ನನ್ನ ಪ್ರೀತಿಯೊ ಜ್ವರದ ರೀತಿ, ರೋಗವ ಬೆಳೆಸಿ
ಪೋಷಿಸುವ ರೀತಿ ನೀತಿಯನೆ ಅದು ವರಿಸುವುದು;
ರೋಗಿನಾಲಗೆಯ ಸಲ್ಲದ ರುಚಿಗಳನು ತಣಿಸಿ
ಖಾಯಿಲೆಯ ಉಳಿಸುವ ವಿಧಾನವನೆ ಬಳಸುವುದು
ಗೊತ್ತುಮಾಡಿದ ಪಥ್ಯ ನಡೆಸದ್ದಕ್ಕೆ ಮುನಿದು
ವಿವೇಕ, ಪ್ರೀತಿಯ ವೈದ್ಯ, ನನ್ನ ತೊರೆದಿದ್ದಾನೆ.
ಪಥ್ಯವಿರೋಧಿ ಆಸೆ ಪ್ರತ್ಯಕ್ಷ ಸಾವೆಂದು
ಅರ್ಥವಾಗಿ, ನಿರಾಶೆ ಈಗ ಮಿಡುಕುತ್ತೇನೆ.
ಚಿಕಿತ್ಸೆ ಮೀರಿದ ರೋಗ. ಲಕ್ಷ್ಯ ಸಿಗದ ವಿವೇಕ,
ಶಾಂತಿ ಸೋರಿದ ಚಿತ್ತ, ಹುಚ್ಚನಂತೇ ಎಲ್ಲ,
ನನ್ನ ಏನೆ ವಿಚಾರ ಮಾತು ಕಥೆಗಳ ತೂಕ
ಪೂರ ಅಡ್ಡಾದಿಡ್ಡಿ, ಸತ್ಯಸಮ್ಮತವಿಲ್ಲ.
ಜಾಣೆ, ಚೆಲುವೆ ಎಂದು ಆಣೆ ಮಾಡಿದೆ ನಿನ್ನ
ನರಕಗಪ್ಪಿನ ರಾತ್ರಿಯಂಥ ಕರಿ ಹೆಣ್ಣನ್ನ
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 147
My love is as a fever, longing still