ಗೋಕಾಕ್ ಚಳುವಳಿ ಸೂರ್ಯ ಅಸ್ತಂಗತನಾದ್ನಲ್ಲ

ಗೋಕಾಕ್ ಚಳುವಳಿ ಅಂತ ಒಂದು ದೊಡ್ಡ ಗದ್ದಲವೆ ನೆಡೀತು ೨೫ ವರ್ಷದ ಹಿಂದೆ ನೆಪ್ಪದೇನ್ರಿ? ಆಗಿನ ಜಮಾನ್ದಾಗೆ ಬೆಂಗಳೂರ್ನಾಗೆ ಎಲ್ಲಿ ನೋಡಿದ್ರೂ ತಮಿಳರ ಸ್ಲಮ್ಮು ಇಸಮ್ಮುಗಳೇ ತುಂಬ್ಕೊಂಡಿದ್ವು. ಬೆಂಗಳೂರ್ನಾಗೆ ಕಾಲಿಕ್ಕಿದ ತಕ್ಷಣ ಕೇಳ್ತಿದ್ದೇ ‘ಎಂಗೆ ಫೋರುಂಗೆ?| ‘ಹೋಟೆಲ್ ರೂಮು ವೇಣುಮಾ?’ ಲಾಡ್ಜಿಂಗ್ ಗೆ ಕಾಲಿಟ್ಟರೆ ‘ಪೇರ್ ಎನ್ನ?’ ಅಂತ ಪೇಡುತ್ತಿದ್ದರು. ಇವರೆಲ್ಲಾ ತಮಿಳರು ಅಂತೇನು ಭಾವಿಸಬ್ಯಾಡ್ರಿ. ಕ್ಯಾಪಿಟಲ್ಗೆ ಬರುವ ತಮಿಳರಿಗೆ ತೊಂದರೆ ಆಗಬಾರ್ದಲ್ಲ ಅಂತ ನಮ್ಮೋವೇ ತಮಿಳು ಕಲತ್ಕೊಂಬಿಟ್ಟಿದ್ರು! ಯಾವ ಫ್ಯಾಕ್ಟರಿ, ಫರ್ಮ್ ಸ್ಟೋರ್ಸ್ ಲಾಡ್ಜಿಂಗ್ ಎಲ್ಲಿ ನೋಡಿನ್ನೂ ತಮಿಳರ್ದೇ ಯಾಪಾರ ಯವ್ಯಾರ ರಾಜ್ಯಭಾರ. ಜೊತೆಗೆ ತೆಲುಗರು ಮಲೆಯಾಳಿಗಳು ಬ್ಯಾರೆ ವಲಸೆ ಬರೋಕೆ ಶುರು ಹಚ್ಕಂಡಿದ್ಯು. ಎಲ್ಲಿ ನೋಡು ತಮಿಳು ಶಾಲೆಗಳು ಸ್ಕೂಲು ಬೋರ್ಡ ಬ್ಯಾನರ್ಸು ಯಲಕ್ಷನ್ನಾಗೆ ನಿಂತು ಬರೋವಷ್ಟು ಮೆಜಾರ್ಟಿನಾಗಿದ್ದರು. ತಮಿಳು ಸಿನಿಮಾ ಕಾರ್ಮಿಕರದ್ದೇ ಹಾವಳಿ. ಕನ್ನಡ್ಣದೋರ್ಗೆ ಥೇಟರು ಸಿಗೋದೇ ತ್ರಾಸು. ಸಿಕ್ಕರೂ ತಮಿಳು ತೆಲುಗು ಹಿಂದಿಗರ ಕಾಂಪಿಟೇಸನ್ನಾಗೆ ಕನ್ನಡ ಸಿನಿಮಾ ಓಡ್ಡೆ ಕಾಲು ಎತಗಕೊಂಡಿದ್ದೇ ಹೆಚ್ಚು. ರಾಜಕುಮಾರ ಸಿನಿಮಾ ಬಿಟ್ಟರೆ ಬೇರೆ ನಟರ ಚಿತ್ರಗಳು ದುಡ್ಡು ಮಾಡೋ ಗ್ಯಾರಂಟಿನೆ ಇರಲಿಲ್ಲ. ೧೯೮೦ರ ದಶಕದಲ್ಲಿ ಸಿನಿಮಾಗಳ ಮಾತಂಗಿಲ್ಲ ಕನ್ನಡನಾಡೇ ತಮಿಳುಮಯವಾಗಿ ಬಿಡುವಂತ ಅಧ್ವಾನ ಸ್ಥಿತಿ. ರೋಸಿ ಹೋದ ಕನ್ನಡ ಚಳುವಳಿಗಾರರು ಸಾಹಿತಿಗಳು ಕಲಾವಿದರು ಆಗ್ಲೆ ಗೋಕಾಕ್ ಚಳುವಳಿ ಜಾರಿಗೆ ಬರ್ಲೆಂದು ೧೯೮೨ ರಂದು ಹೋರಾಟಕ್ಕಿಳಿದರು. ಆಗ್ಲೂವೆ ಗ್ಯಾನಪೀಠಿ ಅನಂತು ಹಾಡಿದ್ದು ಸೋಲೋ ಸಾಂಗೇ. ಸಾಹಿತಿ ಕಲಾವಿದರದ್ದು ದೊಡ್ಡ ಗುಂಪಾತು. ಆದ್ರೆ ದೊಡ್ಡ ಮನಸ್ಸೆಬೋದು ಒಬ್ಬರಿಗೂ ಇರ್ನಿಲ್ಲ. ಚಂಪಾ ಏರಿಗೆಳೆದ್ರೆ, ಪಾಪು ನೀರಿಗೆಳೀತು ಚಿದಾನಂದ ಮೂರ್ತಿ ಹಂಪಿ ಹೊಳಿಗೆಳದ್ರೆ ಶೇಷಗಿರಿರಾವ್ ಕಬ್ಬನ್ ಪಾರ್ಕ್ ಗೆ ಎಳೆಯೋರು. ರಂ.ಶ್ರೀ. ಮುಗಳಿ ಗೊರೊರು ಸಿದ್ಧಯ್ಯ ಪುರಾಣಿಕ, ಪಿ. ಲಂಕೇಶ್, ಜಿ.ಎಸ್.ಎಸ್. ಹುಬ್ಳೀಕರ್, ಎ.ಎಸ್. ಮೂರ್ತಿ, ಜಿ. ರಾಮಕೃಷ್ಣ ಮುಂತಾದೋರು ಧರಣಿ ಕುಂತರು. ಆಗಿದ್ದ ಸಿ.ಎಂ. ಗುಂಡುರಾಯ ಅಲ್ಲಾಡಲಿಲ್ಲ ಸರ್ಕಾರಿ ಎಂಜಲು ನೆಕ್ಕೋ ಸಾಯಿತ್ಗುಳು ಆಗ್ಲೂ ಇದ್ದರು. ಹಿಂಗಾಗಿ ಸಾಯಿತಗಳ ಮಧ್ಯೆ ಜಟಾಪಟಿ ಶುರುವಾಗಿ ಗೋಕಾಕ್ ಚಳುವಳಿ ಹಳ್ಳ ಹಿಡಿಯೋ ಸ್ಥಿತಿನಾಗಿದ್ದಾಗ ನಮ್ಮ ವಯೋವೃದ್ಧ ಸಾಯಿತಿಗಳು ಸಿನಿಮಾದೋರ ಹೆಲ್ಪು ಕೇಳಿದರು.

ಡಾ.ರಾಜಕುಮಾರ್ ಯಾವಾಗ ತಮ್ಮ ಸಿನಿಮಾ ಮಂದಿಯಾ ಕಲೆ ಹಾಕ್ಕೊಂಡು ಸಾಯಿತಿಗಳ ಜೊತೆ ಸೇರ್ಕಂಡು ನಾಡಿನ ತುಂಬಾ ಟೂರ್ ಹೊಂಟ್ರೋ, ಕನ್ನಡ ಮಂದಿಗೆ ಗ್ಯಾನೋದಯವಾತು. ಲಕ್ಷಾಂತರ ಮಂದಿ ಬೀದಿಗಿಳಿದರು ಬಡಿದಾಡ್ಲಿಕತ್ತಿದರು. ಹೆಣಗಳು ಬಿದ್ಯು ದುರ್ಗದಾಗೆ. ಆಗ ಗುಂಡು ಕಲ್ಲಿನಂತ “ಗುಂ” ಗಡಗಡ ನಡುಗಿ ಹೋತು. ಗೋಕಾಕ್ ಚಳುವಳಿ ಜಾರಿಗೆ ಬಂತ್ರಪ್ಪ. ಇನ್ನೇನು ಡಾ. ರಾಜ್ ಸಿ.ಎಂ. ಆಗೇಬಿಟ್ಟರು ಅಂತ ಕನ್ನಡ ಮಂದಿಗೆ ಖುಷಿಯಾದ್ರೆ ರಾಜಕಾರಣಿಗಳಿಗೆ ಹೊಟ್ಟೆ ಬ್ಯಾನೆ ಬಂತ್ರಪ್ಪ. ರಾಜಕುಮಾರು ಖಾದಿನ ಮೊಸಿ ಸತ್ಗೆ ನೋಡ್ದೆ ಬಣ್ಣ ಬಳ್ಕೊಂಡು ತಮ್ಮ ಪಾಡಿಗೆ ತಾವು ಸೂಟಿಂಗ್ ಗೆ ಹೊಂಟೋದ್ರು. ಗೋಕಾಕ್ ಚಳುವಳಿ ತ್ಯಾಷ್ ಮಾಡ್ಕೊಂಡೋರು ರಾಜಕಾರಣಿಗಳು ಅಂಡ್ ಸಾಯಿತಿಗಳೇ ಕಣ್ರಿ. ಅದೆಂಗಾರ ಇರ್ಲಿ ತಮಿಳರ ದರ್ಬಾರು ದಫನ್ ಆತು. ಕಾರ್ಖಾನೆದಾಗೆ ಕನ್ನಡಿಗರಿಗೆ ಉದ್ಯೋಗ ಸಿಗಂಗಾತು. ಕನ್ನಡಿಗರಿಗೆ ಬೆಲೆ ಬಂತು. ಹಂಗೆ ಕನ್ನಡ ಸಿನಿಮಾಗಳ ಯುವಾರಾನೂ ಕುದುರ್ಕಂತು. ಇದೆಲ್ಲಾ ಆಗಿ ೨೫ ವರ್ಷ ಆದ ದಿನವೇ ಗೋಕಾಕ್ ಚಳುವಳಿ ಶೂರನ, ಬಾಳು ಮುಗಿಸಿದ ವಿಧಿ ಭಾಳ ಕ್ರೂರ ಐತ್ರಿ. ಈಗ ಬೆಂಗಳೂರು ಮತ್ತು ಕನ್ನಡಿಗನ ಪರಿಸ್ಥಿತಿ ಹೆಂಗೈತೇಳಿ? ಆಗ ಬೆಂಗಳೊದ್ದಾಗೆ ಇದ್ದದ್ದು ಬರಿ ‘ಎನ್ನಡಾ?’ ಈಗ ‘ಎಕ್ಕಡ’? ಎವುಡೆಗಳ ಹಾವಳಿನೊ ಸೇರ್ಕಂಡು ಕನ್ನಡಾಂವಾ ನಾವು ಎಲ್ಲೈತೆ ಅಂತ ಹುಡ್ಕಂಗಾಗೇತಿ. ಕಾವೇರಿ ವಾಟರ್ ಬಿಡಲ್ಲ ಅಂತಾರೆ ಕೊಂಗಾಟಿಗಳು ಕ್ಕಷ್ಣ ನೀರಿಗೆ ತೆಲುಗರ ತಕರಾರು. ಯಾವ ಹೋಟ್ಲುದಾಗೂ ಹಾಸ್ಪಿಟಲ್ತಾಗೂ ಮಲೆಯಾಳಿ ಹುಡುಗ ಹುಡ್ಗೀರ್ದೇ ದರ್ಬರು. ಕಂಪ್ಯೂಟರ್ ಬಂತು ಹಂಗೆ ಜಾಗತೀಕರಣ ಬಂತ ಅಂದಮ್ಯಾಗೆ ಇಂಗ್ಲಿಷ್ ಬ್ಯಾಡ ಅಂದ್ರೆ ಹೆಂಗೆ? ಅದ್ಕೆ, ನಮ್ಮ ಗ್ಯಾನ ಪೀಠಿಗಳೇ ಇಂಗಿಷೆನ್ನೂ ಕಲೀರಿ ಕನ್ನಡ ಲೆಟರ್ನಾ ಫಸ್ಟ್ ಕಲೀರಿ ಅಂತ ಫರಮಾನು ಹೊಂಡಿಸ್ಯಾರೆ. ಅಪ್ಪ ಅಮ್ಮ ಅತ್ತೆ ಮಾವ ಪದಗಳೇ ಮಾಯವಾಗಿ ಮಮ್ಮಿ ಢ್ಯಾಡಿ ಅಂಕಲ್ ಆಂಟಿ ಪದಗಳೇ ಮಕ್ಕಳು ಮುದುಕರಿಗೇ ಪ್ರಿಯವಾಗಿ ಬಿಟ್ಟಾವೆ. ಇಂಗ್ಲೀಸ್ ಕಾನ್ವೆಂಟ್ಗಳ ಸಂಖ್ಯೆ ಡಬ್ಟಲ್ ಆಗೇತಿ. ಹೆಣ್ಣುಮಕ್ಳು ಲಂಗದಾವಣಿ ಮತ್ತು ಟೈಟ್ ಪ್ಯಾಂಟು ಟೀ-ಶರ್ಟಿಗೆ ಇಳಿದಾವೆ. ಎಲ್ಲೆಂದರಲ್ಲಿ ಫಿಜಾ ತಿಂತಾ ಐಸ್ ಕ್ಯಾಂಡಿ ಚೀಪ್ತಾ, ‘ಮೋಸ್ಟ್ ಪ್ರಾಬಬಲಿ ಟೆನ್ಸ್ ಮಿನೀಟ್ಸ್ ನಲ್ಲಿ ಆಫೀಸಲ್ಲಿ ಇರ್ತೀನಿ’ ಅನ್ನೋವಷ್ಟು ಪಸಂದಾಗಿ ಕನ್ನಡ ಕಲಿತಾವೆ. ಕನ್ನಡ ಸಾಯಿತಿಗಳೆಲ್ಲಾ ನರಿ ನಾಯಿ ಚೇಳು ಹಾವು ಮಂಡರಗಪ್ಪೆ ಟೈಪ್ ಗೆಟಪ್ಪೇ ಚೇಂಚ್ ಮಾಡ್ಕಂಡು ಬಡಿದಾಡ್ತಿವೆ. ಬೆಳಗಾವಿ ನಮ್ದು ಅಂತಾರೆ ಮರಾಠೇರು, ಕಾರವಾರ ಕೊಡಾಕಿಲ್ಲ ಅಂತಾರೆ ಕೇರಳದೋವು. ಬಳ್ಳಾರಿ ನಮಗೇ ಕೊಡ್ರಿ ಅನ್ಲಿಕತ್ತಿವೆ ತೆಲುಗು ಧಡಿಯಾಗಳು. ಬೆಂಗಳೂರ್ನ ಎಂಗಳ್ಕು ಕೂಡಂಗೋ ನಲ್ಲ ಪಡ್ರಂಗೋ ಅಂತ ತಮಿಳು ಧಾಂಡಿಗರ ಬೊಂಬ್ಡಿ. ರಿಮೇಕ್ ಸಿನಿಮಾ ಮಾಡ್ತಾ ಕನ್ನಡ ಸಂಸ್ಕೃತಿನೇ ಹಾಳು ಮಾಡ್ಲಿಕತ್ತಾರೆ ಸಿನಿಮಾದೋರು. ಟಿವಿನೋರ್ದು ಚಳುವಳಿ ಮಾಡಿ ಕನ್ನಡ ಉಳಿಸೋ ಪರಿಸ್ಥಿತಿ ಬಂದೇತಿ. ಸಾಯಿತಿಗುಳ್ನಾವ ಒಗ್ಗಟ್ಟಲ್ಲ. ಸಿನಿಮಾದಾವ್ಕೆ ಒಬ್ಬರ ಮಾರಿಕಂಡ್ರೆ ಒಬ್ಬರ್ಗೆ ಆಗಾಕಿಲ್ಲ. ರಾಜಕಾರಣಿಗುಳ್ಗೆ ಬೇಕಿರೋದು ಓಟು ಸೂಟುಕೇಸು. ಕನ್ನಡದ ಕೇಸ್ ತಗಂಡು ಅವರೇನ್ ಮಾಡ್ಯಾರು? ೯೦% ಕನ್ನಡಿಗರಿಗೆ ಕನ್ನಡ ಬೇಕಿಲ್ಲ ದಂಗಾಗೇತ್ರಿ. ಗೋಕಾಕ್ ಚಳುವಳಿ ಸೂರ್ಯನೇ ಮುಳುಗೋದ್ನಲ್ಲಪ್ಪ. ಹಿಂಗಾದ್ರೆ ಕ್ಯಾಟ್ ಬಾಲಕ್ಕೆ ಬೆಲ್ ಕಟ್ಟೋರು ಯಾರ್ರಿ?
*****
(೦೪-೦೬-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸ್ಸು
Next post ನಿಗೂಢ ಘಳಿಗೆ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys