ಅಗೋ ಬಂಗಾರದ ಮೂಡಲದಿಂದ ಬೀಸಿತು ಉರಿಗಾಳಿ
ಏಳ್ಮಡಿ ಮಧ್ಯಾಹ್ನದ ಉಸಿರಿಂದ ನನಾತ್ಮಕೆ ದಾಳಿ.
ಯಕ್ಷರ ಪಕ್ಷವ ತಾಳಿ ಓಡುವೀ ಪಶು ನಾಗಾಲಾಗಿ
ಹೊತ್ತಿದೆ ಮಾನಸ, ಹೊತ್ತಿದೆ ದೇಹ, ಎದೆ ಮೂರ್ಛಿತವಾಗಿ
ಮಧ್ಯಾಹ್ನದ ಬಲಶಕ್ತಿಯ ತಂದೆ ಉರಿಯೋ ನಿರ್ಭಾಧಾ
ಎಲ್ಲಿದೆ ಬೆಳಗಿನ ತಲ್ಲೀನತೆ ಪ್ರಕೃತಿಯ ಝುಳುಝುಳುನಾದಾ
ಎಲ್ಲಿದೆ ಬೆಳುದಿಂಗಳ ತಿಳಿನೀಲಿಯ ಲೋಕಾತೀತ ಸುರೆ
ಏತಕೆ ಈ ಮೈ-ಮನದ ಪ್ರಫುಲ್ಲತೆ ಹೃದಯವೆ ನರಳುತಿರೆ ?
ಪ್ರಾಣದ ರಕ್ತ ಜ್ವಾಲೆಯು ಮತ್ತೀ ಮನಸಿನ ಬಂಗಾರ
ಸ್ವರ್ಗವು ಝಗಝಗ ಈ ಭೂ ಧಗಧಗ ಇದೆ ದೀಪ್ತಾಂಗಾರ
ಹೃದಯವ ಬಿಳಿದೋ ಆ ಗುಲಾಬಿಯೋ ಆಗಿರೆ ನಿಃಸತ್ತ್ವ
ಹೋಗೆಲೆ ಉರಿಯೇ, ಮೌನದೊಳಿರುವೆ, ಬರಲಿ ಪ್ರೇಮತತ್ರ್ಯ
*****