ರಾ ಎಂಬುದಾಗಿತ್ತು ನಿನ್ನ ಹೆಸರು
ಹಲವು ಕಾಲದ ತನಕ ನೈಲ್ ನದಿಯ
ಆಚೀಚೆಗೆ ನೀನೊಬ್ಬನೇ ದೇವರು
ಹೊಲಗದ್ದೆ ನಿನ್ನ ದಿನದಿನದ ಉದಯ
ಅಸ್ತಮಾನಗಳಲ್ಲಿ ಅಗಿ ಫಲವತ್ತು
ತುಂಬಿದ ಕಣಜ ನಿನ್ನ ಅಪಾರ ದಯ
ನದಿನೀರು ಕೂಡ ಹಾಗೆಯೇ ಹರಿದಿತ್ತು
ಅರಿತಿದ್ದೆವು ನಾವದರ ಆಳ ಅಗಲ
ಇಳಿದ ನದಿ ಮತ್ತೆ ತುಂಬುವ ಹೊತ್ತು
ಅರಿಯದೆ ಎಂದು ಮರೆತವು ನಮ್ಮ ಮೂಲ?
ಅದು ಎಲ್ಲವನ್ನೂ ಮರೆಸುವ ಸಾರ್ವ-
ಭೌಮ ಫಾರೋಗಳಾಳಿದ ಕಾಲ
ಏರಿ ತಲೆಯೊಳಗೆ ಬೇಡದ ಗರ್ವ
ಹೊಸ ದೇವರುಗಳಲ್ಲಿ ಇಟ್ವೆವು ಭಕ್ತಿ
ಕಳೆದು ಹೋಯಿತು ಒಂದು ಪ್ರಕ್ಷುಬ ಪರ್ವ-
ಪ್ರಾರ್ಥನೆಗಷ್ಟೆ ದೊರೆಯುವುದಾದರೆ ಮುಕ್ತಿ
ರಾ! ಹಿಡಿದುಕೊ ಈ ಒಳಹೊರಗಿನ ಭುಗಿಲು
ಸುಡದಿರಲಿ ಕಾಪಾಡಬೇಕಾದ ಶಕ್ತಿ!
*****