ಕಾಮಣ್ಣ ಭೀಮಣ್ಣ

ಕಾಮಣ್ಣ ಭೀಮಣ್ಣ

Kamanna Bheemannaಕುರಿಕಾಯುವ ಜೊತೆಗಾರರಾದ ಕಾಮಣ್ಣ ಭೀಮಣ್ಣ ಅವರಿಬ್ಬರು ತಮ್ಮ ಕುರಿ ಹಿಂಡಿನೊಡನೆ ಅಡವಿಯಲ್ಲಿಯೇ ಅಡ್ಡಾಡುವರು; ಅಡವಿಯಲ್ಲಿಯೇ ವಾಸಿಸುವರು. ತಮ್ಮಷ್ಟು ಜಾಣರಾದವರು ಇನ್ನಾರೂ ಇಲ್ಲವೆಂದೇ ಅವರು ಬಗೆದಿದ್ದರು. ಅಂಥ ಜಾಣರಾಗಿದ್ದರೂ ಅವರಿಬ್ಬರೂ ಬಗೆಹರಿಯಲಾರದ ಒಂದು ಸಮಸ್ಯೆಯಿತ್ತು ಅದೇನೆಂದರೆ – ಹೋಳಿಗೆಯಲ್ಲಿ ಹೂರಣವನ್ನು ಯಾವದಾರಿಯಲ್ಲಿ ಹಾಕುತ್ತಾರೆ ?

ಅವರಿಬ್ಬರು ಕುರಿ ಹಿಂಡು ಮುಂದೆ ಮಾಡಿಕೊಂಡು ಸಾಗಿದಾಗ, ಒಂದು ದೊಡ್ಡ ಹೊಲದಲ್ಲಿ ಹಾಯ್ದು ಹೋಗಬೇಕಾಯಿತು. ಅಲ್ಲಿ ಏಳು ಗಳೆ ನಿಂತಿದ್ದವು; ಮತ್ತು ಹತ್ತಿರದಲ್ಲಿಯೇ ಹದಿನಾಲ್ಕು ಎತ್ತುಗಳು ಮೇಯುತ್ತಿದ್ದವು. ಗಳೆ ಹಾಗೂ ಎತ್ತುಗಳನ್ನು ಕಂಡು ಕಾಮಣ್ಣನಲ್ಲಿ ಗಣಿತದ ರೀತಿ ಸುಳಿದು ಬಂತು – “ಏ ಭೀಮಾ, ಇಲ್ಲಿ ನೋಡು. ಬೆಸ ಗಳೆ, ಸರಿ ಎತ್ತುಗಳಿವೆ. ಬೆಸ ಗಳೇಗಳಿಗೆ ಸರಿ ಎತ್ತುಗಳನ್ನು ಹೇಗೆ ಹೂಡುವರೋ ನೋಡಿಯೇ ಹೋಗೋಣ.”

ಅವರು ಮಂಡಿಗೆಯನ್ನೇನೊ ಹಾಗೆ ಮಾಡಿದರು, ಆದರೆ ಮುಖತಗ್ಗಿಸಿ ಸಾಗಿದ ಕುರಿಹಿಂಡು ಮುಂದಿನ ಮರಡಿಯೇರಿ ಹೋಗಿದ್ದರಿಂದ ಅವರು ಆ ಹೊಲದಲ್ಲಿ ಆಳುಗಳು ಬರುವವರೆಗೆ ನಿಲ್ಲದೆ, ಕುರಿಹಿಂಡು ಮೇಯುತ್ತಿರುವ ಮರಡಿಯನ್ನೇರಿ ಹೋದರು.

ಮುಂದೆ ಒಂದರ್ಧತಾಸಿನಲ್ಲಿ ಹೊರಳಿನೋಡಿದರೆ, ಎಲ್ಲ ಗಳೇಗಳನ್ನು ಎತ್ತುಗಳು ಎಳೆಯುತ್ತ ಉಳತೊಡಗಿದ್ದು ಕಾಣಿಸಿತು.

ಇನ್ನೊಮ್ಮೆ ಒಂದು ಜೋಳದ ಹೊಲದ ಬದಿಯಲ್ಲಿ ತಮ್ಮ ಹಿಂಡಿನೊಡನೆ ಹೊರಟಾಗ ಎಲ್ಲಾ ಕಡೆಗೂ ಕಣ್ಣಾಡಿಸಿ, ಕಣ್ಣೋಡಿಸಿ ನೋಡಿದರು. ಜೋಳದ ಬೆಳೆ ಎಡೆಗೆ ಬಂದಿತ್ತು. ಭೀಮಣ್ಣ ಕೇಳಿದನು – ಕಾಮಾ. ಈ ಒಕ್ಕಲಿಗರು ಗಿಪ್ಪದ ಹಾಲು ಕುಡಿದು ಬಾಳ್ವೆಮಾಡುವರೇನೋ ? ಇಡಿಯ ಹೊಲವನ್ನೆಲ್ಲ ಜೋಳಬಿತ್ತಿಬಿಟ್ಟಿದ್ದಾರೆ. ನಾಳೆ ಬೆಳೆಯೆಲ್ಲ ತೆನಿಹಿಡಿದು, ಕಾಳು ಆಗಿ, ಹಕ್ಕಿ ಕಾವಲಿಗೆ ಬಂದಾಗ ಏತರಮೇಲೆ ನಿಂತು ಹಕ್ಕಿ ಹೊಡೆಯುತ್ತಾರೆ ? ಅಟ್ಟ ಹಾಕುವುದೆಲ್ಲಿ?”

“ಅಹುದು. ಬಿತ್ತುವಾಗ ಅವರು ಅಟ್ಟ ಹಾಕುವುದನ್ನು ಲೆಕ್ಕಿಸಿಯೇ ಇಲ್ಲ. ತೆನೆಗಳೆಲ್ಲ ಕಾಳು ಹಿಡಿದಾಗ ಅವರಿಗೆ ತಮ್ಮ ತಪ್ಪು ತಿಳಿಯುತ್ತದೆ” ಎಂದು
ಮರುನುಡಿದನು ಕಾಮಣ್ಣ.

ಹದಿನೈದು ದಿನಗಳ ತರ್ವಾಯ ಅವರಿಬ್ಬರೂ ಅದೇ ದಾರಿಯಿಂದ ತಮ್ಮ ಹಿಂಡುಗಳೊಡನೆ ಸಾಗಿದಾಗ ಆ ಜೋಳದಲ್ಲಿ ಅಟ್ಟ ಕಾಣಿಸಿತು. “ಯಾರು
ಹೇಳಿಕೊಟ್ಟಿದ್ದಾರು ಅವರಿಗೆ ಅಟ್ಟ ಹಾಕುವ ಯುಕ್ತಿಯನ್ನು ?” ಎಂದು ಅವರು ಮಾತಾಡುತ್ತ ಹೊರಟಾಗ, ಹಿಂದಿನಿಂದ ಒಂದು ದನಿ ಬಂದು – “ಅಟ್ಟ ಹಾಕುವ ಯುಕ್ತಿಯೇ?

“ಹೊಲದ ತುಂಬ ಜೋಳ ಬಿತ್ತಿದ್ದರು. ಅಟ್ಟಹಾಕುವದಕ್ಕೆ ಸ್ಥಳವನ್ನೇ ಬಿಟ್ಟಿರಲಿಲ್ಲ. ಈಗ ಅಟ್ಟ ಹೇಗೆ ಹಾಕಿದರು ?

“ಅದರಲ್ಲೇನು ಜಾಣತನವಿದೆ ? ಹತ್ತೆಂಟು ಜೋಳದ ದಂಟು ಕಿತ್ತಿ ಹಾಕಿದರಾಯ್ತು. ಅಟ್ಟ ಹಾಕುವದಕ್ಕೆ ಸ್ಥಳ ಆಗುತ್ತದೆ” ಎಂದವನೇ ಬಿರಿಬಿರಿ
ಹೋಗಿಬಿಟ್ಟನು, ಆ ಹೊಲದ ಮುದುಕ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯ
Next post ಮಿಂಚುಳ್ಳಿ ಬೆಳಕಿಂಡಿ – ೪

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…