ಸ್ತ್ರೀ-ಪುರುಷ ತಾರತಮ್ಯ ಮತ್ತು ಸಾಮಾಜಿಕ ನಿಲುವು

ಸ್ತ್ರೀ-ಪುರುಷ ತಾರತಮ್ಯ ಮತ್ತು ಸಾಮಾಜಿಕ ನಿಲುವು

ಜೀವನದ ಬಂಡಿಗೆ ಗಂಡು ಹೆಣ್ಣುಗಳು ಎರಡು ಚಕ್ರಗಳಂತೆ ಸಮನಾಗಿ ಸಾಗಿ ದುಡಿದು ಬದುಕ ನಡೆಸಿದಾಗಲೇ ಶ್ರೇಯಸ್ಕರವೆಂಬ ವಿಚಾರವನ್ನು ಎಲ್ಲರೂ ಆಡುತ್ತಾರಾದರೂ ಆ ದಿಕ್ಕಿನಲ್ಲಿ ಚಿಂತಿಸಿದಾಗ ಸ್ತ್ರೀಗೆ ಪುರುಷನಷ್ಟೇ ಬದುಕಿನ ಎಲ್ಲ ಬಗೆಗಳಲ್ಲಿ ಸಮಾನ ಅವಕಾಶ ಇದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂಬ ವಿಚಾರ ಬೆಳಕಿನಷ್ಟೇ ನಿಚ್ಚಳ. ನಮ್ಮ ದೈನಂದಿನ ಬದುಕಿನ ರೀತಿ ರಿವಾಜುಗಳು, ಆಡುಬಳಕೆಯ ಮಾತುಗಳೇ ಈ ತಾರತಮ್ಯವನ್ನು ಎತ್ತಿ ತೋರಿಸುತ್ತವೆ. ಶೀಲ, ನಡತೆ, ಚಾರಿತ್ರ್ಯ, ನಯ ನಾಜೂಕು, ಇತ್ಯಾದಿ ಪದಗಳೆಲ್ಲ ಹೆಣ್ಣಿಗೆ ಮಾತ್ರ ವಿಶೇಷಣಗಳಂತೆ ಬಳಸಲ್ಪಡುತ್ತವೆ. ಅಧಿಕಾರ, ಯಜಮಾನಿಕೆ, ಆಡಳಿತ, ಕಂಚಿನ ಕಂಠ, ಗಾಂಭಿರ್‍ಯ ಈ ಪದಗಳು ಪುರುಷತ್ವವನ್ನು ಧ್ವನಿಸುವಂತೆ ಬಳಸಲ್ಪಡುವಲ್ಲಿ ಅಸಮಾನತೆ ಸ್ಪಷ್ಟ ಗೋಚರಿಸುತ್ತದೆ.

ಸಿಗ್ಮಂಡ ಪ್ರಾಯ್ಡ ಜಗತ್ತಿನ ಪ್ರಸಿದ್ಧ ಮನೋವಿಜ್ಞಾನಿ ಹೆಣ್ಣನ್ನು ಕುರಿತು “Woman is an imperfect man” ಎಂದು ಹೇಳಿದ್ದಾನೆ. ಹೀಗೆ ವ್ಯಾಖ್ಯಾನಿಸುವಲ್ಲಿ ಆತನ ಪುರುಷ ಪ್ರಧಾನ ನಿಲುವು ವ್ಯಕ್ತವಾಗುತ್ತದೆ. ಸ್ತ್ರೀತನವನ್ನು ಮಾತಿನಲ್ಲೆ ಹಂಗಿಸಿ ಭಂಗಿಸಿ ಛೇದಿಸಿ ನೋಡುವ ಚಾಳಿ ಕೂಡಾ ಪುರುಷತ್ವದ ಮೇಲ್ಮೈ ಎಂಬ ವಿಕಾರ ಮನಸ್ಥಿತಿ ಪುರುಷ ದಮನಪ್ರವೃತ್ತಿಗೆ ಸಾಕ್ಷಿ. ಅನೇಕ ಗಾದೆ ಮಾತುಗಳು ಹೇಳಿಕೆಗಳು ಹೆಣ್ಣಿನ ತೇಜೋವಧೆಗಾಗಿ ಸೃಷ್ಟಿಸಲ್ಪಿವೆ. ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ, ಸ್ತ್ರೀ ಬುಧ್ಧಿ ಪ್ರಳಯಾಂತಕಾ.., ಹೆಣ್ಣಿಗೆ ಬೆಂಕಿ ಹಚ್ಚಲು ಗೊತ್ತು, ಆರಿಸಲು ಗೊತ್ತಿಲ್ಲ, ಹತ್ತು ಮೀಸೆಗಳಿದ್ದಲ್ಲಿ ಇರಬಹುದು ಎರಡು ಜಡೆಗಳಿದ್ದಲ್ಲಿ ಇರಲಾಗದು ಹೀಗೆ ಇಂತಹ ಅದೆಷ್ಟು ಮಾತುಗಳು ಸಭೆ ಸಮಾರಂಭಗಳಲ್ಲಿ ಮಾತಿನ ಕಟಕಟೆಗಳಲ್ಲಿ ಜೋಕಿನ ರೂಪದಲ್ಲಿ ಬಳಕೆಯಾಗುತ್ತವೆ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಇಂತಹುದೇ ಕಾರ್‍ಯಕ್ರಮವೊಂದರಲ್ಲಿ ಹಾಸ್ಯಭರಿತವಾಗಿ ಹೇಳಿದ ಗಣ್ಯರೊಬ್ಬರ ಮಾತು ಹೆಣ್ಣಿಗೆ ಬೆಂಕಿ ಹಚ್ಚಲು ಗೊತ್ತು, ಆರಿಸಲು ಗೊತ್ತಿಲ್ಲ, ಸ್ತ್ರೀತ್ವವನ್ನೆ ಅಪಹಾಸ್ಯಕ್ಕೆ ಈಡುಮಾಡುವಂತಹುದು. ಇದರ ಅರ್‍ಥ ವಿಸ್ತಾರ ಹಿಗ್ಗಿಸ ಹೋದಷ್ಟು ವಿಶಿಷ್ಟ ರೀತಿಯಲ್ಲಿ ಹೆಣ್ಣನ್ನು ತುಳಿಯುವ ಪ್ರವೃತ್ತಿಯು ಸಮಾಜದಲ್ಲಿ ಜಾಗೃತವಿರುವುದು ಸ್ಪಷ್ಟವಾಗುತ್ತದೆ. ಹೆಣ್ಣು ವಿಘ್ನಕಾರಿಯೇ ಹೊರತು ಸಂರಚನೆಯಲ್ಲಿ ಒಲವುಳ್ಳವಳಲ್ಲ. ಆಕೆಯಿಂದ ಶ್ರೇಷ್ಟ ಕಾರ್‍ಯ ಸಾಧ್ಯವಿಲ್ಲ. ಅದೇನಿದ್ದರೂ ಗಂಡಿನಿಂದಲೇ ಸಾಧ್ಯ. ಹೆಂಗಸರು ಜಗಳಗಂಟಿಯರು. ಜಗಳ ಹೊತ್ತಿಸಬಲ್ಲರೇ ಹೊರತು ಅದನ್ನು ನಿವಾರಿಸಲಾರರು. ಹೀಗೆ ಹತ್ತು ಹಲವು ಬಗೆಯಲ್ಲಿ ಯಾವುದೋ ಸ್ತ್ರೀಯನ್ನು ಆಕೆಯ ಗುಣವನ್ನು ನಿಕೃಷ್ಟವಾಗಿ ಬಿಂಬಿಸುವ ಪ್ರಯತ್ನ. ಹಾಗಾದರೆ ಪುರುಷರು ಪರಸ್ಪರ ಅದೆಷ್ಟು ಸಲ ಹೆಣ್ಣಿಗಿಂತ ಹೆಚ್ಚಾಗಿ ಬಡಿದಾಡಿಕೊಳ್ಳುವುದಿಲ್ಲ. ಅಲ್ಲೆಲ್ಲಾ ಇಲ್ಲದ ಗಾದೆಗಳು ಹೆಣ್ಣಿನ ವಿಷಯಕ್ಕೆ ಹುಟ್ಟಿಕೊಂಡಿರುವುದನ್ನು ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿಯೇ ಗೃಹಿಸಬೇಕಾಗುತ್ತದೆ.

ಕನ್ನಡದ ಮೇರು ಕವಿ ಜನ್ನ ತನ್ನ ಕೃತಿ ಯಶೋಧರ ಚರಿತೆಯಲ್ಲಿ ಹೆಣ್ಣಿನ ಸ್ವಭಾವವನ್ನು ಕ್ಷುಲಕವಾಗಿ ಚಿತ್ರಿಸಿದ್ದಾನೆ. ಚಿತ್ರಂ ಅಪಾತ್ರೇ ರಮತೇ ನಾರಿ ಎಂಬ ಒಂದೇ ನುಡಿಯಲ್ಲಿಯೇ ಇಡೀ ಸ್ತ್ರೀ ಸಮುದಾಯವನ್ನು ಪರಿಗಣಿಸಿ ಏಕವ್ಯಾಖ್ಯಾನ ನೀಡಿರುವುದು ವಿಚಿತ್ರ. ರಾಜ ಯಶೋಧರ ಅಂತಃಪುರದ ಸೌಭಾಗ್ಯ ಕಡೆಗಣಿಸಿ ಅಷ್ಟಾವಕ್ರನಲ್ಲಿ ಮೋಹಿತಳಾದ ಆಕೆಯ ನಡತೆಗೆ ಇಡೀ ಸ್ತ್ರೀ ಕುಲಕ್ಕೆ ಅವಮಾನಕರವಾದ ವ್ಯಾಖ್ಯಾನ ನೀಡುವ ಅಧಿಕಾರ ಪುರುಷನಿಗೆ ಮಾತ್ರ ಇದೆಯೆಂಬುದ ನಿರೂಪಿಸಬಯಸಿದನೋ ಎಂಬಂತೆ ಹೇಳಿಕೆ ಕೊಟ್ಟಿರುವುದನ್ನು ಪುರುಷ ವಾಗ್ಮಿಗಳು ವ್ಯಾಖ್ಯಾನಕಾರರು ಬಹುಮಾರ್‍ಮಿಕವಾಗಿ ಬಳಸಿ ಆ ಮಾತನ್ನು ಹಿಂಜಿ ಹಿಗ್ಗಿಸಿ ಕೋನಕೋನಗಳಲ್ಲಿ ಅಳೆದು ತೂಗಿ ಬಾಯಿ ಚಪಲ ತೀರಿಸಿಕೊಳ್ಳುವರು.

ಸ್ತ್ರೀ ಸಹಜ ಕೋಮಲ ಗುಣವುಳ್ಳವಳು. ದೈಹಿಕ ಅಬಲತೆ ಜೊತೆಗೆ ನಯವಾದ ಮಾತಿಗಳಿಗೆ ಬೇಗನೇ ಮರುಳಾಗುವ ಆಕೆ ಕಷ್ಟ ನೋವು ನಿರಾಶೆಗಳಿಗೆ ತಟ್ಟನೆ ಸ್ಪಂದಿಸಿಬಿಡುತ್ತಾಳೆ. ಆಕೆಯ ಈ ಗುಣಗಳು ಗಂಡಿಗೆ ಆಕೆಯನ್ನು ವಂಚಿಸಲು, ಇಲ್ಲವೇ ಸೋಲಿಸಲು ಕೈವಶಮಾಡಿಕೊಳ್ಳಲು ಅನುಕೂಲವಾಗಿವೆ. ಹೀಗಾಗಿ ಪುರುಷ ಸ್ತ್ರಿಯನ್ನು ತನ್ನ ಮನಬಂದಂತೆ ಕುಣಿಸಬಲ್ಲ. ಭಾವನಾತ್ಮಕವಾಗಿ ಶೋಷಿಸಬಲ್ಲ, ದೈಹಿಕವಾಗಿ ಪೀಡಿಸಬಲ್ಲ, ಮಾನಸಿಕವಾಗಿ ಕುಗ್ಗಿಸಬಲ್ಲ. ಗಂಡು ಹೆಣ್ಣಿನ ನಡುವಿನ ಎಲ್ಲ ತಿಕ್ಕಾಟ, ಜಗಳ ಬೇರ್‍ಪಡುವಿಕೆ ಎಲ್ಲದಕ್ಕೂ ಬೆರಳು ಹೆಣ್ಣಿನೆಡೆಗೆ ನಟ್ಟಿರುವುದು ಸೋಜಿಗ. ಆದರಾಕೆ ಈ ಎಲ್ಲ ಅವಮಾನಗಳನ್ನು ಸಹಿಸುತ್ತಾ, ಗಂಡಿಗಿಂತ ಶ್ರೇಷ್ಟಳೇ ಆಗಿದ್ದಾಳೆ. ಸಹನೆಗೆ ಸಾಕಾರವಾಗುತ್ತಾಳೆ. ಪ್ರೇಮಕ್ಕೆ ದ್ಯೋತಕವಾಗುತ್ತಾಳೆ. ನೋವು ನಲಿವುಗಳಿಗೆ ಸ್ಪಂದಿಸುತ್ತಾ ನಕ್ಕು ಹಗುರಾಗುತ್ತಾಳೆ. ತೊಂದರೆ ತಾಪತ್ರಯಗಳನ್ನು ಗಂಡಿಗಿಂತ ಹೆಚ್ಚು ಸಹನೆಯಿಂದ ಎದುರಿಸುತ್ತಾಳೆ. ನೋವಿನಲ್ಲೂ ನಗಬಲ್ಲಳು, ಅಪಮಾನ ನಿಂದೆಗಳ ಮರೆತು ಜೀವನ್ಮುಖಿಯಾಗಿ ಕನಸುಗಳಲ್ಲೇ ಸಾಗುತ್ತಾಳೆ. ಇಂತಹ ಭಾವಲಹರಿಗಳು ಹೆಣ್ಣಿನ ಆಸ್ತಿ, ಅದು ಪುರುಷನಿಗೆ ಸಿದ್ಧಿಸದು. ಹಾಗಾಗೆ ಪ್ರಾಜ್ಞರು ಹೇಳಿರುವರು ನದಿಮೂಲ, ಋಷಿಮೂಲ, ಸ್ತ್ರೀ ಮೂಲ ಹುಡುಕಬಾರದು ಎಂದು.

ಹಿಂದಿನಿಂದಲೂ ಸಮಾಜ ಸ್ತ್ರೀಯ ಶ್ರೇಷ್ಠತೆಯ ಚಿತ್ರಿಸುವ ನೆಪದಲ್ಲಿಯೇ ಮಿತಿಯನ್ನು ಹೇರಿ ಆದರ್‍ಶೀಕರಿಸಿ ಗರತಿ, ದೇವಿ, ಮಾತೆ ಮುಂತಾದ ಉಪಮೆ, ರೂಪಕಗಳಿಂದ ಅನುಪಮಗೊಳಿಸಿದರೂ ಆ ಮೂಲಕವೇ ಸ್ತ್ರೀ ಶ್ರೇಷ್ಟತೆಯನ್ನು ಅಲ್ಲಗಳೆಯುತ್ತ ಆಕೆಗೆ ಪರಿಮಿತಿಯಲ್ಲೆ ಪರದಾಡುವ ವಿಚಿತ್ರವಾದ ಚೌಕಟ್ಟು ಕಟ್ಟಿ ಆಕೆಯ ಸಾಮರ್‍ಥ್ಯವನ್ನು ನಿಯಂತ್ರಿಸುವ ನಿಲುವೇ ಆಗಿತ್ತು. ಪ್ರಕೃತಿಯೇ ಸ್ತ್ರೀ ರೂಪಿಣಿ ಎಂದು ಭಾರತೀಯರು ನಂಬಿದರೂ ಪತ್ನಿಯ ಶ್ರೇಷ್ಠತೆಯನ್ನು ಆಕೆಯ ಸರ್‍ವಸಮಾನತೆಯನ್ನು ಒಪ್ಪಿಕೊಳ್ಳುವ ಭಾರತೀಯ ಪುರುಷರು ವಿರಳ. ಇದು ದಮನಕಾರಿ ಪ್ರವೃತ್ತಿ. ಸ್ತ್ರೀಯನ್ನು ಆದಿಶಕ್ತಿ, ಪರಾಶಕ್ತಿ, ಎಂದೆಲ್ಲಾ ಆರಾಧಿಸುವ ಪುರುಷ ಸಂಪ್ರದಾಯ ಪರಂಪರೆಗಳ ಕುರಿತು ಗಂಟೆಗಟ್ಟಲೆ ಮಾತಾಡಬಲ್ಲ. ನೈಜಬದುಕಿನಲ್ಲಿ ಬರುವ ಸ್ತ್ರೀಯರನ್ನು ನೋಡುವ ದೃಷ್ಟಿಗೂ ಆದರ್‍ಶ ಕಲ್ಪನೆಗಳಿಗೂ ಸಮಾನ ಗೌರವ ನೀಡುವುದು ವಿರಳ.

ಸ್ತ್ರೀಯರ ಕುರಿತು ಎರಡು ರೀತಿಯ ದೃಷ್ಟಿಕೋನವನ್ನು ಕಾಣಬಹುದು. ಒಂದು ಸಾಂಕೇತಿಕ ಸ್ವರೂಪದಲ್ಲಿ ಭಾರತೀಯ ಹೆಣ್ಣು ಪರಿಶುದ್ಧಳಾದ, ಪ್ರಾಮಾಣಿಕಳಾದ ಪತಿಗೆ ವಿಧೇಯ ಹಾಗೂ ಶ್ರದ್ಧಾಭಕ್ತಿಯುಳ್ಳವಳು. ಸೀತಾ, ಸಾವಿತ್ರಿ, ಊರ್‍ಮಿಳೆ ಮುಂತಾದ ಪಾತ್ರಗಳು ಈ ಹಿನ್ನೆಲೆಯಲ್ಲಿಯೇ ಉದಾತ್ತ ಪಾತ್ರಗಳಾಗಿವೆ. ವಾಸ್ತವಿಕ ಬದುಕಿನಲ್ಲಿ ಆಕೆ ದಮನಕ್ಕೊಳಗಾದ, ತನ್ನ ಅಭಿಪ್ರಾಯಕ್ಕೆ ಮಾನ್ಯತೆ ಪಡೆಯದ, ಪುರುಷನ ಸೇವೆಗೆ ಮಾತ್ರ ಇರುವ ಆತನ ಸಂತಾನಗಳ ಹೆತ್ತು ವಂಶೋದ್ಧಾರಣೆಗೆ ಮಾತ್ರ ಪರಿಗಣಿಸಲ್ಪಟ್ಟು ಆ ಹಿನ್ನೆಲೆಯಲ್ಲಿಯೇ ಗುರುತಿಸಲ್ಪಟ್ಟವಳು. ಎರಡೂ ಪರಿಕಲ್ಪನೆಗಳಲ್ಲೂ ದಬಾವಣೆಯ ಸೂಕ್ಷ್ಮ ಎಳೆ ಇರುವುದು. ಸಾಂಕೇತಿಕ ಪಾತ್ರಗಳು ಬದುಕಿನ ಇಷ್ಟೊಂದು ವಿಪರ್‍ಯಾಸಗಳಿಗೆ ತೆರೆದುಕೊಂಡಿದ್ದು ಕೂಡಾ ಪುರುಷ ನಿರ್‍ಧಾರಗಳಿಗೆ. ಮರ್‍ಯಾದಾ ಪುರುಷೋತ್ತಮ ಶ್ರೀ ರಾಮ ತನ್ನ ಧರ್‍ಮನೀತಿಗೆ ಹೆಣ್ಣನ್ನು ಬಲಿಮಾಡಿರುವುದು, ಪ್ರಾಯದ ಊರ್‍ಮಿಳೆ ಪತಿಯಿಂದ ದೂರವಾಗಿ ತಪಸ್ವಿನಿಯಂತೆ ಬದುಕಿದ್ದು, ಶಕುಂತಲೆ ದುಶ್ಯಂತನ ನಿರಾಕರಣೆಗೆ ನೊಂದು ಬೆಂದು ಬದುಕಿದ್ದು ಇವೆಲ್ಲವೂ ಗಂಡಿನ ನಿರ್‍ಧಾರಕ್ಕೆ ಆತನ ವೈಖರಿಗೆ ಹೊರತು ಇಲ್ಲೆಲ್ಲೂ ಹೆಣ್ಣಿನ ಸಂವೇದನೆಗಳು ಪರಿಗಣಿಸಲ್ಪಡಲೇ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಆಕೆಗೆ ಆತ್ಮಜಾಗೃತಿಗೆ ಆತ್ಮಸಾಕ್ಷಿಗೆ ನಿಷ್ಠಳಾಗಿ ಬದುಕುವ ಅವಕಾಶ ಇಲ್ಲದೇ ಆಕೆ ಒಳಗೊಳಗೆ ಕುದಿದು ಬೆಂದಿದ್ದು ಅವೆಲ್ಲವನ್ನೂ ಮೌನವಾಗಿ ಸಹಿಸಿಕೊಂಡಿರುವುದು ದೌರ್‍ಜನ್ಯದ ಇನ್ನೊಂದು ಮುಖವೇ ಆಗಿದೆ. ವಾಸ್ತವಿಕ ಪಾತ್ರಗಳಂತೂ ನಿತ್ಯ ನರಕದ ಜೀವನಕ್ಕೆ ಒಗ್ಗಿಕೊಂಡಿರುವರು ಎಲ್ಲರ ಅನುಭವ ವ್ಯಾಪ್ತಿಯಲ್ಲಿಯೇ ಇರುವ ಸತ್ಯ.

ಮುಂದಾದರೂ ಆಧುನಿಕ ಸ್ತ್ರೀ ಸಮುದಾಯ ತನ್ನ ನಿಜವಾದ ಮೌಲ್ಯಗಳ ಅರಿತುಕೊಳ್ಳಬೇಕಾಗಿದೆ. ಸ್ತ್ರೀಯರ ಭೌದ್ದಿಕ ಅಸ್ಥಿತ್ವವಾದವನ್ನು ತಿರಸ್ಕರಿಸುವ ಅದನ್ನು ಹಳದಿ ಇಲ್ಲ ಕೆಂಪು ಕಣ್ಣುಗಳಿಂದ ನೋಡುವ ಜನರೇ ಹೆಚ್ಚಿರುವುದರಿಂದ ಇದಕ್ಕೆ ಕಾಲವೇ ಉತ್ತರಿಸಬೇಕಷ್ಟೇ. ಆದರೂ ಸ್ತ್ರೀ ಬದುಕಿನ ಹಾದಿಯುದ್ದಕ್ಕೂ ಹಲವಾರು ಪರೀಕ್ಷೆಗಳಲ್ಲಿ ಏರಿಳಿಯುತ್ತ ಸಾಗುತ್ತಲೇ ತನ್ನ ನಿಶ್ಚಿತ ಹಾದಿಯ ಸ್ಪಷ್ಟಪಡಿಸಿಕೊಳ್ಳಲು ಕಾಯಬೇಕಾದ ಅಗತ್ಯವೂ ಇದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ವಾದ
Next post ಮುದ್ದು ಕಂದನ ವಚನಗಳು : ಐದು

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…