ಮದುವೆಯಿಂದ
ತುಂಬಬೇಕಿತ್ತು ಬದುಕು
ಆದರೆ ಆಯಿತು ಬರಿದು.
ಪ್ರೀತಿ ಬಯಸಿದಾಗ ಸಿಕ್ಕಿದ್ದು ಒದೆತ
ಮಾತು ಬಯಸಿದಾಗ ಸಿಕ್ಕಿದ್ದು ಜರೆತ
ನಂಬುಗೆಯೇ ಅಡಿಪಾಯವಾಗಬೇಕಿದ್ದಲ್ಲಿ
ಸಂಶಯದ ಕೂಪ ನಿರ್ಮಾಣವಾಯ್ತು.
ಕೈಗೆ ಮೂರು ಕೂಸುಗಳು ಬಂದು ಬಿದ್ದಾಗ
ಕೊರಳಿಗೆ ಕಷ್ಟಗಳ ಸರಮಾಲೆಯೇ ಬಿತ್ತು.
ವರುಷಕ್ಕೊಂದರಂತೆ ಸಾಲಾಗಿ
ಮೂರು ಮಕ್ಕಳು ಮಡಿಲು ತುಂಬಿದರು.
ಬಂಧನಗಳ ಕಳಚಿ ಹೋಗಲೆಲ್ಲಿಗೆ?
ಹೆತ್ತವರು ಮದುವೆ ಮಾಡಿ
ಕೈ ತೊಳೆದುಕೊಂಡರು.
ಕೊಂಡಿ ಕಳಚಿಕೊಂಡು ಅಮರರಾದರು.
ಒಡಹುಟ್ಟಿದವರು ಅವರವರ
ಜೀವನದಲಿ ಮುಳುಗಿ ಹೋದರು.
ಗಂಡ ಅಪರಿಚಿತನಾಗುತ್ತಾ ಸಾಗಿದ
ನಾನುಳಿದೆ ಒಂಟಿಯಾಗಿ-
ಜೀವನವೊಂದು ನುಂಗಲಾಗದ ತುತ್ತಾಗಿ.
ನಾನೂ ಕೊಂಡಿ ಕಳಚಿಕೊಂಡರೆ
ಬದುಕ ಬಲ್ಲವೇ ನನ್ನ ಕೂಸುಗಳು
ಈ ಬರಡಾದ ಭೂಮಿಯಲ್ಲಿ?
ಅದಕ್ಕಾಗಿ ಹಿಡಿದಿರುವೆ ನನ್ನ ಉಸಿರು
ಹೃದಯ ತುಂಬಾ ತುಂಬಿಕೊಂಡು ಹಸಿರು!
*****