ಕ್ರೂರಿಯಾಗದಿರಲಿ!

ಪ್ರಿಯ ಸಖಿ,
ಬೆಂಗಳೂರಿಗೆ ಹೊರಟಿದ್ದ ಬಸ್ಸು ಕುಣಿಗಲ್ನಲ್ಲಿ ನಿಂತು ಇಳಿಸುವವರನ್ನು ಇಳಿಸಿ ಹತ್ತಿಸಿಕೊಳ್ಳುವವರನ್ನು ಹತ್ತಿಸಿಕೊಂಡು ತಕ್ಷಣ ಹೊರಟಿದೆ. ಇದರ ಅರಿವಿಲ್ಲವ ಕಡಲೇ ಕಾಯಿ ಮಾರುವ ಹುಡುಗನೂ ಬಸ್ಸು ಹತ್ತಿ ವ್ಯಾಪಾರಕ್ಕಿಳಿದವನು ಬಸ್ಸು ಹೊರಟು ಬಿಟ್ಟಿದ್ದನ್ನು ಗಮನಿಸಿ ಗಾಬರಿಯಾಗಿ ಬಸ್ಸು ನಿಲ್ಲಿಸುವಂತೆ ಕೂಗಿಕೊಳ್ಳುತ್ತಾನೆ. ಇದನ್ನು ಕೇಳಿದ ಡ್ರೈವರ್ ಅಟ್ಟಹಾಸದ ನಗೆ ನಕ್ಕು ಬಸ್ಸೊಳಗೆ ಹತ್ತಕ್ಕೆ ಯಾವನ್ಲಾ ನಿಂಗ್ ಹೇಳ್ದವ್ನು? ಬಾ, ಬಾ ಬೆಂಗಳೂರ್ನಾಗೇ ನಿನ್ನ ಇನ್ನ ಇಳ್ಸಾದು ಎನ್ನುತ್ತಾನೆ. ಇದನ್ನು ಕೇಳಿದ ಹುಡುಗ ಮತ್ತಷ್ಟು ಗಾಬರಿಯಾಗಿ ಇಲ್ಲಣ್ಣ ಗೊತ್ತಿಲ್ದೇ ಹತ್ಬುಟ್ಟೆ ಇಳುದ್ಬುಡ್ತೀನಿ, ನಿಲ್ಸಣ್ಣ, ನಿನ್ನ ದಮ್ಮಯ್ಯ ಎಂದು ಬೇಡಿಕೊಂಡಷ್ಟೂ ಡ್ರೈವರ್ನ ಅಟ್ಟಹಾಸ ಏರುತ್ತದೆ.

ಬಸ್ಸಿನಲ್ಲಿರುವ ಜನರ ಯೋಚನೆಗಳೂ ಹತ್ತು ಹಲವು ದಿಕ್ಕಿನಲ್ಲಿ ಸಾಗುತ್ತವೆ. ಬಸ್ಸು ಹೊರಡೋದು ಗೊತ್ತಿದ್ದೂ ಯಾಕ್ ಹತ್ಬೇಕಿತ್ತು. ಅನುಭವಿಸಲಿ ಅಂತ ಒಬ್ಬನೆಂದು ಕೊಂಡರೆ ಇನ್ನೊಬ್ಬ ಪಾಪ ಅವನು ಇವತ್ತು ದುಡಿದ ದುಡ್ಡನ್ನೆಲ್ಲಾ ಮತ್ತೆ ವಾಪಸ್ಸು ಬರಲು ಟಿಕೇಟಿಗೇ ಹಾಕಬೇಕೇನೋ ಎಂದುಕೊಳ್ಳುತ್ತಾನೆ. ತಾಯಿಯೊಬ್ಬಳು ಪಾಪ ಹುಡುಗ ಏನೋ ಗೊತ್ತಿಲ್ದೆ ಹತ್ತಿದೆ, ಇಳಿಸಿಬಿಡಬಾರ್ದಾ. ಈ ಡ್ರೈವರ್ ಎಂತ ಕಟುಕ ಎಂದು ಬೈಯ್ದುಕೊಳ್ಳುತ್ತಾ ಆ ಹುಡುಗನಿಂದ ಎರಡು ರೂಪಾಯಿಯ ಕಡ್ಲೆಕಾಯಿ ತೆಗೆದುಕೊಳ್ಳುತ್ತಾಳೆ. ಮತ್ತೊಬ್ಬ ಸೂಕ್ಷ್ಮ ಮನಸ್ಸಿನವ ಡ್ರೈವರ್ನ ಕ್ರೂರ ಮುಖವನ್ನು ಕಂಡು ಅವನೊಂದಿಗೆ ಮಾತನಾಡಲಾಗದೇ ಕಂಡಕ್ಟರ್ ಬಳಿ ಪಾಪ ಅವನನ್ನು ಇಳಿಸಿ ತೊಂದರೆ ಕೊಡಬೇಡಿ ಎಂದು ಬೇಡಿಕೊಳ್ಳುತ್ತಾನೆ. ಡ್ರೈವರ್‍‍ಗೆ ಕಂಡಕ್ಟರ್ ತಿಳಿಸಿ ಹೇಳಿದರೂ ಬುದ್ಧಿ ಬರ್‍ಲಿ ಸುಮ್ನಿರು ಎನ್ನುತ್ತಾ ಅಸಡ್ಡೆ ಮಾಡುತ್ತಾನೆ.

ಡ್ರೈವರ್ ಯಾರ ಮಾತೂ ಕೇಳುವವನಲ್ಲ ಎಂದು ಅರಿವಾದ ಹುಡುಗ ಬಂದದ್ದನ್ನೆಲ್ಲಾ ಎದುರಿಸಲು ತಯಾರಾದವನಂತೆ ಮತ್ತೆ ಉತ್ಸಾಹದಿಂದ ಕಡ್ಲೆಕಾಯಿ ಮಾರಲು ಪ್ರಾರಂಭಿಸುತ್ತಾನೆ. ಅ ಹುಡುಗನ ಬಗ್ಗೆ ಕರುಣೆ ಮೂಡಿದ ಅನೇಕ ಪ್ರಯಾಣಿಕರು, ಕಡಲೇಕಾಯಿ ಖರೀದಿಸಿ ಧನ್ಯವಾದೆವು ಎಂದು ಸಮಾಧಾನದ ಉಸಿರೆಳೆಯುತ್ತಾರೆ. ಯಾವಾಗಲೋ ಮನಸ್ಸು ಬಂದೆಡೆ ಆ ಡ್ರೈವರ್ ಬಸ್ಸು ನಿಲ್ಲಿಸಿ ಮಹಾನ್ ಉಪಕಾರ ಮಾಡಿದವನಂತೆ ಮುಖ ಮಾಡಿ ಹುಂ, ಇಳಿ ಎನ್ನುತ್ತಾನೆ. ಹುಡುಗ ಡ್ರೈವರ್ನೆಡೆಗೆ ತಣ್ಣನೆಯ ನೋಟವೊಂದನ್ನು ಬೀರಿ ಸರಸರನೆ ಬಸ್ಸಿನಿಂದಿಳಿಯುತ್ತಾನೆ.

ಸಖಿ, ಡ್ರೈವರ್‍ನ ಈ ಕ್ರೌರ್ಯ, ಬಡ ಹುಡುಗನ ಅಸಹಾಯಕತೆ ಮತ್ತೆ ಮತ್ತೆ ನೆನಪಾಗಿ ಕಾಡುತ್ತವೆ. ಡ್ರೈವರ್ ತನ್ನ ಕ್ರೌರ್ಯದಿಂದ ಪುಟ್ಟ ಹುಡುಗನ ಮನ ಕ್ಷಣಕ್ಕೆ ಭೀತಿಯನ್ನುಂಟು ಮಾಡಿದೆ. ಪಾಠ ಕಲಿಸಿದೆ ಎಂದು ಬೀಗಿದರೂ ಬಸ್ಸಿನಲ್ಲಿನ ಹೆಚ್ಚಿನ ಪ್ರಯಾಣಿಕರ ಕಣ್ಣಿನಲ್ಲಿ ಅವನು ವಿಲನ್ ಆದದ್ದು ಸುಳ್ಳಲ್ಲ. ಹಾಗೇ ತನ್ನ ಅಸಹಾಯಕತೆಯಲ್ಲೂ ಉತ್ಸಾಹದಿಂದಿದ್ದ, ಬದುಕನ್ನು ಬಂದಂತೆ ಧೈರ್ಯವಿರುವ ಪುಟ್ಟ ಹುಡುಗ ಅವನಿಗರಿವಿಲ್ಲದೇ ಹೀರೋ ಆಗಿ ಬಿಡುತ್ತಾನೆ. ಡ್ರೈವರ್‍ನ ಕ್ರೌರ್ಯ ಆ ಮುಗ್ದ ಹೃದಯದಲ್ಲಿ ದ್ವೇಷದ ಬೀಜವನ್ನು ಬಿತ್ತದಿರಲಿ, ಸಮಾಜವನ್ನೇ ಪ್ರತೀಕಾರದ ತಾಣವಾಗಿಸಿಕೊಂಡು ಕ್ರೂರಿಯಾಗದಿರಲಿ ಎಂಬುದು ನಮ್ಮ ಪ್ರಾರ್ಥನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿರುದ್ಧ ಸಾಲುಗಳು
Next post ಸೂರ್ಯ – ಚಂದ್ರ

ಸಣ್ಣ ಕತೆ

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…