ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ
ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ//

ಊರಗಲದ ಫುಟ್‌ಪಾತನ್ನು
ರಸ್ತೆಯು ನುಂಗಿತಣ್ಣ
ವಿಸ್ತರಿಸಿದ ಈ ರಸ್ತೆಯನು
ಟ್ರಾಫಿಕ್ ನುಂಗಿತಣ್ಣ

ಕಿವಿಗಡಚಿಕ್ಕುವ ಹಾರನ್ನು
ಕಿವಿಯನು ತುಂಬಿತಣ್ಣ
ಆದರೂ ಚಲಿಸದ ವೆಹಿಕಲ್ಸು
ಕಣ್ಣನು ತುಂಬಿತಣ್ಣ

ಕಳೆವುದು ಎಷ್ಟು ಆಯಸ್ಸು
ಮನೆಯೊಳಗೆ ನೌಕರಿಯೊಳಗೆ
ಬೇಡವೆ ಹೇಳಿ ಸಿಂಹಪಾಲು?
ರಸ್ತೆ ಮೇಲಿನ ಪಯಣಕ್ಕೆ

ಆಗಿದೆ ನಗರ ಕಿಷ್ಕಿಂದೆ
ಆದರು ಗುಳೆ ಎದ್ದಿದೆ ಹಳ್ಳಿ
ಉಳಿದಿಹ ನಾಡಲಿ ಸ್ಮಶಾನ ಮೌನ
ಕೇಳುವರಾರಿಲ್ಲಿ?

ಮೀರುವರು ರಸ್ತೆಯ ನಿಯಮ
ಲಂಚಕೆ ತಯಾರು, ದಂಡಕ್ಕೂ
ಪರಿಹಾರ ಎಲ್ಲಿದೆ ಹೇಳಿ?
ಕಾಯ್ದೆಯಲೊ ಜಾಗೃತಿಯಲ್ಲೊ

ಬೀದಿಗೆ ಚಾಚಿದೆ ಅಂಗಡಿಯು
ಕೇಳುವರಾರಿಲ್ಲ
ಅಕ್ರಮ ಸಕ್ರಮ ದಾರಿಯಲಿ
ಫುಟ್‌ಪಾತಿಗೂ ನೆಲೆಯಿಲ್ಲ
*****