

ಅಂದು ಸಂಜೆ ಫರೆಂಕ್‌ ಮತ್ತು ಸೆಲ್ವಿ ರೋಟರಿ ಮೀಟಿಂಗಿಗೆ ಬಂದಿದ್ದರು. ಹೋಟೆಲ್‌ ಸೇಂಟ್‌ ಆಂಟೋನಿಯಲ್ಲಿ ನಡೆದ ಮೀಟಿಂಗಿನಲ್ಲಿ ಮೂವರು ಫ್ರೆಂಚ್‌ ಮಹಿಳೆಯರಿಗೆ ಎಲೈನ್‌ ಸೀರೆ ಉಡಿಸಿ ಅವರನ್ನು ಆಕರ್ಷಣಾ ಕೇಂದ್ರಗಳ- ನ್ನಾಗಿಸಿದ್ದಳು. ಅಪ್ಪಟ ರೇಶ್ಮೆ ಸೀರೆ ಉಟ್ಟು ಬಂದಿದ್ದ ಫಿಲಿಪ್ಪನ ತಾಯಿ ಇಂದಿರಾ ಗಾಂಧಿಯಂತೆ ಕಾಣುತ್ತಿದ್ದರು. ಫಿಲಿಪ್ಪ್‌ ಜುವಾನ್‌ಬುಯೋನ ನೇತೃತ್ವದಲ್ಲಿ ಭಾರತಕ್ಕೆ ಬಂದಿದ್ದ ತಂಡದ ಸದಸ್ಯ. ಅವನ ತಾಯಿಯ ಪರಿಚಯ ನಮಗೆ ತುಲೋಸ್‌ ಕಾಲೇರೆನ್ಸ್‌ ಕಾಲದಲ್ಲೇ ಆಗಿತ್ತು. ಸುಮಾರು ಅರ್ವತ್ತೈದು ದಾಟಿರುವ ಆಕೆಗೆ ‘ನೀನು ಇಂದಿರಾಗಾಂಧಿಯ ಹಾಗೆ ಕಾಣುತ್ತೀಯಾ’ ಎಂದಾಗ ಸಂಕಟಕ್ಕಿಟ್ಟುಕೊಂಡಿತು. ಏಕೆಂದರೆ ಆಕೆಗೆ ಇಂದಿರಾಗಾಂಧಿ ಯಾರೆಂದು ಗೊತ್ತಿರಲಿಲ್ಲ. ಕೊನೆಗೆ ಯಾರೆಂದು ಗೊತ್ತಾದಾಗ ತುಂಬಾ ಸಂತೋಷವಾಯಿತು.

ಆಲಿಪ್ಯಲ್ಲಿ ನಮ್ಮ ತುಲೋಸ್‌ ನೃತ್ಯದ ಖ್ಯಾತಿ ಯಾವಾಗಲೋ ಹಬ್ಬಿತ್ತು. ಆದುದರಿಂದ ನಮಗೆ ಇಷ್ಟವಿಲ್ಲದಿದ್ದರೂ ಅಲ್ಲಿ ನಾವು ಬಾಂಗ್ಡಾ ಕುಣಿಯಬೇಕಾಯಿತು. ಹೋಟೆಲಲ್ಲಿ ನಮ್ಮ ಕುಣಿತಕ್ಕಾಗಿ ಮರದ ಎರಡು ಫ್ಲಾಟ್‌ಫಾರಂಗಳನ್ನು ಒಂದರ ಮೇಲೊಂದಿರಿಸಿ ವೇದಿಕೆಯೊಂದನ್ನು ನಿರ್ಮಿಸಲಾಗಿತ್ತು. ಆ ವೇದಿಕೆ ತೀರಾ ಚಿಕ್ಕದಾದುದರಿಂದ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಕೆಳಗೆ ಬಿದ್ದು ಬಿಡುವ ಅಪಾಯವಿತ್ತು. ಹಾಗಾಗಿ ಸರಿಯಾಗಿ ಕುಣಿಯಲು ಉಳಿದವರಿಗೆ ಕಷ್ಟವಾಯಿತು. ನಾನು ಅದಕ್ಕಿಂತಲೂ ಅಗಲ ಕಿರಿದಾದ ರಂಗದಲ್ಲಿ ಯಕಗಾನದ ಧೀಂಗಿಣ ಹಾಕಿದವ. ಹಾಗಾಗಿ ಬಾಂಗ್ಡಾಕ್ಕೆ ಯಕ್ಷಗಾನದ ಹೆಜ್ಜೆ ಹಾಕಿ ಕುಣಿದು ಬಿಟ್ಟೆ. ಅಲಿಪ್‌ಯನ್ನರು ಅಷ್ಟು ಪುಟ್ಟ ವೇದಿಕೆಯಲ್ಲಿ ನಾವು ಹಾಗೆ ಕುಣಿದುದನ್ನು ಕಂಡು ಆಶ್ಚರ್ಯಭರಿತ ಮೆಚ್ಚುಗೆ ವ್ಯಕ್ತಪಡಿಸಿದರು.

ಅಲಿಪ್ ರೋಟರಿ ಅಧ್ಯಕ ಜುವಾನ್‌ಡಿ ಮ್ಯಾರೋಲೆಸ್‌ ಒಬ್ಬ ಸಂಭಾವಿತ ವ್ಯಕ್ತಿ. ಆತ ಅಲಿಪ್‌ಯ ಬಗೆಗಿನ ವಿವರಗಳ ಸಚಿತ್ರಪುಸ್ತಕಗಳನ್ನು ನಮಗಿತ್ತು ಉಪಚರಿಸಿದ. ಉಪಾಧ್ಯಕ ಡಾ|| ಬೆರೆಲ್‌ ತುಂಬಾ ಚಟುವಟಿಕೆಯ ವ್ಯಕ್ತಿ. ಆದರೆ ರಾತ್ರೆಯ ಭೋಜನಕೂಟದಲ್ಲಿ ಅಳತೆ ಮೀರಿ ಗುಂಡು ಹಾಕಿ ಅತಿಯಾಗಿ ವರ್ತಿಸತೊಡಗಿದ. ಅವನ ತಂದೆ ಮೆಲ್ರ್‌ ಬೆರೆಲ್‌ ತೊಂಬತ್ತರ ಹರೆಯದ ಯುವಕ! ಕೆಲವು ವರ್ಷಗಳ ಹಿಂದೆ ರೋಟರಿ ಗವರ್ನರನಾಗಿದ್ದ ಮೆಲ್ರ್‌ ಬೆರೆಲ್‌ನದ್ದು ಈಗಲೂ ಚುರುಕು ನಡಿಗೆ. ಎರಡು ದಿನ ಆತ ನಮಗೆ ಅಲಿಪ್ ದರ್ಶನ ಮಾಡಿಸಿದ್ದ. ಅಂಬಿಯಾಲೆಟ್ಟ್‌ಗೆ ನಮ್ಮನ್ನು ಕರೆದುಕೊಂಡು ಹೋಗಿದ್ದ. ಗಂಟೆಗೆ ತೊಂಬತ್ತು ಕಿ.ಮೀ. ವೇಗದಲ್ಲಿ ಕಾರಲ್ಲಿ ನಮ್ಮನ್ನು ಸುತ್ತಿಸಿದ್ದ. ಚುರುಕಿನಿಂದ ಓಡಾಡಿ ನಮಗೆ ದೇಗುಲ, ಮ್ಯೂಸಿಯಂ, ಲಾ ಪೆರೋಸ್‌ ಶಾಲೆ, ದ್ಯುಮಿದಿ ಪತ್ರಿಕಾ ಕಛೇರಿ ಎಲ್ಲವನ್ನೂ ತೋರಿಸಿ ವಿವರಿಸಿದ್ದ. ನಮಗೆಲ್ಲಾ ಆಯಾಸವಾಗುತ್ತಿದ್ದರೂ ಆತನ ಚುರುಕುತನಕ್ಕೆ ದಂಗಾಗಿ ತುಟಿ ಬಿಚ್ಚದೆ ಅವನ್ನು ಹಿಂಬಾಲಿಸುತ್ತಿದ್ದೆವು. ಅಂತಹ ಅಪ್ಪನಿಗೆ ತನ್ನ ಮಗ, ಭಾರತೀಯ ಅತಿಥಿಗಳೆದುರು ಅಪಹಾಸ್ಯಕ್ಕೆ ಈಡಾಗುತ್ತಿದ್ದಾನೆ ಎಂದರಿವಾಗಿ ಪೆಚ್ಚಾಯಿತು. ನಲ್ವತ್ತೈದು ವರ್ಷದ ಮಗನ ವರ್ತನೆಗೆ ಆತ ತಲೆ ತಗ್ಗಿಸಿ ಕೂತ. ಆಡುವಂತಿಲ್ಲ, ಅನುಭವಿಸುವಂತಿಲ್ಲ. ಅವನ ಸಂಕಟ ನೋಡಿ ಅವನ ಬಳಿಗೆ ಹೋಗಿ ನಾನೆಂದೆ. ‘ನಿಮ್ಮ ಮಗನ ಬಗ್ಗೆ ನಮಗೆಲ್ಲಾ ಗೌರವವಿದೆ. ಮಧ್ಯಾಹನ ಆತನ ಸ್ನೇಹದ ಸವಿಯನ್ನು ಉಂಡವರು ನಾವು. ಇದೀಗ ನಮ್ಮ ಆಗಮನದ ಸಂತೋಷವನ್ನು ಸವಿಯುತ್ತಿದ್ದಾನೆ. ಇದು ಮೆಂಟಲ್‌ ರಿಲೀಫ್‌ನ ಒಂದು ವಿಧಾನ ಅಲ್ಲವೇ?’ ಮೆಲ್ರ್‌ ಬೆರೆಲ್‌ ನನ್ನ ಭುಜದ ಮೇಲೆ ಕೈಯಿಟ್ಟು ಹೇಳಿದ : ‘ನೀನಂದದ್ದು ಸರಿಯೇ. ಆದರೆ ಇತ್ತೀಚೆಗೆ ಆತನ ಕುಡಿತ ಹೆಚ್ಚಾಗುತ್ತಿದೆ. ರೋಗಿಗಳಿಗೆ ಕುಡಿತ ಕಡಿಮೆ ಮಾಡಿ ಎಂದು ಹೇಳಬೇಕಾದ ಡಾಕ್ಟರನೇ ಕುಡಿತ ಹೆಚ್ಚಿಸುತ್ತಿದ್ದಾನಲ್ಲಾ ಎನ್ನುವುದು ನನ್ನ ಚಿಂತೆ.’ ಮೆಲ್ರ್‌ ಬೆರೆಲ್‌ನ ಈ ಚಿಂತೆಗೆ ನನ್ನಲ್ಲಿ ಪರಿಹಾರವಿರಲಿಲ್ಲ.

ನುಡಿದರೆ ಮುತ್ತಿನ ………

ಅಲಿಪ್‌ಯಲ್ಲಿ ನಮ್ಮನ್ನು ಕೀನಾಜ್‌ ಎಂಬ ಮುಂಬಯಿಯ ಬಾಲ ಮಾತಾಡಿಸಿದಳು. ಅವಳನ್ನು ತುಲೋಸ್‌ನಲ್ಲೇ ನಾವು ನೋಡಿದ್ದೆವು. ರೋಟರ್ಯಾಕ್ಟ್‌ ಭಾಷಾ ವಿನಿಮಯ ಕಾರ್ಯಕ್ರಮದನ್ವಯ ಫ್ರೆಂಚ್‌ ಭಾಷೆ ಕಲಿಯಲು ಆಯ್ಕೆಯಾಗಿ ಆಕೆ ರೋಟರಿ ಜಿಲ್ಲೆ 1700 ಕ್ಕೆ ಬಂದು ಅದಾಗಲೇ ಆರು ತಿಂಗಳುಗಳಾಗಿದ್ದವು. ತಕ್ಕಮಟ್ಟಿಗೆ ಫ್ರೆಂಚ್‌ ಮಾತಾಡುವ ನೈಪುಣ್ಯ ಅವಳಿಗೆ ಸಿದ್ಧಿಸಿತ್ತು. ಬಾಬ್‌ಕಟ್ಟಿನ ಈ ಚೂಡೀದಾರದ ಹುಡುಗಿಗೆ ಹೆಚ್ಚೆಂದರೆ ಹತ್ತೊಂಬತ್ತು ವರ್ಷ ಇರಬಹುದು. ಭಾರತವನ್ನು ಬಿಟ್ಟು ಬಂದುದಕ್ಕೆ ಬೇಸರಾಗುವುದಿಲ್ಲವೇ ಎಂದು ಕೇಳಿದ್ದಕ್ಕೆ ‘ಆರಂಭದಲ್ಲಿ ಒಂದು ತಿಂಗಳು ತುಂಬಾ ತೊಂದರೆಯಾಯಿತು. ಒಂಥರಾ ಹ್ಯಾಂಗೋವರ್‌ನಲ್ಲೇ ಇದ್ದೆ. ಇದೀಗ ಒಗ್ಗಿಕೊಂಡದ್ದು ಮಾತ್ರವಲ್ಲ, ಇಲ್ಲಿಯವಳೇ ಆಗಿಬಿಟ್ಟಿದ್ದೇನೆ’ ಎಂದು ಮುಖ ಅರಳಿಸಿದಳು. ಅಲಿಪ್‌ಯ ಎಲ್ಲಾ ರೊಟೇರಿಯನ್ನರು ಮತ್ತು ಅವರ ಕುಟುಂಬದವರು ಆಕೆಯನ್ನು ಆತ್ಮೀಯತೆಯಿಂದ ಮಾತಾಡಿಸಿದುದನ್ನು ಮತ್ತು ಆಕೆಗೆ ಫ್ರೆಂಚ್‌ ಕಿಸ್ಸ್‌ ಕೊಡುತ್ತಿದ್ದುದನ್ನು ಕಂಡಾಗ ಆಕೆ ಹೇಳಿದ್ದರಲ್ಲಿ ಸುಳ್ಳಿಲ್ಲವೆನಿಸಿತು. ‘ಇಲ್ಲೇ ನಿಂತು ಬಿಡ್ತೀಯಾ ಹೇಗೆ?’ ಎಂದು ಕೇಳಿದಾಗ ‘ಛೇ!ಛೇ! ನಾನು ನನ್ನ ದೇಶದಲ್ಲೇ ಬಾಳಬೇಕು’ ಎಂದಳು. ಅಂದು ರಾತ್ರಿ ಊಟವಾಗಿ ಹೊರಡುವ ಮುನ್ನ ‘ನಿನ್ನ ನೃತ್ಯ ನನಗೆ ಇಷ್ಟವಾಯಿತು. ಮುಂಬಯಿಯಲ್ಲಿ ಎಲ್ಲವೂ ವೆಸ್ಟರ್ನೈಸ್ಡ್‌. ನಮ್ಮ ದೇಶದ ಸಂಸ್ಕೃತಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಲ್ಲಿ ಮಾತ್ರ. ನೀನೊಬ್ಬ ಪರ್‌ಫಾರ್ಮಿಂಗ್‌ ಆರ್ಟಿಸ್ಟ್‌ ಎಂದು ತಿಳಿದು ಖುಷಿಯಾಯಿತು’ ಎಂದು ಹೇಳಿ ಕೈಕುಲುಕಿ ಫ್ರೆಂಚ್‌ ಮುತ್ತು ಕೊಟ್ಟೇ ಬಿಟ್ಟಳು. ನಮ್ಮ ತಂಡದ ಇತರರಿಗೆ ಆ ಭಾಗ್ಯ ಇತ್ತೋ ಇಲ್ಲವೋ ಎನ್ನುವುದು ನನಗೆ ತಿಳಿಯಲಿಲ್ಲ!

ಅಲಿಪ್ ಭೋಜನಕೂಟಕ್ಕೆ ಮುನ್ನ ಒಂದು ಸ್ಲೈಡ್‌ ಪ್ರದರ್ಶನವಿತ್ತು. ಅಲಿಪ್‌ಯ ಅರ್ಥಶಾಸ್ತ್ರದ ಅಧ್ಯಾಪಕ ಲೋಪಿಟಾಲ್ಟ್‌ ಬ್ಯಾಟೋ ಎಂಬಾತ ಕರ್ನಾಟಕಕ್ಕೆ ಬಂದು ಕಾಡುಕುರುಬರ ಮತ್ತು ಜೇನುಕುರುಬರ ಬಗ್ಗೆ ಅಧ್ಯಯನ ನಡೆಸಿದ್ದ. ಅವರ ಜೀವನ ಕ್ರಮದ ಸ್ಲೈಡ್‌ ಶೋ ಅಂದು ಏರ್ಪಾಡಾಗಿತ್ತು. ಆತ ಭಾರತದ ಆದಿವಾಸಿಗಳ ಉದ್ಧಾರಕ್ಕಾಗಿ ಫ್ರಾನ್ಸಿನಲ್ಲಿ ಹುಟ್ಟಿಕೊಂಡಿರುವ ಸಂಘಟನೆಯೊಂದರಿಂದ ಪ್ರಾಯೋಜಿತನಾಗಿ ಭಾರತಕ್ಕೆ ಬಂದಿದ್ದ. ಕರ್ನಾಟಕದ ಬಗ್ಗೆ ಆತನಿಗೆ ತಿಳಿವಳಿಕೆಯಿತ್ತು. ನಾನೂ ಅರ್ಥಶಾಸ್ತ್ರದ ಅಧ್ಯಾಪಕನಾದುದರಿಂದ ನಮ್ಮಲ್ಲಿ ಸಖ್ಯ ಬೆಳೆಯಿತು. ಆತ ನನಗೆ ಫ್ರೆಂಚ್‌ ಅರ್ಥವ್ಯವಸ್ಥೆಯ ಬಗ್ಗೆ ತಿಳಿಸಿದ. ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಆತನಿಗಿದ್ದ ಸಂದೇಹಗಳನ್ನು ನನ್ನ ಮುಂದಿರಿಸಿದ. ಅವನಿಂದಾಗಿ ಅಲಿಪ್‌ಯ ಪುಟ್ಟ ಸಮಾರಂಭ ಒಂದು ಅವಿಸ್ಮರಣೀಯ ನೆನಪಾಗಿ ಉಳಿದು ಬಿಟ್ಟಿತು.

ರಾತ್ರೆ ಸಮಾರಂಭ ಮುಗಿಸಿ ಫರೆಂಕನ ಕಾರಲ್ಲಿ ಅವನ ಮನೆಗೆ ವಾಪಾಸಾಗುವಾಗ ವಿಪರೀತ ಚಳಿಗಾಳಿಯಿತ್ತು. ಎಷ್ಟೆಂದರೆ ನಾನು ಗದಗುಟ್ಟಿ ನಡುಗುವಷ್ಟು. ಹಾಸ್ಯಪ್ರಿಯ ಫರೆಂಕ್‌ ಗಂಭೀರವಾಗಿ ‘ಇದು ಭಾರತದಿಂದ ನೀನು ತಂದದ್ದು’ ಎಂದ. ಇವನು ಯಾವುದರ ಬಗ್ಗೆ ಹೇಳುತ್ತಿದ್ದಾನೆಂದು ನನಗೆ ಒಂದು ಕಣ ಗೊತ್ತಾಗಲೇ ಇಲ್ಲ. ಅವನು ಮತ್ತೆ ಹೇಳಿದ. ‘ಈವರೆಗೆ ಅಲಿಪ್‌ಯಲ್ಲಿ ಚಳಿಗಾಳಿ ಇರಲಿಲ್ಲ. ಇದು ಭಾರತದಿಂದ ನಿನ್ನ ಜತೆಯಲ್ಲೇ ಬಂದದ್ದು.’ ಅವನ ವಿನೋದಕ್ಕೆ ನಾನು ನಕ್ಕೆ. ಆಗ ಸೆಲ್ವಿ ‘ಅವನ್ನು ನಂಬಬೇಡ. ಅವನೊಬ್ಬ ಜೋಕರ್‌. ಸದಾ ಇಂಥದ್ದೇ ಇರುವುದು ಅವನ ಬಾಯಲ್ಲಿ’ ಎಂದಳು. ಈಗ ಫರೆಂಕ್‌ ಗಹಗಹಿಸಿ ನಕ್ಕ. ಹಾಗೆ ನಗುವಾಗ ಅವನ ಮೀಸೆ ಮತ್ತು ಹೊಟ್ಟೆ ಕುಣಿಯುವ ಚೆಂದ ನೋಡಬೇಕು!

ಮನೆಗೆ ಮುಟ್ಟಿದಾಗ ಮನು ನಮ್ಮ ದಾರಿ ಕಾಯುತ್ತಿದ್ದಳು. ಅವಳಿಗೆ ಅಪ್ಪಅಮ್ಮನ ಹಾಗೆ ಇಂಗ್ಲೀಷ್‌ ಮಾತಾಡಲು ಸಾಧ್ಯವಾಗುತ್ತಿರಲಿಲ್ಲವಾದರೂ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಳು. ಸೆಲ್ವಿ ನಮ್ಮಮಿಬ್ಬರ ನಡುವಣ ದುಭಾಷಿಯಾಗಿದ್ದಳು. ಫರೆಂಕ್‌ ನನ್ನ ಕುಣಿತದ ಬಗ್ಗೆ ಮತ್ತು ರುಮಾಲಿನ ಬಗ್ಗೆ ಹೇಳಿದಾಗ ಆಕೆ ನಾನು ಕುಣಿಯಬೇಕೆಂದು ಹಠ ಹಿಡಿದಳು. ಅವಳ ಪ್ರೀತಿಗೆ ಮಣಿದು ರುಮಾಲು ಕಟ್ಟಿ ಯಕ್ಷಗಾನ ಕುಣಿದೆ. ಆ ಮನೆಯಲ್ಲಿ ಆರ್ಕೆಸ್ಟ್ರಾ ಸೆಟ್ಟಿನದ್ದೇ ದೊಡ್ಡ ಕೋಣೆಯೊಂದಿತ್ತು. ಫರೆಂಕ್‌ ಡ್ರಮ್ಮು ಬಡಿದು ಅದೇನೋ ಹಾಡು ಹೇಳಿದ. ಮನು ಪಿಯಾನೋ ನುಡಿಸಿದಳು. ಕೊನೆಗೆ ರಾಜಸ್ಥಾನಿ ರುಮಾಲನ್ನು ತಲೆಗೆ ಸುತ್ತಿಸಿಕೊಂಡು ಒಂದು ಫೋಟೋ ಹೊಡೆಯಿಸಿಕೊಂಡಳು. ಆನೆಯೆಂದರೆ ತುಂಬಾ ಇಷ್ಟಪಡುವ ಮನುವಿಗೆ ಆನೆಯದೊಂದು ಗ್ರೀಟಿಂಗ್ಸ್‌ ನೀಡಿದೆ. ಜತೆಗೆ ನನ್ನಲ್ಲಿದ್ದ ಶ್ರೀಗಂಧದ ಆನೆಯನ್ನೂ! ಅವಳಿಗೆ ತುಂಬಾ ಖುಷಿಯಾಯಿತು.

ಮರುದಿನ ನಾನು ಅಲಿಪ್‌ಗೆ ವಿದಾಯ ಹೇಳಿ ಫಿಜೆಯಾಕಿಗೆ ಹೋಗಬೇಕು. ತನ್ನ ಕುರಿಮಂದೆಯ ಯೋಗಕೇಮ ವಿಚಾರಿಸಲೆಂದು ಫರೆಂಕ್‌ ಬೆಳಿಗ್ಗೆ ಬೇಗ ಹೊರಟು ಹೋದ. ಹೋಗುವ ಮುನ್ನ ಶುಭ ಹಾರೈಸಿ ನನ್ನನ್ನು ಆಲಂಗಿಸಿಕೊಂಡು ‘ನಿನ್ನನ್ನು ಮತ್ತೆ ಅಲಿಪ್‌ಯಲ್ಲಿ ಕಾಣುವಂತಾಗಲಿ’ ಎಂದ. ಎಂಟು ಗಂಟೆಗೆಲ್ಲಾ ಸೆಲ್ವಿ ನನ್ನನ್ನು ಮತ್ತು ಮನುವನ್ನು ಹೊರಡಿಸಿದಳು. ಸೆಲ್ವಿಯ ಮನೆಯಿಂದ ಅಲಿಪ್‌ಗೆ ಅರ್ಧ ಗಂಟೆಯ ಪಯಣ. ಕಾರಲ್ಲಿ ಬರುವಾಗ ಆಕೆ ಕೇಳಿದಳು. ‘ನಿನ್ನಲ್ಲಿ ಕಾರು ಉಂಟಾ?’

‘ಇಲ್ಲ. ಒಂದು ಟೂ ವ್ಹೀಲರ್‌ ಮಾತ್ರ ಇದೆ.’

‘ನೀನು ಒಬ್ಬ ಅಧ್ಯಾಪಕನಾಗಿದ್ದೂ ಕಾರು ಕೊಂಡಿಲ್ಲವೆ?’

‘ನಮ್ಮಲ್ಲಿ ಕಾರು ಒಂದು ಲಗ್ಝುರಿ ಐಟಮ್ಮು. ನನ್ನ ಸಂಬಳಕ್ಕೆ ಅದು ಎಟಕುವಂಥದ್ದಲ್ಲ.’

‘ನಿನ್ನ ಸಂಬಳ ಎಷ್ಟು’

‘ನಿನ್ನ ದೇಶದ ಕರೆನ್ಸಿಯಲ್ಲಾದರೆ ತಿಂಗಳಿಗೆ 1500 ಫ್ರಾಂಕುಗಳು.’

ಅವಳ ಹುಬ್ಬು ಮೇಲೇರಿತು. ‘ಏನು ಹೇಳ್ತಿದ್ದೀಯಾ ನೀನು? ನಮ್ಮಲ್ಲಿ ಜವಾನರ ಆರಂಭಿಕ ಮಾಸಿಕ ವೇತನ ಎಷ್ಟು ಗೊತ್ತಾ? 6000ಫ್ರಾಂಕುಗಳು. ನೀನು 18 ವರ್ಷಗಳ ಅನುಭವದ ಪ್ರೊಫೆಸರ್‌ ಅಂತೀಯಾ. ಹಾಗಿದ್ದೂ ಕೇವಲ 1500 ಫ್ರಾಂಕುಗಳ?

‘ಹೌದು. ಆದರೆ ನಿಮ್ಮಲ್ಲಿ ಎಲ್ಲಾ ಸರಕುಗಳ ರೇಟು ಕೂಡಾ ನಮ್ಮಲ್ಲಿರುವುದಕ್ಕಿಂತ ಆರು ಪಟ್ಟು ಹೆಚ್ಚು’ ಭಾರತದ ಪರಿಸ್ಥತಿಯಲ್ಲಿ ನನಗೆ ಸಿಗುವ ಸಂಬಳ ಕಡಿಮೆಯೇನಲ್ಲ. ಆದರೆ ಮನೆ ಕಟ್ಟಿಸಲು ಮತ್ತು ಕಾರು ಕೊಳ್ಳಲು ಈ ಸಂಬಳ ಸಾಕಾಗುವುದಿಲ್ಲ. ಅದಕ್ಕೆ ಸಾಲ ಮಾಡಲೇಬೇಕು.’

‘ಸಾಲ ಮಾಡಿಯಾದರೂ ಯಾಕೆ ಕಾರು ಕೊಂಡಿಲ್ಲ ನೀನು’

‘ನಾನಿನ್ನೂ ಸರಿಯಾದ ಒಂದು ಮನೆಯನ್ನೇ ಕಟ್ಟಿಸಿಲ್ಲ. ಅಂಥಾದ್ದರಲ್ಲಿ ಸಾಲ ಮಾಡಿ ಕಾರು ತಗೋಬೇಕು ಯಾಕೆ? ಕಾರಿಲ್ಲದೆಯೂ ಗೌರವದಿಂದ ಬದುಕಲು ನನಗೆ ಸಾಧ್ಯವಾಗಿದೆ’ ಎಂದೆ.

‘ಆದರೆ ಇಲ್ಲಿ ಕಾರಿಲ್ಲದಿದ್ದರೆ ಬಡವರೆಂದೇ ಅರ್ಥ. ಅದರಲ್ಲೂ ನಮಗೆ ಎರಡು ಕಾರು ಅನಿವಾರ್ಯ. ಫರೆಂಕನ ಕುರಿ ಸಾಕಣೆ ಕೇಂದ್ರ ಇರುವುದು ಪರ್ವತ ಪ್ರದೇಶದಲ್ಲಿ. ನನ್ನ ಮೆಡಿಕಲ್‌ ಶಾಪ್‌ ಇರೋದು ಅಲಿಪ್‌ಯಲ್ಲಿ. ಹಾಗಾಗಿ ಇದು ನಮಗೆ ಅಗತ್ಯ ಎಂದಾಗಿಬಿಟ್ಟಿದೆ’ ಎಂದಳು. ಮತ್ತೆ ಮುಂದುವರಿಸಿ ‘ನಿನಗೆ ಕಾರು ಬಿಡಬೇಕೆಂದಿದೆಯಲ್ಲ ಬೇಕಿದ್ದರೆ ಇದನ್ನು ನೀನು ಬಿಡಬಹುದು’ ಎಂದು ಉದಾರತೆ ತೋರಿದಳು.

ನಾನಾಗ ‘ನಾನಿನ್ನೂ ಡ್ರೈವಿಂಗ್‌ ಕಲಿತಿಲ್ಲ. ಕಲಿತಿದ್ದರೂ ನಾನಿಲ್ಲಿ ಕಾರು ಬಿಡಲಾಗುತ್ತಿರಲಿಲ್ಲ. ನೀವು ಬಲಕ್ಕೆ ವಾಹನ ಚಲಾಯಿಸುವವರು. ಭಾರತದಲ್ಲಿ ನಾವು ಎಡಕ್ಕೆ ವಾಹನ ಚಲಾಯಿಸುತ್ತೇವೆ. ಹಾಗಾಗಿ ಇಲ್ಲಿ ಟೂ ವೀಲರ್‌ ಕೂಡಾ ರೈಡ್‌ ಮಾಡುವ ದುಸ್ಸಾಹಸಕ್ಕೆ ನಾನು ಹೋಗಲಾರೆ’ ಎಂದೆ.

ಅದಕ್ಕವಳು ‘ಒಳ್ಳೆಯದೇ ಮಾರಾಯ. ನನ್ನೊಬ್ಬಳು ಸ್ನೇಹಿತೆ ಮೂರು ವರ್ಷಗಳ ಹಿಂದೆ ಸ್ಕಾಟ್ಲೆಂಡಿಗೆ ಹೋದವಳು ಅಲ್ಲಿ ಯಾರದೋ ಕಾರು ಚಲಾಯಿಸಿದಳು. ಇಂಗ್ಲೆಂಡುಸ್ಕಾಟ್ಲೆಂಡುಗಳಲ್ಲಿ ಭಾರತದ ಹಾಗೆ ಎಡಕ್ಕೆ ವಾಹನ ಚಲಾಯಿಸುತ್ತಾರೆ. ಇವಳಿಗೆ ಬಲಕ್ಕೆ ಚಲಾಯಿಸೋದು ಮಾತ್ರ ಗೊತ್ತು. ಆದರೂ ಎಚ್ಚರಿಕೆಯಿಂದ ಚಲಾಯಿಸಿಕೊಂಡು ಹೋದಳು. ವೃತ್ತವೊಂದರಲ್ಲಿ ಎಡಬಲ ಗೊಂದಲವಾಗಿ ಅಪಘಾತಕ್ಕೆ ಸಿಕ್ಕು ಕಾರಿನೊಡನೆ ನಜ್ಜುಗುಜ್ಜಾಗಿ ಹೋದಳು. ಓ! ಅದು ಟೆರಿಬಲ್‌!’ ಎಂದು ಮುಖ ಕಿವುಚಿಕೊಂಡಳು.

ಅಲಿಪ್‌ಗೆ ಮುಟ್ಟಿ ಹೋಟೆಲ್‌ ಸೇಂಟ್‌ ಅಂಟೋನಿಯಲ್ಲಿ ನನ್ನನ್ನು ಇಳಿಸಿ ಬೀಳ್ಕೊಳ್ಳುವಾಗ ಸೆಲ್ವಿ ‘ಭಾರತೀಯರ ಬಗ್ಗೆ ನನ್ನಲ್ಲಿ ವಿಚಿತ್ರ ಕಲ್ಪನೆಗಳಿದ್ದವು. ಆದರೆ ನಿನ್ನ ನಡೆನುಡಿ ಎಲ್ಲವೂ ನನಗೆ, ಫರೆಂಕನಿಗೆ ಇಷ್ಟವಾದವು. ನಿನ್ನ ಭಾರತಕ್ಕೆ ಖಂಡಿತಾ ಬರುತ್ತೇನೆ. ಬರುವಾಗ ನಿನಗೆ ತಿಳಿಸುತ್ತೇನೆ’ ಎಂದು ಹೇಳಿದಳು.

ಸೆಲ್ವಿಯ ಹಾಗೆ ಹೇಳಿದ ಸಾಕಷ್ಟು ಫ್ರೆಂಚರು ಎಂದಾದರೂ ಒಂದು ದಿನ ನೇರವಾಗಿ ನನ್ನ ಮನೆಗೇ ಬಂದು ಬಿಟ್ಟರೆ ಅವರನ್ನು ಉಳಿಸಿಕೊಳ್ಳುವುದು ಎಲ್ಲಿ ಎಂಬ ಆತಂಕದಿಂದ ಪಾರಾಗಲು ನನಗಿನ್ನೂ ಸಾಧ್ಯವಾಗಿಲ್ಲ!

ಗಿರಿನಗರ ಕೋರ್ಡ್ಸ್

ಎಪ್ರಿಲ್‌ ಒಂಬತ್ತರಂದು ಬೆಳಿಗ್ಗೆ ಒಂಬತ್ತು ಗಂಟೆಗೆ ನಮ್ಮನ್ನು ಫಿಜೆಯಾಕಿಗೆ ಒಯ್ಯಲು ಪಿಯರೆ ಮ್ಯಾಕ್ರನ್‌, ಫ್ರಾನ್ಸಿಸ್‌ ಲಾಪೇಟ್ರೆ ಮತ್ತು ಜುವಾನ್‌  ಚಾರ್ಲ್ಸ್ ಡ್ಯುಪೇ ತಮ್ಮ ಕಾರುಗಳಲ್ಲಿ ಬಂದಿದ್ದರು. ಎಲ್ಲರೂ ಅರುವತ್ತು ದಾಟಿದವರೇ. ಅದಾಗಲೇ ರೋಟರಿ ವಲಯದೊಳಗೆ ನಾವು ಪ್ರವೇಶಿಸಿ ಒಂದು ವಾರವಾಗಿತ್ತು. ಆದರೆ ಒಬ್ಬನೇ ಒಬ್ಬ ತರುಣ ರೊಟೇರಿಯನ್‌ ನಮಗೆ ಕಂಡು ಬಂದಿರಲಿಲ್ಲ. ಫ್ರೆಂಚ್‌ ತರುಣ ಜನಾಂಗಕ್ಕೆ ಚರ್ಚಿನಂತೆ, ರೋಟರಿಯೂ ಕೂಡಾ ಅಲರ್ಜಿ ಇರಬೇಕೆಂಬ ತೀರ್ಮಾನಕ್ಕೆ ನಾವು ಬಂದಿದ್ದೆವು. ಹಾಗಾಗಿ ಅರುವತ್ತು ದಾಟಿದವರನ್ನು ಕಂಡಾಗ ನಮಗೆ ಆಶ್ಚರ್ಯವೇನೂ ಆಗುತ್ತಿರಲಿಲ್ಲ. ಹಾಗೆ ನೋಡಿದರೆ ಅಲಿಪ್‌ಯನ್ನು ನಮ್ಮನ್ನು ಸುತ್ತಾಡಿಸಿದವರೆಲ್ಲಾ ಎಂಬತ್ತು ದಾಟಿದವರೇ. ಅವರಿಗೆ ಹೋಲಿಸಿದರೆ ಫಿಜೆಯಾಕಿನಿಂದ ಬಂದಿದ್ದವರು ಇನ್ನೂ ತರುಣರೇ !

ಫಿಜೆಯಾಕಿನ ಹಾದಿಯಲ್ಲಿ ನಾವು ನೋಡಿದ್ದು ಬೆಟ್ಟ ನಗರವಾದ ಕೋರ್ಡ್ರ್‌ ಅನ್ನು. ದೂರದಿಂದ ಪಾಳುಬಿದ್ದ ನಗರದಂತೆ ಕಾಣುವ ಕೋರ್ಡ್ಸ್ ಉಸಿರಾಡುತ್ತಿರುವುದನ್ನು ಕಂಡಾಗ ಆಶ್ಚರ್ಯವಾಗಿತ್ತು. ಒಳಹೊಕ್ಕಾಗ ಅದರ ಸೌಂದರ್ಯದ ದರ್ಶನವಾಯಿತು. ಅದರ ಹಿಂದಿದ್ದ ಇತಿಹಾಸವೂ ತಿಳಿಯಿತು.

ಅಲಿಪ್‌ಯಿಂದ ಇಪ್ಪತ್ತೈದು ಕಿ.ಮೀ. ದೂರದಲ್ಲಿರುವ ಕೋರ್ಡ್ಸ್ ಬೆಟ್ಟದಲ್ಲಿ ಕೆಳಗಿನಿಂದ ಮೇಲಿನವರೆಗೂ ಕಟ್ಟಡಗಳನ್ನು ಒಂದರ ಮೇಲೊಂದು ಜೋಡಿಸಿಟ್ಟಂತೆ ಕಾಣುತ್ತದೆ. ಮುಂಜಾನೆಯ ಮಂಜಿನ ತೆಳ್ಳನೆಯ ಪರದೆಯ ಹಿಂದೆ ಕೋರ್ಡ್ಸ್ ಅವಕುಂಠನಧಾರಿ ಷೋಡಶಿಯಂತೆ ನಮ್ಮನ್ನು ಆಕರ್ಷಿಸುತ್ತದೆ. ಒಂದು ಕಾಲದಲ್ಲಿ ಜೇನುಗೂಡಿನಂತೆ ಚಟುವಟಿಕೆಗಳ ನೆಲೆಯಾಗಿದ್ದ ಕೋರ್ಡ್ಸ್ ಇಂದೊಂದು ಪ್ರವಾಸಿ ತಾಣವಾಗಿದೆ. ಬೆಟ್ಟದಲ್ಲಿರುವ ಕಟ್ಟಡಗಳು ಪ್ರವಾಸಿಗರಿಗೆ ಬಾಡಿಗೆಗೆ ದೊರೆಯುತ್ತವೆ. ಬೆಟ್ಟದಲ್ಲಿ ನಾಲ್ಕು ಹೋಟೆಲುಗಳಿವೆ. ಒಂದು ಅಂಚೆ ಕಛೇರಿಯಿದೆ. ಯಾವುದೇ ಮಾಹಿತಿಯನ್ನು ಒದಗಿಸಲು ಟೂರಿಸಂ ಇಲಾಖೆಯ ಕಛೇರಿ ಸನ್ನಿಹಿವಾಗಿದೆ. ಹಳೆಯ ಮತ್ತು ಹೊಸ ಸರಕುಗಳನ್ನು ಮಾರುವ ಐದಾರು ಅಂಗಡಿಗಳಿವೆ. ಅಂಗಡಿಗಳಲ್ಲಿ ಮಾರಾಟಕ್ಕೆ ಜನರೇ ಇರುವುದಿಲ್ಲ. ನಾವು ಅಂಗಡಿಯ ಒಳ ಹೊಕ್ಕಾಗ ಯಂತ್ರವೊಂದು ಸದ್ದೊಂದನ್ನು ಹೊರಡಿಸುತ್ತದೆ. ಆಗಲೂ ನಮ್ಮನ್ನು ಯಾರೂ ಬಂದು ಮಾತಾಡಿಸುವುದಿಲ್ಲ. ಅಂಗಡಿಯಿಂದ ನಾವು ಹೊರಗೆ ಕಾಲಿಡುವಾಗ ಅದೇ ಯಂತ್ರ ಮತ್ತೆ ಅದೇ ಸದ್ದನ್ನು ಹೊರಡಿಸುತ್ತದೆ. ಈಗ ಬಾಬ್‌ಕಟ್ಟ್‌ನ ಮಿನುಗುವ ಕಣ್ಣುಗಳ ಸುಂದರಿಯೊಬ್ಬಳು ಅದೆಲ್ಲಿಂದಲೋ ಪ್ರತ್ಯಕ್ಷಳಾಗಿ ಬಿಡುತ್ತಾಳೆ. ನಾವು ತಗೊಂಡ ವಸ್ತುವಿನ ಬೆಲೆಯನ್ನು ಪಡೆದು ಮೊದಲಿಗೆ ‘ಮೆರ್ಸಿ ‘ (ಧನ್ಯವಾದಗಳು) ಎನ್ನುತ್ತಾಳೆ. ನಾವು ಹೊರಟಾಗ ‘ಅವ್ಪ’ (ಇನ್ನೊಮ್ಮೆ ನೋಡೋಣ) ಎಂದು ಮೋಹಕವಾಗಿ ಉಲಿಯುತ್ತಾಳೆ.

ಕೋರ್ಡ್ಸ್ ಬೆಟ್ಟದ ಎತ್ತರ ನೂರಹತ್ತು ಮೀಟರುಗಳು. ಬೆಟ್ಟದ ತುದಿಯವರೆಗೂ ವಾಹನದಲ್ಲಿ ಹೋಗಲು ರಸ್ತೆಯಿದೆ. ಬೆಟ್ಟದ ನೆತ್ತಿಯಲ್ಲಿ ನೂರು ಮೀಟರ್‌ ಆಳದ ಬಾವಿಯೊಂದಿದೆ. ಬಾವಿಯ ತಳವನ್ನು ಕಾಣಲು ದೀಪದ ವ್ಯವಸ್ಥೆಯಿದೆ. ಆದರೆ ಆ ದೀಪ ಉರಿಯಬೇಕಾದರೆ ಸ್ವಿಚ್ಚಿನ ಬಳಿಯಿರುವ ತೂತಿನೊಳಕ್ಕೆ ಎರಡು ಫ್ರಾಂಕುಗಳನ್ನು (ಹದಿನಾಲ್ಕು ರೂಪಾಯಿ) ತಳ್ಳಿ ಸ್ವಿಚ್ಚು ಅದುಮಬೇಕು. ಆಗ ಬಾವಿಯೊಳಗೆ ಹೊತ್ತಿಕೊಳ್ಳುತ್ತದೆ ಪ್ರಕಾಶಮಾನವಾದ ವಿದ್ಯುದ್ದೀಪ. ಕೇವಲ ಎರಡು ನಿಮಿಷ ಮಾತ್ರ. ನಾವು ಬಾವಿಯ ಆಳ ಸೌಂದರ್ಯವನ್ನು ಇನ್ನೊಮ್ಮೆ ಅನುಭವಿಸಬೇಕಾದರೆ ಮತ್ತೊಮ್ಮೆ ಎರಡು ಫ್ರಾಂಕುಗಳನ್ನು ತೂತಿನೊಳಕ್ಕೆ ತೂರಿಸಬೇಕು. ಬೆಟ್ಟದ ಮೇಲಿನಿಂದ ಸುತ್ತಲಿನ ದೃಶ್ಯಗಳ ಸೌಂದರ್ಯದ ಸಾಮೀಪ್ಯ ಸುಖ ಅನುಭವಿಸಲು ದೂರದರ್ಶಕಗಳ ವ್ಯವಸ್ಥೆಯಿದೆ. ಆದರೆ ದೂರದರ್ಶಕದ ತೂತಿನೊಳಕ್ಕೆ ಐದು ಫ್ರಾಂಕುಗಳನ್ನು (ಮೂವತ್ತೈದು ರೂಪಾಯಿ) ತೂರಿಸದಿದ್ದರೆ ಅವು ಕಾರ್ಯವೆಸಗುವುದಿಲ್ಲ. ನಾವು ಮನುಷ್ಯರಿಗೆ ಮೋಸ ಮಾಡಬಹುದು. ಯಂತ್ರಗಳಿಗೆ?

ಕೋರ್ಡ್ಸ್ ಗಿರಿನಗರವನ್ನು ಕ್ರಿ.ಶ.1222ರಲ್ಲಿ ಏಳನೆಯ ಕೌಂಟ್‌ ರೇಮೋಂಡ್‌ ನಿರ್ಮಿಸಿದ. ಕಥಾರರ ವಿರುದ್ಧದ ಧರ್ಮಯುದ್ಧ ಪರಾಕಾಷ್ಠತೆಗೆ ಮುಟ್ಟಿದ ಸಮಯವದು. ಯುದ್ಧದಿಂದ ಜರ್ಜರಿತರಾದವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಕೋರ್ಡ್ಸ್ ಗಿರಿನಗರದ ನಿರ್ಮಾಣವಾಯಿತು. ಕ್ರಿ.ಶ.1233ರಲ್ಲಿ ಮೂವರು ಕ್ಯಾಥಲಿಕ್ಕ್‌ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಕಥಾರರಿಗೆ ಬೆಂಬಲ ನೀಡುತ್ತಿರುವುದಕ್ಕಾಗಿ ಗಿರಿನಗರದ ಜನರನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣಾ ಕಾಲದಲ್ಲಿ ಕೋರ್ಡ್ಸ್ ಜನರ ಆತ್ಮಾಭಿಮಾನಕ್ಕೆ ಧಕ್ಕೆಯಾಗುವಂತೆ ಅಧಿಕಾರಿಗಳು ಅವರನ್ನು ಬೈದು ಭಂಗಿಸಿದರು. ಸಿಟ್ಟುಗೊಂಡ ಜನರು ಆ ಅಧಿಕಾರಿಗಳ ಹೆಡೆಮುರಿ ಕಟ್ಟಿ ಬೆಟ್ಟದ ನೆತ್ತಿಯ ಮೇಲಿರುವ ನೂರು ಮೀಟರ್‌ ಆಳದ ಬಾವಿಯೊಳಗೆ ಎಸೆದು ವಿಚಾರಣೆಯನ್ನು ಮುಕ್ತಾಯಗೊಳಿಸಿದರು !

ಹದಿನಾಲ್ಕನೆಯ ಶತಮಾನ ಕೋರ್ಡ್ಸ್ ಸುವರ್ಣಯುಗವಾಗಿತ್ತು. ವಸ್ತ್ರ ಮತ್ತು ಪ್ರಾಣಿಗಳ ಚರ್ಮದ ವ್ಯಾಪಾರದಿಂದಾಗಿ ಕೋರ್ಡ್ಸ್ ಒಂದು ವಾಣಿಜ್ಯಯ ನಗರಿಯಾಗಿ ಬೆಳೆಯಿತು. ಶ್ರೀಮಂತ ವರ್ತಕರು ಗೋಥಿಕ್‌ ಶೈಲಿಯ ಭವ್ಯಗೃಹಗಳನ್ನು ನಿರ್ಮಿಸಿ ಕೋರ್ಡ್ಸ್ ಸೌಂದರ್ಯವನ್ನು ಹೆಚ್ಚಿಸಿದರು. ಆದರೆ ಪ್ಲೇಗ್‌ ಮಾರಿ ಮತ್ತು ಧಾರ್ಮಿಕ ಯುದ್ಧಗಳು ಕೋರ್ಡ್ಸ್‌ನ್ನು ಅವನತಿಯತ್ತ ಒಯ್ದವು. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮುತುವರ್ಜಿಯಿಂದಾಗಿ ಕೋರ್ಡ್ಸ್ ಒಂದು ಪ್ರವಾಸಧಾಮವಾಯಿತು. ಕಲಾವಿದರು ಮತ್ತು ಕುಶಲಕಲಾ ನಿಪುಣರು ಕೋರ್ಡ್ಸ್ ಹೊಸಹುಟ್ಟನ್ನು ನೀಡಿದರು. ಈಗ ಇದು ಫ್ರಾನ್ಸಿನ ಅತ್ಯಂತ ಸುಂದರ ಹಳ್ಳಿಗಳಲ್ಲಿ ಒಂದೆಂದು ಖ್ಯಾತಿ ಗಳಿಸಿ ಫ್ರವಾಸಿಗರನ್ನು ಸೆಳೆಯುತ್ತದೆ.

ಫ್ರಾನ್ಸಿನ ಹದಿನಾಲ್ಕನೇ ಲೂಯಿ ಮಹಾರಾಜ ಮತ್ತು ಚಕ್ರವರ್ತಿ ನೆಪೋಲಿಯನ್‌ ಬೋನಪಾರ್ಟೆ ಇಲ್ಲಿಗೆ ಬಂದು ಉಳಿದುಕೊಂಡಿದ್ದ ಭವ್ಯ ಮಹಲು ಈಗ ಐತಿಹಾಸಿಕ ಸ್ಮಾರಕವೆನಿಸಿಕೊಂಡಿದೆ. ಕೋರ್ಡ್ಸ್ ನಗರದ ಸುತ್ತಲೂ ಭದ್ರವಾದ ರಕಣಾ ಕೋಟೆಯಿದೆ. ಕೋಟೆಯ ದಿಡ್ಡಿಬಾಗಿಲು ಈಗ ಅವಶೇಷವಾಗಿ ಉಳಿದುಕೊಂಡಿದೆ. ಇದಲ್ಲದೆ ಕೋಟೆಯಲ್ಲಿ ಐದು ಅಥವಾ ಆರು ಮಹಾದ್ವಾರಗಳಿದ್ದವೆಂದು ಊಹಿಸಲಾಗಿದೆ. ಅವುಗಳಲ್ಲಿ ಹಾರ್ಲೋಗ್‌ ಗೇಟ್‌, ಓರ್ಮ್ಯಾಕ್ಸ್‌ ಗೇಟ್‌ ಮತ್ತು ಜೇನ್‌ಗೇಟ್‌ಗಳು ಈಗಲೂ ಉಳಿದುಕೊಂಡಿವೆ.

ಈ ಪುಟ್ಟ ಬೆಟ್ಟದ ಮೇಲೆ ಐದು ಮ್ಯೂಸಿಯಮ್ಮುಗಳಿವೆ ! ಅವುಗಳಲ್ಲಿ ಮೊದಲನೆಯದು ಮಾರ್ಕೆಟ್‌ ಚೌಕದ ಎದುರಿಗಿರುವ ಸೇಟಿಕ ಮತ್ತು ರತ್ನಗಳ ಮ್ಯೂಸಿಯಮ್ಮು. ಇದು ಎಪ್ರಿಲ್‌ ಒಂದರಿಂದ ನವೆಂಬರ ಹದಿನೈದರ ವರೆಗೆ ತೆರೆದಿರುತ್ತದೆ. ಎರಡನೆಯದು ಕೋರ್ಡ್ಸ್ ಬಲು ಮುಖ್ಯ ಆಕರ್ಷಣೆಯಾದ ಸಕ್ಕರೆ ಮ್ಯೂಸಿಯಮ್ಮು! ಸಕ್ಕರೆಯಿಂದ ಏನೆಲ್ಲ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಆದರೆ ಅವನ್ನು ನಾವು ನೋಡಿ ಆನಂದಿಸಬೇಕೇ ಹೊರತು ಮುಟ್ಟಿ ಕೆಡಿಸುವಂತಿಲ್ಲ. ಲಾ ಬ್ರೈಡ್‌ ಚೌಕದಲ್ಲಿರುವ ಈ ಮ್ಯೂಸಿಯಮ್ಮು ಜನವರಿ ಒಂದು ತಿಂಗಳನ್ನು ಹೊರತುಪಡಿಸಿ ಉಳಿದೆಲ್ಲಾ ತಿಂಗಳುಗಳಲ್ಲಿ ತೆರೆದಿರುತ್ತದೆ.

ಖ್ಯಾತ ಕಲಾವಿದ ಯೇಸ್‌ ಬ್ರೇಯರ್‌ನ ಮ್ಯೂಸಿಯಮ್ಮು ಮೂರನೆಯದು. ಇದರಲ್ಲಿ ಯೇಸ್‌ ಬ್ರೇಯರ್‌ ಕೋರ್ಡ್ಸ್ ನಗರಕ್ಕೆ ನೀಡಿದ ಹದಿನೇಳು ಮಹಾನ್‌ ಕಲಾಕೃತಿಗಳಿವೆ. ಗ್ರ್ಯಾಂಡ್‌ ರಸ್ತೆಯಲ್ಲಿರುವ ಚಾರ್ಲ್ಸ್ಸ್ ಪಾರ್ಟೆಲ್‌ ಮ್ಯೂಸಿಯಮ್,ಕೋರ್ಡ್ಸ್ ಮತ್ತು ಅದರ ಸುತ್ತಮುತ್ತಣ ಪ್ರದೇಶಗಳ ಇತಿಹಾಸವನ್ನು ನಮ್ಮೆದುರು ಬಿಚ್ಚಿಡುತ್ತದೆ. ಇದು ಜುಲೈ ಮತ್ತು ಆಗಸ್ಟ್‌ ತಿಂಗಳುಗಳಲ್ಲಿ ಅಪರಾಹ್ನ ಮೂರರಿಂದ ಆರರವರೆಗೆ ಮಾತ್ರ ತೆರೆದಿರುತ್ತದೆ. ಕೊನೆಯದ್ದು ತಂತುವಾದ್ಯ ತಯಾರಕರ ಮ್ಯೂಸಿಯಮ್‌. ಮಧ್ಯಕಾಲೀನ ತಂತುವಾದ್ಯಗಳ ದೊಡ್ಡ ಸಂಗ್ರಹವೇ ಇದರಲ್ಲಿದೆ. ಇದು ಬೇಸಿಗೆಯಲ್ಲಿ ತೆರೆದಿರುತ್ತದೆ. ಫ್ರಾನ್ಸಿನಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬೇಸಿಗೆ ಕಾಲ. ಆ ಬಳಿಕ ಅಸಹನೀಯವಾದ ಚಳಿಗಾಲ ಆರಂಭವಾಗುತ್ತದೆ. ಆಗ ಕೋರ್ಡ್ಸ್ ಗಿರಿನಗರ ನಿಗೂಢ ಮೌನಕ್ಕೆ ಆತುಕೊಳ್ಳಲೇಬೇಕಾಗುತ್ತದೆ.

ರಕಮದೋರಿನ ಬೆಟ್ಟ ದೇಗುಲ

ಫಿಜೆಯಾಕಿನ (Figeac) ಹೋಟೆಲ್‌ ಟರ್ಮಿನಸ್‌ನಲ್ಲಿ ನಮ್ಮ ಲಗ್ಗೇಜು ಗುಡ್ಡೆ ಹಾಕಿ ಮಧ್ಯಾಹ್ನದ ಊಟವನ್ನು ಅಲ್ಲೇ ಮುಗಿಸಿದೆವು. ಅಲ್ಲಿ ಫಿಜೆಯಾಕಿನ ರೋಟರಿ ಅಧ್ಯಕ ಪ್ಯಾಟ್ರಿಕ್‌ ಸೌಬ್ರಿಯೇ ಮತ್ತು ಇಂಗ್ಲೀಷ್‌ ಚೆನ್ನಾಗಿ ಬಲ್ಲ ಫಾರ್ಮಾಸಿಸ್ಟ್‌ ನಿಕೋಲ್‌ ನಮ್ಮನ್ನು ಕೂಡಿಕೊಂಡರು. ಸೌಬ್ರಿಯೇ ನೀಳಕಾಯದ ಐವತ್ತೈದು ದಾಟಿದ ಗಂಭೀರ ಸ್ವಭಾವದ ವ್ಯಕ್ತಿ. ನಿಕೋಲ್‌ ಅರಳು ಹುರಿದಂತೆ ಇಂಗ್ಲೀಷ್‌ ಮಾತಾಡಬಲ್ಲ ಮಧ್ಯವಯಸ್ಕ ಮಹಿಳೆ. ಅವಳ ಅಲಂಕಾರ ನೋಡಿದರೆ ಯಾರಾದರೂ ಬೆರಗಾಗಲೇಬೇಕು. ಹೆಣ್ಣಿನ ಸೌಂದರ್ಯ ಹೆಚ್ಚಿಸಲು ಅದೇನೇನು ಸಲಕರಣಗಳು ಸಿಗುತ್ತವೆಯೋ ಅವೆಲ್ಲವನ್ನೂ ಹೇಗೆ ಸದುಪಯೋಗಪಡಿಸಬೇಕು ಎನ್ನುವುದನ್ನು ಅವಳಿಂದ ಕಲಿಯಬೇಕು! ಈಕೆ ತನ್ನ ಭಾಷಾ ಚಾತುರ್ಯದಿಂದ ಫಿಜೆಯಾಕ್‌ ಕ್ಲಬ್ಬಿನ ಅಧ್ಯಕೆ ತಾನೇ ಎಂಬಂತೆ ಎಲ್ಲರನ್ನ್ನೂ ನಿಯಂತ್ರಿಸುತ್ತಿದ್ದಳು. ನಮ್ಮ ಮಹಿಳಾ ಮಣಿಯರ ನೋವು ನಲಿವುಗಳನ್ನು ವಿಚಾರಿಸಿ ಪ್ಯಾರಿಸ್ಸಿನಲ್ಲಿ ಹಣಕಳಕೊಂಡುದನ್ನು ಸೌಬ್ರಿಯೆಗೆ ತಿಳಿಸಿಬಿಟ್ಟಳು. ಅವನಿಗೆ ತನ್ನ ದೇಶದಲ್ಲಿ ಭಾರತೀಯ ಅತಿಥಿಗಳಿಗೆ ಹಾಗಾದುದಕ್ಕೆ ವಿಷಾದವಾಯಿತು. ತಕ್ಷಣ ಮೊಬೈಲ್‌ ಫೋನ್‌ನಲ್ಲಿ ತುಲೋಸಿನಲ್ಲಿರುವ ಹಂಬರ್ಗನ್ನು ಸಂಪರ್ಕಿಸಿ ಪ್ಯಾರಿಸ್ಸಿನಲ್ಲಿ ಹಣಕಳಕೊಂಡವರಿಗೆ ಸ್ವಲ್ಪವಾದರೂ ಪರಿಹಾರ ಕೊಡಬೇಕಾದುದು ಧರ್ಮ ಎಂದು ಅವನ್ನು ಒಪ್ಪಿಸಿದ. ಹೆಬ್ಬಾರರು ಮತ್ತು ನಮ್ಮ ಮಹಿಳಾಮಣಿಯರು ‘ಅದೆಲ್ಲಾ ಬೇಡ’ ಎಂದರೂ ನಿಕೋಲ್‌ ‘ನೀವೀಗ ರೋಟರಿ ಅತಿಥಿಗಳು. ನಿಮಗೆ ಪರಿಹಾರ ಕೊಡುತ್ತಿರುವುದು ರೋಟರಿ ಸಂಸ್ಥೆ. ನಾವೇನು ನಮ್ಮ ಜೇಬಿನಿಂದ ಹಣ ಕೊಡುತ್ತೇವೆಯೆ?’ ಎಂದಳು.

ಮಧ್ಯಾಹ್ನದ ಊಟ ಮುಗಿಸಿ ನಾವು ರಕಮದೋರಿಗೆ ಹೊರಟೆವು. ಈಗ ನಮ್ಮನ್ನು ಪೌಲ್‌ ಲಾಸೇಜ್‌ ಮತ್ತು ಆತನ ಪತಿನ ಸುಸೇನ್‌ ಸೇರಿಕೊಂಡರು. ಇಬ್ಬರೂ ಎಪ್ಪತ್ತು ದಾಟಿದವರು. ಫಿಜೆಯಾಕಿನಿಂದ ಇಂಗ್ಲೀಷ್‌ ಅಧ್ಯಾಪಿಕೆಯೊಬ್ಬಳು ರಕಮದೋರಿನ ಬಗ್ಗೆ ನಮಗೆ ಸರಿಯಾಗಿ ತಿಳಿಸಲು ನಮ್ಮೊಡನೆ ಬಂದಳು. ಆಕೆಯ ಹೆಸರು ನನ್ನ ನೆನಪಲ್ಲಿ ಉಳಿಯದಿದ್ದರೂ ಆಕೆಯ ಅಚ್ಚುಕಟ್ಟಾದ ವಿವರಣೆ, ನೇರ ನಡವಳಿಕೆ ನೆನಪಲ್ಲಿ ಹಾಗೇ ಉಳಿದುಕೊಂಡಿತು. ರಕಮದೋರಿನ ಒಂದು ಗಂಟೆಯ ಹಾದಿ ನಮ್ಮ ಗಮನಕ್ಕೆ ಬಾರದಂತೆ ಸವೆದು ಹೋದುದು ಅವಳ ಅದ್ಭುತ ವಿವರಣಾ ಕ್ರಮದಿಂದಾಗಿ.

ರಕಮದೋರ್‌ ಫ್ರಾನ್ಸಿನ ಪ್ರಖ್ಯಾತ ಕ್ರೈಸ್ತ ಪುಣ್ಯ ಕೇತ್ರಗಳಲ್ಲೊಂದು. ಅದು ಪುಣ್ಯ ಕೇತ್ರವಾಗಿ ಬೆಳಕಿಗೆ ಬಂದದ್ದು ಕ್ರಿ.ಶ. ಹನೆನರಡನೆಯ ಶತಮಾನದಲ್ಲಿ. ಅದು ಕರ್ನಾಟಕದಲ್ಲಿ ಬಸವಣ್ಣ ತಮ್ಮ ಅನುಭವ ಮಂಟಪದ ಮೂಲಕ ಸರ್ವಸಮಾನತೆಯನ್ನು ಸಾಧಿಸಲು ಯತ್ನಿಸುತ್ತಿದ್ದ ಕಾಲ. ಆದರೆ ಮಧ್ಯ ಫ್ರಾನ್ಸಿನ ರಕಮದೋರಿನಲ್ಲಿ ಅದು ಪವಾಡಗಳ ಕಾಲ! ಕ್ರಿ.ಶ.1148ರಲ್ಲಿ ಹರ್ಬಟ್ ಎಂಬ ಸಂತನ ಸಹೋದರನ ಕಾಯಿಲೆ ಈ ಸ್ಥಳದ ಮಹಾತ್ಮೆ- ಯಿಂದಾಗಿ ವಾಸಿಯಾಯಿತಂತೆ. ಅದು ಅಲ್ಲಿ ದಾಖಲಾದ ಮೊತ್ತಮೊದಲ ಪವಾಡ. ಆ ಬಳಿಕ ಅಲ್ಲಿ ನಡೆದ ಪವಾಡಗಳನೆನಲ್ಲಾ ದಾಖಲೆ ಮಾಡಿಡಲಾಗಿದೆ. ದಾಖಲೆಯ ಪ್ರಕಾರ ಈವರೆಗೆ ಅಲ್ಲಿ ನಡೆದಿರುವ ಪವಾಡಗಳ ಸಂಖ್ಯೆ 400 ದಾಟಿದೆ!

ಫಿಜೆಯಾಕಿನಿಂದ ರಕಮದೋರಿಗೆ 40 ಕಿ.ಮೀ. ದೂರ. ಈ ಪ್ರದೇಶ ಅಪ್ಪಟ ಪ್ರಸ್ಥಭೂಮಿ. ಭಾರತದ ವಿದರ್ಭ ಪ್ರದೇಶದಲ್ಲಿರುವಂತಹ ಪ್ರಕೃತಿ. ಇಂತಹ ಬರಡು ನೆಲದಲ್ಲಿ ಯಾತ್ರಿಕರು ನೀರಿಗೂ ಗತಿಯಿಲ್ಲದೆ ಅದೆಷ್ಟು ಕಷ್ಟಪಟ್ಟು ರಕಮದೋರಿಗೆ ಬರುತ್ತಿದ್ದರೊ? ಅಪ್ಪಟ ನಂಬಿಕೆ ಏನನ್ನೂ ಮಾಡಿಸೀತು!

ರಕಮದೋರ್‌ ಒಂದು ಕಣಿವೆ ಪ್ರದೇಶ. ಮೂರು ಕಡೆಗಳಿಂದ ಬೆಟ್ಟಗಳು ಈ ಊರಿಗೆ ರಕಣಾ ಗೋಡೆಯನ್ನು ನಿರ್ಮಿಸಿವೆ. ಇಲ್ಲಿ ಅಲ್‌ಜೂ ಎಂಬ ನದಿಯೊಂದು ಹರಿಯುತ್ತಿತ್ತು. ಅದೀಗ, ಭಾರತದ ಸರಸ್ವತಿ ನದಿಯಂತೆ, ಗುಪ್ತಗಾಮಿನಿಯಾಗಿದೆ. ಬೆಟ್ಟದ ಮಡಿಲಲ್ಲಿ ವಾಸದ ಮನೆಗಳಿವೆ. ಅವುಗಳಿಂದ ಮೇಲೆ ಹಂತ ಹಂತವಾಗಿ ಏಳು ದೇವಾಲಯಗಳನ್ನು ನಿರ್ಮಿಸಲಾಗಿದೆ. ದೇವಾಲಯಗಳಿಗಿಂತ ಮೇಲೆ ಬಿಷಪ್ಪನ ಅರಮನೆಯಿದೆ. ಆತ ಊರಿನ ಸಂರಕ್ಷಕ. ದೇವರಾದರೇನು, ಮನುಷ್ಯರ ರಕ್ಷಣೆ ಇಲ್ಲದಿದ್ದರೆ ಆಗುತ್ತದೆಯೆ!

ರಕಮದೋರಿಗೆ ಐತಿಹ್ಯಗಳಿವೆ. ಇತಿಹಾಸವೂ ಇದೆ. ಹಳೆಯ ಒಡಂಬಡಿಕೆ ಕಾಲಕ್ಕೆ ಸೇರಿದವನಾದ ಸಂತ ಜಾಕ್ವಿಸ್‌ ಇಲ್ಲಿಗೆ ಬಂದು ಬೆಟ್ಟದ ಗುಹೆಯಲ್ಲಿ ತಪಸ್ಸು ಮಾಡಿ ಇಲ್ಲಿನ ಕಾರಣಿಕಗಳಿಗೆ ಕಾರಣನಾದ ಎಂದು ಜನರು ನಂಬುತ್ತಾರೆ. ಕ್ರಿ.ಶ. 1166ರಲ್ಲಿ ಇಲ್ಲಿನ ಗುಹೆಯೊಂದರಲ್ಲಿ ಸಂತ ಅಮಾಡರ್‌ನ ಮಮ್ಮಿ (ಕೆಡದಂತೆ ಸಂರಕಿಸಲ್ಪಟ್ಟ ಶವ) ಪತ್ತೆಯಾಯಿತು. ಶವ ಪತ್ತೆಯಾದ ಬಳಿಕ ಪವಾಡಗಳು ಸಂಭವಿಸತೊಡಗಿದವು. ಕರ್ಣಾಕರ್ಣಿಕೆಯಾಗಿ ಸುದ್ದಿ ಹರಡಿ ಎಲ್ಲಾ ಕಡೆಗಳಿಂದ ಜನರು ರಕಮದೋರಿಗೆ ಬರತೊಡಗಿದರು. ಹರಿಕೆ ಹೇಳಿ ಕಾಣಿಕೆ ಸಲ್ಲಿಸಿದರು. ಬೇಡಿಕೆ ಈಡೇರಿದಾಗ ಇನ್ನಷ್ಟು ನಗ, ನಾಣ್ಯ ತಂದೊಪ್ಪಿಸಿದರು. ಸಮುದ್ರದಲ್ಲಿ ಅಪಾಯಗಳಿಂದ ಪಾರಾದವರು ನಾವೆಗಳನ್ನು ಕೂಡಾ ತಂದೊಪ್ಪಿಸಿತೊಡಗಿದರು. ಹನ್ನೆರಡನೆಯ ಶತಮಾನದ ನಾವೆಯೊಂದು ಅದಕ್ಕೆ ಸಾಕಿಯಾಗಿ ಈಗಲೂ ಉಳಿದುಕೊಂಡಿದೆ.

ರಕಮದೋರಿನ ದೇವಾಲಯಗಳಲ್ಲಿ ಸಂಪತ್ತು ಶೇಖರಣೆಯಾಗ ತೊಡಗಿದಂತೆ ಪಾತಕಿಗಳ ಆಗಮನವಾಯಿತು. ಕಳ್ಳಕಾಕರು ಮತ್ತು ಡಕಾಯಿತರು ಕೈಮುಗಿದೇ ದೇವರನ್ನು ದೋಚತೊಡಗಿದರು. ಆಗ ರಕಣಾ ವ್ಯವಸ್ಥೆ ರೂಪುಗೊಳ್ಳುವುದು ಅನಿವಾರ್ಯವಾಯಿತು. 15ನೆಯ ಶತಮಾನದಲ್ಲಿ ಬೆಟ್ಟದ ಮೇಲಿನಿಂದ ದೊಡ್ಡದೊಂದು ಬಂಡೆ ಉರುಳಿ ಮೂಲ ದೇವಾಲಯ ನಾಶವಾಯಿತು. ಜನರು ಹೊಸ ದೇವಾಲಯವನ್ನು ನಿರ್ಮಿಸಿದರು. ಹದಿನಾರನೆಯ ಶತಮಾನದ ಕ್ಯಾಥಲಿಕ್‌ ಮತ್ತು ಪ್ರಾಟೆಸ್ಟಂಟರ ನಡುವಣ ಯುದ್ಧದ ಸಂದರ್ಭದಲ್ಲಿ ಕ್ಯಾಥಲಿಕ್ಕರು ಹೊಸ ದೇವಾಲಯಕ್ಕೆ ಬೆಂಕಿ ಕೊಟ್ಟು ಅದನ್ನು ಸುಟ್ಟು ಬಿಟ್ಟರು. ಧಾರ್ಮಿಕ ಯುದ್ಧಗಳು ಮತ್ತು ಭೀಕರ ಬರಗಾಲ ರಕಮದೋರಿನ ಭಕ್ತರ ಸಂಖ್ಯೆಯನ್ನು ಕಡಿಮೆ ಮಾಡಿದವು. ಹತ್ತೊಂಬತ್ತನೆಯ ಶತಮಾನದಲ್ಲಿ ರಕಮದೋರ್‌ ಮತ್ತೆ ಮಹತ್ವವನ್ನು ಪಡೆಯತೊಡಗಿತು. ಮಧ್ಯಫ್ರಾನ್ಸಿನ ಪವಿತ್ರ ಯಾತ್ರಾ ಕೇತ್ರವಾಗಿ ಇಂದು ರಕಮದೋರ್‌ ಜನರನ್ನು ಆಕರ್ಷಿಸುತ್ತಿದೆ.

ರಕಮದೋರಿನ ಬೆಟ್ಟದ ತುದಿಯ ವರೆಗೂ ವಾಹನಗಳು ಹೋಗಬಹುದು. ತುದಿಯಿಂದ ಕಣಿವೆ ಪ್ರದೇಶಕ್ಕೆ ಇಳಿಯಲು ಕಾಲ್ದಾರಿಯಿದೆ. ಕೆಲವು ಕಡೆ ಮೆಟ್ಟಿಲುಗಳೂ ಇವೆ. ಕೆಳಗಿನಿಂದ ಮೇಲಕ್ಕೆ ಹತ್ತಿ ಹೋಗಲಾಗದವರಿಗಾಗಿ ಎಲಿವೇಟರ್‌ ವ್ಯವಸ್ಥೆಯಿದೆ. ಹಿಂದೆ ಕೆಳಗಿನಿಂದ 144 ಮೆಟ್ಟಿಲುಗಳನ್ನು ಮೊಣಕಾಲಲ್ಲೇ ಏರಿ ಪ್ರಾಯಶ್ಚಿತ ಮಾಡಿಕೊಳ್ಳುವ ಭಕ್ತರಿದ್ದರಂತೆ. ಹಾಗೆಂದು ನಿಕೋಲ್‌ ಹೇಳುವಾಗ ನಾನು ನಮ್ಮ ಸಿಡಿ, ಉರುಳುಸೇವೆ, ಪುರವಂತಿಕೆ ಮತ್ತು ಅಯ್ಯಪ್ಪ ಭಕ್ತರ ವೃತಾಚರಣೆ ಬಗ್ಗೆ ಹೇಳಿ, ನಂಬಿಕೆಗಳ ಮಟ್ಟಿಗೆ ನಾವೆಂದಿಗೂ ಹಿಂದುಳಿವವರಲ್ಲ ಎನ್ನುವುದನ್ನು ದಂಗು ಬಡಿಯುವಂತೆ ಆಕೆಗೆ ಮನದಟ್ಟು ಮಾಡಿದೆ.

ಕ್ವರ್ಸಿ ಪ್ರಾಂತ್ಯದ ಪ್ರಸ್ಥಭೂಮಿಯ ಕೊನೆಯ ಊರು ರಕಮದೋರ್‌. ಪ್ರಸ್ಥಭೂಮಿ ಕೊನೆಯಾದಾಗ ಒಮ್ಮಿಂದೊಮ್ಮೆಲೇ ಕಾಣಿಸಿಕೊಳ್ಳುವ ರಕಮದೋರ್‌ ಕಣಿವೆ ಪ್ರದೇಶವು 150 ಮೀಟರ್‌ ಆಳ ಮತ್ತು 350 ಮೀಟರ್‌ ವಿಸ್ತಾರವಿದೆ. ಏಳು ಗುಹೆಗಳು, ಏಳು ದೇಗುಲಗಳ ರಕಮದೋರ್‌ ಫಕ್ಕನೆ ಏಳುಮಲೆಯ ವೆಂಕಟರಮಣನ್ನು ನೆನಪಿಗೆ ತರುತ್ತದೆ. ಆದರೆ ತಿರುಮಲ ಪ್ರದೇಶದಷ್ಟು ಪ್ರಾಕೃತಿಕ ಚೆಲುವು ಇಲ್ಲಿ ಇಲ್ಲ. ಅಷ್ಟು ಭಕ್ತರು ಇಲ್ಲಿಗೆ ಬರುವುದೂ ಇಲ್ಲ. ಬರುವ ಭಕ್ತರಲ್ಲಿ ಅತಿಶಯ ಆವೇಶಗಳನ್ನು ಕಾಣಲು ಕೂಡಾ ಸಾಧ್ಯವಿಲ್ಲ. ಹಾಗೆ ನೋಡಿದರೆ ಇಲ್ಲಿಗೆ ಬರುವವರಲ್ಲಿ ಭಕ್ತರಿಗಿಂತ ಪ್ರವಾಸಿಗರ ಸಂಖ್ಯೆಯೇ ಅಧಿಕ. ಕಾಲಾಯ ತಸ್ಮೈ ನಮಃ!

ರಕಮದೋರಿನಲ್ಲಿ ಇತರ ಆಕರ್ಷಣೆಗಳೂ ಇವೆ. ಇಲ್ಲಿ ಪೊರೆಟ್‌ ಡೆ ಸಿಂಜೆಸ್‌ ಎಂಬ ಮುಕ್ತ ಮೃಗಾಲಯವೊಂದಿದೆ. ಈ ಮುಕ್ತ ಮೃಗಾಲಯದಲ್ಲಿ ನೂರಾರು ಕೋತಿಗಳು ನಿರ್ಭೀತಿಯಿಂದ ಸಂಚರಿಸುತ್ತಾ, ಜನರೊಡನೆ ಬೆರೆತು ಮನರಂಜನೆ ನೀಡುತ್ತವೆ. ಹದ್ದು, ಗಿಡುಗ ಮತ್ತು ಗೂಬೆಗಳ ವರ್ಗಕ್ಕೆ ಸೇರಿದ ಅನೇಕ ಪಕ್ಷಿ ಸಂಕುಲಗಳು ಇಲ್ಲಿವೆ. ಇವುಗಳಿಗೂ, ಮಂಗಗಳಂತೆ, ಮಾನವರೆಂದರೆ ಇಷ್ಟ. ಮಕ್ಕಳಿಗಂತೂ ರಕಮದೋರಿನಲ್ಲಿ ಇಷ್ಟವಾಗುವುದು ಈ ಪಕ್ಷಿಗಳೇ. ರಕಮದೋರಿನ ಪಶ್ಚಿಮದಲ್ಲಿ ಹರಿಯುವ ವೊಯಿಸ್ಸೇ ನದಿಯ ಸುಳಿಯು ರುದ್ರಮೋಹಕವಾಗಿದೆ. ಸಾಹಸಿಗಳನ್ನು ಆಕರ್ಷಿಸುವ ತಾಣ ಇದು. ರಕಮದೋರಿನ ಪೂರ್ವಕ್ಕೆ ಒಂಬತ್ತು ಕಿ.ಮೀ. ದೂರದಲ್ಲಿರುವ ಗ್ರಾಮತ್‌ ಪಟ್ಟಣದ ಬಳಿ ನಲ್ವತ್ತು ಹೆಕ್ಟೇರು ಪ್ರದೇಶದ ಅಭಯಾರಣ್ಯವೊಂದಿದ್ದು ಜೀವ ವೈವಿಧ್ಯಗಳ ಸಂರಕಣೆಗೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ರಕಮದೋರಿನ ಹಾದಿಯುದ್ದಕ್ಕೂ ವಿಸ್ತಾರವಾದ ಹೊಲಗಳಿವೆ. ಈ ಹೊಲಗಳಲ್ಲಿ ಅಲ್ಲಲ್ಲಿ ಒಂಟಿ ಮನೆಗಳಿವೆ. ಅವು ಪಾರಿವಾಳಗಳ ಮನೆಗಳು. ಪಾರಿವಾಳಗಳ ಹಿಕ್ಕೆ ಅದುಪತವಾದ ನೈಸರ್ಗಿಕ ಗೊಬ್ಬರವಾದುದರಿಂದ ಪಾರಿವಾಳ- ಗಳಿಗಾಗಿ ರೈತರು ಮನೆ ಕಟ್ಟುತ್ತಾರೆ. ಅವುಗಳನ್ನು ಸಾಕಿ ಗೊಬ್ಬರ ಪಡೆಯುತ್ತಾರೆ. ಹದಿನೈದನೆಯ ಶತಮಾನದ ವರೆಗೆ ಜನಸಾಮಾನ್ಯರು ಪಾರಿವಾಳ ಸಾಕುವುದು ಕಾನೂನು ಬಾಹಿರವಾಗಿತ್ತು. ಪಾರಿವಾಳ ಸಾಕಣೆ ಮತ್ತು ಪಾರಿವಾಳ ಗೃಹ ನಿರ್ಮಾಣ ಶ್ರೀಮಂತರ ಮತ್ತು ರಾಜವಂಶಸ್ಥರ ಗೌರವದ ಸಂಕೇತವಾಗಿತ್ತು. ಅಂದರೆ ಜನಸಾಮಾನ್ಯ ರೈತರು ಗೊಬ್ಬರ ಮಾಡುವಂತೆಯೂ ಇರಲಿಲ್ಲ! ಪ್ಯಾರಿಸ್ಸಿಗೆ ಹತ್ತಿರವಿರುವ ಫ್ರಾನ್ಸ್‌ನ ಪ್ರದೇಶಗಳಲ್ಲಿ ಈ ಕಾನೂನು ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು. ಪ್ಯಾರಿಸ್ಸಿನಿಂದ ಬಲುದೂರದಲ್ಲಿರುವ ಕ್ವರ್ಸಿ, ಕಹೋರ್‌ ಮುಂತಾದ ಪ್ರದೇಶಗಳ ಜನರು ಈ ಕಾನೂನಿಗೆ ಸೊಪ್ಪು ಹಾಕುತ್ತಿರಲಿಲ್ಲ. ಹದಿನೈದನೆಯ ಶತಮಾನದ ಕೊನೆಯಲ್ಲಿ ಈ ಕಾನೂನಿನ ಅರ್ಥಹೀನತೆಯನ್ನು ಅರ್ಥಮಾಡಿಕೊಂಡ ಅರಸ ಅದನ್ನು ತೆಗೆದು ಹಾಕಿಬಿಟ್ಟ. ಆ ಬಳಿಕ ಎಲ್ಲರೂ ಮುಕ್ತವಾಗಿ ಪಾರಿವಾಳಗಳಿಗೆ ಗೃಹ ನಿರ್ಮಿಸಿ ಪಾರಿವಾಳ ಸಾಕುತ್ತಿದ್ದಾರೆ. ಪಾರಿವಾಳದ ಹಿಕ್ಕೆ ಭೂಮಿಗೆ ಗೊಬ್ಬರವಾದರೆ ಪಾರಿವಾಳಗಳು ಮನುಷ್ಯರಿಗೆ ಗೊಬ್ಬರವಾಗುತ್ತವೆ!

ರಕಮದೋರಿನಿಂದ ಫಿಜೆಯಾಕಿಗೆ ವಾಪಾಸಾಗುವ ಹಾದಿಯಲ್ಲಿ ಕ್ರಿಸ್ತಪೂರ್ವ ಐದನೆಯ ಶತಮಾನದ್ದೆನ್ನಲಾದ ಪ್ರಾಚೀನ ಗುಹೆಯೊಂದನ್ನು ಸಂದರ್ಶಿಸುವ ಅವಕಾಶ ನಮಗೆ ಒದಗಿತು. ಅದರ ಪ್ರವೇಶ ಶುಲ್ಕ ಐದು ಫ್ರಾಂಕುಗಳು. (ಮೂವತ್ತೈದು ರೂಪಾಯಿ) ಗುಹೆಯ ಬಗ್ಗೆ ವಿವರಣೆ ನೀಡಲು ಒಬ್ಬ ಗೈಡ್‌ ಇದ್ದಾನೆ. ಗುಹೆಯೊಳಗೆ ವಿದ್ಯುದ್ದೀಪದ ವ್ಯವಸ್ಥೆಯಿದೆ. ಗುಹೆಯಲ್ಲಿನ ಪುರಾತನ ಪಳೆಯುಳಿಕೆಗಳನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಗುಹೆಯಲ್ಲಿ ಅಲ್ಲಲ್ಲಿ ನೀರು ಜಿನುಗುತ್ತದೆ. ಆದರೆ ಎಂದೂ ಗುಹೆ ನೀರಿನಿಂದ ಭರ್ತಿಯಾಗುವುದಿಲ್ಲ. ಅತ್ಯಂತ ಪರಿಶುದ್ಧವಾದ ಈ ತಂಪು ನೀರನ್ನು ಮುಖಕ್ಕೆ ಸೇಂಚನ ಮಾಡಿದರೆ ಆಯಾಸವೆಲ್ಲಾ ಪರಿಹಾರವಾಗುತ್ತದೆ. ಫ್ರಾನ್ಸಿನಲ್ಲಿ ಪುರಾತನ ಸೊತ್ತುಗಳು ಸರಕಾರದ ಒಡೆತನಕ್ಕೆ ಸೇರಿವೆ. ಆದರೆ ಅವುಗಳ ನಿಭಾವಣೆ ಮತ್ತು ಅನುರಕಣೆಯನ್ನು ಸರಕಾರ ಖಾಸಗಿಯವರಿಗೆ ಬಿಟ್ಟು ಕೊಡುವುದುಂಟು. ಈ ಗುಹೆ ಖಾಸಗಿ ನಿಭಾವಣೆಯಲ್ಲಿದೆ. ಆದುದರಿಂದ ಅದು ಅಷ್ಟು ಚೆನ್ನಾಗಿ ಉಳಿದುಕೊಂಡಿದೆ. ಒಂದು ಗುಹೆಯನ್ನು ಇತಿಹಾಸದ ಪಾಠಕ್ಕೆ ಹೇಗೆ ಬಳಕೆ ಮಾಡಬೇಕೆಂಬುದನ್ನು ಫ್ರೆಂಚರಿಂದ ನಾವು ಕಲಿಯಬೇಕು. ದಕಿಣಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ‘ಪಾಂಡವರ ಗುಹೆ’ಗಳಿವೆ. ಸುಳ್ಯದ ಸಮೀಪದ ಮಂಡೆಕೋಲಿನಲ್ಲಿ ‘ಬಾಂಜಾರ’ ಎಂದು ಕರೆಯಲ್ಪಡುವ ದೊಡ್ಡದಾದ ಗುಹೆಯಿದೆ. ಆದರೆ ಪ್ರವಾಸೋದ್ಯಮ ಇಲಾಖೆಗೆ ಗುಹೆಗಳು ಅತ್ಯಂತ ಆಕರ್ಷಣೆಯ ಪ್ರವಾಸೀ ತಾಣಗಳು ಎನ್ನುವುದನ್ನು ಮನದಟ್ಟು ಮಾಡುವುದು ಹೇಗೆ ಮತ್ತು ಯಾರು?

ಪ್ರಶಾಂತ ಪಟ್ಟಣ ಫಿಜೆಯಾಕ್‌
ಫಿಜೆಯಾಕನ್ನು ಕಾಲನಡಿಗೆಯಲ್ಲಿ ನಾವು ಸುತ್ತಿದ್ದು ಎಪ್ರಿಲ್‌ ಹತ್ತರಂದು ಬೆಳಿಗ್ಗೆ. ಮೊದಲಿಗೆ ಚಾಕೋಲೇಟು ಉತ್ಪಾದನಾ ಘಟಕವೊಂದನ್ನು ನೋಡಿ ಬಗೆ ಬಗೆಯ ಚಾಕೋಲೇಟುಗಳ ರುಚಿಯನ್ನು ಸವಿದ ಬಳಿಕ ನಮ್ಮ  ಫಿಜೆಯಾಕ್‌ ಅಭಿಯಾನ ಆರಂಭಗೊಂಡಿತು. ಕ್ವರ್ಸಿ ವಲಯಕ್ಕೆ ಸೇರಿದ ಲೋಟ್‌ ಪ್ರಾಂತ್ಯದ ಎರಡನೆಯ ಅತಿ ದೊಡ್ಡ ಪಟ್ಟಣವಾದ ಫಿಜೆಯಾಕಿನ ಜನಸಂಖ್ಯೆ ಹನ್ನೊಂದು ಸಾವಿರ. ಸೇಲ್‌ ನದಿಯ ಬಲದಂಡೆಯಲ್ಲಿರುವ ಈ ಪಟ್ಟಣ ಏರೋನಾಟಿಕಲ್‌ ಉದ್ಯಮದಿಂದಾಗಿ ಹೊರಜಗತ್ತಿಗೆ ಪರಿಚಿತ. ವರ್ಷಂಪ್ರತಿ ಬೇಸಿಗೆಯಲ್ಲಿ ಫಿಜೆಯಾಕಿನಲ್ಲಿ ಸಂಗೀತ ಮತ್ತು ನಾಟಕೋತ್ಸವಗಳು
ಜರಗುತ್ತವೆ. ಆಗೆಲ್ಲಾ ಯುರೋಪಿನ ಎಲ್ಲಾ ರಾಷ್ಟ್ರಗಳಿಂದ ಆಸಕ್ತರು ಇಲ್ಲಿಗೆ ಧಾವಿಸುತ್ತಾರೆ ಕ್ರೈಸ್ತರ ಪವಿತ್ರ ಕೇತ್ರಗಳಾದ ರಕಮದೋರ್‌, ಕೊಂಕ್‌ ಮತ್ತು ಕಂಪೊಸ್ಟೆಲ್ಲಾಗಳಿಗೆ ಫಿಜೆಯಾಕ್‌ ಕೇಂದ್ರಸ್ಥಳವಾಗಿರುವುದರಿಂದ ಈ ಪಟ್ಟಣದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮಕ್ಕೆ ಪ್ರಥಮ ಸ್ಥಾನ ಸಲ್ಲುತ್ತದೆ.

ಪ್ರಶಾಂತ ಪಟ್ಟಣ ಫಿಜೆಯಾಕಿಗೆ ಹೆಸರು ತಂದುಕೊಟ್ಟವ ಜುವಾನ ಫ್ರಾಂಜೇ ಚಾಂಪೊಲಿಯನ್‌ ಎಂಬ ಭಾಷಾ ವಿಜ್ಞಾನಿ. ಕ್ರಿ.ಶ.1790ರಲ್ಲಿ ಜನಿಸಿದ ಚಾಂಪೊಲಿಯನ್‌ ಗ್ರೆನೋಬೆಲ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಈಜಿಪ್ಶಿಯನ್‌ ಗೂಢಲಿಪಿಯತ್ತ ಆಕರ್ಷಿತನಾದ. ಕ್ರಿ.ಶ.1799ರಲ್ಲಿ ಈಜಿಪ್ಶಿಯನ್‌ ಗೂಢಲಿಪಿಯ ಕರಿಶಿಲೆಯೊಂದು ಫಿಜೆಯಾಕಿನಲ್ಲಿ ದೊರೆಯಿತು. ಆದರೆ ಅದನ್ನು ಓದಲು ಭಾಷಾವಿಜ್ಞಾನಿಗಳಿಂದ ಸಾಧ್ಯವಾಗಲಿಲ್ಲ. ಚಾಂಪೊಲಿಯನ್‌ ಇದನ್ನೊಂದು ಸವಾಲಾಗಿ ಸ್ವೀಕರಿಸಿ ಕ್ರಿ.ಶ.1807ರಲ್ಲಿ ಪ್ಯಾರಿಸ್ಸಿಗೆ ಹೋಗಿ ಪುರಾತನ ಭಾಷೆಗಳ ಅಧ್ಯಯನ ನಡೆಸಿದ. ಕ್ರಿ.ಶ.1821ರಲ್ಲಿ ಶಿಲಾಬರಹವನ್ನು ಓದಲು ಅವನಿಗೆ ಸಾಧ್ಯವಾಯಿತು. ತನ್ನ ಸಂಶೋಧನೆಯ ಫಲಿತಾಂಶಗಳನ್ನು ಆತ ಕ್ರಿ.ಶ.1824ರಲ್ಲಿ ‘ಪ್ರೇಸಿಸ್‌ ಡಿ ಸಿಸ್ಟಿಂ ಹೀರೋಗ್ಲಿಫಿಕ್’ ಎಂಬ ಕೃತಿಯಲ್ಲಿ ಬಹಿರಂಗಪಡಿಸಿದ. ಆತನ ಪ್ರತಿಭೆ ಆತನಿಗೆ ಪ್ಯಾರಿಸ್ಸಿನ ಎಲೂವ್ರ್‌ಏ ವಸ್ತು ಸಂಗ್ರಹಾಲಯದಲ್ಲಿನ ಈಜಿಪ್ಶಿಯೋಲಜಿ ವಿಭಾಗದ ಕ್ಯುರೇಟರ್‌ ಹುದ್ದೆಯನ್ನು ದೊರಕಿಸಿಕೊಟ್ಟಿತು. ಆ ಬಳಿಕ ಆತ ಅನೇಕ ಬಾರಿ ಈಜಿಪ್ಟ್‌ಗೆ ಹೋಗಿ ಭಾಷಾ ಸಂಶೋಧನೆಗಳನ್ನು ನಡೆಸಿದ. ಕ್ರಿ.ಶ.1831ರಲ್ಲಿ ಆತನಿಗಾಗಿ ಫ್ರಾನ್ಸ್‌ ಕಾಲೇಜಲ್ಲಿ ಈಜಿಪ್ಶಿಯೋಲಜಿ ಪೀಠವೊಂದನ್ನು ನಿರ್ಮಿಸಲಾಯಿತು. ಆದರೆ ಅದರ ಮರುವರ್ಷವೇ, ಅಂದರೆ ಕ್ರಿ.ಶ.1832ರಲ್ಲಿ ಚಾಂಪೋಲಿಯನ್‌ ನಿಧನನಾದ. ಭಾಷಾಲೋಕಕ್ಕೆ ಅಪೂರ್ವ ಕೊಡುಗೆಗಳೆಂದು ಪರಿಗಣಿತವಾಗಿರುವ ಆತನ ಗ್ರಾಮರ್‌ ಈಜಿಪ್ಶಿಯನ್‌ ಮತ್ತು ಡಿಕ್ಷ್‌ನರಿ ಈಜಿಪ್ಶಿಯನ್‌ ಆತನ ಮರಣಾನಂತರ ಪ್ರಕಟಗೊಂಡವು.

ಫಿಜೆಯಾಕಿನ ಹಳೆಯ ಭಾಗವು ಈಗಲೂ ಮಧ್ಯಯುಗೀನ ಲಕಣಗಳನ್ನು ಉಳಿಸಿಕೊಂಡಿದೆ. ಈ ಭಾಗದಲ್ಲಿರುವ ಹದಿಮೂರನೇ ಶತಮಾನದ ಹೋಟೆಲ್‌ ಡಿ ಲಾ ಮೋನ್ನಾದಲ್ಲಿ ಹದಿಮೂರನೇ ಲೂಯಿಯ ಕಾಲದ ವರೆಗೂ ಬ್ಯಾಂಕ್‌ ವ್ಯವಹಾರಗಳನ್ನು ನಡೆಸಲಾಗುತ್ತಿತ್ತು. ಬಹಳ ಹಿಂದೆ ಫಿಜೆಯಾಕಿನಲ್ಲಿ ಟಂಕಿಸಲಾಗುತ್ತಿದ್ದ ಚಿನ್ನದ ನಾಣ್ಯಗಳನ್ನು ಇದರಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಈಗ ಆ ಭವನದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಛೇರಿ ಮತ್ತು ಚಾಂಪೊಲಿಯನನ್ನ ವಸ್ತು ಸಂಗ್ರಹಾಲಯಗಳಿವೆ. ಭವನದ ಕೆಳ ಅಂತಸ್ತಿನಲ್ಲಿ ರೋಮನ್‌ ಯುಗಕ್ಕೆ ಸೇರಿದ ಶಿಲಾಶಾಸನಗಳ ಸಂಗ್ರಹವಿದೆ. ಮೊದಲನೆಯ ಮಹಡಿಯಲ್ಲಿ ಇತಿಹಾಸ ಪೂರ್ವ ಯುಗದಿಂದ ಹದಿನೇಳನೆಯ ಶತಮಾನದವರೆಗಿನ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

ಫಿಜೆಯಾಕಿನ ದಕ್ಷಿಣಭಾಗದ ರಾಕ್‌ಫರ್ಟ್ ರಸ್ತೆಯಲ್ಲಿ ಫಿರಂಗಿದಳದ ಪ್ರಪಿತಾಮಹನೆನಿಸಿದ ಗ್ಯಾಲಿಯೊಟ್‌ ಡಿ ಗೆನೊಲ್ಯಾಕನ ಮನೆಯ ಅವಶೇಷಗಳಿವೆ. ಇದೇ ಭಾಗದಲ್ಲಿರುವ ಹಳೆಯ ಸೇಂಟ್‌ ಸೇವಿಯರ್‌ ದೇಗುಲ ಮತ್ತು ಕ್ರಿ.ಶ.1793ರಲ್ಲಿ ನಿರ್ಮಾಣವಾದ ಪ್ಲೇಸ್‌ ಡಿ ಲಾ ರೈಸನ್‌ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿವೆ. ಇಲ್ಲಿ ಚಾಂಪೊಲಿಯನ್‌ನಿಗೆ ನಿರ್ಮಿಸಿದ ಪಿರಾಮಿಡ್‌ ಆಕೃತಿಯ ಸ್ಮಾರಕವೊಂದಿದೆ. ಸೇಂಟ್‌ ಸೇವಿಯರ್‌ ದೇಗುಲ ಕ್ರಿ.ಶ.1092ರಲ್ಲಿ ನಿರ್ಮಾಣವಾದುದು. ಧಾರ್ಮಿಕ ಯುದ್ಧಗಳ ಕಾಲದಲ್ಲಿ ಅನೇಕ ಬಾರಿ ದಾಳಿಗೀಡಾದ ಈ ದೇಗುಲ ಫ್ರೆಂಚರ ಇತಿಹಾಸ ಪ್ರಜ್ಞೆಯಿಂದಾಗಿ ಈಗಲೂ ಉಳಿದುಕೊಂಡಿದೆ. ಗೋಥಿಕ್‌ ಶೈಲಿಯ ಈ ದೇಗುಲವನ್ನು ಅದರ ಮೂಲರೂಪದಲ್ಲೇ ಸಂರಕಿಸಲು ಫಿಜೆಯಾಕ್‌ ನಗರಸಭೆ ಸಾಧ್ಯವಿರುವ ಎಲ್ಲಾ ಯತ್ನಗಳನ್ನು ಮಾಡುತ್ತಿದೆ.

ಫಿಜೆಯಾಕಿನ ಅತ್ಯಂತ ಹಳೆಯ ಕಟ್ಟಡಗಳನ್ನು ಕಾಣಬೇಕಾದರೆ ಎಮಿಲಾಜೋಲಾ ರಸ್ತೆಗೆ ಹೋಗಬೇಕು. ಚಿತ್ರಮಯ ಬಾಲ್ಕನಿಗಳು, ಚಿತ್ತಾರದ ಕಿಟಕಿ ಮತ್ತು ಬಾಗಿಲುಗಳು, ಹತ್ತರಿಂದ ಹದಿನಾರನೆಯ ಶತಮಾನದವರೆಗಿನ ವಿಭಿನ್ನ ವಾಸ್ತುಶಿಲ್ಪದ ಮಾದರಿಗಳು ಇಲ್ಲಿ ಕಾಣಸಿಗುತ್ತವೆ. ಎಮಿಲಾಜೋಲಾ ರಸ್ತೆಯ ತುತ್ತತುದಿಯಲ್ಲಿ ನಾಲ್ಕನೆಯ ಹೆನ್ರಿಯ ಮಂತ್ರಿಯಾಗಿದ್ದ ಸುಲ್ಲಿಯ ಮನೆಯಿದೆ. ಮಂತ್ರಿಯಾಗಿ ಸಕಲಭೋಗಭಾಗ್ಯಗಳನ್ನು ಪ್ಯಾರಿಸ್ಸಿನಲ್ಲಿ ಅನುಭವಿಸುತ್ತಿದ್ದ ಸುಲ್ಲಿಗೆ ತನ್ನ ಪ್ರಾಣಸ್ನೇಹಿತ ವೆರ್‌ಗೆಲಾಂಟನ ಅಕಾಲಿಕ ಮರಣದಿಂದ ಜೀವನದ ನಶ್ವರತೆಯ ಅರಿವಾಯಿತು. ಭೋಗ ಜೀವನದಲ್ಲಿ ವಿರಕ್ತಿ ಹುಟ್ಟಿ ಆತ ಮಂತ್ರಿಪದವಿಗೆ ರಾಜೀನಾಮೆಯಿತ್ತು ಫಿಜೆಯಾಕಿಗೆ ಬಂದು ವಿರಾಗಿಗಳಂತೆ ಬದುಕಿದ. ಮರಳಿ ಮಣ್ಣಿಗೆ!

ಫಿಜೆಯಾಕಿನಲ್ಲಿ ನಮಗೆ ಲೇಬರ್‌ ಕೋರ್ಟು ಒಂದನ್ನು ನೋಡುವ ಅವಕಾಶ ಸಿಕ್ಕಿತು. ಆದರೆ ಅದು ರಜಾಕಾಲ- ವಾದುದರಿಂದ ಕೋರ್ಟು ನಡಾವಳಿಗಳನ್ನು ಕಾಣುವ ಭಾಗ್ಯ ಮಾತ್ರ ನಮಗಿರಲಿಲ್ಲ. ಕೋರ್ಟಿನ ಒಂದು ಭಾಗ ನ್ಯಾಯಾಧೀಶನ ರೆಸಿಡೆನ್ಸು. ಆತನ ಹೆಸರು ಜೋನ್‌ ಪೀಟರ್‌ ಸುಲ್ತಾನಾ. ಹೆಸರಿಗೆ ತಕ್ಕಂತೆ ಆತನದ್ದು ಸುಲ್ತಾನನ ಭವ್ಯಾಕೃತಿ. ಆತನಿಗೆ ಇಂಗ್ಲೀಷ್‌ ಬಾರದ ಕಾರಣ ನಿಕೋಲಳು ದುಭಾಷಿಯ ಪಾತ್ರ ವಹಿಸಬೇಕಾಯಿತು. ಅವನ್ನು ಕಂಡಾಗ ವೃತ್ತಿ ಬಾಂಧವ್ಯ ಹೆಬ್ಬಾರರಲ್ಲಿ ಹೆಡೆಯೆತ್ತಿತು. ಸುಲ್ತಾನನಿಗೆ ಅತ್ಯಂತ ಹೆಚ್ಚು ಪ್ರಶ್ನೆ ಹಾಕಿದ್ದು ಕೂಡಾ ಅವರೇ. ಕೋರ್ಟು ವ್ಯವಹಾರ ನಡೆಯುವ ಜಾಗಕ್ಕೆ ಸುಲ್ತಾನ ನಮ್ಮನ್ನು ಕರೆದುಕೊಂಡು ಹೋದ. ಅಲ್ಲಿ ಎತ್ತರದ ಸ್ಥಳದಲ್ಲಿ ನ್ಯಾಯಾಧೀಶರ ಪೀಠವಿದೆ. ಅದರ ಹಿಂದೆ ಲೇಬರ್‌ ಕೋರ್ಟು ಕಮಿಟಿಯವರು ಕೂರಲು ನಾಲ್ಕು ಆಸನಗಳಿವೆ. ವಾದಿ  ಪ್ರತಿವಾದಿಗಳಿಗೆ ಕಟಕಟೆಗಳಿಲ್ಲ. ಯಾವುದೇ ಪ್ರಕರಣವನ್ನು ಮೂರು ಬಾರಿಗಿಂತ ಹೆಚ್ಚು ಮುಂದೂಡಲಾಗುವುದಿಲ್ಲ. ಕಳೆದ ವರ್ಷ ಒಟ್ಟು 405 ಪ್ರಕರಣಗಳು ಅಲ್ಲಿ ಇತ್ಯರ್ಥವಾದುವೆಂದು ಹೇಳಿ ಸುಲ್ತಾನ ನಮ್ಮನ್ನು ದಂಗುಬಡಿಸಿದ. ಹೆಬ್ಬಾರರು ಅವನೊಡನೆ ಒಂದು ಫೋಟೋ ತೆಗೆಸಿಕೊಳ್ಳಲು ಬಯಸಿದಾಗ ಆತ ‘ನಿಲ್ಲಿ’ ಎಂದು ತನ್ನ ರೆಸಿಡೆನ್ಸಿಗೆ ಧಾವಿಸಿ ನ್ಯಾಯಾಧೀಶನ ಗವನು ಹಾಕಿಕೊಂಡು ಬಂದು ಪೋಸು ಕೊಟ್ಟ!

ನಿಕೋಳಲ ಸಂಸಾರ : ಫಿಜೆಯಾಕಿನಲ್ಲಿ ತನ್ನ ಸುಸಂಸ್ಕೃತ ನಡವಳಿಕೆ, ಅಸ್ಖಲಿತ ವಾಗ್ಝರಿ ಮತ್ತು ಸಹಾಯ ಮಾಡುವ ಪ್ರವೃತ್ತಿಯಿಂದ ನಮಗೆಲ್ಲರಿಗೂ ಇಷ್ಟವಾದವಳು ನಿಕೋಲ್‌. ಅವಳದು ಆಕರ್ಷಕ ವ್ಯಕ್ತಿತ್ವ. ಜತೆಗೆ ವಯಸ್ಸನ್ನು ಮರೆಮಾಚುವ ಸ್ವಭಾವ. ಫಾರ್ಮಾಸಿಸ್ಟ್‌ ಆಗಿ ಕೆಲಸ ಮಾಡುವ ಆಕೆ ಹೃದಯವಂತೆ. ಫಿಜೆಯಾಕಿನ ಚಳಿಗೆ ನನ್ನ ಕೈಬೆರಳುಗಳು ಬಿರುಕುಬಿಟ್ಟು ಅಸಹನೀಯ ನೋವುಂಟುಮಾಡತೊಡಗಿದಾಗ ನಿಕೋಲ್‌ ಅದನ್ನು ಗಮನಿಸಿ ಸಮೀಪದ ಮೆಡಿಕಲ್‌ ಶಾಪಿನಿಂದ ಮುಲಾಮೊಂದನ್ನು ತಂದು ಬೆರಳಿಗೆ ಸವರಲು ಹೇಳಿದಳು. ಈ ‘ಕ್ಯಾಂಪ್ರೈಸ್‌ ‘ ಮುಲಾಮು ಅದ್ಭುತ ಪರಿಣಾಮ ನೀಡಿತು. ಮರುದಿನವೇ ಕೈಬೆರಳುಗಳ ಬಿರುಕು ಮುಚ್ಚಿಹೋಯಿತು. ಅದರ ಬೆಲೆ ಮೂವತ್ತು ಫ್ರಾಂಕುಗಳು. (ಇನ್ನೂರು ಹತ್ತು ರೂಪಾಯಿ). ಅದರ ಬೆಲೆಯನ್ನು ನಿಕೋಲಳಿಗೆ ನೀಡಹೋದಾಗ ‘ಛೆ!ಛೆ! ಇದೇನಿದು? ನಾನು ನಿನಗೆ ಕೊಟ್ಟದ್ದು ದೊಡ್ಡ ಉಡುಗೊರೆಯೇನಲ್ಲ ‘ ಎಂದು ನಿರಾಕರಿಸಿಬಿಟ್ಟಳು. ನನ್ನ ಮುಖ ನೋಡಿದವಳೇ ‘ಚಿಂತಿಸಬೇಡ. ಭಾರತಕ್ಕೆ ಬಂದಾಗ ನಿನ್ನಿಂದ ದೊಡ್ಡ ಉಡುಗೊರೆ ಪಡೆಯುತ್ತೇನೆ’ ಎಂದು ನಮ್ಮನ್ನೆಲ್ಲಾ ನಗಿಸಿದಳು. ಕೊನೆಗೆ ಆಕೆಗೆ ಭಾರತದ ಕೆಲವು ನಾಣ್ಯಗಳನ್ನು ನೀಡಿ ಅಷ್ಟರಮಟ್ಟಿಗೆ ನಾನು ಸಮಾಧಾನಪಟ್ಟುಕೊಂಡೆ.

ಆಕೆ ನಮ್ಮೆಲ್ಲರ ಕುಟುಂಬದ ಬಗ್ಗೆ ಕೇಳಿದಾಗ ಎಲೈನ್‌ ಅವಳ ಕುಟುಂಬದ ವಿವರ ಕೇಳಿದಳು. ಆಗ ನಿಕೋಲ್‌ ‘ನನಗೆ ಮೂವರು ಮಕ್ಕಳು, ನನ್ನ ಗಂಡನಿಗೆ ಇಬ್ಬರು’ ಎಂದು ನಮ್ಮನ್ನು ಅಯೋಮಯರನ್ನಾಗಿಸಿದಳು.’ಹಾಗೆಂದರೇನು’ ಎಂದು ನಾನು ಪ್ರಶ್ನಿಸಿದೆ. ‘ನನ್ನ ಮಕ್ಕಳು ಈಗಿನ ಗಂಡನದಲ್ಲ. ನಾನು ಹಿಂದಿನ ಗಂಡನಿಂದ ಡೈವೋರ್ಸ್ ಪಡೆಯುವಾಗ ಮಕ್ಕಳನ್ನು ನನ್ನ ಜತೆಯಲ್ಲೇ ಉಳಿಸಿಕೊಂಡೆ. ನನ್ನ ಈಗಿನ ಗಂಡನ ಇಬ್ಬರು ಮಕ್ಕಳ ತಾಯಿ ನಾನಲ್ಲ. ಅವನು ಆ ಮಕ್ಕಳ ತಾಯಿಯಿಂದ ಡೈವೋರ್ಸ್ ಪಡೆಯುವಾಗ ಮಕ್ಕಳನ್ನು ತನ್ನ ಜತೆಯಲ್ಲೇ ಇರಿಸಿಕೊಂಡ ‘ಎಂದು ನಕ್ಕಳು. ‘ಹಾಗಾದರೆ ನೀನೀಗ ಐದು ಮಕ್ಕಳನ್ನು ಸಾಕಬೇಕು ಅಲ್ವಾ?’ ಎಂದು ಅನಿತಾ ಕೇಳಿದ್ದಕ್ಕೆ ‘ಎಲ್ಲಿ ಬಂತು? ಮಕ್ಕಳೆಲ್ಲಾ ಇಂಡಿಪೆಂಡೆಂಟ್‌ ಆಗಿ ಬದುಕುತ್ತಿದ್ದಾರೆ’ ಎಂದಳು. ಆಗಲೂ ಅವಳ ಮುಖದಲ್ಲಿ ಬೇಸರವೇನಿರಲಿಲ್ಲ!

ಮಾರ್ಸೆಲನ ‘ದ್ರಾವಿಡ’ ಪ್ರಾಣಾಯಾಮ : ಫಿಜೆಯಾಕಿನಲ್ಲಿ ನನ್ನ ಅತಿಥೇಯನಾಗಿದ್ದವ ಮಾರ್ಸೆಲ್‌. ಸ್ವಂತ ಲೇತ್‌ವರ್ಕ್ಸ್ ಕೆಲಸ ಮಾಡುತ್ತಿದ್ದ ಮಾರ್ಸೆಲ್‌ನಿಗೆ ನಲ್ವತ್ತೈದು ದಾಟಿರಬಹುದು. ನುಣ್ಣಗೆ ಗಡ್ಡ ಮೀಸೆ ಬೋಳಿಸಿದ್ದ ಮಾರ್ಸೆಲ್‌ ಕುಳ್ಳ. ಅಲಿಪ್‌ಯ ಮೀಸೆ ಫರೆಂಕನ ಹಾಗೆ ಮಾರ್ಸೆಲನ ಹೊಟ್ಟೆಯೂ ಸಾಕಷ್ಟು ಮುಂದೆ ಬಂದು ಅವನಿಗೆ ಸಮಸ್ಯೆಯುಂಟುಮಾಡುತ್ತಿತ್ತು. ಮಾರ್ಸೆಲನ ಹೆಂಡತಿಯ ಹೆಸರು ಮನು! ಹೈಸ್ಕೂಲಲ್ಲಿ ಅರ್ಥಶಾಸ್ತ್ರ ಬೋಧಿಸುತ್ತಿದ್ದ ಆಕೆ ತೀರಾ ಸಂಕೋಚಪ್ರವೃತ್ತಿಯವಳು. ಮಾರ್ಸೆಲ್‌ ‘ಮನುಷ್ಯ ಸದಾ ನಗುತ್ತಲೇ ಇರಬೇಕು’ ಅನ್ನುವವ. ಗಂಡ ಹೆಂಡಿರಿಬ್ಬರಿಗೂ ಇಂಗ್ಲೀಷ್‌ ಬರುತ್ತಿರಲಿಲ್ಲ. ಮಾರ್ಸೆಲ್‌ ಅದಕ್ಕಾಗಿ ತನ್ನ ಅಕ್ಕನ ಮಗಳಾದ ಬ್ಯಾಟ್ರಿಕ್‌ ಆ್ಯಂಡಿಯಾಳನ್ನು ಮನೆಗೆ ಕರೆಸಿದ್ದ. ಇಪ್ಪತ್ತನಾಲ್ಕರ ಹರೆಯದ ಅ್ಯಂಡಿಯಾ ನನಗಿಂತ ಸುಮಾರು ನಾಲ್ಕು ಇಂಚು ಎತ್ತರದವಳು. ದೇಹದಲ್ಲಿ ಬಲವೇ ಇಲ್ಲವೇನೋ ಎಂಬಂತೆ ನಡೆದಾಡುವ ಆ್ಯಂಡಿಯಾ ಲಂಡನಿನ್ನಲ್ಲಿ ಫ್ರೆಂಚ್‌ ಅಧ್ಯಾಪಿಕೆಯಾಗಿದ್ದಾಳೆ. ಅವಳಿಂದಾಗಿ ಮಾರ್ಸೆಲನ ಜೋಕುಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿತ್ತು.

ಮಾರ್ಸೆಲ್‌ ನನಗಾಗಿ ಮಹಡಿಯಲ್ಲಿ ಸುಸಜ್ಜಿತವಾದ ಬೆಡ್‌ರೂಂ ಬಿಟ್ಟುಕೊಟ್ಟಿದ್ದ. ಅವನ ದೊಡ್ಡದಾದ ಮನೆಯಲ್ಲಿ ಅಂತಹ ಐದು ಬೆಡ್‌ರೂಮುಗಳಿವೆ. ನನ್ನ ನಿದ್ದೆಗಾಗಿ ಹಂಸತೂಲಿಕಾ ತಲ್ಪವನ್ನೇ ಒದಗಿಸಿದ್ದ. ಅಲ್ಲಿ ನಾನು ಕಳೆದ ಮೊದಲ ರಾತ್ರೆ ನನಗೆ ಇನ್ನೇನು ನಿದ್ದೆಯ ಜೊಂಪು ಹತ್ತಬೇಕು ಅನ್ನುವಷ್ಟರಲ್ಲಿ ಯಾರೋ ನನ್ನನ್ನು ಸ್ಪರ್ಶಿಸುತ್ತಿದ್ದಾರೆಂದೆನಿಸಿತು. ಹೆದರಿಕೆಯಿಂದ ಕಣ್ಣುಬಿಟ್ಟು ನೋಡಿದರೆ ಮಾರ್ಸೆಲನ ದೊಡ್ಡದಾದ ಕಪ್ಪು  ಬಿಳಿ ಬೆಕ್ಕೊಂದು ಆರಾಮವಾಗಿ ನನ್ನ ಮೈಮೇಲೇರಿ ತೊಡೆಯ ಮೇಲೆ ಪವಡಿಸಿ, ತನನ್ನು ತಾನು ಶುದ್ಧಮಾಡಿಕೊಳ್ಳುವ ಕಾಯಕಕ್ಕೆ ತೊಡಗಿತ್ತು! ಅದನ್ನು ಕೈಯಿಂದ ತಳ್ಳಲು ಹೋದಾಗ ಅದು ಕ್ರೂರವಾಗಿ ನನ್ನನ್ನು ದಿಟ್ಟಿಸಿ ‘ಏನಾದರೂ ಮಾಡಿದರೆ ಜಾಗ್ರತೆ’ ಎಂದು ತನ್ನ ಹರಿತವಾದ ಪಂಜಾವನ್ನು ಅರಳಿಸಿ, ದಂತಪಂಕ್ತಿಗಳನ್ನು ತೆರೆದು ತೋರಿಸಿತು. ಅದರ ತಂಟೆಗೆ ಹೋಗದಿರುವುದೇ ಕ್ಷೇಮವೆಂದು ನಾನು ಮುಸುಕೆಳೆದುಕೊಂಡು ಮಲಗಿದೆ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಅದಾಗಿಯೇ ನನ್ನ ಮೇಲಿನಿಂದ ಇಳಿದು ಹೋದಮೇಲಷ್ಟೇ ನಾನು ಎದ್ದದ್ದು!

ನಾನು ಬೇಗ ಎದ್ದದ್ದು ಗೊತ್ತಾಗಿ ಮಾರ್ಸೆಲ್‌ ಎದ್ದ. ಆ್ಯಂಡಿಯಾಳನ್ನು ಎಬ್ಬಿಸಿ ತೊಂದರೆಯೇನೆಂದು ಕೇಳಿಸಿದ. ‘ಯಾಕೋ ನಿದ್ದೆ ಬರುತ್ತಿಲ್ಲ. ಈಗ ಭಾರತದಲ್ಲಿ ಬೆಳಗಿನ ಹೊತ್ತು ಏಳೂವರೆ ಗಂಟೆ. ಅದಕ್ಕೇ ಇರಬೇಕು’ ಎಂದೆ. ಮಾರ್ಸೆಲ್‌ಗೆ ನನ್ನ ಮಾತು ಕುತೂಹಲಕರವಾಗಿ ಕಂಡು ಭಾರತಕ್ಕೂ ಫ್ರಾನ್ಸಿಗೂ ಇರುವ ಸಮಯದ ಅಂತರವನ್ನು ಕೇಳಿ ನನ್ನ ವಾಚು ನೋಡಿದ. ‘ಚಳಿಗಾಲದಲ್ಲಿ ನಮ್ಮಮಿಬ್ಬರ ದೇಶದ ನಡುವೆ ನಾಲ್ಕೂವರೆ ಗಂಟೆಗಳ ಅಂತರವಿದೆ. ಎಪ್ರಿಲ್‌ ಒಂದರಿಂದ ಯುರೋಪಿನಾದ್ಯಂತ ಗಡಿಯಾರಗಳನ್ನು ಒಂದು ಗಂಟೆ ಮುಂದಕ್ಕಿಡುತ್ತಾರಲ್ಲಾ ? ಹಾಗಾಗಿ ಈಗ ಮೂರೂವರೆ ಗಂಟೆಗಳ ಅಂತರ. ನಮ್ಮ ದೇಶದ ಸಮಯವನ್ನು ಈ ಕೈಗಡಿಯಾರದಲ್ಲಿ ಹಾಗೆಯೇ ಉಳಿಸಿಕೊಂಡಿದ್ದೇನೆ’ ಎಂದೆ.

‘ನಾನು ಇಷ್ಟು ಬೇಗ ಏಳುವುದಿಲ್ಲ. ನನಗೆ ಉಸಿರಾಟದ ತೊಂದರೆಯಿದೆ. ಥಂಡಿ ಎಂದರೆ ಆಗುವುದಿಲ್ಲ. ಸ್ವಲ್ಪ ಥಂಡಿಯಾದರೂ ಶೀತವಾಗಿ ಸಂಕಟಕ್ಕಿಟ್ಟುಕೊಳ್ಳುತ್ತದೆ ‘ ಎಂದ ಮಾರ್ಸೆಲ್‌. ‘ಉಸಿರಾಟದ ತೊಂದರೆಗೆ ಪ್ರಾಣಾಯಾಮ ಮಾಡಿನೋಡಬಹುದು’ ಎಂದು ಮಾರ್ಸೆಲನಿಗೆ ಸೂಚಿಸಿದೆ. ಅವನ ಕುತೂಹಲ ಕೆರಳಿ, ಕೊನೆಗೆ ಪ್ರಾಣಾಯಾಮ ಪಾಠಕ್ಕೆ ನಾವೆಲ್ಲಾ ಹಜಾರಕ್ಕೆ ಹೋಗುವುದೆಂದು ತೀರ್ಮಾನವಾಯಿತು. ಅಷ್ಟು ಹೊತ್ತಿಗೆ ಮನುವೂ ಕೂಡಾ ಎದ್ದು ನಮ್ಮನ್ನು ಸೇರಿಕೊಂಡಳು.

ಪ್ರಾಣಾಯಾಮವು ಶ್ವಾಸಕೋಶ ಸಂಬಂಧೀ ಕಾಯಿಲೆಗಳನ್ನು ಇಲ್ಲವಾಗಿಸುತ್ತದೆ ಎಂದು ಹೇಳುವುದರೊಂದಿಗೆ ಮಾರ್ಸೆಲನಿಗೆ ನನ್ನ ಪ್ರಾಣಾಯಾಮ ಪಾಠ ಆರಂಭಗೊಂಡಿತು. ನನ್ನ ಪ್ರಾಣಾಯಾಮ ಪ್ರದರ್ಶನಕ್ಕಾಗಿ ಹಜಾರದಲ್ಲಿದ್ದ ಪೀಠೋಪಕರಣಗಳನ್ನು ಹಿಂದಕ್ಕಿಟ್ಟು ರಂಗ ಸಿದ್ಧಗೊಳಿಸಲಾಯಿತು. ಮನು ಮತ್ತು ಆ್ಯಂಡಿಯಾ ಎರಡು ಕುರ್ಚಿಗಳಲ್ಲಿ ಕೂತರೆ ನಾನು ಮತ್ತು ಮಾರ್ಸೆಲ್‌ ನೆಲಕ್ಕೆ ಜಮಖಾನ ಹಾಸಿ ಎದುರು ಬದುರಾಗಿ ಕೂತೆವು. ಪ್ರಾಣಾಯಾಮವೆಂದರೆ ಉಚ್ಛಾಸ ಮತ್ತು ನಿಶ್ವಾಸಗಳ ಸಮತೋಲನ ಸಾಧನೆ ಎಂದೂ, ಅದಕ್ಕೆ ಪೂರ್ವದಲ್ಲಿ ಮೂಗಿನ ಹೊಳ್ಳೆಗಳನ್ನು ಸಂಪೂರ್ಣವಾಗಿ ಶುದ್ಧಮಾಡಬೇಕೆಂದೂ ಹೇಳಿ ಶುದ್ಧೀಕರಣ ವಿಧಾನವನ್ನು ಅವನಿಗೆ ತೋರಿಸಿಕೊಟ್ಟೆ. ಅಷ್ಟು ಹೊತ್ತಿಗೆ ಮನು ಕುರ್ಚಿ ಬಿಟ್ಟು ತನ್ನ ಗಂಡನ ಬಳಿಗೆ ಬಂದು ಕೂತಳು. ಮಾರ್ಸೆಲ್‌ ಮೂಗಿನ ಹೊಳ್ಳೆಗಳ ಸಿಂಬಳ ತೆಗೆದು ಶುದ್ದೀಕರಣಗೊಳಿಸುವ ಪ್ರಯತ್ನದಲ್ಲಿ ತನ್ನ ಮುಖವನ್ನು ಮನುವಿನತ್ತ ತಿರುಗಿಸಿದ. ಒಮ್ಮೆಲೇ ದಪ್ಪನೆಯ ಗೊಣ್ಣೆ ಅವನ ಮೂಗಿನೊಳಗಿಂದ ರಭಸವಾಗಿ ಹಾರಿ ಮನುವಿನ ಕೆನ್ನೆಯ ಮೇಲೆ ಬಿತ್ತು. ಆಕೆ ನಾಚಿ ನೀರಾಗಿ ಒಳಗೆ ಓಡಿದಳು. ನನಗೆ ಮತ್ತು ಆ್ಯಂಡಿಯಾಳಿಗೆ ನಗು ತಡೆಯಲಾಗಲಿಲ್ಲ. ಮಾರ್ಸೆಲ್‌ ನಗುತ್ತಲೇ ಒಳಹೋಗಿ ಬಟ್ಟೆಯೊಂದನ್ನು ತಂದು ಮೂಗೊರೆಸಿಕೊಂಡು ಪ್ರಾಣಾಯಾಮ ಪ್ರಾರಂಭಿಸಿದ.

‘ಇದೇನೋ ಶೀತಕ್ಕಾಯಿತು. ಈ ಹೊಟ್ಟೆ ಇನ್ನೂ ಮುಂದೆ ಇತ್ತ ಬರದಂತೆ ಏನು ಮಾಡಬಹುದು?’ ಎಂದು ಮಾರ್ಸೆಲ್‌ ಕೇಳಿದ. ಅವನಿಗೆ ಯೋಗಾಸನದ ಬಗ್ಗೆ ಹೇಳಿದೆ. ಈಗವನು ಮನುವನ್ನು ಕರೆದ. ನನ್ನ ವಿವರಣೆಯನ್ನು ಆ್ಯಂಡಿಯಾ ಫ್ರೆಂಚಿಗೆ ತರ್ಜುಮೆ ಮಾಡುತ್ತಿದ್ದಳು. ಅದನ್ನು ಮನು ನೀಟಾಗಿ ಬರೆದುಕೊಳ್ಳತೊಡಗಿದಳು. ಸರಸ ಪ್ರವೃತ್ತಿಯ ಮಾರ್ಸೆಲನಲ್ಲಿ ಕಲಿಯಬೇಕೆಂಬ ಛಲವಿತ್ತು. ಕೊನೆಗೆ ಮಯೂರಾಸನ ಮಾಡಹೋಗಿ ಆಯತಪ್ಪಿ ಬಿದ್ದ. ಆಗ ಅವನ ಹಣೆ ಮನುವಿನ ಪಾದಗಳ ಮೇಲಿತ್ತು! ನಾನದಕ್ಕೆ ‘ನಮ್ಮ ದೇಶದಲ್ಲಿ ಗಂಡ, ಹೆಂಡತಿಯ ಕಾಲಿಗೆ ಬೀಳುವ ಕ್ರಮ ಇಲ್ಲ ಮಾರಾಯ’ ಎಂದು ಜೋಕ್‌ ಹಾರಿಸಿದೆ. ಮಾರ್ಸೆಲ್‌ ಬಿಡುತ್ತಾನೆಯೆ? ‘ನಮ್ಮದು ಸಮಾನತೆಯ ದೇಶ’ ಎಂದು ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ನಕ್ಕ.

ಅಂದು ಸಂಜೆ ಮಾರ್ಸೆಲ್‌ ಮನೆಗೆ ಅವನ ಅಕ್ಕನ ಮಗಳು ಕ್ಲೇರಾ ಬಂದಿದ್ದಳು. ಅವಳು ಇನ್ನು ಮೂರು ದಿನಗಳಲ್ಲಿ ಮದುವೆಯಾಗುವವಳಿದ್ದಳು. ಮದುವೆಯ ಪ್ರಸ್ತಾಪ ಎತ್ತಿದಾಗಲೆಲ್ಲ ಇಪ್ಪತ್ತೊಂದರ ಯುವತಿ ಕ್ಲೇರಾ ಕೆಂಪೇರುತ್ತಿದ್ದಳು. ‘ಹೇಗೆ ಮದುವೆಯಾಗ್ತೀಯಾ?’ ಎಂದು ಕೇಳಿದ್ದಕ್ಕೆ ‘ನನ್ನದು ರಿಜಿಸ್ಟರ್ಡ್‌ ಮದುವೆ’ ಎಂದು ನಾಚುತ್ತಲೇ ಉತ್ತರಿಸಿದಳು. ಅವಳನ್ನು ವಿವಾಹವಾಗಲಿರುವವ ಒಬ್ಬ ಕಂಪ್ಯೂಟರ್‌ ವ್ಯಾಪಾರಿ. ಅವರಿಬ್ಬರದು ಎರಡು ವರ್ಷಗಳ ಪ್ರೇಮ. ಆದರೂ ಕ್ಲೇರಾ ನೂರಕ್ಕೆ ನೂರರಷ್ಟು ವರ್ಜಿನ್‌ ಎಂದು ಮಾರ್ಸೆಲ್‌ ತನ್ನ ಅಕ್ಕನ ಮಗಳ ಶೀಲದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ. ಸತ್ಯವೋ, ಸುಳ್ಳೋ? ಅದನ್ನು ಕಟ್ಟಿಕೊಂಡು ನನಗೇನಾಗಬೇಕು ? ಆದರೆ ಅವಳನ್ನು ನೋಡುವಾಗ ಸ್ತ್ರೀ ಸಹಜವಾದ ನಾಚಿಕೆ, ಸಂಕೋಚ ಅವಳಲ್ಲಿರುವುದು ವ್ಯಕ್ತವಾಗುತ್ತಿತ್ತು. ಫ್ರಾನ್ಸಿನಲ್ಲಿ ಅಂತಹ ಹೆಣ್ಣುಗಳು ಖಂಡಿತಾ ಅಪರೂಪವೇ!

ಅಂದು ರಾತ್ರಿಯೂಟಕ್ಕೆ ಮಾರ್ಸೆಲ್‌ ಅನಿತಾ ಮತ್ತು ಎಲೈನ್‌ರನ್ನು ತನ್ನ ಮನೆಗೇ ಕರೆದುಕೊಂಡು ಬಂದಿದ್ದ. ಊಟದ ಬಳಿಕ ಕ್ಲೇರಾ ತಾಯಿಯೊಡನೆ ಹೊರಟು ನಿಂತಳು. ವಿದಾಯಕ್ಕೆ ಮುನ್ನ ಎಲ್ಲರಿಗೂ ಮುತ್ತು ಕೊಡುತ್ತಾ ಬಂದಳು. ಅಲ್ಲಿದ್ದವರಲ್ಲಿ ಗಂಡಸರೆಂದರೆ ನಾನು ಮತ್ತು ಮಾರ್ಸೆಲ್‌ ಮಾತ್ರ. ಮಾವ ಮಾರ್ಸೆಲನಿಗೆ ಮುತ್ತು ಕೊಡುವಾಗ ಅವಳಲ್ಲಿ ಸಂಕೋಚವೇನೂ ಇರಲಿಲ್ಲ. ಆದರೆ ನನ್ನೆದುರು ಬಂದು ನಿಂತಾಗ ಅವಳನ್ನು ಲಜ್ಜೆ ಕಾಡಿತು. ‘ಸಂಕೋಚಪಡಬೇಡ, ನಿನ್ನ ಮುತ್ತು ಅಮೂಲ್ಯವಾದುದು. ಅದು ಭಾರತಕ್ಕೆ ಹೋಗುತ್ತದೆ’ ಎಂದು ಮಾರ್ಸೆಲ್‌ ಎಲ್ಲರನ್ನೂ ನಗಿಸಿದ. ಅವಳು ಕೊನೆಗೆ ಬಾಗಿ ಸೋಫಾದಲ್ಲಿ ಕೂತಿದ್ದ ನನ್ನ ಎರಡೂ ಕೆನ್ನೆಗಳಿಗೆ ಮುತ್ತು ಕೊಟ್ಟೇಬಿಟ್ಟಳು. ಅಲ್ಲಿ ಸೇರಿದ್ದ ಐದಾರು ಮಂದಿ ಮಹಿಳೆಯರ ನಗು ತಾರಕಕ್ಕೇರಿದಾಗ ಕ್ಲೇರಾಳಿಗಿಂತಲೂ ಹೆಚ್ಚು ನಾಚಿಕೆಯಾದದ್ದು ಬಹುಶಃ ನನಗೇ ಇರಬೇಕು!

ಫುವಾ ಎಂಬ ಸಂತನ ಕೊಂಕ್‌

ಕ್ರೈಸ್ತರ ಇನ್ನೊಂದು ಪವಿತ್ರ ಕೇತ್ರವಾದ ಕೊಂಕಿಗೆ ನಾವು ಹೋದದ್ದು ಎಪ್ರಿಲ್‌ ಹತ್ತರ ಮಧ್ಯಾಹ್ನದ ಬಳಿಕ. ಕೊಂಕ್‌ (CONQUES) ಫಿಜೆಯಾಕಿನಿಂದ 35 ಕಿ.ಮೀ. ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿರುವ ಒಂದು ಕಣಿವೆ ನಗರ. ಎಂಟನೇ ಶತಮಾನದಲ್ಲಿ ಫುವಾ ಎಂಬ ಸಂತನಿಂದ ಅಲ್ಲೊಂದು ದೇಗುಲ ನಿರ್ಮಾಣವಾಯಿತು. ಆರಂಭದಲ್ಲಿ ಕೊಂಕ್‌ ಯಾರ ಗಮನವನ್ನೂ ಸೆಳೆಯಲಿಲ್ಲ. ಒಂಬತ್ತನೆಯ ಶತಮಾನದಲ್ಲಿ ಅಲ್ಲಿದ್ದ ಅನಾಮಧೇಯ ಸಂತನೊಬ್ಬ ಇನ್ನೂರು ಕಿ.ಮೀ. ದೂರದ ಊರೊಂದರ ದೇಗುಲ ಒಂದರಿಂದ ಪವಿತ್ರ ಹಾಡುಗಳ (Lyrics) ಸಂಗ್ರಹವೊಂದನ್ನು ಕದ್ದು ತಂದ. ಆ ಬಳಿಕ ಕೊಂಕ್‌ನಲ್ಲಿ ಪವಾಡಗಳು ಸಂಭವಿಸತೊಡಗಿದವು! ರೋಗಿಗಳ ಕಾಯಿಲೆ ವಾಸಿಯಾದದ್ದು, ಕಣ್ಣು ಕಳಕೊಂಡವರಿಗೆ ದೃಷ್ಟಿ ಬಂದದ್ದು, ಮಕ್ಕಳಿಲ್ಲದವರಿಗೆ ಮಕ್ಕಳಾದದ್ದು  ಹೀಗೆ ಪವಾಡಗಳು ಕಿವಿಯಿಂದ ಕಿವಿಗೆ ಹರಡತೊಡಗಿದವು. ಜನ ಮರುಳೋ, ಜಾತ್ರೆ ಮರುಳೋ? ಜನರಂತೂ ತಂಡೋಪತಂಡವಾಗಿ ಕೊಂಕಿಗೆ ಬರತೊಡಗಿದರು. ಹನ್ನೊಂದನೆಯ ಶತಮಾನಕ್ಕಾಗುವಾಗ ಇದು ಯಾತ್ರಾಸ್ಥಳವಾಗಿ ಪ್ರಸಿದ್ಧಿಯನ್ನು ಪಡೆಯಿತು.

ಕೊಂಕಿನಲ್ಲಿ ಈಗಿರುವುದು ಹನ್ನೊಂದನೆಯ ಶತಮಾನದಲ್ಲಿ ನಿರ್ಮಾಣವಾದ ದೇಗುಲ. ಅಲ್ಲಿಂದ ಹದಿನಾಲ್ಕನೆಯ ಶತಮಾನದವರೆಗೆ ಕೊಂಕ್‌ ತನ್ನ ಖ್ಯಾತಿಯನ್ನು ಹೆಚ್ಚಿಸುತ್ತಲೇ ಹೋಯಿತು. ಆದರೆ ಧಾರ್ಮಿಕ ಯುದ್ಧಗಳ ಕಾಲದಲ್ಲಿ ಬದುಕೇ ದುಸ್ತರವಾದಾಗ, ದೇವರಿಗೂ ತನ್ನನ್ನು ರಕಿಸಲು ಅಸಾಧ್ಯವಾದಾಗ ಜನರು ದೇಗುಲಗಳಿಂದ ದೂರ ಉಳಿದರು. ದುರ್ಗಮ ಕಣಿವೆ ಪ್ರದೇಶವಾದ ಕೊಂಕಂತೂ ಜನರ ನೆನಪಿನಿಂದ ಮರೆಯಾಗಿಯೇ ಹೋಯಿತು. ಫ್ರೆಂಚ್‌ ಮಹಾಕ್ರಾಂತಿಯ ಬಳಿಕ, ಜನರ ಹೊಟ್ಟೆ ಬಟ್ಟೆಗೆ ಸಮಸ್ಯೆ ಇಲ್ಲವೆಂದಾದಾಗ ಕೆಲವರಿಗೆ ದೇವರ ನೆನಪಾಯಿತು. ಹತ್ತೊಂಬತ್ತನೆಯ ಶತಮಾನದ ಫ್ರೆಂಚ್‌ ಬರಹಗಾರ ಪೋಸ್ತರ್‌ ಮೆರಿಮೆ ಎಂಬಾತ ಗುಡ್ಡ ಹತ್ತಿ, ಕಣಿವೆ ಇಳಿದು ಕೊಂಕ್‌ ಸುಸ್ಥತಿಯಲ್ಲಿರುವುದನ್ನು ಕಂಡುಕೊಂಡ. ತನ್ನ ಬರಹಗಳಿಂದ ಜನರನ್ನು ಕೊಂಕಿನತ್ತ ಸೆಳೆದ. ವಸ್ತುಶಃ ಅದರ ಪುನರುತ್ಥಾನಕ್ಕೆ ಕಾರಣನಾದ. 1994ರಲ್ಲಿ ದೇಗುಲ ನವೀಕರಣಗೊಂಡಿತು. ಅಲ್ಲದೆ ಕೊಂಕಿನ ಮೂಲ ಪುರುಷ ಫುವಾನ ಹೆಸರಲ್ಲಿ ಒಂದು ಮ್ಯೂಸಿಯಂ ನಿರ್ಮಾಣವಾಯಿತು.

ದೇಗುಲದ ಮುಖಮಂಟಪದ ಮೇಲೆ ತ್ರಿಕೋನಾಕೃತಿಯಲ್ಲಿ ಸಂತ ಮ್ಯಾಥ್ಯೂನ ಸುವಾರ್ತೆಯ ಆಧಾರದಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಅದರ ಕೇಂದ್ರಸ್ಥಾನದಲ್ಲಿ ಬಲಗೈಯನ್ನು ಮೇಲ್ಮುಖವಾಗಿ (ಶಿಷ್ಟ ರಕ್ಷಣ) ಮತ್ತು ಎಡಗೈಯನ್ನು ಕೆಳಮುಖವಾಗಿಸಿ (ದುಷ್ಟ ಶಿಕ್ಷಣ) ಕೂತ ಏಸುವಿನ ಬೃಹತ್‌ ಚಿತ್ರವಿದೆ.

ಆತನ ಸುತ್ತ ನೂರ ಇಪ್ಪತ್ತನಾಲ್ಕು ಚಿತ್ರಗಳನ್ನು ಬಿಡಿಸಲಾಗಿದ್ದು ಅದಕ್ಕೆ ನೀಲಿ ಬಣ್ಣ ನೀಡಲಾಗಿದೆ. ಎಡಬದಿಯಲ್ಲಿ ನರಕವನ್ನು ಕೆಂಪು ಮತ್ತು ಹಳದಿ ಬಣ್ಣಗಳಿಂದ ಸಾಂಕೇತಿಸಲಾಗಿದೆ. ಏಸುವಿನ ತಲೆಯ ಮೇಲೆ ಬೃಹತ್ತಾದ ಶಿಲುಬೆಯನ್ನು ಚಿತ್ರಿಸಲಾಗಿದೆ. ಸ್ವರ್ಗದ ಭಾಗದಲ್ಲಿ ಮೊದಲಿಗೆ ಏಸುವಿನ ತಾಯಿ ಮೇರಿ, ಅವಳ ಹಿಂದೆ ಏಸುವಿನ ಶಿಷ್ಯ ಪೀಟರ್‌, ಅವನ ಹಿಂದೆ ಕೊಂಕಿನ ಸಂಸ್ಥಾಪಕ ಫುವಾ, ಫುವಾನ ಹಿಂದೆ ಬೈಗಾನ್‌ ಮತ್ತು ಆತನ ಹಿಂದೆ ಸಾಲೋಮನ್‌ ರಾಜನ ಚಿತ್ರಗಳಿವೆ. ಸಾಲೋಮನ್‌ನ ಹಿಂದೆ ಹಣ ಮತ್ತು ಚಿನ್ನಾಭರಣಗಳ ಮೂಟೆ ಹೊತ್ತ ಸೇವಕರು. ಸಾಲೋಮನ್‌ ರಾಜ ಸ್ವರ್ಗಕ್ಕೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆ ಎಂದು ಕೊಂಕನ್ನು ನಮಗೆ ಪರಿಚಯಿಸಿದ ಗೈಡ್‌ ರೆಜಿನಾ ಹೇಳಿದಳು. ಸೇವಕರ ಪಕ್ಕದಲ್ಲಿ ನಾಲ್ಕು ಜನರ ಗುಂಪೊಂದಿದೆ. ಅವರಲ್ಲೊಬ್ಬಾತ ಕೂತಿದ್ದಾನೆ. ಆತನೇ ಎಂಟನೇ ಶತಮಾನದಲ್ಲಿ ಪವಿತ್ರ ಹಾಡುಗಳ ಸಂಗ್ರಹವನ್ನು ಕದ್ದು ತಂದ ಸಂತ. ತನ್ನ ಕೃತ್ಯಕ್ಕೆ ನರಕ ಪ್ರಾಪ್ತಿಯಾದೀತೆಂಬ ಭೀತಿ ಅವನ್ನು ಕಳ್ಳರ ಹಾಗೆ ಕೂರುವಂತೆ ಮಾಡಿದೆ!

ಕ್ರಿಸ್ತನ ಎಡಬದಿಯಲ್ಲಿ ನರಕದ ಚಿತ್ರಗಳಿವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಮತ್ತು ಔದಾಸೀನ್ಯಗಳಿಗೆ ನರಕದಲ್ಲಿ ಯಾವ ಶಿಕೆ ಅನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಶಿಕ್ಷೆಗಳನ್ನು ಗೈಡ್‌ ರೆಜೀನಾ ಸ್ವಾರಸ್ಯಕರವಾಗಿ ನಿರೂಪಿಸುವಾಗ, ನರಕ ಶಿಕ್ಷೆಯ ಬಗೆಗಿನ ಭಾರತೀಯ ನಂಬಿಕೆಗೂ, ಕ್ರೈಸ್ತ ನಂಬಿಕೆಗೂ ನನಗೆ ವ್ಯತ್ಯಾಸವೇನೂ ಕಾಣಲಿಲ್ಲ. ಆದರೆ ಭಾರತದಲ್ಲಿ ಅರಿಷಡ್ವರ್ಗಗಳೆಂದು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ಮಾತ್ರ ಗುರುತಿಸಲಾಗಿದೆ. ಕ್ರೈಸ್ತರ ಪ್ರಕಾರ ಉದಾಸೀನವೂ ಒಂದು ಪಾಪವೇ. ಭಾರತೀಯರ ಪ್ರಕಾರ ಉದಾಸೀನ ಒಂದು ಪಾಪವಲ್ಲ. ನಮಗೆಲ್ಲಾ ಇಷ್ಟೊಂದು ಉದಾಸೀನತೆ ಇರುವುದೇಕೆ ಎಂದು ರೆಜಿನಾಳ ವಿವರಣೆ ಕೇಳಿದ ಮೇಲೆ ನನಗೆ ಹೊಳೆಯಿತು!

ಕೊಂಕಿನ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ಅಲ್ಲಿನ ಚಿನ್ನಾಭರಣಗಳ ಖಜಾನೆ. ಅದು ಕೊಂಕ್‌ ಮ್ಯೂಸಿಯಂನ ಒಂದು ಭಾಗವಾಗಿದೆ. ಮ್ಯೂಸಿಯಮ್ಮಮಿನಲ್ಲಿ ಕೊಂಕಿನ ಇತಿಹಾಸವನ್ನು ಬಿಂಬಿಸುವ ಚಿತ್ರಗಳಿವೆ. ಚಿನ್ನಾಭರಣಗಳ ಖಜಾನೆಯನ್ನು ದೊಡ್ಡ ಕೋಣೆಯೊಂದರಲ್ಲಿ ಇರಿಸಲಾಗಿದೆ. ಕೋಣೆಯ ತುತ್ತ ತುದಿಯಲ್ಲಿ ಸಂತ ಫುವಾನ ಚಿನ್ನದ ಮೂರ್ತಿಯಿದೆ. ಕೋಣೆಯ ಬಲಬದಿಯಗಾಜಿನ ಶೋಕೇಸ್‌ಗಳಲ್ಲಿ ಮುತ್ತು ರತ್ನಗಳನ್ನು ಮತ್ತು ಚಿನ್ನಾಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇನ್ನೊಂದು ಬದಿಯ ಗೋಡೆಯನ್ನು ಏಳನೆಯ ಶತಮಾನದ ಕಸೂತಿ ಕೆಲಸಗಳ- ನ್ನೊಳಗೊಂಡ ದೊಡ್ಡದೊಂದು ಬಟ್ಟೆ ಅಲಂಕರಿಸಿದೆ. ಅದು ಏಳನೆಯ ಶತಮಾನದ್ದೆಂದರೆ ನಂಬಲಾಗದಷ್ಟು ಸುಸ್ಥತಿಯಲ್ಲಿದೆ. ಕೋಣೆಯ ಮಧ್ಯದಲ್ಲಿ ದೊಡ್ಡದಾದ ಬೆಳ್ಳಿಯ ಶಿಲುಬೆಯಿದೆ.

ಅಂತೂ ಭಾರತದ ದೇವರುಗಳಂತೆ ಫ್ರಾನ್ಸಿನ ದೇವರಿಗೂ ಚಿನ್ನಾಭರಣ ಮತ್ತು ಬೆಳ್ಳಿ ಎಂದರೆ ಅಪಾರ ಮಮತೆ!

ಬೋಂಜೂರ್‌ ಪ್ರಕರಣ : ಕೊಂಕ್‌ಗೆ ಫಿಜೆಯಾಕಿನಿಂದ ನಾವು ಹೋದದ್ದು ಒಂದು ದೊಡ್ಡ ವ್ಯಾನಿನಲ್ಲಿ. ಫಿಜೆಯಾಕಿನ ನಾಲ್ವರು ರೊಟೇರಿಯನ್ನರು ಮತ್ತು ನಿಕೋಲ್‌ ನಮ್ಮ ಜತೆಗಿದ್ದರು. ಅಂದು ಪ್ಯಾರಿಸ್ಸಿನಲ್ಲಿ ಹಣ ಕಳಕೊಂಡ ಹೆಬ್ಬಾರರಿಗೆ, ಎಲೈನಳಿಗೆ ಮತ್ತು ಗಿಫ್ಟ್‌ ಆರ್ಟಿಕಲ್‌ ಕಳೆದುಕೊಂಡಿದ್ದ ಅನಿತಾಳಿಗೆ ಸ್ವಲ್ಪ ಪರಿಹಾರವನ್ನು ರೋಟರಿ ಸಂಸ್ಥೆ ನೀಡಿತ್ತು. ರೋಟರಿಯ ಈ ನಡವಳಿಕೆಯಿಂದ ನಮಗೆಲ್ಲರಿಗೂ ಸಂತೋಷವಾಗಿತ್ತು. ಹಾಗಾಗಿ ಕೊಂಕ್‌ಗೆ ಹೋಗುವಾಗ ನಾವೆಲ್ಲಾ ಪಿಕ್‌ನಿಕ್‌ ಮೂಡಿನಲ್ಲಿದ್ದೆವು. ಎಲ್ಲರ ಬತ್ತಳಿಕೆಗಳಿಂದ ಹಾಡುಗಳು ಮತ್ತು ಜೋಕುಗಳು ಹೊರಬರುತ್ತಿದ್ದವು. ಹಾಸ್ಯಪ್ರಿಯ ವ್ಯಾನ್‌ ಡ್ರೈವರ್‌ ಕೂಡಾ, ಅರ್ಥವಾಗದಿದ್ದರೂ ನಮ್ಮ ಹಾಡುಗಳ ಧಾಟಿಯನ್ನು ಮೆಚ್ಚಿಕೊಂಡ.

ಕೊಂಕ್‌ನಿಂದ ಹಿಂದಿರುವಾಗ ಅನಿತಾ ತೀರಾ ಸಪ್ಪೆಯಾಗಿದ್ದಳು. ಕಾರಣ ಕೇಳಿದಾಗ ರೋಟರಿ ಸಂಸ್ಥೇ ನೀಡಿದ್ದ ಹಣದ ಕವರನ್ನು ತಾನು ಬ್ಯಾಗಿಗೆ ಹಾಕಿದ್ದೆನೆಂದೂ, ಅದು ಕಾಣೆಯಾಗಿದೆಯೆಂದೂ ಆಕೆ ಹೇಳಿದಳು. ನನಗೆ ಏನು ಹೇಳಲೂ ತೋಚಲಿಲ್ಲ. ನಮ್ಮ ಅಜಾಗರೂಕತೆಯ ಬಗ್ಗೆ ರೋಟರಿಯವರು ಏನಂದುಕೊಳ್ಳುತ್ತಾರೋ ಎಂಬ ಆತಂಕ ನನ್ನನ್ನು ಕಾಡಿತು. ಕೊಂಕಿನಿಂದ ವಾಪಾಸಾಗುವಾಗ ಇದೇ ಆತಂಕ ಕಾಡಿದ ಕಾರಣ ಅನಿತಾ ಯಾವುದಕ್ಕೂ ಸ್ಪಂದಿಸದೆ ತನ್ನ ಪಾಡಿಗೆ ತಾನು ಇದ್ದುಬಿಟ್ಟಳು.

ಕೊಂಕಿನಿಂದ ಹಿಂದಕ್ಕೆ ಬರುವಾಗ ನಾವು ನಿಕೋಲಳ ಮನೆಗೆ ಭೇಟಿಯಿತ್ತೆವು. ನಿಕೋಲಳ ಮನೆ ಅಚ್ಚುಕಟ್ಟಾಗಿತ್ತು. ಎದುರುಗಡೆ ಸುಂದರವಾದ ಉದ್ಯಾನವನ. ಮನೆಯಲ್ಲಿ ಏಳೆಂಟು ಕಪಾಟುಗಳಲ್ಲಿ ಭರ್ತಿ ಪುಸ್ತಕಗಳು. ನಿಕೋಲ್‌ ಚಕಚಕನೆ ಓಡಾಡಿ ತಿಂಡಿ ತೀರ್ಥ ತಂದು ನಮ್ಮೆದುರಿಟ್ಟಳು. ‘ಇನ್ನೇನು ಗಂಡ ಬರುವ ಹೊತ್ತು’ ಎನ್ನುತ್ತಾ ಹೊರಹೋಗಿ ವ್ಯಾನ್‌ ಡ್ರೈವರನ್ನು ತಿಂಡಿ ತೀರ್ಥ ಸೇವನೆಗೆಂದು ಕರಕೊಂಡು ಬಂದಳು.

ಆತ ಒಳಬಂದಾಗ ಆವರೆಗೂ ಚಿಂತೆಯಲ್ಲೇ ಮುಳುಗಿದ್ದ ಅನಿತಾ ಎದ್ದು ನಿಂತು ಮುಖದಲ್ಲಿ ನಗು ತಂದುಕೊಂಡು ‘ಬೋಂಜೂರ್‌’ ಎಂದು ಅತಿವಿನಯದಿಂದ ಅವನಿಗೆ ವಂದಿಸಿದಳು. ನಾವೆಲ್ಲಾ ಮುಖ ಮುಖ ನೋಡಿಕೊಂಡೆವು.

ಗಡಿಬಿಡಿಯಲ್ಲಿ ಅನಿತಾ ನಮ್ಮ ವ್ಯಾನ್‌ ಡ್ರೈವರ್‌ನ್ನು ನಿಕೋಲಳ ಗಂಡ ಎಂದೇ ಭಾವಿಸಿ ಅತ್ಯಂತ ಗೌರವದಿಂದ ವಂದಿಸಿದ್ದಳು. ಕೊನೆಗೆ ನಿಜ ತಿಳಿದಾಗ ಅವಳ ಮುಖ ನೋಡಬೇಕಿತ್ತು!

*************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಲಿವೆ ಚಾಲಕನಿಲ್ಲದ ವಿಮಾನಗಳು !?
Next post ಸೌದಿ ಪೇಟೆಗಳು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…