ವಾಗ್ದೇವಿ – ೫೩

ವಾಗ್ದೇವಿ – ೫೩

ಕಾರಭಾರಿಯ ಮುಂದೆ ಚತುರ್ಮಠದವರ ಮೇಲೆ ತರಲ್ಪಟ್ಟಿರುತ್ತಿದ್ದ ಮದ್ದತಿನ ಮೊಕದ್ದಮೆಯನ್ನು ಹೊಸಕಾರಭಾರಿಯು ಅವರನ್ನು ಕಚೇರಿಗೆ ಬರಬೇಕೆಂದು ಬಲಾತ್ವರಿಸದೆ, ಅವರ ಗುಣಕ್ಕೆ ತೀರ್ಮಾನ ಮಾಡಿ, ಇಡೀ ಊರಿನಲ್ಲಿ ಶ್ಲಾಘ್ಯನಾದನು. ವಿಮರ್ಶಾಧಿಕಾರಿಯ ಮನಸ್ಸಿನಲ್ಲಿ ಚತುರ್ಮ ಠದವರ ಮೇಲೆ ಉಂಟಾಗಿರುತ್ತಿದ್ದ ದ್ವೇಷವು ಕಡಿಮೆಯಾಗಿರಲಿಲ್ಲ. ಆದರೆ ರಾಜನ ಕೋಪಕ್ಕೆ ಗುರಿಯಾಗಿ ಉದ್ಯೋಗವೇ ಕಳಕೊಳ್ಳುವ ಗಂಡಾಂತರ ದಲ್ಲಿ ಸಿಲುಕದಂತೆ ಬಹುಜಾಗ್ರತೆಯಿಂದ ನಡಕೊಳ್ಳುವ ಅಗತ್ಯವಾಯಿತು. ಅವನ ಮುಂದೆ ಮಠಗಳಿಗೆ ಸಂಬಂಧವಾದೆ ಪ್ರಸಕ್ತಿಯು ಶಾಬಯ್ಯನ ವರ್ಗದ ನಂತರ ಬರಲಿಲ್ಲ. ಯಾಕೆಂದರೆ ಹೊಸ ಕಾರಭಾರಿಯ ಕಾಲದಲ್ಲಿ ಅವರ ಮೇಲೆ ಯಾವುದೊಂದೂ ಅತಿಶಯವು ಬರುವಹಾಗಿರಲಿಲ್ಲ.

ಸದರ ಅದಾಲತ್ತಿನಲ್ಲಿ ವಿಮರ್ಶೆಯಲ್ಲಿರುವ ವ್ಯಾಜ್ಯವನ್ಯು ನ್ಯಾಯಾಧಿ ಪತಿಗಳು ಸೂಕ್ಷ್ಮವಾಗಿ ನೋಡಿದರು. ಕೆಪ್ಪಮಾಣಿಯ ಪ್ರಸ್ತಾಸ ಅವಾಜಮೆ ಗಳಲ್ಲಿ ಕಂಡುಬಂದುದರಿಂದ ಅವನನ್ನು ಕರೆಸಿಕೊಂಡು ಅವನ ಸಾಕ್ಷಿಯನ್ನು ದೊರಕಿಸಿಕೊಂಡರೆ ಸತ್ಯಶೋಧನೆಗೆ ಹೆಚ್ಚು ಅನುಕೂಲವಾಗುವುದೆಂಬ ತಾತ್ಪರ್ಯದಿಂದ ಅವನೆಲ್ಲಿರುವನೆಂದು ವಿಚಾರಿಸಿ ಅವನನ್ನು ತಮ್ಮ ಮುಂದೆ ಬರಮಾಡಬೇಕೆಂದು ಆಜ್ಞೆಮಾಡಿದರು. ಇಡೀ ರಾಜ್ಯದಲ್ಲಿ ಇರುವ ಬೇರೆ ಬೇರೆ ಪಟ್ಟಣಗಳ ಉದ್ಯೋಗಸ್ತರಿಗೆ ಅನನ ಶೋಧನವನ್ನು ಮಾಡುವುದ ಕ್ಕೋಸ್ಕರ ನಿರೂಪಗಳು ಹೋದವು. ಅವನನ್ನು ಹುಡುಕುವದು ಹೆಚ್ಚು ಪ್ರಯಾಸಕರವೆಂದು ಪ್ರತಿ ಒಬ್ಬ ಉದ್ಯೋಗಸ್ಥನೂ ಬಿನ್ನವಿಸಿಕೊಂಡರೂ ಚೆನ್ನಾಗಿ ಹುಡುಕಬೇಕಾಗಿ ನ್ಯಾಯಾಧಿಪತಿಗಳು ಹಟಹಿಡಿದರು. ಅವನು ಸಿಕ್ಕದಂತೆ ಪ್ರಯತ್ನಿಸುವ ಅವಶ್ಯವು ವಾಗ್ದೇವಿಗೆ ಬಿತ್ತು. ಅವಳ ಕಡೆಯಿಂದ ತಿಪ್ಪಾಶಾಸ್ತ್ರಿಯು ಈ ಕಾರ್ಯವನ್ನು ಜಯಪ್ರದ ಮಾಡಿಕೊಡುವದಾಗಿ ನಂಬಿಸಿ, ಅವಳಿಂದ ಕೊಂಚ ಹಣವನ್ನು ಪಡಕೊಂಡು ಪರ್ಯಟನ ಮಾಡಿ ಕೊಂಡಿರುವಾಗ ಅವನು ಶಾಂತಿಪುರದಲ್ಲಿಯೇ ಒಬ್ಬಳು ನಾಯಕಸಾನಿಯ ಮನೆಯಲ್ಲಿ ಅವಳ ಹೇರಳ ಆಸ್ತಿಯ ಆಡಳಿತೆಯನ್ನು ನೋಡುವ ಕೆಲಸದಲ್ಲಿ ಇರುತ್ತಾನೆಂದು ತಿಳಿದು ಸಂತೋಷಪಟ್ಟನು. ಯಾಕೆಂದರೆ ಶಾಬಯ್ಯನು ಆ ಪಟ್ಟಣದ ಕಾರಭಾರಿಯಾದ ಕಾರಣ ವಾಗ್ಗೇವಿಯ ಪರಮಮಿತ್ರನಾದ ಅವನೂ ಕೊತ್ವಾಲ ಭೀಮಾಜಿಯೂ ತನ್ನ ಉದ್ದೇಶವನ್ನು ನೆರವೇರಿಸುವ ರೆಂಬ ಧೈರ್ಯವು ಅವನಿಗೆ ಪೂರ್ಣವಾಗಿ ಇತ್ತು.

ನಜರು ಕಾಣಿಕೆಯನ್ನು ಹಿಡಿಸಿಕೊಂಡು, ತಿಪ್ಪಾಶಾಸ್ತ್ರಿಯು ಶಾಬಯ್ಯನ ಬಿಡಾರಕ್ಕೆ ಹೋಗಿ ಕಂಡಾಗ ಅವನಿಗೆ ಹರುಷನಾಗಿ, ಆಗಮನದ ಕಾರಣ ವಿಚಾರಿಸಿದನು. ತಾನು ಬಂದ ಕಾರ್ಯವನ್ನು ಕುರಿತು ಅವನು ಪ್ರಸ್ತಾಪ ಮಾಡಿದನು: ವಾಗ್ದೇವಿಯ ಶುಭ ಚಿಂತಕನಾದ ಮೇಲೆ ಇಷ್ಟು ಸಣ್ಣ ಕೆಲಸ ದಲ್ಲಿ ಹಿಂಜರಿಯುವದುಂಟೇ! ಅದನ್ನು ಕೈಗೂಡಿಸಿ ಕೊಡುವದು ಏನು ದೊಡ್ಡದೆಂದು ಮೀಸೆಗಳನ್ನು ಎಳಿಯುತ್ತಾ, ಶಾಬಯ್ಯನು ಭೀಮಾಜಿಯನ್ನು ಕರೆಸಿಕೊಂಡನು. ಅವನೂ ತಿಪ್ಪಾಶಾಸ್ತ್ರಿಯನ್ನು ನೋಡಿ ಸಂತೋಷಪಟ್ಟು, ಇಷ್ಟು ಸಣ್ಣ ಕೆಲಸ ಕೈ ಗೂಡುವಲ್ಲಿ ಏನೂ ಪ್ರಯಾಸವಿರಲಾರದು. ಆಗು ವಷ್ಟು ಪ್ರಯತ್ನಮಾಡಿ ಅರಿಕೆ ಮಾಡುವೆನೆಂದು ಹೊರಟು, ಆ ನಾಯಕ ಸಾನಿಯ ಮನೆಗೆ ಹೋದನು. ಅವಳ ಕೆಲಸದ ಮೇಲೆ ಕೆಪ್ಪಮಾಣಿಯು ಕೊಂಚದೂರವಿರುವ ಹಳ್ಳಿಗೆ ಆ ದಿನವೇ ಹೊರಟು ಹೋಗಿರುತ್ತಿದ್ದನು. ಕೊತ್ವಾಲನು ತನ್ನ ಮನೆಗೆ ಬಂದದ್ದು ನೋಡಿ, ಅವಳು ಬಹು ಪ್ರೇಮ ದಿಂದ ಅವನಿಗೆ ವಿಶೇಷವಾದ ಸಾಭಿಮಾನ ಮಾಡಿ ತನ್ನಿಂದಾಗಿಬೇಕಾದ ಸೇವೆ ಯಾವುದು, ಅಪ್ಪಣೆಯಾಗಬೇಕೆಂದು ಮುಕುಳಿತ ಹಸ್ತಗಳಿಂದ ಬೇಡಿ ಕೊಂಡಳು. ಬೇರೆಯಾರಿಗೂ ಅರಿಯದಂತೆ ರಹಸ್ಯವಾಗಿ ಅವಳ ಕೂಡೆ ತನ್ನ ಉದ್ದೇಶವನ್ನು ತಿಳಿಸಿದನು. “ಅದರ ಚಿಂತೆ ಬಿಡಿ; ಅವನು ಎರಡು ಮೂರು ದಿವಸಗಳಲ್ಲಿ ಮರಳುವನು. ಅವನಿಂದಾಗಬೇಕಾದ ಕೆಲಸವನ್ನು ಅಡ್ಡಿ ಇಲ್ಲದೆ ಮಾಡಿಸಿಕೊಡದೆ ಇದ್ದರೆ ನಾನು ತಮ್ಮ ದಾಸಿಯೇ, ಸ್ವಾಮೀ?” ಎಂದು ಭೀಮಾಜಿಗೆ ಕರ್ಣಮಧುರವಾದ ಮಾತುಗಳಿಂದ ಮೆಚ್ಚಿಸಿಬಿಟ್ಟಳು.

ಭೀಮಾಜಿಯು ಹರ್ಷಾಬ್ಧಿಯಲ್ಲಿ ಮುಳುಗಿ ನಾಯಕಸಾನಿಯ ಕೂಡೆ ಸಂಭಾಷಣೆಯ ಸುಖವನ್ನು ಅನುಭವಿಸುತ್ತಿರುವಾಗ ಬಹು ಚಪಲೆಯಾದ ಆ ವಾರಾಂಗನೆಯು ಕ್ಷಣಾರ್ಧದಲ್ಲಿ ಉಂಟಾದ ಬಳಕೆಯಿಂದ ಭೀಮಾಜಿಯ ಮೈ ಮೇಲೆ ತನ್ನ ಕೋಮಲ ಹಸ್ತವನ್ನಾಡಿಸಿ ಅವನ ಅಮೂಲ್ಯವಾದ ಗಡಿಯಾರವನ್ನು ಅದರ ಚಿನ್ನದ ಸರಪಣಿ ಸಹಿತ ಮೆಲ್ಲ ಮೆಲ್ಲನೆ ತೆಗೆದು ಧರಿಸಿಕೊಂಡು–“ಸ್ವಾಮಾ! ಈ ದಾಗಿನೆಯು ನನಗೆ ಒಪ್ಪುತ್ತದೆಯೇ?? ಎಂದು ಹಾಸ್ಯ್ಯ ವದನದಿಂದ ಕೇಳಿದಳು. ಹೌದೆನ್ನದೆ ನಿರ್ವಾಹವಿಲ್ಲ. ಕೊತ್ವಾಲನು ಸೋತನು. ಆದರೂ ಕೊಂಚಹೊತ್ತಿನ ಮೇಲಾದರೂ ಅವಳು ಅದನ್ನು ತಿರುಗಿಕೊಡದಿರಲಾರಳೆಂಬ ಬಯಲು ಕೋರಿಕೆಯಿಂದ ಅಲ್ಲಿಯೇ ಕುಂತನು. ಅವಳು ತಾಂಬೂಲಾದಿ ಉಪಚಾರಗಳಿಂದ ಅವನನ್ನು ಸುಖಸಡಿಸಿ, ಇನ್ನು ಶಾನೆ ಹೊತ್ತು ಅಲ್ಲಿಯೇ ಇದ್ದುಕೊಂಡರೆ ಕಿವಿಯ ಒಂಟಿಯ ಮೇಲೆ ಅವಳ ದೃಷ್ಟಿ ಬೀಳುವದೆಂಬ ಹೆದರಿಕೆಯಿಂದ ಬೇಗನೇ ಹೊರಟನು. ಜೀವಕಾಲದಲ್ಲಿ ಅವನಿಗೆ ಇಂಥಾ ಸೋಲಾಗಲಿಲ್ಲ. ಇಂದು ಇವಳು ಬಹು ಚಳಕದಿಂದ ಗಡಿಯಾರವನ್ನು ಅಪಹರಿಕೊಂಡಳಷ್ಟೆ. ಆದು ಪುನಃ ಸಿಕ್ಕುವದು ಹ್ಯಾಗೊ. ಕೃಷ್ಣಾರ್ಪಣವೇ ಸರಿ, ವ್ಯರ್ಥವಾಗಿ ಹೆಚ್ಚು ಮೌಲ್ಯದ ವಸ್ತುವನ್ನು ದಾಕ್ಷಿಣ್ಯದಿಂದ ಕಳಕೊಂಡೆನೆಂಬ ಪಶ್ಚಾತ್ತಾಪ ಹಾಗೂ ನಾಚಿಕೆಯಿಂದ ಮನೆಗೆ ಬಂದು, ಊಟವನ್ನು ಸಹಾ ಸರಿಯಾಗಿ ಮಾಡದೆ, ಬೇಗನೆ ಮಲಗಿದನು! ನಿದ್ರೆಯೇ ಸರಿಯಾಗಿ ಬರಲಿಲ್ಲ. ತಿಪ್ಪಾ ಶಾಸ್ತ್ರಿಯು ಮರು ದಿನ ಬೆಳಿಗ್ಗೆ ಬಂದು ಶಾಬಯ್ಯನ ಮನೆಗೆ ಭೀಮಾಜಿ ಯನ್ನು ಕರಕೊಂಡು ಹೋದ ಸಮಯ ಭೀಮಾಜಿಯ ಮುಖದ ಮೇಲೆ ಖಿನ್ನತೆಯ ಚಿಹ್ನೆಯು ತೋರಿ ಬಂದ ಸಂಬಂಧ–“ಇದೇನಯ್ಯಾ., ನೀನು ವ್ಯಾಕುಲಸ್ತನಾಗಿರುವಂತೆ ಕಾಣಿಸಿಕೋಥೀ?” ಎಂದು ಶಾಬಯ್ಯನು ಪ್ರಶ್ನೆ ಮಾಡಿದನು. “ಅಯ್ಯಾ, ನನಗೆ ತುಸಾ ವಾಯು ಉಪದ್ರದಿಂದ ಅನಾ ರೋಗ್ಯ ಉಂಟಾಗಿಯದೆ. ಹೇಳಿದ ಕೆಲಸ ಸರಿಯಾಗಿ ನಡಿಯುವ ಉಪಾಯ ಮಾಡಿದ್ದೇನೆ? ಎಂದು ಕೆಪ್ಪಮಾಣಿಯನ್ನು ಕುರಿತು ಪ್ರಸ್ತಾಸವನ್ನು ಬಿನ್ನವಿಸಿದನು.

ಗಡಿಯಾರ ಕಳಕೊಂಡ ಕೊತ್ವಾಲನು ಪುನಃ ನಾಯಕಸಾನಿಯ ಮನೆಗೆ ಹೋಗಲಿಕ್ಕೆ ಭಯಪಟ್ಟನು. ಹೇಳಿ ಕಳುಹಿಸಿದರೆ ಅವಳು ಅದನ್ನು ತಿರಿಗಿ ಕೊಡಲಿಕ್ಕೆ ಸಾಕೆಂಬ ಭ್ರಮೆಯಿಂದ ಒಬ್ಬ ಜವಾನನನ್ನು ಅವಳ ಬಳಿಗೆ ಕಳುಹಿಸಿ ಕೊಟ್ಟನು. “ಒಮ್ಮೆ ಉಗುಳಿದ ಎಂಜಲು ಪುನರಸಿ ಬಾಯಿಗೆ ಹಾಕಿಕೊಳ್ಳಬಹುದೇ? ಕೊಟ್ಟುಹೋದ ಗಡಿಯಾರ ಮರಳಿ ಕೇಳಲಿಕ್ಕೆ ನಾಚಿಕೆಯಾಗುವುದಿಲ್ಲವೇ??” ಎಂಬ ಉತ್ತರವು ಸಿಕ್ಕಿತು. ಕೊತ್ವಾಲಗೆ ಇನ್ನಷ್ಟು ನಾಚಿಕೆಯಾಯಿತು. ಹ್ಯಾಗೋ ಈ ವರ್ತಮಾನ ಹೆಂಡತಿಯ ಕಿವಿಗೆ ಬಿದ್ದು, ಗಂಡನನ್ನು ಅದನ್ನು ಕುರಿತು ಕೇಳಿದಳು. ಅವನು ನಿರುತ್ತ ರನಾಗಿರಲು, ಅವಳು ಸಿಟ್ಟು ತಡಕೊಳ್ಳಲಿಕ್ಕಾಗದೆ, ಅವನನ್ನು ಕಂಡಾಬಟ್ಟೆ ಬೈದು ಇನ್ನು ಮುಂದೆ ವಾರಾಂಗನೆಯರ ಮನೆಯನ್ನು ಕಣ್ಣೆತ್ತಿ ನೋಡೆನೆಂದು ಪ್ರಮಾಣ ಮಾಡದಿದ್ದರೆ ಅನ್ನ ಹಾಕಲಾರೆನೆಂದು ಖಂಡಿತ ವಿಧಿಸಿ ಎಚ್ಚರಿಸಿದಳು. ನಿರ್ವಾಹವಿಲ್ಲದೆ ತುಳಸಿಕಟ್ಟೆಯ ಎದುರು ನಿಂತು ಹೆಂಡ ತಿಯು ನಿರ್ದೇಶಿಸಿದ ಪ್ರಮಾಣ ವಾಕ್ಯವನ್ನು ಮೂರಾವರ್ತಿ ಉಚ್ಚರಿಸಿದ ಮೇಲೆ ಅವಳು ಬಡಿಸಿದ ಅನ್ನವನ್ನು ತಲೆ ಬಗ್ಗಿಸಿ ಹ್ಯಾಗೂ ಉಂಡನು. ಈ ವಾರ್ತೆಯು ಗುಟ್ಟಿನಲ್ಲಿ ಉಳಿಯಲಿಲ್ಲ. ಕ್ರಮೇಣ ಶಾಬಯ್ಯನಿಗೂ ಗೊತ್ತಾಗಿ ಅವನು ಗಹಗಹಿಸಿ, ಭೀಮಾಜಿಯನ್ನು ಬರಮಾಡಿ, ಕುಚೋದ್ಯ ಮಾಡಲಿಕ್ಕೆ ತೊಡಗಿದನು. ಭೀಮಾಜಿಯು ಮೃತಪ್ರಾಯನಾದನು. ಮತ್ತು ಹಲವು ದಿವಸಗಳ ಪರಿಯಂತರ ಅಸ್ವಸ್ಥವೆಂಬ ನೆವನ ಕಲ್ಪಿಸಿ, ಮುಖ ತೋರಿಸದೆ ಮನೆಯಲ್ಲಿಯೇ ಇದ್ದುಕೊಂಡನು.

ತಿಪ್ಪಾಶಾಸ್ತ್ರಿಯು ಶಾಬಯ್ಯನ ಮೇಲೂ ಭೀಮಾಜಿಯ ಮೇಲೂ ಪೂರ್ಣ ಭರವಸೆ ಇಟ್ಟು, ವಹಿಸಿಕೊಂಡ ಬಹು ದೊಡ್ಡ ಕಾರ್ಯದ ಗೊಡವೆಯೇ ಬಿಟ್ಟು, ಬೀದಿ ಬೀದಿ ತಿರುಗಾಡುವದರಲ್ಲಿ ಬಿದ್ದನು. ತನ್ಮಧ್ಯ ರಘುವೀರರಾಯನು ತಾನೇ ಶಾಂತಿಪುರಕ್ಕೆ ಹೋದರೆ ತನ್ನ ಕೇವಲ ಹಗೆಗಾರರಾದ. ಕಾರಭಾರಿಯೂ ಕೊತ್ವಾಲನೂ ತನ್ನನ್ನು ಸೆರೆಮನೆಯಲ್ಲಿ ಹಾಕಿಬಿಡುವರೆಂಬ ಭಯದಿಂದ ಕಾಗದಪರಿಮುಖ ಶಾಂತಿ ಪುರ ಮಠದ ಸ್ವಾಮಿಗಳಿಗೆ ಕೆಪ್ಟಮಾಣಿಯನ್ನು ಕುರಿತು ಅವಶ್ಯವಾಗಿ ಜಾಗ್ರತೆ ಇಡಬೇಕೆಂದು ಬೇಡಿಕೊಂಡನು. ಅವರು ಕೊತ್ವಾಲನ ಗಡಿಯಾರ ಸೆಳಕೊಂಡ ನಾಯಕಸಾನಿಯ ಪರಿಮುಖನವೇ ಕೆಪ್ಪಮಾಣಿಯನ್ನು ಕೈವಶ ಮಾಡಿ, ಯಾರಿಗೂ ತಿಳಿಯದಂತೆ ರಾತಾರಾತ್ರಿ ಅವನನ್ನು ತನ್ನ ಜನರ ಸಂಗಡ ಕುಮುದಪುರಕ್ಕೆ ಕಳುಹಿಸಿ ಬಿಟ್ಟರು. ತಿಪ್ಪಾಶಾಸ್ತ್ರಿಯು ಶ್ವಾನದಂತೆ ತಿರುಗಾಡುತ್ತಲೇ ಇದ್ದನು. ಕೆಪ್ಪಮಾಣಿಯು ಸದರ ಅದಾಲತಿನ ಮುಂದೆ ನಿಲ್ಲಿಸಲ್ಪಟ್ಟನೆಂಬ ಸಮಾಚಾರ ಅವನಿಗೆ ತಿಳಿಯಲೇ ಇಲ್ಲಿ. ಪರಸ್ಪರವಾಗಿ ಅದು ಶಾಬಯ್ಯನಿಗೆ ಗೊತ್ತಾಗಿ ಭೀಮಾಜಿಯು ನಾಯಕಸಾನಿಯಿಂದ ಮೋಸಪಟ್ಟನೆಂದು ಪಶ್ಚಾತ್ತಾಪಪಟ್ಟು, ತಿಪ್ಪನನ್ನು ಕರಸಿ-“ಇಗೋ, ಕಾರ್ಯ ಕೆಟ್ಟಿತು. ಯಾರಿಗೂ ತಿಳಿಯದ ಹಾಗೆ ಕೆಪ್ಟಮಾಣಿಯನ್ನು ಕುಮುದ ಪುರಕ್ಕೆ ಒಯಿದರಂತೆ. ಬೇಗ ಹೋಗಿ ನೋಡಿಕೋ? ಎಂದು ಹೇಳಿದನು. ಅವನು ತರಹರಿಸಿ ಊಟವನ್ನು ಬಿಟ್ಟು ಹಿಂತಿರುಗಿದನು.

ಶಾಸ್ತ್ರಿಯು ಕುಮುದಪುರಕ್ಕೆ ಬಂದಲ್ಲಿ ಕೆಪ್ಟಮಾಣಿಯು ಸದರ ಅದಾ ಲತಿನಲ್ಲಿ ಮೂರು ದಿವಸಗಳಿಂದ ವಿಚಾರ ಮಾಡಲ್ಪಡುತ್ತಿದ್ದಾನೆಂಬ ವದಂತಿ ಯನ್ನು ಕೇಳಿ, ವಾಗ್ದೇವಿಗೆ ಮುಖ ತೋರಿಸಲಿಕ್ಕೆ ನಾಚಿ, ತರಾತುರಿಯಿಂದ ಸದರ ಅದಾಲತ ಇರುವ ಪಟ್ಟಣಕ್ಕೆ ಹೋಗಿ ನೋಡಿದನು. ಕೆಪ್ಪಮಾಣಿಯು ಸಾಕ್ಷಿಯನ್ನು ಕೊಡುವದು ಪ್ರತ್ಯಕ್ಷವಾಯಿತು. ಅವನು ಆದ್ಯಂತ ವೃತ್ತಾಂತ ವನ್ನು ಒಂದು ಅಕ್ಷರವನ್ನಾದರೂ ಲೋಪಮಾಡಡೆ ವಿಸ್ತಾರವಾಗಿ ಹೇಳುತ್ತಾ ನಿಂತಿರುವುದು ನೋಡಿ ವಾಗ್ದೇವಿಯ ಭವಿಷ್ಯವೇ ಹೋಯಿತೆಂದು ತಿಪ್ಪಾ ಶಾಸ್ತ್ರಿಯು ಖಚಿತವಾಗಿ ಶಾನೆ ಅನುತಾಪ ಪಡುವ ಸಂಭವ ಒದಗಿತು. ಹತ್ತು ದಿವಸಗಳ ಪರಿಯಂತರ ಅವನು ಸಾಕ್ಷಿಯನ್ನು ನುಡಿದನು. ಅದನ್ನು ಕೇಳುವುದಕ್ಕೆ ಹಿರಿ ಮತ್ತು ಕಿರಿ ದಿವಾನರು ಸದರ ಅದಾಲತ ನ್ಯಾಯಸ್ಥಾನ ದಲ್ಲಿ ಕುಳಿತು ಕೊಂಡಿದ್ದರು. ಅವನ ಸಾಕ್ಷಿಯು ಅಂತ್ಯವಾದ ಬಳಿಕ ವಾದಿ ಪ್ರತಿವಾದಿಗಳ ಕಡೆ ವಕೀಲರ ಚರ್ಚೆಗಳನ್ನು ಮೂರು ದಿವಸಗಳ ವರೆಗೂ ನ್ಯಾಯಾಧಿಪತಿಗಳು ಸಮಾಧಾನ ಚಿತ್ತದಿಂದ ಅವಧರಿಸಿದರು. ಬಳಿಕ ವ್ಯಾಜ್ಯ ದ ಉಭಯ ಪಕ್ಷಕರ ಬಲಾಬಲಗಳನ್ನು ಲವಾಜಮೆಗಳಿಂದ ಹುಡುಕಿ ತೆಗೆದು ಜರಿ ನ್ಯಾಯಾಧಿಪತಿಯು ತೀರ್ಪು ಬರೆಯಲಿಕ್ಕೆ ಉಪಕ್ರಮಿಸಿದನು. ಅದನ್ನು ಸಂಪೂರ್ಣ ಮಾಡುವದಕ್ಕೆ ಅವನಿಗೆ ಮೂರು ವಾರಗಳು ತಗಲಿದವು. ವಿಚಕ್ಷಣನಾದ ಆ ನ್ಯಾಯಾಧಿಪತಿಯು ಬರೆದ. ತೀರ್ಪು ವ್ಯಾಜ್ಯದ ಸ್ಥಿತಿಗೆ ತಾಳಿ ಬೀಳುವದೆಂದು ಇತರ ನ್ಯಾಯಾಧಿಪತಿಗಳು ಒಡಂಬಟ್ಟು ರುಜು ಹಾಕಿದರು.

ಆ ತೀರ್ಪಿನ ಮುಖ್ಯ ತಾತ್ಪರ್ಯವು ಹ್ಯಾಗಿತ್ತೆಂದರೆ:-

ವಾಗ್ದೇವಿಯು ತನ್ನ ಗಂಡನ ಮತ್ತು ತಂದೆ ತಾಯಿಗಳ ಸಮೇತ ಕುಮುದಪುರದ ಮಠದಲ್ಲಿ ವೆಂಕಟಪತಿ ಆಚಾರ್ಯನ ಪರಿಮುಖ ತರಿಸಲ್ಪಟ್ಟು ಎಲ್ಲರ ತಿಳುವಳಿಕೆಯಿಂದಲೇ ಬಹಿರಂಗವಾಗಿ ಚಂಚಲನೇತ್ರರ ಸಂಗಡ ಇದ್ದು ಅವರಿಂದ ಗರ್ಭವಾಗಿ ಸೂರ್ಯನಾರಾಯಣನನ್ನು ಪಡೆದಳು. ಅಂಥಾ ಪಿಂಡವು ಸನ್ಯಾಸ ಮಠಕ್ಕೆ ಅಯೋಗ್ಯವಾಗಿರುವುದರಿಂದ ಚಂಚಲನೇತ್ರರು ಅವನಿಗೆ ಕೊಟ್ಟ ಆಶ್ರಮವು ಎಂದಿಗೂ ಸಿಂಧುವಾಗಕೂಡದು. ದ್ವಂದ್ಹ ಮಠದವರಾದ ನೃಸಿಂಹಪುರಾಧೀಶರು ಕೊಟ್ಟ ಹೊಸ ಆಶ್ರಮವು ನ್ಯಾಯ ವಾದದ್ದು. ಹಾಗೆ ಆಶ್ರಮ ಕೊಡಲಿಕ್ಕೆ ಅವರಿಗೆ ಅಧಿಕಾರವಿರುವದು. ಆದ ಕಾರಣ ಸೂರ್ಯನಾರಾಯಣನಿಂದ ಕುಮುದಪುರದ ಮಠವನ್ನು ಅದರ ವಿಶಿಷ್ಟಸ್ಥಿರ ಚರ ಸೊತ್ತುಗಳ ಸಮೇತ ಸ್ವಾಧೀನ ಪಡಕೊಂಡು, ಆದಿನಾರಾ ಯಣ ದೇವಸ್ಥಾನದಲ್ಲಿ ಕಟ್ಟಳೆಗನುಸರಿಸಿ, ದಿಗ್ವಿಜಯರಾಧನೆಯನ್ನು ನಡೆ ಸುವದಕ್ಕೆ ನವೀನ ಆಶ್ರಮ ಹೊಂದಿದವನೇ ಅರ್ಹನಾಗಿರುತ್ತಾನೆ.”

ಈ ತೀರ್ಪು ಆಗುವ ಮೊದಲೇ ಸೂರ್ಯನಾರಾಯಣನ ದಿಗ್ವಿಜಯವು ಮುಗಿದಿತ್ತು. ಇನ್ನು ಮಠದಲ್ಲಿ ಉಳುಕೊಳ್ಳು ವದು ಸರಿಯಲ್ಲವೆಂದು ವಾಗ್ದೇ ವಿಯೂ ಶೃಂಗಾರಿಯೂ ಸೂರ್ಯನಾರಾಯಣನನ್ನು ಕರಕೊಂಡು ತಿಪ್ಪಾ ಶಾಸ್ತ್ರಿಯ ಯಜಮಾನಿಕೆಯಲ್ಲಿ ಕಳ್ಳರಂತೆ ಮಠದಲ್ಲಿದ್ದ ಒಡವೆಗಳನೆಲ್ಲಾ ಬಾಚಿಕೊಂಡು ಪಲಾಯನ ಮಾಡಿದರು. ನ್ಯಾಯವಾದ ಉತ್ತರಾಧಿಕಾರಿ ಯು ಚಂಚಲನೇತ್ರರ ಮಠಪ್ರವೇಶವನ್ನು ಮಾಡಿದನು. ಆದರೆ ಮಠವೆಲ್ಲಾ ಬೋಳಾಗಿತ್ತು. ಒಂದು ಕಾಸಿನ ಕಡ್ಡಿಯೂ ಅವನಿಗೆ ದೊರಕಲಿಲ್ಲ. ಸಾಲಿಗ ರಲ್ಲನೇಕರು ಅವನ ಮೇಲೆ ದಾವೆಗಳನ್ನು ತಂದರು. ಪರಂತು ಸೂರ್ಯನಾ ರಾಯಣನು ಅನಾವ್ರಯ ಮಾಡಲಿಕ್ಕೆ ಪಡಕೊಂಡ ಹಣಕ್ಕೆ ನ್ಯಾಯವಾದ ಮಠಾಧಿಪತಿಯು ಹೊಣೆಯಲ್ಲವೆಂದು ಅದಾಲತಿನಲ್ಲಿ ಫೈಸಲಾಗಿ ಸಾಲಗಾರರ ಬಾಯಿಗೆ ಮೃತ್ರಿಕೆ ಆಯಿತು. ಧನಶೋಕದಿಂದ ಸಾಲಗಾರರು ಸಂತಾಪ ಪಟ್ಟರು. ಆದರೆ ಏನು ಮಾಡೋಣ!
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉರಿಗಾಳಿ
Next post ಅರ್ಥವಿಲ್ಲದ್ದು

ಸಣ್ಣ ಕತೆ

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…