ಗೋಡೆ ಗಟ್ಟಿಯಿದ್ದರೆ ಎಷ್ಟು ಬೇಕಾದರೂ
ಯಾವಾಗ ಬೇಕಾದರೂ ಬಣ್ಣ ಬಳಿಯಬಹುದು
ಅಮ್ಮನ ಬುದ್ದಿವಾದ.
ಅದೇಕೋ ಅಕ್ಕ ಅಸಹಾಯಕಳಾಗಿ ಕುಸಿದು ಕೂತಿದ್ದಾಳೆ.
ಚೊಚ್ಚಿಲ ಹೆರಿಗೆ ಶಿವನ ಪಾದ ಸೇರಿದೆ ಕಂದ.
ಹಸಿಗೋಡೆಗೆ ಬಣ್ಣ ನಿಲ್ಲದು
ಅಪ್ಪ ಆಗಾಗ ಉಚ್ಚರಿಸುತ್ತಿದ್ದ.
ಇದನ್ನು ಕೇಳಿದ ದಿನವೆಲ್ಲ
ಏರು ಯೌವನದ ಅಣ್ಣ ಕೊತಕೊತ ಕುದಿಯುವ ಎಣ್ಣೆಯಾಗುತ್ತಿದ್ದ.
ಗೋಡೆಯಾಗಬೇಡ ನನ್ನ ಮತ್ತವಳ ಮದ್ಯೆ
ಸ್ನೇಹಿತನ ಮಾತು ಕಿವಿಯಲ್ಲಿ ಪದೇ ಪದೇ
ಮಾರ್ದನಿಸುತ್ತದೆ.
ಯಾವ ಪ್ರಮಾದಕ್ಕೆ ಈ ಎಚ್ಚರಿಕೆ
ಇಂದಿಗೂ ಅರ್ಥವಾಗಿಲ್ಲ.
ಗೋಡೆಗೆ ಹಸಿಯಿರುವಾಗಲೇ
ನೀರುಕ್ಕಿಸಿದರೆ ತಾಳಿಕೆ ಬಾಳಿಕೆ.
ಹರೆಯದಲ್ಲಿ ಕಷ್ಟಗಳು ಬಲಹೆಚ್ಚಿಸುತ್ತವೆ
ಗಟ್ಟಿಮಾಡುತ್ತ ಮೀನಖಂಡಗಳ.
ಇಳಿವಯಸ್ಸಿನ ಹಿರಿಯ ಹಳಹಳಿಸಿ ನುಡಿಯುತ್ತಿದ್ದಾನೆ.
ಅಲ್ಲೆಲ್ಲ ವಿಕೃತ ಮನಸ್ಸಿನ ಕನ್ನಡಿಗಳೇ
ರಾರಾಜಿಸುತ್ತಿವೆ ಗೋಡೆ ತುಂಬಾ.
ಮೇಲಕ್ಕೆ ದೊಡ್ಡದಾಗಿ ಬರೆದಿದೆ.
ಹೆಣ್ಣುಮಕ್ಕಳ ಶೌಚಾಲಯ.
ಮೊನ್ನೆ ಮೊನ್ನೆ ಆಕೆಯ ಗಂಡ ಸತ್ತ
ಚಾವಣಿ ಹಾರಿದ ಮಣ್ಣಿನ ಗೋಡೆ
ಬಿರುಗಾಳಿ ಮಳೆಗೆ ನಾಲ್ಕೆ ದಿನದಲ್ಲಿ
ನೆಲಕಚ್ಚಿತು.
ಭದ್ರಗೋಡೆಗಳ ನಡುವೆ
ಕಿರುಬಾಗಿಲ ಸಂದಿಯಿಂದ ಇಣುಕುತ್ತಾ
ಆಕೆ ದಾರಿ ಕಾಯುತ್ತಾಳೆ.
ಆತ ಊರೂರು ಸುತ್ತುತ್ತಾ
ಹಕ್ಕಿಯಂತೆ ಸ್ವಚ್ಛಂದ.
ಗೋಡೆ ಮಾತ್ರ ಆಕೆಯ ಅಹವಾಲು ಆಲಿಸಿಕೊಳ್ಳುತ್ತದೆ
*****