ವಾಣಿಯ ಸಮಸ್ಯೆ

ವಾಣಿಯ ಸಮಸ್ಯೆ

-೧-
ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುವಿಗೆ ಬೇಸರವಾಯ್ತು. ‘ನೆರೆಮನೆ ಅಜ್ಜಿ ಹೋದರೆ ಕರು ಕಟ್ಟಲು ಸ್ಥಳವಾಯ್ತು’ ಎನ್ನುವ ಸ್ವಭಾವ ಇಂದುವಿನದಲ್ಲವಾದರೂ ಆ ಮನೆಗೆ ಒಕ್ಕಲು ಬಂದುದರಿಂದ ಅವಳಿಗೆ ಸಂತೋಷಕ್ಕಿಂತ ವ್ಯಸನವೇ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಅವಳಿಗೆ ಹಾಗಾಗಲು ಕಾರಣವೂ ಇತ್ತು.

ಇಂದು ಹುಟ್ಟುವ ಮೊದಲೇ ತಂದೆಯನ್ನೂ ಹುಟ್ಟುವಾಗ ತಾಯನ್ನೂ ಕಳೆದುಕೊಂಡು ದಾಯಾದಿಗಳ ಮನೆಯಲ್ಲಿ ಎಲ್ಲರಿಗೂ ಹೊರೆಯಾಗಿ ಬೆಳೆದವಳು. ಇಷ್ಟೇ ಸಾಲದು ಎಂದೇನೋ ಮದುವೆಯಾಗಿ ಆರು ತಿಂಗಳಾಗುವ ಮೊದಲೇ ವೈಧವ್ಯ ಬೇರೆ ಪ್ರಾಪ್ತವಾಗಿ ಹೋಗಿತ್ತು. ಅವಳೀಗ ವಾಸಿಸುತ್ತಿರುವ ಆ ಪುಟ್ಟ ಮನೆಯೇ ಅವಳಿಗೆ ಒಂದಾನೊಂದು ಕಾಲದಲ್ಲಿ ಮದುವೆಯಾಗಿತ್ತು ಎಂಬುದರ ಗುರುತು. ತಾನು ಬದುಕುವುದು ಅಸಂಭವ ಎಂದು ತಿಳಿದಾಗ ಅವಳ ಗಂಡ ಅವಳ ಹೆಸರಿಗೆ ಮಾಡಿಟ್ಟಿದ್ದ ಸ್ವಲ್ಪ ಹಣವೂ ಆ ಮನೆಯೂ ಸಿಕ್ಕಿ, ಇಂದುವಿನ ಜೀವನವೇನೋ ಇತರರ ಹಂಗಿಲ್ಲದೆ ಸುಸೂತ್ರವಾಗಿ ಸಾಗುತ್ತಿತ್ತು.

ಆ ಮನೆ ಎಂದರೆ ಅವಳಿಗೆ ಬಲು ಪ್ರೀತಿ. ಅದನ್ನು ಸುಂದರವಾಗಿಟ್ಟು ಕೊಳ್ಳುವುದೊಂದೇ ಅವಳ ಜೀವನದ ಗುರಿ. ತಾನು, ತನ್ನದು ಎಂಬುದಕ್ಕೆ ಎಡೆಯಿಲ್ಲದೆ ಬೆಳದು ಬೇಸತ್ತ ಅವಳಿಗೆ ಆ ಮನೆಯ ಮೇಲೆ ಅಷ್ಟೊಂದು ಪ್ರೀತಿ ಇದ್ದುದೇನೂ ಆಶ್ಚರ್ಯವಲ್ಲ. ಮತ್ತೆ ಅವಳು ಜೀವನದಲ್ಲಿ ಸ್ವಲ್ಪವಾದರೂ ಸುಖವನ್ನು ಕಂಡಿದ್ದರೆ ಆದೂ ಆ ಮನೆಯಲ್ಲಿಯೇ. ಅವನು ಸತ್ತುಹೋದರೆ ತನ್ನ ಜೀವನವೇ ಹಾಳಾಯ್ತು ಎಂಬ ತಿಳುವಳಿಕೆ ಬರುವ ಮೊದಲೇ ಅವಳ ಗಂಡ ಸತ್ತು ಹೋಗಿದ್ದ. ಮದುವೆಯಲ್ಲವನ ಮುಖ ಕಂಡವಳು ಮತ್ತೊಮ್ಮೆ ನೋಡಿದ್ದು ಸತ್ತ ಮೇಲೆ. ಹಾಗೆ ನೋಡುವುದಾದರೊ ಅವನು ಸತ್ತಮೇಲೆಯೇ ಅವಳ ಜೀವನ ಕೊಂಚ ಸುಖಮಯವಾಯಿತೆನ್ನಬೇಕು. ಏಕೆಂದರೆ ಅವಳಿಗಾಗಿ ಅವನಿಟ್ಟಿದ್ದ ಧನದ ಲೋಭದಿಂದ ಮನೆಯವರ ಪ್ರೀತಿ ಅವಳ ಮೇಲೆ ಹೆಚ್ಚಾಯಿತು. ಆದರೆ ಇಂದು ಬುದ್ಧಿ ಬಂದು ತಿಳಿದುಕೊಳ್ಳುವಷ್ಟಾದ ಮೇಲೆ ತಾನೇ ಬೇರೆಯಾಗಿ ಸ್ವತಂತ್ರವಾಗಿರಲು ಬಯಸಿದಳು. ಅವಳ ಮೇಲಲ್ಲದಿದ್ದರೂ ಅವಳ ಹಣದ ಮೇಲಿನ ಪ್ರೀತಿಯಿಂದ ಮನೆಯವರು ‘ತರುಣಿಯಾದ ನೀನೊಬ್ಬಳೇ ಒಂದು ಮನೆಯಲ್ಲಿರುವುದು ಸರಿಯಲ್ಲ’ ಎಂದು ಎಷ್ಟೇ ಹೇಳಿದರೂ ಇಂದು ಮಾತ್ರ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ.

ಇದು ಆರು ವರ್ಷಗಳ ಹಿಂದಿನ ಮಾತು. ಆಗವಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳು ಊರು ಬಿಟ್ಟು ಆ ಮನೆಗೆ ಬರುವಾಗಲೇ ನೆರೆಮನೆ ಖಾಲಿಯಿತ್ತು. ಅಂದಿನಿಂದಿಂದಿನವರೆಗೂ ಇಂದುವಿಗೆ ತನ್ನ ಮನೆಯ ಹಿತ್ತಲಷ್ಟೇ ಸ್ವತಂತ್ರದಿಂದ ನೆರೆಮನೆಯ ಹಿತ್ತಲಲ್ಲೂ ಹೋಗಿ ಬರುವುದು ವಾಡಿಕೆಯಾಗಿ ಹೋಗಿತ್ತು. ಕಾಲಕ್ರಮದಲ್ಲಿ ಮುರಿದ ಮಧ್ಯದ ಬೇಲಿಯನ್ನು ಸಹ ಕಟ್ಟಿಸುವ ಅವಶ್ಯಕತೆ ಅವಳಿಗೆ ತೋರಿ ಬರಲಿಲ್ಲ.

ಅವಳದು ಏಕಾಂತವನ್ನು ಬಯಸುವ ಜೀವ. ಹುಟ್ಟಿದಂದಿನಿಂದ ತನ್ನವರು, ತನ್ನದು ಎಂಬುದಿಲ್ಲದ ಒಂಟಿಯಾಗಿ ಬೆಳೆದಿದ್ದ ಅವಳಿಗೆ ಸ್ವತಂತ್ರವಾದ ಮೇಲೂ ಬೇರೆಯವರ ಸಹವಾಸ, ಸ್ನೇಹ, ಪ್ರೀತಿಗಳು ಅಗತ್ಯವಾಗಿ ಕಾಣಬರಲಿಲ್ಲ. ಹಾಗೊಮ್ಮೆ ಅವಶ್ಯವೆಂದು ತೋರಿದ್ದರೂ ತಾನಾಗಿ ಇನ್ನೊಬ್ಬರ ಸ್ನೇಹವನ್ನು ಕೋರದಷ್ಟು ಸಂಕೋಚವುಳ್ಳ ಪ್ರಕೃತಿ ಅವಳದು. ಅದರಿಂದ ತಾನೇತಾನಾಗಿದ್ದ ಅವಳಿಗೆ ನೆರೆಮನೆಗೆ ಒಕ್ಕಲು ಬಂದಿರುವುದು ಎಂದು ತಿಳಿದಾಗ ಸಂತೋಷವಾಗಿದ್ದುದು ಆಶ್ಚರ್ಯವಲ್ಲ. ಆದರೆ ಅವಳ ಸಂತೋಷವನ್ನೇನೂ ನೆರೆಮನೆಯ ಒಕ್ಕಲು ಹೊಂದಿಕೊಂಡಿರಲಿಲ್ಲ. ಅದು ಅವಳಿಗೂ ತಿಳಿದಿದ್ದರೂ ‘ಬಂದರಲ್ಲಾ’ ಎಂದಾಗದೆ ಮಾತ್ರ ಹೋಗಲಿಲ್ಲ. ಇನ್ನು ಮುರಿದ ಬೇಲಿಯನ್ನೂ ಕಟ್ಟಿಸದಿದ್ದರೆ ತನ್ನ ಏಕಾಂತಕ್ಕೆ ಭಂಗಬರುವುದೆಂದುಕೊಂಡು ಇಂದು ಒಳಗೆ ಹೋದವಳು ಆ ದಿನ ಮತ್ತೆ ಹಿತ್ತಲ ಕಡೆಗೆ ಹೋಗಲಿಲ್ಲ.

-೨-

ಮರುದಿನ ಇಂದು ಮುರಿದ ಬೇಲಿಯನ್ನು ಸರಿಮಾಡಿಸುತ್ತಿದ್ದಾಗ ನೆರೆಮನೆಯ ಹಿತ್ತಲ ಬಾವಿಯ ಹತ್ತಿರ ತನ್ನ ಪ್ರಾಯದ ಹೆಂಗಸೊಬ್ಬಳನ್ನು ನೋಡಿದಳು. ಅವಳೂ ಇವಳನ್ನು ನೋಡಿದಳು, ನೋಡಿ ಮುಗುಳು ನಕ್ಕಳು. ಆ ನಗುವಿನ ಪ್ರತಿಬಿಂಬ ಇಂದುವಿನ ಮೋರೆಯಲ್ಲೂ ಮೂಡಿತ್ತು. ಸರಿ, ಮತ್ತೆರಡು ದಿನಗಳ ಕೆಲಸವಿದ್ದರೂ ಆ ದಿನದ ತರುವಾಯ ಬೇಲಿಯ ಕೆಲಸ ಮುಂದುವರಿಯಲಿಲ್ಲ.

ಈ ರೀತಿ ನಗುವಿನಿಂದ ಮೊದಲಾದ ಇಂದು ಮತ್ತು ನೆರೆಮನೆಯ ವಾಣಿಯ ಪರಿಚಯವು ಒಂದು ವಾರ ತುಂಬುವುದರೊಳಗೆ ಸ್ನೇಹದ ದಾರಿ ಹಿಡಿದಿತ್ತು. ಯಾರ ಸ್ನೇಹವನ್ನೂ ಬಯಸದ ಇಂದುವಿಗೇ ವಾಣಿಯ ವಿಷಯಕ್ಕೆ ತನ್ನಲ್ಲಿ ಮೂಡಿದ್ದ ಆದರವನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ವಾಣಿಯೇನೋ ಊರಿಗೆ ಹೊಸಬಳು, ಯಾರೊಬ್ಬರ ಗುರುತು ಪರಿಚಯವೂ ಇಲ್ಲ, ದಿನ ಬೆಳಗಾದರೆ ನೆರೆಮನೆಯ ಇಂದುವಿನ ಮುಖ ಕಾಣುವುದು. ವಾಣಿಗೆ ಅವಳ ಪರಿಚಯ ಕ್ರಮವಾಗಿ ಸ್ನೇಹವಾದುದು ಆಶ್ಚರ್ಯದ ಮಾತಲ್ಲ. ಆದರೆ ಅಷ್ಟೇ ಸಹಜಸ್ನೇಹದ ಸುಳಿವನ್ನೇ ಅರಿಯದ ತನ್ನ ಹೃದಯದಲ್ಲೂ ಈ ಸ್ನೇಹ ಪ್ರತಿಬಿಂಬಿಸುವುದೆಂದು ಮಾತ್ರ ಇಂದುವಿಗೆ ತಿಳಿಯದು.

ಆ ಮನೆಯಲ್ಲಿ ವಾಣಿ ಮತ್ತು ಅವಳ ಗಂಡ ರತ್ನ ಇಬ್ಬರೇ. ರತ್ನ ಆ ಊರಿಗೆ ಹೊಸದಾಗಿ ವರ್ಗವಾಗಿ ಬಂದ ಡಾಕ್ಟರ್, ಊರಿಗೆ ಒಬ್ಬನೇ ಡಾಕ್ಟರ್ ಆದುದರಿಂದ ಊಟ ತಿಂಡಿಗಳಿಗೆ ಸಹ ಬಿಡುವಿಲ್ಲದಷ್ಟು ಕೆಲಸ ಅವನಿಗೆ. ವಾಣಿಗಂತೂ ಮನೆಯೊಳಗೊಬ್ಬಳೇ ಇರುವುದಕ್ಕೆ ಬೇಸರ, ಅದರಿಂದ ಅವಳ ಮುಕ್ಕಾಲು ಸಮಯವಲ್ಲಾ ಇಂದುವಿನ ಮನೆಯಲ್ಲೇ ಕಳೆಯುತ್ತಿತ್ತು. ಇಂದು ಒಂದೆರಡು ಸಲ ಅವಳ ಮನೆಗೆ ಹೋಗಿದ್ದಳು.

ಇಂದು ಮೊಟ್ಟಮೊದಲು ವಾಣಿಯ ಮನೆಗೆ ಹೋದಾಗ ಬಟ್ಟೆ-ಬರೆ, ಪಾತ್ರೆ ಪದಾರ್ಥಗಳೆಲ್ಲಾ ಮನೆ ತುಂಬಾ ಅಸ್ತವ್ಯಸ್ತವಾಗಿ ಬಿದ್ದಿದ್ದವು. ವಾಣಿ ‘ಏನೂ ಹೊಸದಾಗಿ ಬಂದುದರಿಂದ ಮನೆಯನಿನ್ನೂ ವ್ಯವಸ್ಥಿತ ರೀತಿಗೆ ತರಲು ಸಮಯವಾಗಲಿಲ್ಲ’ ಎಂದು ಹೇಳಿದರೂ ತನ್ನ ಮನೆಯನ್ನು ಸದಾ ಸುವ್ಯವಸ್ಥಿತ ರೀತಿಯಲ್ಲಿಟ್ಟುಕೊಂಡಿದ್ದ ಇಂದುವಿಗೆ ‘ಬಂದು ಹದಿನೈದು ದಿನಗಳಾದರೂ ಇನ್ನೂ ಸಮಯವಾಗಿಲ್ಲವೆ?’ ಎಂದು ಆಶ್ಚರ್ಯ. ಆ ದಿನ ಅವುಗಳನ್ನೆಲ್ಲಾ ಸರಿಮಾಡಿಡಲು ವಾಣಿಗೆ ನೆರವಾದಳು. ಮಧ್ಯಾಹ್ನ ಎರಡು ಗಂಟೆಗೆ ಕೆಲಸ ಸುರು ಮಾಡಿದ್ದರೂ ಎಲ್ಲವನ್ನೂ ಸರಿಯಾಗಿ ಮಾಡುವಾಗ ಕತ್ತಲಾಗುವ ಸಮಯವಾಗಿತ್ತು. ಅಂತೂ ಎಲ್ಲಾ ಮುಗಿಯುವಾಗ ಮನೆಯು ಸ್ವಚ್ಚವಾಗಿ, ಸುಂದರವಾಗಿ ತೋರಿತು.

ಈ ಕೆಲಸದಲ್ಲಿ ಪಾಲಿಗೆ ಇಂದು ನೆರವಾದಳು ಎನ್ನುವುದಕ್ಕಿಂತ ಇಂದುಗೆ ವಾಣಿ ನೆರವಾದಳು ಎಂದರೆ ಸರಿಯಾಗಬಹುದು. ಮುಕ್ಕಾಲು ಕೆಲಸ ಮಾಡಿದವಳು ಇಂದು ಯಾವ ಯಾವ ಪದಾರ್ಥವನ್ನು ಎಲ್ಲೆಲ್ಲಿ ಇಡಬೇಕು; ಹೇಗೆ ಇಟ್ಟರೆ ಹೆಚ್ಚು ಸುಂದರವಾಗಿ ತೋರಬಹುದು ಎಂದು ಆಲೋಚಿಸಿ ಸರಿಮಾಡಿ ಅಣಿಯಾಗಿದ್ದವಳು ಇಂದು. ಇಂದು ಹೊರಲಾರದ ದೊಡ್ಡ ದೊಡ್ಡ ವಸ್ತುಗಳನ್ನು ಎತ್ತಿ ಸಹಾಯ ಮಾಡುವುದು ಅಥವಾ ಅವಳು ಹೇಳಿದ ಸಾಮಾನುಗಳನ್ನು ತಂದು ಕೊಡುವುದು ಇವು ವಾಣಿ ಮಾಡಿದ ಕೆಲಸ. ಅಂತೂ ಅವರ ಕೆಲಸ ಮುಗಿಯುವಾಗ ಮನೆಯೊಂದು ಹೊಸ ಕಳೆ ತಳೆದಿತ್ತು. ವಾಣಿಗಂತೂ ರೂಪು ಬದಲಾದ ತನ್ನ ಮನೆಯನ್ನು ನೋಡಿ ಹಿಡಿಸಲಾರದಷ್ಟು ಆಶ್ಚರ್ಯ ಆನಂದ.

ಅವಳದು ಜನ್ಮತಃ ಉದಾಸೀನ ಪ್ರವೃತ್ತಿ. ಯಾವ ಕೆಲಸವನ್ನಾದರೂ ನಾಳೆ ಮಾಡಿದರಾಯ್ತು ಎನ್ನುವ ಪ್ರಕೃತಿ, ನಾಳೆ ನಾಳೆ ಎಂದು ಯಾವಾಗಲೂ ಅವಳ ಕೆಲಸಗಳು ನಾಳೆಗಾಗಿ ಬಿದ್ದಿರುತ್ತಿದ್ದವು. ಇದರಿಂದ ಸಹಜವಾಗಿಯೇ ಅವಳ ಮನೆ ಎಂದೂ ಅಂದಿನಷ್ಟು ಸುಂದರವಾಗಿ ತೋರಿರಲಿಲ್ಲ.

ಆ ದಿನ ಸಾಯಂಕಾಲ ರತ್ನ ಸ್ವಲ್ಪ ಬೇಗನೆ ಬಂದ. ಅವನಿಗೂ ತನ್ನ ಮನೆಯ ಸುವ್ಯವಸ್ಥಿತ ರೀತಿಯನ್ನು ನೋಡಿ ಬಹಳ ಆಶ್ಚರ್ಯವಾಗದಿರಲಿಲ್ಲ. ಆದರೆ ಕಾಫಿ ಕುಡಿದು ಮುಗಿಯುವ ಮೊದಲೇ ವಾಣಿಯ ಬಾಯಿಯಿಂದ ಮನೆಯ ಆ ರೂಪಿಗೆ ಕಾರಣಳಾದವಳು ನರಮನೆಯ ಇಂದು ಎಂದು ತಿಳಿಯಿತು. ತಿಳಿದು- ‘ನನ್ನ ವಾಣಿಯೂ ಗೃಹ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವಂತಾಗಿದ್ದರೆ’ ಎಂದೆನ್ನಿಸಿತವನಿಗೆ ತನ್ನ ಬಯಕೆಗಳು ಪೂರ್ತಿಯಾಗುವುದು ತಾನು ಬಯಸಿದಷ್ಟು ಸುಲಭವಲ್ಲ ಎಂಬುದು ರತ್ನನ ಐದು ವರ್ಷಗಳ ದಾಂಪತ್ಯ ಜೀವನದ ಅನುಭವ. ಆದರೆ ಇನ್ನೂ ರತ್ನನಿಗೆ ‘ಹಾಗಾಗಿದ್ದರೆ ಹೀಗಾಗಿದ್ದರೆ’ ಎಂದು ಅಂದುಕೊಳ್ಳದಿರುವಷ್ಟು ನಿರಾಶೆಯಾಗಿರಲಿಲ್ಲ.

ರತ್ನ ಕೆಲಸ ತೀರಿಸಿ ದಣಿದು ಬರುವಾಗ ವಾಣಿ ಇಂದುವಿನ ಮನೆಯಲ್ಲಿ ಹರಟೆಹೊಡೆಯುತ್ತ ಕೂತುಬಿಡುತ್ತಿದ್ದಳು. ರತ್ನ ಬಂದ ಮೇಲೆ ಓಡಿ ಹೋಗಿ ಮತ್ತೆ ಕಾಫಿ ಮಾಡಬೇಕು. ವಾಣಿಯ ಕಾಫಿಯಾಗುವುದರೊಳಗೆ ರತ್ನನನ್ನು ಕೂಗಲು ಯಾರಾದರೂ ಬಂದೇ ಬರುವರು. ಎಷ್ಟೋ ಸಾರಿ ಅವನು ಏನನ್ನೂ ತೆಗೆದುಕೊಳ್ಳದೆ ಹಾಗೆಯೇ ಹೊರಟುಹೋಗಿ ಬಿಡಬೇಕಾಗುತ್ತಿತ್ತು. ಆಮೇಲೆ ಸ್ವಲ್ಪ ಹೊತ್ತು ಆಯ್ಯೋ, ಬೇಗನೆ ಕಾಫಿ ತಿಂಡಿ ಮಾಡಿಟ್ಟಿರಬೇಕಿತ್ತು’ ಎಂದು ವಾಣಿ ನೊಂದುಕೊಳ್ಳುತ್ತಿದ್ದಳೇನೋ ನಿಜ; ಆದರೆ ಅದು ಸ್ವಲ್ಪ ಹೊತ್ತು ಮಾತ್ರ. ಮರುದಿನ ಯಥಾಪ್ರಕಾರ… ರತ್ನನ ಬಟ್ಟೆಬರೆಗಳೂ ಹಾಗೆಯೇ ಅವನಿಗೆ ಬೇಕಾದಷ್ಟು ಬಟ್ಟೆ ಬರೆಗಳಿದ್ದರೂ ಬೇಕಾದಾಗ ಒಂದು ಟೈ ಸಹ ಸರಿಯಾಗಿ ಸಿಕ್ಕುವುದು ಕಷ್ಟವಾಗುತ್ತಿತ್ತು.

ಮದುವೆಯಾದ ಹೊಸತರಲ್ಲಿ, ರತ್ನನಿಗೆ ನವಪ್ರಣಯದ ಭರದಲ್ಲಿ ವಾಣಿಯ ಈ ಕುಂದುಕೊರತೆಗಳೊಂದೂ ತಿಳಿಯದಿದ್ದರೂ ದಿನಗಳು ಕಳೆದಂತೆ ಅವನಿಗೆ ‘ನನ್ನ ವಾಣಿಯು ಹೀಗೇಕೆ?’ ಎಂದಾಗದೆ ಹೋಗುತ್ತಿರಲಿಲ್ಲ. ಆದರೆ ಅವಳ ಪಶ್ಚಾತ್ತಾಪದಿಂದ ಕೂಡಿದ ಮುಖ, ತುಂಬಿದ ಕಣ್ಣುಗಳನ್ನು ನೋಡುವಾಗ ಅವನಿಗೆ ಏನನ್ನುವುದಕ್ಕೂ ತೋರದೆ ಅವಳನ್ನು ಸಂತೈಸಿ, ನಗಿಸಿ, ನಕ್ಕು ನಲಿಯುತ್ತಿದ್ದ. ಇನ್ನು ಮುಂದೆ ಹೀಗೆ ಮಾಡಬೇಡವೆಂದು ಹೇಳಿ ಸ್ವಲ್ಪ ಕೋಪಿಸಿ ವಾಣಿಗೆ ಬುದ್ಧಿ ಕಲಿಸಬೇಕೆನ್ನುವ ಅವನ ಪ್ರಯತ್ನಗಳಿಗೆಲ್ಲಾ ಇದೇ ರೀತಿಯ ಅಂತ್ಯಗಳಾಗುತ್ತಿದ್ದವು.

ದಿನ ಕಳೆದಂತೆ- ಅವರವರ ಸ್ನೇಹ ಬೆಳೆದಂತೆ ವಾಣಿಯ ಈ ತರದ ಅಲಕ್ಷತನ ಇಂದುವಿಗೆ ತಿಳಿಯದಿರಲಿಲ್ಲ. ಅವಳಿಗೆ ತಿಳಿಯದಿದ್ದರೂ ಹೀಗೇನಾದರೂ ನಡೆದಾಗಲೆಲ್ಲ ವಾಣಿ ಇಂದುವಿನೆದುರು ತಾನೇ ಹೇಳುತ್ತಿದ್ದಳು. ತನ್ನ ತಿಳಿಗೇಡಿತನವನ್ನು ಹಳಿದುಕೊಳ್ಳುತ್ತಿದ್ದಳು. ಮೊದಮೊದಲು ಇಂದು ವಣಿಯನ್ನು ಸಮಾಧಾನಪಡಿಸುತ್ತಿದ್ದಳು, ಆದರೆ ಯಾವಾಗಲೂ ಅವಳ ಪಕೃತಿಯೇ ಹೀಗೆಂದು ತಿಳಿದ ಮೇಲೆ ಮಾತ್ರ ಇಂದುವಿಗೆ ‘ರತ್ನನಂಥ ಗಂಡನನ್ನು ಪಡೆದೂ ಅವನನ್ನು ಸುಖದಲ್ಲಿಟ್ಟಿರಲಾರಳಲ್ಲಿ ಈ ವಾಣಿ!’ ಎಂದು ಆಶ್ಚರ್ಯ. ತನ್ನ ಪತಿಯಾಗಿದ್ದರೆ ತಾನು ಹೇಗೆ ನಡೆದುಕೊಳ್ಳುತ್ತಿದ್ದೆ ಎಂದು ಒಂದು ನಿಟ್ಟುಸಿರು. ಮತ್ತೆ ‘ಥೂ, ಹುಚ್ಚುಯೋಚನೆ’ ಎಂದೊಂದು ಮೋಡಮುಚ್ಚಿದನಗು.

-೩-

ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಯ ಹೊತ್ತಿನಲ್ಲಿ ಇಂದು ಅಡಿಗೆ ಮಾಡುತ್ತಿರುವಾಗ ವಾಣಿ ಬಂದಳು. ಇಂದುವಿನ ಮನೆಗೆ ವಾಣಿ ಬರುವುದಕ್ಕೆ ಸಮಯಾಸಮಯಗಳ ಕಟ್ಟುಗಳಿರಲಿಲ್ಲ. ಬೆಳಿಗ್ಗೆ ಎದ್ದಂದಿನಿಂದ ರಾತ್ರಿ ಮಲಗುವ ತನಕ ಆ ಮನೆಯಿಂದ ಈ ಮನೆಗೆ, ಈ ಮನೆಯಿಂದ ಆ ಮನೆಗೆ ಓಡಾಡುವುದು ಅವಳ ಪದ್ಧತಿ. ಅವಳು ಬಂದು ಹೋಗುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಆ ದಿನದ ವಾಣಿಯ ಬರುವು ಇಂದುವಿನ ಶಾಂತಜೀವನ ಪ್ರವಾಹವನ್ನು ಅಲ್ಲೋಲ ಕಲ್ಲೋಲ ಮಾಡಲು ಕಾರಣವಾಯ್ತು. ವಾಣಿ ಬಂದುದು ಹೆಚ್ಚಿನ ಕೆಲಸಕ್ಕೇನೂ ಅಲ್ಲ. ಸಾರಿಗೆ ಬೇಳೆ ಬೇಯಲು ಹಾಕಿ ಅದು ಬೇಯುವ ತನಕ ಸುಮ್ಮನೆ ಕೂತಿರಬೇಕೆಂದು ಇಂದುವಿನ ಮನೆಗೆ ಹರಟೆ ಹೊಡೆಯಲು ಬಂದಿದ್ದಳಷ್ಟೆ.

ಮಧ್ಯಾಹ್ನದ ಮೇಲೆ ತುಂಬಾ ಕೆಲಸವಿದ್ದ ರತ್ನ ಬೇಗನೆ ಊಟ ತೀರಿಸಿ ಹೋಗಬೇಕೆಂದು ಆ ದಿನ ಬೇಗನೆ ಮನೆಗೆ ಬಂದ. ಮನೆಯಲ್ಲಿ ವಾಣಿ ಇಲ್ಲ. ಒಂದೆರಡು ಬಾರಿ ಕೂಗಿದ. ಪತ್ಯುತ್ತರವೂ ಇಲ್ಲ. ಕೊನೆಗೆ ಹಿತ್ತಲಲ್ಲಿರಬಹುದೇನೋ ಎಂದು ಒಂದು ನೋಡುವಾಗ ಇಂದುವಿನ ಮನೆಯಿಂದ ವಾಣಿಯ ಮಾತು ಕೇಳಿಸಿತು. ಮಧ್ಯಾಹ್ನದ ವೇಳೆಯಲ್ಲಿ ಮಾಡುವ ಕೆಲಸ ಬಿಟ್ಟು ನರಮನೆಗೆ ಹೋಗಿ ಸಮಯ ಕಳೆಯುತ್ತಿರುವಳಲ್ಲ ಎಂದು ಸ್ವಲ್ಪ ಕೂಪವೂ ಬಂತು. ‘ವಾಣೀ’ ಎಂದು ಸ್ವಲ್ಪ ಗಟ್ಟಿಯಾಗಿಯೇ ಕೂಗಿದ. ಮಾತಿನ ಸಂಭ್ರಮದಲ್ಲಿ ಅವಳಿಗದು ಕೇಳಲಿಲ್ಲ. ಅವಳ ಮಾತಿನ ಗಲಾಟೆಯಲ್ಲಿ ಇಂದುವಿಗೂ ಕೇಳಿಸುವಂತಿರಲಿಲ್ಲ. ಆದುದರಿಂದ ಮಾತಿನಲ್ಲಿ ಮುಳುಗಿದ್ದ ಅವರಿಗೆ ರತ್ನ ಹಿತ್ತಲ ಬೇಲಿಯ ಹತ್ತಿರ ಬಂದು ಪುನಃ ಜೋರಾಗಿ ‘ವಾಣೀ’ ಎನ್ನುವಾಗ ತುಂಬ ಗಾಬರಿಯಾಯ್ತು. ವಾಣಿಯಂತೂ ‘ಅಯ್ಯೋ ಇಂದೂ, ಇನ್ನೂ ಅಡಿಗೆ ಆಗ್ಲಿಲ್ಲ’ ಎಂದು ಅವಸರದಿಂದ ಹೊರಗೆ ಬಂದಳು. ಇಂದುವೂ ಅವಳನ್ನು ಹಿಂಬಾಲಿಸಿ ಬಾಗಿಲ ಹತ್ತಿರ ಬರುವಾಗ ಬೇಲಿಯ ಹತ್ತಿರ ನಿಂತಿದ್ದ ದಣಿದ ರತ್ನನನ್ನು ನೋಡಿದಳು. ವಾಣಿ ‘ಎಷ್ಟೊತ್ತಾಯ್ತು ಬಂದೂ. ಈಗ್ಲೇ ಆಸ್ಪತ್ರೆಗೆ ಮತ್ತೆ ಹೋಗ್ಬೇಕೆ?’ ಎಂದು ಕೇಳುತ್ತಿದ್ದಳು. ಇಂದು ಅವಳ ಮಾತುಗಳನ್ನು ಕೇಳಿ ರತ್ನನಿಗೆ ಪುನಃ ಉಪವಾಸ ವ್ರತ ಎಂದು ತಿಳಿದುಕೊಂಡಳು. ರತ್ನನಿಗೇನೋ ಹಿಂದೆ ಅನೇಕ ಸಾರಿ ಈ ತರದ ಅನುಭವಗಳಾಗಿದ್ದರೂ ಇಂದುವಿಗೆ ಆಗಲೇ ಅದರ ಖುದ್ದಾದ ಅನುಭವ. ತಾನು ವಾಣಿಯ ಸಮಯವನ್ನು ಹಾಳು ಹರಟೆಯಲುಪಯೋಗಿಸಲು ಸಹಾಯಕಳಾದೆನಲ್ಲ ಎಂದು ಬಹಳ ಬೇಸರವೂ ಆಯ್ತು. ಬಾಗಿಲ ಸಂದಿನಿಂದ ದಣಿದ ಬೆಂಡಾಗಿದ್ದ ರತ್ನವನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಈ ಭಾವನೆಗಳು ಮೂಡುತ್ತಿದ್ದವು. ಮತ್ತೆ ಎಂದೂ ಇಲ್ಲದ ಏನೇನೋ ಯೋಚನೆಗಳು ಒಂದರ ಮೇಲೊಂದಾಗಿ ಬರತೊಡಗಿದವು. ಅವುಗಳನ್ನೇ ಹಿಂಬಾಲಿಸುವಂತೆ ನಿಡಿದಾದ ನಿಟ್ಟುಸಿರೊಂದು ಹೊರಬಿತ್ತು. ಕಣ್ಣೀರ ಕಾಲುವೆಯೊಡೆಯು ಇಷ್ಟೇ ಸಾಕಾಗಿತ್ತು. ‘ಆಯೋ ದೇವರೇ’ ಎಂದು ಉಕ್ಕುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರಸುತ್ತಾ ಒಳಗೆ ಬಂದಳು. ಅಷ್ಟು ಹೊತ್ತಿಗೆ ವಾಣಿ ರತ್ನರೂ ತಮ್ಮ ಮನೆಯ ಜಗಲಿ ತಲಪಿದ್ದರು.

-೪-

ಇಂದು ಒಳಗೆ ಬಂದಳು. ಒಂದೇ ಒಂದು ಗಳಿಗೆಯ ಹಿಂದೆ ಅವಳ ಜೀವನದಲ್ಲಿ ಶಾಂತಿಯಿತ್ತು-ಸಂತೋಷವಿತ್ತು-ಏನೋ ಒಂದು ತರದ ತೃಪ್ತಿಯೂ ಇತ್ತು. ಮತ್ತೆ ತನ್ನ ಮನೆ ಅದರ ಸೌಂದರ್ಯ ಸ್ಪಷ್ಟತೆಗಳಿಗಾಗಿ ಅಭಿಮಾನವಿತ್ತು. ಅದೇರ್ಕೋ, ಆ ಒಂದು ಗಳಿಗೆಯ ಹಿಂದಿದ್ದ ಅವಳ ಆನಂದ, ಅಭಿಮಾನ, ಶಾಂತಿ, ತೃಪ್ತಿ ಎಲ್ಲಾ ಇಂದು ಒಳಗೆ ಬರುವಾಗ ಮಾಯವಾಗಿದ್ದವು. ಬದಲಾಗಿ ಅವುಗಳ ಸ್ಥಾನವನ್ನು ಹಿಂದೆಂದೂ ಇಂದುವನ್ನು ಬಾಧಿಸದ ಪ್ರಶ್ನೆಗಳು ಬಂದು ಆವರಿಸಿದ್ದುವು. ‘ವಾಣಿಗೆ-ಯಾವುದರ ಬೆಲೆಯನ್ನೂ ಅರಿಯದ ವಾಣಿಗೆ-ಎಲ್ಲವನ್ನೂ ಕೊಟ್ಟ ದೇವರು ತನ್ನ ಜೀವನವನ್ನೇಕೆ ಅಂಧಕಾರಮಯವಾಗಿ ಮಾಡಿದ?’ ಎಂಬುದು ಎಲ್ಲದುದಕ್ಕಿಂತಲೂ ಆವಳಿಗೆ ಬಲು ಡೊಡ್ಡದದ ಪ್ರಶ್ನೆಯಾಗಿ ತೋರಿತು. ಎಷ್ಟು ಯೋಚಿಸಿದರೂ ಪ್ರತ್ಯುತ್ತರ ದೊರೆಯದ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದರಲ್ಲೇ ತಲ್ಲೀನಳಾದ ಇಂದು ಆ ದಿನ ಸಾಯಂಕಾಲ ಪುನಃ ವಾಣಿ ಬರುವ ತನಕವೂ ಕೂತಲ್ಲಿಂದ ಎದ್ದಿರಲಿಲ್ಲ. ಮಾಡಿಟ್ಟಿದ್ದ ಅಡಿಗೆಯೂ ಹಾಗೇಯೇ ಇತ್ತು.

ವಾಣಿಯ ದೀನ ಮಖಮುದ್ರೆಯನ್ನು ನೋಡಿ ಹಿಂದೆ ಮರುಕಗೊಳ್ಳುತ್ತಿದ್ದ ಇಂದುವಿಗೆ ಆ ದಿನ ಅವಳ ಅಳುಮೋರೆಯನ್ನು ನೋಡಿ ಸ್ವಲ್ಪ ಸಂತೋಷವೇ ಆಯಿತು. ದೇವರು ತನಗೊಬ್ಬಳಿಗೆಂದೇ ದುಃಖವನ್ನು ಮೀಸಲಾಗಿರಿಸಬೇಕೇಕೆ? ವಾಣಿಗೂ ಅದರ ರುಚಿ ಕೊಂಚ ಗೊತ್ತಾಗಲಿ ಎಂದು ಮನದಲ್ಲೇ ಹೇಳಿಕೊಂಡಳು. ತಾನು ಆ ರೀತಿ ಬಯಸುವುದು ಸ್ವಾರ್ಥವೆಂದೂ ತನ್ನ ದುಃಖಕ್ಕೆ ಕಾರಣಳು ವಾಣಿ ಅಲ್ಲವೆಂದೂ ಇಂದುವಿಗೆ ತಿಳಿದಿದ್ದರೂ ವಾಣಿಯ ಬಾಡಿದ ಮುಖವು ಅವಳಲ್ಲಿ ಕರುಣೆಯನ್ನು ಹುಟ್ಟಿಸಲಿಲ್ಲ. ವಾಣಿ ಅಳಳುತ್ತಾ ‘ಎಂದೂ ಏನೂ ಅನ್ನದಿದ್ದವರು ಕೋಪಿಸಿಕೊಂಡು ಹೊರಟುಹೋದರು’ ಎಂದು ಹೇಳುವಾಗ ಇಂದುವಿಗೆ ಒಂದು ತರದ ಆನಂದವೇ ಆಯ್ತು. ಆದರೆ ಮರುಕ್ಷಣದಲ್ಲಿ ಆ ರೀತಿ ಸಂತೋಷಪಡುವುದು ತಪ್ಪು ಎಂದು ಎಂದು, ಆ ತರದ ಭಾವನೆಗಳಿಗೆ ಎಡಕೊಡದಿದ್ದ ಇಂದುವಿನ ಮನವು ಎಚ್ಚರಿಸಿದಾಗ ಅವಳಿಗೇ ತನ್ನ ನೀಚಭಾವನೆಗಳಿಗಾಗಿ ನಾಚಿಕೆಯಾಯ್ತು. ಆ ಭಾವನೆಗಳಿಗೆ ಎಡ ಕೊಟ್ಟ ತಪ್ಪಿನ ಪಾಯಶ್ಚಿತ್ತ ಸ್ವರೂಪವಾಗಿ ವಾಣಿಯನ್ನು ಸಂತೈಸಿ ಅವಳ ಕೆಲಸಕ್ಕೆ ನೆರವಾದಳು.

ಎಲ್ಲ ಕೆಲಸಗಳನ್ನು ತೀರಿಸಿ ಇಂದು ತನ್ನ ಮನೆಗೆ ಹಿಂತಿರುಗುವುದೂ ರತ್ನ ತನ್ನ ಮನೆಗೆ ಬರುವದೂ ಸರಿಯಾಯ್ತು. ಅವನಿಗೂ ಮಧ್ಯಾಹ್ನದಿಂದ ನೆಮ್ಮದಿ ಇಲ್ಲ. ಎಂದೂ ವಾಣಿಯೊಡನೆ ಕೋಪಿಸಿಕೊಂಡವನಲ್ಲ. ಬಹಳ ದಿನಗಳಿಂದ ತಡೆದಿದ್ದ ಅವನ ಅಸಮಾಧಾನವು ಆ ದಿನ ಹಸಿವಿನ ಭರದಲ್ಲಿ ತಡೆಯಲಾರದೆ ಕೋಪಕ್ಕೆ ಎಡಕೊಟ್ಟಿತ್ತು. ಕೋಪ ಇಳಿಯುತ್ತ ಬಂದಂತೆ ಅವನಿಗೆ ತನ್ನ ವರ್ತನೆಗಾಗಿ ಸ್ವಲ್ಪ ನಾಚಿಕೆಯಾಯ್ತು. ವಾಣಿ ಎಷ್ಟು ನೊಂದು ಕೊಂಡಿರುವಳೋ ಎಂದು ಕ್ಲಬ್ಬಿಗೆ ಸಹ ಹೋಗದೆ ಮನೆಗೇ ನೇರವಾಗಿ ಬಂದಿದ್ದ. ಆದರೆ ಅವನಣಿಸಿದಂತೆ ವಾಣಿ ದೀಪವನ್ನು ಸಹ ಹತ್ತಿಸದೆ ಅಳುತ್ತ ಮಲಗಿರಲಿಲ್ಲ. ಅವನ ಮನೆ ಇಂದುವಿನ ಕೈವಾಡದಿಂದ ನೂತನ ರೂಪ ತಳೆದು ದೀಪದ ಬೆಳಕಿನಲ್ಲಿ ಬೆಳಗುತ್ತಿತ್ತು. ನಗುಮುಖದ ವಾಣಿ ಅವನ ಬರುವನ್ನೇ ಇದಿರು ನೋಡುತ್ತ ಅಡಿಗೆಯನ್ನು ಸಿದ್ದಪಡಿಸಿ ಕಾಯುತ್ತಿದ್ದಳು.

ಆದರೆ ಇದೆಲ್ಲಾ ನೋಡಿ ಅವನಿಗಾದ ಆಶ್ಚರ್ಯ-ಆನಂದ ಕೇವಲ ಒಂದೇ ಒಂದು ಗಳಿಗೆ ಮಾತ್ರ ವಾಣಿಯು ಬಡಿಸುತ್ತಿದ್ದ ಅಡಿಗೆಯನ್ನು ಊಟ ಮಾಡುತ್ತಿರುವಾಗಲೇ ನೆರಮನೆಯ ಇಂದುವಿನ ಕೃತಿ ಇದು ಎಂದವನಿಗೆ ತಿಳಿಯದೆ ಹೋಗಲಿಲ್ಲ. ತಿಳಿದು ಹಿಂದಿನಂತೆ ‘ನನ್ನ ವಾಣಿಯೂ ಹೀಗೆಯೇ ಕಾರ್ಯಕುಶಲೆಯಾಗಿದ್ದರೆ-’ ಎಂದೆಂದುಕೊಳ್ಳುವ ಬದಲು ತಾನೆಂದೂ ನೋಡದ ಇಂದುವಿನ ರೂಪವನ್ನು ಕಲ್ಪಿಸತೊಡಗಿದ. ಅವನನ್ನು ಮೆಚ್ಚಿಸಬೇಕೆಂದು ಆ ದಿನ ವಾಣಿಯು ಆಡಿದ ಮಾತುಗಳೆಲ್ಲಾ ಅವನಿಗೆ ಬಲು ದೂರದಿಂದ ಕೇಳಿದಂತಿದ್ದುವು. ಅವನ ಅನನ್ಯಮನಸ್ಕತೆಯನ್ನು ಕಂಡು ವಾಣಿ ‘ಬೆಳಗಿನಿಂದಲೂ ಊಟವಿಲ್ಲದೆ ಬಹಳ ದಣಿದಿರುವರು’ ಎಂದು ಮನದಲ್ಲಿಯೇ ಹಲುಬಿದಳು. ‘ಇನ್ನುಮುಂದೆಂದೂ ಹೀಗಾಗಗೊಡುವುದಿಲ್ಲ’ ಎಂದು ಪ್ರತಿಜ್ಞೆಯನ್ನು ಮಾಡಿಕೊಂಡಳು. ಹಿಂದೆಷ್ಟೋ ಸಾರಿ ವಾಣಿ ಇದೇ ರೀತಿಯ ಪ್ರತಿಜ್ಞೆಯನ್ನು ಮಾಡಿಕೊಂಡಿದ್ದರೂ ಅವುಗಳೆಂದೂ ನೇರವೇರಿರಲಿಲ್ಲ. ಆದರೆ ಈ ಸಾರಿ ದಿನಬೆಳಗಾದರೆ ಇಂದು ಕೆಲಸಕ್ಕೆ ನೆರವಾಗುತ್ತಿದ್ದುದರಿಂದ ವಾಣಿಗೆ ಪ್ರತಿಜ್ಞಾಪಾಲನೆಯು ಕಷ್ಟವಾಗಿ ತೋರಲಿಲ್ಲ. ನಿಜವಾಗಿ ನೋಡಿದರೆ ಇಂದುವೇ ಪ್ರತಿಜ್ಞೆಯನ್ನು ಪಾಲಿಸುವವಳಾಗಿದ್ದಳು.

-೫-

ಯೋಚನೆಗಳಿಗೆ ಎಡೆಕೊಡಬಾರದೆಂದು ಇಂದು ತನ್ನ ಹೆಚ್ಚಿನ ಸಮಯವನ್ನು ವಾಣಿಯ ಗೃಹಕೃತ್ಯಗಳಿಗಾಗಿ ಉಪಯೋಗಿಸತೊಡಗಿದಂದಿನಿಂದ ಅವರ ಗೃಹಕಾರ್ಯಗಳು ಸುಸೂತ್ರವಾಗಿ ನಡೆಯತೊಡಗಿದವು. ತನ್ನ ಮನೆಯಲ್ಲಾದ ಈ ಮಾರ್ಪಾಡನ್ನು ರತ್ನ ನೋಡದಿರಲಿಲ್ಲ. ನೋಡುತ್ತಿದ್ದಂತೆ ತಾನೆಂದೂ ನೋಡದಿದ್ದ ಇಂದುವಿನ ಕಾರ್ಯಕುಶಲತೆಗಾಗಿ ಅವನ ಮೆಚ್ಚಿಕೆಯೂ ಬೆಳೆಯದಿರಲಿಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಸುವ್ಯವಸ್ಥಿತ ಶಿಸ್ತಿನಲ್ಲಿಯೂ ಅವನಿಗೆ ಇಂದುವಿನ ನೆನಪಾಗುತ್ತಿತ್ತು, ಅವಳನ್ನವನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಅವಳ ಕೆಲಸಗಳನ್ನು ನೋಡಿ ಅವಳ ಚಿತ್ರವನ್ನು ಕಲಿಸಿಕೊಂಡಿದ್ದನು. ಅವನ ಆ ಕಾಲ್ಪನಿಕ ಇಂದುವು ಆದರ್ಶ ಸ್ತ್ರೀಯಾಗಿದ್ದಳು. ಸುಯೋಗ್ಯ ಗೃಹಣಿಯಾಗಲು ಬೇಕಾದ ಎಲ್ಲಾ ಗುಣಗಳೊಡನೆ ಅವಳೆಗೆ ಅಪೂರ್ವ ಸೌಂದರ್ಯ ಇತ್ತು. ಆದರೆ ಅದೇಕೊ! ಇಷ್ಟೆಲ್ಲ ಸುಂದರವಾಗಿ ಚಿತ್ರಿಸಿದ ಆ ಇಂದುವಿನ ಮೋರೆಯಲ್ಲಿ ನಗುವಿಲ್ಲ- ಅವಳ ಕಣ್ಣುಗಳಲ್ಲಿ ಹಾಸ್ಯವಿಲ್ಲ. ಬಹುಶಃ ಯಾವಾಗಲೂ ನಗುನಗುತ್ತಿರುವ ವಾಣಿಯನ್ನು ನೋಡಿಕೊಂಡಿದ್ದುದರಿಂದಲೇನೋ! ಅವಳಿಗಿಂತ ಎಲ್ಲಾ ತರದಲ್ಲೂ ಬೇರೆಯಾದ ಇಂದುವಿನ ಮುಖದಲ್ಲಿ ನಗುವಿರಬಾರದೆಂದು ಹಾಗೆ ಚಿತ್ರಿಸಿರಬಹುದು.

ಮೊದಮೊದಲು ಅವಳ ಕೆಲಸಗಳನ್ನು ಮೆಚ್ಚಿ, ಇಷ್ಟೊಂದು ಕಾರ್ಯ ಕುಶಲೆಯಾದ ಇಂದು ಹೇಗಿರಬಹುದು ಎಂದು ಒಂದು ತರದ ಕುತೂಹಲದಿಂದ ಇಂದುವಿನ ಚಿತ್ರವನ್ನು ಮನದೊಳಗೆ ಚಿತ್ರಿಸತೊಡಗಿದ್ದ ರತ್ನನಿಗೆ ಬರಬರುತ್ತ ಅವಳನ್ನು ಯಾವಾಗಲೂ ಚಿತ್ರಿಸುವುದೇ ಒಂದು ಹವ್ಯಾಸವಾಗಿ ಹೋಯ್ತು. ಒಮೊಮ್ಮೆ ತುಂಬ ಕೆಲಸದ ಮಧ್ಯದಲ್ಲೂ ಅವನಿಗೆ ಇಂದುವಿನ ಯೋಚನೆ ಬಂದುಬಿಡುತ್ತಿತ್ತು. ತಾನು ಯತ್ನಿಸದಿದ್ದರೂ ತಾವಾಗಿ ಮೂಡುವ ಅವಳ ಯೋಚನೆ, ರೂಪಗಳಿಗಾಗಿ ಅವನಿಗೆ ಆಶ್ಚರ್ಯವಾಗುತ್ತಿತ್ತು. ಇದೆಂಥಾ ಭ್ರಾಂತಿ ಎಂದು ಸ್ವಲ್ಪ ಕೋಪವೂ ಬರುತ್ತಿತ್ತು. ಆದರಿದೆಲ್ಲಾ ವಾಣಿಯ ಪ್ರತಿಜ್ಞೆಗಳಂತೆ ಒಂದು ಸ್ವಲ್ಪ ಹೊತ್ತಿಗೆ ಮಾತ್ರವಷ್ಟೆ. ಇತರರ ಅಸಾಧ್ಯ ರೋಗಗಳನ್ನು ತನ್ನ ಔಷಧಿಗಳ ಬಲದಿಂದ ವಾಸಿಮಾಡುತ್ತಿದ್ದ ರತ್ನನಿಗೆ ಕೊನೆಕೊನೆಗೆ ಇಂದುವನ್ನು ಚಿತ್ರಿಸುವ ರೋಗದಿಂದ ಪಾರಾಗಲು ಅಸಾಧ್ಯವಾಗಿ ತೋರಿತು. ಏನೇನು ಮಾಡಿದರೂ ತನ್ನ ಮನೋರಾಜ್ಯದಿಂದ ಮಾಸದ ಇಂದುವಿನ ಕಾಲ್ಪನಿಕ ರೂಪವನ್ನು ಸಂಪೂರ್ಣವಾಗಿ ಉಜ್ಜಿಬಿಡಲು ಅವನಿಗೆ ಕೊನೆಗೆ ತೋರಿದ ಒಂದೇ ಒಂದು ಉಪಾಯವೆಂದರೆ ಅವಳನ್ನು ಪ್ರತ್ಯಕ್ಷವಾಗಿ ನೋಡಿಬಿಡುವುದು. ತಾನು ಚಿತ್ರಿಸಿದಷ್ಟು ಸುಂದರವಾಗಿರದ ಅವಳನ್ನು ಸ್ವತಃ ನೋಡಿದರೆ
ತನ್ನ ಭ್ರಾಂತಿ ಮಾಸಬಹುದೆಂದು ಅವನಿಗೆ ತೋರಿತ್ತು.

ರತ್ನನಿಗೆ ಇಂದುವನ್ನು ಪ್ರತ್ಯಕ್ಷಮಾಡಿಕೊಳ್ಳುವುದೇನೂ ಕಷ್ಟದ ಮಾತಾಗಿರಲಿಲ್ಲ. ತಾನು ಮನೆಯಲ್ಲಿಲ್ಲದ ವೇಳೆಯಲ್ಲೆಲ್ಲಾ ಅವಳು ತನ್ನ ಮನೆಗೆ ಬರುವಳೆಂಬುದು ಅವನಿಗೆ ಗೊತ್ತಿದ್ದ ವಿಷಯ. ಅನಿರೀಕ್ಷಿತವಾಗಿ ತಾನು ಮನೆಗೆ ಬಂದುದಾದರೆ ಅವಳು ಕಾಣ ಸಿಕ್ಕುವಳೆಂದೂ ಅವನಿಗೆ ಗೊತ್ತು. ಅದೇ ಒಂದು ದಿನ ಸಾಯಂಕಾಲ ಮನೆಗೆ ಬರಲು ಹೊತ್ತಾಗುವುದೆಂದು ಹೇಳಿ ಹೋದವನು ಮೂರು ಗಂಟೆ ಹೊಡೆಯುವ ಮೊದಲೇ ಮನೆಗೆ ಬಂದ. ತನ್ನೆಣಿಕೆಯಂತೆ ಇಂದುವು ಮನೆಯಲ್ಲಿರುವಳೆಂದು ಬಾಗಿಲಿಗೆ ಬರುವಾಗಲೇ ಒಳಗೆ ನಡೆಯುತ್ತಿದ್ದ ಸಂಭಾಷಣೆಯಿಂದ ಅವನಿಗೆ ತಿಳಿಯಿತು. ನಿಧಾನವಾಗಿ ಒಳಗೆ ಹೋದ.

ನಡುಮನೆಯ ಮೇಜಿನ ಮೇಲೆ ಬಿದ್ದಿದ್ದ ಅವನ ಒಂದು ಮೂಟೆ ಬಟ್ಟೆಗಳನ್ನು ಇಸ್ತ್ರಿಮಾಡಿ ಮಡಿಸುತ್ತಾ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಳು ಇಂದು. ವಾಣಿ ಅದೇ ಮೇಜಿನ ಮೇಲೆ ಒಂದು ಕೊನೆಯಲ್ಲಿ ಕಾಲುಗಳನ್ನಿಳಿಬಿಟ್ಟುಕೊಂಡು ಕುಳಿತು ಮಾತಿನ ಸಂಭ್ರಮದಲ್ಲಿ ಮೈಮರೆತಿದ್ದಳು.

ಬಾಗಿಲ ಹತ್ತಿರವೇ ಐದಾರು ನಿಮಿಷಗಳಿಂದ ರತ್ನ ನಿಂತಿದ್ದರೂ ಇಬ್ಬರಿಗೂ ಅವನು ಬಂದುದು ತಿಳಿಯಲಿಲ್ಲ. ರತ್ನ ಮಾತಿನ ಮಳೆ ಸುರಿಸುತ್ತಿದ್ದ ತನ್ನ ಹೆಂಡತಿಯನ್ನೂ ಕೆಲಸದಲ್ಲಿ ಮುಳುಗಿದ್ದರೂ ಅವಳಿಗೆ ಸಮಯೋಚಿತವಾದ ಉತ್ತರಗಳನ್ನು ಹೇಳುತ್ತಿದ್ದ ಇಂದುವನ್ನೂ ಜೊತೆಯಾಗಿ ನೋಡಿದೆ. ಅವರಿಬ್ಬರೊಳಗಿನ ಅಜಗಜಾಂತರ ವ್ಯತ್ಯಾಸವನ್ನೂ ನೋಡಿ ಇಂದುವಿನ ಚಿತ್ರವನ್ನು ಸಂಪೂರ್ಣವಾಗಿ ಉಜ್ಜಿಬಿಡಬೇಕೆಂದು ಬಂದಿದ್ದವನು ಹೊಸದಾಗಿ ಚಿತ್ರಿಸತೊಡಗಿದ. ಹೌದು; ಅವನ ಕಾಲ್ಪನಿಕ ಇಂದುವಿನ ಅಪ್ರತಿಮ ಸೌಂದರ್ಯವು ನಿಜವಾದ ಇಂದುವಿಗಿಲ್ಲದಿದ್ದರೂ ಅವಳ ಕಾರ್ಯತತ್ಪರತೆಯು ಆ ಕಮ್ಮಿಯನ್ನು ತುಂಬಿ ಕೊಟ್ಟಿತ್ತು. ಐದು, ಹತ್ತು, ಹದಿನೈದು ನಿಮಿಷಗಳಾದರೂ ರತ್ನ ನಿಂತಲ್ಲಿಂದ ಕದಲಲಿಲ್ಲ. ಈ ಮಧ್ಯೆ ವಾಣಿ ಅದೇಕೋ ಬಾಗಿಲ ಕಡೆ ತಿರುಗಿದವಳು ರತ್ನನನ್ನು ನೋಡಿ ‘ಏನು ಇಷ್ಟೊಂದು ಬೇಗ? ಸಿನಿಮಾಕ್‍ಹೋಗೊದಕ್ಕೊ…’ ಎಂದು ಮೇಜಿನಿಂದ ಕೆಳಗಿಳಿದಳು. ಆಗಲೇ ಇಂದುವಿಗೂ ತನ್ನ ಬಂದುದರ ಅರಿವಾದುದು. ಅವನ ಆಕಸ್ಮಿಕ ಬರುವಿನಿಂದ ಅಪ್ರತಿಭಳಾದ ಅವಳು ಫಕ್ಕನೆ ಇಸ್ತ್ರಿ ಪೆಟ್ಟಿಗೆಯನ್ನು ಕೆಳಗಿಟ್ಟು ತಿರುಗಿದಳು. ಸರಿ, ರತ್ನನ ಚಿತ್ರದಲ್ಲಿ ಬಾಕಿ ಉಳಿದಿದ್ದ ಮುಖವೂ ಪೂರ್ಣವಾಯ್ತು.

ತಿರುಗಿದ ಇಂದು ಎವೆಯಿಕ್ಕದೆ ತನ್ನ ಮುಖ ನೋಡುತ್ತಿದ್ದ ರತ್ನನನ್ನು ನೋಡಿ, ಸಂಕೋಚದಿಂದ ಮಾಡುವ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಹಿತ್ತಲ ಬಾಗಿಲಿಗಾಗಿ ತನ್ನ ಮನೆಗೆ ನಡೆದು ಬಿಟ್ಟಳು. ರತ್ನ ಬಂದಿರುವನೆಂದೆಣಿಸಿದ ವಾಣಿ ಅವನೊಡನೆ ಪ್ರಶ್ನೆ ಕೇಳುವ ಸಂಭ್ರಮದಲ್ಲಿ ಅವಳನ್ನು ತಡೆಯಲೂ ಇಲ್ಲ.

ಮತ್ತೆ ಒಂದೂವರೆ ಗಂಟೆಯ ತರುವಾಯ ವಾಣಿ ಇಂದೂವನ್ನೂ ತಮ್ಮೊಡನೆ ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಅವಳ ಮನೆಗೆ ಹೋದಾಗ ಇಂದು ತಲೆನೋವೆಂದು ಮಲಗಿದ್ದಳು. ವಾಣಿ ‘ಸಿನಿಮಾಕ್ಕೆ ಬಾ’ ಎಂದು ಮಾಡಿದ ಬಲವಂತವೆಲ್ಲವೂ ವ್ಯರ್ಥವಾಯು. ನಿಜಕ್ಕೂ ಅವಳಿಗೆ ತಲೆನೋವಿದ್ದುದೇನೋ ಹೌದು, ಆದರೆ ಆ ತಲೆನೋವು ಬರಲು ಕಾರಣ ಬಗೆಹರಿಯದಿದ್ದೊಂದು ಸಮಸ್ಯೆ ಎಂದು ಮಾತ್ರ ವಾಣಿಗೆ ತಿಳಿಯಲಿಲ್ಲ. ತಿಳಿದಿದ್ದರವಳು ಸಿನಿಮಾಕ್ಕೆಂದು ಹೊರಟು ನಿಂತಿದ್ದ ರತ್ನನನ್ನು ಇಂದುವಿನ ಮನೆಗೆ ಕರೆತರುತ್ತಿರಲಿಲ್ಲ.

ಸಿನಿಮಾವನ್ನು ನೋಡಿಯಾದರೂ ಇಂದುವಿನ ಚಿತ್ರವು ಅಳಿಸಿಹೋಗಬಹುದೆಂದು ರತ್ನ ವಾಣಿಯ ಇಚ್ಛೆಯಂತೆ ಸಿನಿಮಾಕ್ಕೆ ಹೊರಟಿದ್ದ. ಆದರೆ ಅಷ್ಟಕ್ಕೆ ಹುಡುಗಾಟಿಕೆಯ ವಾಣಿ ಸುಮ್ಮನಾಗದೆ ಇಂದುವನ್ನೂ ಕರೆದುಕೊಂಡು ಹೋಗೋಣ ಎಂದು ರತ್ನ ನಿರೋಧಿಸುತ್ತಿದ್ದಂತೆಯೇ ಇಂದುವನ್ನು ಕರೆದುಕೊಂಡು ಬರಲು ಓಡಿದಳು. ವಾಣಿ ಹಿಂತಿರುಗುವಾಗ ಇಂದು ಅವಳ ಜೊತೆಯಲ್ಲಿಲ್ಲದುದನ್ನು ನೋಡಿ ರತ್ನನಿಗೆ ಸಮಾಧಾನವಾಯ್ತು. ಆದರೆ ವಾಣಿ ಬಂದು ‘ಇಂದುವನ್ನು ಸ್ವಲ್ಪ ನೋಡಿ ಔಷಧಿ ಮಾಡಿಕೊಡಿ’ ಎನ್ನುವಾಗ ಅವನಿಗೆ ವಾಣಿಯ ಹುಡುಗಾಟಿಕೆಗಾಗಿ ಕೋಪಬಂತು. ಸ್ವಲ್ಪ ತಲೆ ನೋವಾದ್ರೆ ಏನ್ಮಹಾ! ಒಂದು ಏಸ್ಪಿರಿನ್ ಮಾತ್ರೆ ಕೊಟ್ಟು ಬೇಗ ಬಾ – ಹೊತ್ತಾಗಿ ಹೋಗುತ್ತೆ’ ಎಂದು ಸ್ವಲ್ಪ ಒರಟಾಗಿಯೇ ಹೇಳಿದ. ಬೇರೆ ಸಮಯದಲ್ಲಾಗಿದ್ದರೆ ಇಂದುವನ್ನು ನೋಡಿ ಔಷಧಿ ಕೊಡಲು ಅವನಿಗೆ ಯಾವ ಅಭ್ಯಂತರವೂ ಇರುತ್ತಿರಲಿಲ್ಲ. ದಿನ ಬೆಳಗಾದರೆ ನೋಡುವ ಇತರ ರೋಗಿಗಳ ಗುಂಪಿಗೆ ಅವಳು ಸೇರಿಹೋಗುತ್ತಿದ್ದಳು.

ಆದರ ಆಗ, ಇಂದುವನ್ನು ಮರೆಯಬೇಕೆಂದು ಯತ್ನಿಸುತ್ತಿರುವಾಗ, ಅವಳ ಮನೆಗೆ ಹೋಗಿ ಔಷಧಿ ಮಾಡಿಕೊಡಬೇಕೆಂದು ಬಲವಂತಪಡಿಸುವ ವಾಣಿಯ ಮಾತುಗಳು ಅವನಿಗೆ ಅಸಹ್ಯವಾಗಿದ್ದವು. ಇದು ವಾಣಿಯ ಹುಡುಗಾಟಿಕೆಯ ಸರಳ ಬುದ್ದಿಗೆ ತಿಳಿಯುವುದು ಹೇಗೆ? ಒಂದೇ ಸವನೆ ಹಠಮಾಡಿ ಕೊನೆಗೂ ರತ್ನನನ್ನು ಇಂದುವಿನ ಮನೆಗೆ ಎಳೆದೊಯ್ದಳು.

ಒಂದೇ ದಿನದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಅದೂ ಅವಳ ಮನೆಯಲ್ಲೇ ರೋಗಿಯ ಅವಸ್ಥೆಯಲ್ಲಿ ಇಂದುವನ್ನು ಪುನಃ ನೋಡುವ ಪ್ರಸಂಗವು ಬರಬಹುದೆಂದು ರತ್ನ ಎಂದೂ ಯೋಚಿಸಿರಲಿಲ್ಲ. ಅದರಲ್ಲೂ ತಾನು ಇನ್ನೊಮ್ಮೆ ನೋಡುವಾಗ ಅವಳಳುವುದನ್ನು ನೋಡಬಹುದು ಎಂಬುದು ಅವನು ಕನಸಿನಲ್ಲಿ ಸಹ ಊಹಿಸದ ಮಾತು, ಹೌದು; ಇಂದು ಅಳುತ್ತಿದ್ದಳು – ಬಿಕ್ಕಿ ಬಿಕ್ಕಿ ಬಿಕ್ಕಿ ಚಿಕ್ಕ ಮಕ್ಕಳಂತೆ ಅಳುತ್ತಿದ್ದಳು. ತಲೆನೋವಿನ ಬಾಧೆಗಾಗಿ ತಾನಳುವುದಲ್ಲವೆಂದು ಗೊತ್ತಿದ್ದರೂ, ಅಳುವ ಕಾರಣವು ಏನೆಂದು ಅವಳಿಗೆ ತಿಳಿಯದಷ್ಟು ಸೂಕ್ಷ್ಮವಾಗಿತ್ತು.

ವಾಣಿ ಮೊದಲನೆಯ ಸಾರಿ ಬಂದು ಹೋದ ತರುವಾಯ ಅವಳ ಅಳು ಶುರುವಾಗಿತ್ತು. ತಾನತ್ರೂ- ಸುತ್ತಲೂ ಬಂದು ನೋಡುವವರು ಯಾರೂ ಇಲ್ಲವೆಂಬ ಧೈರ್ಯದಿಂದಲೇ ಅಳುವೂ ನಿರಾತಂಕವಾಗಿ ಸಾಗಿತ್ತು. ಅವಳೆಣಿಸಿದಂತೆ ವಾಣಿ ಸಿನಿಮಾಕ್ಕೆ ಹೋಗದೆ ರತ್ನವನ್ನು ತಮ್ಮ ಮನೆಗೆ ಕರೆದುಕೊಂಡು ಬರುವಳೆಂದು ಅವಳಿಗೆ ಹೇಗೆ ಗೊತ್ತಾಗಬೇಕು?

ಅವಳಳುವಿಗೆ ವಾಣಿ ರತ್ನ ಇಬ್ಬರಿಗೂ ತೋರಿದ ಒಂದೇ ಒಂದು ಕಾರಣ ಅವಳ ಅಸಾಧ್ಯವಾದ ತಲೆನೋವು. ಎಷ್ಟು ಅಕಸ್ಮಾತ್ತಾಗಿ ಇಂದುವಿನ ಅಳುವು ಶುರುವಾಗಿತ್ತೋ ಅಷ್ಟೇ ಬೇಗನೆ ರತ್ನ ವಾಣಿಯರನ್ನು ನೋಡಿ ನಿಂತುಹೋಯ್ತು. ಚಿಕ್ಕ ಮಕ್ಕಳಂತೆ ತಾನಳುವುದನ್ನು ಅವರು ನೋಡಿ ಬಿಟ್ಟರಲ್ಲಾ ಎಂದು ಅವಳು ಭೂಮಿಗಿಳಿದು ಹೋದಳು. ಮತ್ತೆ ತನಗೆ ಹೇಳದೆಯೇ ವಾಣಿ ರತ್ನನನ್ನು ಕರೆದುಕೊಂಡು ಬಂದಳಲ್ಲಾ ಎಂದು ಬೇರೆ. ರತ್ನನಿಗೂ ಹಾಗೆಯೇ. ಇಂದು ಅಳುತ್ತಿರುವ ಇಂದುವನ್ನು ನೋಡಿ ಮನಸ್ಸಿನ ಬೇರೆಲ್ಲಾ ಯೋಚನೆಗಳೂ ಮಾಯವಾಗಿ, ಚಿಕ್ಕಮಕ್ಕಳನ್ನು ಸಂತೈಸುವಂತೆ ಅವಳನ್ನು ಸಂತೈಸಿ ಸಮಾಧಾನಪಡಿಸಬೇಕೆಂದು ತೋರಿತು, ಆದರೆ ಪಕ್ಕದಲ್ಲೇ ನಿಂತಿದ್ದ ವಾಣಿಯೂ ಅವನ ನಾಲ್ಕಾರು ವರ್ಷಗಳ ರೋಗಿಗಳನ್ನು ನೋಡಿದ್ದ ಅಭ್ಯಾಸಬಲವೂ ಅವನನ್ನು ಬದುಕಿಸಿದವು. ಮನದೊಳಗೆ ಯೋಚನೆಗಳ ಯುದ್ಧವೇ ನಡೆಯುತ್ತಿದ್ದರೂ ಹೊರಗೆ ಗಂಭೀರವಾಗಿ ಅವಳ ತಲೆ ಮುಟ್ಟಿ ನೋಡಿದ. ಮತ್ತೆ ವಾಣಿಯ ಕಡೆ ತಿರುಗಿ ‘ಜ್ವರವೂ ಇದೆ’ ಎಂದ. ಅದಕ್ಕೆ ವಾಣಿ ‘ನೀವು ಔಷಧಿ ಮಾಡಿಕೊಟ್ಟು ಸಿನಿಮಾಕ್ಕೆ ಹೋಗಿ; ನಾನಿಲ್ಲೇ ಇರುತ್ತೇನೆ’ ಎಂದು ಇಂದುವಿನ ನಿರೋಧವನ್ನು ಮೂಲೆಗೊತ್ತಿ ಅಲ್ಲೇ ಕುಳಿತುಬಿಟ್ಟಳು. ರತ್ನ ಒಬ್ಬನೇ ಸಿನಿಮಾಕ್ಕೆ ಹೋದ. ಆದರೆ ಆ ದಿನ ರಾತ್ರಿ ವಾಣಿ ‘ನೀವು ನೋಡಿದ ಚಿತ್ರ ಯಾವುದು?’ ಎಂದು ಕೇಳಿದ್ದರೆ ಅಳುತ್ತಿದ್ದ ಇಂದುವಿನ ಮುಖ’ ಎಂದವನು ಹೇಳಬೇಕಾಗುತ್ತಿತ್ತು.

-೬-

ಅಂದಿನ ತಲೆನೋವು ಇಂದು ರತ್ನರ ಪರಿಚಯಕ್ಕೆ ಅಡಿಗಲ್ಲಾಯಿತು. ಮೊದಮೊದಲು ರತ್ನನಿದಿರು ಹೋಗಲು ನಾಚುತ್ತಿದ್ದ ಇಂದು ಈಗವನೊಡನೆ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಅವರಿಬ್ಬರೊಡನೆ ಸಿನಿಮಾಕ್ಕೆ ಹೋಗುವುದು ಸಹ ಅವಳ ಕಾರ್ಯಕ್ರಮಗಳಲ್ಲಿ ಸೇರಿಹೋಯ್ತು. ಹೀಗೆ ನೆರೆಮನೆಯ ಒಕ್ಕಲು ಬಂದು ಆರು ತಿಂಗಳು ತುಂಬುವ ಮೊದಲು ಇಂದುವಿನ ಏಕಾಂತ ಜೀವನ ಸಂಪೂರ್ಣ ಬದಲಾಯಿತು. ಬದಲಾಯಿತು ಅಷ್ಟೆ –

ಆದರಿಂದವಳಿಗೆ ಹೆಚ್ಚಿನ ಶಾಂತಿ ಯಾ ಸುಖದೊರೆಯಿತೆಂದರೆ ತಪ್ಪಾಗುವುದು. ಆ ಮನೆಗೆ ಮೊದಲು ಬಂದಾಗಿದ್ದ ತನ್ನ ಮನೆ, ತಾನು, ಸ್ವತಂತ್ರವಾಗಿ ಸುಖವಾಗಿದ್ದೇನೆ ಎಂಬ ಅಭಿಮಾನವೂ ತೃಪ್ತಿಯೂ ಈಗಿರಲಿಲ್ಲ. ಅಷ್ಟರಲ್ಲೇ ನಾನು ಸುಖವಾಗಿದ್ದೇನೆ ಇರಬಲ್ಲೆ ಎಂದಿದ್ದ ಅವಳ ಭಾವನೆಯು ವಾಣಿ ರತ್ನರ ಸಂಸಾರವನ್ನು ನೋಡಿದಂದಿನಿಂದ ತನ್ನ ಜೀವನದಲ್ಲೂ ಒಂದು ದೊಡ್ಡ ಅಭಾವವಿದೆ ಎಂಬುದನ್ನು ಕಂಡುಕೊಂಡಿತ್ತು. ಮೊದಲು ಬಲು ಅಸ್ಪಷ್ಟವಾಗಿ ಮೊಳೆತ ಈ ಭಾವನೆಯು ವಾಣಿ ರತ್ನರಲ್ಲಿ ಹೆಚ್ಚಿನ ಬಳಕೆಯಾದಂತೆಲ್ಲಾ ಚಿಗುರುತ್ತಲೇ ಇತ್ತು. ಮತ್ತೆ ರತ್ನನೂ ಸದಾ ಇವಳನ್ನು ಯೋಚಿಸುತ್ತಿದ್ದುದರಿಂಲೇನೋ! ಅವಳ ಮನವು ಇಚ್ಛೆಗೆ ವಿರೋಧವಾಗಿ ರತ್ನನ ಕಡೆ ಒಲಿಯತೊಡಗಿತ್ತು.

ಇಂದು ರತ್ನರ ಮನಸಿನಲ್ಲಿ ಒಬ್ಬರದೊಬ್ಬರಿಗೆ ತಿಳಿಯದಂತೆ ಈ ರೀತಿಯ ಭಾವನೆಗಳು ಮೂಡಿ ಮೊಳೆಯುತ್ತಿದ್ದಾಗ ವಾಣಿಗೆ ಅಕಸ್ಮಾತ್ತಾಗಿ ತೌರ ಮನೆಗೆ ಹೋಗುವ ಪ್ರಸಂಗ ಬಂದಿತು. ಬೇಸಿಗೆಯಲ್ಲಿ ಒಂದು ತಿಂಗಳು ರಜಾಪಡೆದು ಗಂಡ ಹೆಂಡಿರಿಬ್ಬರೂ ಜೊತೆಯಾಗಿ ಹೋಗುವುದೆಂದು ಮೊದಲೇ ನಿಶ್ವಯವಾಗಿತ್ತು. ಆದರೆ ಅನಿರೀಕ್ಷಿತವಾಗಿ ಅವಳ ತಾಯಿಗೆ ಖಾಯಿಲೆ ಎಂದು ಅವಳಣ್ಣ ಅವಳನ್ನು ಕರೆದುಕೊಂಡು ಹೋಗಲು ಬಂದುಬಿಟ್ಟ. ರತ್ನನಿಗೆ ಆಗ ರಜಾ ಸಿಕ್ಕುವಂತಿರಲಿಲ್ಲ. ಆದುದರಿಂದ ವಾಣಿಯೊಬ್ಬಳೇ ಅಣ್ಣನೊಡನೆ ಹೊರಟುಹೋದಳು.

ಹುಚ್ಚು ಹುಡುಗಿ! ಹೋಗುವಾಗ ಇಂದುವಿನೊಡನೆ ‘ಇಂದೂ, ಅಮ್ಮನಿಗೆ ಕಾಯಿಲೆ; ವಾಸಿಯಾದೊಡನೆಯೇ ಬಂದುಬಿಡುತ್ತೇನೆ. ನಾನು ಬರುವತನಕ ಸ್ವಲ್ಪ ನಮ್ಮನೆ ಕಡೆ ನೋಡಿಕೋ’ ಎಂದಳು. ರತ್ನನೂ ಅಲ್ಲೇ ನಿಂತಿದ್ದ. ಇಂದು ಬೇರೇನೂ ಹೇಳಲಾರದೆ ‘ಹೂಂ’ ಎಂದುದೆಷ್ಟೋ ಅಷ್ಟೇ- ಅವಳು ಹೊರಟು ಹೋದ ತರುವಾಯ ಇಂದು ಆ ಕಡೆ ಹೋಗಲಿಲ್ಲ. ಅವಳು ಸ್ವಭಾವತಃ
ಪಾಪಿಭೀರು ಸಮಾಜದ ಕಟ್ಟು ಕಟ್ಟಳೆಗಳನ್ನು ದೇವರ ನಿಯಮಗಳು ಎಂದು ತಿಳಿದು ಬೆಳೆದವಳು. ಅವಳಿಗೆ ತನ್ನೊಲವು ರತ್ನನ ಕಡೆ ತಿರುಗಿದೆ ಎಂಬುದರ ಅರಿವು ಆದಾಗಲೇ ಬಹಳ ಭಯವಾಯಿತು. ವಾಣಿ ಹೊರಟುಹೋದ ಮೇಲಂತೂ ಅವಳ ಭಯವು ಒಂದಕ್ಕೆ ಹತ್ತಾಗಿ ಬೆಳೆಯತೊಡಗಿತು. ತನ್ನ ಶಾಂತ ಜೀವನ ಪ್ರವಾಹವನ್ನು ಕಲಕಿ ಕದಡಿಸುವ ಯೋಚನೆಗಳಿಗೆ ಹೃದಯದಲ್ಲೆಡೆ ಕೊಟ್ಟೆ ಹೇಗೆ? ಏಕೆ? ಎಂಬ ಪ್ರಶ್ನೆಗಳು ಸದಾ ಅವಳನ್ನು ಬಾಧಿಸತೊಡಗಿದವು. ಆದರೆ ಈ ಯೋಚನೆಗಳ ಜೊತೆಯಲ್ಲೇ ರತ್ನನ ಮೂರ್ತಿಯೂ ಅವಳ ಹೃದಯದಲ್ಲಿ ಮೂಡಿಹೋಗಿತ್ತು. ವಾಣಿಯ ಪತಿಯನ್ನು ತಾನು ಪ್ರೀತಿಸುವುದು ಅನುಚಿತ ಎಂಬುದು ಅವಳಿಗೆ ತಿಳಿದಿದ್ದರೂ ಆ ವಿಷಯದಲ್ಲವಳು ಏನು ಮಾಡಲಾರದವಳಾಗಿದ್ದಳು. ಅವನನ್ನು ಪ್ರೀತಿಸದಿರುವುದು ಅವಳ ಶಕ್ತಿಗೆ ಮೀರಿದ ಮಾತಾಗಿತ್ತು. ತನ್ನ ಈ ಅನುಚಿತ ಪ್ರೇಮವು ರತ್ನನಿಗೆಲ್ಲಿ ತಿಳಿದು ಬಿಡುವುದೋ ಎಂಬ ಭಯದಿಂದಲೇ ಅವಳು ವಾಣಿ ಹೊರಟುಹೋದ ತರುವಾಯ ಆ ಕಡೆ ಸಹ ಹೋಗಲಿಲ್ಲ. ಹಿತ್ತಲಲ್ಲಿದ್ದ ಹೂಗಿಡಗಳ ಆರೈಕೆ ಮಾಡುವುದು ಸಹಾ ನಿಂತುಹೋಯ್ತು. ತಾನಲ್ಲಿದ್ದಾಗ ನೆರೆಮನೆಯ ಹಿತ್ತಲಲ್ಲಿ ರತ್ನನ ಭೇಟಿಯಾಗಬಹುದೆಂಬ ಭಯವೇ ಇದಕ್ಕೆ ಕಾರಣ.

ಈಗಂತೂ ಹೋಗದ ಹೊತ್ತನ್ನು ಕೊಲ್ಲುವುದಕ್ಕೆ ಇಂದುವಿಗುಳಿದ ಒಂದೇ ಒಂದು ಸಾಧನ; ಭಾವನಾ ಪ್ರಪಂಚದಲ್ಲಿ ಹಗಲು ಕನಸುಗಳನ್ನು ಹೆಣೆಯುವುದು; ಎಷ್ಟಾದರೂ ಇವೆಲ್ಲಾ ಕನಸುಗಳೇ ಎಂದು ಕೊಳ್ಳುವುದು.

ವಾಣಿ ಇದ್ದಾಗ ಪ್ರತಿದಿನ ಇಂದುವನ್ನು ನೋಡುತ್ತಿದ್ದ ರತ್ನನಿಗೆ ಈಗವರಿಬ್ಬರೂ ಜೊತೆಯಾಗಿ ಇಲ್ಲದಂತಾದುದರಿಂದ ತುಂಬಾ ಬೇಸರವಾಯ್ತು. ದಿನಾ ಇಂದು ಅವರ ಮನೆಗೆ ಹೋಗುತ್ತಿದ್ದಾಗ ಸ್ವಲ್ಪ ಸ್ವಲ್ಪವಾಗಿ ಅವನ ಹೃದಯವನ್ನಾಕ್ರಮಿಸಿದ್ದರ ಅರಿವು ಅವನಿಗಾದುದು ಅವಳು ಒಮ್ಮೆಗೇ ಆ ಕಡೆ ಹೋಗುವುದನ್ನು ನಿಲ್ಲಿಸಿದಾಗ. ಆಗ ಅವನಿಗೂ ಅವಳು ತಮ್ಮ ಮನೆಗೆ ಬರದಿರುವುದು ಒಳ್ಳೆಯದಾಯಿತು ಎಂದು ತೋರಿದರೂ ಚಪಲಮನಸ್ಸು ಮಾತ್ರ ಅವಳ ದರ್ಶನಕ್ಕೆ ತವಕಿಸುತ್ತಿತ್ತು.

ವಾಣಿ ಹೊರಟುಹೋದ ಮೇಲವನಿಗೆ ಹೋಟೆಲಿನಲ್ಲಿ ಊಟ; ಕ್ಲಬ್ಬಿನಲ್ಲಿ ವಾಸ, ಮನೆಗೆ ಬರಬೇಕಾದರೆ ಬಟ್ಟೆ ಬದಲಾಯಿಸುವುದಕ್ಕೆ ಮತ್ತೆ ರಾತ್ರಿ ನಿದ್ರೆಮಾಡುವುದಕ್ಕೆ, ಅಷ್ಟೆ. ಕ್ಲಬ್ಬಿನಿಂದ ಕೂನೆಯ ವ್ಯಕ್ತಿ ಹೋಗುವ ತನಕವೂ ಅವನಲ್ಲೇ ಇರುತ್ತಿದ್ದ. ಅತ್ತೆ ಹೋಟೆಲಿಗೆ ಹೋಗಿ ಊಟ ಮಾಡಿ ಮನೆ ತಲಪಬೇಕಾದರೆ ಹನ್ನೊಂದು ಗಂಟೆ ಹೊಡೆದು ಹೋಗುತ್ತಿತ್ತು. ಆದರೂ ಹಗಲೆಲ್ಲಾದರೂ ಮನೆಗೆ ಬಂದರೆ ಹಿತ್ತಲ ಕಡೆಹೋಗಿ ಇಂದು ಎಲ್ಲಾದರೂ ಇರುವಳೋ ಎಂದು ನೋಡುದಿರುತ್ತಿರಲಿಲ್ಲ.

ವಾಣಿ ಹೋಗಿ ಎರಡು ತಿಂಗಳುಗಳಾಗಿದ್ದರೂ ಸದ್ಯದಲ್ಲೇ ಬರುವ ಸೂಚನೆ ಏನೂ ಇರಲಿಲ್ಲ. ಒಂದು ದಿನ ಬೆಳಿಗ್ಗೆ ಇಂದು ನೀರು ಸೇದುತ್ತಿರುವಾಗ ರತ್ನ ಹಿತ್ತಲಬೇಲಿಯ ಹತ್ತಿರ ಬಂದ. ವಾಣಿ ಹೊರಟುಹೋದ ಮೇಲೆ ಅದೇ ಅವರು ಮೊದಲ ಸಾರಿ ಒಬ್ಬರನ್ನೊಬ್ಬರು ನೋಡಿದ್ದು, ಅವಳಿರುವಾಗ ನಿಸ್ಸಂಕೋಚವಾಗಿ ಮಾತಾಡಿಕೊಂಡಿದ್ದ ಅವರಿಗೆ ಆಗ ಮಾತಾಡಲು ಏನೂ ತೋರಲಿಲ್ಲ. ಆದರೂ ಇಂದು ತಾನು ಸುಮ್ಮನಿದ್ದರೆ ಮನದ ಭಾವನೆಗಳೆಲ್ಲಿ ಬಯಲಾಗುವುದೋ ಎಂಬ ಭಯದಿಂದ ‘ವಾಣಿ ಯಾವತ್ತು ಬಾರ್‍ತಳೆ?’ ಎಂದು ಕೇಳಿದಳು. ಅವಳ ಆ ಪ್ರಶ್ನೆಗೆ ಪ್ರತ್ಯತ್ತರ ಕೊಡುವ ಬದಲು ರತ್ನ ‘ಆರೋಗ್ಯವಾಗಿರುವೆಯಾ ಇಂದಿರಾ? ಇದೇನು ಇತ್ತೀಚೆಗೆ ನಿನ್ನನ್ನೂ ಕಾಣುವುದಿಲ್ಲ?’ ಎಂದು ಕೇಳಿದ.

ಅದೇ ಮೊದಲವಳು ಅವನ ಬಾಯಿಂದ ತನ್ನ ಹೆಸರನ್ನು ಕೇಳಿದ್ದು. ಇಂದಿನವರೆಗೂ ಅವಳಿಗೆ ತನ್ನ ಹೆಸರು ಅಷ್ಟೊಂದು ಸುಂದರವೆಂದು ತಿಳಿದಿರಲಿಲ್ಲ.

ರತ್ನನ ಬಾಯಿಂದ ಹೊರಟ ಮಾತ್ರಕ್ಕೆ ತನ್ನ ಹೆಸರಿನಲ್ಲಾದ ಬದಲಾವಣೆಯು ಅವಳ ಮುಖವನ್ನರಳಿಸಿತು. ಕಣ್ಣುಗಳು ಹೃದಯದ ಗುಟ್ಟುಗಳನ್ನೆಲ್ಲಾ ಹೊರಗೆಡವಿ ಅವನ ಮುಖವನ್ನು ನೋಡಿದವು, ರತ್ನನ ಕಣ್ಣಗಳೂ ಮನದ ಭಾವನೆಗಳನ್ನು ಮುಚ್ಚಿಟ್ಟುಕೊಂಡಿರಲಿಲ್ಲ. ಅವನ ಆ ನೋಟವೇ ಭೂಮಿಯಿಂದ ಮೇಲಕ್ಕೆ ಹೋಗಿದ್ದ ಇಂದುವನ್ನು ಧರೆಗಿಳಿಸಿ ಮರೆತಿದ್ದ ಕರ್ತವ್ಯವನ್ನು ಜಾಗೃತಿಗೊಳಿಸಿದ್ದು. ಮರುಕ್ಷಣ ಸೇದಿದ್ದ ನೀರನ್ನು ಸಹ ತೆಗೆದುಕೊಳ್ಳದೆ ಒಳಗೆ ಹೋಗಿಬಿಟ್ಟಳು. ರತ್ನ ಬಹಳ ಹೊತ್ತು ಅಲ್ಲೇ ನಿಂತಿದ್ದರೂ ಪುನಃ ಅವಳು ಹೊರಗೆ ಬರಲಿಲ್ಲ.

ಮರುದಿನ, ಮರುದಿನ, ಮರುದಿನವೆಂದು ಮೂರು ದಿನ ರತ್ನ ಇಂದುವನ್ನು ನಿರೀಕ್ಷಿಸಿದರೂ ಅವಳ ದರ್ಶನವಾಗಲಿಲ್ಲ. ನಾಲ್ಕನೆಯ ದಿನ ಟಪ್ಪಾಲು ಮೂಲಕ ಇಂದುವಿಗೊಂದು ಕಾಗದ ಬಂತು. ರತ್ನನ ಅಕ್ಷರಗಳ ಪರಿಚಯವಿದ್ದ ಅವಳಿಗದು ಅವನದೆಂದು ನೋಡಿದೊಡನೆಯೇ ತಿಳಿಯಿತು. ತಿಳಿದು ಬಹಳ ಹೊತ್ತು ಒಡೆಯದೆ ಅದನ್ನು ಕೈಯಲ್ಲಿ ಹಿಡಿದುಕೊಂಡು ಆಲೋಚಿಸುತ್ತ ಕುಳಿತಿದ್ದಳು. ಮತ್ತವಳು ಬಲುಹೊತ್ತಿನ ಮೇಲೆ ಅಲ್ಲಿಂದೇಳುವಾಗಲೂ ಅದು ಒಡೆಯಲ್ಪಟ್ಟಿರಲಿಲ್ಲ. ಆದರೆ ಅವಳ ಕಣ್ಣೀರಿನಿಂದ ಅಭಿಷಿಕ್ತವಾಗಿ ಒದ್ದೆಯಾಗಿ ಹೋಗಿತ್ತು. ಎದ್ದವಳು ಹಾಗೆಯೇ ಆ ಕಾಗದವನ್ನು ಹಿಡಿದುಕೊಂಡು ಅಡಿಗೆ-ಮನೆ ಹೋದಳು ಮತ್ತೊಂದು ನಿಮಿಷದಲ್ಲಿ ಒಲೆಯಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲದು ಬೂದಿಯಾಗಿ ಹೋಯ್ತು.

ಮತ್ತೊಂದು ವಾರದ ತರುವಾಯ ವಾಣಿ ತೌರಮನೆಯಿಂದ ಬಂದಳು. ಬಂದವಳು ನೇರವಾಗಿ ಇಂದುವಿನ ಮನೆಗೆ ಹೋದಳು. ಇಂದುವಿನ ಮನೆಗೆ ಬೀಗ ಹಾಕಿತ್ತು. ನೋಡಿ ವಾಣಿಯ ಆಶ್ಚರ್ಯಕ್ಕೆ ಮಿತಿಯಿಲ್ಲ! ತನ್ನವರೆಂಬವರಿಲ್ಲದ ಇಂದು ಅದಲ್ಲಿಗೆ ಹೋಗಿರಬಹುದು ಎಂದವಳಿಗೆ ಎದಿರು ಮನೆಯಲ್ಲಿ ವಿಚಾರಿಸಿದಳು. ಇಂದು ತನ್ನನ್ನು ಸಾಕಿದವರ ಮನೆಗೆ ಹೋಗಿರುವಳೆಂದು ತಿಳಿಯಿತು. ಇದನ್ನು ಕೇಳಿ ಅವಳಿಗೆ ಇನ್ನಷ್ಟು ಆಶ್ಚರ್ಯ. ತಾನೆಂದೆಂದಿಗೂ ಅವರ ಮನೆಗೆ ಹೋಗುವುದಿಲ್ಲವೆನ್ನುತ್ತಿದ್ದ ಇಂದು, ಈಗೇಕೆ ತಾನಾಗಿ ಅಲ್ಲಿ ಹೋದಳು ಎಂಬುದನ್ನು ತಿಳಿಯುವುದು ವಾಣಿಯ ಸರಳ ಶಕ್ತಿಗೆ ಮೀರಿದ ಮಾತಾಗಿತ್ತು. ಕೊನೆಗೂ ಅವಳಿಗೆ ಇಂದುವಿನ ಆಶ್ಚರ್ಯಕರವಾದ ವರ್ತನೆಯ ಕಾರಣವು ತಿಳಿಯಲಿಲ್ಲ. ತಿಳಿದಿದ್ದ ರತ್ನನೂ ಹೇಳುವ ಪ್ರಯತ್ನಕ್ಕೆ ಕೈ ಹಚ್ಚದುದರಿಂದ ಕೊನೆಯತನಕವೂ ವಾಣಿಗದು ಸಮಸ್ಯೆಯಾಗಿಯೇ ಉಳಿಯಿತು.
*****
ಜುಲೈ ೧೯೩೮

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಣ್ಣ
Next post ಸಂಸಾರ

ಸಣ್ಣ ಕತೆ

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…