ರಂಗಣ್ಣನ ಕನಸಿನ ದಿನಗಳು – ೨೯

ರಂಗಣ್ಣನ ಕನಸಿನ ದಿನಗಳು – ೨೯

ನಿರ್ಗಮನ ಸಮಾರಂಭ

ಮಾರನೆಯ ದಿನ ಬೆಳಗ್ಗೆ ಏಳು ಗಂಟೆಗೆ ರಂಗಣ್ಣ ಕಾಫಿ ಸೇವನೆ ಮಾಡಿ ತನ್ನ ಕೊಟಡಿಗೆ ಹಿಂದಿರುಗುತ್ತಿದ್ದಾಗ ಮುಂದಿನ ಒಪ್ಪಾರದಲ್ಲಿ ಯಾರೋ ಮೇಷ್ಟ್ರು ನಿಂತಿದ್ದುದು ಆವನ ಕಣ್ಣಿಗೆ ಬಿತ್ತು. ತನಗೆ ವರ್ಗವಾಗಿರುವುದನ್ನು ತಿಳಿದು ಹಲವರು ಉಪಾಧ್ಯಾಯರು ಮನೆಯ ಹತ್ತಿರ ಬರುತ್ತಾರೆ, ಅವರಿಗೆಲ್ಲ ಸಮಾಧಾನ ಹೇಳಿ ಕಳುಹಿಸಬೇಕಾಗುತ್ತದೆ, ಅದಕ್ಕೆ ಕೊನೆಮೊದಲೇ ಕಾಣುವುದಿಲ್ಲ ಎಂದು ಸ್ವಲ್ಪ ಬೇಜಾರು ಪಟ್ಟು ಕೊಂಡು ಹೊರಕ್ಕೆ ಬಂದನು. ಅಲ್ಲಿ ನಿಂತಿದ್ದ ಮೇಷ್ಟ್ರು ಮುನಿ ಸಾಮಿ ಕೈ ಮುಗಿದನು!

‘ಏನು ಮೇಷ್ಟ್ರೆ! ಬೆಳಗ್ಗೆ ಇಷ್ಟು ಹೊತ್ತಿಗೆ ಬಂದಿದ್ದೀರಿ. ನನಗೆ ವರ್ಗವಾಗಿರುವ ಸಂಗತಿ ತಿಳಿದು ಬಂದಿದ್ದೀರಾ?’ ಎಂದು ರಂಗಣ್ಣ ಕೇಳಿದನು.

‘ಹೌದು ಸಾರ್! ಎರಡು ಬಾರಿ ನಾನು ತಮ್ಮನ್ನು ಕಾಣಬೇಕೆಂದು ಬಂದಿದ್ದೆ. ತಮ್ಮ ಸವಾರಿ ಎಲ್ಲಿಗೋ ಹೋಗಿತ್ತು. ಈ ದಿನ ಹೇಗಾದರೂ ಮಾಡಿ ತಮ್ಮನ್ನು ನೋಡಿಯೇ ಹೋಗಬೇಕೆಂದು ಬೆಳಗ್ಗೆ ಬೇಗನೇ ಬಂದಿದ್ದೇನೆ. ತಮಗೆ ವರ್ಗವಾಗಿರುವುದನ್ನು ತಿಳಿದು ನಮಗೆಲ್ಲ ಬಹಳ ವ್ಯಸನ ಆಗಿದೆ ಸಾರ್!’

‘ವರ್ಗವಾದರೆ ವ್ಯಸನ ಏತಕ್ಕೆ ಮೇಷ್ಟ್ರೇ? ಸರಕಾರಿ ನೌಕರಿಯಲ್ಲಿ ವರ್ಗಾವರ್ಗಿಗಳು ಆಗುತ್ತಲೇ ಇರುತ್ತವೆ.’

‘ತಮ್ಮಂಥ ಧಣಿಗಳು ಮುಂದೆ ಬರೋದಿಲ್ಲ ಸಾರ್!’

“ಇನ್ನೂ ಒಳ್ಳೆಯವರು ಬರುತ್ತಾರೆ ಮೇಷ್ಟ್ರೆ! ಆಲೋಚನೆ ಮಾಡಬೇಡಿ.’

`ಈಚೆಗೆ ತಾವು ನಮ್ಮ ಹಳ್ಳಿಕಡೆ ಬರಲೇ ಇಲ್ಲ ಸಾರ್! ಅಪ್ಪಣೆ ಯಾದರೆ ಇಲ್ಲೇ ಶಿಷ್ಯನ ಸೇವೆ ಸಲ್ಲಿಸೋಣ ಅ೦ತ ಬಂದಿದ್ದೇನೆ!’

ರಂಗಣ್ಣನು ನಗುತ್ತಾ, ‘ನೀವೇನೂ ಹತಾರಗಳನ್ನು ತಂದು ಕೊಂಡಿಲ್ಲವಲ್ಲ ಮೇಷ್ಟ್ರೇ!’ ಎಂದು ಹೇಳಿದನು.

‘ಎಲ್ಲಾ ಮಡಕ್ಕೊಂಡಿದ್ದೇನೆ ಸಾರ್! ಹೊರಕ್ಕೆ ಕಾಣೋದಿಲ್ಲ!’ ಎಂದು ಹೇಳಿ ಮುನಿಸಾಮಿ ಒಳಗೆ ಗೋಪ್ಯವಾಗಿದ್ದ ಕ್ರಾಪ್ ಮೆಷಿನ್ ಮತ್ತು ರೇಜರುಗಳನ್ನು ತೋರಿಸಿದನು.

ರಂಗಣ್ಣನು ನಗುತ್ತ, `ಆಗಲಿ ಮೇಷ್ಟ್ರೇ! ಕೊಟಡಿಯೊಳಕ್ಕೆ ಬನ್ನಿ, ನಿಮ್ಮ ಪರಮಾಯಿಷಿ ಸೇವೆ ನನಗೆ ಪುನಃ ಲಭ್ಯವಿಲ್ಲವಲ್ಲ ಎಂದು ನನಗೂ ಬಹಳ ವ್ಯಸನವಾಗುತ್ತದೆ’ ಎಂದು ಹೇಳಿ ಒಳ ಕೊಟಡಿಗೆ ಹೋದನು. ನೀರಮನೆಯಿಂದ ಬಿಸಿನೀರು, ಸೋಪು, ಬ್ರಷ್ ತಂದಿಟ್ಟು
ಕೊಂಡು, ಟವಲನ್ನು ಮೇಲೆ ಹಾಕಿಕೊ೦ಡು ಕುರ್ಚಿಯ ಮೇಲೆ ಕುಳಿತನು. ಮುನಿಸಾಮಿಗೆ ಆ ದಿನ ಉತ್ಸಾಹವಿರಲಿಲ್ಲ. ಪಾಪ! ಆ ಮೇಷ್ಟ್ರು ಮಧ್ಯೆ ಮಧ್ಯೆ ಕಣ್ಣೀರನ್ನೊರಸಿಕೊಳ್ಳುತ್ತ, ಕ್ರಾಪು ಕತ್ತರಿ ಸುತ್ತ, ‘ಸಾರ್! ತಾವು ಆ ದಿನ ಕೊಟ್ಟ ಸಲಹೆ ನನ್ನನ್ನು ಉದ್ಧಾರ ಮಾಡಿತು. ಈಗ ಸೆಲೂನ್ ಪಸಂದಾಗಿ ನಡೀತಿದೆ. ದಿನಕ್ಕೆ ಐದೂ ಆರೂ ರುಪಾಯಿ ಸಂಪಾದನೆ ಆಗುತ್ತಿದೆ! ಈಗ ನಮ್ಮ ಹಳ್ಳಿಲಿ ಹುಡುಗರಿಗೆ ಉದ್ದ ಜುಟ್ಟೇ ಇಲ್ಲ ಸಾರ್! ನಮ್ಮ ಸ್ಕೂಲಿನಲ್ಲಂತೂ ಹುಡುಗರಿಗೆಲ್ಲ ಕ್ರಾಪೇ! ಹೇನುಗೀನು ತುಂಬಿದ ಕೊಳಕು ಕೂದಲ ತಲೆಗಳೇ ಇಲ್ಲ! ಮಕ್ಕಳೆಲ್ಲ ಕ್ರಾಪು ಬಾಚಿಕೊಂಡು ಠೀಕಾಗಿ ಬೆಳಗ್ಗೆ ಬರುತ್ತಾರೆ. ತಾವು ಬಂದು ನೋಡಬೇಕು ಸಾರ್!’ ಎಂದು ಹೇಳಿದನು.

‘ನಾನೇನು ನೋಡುವುದು ಮೇಷ್ಟ್ರೇ! ನಿಮ್ಮ ಕೆಲಸವನ್ನು ದೇವರೇ ಮೆಚ್ಚಿಕೊಳ್ಳುತ್ತಾನೆ.’

‘ತಾವು ನನ್ನ ಗುರುಗಳು ಸಾರ್! ಗುರುಗಳು ದೇವರಿಗೆ ಸಮಾನ! ಈಗ ದೊಡ್ಡವರೆಲ್ಲ ಕ್ರಾಪಿನ ಷೋಕಿ ಕಲಿತುಬಿಟ್ಟಿದ್ದಾರೆ. ಒಂದು ವಾರದ ಹಿಂದೆ ಶ್ಯಾನುಭೋಗರು ಏನೋ ಕೆಲಸಕ್ಕೆ ಸ್ಕೂಲ ಹತ್ತಿರ ಬಂದಿದ್ದರು.

ನಾನು-ಸ್ವಾಮಿ! ಶ್ಯಾನುಭೋಗರೇ! ಹಾಗೆಯೇ ಸೆಲೂನ್ ಬಳಿ ನಡೀರಿ, ಒಂದು ಕ್ರಾಪ್ ಹೊಡೀತೇನೆ ನಿಮಗೆ-ಎಂದು ಹೇಳಿದೆ.’

`ಶ್ಯಾನುಭೋಗರಿಗೂ ಕ್ರಾಪ್ ಹೊಡೆದು ಬಿಟ್ಟರಾ ಮೇಷ್ಟ್ರೆ?’ ಎಂದು ರಂಗಣ್ಣ ನಗುತ್ತಾ ಕೇಳಿದನು.

`ಇಲ್ಲ ಸಾರ್! ಶ್ಯಾನುಭೋಗರು ನಕ್ಕು ಬಿಟ್ಟರು: ನಾನು ಮುದುಕ; ಬ್ರಾಹ್ಮಣ್ಯಕ್ಕೆ ಸ್ವಲ್ಪ ಜುಟ್ಟರಲಿ ಮುನಿಸಾಮಿ! ಮುಂದಿನ ತಲೆ ಮೊರೆಗಳೆಲ್ಲ ಬರಿ ಕ್ರಾಪಿನ ತಲೆಗಳೇ ಆಗುತ್ತವೆ. ನಾನು ಈ ವಯಸ್ಸಿನಲ್ಲಿ ಸುಧಾರಿಸಲಾರೆ-ಎಂದು ಹೇಳಿದರು ಸಾರ್!’

ಹೀಗೆ ಮಾತುಗಳನ್ನಾಡುತ್ತ ಮುನಿಸಾಮಿ ರಂಗಣ್ಣನಿಗೆ ಕ್ರಾಪು ಕತ್ತರಿಸಿ, ಕ್ಷೌರವನ್ನು ಮಾಡಿದನು. ಸ್ನಾನವಾಯಿತು. ರಂಗಣ್ಣ ಮುನಿಸಾಮಿಗೆ ಕಾಫಿಯನ್ನು ತಂದು ಕೊಟ್ಟು, ‘ತೆಗೆದುಕೊಳ್ಳಿ ಮೇಷ್ಟ್ರೆ!’ ಎಂದು ಉಪಚಾರ ಮಾಡಿ, ಅವನನ್ನು ಸಮಾಧಾನಗೊಳಿಸಿ ಕೊಟ್ಟು ಕಳಿಸಿದನು.

ಸ್ವಲ್ಪ ಹೊತ್ತಾದಮೇಲೆ ಗು೦ಡೇನಹಳ್ಳಿಯ ರಂಗಪ್ಪ ಮೇಷ್ಟ್ರು ತಲೆಹಾಕಿದನು, `ಏನು ಮೇಷ್ಟ್ರೆ! ನನಗೆ ವರ್ಗವಾಗಿದೆ. ನಾನು ನಾಳೆಯೇ ಇಲ್ಲಿಂದ ಹೊರಡಬೇಕು. ನನ್ನ ಬಟ್ಟೆ ಬರೆ ಬರಲಿಲ್ಲ! ಏನು ಮಾಡುತ್ತೀರಿ?’ ಎಂದು ರಂಗಣ್ಣ ಕೇಳಿದನು.

`ಎಲ್ಲಾ ಬಟ್ಟೆನೂ ತೊಳೆದು ಇಸ್ರಿ ಮಾಡಿ ತಂದಿದೇನೆ ಸ್ವಾಮಿ! ತಮಗೆ ವರ್ಗ ಎಂದು ಸಮಾಚಾರ ತಿಳಿಯಿತು. ನನಗೆ ಬಹಳ ವ್ಯಸನ ಆಯಿತು. ಆ ವ್ಯಸನದಲ್ಲೇ ಸ್ವಾಮಿಯವರ ಸೇವೆ ಮಾಡಿ ಬಟ್ಟೆ ತಂದಿದ್ದೇನೆ!’

`ಒಳ್ಳೆಯದು ಮೇಷ್ಟ್ರೆ! ಬಹಳ ಸಂತೋಷ, ನಿಮ್ಮ ಇಷ್ಟು ದಿನಗಳ ಸೇವೆಗೆ ಏನಾದರೂ ಪ್ರತಿಫಲ ನಾನು ಕೊಡ ಬೇಕು.’

‘ನನಗೇಕ ಸ್ವಾಮಿ ಪ್ರತಿಫಲ! ನಾನೇನೂ ತೆಗೆದುಕೊಳ್ಳೋದಿಲ್ಲ! ನಮಗೆಲ್ಲ ತಿಳಿವಳಿಕೆ ಕೊಟ್ಟು ಕಾಪಾಡಿಕೊಂಡು ಬಂದಿರಿ. ತಾವು ಇನ್‌ಸ್ಪೆಕ್ಟರು, ನಾವು ತಾಪೇದಾರರು ಎಂಬುವ ವ್ಯತ್ಯಾಸವೇ ಕಾಣಲಿಲ್ಲ. ಅಷ್ಟೊಂದು ಸಲಿಗೆಯಿಂದ ಅಣ್ಣ ತಮ್ಮಂದಿರಂತೆ ತಾವು ನಡೆಸಿಕೊಂಡು ಬಂದಿರಿ ಸ್ವಾಮಿ!’

ರಂಗಣ್ಣನು ಆ ಮೇಷ್ಟರಿಗೂ ಕಾಫಿ ತಂದು ಕೊಟ್ಟು ಉಪಚಾರ ಮಾಡಿ ಕಳಿಸಿದನು. ಆಮೇಲೆ ಬೊಮ್ಮನಹಳ್ಳಿಯಿಂದ ಹೆಡ್ ಮೇಷ್ಟ್ರು ವೆಂಕಟ ಸುಬ್ಬಯ್ಯ ಮತ್ತು ಮೇಷ್ಟ್ರು ವೆಂಕಣ್ಣ ಬಂದರು. ಮೇಷ್ಟ್ರು ವೆಂಕಣ್ಣನಿಗೆ ತಿಪ್ಪೇನಹಳ್ಳಿಯಿಂದ ಬೊಮ್ಮನಹಳ್ಳಿಗೆ ವರ್ಗವಾಗಿತ್ತು.

`ವೆಂಕಟಸುಬ್ಬಯ್ಯ! ನಿಮ್ಮ ಕಾಗದ ಬಂದು ಸೇರಿತು. ಸದ್ಯ ನಿಮ್ಮ ಹಿರಿಯ ಅಳಿಯ ವಾಪಸು ಬಂದು ನಿಮ್ಮನ್ನು ಸೇರಿದನಲ್ಲ! ನನಗೆ ಬಹಳ ಸಂತೋಷ’ ಎಂದು ರಂಗಣ್ಣ ಹೇಳಿದನು.

`ದೇವರ ದಯೆಯಿಂದ, ತಮ್ಮ ಆಶೀರ್ವಾದಫಲದಿಂದ ಬಂದು ಸೇರಿದ್ದಾನೆ ಸ್ವಾಮಿ! ತಮಗೆ ಖುದ್ದಾಗಿ ವರ್ತಮಾನ ತಿಳಿಸೋಣವೆಂದು ಹಿಂದೆ ಬಂದಿದ್ದೆ. ಸ್ವಾಮಿ ಯವರ ಸವಾರಿ ಆಗ ಬೆಂಗಳೂರಿಗೆ ಹೋಗಿತ್ತು. ಅದರಮೇಲೆ ತಮಗೆ ಕಾಗದ ಬರೆದೆ.’

`ವಾಪಸು ಬರುವುದಕ್ಕೆ ಕಾರಣ? ಅಳಿಯನಿಗೆ ಬುದ್ದಿ ಬಂದಿರ ಬೇಕಲ್ಲವೆ?’

`ಸ್ವಾಮಿ! ಆ ನಾಟಕದ ಕಂಪೆನಿ ಪಾಪರ್‌ ಎದ್ದೊಯ್ತು! ಅಲ್ಲಿ ಸೇರಿಕೊಂಡಿದ್ದವರು ಚೆದರಿ ಹೋದರು. ನಮ್ಮವನಿಗೆ ಕೂಳಿಗೆ ಮಾರ್ಗ ಕಾಣಲಿಲ್ಲ! ಆ ಕಾಲಕ್ಕೆ ದೇವರೂ ಅವನಿಗೆ ಒಳ್ಳೆಯ ಬುದ್ದಿ ಕೊಟ್ಟ ಸ್ವಾಮಿ! ಒ೦ದು ದಿನ ಸಾಯಂಕಾಲ ಇದ್ದಕ್ಕಿದ್ದ ಹಾಗೆ ನಮ್ಮ ಮನೆಗೆ ಬಂದ! ನಮಗೆಲ್ಲ ಬಹಳ ಹೆದರಿಕೆಯಾಯಿತು. ಏನು ಅವಾಂತರ ಮಾಡುತ್ತಾನೋ ಎಂದು ಇದ್ದೆವು. ದೇವರ ದಯೆ ಸ್ವಾಮಿ! ಅಳಿಯ ವಿಹಿತವಾಗಿ ನಡೆದುಕೊಳ್ಳುತ್ತಿದ್ದಾನೆ. ಬೆಳಗ್ಗೆ ಹೊಲ ಗದ್ದೆಗಳ ಕಡೆಗೆ ಹೋಗಿ ನೋಡಿಕೊಂಡು ಬರುತ್ತಿದ್ದಾನೆ.’

`ಜಮೀನು ವಿಚಾರ, ಹಣದ ವಿಚಾರ ಪ್ರಸ್ತಾಪ ಮಾಡಿದನೋ?’

`ಇಲ್ಲ ಸ್ವಾಮಿ! ತನ್ನ ಪಾಡಿಗೆ ತಾನಿದ್ದಾನೆ. ತನ್ನ ಹೆಂಡತಿ ಹತ್ತಿರ ತನ್ನ ಕಥೆಯನ್ನೆಲ್ಲ ತಿಳಿಸಿ- ಈಗ ನನಗೆ ಬುದ್ದಿ ಬಂತು. ಇನ್ನು ಮೇಲೆ ಒಂದು ಕಡೆ ನೆಲೆಯಾಗಿ ನಿಲ್ಲುತ್ತೇನೆ. ನಿನ್ನ ತಂದೆಗೆ ಸಹಾಯ ಮಾಡಿಕೊಂಡು ಇರುತ್ತೇನೆ ಎಂದು ಮುಂತಾಗಿ ಹೇಳಿದನಂತೆ. ಆ ಹುಡುಗಿ ಎಲ್ಲವನ್ನೂ ತಿಳಿಸಿದಳು, ಅಳಿಯನ ಮೇಲೆ ನಮಗೇನು ವೈರವೇ ಸ್ವಾಮಿ? ಕರುಳು ಕೊಯ್ದು ಅವನಿಗೆ ಒಪ್ಪಿಸಿದ ಮೇಲೆ ಅವನ ಹಿತವನ್ನು ನಾವು ಬಯಸುವುದಿಲ್ಲವೇ?’

`ಬಹಳ ಸಂತೋಷ ವೆಂಕಟಸುಬ್ಬಯ್ಯ!’

‘ಸ್ವಾಮಿಯವರು ಬೊಮ್ಮನಹಳ್ಳಿಗೆ ಒಪ್ಪೊತ್ತು ಬಂದಿದ್ದರೆ ಆಗಿತ್ತು.’

`ಈಗ ವಿರಾಮವೇ ಇಲ್ಲ. ನಾಳೆಯೇ ಇಲ್ಲಿಂದ ಪ್ರಯಾಣ. ಮಿಡಲ್ ಸ್ಕೂಲ್ ಹೆಡ್ಮಾಸ್ಟರಿಗೆ ಚಾರ್ಜು ಕೊಟ್ಟು ಹೊರಟು ಬಿಡುತ್ತೇನೆ. ಮುಖ್ಯವಾಗಿ ನಿಮ್ಮ ವಿಶ್ವಾಸ ದೊಡ್ಡದು ವೆಂಕಟ ಸುಬ್ಬಯ್ಯ!’

ಬಳಿಕ ರಂಗಣ್ಣ ಎದುರಿಗಿದ್ದ ವೆಂಕಣ್ಣ ಮೇಷ್ಟರ ಕಡೆಗೆ ತಿರುಗಿ ಕೊಂಡು,

`ಏನು ಮೇಷ್ಟ್ರೆ! ತಿಪ್ಪೇನಹಳ್ಳಿಯಿಂದ ಬೊಮ್ಮನಹಳ್ಳಿಗೆ ಬಂದದ್ದು ಅನುಕೂಲವಾಗಿದೆಯೆ?’ ಎಂದು ಕೇಳಿದನು.

`ಬಹಳ ಅನುಕೂಲವಾಗಿದೆ ಸ್ವಾಮಿ! ಹೆಡ್‌ಮೇಷ್ಟ್ರು ವೆಂಕಟ ಸುಬ್ಬಯ್ಯನವರ ಆಶ್ರಯದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಮನೆಯಲ್ಲಿ ನನ್ನ ಅಕ್ಕ ಇದ್ದಾಳೆ. ಮಕ್ಕಳ ಆರೈಕೆಯನ್ನು ಬಹಳ ಪ್ರೀತಿಯಿಂದ ಮಾಡುತ್ತಿದ್ದಾಳೆ. ಈಗ ನಿಶ್ಚಿಂತೆಯಾಗಿ ಸಂತೋಷದಿಂದ ಇದ್ದೆನೆ ಸ್ವಾಮಿ!

`ಈಗ ಎಲ್ಲವೂ ತಹಬಂದಿಗೆ ಬಂತಲ್ಲ! ಮದುವೆ ಮಾಡಿಕೊಳ್ಳುವ ಏರ್ಪಾಡು ಏನು?’

`ಅಯ್ಯೋ! ರಾಮ ರಾಮ! ಆ ಮಾತನ್ನು ಆಡಬೇಡಿ ಸ್ವಾಮಿ! ನಾನು ದೃಢ ಸಂಕಲ್ಪ ಮಾಡಿಬಿಟ್ಟಿದ್ದೇನೆ ಆಕೆಗೆ ನಾನು ವಂಚನೆ ಮಾಡೋದಿಲ್ಲ! ನನ್ನ ಮಕ್ಕಳಿಗೆ ನಾನು ಮೋಸ ಮಾಡೋದಿಲ್ಲ!’

`ಮತ್ತೆ ಸುಖಪಡಬೇಕು ಎಂಬುವ ಆಸೆ ಇಲ್ಲವೇ ಮೇಷ್ಟ್ರೆ?’

`ಸಂಸಾರ ಸುಖ ತೃಪ್ತಿ ಆಗೋಯ್ತು ಸ್ವಾಮಿ! ಮತ್ತೆ ಅಲ್ಲಿ ಏನಿದೆ ಹೊಸದಾಗಿ ಸುಖಪಡೋದು? ಬರೀ ಸ್ವಾರ್ಥಕ್ಕಾಗಿ ಮದುವೆ ಮಾಡಿ ಕೊಳ್ಳಬೇಕೇ? ನನಗೆ ಬೇಡ ಸ್ವಾಮಿ! ಇನ್ನೊ೦ದು ಹೆಂಡತಿ ಎಂದರೆ ಮೊದಲ ಹೆಂಡತಿಯ ಮಕ್ಕಳಿಗೆ ವನವಾಸ ತಲೆಗೆ ಕಟ್ಟಿದ್ದು! ಸುರುಚಿ ಯಿಂದ ಐದು ವರ್ಷದ ಮಗು ಧ್ರುವನಿಗೆ ವನವಾಸವಾಯಿತು! ಕೈಕೇಯಿ ಯಿಂದ ರಾಮ ಲಕ್ಷ್ಮಣರು ಕಾಡು ಪಾಲಾದರಲ್ಲ! ಮಕ್ಕಳ ಹಿತಕ್ಕಾಗಿ ಸ್ವಾರ್ಥ, ಕಾಮ ಬಿಡಬೇಕು. ನಾನು ಬಿಟ್ಟು ಬಿಟ್ಟೆ ಸ್ವಾಮಿ! ಈಗ ನನ್ನ ಮಕ್ಕಳನ್ನು ನೋಡುತ್ತಿದ್ದರೆ ನನಗೆ ಎಷ್ಟೋ ಸುಖ! ಎಷ್ಟೋ ಸಂತೋಷ! ಬಡತನದ ದುಃಖ ಕಾಣುವುದಿಲ್ಲ. ದೃಢ ಸಂಕಲ್ಪ ಮಾಡಿದ್ದೇನೆ ಸ್ವಾಮಿ!’

`ಮೇಷ್ಟ್ರೇ! ನಿಮ್ಮ ವೀರವ್ರತವನ್ನು ಮೆಚ್ಚಿದೆ! ಲೋಕದಲ್ಲಿ ನಿಮ್ಮಂಥವರು ಅತಿ ವಿರಳ’ ಎಂದು ಹೇಳುತ್ತಾ ರಂಗಣ್ಣನು ಎದ್ದು ಹೋಗಿ ಆ ಇಬ್ಬರು ಮೇಷ್ಟರಿಗೂ ಕಾಫಿ ತಂದುಕೊಟ್ಟನು. ಆದರೆ ಅವರು ಕಾಫಿ ತೆಗೆದು ಕೊಳ್ಳಲಿಲ್ಲ. ‘ನಾನು ದೇವತಾರ್ಚನೆ ಮಾಡದೆ ಏನನ್ನೂ ತೆಗೆದು ಕೊಳ್ಳುವುದಿಲ್ಲ ಸ್ವಾಮಿ! ತಮಗೆ ತಿಳಿದಿದೆಯಲ್ಲ’ ಎಂದು ವೆಂಕಟ ಸುಬ್ಬಯ್ಯ ಹೇಳಿದನು. ‘ನಾನು ಬಡವ ಸ್ವಾಮಿ! ಕಾಫಿ ಅಭ್ಯಾಸ ಇಟ್ಟು ಕೊಂಡಿಲ್ಲ. ಈ ಕಾಫಿಯಿಂದ ಎಷ್ಟೋ ಸಂಸಾರಗಳು ಕಷ್ಟಕ್ಕೆ ಈಡಾಗಿವೆ. ಬರುವ ಸಂಪಾದನೆಯಲ್ಲಿ ಅರ್ಧವೆಲ್ಲ ಆದಕ್ಕೇನೆ ಖರ್ಚಾಗಿ ಹೋಗುತ್ತದೆ. ಕೆಲವರ ಮನೆಗಳಲ್ಲಿ ಹಾಲೂ ಮೊಸರಿಗೆ ಅಭಾವ; ಕಾಫಿ ನೀರಿನ ಕುಡಿತ ಮಾತ್ರ ತಪ್ಪಿದ್ದಲ್ಲ’ ಎಂದು ಮೇಷ್ಟ್ರು ವೆಂಕಣ್ಣ ಹೇಳಿದನು.

`ಹಾಗಾದರೆ, ವೆಂಕಟಸುಬ್ಬಯ್ಯ! ಇಲ್ಲೇ ಸ್ನಾನ ಮಾಡಿ, ಮಡಿ ಉಟ್ಟು ಕೊಂಡು ನಮ್ಮ ಮನೆಯಲ್ಲೇ ದೇವತಾರ್ಚನೆ ಮಾಡಿ; ಇಲ್ಲೇ ಊಟಮಾಡಿ. ವೆಂಕಣ್ಣ! ನೀವೂ ಇಲ್ಲಿಯ ಊಟಕ್ಕೆ ನಿಲ್ಲಿ’ ಎಂದು ರಂಗಣ್ಣ ಹೇಳಿದನು.

`ಆಗಬಹುದು ಸ್ವಾಮಿ!’ ಎಂದು ಅವರು ಹೇಳಿದರು.

ಹೀಗೆ ಇಬ್ಬರು ಮೇಷ್ಟರುಗಳು ಊಟಕ್ಕೆ ಬರುತ್ತಾರೆಂಬ ಸಮಾಚಾರವನ್ನು ತಿಳಿಸುವುದಕ್ಕಾಗಿ ರಂಗಣ್ಣ ಅಡಿಗೆಯ ಮನೆಗೆ ಹೋದನು.

ಅಲ್ಲಿ ನೋಡಿದರೆ ಸೀತಮ್ಮನವರು ಒಂದು ಸಣ್ಣ ಬುಟ್ಟಿಯನ್ನು ಪಕ್ಕದಲ್ಲಿಟ್ಟು ಕೊಂಡು ತನ್ನ ಹೆಂಡತಿಯೊಡನೆ ಮಾತನಾಡುತ್ತ ಕುಳಿತಿದ್ದುದು ಕಂಡು ಬಂತು. ತನ್ನ ಹೆಂಡತಿಯ ಮುಂದುಗಡೆ ಒಂದು ಬೆಳ್ಳಿಯ ತಟ್ಟೆಯಲ್ಲಿ ನಾಲ್ಕು ಕೋಡ ಬಳೆಗಳು ಇದ್ದುವು. ಇನ್ಸ್ಪೆಕ್ಟರ್ ಸಾಹೇಬರನ್ನು ಕಂಡು ಸೀತಮ್ಮ ಸಂಭ್ರಮದಿಂದ ಎದ್ದು ನಮಸ್ಕಾರ ಮಾಡಿದಳು. ರಂಗಣ್ಣನ ಹೆಂಡತಿ ಗಂಡನಿಗೆ ಒಂದು ಮಣೆ ಹಾಕಿ, ಸ್ವಲ್ಪ ಕುಳಿತು ಕೊಳ್ಳಿ. ಸೀತಮ್ಮನವರು ನಿಮಗಾಗಿ ಕೊಡ ಬಳೆ ಮಾಡಿಕೊಂಡು ಬುಟ್ಟಿಯಲ್ಲಿ ತಂದಿದ್ದಾರೆ. ಎರಡನ್ನು ಬಾಯಿಗೆ ಹಾಕಿಕೊಳ್ಳಿ. ಆಕೆಗೆ ಸಂತೋಷವಾಗುತ್ತದೆ’ ಎಂದು ಹೇಳಿದಳು.

ರಂಗಣ್ಣ ಕುಳಿತುಕೊಂಡು, ಒಂದು ಕೋಡಬಳೆಯನ್ನು ಮೂಸಿ ನೋಡಿ ಸ್ವಲ್ಪ ಮುರಿಯಲು ಪ್ರಯತ್ನಪಟ್ಟನು. ಸೀತಮ್ಮ, ‘ಸ್ವಲ್ಪವೂ ಎಣ್ಣೆ ಸೋಕಿಸಿಲ್ಲ! ಅಪ್ಪಟ ತುಪ್ಪದಲ್ಲೇ ಕರದಿದ್ದೇನೆ! ಕೊಬ್ಬರಿಯ ತುರಿ ಹೆಚ್ಚಾಗಿ ಬಿದ್ದಿದೆ; ಅದರ ವಾಸನೆ ಸ್ವಲ್ಪ ಬರಬಹುದು’ ಎಂದು ಹೇಳಿದಳು.

‘ಇದನ್ನೆಲ್ಲ ಮಾಡಿ ಕೊಂಡು ಹನ್ನೆರಡು ಮೈಲಿಯಿಂದ ಏಕೆ ಬಂದಿರಿ ಸೀತಮ್ಮನವರೇ? ಬಹಳ ಶ್ರಮ ತೆಗೆದುಕೊಂಡಿರಲ್ಲ!’

‘ಶ್ರಮ ಏನೂ ಇಲ್ಲ. ತಾವು ನಮ್ಮನ್ನೆಲ್ಲ ಕಾಪಾಡಿಕೊಂಡು ಬಂದಿರಿ. ನನಗೆ ಸಾಹೇಬರು ಹಾಕಿದ್ದ ಜುಲ್ಮಾನೆ ವಜಾ ಮಾಡಿಸಿದಿರಿ. ಹಾಗೆ ವಿಶ್ವಾಸವಿಟ್ಟು ನೋಡಿ ಕೊಳ್ಳೋ ಜನ ಯಾರಿದ್ದಾರೆ? ನನಗೆ ಪ್ರೀತಿಸೋ ಮಕ್ಕಳು ಮರಿಗಳು ಇಲ್ಲ; ಆದರಿಸೋ ಬಂಧು ಬಳಗ ಇಲ್ಲ. ಯಾರಾದರೂ ಒಂದು ಒಳ್ಳೆಯ ಮಾತನಾಡಿದರೆ ಅವರೇ ನನಗೆ ಬಂಧುಗಳು! ಒ೦ದು ಉಪಕಾರ ಮಾಡಿದರೆ ಅವರೇ ನನಗೆ ಮಕ್ಕಳು! ತಮ್ಮ ಸಂಸಾರ ನೋಡಿ ನನಗೆ ಎಷ್ಟೋ ಸಂತೋಷ! ದೇವರು ನಿಮ್ಮನೆಲ್ಲ ಚೆನ್ನಾಗಿಟ್ಟಿರಲಿ!’

ರಂಗಣ್ಣ ಎರಡು ಕೋಡಬಳೆಗಳನ್ನು ತಿಂದು, ಊಟಕ್ಕೆ ಇಬ್ಬರು ಮೇಷ್ಟರುಗಳು ಬರುತ್ತಾರೆಂದು ಹೆಂಡತಿಗೆ ತಿಳಿಸಿದನು. ಸೀತಮ್ಮನವರನ್ನು ಊಟಕ್ಕೆ ನಿಲ್ಲಬೇಕೆಂದೂ ಹೇಳಿದನು. ತನ್ನ ಕೊಟಡಿಗೆ ಹಿಂದಿರುಗಿದಾಗ ಅಲ್ಲಿ ಉಪಾಧ್ಯಾಯರ ಸಂಘದ ಕಾರ್ಯದರ್ಶಿ ಕಾದಿದ್ದನು, ಅವನು ಕೈ ಮುಗಿದು, ‘ಸಾಯಂಕಾಲ ಸಂಘದ ಸಭೆ ಇಟ್ಟು ಕೊಂಡಿದ್ದೇವೆ. ತಾವು ನಾಲ್ಕು ಗಂಟೆಗೆ ದಯಮಾಡಿಸಬೇಕು ಸ್ವಾಮಿ!’ ಎಂದು ಅರಿಕೆ ಮಾಡಿದನು. ರಂಗಣ್ಣನಿಗೆ ತಾನು ಜನಾರ್ದನಪುರಕ್ಕೆ ಇನ್ಸ್ಪೆಕ್ಟರಾಗಿ ಬಂದ ದಿವಸ ನಡೆದ ಸಭೆ ಜ್ಞಾಪಕಕ್ಕೆ ಬಂತು. ಆ ಆಗಮನದ ಸಮಾರಂಭವನ್ನೂ ಈ ನಿರ್ಗಮನದ ಸಮಾರಂಭವನ್ನೂ ಹೊಲಿಸಿಕೊಳ್ಳುತ್ತ ನನ್ನ ಇನ್ಸ್ಪೆಕ್ಟರ್ ಗಿರಿಯ ದಿನಗಳೆಲ್ಲ ಕನಸಿನ ದಿನಗಳಾದುವು! ಎಷ್ಟು ಬೇಗ ಕಾಲಚಕ್ರ ಉರುಳಿಹೋಯಿತು! ಎಂದು ಮನಸ್ಸಿನಲ್ಲಿ ಹೇಳಿಕೊಂಡು, “ಆಗಲಿ ಮೇಷ್ಟ್ರೇ! ಬರುತ್ತೇನೆ. ಸ್ವಲ್ಪ ಕಾಫಿ ತೆಗೆದು ಕೊಂಡು ಹೊರಡಿ’ ಎಂದು ಹೇಳಿ ಉಪಚಾರಮಾಡಿ ಕಳಿಸಿದನು.
ಅನಂತರ ವೆಂಕಟಸುಬ್ಬಯ್ಯ ಸ್ನಾನಮಾಡಿ ಮಡಿಯುಟ್ಟು ಕೊಂಡು ದೇವತಾರ್ಚನೆ ಮಾಡಿದನು. ವೆಂಕಣ್ಣ ಸ್ನಾನಮಾಡಿ ಮಡಿಯುಟ್ಟು ಕೊ೦ಡು ಸಂಧ್ಯಾವಂದನೆಯನ್ನು ಮಾಡಿದನು. ಊಟವಾಯಿತು. ಮಧ್ಯಾಹ್ನ ಸ್ವಲ್ಪ ವಿಶ್ರಾಂತಿಯೂ ಆಯಿತು. ರಂಗಣ್ಣ ಮೂರು ಗಂಟೆಗೆ ಎದ್ದು ಸಂಘದ ಸಭೆಗೆ ಹೊರಡಲು ಸಿದ್ಧ ಮಾಡಿಕೊಳ್ಳುತ್ತಿದ್ದನು. ತಾನು ಜನಾರ್ದನಪುರಕ್ಕೆ ಬಂದ ದಿನ ಜಂಬದ ಕೋಳಿಯಾಗಿ ಹಾಕಿಕೊಂಡಿದ್ದ ಸರ್ಜುಸೂಟು, ದೊಡ್ಡ ಸರಿಗೆಯ ರುಮಾಲು ಮತ್ತು ಕೈ ಬೆತ್ತಗಳ ಸಜ್ಜು ಮಾಡಿ ಕೊಂಡು ಅತಿಥಿಗಳಾಗಿ ಬಂದಿದ್ದ ಆ ಇಬ್ಬರು ಮೇಷ್ಟರುಗಳನ್ನು ಜೊತೆಗೆ ಕರೆದುಕೊಂಡು ಸಭೆಗೆ ಹೊರಟನು.

ಮಿಡಲ್ ಸ್ಕೂಲಿನ ಕಟ್ಟಡದಲ್ಲಿ ಸಭೆಯನ್ನು ಏರ್ಪಾಟು ಮಾಡಿದ್ದರು. ಅದನ್ನು ಸಮೀಪಿಸುತ್ತಿದ್ದಾಗ ಮೇಷ್ಟ್ರು ಕೆಂಚಪ್ಪ ಎದುರಿಗೆ ಬಂದು ನಮಸ್ಕಾರ ಮಾಡಿದನು. `ಏನು ಮೇಷ್ಟ್ರೆ! ಆರೋಗ್ಯವಾಗಿದ್ದೀರಾ?’ ಎಂದು ರಂಗಣ್ಣ ಕೇಳಿದನು.

`ಇದ್ದೇನೆ ಸ್ವಾಮಿ!’

ರ೦ಗಣ್ಣನ ದೃಷ್ಟಿ ಆ ಮೇಷ್ಟರ ರುಮಾಲಿನ ಕಡೆಗೆ ಹೋಯಿತು. ಹಿಂದೆ ನಡೆದಿದ್ದ ಪ್ರಕರಣವೆಲ್ಲ ಜ್ಞಾಪಕಕ್ಕೆ ಬಂದು ನಗು ಬಂತು.

`ಏನು ಕೆಂಚಪ್ಪನವರೇ! ಇದು ಬೋರ್ಡ್ ಒರಸುವ ಬಟ್ಟೆಯೇ ಏನು?’ ಎಂದು ನಗುತ್ತಾ ಕೇಳಿದನು.

`ಅಲ್ಲ ಸ್ವಾಮಿ ! ನಾನು ಬಡವ, ಆದರೆ ಸುಳ್ಳುಗಳು ಹೇಳೋ ಮನುಷ್ಯನಲ್ಲ! ಇದು ಬೋರ್ಡ್ ಒರಸೋ ಬಟ್ಟೆ ಅಲ್ಲ ಸ್ವಾಮಿ! ಇದು ತಾವು ಕೃಪೆಮಾಡಿ ತೆಗೆದು ಕೊಟ್ಟ ರುಮಾಲು! ಒಂದನ್ನು ಅಗಸರವನಿಗೆ ಹಾಕಿದ್ದೇನೆ; ಇನ್ನೊಂದನ್ನು ಇಗೋ! ತಲೆಗೆ ಮಡಗಿಕೊಂಡಿದ್ದೇನೆ ಸ್ವಾಮಿ!’

`ಆ ರುಮಾಲನ್ನು ಏನು ಮಾಡಿದಿರಿ?’

`ಅದು ಬೋರ್ಡ್ ಒರಸೋ ಬಟ್ಟೆ ಸ್ವಾಮಿ! ಬೋರ್ಡ್ ಒರಸೋದಕ್ಕೇನೆ ಮಡಗಿದ್ದೇನೆ! ತಮ್ಮ ಅಪ್ಪಣೆಯಂತೆ ಸಣ್ಣ ಸಣ್ಣ ಚೌಕಗಳಾಗಿ ಕತ್ತರಿಸಿ ಉಪಯೋಗಿಸುತ್ತಾ ಇದ್ದೇನೆ. ನಾನು ಸುಳ್ಳು ಸಳ್ಳು ಹೇಳೋ ಮನುಷ್ಯ ಅಲ್ಲ ಸ್ವಾಮಿ!’

`ಒಳ್ಳೆಯದು ಮೇಷ್ಟ್ರೆ! ನಿಮ್ಮನ್ನು ಕಂಡರೆ, ನಿಮ್ಮನ್ನು ನೆನೆಸಿ ಕೊಂಡರೆ, ನನಗೆ ತುಂಬಾ ಸಂತೋಷವಾಗುತ್ತದೆ. ಈ ಕಲಿ ಕಾಲದಲ್ಲಿ ನಿಮ್ಮಂಥ ಸತ್ಯವಂತರು ಅತಿವಿರಳೆ!’

ಆ ದಿನದ ಸಂಘದ ಸಭೆಯಲ್ಲಿ ಸಂತೋಷ ಸಂಭ್ರಮಗಳು ಕಾಣುತ್ತಿರಲಿಲ್ಲ. ಉಪಾಧ್ಯಾಯರು ಕಿಕ್ಕಿರಿದು ತುಂಬಿದ್ದರು. ಹಾಸ್ಯ ನಲಿವು ನಗು ಏನೂ ಇಲ್ಲದೆ ಬಹಳ ಗಂಭೀರವಾಗಿಯೂ, ಸ್ವಲ್ಪ ಮಟ್ಟಿಗೆ ಶೋಕಯುಕ್ತರಾಗಿಯೂ ಆ ಉಪಾಧ್ಯಾಯರು ಕುಳಿತಿದ್ದರು. ಸಂಪ್ರದಾಯದಂತೆ ದೇವತಾ ಪ್ರಾರ್ಥನೆ ಮತ್ತು ಸಂಗೀತ ಆದ ಮೇಲೆ ಕಾರ್ಯದರ್ಶಿಯೂ ಇನ್ನು ಕೆಲವರು ಉಪಾಧ್ಯಾಯರೂ ರಂಗಣ್ಣನ ಗುಣಕಥನ ಮಾಡಿ ಭಾಷಣ ಮಾಡಿದರು. ಅವರ ಮಾತುಗಳಲ್ಲಿ ಕಾಪಟ್ಯವೇನೂ ಇರಲಿಲ್ಲ. ರಂಗಣ್ಣ ಮಾತನಾಡಬೇಕಾಗಿ ಬಂತು. ಆ ಉಪಾಧ್ಯಾಯರಿಗೆ ಏನನ್ನು ಹೇಳುವುದು! ಅವನಿಗೂ ಹೃದಯ ಭಾರವಾಗಿತ್ತು. ಸರಕಾರದ ನೌಕರನಾಗಿ ತಾನು ಕೆಲಸಮಾಡಿದ್ದರೂ ಅನೇಕ ಉಪಾಧ್ಯಾಯರ ಸ್ನೇಹವನ್ನು ಅವನು ಸಂಪಾದಿಸಿಕೊಂಡಿದ್ದನು. ಅವರ ಗೃಹಕೃತ್ಯಗಳ ಆಂತರ್ಯಗಳನ್ನೆಲ್ಲ ತಿಳಿದುಕೊಂಡಿದ್ದನು. ಹಲವರು ತಮ್ಮ ಸಂಸಾರ ವಿಚಾರಗಳನ್ನು ಅವನಲ್ಲಿ ಹೇಳಿಕೊಂಡು ಅವನ ಸಲಹೆಗಳನ್ನು ಪಡೆಯುತ್ತಿದ್ದರು.

ಉಪಾಧ್ಯಾಯರಿಗೆ ಅವನು ಒಬ್ಬ ಇನ್‌ಸ್ಪೆಕ್ಟರೆಂಬ ಭಾವನೆಯೇ ಇರಲಿಲ್ಲ. ಆದ್ದರಿಂದ ಆತ್ಮೀಯರನ್ನು ಬಿಟ್ಟು ಹೊರಡುವಾಗ ಅನುಭವಿಸುವ ಮೂಕ ವಿರಹವನ್ನು ಉಭಯ ಪಕ್ಷದವರೂ ಅನುಭವಿಸುತ್ತಿದ್ದರು. ‘ನಾನು ಈ ರೇ೦ಜಿನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಇನ್‌ಸ್ಪೆಕ್ಟರ್ ಗಿರಿಯ ಅನುಭವವೂ ನನಗೆ ಹೊಸದು. ನನ್ನಿಂದ ಏನು ಪ್ರಯೋಜನವಾಗಿದೆ ಎಂಬುದನ್ನು ಈಗ ಅಳತೆಮಾಡಿ ಹೇಳುವ ಕಾಲ ಬಂದಿಲ್ಲ. ಮುಂದೆ ಬರಬಹುದು. ನಾನು ಬಹಳ ಕಟ್ಟುನಿಟ್ಟಾಗಿ ರೂಲ್ಸುಗಳನ್ನು ಆಚರಣೆಗೆ ತರುತ್ತಿದ್ದವನೆಂದು ಉಪಾಧ್ಯಾಯರಲ್ಲಿ ಭಾವನೆ. ಆದರೆ ನಾನು ಬಹಳ ಮೆತು, ಉಪಾಧ್ಯಾಯರನ್ನು ಅವರ ಇಷ್ಟಾನು ಸಾರ ಬಿಟ್ಟು ಆಡಳಿತವನ್ನು ಸಡಿಲವಾಗಿ ನಡೆಸುತ್ತ ಜುಲ್ಮಾನೆಗಳನ್ನು ಹಾಕದೆ ಶಿಸ್ತನ್ನು ಕೆಡಿಸಿದೆನೆಂಬ ಭಾವನೆ ಮೇಲ್ಪಟ್ಟ ಅಧಿಕಾರಿಗಳಿಗೆ! ಇವುಗಳಲ್ಲಿ ಯಾವುದು ನಿಜ? ಯಾವುದು ಅಬದ್ದ? ಎಂದು ಹೇಳುವುದು ಕಷ್ಟ. ವಿದ್ಯಾಭ್ಯಾಸ ಕ್ರಮದಲ್ಲಿ ಸುಧಾರಣೆಗಳಾಗಬೇಕು, ಅಧಿಕಾರಿಗಳ ಮತ್ತು ಉಪಾಧ್ಯಾಯರ ಸಂಬಂಧಗಳಲ್ಲಿ ಸುಧಾರಣೆಗಳಾಗಬೇಕು ಎಂದು ನಾನು ತಿಳಿದುಕೊಂಡಿದ್ದೇನೆ. ಆದ್ದರಿಂದ ಕೆಲವು ಪ್ರಯೋಗ ಪರೀಕ್ಷಗಳನ್ನು ಇಲ್ಲಿ ನಾನು ಮಾಡಿದೆ. ಸೋಲಾಯಿತೋ ಗೆಲುವಾಯಿತೋ ನಾನು ಹೇಳಲಾರೆ. ಹೇಗಾದರೂ ಇರಲಿ, ಉಪಾಧ್ಯಾಯರ ವಿಚಾರದಲ್ಲಿ ನಾನು ಪ್ರೀತಿಯಿಂದಲೂ ಗೌರವದಿಂದಲೂ ನಡೆದು ಕೊಂಡಿದ್ದೇನೆ ಎಂಬು ದೊ೦ದು ತೃಪ್ತಿ ನನಗಿದೆ. ಯಾರಿಗಾದರೂ ಅವರ ಮನಸ್ಸು ನೋಯವಂತೆ ನಾನು ಕೆಟ್ಟ ಮಾತು ಆಡಿದ್ದರೆ, ಕೆಡುಕು ಮಾಡಿದ್ದರೆ, ಮನ್ನಿಸ ಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿ ಪಾಠಶಾಲೆಗಳನ್ನು ನಡೆಸಿಕೊಂಡು ಹೋಗುವ ಬಗ್ಗೆ ಕೆಲವು ಹಿತೋಪದೇಶಗಳನ್ನು ಮಾಡಿ, `ಹೋಗಿ ಬರಲು ಅಪ್ಪಣೆ ಕೊಡಿ’ ಎಂದು ಮುಕ್ತಾಯ ಮಾಡಿದನು. ಹೂವು ಗಂಧಗಳ ವಿನಿಯೋಗವಾಗಿ ಸಭೆಯ ಮುಕ್ತಾಯವಾಯಿತು.

ಶಂಕರಪ್ಪನೂ ಗೋಪಾಲನೂ ಆ ದಿನ ಬೆಳಗ್ಗೆಯೇ ಒಂದು ಲಾರಿಯಲ್ಲಿ ಸಾಮಾನುಗಳನ್ನೆಲ್ಲ ಹಾಕಿಕೊಂಡು ಬೆಂಗಳೂರಿಗೆ ಹೊರಟು ಹೋಗಿದ್ದರು. ಆದ್ದರಿಂದ ಮಾರನೆಯ ದಿನ ರೈಲಿಗೆ ಹೊರಡುವಾಗ ಒಂದೆರಡು ಟ್ರಂಕುಗಳು ಮತ್ತು ಎರಡು ಮೂರು ಹಾಸಿಗೆಗಳು, ಒಂದು ಬುಟ್ಟಿ, ಕೈ ಕೂಜ – ಇಷ್ಟು ಮಾತ್ರ ಸಾಮಾನುಗಳಿದ್ದುವು. ರೈಲ್ ಸ್ಟೇಷನ್ನಿನಲ್ಲಿ ನೂರಾರು ಜನ ಉಪಾಧ್ಯಾಯರೂ ಹುಡುಗರೂ ಸೇರಿದ್ದರು. ಹಳ್ಳಿಗಳಿಂದ ಕೆಲವರು ಪ್ರಮುಖರೂ ಬಂದಿದ್ದರು. ರೈಲು ಬಂತು. ಎರಡನೆಯ ತರಗತಿಯ ಗಾಡಿಯಲ್ಲಿ ರಂಗಣ್ಣನ ಹೆಂಡತಿಯ ಮಕ್ಕಳೂ ಕುಳಿತರು. ರಂಗಣ್ಣ ಉಪಾಧ್ಯಾಯರಿಗೆ ವಂದನೆ ಹೇಳುತ್ತ ಮುಖಂಡರಿಗೆ ಹಸ್ತಲಾಘವ ಕೊಡುತ್ತ ಗಾಡಿಯ ಬಳಿ ನಿಂತಿದ್ದನು. ಹತ್ತಾರು ಹೂವಿನ ಹಾರಗಳ ಭಾರದಿಂದ ಅವನ ಕತ್ತು ಜಗ್ಗುತ್ತಿತ್ತು. ಅವುಗಳನ್ನು ತೆಗೆದು ತೆಗೆದು ಗಾಡಿಯೊಳಕ್ಕೆ ಕೊಡುತ್ತಿದ್ದನು. ಆ ವೇಳೆಗೆ ಕಲ್ಲೇಗೌಡ ಮತ್ತು ಕರಿಯಪ್ಪ ಆತುರಾತುರವಾಗಿ ಬಂದರು. ರಂಗಣ್ಣ ಅವರ ಕೈಕುಲಕಿ ಮಾತನಾಡಿಸಿದನು. ಅವರೂ ಸೊಗಸಾದ ಹಾರಗಳನ್ನು ಹಾಕಿದರು. ಹಣ್ಣುಗಳು, ಬಾದಾಮಿ, ದ್ರಾಕ್ಷಿ, ಖರ್ಜೂರಾದಿಗಳನ್ನು ತುಂಬಿದ್ದ ಎರಡು ಬುಟ್ಟಿಗಳನ್ನು ಗಾಡಿಯೊಳಗಿಟ್ಟರು. `ಕಲ್ಲೇಗೌಡರೇ! ಕರಿಯಪ್ಪ ನವರೇ! ನೀವು ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ತಪ್ಪದೆ ಬರಬೇಕು. ವಿಶ್ವೇಶ್ವರಪುರದಲ್ಲಿ ನನ್ನ ಮನೆ ಇದೆ’ ಎಂದು ಆಹ್ವಾನವನ್ನು ರಂಗಣ್ಣ ಕೊಟ್ಟನು. `ಆಗಲಿ ಸಾರ್! ಖಂಡಿತ ಬರುತ್ತೇವೆ ಎ೦ದು ಅವರು ಹೇಳಿದರು. ಜನರಲ್ಲಿ ದಾರಿ ಬಿಡಿಸಿಕೊಂಡು ಗರುಡನಹಳ್ಳಿಯ ಪಟೇಲ್ ಮತ್ತು ಹನುಮನಹಳ್ಳಿಯ ಶ್ಯಾನುಭೋಗರು ಬಂದು ಕೈ ಮುಗಿದರು. ಅವರೂ ಹೂವಿನ ಹಾರಗಳನ್ನು ಹಾಕಿ, ಒಂದೊಂದು ರಸಬಾಳೆ ಹಣ್ಣಿನ ಗೊನೆಯನ್ನೂ ಒಂದೊಂದು ಹಲಸಿನ ಹಣ್ಣನ್ನೂ ಗಾಡಿಯೊಳಗಿಟ್ಟರು. ರಂಗಣ್ಣನು ನಗುತ್ತಾ ‘ಇದಕ್ಕೆಲ್ಲ ನಾನು ಡಬ್ಬಲ್ ಚಾರ್ಜು ಕೊಡಬೇಕಾಗುತ್ತದೆಯೋ ಏನೋ? ರೈಲಿಳಿದ ಮೇಲೆ ಪತ್ತೆಯಿಲ್ಲದೆ ಹೊರಕ್ಕೆ ಸಾಗಿಸಿ ಲಾರಿ ಗೊತ್ತು ಮಾಡಬೇಕಾಗುತ್ತೆ!’ ಎಂದು ಹೇಳಿದನು. ರೈಲ್ವೆ ಗಾರ್ಡು ಶೀಟಿ ಊದಿದನು. ಗಾಡಿ ಹೊರಡಲನುವಾಯಿತು. ಮತ್ತೊಮ್ಮೆ ಎಲ್ಲರಿಗೂ ರಂಗಣ್ಣ ವಂದನೆಗಳನ್ನರ್ಪಿಸಿ ಗಾಡಿ ಹತ್ತಿದನು. ಊರೆಲ್ಲ ಪ್ರತಿಧ್ವನಿಸುವಂತೆ ಜಯಕಾರಗಳಾದುವು. ಗಾಡಿ ಹೊರಟಿತು. ರಂಗಣ್ಣ ಸ್ವಲ್ಪ ದೂರದವರೆಗೂ ಕಿಟಕಿಯಲ್ಲಿ ತಲೆ ಹಾಕಿಕೊಂಡಿದ್ದು ವಂದನೆ ಮಾಡುತ್ತಿದ್ದನು. ಸ್ಟೇಷನ್ ಹಿಂದೆ ಬಿಟ್ಟು ಹೋಯಿತು. ರಂಗಣ್ಣ ಹಿಂದಕ್ಕೆ ಸರಿದು ಹೆಂಡತಿಯ ಪಕ್ಕದಲ್ಲಿ ಕುಳಿತುಕೊಂಡನು! ಅಷ್ಟರಲ್ಲಿ ಹುಡುಗರು ರಸಬಾಳೆ ಹಣ್ಣುಗಳಿಗೆ ಕೈ ಹಾಕಿ ಬಾಯಿಗೂ ಜೇಬಿಗೂ ತುರುಕಿಕೊಳ್ಳುತ್ತಿದ್ದರು!
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರು ನಗುವುದಾ ಕಂಡೆ
Next post ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys