ಜೆಡ್ಡಾ ಹಾಗೂ ನಮ್ಮ ಕಿರು ಪ್ರಪಂಚ

ಜೆಡ್ಡಾ :. ಸೌದಿಯಲ್ಲಿದ್ದಷ್ಟು ದಿನವೂ ನಾವಿದ್ದದ್ದು ಅದರ ಪಶ್ಚಿಮ ತೀರದಲ್ಲಿನ ದೊಡ್ಡ ಹಡಗು ಬಂದರು ನಗರವಾದ ಜೆಡ್ಡಾ ನಗರದಲ್ಲಿ.

‘ಬ್ರೈಡ್ ಆಫ್ ದಿ ರೆಡ್ ಸೀ’ ಅಥವಾ ‘ಕೆಂಪು ಸಮುದ್ರದ ಕನ್ಯೆ’ ಎಂದು ಈ ನಗರ ರಸಿಕರಿಂದ ನಾಮಕರಣಗೊಂಡಿದೆ. 6ನೆಯ ಶತಮಾನದ ಕೊನೆಯಲ್ಲಿ ಇಸ್ಲಾಂ ಧರ್ಮದ ಉದಯದ ನಂತರ ‘ಮಕ್ಕಾ’ ‘ಮದೀನಾ’ಗಳ ಪ್ರಾಮುಖ್ಯತೆ- ಯೊಂದಿಗೆ ಜೆಡ್ಡಾ ಕೂಡಾ ಒಳ್ಳೆಯ ಸ್ಥಾನ ಗಳಿಸಿಕೊಂಡಿದೆ. 6-7ನೆಯ ಶತಮಾನದಲ್ಲಿಯೇ ಬೇರೆ ಬೇರೆ ದೇಶಗಳಿಂದ ಈ ಪವಿತ್ರ ಸ್ಥಳಗಳಿಗೆ ಅನೇಕ ಇಸ್ಲಾಮೀಯ ಯಾತ್ರಿಕರು ಬರುತ್ತಿದ್ದರೆನ್ನುವುದಕ್ಕೆ ಇಲ್ಲಿಯ ಜೆಡ್ಡಾದ ಬಂದರವೇ ಸಾಕ್ಷಿ. ಇಲ್ಲಿಂದ ಮಕ್ಕಾ ಕೇವಲ 47 ಮೈಲಿಗಳಷ್ಟು ಅಂತರದಲ್ಲಿದೆ. ಮಕ್ಕಾ ಯಾತ್ರಿಕರ ಅನುಕೂಲಕ್ಕೆಂದೇ ಕ್ರಿ.ಶ. 646ರಲ್ಲಿ ಇಲ್ಲಿ ಬಂದರು ನಿರ್ಮಾಣವಾಯಿತಂತೆ.

ಸುಮಾರು 6-7ನೆಯ ಶತಮಾನದಲ್ಲಿ ಬಗದಾದದ ಖಲೀಫರು ಇಲ್ಲಿ ವಸಾಹತು ಮಾಡಿದ್ದರೆಂದು ಅನೇಕ ಮೂಲ- ಗಳಿಂದ ತಿಳಿದುಬರುತ್ತದೆ. ಇಸ್ಲಾಂ ಧರ್ಮದ ಉದಯದ ನಂತರದಿಂದ 15ನೆಯ ಶತಮಾನದವರಗೆ ಸುಮಾರು 900 ವರ್ಷಗಳಲ್ಲಿ ಬೇರೆ ಬೇರೆ ದೇಶಗಳಿಂದ ಬರುವ ಯಾತ್ರಿಕರಿಂದ ಜೆಡ್ಡಾ ಔದ್ಯೋಗಿಕ ಕೇಂದ್ರವಾಗಿ ಬೆಳೆದಿತ್ತೆಂದು ಯಾತ್ರಿಕರ ಕಥನಗಳಲ್ಲಿ ಓದಿದ್ದೇವೆ. 11ನೆಯ ಶತಮಾನದಲ್ಲಿ ಪರ್ಷಿಯನ್ ಕವಿ ನಾಸೆರ್ ಖುಸ್ರೋ ತನ್ನ ಬರಹದಲ್ಲಿ ವರ್ಣಿಸುವಂತೆ ಆಗಲೇ ಜೆಡ್ಡಾ ಸಾಕಷ್ಟು ಬೆಳವಣಿಗೆ ಹೊಂದಿತ್ತು. ಸಮುದ್ರದಲ್ಲಿ ಸಿಗುವ ಹವಳ ಕಲ್ಲುಗಳಿಂದ ಗೋಡೆ ಕಟ್ಟಿದ್ದರು, ಆದರೆ ಎಲ್ಲೂ ಗಿಡಮರಗಳು, ಹಸಿರು ಇಲ್ಲವೇ ಇಲ್ಲ. ಜೀವಿಸಲು ಬೇಕೆನಿಸುವ ಅವತ್ಯಕ ಸಾಮಾನುಗಳು ಯಾತ್ರಿಕರ ಮೂಲಕ ಹಡಗುಗಳಿಂದ ಬರುತ್ತಿತ್ತು ಎಂದಿದ್ದಾನೆ.

ಈ ವೇಳೆಗಾಗಲೇ ಡಚ್ಚರು, ಪೋರ್ಚುಗೀಸರು, ಇಂಗ್ಲೀಷ್‌ರು ಕೆಂಪು ಸಮುದ್ರವನ್ನು ವ್ಯಾಪಾರೀ ಮಾರ್ಗವಾಗಿಯೂ ಬಳಸಿಕೊಂಡಿದ್ಧರು. ಈ ಸಮುದ್ರಕ್ಕೆ ಕೆಂಪು ಸಮುದ್ರ ಎಂದು ಹೆಸರು ಬರಲು ಕೆಲವು ಕಾರಣಗಳಿವೆ. ಪಾಚಿವರ್ಗಕ್ಕೆ ಸೇರಿದ ಅತಿ ಸೂಕ್ಷ್ಮ ಕೆಂಪು ಸಸ್ಯಕಣಗಳು ಈ ಸಮುದ್ರದ ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಗಾಗ ಕಾಣುತ್ತವೆ. ಅಂತಹ ಸಂದರ್ಭದಲ್ಲಿ ಇಡೀ ಸಮುದ್ರವೇ ಮಾಸಲು ಇಲ್ಲವೇ ಕಂದು ಬಣ್ಣದ್ದಾಗಿ ಕಾಣಿಸುತ್ತದೆ. ಅದಕ್ಕೆ ಕೆಂಪು ಸಮುದ್ರ ಎಂದು ಹೆಸರು ಬಂದಿದೆ. ಇದರ ಆಯ ಅಳತೆ ಇಲ್ಲಿ ಹೇಳಬೇಕೆಂದರೆ 2200 ಕಿ.ಮೀ. ಉದ್ದ ಹಾಗೂ ಹೆಚ್ಚಂದರೆ 350 ಕಿ.ಮೀ. ಅಗಲವಾಗಿದೆ. ಇದು ನಮ್ಮ ಹಿಂದೂ ಮಹಾಸಾಗರದ ಒಂದು ತೋಳಿನಂತೆ ಆಫ್ರಿಕಾ ಮತ್ತು ಅರಬ್ ರಾಷ್ಟ್ರಗಳ ಮಧ್ಯೆ ಚಾಚಿಕೊಂಡಿದೆ. ಸಮುದ್ರಯಾನದ ದೃಷ್ಟಿ ಯಿಂದ ಈ ಕೆಂಪು ಸಮುದ್ರಕ್ಕೆ ಬಹಳ ಮಹತ್ವವಿದೆ. ಕೆಂಪು ಸಮುದ್ರವನ್ನು ಮೆಡಿಟರೇನಿಯೆನ್ ಸಮುದ್ರಕ್ಕೆ ಜೋಡಿಸುವ ಸುಯೇಚ್ ಕಾಲುವೆ 1869ರಲ್ಲಿ ನಿರ್ಮಾಣವಾದ ಮೇಲೆ ಇಲ್ಲಿಯ ಸಂಚಾರ ನಿರಂತರವಾಗಿದ್ದು ಜಗತ್ತಿನ ಅತ್ಯಂತ ಗಿಜಿಗುಡುವ ನೌಕಾ ಯಾನದ ಮಾರ್ಗಗಳಲ್ಲೊಂದೆಂಬ ಖ್ಯಾತಿ ಇದಕ್ಕಿದೆ.

ಏಷ್ಯಾ- ಯುರೋಪಗಳ ಮಧ್ಯ ವ್ಯಾಪಾರಿ ಸರಕು ಸಾಗಾಣಕೆಯ ಅತ್ಯಂತ ಆಯಕಟ್ಟಿನ ಮಾರ್ಗ ಇದು. ವಿಶೇಷವಾಗಿ ಇದರ ಅಕ್ಕಪಕ್ಕದಲ್ಲೆಲ್ಲ ತೈಲ ಉತ್ಪಾದನೆ ಅತಿಯಾಗಿದ್ದರಿಂದ ಎಂದಿಗೂ ಇದು ಭೌಗೋಳಿಕವಾಗಿ ಮಹತ್ವಪಡದ ಸಮುದ್ರವಾಗಿರುವುದು.

19ನೆಯ ಶತಮಾನದ ಮೊದಲ ಭಾಗದಲ್ಲಿ ಯುರೋಪಿಯನ್ನರು ತಮ್ಮ ವಸಾಹತುವನ್ನು ಜೆಡ್ಡಾದಲ್ಲಿ ಸ್ಥಾಪಿಸಿದ್ದರು. ಈ ವೇಳೆಗಾಗಲೇ ಭಾರತದಿಂದ ಮಸಾಲೆ ಸಾಮಾನುಗಳ, ರೇಶ್ಮೆಗಳ ವ್ಯವಹಾರ ಭರದಿಂದ ನಡೆದಿತ್ತೆಂದು ಈ ಭೆಟ್ಟಿಕೊಟ್ಟ  (1850) ಒಬ್ಬ ಪ್ರವಾಸಿ ಜಾಕೋಬ್ ಹೇಳುತ್ತಾನೆ. ಮೇದಲ್ಲಿ ಬರುವ ಮಾನ್ಸೂನದ ಸುಮಾರಿಗೆ ಭಾರತ ದಿಂದ ಸಾಮಾನುಗಳನ್ನು ಹೊತ್ತು ತರುವ ಹಡಗುಗಳನ್ನು ನೋಡುವುದು ಇಲ್ಲಿಯವರಿಗೆ ಅತೀ ಕಾತುರ. ಜೆಡ್ಡಾ  ವ್ಯಾಪಾರಿಗಳಿಗಂತೂ ಖುಷಿಯೋ ಖುಷಿ. ಯಾತ್ರಾರ್ಥಿಗಳಿಗೆ ಮೊದಲೇ ಅಷ್ಟಿಷ್ಟು ಅನುಕೂಲ ಮಾಡಿಕೊಟ್ಟು ಅವರಿಂದ ಹಣ ದೋಚಿಕೊಂಡಿರುತ್ತಾರೆ. ಈಗ ಹಡಗುಗಳು ಬಂದ ತಕ್ಷಣ ವ್ಯವಹಾರ ಮಾಡುವರು. ಇಡಿಯಾಗಿ ಸಾಮಾನು- ಗಳನ್ನು ಕೊಂಡುಕೊಳ್ಳುವಲ್ಲಿ ಪೈಪೋಟಿ ಮಾಡುವದು ಜುಲೈ ಕೊನೆಯವರೆಗೆ, ಅಂದರೆ ಹಡಗುಗಳು ಮರಳಿ ಹೋಗುವವರೆಗೆ ನಡೆದೇ ಇರುತ್ತಿತ್ತು; ವ್ಯಾಪಾರಿ ಹಡಗುಗಳೆಲ್ಲ ಮರಳಿಹೋದ ಮರುದಿನದಿಂದಲೇ ಈ ವ್ಯಾಪಾರಿಗಳು ಕೂಡಿಟ್ಟ ತಮ್ಮ ಸರಕು ಸರಂಜಾಮುಗಳನ್ನೆಲ್ಲ ಶೇ. 10-20ರಷ್ಟು ಮಾರಿ ಹಣ ಮಾಡಿಕೊಳ್ಳುತ್ತಿದ್ದರು. ಈ ಹಡಗುಗಳು ಮುಖ್ಯವಾಗಿ ಹೊತ್ತುಕೊಂಡು ಬರುವ ವಸ್ತುಗಳೆಂದರೆ ಈ ಮರುಭೂಮಿ ಜನರಿಗೆ, ಯಾತ್ರಿಕರಿಗೆ ಬೇಕಾಗುವ ಕಾಳು ಕಡಿಗಳು, ಬಟ್ಟೆಗಳು. ಜೀವನೋಪಾಯಕ್ಕೆ ಬರುವ ಇತರ ಸಾಮಾನುಗಳು ಜೊತೆಗೆ ಒಳ್ಳೆಯ ಸಾಗುವಾನಿ ಕಟ್ಟಿಗೆಗಳು’ ಎಂದು ಜಾಕೋಬ್ ವಿವರಿಸುತ್ತಾನೆ.

ಅಂದು ನಿರ್ಮಿಸಲ್ಪಟ್ಟ- ಕಟ್ಟಿಗೆಗಳಲ್ಲಿ ಸಿಂಗರಿಸಿದ ಬಾಗಿಲುಗಳು, ಕಿಟಕಿಗಳು ಬಾಲ್ಕನಿಗಳು ಇಂದೂ ಸಾಕಷ್ಟು ಕಾಣಿಸುತ್ತವೆ.

ಈ ಜೆಡ್ಡಾ (ಜೆಡ್ಡಾಹ್ – ಎಂದೂ ಕರೆಯಲ್ಪಡುವ) ನಗರ 1916ರಲ್ಲಿ ಬ್ರಿಟೀಷರ ವಶಕ್ಕೆ ಕೊಡಲ್ಪಟ್ಟಿತು. ಆಗ ಅದು ಹೆಜಾಚ್ ಸಾಮ್ರಾಜ್ಯದ (ಕಿಂಗ್‌ಡಂ ಆಫ್ ಹೇಜ್) ಒಂದು ಭಾಗವಾಗಿ, 1925ವರೆಗೂ ಮುಂದುವರೆಯಿತು. ಮುಂದೆ ಇಬ್ನ್‌ ಸೌದ್ ಹಾಗೂ ಬ್ರಿಟೀಷರ ನಡುವೆ ಈ ನಗರದಲ್ಲಿ ಅದ ಒಪ್ಪಂದದ (1927) ಪ್ರಕಾರ ಸೌದಿಗಳ ಸಾರ್ವಭೌಮತ್ವ ಮಾನ್ಯ ಮಾಡಲ್ಪಟ್ಟಿದ್ದರಿಂದ ಅಂತಿಮವಾಗಿ ಜೆಡ್ಡಾ ಸೌದಿಯಲ್ಲಿ ವಿಲೀನವಾದಂತಾಯಿತು. 1947ರಲ್ಲಿ ನಗರದ ಗೋಡೆಗಳು ಉರುಳಿಸಲ್ಪಟ್ಟವು. ವಿಸ್ತರಣಾ ಕಾರ್ಯ ವೇಗವಾಗಿ ನಡೆಯತೊಡಗಿತು.

ಜೆಡ್ಡಾಹ್‌ ಅರ್ಥ- ಪುರಾತನ ಸ್ತ್ರೀ. ಅಥವಾ ಅಜ್ಜಿ ಎಂದು ಈ ನಗರದಲಿದ್ದ ಪ್ರಸಿದ್ಧ ‘ಈವ್‌’ಳ ಖ್ಯಾತ ಸಮಾಧಿ ಸ್ಥಾನದಿಂದಾಗಿ ಈ ಹೆಸರು ಬಂದಿತ್ತು. ಈ ತಾಣವು ಮೂಢನಂಬಿಕೆಗಳಿಗೆ ಪ್ರೋತ್ಸಾಹ ಕೊಡುತ್ತದೆಂಬ ಕಾರಣಕ್ಕಾಗಿ 1928ರಲ್ಲಿ ಸೌದಿ ಸರ್ಕಾರ ಈ ಸಮಾಧಿಯನ್ನು ನಾಶಪಡಿಸಿತು.

ಎರಡನೇ ಮಹಾಯುದ್ಧದ ನಂತರ ಈ ನಗರವನ್ನು ಪೂರ್ಣವಾಗಿ ಅಧುನೀಕರಣಗೊಳಿಸಿ ವಿಸ್ತರಿಸುವ ಕೆಲಸ ಆರಂಭ- ವಾಯಿತು. ಪೆಟ್ರೋ ಡಾಲರುಗಳು ಹರಿದು ಬರತೊಡಗಿದ್ದರಿಂದ ಇದು ಸಾಧ್ಯವಾಗತೊಡಗಿತು. ಬಂದರನ್ನು ಇನ್ನೂ ಆಳಗೊಳಿಸಿ ದೊಡ್ಡ ಹಡಗುಗಳೂ ಬರಲು ಅವಕಾಶ ಮಾಡಿಕೊಡಲಾಯ್ತು. 1970ರಲ್ಲಿ ಸಮುದ್ರದ ನೀರಿನಿಂದ ಲವಣವನ್ನು ಬೇರ್ಪಡಿಸುವ (ಕುಡಿಯುವ ನೀರಿಗಾಗಿ) ಒಂದು ಕಾರ್ಖಾನೆ ಯನ್ನು ಇಲ್ಲಿ ಸ್ಥಾಪಿಸಲಾಯಿತು. ಇದು ವಿಶ್ವದಲ್ಲೇ ಅತಿ ದೊಡ್ಡ ಕಾರ್ಖಾನೆಯಾಗಿತ್ತು.

ಜೆಡ್ಡಾ – ಕೇವಲ ಬಂದರು ನಗರ ಅಷ್ಟೇ ಅಲ್ಲ- ಸೌದಿಯ ರಾಜತಾಂತ್ರಿಕ ಚಟುವಟಿಕೆಗಳ ಕೇಂದ್ರ ಕೂಡ ಹೌದು. ವಿದೇಶೀ ರಾಜತಾಂತ್ರಿಕರ ಕಛೇರಿಗಳ ಕೆಲವು ಇಲ್ಲೇ ಇವೆ. ಅರ್ಥಶಾಸ್ತ್ರ ಮತ್ತು ಆಡಳಿತದಲ್ಲಿ ಉನ್ನತ ಶಿಕ್ಷಣವನ್ನು 1967ರಲ್ಲಿ ಇಲ್ಲಿ ಸ್ಥಾಪಿಸತವಾದ “ಕಿಂಗ್ ಅಬ್ದುಲ್ ಅಜೀಚ್ ಯೂನಿರ್ವಸಿಟಿ” ಕೊಡುತ್ತಿದೆ. ಇಲ್ಲಿಂದ
ಮಕ್ಕಾ ಮದೀನಾಗಳಿಗೆ ರಾಷ್ಟ್ರೀಯ ಹೆದ್ದಾರಿಗಳಿವೆ ಇಲ್ಲಿನ ವಿಮಾನ ನಿಲ್ದಾಣ ಸಹ ಮಾಜಿ ದೊರೆ ಅಬ್ದುಲ್ ಅಜೀಜ್‌ನ ಹೆಸರನ್ನು ಧರಿಸಿದೆ.

ಸುಂದರ ವಿನ್ಯಾಸದ, ಯುರೊಪಿಯನ್ ಮಾದರಿಯ ವ್ಯಾಪಾರೀ ಸಂಕೀರ್ಣಗಳು, ವಿಶಾಲವಾದ ರಸ್ತೆಗಳು, ಆಧುನಿಕ ವಾಸ್ತುಶಿಲ್ಪ ವಿನ್ಯಾಸದ ಸೌಕರ್ಯಯುತ ಸುಂದರ ಭವನಗಳನ್ನು ಹೊಂದಿದೆ.

ಜೆಡ್ಡಾ – ರಿಯಾದ್ – ದಮಾಮ್‌ಗಳು ಅಂತರಾಷ್ಟ್ರೀಯ ನಗರಗಳು, ವ್ಯವಹಾರೋದ್ಯಮಗಳ ಮಹಾಕೇಂದ್ರಗಳು. ಹಳೇಬೇರು ಹೊಸ ಚಿಗುರುಗಳ ಅಪೂರ್ವ ಸಂಗಮ. ಆಧುನಿಕ ಜಗತ್ತಿನಲ್ಲಿ ಕಾಲಿಟ್ಟು ಎಲ್ಲದರಲ್ಲಿಯೂ ಪೈಪೋಟಿ ನಡೆಸುತ್ತಿದ್ದರೂ ಧಾರ್ಮಿಕ ಚೌಕಟ್ಟಿನಲ್ಲಿಯೇ ಕಾನೂನುಗಳನ್ನು ನಡವಳಿಕೆಗಳಷ್ಟು ಭಧ್ರವಾಗಿ ಜನರಲ್ಲಿ ಒತ್ತಾಯಿಸಿ ಬೇರೂರಿಸಿರುವ ದೇಶ ಸೌದಿ ಅರೇಬಿಯಾ.

ಭಾಷೆ :- ಸೌದಿ ಅರೇಬಿಯಾದ ರಾಷ್ಟ್ರೀಯ ಭಾಷೆ ಅರಬ್ಬಿ. ಸ್ಥಳೀಯರಿಗೆ ಈ ವರೆಗೂ ಇಂಗ್ಲೀಷ್ ಶಾಲೆಗಳಿಲ್ಲ. ಅರಬ್ಬಿ ಶಾಲೆಗಳಿಗೆ ಹೋಗಬೇಕು. ವಿದೇಶಿಯರ ಮಕ್ಕಳು ತಮ್ಮ ತಮ್ಮ ದೂತಾವಾಸಗಳಲ್ಲಿ ಇಂಗ್ಲೀಷ್ ಶಾಲೆಗಳಿಗೆ ಹೋಗುತ್ತಾರೆ.

ಇತ್ತೀಚಿನ 20 ವರ್ಷಗಳಲ್ಲಿ ಈ ಎಲ್ಲ ಇಂಗ್ಲೀಷ್ ಶಾಲೆಗಳು ಶುರುವಾದುದರಿಂದ ಸ್ಥಳೀಯರು, ಸ್ವಲ್ಪ ಇಂಗ್ಲೀಷ್ ಜ್ಞಾನ ಬೇಕೆನ್ನುವವರು “ಇಂಗ್ಲೀಷ್ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ.

ಸೌದಿ ಅರೇಬಿಯ ಪ್ರವೇಶಿಸಿದ ಮೇಲೆ ಸ್ಥಳೀಯರೊಂದಿಗೆ ಮಾತಾಡುವಲ್ಲಿ ಭಾಷಾ ಸಮಸ್ಯೆ ಕಾಡುತ್ತದೆ. ನಮ್ಮ ಕ್ಯಾಂಪಸ್‌ದಲ್ಲೇನೂ ತೊಂದರೆ ಇಲ್ಲ. ಪೇಟೆ ಗಳಲ್ಲೆಲ್ಲ ಬಹಳೇ ತೊಂದರೆ ಅನುಭವಿಸಬೇಕಾಯ್ತು. ಎಷ್ಟು ದಿವಸ ಅಂತಾ ಬಾಯಿಸನ್ನೆಯಿಂದ ವ್ಯವಹಾರ ಮಾಡಲಿಕ್ಕಾದೀತು? ಪ್ರಯತ್ನಿಸಿ ಕೆಲವೊಂದಿಷ್ಟಾದರೂ ಶಬ್ದ ಕಲಿಯಲೇ- ಬೇಕಾದ ಪ್ರಸಂಗ ಬಂದಿತು. ಅವನ್ನೆಲ್ಲ ಉಚ್ಚಾರ ಮಾಡಬೇಕಾದಾಗ ಗಂಟಲೋ- ಮೂಗಿನೊಳಗೋ ಬಿಗಿ ಹಿಡಿದು ಮಾತನಾಡಬೇಕು. ನಾನು ಕಡೆಗೂ ಒಂದಷ್ಟು ಮಾತಾಡಲು ಕಲಿತೆ. ನನ್ನ ಅರಬ್ಬೀ ಶಬ್ದ ಭಂಡಾರದ ಕೆಲ ಮುತ್ತುಗಳನ್ನು ನೋಡಿ.

Hellow- Marahaba (ಮರ್‌ಹಬಾ)

Good Morning- Sabah a1 khair (ಸಬಾ ಅಲ್‌ಖೈರ್)
Good bye- Ma’a As-Salama (ಮಾ ಸ್ಸಲಾಮಾ)
How are you- Kaif Halik (ಕೈಫ್ ಹಲಿಕ್)
Market- Souq ( ಸೂಖ್ )

How much- Kam (ಕಮ್)
Money- Nuq§uud (ನುಕ್ಕದೆ)

Milk- Halib (ಹಾಲಿಬ್)

Water- Maa (ಮಾ)

Yes- Naum (ನಾಮ್)

N0 La (ಲಾ)

Please- Min Fadlak (ಮಿನ್ ಫದಲಕ್)

Post- Bareed (ಬರೀದ್)

Sorry- Mutassif (ಮುತಾಸಿಫ್ )

Suitcase- Shanta (ಶಂತಾ)
Thanks Shukran (ಶುಕ್ಸ್ನ್)
Good Evening Masa Al Khair (ಮಸ್ಯಾಲ್ ಖ್ಯೆರ್)

ಇನ್ನೂ ಸಾಕಷ್ಟಿವೆ. ಇವರ ಇಲ್ಲಿಯ ದಿವಸಗಳು(ನಮ್ಮಲ್ಲಿ ಸೋಮವಾರ ದಿಂದ ಶುರುವಾದಂತೆ) ಶನಿವಾರದಿಂದ ಶುರುವಾಗುವವು. ಗುರುವಾರ ಶುಕ್ರವಾರ ರಜಾ ದಿನಗಳು.

ಶನಿವಾರ – ಅಸ್ಸಬಾತ್
ರವಿವಾರ – ಅಲ್ಅಹದ್
ಸೋಮವಾರ – ಯ್ಯೋಮಾಲ್ಇತನೀನ್
ಮಂಗಳವಾರ – ಯ್ಯಾಮಾಲ್‌ ತಲಥಾ
ಬುಧವಾರ – ಯ್ಯಾಮಾಲ್ ಅರಬಾ
ಗುರುವಾರ – ಯ್ಯಾೕಮಲ್ ಖಮೀಸ್
ಶುಕ್ರವಾರ – ಯ್ಯಾೕಮಲ್ ಜುಮ್ಮಾ

ಇದೆ: ತರಹ ಅಂಕಿಗಳು-

1- ವಹದ್
2- ಇತ್ನಿಲಿನ್
3 – ತಲಥಾ
4 – ಅರಬಾ
5 – ಖಮ್ಸಾ
6 – ಸಿತ್ತಾ
7 – ಸಬಾ
8 – ತಮಾನಿಯಾ
9 – ತಿಸ್ಸಾ
10 – ಅಶ್ರಾ
ಮುಂದೆ ಹೆಚ್ಚಿನ ಅಂಕಿಗಳು ಹೇಳಬೇಕಾದರೆ ಇವನ್ನೇ ಒಂದನ್ನೊಂದು ಕೂಡಿಸಿ ಮತ್ತೂ ಆಗಾಗ ಕೈಸನ್ನೆ ಮಾಡಿಹೇಳುತ್ತಿದ್ದೆವು.

ನಮ್ಮ ಕ್ಯಾಂಪಸ್ :- ನಾವಿರುವ ಕ್ಯಾಂಪಸ್ ತುಂಬಾ ಪ್ರಶಾಂತವಾದುದು. ಬಾಂಬೆಯ ಗಡಿಬಿಡಿ ಗಜಿಬಿಜಿ ವಾತಾವರಣದಲ್ಲಿ ಎರಡೇ ವರ್ಷ ಕಳೆದು ಬಂದಿದ್ದೆ. ಇಲ್ಲಿ ಒಮ್ಮಲೆ ಬಿಕೋ ಅನಿಸತೊಡಗಿತು. ಎಲ್ಲರ ಚಿಕ್ಕ ಚಿಕ್ಕ ಸುಂದರವಾದ ಮನೆಗಳು ಬಿಡಿ ಬಿಡಿಯಾಗಿಯೇ ಇವೆ. 1000 ಮನೆಗಳು, 4000 ಜನರ ವಾಸಸ್ಥಾನ. ಇಲ್ಲಿ. ಎಲ್ಲ ದೇಶದ ಜನರು ಕಾಣುವರು. ಶೇ. 80ರಷ್ಟು ಜರ್ಮನ್‌ರು, ಉಳಿದೆಲ್ಲ – ಅಮೆರಿಕನ್, ಬ್ರಿಟಿಷ್, ಆಸ್ಟ್ರೇಲಿಯನ್ನರು, ಫ್ರೆಂಚರು ಭಾರತೀಯರಾದ ನಾವು ನಾಲ್ಕು ಕುಟುಂಬದವರು.

‘ಭಾಗಿಯಾ’ ಅನ್ನುವವರು ಇಲ್ಲಿ ಒಳ್ಳೆಯ ಇಂಜಿನೀಯರ ಹುದ್ದೆಯಲ್ಲಿ ಇದ್ದಾರೆ. ಇವರ ಶ್ರೀಮತಿ ಕ್ಯಾಂಪಸ್ಸಿನ ಲೇಡೀಸ್ ಕ್ಲಬ್‌ನ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರು. ಇಪ್ಪತ್ತು ವರ್ಷ ಜರ್ಮನಿಯಲ್ಲಿ ಇದ್ದು ಈಗ ಇಲ್ಲಿಗೆ ಬಂದು 4-5 ವರ್ಷಗಳಾಗಿವೆ. ಮತ್ತೊಬ್ಬರು ಕೇರಳದ ‘ಚಾಕೋ’ ಎನ್ನುವವರು. ಕ್ಯಾಂಪ್ ಆಸ್ಪತ್ರೆಯ ನರ್ಸ್ ಸಿಬ್ಬಂದಿವರ್ಗದ ಮೇಲ್ವಿಚಾರಕಾರಾಗಿದ್ದಾರೆ. ಮತ್ತೊಬ್ಬರು ಮಂಗಳೂರಿನ ‘ಪಿಂಟೋ’ ಎನ್ನುವವರು. ಇವರು ಬಂದು ಒಂದು ವರ್ಷ ಆಗಿತ್ತಷ್ಟೆ.

ಕ್ಯಾಂಪಿನ ಒಳಗಡಯೇ ಒಂದು ಸೂಪರ್‌ಮಾರ್ಕೆಟ್ ಇದೆ. ತರಕಾರಿ, ಹಣ್ಣು, ಹಾಲುಗಳಿಂದ ಹಿಡಿದು ಮಾಂಸಾಹಾರಿ ತಿಂಡಿತಿನಿಸುಗಳು, ಡಬ್ಬಿ ಆಹಾರ, ತಂಪು ಪಾನೀಯಗಳು ಹಾಗೂ ಇತರ ಸಾಮಾನುಗಳವರೆಗೆಲ್ಲ ಸಿಗುತ್ತವೆ. ಇದಕ್ಕೆ ಹೊಂದಿಕೊಂಡು ಲಾಂಡ್ರಿ, ಹೋಟೆಲು, ಕ್ಯಾಂಪಿನ ಜನವಸತಿಯ ಸೌಕರ್ಯಕ್ಕೆ ಸದಾ ಸಿದ್ಧವಾಗಲು ಒಂದು ಕ್ಯಾಂಪ್ ಆಫೀಸ್ ಇವೆ. ಈ ಅಫೀಸಿನ ಹಿಂದುಗಡೆಯೇ ದೊಡ್ಡ ದಾದ ಸುಂದರವಾದ ಈಜುಕೊಳ, ಚಿಕ್ಕಮಕ್ಕಳಿಗೊಂದು ಈಜುಗೊಳಬೇರೆ. ಇದರ ಹಿಂದುಗಡೆಯೇ ಗೋಲಾಕಾರದ ದೊಡ್ಡ ಪಾರ್ಟಿಹೌಸ್ ಇದೆ. ಏನಾದರೂ ದೊಡ್ಡ
ಕಾರ್ಯಕ್ರಮಗಳು ಮಾಡಬೇಕಿದ್ದರೆ ಮೊದಲೇ ಕ್ಯಾಂಪ್ ಅಫೀಸ್‌ನಲ್ಲಿ ತಾರೀಖು-ಸಮಯ ಹೊಂದಿಕೊಂಡರೆ ನಮಗೆ ಬೇಕಾದಂತೆ ಅವರೆಲ್ಲ ನೀಟಾಗಿ ಹೊಂದಿಸಿ ಕೊಡುವರು. ಬರ್ತ್‌ಡೇ ಪಾರ್ಟಿ, ಹೊಸ ವರ್ಷದ ಹಬ್ಬಗಳೋ, ಕ್ರಿಸ್ಮಸ್ ಪಾರ್ಟಿಗಳು ಇದ್ದರೆ ಇಲ್ಲೆಲ್ಲ ಅನುಕೂಲ ಇದೆ. ಪಕ್ಕದದಲ್ಲಿಯೇ ಅಡುಗೆ ಮನೆ.

ಪ್ರತಿ ತಿಂಗಳೂ ಎರಡು ಸಲ ಈ ಅಡಿಗೆ ಮನೆಯಲ್ಲಿ ಬೇರೆ ಬೇರೆ ದೇಶದವರ ತಿಂಡಿ ತಿನಿಸುಗಳನ್ನು ಕಲಿತುಕೊಳ್ಳುವ ಅಥವಾ ಪ್ರದರ್ಶಿಸುವ ಒಳ್ಳೆಯ ಅವಕಾಶ ನಮ್ಮ ‘ಏರ್‌ಪೋರ್ಟ್‌ ಸರ್ಕಲ್ ಲೇಡೀಸ್ ಕ್ಲಬ್’ದವರು ಮಾಡಿಕೊಂಡಿ- ರುವರು. ಮುಂಜಾನೆ 9 ರಿಂದ 12-1ರವರಗೆ ಅಲ್ಲಿ ಏನಾದರೂ ಕಾರ್ಯಕ್ರಮಗಳು ನಡೆದೇ ಇರುತ್ತವೆ.

ಪಾರ್ಟಿಹೌಸ್ ಪಕ್ಕದಲ್ಲಿ ಯೇ ಅತಿ ದೊಡ್ಡದಾದ ವ್ಯಾಯಾಮ ಕೋಣೆ. ಇಲ್ಲಿ ವ್ಯಾಯಾಮ ಮಾಡುವವರಿಗೆ ಸಾಕಷ್ಟು ಅನುಕೂಲತೆಗಳಿವೆ. ಹಾಗೆಯೇ ಮುಂದೆ ಬಂದು ಎಡಕ್ಕೆ ಹೊರಳಿದರೆ ವಿಡಿಯೋ ಲೈಬ್ರರಿ (ಕೇವಲ ಇಂಗ್ಲೀಷ್) ಸ್ವಲ್ಪ ಮುಂದೆ ಹೋಗಿ ದೊಡ್ಡಗೇಟು ತೆಗೆದು ಒಳಗೆ ಹೋದರೆ ಓಪನ್ ಏರ್ ಥಿಯೇಟರ್ (ಕೇವಲ ಕ್ಯಾಂಪಿನವಂಗೆ ಮಾತ್ರ) ಇದೆ.

ಈ ಕ್ಯಾಂಪಿನಲ್ಲಿ ಸ್ಥಳೀಯ ಅರಬರಿಗೆ ಅಥವಾ ಮುಸ್ಲಿಂರಿಗೆ ಇರಲು ಅವಕಾಶವಿದ್ದಿಲ್ಲ. ಮುಸ್ಲಿಂಮೇತರು ಮಾತ್ರ ಇರಬಹುದು. ಪಾಶ್ಚಾತ್ಯರ ಸಂಸ್ಕೃತಿ ಆಚಾರ ವಿಚಾರಗಳು ತಮ್ಮ ಕುಟುಂಬಗಳ ಮೇಲೆ ಪರಿಣಾಮ ಬೀರಬಾರ- ದೆನ್ನುವುದು ಅವರ ಅಭಿಪ್ರಾಯ. ಇತ್ತೀಚೆಗೆ ಇದೆಲ್ಲಾ ಬದಲಾಗುತ್ತಿದೆ.

ಇಲ್ಲಿ ಪ್ರತಿಯೊಬ್ಬರಿಗೂ ಒಂದೋ, ಎರಡೋ ಕಾರುಗಳು ಇದ್ದೇ ಇವೆ. ಅರೇಬಿಯ ಪೆಟ್ರೋಲಿಗೆಂದೇ ಹೆಸರಾದ ನಾಡಲ್ಲವೆ? ‘ನೀರಿಗಿಂತ ಪೆಟ್ರೋಲ್ ಅತಿ ಅಗ್ಗ’ ಅನ್ನುವ ಮಾತು ಇಲ್ಲಿನ ವಿಚಿತ್ರ ಸತ್ಯ! ಪೆಟ್ರೋಲ್ ಅಗ್ಗವೆಂದ ಮೇಲೆ ತಿರುಗಲಿಕ್ಕೆ ಇನ್ನೇನಂತೆ? ಕಾರು ಕೊಂಡು ಕೊಳ್ಳುವಲ್ಲಾಗಲೀ ಅಥವಾ ಇತರ ವ್ಯವಹಾರದಲ್ಲಾಗಲೀ ಯಾವ ಟ್ಯಾಕ್ಸ್‌ಗಳೂ ಇರುವುದಿಲ್ಲ, ಒಳ್ಳೊಳ್ಳೆಯ ಕಾರುಗಳನ್ನು ಕೊಳ್ಳುವದು; ಪೆಟ್ರೋಲ್. ತುಂಬಿಸುವುದು; ಮನ ಬಂದಷ್ಟು ಓಡಿಸುವದು. ಅರಬರ ಕುಟುಂಬಗಳಿಗಂತೂ ಸಣ್ಣವು ದೊಡ್ಡವು ಎಂದು ಎರಡು ಮೂರು ಕಾರುಗಳಾದರೂ ಇದ್ದೆ ಇರುತ್ತವೆ.

ನಮ್ಮ ಭಾರತದಲ್ಲಿ ಕೊಳ್ಳುವ ಕಾರಿನ ಬೆಲೆಗೆ ಹೋಲಿಸಿದರೆ ಇಲ್ಲಿಯವು ತುಂಬಾ ಸೋವಿ. ಇಲ್ಲಿಯ ಕಾರು ನಾವು ಭಾರತಕ್ಕೆ ಒಯ್ಯಬೇಕಾದರೆ ಮೂರುವರೆ ಪಟ್ಟು ದುಡ್ಡು ಹೆಚ್ಚು ಕೊಟ್ಟು ತೆಗೆದುಕೊಳ್ಳಬೇಕು. ನಮಗೆ ಕಂಪನಿಯಿಂದ ಕೊಟ್ಟ ಕಾರು ಇದ್ದದ್ದರಿಂದ ಕಾರಿಗಾಗಲೀ ಪೆಟ್ರೋಲ್‌ಗಾಗಲೀ ತಲೆಕೆಡಸಿಕೊಳ್ಳುವ ಪ್ರಮೇಯವೇ ಇರಲಿಲ್ಲ. ಪೆಟ್ರೋಲ್ ತೀರಿದಾಗ ಕಂಪನಿಯ ಪೆಟ್ರೋಲ್ ಸ್ಟೇಷನ್‌ನಿಂದ ಪುಕ್ಕಟೆಯಾಗಿ ಅಥವಾ ಹೊರಗಡೆ ಹೋದಾಗ ಬೇಕಾದರೆ 50 ಪೈಸೆಗೆ 1 ಲೀಟರಿನಂತೆ ಬೇಕಷ್ಟು ತುಂಬಿಸಿಕೊಂಡು ಓಡಿಸುವದು ಮಾತ್ರ.

ಈ ಹತ್ತು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಕಾರುಗಳ ಅನುಭವ ಪಡೆದದ್ದಾಯ್ತು. ಹೊಸದರಲ್ಲಿ ನಾವು ಬಂದಾಗ ಜರ್ಮನ್‌ದ ‘ಫೋಕ್ಸ್‌ವ್ಯಾಗನ್’ ಕಾರು ಇತ್ತು. ಎರಡು ವರ್ಷಗಳ ನಂತರ ಒಳ್ಳೆಯ ಮಝಡಾ ಕಾರು, ಮೂರು ವರ್ಷಗಳ ನಂತರ ದೊಡ್ಡ ಟೊಯೋಟಾ ಕ್ರಸಿಡಾ XL (ಎಕಸ್ಟ್ರಾಲಾರ್ಜ್)ಗಳಿದ್ದವು.

ಕಾರಿನ ಅನುಕೂಲತೆಗಳು ಹೇಳತೀರದು. ಸೀಟುಗಳು ಬೇಕಾದ ಹಾಗೆ ಸರಿಸಾಡಿ ಕೊಳ್ಳಲು ಅನುಕೂಲ, ಒಂದು ಗುಂಡಿ ಒತ್ತಿದರೆ ಕಿಟಕಿಯ ಗ್ಲಾಸ್ ಇಳಿಯುವದು, ಇನ್ನೊಂದನ್ನು ಒತ್ತಿದರೆ ಏರುವದು, (ಕೈಯಿಂದ ಸುತ್ತಿ ಸುತ್ತಿ ಏರಿಳಿಸಬೇಕಿಲ್ಲ) ಹವಾ ನಿಯಂತ್ರಿತ, ಸ್ಟೀರಿಯೋ ರೇಡಿಯೊಳಗಳ, ಸಣ್ಣ ಗಡಿಯಾರದ ವ್ಯವಸ್ಥೆಯೂ ಇರುವದು. ಅಷ್ಟೇಅಲ್ಲದೆ 120 ಕಿ.ಮೀ.ಕ್ಕಿಂತಲೂ ಜೋರಾಗಿ ಹೊರಟರೆ ಎಚ್ಚರಿಕೆ, ಕೊಡುವ ಅಲಾರ್ಮಗಂಟೆ, ಆಕಸ್ಮಿಕವಾಗಿ ಬಾಗಿಲು ಸರಿಯಾಗಿ ಹಾಕದೇ ಇದ್ದರೆ ಅಪಾಯದ ಕೆಂಪುದೀಪ ಹತ್ತಿಕೊಂಡು ಬಿಪ್ ಬಿಪ್ ಸಪ್ಪಳ ಮಾಡುವುದು. ಪ್ರತಿಯೊಬ್ಬರೂ ಬೆಲ್ಟ್ ಹಾಕಿಕೊಂಡು ಗಟ್ಟಿಯಾಗಿ ಕೂಡುವ ಅನುಕೂಲತೆ, ಮುಂದೆ ಅಪ್ಪಳಿಸಿ ಎದೆ-ತಲೆ-ಹಲ್ಲುಗಳಿಗೆ ಹೊಡೆತ ಬೀಳದಂತೆ ಅಟೊಮೆಟಿಕ್ ಆಗಿ ಬೆಲ್ಟ್ ದೇಹವನ್ನು ತಡೆಹಿಡಿಯುವದರಿಂದ ಅನಾಹುತಗಳನ್ನು ತಪ್ಪಿಸಿ- ಕೊಳ್ಳಲಿಕ್ಕೆ ಅನುಕೂಲ. ಕೆಲವು ಕಾರುಗಳಿಗೆ ಎಕ್ಸಲ್‌ರೇಟರ್ ಅಷ್ಟೇ ಒತ್ತುವದರಿಂದ ವೇಗ ಏರಿಳಿಸಿ ಕೊಳ್ಳಬಹುದು. ಇವುಗಳಲ್ಲಿ ವೇಗಕ್ಕೆಂದು ಬದಲಾಯಿಸುವ ಗೇರುಗಳಿರುವದಿಲ್ಲ. ಎಡಬಲಕ್ಕೆ ಹೊರಳಲು ಅಥವಾ ರಸ್ತೆ ಪಕ್ಕದಲ್ಲಿ ನಿಲ್ಲಿಸಲಿಕ್ಕಾಗಲೀ ಲೈಟ್ ಸೂಚಿಗಳು, ಮುಂದೆ ಹಾಗೂ ಸುತ್ತೆಲ್ಲ ವಿಶಾಲವಾದ ಒಳ್ಳೆ ಗುಣಮಟ್ಟದ ಗಾಜುಗಳು, ಇಂತಹ ಸುಂದರ ಕಾರುಗಳಿಗೆ ಅನುಕೂಲವಾಗುವಂತಹ ರಸ್ತೆಗಳು, ರಸ್ತೆಗಳಲ್ಲಿ ಅಪಘಾತಗಳಾಗದಂತೆ ಸಿಗ್ನಲ್‌ಗಳು (ದೇವಿಯ ಅಥವಾ ಭರತನಾಟ್ಯದ ಭಂಗಿಯ ಪೋಲಿಸರ ಕೈಗಳು ಇಲ್ಲಿ ಕಾಣುವುದಿಲ್ಲ) ಒಂದರ ಮೇಲೊಂದರಂತೆ ಅನೇಕ ಅನುಕೂಲತೆಗಳು. ಸಾಕಷ್ಟು ದೂರ ಪ್ರವಾಸಿಸಿದರೂ ಬೇಸರವೇ ಇಲ್ಲ.

ನಮ್ಮ ಭಾರತೀಯ ಯಾವುದಾದರೂ ಕಾರಿನಲ್ಲಿ ಈ ಅನುಕೂಲತೆಗಳಿವೆಯೇ? ಇತ್ತೀಚಿನ ಮಿನಿ ‘ಮಾರುತಿ’ ತಕ್ಕಮಟ್ಟಿಗೆ ಅನುಕೂಲತೆಗಳಷ್ಟು ಹೊಂದಿ ಅಷ್ಟಿಷ್ಟು ಖುಷಿಕೊಡುತ್ತದೆ. ನಮ್ಮಲ್ಲಿ ಮಾರಾಟ ಮಾಡುವ ಕಾರುಗಳ ಅಂಗಡಿಗಳಿಗಿಂತ ತುಕ್ಕು ಹಿಡಿದ ವರ್ಕಷಾಪ್‌ಗಳೇ ಹೆಚ್ಚಾಗಿ ಕಾಣುವುವು. ಆದರೆ ಈಗೀಗ ಅಟೋಮೊಬೈಲ್ ಕೈಗಾರಿಕೆಗೆ ಸರ್ಕಾರ ಕೊಟ್ಟರುವ ಕೆಲವು ರಿಯಾಯಿತಿಗಳಿಂದಾಗಿ ಕೆಲವು ಉತ್ತಮಿಕೆಗಳು ಕಾಣತೊಡಗಿವೆ. ಆದರೂ ಕೂಡಾ ನಮ್ಮಲ್ಲಿಯ ಸಿರಿವಂತರೂ ಮೇಲೆ ಹೇಳಿದಂಥ ಆಧುನಿಕ ಕಾರುಗಳನ್ನು ಭಾರತದಲ್ಲಿ ಪಡೆಯಲು ಇಪ್ಪತ್ತು ವರ್ಷಗಳಾದರೂ ಕಾಯಬೇಕೇನೋ.

ಬೆಳೆಯುತ್ತಿರುವ ಜೆಡ್ಡಾ ಪಟ್ಟಣದ ಒಳಹೊರಗಿನ ರಸ್ತೆಗಳ ವಿನ್ಯಾಸಗಳು ಸುಂದರವಾಗಿವೆ. ಯಾರಾದರೂ ಮೊದಲು ಸಲ ಜೆಡ್ಡಾ-ರಿಯಾದ್ ಪಟ್ಟಣಗಳಿಗೆ ಬರುವಾಗ, ‘ಮರುಭೂಮಿ, ಹಸಿರಿಲ್ಲದ ನೆಲ’ ಅಂದುಕೊಂಡವರಿಗೆ ವಿಮಾನ ನಿಲ್ದಾಣದಿಂದಿಳಿದು ಹೊರಬಂದ ತಕ್ಷಣ ಸುಮಾರು 5-10 ಕಿ.ಮೀ.ಗಳವರಗಿನ ದಟ್ಟ ಹಸಿರು, ಹೂವುಗಳಷ್ಟು ನೋಡಿ ಆಶ್ಚರ್ಯ-ದಿಗ್ಭ್ರಮೆ ಆಗುವದರಲ್ಲಿ ಸಂದೇಹವೇ ಇಲ್ಲ. ಎಷ್ಟೋ ಸಲ ನಾವು ಯಾವ ಹಸಿರು ನಾಡಿನಲ್ಲಿದ್ದೇವೆಂದು ನೆನಪಿಸಿಕೊಳ್ಳುವಂತಾಗುತ್ತದೆ. ರಸ್ತೆ ಎಡಬಲ ಬದಿಗೆ ಹೂವಿನ ಗಿಡಗಳ ಜೊತೆಗೆ ಸೌದಿ ಸಂಪ್ರದಾಯಿಕ ಖರ್ಜೂರದ (Palm tree) ಗಿಡಗಳೂ ಕಾಣುವುವು.

ಜೆಡ್ಡಾ ವಿಮಾನ ನಿಲ್ದಾಣದಿಂದ ಹೊರಬಿದ್ದ ನಂತರ ಸ್ವಲ್ಪ ಅಂತರದಲ್ಲಿ ಮೂರು ಮುಖ್ಯರಸ್ತೆಗಳು ಬೇರ ಬೇರೆ ಕಡೆಗೆ ಕವಲೊಡೆದು ನಗರದೆಡಗೆ ಧಾವಿಸುತ್ತವೆ. ಈ ಪ್ರತಿಯೊಂದು ಮುಖ್ಯ ರಸ್ತೆಗೆ ಎತ್ತರೆತ್ತರದ ಮಹಾದ್ವಾರಗಳು ಕಂಗೊಳಿ ಸುವುವು. ಇವು ನಾವು ನೋಡುತ್ತಿದ್ದಂತೆಯೇ 8-10 ತಿಂಗಳಲ್ಲಿ ನಿರ್ಮಾಣ ವಾದವುಗಳು.

ಈ ಮಹಾದ್ವಾರಗಳು ಥಳ ಥಳ ಹೊಳೆಯುವ ಸಂಗಮವರಿ ಕಲ್ಲುಗಳಿಂದ ಕಟ್ಟಿ ಒಳ ಹೊರಗೆಲ್ಲ ವಿದ್ಯುತ್ತಿನ ನೆಳಲು ಬೆಳಕು ಮಾಡಿರುವುದರಿಂದ ಜನಾಕರ್ಷಕ ವಾಗಿವೆ. ಈ ಮಹಾದ್ವಾರಗಳು ನೋಟದಲ್ಲಿ ಬಾಂಬೆಯ ಗೇಟ್‌ವೇ ಆಫ್ ಇಂಡಿಯಾ ತರಹ. ಅರಬ್ಬಿ ಕುಟುಂಬಗಳು ವಾರದ ಕೊನೆಗೆ ತಿಂಡಿ ತಿನಿಸುಗಳ ದೊಡ್ಡ ದೊಡ್ಡ ಡಬ್ಬಗಳನ್ನು ತಂದು ಕಾರ್ಪೆಟ್ ಹಾಕಿಕೊಂಡು ಇಲ್ಲಿ ಕುಳಿತು ಇಡೀ ದಿನ ವಿರಾಮವಾಗಿ ಸಂತೋಷಿಸುತ್ತಾರೆ.

ಈ ಪ್ರಮುಖ ಮೂರು ರಸ್ತೆಗಳಿಂದ 30 ಆಗಿ, 30 ರಿಂದ 300 ರಸ್ತೆಗಳಾಗಿ ಸುಂದರ ವಿನ್ಯಾಸದಲ್ಲಿ ಬ್ರಿಡ್ಜ್ ಮೇಲೆ, ಕೆಳಗೆ ಒಂದರೊಳಗೊಂದು ಹೊಕ್ಕು ಸುಳಿದಾಡಿವೆ. ದಿನ ದಿನಕ್ಕೆ ಬರುವ ಹೊಸ ಹೊಸರಸ್ತೆಗಳ ಪ್ರಜ್ಞೆ ವಾಹನ ಚಾಲಕನಿಗೆ ಇಲ್ಲದೇ ಹೋದರೆ ಗೊಂದಲಕ್ಕೀಡಾಗುವಲ್ಲಿ ಸಂಶಯವೇ ಇಲ್ಲ.

ಸಂಜೆ, ರಾತ್ರಿ ಈ ರಸ್ತೆಗಳ ಮೇಲೆ ಕಾರು ಓಡಾಡುತ್ತಿದ್ದರೆ ಅವುಗಳ ಲೈಟು, ರಸ್ತೆಯ ಕಂಬಗಳ ಝಗಝಗಿಸುವ ಲೈಟುಗಳು, ಅಕ್ಕ ಪಕ್ಕದ ದೊಡ್ಡ ದೊಡ್ಡ ಶೋರೂಂಗಳ ಬಣ್ಣ ಬಣ್ಣದ ದೀಪಗಳೆಲ್ಲ ಕೂಡಿ ಬಣ್ಣ ಬಣ್ಣದ ನೀರು ಹರಿದಾಡಿದಂತೆ ಭಾಸವಾಗುವುದು. ಬುದ್ಧಿವಂತರು ವೇಗದ ಮಿತಿ ಇಟ್ಟುಕೊಂಡು ನೇರವಾಗಿ ಹೊಡೆದರೆ ಸ್ಥಳೀಯ ಕೆಲವು ಯುವಕರು, ದೊಡ್ಡವರೂ ಕೂಡಾ ಕಾರೊಳಗೆ 8-10 ಜನರನ್ನು ತುಂಬಿಕೊಂಡು, ಸ್ಟೀರಿಯೋ ಹಚ್ಚಿಕೊಂಡು ವೇಗದ ಮಿತಿಯ ಕಲ್ಪನೆಯಿಲ್ಲದೆ ಓವರ್‌ಟೇಕ್ ಮಾಡುತ್ತ ಹೋಗುವರು, ಇದರಿಂದ ಸಾಕಷ್ಟು ಅಪಘಾತಗಳಾಗುತ್ತಿವೆ.

ಇಲ್ಲಿಯ ರಸ್ತೆಗಳು ಸಾಕಷ್ಟು ಅಗಲ ಇದ್ದು “ಏಕಮುಖ ಸಂಚಾರಕ್ಕೆ ಪ್ರಾಮುಖ್ಯತೆ (One way). ಒಂದೊಂದು ಹಾದಿಯಲ್ಲಿ ಏಕಕಾಲಕ್ಕೆ ವೇಗಕ್ಕನುಸಾರವಾಗಿ ವಾಹನಗಳು ಓಡುವವು. ನಮ್ಮಲ್ಲಿ ರಸ್ತೆಯ ಎಡಗಡೆ ವಾಹನಗಳನ್ನು ಓಡಿಸುತ್ತಿದ್ದರೆ ಇಲ್ಲಿ ಯುರೋಪಿನಲ್ಲಿಯಂತೆ ಬಲಗಡೆಗೆ ಓಡಿಸಬೇಕು. ಎಡಗಡೆಗೆ ಕುಳಿತು ಚಕ್ರ ಚಲಾಯಿಸುತ್ತ ಬಲಗಡೆಗೆ ಹೊಡೆಯಬೇಕು. ನಮ್ಮಲ್ಲಿ ಬಲಗಡೆಗೆ ಕುಳಿತು ಎಡಗಡೆಗೆ ಚಲಾಯಿಸಿದ ಹಾಗೆ.

ಒಳ್ಳೆಯ ವಾಹನಗಳು – ಒಳ್ಳೆಯ ರಸ್ತೆಗಳು, ಕಂಪ್ಯೂಟರ್ ಕಂಟ್ರೋಲದ ಸಿಗ್ನಲ್ ಗಳು ಇದ್ದು ಎಲ್ಲ ವಾಹನಗಳು ಯಾವುದೇ ತೊಂದರೆ ಇಲ್ಲದೆ 80-60 ಕಿ.ಮೀ. ವೇಗದಲ್ಲಿ ಚಲಿಸಬಹುದು. ಅದರೆ ನಗರ ಮಧ್ಯದಲ್ಲಿ ದಟ್ಟಣೆ ಇರುವದರಿಂದ ಕಾರುಗಳು ಬೇಗ ಮುಂದೆ ಚಲಿಸುವದೇ ಇಲ್ಲ.

ರಸ್ತೆಯ ಪೋಲೀಸರಂತೂ ಯಾವತ್ತೂ ಚುರುಕಾಗಿರುವರು. ಪ್ರತಿಯೊಬ್ಬರಿಗೂ ನಿಸ್ತಂತು (Cordless) ದೂರವಾಣಿ, ವಾಹನ, ಇದ್ದೇಇರುತ್ತದೆ. ಹೈವೇ ಪೆಟ್ರೋಲ್ ಕಾರುಗಳೂ ಇರುತ್ತವೆ. ರಸ್ತೆಯ ಮೇಲಿನ ವಾಹನ ಸಂಚಾರಗಳತ್ತ ಯಾವತ್ತೂ ಗಮನ ಇಟ್ಟು, ಅಪಘಾತಗಳೇನಾದರೂ ಆಗಿದ್ದರೆ ಬೇಗ ಬೇಗನೆ, ಕೇವಲ 10-15 ನಿಮಿಷಗಳಲ್ಲಿ ಎಲ್ಲ ತೆಗೆದು ಅಲ್ಲಿ ಏನೊ ನಡೆದೇ ಇಲ್ಲ ಅನ್ನೋ ತರಹ ಸ್ವಚ್ಚ ಮಾಡಿ ಬಿಡುವರು. ನಮ್ಮಲ್ಲಿ ಅರ್ಧ ಅಥವಾ ಒಂದು ದಿವಸ ಎಲ್ಲಾ ಹಾಗೇ ಇಟ್ಟು ಉಳಿದ ವಾಹನಗಳ ಸಂಚಾರಕ್ಕೆ ಅಡ್ಡಿಯಾದರೂ ಲಕ್ಷಿಸದೇ ಪೋಲೀಸರು-ಡಾಕ್ಟರರು ನೂರಾರು
ಪ್ರಶ್ನೆ ಮಾಡುತ್ತ ಎರಡೂ ಹೊಟ್ಟೆಬಾಕ ಪಾರ್ಟಿಗಳು ಏನೋ ಮಹಾಕಾರ್ಯ ಮಾಡುತ್ತಾ ಇರುವಂತೆ ನಟಿಸುವುದು ನಾವೆಲ್ಲಾ ನೋಡುತ್ತೇವೆ.

ಕಾರ್‌ಪಾರ್ಕ್ ವ್ಯವಸ್ಥೆ ಸಾಕಷ್ಟಿದ್ದರೂ ವಾರಾಂತ್ಯದಲ್ಲಿ ಬಹಳ ವಾಹನ ಗಳನ್ನು ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸದೇ ಅಲ್ಲಿ ಇಲ್ಲಿ ಎಲ್ಲಾದರೂ ರಸ್ತೆಗಳ ಪಕ್ಕದಲ್ಲಿ ನಿಲ್ಲಿಸಿ ಇಳಿದುಹೋದರೆ ಮುಗಿದೇಹೋಯ್ತು. ಪೊಲೀಸರು ಕ್ರೇನ್ ಮುಖಾಂತರ ಎತ್ತಿ ಪೋಲೀಸ್ ಸ್ಟೇಷನ್‌ದ ಗೇಟಿನೊಳಗೆ ಒಗೆದಿರುತ್ತಾರೆ. ದಂಡ ತುಂಬಿ ದೈನ್ಯವಾಗಿ ಮತ್ತೆ ಹಿಂತೆಗೆದುಕೊಳ್ಳ ಬೇಕಾ- ಗುವುದು.

20-25 ವರ್ಷಗಳ ಹಿಂದೆ ಒಂಟೆ ಓಡಿಸುತ್ತಿದ್ದ ಸ್ಥಳೀಯ ಜನ ಸಾಮಾನ್ಯರು ಇಂದು ನಿರರ್ಗಳವಾಗಿ ವಾಹನಗಳನ್ನು ಓಡಾಡಿಸುತ್ತಿದ್ದಾರೆ. ಪೆಟ್ರೋಲ್ ಅವರ ಹಿತ್ತಲ ಭಾವಿಯದೇ ಅಂದಮೇಲೆ ಕೇಳುವದೇನು? ‘

ಶಿಕ್ಷಣ ವ್ಯವಸ್ಥೆ :-
ನಮ್ಮ ಕ್ಯಾಂಪಸ್ಸಿನಲ್ಲಿ ನಾವು ಬಂದ ವರ್ಷವಷ್ಟೇ ಮಕ್ಕಳಿಗಾಗಿ ನರ್ಸರಿ ಸ್ಕೂಲ್ ಶುರುಮಾಡಿದ್ದರು. ನಮ್ಮ  ಮಗಳಿ- ಗೇನೂ ತೊಂದರೆಯಾಗಲಿಲ್ಲ. ಲಂಡನ್‌ದ ಶ್ರೀಮತಿ ‘ಡೋರಿ ಸ್ಮಿತ’ ಹಾಗೂ ಜಷಾನದ ಶ್ರೀಮತಿ ‘ಕಿಮೊ’ ಇಬ್ಬರೂ ಜೊತೆಗೂಡಿ ಸಾಕಷ್ಟು ಶ್ರಮವಹಿಸಿ ಮಕ್ಕಳಿಗೆ ಬೇಕಾದ ಆಟಿಗೆ-ತಿಂಡಿ ಸಾಮಾನುಗಳ ವ್ಯವಸ್ಥೆ ಮಾಡುತ್ತಿದ್ದರು. ಕೇವಲ 8 ಹುಡುಗರಿಂದ ಶುರುವಾದ ಈ ಸ್ಕೂಲಿನಲ್ಲಿ ಮುಂದಿನ 3 ವರ್ಷಗಳಲ್ಲಿ 35 ಹುಡುಗರಾದರು. 4 ವರ್ಷಗಳ ನಂತರ ಈ ಎರಡೂ ಕುಟುಂಬಗಳು ತಮ್ಮ ತಮ್ಮ ಕಂಪನಿ ಕಾಂಟ್ರಾಕ್ಟ್ ಮುಗಿದ ನಂತರ ಒಬ್ಬರು ಜಪಾನಕ್ಕೆ ಇನ್ನೊಬ್ಬರು (ಸ್ಮಿತ್) ಆಫ್ರಿಕಾದ ‘ನಾತಾಲ್’ ಪಟ್ಟಣಕ್ಕೆ ಹೋದರು.

ಈ ವರೆಗೂ ಅವರ ನಮ್ಮ ಸ್ನೇಹ ಎಷ್ಟು ಆತ್ಮೀಯವಾಗಿದೆ ಎಂದರೆ ಮರೆಯದೇ ಬರೆದು ಇತ್ತೀಚಿನ ವಿಷಯಗಳನ್ನು ತಿಳಿಸುತ್ತ ಖುಷಿಪಟ್ಟು ಕೊಳ್ಳುತ್ತೇವೆ.

ಜೆಡ್ಡಾದಲ್ಲಿ ಎಲ್ಲ ದೇಶದವರ ದೂತಾವಾಸ (Embassy) ಶಾಲೆಗಳಿವೆ. ಭಾರತೀಯ ದೂತವಾಸ ಶಾಲೆ, ಜರ್ಮನಿ ದೂತಾವಾಸ ಶಾಲೆ, ಇತ್ಯಾದಿ ಇವರು ತಮ್ಮ ತಮ್ಮ ದೇಶದ ಮಕ್ಕಳಿಗೆ ತಮ್ಮವರಿಂದಲೇ ಶಿಕ್ಷಣ ಕೊಡಿಸುವರು! ಭಾರತೀಯ ದೂತಾವಾಸ ಶಾಲೆಯಲ್ಲಿ ಭಾರತೀಯ ಸೆಂಟ್ರಲ್ ಸ್ಕೂಲ್ ಪಠ್ಯಪುಸ್ತಕಗಳನ್ನು ಅಭ್ಯಸಿಸಬೇಕು. ಸ್ಟೇಟ್ ಸ್ಕೂಲ್  ಪಠ್ಯಪುಸ್ತಕಗಳಿರುವುದಿಲ್ಲ. ತಕ್ಕಮಟ್ಟಗೆ ಶಿಕ್ಷಕ, ಸಿಬ್ಬಂದಿ ವರ್ಗ ಇದೆ.

ಬ್ರಿಟಿಷ್ ಕಾಂಟಿನೆಂಟಲ್ ಸ್ಕೂಲ್ – ಇದು ಬ್ರಿಟಿಷರು ನಡೆಸುವ ಶಾಲೆ, ತುಂಬಾ ಚೆನ್ನಾಗಿದೆ. ಹುಡುಗರಿಗೆ ಪಠ್ಯ ಪುಸ್ತಕಗಳ ಭಾರ ಆಗದಂತೆ ಪುಸ್ತಕಗಳ ಸಂಖ್ಯೆ ಕಡಿಮೆ ಮಾಡಿಸಿ ಸಾಮಾನ್ಯಜ್ಞಾನದ ಕಡೆಗೆ ಗಮನ ಹರಿಸಲು ಸಹಕರಿಸುವರು. ಒಂದು ತರಗತಿಯಲ್ಲಿ ಕೇವಲ 16 ಹುಡುಗರು ಮತ್ತು ಇಬ್ಬರು ಶಿಕ್ಷಕರು 8 ಹುಡುಗರ ಗುಂಪಿಗೆ
ಒಬ್ಬರು. ಪ್ರತಿಯೊಬ್ಬ ವಿದ್ಯಾರ್ಥಿಯ ಕಡೆಗೆ ಗಮನಕೊಟ್ಟು ಅವರ ಸಮಸ್ಯೆಗಳನ್ನೆಲ್ಲ ಕಂಡುಕೊಂಡು ಸಾವಧಾನವಾಗಿ ಬಗೆಹರಿಸುವ ರೀತಿ ನೋಡಿದರೆ ಬಹುಶಃ ತಂದೆ ತಾಯಿಗಳಿಗೆ ಅಷ್ಟೊಂದು ತಾಳ್ಮೆ ಬರಲಿಕ್ಕಿಲ್ಲವೇನೋ ಅನಿಸುತ್ತದೆ. ಅಲ್ಲಿಯ ಲೈಬ್ರರಿ ಪ್ರಯೋಗಶಾಲೆ, ಬಿಸಿನೀರಿನ ಈಜುಗೊಳ, ಸಂಗೀತದ ಹಜಾರ ಎಲ್ಲಾ ಅತೀ ನೀಟಾಗಿವೆ. ನಮ್ಮ ಮಕ್ಕಳಿಬ್ಬರೂ ಇದೇ ಶಾಲೆಯಲ್ಲಿ ಅಭ್ಯಸಿಸಿದರು.

“ಕಾಂಟಿನೆಂಟ”ಲ್ ಸ್ಕೂಲ್ ಅಂದಮೇಲೆ ಹೆಸರಿಗೆ ತಕ್ಕಂತೆ ಎಲ್ಲ ಖಂಡಗಳ ದೇಶಗಳ ಮಕ್ಕಳೂ ಅಲ್ಲಿ ಇದ್ದಾರೆ. ಯಾವ ಬೇದಭಾವ, ಇಲ್ಲದೆ ಮಕ್ಕಳು ಹೊಂದಿಕೊಳ್ಳುವ ರೀತಿ ದೊಡ್ಡವರನ್ನೂ ಮುಗ್ಧವಾಗಿಸುವಂಥದು.

ಪ್ರಾಥಮಿಕ ವಿದ್ಯಾರ್ಥಿಯೊಬ್ಬನ ಕೇವಲ ವರ್ಷದ ಶಾಲೆಯ ಅಂದಾಜು ಖರ್ಚು ರೂ. 60,000. ಬರೆ, ಇತರ ಖರ್ಚುಗಳೆಲ್ಲ ಬೇರೆ. ಕಂಪನಿಯವರು ಈ ಭಾರವನ್ನೂ ತಾವೇ ವಹಿಸಿಕೊಂಡಿರುವುದರಿಂದ ತೊಂದರೆ ಏನಿಲ್ಲ. ಪ್ರೈವೆಟ್ (ಸಣ್ಣ ಸಣ್ಣ ಅಫೀಸುಗಳಿಗೆ ಬಂದವರು) ದವರಿಗೆ ಈ ಅನುಕೂಲತೆಗಳಿಲ್ಲದಿದ್ದಲ್ಲಿ ಅಂಥವರು ತಮ್ಮ ತಮ್ಮ ದೂತಾವಾಸ ಶಾಲೆಗೆ ಕಳಿಸುವರು. ಹಾಗೆಂದೇನೊ ಇಲ್ಲ. ತಮ್ಮ ತಮ್ಮ ದೇಶಗಳಲ್ಲಿ ಮೊದಲೇ ಶಾಲೆಗೆ ಹೋಗು- ತ್ತಿದ್ದರೆ ಇಲ್ಲಿಯೂ ಹಾಗೇ ಪಠ್ಯ ಪುಸ್ತಕಗಳಿರುವುದರಿಂದ ಮಕ್ಕಳಿಗೆ ತೊಂದರೆಯಾಗಬಾರದೆನ್ನುವ ಉದ್ದೇಶದಿಂದಲೂ ಕಳಿಸುವರು. ಅವರವರ ಅನುಕೂಲ, ಅಭಿಪ್ರಾಯ, ಹಣದ ಶಕ್ತಿಯ ಮೇಲೆ ಸಂಬಂಧಿಸಿದ್ದು.

ವಿದ್ಯೆಯ ಗಾಳಿ ಸೌದಿಯಲ್ಲೆಲ್ಲ ಈಗ ಸಾಕಷ್ಟು ಬೀಸುತ್ತಿದೆ. ಸ್ಥಳೀಯರಿಗಾಗಿ ಅಲ್ಲಿಯ ಆಡಳಿತ ವರ್ಗ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದೆ. ಈಗಾಗಲೇ ಅನೇಕ ಕಾಲೇಜುಗಳು ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಶುರುವಾಗಿದೆ. ಸೌದಿಗಳು ಸಾಕಷ್ಟು ಪ್ರಮಾಣದಲ್ಲಿ ಇತ್ತೀಚೆಗೆ ಯೂರೋಪ್, ಅಮೇರಿಕಾ. ಇಂಡಿಯಾ ಕಡೆಗೆಲ್ಲ ಹೋಗಿ
ಉನ್ನತ ಶಿಕ್ಷಣ ಪಡೆದು ಬರುತ್ತಿದ್ದಾರೆ. ಅಮೇರಿಕಾದಲ್ಲಿ ಕಲಿತು ಬಂದವರಿಗೆ ಹೆಚ್ಚು ಸ್ಥಾನಮಾನ. ಸಮಾಜದಲ್ಲಿ ಅವರಿಗೆ ಅಷ್ಟೊಂದು ಅನುಭವ ಇಲ್ಲದಿದ್ದರೂ ಸ್ವದೇಶಿ ನಾಗರೀಕರಿಗೆ ಮೊದಲು ಪ್ರಾಶಸ್ತ್ಯ ಕೊಟ್ಟು ಒಳ್ಳೊಳ್ಳೆಯ ಹುದ್ದೆಯಲ್ಲಿ ನೌಕರಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ವೇತನ ಕೂಡಾ ಸಾಕಷ್ಟು ಹೆಚ್ಚು.

“ರಿಯಾದ್’ “ಜೆಡ್ಡಾ ಮತ್ತು ಇತರ ನಗರಗಳಲ್ಲಿ ಒಳ್ಳೆಯ ಮಹಿಳಾ ಕಾಲೇಜುಗಳು, ಶಾಲೆಗಳು ಇವೆ. ಯಾವತ್ತೂ ಬುರ್ಕಾದಲ್ಲಿಯೇ ಹುಡುಗಿಯರು ಬರಬೇಕು. ಬಣ್ಣ ಬಣ್ಣದ ಅರಿವೆಗಳು . ಫ್ಯಾನ್ಸಿಬ್ಯಾಗು-ಸರ-ಚೆಪ್ಪಲಿ ಎಲ್ಲದಕ್ಕೂ ಹೆಚ್ಚಾಗಿ ಅವರ ಶೃಂಗಾರ ಸಾಧನಗಳಾದ ಲಿಪ್‌ಸ್ಟಿಕ್, ಕಾಡಿಗೆ, ರೋಜ್, ನೇಲ್‌ಪಾಲಿಶ್- ಇವೆಲ್ಲ ಕಾಲೇಜ್ ಬಾಗಿಲವರೆಗೆ ಬುರ್ಕಾದಲ್ಲಿಯೇ ಇರಬೇಕು. ತಮ್ಮ ಸ್ವಂತ ಕಾರು ಅಥವಾ ಬಸ್ಸುಗಳಿದ್ದರೆ ಡ್ರೈವರ್ ಹೊರಗಡೆಯೇ ನಿಲ್ಲಿಸಬೇಕು. ಸ್ವತಃ ತಂದೆ ಇದ್ದರೂ ಕಾಲೇಜ್ ಒಳಗಡೆ ಹೋಗಲು ಅವಕಾಶ ಇಲ್ಲ. ತಂದೆ ಹೊರಗಡೆ ನಿಂತಿರಬೇಕು. ಅಂತಹ ಕೆಲಸಗಳೇನಾದರೂ ಇದ್ದರೆ ತಾಯಿ ಅಥವಾ ಅಜ್ಜಿ ಮಾತ್ರ ಬಾಗಿಲು ತೆಗೆದು ಕಾಲೇಜ್ ಆವರಣದಲ್ಲಿ ಹೆಜ್ಜೆ ಇಡುವರು. ಹುಡುಗಿಯರು ತಮ್ಮ ಕ್ಲಾಸು ಪ್ರವೇಶಿಸುವುದೇ ತಡ, ತಮ್ಮ ಬುರ್ಕಾ ತೆಗೆದು ಗೋಡೆಗೆ ನೀಟಾಗಿ ಮಾಡಿದ ಹುಕ್‌ಗಳಿಗೆ ಸಿಲುಕಿಸಿ ತಮ್ಮ ಕ್ಲಾಸ್‌ಗಳು ಮುಗಿಯುವವರಗೆ ಆರಾಮವಾಗಿ ಓಡಾಡಿಕೊಂಡಿರುತ್ತಾರೆ.

ಒಳಗಡೆ ಎಲ್ಲ ಮಹಿಳಾ ಉಪಾಧ್ಯಾಯನಿಯರೇ ಇರುವದು. ಕೆಲವೊಂದು ವಿಷಯಗಳಿಗೆ ಉಪಾಧ್ಯಾಯರು ಇರುವದು. ಇವರ ಮುಂದೆ ಬುರ್ಕಾ ಇಲ್ಲದ ವಿದ್ಯಾರ್ಥಿನಿಯರು ಕುಳಿತು ಪಾಠ ಹೇಳಿಸಿಕೊಳ್ಳುವಂತಿಲ್ಲ. ಅಂತೆಯೇ ಕ್ಲಾಸಿನಲ್ಲಿ ಟಿ.ವಿ.ಗಳನ್ನ ಳವಡಿಸಿರುವರು. ಉಪಾಧ್ಯಾಯರು ತಾವು ತಮ್ಮ ರೂಂನಲ್ಲಿ ಕುಳಿತು ಟಿವಿ ಕ್ಯಾಮರಾದೆದುರು ವಿವರಿಸುತ್ತಾರೆ. ಒಂದೆಡೆಗೆ ಇಂಟರ್‌ಕಾಮ್ ಟೆಲಿಫೋನ್ ಇರುತ್ತದೆ. ಏನೇ ಚರ್ಚಾಸ್ಪರ್ಧೆ ವಿಷಯಗಳಿದ್ದರೆ ಈ ಕಡೆಯಿಂದ ವಿದ್ಯಾರ್ಥಿನಿ ಫೋನ್ ಮೂಲಕ ಪ್ರಶ್ನಿಸುತ್ತಿದ್ದಂತೆಯೇ ದೂರದರ್ಶನದಲ್ಲಿ ಉಪಾಧ್ಯಾಯರು ಉತ್ತರಿ- ಸುತ್ತಾರೆ. ಇಲ್ಲಿ ವಿದ್ಯಾರ್ಥಿನಿಯರಿಗೆ ಉಪನ್ಯಾಸಕ ಕಾಣಿಸುತ್ತಾನೆ. ಅದರ ಉಪನ್ಯಾಸಕನಿಗೆ ವಿದ್ಯಾರ್ಧಿನಿ ಯರು ಕಾಣಿಸುವುದಿಲ್ಲ. ಹೇಗಿದೆ ಸಂಪ್ರದಾಯದ ಕಟ್ಟೆಚ್ಚರಿಕೆ.

ಕರೆನ್ಸಿ ಹಾಗೂ ಬ್ಯಾಂಕುಗಳು

ಸೌದಿ ಅರೇಬಿಯದ ಹಣದ ಮಾಧ್ಯಮವನ್ನು “ರಿಯಾಲ್ (ರೂಪಾಯಿಯಂತೆ) ಹಲಾಲ್ (ಪೈಸೆಗಳಂತೆ) ಎಂದೆನ್ನುವರು. 1953ರ ಮೊದಲು ಸೌದಿ ಅರೇಬಿಯಾದಲ್ಲಿ ನೋಟುಗಳೇ ಇರಲಿಲ್ಲವಂತೆ. ತಾಮ್ರದ ದುಡ್ಡುಗಳು, ಬೆಳ್ಳಿಯ ನಾಣ್ಯಗಳಿಂದ ವ್ಯವಹಾರ ನಡೆಸುತ್ತಿದ್ದರಂತೆ. ನಂತರ ಬ್ರಿಟಿಷರ ಇಲ್ಲಿಯ ವ್ಯಾಪಾರಿ ಮಾರ್ಗದಲ್ಲಿ ಬಂಗಾರ
ನಾಣ್ಯಗಳು ಬಳಕೆಗೆ ಬಂದವು. ವರ್ಷಕ್ಕೊಮ್ಮೆ ಬರುವ ಯಾತ್ರಿಕರಿಂದ ಅವರವರಲ್ಲಿಯೇ ನೋಟಿನ ವ್ಯವಹಾರಗಳು ಮಾತ್ರ. ಇಲ್ಲಿ ದೊಡ್ಡ ದೊಡ್ಡ ಔದ್ಯೋಗಿಕ ಕೇಂದ್ರಗಳಾಗಲೀ, ಫಲವತ್ತಾದ ಭೂಮಿಗಳಾಗಲಿ ಇಲ್ಲವೆಂದ ಮೇಲೆ ದೊಡ್ಡ ಪ್ರಮಾಣದಲ್ಲಿ ಹಣದ ವ್ಯವಹಾರವಾದರೂ ಹೇಗೆ ಸಾಗಬೇಕು? ಯಾತ್ರಿಕರು ಬರುವ ಋತುಮಾನದಲ್ಲಿಯೇ ಸ್ಥಳೀಯ ವ್ಯಾಪಾರಗಾರರು ನೂರೆಂಟು ನೆಪ ಹೇಳಿ ಹಣದೋಚಿಕೊಳ್ಳುವದರಲ್ಲಿ ನಿಪುಣರಾಗಿದ್ದರು.

ಬ್ಯಾಂಕಿನ ವ್ಯವಸ್ಥೆ ಇರಲಿಲ್ಲವೆಂದ ಮೇಲೆ ಬ್ಯಾಂಕು, ಅದರ ವ್ಯವಹಾರದ ಮಾತು ದೂರವೇ ಉಳಿಯಿತು ಆ ಕಾಲದಲ್ಲಿ.

ಸುಮಾರು 1946ರಲ್ಲಿ ಆಬ್ದುಲ್ ಅಜೀಜ್‌ನ ಆಡಳಿತದಲ್ಲಿ ಒಪ್ಪಂದದ ಮೇರೆಗೆ ಅಮೇರಿಕನ್ ಆಯಿಲ್ ಕಂಪನಿ ಇಲ್ಲಿ ಬಂದು ಸತತ ಪರಿಶ್ರಮದಿಂದ ಎಣ್ಣೆಯ ಹೊಳೆಯನ್ನೇ ಹರಿಸಿದ ನಂತರ ಸೌದಿ ಅರೇಬಿಯದ ಅರ್ಥವ್ಯವಸ್ಥೆಗೆ ಪ್ರಾಣವಾಯು ಸಂಚರಿಸಿದಂತಾಯಿತೆಂದು ಹೇಳಬಹುದು. 1952ರ ಹೊತ್ತಿಗೆ ಕೋಟಿಗಟ್ಟಲೆ ಹಣ ಬಂದು ಬೀಳತೊಡಗಿದಂತೆ ವಿದೇಶಗಳೊಂದಿಗೆ ವ್ಯವಹರಿಸುವ ಅವಕಾಶ ಒದಗಿ ಬಂದಿತು.

ಇಷ್ಟು ವರ್ಷಗಳವರೆಗೆ ಬ್ರಿಟೀಷ್‌ರ ಬಂಗಾರ ನಾಣ್ಯ ಆಗೀಗ ಬಳಕೆಯಲ್ಲಿದ್ದನ್ನು ಪೂರ್ತಿಯಾಗಿ ತೆಗೆದೊಗೆದು ಸುಮಾರು 1953ರ ಹೊತ್ತಿಗೆ ತಮ್ಮ ದೇಶೀಯ ಬಂಗಾರ ನಾಣ್ಯ ಹೊರಡಿಸಿ ಚಲಾವಣೆಗೆ ತಂದರು. 1958ರ ಹೊತ್ತಿಗೆ ಬೆಳ್ಳಿ ನಾಣ್ಯಗಳು ‘ರಿಯಾಲ್ ‘ಹಲಾಲಾ’ ಎಂದು ಬಿಡುಗಡೆಗೊಳ್ಳುತ್ತದ್ದಂತೆಯೇ ನೋಟಿನ ಬಳಕೆಯೂ ಆರಂಭ ವಾಯಿತು. ಅಂದಿನಿಂದ 1,5,10,50,100,500 ರಿಯಾಲ್ ಎಂಬ ನೋಟುಗಳು ಬಳಕೆಯಲ್ಲಿವೆ.

ಕ್ರಮೇಣ 1961ರ ಹೊತ್ತಿಗೆ ಬೆಳ್ಳಿ ಬಂಗಾರ ನಾಣ್ಯಗಳು ಮರೆಯಾಗಿ ಈಗಿರುವ ಉಕ್ಕಿನ ನಾಣ್ಯಗಳು ಬಳಕೆಗೆ ಬಂದವು. ವಿದೇಶಗಳಿಂದ ಪೆಟ್ರೋಡಾಲರ್‌ರಗಳು, ಪೌಂಡಗಳು ಬಂದು ಬೀಳತೊಡಗಿದವು. ವಿದೇಶಿ ಬ್ಯಾಂಕ್‌ಗಳು ಎಚ್ಚೆತ್ತವು. ಸೌದಿ ಅರೇಬಿಯದ ತುಂಬೆಲ್ಲ ತಮ್ಮ ಶಾಖೆಗಳನ್ನು ಹಾಕಲು ಹಾತೊರೆದರು. ಅಂತೆಯೇ ಸೌದಿ + ವಿದೇಶಿ ಹಣಕಾಸು ಸಂಸ್ಥೆಗಳು ಒಪ್ಪಂದದ ಮೇರೆಗೆ ಸಾಕಷ್ಟು ಬ್ಯಾಂಕ್‌ಗಳು (ಸೌದಿ ಅಮೆರಿಕನ್ ಬ್ಯಾಂಕ್, ಸೌದಿ ಬ್ರಿಟೀಷ್ ಬ್ಯಾಂಕ್, ಸೌದಿ ಹಾಲೆಂಡ್‌ (ಅಲ್‌ಸೌದಿ ಅಲ್‌ಹಾಲಂಡಿ – ಫ್ರಾನ್ಸ್‌ ಮುಂತಾದವುಗಳು) ಭರದಿಂದ ವ್ಯವಹಾರ ನಡೆಸುತ್ತಿರುವದನ್ನು ನಾವು ಸುತ್ತೆಲ್ಲ ನೋಡುತ್ತೇವೆ.

ಅಂದಹಾಗೆ ಇಲ್ಲೊಂದು ವಿಷಯ. ಬ್ಯಾಂಕೆಂದರೆ ಇಲ್ಲಿ ಕೇವಲ ಗಂಡಸರು ಹಣಕಾಸು ವ್ವವಹರಿಸುವ ಸ್ಥಳ ಎಂದೇ ಅರ್ಥ. ಪಾಶ್ಚಾತ್ಯ ಅಥವಾ ನಮ್ಮಲ್ಲಿಯಂತೆ ತಾಳ್ಮೆಯಿಂದ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳು ಇಲ್ಲಿ ಎಲ್ಲಿಯೂ ಇಲ್ಲ. ಸಿಬ್ಬಂದಿಗಳು ಹೋಗಲಿ, ಮಹಿಳಾ ಗ್ರಾಹಕರೂ ಬರುವುದಿಲ್ಲ. ಅದರೆ ಮಹಿಳೆಯರಿಂದ ನಡೆಸಲ್ಪಟ್ಟ ಮಹಿಳೆಯರಿಗಾಗಿಯೇ ಕೆಲವು ಬ್ಯಾಂಕುಗಳು ಇವೆ. ಎಲ್ಲದಕ್ಕೂ ಬುರ್ಕಾ. ಇಲ್ಲಿ ಮಹಿಳೆಯರೂ ಸಾಕಷ್ಟು ಶ್ರೀಮಂತರೇನೋ ನಿಜ. ಅದರೆ ಅವರು ಹೆಚ್ಚಾಗಿ ಸ್ವತಂತ್ರವಾಗಿ ವ್ಯವಹರಿಸುವುದಿಲ್ಲ. ಇತ್ತೀಚೆಗೆ ಇದು ಬದಲಾಗು- ತ್ತಿದೆ. ಅಕಸ್ಮಿಕ ಹೆಂಗಸರು ಮಾಮೂಲು ಬ್ಯಾಂಕಿಗೆ ಬಂದರೆ ಅವರು ಕ್ಯೂನಲ್ಲಿ ನಿಲ್ಲಬೇಕು. ಅವರಿಗೆ ಅಥವಾ ಬೇರೆ ಯಾವುದೇ ದೇಶದ ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯ. ಪಬ್ಲಿಕ್‌ನಲ್ಲಿ ಹೆಂಗಸರನ್ನು ಕೆಣಕುವ ಧೈರ್ಯ ಯಾರಿಗೂ ಇಲ್ಲ.

ಅರಬ್ಬರ ಉಡುಪು

ಕೊಲ್ಲಿದೇಶಗಳ ಉಡುಗೆ ತೊಡುಗೆಗಳ ವೈಶಿಷ್ಟ್ಯವೇ ಬೇರೆ. ಹೆಂಗಸರು ಯಾವುದೇ ತಮ್ಮ ಮೆಚ್ಚಿನ ಬಟ್ಟೆ ಬರೆಗಳನ್ನು ಹಾಕಿಕೊಂಡರೂ ಮನೆಗೆ ಯಾರಾದರೂ ಪುರುಷ ಅತಿಥಿಗಳು ಬಂದರೆ ಅಥವಾ ಹೊರಗೆಲ್ಲಾದರೂ ಹೋಗಬೇಕಾದರೆ ಕರಿಯ ಮೇಲು ಹೊದಿಕೆ ಹಾಕಿಕೊಳ್ಳಲೇಬೇಕು. ಈ ಹೊದಿಕೆಗೆ “ಅಬಾಯಾ'(ಬುರ್ಕಾ)ಎಂದು ಕರೆಯುವರು. ಅದು ಸಡಿಲಾದ ನಿರಿಗೆಗಳುಳ್ಳ ಉದ್ದನೆಯ ಮೇಲುಡಿಗೆಯಾದರೂ ಇರಬಹುದು ಅಥವಾ 4 ಮೀಟರಿನ ಕಪ್ಪು ಬಟ್ಟೆಯಾದರೂ ಇದ್ದು ಮೈ ತುಂಬಾ ಸುತ್ತಿಕೊಂಡಿದ್ದರೂ ಆಯಿತು.

ಗಂಡಸರು ತಲೆಯ ಮೇಲೆ ಚೌಕಾಕಾರದ ಬಟ್ಟೆಹಾಕಿಕೊಂಡು ಅದು ತಲೆಯ ಮೇಲೆ ಗಟ್ಟಿಯಾಗಿ ಕೂಡ್ರಲು ತಲೆಯ ಸುತ್ತ ಕರಿಯ ಸಿಂಬೆಯಾಕಾರದ ದಪ್ಪ ಕರಿಹಗ್ಗ ಸುತ್ತಳಿ ಅಥವಾ ಸಿಂಬೆ ಹಾಕಿಕೊಂಡಿರುತ್ತಾರೆ. ಈ ತಲೆಕಟ್ಟು ಬಿಳಿಯಾಗಿರಬಹುದು ಅಥವಾ ಕೆಂಪು + ಬಿಳಿಯ, ಚೌಕು ಕಮಾನುಗಳ ಬಟ್ಟೆಯೂ ಆಗಿರಬಹುದು. ಇದಕ್ಕೆ ಅರೇಬಿಯದಲ್ಲಿ “ಘೂತ್ರಾ” ಎನ್ನುತ್ತಾರೆ. ಬಿಳಿಯ ಉದ್ದನೆಯ (ಕಾಲುಗಳವರಗೆ) ಶರ್ಟ್ ತೊಡುವದು ಅವರ ಮುಖ್ಯ ಪದ್ಧತಿ. ಇದಕ್ಕೆ “ಥೋಬ್‌” ಎಂದು ಕರೆಯುವರು. ಹೆಚ್ಚಾಗಿ ಈ ಜನ ತಮ್ಮ ದೇಶೀಯ ಬಟ್ಟೆಯಲ್ಲಿಯೇ ಇರಲಿಚ್ಛಿಸುವರು. ಇದು ರಾಷ್ಟೀಯ ಉಡುಪು.

ಹೆಂಗಸರನ್ನು ಪೇಟೆಯಲ್ಲಿ ಅಲ್ಲಲ್ಲಿ ನೋಡಿದಾಗಲೆಲ್ಲ ಅವರು ಪೂರ್ತಿ ಬುರಕಾ ಹೊದ್ದುಕೊಂಡಿರುವ ದೃಶ್ಯ ಸಾಮಾನ್ಯ ಇಲ್ಲಿ. ಜೆಡ್ಡಾದಲ್ಲಿ ಸ್ವಲ್ಪ ಮುಕ್ತ ವಾತಾವರಣ ಇರುವದರಿಂದ ಸ್ತ್ರೀಯರು ಅಷ್ಟಿಷ್ಟು ಮುಕ್ತವಾಗಿ ಅಡ್ಡಾಡುತ್ತಾರೆ. ಅರಬಿಯನ್ ಸ್ತ್ರೀಯರು ತುಂಬಾ ಸುಂದರಿಯರು. ಆದರೆ 30-35 ವರ್ಷದ ಸ್ತ್ರೀಯರು ಅರೋಗ್ಯದ ಕಡೆಗೆ ಗಮನವಹಿಸದೇ ಸಿಕ್ಕಾಪಟ್ಟೆ ತಿಂದು ಗುಂಡು ಗುಂಡು ಗುಂಡಮ್ಮಗಳಾಗಿ ಮಕ್ಕಳು ಮೊಮ್ಮಕ್ಕಳನ್ನು ಬೆನ್ನು ಹಚ್ಚಿಕೊಂಡು ದೊಡ್ಡ ಸಂಸಾರ ಸಾಗರದಲ್ಲಿ ಸಿಕ್ಕು ಬಿದ್ದವರಂತಿರುತ್ತಾರೆ.

ಅಮೇರಿಕನ್, ಯೂರೋಪಿಯನ್, ಮಹಿಳೆಯರನ್ನು ನೋಡಬೇಕು. 60 ವರ್ಷದ ಅಜ್ಜಿ ಆಗಿದ್ದರೂ 25ರ ಹುಡುಗಿಯಂತೆ ನೀಳವಾದ ದೇಹ ಇಟ್ಟುಕೊಂಡು ಆಕರ್ಷಕ ಬಟ್ಟೆ-ಬಣ್ಣಗಳೊಂದಿಗೆ ಸುಗಂಧಿತರಾಗದೇ ಹೊರಬರುವದೇ ಇಲ್ಲ.

ಮತ್ತೆ ಜೆಡ್ಡಾದ ಬಗೆಗೆ..,…..

ಮರುಭೂಮಿಯಲ್ಲಿ ಒಂಟೆ ಓಡಿಸುತ್ತಿದ್ದ ಜನ ಇಂದು ನಗರದೆಡೆಗೆ ಧಾವಿಸಿದ್ದಾರೆ. ದೊಡ್ಡ ದೊಡ್ಡ ಬಂಗ್ಲೆಗಳನ್ನು ಕಟ್ಟಿಕೊಂಡು 3-4 ಹೆಂಡತಿಯರೊಂದಿಗೆ ಚಕ್ಕಂದವಾಡುತ್ತಾರೆ. ಪೇಟೆಯಲ್ಲಿ ದೊಡ್ಡ ಅಂಗಡಿಯ ಮಾಲೀಕನಾಗಿ 4-5-6 ಪಾಕಿಸ್ತಾನಿ ಬಂಗ್ಲಾದೇಶದ ಆಳುಗಳನ್ನಿಟ್ಟುಕೊಂಡು ಮೆರದದ್ದೇ ಮೆರದದ್ದು. ಅದೇನೇ ಅಂದರೂ ಒಮ್ಮಿಂದೊಮ್ಮೆಲೇ ಇವರ ಲಕ್ ಮಾತ್ರ ಪೆಟ್ರೋಡಾಲರ್‌ನಿಂದ ಖುಲಾಯಿಸಿದೆ ಎಂದೇ ಹೇಳಬೇಕು. ಸೌದಿ ಅರೇಬಿಯದಲ್ಲಿ ಅನೇಕ ನಗರಗಳು ಅಧುನಿಕತೆಯಲ್ಲಿ ಕಾಲಿಟ್ಟಿವೆ. ನಮಗಂತೂ ಪ್ರತಿದಿನವೂ ಪ್ರತಿ ವಿಷಯಗಳೆಲ್ಲ ಹೊಸವೇ.

ಶತಮಾನಗಳಿಂದ ಸುಯೇಜ್ ಕಾಲುವೆಯ ಮುಖಾಂತರ ಪ್ರಯಾಣ ಮಾಡುವ ವ್ಯಾಪಾರಿಗಳು, ಯಾತ್ರಿಕರು, ಪ್ರವಾಸಿಗರೂ ಜೆಡ್ಡಾದ ಅಂದಿನ ಮುಖ್ಯ ಸ್ಥಳಗಳಾದ ಬಾಬ್ ಮೆಕ್ಕಾ, ಬಾಬ್ ಮದೀನಾ, ಬಾಬ್ ಶರೀಫ್, ಬಾಬ್ ಮಗರಿಬ್‌, ಬಾಬ್ ಅಲ್‌ಬಂಠ್‌ ಬಲ್ಲಿ ಇಳಿದುಕೊಳ್ಳುವ ಸ್ಥಳಗಳು. ಇಂದು ನಗರ ಮಧ್ಯಭಾಗದಲ್ಲಿಯೇ ಇವೆ. ಅಂದಿನ ವಸತಿ ಗೃಹಗಳು, ಯಾತಾರ್ಥಿಗಳ ಸಣ್ಣ ಪುಟ್ಟ ಅಂಗಡಿಗಳು ಇಂದು ಕೇವಲ ಸ್ಮಾರಕಗಳಾಗಿ ಉಳಿದಿದೆ.

ಸುಮಾರು 1930ರವರೆಗೆ ಮಕ್ಕಾಗೆಂದು ಬರುವ ಯಾತ್ರಿಕರಿಗೆ (ಹಾಜಿಗಳಿಗೆ) ಯಾವ ಅನುಕೂಲತೆಯೂ ಅಲ್ಲಿರಲಿಲ್ಲವಂತೆ. (ನೀರು, ಬೆಳಕು, ರಸ್ಥೆಗಳ ವ್ಯವಸ್ಥೆ) ಇರುವ ಯಾತ್ರಿಕರ ಮನೆಗಳು ಯಾತ್ರಿಕರಿಂದ ತುಂಬಿತುಳುಕುತ್ತಿದ್ದವಂತೆ. ಆರೋಗ್ಯದ ಕಡೆಗೆ ಕಾಳಜಿ ಇಲ್ಲದ್ದರಿಂದ ರೋಗ ರುಜಿನಗಳಿಗೆ ಸಾಯುವ ಜನ ಹೆಚ್ಚಿತ್ತಂತೆ. ಈಗ ಪರಿಸ್ಥಿತಿ ಪೂರ್ಣ ಬದಲಾಗಿದೆ. ಸೌದಿ Civil Engineers Architects ಎಲ್ಲಾ ಅಮೇರಿಕಾದಲ್ಲಿಯೇ ಕಲಿತವರು. ನಗರದ ವಿನ್ಯಾಸಗಳೆಲ್ಲ Americaದ ಕಾಪಿ. ರಸ್ತೆಗಳ ಅಗಲಗಳು, ದೀಪಾಲಂಕಾರ, ರಸ್ತೆ ಬದಿಗಳು, ಕಾಲುದಾರಿಗಳು, Circles, ಇವೆಲ್ಲವುಗಳಿಗೆ Americaದ Specifications ಗಳನ್ನೇ ಸೀದಾ ಉಪಯೋಗಿಸಿದ್ದರಿಂದ ಸುಧಾರಣೆ ಮತ್ತು ಕೆಲಸಗಳು ಬಹಳ ವೇಗದಿಂದ ಮುಗಿದು ಹೊಸ ನಗರಗಳು ತಲೆಯೆತ್ತಿದವು. ನಮ್ಮ ದೇಶದಲ್ಲಿ Standardization  ಕಡಿಮೆ. ಇಂಜಿನಿಯರರ ಸಂಘಗಳು, ಸರಕಾರದವರೂ ಇದರ ಬಗ್ಗೆ ಸಾಕಷ್ಟು ಗಮನ ಕೊಟ್ಟಿಲ್ಲ. ಬಾಗಿಲು, ಕಿಟಕಿ, ಮೆಟ್ಟಲುಗಳು, ಕಟ್ಟಡಗಳ ಎತ್ತರ, ರಸ್ತೆ ಅಗಲಗಳು, ಡ್ರೈನೆಜ್, Water lines, Power lines ಇಂಥಹ ಎಷ್ಟೋ ವಿಷಯಗಳಲ್ಲಿ Standardization ಇಲ್ಲ. ತಲೆಗೊಂದು taste. ಅಲ್ಲಿ Readymade dressಹಾಗೆ ಮನೆಯ ಎಷ್ಟೋ ಸಾಮಾನುಗಳು ಪೇಟೆಯಲ್ಲಿ ಸಿಗುತ್ತವೆ. ನಮ್ಮಲ್ಲಿ ಟೇಲರ್ಗೆ ಅರಿವೆ ಕೊಟ್ಟು ಡ್ರೆಸ್ ಹೊಲಿಸಿಕೊಳ್ಳುವ ಹಾಗೆ ತಮ್ಮ ತಮ್ಮ ಇಷ್ಟದಂತೆ ಬಾಗಿಲ. ಕಿಟಕಿಗಳನ್ನು ಮಾಡಿಸಿಕೊಳ್ಳುತಾರೆ. ಇದರಿಂದ ಬಹಳ ಸಮಯ ಹಿಡಿಯುತ್ತದೆ.

ಮನೆ, ಮಹಲುಗಳು : ಇಲ್ಲಿ ನೆಲಕ್ಕೆ ಕೊರತೆಯಿಲ್ಲ. ಸೂಪರ್‌ಮಾರ್ಕೆಟ್‌ಗಳು ರಾಯಭಾರಿ ಕಛೇರಿಗಳು ನಿರ್ಮಾಣವಾಗಿವೆ. ಸುಂದರ ಮನೆಗಳು, ನಾವು ನೋಡುತ್ತಿ ದ್ದಂತೆಯೇ ಇಲ್ಲೆಲ್ಲಾ ಕಟ್ಟಡಗಳು ಬಂದವು. ಹಳೆಯ ಸುಮಾರು 55 ಮನೆಗಳಷ್ಟು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಕಾಯ್ದಿಟ್ಟಿದ್ದಾರೆ. ಇವು ಇತ್ತೀಚಿನ ನೂರು ವರ್ಷದ ಮನೆಗಳೆನ್ನಬಹುದು. ಕೆಲವು ಅತಿ ಹಳೆಯ ಮನೆಗಳು. ಮುರಿದು ಬೀಳುವಂತಿವೆ. ಇದಕ್ಕೆ ಕೆಲವು ಕಾರಣಗಳೆಂದರೆ ಇವು ಸಮುದ್ರದ ಪೊಳ್ಳು ಕೊರಲ್‌ಗಳಿಂದ, ಮಣ್ಣಿನಿಂದ ಕಟ್ಟದವುಗಳು. ಈ ಹವಳಗಳಿಗೆ ಗಟ್ಟಿತನ ಇರುವುದಿಲ್ಲ. ಮೇಲಾಗಿ ಸಮುದ್ರ ದಂಡೆ, ಉಪ್ಪಿನ ಅಂಶಗಳಿಂದ ಕೂಡಿರುವ ನೀರು, ನೆಲ, ಅಷ್ಟೇ ಅಲ್ಲದೆ ಅತಿ ಬಿಸಿಲಿನಿಂದ ಅಕುಂಚನ ಪ್ರಸರಣ ಜೊತೆಗೆ ಯಾವತ್ತೂ ತೇವಾಂಶ ಮುಂತಾದವುಗಳಿಂದ ಮನೆಗಳ ಕಿಟಕಿ ಬಾಗಿಲುಗಳು ಮೇಲು ಹೊದಿಕೆಗಳೆಲ್ಲ ಸಮವಾಗಿಲ್ಲದೆ ವಾಲಿದಂತಿವೆ, ಕುಸಿದಿವೆ. ಇವುಗಳನ್ನೆಲ್ಲಾ ನೋಡುವಾಗ ಪೀಸಾದ ವಾಲುಗೋಪುರ ನೆನಪಾಗುತ್ತದೆ. ಇಂಥದರಲ್ಲಿ ಒಳ್ಳೆಯವುಗಳನ್ನು ಕಾಯ್ದಿಡಲು ಸಾಕಷ್ಟು ಆಧಾರ ಕಂಬಗಳಷ್ಟು ಕೊಟ್ಟಿದ್ದಾರೆ.

ಇಜಿಪ್ಟ-ಟರ್ಕಿಯರ ಪ್ರಭಾವದಿಂದ ಕಟ್ಟಿದ ಆಕರ್ಷಕ ಕೆತ್ತನೆಯ ಕಿಟಕಿ ಬಾಗಿಲುಗಳು, ಅವುಗಳಿಗೆ ಬಿದಿರಿನ ಪರದೆಗಳಿಂದೊಡಗೂಡಿದ ಚಿತ್ತಾರದ ಮನೆಗಳನ್ನು ನೋಡುತ್ತೇವೆ. 50 ಡಿಗ್ರಿ ಬಿಸಿಲಿನಲ್ಲಿಯೂ ತಂಪುಗಾಳಿ ತೂರಿಬರುವಂತೆ ಪಶ್ಚಿಮಾ ಭಿಮುಖವಾಗಿ ಬಾಗಿಲು – ಕಿಟಕಿಗಳಿದ್ದುದೊಂದು ಅಪರೂಪದ ನಿದರ್ಶನ. ಕಿಟಕಿಗಳೆಲ್ಲ ಇಳಜಾರಾಗಿ ಭಾರತದ ಸಾಗುವಾನಿ ಕಟ್ಟಿಗೆಗಳಿಂದ ಕಟ್ಟುವುದರಿಂದ ಶೋಭಾಯಮಾನವಾಗಿ ಕಾಣುವವು.

ಇತ್ತೀಚಿನ 20 ವರ್ಷಗಳಲ್ಲಿ ಹವಾಮಾನ ಹಾಗೂ ಉಳಿದೆಲ್ಲ ಅನುಕೂಲತೆ ಗಳನ್ನು ಗಮನದಲ್ಲಿಟ್ಟುಕೊಂಡು ಪಾಶ್ಚಿಮಾತ್ಯ ಹೊಸ ಬಗೆಯ ತಂತ್ರಜ್ಞಾನ, ಕಲೆ ಗಳಿಂದ ಕೂಡಿದ ಇಮಾರತುಗಳು ಏಳುತ್ತಿವೆ. ನಗರ ಸಭೆಯ ಅಡಳಿತ ವರ್ಗದವರೂ ಕೂಡಾ ನಗರಗಳ ಚೆಂದಗಾರಿಕೆಗೆ ಸಾಕಷ್ಟು ಗಮನ ಕೊಡುತ್ತಿದ್ದಾರೆ. ನಗರ ಸಭೆಯ ಮಾರ್ಗದರ್ಶಕರೂ ಕೂಡಾ ಯುರೋಪಿಯನ್ನರೇ. ವಿಮಾನದಿಂದ ನಗರಗಳಷ್ಟು ನೋಡುತ್ತಿದ್ದರೆ ಒಂದಕ್ಕಿಂತ ಒಂದು ಸುಂದರವಾಗಿ ಗೆರೆಗಳೆಳೆದಂತೆ ಕಾಣುವವು.

ನಗರಗಳಲ್ಲಿ ಬಾಡಿಗೆ ಮನೆಗಳು ದುಬಾರಿ! ಅವರವರ ಹಣಕಾಸಿಗೆ ಹೊಂದು ವಂತೆ ಸಿಗುವವು. ಸುಸಜ್ಜಿತಗೊಳಿಸಿದ ಮನೆಗಳೂ ಸಿಗುತ್ತವೆ. ಇಲ್ಲದವೂ ಇರುವವು. ಮನೆ ಸಜ್ಜುಗೊಳಿಸಲು ಬೇಕಾದ ಸಾಮಾನುಗಳನ್ನು ಇಲ್ಲಿ ಮಾಡಿಸಲಿಕ್ಕೆ ಹಾಕಬೇಕಿಲ್ಲ. ರೆಡಿಮೇಡ್ ಅಂಗಡಿಗಳು ಅಷ್ಟೆ ಸೆಕೆಂಡ್‌ಹ್ಯಾಂಡ್ ಮಾರ್ಕೆಟ್‌ಗಳೂ ಸಾಕಷ್ಟು. ಸೆಕೆಂಡ್‌ಹ್ಯಾಂಡ್ ಅಂದರೆ ಮುರಿದವು, ಹಳೆಯವು ಎಂದರ್ಥ ಅಲ್ಲ. ತಮ್ಮ ತಮ್ಮ ನೌಕರಿಯ ಕಾಂಟ್ರಾಕ್ಸ್ ಮುಗಿಸಿಕೊಂಡು ತಮ್ಮ ದೇಶಕ್ಕೆ ಹೊರಡುವ ಜನ ತಮ್ಮಲ್ಲಿರುವ ಎಲ್ಲ ವಸ್ತುಗಳನ್ನು (ಯುರೋಪಿಯನ್ನರು ಅಮೇರಿಕನ್ನರು) ಮಾರಿಬಿಡುತ್ತಾರೆ. ಆದರೆ ನಮ್ಮ ಏಷ್ಯನ್ನರ ಮೆಂಟಾಲಿಟಿ ಬೇರೆ. ಯಾವುದೇ ವಸ್ತು ಒಮ್ಮೆ ಕೊಂಡ ಮೇಲೆ ಅದು ನಮ್ಮದು, ಯಾವೂತ್ತೂ ನಮ್ಮ ಹತ್ತಿರವೇ ಇರಬೇಕೆನ್ನುವ ವಿಚಾರದವರು. ಹೀಗಾಗಿ ಅಲ್ಲಿ ಕೊಂಡದ್ದನ್ನೆಲ್ಲಾ ಹೊತ್ತುಕೊಂಡು ಬರುವ ಹುಚ್ಚು ನಮ್ಮದು.

ಹೀಗೆ ಮರಳಿ ಹೋಗುವ ಜನ ಸೆಕೆಂಡ್‌ಹ್ಯಾಂಡ್ ಮಾರ್ಕೆಟ್‌ದಲ್ಲಾಗಲೀ ಅಥವಾ ಸ್ಥಳೀಯ ಪೇಪರ್‌ದಲ್ಲಿ ಸಣ್ಣ ಜಾಹಿರಾತು ಕೊಟ್ಟು ತಮ್ಮ ಮನೆಗೆ ಕರೆಸಿ ಮಾರಿಬಿಡುವರು. ಪೇಪರ್ ಪತ್ರಿಕೆ ಅಂದಮೇಲೆ ಇಲ್ಲೊಂದು ವಿಷಯ ನೆನಪಾಗುತ್ತದೆ.

ಪತ್ರಿಕೆಗಳು:- ಇಲ್ಲಿಯ ಪ್ರಮುಖ ಇಂಗ್ಲೀಷ್ ಪತ್ರಿಕೆಗಳು ‘ಸೌದಿ ಗೆಜೆಟ್’ ಹಾಗೂ ‘ಅರಬ್’ ಒಳ್ಳೆಯ ಪತ್ರಿಕೆಗಳು. ಜಗತ್ತಿನ ಎಲ್ಲ ಪ್ರಚಲಿತ ಸುದ್ಧಿಗಳು ವಿವರವಾಗಿ ಸಿಗುತ್ತವೆ. ಸಣ್ಣ ಸಣ್ಣ ಚಿಲ್ಲರೆ ವಿಷಯಗಳನ್ನು ದೊಡ್ಡದಾಗಿ ಪರಿವರ್ತಿ ಸುವದಿಲ್ಲ ಜಾಹಿರಾತುಗಳು ಕಡಿಮೆ. ಅದರೆ ನಮ್ಮ ದೇಶದಲ್ಲಿ ಶೇ. 98 ಪತ್ರಿಕೆಗಳು ‘ಜಾಹಿರಾತಿಗೋಸ್ಕರವೇ ಪತ್ರಿಕೆ’ ಅನ್ನುವಂತಿವೆ.

ಕನ್ನಡದ ಕೆಲವು ಪತ್ರಿಕೆಗಳಲ್ಲಿಯಂತೂ ಪುಟ ತೆಗೆದರೆ ಎಮ್ಮೆ ಕಳೆದಿದೆ, ಮಣಕ ಬಂದಿದೆ, ದಶಪಿಂಡ ಸಮಾರಾಧನೆ, ಸೋಡಚೀಟಿ, 70-80 ವರ್ಷದ ಮುದುಕ ನಾಪತ್ತೆ, ಮಕ್ಕಳುಮನೆ ಬಿಟ್ಟು ಹೋಗಿದ್ದಲ್ಲಿ ‘ಬೇಗ ಬಾ ಮಗ; ತಾಯಿ ಹಾಸಿಗೆ ಹಿಡಿದಿದ್ದಾಳೆ’ ಇತ್ಯಾದಿ ಇತ್ಯಾದಿ. ಅಷ್ಟೇ ಅಲ್ಲ, ಸಿನೇಮಗಳ ಅಶ್ಲೀಲ ಚಿತ್ರಗಳು, ಅದೂ ಅಲ್ಲದೆ ಒಂದು ಇಲಿನಾಶಕ ಔಷಧಿಯಿಂದ ಹಿಡಿದು ಟ್ರಾಕ್ಟರ್‌, ಗೊಬ್ಬರಗಳ ಪ್ರಚಾರಕ್ಕೆ ಬಳಸುವ ಸ್ತ್ರೀಯರ ಅರೆನಗ್ನ ಚಿತ್ರಗಳು, ಹಾಗೂ ಒಂದು ಮನೆಯ ಅತ್ತೆ ಸೊಸೆಯರ ಜಗಳ, ಕಳ್ಳತನ ಧಾರವಾಹಿ ಅನ್ನುವಂತೆ” ದೊಡ್ಡ ಪ್ರಕರಣ ಎಬ್ಬಿಸಿ ಅನಾವಶ್ಯಕವಾಗಿ ಓದುಗರ ತಲೆ-ಸಮಯ ಕೆಡಿಸಿ ಬುದ್ಧಿಮಾಂದ್ಯ ಮಾಡಿಬಿಡುವುವು.

ಹತ್ತು ವರ್ಷಗಳಿಂದ ಇಲ್ಲಿಯ ಪತ್ರಿಕೆಗಳನ್ನು ನೋಡುತ್ತಿದ್ದೇನೆ. ಓದುತ್ತಿದ್ದೇನೆ ಒಮ್ಮೆಯೂ ತಪ್ಪಿ ಮೇಲಿನ ಇಂತಹ ಯಾವುದಕ್ಕೂ ಅವಕಾಶ ಕೊಟ್ಟಿಲ್ಲ. ಇದು ಅತಿ ಆಶ್ಚರ್ಯ ಅನಿಸುತ್ತದೆ. ಸೌದಿಯಲ್ಲಿ ಸಾಕಷ್ಟು ಅಪಘಾತಗಳಾಗುತ್ತವೆ. ಇಲ್ಲಂತಲ್ಲ. ಯುವ ಪೀಳಿಗೆಯಂತೂ ಡ್ರೈವಿಂಗ್ ಅತೀ ಹಗುರಾಗಿ ‍ಭಾವಿಸಿ ಸಾಕಷ್ಟು ಅಪಘಾತಗಳಿಗಿಳಿಗೀಡಾಗು- ತ್ತಿದ್ದಾರೆ. ಅವೆಲ್ಲ ಪೊಲೀಸರ-ಮೌಲ್ಲಿಯ ಕಾಯ್ದೆಗಳಡಿಯಲ್ಲಿ ಮುಗಿಸಿಬಿಡುವರು. ಇಂತಹ ಸುದ್ದಿಗಳಷ್ಟೇ ಅಲ್ಲ ವಿ.ಐ.ಪಿ.ಗಳು ನಿಧನರಾದ ಸುದ್ದಿಗಳೂ ಅಷ್ಟೇ. ಸುದ್ದಿ ಮಾತ್ರ ಒಂದು ಮೂಲೆಯಲ್ಲಿ ಒಂದೇ ಸಾಲಿನಲ್ಲಿ
ಕೊಡಬಹುದಷ್ಟೇ, ಆದರೆ ಶೋಕ ಸಂದೇಶಗಳಿಂದ ಪೇಪರ್ ತುಂಬಿರುವದಿಲ್ಲ. ಯಾರೇ ವಿ.ಐ.ಪಿ.ಗಳು ನಿಧನರಾದರೆ ನಿಜವಾಗಿಯೂ ದುಃಖಪಡುವ ಜನ ಅದೆಷ್ಟು ? ಬೆರಳೆಣಿಕೆಯ ಮೇಲಿನವರೂ ಸಿಗುವುದಿಲ್ಲ. ಶಾಲೆ-ಕಾಲೇಜುಗಳ-ಆಫೀಸುಗಳ ಜನರೆಲ್ಲಾ ದುಃಖ ಸೂಚಿಸುವ ಬದಲು ಒಂದು ದಿನ ರಜಾ ಆರಾಮವಾಗಿ ಕಳೆಯಬಹುದೆಂದು ಖುಷಿಪಡುವರೇನೋ! ಇದೆಲ್ಲದರ ಬದಲಾಗಿ ಶಾಲೆ-ಕಾಲೇಜುಗಳ ಹುಡುಗರನ್ನು ಕೂಡ್ರಿಸಿಕೊಂಡು ನಿಧನವಾದ ವ್ಯಕ್ತಿಯ ಪರಿಚಯ, ಅವನಿಂದ ಸಮಾಜಕ್ಕಾದ ಸಹಾಯ, ಅದರ್ಶ ಹೇಳಿಕೊಟ್ಟು ಮಕ್ಕಳಲ್ಲಿಯೂ ಅವರ ಒಂದು ಆದರ್ಶ ರೂಪಿಸಿ, ಆ ಒಂದು ದಿನದ ಮಟ್ಟಿಗಾದರೂ ತಾವೂ ಶಾಂತವಾಗಿ ಸತ್ಯವಾಗಿದ್ದರೆ ಅಷ್ಟೇ ಸಾಕು. ಅದೇ ನಿಧನವಾದವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ನಮ್ಮಲ್ಲಿ ಬರೀ ಢೋಂಗಿತನ ಹೆಚ್ಚು.

ಇಲ್ಲಿನ ಪತ್ರಿಕೆಗಳು ಖಾಸಗಿ ಒಡೆತನದಲ್ಲಿವೆ. ರಾಜಕೀಯವಾಗಿ ಇವು ಯಥಾಸ್ಥಿತಿ ವಾದಿಗಳು-ಸೌದಿ ಜನತೆ- ಯಂತೆಯೇ ಸರ್ಕಾರವನ್ನು ಇವು ಟೀಕಿಸುವುದು ಸಾಧ್ಯವೇ ಇಲ್ಲ. ದೇಶದ ಹೆಚ್ಚು ಪ್ರಸಾರದ ವಾರ್ತಾಪತ್ರಿಕೆ ‘ಅಲ್-ಮದಿನಾ-ಅಲ್ ಮುನಾವರಾ’ ರಾಜ ಕುಟುಂಬದೊಡನೆ ನಿಕಟ ಸಂಪರ್ಕ ಹೊಂದಿದೆ. ರೇಡಿಯೋ ಟಿವಿಗಳು ಸರ್ಕಾರದಿಂದ ನಿಯಂತ್ರಿತವಾಗಿವೆ.

ಸಿನೇಮಾ/ ಟಿ.ವಿ :-

ಜಗತ್ತಿನಾದ್ಯಂತ ಸಿನೇಮಾ ಥಿಯೇಟರ್‌ಗಳು ಜನಪ್ರಿಯವಾಗಿದ್ದರೆ, ಈ ದೇಶದಲ್ಲಿ ಮಾತ್ರ ತುಂಬ ಅಪ್ರಿಯವಾಗಿವೆ. ಥಿಯೇಟರ್‌ಗಳಿಲ್ಲದ ದೇಶವೆಂದರೆ ಸೌದಿ ಅರೇಬಿಯಾ ಮಾತ್ರ. ವಿಚಿತ್ರವೆನಿಸಿದರೂ ಇದು ಇಸ್ಲಾಂ ಧರ್ಮದ ತವರಾವ ಸೌದಿ ನಾಡಿನಲ್ಲಿ ಜನ ಪೂರ್ತಿ ಧಾರ್ಮಿಕ ಪ್ರವೃತ್ತಿಯವರೇ ಇದ್ದಾರೆ. ಇಲ್ಲಿಯ ಮುಲ್ಲಾಗಳು ಧರ್ಮದ ಕಟ್ಟು ಜನರ ಮೆಲೆ ಸಾಕಷ್ಟು ಹೇರಿದ್ದಾರೆ. ಅದೆಷ್ಟೋ ಸಲ ಹೊಸ ಜನಾಂಗಕ್ಕೆ ಅಡ್ಡಿಯಾಗುತ್ತಿದೆಯೇನೋ. ಅಲ್ಲದೆ ಅರಸೊತ್ತಿಗೆಯ ದರ್ಬಾರ್ ಇರುವದರಿಂದ ಗುಂಪುಗಾರರಿಗೆ ಅವಕಾಶವಿಲ್ಲ. ಮೊದ ಮೊದಲೆಲ್ಲ ನೂರಾರು ವರ್ಷಗಳಿಂದ ಪಂಗಡ- ಗಳಿಂದ ದಬ್ಬಾಳಿಕೆ, ಕೊಲೆ ಸುಲಿಗೆಗಳ ಸುರಿ ಮಳೆಗಳೇ ಆಗಿವೆ. ಅದಕ್ಕೆಂದು ಈಗಿನ ಅರಸೊತ್ತಿಗೆ ಗುಂಪು ಗುಂಪಾಗಿ ಜನರು ಅಡ್ಡಾಡುವದು, ಕೂಡ್ರುವದು ಎಲ್ಲ ನಿಷೇಧಿಸಿದ್ದಾರೆ. ಹೀಗಿದ್ದಾಗ ಥಿಯೇಟರ್‌ ಗಳದ್ದೇನೂ ಉಪಯೋಗ ಇಲ್ಲ. ಇತ್ತೀಚೆಗೆ ಹೊಸಪೀಳಿಗೆಯ ಜನಾಂಗಕ್ಕೆ ಟಿ.ವಿ.ಗಳ ಪ್ರಭಾವ, ವಿದೇಶ ಸುತ್ತಾಡುವಿಕೆಯಿಂದ ಆಗಿರುವ ಅನುಭವಗಳಿಂದ ಹಿರಿಯರಿಗೆ ಬಿಡಿಸಲಾರದ ಗಂಟಿನಂತಾಗಿದೆ. ಪ್ರತಿಕುಟುಂಬಗಳು, VCR, Satellite Channels ಮೇಲೆ Entertainmentಕ್ಕಾಗಿ ಅವಲಂಬನೆಯಾಗುವರು.

ಇತ್ತೀಚಿನ ಎರಡು ದಶಕಗಳಲ್ಲಿ ಯಾವ ಭಾಷೆಯಲ್ಲಿ ನೋಡಿದರೂ ಸಿನೇಮಾ ಮೌಲ್ಯಗಳು ಬಹಳೇ ಕೆಳಗಿಳಿದಿವೆ. ಹಣವಿದ್ದ ಯುರೋಪ್ ಅಮೇರಿಕಗಳು ಸ್ವಲ್ಪ ಸಾಹಸಮಯ, ಕುತೂಹಲಕಾರಕ ಹೊಸ ಹೊಸ ಕಥಾ ವಸ್ತುಗಳನ್ನು ಹುಡುಕಿಕೊಂಡರೂ ಅಲ್ಲಿ ಅಶ್ಲೀಲತೆ ಹೆಚ್ಚು. ನಮಲ್ಲಿಯವಂತೂ ತಿರು ತಿರುಗಿ ಅದೇ ಮಸಾಲೆ ಕಥೆ. ಪೋಸ್ಟರ್‌- ಗಳಂತೂ ವಾಕರಿಕೆ ಬರುವಂತಿರುತ್ತವೆ. ಅವನ್ನೆಲ್ಲಾ ನೋಡುತ್ತ ನಿಲ್ಲುವ ಪುಂಡ ಪೋಕರಿ ಹುಡುಗರ ಮೇಲೆ ಪರಿಣಾಮವಾಗಿ, ಓಡಾಡುವ ಹುಡುಗಿಯರಿಗೆ ಏನಾದರೂ ಅನ್ನುವದು, ಚುಡಾಯಿಸುವದು ಇನ್ನು ಗೂಂಡಾ- ಗಳಿದ್ದರಂತೂ ಮುಗಿದೇ ಹೋಯ್ತು. ದಿನ ನಿತ್ಯ ಪೇಪರಿನಲ್ಲಿ ಹುಡುಗಿಯರನ್ನು ತುಡುಗು ಮಾಡಿದರು, ರೇಪ್ ಮಾಡಿದರು ಎಂದು ಓದುತ್ತೇವೆ. ಇವೆಲ್ಲಕ್ಕೆ ಕಾರಣ ಈ ಸಿನೇಮಗಳೇ. ಒಳ್ಳೆಯ ಸಂಸ್ಕೃತಿ ಇರುವುದಿಲ್ಲ, ಶಿಕ್ಷಣದ ಮಟ್ಟ ಕಡಿಮೆ, ನಂತರ ನೌಕರಿಗಳು ಸಿಗುವದಿಲ್ಲ. ಇಂಥದರಲ್ಲಿ ಅಶ್ಲೀಲ ಸಿನೇಮಗಳು ನೋಡಿ ಕನಸು ಕಂಡು ಆಸೆ ಈಡೇರದೇ ಹೋದರೆ ಹೊಲಸು ಹಾದಿ ಹಿಡಿಯುತ್ತ ಸಮಾಜ ಕೆಡಿಸುತ್ತ ಹೋಗುತ್ತಿರುವುದು ನೋಡಿ ತುಂಬಾ ಬೇಸರವಾಗುತ್ತದೆ. ಜಗತ್ತಿನ ಎಲ್ಲ ಕಡೆಗೂ ಇದೇ ವಾತಾವರಣ.

ಆದರೆ ಸೌದಿ ಅರೇಬಿಯಾ ಇದಕ್ಕೊಂದು ಅಪವಾದ. ಎಲ್ಲಿಯೂ ಥಿಯೇಟರ್‌ ಗಳಿಲ್ಲ. ಪೋಸ್ಟರ್‌ಗಳಿಲ್ಲ. ಇದರಿಂದ ಸಮಾಜ ಒಂದು ಒಳ್ಳೆಯ ನೈತಿಕ ಮಟ್ಟ ಉಳಿಸಿ ಕೊಂಡಿದೆಯೆಂದು ನಾನು ಸಂತೋಷವಾಗಿಯೇ ಹೇಳುತ್ತೇನೆ. ಮೌಲ್ವಿಗಳ ಧಾರ್ಮಿಕ ಚೌಕಟ್ಟಿನೊಳಗೆ ದೇಶವಿರುವುದರಿಂದ ಇಲ್ಲಿ ಸಾರ್ವಜನಿಕವಾಗಿ ಯಾರೂ ಏನೂ ‘ಕುಂಯ್‌’ ಅನ್ನಲು ಸಾಧ್ಯವಿಲ್ಲ. ಹೀಗಾಗಿ ಯುವ ಪೀಳಿಗೆಗಳಾಗಲಿ, ಹೊರದೇಶದಿಂದ ಬಂದ ಜನರಾಗಲಿ ತಮ್ಮ ತಮ್ಮ ಕೆಲಸದಲ್ಲಿಯಾಗಲೀ, ಸಾರ್ವಜನಿಕವಾಗಿಯಾಗಲೀ ಅಡ್ಡಾಡುವಾಗೆಲ್ಲ ಗಂಭೀರವಾಗಿಯೇ ಇರುತ್ತಾರೆ.

ಇಷ್ಟು ಹೇಳಿದ ಮಾತ್ರಕ್ಕೆ ಇವರೆಲ್ಲಾ ಒಳ್ಳೆಯವರೆಂತಲ್ಲ. ಮನುಷ್ಯನ ಸಹಜ ಅಶೆ ಅಕಾಂಕ್ಷೆಗಳು ಇದ್ದೇ ಇರುತ್ತವೆ. ತಮಗೆ ಏನು ಬೇಕು, ಬೇಡವಾದದ್ದು ಮಾಡುವದೂ ತಮ್ಮ ತಮ್ಮ ತೀರ ಖಾಸಗಿ ಬದುಕಿನಲ್ಲಿ ಸಮಾಜಕ್ಕೆ ತೊಂದರೆ ಕೊಡದಂತೆ, ಇತ್ತೀಚೆಗೆ ಎಲ್ಲರ ಮನೆಯಲ್ಲೂ ವಿ.ಸಿ.ಆರ್.ಗಳಿವೆ. ಇಲ್ಲಿಯೂ ಕೂಡ ಅಶ್ಲೀಲ.ಚಿತ್ರಗಳನ್ನು ಹಾಕಿಕೊಂಡು ನೋಡುತ್ತಾರೆ. ಅದೇನೇ ಇದ್ದರೂ ನೋಡುವದು, ಖುಷಿಪಡುವದು ತಮ್ಮ ಮನೆ ಅಥವಾ ಗುಂಪಿನಲ್ಲಿ, ಹೀಗಾಗಿ ಸಾರ್ವಜನಿಕವಾಗಿ ಏನೂ ತೊಂದರೆ ಇಲ್ಲದೆ ಹುಡುಗಿಯರು- ಹೆಂಗಸರು ಅಡ್ಡಾಡಬಹುದು -ಮುಲ್ಲಾಗಳ ಕಾಯ್ದೆ ಬಿಗುವಿರುವುದರಿಂದ. ಇದೊಂದು ಸಮಾಜಕ್ಕೆ ಒಳ್ಳೆಯ ಕೊಡುಗೆ ಅನಿಸುತ್ತದೆ. ಭಾರತೀಯ ಸಿನೇಮಗಳು ನೋಡುವದರಲ್ಲಿ ಸೌದಿಗಳು ಮುಂದು. ಸಿನೇಮದ ಎಲ್ಲ ತಾರಾಮಣಿಗಳ ಹೆಸರು ಅಥವಾ ಅವರ ಇತಿಹಾಸವೇ ಗೊತ್ತಿರುತ್ತದೆ. ಎಲ್ಲಾ ಸಿನೇಮಗಳ ಮಸಾಲೆ ಗೊತ್ತಾಗಿ ಇತ್ತೀಚೆಗೆ ಅವರೂ ಮುಂದೇನಾಗುತ್ತದೆ ಎಂದು ಮೊದಲೇ ತಿಳಿದುಕೊಂಡು ಚರ್ಚಿಸುತ್ತಾರೆ. ಕುತೂಹಲ ಉಳಿಯುವಂತಹ ಚಿತ್ರಗಳಿಲ್ಲ ಎನ್ನುವ ಅಭಿಪ್ರಾಯಕ್ಕೆ ಇಲ್ಲಿಯವರೂ ಬಂದಿದ್ದಾರೆ. ನಮ್ಮ ದೇಶದಲ್ಲಿಯ ಕೆಲವೊಂದು ಒಳ್ಳೆಯ filmಗಳು ಇಲ್ಲಿ ಸಿಗುವದು ಕಡಿಮೆ.

ಎರಡು ಚಾನಲ್ ಹೊಂದಿದ ಸೌದಿ ಟಿವಿಯಲ್ಲಿ ಒಂದು ‘ಇಂಗ್ಲೀಷ್, ಇನ್ನೊಂದರಲ್ಲಿ ಅರೇಬಿಕ್ ಪ್ರೋಗ್ರಾಂಗಳನ್ನು ಬಿತ್ತರಿಸುವರು. ಇಂಗ್ಲಿಷ್‌ದಲ್ಲಿ ಸಾಕಷ್ಟು ಒಳ್ಳೊಳ್ಳೆಯ ಕಾರ್ಯಕ್ರಮಗಳು ಇರುತ್ತವೆ. ಟಿವಿಯಲ್ಲಾಗಲೀ ಪಬ್ಲಿಕ್‌- ದಲ್ಲಾಗಲೀ ತಪ್ಪಿಯೂ ಸ್ತ್ರೀಯರನ್ನು ಮುಖ್ಯ ವಸ್ತು ಮಾಡಿಕೊಂಡ ಜಾಹಿರಾತುಗಳು ಕಾಣಸಿಗುವುದೇ ಇಲ್ಲ. ಇದೂ ಒಂದು ಇಲ್ಲಿ ಹೆಮ್ಮಪಡುವ ವಿಷಯವೇ. ಯಾವುದೇ ಅಂಗಡಿ ಪೇಟೆ, ಶೋರೂಂಗಳು, ಹೋಟೆಲ್‌ಗಳು ಬೇಕಾದಲ್ಲಿ ಹೋದರೂ ಯಾವ ಸುಂದರಿಯರ ಜಾಹಿರಾತುಗಳಿರುವುದಿಲ್ಲ. ಬದಲಾಗಿ ಆಯಾ ವಸ್ತುಗಳದೇ ನೇರವಾದ ಜಾಹಿರಾತು ಚೆನ್ನಾಗಿರುತ್ತದೆ. ನಮ್ಮಲ್ಲಿ ಗಂಡಸರ ಬೀಡಿ, ಸಿಗರೇಟು, ಬನಿಯನ್, ಚಡ್ಡಿ, ಬ್ಲೇಡ್‌ಗಳಿಗೂ ಕೂಡಾ ಅರೆನಗ್ನ ಹೆಣ್ಣಿನ ಚಿತ್ರ ಇರಲೇಬೇಕೆನ್ನುವಷ್ಟರ ಮಟ್ಟಿಗೆ ಇಳಿದಿದ್ದಾರಲ್ಲ ಎಂದು ನೆನಸಿಕೊಂಡರೆ ಬೇಸರವಾಗುತ್ತದೆ.

ಸ್ತ್ರೀಯರ ಉಡುಪು-

ಸೌದಿಗೆ ಹೊರಡುವಾಗ ಸ್ತ್ರೀಯರು ಕೆಲವೊಂದು ವಿಷಯಗಳನ್ನು ಗಮನ ದಲ್ಲಿಟ್ಟುಕೊಂಡು ಹೋಗಲೇಬೇಕು. ಉದಾ- ಉಡುಗೆ ತೊಡುಗೆಗಳು, ಬಾಂಬೆ, ಕಲ್ಕತ್ತಾ, ದಿಲ್ಲಿಯಲ್ಲೆಲ್ಲ ಫ್ಯಾಷನ್ ಎಂದು ಸ್ಕರ್ಟ್ – ಬಿಗಿಯಾದ ಶರ್ಟ್‌ ಹಾಕಿಕೊಳ್ಳುವ ಫ್ಯಾಷನ್ ಇರಬಹುದು. ಅದರೆ ಸೌದಿಯಲ್ಲಿ ಮಾತ್ರ ಇದು ಅಸಭ್ಯತನ ಎನಿಸುತ್ತದೆ. ಪ್ರೈವೇಟ್ ಕಂಪನಿಗಳ ಕ್ಯಾಂಪಸ್‌ಗಳು ಊರ ಹೊರಗಡೆ ಇದ್ದಲ್ಲಿ ಅಲ್ಲಿ ಪಾಶ್ಚಾತ್ಯ ಸ್ತ್ರೀಯರು ತುಂಡು ಬಟ್ಟೆಗಳಲ್ಲಿ ಬಿಸಿಲು ಕಾಯಿಸುತ್ತ ಬಿದ್ದಿರುತ್ತಾರೆ. ನಾವಿದ್ದ ಈ ಕ್ಯಾಂಪಸ್ಸಿನಲ್ಲಿ ಈ ದೃಶ್ಯ ಸರ್ವೇ ಸಾಮಾನ್ಯ. ಹಾಗೆಯೇ ಅಲ್ಲಿ ತಮ್ಮ ದೇಶದ ಮಿನಿ.ಮಿಡಿಗಳಲ್ಲಿಯೂ ಅಡ್ಡಾಡಬಹುದು. ಆದರೆ ಪೇಟೆಯಲ್ಲಿ ಇದಕ್ಕೆಲ್ಲಾ ಅವಕಾಶವಿಲ್ಲ. ಅರೇಬಿಯದ ಸಾಂಪ್ರದಾಯಿಕ ಪದ್ದತಿಯಂತೆ ಸಡಿಲಾದ ಉಡುಗೆಗಳನ್ನು ಹಾಕಿ ಕೊಂಡು ಹೆಣ್ತನದ ಸೌಂದರ್ಯದ ಹೊಸ್ತಿಲಲ್ಲಿ ಇರಬೇಕು. ಒಮ್ಮೊಮ್ಮೆ ಸ್ಕರ್ಟ್, ಬ್ಲೌಜ್‌ಗಳೇ ಹಾಕಿಕೊಳ್ಳಬೇಕೆಂದರೆ ಮೊಳಕಾಲ ಕೆಳಗೆ ಪಾದಕ್ಕೆ ಸಮೀಪವಿರುವಷ್ಟು ಸ್ಕರ್ಟ್, ಉದ್ದನೆಯ ತೋಳಿನ ಸಡಿಲಾದ ಬ್ಲೌಜ್‌ಗಳು ಹಾಕಿಕೊಳ್ಳಬೇಕು. ಬಿಗಿ ಉಡುಪಿನಿಂದ ಅಂಗಾಂಗ ಪ್ರದರ್ಶಿಸುವಂತಿಲ್ಲ. ಲಂಡನ್, ಪ್ಯಾರಿಸ್‌ಗಳಲ್ಲೆಲ್ಲ ಜನರು ಅತೀ ಹತ್ತಿರದವರಿಗೆ, ಸ್ನೇಹಿತರಿಗೆ ಭೆಟ್ಟಿಯಾದಾಗೆಲ್ಲ ಆಲಿಂಗನ- ಚುಂಬನ ಮಾಡುವುದನ್ನು ನೋಡಿದ್ದೆವು. ಆದರೆ ಅಲ್ಲೇನೊ ಯಾವ ಟೀಕೆಗಳಿಲ್ಲದೆ ಸರಾಗವಾಗಿ ದಾಟಿ ಮರೆತುಬಿಡುತ್ತಾರೆ ಜನರು. ಅದರ ಇಲ್ಲಿ! – ಅಬ್ಬಬ್ಬಾ, ಆಕಸ್ಮಿಕ ಹಾಗೇನಾದರೂ ಆದರೆ ಅವರ ಪಾಡು ಹೇಳುವಂತಿಲ್ಲ.

ಕುಡಿಯುವ ನೀರು –

ಅರೇಬಿಯ ದೇಶದಲ್ಲಿ ನೀರಿನ ತೊಂದರೆ ಸಾಕಷ್ಟು ಎಂದು ಎಲ್ಲರಿಗೂ ಗೊತ್ತಿದ್ದ ಮಾತೇ. ಅದು ಹೌದು. ಮಳೆಯಂತೂ ಇಲ್ಲವೇ ಇಲ್ಲ. ಹತ್ತು ವರ್ಷ ಕಾಲ ನೋಡಿದ್ದೇವೆ. ಮೊದಲಿನ 4-5 ವರ್ಷಗಳಲ್ಲಿ ಮಳೆ ಆಯ್ತು. ಅದು ಹೇಗೆ ಗೊತ್ತೆ? ಡಿಸೆಂಬರ್-ಜನವರಿಯ ಯಾವುದೋ ಒಂದು ದಿನದಲ್ಲಿ ಕೇವಲ 4-5 ನಿಮಿಷಗಳು ಮಾತ್ರ. ಮಳೆ ಸುರಿಯುವಲ್ಲಿ ಶಕ್ತಿಯೂ ಇಲ್ಲದಂತೆ ಜಿನಿ ಜಿನಿ ಬಂದು ಹೋಗಿ ಬಿಡುತ್ತಿತ್ತು. ಮುಗಿದೇ ಹೋಯ್ತು. ಇತ್ತೀಚಿನ ವರ್ಷಗಳಲ್ಲಿ 2-3 ದಿನಗಳು ಮಳೆಯಾಗತೊಡಗಿದೆ. ಭಾರೀ ಮಳೆಯಾದ ತರಹ ವಾತಾವರಣ. ಮರುಭೂಮಿ ನಾಡು. ಅಷ್ಟೇ ಅಲ್ಲದೇ ಜೆಡ್ಡಾ ಸಮುದ್ರ ಮಟ್ಟದಲ್ಲಿರುವದರಿಂದ ನೀರು ಇಂಗು ವುದಿಲ್ಲ. ಹೀಗಾಗಿ ಅಷ್ಟಿಷ್ಟು ನೀರು ರಸ್ತೆಗಳಲ್ಲೆಲ್ಲ ಮಡುಗಟ್ಟುತ್ತವೆ. ಕಾರುಗಳೆಲ್ಲ ಹೊಲಸು. ಮರುದಿವಸ ಪತ್ರಿಕೆಯಲ್ಲಿ ಮಳೆಯಾದ ವರ್ಣನೆ, ಚಿತ್ರಗಳು ಬರುತ್ತವೆ. ಮರುಭೂಮಿಯವರಿಗೆ ಇದು ಖುಷಿಕೊಡುತ್ತದೆ. ನಾವು ನೋಡು ನೋಡು ತ್ತಿದ್ದಂತೆಯೇ ಮಳೆಯಲ್ಲಿ ಮಹಾ ಬದಲಾವಣೆಯಾಗಿದೆ.

ಸುಮಾರು 25 ವರ್ಷಗಳಷ್ಟೇ ಹಿಂದೆ ಕುಡಿಯುವ ನೀರಿನ ತೊಂದರೆ ಎಷ್ಟಿತ್ತೆಂದು ಇಂದು ಎಷ್ಟೋ ಸ್ಥಳೀಯರು ಹೇಳುತ್ತಾರೆ. ಜೆಡ್ಡಾದಿಂದ ಸುಮಾರು 50 ಮೈಲುಗಳಷ್ಟು ಅಂತರದಲ್ಲಿರುವ ‘ವಾಡಿ ಫಾತಿಮಾ’ (ಸಣ್ಣ ಹಳ್ಳಿ)ದಲ್ಲಿರುವ ಒಯಸಿಸ್ ಬಾವಿಗಳಿಂದ ನೀರು ತೆಗೆದು ಸರಬರಾಜು ಮಾಡುತ್ತಿದ್ದರೆಂದು ಹೇಳುವರು.

ಅದರೆ ಈ 20 ವರ್ಷಗಳಲ್ಲಿ ಸಮುದ್ರನೀರಿನ ಬಾಷ್ಪೀಕರಣದ ಮುಖಾಂತರ ಕೆಲವು ಸಮುದ್ರದ ದಂಡಗುಂಟ ಇರುವ ನಗರಗಳಿಗೆಲ್ಲ ನೀರಿನ ಸರಬರಾಜು ಸಾಕಷ್ಟಿದೆ. ಹಣ ಇದ್ದವರು ವಿದೇಶಗಳಿಂದ (ಸ್ವಿಟ್ಜರಲ್ಯಾಂಡ್‌ ಅಮೇರಿಕ ಮುಂತಾದೆಡೆಗಳಿಂದ) ಬರುವ ನೀರಿನ ಬಾಟಲಿಗಳನ್ನು ಕೊಳ್ಳಬಹುದು. ಇಲ್ಲಿಯೂ ಇತ್ತೀಚೆಗೆ ಎಷ್ಟೋ ಮಿನರಲ್ ವಾಟರ್‌ ತಯಾರಿಸುವ ಫ್ಯಾಕ್ಟರಿಗಳು ಸ್ಥಾಪಿತವಾಗಿವೆ.

ನಾವು ಹೋದ ಹೊಸದರಲ್ಲಿ ಪೇಟೆಯಲ್ಲಿ ನೀರು ಮಾರುವವರೂ ಅಡ್ಡಾಡುತ್ತಿದ್ದರು. ಬೆನ್ನಿಗೆ ಉದ್ದಮುಖದ ಗಡಿಗೆ ಕಟ್ಟಿಕೊಂಡು ನೀರಿನ ಅಗಲ ಬಟ್ಟಲುಗಳಲ್ಲಿ ನೀರು ಕೊಡುತ್ತಿದ್ದರು. ಆ ಪದ್ಧತಿಯೆಲ್ಲ ಬೇಗನೇ ಮಾಯವಾಗಿ ಹೋಯ್ತು. ತಂಪುಪಾನೀಯಗಳ ನೂರಾರು ಅಂಗಡಿಗಳು ತುಂಬಿ ತುಂಬಿ ಹೋಗಿವೆ. ನಿಜವಾಗಿಯೂ ಬೇಕಾಗಲೀ ಬೇಡವಾಗಲೀ ಅದೊಂದು ಫ್ಯಾನ್ಸಿ ಆಗಿಬಿಟ್ಟದೆ. ಇಲ್ಲಿ ಒಂದು ಲೀಟರ್ ನೀರಿಗೆ ಅಂದಾಜು 12 ರೂಪಾಯಿ. ಆದೇ ಪೆಟ್ರೋಲ್‌ಗೆ ಕೇವಲ 50 ಪ್ರತಿ ಲೀಟರಿಗೆ.

ಕಾರ್ನಿಶ್
ಜೆಡ್ಡಾದಲ್ಲಿ ಮರೆಯದೇ ನೋಡುವಂತಹ ಅನುಪಮ ಸ್ಥಳ ‘ಕಾರ್ನಿಶ್’. ನಗರದಿಂದ ಸುಮಾರು 25-30 ಕಿ.ಮೀ. ಗಳಷ್ಟು ಅಂತರದಲ್ಲಿ ಬೀಚ್ ಇದೆ. ಬೀಚ್‌ಗೆ ಕಾರ್ನಿಶ್ ಕೆಂಪು ಸಮುದ್ರದ ಒತ್ತು) ಎನ್ನುತ್ತಾರೆ. ನಮ್ಮ ಕಡೆಯ ಹಾಗೆ ಸಮುದ್ರದಂಡೆ ಗುಂಟ ಸೊಂಪಾಗಿ ಬೆಳೆದ ತೆಂಗಿನ ಗಿಡಮರಗಳ ಸೊಬಗು ಇಲ್ಲಲ್ಲಿ. ದಂಡೆಗುಂಟ ಉಸುಕಿನ ರಾಶಿರಾಶಿ ಬಿದ್ದಿದೆ. ಸಮುದ್ರದ ದಂಡಗುಂಟ ಉದ್ದಾದ ರಸ್ತೆ. ಇಲ್ಲಿಯೂ ಏಕ ಮುಖವಾಹನ ಸಂಚಾರ. ಆ ಕಡೆಗೆ ಪ್ರಶಾಂತವಾದ ಸಮುದ್ರ. ದೂರದ ಸಮುದ್ರದಂಚಿನಲ್ಲಿ ಸರಿಯುತ್ತಿರುವ ಯಾತ್ರಿಕರ, ವ್ಯಾಪಾರಿಗಳ ಹಡಗುಗಳು,
ಮಧ್ಯದಲ್ಲಿ ಅತ್ತಿಂದಿತ್ತ ಓಡಾಡುವ ಕಡಲು ರಕ್ಲಣಾಪಡೆಗಳು, ಸುಮಾರು ಅರ್ಧ ಕಿ.ಮೀ ಅಂತರದ ದಂಡೆಗೆ ಬೆಳ್ಳಕ್ಕಿ ಅಥವಾ ಕೊಕ್ಕರೆ ಪಕ್ಷಿಗಳು ಮೀನು, ಹುಳ ಹುಪ್ಪಟೆ ಹಿಡಿಯುವ ಆಟ, ಸಮುದ್ರ ಮೇಲಿಂದ ನವಿರಾಗಿ ತೇಲಿ ಬರುವ ತಂಗಾಳಿ, ಈ ಎಲ್ಲ ದೃಶ್ಯಾನಂದ ಎಷ್ಟು ಪಡೆದರೂ ಕಡಿಮೆಯೇ.

ವಾರಾಂತ್ಯದಲ್ಲಿ ಇಲ್ಲಿ ಜನ ತುಂಬಿರುತ್ತಾರೆ. ಬಾಂಬೆ ಚೌಪಾಟಿ ಬೀಚ್ ನೆನಪಿಗೆ ಬರುತ್ತದೆ. ಇಲ್ಲಿ ಕೆಲಸ ಮಾಡುವ ಕಂಪನಿಗಳೆಲ್ಲ ತಮ್ಮ ತಮ್ಮ ಕಂಪನಿ ನೆನಪಿಗೋಸ್ಕರ ಸುಂದರ ವಿನ್ಯಾಸಗಳ ಸ್ಮಾರಕ ಕಲಾಕೃತಿಗಳನ್ನು ಮಾಡಿ- ಕೊಟ್ಟಿರುವದರಿಂದ ಅಂದ ಇನ್ನಷ್ಟು ಹೆಚ್ಚಾಗಿದೆ. ಯಾವ ಹೆದರಿಕೆ ಇಲ್ಲದೆ ಆರಾಮವಾಗಿ ಸಮಯ ಕಳೆಯಬಹುದು.

ಅರೇಬಿಯನ್ ಕುಟುಂಬದ ಜನರೆಲ್ಲಾ ಸಂಜೆ 5 ರಿಂದಲೇ ಹೊರಬೀಳುತ್ತಾರೆ. ಜೊತೆಗೆ ಟಿ.ವಿ., ಮಕ್ಕಳಿಗೆ ಸೈಕಲ್ಲು, ಗಾಳಿಪಟ, ಕಾರ್ಪೆಟ್ ತಿಂಡಿ ಡಬ್ಬಗಳು ಏನೆಲ್ಲ ಹರವಿಕೊಂಡು ಆರಾಮವಾಗಿ ಬೀಡು ಬಿಟ್ಟಿರುತ್ತಾರೆ. ಬಣ್ಣ ಬಣ್ಣದ ಲೈಟುಗಳಲ್ಲಿ ಹುಡುಗರಿಗೆ ಅಡಲಿಕ್ಕೆ ಸಾಕಷ್ಟು ಅನುಕೂಲತೆಗಳಿವೆ. ಇಲ್ಲಿಯ ಈ ಕುಟುಂಬಗಳ ವೈಶಿಷ್ಟ್ಯ ಬೇರೆ- ಯಾದುದು. ಒಬ್ಬ ಗಂಡು, 3-4 ಹೆಂಡತಿಯರು ಗುಂಪುಗಳಿಂದ ತುಂಬಿರುತ್ತದೆ. ಮಕ್ಕಳು ಎಲ್ಲೆಲ್ಲೋ ಆಡುತ್ತಿರುತ್ತವೆ. ಗಂಡ ಮೊಳಕೈಯೂರಿ ಅರ್ಧಮಲಗಿರುತ್ತಾನೆ. ಅಥವಾ ಹುಕ್ಕ ಸೇದುತ್ತಿರುತ್ತಾನೆ. ಸುತ್ತಲಿನ ಹೆಂಗಸರು ಮಾತಿನಲ್ಲಿ ತೊಡಗಿರುತ್ತಾರೆ. ಈ ದೃಶ್ಯ ಇಲ್ಲಿ ಸರ್ವಸಾಮಾನ್ಯ. ಈ ಗುಂಪಿನಲ್ಲಿ ಬೇರೆ ಯಾವ ಗಂಡಸರೂ ಇರುವುದಿಲ್ಲ.

ಇಸ್ಲಾಂ ಧರ್ಮದಲ್ಲಿ ಒಬ್ಬ 4 ಹೆಂಗಸನ್ನು ಮದುವೆಯಾಗಬಹುದಂತೆ. ನೂರಾರು, ವರ್ಷಗಳ ಮೊದಲೆಲ್ಲ ಪಕ್ಷ ಪಂಗಡಗಳಲ್ಲಿ ಕಲಹಗಳಾಗಿ ಗಂಡಸರು ಹೆಂಗಸರ ಸಂರಕ್ಷಣೆಗೆಂದು ಮತ್ತೆ ಮದುವೆ ಮಾಡಿಕೊಂಡು ಅವರನ್ನು ಸಂರಕ್ಷಿಸುತ್ತಿದ್ದರು. ಇಂದು ಆ ಪರಿಸ್ಥಿತಿ ಇಲ್ಲದಿದ್ದರೂ ಸಂಪ್ರದಾಯ ಮುಂದುವರೆದಿದೆ. ಕಾರ್ನಿಶ್ ದಂಡೆಗುಂಟ ಪಾಪ್‌ಕಾರ್ನ್, ಐಸ್‌ಕ್ರೀಂ, ಕೋಲ್ಡ್‌ಡ್ರಿಂಕ್ಸ್ ಅಂಗಡಿಗಳು ಸಾಕಷ್ಟು. ಐಸ್‌ಕ್ರೀಂ ತಿನ್ನಲು ಇಲ್ಲಿ ಒಂದೊಂದು ಸಲ ಸಾಲು ಹಚ್ಚಬೇಕಾಗುತ್ತದೆ. ಹೆಸರಾಂತ “ಬಾಸ್ಕಿ ರಾಬಿನ್ಸ್‌” ರುಚಿಗೆ ಮುಗಿಬೀಳುವ ಜನರನ್ನು ನೋಡಿ ಅದೇನು ಅಂತರ ನೋಡೋಣ ಎಂದು ಸಾಲೂ ಹಚ್ಚಿ ಒಳಗೆ ಹೋದೆವು. ಎದುರ ಗಡೆಯ ದೊಡ್ಡ ದೊಡ್ಡ ಗ್ಲಾಸಿನ ಪೆಟ್ಟಿಗೆಗಳಲ್ಲಿ ನಾನಾ ತರಹದ ಐಸ್ ಕ್ರೀಮುಗಳು. ಫ್ರೂಟ್ಸ್‌ ಕಂ ನಟ್ಸ್ ಕಂ ಚಾಕೋಲೇಟ್ಸ್ ಎಂದು ಏನೇನೊ? ಮಿಕ್ಸ್ ಬರೆದಿದ್ದವುಗಳಿದ್ದವು. ನಾವೂ ಎರಡು ದೊಡ್ಡ ಕಪ್‌ಗಳನ್ನು ತೆಗೆದುಕೊಂಡು ಅಲ್ಲಿಯೇ ಒಂದು ಕಡೆಗೆ ಖುರ್ಚಿಯ ಮೇಲೆ ಕುಳಿತು ತಿನ್ನಲು ಸುರುಮಾಡಿದೆವು. ಕೇವಲ 5-6 ಚಮಚದಲ್ಲಿ ನನಗದೇನೋ ಒಂಥರಾ ಹೊಟ್ಟೆ ತುಂಬಿದ ಹಾಗಾಗಿ ಸಾಕಾಗಿ- ಹೋಯ್ತು. ಸಾಕೆಂದು ಬಿಡಲಿಲ್ಲ ಆಗುತ್ತಿಲ್ಲ. ಕಾರಣ ಅದರ ಬೆಲೆ 210 ರೂ (ಒಂದು ಕಪ್‌ಗೆ ಮಾತ್ರ ಅದರೊಳಗೆ ಐಸ್‌ಕ್ರೀಂಕ್ಕಿಂತ ಹೆಚ್ಚಾಗಿ ನಟ್ಸ್ -ಕೋಕೋ-ಗಳಿಂದ ದಟ್ಟವಾಗಿದ್ದು ರುಚಿಕೂಡಾ ಬೇರೆಯೇ ಇತ್ತು. ನಮ್ಮ ಮಕ್ಕಳಿದ್ದರೆ ತಿನ್ನುತ್ತಿದ್ದವು. ಅದರೆ ಆಗ ಇಬ್ಬರೂ ಸ್ವಲ್ಪ ದಿನ ಇಂಡಿಯಾದಲ್ಲಿದ್ದರು. ಗುತ್ತಿಯವರಿಗೂ ಸಾಕಾಗಿತ್ತು. ಮನೆಗಾದರೂ ತೆಗೆದುಕೊಂಡು ಹೋಗಬೇಕೆಂದರೆ ಸುತ್ತೆಲ್ಲ ಕುಳಿತ ಜನರ ಮುಂದೆ ಅರ್ಧವಾದ ಕಪ್ ಹಿಡಿದುಕೊಂಡು ಹೋಗಲೂ ನಾಚಿಕೆ, ಮುಜುಗರ. ನಾನಂತೂ ಅರ್ಧಮನಸ್ಸಿನಿಂದ ಅಲ್ಲಿಯೇ ಸರಿಸಿ ಎದ್ದು ಬಂದೆ. ಮನೆಗೆ ಬಂದ ನಂತರ ‘ಯಾರು ನೋಡಿದರೇನು, ತರಬೇಕಾಗಿತ್ತಲ್ಲ ಫ್ರಿಜ್‌ನಲ್ಲಿಟ್ಟು ಬೇಕಾದಾಗ ಒಂದೊಂದೇ ಚಮಚ ರುಚಿ ನೋಡ- ಬಹುದಿತ್ತಲ್ಲ’ ಎಂದು ನೆನಸಿಕೊಂಡು ಕೆಡಕೆನಿಸದೇ ಇರಲಿಲ್ಲ.

ಅರೇಬಿಯಾದ “ಡಿಸ್ನಿಲ್ಯಾಂಡ್”- ಇಲ್ಲಿಯೇ ಒಂದೆಡೆಗೆ ಡಿಸ್ನಿಲ್ಯಾಂಡ್ ತರಹ (ಅಷ್ಟು ದೊಡ್ಡದಲ್ಲ) .ಅದ್ಭುತವಾದ ಮನೋರಂಜನಾ ಸ್ಥಳವಿದೆ. ಮಕ್ಕಳಿಗೆ ಪ್ರಶಸ್ತ ಸ್ಥಳ. ಇಲ್ಲಿ ಯಾವತ್ತೂ ಸಂಜೆ ಕಿಕ್ಕಿರಿದಿರುತ್ತದೆ. ಮಕ್ಕಳಿಗಾಗಿ ರಂಜಿಸಲೆಂದು ಕರೆದು ಕೊಂಡು ಹೋದ ತಂದೆ-ತಾಯಿ ದೊಡ್ಡವರಾದಿಯಾಗಿ ಎಲ್ಲರೂ ಖುಷಿ ಪಡುವವರೇ. ನಾವು ಪ್ರತಿಸಲ ಹೋದಾಗ ಮತ್ತೇನೋ ಅಲ್ಲಿ ಹೊಸ ಹೊಸ ಆಟಿಕೆ ಪ್ರಪಂಚ ಎದ್ದುಕಾಣುತ್ತಿದ್ದವು.

ನಮ್ಮ ಮಕ್ಕಳಿಗೆ ಅಲ್ಲಿ ಹೋದಾಗ ಯಾವತ್ತೂ ‘ದೆವ್ವದ ಮನೆ’ ಯೊಳಗೆ ಅಡ್ಡಾಡುವ ಕುತೂಹಲ. ಒಂದು ವಿಶಾಲವಾದ ಕೋಟೆಯಂತಿರುವ ಕೋಣೆ ಹೊರಗಡೆಗೆ ಮಿನಿ ರೈಲು ನಿಂತಿರುತ್ತದೆ. ಅದರಲ್ಲಿ ಇಬ್ಬಿಬ್ಬರಂತೆ ಒಬ್ಬರ ಹಿಂದೊಬ್ಬರು 20 ಜನರಾದರರೂ ಕುಳಿತುಕೊಳ್ಳಬಹುದು. ಹುಡುಗರಿಗೆ ಕುತೂಹಲ, ದೊಡ್ಡವರಿಗೆ ಇದರ ಬಗೆಗೆ ತಿಳಿದುಕೊಳ್ಳು- ವಾಸೆ. ಹೊರಡಲು ಸುರುವಾಗುವದು. ಒಳಗಡೆ ಕಗ್ಗತ್ತಲು, ಭಾರೀ ಸಪ್ಪಳದೊಂದಿಗೆ ರೈಲು ಮುನ್ನುಗ್ಗುತ್ತದೆ. ಎಲ್ಲೋ ಮಿನುಗು ದೀಪಗಳು, ಅಂಥದರಲ್ಲಿ ಎದುರುಗಡೆಗೆ ನಮ್ಮ ಕತ್ತು ಹಿಚಕಲೆಂದೇ ಬರುವಂತಹ ಭೇತಾಳಗಳು ನಗುತ್ತ – ಅಣಿಕಿಸುತ್ತ ನಮ್ಮ ಕಡೆಗೆ ದೆವ್ವಗಳು, ವಿಚಿತ್ರ ಕೋರೆ, ಕಣ್ಣುಗಳುಳ್ಳ ಭೂತ ಪಿಶಾಚಿಗಳು ಗಹಗಿಹಿಸಿ ನಗುತ್ತಿವೆ. ದೆವ್ವಗಳೆಲ್ಲ ತಮ್ಮ ಎಲುಬಿನ ಹಂದರದ ಕೈಗಳಿಂದ ತಲೆಯ ಮೇಲೆ ಕೈಯಾಡಿಸುತ್ತಾ ಕಿರಿಚಿಕೊಳ್ಳುತ್ತವೆ. ಅದರೊಂದಿಗೆ ಧಡ-ಧಡ ಎಲ್ಲಿ ಏನಾಗುತ್ತಿದೆಯೋ ಮಕ್ಕಳು ದೊಡ್ಡವರೆಲ್ಲಾ ಕಿರಿಚಾಡುತ್ತಾರೆ. ಹುಡುಗರು ಜೋರಾಗಿ ಅಳುವದು, ಕಣ್ಣು ಮುಚ್ಚಿಕೊಳ್ಳುವದು ನಡೆಯುತ್ತಿದ್ದಂತೆಯೇ ರೈಲು ಬೇಡರ ಬಲೆಯನ್ನು ಭೇದಿಸುತ್ತ ರಭಸದಿಂದ ಮುನ್ನುಗ್ಗುತ್ತಿದೆ. ಅಷ್ಟರಲ್ಲಿಯೆ ಲೈಟು ಹೋಗಿ ಏನೋ ಧೊಪ್ಪೆಂದು ಬಿದ್ದ ಶಬ್ದ! ದೊಡ್ಡವರು, “ಧೈರ್ಯಶಾಲಿ” ಎಂದು ಹೇಳಿಕೊಳ್ಳುವವರ ಎದೆ ಕೂಡ ಒಡೆದು ಬೆವರು ಹೊರಬೀಳುತ್ತಿದೆ. ಚೀರಾಟ ಕೂಗಾಟಗಳೊಂದಿಗೆ 15 ನಿಮಿಷಗಳ ದೆವ್ವದ ಮನೆ ಯೊಳಗಿಂದ ವೇಗವಾಗಿ ಹೊರಬಂದು ಒಮ್ಮೆಲೆ ಧತ್ ಎಂದು ನಿಂತುಬಿಡುತ್ತದೆ. ಬಿಗಿ ಹಿಡಿದ ಉಸಿರು ಬಿಟ್ಟು ಬೆವರೊರೆಸುತ್ತ ಗಾಳಿ ಇರುವ ಬಯಲು ಜಾಗದ ಕಡೆಗೆ ಓಡಬೇಕೆನಿಸುತ್ತದೆ.

ತೂಗು ತೊಟ್ಟಲಿನ ಆನಂದವೇ ಬೇರೆ. 4 ಜನರು ಕೂಡ ಬಹುದಾದ ಒಂದು ಪೆಟ್ಟಿಗೆ. ನಾವು ಒಳಗೆ ಕುಳಿತನಂತರ ಜಾಳಿಗೆ ಬಾಗಿಲು ಹಾಕಿ ಭಧ್ರಪಡಿಸುವರು. ಕೇವಲ 5.10 ನಿಮಿಷಗಳಲ್ಲಿ ಮೇಲಿನಿಂದ ಕೆಳಗಿನ 60-80 ಪೆಟ್ಟಿಗೆಗಳು ತುಂಬಿಬಿಡುವವು. ನಂತರ ಇಲೆಕ್ಟ್ರಿಕ್ ಬಟನ್ ಒತ್ತುವರು. ನಿಧಾನವಾಗಿ ಸುತ್ತು ಹೊಡೆಯುತ್ತ ಮುಂದಿನ 4-5 ನಿಮಿಷಗಳಲ್ಲಿ ವೇಗ ಅತಿಯಾಗಿ ತಿರುಗಲು ಶುರುವಾಗುವದು. ಮೇಲೆನಿಂದ ಕೆಳಗೆ ಎತ್ತಿ ಎತ್ತಿ ಒಗೆದ ಅನುಭವ. ಕಣ್ಣು ಗುಡ್ಡೆಗಳು ಮೇಲೆ ಹೋಗಿ ಎದೆ ಹೊಡೆದು ಕೊಳ್ಳುತ್ತದೆ.

ಇಲ್ಲಿ ಎಲ್ಲದಕ್ಕಿಂತಲೂ “ಇಲೆಕ್ಟ್ರಿಕ್ ರೈಲ್ ರೋಡ್‌”ದ ಅನುಭವ ನಾನೆಂದೂ ಮರೆಯುವುದಿಲ್ಲ. ನಾನು ಅದರಲ್ಲಿ ಹತ್ತುವದಿಲ್ಲವೆಂದರೂ ಗುತ್ತಿಯವರು ಕೇಳಲಿಲ್ಲ. ‘ಅದರಲ್ಲಿ ಕುಳಿತಾದರೂ ನೋಡು’ ಎಂದು ಒತ್ತಾಯಿಸಿದಾಗ ಸುಮ್ಮನಾದೆ. ಮುಂದಿನ ಸೀಟಿನಲ್ಲಿ ಮಕ್ಕಳು, ಹಿಂದಿನ ಸೀಟಿನಲ್ಲಿ ನಾವು. ನಮ್ಮ ಹಿಂದಿನ ಸೀಟುಗಳಲ್ಲಿ ಅರೇಬಿಕ್, ಯುರೋಪಿಯನ್ ಕುಟುಂಬಗಳು. ಎಲ್ಲರೂ ಸೇಪ್ಪಿಬೆಲ್ಟ್‌ ಸಂಯಾಗಿ ಹಾಕಿಕೊಂಡಿದ್ದನ್ನು ಮತ್ತೊಂದು ಸಲ ಚೆಕ್ ಮಾಡಿದರು. ಎಲ್ಲರೂ ಕೈ ಹಿಡಿಕೆ ಗಟ್ಟಿಯಾಗಿ ಹಿಡಿದುಕೊಂಡು ಕುಳಿತೆವು. ರೈಲು ನಿಧಾನಕ್ಕೆ ಶುರುವಾಗಿ ಸಾವಾಕಾಶವಾಗಿ ಮೇಲೇರತೊಡಗಿತು. ನಾವಿನ್ನೂ ಆ ಕಡೆ ಈ ಕಡೆ ನೋಡುತ್ತಿದ್ದಲ್ಲಿಯೇ ವೇಗದ ಮಿತಿ ಏರುತ್ತ ತಾಸಿಗೆ 300 ಕಿ.ಮೀ. ದಷ್ಟು ವೇಗದಿಂದ ಧಾವಿಸತೊಡಗಿತು. ಅಂಕು ಡೊಂಕಾಗಿ ಹೊರಳಿ ಮೇಲೀರಿ ಮೇಲಿನಿಂದ ಕೆಳಗೆ ನೇರವಾಗಿ ಧಡ್ ಧಡ್ ದೊಪ್ಪೆಂದು ನೆಲಕ್ಕಪ್ಪಳಿಸಿ ಮತ್ತೆ ಬೆಟ್ಟಗಳಿಗೆ ಹಾಯುತ್ತ, ಒಮ್ಮೆಲೆ ಹೊರಳಿಸುತ್ತ ಮೇಲೇರಿಸುತ್ತ ಸುತ್ತು ಸುತ್ತಿಸಿ ಮತ್ತೊಮ್ಮೆ ಮೇಲಿನಿಂದ  ಒಗೆದು ಎದೆ ಒಡೆದಂತೆ ನಿಲ್ದಾಣಕ್ಕೆ ಬಂದು ನಿಂತುಬಿಟ್ಟಿತು. ‘ಅಯ್ಯೋ ಬಡಜೀವವೆ ಬದುಕಿದೆಯಾ’ – ಅನಿಸದೇ ಇರಲಿಲ್ಲ. ಎಲ್ಲರೂ ಬೆವರೊರೆಸುತ್ತಾ ತೇಲುಗಣ್ಣು ಮಾಡಿಕೊಂಡು ರೈಲಿನಿಂದ ಇಳಿಯಲೂ ಬರದಷ್ಟು ನಿಶ್ಶಕ್ತರಾಗಿದ್ದೆವು.

ಇಲ್ಲಿ ಒದಗುವ ಒಂದು ಹಡಗಿನ ಅನುಭವ ಕೂಡಾ ಇಷ್ಟೇ ರೋಮಾಂಚಕಾರಕ. ಈ ಹಡಗು ನಿಜವಾದ ಹಡಗಿನ ಪ್ರತಿಕೃತಿ. ಸಮುದ್ರದಲ್ಲಿ ನೋಡುವ ಹಡಗಿನಂತೆಯೇ ವಿಶಾಲವಾದುದು. ಸುಮಾರು 80-100 ಜನರಾದರೂ ಕುಳಿತುಕೊಳ್ಳಬಹುದು. ಸಮುದ್ರದ ತೆರೆಗಳ ಹೊಡೆತಕ್ಕೆ ಹಡಗು ಸಿಕ್ಕಾಗ ಹೊಯ್ಡಾಡುವ ಅನುಭವ ಇಲ್ಲಿ ಆಗುವದು. ಗುತ್ತಿಯವರು ಈ ಸಲ ನಮ್ಮೊಂದಿಗೆ ಹಡಗು ಏರಲಿಲ್ಲ. ನಾನು ಮಕ್ಕಳು ಮಾತ್ರ ಹಡಗು ಏರಿ ಕುಳಿತೆವು. ಎದುರು ಬದುರಾಗಿ ಎಲ್ಲ ದೇಶಗಳ ಜನ ಇದ್ದರು, ಇಲೆಕ್ಟ್ರಿಕ್ ಬಟನ್ ಒತ್ತಿದ ತಕ್ಷಣ ಜೋಕಾಲಿ ತರಹ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಹೊಯ್ಡಾಡ ತೊಡಗಿತು. ಬರಬರುತ್ತ ಜೋರಾಗುತ್ತಿದ್ದಂತೆ ಹೊಟ್ಟೆಯಲ್ಲಿ ತಳಮಳಿಸಿದಂತಾಗಿ ನನ್ನ ಕಣ್ಣಿಗೆ ಕತ್ತಲೆ ಅವರಿಸಿತು. ಉಸಿರು ದಮುಕಿಸಿದಂತಾಗಿ ಒಂದೇಸಮನೇ ಬೆವರು ಸುರಿಯುತ್ತಿತ್ತು. “ದೇವರೇ ಕಾಪಾಡಪ್ಪಾ” ಅನ್ನೊ ಪರಿಸ್ಥಿತಿಯಲ್ಲೂ ಇರಲಿಲ್ಲ. ಐದು ನಿಮಿಷಗಳ ಭಾರೀ ಹೊಯ್ಡಾಟದ ನಂತರ ನಿಂತಾಗ ಅದರಿಂದ ಇಳಿಯುವದೇ ಸಾಕು ತಲೆ ತಿರುಗಿ ವಾಂತಿ ಆಯಿತು. ನಮ್ಮವರು ನನ್ನ ಅವಸ್ಥೆ ನೋಡಿ ನಗುತ್ತಿದ್ದರೆ ನನಗೆಲ್ಲರ ಮೇಲೆ ಸಿಟ್ಟುಬಂದು ಇನ್ನು ಇಲ್ಲಿ ಹೆಜ್ಜೆ ಇಡುವುದಿಲ್ಲ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿ ಚೀರಾಡಿದೆ. ಆದರೆ ಮುಂದೆ ಸಾಕಷ್ಟು ಸಲ ಹೋದೆವು. ನಾನು ಮಾತ್ರ ಮೇಲಿನ ಯಾವೊಂದನ್ನು ಹತ್ತಲು ಪ್ರಯತ್ನಿಸಲಿಲ್ಲ. “ರೊಕ್ಕಾ ಕೊಟ್ಟು ಒದೆಸಿಕೊಳ್ಳುವ ಆಟ” ಎಂದು ಗುತ್ತಿಯವರು ನಾವು ಅಲ್ಲಿಹೋದಾಗೆಲ್ಲ ಅಂದು ನಕ್ಕು ನಗಿಸುತ್ತಾರೆ.

ಈ ಮೇಲಿನ ಎಲ್ಲ ಆಟಿಕೆಗಳ ಮುಂದೆ ಅಂದರೆ ಆಯಾ ಪ್ಲಾಟ್ ಫಾರಂನಲ್ಲಿ ಸೂಚನಾ ಫಲಕಗಳಿರುತ್ತವೆ, ರಕ್ತದೊತ್ತಡ, ಹೃದಯರೋಗ, ಬಸುರಿ ಹೆಂಗಸರು ಇಂಥವರೆಲ್ಲಾ ಹತ್ತಬಾರದೆಂದಿದ್ದರೂ ಎಷ್ಟೋ ಜನ ಧೈರ್ಯಮಾಡಿ ಹತ್ತಿ ಬೆವರೊರಿಸಿಕೊಳ್ಳುತ್ತ ಇಳಿಯುವ ದೃಶ್ಯ ಮಜಾ ಇರುತ್ತದೆ.

ನಾವು ಸೌದಿಗೆ ಬಂದು 6-7 ವರ್ಷಗಳು ಕಳೆದಿದ್ದವು. ವರ್ಷಕ್ಕೊಂದು ಸಲ ಇಂಡಿಯಾಕ್ಕೆ ಹೋಗುವುದು, 45 ದಿವಸಗಳ ರಜೆಯಲ್ಲಿ ಎಲ್ಲರೊಂದಿಗೆ ಇದ್ದು ಹೊಸ ಹೊಸ ತಿಂಡಿ ತಿನಿಸುಗಳು ತಿಂದು ನಮ್ಮ ತೋಟಗಳಿಗೆ ಹೋಗಿ ಅಡ್ಡಾಗಿ, ಯಾವುದಾದರೂ ಒಳ್ಳೆಯ ಸಿನಿಮಾಗಳಿದ್ಧರೆ ಥಿಯೇಟರ್‌ಗಳಲ್ಲಿ ನೋಡಿ ಮತ್ತೆ ಬರುತ್ತಿದ್ದೆವು.

ನಮ್ಮ ನೆರೆಹೊರೆಯವರು :-

ಕ್ಯಾಂಪಸ್ಸಿನಲ್ಲಿ ಈ ವೇಳೆಗೆ ಎಲ್ಲರ ಪರಿಚಯವಾಗಿತ್ತು. ಇದೊಂದು ಮಿನಿ ಪ್ರಪಂಚ. ಒಂದೇ ಕಡೆಗೆ ಐದೂ ಖಂಡಗಳ ಜನರು. ಅವರ ಆಚಾರ- ವಿಚಾರ, ವೇಷ ಭೂಷಣ, ತಿಂಡಿ ತಿನಿಸು ನೋಡಲು ತಿಳಿದುಕೊಳ್ಳಲು ನನಗಿದೊಂದು
ದೊಡ್ಡ ಅವಕಾಶ ಸಿಕ್ಕಂತಾಗಿತ್ತು.

ಇಲ್ಲಿಗೆ ಬಂದು 3-4 ದಿವಸಗಳಲ್ಲಿ (1980) ಮೊದಲು ಪರಿಚಯವಾದವರು ಸ್ಕಾಟಲ್ಯಾಂಡಿನ ಮಿ. ಹೆವಿಟ್ಸನ್ ಅವರ ಕುಟುಂಬ. ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದವರು. ಅವರ ಎರಡು ವರ್ಷದ ಮಗ ರಿಚರ್ಡ್ ನಮ್ಮ ಮಗಳು ಅಮೃತಾ ಬೆಳಗಿನಿಂದ ಸಂಜೆಯವರೆಗೆ ಆಡುವದೇ ಅಡುವದು! ಈ ಹುಡುಗರಿಂದಲೇ ನಾವುಗಳೂ ಅತೀ ಆಪ್ತರಾಗಿ ಅವರು ಇಂಡಿಯಾದ ಬಗೆಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಮಸಾಲೆ ಅಡುಗೆಗಳೆಂದರೆ ಅವರಿಗೆ ತುಂಬಾ ಖುಷಿ. ಇಡ್ಲಿ, ಚಟ್ನಿ ಸಾರು ಮಾಡಲಿಕ್ಕೆ ಕಲಿತುಕೊಂಡರು. ಅವರ ಮಗ ನಮ್ಮ ಮನೆಗೆ ಬಂದಾಗೆಲ್ಲ ಇಡ್ಲಿ (ರೈಸ್ ಕೇಕ್) ಬೇಕೆಂದು ಹಟ. ಮೂರು ವರ್ಷಗಳ ನಂತರ ಅವರು ತಮ್ಮ ಕಾಂಟ್ರಾಕ್ಟ್ ಮುಗಿಸಿಕೊಂಡು ನಮ್ಮೆಲ್ಲರ ನೂರಾರು ಪೋಟೋಗಳ ಆಲ್ಬಮ್‌ ಹೊತ್ತುಕೊಂಡು ಸ್ಕಾಟ್‌ಲ್ಯಾಂಡಿಗೆ ಹೊರಟಾಗ ನಮಗೆ ಬಹಳ ದುಃಖವಾಯಿತು.

“ಸ್ಪೇನ್‌”ದ “ಪ್ರೀಬೆ” ದಂಪತಿಗಳು ಮೇಲಿಂದ ಮೇಲೆ ನಮ್ಮನೆಗೆ ಬರುತ್ತಿದ್ದರು. ಮಿಸ್ಟರ್‌ ಪ್ರೀಬ ಜರ್ಮನಿಯವರು. ಅವರ ಶ್ರೀಮತಿ ಸ್ಪೇನ್‌ದವರು. ಹೆಂಡತಿಯ ದೇಶ-ಜನ ಬಹಳ ಚೆಂದ ಸುಂದರ ಎ೧ದು ಹೇಳಿ ಇವರೂ ಸ್ಪೇನದ ನಾಗರೀಕರಾಗಿದ್ದಾರೆ. ಅವರ ಶ್ರೀಮತಿಗೆ ಭಾಷಾ ಸಮಸ್ಯೆಯಿಂದಾಗಿ ಮಾತು ಅಷ್ಟಕ್ಕಷ್ಟೆ.

ತಾವು ಇಂಡಿಯಾಕ್ಕೆ ಎರಡು ಸಲ ಬಂದುದಾಗಿ. ನೇಪಾಳಕ್ಕೆಲ್ಲ ಭೆಟ್ಟಿಯಾದುದಾಗಿ ಯಾವತ್ತೂ ಏನಾದರೊಂದು ಘಟನೆ ನೆನೆಸಿಕೊಂಡು ಹೇಳುವರು. ಭೆಟ್ಟಿಯಾದಾಗೊಮ್ಮೆ ಕೈ ಮುಗಿದು ‘ಮನಸ್ತೆ’ ಅನ್ನುತ್ತಾರೆ. ಅರ್ಥಗೊತ್ತಾಗದೇ ಮೊದಲ ಸಲ ಗೊಂದಲಕ್ಕಿಂಡಾದೆವು. “ಭಾರತೀಯರನ್ನು “ಹಲೋ” ಎಂದು ಮಾತು ಶುರು ಮಾಡುವದಕ್ಕಿಂತ “ಮನಸ್ತೆ” ಎಂದೇ ಕೈ ಮುಗಿದು ಮುಂದೆ ಮಾತನಾಡಲಿಕ್ಕೆ ಖುಷಿ ಅನಿಸುತ್ತದೆ’ – ಅಂದರು. ಆವಾಗ ಅರ್ಥವಾಯಿತು – ಮನಸ್ತೆಯ ಅರ್ಥ ‘ನಮಸ್ತೆ’ ಎಂದು. ಇವರು “ನಮಸ್ತೆ”ಗೆ ಲೆಫ್ಟ್ ಅಬೌಟ್ ಟರ್ನ್ ಕವಾಯಿತು ಮಾಡಿಸಿದ್ದರು. ಗುತ್ತಿ ಯವರು “ನಮಸ್ತೆ”ಎಂದು ಸರಿ ಮಾಡಿ ಹೇಳಿದರೂ ಮತ್ತೆ ಭೆಟ್ಟಿಯಾದಾಗೊಮ್ಮೆ ಮನಸ್ತೆಯಿಂದಲೇ ಮಾತು ಸುರುಮಾಡುತ್ತಿದ್ದರು. ನಾವೂ ಕೊನೆಗೆ ಅದೇನೇ ಅಗಲಿ, ವಿದೇಶಿಗರು ವಿದೇಶದಲ್ಲಿ ಭಾರತೀಯರನ್ನ ನಮಸ್ತೆ, ನಮಸ್ಕಾರ ಎಂದಾಗ ಆಗುವ ಖುಷಿ ಹೇಳಲಸಾಧ್ಯ. “ನಮ್ಮ ಕಡೆಯವರು ಬಿಡುತ್ತಿರುವುದನ್ನು ಅವರಾದರೂ ಹಿಡಿದುಕೊಳ್ಳುತ್ತಿದ್ದಾರಲ್ಲಾ’ ಎಂದು.

ನಾನುಡುವ ರೇಶ್ಮೆ ಸೀರೆಗಳನ್ನು ನೋಡಿ ಇಂಡಿಯಾದಿಂದ ತಮ್ಮ ಶ್ರೀಮತಿ ಗೊಂದು ಸೀರೆ ತರಲಿಕ್ಕೆ ಹೇಳಿದ್ದರು. ನಾನು ಒಯ್ದು ಕೊಟ್ಟು ಅವರ ಶ್ರೀಮತಿಗೆ ಸೀರೆ ಉಡಿಸಿದಾಗ ಅವರ ಸೌಂದರ್ಯ ಇನ್ನೂ ಇಮ್ಮಡಿಸಿತು. ‘ಸ್ಪಾನಿಷ್ ಸುಂದರಿ’ ಎಂದು ನಾವೆಂದಾಗ ಅವರು ಇನ್ನೂ ಉಬ್ಬುಬ್ಬಿ ಹೋದರು.

ಜರ್ಮನಿಯವರಾದ ಮಿ. ಮೈಕಲ್, ಸೆಂಟ್ರಲ್ ಅಮೇರಿಕದ ಗ್ವಾಟೆಮಾಲಾದ ಜ್ಯೂಲಿಯೆಟ್‌ನ್ನು ಮದುವೆಯಾಗಿದ್ದಾರೆ. ಜರ್ಮನಿಯಿಂದ ಆಫೀಸ್ ಕೆಲಸಕ್ಕೆಂದು ಗ್ವಾಟೆಮಾಲಾಕ್ಕೆ ಹೋದಾಗ ಜ್ಯೂಲಿಯೆಟಳೊಂದಿಗೆ ಪ್ರೇಮ, ಮುಂದೆ ಮದುವೆ. ಜ್ಯೂಲಿಯೆಟ್‌ ಜರ್ಮನ್ ನಾಗರೀಕತತ್ವ ಹೊಂದಿದ ತರುವಾಯ ಇಲ್ಲಿಗೆ ಬಂದಿದ್ದಾರೆ. ಅವರಿಗೆ 4 ವರ್ಷದ ಹಾಗೂ 6 ತಿಂಗಳಿನ ಎರಡು ಗಂಡುಮಕ್ಕಳಿವೆ. ನಮ್ಮ ಮನೆಯಿಂದ ಮೂರನೆ ಮನೆಯೇ ಅವರದು ಇಲ್ಲಿಗೆ ಬಂದ ಒಂದು ವರ್ಷದಲ್ಲಿಯೇ ನರ್ಸರಿ ಶಾಲೆಯಲ್ಲಿ ಕೆಲಸ ದೊರಕಿಸಿಕೊಂಡು ನೆಮ್ಮದಿಯಿಂದ ಇದ್ದರು. ವಿವಿಧ ರುಚಿಗಳುಳ್ಳ ಕೇಕ್ ಮಾಡುವದರಲ್ಲಿ ಆಕೆ ನಿಪುಣೆ. ನಮ್ಮನೆಗೆ ಅದೆಷ್ಟೋಸಲ ಕರೆಸಿ ನಾನೂ ಕೇಕ್ ಮಾಡಲು ಕಲಿತುಕೊಂಡೆ. ನಾನು ಮಾಡುತ್ತಿದ್ದ ಆಲೂಗಡ್ಡೆ ಪಲ್ಯ ಅಂತೂ ಅವಳ ಅಚ್ಚುಮೆಚ್ಚಂತೆ. ಒಂದೊಂದು ಪ್ಲೇಟ್ ಕೇವಲ ಅದನ್ನೇ ತಿನ್ನುವದು. ಒಂದೊಂದು ಸಲ ತಮ್ಮ ಮನೆಗೆ ಹೆಚ್ಚಿಗೆ ಇಸಿದುಕೊಂಡು ಹೋಗಿ ಗಂಡ ಮಕ್ಕಳು ತಿಂದು ಖುಷಿ- ಪಡುತ್ತಿದ್ದರು. ಬಳ್ಳೊಳ್ಳಿ, ಅಲ್ಲ (ಹಸಿ ಶುಂಠಿ) ಕೊತ್ತಂಬರಿ ಹಾಕಿದ ತಂಪು ಮಜ್ಜಿಗೆ ಅವಳಿಗೆ ಇಷ್ಟವೆಂದು ಬಂದಾಗಲೆಲ್ಲ ಬೇಕೆನ್ನುವಂತೆ ನೆನಪಿಸುವಳು.

ಮಿ. ಮೈಕಲ್‌ನ ಸ್ನೇಹಿತರನೇಕರು ಇಂಡಿಯಾಕ್ಕೆ ಹೋಗಿಬಂದಿದ್ದರಂತೆ. ಹೀಗಾಗಿ ಇವರಿಗೂ ಹೋಗಬೇಕೆನಿಸಿತ್ತು. ‘ರಜೆಗೆ ಇಂಡಿಯಾಕ್ಕೆ ಹೋಗುತ್ತೇವೆ. ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳು, ಸಮೀಪದ ಏರ್ಪೋರ್ಟ್ ಅಥವಾ ಬಸ್‌ಗಳ ಅನುಕೂಲತೆಗಳು, ಇನ್ನೂ ಅನೇಕ ವಿಷಯಗಳ ಬಗ್ಗೆ ಗುತ್ತಿಯವರಿಗೆ ಕೇಳಬೇಕಾಗಿದೆ’ ಎಂದು ಮಿ. ಮೈಕಲ್ ನಾನವರ ಮನೆಗೆ ಹೋದಾಗ ಕೇಳಿದರು. ಅದಕ್ಕೆ ನಾನು ಅವರನ್ನು ‘ನಮ್ಮ ಮನೆಗೆ ಬನ್ನಿರಿ ವಿವರವಾಗಿ ಬೇಕಾದ ಮಾಹಿತಿ ತೆಗೆದುಕೊಳ್ಳಿರಿ’ ಎಂದು ಆಹ್ವಾನ ಮಾಡಿ ಬಂದಿದ್ದೆ. ಆ ದಿನ ಸಂಜೆ ಅಕಸ್ಮಿಕವಾಗಿ ಬೇರೆ ಕೆಲಸದ ಮೇರೆಗೆ ನಾವು ಪೇಟೆಗೆ ಹೋಗಲೇಬೇಕಾಯ್ತು. ಹೀಗಾಗಿ ಫೋನ್ ಮುಖಾಂತರ ಜ್ಯೂಲಿಯೆಟ್‌ಗೆ ಮತ್ತೊಮ್ಮೆ ಭೆಟ್ಟೆಯಾಗೋಣ ಎಂದು ಹೇಳಿದೆ.

ಮುಂದೆ ಒಂದು ವಾರದಲ್ಲಿ ನಾನು, ಮಕ್ಕಳು ಭಾರತಕ್ಕೆ ಬಂದೆವು. ಎರಡು ತಿಂಗಳ ರಜೆ ಮುಗಿಸಿಕೊಂಡು ಮರಳಿ ಹೋದಾಗ ಗುತ್ತಿಯವರು ಕ್ಯಾಂಪಿನ ಅದು ಇದು ವಿಷಯಗಳು ಹೇಳುತ್ತಿದ್ದಂತೆಯೇ ಮಿ. ಮೈಕಲ್ ಕಾರ್ ಅಪಘಾತದಲ್ಲಿ ನಿಧನವಾದ ಸುದ್ದಿ ಹೇಳಿದಾಗ ನನಗೆ ಶಾಕ್ ಹೊಡೆದಂತಾಯ್ತು. ನಂಬಲಿಕ್ಕೆ ಅಗಲೇ ಇಲ್ಲ.

ಮೈಕೆಲ್ ಕುಡಿದು ರಾತ್ರಿ ಪಾಳಿ ಕೆಲಸಕ್ಕೆ ಹೋಗುವಾಗ ಕಾರಿನ ವೇಗದ ಮಿತಿ ಮೀರಿ ಗೇಟಿಗೆ ಹೊಡೆದು ಸ್ಥಳದಲ್ಲಿಯೇ ನಿಧನರಾದರಂತೆ. ವಯಷ್ಟು 28 ಇರಬಹುದಷ್ಟೇ. ಜ್ಯೂಲಿಯೇಟ್ 24ರವಳು. ಫೋನ್ ಹಚ್ಚಿದೆ. ಮನೆಯಲ್ಲಿ ಯಾರೂ ಇಲ್ಲ. ಬೇರೆ ಅವರ ಜರ್ಮನ ಸ್ನೇಹಿತರ ಮುಖಾಂತರ ಪೂರ್ಣ ಸುದ್ದಿ ಗೊತ್ತಾಯಿತು. ಒಂದು ತಿಂಗಳ ನಂತರ ಜ್ಯೂಲಿಯಟ್ ತನ್ನ ಮಕ್ಕಳಿಬ್ಬರನ್ನೂ ಅತ್ತೆ ಹತ್ತಿರ ಜರ್ಮನಿಯಲ್ಲಿ ಬಿಟ್ಟು ಉಳಿದ ಕಾಗದ ಪತ್ರಗಳ ಕೆಲಸ ಮುಗಿಸಿ ಕೊಂಡು ಹೋಗಲು ಬಂದಾಗ ಮತ್ತೆ ಎಲ್ಲರೂ ಅವಳನ್ನು ಭೆಟ್ಟಿಯಾಗಲು ಹೋಗಿದ್ದೆವು. ಅವರವರ ನೆನಪುಗಳು ಮರಳಿಸಿ ಕೊಂಡು ಅಳು-ಸಾಂತ್ವನ ಹೇಳಬೇಕಾಯ್ತು. “ಇಂಡಿಯಾಕ್ಕೆ ಹೋಗುವ ಅಸೆ ಬಹಳಿತ್ತು ‘ಮೈಕಿ’ಗೆ, ಎಂದು ನನ್ನ ಭುಜದ ಮೇಲೆ ಜ್ಯೂಲಿಯಟ್ ಕೈ ಇಟ್ಟಾಗ ನನಗರಿಯದಂತೆಯೆ ಕಣ್ಣೀರು ಉಕ್ಕಿ ಬಂದವು. “ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ”…

ಸೌದಿ ಅರೇಬಿಯದಲ್ಲಿ ಮದ್ಯಪಾನ, ಜೂಜು, ಮಾದಕ ವಸ್ತುಗಳನ್ನು ನಿಷೇಧಿಸಲಾಗಿದೆ. ಹೀಗಿದ್ದಾಗ್ಯೂ ಸಹ ಕುಡುಕರು ಅದ್ಹೇಗೇಗೋ ವ್ಯವಸ್ಥೆ ಮಾಡಿಕೊಂಡಿರುಕ್ತಾರೆ. ಪಾರ್ಟಿಗಳಲ್ಲಿಯಂತೂ ಎಲ್ಲಿಂದಲೋ ಯಾವ ಹೆಸರಿನವು ಬೇಕೋ ಅವೆಲ್ಲ ತರಿಸುತ್ತಾರಂತೆ. ಕಳ್ಳಸಾಗಾಣಿಕೆದಾರರಿಗೆ ಹಾದಿಗಳು ಸಿಕ್ಕೇ ಸಿಗುತ್ತವಂತೆ; ಹಾಗೇ ಅವರು ಎಲ್ಲದಕ್ಕೂ ತಯಾರು. ಸಿಕ್ಕುಬಿಟ್ಟರೆ ದಂಡ, ಜೈಲು ಶಿಕ್ಷೆ, ಗಲ್ಲು ಶಿಕ್ಷೆ ಮುಂತಾದ ಕಠಿಣ ಶಿಕ್ಷೆಗಳಿದ್ದರೂ ಎಷ್ಟೋ ಜನ ಧ್ಯೆರ್ಯ ಮಾಡಿಯೇ ಮಾಡುವರು.

ಅಮೇರಿಕದ “ಮಿ. ವಿಲಿಯಂ” ಮಲೇಶಿಯದ “ಮ್ಯಾಲಿನಿ” ಎಂಬಾಕೆಯನ್ನು ಮದುವೆಯಾಗಿದ್ದಾರೆ. ಅಮೇರಿಕದ ಪತ್ರಿಕೆಯೊಂದರಲ್ಲಿ “ಪೆನ್ ಫ್ರೆಂಡ್‌” ಅಂಕಿತದಡಿ ಯಲ್ಲಿ ಇವರ ಪತ್ರ ವ್ಯವಹಾರ ಶುರುವಾಗಿ, 6 ತಿಂಗಳ ನಂತರ “ವಿಲಿಯಂ” ಮಲೇಶಿಯಕ್ಕೆ ಪ್ರವಾಸಿಯೆಂದು ಹೋದಾಗ ಅಲ್ಲೆಲ್ಲ 2 ತಿಂಗಳು ಅಡ್ಡಾಡಿ ಬಿದ್ದು ಹೊರಳಾಡಿ ನಂತರ
ಮದುವೆ ಮಾಡಿಕೊಂಡನೆಂದು ಮ್ಯಾಲಿನಿ (ರಸಿಕತೆಯಿಂದ) ಹೇಳುತ್ತಾರೆ. ಈಗ ಮೂರು ಮುದ್ದಾದ ಹೆಣ್ಣು ಮಕ್ಕಳು”ಮ್ಯಾಲಿನಿ ತರಹವೇ” ಕಣ್ಣುಗಳು) ಇವೆ. ನಾನು ಅವರಿಗೆ “ಮಾಲಿನಿ” ಎಂದೇ ಕರೆಯುತ್ತಿದ್ದೆ. ಕೆಲಸ ಏನೇ ಇರಲಿ, ನಯ ನಾಜೂಕು ಎಂದು ಕೂಡಲೇ ಮೇಲುಡುಗೆ ಏಪ್ರನ್ (Apron) ಹಾಕಿಕೊಂಡು ಹುರುಪಿನಿಂದ
ಓಡಾಡುತ್ತಾರೆ.

ಆಕೆ ಮದುವೆಯ ನಂತರ 5 ವರ್ಷ ಅಮೇರಿಕದಲ್ಲಿದ್ಧಾಗ ಒಳ್ಳೆ ಸೇಲ್ಸ್‌ ಗರ್ಲ್‌ ಕೂಡಾ ಆಗಿದ್ದರಂತೆ, ಜೊತೆಗೆ ಟೈಲರಿಂಗ್‌ದಲ್ಲಿ ಪರಿಣಿತೆ ಕೂಡಾ. ಅವರು ಗಂಡನ ಪ್ಯಾಂಟ್ ಶರ್ಟ್. ಕೋಟು ಕೂಡಾ ಎಷ್ಟೊಂದು ಚೆನ್ನಾಗಿ ಹೊಲೆಯುತ್ತಾ ರೆಂದರೆ ಒಂದು ಸಲ ಅವರ ಮನೆಗೆ ಹೋದಾಗ ಹ್ಯಾಂಗರಿಗೆ ಹಾಕಿದ ಎಲ್ಲ ಬಟ್ಟೆಗಳನ್ನೂ ತೋರಿಸಿದರು. ಈಕೆ ಯಾವ ಅಂತರಾಷ್ಟ್ರೀಯ ಪರಿಣಿತ ಟೇಲರುಗಳಿಗೇನು ಕಮ್ಮಿ ಇಲ್ಲ – ಅನಿಸಿತು.

ನಾನು ಹೊಸದಾಗಿ ಸ್ವಿರ್ಜರ್‌ಲ್ಯಾಂಡಿನ Elna tx Electronic ಹೊಲಿಗೆ ಮಶೀನ್ ಕೊಂಡಿಡ್ಡೆ. ಇದರಲ್ಲಿಯ 20 ಬಗೆಯ ಡಿಸೈನ್‌ಗಳನ್ನು ಅರಿವೆಗಳ ಮೇಲೆ ಹಾಕಬಹುದು. ಇಲ್ಲಿ ಜಪಾನದ ಬಟ್ಟೆಗಳು ಸೋವಿ ಇರುವುದರಿಂದ ಏನೇನಾದರೂ ಡಿಸೈನ್‌ ಮಾಡುತ್ತಿದ್ದೆ. ಮಾಲಿನಿ ಅಷ್ಟೊತ್ತಿಗಾಗಲೇ ಟೇಲರಿಂಗ್ ಕ್ಲಾಸ್ ಶುರು ಮಾಡಿದ್ದರು. ನನಗೆ ಬೇಕಾದ ಬ್ಲೌಜ್‌ ಪೆಟ್ಟಿಕೋಟ್ ಕಲಿಸುವ ಕ್ಲಾಸ್ ಅಲ್ಲ ಅದು ಇನ್ನೇನು, ಮಕ್ಕಳಿಗಂತೂ ರೇಡಿಮೇಡ್ ಡ್ರೆಸ್‌ಗಳ ಅಂಗಡಿಗಳು ಸಾಕಷ್ಟು. ಹೀಗಾಗಿ ನನಗಾಗಿ ಒಂದು ಕೋಟು ಹೊಲೆದುಕೊಳ್ಳುವ ಆಸೆಯಾಯ್ತು. ಮಾರ್ಕೆಟ್‌ನಲ್ಲಿ
ಯಂತೂ ಸುಂದರವಾಗಿ ಕೋಟುಗಳಿದ್ದವು. ಆದರೂ ಮಾಲಿನಿಯ ಕೈಚಳಕ ನೋಡುವ. ನಾನೂ ಕಲಿತುಕೊಳ್ಳುವ ಆಸೆಯಾಗಿ ಕೇವಲ ಕೋಟು ಹೊಲೆಯಲಿಕ್ಕೆ ಕಲಿತುಕೊಂಡೆ. ಒಂದು ಕೋಟು ಹೊಲೆಯಲಿಕ್ಕೆ ಕಲಿಸುವ ಫೀಸು ಒಂದು ಸಾವಿರ ರೂಪಾಯಿ. ಆದರೆ ಬಟ್ಟೆ ಬೆಲೆ 120 ರೂ. ಮಾತ್ರ. ಆದರೂ ಅದನ್ನೊಂದೇ ಕಲಿತುಕೊಳ್ಳುವಾಗ ಇಸಬೆಲ್ಲಾ, ರೋಸಿ, ಕ್ರಿಸ್ಟೀನ್ ಮುಂತಾದ ಮಹಿಳೆಯರೊಂದಿಗೆ ಕಳೆದ ಆನಂದದ ಸಮಯಗಳು ನೆನಪಿನಲ್ಲಿ ಉಳಿಯುವಂಥವು.

ಜಪಾನದ ಕಿಮೋಟೋ:

ಜಪಾನ್‌ದ ಕುಟುಂಬ ಶ್ರೀಮತಿ ಮತ್ತು ಶ್ರೀ ಕಿಮೋಟೋ ಅವರದು: ಇವರ ಜೀವನ ಶೈಲಿಯೇ ವಿಚಿತ್ರ. ಇವರ ಮನೆಯೇ ಆಕರ್ಷಕವಾದದು. ಸಣ್ಣಸಣ್ಣ ಬಣ್ಣದ ಲೈಟುಗಳಷ್ಟು ಮೂಲೆಯಲ್ಲಿಟ್ಟಿರುವ ಹೂದಾನಿಗಳ ಮೇಲೆ ಫೋಕಸ್ ಮಾಡಿದ್ಧಾರೆ. ಅಲ್ಲಲ್ಲಿ ಪಿಂಗಾಣಿ, ಹೂದಾನಿಗಳು ಬಂಗಾರ ಲೇಪಿತದಲ್ಲಿ ಹೊಳೆಯುತ್ತವೆ. ಅವರ ಮನೆಯಲ್ಲಿನ ಪ್ರತಿ ಸಾಮಾನು ಜಪಾನ್ ತಯಾರಿಕೆಯವೇ. ಅ ಬಗೆಗೆ ಅವರಿಗೆ ಹೆಮ್ಮೆ.

ಎರಡನೆಯ ಮಹಾಯುದ್ಧದ ನಂತರ ಚೇತರಿಸಿಕೊಂಡು ಇಂದು ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ದೇಶ ಆಗಿರುವ ಜಪಾನ್ ಏನೆಲ್ಲ ತಯಾರಿಕೆಯಲ್ಲಿ ಮೇಲುಗೈ ಪಡೆದಿದೆ ಎರಡು ಹೇಳಿಕೊಳ್ಳುತ್ತಾರೆ. ಮಾತಾಡುವಲ್ಲಿಯೂ ಬಹಳ ಅಭಿಮಾನಿ.

5-6 ತಿಂಗಳ ಹಿಂದೆಯಷ್ಟೇ ಟೆನಿಸ್ ಹಾಲ್‌ದಲ್ಲಿ ಮಿಸೆಸ್ ಕಿಮೋಟೋ ಮೊದಲ ಪರಿಚಯವಾಯಿತು. ಹಲೋ ಹಲೋ ಮಾತು ಶುರುವಾಗಿ ದೇಶ, ಉಡುಗೆ ತೊಡುಗೆ ಬಗೆಗೆ ಮಾತಾಯಿತು. ಆಗಷ್ಟೇ ಇಂಡಿಯಾ ವಸ್ತು ಪ್ರದರ್ಶನವೊಂದು ಅಲ್ಲಿ ನಡೆ ಯುತ್ತಿತ್ತು. ನೋಡಿ ಬರಲು ಅವಳಿಗೆ ಒತ್ತಿ ಹೇಳಿದ್ದೆ. ನಂತರ ನೋಡಿಬಂದ ಮೇಲೆ ಹೊಗಳಿದ್ದೇ ಹೊಗಳಿದ್ದು. ಅಂದಿನಿಂದ ಮೊದಲಿನದಕ್ಕಿಂತಲೂ ಹೆಚ್ಚು ಪರಿಚಯ, ಮಾತು ಸುರುವಾಯಿತು.

“ಒಂದು ದಿನ ಮುಂಜಾನೆ 9ಕ್ಕೆ ಕಿಮೋಟೋ ಮನೆಗೆ ಬಂದು 4-5 ಸಲ ಬಾಗಿಲು ಬಾರಿಸಿದರು. ‘ಯಾರು ಇಷ್ಟು ಮುಂಜಾನೆ ಬಂದರು’ ಎಂದುಕೊಂಡೇ ಬಾಗಿಲು ತೆರೆದೆ. ಕಿಮೋಟೋ ಬಹಳೇ ಖುಷಿಯಿಂದ ನನ್ನನ್ನೇ ತಳ್ಳಿಕೊಂಡು ಒಳಬಂದು ಸೋಫಾದಲ್ಲಿ ಕುಳಿತು ಮಾಮೂಲಿ ಆರಾಮ ಮಾತಾದ ನಂತರ ಹಿಂದಿನ ದಿನದಿಂದ (1987) ತಮ್ಮ ರಾಯಭಾರಿ ಕಛೇರಿಯಲ್ಲಿ ಸಿಲ್ಕ್‌ ಪೆಯಿಂಟಿಂಗ್ ಇದ್ದದ್ದನ್ನು ಹೇಳಿ – ನೋಡಿ ಬರಲೇ ಬೇಕು. ಬಸ್‌ ವ್ಯವಸ್ಥೆ ಮಾಡಿಸುತ್ತೇನೆ. ನಾವೆಲ್ಲ ಮಹಿಳೆಯರು ಹೋಗೋಣ ಎಂದು ಎಷ್ಟೊಂದು ಖುಷಿಯಿಂದ ಬಡ ಬಡ ಮಾತಾಡಿದಳು. ನಡುವೆ ನಾನು ತಯಾರಿಸಿದ ಕೇಕ್ ಚೂಡಾ ಕೊಟ್ಟೆ. ಚೂಡಾ ಬಹಳ ಇಷ್ಟಪಟ್ಟಳು. “ಖಾರ್” ಎಂದು ಉಸ್ ಉಸ್ ಮಾಡಿದರೂ ಬಿಡದೇ ಎಲ್ಲ ತಿಂದು ಕೇಕ್ ಸರಿಸಿ ಕುಡಿಯುತ್ತ ಸಿಗರೇಟ್ ಹಚ್ಚಿದಳು. ನಾನು ಮರ್ಜಿ ಕಾಯಲಿಕ್ಕೆ ಸುಮ್ಮನಾದೆ. ಅದರೆ ಹೊಗೆ ಸಹಿಸಲಿಕ್ಕಾಗಲಿಲ್ಲ. ನಾನು ಸಾವಕಾಶವಾಗಿ ಎದ್ದು ಬಾಗಿಲು ತೆರೆದಿಟ್ಟೆ. ಸೂಕ್ಷ್ಮವಾಗಿ ತಿಳಿದುಕೊಂಡ ಕಿಮೋಟೋ 8-10 ಸಲ ‘ಸಾರಿ’, ‘ಸಾರಿ’ ಎಂದು ಸಿಗರೇಟಿನ ಬೆಂಕಿ ಅರಿಸಿಬಿಟ್ಟಳು.

ಗುತ್ತಿಯವರಿಗು ಆರ್ಟ್, ಪೆಯಿಂಟಿಂಗ್‌ದಲ್ಲಿ ಆಸಕ್ತಿ ಇದ್ದದ್ದರಿಂದ ತಾವೂ ಬರುವದಾಗಿ ಹೇಳಿದರು. ಹಾಗೂ ಪರಿಚಯದ ಜರ್ಮನ್ ಕುಟುಂಬ ಕೂಡಾ ನಮ್ಮೊಂದಿಗೆ ಬಂದರು.

ಜಪಾನದ ರೇಷ್ಮೆ ಚಿತ್ರಕಲೆ-

ಸಿಲ್ಕ್ ಪೇಯಿಂಟಿಂಗ್ ಅನ್ನುವದೊಂದು ಜಪಾನಿನ ವಿಭಿನ್ನ ಕಲೆ. ಈ ಪ್ರದರ್ಶನದಲ್ಲಿ ಜಪಾನದ ಪ್ರಸಿದ್ದ (Artist) ಶ್ರೀಮತಿ ಇಕುಕೋ ಡೆಗುಚಿ ಪೀಟರ್ ಎನ್ನುವವರು ತಮ್ಮ ಕಲಾಸಂಗ್ರಹ ಎಲ್ಲ ಪ್ರದರ್ಶಿಸಿದ್ದರು. ಇದರಲ್ಲಿ ಕೇವಲ ಸಾಂಪ್ರದಾಯಿಕ ಹಿನ್ನೆಲೆ ಅಷ್ಟೇ ಅಲ್ಲದೆ ತಾಂತ್ರಿಕ ಕೂಡಾ ಒಳಗೊಂಡಿತ್ತು. ಜಪಾನ್‌ ಸಿಲ್ಕ್‌ ನಮ್ಮ ಬೆಂಗಳೂರು – ಮೈಸೂರು ಸಿಲ್ಕ್‌ಕ್ಕಿಂತ ಭಿನ್ನವಾದುದು. ಈ ಕಲಾಕೃತಿ ಹೇಳುವ ಪ್ರಕಾರ ಮೊದಲು ಬಿಳಿಯ ಸಿಲ್ಕ್ ಬಟ್ಟೆಯನ್ನು ತಮಗೆ ಬೇಕಾದಂತೆ ಬಣ್ಣಗಳಿಂದ ಡೈ ಮಾಡಿ ನಂತರ ಚಿತ್ರ, ಬಿಡಿಸಿ ಆಕಾರ ಕೊಟ್ಟು ನಂತರ ಸಣ್ಣ ಸಣ್ಣ ಗಂಟುಗಳು ಕಟ್ಟಿ ನೀರಿನಲ್ಲಿ 45 ನಿಮಿಷ ಕುಡಿಸಿ ತೆಗೆಯುವುದು. ನಂತರ ತಂಪು ನೀರಿನಲ್ಲಿ ಎದ್ದಿ ಹಾಕಿ ವಿನೆಗರ್ ರಸಾಯನ ಹಚ್ಚಿಬಿಡುವದು, ಹೀಗೆ ಮಾಡುವುದರಿಂದ ಬಣ್ಣಗಳು ಎಲ್ಲೆಲ್ಲಿ ಬೇಕೋ ಅಲ್ಲಿ ಅಷ್ಟಕ್ಕೇ ನೀಟಾಗಿ ಅಂಟಿಕೊಂಡಿರುತ್ತವೆ. ಇದನ್ನು ಮಾಡುವ ವಿಧಾನ ಹೇಳಿದಾಗ ನಮ್ಮ ಕಡೆಯ ಬಾಟಕ್ ಕಲೆ ನೆನಪಾಯಿತು. ಅದು ಎಲ್ಲ ಇದರ ಹಾಗೆಯೇ. ಜಪಾನ ಸ್ತ್ರೀಯರ ಉಡುಗೆ “ಕಿಮೋನೋ” ಕೂಡಾ ಸಾಕಷ್ಟು ಇದೇ ತಾಂತ್ರಿಕ ಶೈಲಿಯಿಂದೊಡ ಗೂಡಿ ಅಕರಕವಾಗಿ ಕಾಣುತ್ತದೆ.

ಮಿಸೆಸ್ ಇಕುಕಾ 15 ವರ್ಷಗಳಿಂದ ವಿದೇಶಗಳಲ್ಲಿ ಕಳೆದಿದ್ದರಿಂದ ಪಾಶ್ಚಾತ್ಯ ಶೈಲಿಯನ್ನು ತಮ್ಮ ಕಲೆಯಲ್ಲಿ ಅಳವಡಿಸಿಕೊಂಡಿರುವುದಾಗಿ ಹೇಳಿ ಅಂತಹ ಸುಂದರ ಚಿತ್ರಗಳನ್ನು ತೋರಿಸಿದರು. ಈಗ ಸೌದಿ ಪರಿಸರದ ಮರುಭೂಮಿ, ಕೆಂಪು ಸಮುದ್ರ, ಸೂರ್ಯಾಸ್ತ ಖರ್ಜೂರ ಗಿಡಗಳು, ಹಳೇ ಪಟ್ಟಣ ಎಂದು ಹೊಸ ಹೊಸ ಚಿತ್ರಗಳನ್ನು ಇಲ್ಲಿ ರಚಿಸಿದ್ದನ್ನು ಗಮನಿಸಿದೆವು.

ಮಿ.ಬ್ರೌನ್ :- ಆಸ್ಟ್ರೇಲಿಯಾದ Mr, & Mrs. Brown ವಯಸ್ಸು ದವರು 62-68 ವರ್ಷದವರು. ಮಕ್ಕಳು ಮೊಮ್ಮಕ್ಕಳು ಎಲ್ಲಾ “ಮೆಲ್‌ಬೋರ್ನ್‌”ದಲ್ಲಿದ್ಧಾರೆ. ಇವರಿಗೆ ಜಗತ್ತೆಲ್ಲಾ ತಿರಗುವ ಹುಚ್ಚು. ಹಣ ಒಂದಿಷ್ಟು ಕೂಡುವದೇ ಸಾಕು, ಮನಸ್ಸು ಎಲ್ಲಿಗಾದರೂ ಹೋಗಲು ಹಾತೊರೆಯುತ್ತದೆಯಂತೆ. ಅಂತೆಯೇ ಇವರುಗಳು ಇಲ್ಲಿದ್ದು ಈಗ 13 ವರ್ಷಗಳಾದವು. ಹಣ ಬಂದಿದ್ದೆಲ್ಲಾ ಪ್ರವಾಸ ಮಾಡುವರದಲ್ಲೇ ಕಳೆದಿದ್ದಾರೆ. ‘ಇಂಡಿಯಾದಲ್ಲಿ 40 ದಿವಸ ಇದ್ದು ಸುಮಾರಾಗಿ ಎಲ್ಲಾ ನೋಡಿದೆವು’ ಅಂದರು. ಗೋವಾ, ಬೆಂಗಳೂರು ಅಡ್ಡಾಡಿದ್ದಾಗಿಯೂ ಹೇಳಿದರು. ಎಲ್ಲ ದೇಶಗಳಲ್ಲಿ ಸಿಗುವ ದೇಶೀಯ ವಿಶೇಷ ವಸ್ತುಗಳನ್ನು ಸಾಕಷ್ಟು ಕೂಡಿಸಿದ್ಧಾರೆ. ನಮ್ಮ ಇಂಡಿಯಾದ ಹುಗ್ಗಿ ಮಾಡುವ ತಪಲಿ, ಜೊತೆಗೆ ಸೌಟು ಕೂಡಾ ಇವರ ಮನೆಯಲ್ಲಿ ನೋಡಿದೆ. ಗೋಡೆಗಳ ಮೇಲಂತೂ ಇಡೀ ಜಗತ್ತಿನ ಶೋಪೀಸ್‌ಗಳು ಅಲ್ಲಲ್ಲಿ ಮೊಳೆ ಹೊಡೆದು ಸುಂದರವಾಗಿ ಸಿಕ್ಕಿಸಿ ಅದರ ಮೇಲೆ ಲೈಟನ ನೆಳಲು ಬೆಳಕೂ ಸಂಯೋಜಿಸಿದ್ದಾರೆ.

Mrs. Linda Brown 62 ವರ್ಷದವರಾಗಿದ್ದರೂ ನಮ್ಮ “Ladies Club” ಅವರ ಮಾತುಗಳಿಂದ ಎಲ್ಲರೂ ಆಕರ್ಷಿತರಾಗುತ್ತಿದ್ದರು. ಪ್ರತಿಯೊಬ್ಬರನ್ನೂ ಮಾತಾಡಿಸಿ ಸುದ್ದಿ ಸಮಾಚಾರಗಳೆಲ್ಲ ಕೇಳುವದು, ಬಹಳ ಪರಿಚಯ ಇದ್ದವರ ತರಹ ಹರಟೆ-ನಗಿಸುವದು, ವಿಚಿತ್ರ ಬಟ್ಟೆ ಧರಿಸುವುದು. (ಎಲ್ಲ ದೇಶಗಳಿಗೆ ಹೋದಾಗ ಕೊಂಡಿರುವ ಬಟ್ಟೆಗಳನ್ನು ) ಎಲ್ಲ ದೇಶೀಯರನ್ನು ಅವರವರ ಭಾಷೆಯಲ್ಲಿ ಮಾತಾಡಿಸಲಿಕ್ಕೆ ಪ್ರಯತ್ನಿಸಿ ತಪ್ಪುವುದು. ಮತ್ತೆ ಸಿಗರೇಟು ಸೇದಿ ಗಡಸು ಧ್ವನಿಯಿಂದ ಹೊ ಹೋ ಎಂದು ನಕ್ಕು ನಗಿಸುವದರಿಂದ ಕ್ಲಬ್‌ದಲ್ಲಿ ಅದೇನೋ ಒಂಥರಾ ಕಳೆ ಬರುತ್ತಿತ್ತು, ಅಕಸ್ಮಿಕ ಆಕೆ ಕ್ಲಬ್‌ಗೆ ಬರದೇ ಹೋದರೆ ಆ ಸಲ ಎಲ್ಲರೂ ತಮ್ಮ ತಮ್ಮ ಗುಂಪಿನಲ್ಲಿ ಹರಟೆ ಹೊಡೆಯುತ್ತಿದ್ದರಷ್ಟೇ.

ನಮ್ಮ ಲೇಡಿಸ್ ಕ್ಲಬ್‌ದಲ್ಲಿ ಪ್ರತಿವಾರ ಕ್ಯಾಂಪಸ್ಸಿನ ಯಾವ ಮಹಿಳೆ ಯಾವುದೇ ವಿಷಯದ ಮೇಲೆ ಮಾತಾಡಬಹುದು, ಪ್ರದರ್ಶಿಸಬಹುದು, ಮುಂದಿನವಾರ ಮಾತಾಡುವವರು ಇದೇ ದಿವಸ ತಮ್ಮ ವಿಷಯ ಹೇಳಿಟ್ಟು ಕುತೂಹಲ ಮೂಡಿಸುತ್ತಿದ್ದರು. ಬಿಂಗೋಆಟ ಪ್ರತಿವಾರ ಇದ್ದದ್ದೆ, ಗೆದ್ದವರಿಗೆ ಏನಾದರೊಂದು ಬಹುಮಾನ.

ಒಂದು ಸಲ ನಮ್ಮ ಲೇಡೀಸ್ ಸರ್ಕಲ್‌ಗೆ ಮನರಂಜನೆ ಮಾಡಲಿಕ್ಕೆಂದು ಈಜಿಪ್ಟು ದೂತಾವಾಸಕ್ಕೆ ಕೇಳಿಕೊಂಡಾಗ ಅವರು ಸೌದಿಗೆ ಬಂದಿದ್ದ ಈಜಿಪ್ಟ್‌ ಪ್ರಸಿದ್ಧ ನೃತ್ಯಗಾತಿ ಒಬ್ಬಳನ್ನು ಕಳಿಸಿದ್ದರು. ಅವಳು ಡಾನ್ಸ್‌ ಮಾಡುವುದಕ್ಕೆ ಮೊದಲೇ ಕ್ಲಬ್‌ನ ಬಾಗಿಲು ಕಿಟಕಿಗಳು ಮುಚ್ಚಲ್ಪಟ್ಟವು. ಇಜಿಪ್ಟಿಯನ್ ಮ್ಯೂಸಿಕ್‌-ಡಾನ್ಸ್‌ ಎಲ್ಲರನ್ನೂ ದಂಗು ಬಡಿಸುವಂಥದು. ಮೇಲುಡುಪುಗಳನ್ನೆಲ್ಲಾ ಒಂದೊಂದೇ ತೆಗೆದೊಗೆಯುತ್ತ ತೆಳುವಾದ ಉಡುಪಿನಲ್ಲಿ ಮೈ ಬಳಕಾಡಿಸುತ್ತ ಹುರುಪಿನಿಂದ ಕುಣಿದಾಡುವದು ನೋಡಿ ನಮ್ಮ ಯೂರೋ-ಅಮೇರಿಕನ್ ಮಹಿಳೆಯರೂ ಹುರುಪಿ ನಿಂದ ಕೊನೆ ಕೊನೆಗೆ ತಾವೂ ಕುಣಿಯಲು ಶುರುಮಾಡಿದರು. ಈ ಇಜಿಪ್ಟಿಯನ್ ಡಾನ್ಸ್‌ ಸ್ವಲ್ಪ ಕ್ಯಾಬರ್‌ಗೆ ಹತ್ತಿರವೇ ಅನಿಸುವುದು.

ಸ್ಟ್ರೀಟ್ ಪಾರ್ಟಿ:-

ವರ್ಷಕ್ಕೊಮ್ಶೆ Street Party ಮಾಡುವುದೊಂದು ಇಲ್ಲಿಯ ಜರ್ಮನ್‌ರು ಶುರುಮಾಡಿಕೊಂಡಿಡ್ಡ ಕಾರ್ಯಕ್ರಮ. ಕ್ಯಾಂಪಸ್ಸಿನಲ್ಲಿಯೇ ಸುಮಾರು 20-30 ಉದ್ದುದ್ದ ರಸ್ತೆಗಳು ಇವೆ. ಪಾರ್ಟಿ ದಿವಸ ಸಂಜೆಗೆ ಒಂದು ರಸ್ತೆಯ ಈ ಕೊನೆಗೆ ಆ ಕೊನೆಗೆ ಕಾರುಗಳೆಲ್ಲ ಅಡ್ಡ ನಿಲ್ಲಿಸಿಬಿಟ್ಟು ಒಳಗಡೆ ಯಾರೂ ಬರದಂತೆ ಮಾಡಿ ಬಿಡುವರು. ಇಡೀ ರಸ್ತೆಗೆ (ರಸ್ತೆಯ ಅಕ್ಕಪಕ್ಕದ 30 ಮನೆಗಳು) ಉದ್ದನೆಯ ಟೇಬಲ್ಲುಗಳು, ಖುರ್ಚಿಗಳು ಹಾಕಿ, ತಮ್ಮ ತಮ್ಮ ಮನೆಯ ವಿಶೇಷ ತಿಂಡಿಗಳನ್ನು ತಂದಿಡುವರು. ಸ್ಟೀರಿಯೊಗಳನ್ನು ಜೋರಾಗಿಟ್ಟು ಕುಣಿಯುವರು, ತಿನ್ನುವದು ನಡೆಸುವರು. ನಾವೂ ಕೂಡಾ ಸ್ಪೆಷಲ್‌ ತಿಂಡಿಗಳಾದ ಚೂಡಾ – ಬೇಸನ್ ಉಂಡೆಗಳನ್ನು ಒಯ್ದಿಟ್ಟಿದ್ದೆವು. ಹುಡುಗರಿಗೆ ತರ ತರದ ತಿಂಡಿ, ಆಟ. ಡಾನ್ಸ್‌ ಎಂದು ಕುಣಿದಾಡಿದ್ದೇ ಕುಣಿದಾಡಿದ್ದು! ಜರ್ಮನರಷ್ಟು ತಿಂದು ಕುಡಿದು ಡಾನ್ಸ್‌ ಮಾಡಲಿಕ್ಕೆ ನಮಗೆ ಬರುವುದಿಲ್ಲ. ಬರುವದಿಲ್ಲವೆಂದು ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಅಲ್ಲಲ್ಲಿ ಒಂದಿಷ್ಟು ಡಾನ್ಸ್‌ ಹೆಜ್ಜೆಗಳಿಟ್ಟು  ಭಾಗವಹಿಸುತ್ತಿದ್ದೇವೆ ಎಂದು ಅಡ್ಡಾಡುತ್ತಿದ್ದೆವಷ್ಟೆ. ರಾತ್ರಿ 12ರ ವರೆಗೆ ಪಾರ್ಟಿಗಳು ನಡದೇ ಇರುತ್ತವೆ. ಈ ಸಮಯದಲ್ಲಿ ಬೇರೆ ಬೇರೆ ರಸ್ತೆಯ ಜನರು ಬರುವಂತಿಲ್ಲ ಅದರೆ ಅದೇ ರಸ್ತೆಯ ಯಾವುದೇ ದೇಶದ ಜನರಿರಲಿ. ಎಲ್ಲರೂ ಬರಲೇಬೇಕು. ನಮಗೆ ಕೆಲವೊಂದು ವಿಷಯಗಳಲ್ಲಿ ಮುಜುಗರ ಅನಿಸಿದರೂ ನಿರ್ವಾಹವೇ ಇಲ್ಲ. ಹೊರಗೆ ಬರಲೇಬೇಕು. ಎಲ್ಲರೂ ಒಂದಾಗಿ ಖುಷಿ ಪಡಬೇಕು ಎನ್ನುವದೊಂದು ಅವರ ವಿಚಾರ. ಮನೆಯ ಮುಂದೆಯೇ ಪಾರ್ಟಿಗಳು ಇರುವುದರಿಂದ ಬೇಸರವೆಂದು ಸಾಕಾದಾಗ ಮನೆಯೊಳಗೆ ಸೇರಿಕೊಳ್ಳಬಹುದಾಗಿತ್ತು.

ನಮ್ಮ ರಸ್ತೆಯಲ್ಲಿಯೇ ಜರ್ಮನಿಯ ಶ್ರೀಮತಿ ಮತ್ತು ಶ್ರೀ ಬೇಕರ್ ಇದ್ದಾರೆ. ಗುತ್ತಿಯವರಿಗೂ ಮಿ. ಬೇಕರ್ ಅವರಿಗೂ ಬಹಳ ಪರಿಚಯ. ಹಾಗೆಯೇ ಅವರ ಶ್ರೀಮತಿಗೂ ಪರಿಚಯ ಅದೆಷ್ಟೋ ಬಾರಿ ಅವರಲ್ಲಿಗೆ ಹೋಗುತ್ತಿದ್ದೆವು. ತಮ್ಮ ಮಕ್ಕಳಿಗೆಂದು ಮನೆಯ ಹಿಂಬದಿಗೆ ದೊಡ್ಡ ಉಸುಕಿನ ಹೊಂಡ ಕಟ್ಟಿದ್ದಾರೆ. ದೊಡ್ಡ ದೊಡ್ಡ ಪಂಜರಗಳಲ್ಲಿ ಸುಮಾರು 400 ಬಣ್ಣ ಬಣ್ಣದ ಪಕ್ಷಿಗಳನ್ನು ಸಾಕಿದ್ಧಾರೆ. 2 ಹುಲಿಯಂತಹ ಬೆಕ್ಕುಗಳಿವೆ. ಬದಾಮದ ಎರಡು ದೊಡ್ಡಗಿಡಗಳು ಇವರ ಹಿತ್ತಲಲ್ಲಿವೆ, ಉಸುಕಿನ ಹೊಂಡ ಎಲ್ಲ ತಂಪಾಗಿವೆ. ನಮ್ಮ ಹುಡುಗರಿಬ್ಬರೂ ಅಲ್ಲಿಗೆ ಹೋದರೆ ಮನೆಗೆ ಕರೆತರುವದೇ ನಮಗೊಂದು ಸಮಸ್ಯೆಯಾಗುತ್ತಿತ್ತು. ಒಂದು ಸಲ ಇಂಡಿಯಾಕ್ಕೆ ಭೇಟಿಕೊಟ್ಟಿದ್ದಾಗಿ ಹೇಳಿದರು. ಮನೆಯಲ್ಲಿ ಇಂಡಿಯಾದಿಂದ ತಂದ ತಾಮ್ರದ ಕೊಡ, ರೊಟ್ಟಿ ಮಾಡುವ ಹಿತ್ತಾಳೆಯ ಪರಾತು, ಕೊಳಗ, ಕಡ್ಡಿ ಕಸಬರಿಗೆಗಳಷ್ಟೇ ಅಲ್ಲದೆ ಕೌದಿಗಳನ್ನು ಗೋಡೆಗೆ ಅಲಂಕರಿಸಿದ್ದಾರೆ. ಬಹಳ ವಿಚಿತ್ರ ಅನಿಸಿತ್ತು ಇವರ ಸಂಗ್ರಹ ನೋಡಿ.

ಕೌದಿವಿನ್ಯಾಸ ಕಲೆ:–‘ಕೌದಿಗಳು’ ಅಂದ ಮೇಲೆ ಇಲ್ಲೊಂದು ವಿಷಯ ನೆನಪಾಯ್ತು. ಜರ್ಮನಿಯಿಂದ ಬಂದ ಮಿಸೆಸ್ ಅಲೆಕ್ಸಾಂಡ್ರಿಯಾ ತಮ್ಮ ದೂತಾವಾಸದಲ್ಲಿ Quilt Exhibition ಏರ್ಪಡಿಸಿದ್ದರು. Quilt (ಕೌದಿ) ಗಳಲ್ಲಿ ಅಸಕ್ತಿ ಇರುವ ಮಿ ಮತ್ತು ಮಿಸೆಸ್ ಬೇಕರ್ ನಮ್ಮನ್ನು ಕರೆದೊಯ್ದರು. ಅದೇನು ವಿಚಿತ್ರ! ಎಲ್ಲ ಗೋಡೆಗಳಿಗೂ ಕೌದಿಗಳೇ ಅಲಂಕರಿಸಿವೆ. ನಮ್ಮ ಹಳ್ಳಿಗಳಲ್ಲಿ ಅಜ್ಜಿಗಳು ಹೊಲೆಯುವ ಕೌದಿಗಳಿಗೂ ಇವುಗಳಿಗೂ ಏನೂ ಅಂತರವಿಲ್ಲ. ಒಂದೇ ಒಂದು ಅಂತರ ವೆಂದರೆ ನಮ್ಮಲ್ಲಿ ಹಳೆಯ ಅರಿವೆಗಳು ಉಪಯೋಗಿಸಿ ಕೌದಿಹೊಲೆದು ಹಾಸಿಕೊಳ್ಳಲು ಹೊದೆದು- ಕೊಳ್ಳಲು ಉಪಯೋಗಿಸುತ್ತಿದ್ದರೆ, ಇಲ್ಲಿ ಇವುಗಳನ್ನು ಹೊಸ ಹೊಸ ಅರಿವೆಯ ತುಣುಕುಗಳನ್ನು ಆಯಾ ಅಳತೆಗಳಲ್ಲಿ ನೀಟಾಗಿ ಕತ್ತರಿಸಿ ಜೋಡಿಸಿ ಹೊಲಿದು ದಾರ ಕಾಣಿಸದಂತೆ ಸೂಕ್ಷ್ಮವಾಗಿ ಹೊಲಿದು ಗೋಡೆಗೆ ಅಲಂಕರಿಸಿರುವುದು.

ನಮ್ಮ ಕಡೆಗೆ ಸಣ್ಣ ಸಣ್ಣ ಮಕ್ಕಳಿಗೆ ದುಪ್ಪಟಿ ಎಂದು ಹಾಸಲು ಹಳ್ಳಿಗಳಲ್ಲಿ ಸುಂದರ ಚಿತ್ರಗಳಿಂದ ಹೊಲೆದವುಗಳನ್ನು ಸಾಮಾನ್ಯವಾಗಿ ನೋಡಿಯೇ ನೋಡುತ್ತೇವೆ.

ಇಲ್ಲಿಯ ಈ ಎಕ್ಸಿಬಿಷನ್‌ದ ಗೋಡೆಗಳಿಗೆ ಅಲಂಕೃತವಾದ ಕೌದಿಗಳ ಬೆಲೆ ಕೇಳಿದರೆ ತಬ್ಬಿಬ್ಬಾಗುವಂಥದು. 6×6, 8×8 ಈ ತರದ ಬೇರೆ ಬೇರೆ ಅಳತೆಗಳಿಗೆ ಸುಮಾರು10,000 ರೂಪಾಯಿಗಳಿಗೂ ಹೆಚ್ಚಾಗುತ್ತವೆ. 25,50 ಸಾವಿರವರೆಗಿನ ಕೌದಿಗಳನ್ನು ನೋಡಿದೆವು.

ಇವುಗಳನ್ನು ನೋಡುವಾಗ ಗುತ್ತಿಯವರು, ನಮ್ಮ ಕಡೆಗೆ ಹಳ್ಳಿಗಳಲ್ಲಿನ ಪರಿಣಿತಿ ಕೌದಿ ಹೊಲೆಯುವರರನ್ನು ಕೂಡಿಹಾಕಿ ಅವರಿಗೆ ಒಳ್ಳೆಯ ಡಿಸೈನ್‌ ಕೊಟ್ಟು ತಯಾರಿಸಿ ವಿದೇಶಗಳಿಗೆ ರಫ್ತು ಯಾಕೆ ಮಾಡಬಾರದು ಎನ್ನುವ ವಿಚಾರವಾಗಿ ಚರ್ಚೆ ಮಾಡಿದರು. ಎಷ್ಟೋ ದಿವಸಗಳ ವರೆಗೆ ಹೌದು ಮಾಡಬಾರದೇಕೆ ಎಂದನಿಸಿತಾದರೂ ಮುಂದೆ ಮರೆತೇ ಬಿಟ್ಟೆವು.

Mrs. Baker ಅಲ್ಲಿ ಗೋಡೆಗೆ ತೂಗುಬಿದ್ದ ಒಂದು ಕೌದಿಯನ್ನು ಅರಿಸಿಕೊಂಡರು. ಅದರ ಬೆಲೆ 18,000.00 ರೂ. Exhibition ಆದ ನಂತರ ಪ್ಯಾಕ್ ಮಾಡುವದಾಗಿ ತಿಳಿಸಿ ಅದರ ಮೇಲೆ ಅವರ ಹೆಸರಿನ ಲೇಬಲ್ ಮತ್ತು ಬೆಲೆ ಹಚ್ಚಿಬಿಟ್ರು. ನಮಗೆ ಇಲ್ಲಿಯ ಈ ಅನೇಕ ಜನರ ವರ್ತನೆಗಳು ಒಮ್ಮೊಮ್ಮೆ ವಿಚಿತ್ರ ಅನಿಸುತ್ತದೆ.

ನಾವು ಇಲ್ಲಿ ಬಂದ ಎರಡನೆಯ ವರ್ಷದಲ್ಲಿ ಶ್ರೀಮತಿ ಶಾಂತಾ ಅಬ್ರಾಹಂ ಬಂದರು. (ಶ್ರೀ ಅಬ್ರಾಹಂ ಕೇರಳೀಯ ಕ್ರಿಶ್ಚಿಯನ್ ಕುಟುಂಬದವರು. ಗುತ್ತಿಯವ ರೊಂದಿಗೆ ಮೊದಲೇ ಬಂದವರೆಂದು ಹೇಳಿದ್ದೇನೆ) ಅವರ ಮಗಳು – ನಮ್ಮ ಮಗಳದು ಒಂದೇ ವಯಸ್ಸು. ಮಕ್ಕಳ ಆಟ-ಪಾಠದಿಂದ ನಾವೂ ಅತಿ ಪರಿಚಯದವರಾದೆವು ಶಾಂತಾ ಅಡುಗೆಯಲ್ಲಿ ಅತೀ ಪಳಗಿದವರು. ತರತರಹದ ತಿಂಡಿಗಳಿಗೆ ಶಹಭಾಷ್ ಎನಿಸಿಕೊಂಡವರು, ಒಂದು ಸಲ ಯಾರಾದರೂ ಮನೆಯಲ್ಲಿ ರುಚಿ ನೋಡಿದರೆ ಸಾಕು. ಅದು ತಾವು ತಮ್ಮ ಮನೆಯಲ್ಲಿ ಅದೇ ತರಹ ರುಚಿ ಬರುವವರೆಗೆ ಮಾಡದೇ ಬಿಡುವವರೇ ಅಲ್ಲ. ಸಂತೆ ಪೇಟೆಗಳೇನೇ ಇದ್ದರೂ ನಾವೆಲ್ಲ ಕೂಡಿಯೇ ಹೋಗುವದು.

ವಿದೇಶಗಳಲ್ಲಿ ಕನ್ನಡ ಮಾತಾಡುವವರು ಸಿಕ್ಕರೆ ಆಗುವ ಸಂತೋಷ ಅನುಭವಿಸಿದವರಿಗೇ ಗೊತ್ತು.  ಮಂಗಳೂರಿನವರೇ ಅದ ‘ಬಕ್ಷ್‌’ ಕುಟುಂಬ ಕೆನಡಾದ ನಾಗರೀಕತ್ವ ಹೊಂದಿ ಈಗ ಇಲ್ಲಿಗೆ ಬಂದಿದ್ದಾರೆ. ಸಾಂಪ್ರದಾಯಿಕ ಕುಟುಂಬದವರು ಬುರ್ಕಾ ಇಲ್ಲದೇ ಹೊರಬೀಳುವಂತಿಲ್ಲ. ಶ್ರೀಮತಿ ‘ರಜಿಯಾ’ ಕೂಡಾ ಮಿತವಾದ ಮಾತುಗಾರ್ತಿ. ಮಂಗಳೂರು, ಬೆಳಗಾವಿ ಎಂದರೆ ಕನ್ನಡ ಮಾತಾಡುವವರೇ ಇರಬೇಕೆಂದು ಇಬ್ಬರಿಗೂ ಅನಿಸಿತ್ತು. ಅನಿಸಿಕೆ ಬಹಳ ದಿವಸ ಉಳಿಯಲಿಲ್ಲ. ನಾನೇ ಒಂದು ಸಲ ಕೇಳಿಬಿಟ್ಟೆ. ಅವರಿಗೆಷ್ಟೋ ಖುಷಿಯಾಯ್ತು. ಶಾಲೆಯಲ್ಲಿ ಕಲಿತದ್ದು ಕನ್ನಡ ಉರ್ದು ಮಾತೃಭಾಷೆ – ಕೆನಡಾದ ಸ್ವಚ್ಛಂದ ವಾತಾವರಣ ಅವರಿಗೆ ಹಿಡಿಸಲಿಲ್ಲವಂತೆ ಇಲ್ಲಿ ಇಡೀ ದೇಶ ದೈವಿ ಕಳೆಯಿಂದ ತುಂಬಿದೆ ಒಂದು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಅದು ಅವರಿಗೆ ಸಹಜ. ಮಕ್ಕಾ, ಮದೀನಾ ಇರುವ ಪವಿತ್ರ ಸ್ಥಳಗಳ ಭಾವನಾತ್ಮಕವಾದ ಮಾತುಗಳು, ಅನಿಸಿಕೆಗಳು ಬರುವದು ಸಹಜ.

ಪಂಜಾಬದ ಶ್ರೀ ಜಸಬೀರ್‌ಸಿಂಗ್ ಔಜಲಾ, ಅವರ ಶ್ರೀಮತಿ ಭೂಪಿಂದರ್ ಕೌರ್‌ ನಮ್ಮ ಕ್ಯಾಂಪಸ್ಸಿಗೆ ಬಂದು 7 ವರ್ಷಕ್ಕೂ ಮೇಲಾಯ್ತು. ಇವರೂ ಅಮೇರಿಕದ ನಾಗರೀಕತ್ವ ಹೊಂದಿದವರು. ಜಸಬೀರಸಿಂಗ್ ‘ಜಾನ್’ ಆಗಿ ಭೂಪೇಂದರ ಕೌರ ‘ಭೂಪಿ’ಆಗಿ ಎಲ್ಲರಿಗೂ ಪರಿಚಿತರು. ಜಾನ್‌ ಔಜಲಾ ಇಂಜೆನೀಯರ ಇದ್ದು ಇಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದಾರೆ. ಅಮೇರಿಕದಲ್ಲಿ ಅವರ ತಂದೆ ತಾಯಿಗಳಿದ್ದು 25 ವರ್ಷಕ್ಕೂ ಮೆಲಾಗಿದೆ. 4-5 ವರ್ಷಕ್ಕೊಮ್ಮೆ ಇವರೆಲ್ಲ ಭಾರತಕ್ಕೆ ಬರುತ್ತಾರೆ. ಅಜ್ಜ – ಅಜ್ಜಿ ಇತರ ಸಂಬಂಧಿಕರನ್ನೆಲ್ಲಾ ಭೆಟ್ಟಿಯಾಗಿ ಪ್ರವಾಸಿ ಸ್ಥಳಗಳೊಂದಿಷ್ಟು
ಭೆಟ್ಟಿಕೊಟ್ಟು ಮರಳುತ್ತಾರೆ. ಇವರ ಮನೆಯಲ್ಲಿ ಪಾರ್ಟಿಗಳು ನಡೆಸುವದು ನೋಡಿ ದಂಗಾಗಿಹೋಗಿದ್ದೇನೆ.

ಸರ್ಕಲ್ ಎಲ್ಲಾ ಮನೆಗೆ ಕರೆಸಿ ಖುಷಿ ಪಟ್ಟಿದ್ದೋ ಪಟ್ಟಿದ್ದು. ಪಂಜಾಬಿ ಕ್ಯಾಸೆಟ್ ಹಾಕಿ ಎಲ್ಲರ ನಡುವೆ ದುಪಟ್ಬಾ ಹಾರಾಡಿಸುತ್ತ ಕುಣಿದಾಡಿ ಒಬ್ಬೊಬ್ಬರನ್ನೇ ಎಳೆದೆಳೆದು ಎಲ್ಲರನ್ನೂ ಎಬ್ಬಿಸಿಬಿಟ್ಟರು. ಪಂಜಾಬಿ ಡಾನ್ಸ್‌ ನಮಗೇನು ಗೊತ್ತು? ನಡು ನಡುವೆ ಕಾಕ್‌ಟೈಲ್ (ಎಲ್ಲ ಹಣ್ಣಿನ ರಸಗಳ ಮಿಕ್ಸ್) ಕುಡಿಯುತ್ತ ಅವಳು ಮಾಡಿದ ಹಾಗೆ ಮಾಡುತ್ತ ಹೊಟ್ಟೆ ಹುಣ್ಣಾಗುವವರೆಗೆ ನಕ್ಕಿದ್ದೇನಕ್ಕಿದ್ದು ಬೆವರು ಬೆನ್ನು ಕಾವಲಿಗೆ ಹರೆಯುವವರೆಗೆ ಹುಚ್ಚಾಪಟ್ಟೆ ಕುಣಿದಾಡಿದ್ದೇ ಕುಣಿದಾಡಿದ್ದು.

ದಿಲ್ಲಿಯವರಾದ ಶ್ರೀಮತಿ ಉಸ್ಮಾನ್ ಅವರೊಮ್ಮೆ ಭಾರತಕ್ಕೆ ಹೋದಾಗ ತಮ್ಮನ ಮದುವೆಗೆ ಬೇಕಿದ್ದ ಮಂಗಳಸೂತ್ರ – ಕಾಲುಗೆಜ್ಜೆ ಏನೆಲ್ಲ ತರಿಸಿಕೊಂಡು ಅಮೇರಿಕಕ್ಕೆ ಹೋಗಿ ತಮ್ಮನ ಮದುವೆಮಾಡಿ ಬಂದು ಮತ್ತೊಂದು ಸಲ ಪಾರ್ಟಿ ಕೊಟ್ಟರು ಭೂಪಿ.

ಇಲ್ಲಿ ಒಂದು ಮಾತು ಹೇಳಬೇಕು. ಸಾಕಷ್ಟು ಜನ ಭಾರತೀಯರು ಅಮೇರಿಕ ಯುರೋಪ್ ನಾಗರಿಕತ್ವ ಹೊಂದಿದವರು ಇಲ್ಲಿದ್ದಾರೆ. ಇವರೆಲ್ಲಾ ಇಲ್ಲಿ ಒಳ್ಳೆಯ ವೇತನ ಪಡೆಯುತ್ತಾರೆ. ಅಮೇರಿಕದ, ಯುರೋಪದ ಜೀವನ ಮಟ್ಟ ಉನ್ನತದ್ದಾಗಿ ಇರುವದರಿಂದ ಅಲ್ಲಿಯ ತರಹವೇ ಇಲ್ಲಿ ಎಲ್ಲ ವ್ಯವಸ್ಥೆ ಕೊಡಬೇಕಾಗುವದು. ಹೀಗಾಗಿ ಭಾರತದಿಂದ ಇಲ್ಲಿಗೆ ಬಂದೆ ಒಬ್ಬ ಡಾಕ್ಟರ್‌-ಇಂಜಿನೀಯರ್ 10-15 ಪಟ್ಟು ಇಲ್ಲಿ ವೇತನ ಹೊಂದುತ್ತಿದ್ದರೆ ಅದೇ ಭಾರತದಿಂದ ಒಬ್ಬ ಡಾಕ್ಟರ್-ಇಂಜಿನೀಯರ್ ಅಮೇರಿಕಕ್ಕೆ ಹೋಗಿ ಅಲ್ಲಿಯ ನಾಗರಿಕತ್ವ ಹೊಂದಿ ಅಲ್ಲಿಂದ ಇಲ್ಲಿಗೆ ಬಂದರೆ ಅವರಿಗೆ ಭಾರತದ 20-25 ಪಟ್ಟು ವೇತನ ಸಿಗುವದು.

ಈಗಾಗಲೇ ನಮ್ಮ ಕ್ಯಾಂಪಸ್ಸಿಗೆ (8 ವರ್ಷಗಳ ತರುವಾಯ) 15-16 ಭಾರತೀಯ ಕುಟುಂಬಗಳು ಬಂದಿದ್ದಾರೆ. ಯೂರೋಪಿಯನ್ ಲೇಡೀಸ್ ಸರ್ಕಲ್‌ದಲ್ಲಿ ನಮ್ಮದೂ ಒಂದು ಗುಂಪಾಯಿತು. ಪ್ರತಿ ತಿಂಗಳ ಮೊದಲನೆಯ ರವಿವಾರ ಲೇಡೀಸ್ ಕ್ಲಬ್‌ದಲ್ಲಿ ಸಾಕಷ್ಟು ಚಟುವಟಕೆಗಳು10-12 ವರ್ಷಗಳಿಂದ ನಡಯುತ್ತಿವೆ. ಎಲ್ಲ ದೇಶಿಯರೂ ಆಗೀಗ ತಮ್ಮ ದೇಶದ ವಿಶೇಷ ಚಟುವಟಿಕೆಗಳನ್ನು ನಡೆಸುತ್ತಲೇ ಇದ್ದಾರೆ. ನಾವೂ ಕೂಡಾ ಒಂದು ಸಲ ‘ಭಾರತೀಯ ಸಂಪ್ರದಾಯದ ದಿನ’ (Indian Traditional day) ಮಾಡುವದಾಗಿ ಶ್ರೀಮತಿ ಭಾಗಿಯಾ, ಭೂಪಿ, ಹುರುಪಿನಿಂದ ನಮ್ಮನ್ನೆಲ್ಲಾ ಒಂದೊಂದು ಚಟುವಟಿಕೆಯಲ್ಲಿ ತೊಡಗಿಸಿದರು. ಇವರಿಬ್ಬರು ನಮಗೆಲ್ಲಾ ಒಂಥರಾ ಲೀಡಲ್ ತರಹಾನೇ ಇದ್ದರು ಅಂದರೂ ಅಡ್ಡಿ ಇಲ್ಲ. ಯಾವುದಕ್ಕೂ ಹಿಂದೇಟು ಹಾಕುವವರಲ್ಲ. ಇಬ್ಬರೂ ಕ್ಯಾಂಪಿನಿಂದ ಕಾರು ಮಾಡಿ- ಕೊಂಡು ನಮ್ಮ ಭಾರತೀಯ ದೂತಾವಾಸಕ್ಕೆ ಹೋಗಿ ಇಲ್ಲಿಯ ಎಲ್ಲ ಚಟುವಟಿಕೆ ತಿಳಿಸಿ ಸಹಕರಿಸಬೇಕಾಗಿ ಹೇಳಿದರು.

ಮುಂದಿನ 15 ದಿನಗಳಲ್ಲಿ ಪಾರ್ಟಿ ಹೌಸ್‌ದಲ್ಲಿ ಒಳ್ಳೆಯ ಇರಾಣಿ ಕಾರ್ಪೆಟ್ ಗಳನ್ನು ಹಾಕಿ ಲೋಡ್‌ಗಳಿಟ್ಟು ದಿಲ್ಲಿ ಮೊಗಲದ ದರ್ಬಾರ ತರಹ ಎಲ್ಲ ಕಡೆಗೂ ಟಚ್ಅಪ್ ಕೊಟ್ಟು ಸಣ್ಣಾಗಿ ಬಿಸಬುಲ್ಲಾಖಾನರ ಶಹನಾಯಿವಾದನ ಶುರುಮಾಡಿದರು.

ದೂತಾವಾಸದ ಸಿಬ್ಬಂದಿ ವರ್ಗದವರು ಬಂದು ತಿಂಡಿ-ಊಟ-ಟೀ ಕಾಫೀ ಎಲ್ಲಾ ವ್ಯವಸ್ಥೆ ಕೂಡಾ ಮಾಡಿದ್ದರು. ನಗರದಿಂದಲೂ ಸುಮಾರು 20-25 ನಮ್ಮ ಭಾರತೀಯ ಮಹಿಳೆಯರು, ಅದರಂತೆ ಬೇರೆ ಬೇರೆ ಕ್ಯಾಂಪಿನ ಯುರೋಪಿಯನ್ನರು ಇದರೊಳಗೆಲ್ಲ ಪಾಲ್ಗೊಂಡಿದ್ಧರು. 4-5 ಜನ ಮಹಿಳೆಯರು (ದೂತಾವಾಸದ ಸಿಬ್ಬಂದಿ ವರ್ಗದ ಪತ್ನಿಯರು ! ಭಾರತದಿಂದ ಬರುವಾಗ ತಂದ ಸೀರೆಗಳು, ಬಳೆಗಳು, ಶ್ರೀಗಂಧದ ಸಾಮಾನುಗಳು, ಬೆಳ್ಳೆಯ ಸಾಮಾನುಗಳು, ಶಾಸ್ತ್ರೀಯ ಸಂಗೀತದ ಕ್ಯಾಸೇಟ್‌ಗಳು, ಕರಕುಶಲ ವಸ್ತುಗಳೆಲ್ಲ ಇಲ್ಲಿ ಮಾರಾಟಕ್ಕಿಟ್ಟಿದ್ದರು.

ಸುಮಾರು 200 ಯುರೋಪ್, ಅಮೇರಿಕನ್ ಸ್ತ್ರೀಯಯರು, ನಾವೊಂದು 40 ಜನ. ನಾವು ಸೀರೆ ಹೇಗೆ ಉಟ್ಟುಕೊಳ್ಳುತ್ತೇವೆನ್ನುವದು ಈ ಮಹಿಳೆಯರಿಗೆ ಆಶ್ಚರ್ಯ, 5 1/2 ಮೀಟರದ್ದೇ ಇರಬೇಕೇನು? ನಿರಿಗೆಗಳೇತಕ್ಕೆ ಬೇಕು, ಸೆರಗು ಉದ್ದಾಗಿ ಯಾಕೆ ಹಾಗೇ ಬಿಡುತ್ತೀರಿ, ಕುಂಕುಮ ಯಾವತ್ತೂ ಒಂದೇ ಬಣ್ಣದ್ದೇಕೆ? ಮಾಂಗಲ್ಯಕ್ಕೆ ಕಪ್ಪು ಮುತ್ತುಗಳೇ ಯಾಕೆ? ಅಡುಗೆ ಮಸಾಲೆ ಇನ್ನಿತರ ವಿಷಯವಾಗಿ ಚರ್ಚೆಗಳು ನಡದೇ ಇದ್ದವು.

ಜರ್ಮನಿಯ ‘ಉರ್ಸಲಾ’ಳಿಗೆ ಸೀರೆ ಉಟ್ಟುಕೊಳ್ಳುವದು ತುಂಬಾ ಆಸೆ. ‘ಹೇಗೆ ಉಟ್ಟುಕೊಳ್ಳುತ್ತೀರಿ ತೋರಿಸಿರಿ ಎಂದಾಗ ಶ್ರೀಮತಿ ಉಸ್ಮಾನ್ ಮನೆಗೆ ಹೋಗಿ ಸೀರೆ ತಂದು ಅದನ್ನು ಅವಳಿಗೆ ಉಡಿಸಲು ತಯಾರಾದರು. ಸೀರೆಗೆ ಮೊದಲು ಬೇಕಾದ ಪೇಟಿಕೋಟ್, ಬ್ಲೌಜ್‌ಗಳೇ ಇಲ್ಲ. ಸರಿ ಅರ್ಧ ಪ್ಯಾಂಟ್‌ ಮೇಲೆಯೇ ಖುಷಿಯಿಂದ ಮುಂದೆ ನಿಂತು ಸೀರೆ ಉಡಿಸಿಕೊಂಡು ಮುಂದಿನ ಮೂರು ತಾಸು ಎಲ್ಲರೊಂದಿಗೆ ಓಡಾಡಿ ಕಳೆದಳು. ನಂತರ ಊಟಮಾಡುವಾಗ ನೋಡುತ್ತೇನೆ. ಸೆರಗು ಎದೆಯ ಮೇಲಿಲ್ಲ! ಬಹುಶಃ ಅದು ಅ ಕಡೆ ಈ ಕಡೆ ಸರಿದಾಡಿ ತೊಂದರೆಕೊಟ್ಟಿರಬೇಕು.
ಅದನ್ನೆಲ್ಲಾ ಎಳೆದುಕೊಂಡು ತೊಡೆಯ ಮೇಲೆ ಕೂಡು ಹಾಕಿಕೊಂಡು ಚಿಕನ್ ಬಿರಿಯಾನಿ ತಿನ್ನುತ್ತಿದ್ದಳು. ನಮಗೆ ನಗು.

ಬಣ್ಣ ಬಣ್ಣದ ಒಳ್ಳೊಳ್ಳೆಯ ರೇಶ್ಮೆ ಸೀರೆಗಳುಟ್ಟುಕೊಂಡು ನಾವು ಓಡಾಡು ತ್ತಿದ್ದಾಗ, ತಿಂಡಿಗಳನ್ನು ಸರಬರಾಜು ಮಾಡುತ್ತಿದ್ದಾಗ ನಮ್ಮೊಂದಿಗೆ ಫೋಟೋ ತೆಗೆಸಿಕೊಂಡ, ವಿಡಿಯೋದಲ್ಲಿ ಚಿತ್ರಿಸಿಕೊಂಡ ಸ್ನೇಹಿತೆಯರು ಅಗೀಗ ನೋಡಿ ಖುಷಿ ಪಡುತ್ತೇವೆಂದು ಲಾಸ್ ಎಂಜಿಲೀಸ್‌ನ ಸುಸಾನ್, ಸ್ಯಾನ್‌ಫ್ರಾನ್ಸಿಸ್ಕೋದ ಅನಾ ಪತ್ರದಲ್ಲಿ ಬರೆದು ತಿಳಿಸುತ್ತಾರೆ.

ನಾವು ಭಾರತಕ್ಕೆ ಹೋಗುತ್ತಿದ್ದೇವೆ ಎಂದು ತಿಳಿದರೆ ಸಾಕು. ನಮ್ಮ ಭಾರತೀಯರೂ,ಜೊತೆಗೆ ಯುರೋಪಿಯನ್ನರೂ ಸಂತೆಯ ಲಿಸ್ಟ್ ಕೊಡುವರು ಮಸಾಲೆ ಸಾಮಾನುಗಳು, ಉಪ್ಪಿನಕಾಯಿಗಳು, ರೇಶ್ಮೆ ಬಟ್ಟೆಗಳು, ಶ್ರೀಗಂಧದ ಸಾಮಾನುಗಳು, ಬೆಳ್ಳಿಯ ನಡುಪಟ್ಟಿ, ಕಾಲು ಗೆಜ್ಜೆಗಳು ಇವು ಯುರೋಪಿಯನ್ನರ ಲಿಸ್ಟ್ ಆದರೆ ನಮ್ಮ ಜನರ ಪಟ್ಟಿ ಬೇರೆ. ಇಲ್ಲಿ tailors ಯಾರೂ ಕಾಣಿಸಲೇ ಇಲ್ಲ. ಅಂತೆಯೇ ಡಜನ್ ಡಜನ್‌ಗಳಷ್ಟು ಬ್ಲೌಜ್‌ಗಳು  ಹೊಲೆಸಿ ಕೊಂಡುಬರುವದು, ಚೂಡಾ, ಲಾಡುಗಳ ಮಾವಿನ ಹಣ್ಣುಗಳ ಸಂತೆ ಮಾಡುವದು, ಪತ್ರ, ರಜಿಸ್ಟರ್‌ಗಳಂತೂ ಪೋಸ್ಟ್‌ ಮಾಡಲು ಕೊಡುವದು, ಇತ್ಯಾದಿ ಇತ್ಯಾದಿ.

ಇಲ್ಲಿ 10 ವರ್ಷಗಳಲ್ಲಿ ಪರಿಚಯವಾದ ಇನ್ನಿತರ ಇಟಲಿ, ಸ್ಯಾಂಡಿನೇವಿಯಾ ಬೆಲ್ಜಿಯಂ, ಹಂಗೇರಿ, ಕೆನಡಿಯನ್ ಪಾಕೀಸ್ತಾನ, ಬಂಗ್ಲಾದೇಶ, ಸ್ಥಳೀಯ ವಾತಾವರಣ-ತಿಂಡಿ ವೇಷ ಭೂಷಣಗಳೆಲ್ಲಾ ಎದ್ದು ಕಾಣಿಸಿ ಚರ್ಚೆಗೆ ಆಸ್ಪದ ಕೊಡುತ್ತಿದ್ದವು. ಪರಿಚಯವಾದ ವಿಷಯಗಳೆಲ್ಲಾ ಬರೆಯುತ್ತ ಹೋದರೆ ಮತ್ತೊಂದು ಪುಸ್ತಕವೇ ಆಗಬಹುದು. ಕೆಲವೇ ಮಾದರಿ ಸಾಕು. ಒಟ್ಟಾರೆ ಹೇಳಬೇಕೆಂದರೆ ನಾನು ಮಾತ್ರ ಅನೇಕ ಸಲ ಈ ಎಲ್ಲ ವಿಷಯಗಳಲ್ಲಿ ಖುಷಿ ಪಟ್ಟಿದ್ದೇನೆ.

ವರ್ಷಕ್ಕೊಂದು ಸಲ ಇಂಡಿಯಾಕ್ಕೆ ಹೊರಡಬೇಕಾದರೆ ಕಂಪನಿ ಟಿಕೆಟ್‌ನಿಂದ ಅವರ ದೇಶದ ವಿಮಾನದಿಂದಲೇ ಹೋಗಬೇಕು. ಅಕಸ್ಮಾತ್ ನಡುವೆ ನಾವಾಗಿಯೇ ಪ್ರವಾಸಿಸಬೇಕೆಂದರೆ ನಮ್ಮ ಹಣ ಹಾಕಿ ಏರ್ ಇಂಡಿಯಾ ಅಥವಾ ಮತ್ತಾವುದೋ ವಿಮಾನದಿಂದ ಹೋಗಬಹುದು.

‘ಸೌದಿಯಾ’ ವಿಮಾನ ಕೂಡಾ ಎಲ್ಲ ದೇಶಗಳಂತೆ ಬೋಯಿಂಗ್ 747, ಏರ್‌ವೆಸ್‌ ಆಯ ಅಳತೆಗಳಲೆಲ್ಲ ಒಂದೆ. ನಮ್ಮ ಏರ್ ಇಂಡಿಯಾದೊಳಗೆ ಸುಶ್ರಾವ್ಯ ಸುಗಮ ಸಂಗೀತಗಳಾಗಲೀ, ಕೊಳಲು ಪಿಟೀಲು ವಾದನವಾಗಲೀ ಹಿನ್ನೆಲೆಯ ಮಹಾರಾಜಾ ಒಳಾಂಗಣದಲ್ಲಿ ಕೇಳಿಬರುವದು. ಹಾಗೆಯೇ ಸೌದಿ ವಿಮಾನಗಳಲ್ಲಿ ಕುರಾನದ ಪಠನ ನಡೆದಿರುತ್ತದೆ. ಉಳಿದೆಲ್ಲ ಅನುಕೂಲತೆಗಳು ಎಲ್ಲದರಲ್ಲೂ ಒಂದೆ. ಕುರ್ಚಿಯ ಕೈಗಳಿಗೆ ಬಟನ್‌ಗಳಿರುತ್ತವೆ. ಒಂದು ಒತ್ತಿದರೆ ಕುರ್ಚಿ ತಮಗೆ ಆರಾಮಕ್ಕೆ ಹೇಗೆ ಬೇಕೋ ಹಾಗೆ ಹಿಂದೆ ಮುಂದೆ ಸರಿಸಾಡಿಕೊಳ್ಳಬಹುದು. ಹಾಡುಗಳು ಅಥವಾ – ಸಿನೇಮದ ಸಂಭಾಷಣೆ ಕೇಳಲಿಕ್ಕೆಂದು ಹೆಡ್ ಫೋನ್ ಸಾಕೆಟ್ ಇರುವದು, ಮೆತ್ತನೆಯ ರಗ್ಗು, ತಲೆದಿಂಬುಗಳು ಇರುವದರಿಂದ ಯಾವ ಸಂಕೋಚವೂ ಇಲ್ಲದೆ ಬೇಸರ ಬಂದಾಗ ಹೊದ್ದುಕೊಂಡು ಸುಮ್ಮನೆ ನಿದ್ರಿಸಬಹುದು. ಓದುಗರಿಗಂತೂ ದಿನ ಪತ್ರಿಕೆಗಳು, ಮ್ಯಾಗಝಿನ್‌ಗಳು ಸಾಕಷ್ಟು. ಸಣ್ಣ ಮಕ್ಕಳಿದ್ದರೆ ಅವುಗಳಿಗೆ ಬೇಕಾಗುವ ತಿಂಡಿ ಹಾಲು, ತೊಟ್ಟಿಲು ಆಟಿಕೆಗಳು ಇದ್ದೇಇರುತ್ತವೆ. ಮಕ್ಕಳ ಅರಿವೆಗಳು ಬದಲಿಸ ಬೇಕಿದ್ದರೂ ಇದಕ್ಕಾಗಿಯೇ ಒಂದು ಬೇರೆ ಟಾಯಿಲೆಟ್ ಇದ್ದು ಟೇಬಲ್ ಇರುವದು. ಉಳಿದೆಲ್ಲ ಟಾಯೆಲೆಟ್‌ಗಳಲ್ಲಿ ಒಂದೇ ಸಲ ಉಪಯೋಗಿಸಿ ಒಗೆಯುವ ಬ್ರಷ್‌ಗಳು, ಬಾಚಣಿಗೆಗಳು, ಟಿಶ್ಯೂ ಪೇಪರ್‌ಗಳು, ಟಾಯಿಲೆಟ್ ಪೇಪರ್, ಸೋಪು, ಸುವಾಸಿ ಕೊಲೆನ್‌ಗಳು, ಗಂಡಸರಿಗಾಗಿ ದಾಡಿಸಾಮಾನುಗಳು ಇರುವವು. ಅದರಂತೆ ತೆರಿಗೆ ರಹಿತ ಸಾಮಾನುಗಳೂ ಇರುತ್ತವೆ.

ಒಳ್ಳೆ ಗುಣಮಟ್ಟದ ಸುವಾಸನಾದ್ರವ್ಯಗಳು, ಮತ್ತು ಹವಳದ ಸರಗಳು, ಸಿಲ್ಕ್‌ ಟಾಯ್‌ಗಳು, ಅದರಂತೆ ಸಿಗರೇಟ್‌ಗಳು, ಪಾನೀಯಗಳು, ಮುಂತಾದ ಬೆಲೆಯುಳ್ಳ ಸಾಮಾನುಗಳು ಏರ್ ಇಂಡಿಯಾದಲ್ಲಿ ಸಿಗುವವು. ಅದೇ ಸೌದಿಯಾ ಏರ್‌ದಲ್ಲಿ ಮದ್ಯ ಸಿಗರೇಟುಗಳಿಗೆ ನಿಷೇದವಿದೆ. ಸಿಗುವದೂ ಇಲ್ಲ. ವಿಮಾನದಲ್ಲಿ ಕೊಂಡ ಸಾಮಾನುಗಳಿಗೆ ತೆರಿಗೆ ಕೊಡಬೇಕಿಲ್ಲ. ವಿಮಾನದ ಶೋರೂಮ್‌ ಟ್ರಾಲಿ ಹೊರ ಬರುವದೇ ಸಾಕು. ಪ್ರವಾಸಿಗರು ನಾ ಮುಂದೆ ತಾಮುಂದೆ ಎಂದು ಕೊಳ್ಳುವರು, ಕುಡಿಯುವದರಲ್ಲಿ ಖುಷಿ ಪಡುತ್ತಿರುತ್ತಾರೆ. ತೆರಿಗೆ ರಹಿತ ನಿಂದ ಮೇಲೆ ಎಷ್ಟೋ ಜನರು ಒಳ್ಳೆಯ ವಿಸ್ಕಿ ವೈನ್, ಬೀರ್ ಸಿಗುವದೆಂದು ಸ್ನೇಹಿತರಿಗೆ, ಸಂಬಂಧಿಕರಿಗೆ ಕೊಂಡೊಯ್ಯುತ್ತಾರೆ.

ಯಾವುದೇ ವಿಮಾನದಲ್ಲೂ ರೇಡಿಯೋ- ಟೆಲಿವಿಜನ್‌ಗಳು ಶುರುಮಾಡ ಕೂಡದೆಂಬ ಕಟ್ಟಪ್ಪಣೆ ಇದ್ದೇ ಇರುತ್ತದೆ- ವಿಮಾನ ಚಾಲಕರ, ಹಾಗೂ ಉಡ್ಡಾಣಕೇಂದ್ರದಿಂದ ಮತ್ತು ರಡಾರ್ ಮೂಲಕ ಹೊರಬೀಳುವ ಅವರವರ ಹೆಡ್ ಪೋನ್ ತರಂಗಗಳಿಗೆ ಈ ರೇಡಿಯೋ ತರಂಗಗಳು ತೊಂದರೆ ಕೊಡುತ್ತವೆ ಎಂದು. ಅದರ ಬದಲಾಗಿ ಬೇಕಿದ್ದರೆ ಟೇಪ್ ರೆಕಾರ್ಡರ್ ಹಚ್ಚಿ ಕೇಳಬಹುದು.

ಅಶಕ್ತರಿಗಾಗಲೀ, ಸಣ್ಣ ಸಣ್ಣ ಮಕ್ಕಳಿಗಾಗಲೀ ಏನೇ ಸಹಾಯ ಬೇಕಾದಲ್ಲಿ ಬೇಗನೆ ಒದಗಿಸಿ ಕೊಡುತ್ತಾರೆ. ಇದೊಂದು ಮೆಚ್ಚಿಕೊಳ್ಳಬೇಕಾದ ವಿಷಯ. ಅದರಂತೆ ಬಸಿರು ಸ್ತ್ರೀಯರು ಪ್ರಯಾಣಿಸಬೇಕಾದರೆ ಡಾಕ್ಟರರಿಂದ ರಿಪೋರ್ಟ್‌ ಪಡೆದವ ರಾಗಿರಬೇಕು. 8 ತಿಂಗಳಿನಲ್ಲಿದ್ದರಂತೂ ಅನುಮತಿ ಕೊಡುವದೇ ಇಲ್ಲ. ಅಕಸ್ಮಿಕವಾಗಿ ಹೊರಡಲೇ ಬೇಕಾದಲ್ಲಿ ಮೊದಲೇ ಟಿಕೆಟ್ ಕೊಳ್ಳುವಲ್ಲಿ ವಿಷಯ ತಿಳಿಸಿದರೆ ವಿಮಾನದಲ್ಲಿ ಏನೇ ತುರ್ತು ಪರಿಸ್ಥಿತಿ ಬಂದರೆ ಸಹಾಯ ಮಾಡುವರು. ನಾವು ಸೌದಿಯಲ್ಲಿದ್ದಾಗಲೇ ಯುರೋಪ್ ಪ್ರವಾಸ ಮಾಡಬೇಕೆಂದೆವು. ಒಮ್ಮೆ ಇಂಡಿಯಕ್ಕೆ ಹೋದರೆ ಅಲ್ಲಿಂದ ಯುರೋ-ಅಮೇರಿಕಗಳಿಗೆ ಹೋಗಬೇಕೆಂದರೆ ಮತ್ತೆ ವೀಸಾಗಳ ಸಮಸ್ಯೆ ಎಂದು ತಿಳಿದು ಇಲ್ಲಿಂದಲೇ ಎಲ್ಲ ಎಂಬಸಿ (Embassy)ಗಳಿಂದ ಕೇವಲ 4-5 ದಿವಸಗಳಲ್ಲಿ ವೀಸಾ ದೊರೆಕಿಸಿಕೊಂಡೆವು. ಯುರೋಪಿನ ವಿವಿಧ ದೇಶಗಳನ್ನು ವಿವಿಧ ವಿಮಾನಗಳ ಮೂಲಕ ಪ್ರವಾಸಿಸಿ ಅದರಲ್ಲಿಯ ಐಷಾರಾಮಿಯನ್ನೂ ಅನುಭವಿಸಿದೆವು.

ಸೌದಿ ಅರೇಬಿಯ ತುಂಬೆಲ್ಲ Saptco(Saudi Arabian Public Transport Company) ಬಸ್ಸುಗಳು ಓಡಾಡುತ್ತವೆ. ನಗರದಲ್ಲಿ ಒಂದು ಕಡೆಯಿಂದ ಯಾವದೇ ಭಾಗಕ್ಕೆ ಹೋಗಬೇಕಾದರೆ ಕೇವಲ ಒಂದು ರಿಯಾಲ್ ಮಾತ್ರ. ಮುಂಜಾನೆ ಯಿಂದ ಸಂಜೆವರೆಗೊ ಕುಳಿತರೂ ಒಂದೇ ರಿಯಾಲು. ನಡುವೆ ಇಳಿದು ಹತ್ತಿದರೆ ಟಿಕೆಟ್ ಮತ್ತೆ ತೆಗೆದುಕೊಳ್ಳಬೇಕಾಗುವುದು. ಈ ಬಸ್ಸಿನಲ್ಲಿ ಸ್ತ್ರೀಯರಿಗೆ ಪುರುಷರಿಗೆಂದು ಸೀಟುಗಳನ್ನು ಹಿಂದೆ ಮುಂದೆ ವಿಭಾಗಿಸಿ ನಡುವೆ ಜಾಳಿಗೆಯ ತೆರೆ ಇರಿಸಿರುತ್ತಾರೆ. ಆ ಜಾಳಿಗೆಗೂ ಕೂಡಾ ಕಪ್ಪು, ಅರಿವೆಯ ತೆರೆ ಇರುವದು. 10 ವರ್ಷಗಳಲ್ಲಿ ಒಮ್ಮೆಯೂ ಈ ಬಸ್‌ಗಳಲ್ಲಿ ಅಡ್ಡಾಡಲೇ ಇಲ್ಲ. ಪುಕ್ಕಟೆ ಕಂಪನಿ ಕಾರು, ಪೆಟ್ರೋಲ್ ಇರುವಾಗ ಬಸ್ ಹತ್ತಬೇಕೆನಿಸಲೇಇಲ್ಲ.

ಮಸೀದಿಗಳು- ಪ್ರಾರ್ಥನೆ:- ಜೆಡ್ಡಾದಲ್ಲಿ ಸಾಕಷ್ಟು ಮಸೀದಿಗಳು ಕಾಣಿಸಿಗುವವು. 12-13ನೆಯ ಶತಮಾನಗಳಲ್ಲಿ ಕಟ್ಟಿದ ಮಸೀದಿಗಳಿವೆಯೆಂದು ಹೇಳುತ್ತಾರೆ. ಹಾಗೆಯೇ 17-18ನೇ ಶತಮಾನದಲ್ಲಿ ಕಟ್ಟಿದ ಹನೀಫ್ ಮಸೀದಿ, ಮಿಮಾದ್ ಮಸೀದಿ; ಓಕಾಷ್, ಆಲ್‌ಬಾಷ್ ಮಸೀದಿಗಳು ಇತ್ತೀಚೆಗೆ ಮತ್ತೆ ನವೀಕರಣಗೊಂಡಿವೆ.

ದಿನಕ್ಕೆ 5 ಸಲ ಸೌದಿ ಅರೇಬಿಯದ ಕಾಯಿದೆಯ ಪ್ರಕಾರ ಎಲ್ಲ ಮುಸ್ಲಿಮರೂ ನಮಾಜ ಮಾಡಬೇಕು, ರೇಡಿಯೋ, ಟೆಲಿವಿಜನ್‌ಗಳು ಪ್ರಾರ್ಥನೆಯ, ಸಮಯ ಬಿತ್ತರಿಸುತ್ತಿದ್ದಂತೆಯೇ ಜನ ಇದ್ದ ಕೆಲಸ ಅಲ್ಲಿಯೇ ಬಿಟ್ಟು ಸಮೀಪದ ಮಸೀದಿಗಳಿಗೆ ತೆರಳುತ್ತಾರೆ. ಪೇಟೆಗಳಲ್ಲಿ ಪೋಲಿಸರೂ ಸಹ ಪ್ರಾರ್ಥನೆಯ ಸಮಯದಲ್ಲಿ ‘ಸಲ್ಲಾ’ ‘ಸಲ್ಲಾ’ ಎನ್ನುತ್ತ ಅಂಗಡಿಗಳನ್ನು ಮುಚ್ಚಲು, ಪ್ರಾರ್ಥನೆಗೆ ಹೋಗಲು ಧ್ವನಿವರ್ಧಕಗಳಲ್ಲಿ ಹೇಳುತ್ತಾರೆ. ತಕ್ಷಣ ಇಡೀ ಪೇಟೆಯ ವ್ಯವಹಾರವೆಲ್ಲ ನಿಲ್ಲುತ್ತದೆ. ಮುಸ್ಲಿಮ್ ಅಲ್ಲದವರು ಅಲ್ಲೇ ಕಟ್ಟೆ, ಬೆಂಚುಗಳು ಹಿಡಿದುಕೊಂಡು ಕೂಡ್ರುವರು. ಯುವ ಜನಾಂಗದ ಹುಡುಗರು ಪ್ರಾರ್ಥನೆಗೆ ಒಮ್ಮೊಮ್ಮೆ ಹೋಗದೆ ತಪ್ಪಿಸಿ ಹರಟೆ ಹೊಡೆಯುತ್ತ ಸಮಯ ಕಳೆಯುತ್ತಾರೆ. ಕಾಯ್ದೆಗಳೇನೋ ಕಠೋರ. ಅದರೆ ಆಜ್ಞೆಪಾಲಿಸಬೇಕಲ್ಲ!

ಮಸೀದಿಗಳು, ಒಳಗಡೆ ನಡೆಯುವ ಪ್ರಾರ್ಥನೆಗಳ ಬಗೆಗೆ ಹೆಚ್ಚು ತಿಳಿದುಕೊಳ್ಳಲಿಕ್ಕಾಗಲಿಲ್ಲ. ಅಲ್ಲಲ್ಲಿ ಕಾಣಿಸಿದ ಮಸೀದಿಗಳು ನಿಜಕ್ಕೂ ನೋಡುವಂತಿವೆ. ಗ್ರಾನೈಟ್ ಕಲ್ಲುಗಳಿಂದ ಮಸೀದಿಯ ಹೊರ ಮಗ್ಗುಲೆಲ್ಲ ಫಳಫಳವೆನ್ನುತ್ತವೆ. ಎತ್ತರದ ಗುಂಬಜಗಳು. ಅಕ್ಕಪಕ್ಕದ ಕಲ್ಲುಗಳು ಮಿರುಗುವಂತೆ ವಿಶೇಷ ವಿನ್ಯಾಸಗಳಲ್ಲಿ ಹೊಂದಿಸಿದ್ದು ನೋಡಿದೆವು.

ನ್ಯಾಯ, ಶಿಕ್ಷೆ:- ಅರೇಬಿಯಾ ಜನರಿಗೆ ತಮ್ಮ ನಾಡು, ಧರ್ಮದ ಬಗೆಗೆ ಬಹಳ ಅಭಿಮಾನ, ಮೌಲ್ವಿಗಳ ಹಿಡಿತದಲ್ಲಿಯೇ ಕಾಯ್ದೆ ಕಾನೂನುಗಳೆಲ್ಲ. ಕುರಾನಿನ ತತ್ವಕ್ಕನುಗುಣವಾಗಿ ವಿಚಾರಿಸುವನು. ಇಲ್ಲಿ ವಕೀಲರು, ಕೋರ್ಟುಗಳೆಂದಿಲ್ಲ. ತಪ್ಪಿತಸ್ಥರನ್ನು ಪೋಲಿಸರು ನೇರವಾಗಿ ಮುಖ್ಯ ಮೌಲ್ವಿಯ ಹತ್ತಿರ ಕರೆದೊಯ್ಯುತ್ತಾರೆ. ಎಲ್ಲ ಅಪರಾಧಿಗಳನ್ನು ಮೌಲ್ವಿ ವಿಚಾರಿಸಿ ಚರ್ಚಿಸಿ ನೋಡಿ ಆಯಾ ಅಪರಾಧಕ್ಕೆ ತಕ್ಕಂತೆ ಕುರಾನ್ ಹೇಳಿದ ಪ್ರಕಾರ ದಂಡನೆ ವಿಧಿಸುತ್ತಾರೆ.

ಸಣ್ಣದೇ ಇರಲಿ ದೊಡ್ಡದೇ ಇರಲಿ- ಅಪರಾಧಗಳಿಗೆ ಕಠಿಣ ಶಿಕ್ಷೆ ಕಟ್ಟಿಟ್ಟಿದ್ದೇ! ಪ್ರತಿ ಶುಕ್ರವಾರ ಮಧ್ಯಾನ್ಹ ಪ್ರಾರ್ಥನೆಯನಂತರ ಕೊಲೆಗಡುಕರನ್ನು, ಗಲ್ಲಿಗೇರಿಸುವದಾಗಲೀ ಅಥವಾ ತಲೆ ಹಾರಿಸುವದಾಗಲೀ ಮಾಡಿ ಶಿಕ್ಷೆ ಕೊಟ್ಟು ಬಿಡುವರು. ಈ ಸಮಯದಲ್ಲಿ ಸಾರ್ವಜನಿಕರು ನೋಡಬಹುದು. ನೋಡದೇ ಹಾಗೇ ದೂರ ಹೋಗುವವರನ್ನು ಪೋಲೀಸರು ಧ್ವನಿವರ್ಧಕದ ಮೂಲಕವೊ ಅಥವಾ ಕೈ ಬೀಸಿಯೋ ನೋಡಲಿಕ್ಕೆ ಕರೆಯುತ್ತಾರೆ. (ನೀವೂ ಏನಾದರು ತಪ್ಪು ಮಾಡಿದರೆ ಈ ರೀತಿ ಶಿಕ್ಷೆ ಅನ್ನೊ ಅರ್ಥದಲ್ಲಿ). ಅ ಸಮಯದಲ್ಲಿ ಅಪರಾಧಿ ಯಾರು, ಏನು ಮಾಡಿದ, ಯಾಕೆ, ಯಾವ ದೇಶದವ ಎಲ್ಲ ವಿವರ ಪೋಲೀಸ್ ಅಥವಾ ಮೌಲ್ವಿ ಹೇಳುತ್ತಾನೆ. ಅಪರಾಧಿ ಖಡ್ಗಕ್ಕೆ ತನ್ನ ಶಿರಕೊಡಲು ತಯಾರಾಗುತ್ತಾನೆ. ಈ ಸಮಯದಲ್ಲಿ ಅವನ ಮುಖ ಬಟ್ಟೆಯಿಂದ ಮುಚ್ಚಿರುತ್ತಾರೆ. ಇಂತಹ ಉಗ್ರ ಶಿಕ್ಷೆ- ಗಳಿರುವದರಿಂದ ಇಲ್ಲಿ ಯಾವ ಅಪರಾಧಗಳು ಆಗುವುದಿಲ್ಲ. ಇದ್ದರೂ ಎಲ್ಲೋ ಯಾವಾಗಲೋ ಒಮ್ಮೆ ಪೇಪರುಗಳಲ್ಲಿ ಈ ಯಾವ ಸುದ್ಧಿಗಳೂ ಇರುವುದಿಲ್ಲ ಹಾಗೇ ಅವರಿಂದ ಕೇಳಿದ್ದು, ಮಧ್ಯಾನ್ಹ ಪೇಟೆಗೆ ಹೋದಾಗ ನಗರ ಮಧ್ಯದಲ್ಲಿ ಜನರ ಗುಂಪು ನೋಡಿ ಕೇಳಿದ್ದು ಅಷ್ಟೇ.

ಮದುವೆ ಮನೆಗಳು :- ಸ್ಥಳೀಯ ಅರಬ್ಬ ಸ್ತ್ರೀಯರು ಯಾರಾದರೂ ಪರಿಚಯ ವಾಗಿ ಮಾತಾಡಲು ಸಿಕ್ಕರೆ ನಾನು ಅದೆಷ್ಟೋ ಸಲ ಅವರ ಪದ್ಧತಿಗಳು, ಸಂಪ್ರದಾಯ ಗಳು, ಹಬ್ಬ, ಮದುವೆ ಕುಟುಂಬದ ವಿಷಯ ವಿಚಾರಗಳು ಕೇಳುತ್ತಿದ್ದೆ. ಹೀಗೆ ಇಲ್ಲಿ ಶ್ರೀಮತಿ ಅಲಿಯವರೊಂದಿಗೆ ಮಾತಾಡುತ್ತಿದ್ದಂತೆಯೇ ‘ನಿಮ್ಮಲ್ಲಿಯ ಮದುವೆ ಹಾಗೂ ಅದರ ಪದ್ಧತಿಗಳೇನು, ಹೇಗೆ ಆಚರಿಸುತ್ತಾರೆ?’ ಎಂದು ಕೇಳಿದೆ. ಅವರು ಹೇಳಿದ ಕೆಲವು ವಿಷಯಗಳು ವಿಚಿತ್ರ ಅನಿಸಿತು. ಆದರೂ ಅವೆಲ್ಲ ಸತ್ಯವಂತೆ.

ಅರೇಬಿಯದಲ್ಲಿ ಸಂಪ್ರದಾಯದಂತೆ ಹುಡುಗಿಯ ತಂದೆ ತಾಯಿಗಳೇ ಮದುವೆಯ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಮದುವೆಯಾಗುವ ಹುಡುಗನ (ಅಥವಾ ಮುದುಕ) ಕಡೆಯಿಂದ ಎಷ್ಟು ಹಣಕೇಳಬೇಕು, ಬಂಗಾರ ಹೇಗೆ ಯಾವ ಪ್ರಮಾಣದಲ್ಲಿ ಹಾಕಿಸಿಕೊಳ್ಳಬೇಕು, ಇತ್ಯಾದಿ ಇತ್ಯಾದಿ. ಸುಮಾರು 1 ಲಕ್ಷ ರಿಯಾಲ್‌ಗಳಷ್ಟಾದರೂ ಕೂಡಿಸಿ ಕೊಡಲು ತಯಾರಾಗಬೇಕು. ಒಂದು ಲಕ್ಷ ಎಂದರೆ ನಮ್ಮಲ್ಲಿಯ (1993 ಎಕ್ಸ್‌ಚೇಂಜ್ ರೇಟ್ ಪ್ರಕಾರ) 8 ಲಕ್ಷ ರೂಪಾಯಿಗಳ ಮೇಲೆ. ಅದ್ದೂರಿಯಾಗಿ ಖರ್ಚುಮಾಡುವದು ಬೇರೆ.

ಹೀಗಾಗಿ ಅಲ್ಲಿ ಮದುವೆಯಾಗಬೇಕಾದವನು ಸಾಕಷ್ಟು ಹಣ ಕೂಡಿಸಬೇಕಾಗುತ್ತದೆ. ಎರಡನೆಯ – ಮೂರನೆಯ ಮದುವೆಯಾಗಬೇಕಾದವನಂತೂ ಪಡಬಾರದ ಹಣ ಸಂಗ್ರಹಿಸಬೇಕು. ಯಾಕೆಂದರೆ ಮೊದಲನೆಯವಳು ಅಗಲೇ ಬಂದು ಮಕ್ಕಳು- ಮರಿ ಮಾಡಿಕೊಂಡು ಜೀವನ ನಡೆಸುತ್ತಿರುವಾಗ ಗಂಡನೇನಾದರೂ ಎರಡನೆಯದಕ್ಕೆ ತಯಾರಾಗುತ್ತಿದ್ದಾನೆ ಅಂತ ಗೊತ್ತಾದರೆ ಆಯ್ತು; ಇವಳು ಅವನನ್ನು ಬಿಡುವದಿಲ್ಲ. ಅದು ಬೇಕು ಇದು ಬೇಕು. ಬಂಗಾರ ಬೇಕು, ಅರಿವೆಬೇಕು, ಮಜ ತಿಂಡಿ ತಿನಿಸು – ಪ್ರವಾಸ ಎಂದು ಅವನಲ್ಲಿದ್ದ ಹಣವೆಲ್ಲ ಖರ್ಚು ಮಾಡಿಸುತ್ತಾಳೆ. ಹಣ
ಕೂಡಿಸಲು ಅವಕಾಶ ಕೊಡುವದಿಲ್ಲ. ಹಣ ಕೂಡಿಸಿದರೆ ಎರಡನೆಯ ಮದುವೆ ಯಾಗುತ್ತಾನೆನ್ನುವ ಭಯ. ಅವಳು ಬಂದರೆ ತನ್ನನ್ನೆಲ್ಲಿ ಕಡೆಗಣಿಸುತ್ತಾನೆನ್ನುವ ವಿಚಾರ. ಹೀಗೆ ಇವಳು ಸಾಕಷ್ಟು ವಿಚಾರ ಮಾಡುತ್ತಲೇ ಇರುವಾಗ ಅವನು ಅದ್ಹೋಗೋ ಹಣ ಕೂಡಿಸಿ ಮದುವೆ ಮಾಡಿಕೊಂಡು ಬಿಡುತ್ತಾ ನೆ. ಭೂಗರ್ಭದಲ್ಲಿರುವ ಪೆಟ್ರೋಲ್ ಬುಗ್ಗೆಯಿಂದಾಗಿ ಇವರ ಕೈಯಲ್ಲಿ ಹಣ ತುಂಬಿಕೊಂಡೇ ಇದೆ. ಹೀಗಾಗಿ ಈ ಹೆಣ್ಣು ಬಾಯಿಗೆ ಬೀಗ ಹಾಕಿಕೊಂಡು ಹೂಂ ಎಂದು ಬಿದ್ದಿರಬೇಕಾಗುತ್ತದೆ.

ಮದುವೆಯಲ್ಲಿ ಮಿಂಚುವ ಬಟ್ಟೆಗಳು, ನೆತ್ತಿಗೇರುವಷ್ಟು ಅತ್ತರುಗಳು ಇರಲೇಬೇಕಂತೆ. ಹಾಗೆಯೇ ಸ್ತ್ರೀ ಸಮೂಹದವರೆಲ್ಲ ಖುಷಿ ಆನಂದ ವ್ಯಕ್ತಪಡಿಸ ಲಿಕ್ಕೆಂದು ಬಾಯಿಯಿಂದ ಕೊರಳಿನ ಏರಿಳಿತದ ಅಲೆಗಳ ಹಾಗೆ ನಾಲಿಗೆ ಸರಿಸಾಡಿಸುತ್ತ ಧ್ವನಿ ಹೊಂದಿಸುತ್ತ ಸಣ್ಣಾಗಿ ಕೂಗುವರು. ಮದುವೆ ದಿನದಂದು ಹುಡುಗ ತಾನೇ ಸ್ವತಃ ಹುಡುಗಿಯನ್ನು ಹೊತ್ತುಕೊಂಡು (ಇತ್ತೀಚೆಗೆ ಕಾರಿನಲ್ಲಿ ಕೊಡಿಸಿಕೊಂಡು) ಹೋಗುತ್ತಾನೆ. ಮದುವೆಯ ರಾತ್ರಿ ಸಂಕೋಚವಿಲ್ಲದೆ ಕಳೆದುದಾಗಿ ಇಬ್ಬರೂ ಹೇಳುವದನ್ನು ಕೇಳಲು ಸಂಬಂಧಿಕರು ಬೆಳಿಗ್ಗೆ ಕಾಯುತ್ತಿರುತ್ತಾರೆ. ಹಳ್ಳಿಗಳಲ್ಲಿಯಂತೂ
ಇವರಿಬ್ಬರಿಂದ ಮೊದಲ ರಾತ್ರಿಯೇ ಏನಾದರೂ ಕಂಪ್ಲೆಂಟ್ ಬಂದರೆ ವಧುವಿನ ಕಡೆಯ ಹಿರಿಯರು ತಮ್ಮ ವಧುವನ್ನು ಕರೆದುಕೊಂಡು ವರನ ಕಡೆಯವರಿಂದ ತೆಗೆದುಕೊಂಡು ಹಣವನ್ನು ಹಿಂತಿರುಗಿಸದೇ ಹೋಗಿಬಿಡುವರು. ವಿವಾಹ ವಿಚ್ಚೇದನೆಯ ಹಕ್ಕು ವಧುವಿನ ಕಡೆಗೆ ಇರುವದರಿಂದ ವರನ ಕಡೆಯವರು, ವರ, ಎಲ್ಲರೂ ಮೊದಲೇ ಕೆಲವೊಂದು ವಿಷಯಗಳನ್ನು ತಿಳಿದುಕೊಂಡು ಧೈರ್ಯವಾಗಿರ ಬೇಕಾಗುವುದಂತೆ.

ಅರ್ಥಿಕ ಸ್ವಾತಂತ್ರ್ಯ ಪಾಶ್ಚಾತ್ಯರಲ್ಲಿ ಪೂರ್ತಿ ಇರುವದರಿಂದ ಗಂಡಸರು ಹೆಂಗಸರು ಪೂರ್ತಿ ಸ್ವತಂತ್ರರು. ಒಬ್ಬರ ನ್ನೊಬ್ಬರು ಅವಲಂಬಿಸಬೇಕಿಲ್ಲ. ಎಲ್ಲ ಸರಿ ಇರುವವರೆಗೆ ಸರಿ, ಸ್ವಲ್ಪ ಬಿಗಿ ಏನಾದರೂ ಬಂದರೆ ಡೈವೊರ್ಸ್ ಗತಿ ಮಾಡಿಕೊಳ್ಳುತ್ತಾರೆ, ನಮ್ಮಲ್ಲಿ (ಇಂಡಿಯಾ) ಇಬ್ಬರೂ ದುಡಿದರೂ ಹೆಂಡತಿ (ಹೆಣ್ಣು) ಯಾವತ್ತೂ ಗಂಡನಿಗೆ (ಗಂಡಸರಿಗೆ) ಅಂಜಿಕೊಂಡೇ ನಡೆಯಬೇಕು. ಅದರೆ ಸೌದಿಯಲ್ಲಿ ಮೇಲಿನ ಎರಡೂ ವಿಷಯಕ್ಕೂ ಅವಕಾಶಏಲ್ಲ. ಗಂಡಹೇಳಿದ ಹಾಗೆ ಯಾವುದಕ್ಕೆಲ್ಲ. ಸುಮ್ಮನೆ ಕೇಳುತ್ತ ಇರಬೇಕಷ್ಟೆ. ಈ ಸ್ತ್ರೀಯರು ಒಪ್ಪಿಕೊಂಡೇ ಬಿಡುತ್ತಾರೆ. ಅವರಿಗಿದು ಸಹಜವೆನಿಸಿರಬೇಕು. ನಮ್ಮ ಸಂಚಿ ಹೊನ್ನಮ್ಮನ ಹದಿಬದೆಯ ಹಾಗೆ.

ಗಂಡ-ಹೆಂಡತಿ. ಒಂದೆರಡು ಮಕ್ಕಳಿರುವ ಸಣ್ಣ ಕುಟುಂಬಗಳು ಇಲ್ಲಿ ವಿರಳ. ಪೇಟೆಯಲ್ಲಾಗಲೀ, ಯಾವುದೇ ಅಂಗಡಿಗಳಲ್ಲಾಗಲೀ ಸುತ್ತ ಎರಡು ಮೂರು ಹೆಂಗಸರು ಹಾಗೂ ಅವರೆಲ್ಲರ ಒಬ್ಬ ಯಜಮಾನ ಕಾಣಿಸುತ್ತಾರೆ. ಅಷ್ಟೇ ಅಲ್ಲ, ಅವರವರ ಮಕ್ಕಳು ಕೂಡಾ. ಅವರೆಲ್ಲರ ಬಯಕೆ ಈಡೇರಿಸಬೇಕಲ್ಲ! ಮದುವೆ ಮಾಡಿಕೊಂಡು ಮಜಮಾಡುವಾಗಿನ ಹುರುಪು ಬೇರೆ. ಈಗ ಕೆಲವು ಸಂದರ್ಭಗಳಲ್ಲಿ ಜಗಳ ಮಾಡುವದು ಒದರಾಡುವದು ಸರ್ವೇಸಾಮಾನ್ಯವಾಗಿ ನೋಡುತ್ತೇವೆ. ಆದರೂ ಇದೆಲ್ಲ ಮರೆತು ವಿಚಿತ್ರ ವಿಲಾಸಿ ಜೀವನ ನಡೆಸುವರು.

ಹೀಗೆ ಇಲ್ಲೊಂದು ಸಂದರ್ಭ ನೆನಪಾಗುತ್ತಿದೆ – ಈಗ 2-3 ವರ್ಷಗಳಿಂದ ಇಲ್ಲಿಯ ಏರ್ಪೋರ್ಟ್ ಮೈಂಟೈನೆನ್ಸ್‌ಗೆ ಸ್ಥಳೀಯ ಅರಬ್ಬಿಗಳು ಬರುತ್ತಿದ್ದಾರೆ. ಆಗೀಗ ಅವರಿಗೆ ಇಷ್ಟು ವರ್ಷಗಳಿಂದ ನಡೆದು ಬರುತ್ತಿರುವ ಏರ್ಪೋಟ್‌ದ ಮಶಿನರಿ ವಿಷಯವಾಗಲೀ, ವಿದ್ಯುತ್ ಸಂಪರ್ಕದ ವಿಷಯವಾಗಲೀ ಮುಂತಾದವುಗಳ ಬಗೆಗೆ ಅವರಿಗೆ ಟ್ರೈನಿಂಗ್ ಕೊಡಬೇಕಾಗುತ್ತದೆಯಂತೆ. ಹೀಗಾಗಿ ಗುತ್ತಿಯವರಿಗೆ ಅರಬ್ಬಿಗಳ ಪರಿಚಯ ಇತ್ತೀಚೆಗೆ ಆಗುತ್ತಿದೆ. ಅದರಲ್ಲಿ ಒಬ್ಬನ ವಿಚಾರ ಹೇಳಿದರು.

ಅವನು ಈಗಷ್ಟೆ ಮದುವೆಯಾಗಿ 6 ತಿಂಗಳಾಗಿದೆ. ಹೆಂಡತಿ ಸುಂದರವಾಗಿದ್ದು ಅಕ್ಷರಜ್ಞಾನ ಉಳ್ಳವಳು ಎಂದೂ, ಆಗೀಗ ತನ್ನ ಸಂಬಂಧಿಕರ ವಿಷಯ ಅದೂ – ಇದೂ ಹೇಳುತ್ತಿದ್ದನಂತೆ.. ಒಂದು ದಿನ ಮಾತಿನಲ್ಲಿ, ‘ನಾನು ಸನಿಹದಲ್ಲಿಯೇ ಇನ್ನೊಂದು ಮದುವೆ ಮಾಡಿಕೊಳ್ಳಲೇಬೇಕಾಗಿದೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದನಂತೆ. ಅದಕ್ಕೆ ಗುತ್ತಿಯವರು – ‘ಯಾಕೆ, ಇತ್ತೀಚೆಗಷ್ಟೇ ಮದುವೆಯಾಗಿದೆಯಲ್ಲ. ಎಂದು ಕೇಳಿದರಂತೆ. ಅದಕ್ಕೆ ಅವನ ಉತ್ತರ ಏನು ಊಹಿಸುವಿರಾ?

“ಹೌದು, ಅವಳೀಗ 5 ತಿಂಗಳು ಬಸುರಿ, I am not comfortable with her now, so I need one more now’ ಅಂದನಂತೆ. ಕೇಳಿದ ಒಂದು ಕ್ಷಣ ನಗು ಬಂದರೂ ಮರುಕ್ಷಣವೇ! ಥೂ ಇದರ ಬುದ್ಧಿಗೆ’ ಎಂದು ಉಗುಳು- ವಂತಾಯ್ತು. ಅವನು ಈಗಾಗಲೇ ಹಣ ಕೂಡಿಸುತ್ತಿದ್ದಾನಂತೆ. ಹೆಂಡತಿ ಅಷ್ಟಿಷ್ಟು ಮಾತನಾಡುತ್ತಾಳಂತೆ. ಈಗ ಅವನ ಒಂದೇ ಉದ್ದೇಶ ಹೆಚ್ಚಿನ ದುಂದು ಖರ್ಚು ಮಾಡದೇ ಹಣ ಕೂಡಿಸಿ ಮದುವೆ ಮಾಡಿಕೊಳ್ಳುವದು ಹಣ ಕೊಡಬೇಕಲ್ಲ ಹೊಸ ಹುಡುಗಿಯ ತಂದೆಗೆ ?

ಶ್ರೀಮಂತ ಅರಬರ ಮನೆಗಳು ಸಣ್ಣ ಸಣ್ಣ ಅರಮನೆಗಳಿದ್ದಂತಿವೆ. ಒಂದು ಸಲ ನಮ್ಮ ಕ್ಯಾಂಪಿನಿಂದ ಬಸ್ಸು ಮಾಡಿಕೊಂಡು ಈ ಮನೆಗಳು ನೋಡಲಿಕ್ಕೆಂದು (ಬ್ರಿಟಿಷ್ ದೂತಾವಾಸದ ಪರಿಚಯದವರ ಮೂಲಕ) ಹೋಗಿದ್ದವು. ಹೊರಗಡೆ ಪ್ರವೇಷದ್ವಾರವೇ ಎತ್ತರವಾದುದು. ಒಳಗಡೆ ಗ್ರಾನಯಿಟ್ ಕಲ್ಲುಗಳ ಜೋಡಣೆ, ಹಾಲ್, ನಂತರ ಪುರುಷರಿಗೆಂದು, ಸ್ತ್ರೀಯರಿಗೆಂದು ಕುಳಿತು ಮಾತನಾಡಲು ಕಾರ್ಪೆಟ್, ಲೋಡ್‌ಗಳು ಹೊಂದಿಸಿರುವ ಐಶಾರಾಮಿ ಕೋಣೆಗಳು, ಮನೆಯ ಕೆಳಗಿನ ಅಂತಸ್ತಿನಲ್ಲಿ ವಿಶಾಲವಾದ ಈಜುಕೊಳ, ಇಲ್ಲಿಯೂ ಮನೆಯ ಹೆಣ್ಣುಮಕ್ಕಳಿಗೆ
ಈಜುವ ಸಮಯ, ಗಂಡಸರ ಸಮಯ ಬೇರೆ ಬೇರೆಯೇ. ಅವಿಭಕ್ತ ಕುಟುಂಬ ಗಳಾದುದರಿಂದ ಈ ಈಜುಗೊಳಗಳ ವಿನ್ಯಾಸವೇ ಬೇರೆ. ಮೇಲೆ ಸುಂದರ ಬಂಗ್ಲೋಗಳು. ಯಾವ ಕಡೆಯಿಂದ ನೋಡಿದರೂ ಈಜುಕೊಳ ಕಾಣಿಸುವದಿಲ್ಲ. ಮನೆಯ ಹಿಂಬದಿಯಿಂದ ಇಂದು ನೆಲಮನೆಗೆ ಹೋಗಬೇಕು. ನೆಲಮನೆಯೆಂದರೆ ಕತ್ತಲಿರುವದಿಲ್ಲ. ಇಲ್ಲಿಯ ರಣರಣ ಬಿಸಿಲನ್ನು ಸೂರ್ಯವಿದ್ಯುತ್‌ಕೋಶದ ಮೂಲಕ ಹಾಯಿಸಿಕೊಂಡು ಬೆಳಕು, ಬಿಸಿ ನೀರಿನ ಈಜುಗೊಳಕ್ಕೆಲ್ಲ ಉಪಯೋಗಿಕೊಂಡಿರುತ್ತಾರೆ. ಮೇಲೆ ಅಡ್ಡಾಡುವರಿಗೆ ಈಜುಕೊಳದಲ್ಲಿ ಈಜಾಡುವವರು ಯಾರೂ ಕಾಣುವದಿಲ್ಲ. ನಮ್ಮ ಕಡೆಗೆ ಹೌಸಿಂಗ್ ಕಾಂಪ್ಲೆಕ್ಸ್ ಅಥವಾ ಫ್ಲಾಟ್ ಸಿಸ್ಟಮ್ ನೋಡಿದವರಿಗೆ ಸ್ವಲ್ಪ ಅರ್ಥವಾಗುವಂತೆ  ಹೇಳಬೇಕೆಂದರೆ, ಮೇಲೆ 4-5 ಅಂಶಸ್ತು ಮನೆಗಳು, ಕೆಳಗೆ ಕಾರು ಪಾರ್ಕಿಂಗ್ ಸ್ಥಳ ಹೇಗಿರುವದೋ ಹಾಗೇ ಇನ್ನೂ ನೆಲಕ್ಕೆ ಒಂದಂತಸ್ತು ಇಳಿದರೆ ಈ ವಿಶಾಲವಾದ ಈಜುಕೊಳ.

ನಮ್ಮ ಕ್ಯಾಂಪಿನ ಬಿಳಿಯ ಮಹಿಳಾ ಸಮೂಹ ‘ಈಜಲಿಕ್ಕೂ ಬುರ್ಕಾ?’ ಎಂದು ನಗೆಯಾಡಿದರು. ಕ್ಯಾಂಪಿನ ಈಜುಗೊಳದಲ್ಲಿ ಈಜುವದು, ಬಿಸಿಲಿಗೆ ಮೈಯೆಲ್ಲಾ ಕಾಯಿಸಿಕೊಳ್ಳುವ ಇವರಿಗೆ ಹಾಗೆನಿಸಿದರಲ್ಲಿ ತಪ್ಪೇನಿಲ್ಲ. ಮೈ ಬಣ್ಣ ಬಿಳಿ ಇರುವದರಿಂದ ಅವರಿಗೆ ಕಂದು ಬಣ್ಣದಂತಾಗಲು ಎಂತೆಂಥದೋ ಕ್ರೀಮ್‌ಗಳನ್ನು ಇಡೀ ದೇಹಕ್ಕೆಲ್ಲ ಹಚ್ಚಿಕೊಂಡು ಈಜುಡುಗೆಯಲ್ಲಿ ಮದನಿಕಾ ವಿಗ್ರಹಗಳಂತೆ ಈಜುಗೊಳದ ಪಕ್ಕ ಅಲ್ಲಲ್ಲಿ ಮಲಗಿರುವ ದೃಶ್ಯ ಸಾಮಾನ್ಯ. (ನಗರದ ಹೊರವಲಯದಲ್ಲಿದ್ದುದರಿಂದ, ರಕ್ಷಣೆ ಇದ್ದುದರಿಂದ ಇದೆಲ್ಲ ಸಾಧ್ಯ. ನಗರಗಳಲ್ಲಿ ಇದು ನಂಬಲಸಾಧ್ಯ).

ಸೌದಿಯಲ್ಲೆಲ್ಲ ಸಾಕಷ್ಟು ಸುಡಾನ್‌, ಸೋಮಾಲಿ ದೇಶಗಳಿಂದ ಬಂದ ಜನರಿದ್ದಾರೆ. ಇವರನ್ನೆಲ್ಲ ಮೊದಲು ಅರಸರು ಕೆಲಸಕ್ಕೆಂದು ಕರೆದುಕೊಂಡು ಬಂದವರು. ಇತ್ತೀಚೆಗೆ ಹಣದ ಗಳಿಕೆಗೆ ಬಂದವರೂ ಸಾಕಷ್ಟು. ಸುಡಾನ್, ಸೋಮಾಲಿ, ಫಿಲಿಫೈನ್ ಬಂಗ್ಲಾದೇಶದ ಹುಡುಗಿಯರು ಶ್ರೀಮಂತರ ಮನೆಕೆಲಸಕ್ಕೆಂದು ಬಂದು ಇಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಾರೆ. ಇವರನ್ನು ಮನೆಯ ಯಜಮಾನಿ ತನ್ನ ಮನೆ ಕೆಲಸಕ್ಕೆ ಯಜಮಾನ ತನ್ನ ಕಾಮಪಿಪಾಸೆಗೆ ಉಪಯೋಗಿಸಿಕೊಳ್ಳುವರೆಂಬ ವದಂತಿ ಸಾಕಷ್ಟು ಕೇಳುತ್ತೇವೆ.

ಅನೇಕ ಬಡ ಮಹಿಳೆಯರು ತಮ್ಮ ಊರು, ಆತ್ಮೀಯರನ್ನು ಮೇಲೇರಿಸಲು ಎಲ್ಲವನ್ನೂ ತ್ಯಾಗಮಾಡಿ ಬಂದು ಇಲ್ಲಿ ಈ ಬಲೆಯಲ್ಲಿ ಬಿದ್ದು ಜೀವನ ನರಕ ಮಾಡಿಕೊಳ್ಳುತ್ತಾರೆನ್ನುವದೊಂದು ದೊಡ್ಡ ದುರಂತ.

ಕಪ್ಪು ‘ಸುಡಾನ್’ ‘ಸೋಮಾಲಿ’ ಸ್ತ್ರೀಯರಲ್ಲಿ ಸಾಕಷ್ಟು ಸುಂದರಿಯರು ಕಾಣುತ್ತಾರೆ. ಗಟ್ಟಿ ಮುಟ್ಟಾದ ಅಂಗಸೌಷ್ಟವ ಶರೀರದ ಯಾವ ಭಾಗದಲ್ಲೂ ಈ ಕೊರತೆ ಇದೆ ಎನ್ನದೇ ಎತ್ತಿ ತೋರುವ ಅವರ ಅಂಗಾಂಗಗಳು ನಿಜವಾಗಿಯೂ ಆಕರ್ಶಕವೆನಿಸುವುದು. ಇಂತಹ ವಯಸ್ಸಿನ ಹುಡುಗಿಯರ ಮುಂದೆ ಎಷ್ಟೋ ಸಲ ಈ ಬಿಳಿತೊಗಲಿನ ಹೆಂಗಸರು ಸಪ್ಪೆ ಕಾಣಿಸಿದ್ದುಂಟು. ಏನೇ ಅಗಲಿ ಇದೆಲ್ಲ ನೋಡುವ ಅವರವರ ದೃಷ್ಟಿ.

ಈ ಕಪ್ಪು ಸ್ತ್ರೀಯರು ಫ್ಯಾಶನ್ ಮಾಡುವದರಲ್ಲಿಯೂ ಮುಂದೆ ನಿಗ್ರೋ ಹುಡುಗ ಹುಡುಗಿಯರು ಪಾಪ್ ಮ್ಯೂಸಿಕ್‌ ಗಳೊಂದಿಗೆ ಕುಣಿಯುವದನ್ನು ಇಂದು Star, Zee T.V. ಗಳಲ್ಲಿ ದಿನ ನಿತ್ಯ ನೋಡುತ್ತೇವೆ. ಹಾಗೆ ನೋಡುವಾಗ ಅವರ ಷ್ಯಾಶನ್, ಅಂಗಸೌಷ್ಟವ ಕೂಡಾ ನೊಡುತ್ತೇವೆ.

ಇವರ ಕೂದಲುಗಳ ವಿನ್ಯಾಸವೇ ವಿಚಿತ್ರ. ಕರಡಿ ಕೂದಲಿನಂತೆ ಬಿರುಸು. ಸಣ್ಣ, 10-15-20 ಜಡೆಗಳಾದರೂ ಒಂದರ ಮೇಲೊಂದು ಬಿದ್ದಿರುತ್ತದೆ. ಅದೊಂದು ಅವರ ಸೌಂದರ್ಯ ಸಂಕೇತವೆಂದು ಬೀಗುತ್ತಾರೆ. ಜಡೆಗಳು ಹಾಕುವಲ್ಲಿ ಬಹಳ ತಾಳ್ಮೆ ಬೇಕಾಗುವದಂತೆ. ಅಂತೆಯೇ ವಿಶೇಷ ದಿನಗಳಲ್ಲಿ ಒಮ್ಮ ಜಡೆ ಹಾಕಿಕೊಂಡು ಬಿಡುತ್ತಾರೆ. ಸುಮಾರು 1 ತಿಂಗಳುವರಗೆ ಈ ಜಡೆಗಳು ಹಾಗೇ ಇಟ್ಟುಕೊಂಡರೂ ನಡೆಯುತ್ತದಂತೆ. ನಮ್ಮ ಕಡೆಯ ಲಮಾಣಿ ಸ್ತ್ರೀಯರ ಜಡೆಗಳು ನೆನಪಿಗೆ ಬರುತ್ತದೆ.

ಅತಿಥಿ ಸತ್ಕಾರ :- ಪರಿಚಿತ ಅರಬ ಕುಟುಂಬಗಳ ಮನೆಗೆ ಹೋದಾಗ ಅವರು ಮಾಡುವ ಸ್ವಾಗತ ಬಹಳ ಖುಷಿ ಅನಿಸುತ್ತದೆ. ಹೋಗಿ ಕುಳಿತ 5 ನಿಮಿಷಗಳಲ್ಲಿ ಬಿಸಿ ಬಿಸಿಯಾದ ಕಾಫಿ ಸರಬರಾಜು ಮಾಡುವರು. ಅದರೆ ನಮ್ಮ ಕಡೆಯಂತಹ ಕಪ್ಪು ಗಳಲ್ಲಲ್ಲ; ಹಿಡಿಕೆಗಳಿಲ್ಲದ ಅತೀ ಸಣ್ಣ ವಾದ (ಆಟಿಕೆ ಸಾಮಾನುಗಳಿಂತಿರುವ) ಕಪ್ಪುಗಳು. ಎರಡೇ ಗುಟುಕುಗಳಿಗೆ (ಸಿಪ್) ಆಗುವಷ್ಟಿರುತ್ತದೆ. ಹಾಲು ಇಲ್ಲದ ಕರಿ ಕಾಫಿ, ಯಾಲಕ್ಕಿ, ಲಾವಂಗ, ಕೇಸರಿ ಎಸಳುಗಳ ಸುವಾಸಿ ಮಿಶ್ರಣಗಳಿಂದ ಕೂಡಿದ್ದು, ಕಾಫಿ ಕುಡಿಯುವ ಚಟಗಾರರು ಬಹಳ ಎಂಜಾಯ್ ಮಾಡುತ್ತಾರೆ. ಕಾಫಿ ಜಾರ್‌ನಿಂದ ಸಣ್ಣ ಕಪ್ಪಿನಲ್ಲಿ ಎರಡೆರಡೇ ಗುಟುಕುಗಳು ಹಾಕುತ್ತ ಅತಿಥಿಗಳು ಸಾಕೆನ್ನುವವರೆಗೆ ಹಾಕುವರು, ಸಾಧಾರಣ 3-4 ಸಲಕ್ಕೆ ಸಾಕಾಗುತ್ತದೆಯಂತೆ.

ಹಾಗೆಯೇ ಅರೇಬಿಕ್ ಸ್ಪೆಶಲ್ ಸಿಹಿ ತಿಂಡಿ-ತಿನಿಸುಗಳು ಸಾಕಷ್ಟು ಇಡುವರು. ಬಾಯಿ ತುಂಬ ಹಾಲೆಂಡ್‌ದ ತುಪ್ಪದ ಪದಾರ್ಥಗಳು ತಿಂದು ತೇಗುತ್ತೇವೆ. ಸಸ್ಯಾಹಾರಿಗಳಾದ ನಮಗೆ ತರಕಾರಿ, ಸಲದ, ರೋಟಿ ಸ್ವೀಟ್ಸ್‌, ಊಟಕ್ಕೆಂದಾದರೆ ಮಾಂಸಾಹಾರಿಗಳಿಗೆ ಮೃದುವಾದ ಒಂಟೆ, ಕುರಿಗಳ ಮಾಂಸ ಊಟ.

ಈ ನಾಡಿನಲ್ಲಿ ಮೇಲಿಂದ ಮೇಲೆ ಕಿವಿಗೆ ಬೀಳುವ ಶಬ್ದಗಳೆಂದರೆ ವಲದ್, ಸದಿಕ್, ಶುಕ್ರನ್, ಸಲಾಂ ಅಲೆಕುಂ, (-ನಮಸ್ಕಾರ ಅಂದಹಾಗೆ) ಮರಹಬಾ Hellow,ವಲಬ್’ (-ಮಗ) ದೊಡ್ಡವರು, ಮಕ್ಕಳಿಂದ ಹಿಡಿದು ದೊಡ್ಡವ- ರವರೆಗೂ ‘ವಲದ್’ ಎಂದಾಗಲಿ ಮತ್ತು ‘ಸದಿಕ್’ – (ದೋಸ್ತ ಅಥವಾ ಮೈ ಫ್ರೆಂಡ್ ಅಂದಹಾಗೆ,) ಆತ್ಮೀಯವಾಗಿ ಕರೆಯುವ ರೂಢಿ ಇಲ್ಲಿಯವರದು. ಹಾಗೆಯೇ ಶುಕ್ರನ್ – Thanks ಎಂದು ಕೂಡಾ ಮಾತು ಮಾತಿಗೂ ಬರುತ್ತದೆ.

ವೈದ್ಯಕೀಯ ವ್ಯವಸ್ಥೆ

ಸೌದಿಯಲ್ಲಿನ ಪ್ರತಿಯೊಂದು ಸೌಕರ್ಯವೂ ಮೆಚ್ಚುವಂಥದು. ನಮ್ಮಲ್ಲಿ ಯಂತೆ ಇಲ್ಲಿ ಯಾವ ಆಸ್ಪತ್ರೆಯೂ ಸಂದು ಗೊಂದುಗಳಲ್ಲಿಲ್ಲ. ಗಾಳಿ-ಬೆಳಕುಗಳಿಂದೊಡಗೂಡಿದ ವಿಶಾಲ ಸುಸಜ್ಜಿತ ಆಸ್ಪತ್ರೆಗಳು ನೋಡಿ ಬೆರಗಾಗುತ್ತೇವೆ. ಟೆಂಪರರಿ ಯಂತ್ರೋಪಕರಣಗಳು ಎಲ್ಲೂ ಕಾಣುವದಿಲ್ಲ. ಎಲ್ಲಾ ಯೂರೋಪ್-ಅಮೇರಿಕದ ಅದ್ಭುತ ವೈದ್ಯಕೀಯ ಸಲಕರಣೆಗಳು ಹಾಗೂ ಪರಿಣಿತ ವೈದ್ಯರ ಸಮ್ಮಿಲನ ಅಚ್ಚುಕಟ್ಟುತನ ಇಲ್ಲಿ ಎದ್ದು ಕಾಣುತ್ತದೆ.

ಹೊರರೋಗಿಗಳನ್ನು ನೋಡಿಕೊಳ್ಳುವ ರೀತಿ, ಅಲ್ಲಿಯ ಶಿಸ್ತು-ಆಡಳಿತವರ್ಗ; ಊಟೋಪಚಾರ ಇವನ್ನೆಲಾಗಿ ನೋಡುತ್ತಿದ್ದಂತೆಯೇ ರೋಗಿಯು ಅರ್ಧ ಚೇತರಿಸಿಕೊಳ್ಳಬಹುದು. ನಮ್ಮಲ್ಲಿ ಬೆರಳೆಣಿಕೆಯ ಒಳ್ಳೆಯ ಆಸ್ಪತ್ರೆಗಳನ್ನು ಬಿಟ್ಟರೆ ಉಳಿದವುಗಳು ‘ಅಯ್ಯೋ ನರಕವೇ’ ಅನ್ನುವಂತಿವೆ. ಗಾಳಿ ಬೆಳಕು ಇಲ್ಲದ ಕೋಣೆಗಳು, ಜೊತೆಗೆ ಗಬ್ಬುವಾಸನೆ ಹೊಡೆಯುವ ಬಚ್ಚಲು – ಮೂತ್ರಿಗಳು, ರಸ್ತೆಯ ಶಬ್ದ ಮಾಲಿನ್ಯ, ಅದಷ್ಟೇ ಅಲ್ಲದೆ ದಾದಿಯರ ತಾತ್ಸಾರ ನಿರುತ್ಸಾಹ ಅಥವಾ ಸತ್ತಕಳೆಗಳು ನೋಡುವಾಗ ರೋಗಿಗೆ ಚೇತರಿಕೆ ಹೇಗೆ ಬಂದೀತು? ಇನ್ನಷ್ಟು ಸಾಯುತ್ತಾನೆ. ಸ್ವತಃ  ಡಾಕ್ಟರೂ, ತಮ್ಮ ಕೋಣೆಯಲ್ಲಿಯ ಸ್ವಚ್ಛತೆ, ಯಂತ್ರೋಪಕರಣಗಳ ಬಗೆಗೆ ಎಷ್ಟು ನಿರ್ಲಕ್ಷ್ಯದಿಂದ ಇರುತ್ತಾರೆಂದು ಕಾಣ್ಣಾರೆ ಕಂಡ ನನಗೆ ಇವರನ್ನು ಮೊದಲು ಯಾರು ಸುಧಾರಿಸುತ್ತಾರೋ ಎನಿಸುವದು.

ಇಲ್ಲಿ ಯ ವೈದ್ಯಕೀಯ ಸಲಕರಣೆಗಳು. ಪರಿಶೀಲನಾ ವಿಭಾಗಗಳು ದಂಗು ಬಡಿಸುವಂತಿವೆ. ಕಾರಣಾಂತರಗಳಿಂದ ನಾನೆರಡು ದಿನ ಆಸ್ಪತ್ರೆಯಲ್ಲಿ ಇದ್ದೆ. ನಾನಿದ್ದ ಆಸ್ಪತ್ರೆಯ ಕೋಣೆಯಲ್ಲಿ ಒಳ್ಳೆಯ ತಣ್ಣೀರು ಬಿಸಿನೀರಿನ ಶವರ್‌ ಟಾಪ್‌, ಫೋನ್ ಪೇಪರ್ ಪೆನ್ಸಿಲ್‌ಗಳಿಂದೊಡಗೂಡಿದ ಸುವ್ಯವಸ್ಥೆ ಇತ್ತು. ಮಂಚಗಳಿಗೆ ಅದೆಷ್ಟೋ ಹೊಂದಾಣಿಕೆಗಳಿವೆ. ಒಂದು ಮಂಚದಲ್ಲಿ ಸುಮಾರು 8-10 ಆದರೂ ಏರಿಳಿತಗಳ ಹೊಂದಾಣಿಕೆಗಳಿರುತ್ತವೆ. ಕುತ್ತಿಗೆ ಹಿಂಬದಿಗೆ, ತಲೆದಿಂಬು ಸ್ಥಳದಲ್ಲಿ, ಕುತ್ತಿಗೆ ಮೇಲೆ ಕೆಳಗೆ ಹಾಕಲಿಕ್ಕೆ, ಬೆನ್ನುಗಳಿಗೆ, ಸೊಂಟಗಳಿಗೆ ಮೊಳಕಾಲುಗಳಿಗೆ ಹೀಗೆ ರೋಗಿ ಯಾವ ರೀತಿ ಮಲಗಿಕೊಂಡರೆ ಅರಾಮವೆನ್ನುವ ಡಾಕ್ಟರರ ಸಲಹೆ ಸೂಚನೆಗಳ ಮೇರೆಗೆ ಇಡೀ ಮಂಚವನ್ನು ಸ್ಪ್ರಿಂಗ್. ಸ್ಕ್ರೂಗಳ ಮೂಲಕ ಹೊಂದಿಸಿರುವರು. ರೋಗಿ ಏನೂ ಏಳಬೇಕಾಗಿಲ್ಲ. ಮಲಗಿದ ರೋಗಿ ಮಲಗಿದಂತೆ ಇರುತ್ತಾನೆ. ದಾದಿಯರು ಹೇಗೆ ಬೇಕೋ ಹಾಗೆ ಸಲಹೆಯಂತೆ ಹೊಂದಿಸುತ್ತ ನಗು ನಗುತ್ತಾ ಮಾತಾಡುವರು. ನಾನು ಶಾಖಾಹಾರಿ ಎಂದಾಗ ಬೆಳಿಗ್ಗೆ ಬಿಸಿ ಬಿಸಿಯಾದ ಶಾಖಾಹಾರಿ ಸಾರು (Soup) ತಂದು ಕೊಟ್ಟರು. ಸಂಜೆ ಬಿಸಿ ಅನ್ನ ಮತ್ತು ಕಾಯಿ- ಪಲ್ಲೆ ತಂದು ಕೊಟ್ಟರು. ಆಗೀಗ ಥೈಲ್ಯಾಂಡ್, ಮಲೇಶಿಯನ್ ಫಿಲಿಫೈನ್‌ ನರ್ಸ್ ಗಳೊಂದಿಗೆ ಏನೇನಾದರೂ ಕೇಳುತ್ತಿದ್ದೆ. ಸೌದಿ ನರ್ಸ್‌ಗಳಿಗೆ ಭಾಷಾ ತೊಂದರೆ ಎಂದೆನಿಸಿ ಅವರು ಅಷ್ಟಿಷ್ಟು ಡ್ಯೂಟಿ ಮಾಡಿ ತಮ್ಮ ಗುಂಪಿಗೆ ಸೇರಿಬಿಡುತ್ತಿದ್ದರು.

ಸೌದಿ ಸ್ತ್ರೀಯರಿಗೆ ತಿಂಡಿ-ತಿನಿಸುಗಳ ಮೇಲೆ ಕಂಟ್ರೋಲ್ ಇಲ್ಲ, ಅಂತೆಯೇ ಸಿಕ್ಕಾಪಟ್ಟೆ ತಿಂದು ಹುಚ್ಚುಚ್ಚಾಗಿ ಮೈಬಿಟ್ಟರುತ್ತಾರೆ. ಗಾತ್ರ ನಿಯಂತ್ರಣ ಇಲ್ಲದ ಶೇ, 98 ಮಹಿಳೆಯರನ್ನು ನಾವು ಎಲ್ಲ ಕಡೆಗೂ ಕಾಣುತ್ತೇವೆ. ಅದೇ ಪಾಶ್ಚಾತ್ಯರು ಪ್ರತಿಯೊಂದು ತಿಂಡಿ ತಿನಿಸಿನ ಕ್ಯಾಲರಿ ಎಲ್ಲ ನೋಡಿಕೊಂಡೇ ತಮ್ಮ ಆರೋಗ್ಯಕ್ಕೆ ಹೊಂದಿಕೊಳ್ಳುವ ತಿಂಡಿ ತಿನಿಸುಗಳನ್ನೇ ಖರೀದಿಸುವರು. ನಮಗೆ ಇವೆರಡೂ ಶಾಖಾಹಾರಿಗಳಾದ ನಮಗೆ ಅಷ್ಟೊಂದು ತಲೆಕೆಡಿಸಿ ಕೊಳ್ಳಬೇಕಿಲ್ಲ ಎಂದು ಡಾಕ್ಟರರ ಅಭಿಪ್ರಾಯ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರ ಬೆಟ್ಟದ ಮೇಲೆ
Next post ತಾಯಂದಿರಿಗೆ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…