ಸತ್ಯಾಗ್ರಹಗಳು

ಸತ್ಯಾಗ್ರಹಗಳು

ಕಿಡಿಕಿಯಿಂದ ಬೆಳಕು ತೂರಿಬಂದಿದೆ; ಬೆಳಗಾಗಿದೆ. ಆದರೆ ಸೂರ್ಯನು ಮೋಡದಲ್ಲಿ ಮರೆಯಾಗಿದ್ದಾನೆ. ಮಳೆಯೂ ಬಾರದು, ಬಿಸಿಲೂ ಬೀಳದು. ಪ್ರಕೃತಿ ಅಳುತ್ತಲೂ ಇಲ್ಲ, ನಗುತ್ತಲೂ ಇಲ್ಲ. ಹಾಸಿಗೆಯ ಮೇಲೆ ಇನ್ನೂ ಬಿದ್ದುಕೊಂಡಿದ್ದ ನಾನು ನಿದ್ದೆಯ ಮಂಪರಿನಲ್ಲಿದ್ದೆ. ಕಣ್ಣು ತೆರೆಯಲೂ ಮನಸ್ಸುಬಾರದು. ತಂದೆಯವರು ಬಾವಿಯಿಂದ ಜಳಕ ಮಾಡಿಬಂದವರು ಸಿಟ್ಟಿನಲ್ಲಿದ್ದಾರೆ.- “ಈ ಮಗ ಇನ್ನೂ ಮಲಗಿದ್ದಾನೆ. ರಾತ್ರಿಯೆಲ್ಲ ಓದುವುದು, ಈಗ ಮಲಗುವುದು. ಏನು ಚಟವೋ ಇವನದು. “ತಾಯಿ ಮೌನವಾಗಿಯೇ ಅಕಳನ್ನು ಹಿಂಡಲು ಕುಳಿತಿದ್ದಾಳೆ. ಮುಂದೆ ತಮ್ಮನೊಬ್ಬ ಆಕಳನ್ನು ಬೆನ್ನು ತುರಿಸುತ್ತ ನಿಂತಿದ್ದಾನೆ. ಆಕಳು ಜೋರಾಗಿ ಪಾತ್ರೆಯನ್ನು ಒದೆಯಿತು. ಪಾತ್ರೆಯಲ್ಲಿದ್ದ ಹಾಲೆಲ್ಲ ನೆಲದ ಪಾಲು. ಶಾಲೆಗೆ ಹೊರಟುನಿಂತ ತಂಗಿಯೊಬ್ಬಳು ತನಗೆ ಧರಿಸಲು ಒಗೆದ ಬಟ್ಟೆಗಳಿಲ್ಲವೆಂದು ಮೂಲೆಯೊಂದರಲ್ಲಿ ಮುಖ ಸಿಂಡರಿಸಿಕೊಂಡು ನಿಂತಿದ್ದಾಳೆ. ಸೆಡವಿನ ಪ್ರತಿರೂಪವೇ ಆಗಿದ್ದಾಳೆ. ಇನ್ನೊಬ್ಬ ಚಿಕ್ಕತಮ್ಮ ಏನನ್ನೋ ಬೇಡಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಾನೆ. ಇದು ನಮ್ಮ ಮನೆಯಲ್ಲಿಯ ಒಂದು ಮುಂಜಾವಿನ ದೃಶ್ಯ. ಸತ್ಯಾಗ್ರಹದ ಗಾಳಿ ಇಲ್ಲಿಯೂ ಬೀಸಿತೇನೋ.

ದೇಶದಲ್ಲೆಲ್ಲ ತೀರ ಸಾಮಾನ್ಯವಾಗಿಬಿಟ್ಟರುವ ಹರತಾಳ, ಸಂಪು, ಸತ್ಯಾಗ್ರಹ ನಮ್ಮ ಮನೆಯನ್ನು ಬಿಟ್ಟೀತೆ? ನಿಮ್ಮ ಹಕ್ಕುಗಳನ್ನು ಸಾಧಿಸಲು ಇದೊಂದೇ ಉಪಾಯ. ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇದೊಂದೇ ಮಾರ್ಗ. ನಿಮ್ಮ ಬಾಧ್ಯತೆಗಳನ್ನು ಸ್ಥಾಪಿಸಲು ಇದೊಂದೇ ರೀತಿ. ನಿಮ್ಮ ಧ್ವನಿ ಅನ್ಯರಿಗೆ ತಲುಪಿಸುವ ಸರಳ ಪದ್ಧತಿಯೆಂದರೆ ಇದೊಂದೇ ಆಗಿದೆ. ನಿಮ್ಮ ಆಸ್ತಿತ್ವದ ಆರಿವನ್ನು ಉಂಟುಮಾಡುವ ವಿಧಾನವಿದು. ಅಧಿಕಾರೀ ವರ್ಗವನ್ನು ಎಬ್ಬಿಸುವ ಗುಟ್ಟು ಸತ್ಯಾಗ್ರಹದಲ್ಲಿ ಮಾತ್ರ ಇದೆ. ಕೂಸು ತಾಯಿ ಲಕ್ಷ್ಯವನ್ನು ಸೆಳಯಲು ಕಾಲು ಹೊಸೆಯುವುದರಿಂದ ಹಿಡಿದು, ಆದೇ ಕೂಸು ಬೆಳೆದು ದೊಡ್ಡವನಾಗಿ ಮನೆಯಲ್ಲಿ ಮುನಿಸಿಗೊಂಡ ಮಾತೆಯ ಚಿತ್ರದವರಿಗೆ ಮುಂದುವರಿದಿದೆ. ನಮ್ಮ ದೈನಂದಿನ ಜೀವನದ ಚಟುವಟಿಕೆಗಳಲ್ಲೆಲ್ಲ ಸತ್ಯಾಗ್ರಹ ಹಾಸುಹೊಕ್ಕಾಗಿ ನಿಂತಿದೆ.

ಸತ್ಯಾಗ್ರಹದಲ್ಲಿ ಸತ್ಯವಿರುವುದೋ ಇಲ್ಲವೋ ನನಗೆ ತಿಳಿಯದು. ಆದರೆ ಆಗ್ರಹ ಮಾತ್ರ ಇರುವುದು ತೀರ ಸತ್ಯ. ಆಗ್ರಹ ಒಳ್ಳೆಯದೇ ಇರಬಹುದು, ಕೆಟ್ಟದ್ದೇ ಇರಬಹುದು. ಆದರೆ ಅದರಲ್ಲಿ ಸ್ಥೈರ್ಯವಿದೆ, ಜಿಗುಟುತನವಿದೆ; ಹಟವಾದಿತನವಿದೆ. ಯಾವ ಕಾರ್ಯ ಪೂರ್ತಿಗೊಳ್ಳಬೇಕಾದರೂ ಹಟ ಬೇಕೇಬೇಕು. ತಾನು ಮಾಡುವ ಕೆಲಸದಲ್ಲಿಯಂತೂ ಹಟ ಇದ್ದರೂ ನಡೆದೀತು, ಬಿಟ್ಟರೂ ಆದೀತು. ಅನ್ಯರಿಂದ ಆಗಬೇಕಾದ ಕಾರ್ಯಕ್ಕಾದರೋ ಇದು ಬೇಕೇಬೇಕು. ಬಾಯಿ ತೆಗೆಯಬೇಕಾದರೆ ಮೂಗನ್ನು ಹಿಡಿಯಬೇಕು. ಸತ್ಯಾಗ್ರಹವೆಂದರೆ ಇಂದಿನ ಅರ್ಥದಲ್ಲಿ ಸರಕಾರವೆಂಬ ಪುರುಷನ ಮೂಗನ್ನು ಹಿಡಿದು ಬಾಯನ್ನು ತೆರೆಸುವ ಒಂದು ರೀತಿ; ನಿರಂಕುಶ ಅಧಿಕಾರಕ್ಕೆ ಹಿಡಿದ ಕಡಿವಾಣ. ಸಮಾಜಚಕ್ರದ ಕೀಲನ್ನೇ ಒಂದು ಕ್ಷಣ ತಡೆದು ನಿಲ್ಲಿಸುವ ಘನಶಕ್ತಿಯನ್ನು ಸತ್ಯಾಗ್ರಹ ಪಡೆದಿದೆ.

ವಿಶ್ವಾಮಿತ್ರನ ಹಟ ನಮಗೆಲ್ಲ ತಿಳಿದ ವಿಷಯವೇ. ಅವನೊಬ್ಬ ಪ್ರಥಮ ಸತ್ಯಾಗ್ರಹಿ. ವಸಿಷ್ಠರ ಪ್ರತಿಸ್ಪತಿರ್ಧಿಯಾಗಿ ನಿಂತ ವಿಶ್ವಾಮಿತ್ರ ಮಹರ್ಷಿಯಾಗಿದ್ದೇ ಸತ್ಯಾಗ್ರಹದ ಪುಣ್ಯದಿಂದ. ವಸಿಷ್ಠರಿಂದ ಮಹರ್ಷಿ ಎನ್ನಿಸಿಕೊಳ್ಳುವವರೆಗೂ ಮುಂದುವರಿಯಿತು ವಿಶ್ವಾಮಿತ್ರನ ತಪಸ್ಸು. ತಪಸ್ಸೇನು-ಸತ್ಯಾಗ್ರಹವೇ. ಒಂದು ಸಾರೆ ತಾಳ್ಮೆತಪ್ಪಿ ವಿಶ್ವಾಮಿತ್ರನು ವಸಿಷ್ಠರ ಕೊಲೆಮಾಡಲು ಸಂಕಲ್ಪಿಸಿದನು. ಈ ರೀತಿ ಸತ್ಯಾಗ್ರಹವು ಹಿಂಸಾತ್ಮಕ ರೂಪವನ್ನು ತಾಳಬಹುದು. ಆದರೆ ಸತತವಾಗಿ ಪರಿಶ್ರಮ ಗುರಿ ಸಾಧನೆಗಾಗಿ ಪಡುವ ಸಹನೆ-ತಾಳ್ಮೆಗಳು ಮಾತ್ರ ಅನುಕರಣೀಯವಾಗಿವೆ. ಸ್ವರ್ಗದಲ್ಲಿ ಗುಲಾಮನಾಗಿರುವದಕ್ಕಿಂತ ಹೆಚ್ಚಾಗಿ ನರಕದಲ್ಲಿ ಅಧಿಪತಿಯಾಗುವೆನೆನ್ನುವ ಛಲ ವಿಶ್ವಾಮಿತ್ರನನ್ನು ಶ್ರೇಷ್ಠ ಸತ್ಯಾಗ್ರಹಿಯನ್ನಾಗಿ ಮಾಡಿತು.

ಇಂಥದೇ ಹಟವೊಂದು ಮಿಸ್ಟರ್ ಗಾಂಧಿಯವರನ್ನು ಮಹಾತ್ಮಾಗಾಂಧಿಯನ್ನಾಗಿ ಮಾಡಿತು. ದೇಶಕ್ಕೆ ಸ್ವಾತಂತ್ರ್ಯ ಸಿಗದೆ ತಾನು ವಿರಮಿಸುವುದಿಲ್ಲವೆನ್ನುವ ಹಟ ಅವರದು. ಸತ್ಯಾಗ್ರಹದ ಪ್ರಥಮ ಪ್ರಯೋಗವನ್ನು ಅವರು ಮನೆಯಲ್ಲಿಯೇ ಮಾಡಿದರು. ಮನೆ ಗೆದ್ದು ಮಾರು ಗೆಲ್ಲುವ ವಿಚಾರ ಆವರದು. ಕಸ್ತೂರಬಾ ಮಹಾತ್ಮನ ಹೆಂಡತಿಯಾಗಿ ಶ್ರೇಯೋಭಾಗಿಗಳಾದರೇನೋ ನಿಜ. ಆದರೆ ಅಷ್ಟೇ ನಿಜವಾಗಿ ಸತ್ಯಾಗ್ರಹಿಯ ಹೆಂಡತಿಯಾಗಿ ಸುಖವನ್ನು ಮಾತ್ರ ಕಾಣಲಿಲ್ಲ. ಅವರಿಗೆ ಒಂದು ಸಲ ಜಡ್ಡು ಆಯಿತು. ಉಪ್ಪಿಲ್ಲದ ಊಟದ್ದೊಂದು ಊಟವೇ. ಇದು ಕಸ್ತೂರಬಾ ಅವರ ವಾದ. ‘ಇದೋ, ನೀನು ಬಿಡದಿದ್ದರೆ ನಾನು ಬಿಟ್ಟೆ’ ಇದು ಗಾಂಧಿಯವರ ಪ್ರತಿವಾದ. ಆಮೇಲೆ ಇಡಿಯ ಜೀವನದುದ್ದಕ್ಕೂ ಗಾಂಧೀಜಿ ಉಪ್ಪು ಉಣ್ಣಲಿಲ್ಲ. ಗಾಂಧೀಜಿ ತಮ್ಮ ನಿರ್ಧಾರದಿಂದ ಸ್ಪಲ್ಪವೂ ವಿಚಲಿತರಾಗಲಿಲ್ಲ. ಆಯಿತು ಸತ್ಯಾಗ್ರಹದ ಉಗಮ. ಉಪ್ಪನ್ನು ಬಿಟ್ಟ ಈ ಸತ್ಯಾಗ್ರಹದಿಂದ ಉಪ್ಪಿನ ಸತ್ಯಾಗ್ರಹದವರೆಗೂ ಅವರ ಸಾಧನೆ ಮುಂದುವರೆಯಿತು. ಆದಕ್ಕೆಂದಾದರೂ ಕೊನೆಯುಂಟೆ?

ಗಾಂಧೀಜಿ ಸತ್ಯಾಗ್ರಹದ ಪಾಂಚಜನ್ಯ ಊದಿದರು. ಜನ ತಂಡ ತಂಡವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯದ ವೀರಸೇನಾನಿಗಳಾಗಿ ತಮ್ಮ ಕರ್ತವ್ಯ ಮಾಡಿದರು. ಗಾಂಧೀಜಿ ಕೈಕೊಂಡ ಉಪವಾಸ-ಸತ್ಯಾಗ್ರಹಗಳು ಆತ್ಮಶುದ್ದಿಗಾಗಿಯೇ ಹೊರತು ಪ್ರಚಾರಕ್ಕಾಗಿ ಮಾತ್ರ ಆಲ್ಲ, ಜನ ರೊಚ್ಚಿಗೆದ್ದು ಹಿಂಸಾತ್ಮಕ ಮಾರ್ಗವನ್ನು ಹಿಡಿಯುವ ಸಂಭವ ತೋರಿದಾಗೆಲ್ಲ ಸತ್ಯಾಗ್ರಹದ ದಾರಿಯಿಂದ ದೂರ ಸರಿಯುತ್ತಿದ್ದರು.

ಹೀಗೆಂದು ಗಾಂಧೀಜಿ ಸತ್ಯಾಗ್ರಹದ ಜನಕರೆಂದು ಹೇಳಿದರೆ ಆಪಚಾರವಾದೀತು. ಇತಿಹಾಸಕ್ಕೆ ದ್ರೋಹ ಬಗೆದಂತಾದೀತು. ಇದಕ್ಕೆ ಅವರು ಒಂದು ರೂಪವನ್ನು, ಒಂದು ಸ್ವರೂಪವನ್ನು ತಂದುಕೊಟ್ಟರು. ಇದರಲ್ಲಿ ನವಶಕ್ತಿಯ ಮಂತ್ರವನ್ನು ಊದಿದರು. ಇದಕ್ಕೂ ಮೊದಲು ಆದೆಷ್ಟು ಜನ ಹೆಂಡಂದಿರು, ಗಂಡಂದಿರ ವಿರುದ್ಧವಾಗಿ ಈ ಅಸ್ತ್ರವನ್ನು ಉಪಯೋಗಿಸಿಲ್ಲ? ಕೈಕೇಯಿ, ದಶರಥನಿಂದ ತನ್ನ ಮನೋವಾಂಛಿತವನ್ನು ಈಡೇರಿಸಿಕೊಳ್ಳಲು ಶೋಕಗೃಹ ಸೇರಿದ್ದು, ಅಸ್ತವ್ಯಸ್ತ ಕೂದಲುಬಿಟ್ಟು, ಕಂಗೆಟ್ಟ ಮುಖ ಮಾಡಿಕೊಂಡಿದ್ದು, ಅಗಸನೊಬ್ಬ ಶ್ರೀರಾಮಚಂದ್ರನನ್ನು ಕುರಿತು ಕುಹಕದ ನುಡಿ ಆಡಿದ್ದು ಇಂದಿನ ಸಾಮಾನ್ಯ ನಾಗರಿಕನೊಬ್ಬನು ಮಂತ್ರಿ ಮಾನ್ಯರ ಟೀಕೆ ಮಾಡಿದಂತೆಯೇ. ಒಟ್ಟಾರೆ ಸತ್ಯಾಗ್ರಹವೆನ್ನುವುದು ಇಂದು ಮಾತ್ರ ಕಂಡುಬರುವ ಸ್ಥಿತಿ ಅಲ್ಲ. ಅದು ಹಿಂದೆಯೂ ಇತ್ತು; ಇಂದೂ ಇದೆ.

ಅಂದು ಗಾಂಧೀಯುಗದಲ್ಲಿ ಆತ್ಮಶುದ್ಧಿಗಾಗಿ ಉಪಯೋಗಿಸಲಾಗುತ್ತಿದ್ದ ಸತ್ಯಾಗ್ರಹವಿಂದು ತೀರ ವಿಕೃತರೂಪವನ್ನು ಹೊಂದಿದೆ. ನಮ್ಮ ದೇಶದಲ್ಲಿರುವ ಜನರ ಸಂಖ್ಯೆಯಷ್ಟೇ ಸಮಸ್ಯೆಗಳ ಸಂಖ್ಯೆಯೂ ಇದೆ. ಆ ಸಮಸ್ಯೆಗಳನ್ನು ಪರಿಹರಿಸಲು ಸತ್ಯಾಗ್ರಹವನ್ನೇ ಸಿಕ್ಕಾಪಟ್ಟೆಯಾಗಿ ಬಳಸಲಾಗುತ್ತಿದೆ. ವಿದ್ಯಾರ್ಥಿಗಳಿಂದ ಹಿಡಿದು ಕಾರ್ಮಿಕರವರೆಗೆ, ನಾಲ್ಕನೇ ವರ್ಗದ ನೌಕರರಿಂದ ಹಿಡಿದು ಲಕ್ಷಾಧೀಶರವರೆಗೆ ಇದರ ಪ್ರಭಾವ ಕಂಡುಬರುತ್ತಿದೆ. ದೊಂಬಿ, ಸಂಪು, ಸಾಮೂಹಿಕ ಉಪವಾಸ, ನಿರಶನ ವ್ರತ, ಟ್ರೇನನ್ನು ನಿಲ್ಲಿಸುವುದು, ಘೇರಾಡಾಲೋ, ನೌಕರಶಾಹಿಯ ಪೂರ್ತಿ ಸಂಪು, ಹರತಾಳ, ನಗರಬಂದ್, ವಿಧಾನಸಭೆ-ಲೋಕಸಭೆಗಳಲ್ಲಿ ಸಿಕ್ಕಂತೆ ಮಾತನಾಡುವುದು ಮತ್ತು ವಾಕೌಟ್ ಮಾಡುವುದು ಇವೆಲ್ಲ ಸತ್ಯಾಗ್ರಹವೆಂಬ ಮರದ ಟಿಸಿಲು ಟೊಂಗೆಗಳು. ವಿಧ್ವಂಸಕ ಕೃತ್ಯಗಳನ್ನು ಸತ್ಯಾಗ್ರಹ ಎಂಬ ದೊಡ್ಡ ಹೆಸರಿನ ಮುಸುಕಿನಲ್ಲಿ ನಡೆಸಲಾಗುತ್ತಿದೆ. ಹಗಲು ದರೋಡೆ ಮಾಡಿಯೂ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಲೂಟಿ ಮಾಡಿಯೂ ಸತ್ಯಾಗ್ರಹಿ ಎಂಬ ಅಭಿದಾನವನ್ನು ಕಾಯಂ ಆಗಿ ಉಳಿಸಿಕೊಳ್ಳಬಹುದು. ಸ್ವತಂತ್ರ ಭಾರತದಲ್ಲಿ ತೀರ ಸಾಮಾನ್ಯವಾಗಿ ಕಂಡುಬರುವ ದೃಶ್ಯವೆಂದರೆ ಸತ್ಯಾಗ್ರಹವೇ ಆಗಿದೆ. ಇದು ನಡೆಯದ ದಿನವಿಲ್ಲ; ಸಂಭವಿಸದ ಸ್ಥಳವಿಲ್ಲ. ಉಕ್ಕಿನ ಕಾರಖಾನೆ ಇಂಥ ಸ್ಥಳದಲ್ಲೇ ಆಗಬೇಕು ಎನ್ನುವ ಬೇಡಿಕೆ ದಿಲ್ಲಿಗೆ ಮುಟ್ಟಬೇಕಾದರೆ, ಹೊಣೆಗಾರ ನಾಗರಿಕರು ಟ್ರೇನನ್ನು ನಿಲ್ಲಿಸಬೇಕು. ಪ್ರವಾಸಿಕರ ವಿತ್ತಜೀವಿತವನ್ನು ಗಂಡಾಂತರಕ್ಕೀಡು ಮಾಡುವುದು ತೀರ ಅವಶ್ಯವಾಗಿದೆ. ಇಂಥ ಶಿಕ್ಷಕರು ಬೇಕು, ಇಲ್ಲವೆ ಬೇಡ ಎನ್ನಬೇಕಾದರೂ ವಿದ್ಯಾರ್ಥಿಗಳು ಸತ್ಯಾಗ್ರಹ ಮಾಡದೆ ಇನ್ನೇನು ದಾರಿಯಿದೆ? ಇಂಥ ರಾಜ್ಯದಲ್ಲಿ ಹರಿಯುವ ನದಿ ನಮ್ಮ ನಾಡಿನಲ್ಲಿ ಏಕೆ ಹರಿಯಬಾರದೆಂದು ನಾಳೆ ಪ್ರಾದೇಶಿಕ ಅಭಿಮಾನಿಗಳಾದ ನಾಗರಿಕರು ಚಳುವಳಿ ಹೂಡಿದರೆ ಆಶ್ಚರ್ಯಪಡಬೇಕಾಗಿಲ್ಲ. ಶಾಲೆ-ಕಾಲೇಜುಗಳಲ್ಲಿ ಗಲಭೆಯೆಂಬ ತಲೆಬರಹದ ಕೆಳಗಿರುವ ವರದಿಯನ್ನು ವೃತ್ತಪತ್ರದಲ್ಲಿ ಓದಿ ನೋಡಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ಚೆನ್ನಾಗಿ ಥಳಿಸಿದರು. ಏಕೆ ಗೊತ್ತೇ? ಪರೀಕ್ಷಾ ಮಂದಿರದಲ್ಲಿ ಶಿಸ್ತನ್ನು ತರಲು ಪ್ರಯತ್ನಿಸಿದ ಶಿಸ್ತಿನ ಸೇವಕರಾದ ಶಿಕ್ಷರಿಗೆ ಸಿಕ್ಕ ಸಂಭಾವನೆಯಿದು. ಇಂದಿನ ತುಟಾಗ್ರತೆಯ ದಿನಗಳಲ್ಲಿ ಸಂಬಳ ಹೆಚ್ಚಿಸಬೇಕು ಎನ್ನುವುದು ನೌಕರರ ದಿನದ ಪಲ್ಲವಿಯಾಗಿದೆ. ತಮ್ಮನ್ನುಳಿದು ಅನ್ಯರಿಗೇನಾದರೂ ಹೆಚ್ಚಿನ ಲಾಭವಾಗಿದ್ದರೆ ಮತ್ತೆ ಸತ್ಯಾಗ್ರಹ ಪ್ರಾರಂಭವೇ. ಡಾಕ್ಟರರಿಗೆ ಸಂಬಳ ಹೆಚ್ಚಾದರೆ, ಅಷ್ಟೇ ವರ್ಷ ಕಾಲೇಜಿಗೆ ಮಣ್ಣು ಹೊತ್ತ ಇಂಜನೀಯರಿಗೆ ಏಕೆಬೇಡ-ಎನ್ನುವುದು ನ್ಯಾಯವೇ. ನಮಗೆ ಹಿಂದೀ ಬೇಡ ಎನ್ನುವ ಅಹಿಂದೀ ಪ್ರಾಂತಿಕರು ಚಿಮಣಿ ಎಣ್ಣೆಯನ್ನು ಸುರುವಿಕೊಂಡು ಸತ್ತರು ಎಂಬುದು ನಿನ್ನೆಯ ಸುದ್ದಿಯಾದರೆ, ಆಕಳನ್ನು ಕೊಲ್ಲಬಾರದೆಂದು ಕೂಗಿ ಹೇಳುವ ಆಕಳಂತಹ ಸಾಧುಗಳ ಮೇಲೆ ಗೋಳೀಬಾರು ಎಂಬುದು ಇಂದಿನ ಸುದ್ದಿ. ಈ ರೀತಿ ಸತ್ಯಾಗ್ರಹವು ಇಂದು ವಿರಾಟ್ ಸ್ವರೂಪವನ್ನು ಪಡೆದಿದೆ. ಇದರಿಂದ ಸಮಾಜದಲ್ಲಿ ಅವ್ಯವಸ್ಥೆ-ಅರಾಜಕತೆಗಳು ಉಂಟಾಗುವವಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಯೂ ಸಂಭವಿಸುತ್ತದೆ. ಇದು ಸತ್ಯಾಗ್ರಹದ ದುಷ್ಪರಿಣಾಮ.

ನಾನು ಸತ್ಯಾಗ್ರಹದ ವಿರೋಧಿಯಲ್ಲ. ಸತ್ಯಾಗ್ರಹದ ದುರುಪಯೋಗ ಮಾತ್ರ ನಿಲ್ಲಬೇಕೆನ್ನುವ ಅಭಿಪ್ರಾಯದವನು. ನಮ್ಮ ಈ ರಾಜಕೀಯ ಜೀವನದಲ್ಲಿ ಬೇರುಬಿಟ್ಟಿರುವ ಈ ಸತ್ಯಾಗ್ರದದ ಗಿಡ ಇನ್ನೂ ಎಂಥ ಕಹಿಫಲಗಳನ್ನು ಕೊಡುವದೋ. ನಾವು ಸ್ವತಂತ್ರ ರಾಷ್ಟ್ರದಲ್ಲಿಲ್ಲ; ಅತಂತ್ರವೇ ನಮ್ಮನ್ನಾಳುತ್ತಿದೆ. ಈ ಗಲಭೆ, ದಿನ ಬೆಳಗಾದರೆ ನಡೆಯುವ ಈ ವಿಧ್ವಂಸಕ ಕೃತಿ, ಈ ಹಿಂಸಾತ್ಮಕಮಾರ್ಗ, ಈ ಚೀರಾಟ ಏರಾಟ, ಈ ಉಪವಾಸದ ಅಣಕು ಪ್ರಯೋಗಗಳು ನಮ್ಮ ಅಧಃಪತನದ ಕುರುಹುಗಳಾಗಿವೆ. ಶತಶತಮಾನಗಳಿಂದ ಅನ್ಯರ ದಾಸರಾಗಿ ಬೆಳದುಬಂದ ನಮಗೆ ಸ್ವಾತಂತ್ರ್ಯದ ಸಂಪತ್ತು ಬಂದು ನಮ್ಮನ್ನು ಹೀಗೆ ಕುಣಿಸುಹತ್ತಿದೆಯೋ ಏನೋ, ಮಿತಿಮೀರಿದ ನಿಯಂತ್ರಣದ ಆಧಿಕಾರ ದಬ್ಬಾಳಿಕಗೆ ಹಾದಿ ಮಾಡಿಕೊಟ್ಟಿರುವಂತೆ, ನಿಯಂತ್ರಣವಿಲ್ಲದ ಸ್ವಾತಂತ್ರ್ಯವು ಸ್ವೇಚ್ಛಾಚಾರದಲ್ಲಿ ಪರ್ಯಾವಸಾನವಾಗುತ್ತಿದೆ. ಸತ್ಯಾಗ್ರಹದಿಂದೇನೋ ಸ್ವಾತಂತ್ರ್ಯ ಸಿಕ್ಕಿತು. ಆ ಸ್ವಾತಂತ್ರ್ಯವನ್ನು ರಕ್ಷಿಸಲು ಸತ್ಯಾಗ್ರಹವು ಯೋಗ್ಯ ಸಾಧನವಾಗಲರಿಯದು, ಇಂದು ನಮಗೆ ಬೇಕಾದುದು ಸತ್ಯನಿಷ್ಠೆಯೇ ಹೊರತು ಸತ್ಯಾಗ್ರಹವಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನಿಷ್ಟ
Next post ಸೂರ್ಯನಲ್ಲಿ ಇನ್ನೊಮ್ಮೆ

ಸಣ್ಣ ಕತೆ

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…