ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

(ಗೋಲಕೊಂಡ ಬಾದಶಹಿ ಫರ್ಮಾನರ ಸೀಲನ್ನು ಇಲ್ಲಿ ಬಿಚ್ಚಿರುವುದರಿಂದ ಇದಕ್ಕೆ ಸಿಕಾಕೋಲ್ ಅಥವಾ ಚಿಕಾಕೋಲ ಎಂಬ ಹೆಸರು ಬಂದಿದೆಯೆಂದು ಇಲ್ಲಿರುವವರು ಹೇಳುವರಾಗಲಿ ಇದು ಸತ್ಯವಲ್ಲ. ಈ ಪಟ್ಟಣ ಅತ್ಯಂತ ಪ್ರಾಚೀನವಾದದ್ದು. ಇದರ ಹೆಸರು ಶ್ರೀಕಾಕುಳ, ಒಂದುಕಾಲಕ್ಕೆ ಇಲ್ಲಿ ಶ್ರೀಕಾಕುಳೇಶ್ವರನ ಕ್ಷೇತ್ರವಿತ್ತು. ಅದನ್ನು ಕೆಡವಿ ಷೇರ್ ಮಹಮ್ಮದ್ ದೊಡ್ಡ ಮಸೀದಿಯನ್ನು ಕಟ್ಟಿದ. ಸತ್ಯವಿದು.)

ಒಂದು ವರ್ಷದಲ್ಲಿ ಕಾರ್ತಿಕ ಶುಕ್ಲಪಕ್ಷದಶಮಿಯ ಸಾಯಂಕಾಲ ಇಬ್ಬರು ಬ್ರಾಹ್ಮಣರು, ಮುವ್ವತ್ತು ವರ್ಷದ ಪ್ರಾಯದವನೊಬ್ಬನು, ಇಪ್ಪತ್ತು ವರ್ಷದ ವಯಸ್ಸಿನವನೊಬ್ಬನು ಪೂರ್ವದಿಂದ ಪಟ್ಟಣದ ಸನಿಹಕ್ಕೆ ಬರುತ್ತಿದ್ದರು.

ನಾರಾಯಣ ಭಟ್ಟರ ಮುಖ ತುಂಬಾ ಸಂತೋಷದಿಂದ ಅರಳಿತ್ತು. “ಪುಲ್ಲಾ! ನಮ್ಮ ಊರಿಗೆ ಬಂದುಬಿಟ್ಟಿದ್ದೀವಿ. ಇಂತಹ ಊರು ಭೂಪ್ರಪಂಚದಲ್ಲಿಯೇ ಇರುವುದಿಲ್ಲ. ಕಾಳಿದಾಸನು ಅವಂತಿಯನ್ನು ಕುರಿತು ಹೇಳಿದ ಮಾತುಗಳು ಇದಕ್ಕೆ ವರ್ತಿಸುತ್ತಿವೆ. ಏನು ಹೊಳೆ! ಏನು ಊರು! ಏನು ಹಾಲು ಹಂಪಲ: ಇನ್ನು ಶ್ರೀಕಾಕುಳೇಶ್ವರನ ಕ್ಷೇತ್ರವನ್ನು ಎಂತಹ ಕ್ಷೇತ್ರವೆಂದು ಹೇಳಲಿ. ಅದೋ!”

ನಾರಾಯಣಭಟ್ಟ ನಿಶ್ಚೇಷ್ಟನಾಗಿ ನಿಂತು ಸ್ವಲ್ಪಸಮಯ ಮಾತನಾಡದೇ ಸುಮ್ಮನಿದ್ದ.

“ಏನು ಸ್ವಾಮಿ! ಏನು ಸ್ವಾಮಿ! “ಎಂದು ಪುಲ್ಲಮಭಟ್ಟ ಕೇಳಲು-

“ಏನು ಹೇಳಲಿ ಪುಲ್ಲಾ! ಆಲಯದ ಗೋಪುರ ಮಾಯವಾಗಿ ಹೋಗಿದೆಯಲ್ಲೋ!” ಎಂದು ನೆಲದಮೇಲೆ ಕುಸಿದುಬಿದ್ದ.

“ಗಿಡಗಳ ಮರೆಯಲ್ಲಿದೆಯೇನೋ ಸ್ವಾಮಿ!”

“ಯಾವ ಗಿಡಗಳು ಮರೆ ಮಾಡಬಲ್ಲವು ಪುಲ್ಲಾ! ಆಕಾಶಕ್ಕೆ ತಾಕುವ ಆ ಗೋಪುರವನ್ನು! ಮನ ನೊಂದುಬಿಟ್ಟಿದೆಯಲ್ಲೋ ಪುಲ್ಲಾ, ಈ ಪಟ್ಟಣಕ್ಕೂ ನಮಗೂ ಋಣ ತೀರಿಹೋಯಿತು. ಬಾ ಪುನಃ ಕಾಶೀಗೆ ಹೋಗೋಣ.”

“ಗೋಪುರಕ್ಕಾಗಿಯಾ ಇಲ್ಲಿಗೆ ಬಂದಿರುವುದು ಸ್ವಾಮೀ! ಎಡೆಬಿಡದ ಮಾರ್ಗಾಯಾಸದಿಂದ ಬಳಲಿ ಇಂದಿಗೆ ದೇಶವನ್ನು ಸೇರಿದ್ದೇವಲ್ಲವೆ? ಮತ್ತೆ ಕೊಡಲೆ ಕಾಶೀಗೆ ಹೊರಡಲು ಕಬ್ಬಿಣದ ಕಾಲುಗಳಲ್ಲವಲ್ಲವೇ? ಬನ್ನಿ. ನನ್ನ ಮಾತುಕೇಳಿ! ಗೋಪುರವೆನ್ನುವುದೇ ನಿಮಗೆ ಬೇಕಾಗಿದ್ದರೆ ನಮ್ಮ ಊರಿಗೆ ಬನ್ನಿ.”

“ಏ ಹುಚ್ಚಾ! ನಿಮ್ಮ ಊರಿನ ಗೋಪುರ ಯಾರಿಗೆ ಬೇಕೋ! ನಿನಗೆ ಅರ್ಥವಾಗುವುದಿಲ್ಲ. ಚಿಕ್ಕಂದಿನಲ್ಲಿ ಯಾವಾಗಲೂ ಆ ಗೋಪುರದ ಮೇಲೆಯೇ…”
“ಏಕೆ ಅಷ್ಟು ನೋವು. ನಮ್ಮ ಗೋಪುರ ಕಥಾವಿಶೇಷವಾಗಿದೆ.”

ಎದ್ದು, “ಶಿವನೇ, ಶಿವನೇ! ಎಲೇ ನಿಮ್ಮ ಊರಿನ ಗೋಪುರವನ್ನು ಕೂಡಾ ಆ ಮ್ಲೇಚ್ಛರು ಕೆಡವಿ ಬಿಟ್ಟುರುತ್ತಾರೆ!”
“ನಿಮಗೇನು ಉಪದ್ರವ ಬಂದಿದೆ. ಕೆಡವಿ ಬಿಟ್ಟಿದ್ದರೆ ಆ ಪಾಪ ಅವರಿಗೇ ಬಡಿಯುತ್ತದೆ. ಹಸಿವೆಯಾಗುತ್ತಿದೆ. ಶೀಘ್ರವೇ ಊರು ಸೇರಿ ಬಿಡೋಣ! ಎದ್ದು ನಡೆಯರಿ.”

“ಏನು ಊರು – ಸಾಯುವುದೇ ! ಹಸಿವೆಲ್ಲಾ ಹೋಗಿಬಿಟ್ಟಿದೆ ಕಣೋ! ”
ನಾರಾಯಣಭಟ್ಟರು ಎದ್ದು ಮೌನವಾಗಿ ಸ್ವಲ್ಪ ಹೊತ್ತು ನಡೆದರು. ಅಷ್ಟರಲ್ಲೇ ತಲೆಯೆತ್ತಿ ನೋಡಲು ಸಂಜೆಯ ಕತ್ತಲಲ್ಲಿ ತಿಳಿ ಬೆಳಕು ಮುಸುಕಿದ ಪಶ್ಚಿಮದ ಆಕಾಶವನ್ನು ತಾಕುವ ಎರಡು ಮಸೀದಿ ಸ್ತಂಭಗಳನ್ನು ದಿಟ್ಟಿಸುತ್ತಾ ‘ಕಾಕುಳೇಶ್ವರನ ಗುಡಿಯನ್ನು ಕೆಡವಿ ಮ್ಲೇಚ್ಛನು ಮಸೀದಿಯನ್ನು ಕಟ್ಟಿದ್ದಾನೆ’ ಎಂದುಕೊಂಡರು.

“ದೇವರೇಕೆ ಸುಮ್ಮನಿದ್ದಾನೆ ಸ್ವಾಮಿ?”

“ಆ ಮಾತೇ ಯಾವ ಶಾಸ್ತ್ರದಲ್ಲಿಯೂ ಕಾಣುವುದಲ್ಲವಲ್ಲೋ ಪುಲ್ಲಾ. ಮಸೀದಿ ಕಡೆಗೆ ಹೋಗೋಣ ಬಾ.”
“ಮಸೀದಿಯನ್ನು ಛತ್ರವೆಂದು ಭಾವಿಸಿದ್ದೀರೇನು? ಹೊತ್ತು ಮುಳುಗುವ ಮೊದಲೇ ಭೋಜನದ ಮಾತನ್ನು ಯೋಚಿಸದಿದ್ದರೆ ಉಪವಾಸ ಸಂಭವಿಸುತ್ತದೆ. ಅಂತಹಾ ಮಹಾ ಕ್ಷೇತ್ರವೇ ಹೋದನಂತರ ತಿಂಡಿ ಇಲ್ಲದಿದ್ದರೆ ಬರುವ ಕೊರತೆ ಏನಿದೆ?”

ಕಾಲಿಗೆ ಹೊಸ ಶಕ್ತಿ ಹುಟ್ಟಿ ಗುರುಗಳು, ಬೀಸುಗಾಲಿಡುತ್ತಾ ಶಿಷ್ಯನೂ, ಪೊದೆಗಳು, ಹುತ್ತಗಳು ದಾಟಿ ಮಸೀದಿನ ದ್ವಾರವನ್ನು ಸೇರಿದರು.

“ಎಷ್ಟು ಚೊಕ್ಕವಾಗಿ ಕಟ್ಟಿದ್ದಾನೆ ಸ್ವಾಮಿ, ಮಸೀದಿ.”
“ಅವನ ಶ್ರಾದ್ಧವನ್ನು ಕಟ್ಟಿದ್ದಾನೆ.”

ದಾಡೀ ಬೆಳಸಿದ ಐವತ್ತು ವರ್ಷದ ವಯಸ್ಸಿರುವ ಒಬ್ಬ ಮುಸಲ್ಮಾನನು ಗಾಂಜಾ ಸೇದುತ್ತಾ ಕುಳಿತಿರುವುದು ನೋಡಿ ನಾರಾಯಣಭಟ್ಟರು. “ಸಲಾಂ!” ಎನ್ನುತ್ತಾ ಹೀಗೆ ಕೇಳಿದರು “ಭಾಯೀ! ಇಲ್ಲಿಯೇ ಅಲ್ಲವೇ ಮೊದಲು ಶಿವಾಲಯವಿದ್ದದ್ದು.”

ಮುಸಲ್ಮಾನನು ಒಂದು ಕ್ಷಣ ಸುಮ್ಮನಿದ್ದು ಬಾಯಲ್ಲಿರುವ ಹೊಗೆಯನ್ನು ಮೇಲೆಬಿಟ್ಟು “ಹಾ! ಸೈತಾನ್ ಕಾ ಘರ್” ಎಂದು ಉತ್ತರ ಕೊಟ್ಟ.

“ಎಂಥಹಾ ಪಾಡು ಬಂದಿದೆಯಲ್ಲೋ ಈ ದೇವರಿಗೆ”

“ದೇವರಿಗೆ ಯಾವ ಪಾಡೂ ಇಲ್ಲ, ನಮ್ಮ ಸಾಪಾಟನ್ನು ಕುರಿತಾಗಿ ಯೋಚಿಸುವುದಿಲ್ಲವೇನು?”
“ಹುಡುಗರಿಗೆ ಹಸಿವು ಹೆಚ್ಚು ಸಾಹೇಬರೇ! ಈ ಊರಿನಲ್ಲಿ ಚೇಬ್ರೋಲಿನವರು ಇರಬೇಕು. ಇದ್ದಾರೆಯೇ? ಈ ಗುಡಿಯ ಸಮೀಪದಲ್ಲಿಯೇ ಅವರ ಬೀಡು ಇದ್ದಿತ್ತು. ಎಂದರೆ ಈಗ ನಿಮ್ಮ ಮಸೀದಿಯ ಹತ್ತಿರವೇ.”

ಮುಸಲ್ಮಾನನು “ಇಲ್ಲ” ವೆಂದ.

“ಅಯ್ಯೋ! ನಮ್ಮ ದೊಡ್ಡ ಮಾವ ರಾಮಾವಧಾನಿಯವರು, ಚಿಕ್ಕ ಮಾವ ಲಕ್ಷ್ಮಣಭಟ್ಟರು ದೇಶಾಂತರಗತರಾಗಿರುವರೇ? ದೇಹ ತ್ಯಾಗಮಾಡಿರುವರೇ”
ಮುಸಲ್ಮಾನನ ಕೈಯಿಂದಿ ಗಾಂಜಾ ನೆಲಕ್ಕೆ ಬಿದ್ದು ತುಂಡಾಗಿ ಬೆಂಕಿ ನಾಲ್ಕುಕಡೆಗೂ ಚೆದುರಿತು. “ನಾರಾಯಣಾ” ಎಂದು ಖೇದದಿಂದ ಕೂಗಿದ.
“ಅಯ್ಯೋ! ನೀನಾ ಮಾಮಾ?”
*****
ಕನ್ನಡಕ್ಕೆ: ಶ್ರೀಮತಿ ರಂಗನಾಥ ಲಕ್ಷ್ಮೀಕುಮಾರಿ

ಗುರಜಾಡ ವೆಂಕಟ ಅಪ್ಪಾರಾವ್
Latest posts by ಗುರಜಾಡ ವೆಂಕಟ ಅಪ್ಪಾರಾವ್ (see all)