ಆರೋಪ – ೬

ಆರೋಪ – ೬

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೧೧

ಅರವಿಂದ ಮನೆ ತಲುಪಿದಾಗ ತಾಯಿಗೆ ಉಸಿರು ಮಾತ್ರ ಇತ್ತು. ಪ್ರಜ್ಞೆ ಇರಲಿಲ್ಲ. ಅವಳಿಗೆ ಮೇಲಿಂದ ಮೇಲೆ ಸ್ಟ್ರೋಕು ಬಡಿದಿತ್ತು. ಡಾಕ್ಟರನ್ನು ಕರೆಸಿದರೂ ಏನೂ ಉಪಯೋಗವಾಗಲಿಲ್ಲ. ಇಷ್ಟು ವಯಸ್ಸಾದ ಮೇಲೆ ಟ್ರೀಟ್‍ಮೆಂಟ್ ಕಷ್ಟ ಎಂದರು ಡಾಕ್ಟರರು. ಅರವಿಂದ ಬಂದ ಎರಡು ದಿನಗಳಲ್ಲಿ ಅವಳು ಕೊನೆಯುಸಿರೆಳೆದಳು.

ಅರವಿಂದನನ್ನು ಪಾಪಪ್ರಜ್ಞೆ ಕಾಡಿತು. ನಾಗೂರಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ ಅವನು ಮನೆಗೆ ಬರುವುದೇ ಅಪರೂಪವಾಗಿತ್ತು. ಪ್ರತಿವಾರವೂ ಮನೆಗೆ ಬಂದು ಹೋಗ ಬಾರದೇ ಅನ್ನುತ್ತಿದ್ದಳು ತಾಯಿ. ಅವನು ಮಾತ್ರ ಮನೆಗೆ ಹೋಗುವುದನ್ನು ಮುಂದೆ ಹಾಕುತ್ತಲೇ ಇದ್ದ. ಈಗ ಒಮ್ಮೆಲೆ ತಾಯಿ ಇಲ್ಲದಾದುದರಿಂದ ಅವನು ದುಃಖಿತನಾದ. ಒಂಟಿತನ ಅವನನ್ನು ಆವರಿಸಿಕೊಂಡಿತು, ಬಯಲು ಗುಡ್ಡಗಳಲ್ಲಿ ಉದ್ದೇಶವಿಲ್ಲದೆ ಅಲೆದ.

ಆಗಾಗ ಮರೀನಾಳ ನೆನಪಾಗುತ್ತಿತು.

ಎಲ್ಲ ಕ್ರಿಯಾವಿಧಿಗಳೂ ಮುಗಿದ ಮೇಲೆ ತಾನಿನ್ನು ನಾಗೂರಿಗೆ ಹೋಗುತ್ತೇನೆ ಎಂದ ಅಣ್ಣನಿಗೆ. ಈಗ ಬೇಸಿಗೆ ರಜೆಯಲ್ಲವೇ ಎಂದು ಅವನು ಕೇಳಿದ. ಅರವಿಂದ ವಯಸ್ಕರ ಶಿಕ್ಷಣ ಶಿಬಿರದ ಕುರಿತು ಹೇಳಿದೆ.

ಸ್ವಲ್ಪ ಹೊತ್ತು ಒಬ್ಬರೂ ಮಾತಾಡಲಿಲ್ಲ.
“ಈಗ ಸಂಬಳ ಎಷ್ಟು ಬರುತ್ತಿದೆ?”
ಅರವಿಂದ ಹೇಳಿದ.
“ಅದರಲ್ಲಿ ಖರ್ಚಿಗೆಷ್ಟು ಬೇಕಾಗುತ್ತದೆ?”
“ಸುಮಾರು ಇನ್ನೂರು, ಇನ್ನೂರ ಇಪ್ಪತ್ತು ಬೇಕಾಗಬಹುದು.”
“ವಸತಿ?”
“ಫಿ..”
“ಊಟಕ್ಕೇನು ಮಾಡುತ್ತೀ?”

ಕೆಲವೊಮ್ಮೆ ಹೋಟೆಲಿನಲ್ಲಿ ಕೆಲವೊಮ್ಮೆ ಕೈಯಡಿಗೆ.”
“ಕೆಲಸ ಪರ್ಮನೆಂಟಾಗುತ್ತದೆಯೆ?”
“ಆಗಬಹುದು.”
“ಸಂಬಳ ಹೆಚ್ಚು ಮಾಡುತ್ತಾರೆಯೆ?”
“ಮಾಡುತ್ತೇವೆ ಎಂದಿದ್ದಾರೆ.”
“ಬೇರೆ ಕೆಲಸ ಸಿಗುವ ಚಾನ್ಸಿದೆಯೆ?”
“ಕೆಲವು ಕಡೆ ಅರ್ಜಿಹಾಕಿದ್ದೇನೆ.”
“ಇಲ್ಲೊಂದು ಜೂನಿಯರ್ ಕಾಲೇಜು ಬರುತ್ತದೆಂದು ಸುದ್ದಿ.”
“ಸುದ್ದಿಯಾಗಿ ವರ್ಷಗಳೇ ಆದುವಲ್ಲ.”
ಹಿಂದಿನ ಬಾರಿ ತಾನು ಮನೆಗೆ ಬಂದಿದ್ದಾಗ ಇದೇ ತರದ ಪ್ರಶೋತ್ತರಗಳಾದ್ದನ್ನು ಅರವಿಂದ ಜ್ಞಾಪಿಸಿಕೊಂಡ. ನೀನು ಗಳಿಸಿದುದನ್ನು ನೀನೇ ಇಟ್ಟುಕೊ ಎಂದಿದ್ದ ಅಣ್ಣ. ಈಗಲೂ ಅದನ್ನೇ ಮತ್ತೊಮ್ಮೆ ಹೇಳಿದ.

ಮತ್ತೆ ನಾಗೂರಿಗೆ ಬಸ್ಸು ಹತ್ತಿದಾಗ ಅನಿಸಿತು-ನಾಗೂರಿನೊಂದಿಗೆ ತಾನು ಇಮೋಷನಲ್ ಆಗಿ ಬೆರೆತುಕೊಂಡಿದ್ದೇನೆಯೇ ಎಂದು. ಯಾಕೋ ನಾಗೂರನ್ನು ಯಾವಾಗ ತಲುಪುತ್ತೇನೆ ಎಂಬ ಕಾತರ. ಬಸ್ಸು ಬಹಳ ನಿಧಾನವಾಗಿ ಸಾಗುತ್ತಿರುವಂತೆ ತೋರಿತು. ಬೇಸಿಗೆಯ ಬಿಸಿಲಿನ ಝಳಕ್ಕೆ ಡ್ರೈವರ್ ಕೂಡ ತೂಕಡಿಸುತ್ತಿದ್ದಾನೆ ಅನಿಸಿತು.

ಶಿಕ್ಷಣ ಶಿಬಿರ ಎಲ್ಲಿಗೆ ಬಂತು? ಮರೀನಾ ಏನು ಮಾಡುತ್ತಿರಬಹುದು? ಎಂದುಕೊಂಡೇ ನಾಗೂರು ತಲುಪಿದೆ. ಬಸ್ಸಿನಿಂದಿಳಿಯುತ್ತಿರುವಾಗ ಮನಸ್ಸಿಗೇನೋ ಆತಂಕ, ನಾಗೂರು ಬಿಟ್ಟು ಕೇವಲ ಹದಿನೈದು ದಿನಗಳಾಗಿದ್ದರೂ ಒಂದೆರಡು ತಿಂಗಳುಗಳೇ ಕಳೆದಂತೆ! ಆದರೂ ಹೆಬ್ಬಾರರ ಮುಖದ ಮೇಲಿನ ಅವರ್ಣನೀಯ ನಿರ್ಲಿಪ್ತತೆ, ಪೋಸ್ಟ್‌ಮಾಸ್ತರರ ಕಾರ್ಯಕ್ಷಮತೆ, ಪೇಟೆಯಲ್ಲಿ ಕಟ್ಟಿನಿಂತ ಮಧ್ಯಾಹ್ನದ ಮಂಪರು ಊರ ಯಥಾಸ್ಥಿತಿಯನ್ನು ಸಾರಿಹೇಳುತ್ತಿದ್ದುವು. ಅರವಿಂದ ರೂಮಿನ ಬಾಗಿಲು ತೆರೆದ. ಒಳಗೆ ಗಾಳಿ ಸಂಚಾರವಿಲ್ಲದೆ ಉಸಿರು ಗಟ್ಟಿದಂತಾಯಿತು, ಕಿಟಿಕಿಗಳನ್ನು ತೆರೆದಿಟ್ಟ.

ನಂತರ ಮೆಸ್ಕರೆನ್ನಾರ ಮನೆಗೆ ಹೋದ.

ಆ ಹೊತ್ತಿನಲ್ಲಿ ಅವರು ನಿದ್ದೆ ಮಾಡುವ ಪದ್ಧತಿ. ಆದರೂ ಸಂಜೆಯ ತನಕ ಕಾಯಲಾರದಾದ.

ಮಸ್ಕರೆನಾ ಸೋಫಾದಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದರು, ಅವನನ್ನು ಕಂಡು ಪರಿಚಯದ ನಗೆ ಸೂಸಿದರು.
“ಯಾವಾಗ ಬಂದಿರಿ?” ಎಂದು ಕೇಳಿದರು.
“ಈಗ ತಾನೆ ಬಂದೆ, ತಾಯಿ ತೀರಿಕೊಂಡರು.”
“ಐ ಆಮ್ ಸಾರಿ.”
“ವಯಸ್ಸಾಗಿತ್ತು.”
“ಯು ಮಸ್ಟ್ ಬಿ ಮಿಸ್ಸಿಂಗ್ ಹರ್.”
“ಹೌದು.”

ಅರವಿಂದ ತಾನು ಅವರಿಗೋಸ್ಕರ ತಂದಿದ್ದ ಊರ ಮದ್ಯದ ಬಾಟಲಿಯನ್ನು ಅವರ ಮುಂದಿಟ್ಟ.
“ಏನಿದು?”
“ಅರಾಕ್. ಊರ ಫೆನ್ನಿ!”
ಮೆಸೆರೆನ್ನಾ ಬಾಟಲಿಯನ್ನು ಕೈಯಲ್ಲಿ ಪರೀಕ್ಷಿಸಿದರು.
“ಥ್ಯಾಂಕ್ಯೂ, ಐ ಥಿಂಕ್ ಐ ನೀಡ ಇಟ್ ವೆರಿ ಮಚ್!” ಎಂದರು.
ಅರವಿಂದ ಅರ್ಥವಾಗದೆ ಅವರ ಮುಖ ನೋಡಿದ. ಕಣ್ಣುಗಳು ನಿದ್ದೆ ಗೆಟ್ಟಂತಿದ್ದುವು. ಯಾಕೆ ಎಂದುಕೊಂಡ. ಮನೆಯಲ್ಲಿ ಅವರೊಬ್ಬರೇ ಇದ್ದಂತಿತ್ತು.

“ಮರೀನಾ ಎಲ್ಲಿ?”
ಮಸ್ಕರೆನ್ನಾ ತಲೆಯೆತ್ತಿ ನೋಡಿದರು.
“ನಾನೂ ಅದನ್ನೇ ಕೇಳಬೇಕೆಂದಿದ್ದೆ.”
“ಅಂದರೆ?”
“ಮರೀನಾ ಮನೆಯಲ್ಲಿಲ್ಲ. ಎಲ್ಲೂ ಇಲ್ಲ.”
“….”
“ನನಗನಿಸುತ್ತದೆ ಅವಳು ರಾಜಶೇಖರನೊಂದಿಗೆ ಓಡಿ ಹೋಗಿರಬೇಕು ಒಂದು.” ಮೆಸ್ಕರೆನ್ನಾ ನಿಧಾನವಾಗಿ ನುಡಿದರು.
*****

ಅಧ್ಯಾಯ ೧೨

ರಾಜಶೇಖರ ಯಾರು? ಅವನ ಚಟುವಟಿಕೆಗಳ ನಿಜವಾದ ಉದ್ದೇಶವೇನು? ಈ ಚಟುವಟಿಕೆಗಳಿಗೆ ಹಣ ಎಲ್ಲಿಂದ? ಮುಂತಾದ ಪ್ರಶ್ನೆಗಳಿಗೆ ಸರಿ ಯಾದ ಉತ್ತರ ಯಾರಿಗೂ ಗೊತ್ತಿರಲಿಲ್ಲ. ಒಂದು ದಿನ ರಾಜಶೇಖರನಿಗೂ ಶಾಮರಾಯರಿಗೂ ಸ್ವಲ್ಪ ವಾಗ್ವಾದವಾಗಿತ್ತು. ಈ ಪ್ರದೇಶದ ಶಾಂತಿಯನ್ನು ಕಾಪಾಡುವುದು ನನಗೆ ಮುಖ್ಯ ಎಂದಿದ್ದರು ಶಾಮರಾಯರು. ನಿಮಗೆ ಯಾವ ತರದ ಶಾಂತಿ ಬೇಕು? ಜನರ ಬಾಯಿಕಟ್ಟುವ ಶಾಂತಿಯ? ಎಂದು ರಾಜಶೇಖರ ಕೇಳಿದ್ದ.

ಮರುದಿನದಿಂದ ಶಿಬಿರಕ್ಕೆ ಬರುವ ಜನರ ಸಂಖ್ಯೆ ಇಳಿಯುತ್ತ ಹೋಯಿತು. ರಾಯರು ಊರ ಮೇಲೆ ತಮಗಿರುವ ಹಿಡಿತವನ್ನು ತೋರಿಸಿದ್ದರು. ಶಾಲೆಯಿಂದ ಏಳಿ ಎಂದೇನೂ ಅವರು ಹೇಳಿರಲಿಲ್ಲ. ಶಿಬಿರ ತನ್ನಿಂತಾನೇ ವಿಸರ್ಜನೆಯಾಯಿತು. ರಾಜಶೇಖರ ನಾಗೂರಿನಿಂದ ನಿರ್ಗಮಿಸಿದ,
ಅವನು ಹೊರಟುಹೋದ ಒಂದೆರಡು ದಿನಗಳಲ್ಲಿ ಮರೀನಾ ಕೂಡ ಮಾಯವಾದಳು. ಎಷ್ಟು ಆಕಸ್ಮಿಕವಾಗಿ ಬಂದಿದ್ದಳೋ ಅಷ್ಟೇ ಆಕಸ್ಮಿಕವಾಗಿ ಹೊರಟು ಹೋಗಿದ್ದಳು. ಯಾರಿಗೂ ತಿಳಿಸಿರಲಿಲ್ಲ. ಯಾವ ಸೂಚನೆಯನ್ನೂ ಕೊಟ್ಟಿರಲಿಲ್ಲ. ಮೆಸ್ಕರೆನ್ನಾ ಪದ್ಧತಿಯಂತೆ ಬೆಳಿಗ್ಗೆ ಎದ್ದು ಒಂದು ಕಪ್ಪು ಚಹಾ ಕುಡಿದು ವಾಕಿಂಗ್‌ಗೆ ಹೋಗಿದ್ದರು. ಮುಂಜಾನೆ ಹವೆ ಚೆನ್ನಾಗಿದ್ದುದರಿಂದ ತೋಟದ ತನಕ ಹೋಗಿ ಬಂದರು. ಮರಿನಾ ಮನೆಯಲ್ಲಿಲ್ಲದುದನ್ನು ಕಂಡು ಅಡುಗೆ ಹುಡುಗನನ್ನು ಕೇಳಿದರು, ಅವನಿಗೆ ಗೊತ್ತಿರಲಿಲ್ಲ. ಈಗ ಬರುತ್ತಾಳೆ ಎಂದು ಕಾದರು. ನಂತರ ನೋಡಿದಾಗ ಅವಳ ಸೂಟ್ ಕೇಸು, ಬಟ್ಟೆಬರೆಗಳು ಮಾಯವಾಗಿರುವುದು ಅವರ ಗಮನಕ್ಕೆ ಬಂತು. ವರ್ಷಗಳ ಮೊದಲು ಒಮ್ಮೆ ಆಕೆ ಹೀಗೆ ಹೇಳದೆ ಕೇಳದೆ ಹೊರಟು ಹೋಗಿದ್ದುದು ನೆನಪಾಯಿತು.

ಮನಸ್ಸಿಗೆ ನೋವಾಯಿತು, ಆದರೆ ಆಘಾತವೇನೂ ಆಗಲಿಲ್ಲ. ಮರೀನಾ ನಾಗೂರಿನಲ್ಲಿ ಹೆಚ್ಚು ಸಮಯ ಇರುತ್ತಾಳೆ ಎಂದು ಅವರೆಂದೂ ನಂಬಿರಲಿಲ್ಲ.

ಕೇಳಿದವರಿಗೆ “ಬೆಂಗಳೂರಿಗೆ ಹೋಗಿದ್ದಾಳೆ,” ಎಂದು ಹೇಳಿದರು.
ಆದರೆ ಯಾರೂ ಅವರ ಮಾತನ್ನು ನಂಬಬೇಕಾಗಿರಲಿಲ್ಲ.

ಅರವಿಂದ ಮೂಕನಾದ. ಅವನಿಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಈ ವಿಷಯಕ್ಕೆ ಈ ಕೊನೆಯೆಂದು ಯಾರೂ ತಿಳಿದಿದ್ದರು? ಮರೀನಾಳನ್ನು ತಾನು ಕೊನೆಯ ಬಾರಿ ಕಂಡು ಬಸ್ ಸ್ಟಾಪಿನಲ್ಲಿ. ಅವಳು ಕೈಬೀಸುತ್ತ ನಿಂತ ಚಿತ್ರ ಇನ್ನೂ ಕಣ್ಣ ಮುಂದಿತ್ತು. ಹೊರಟು ಹೋಗುವ ಬಗ್ಗೆ ಆಗಲೇ ಅವಳು ತೀರ್ಮಾನಿಸಿದ್ದಳೆ? ಅದು ಅವಳ ಕೊನೆಯ ವಿದಾಯವಾಗಿತ್ತೆ? ಆಗಿದ್ದರೆ ಅದರ ಎಳ್ಳಷ್ಟೂ ಸೂಚನೆಯನ್ನೂ ಕೂಡ ಕೊಟ್ಟಿರಲಿಲ್ಲ. “ಗಾಬರಿಯಾಗಬೇಡಿ!” ಎಂದಿದ್ದಳು-ತಾಯಿಯ ಕುರಿತಾಗಿ. ಆಗ ಅವನಿಗೆ ಆಕೆ ಚಿಕ್ಕಂದಿನಲ್ಲಿ ತಾಯಿಯನ್ನು ಕಳೆದುಕೊಂಡುದು ನೆನಪಾಗಿ ಯಾಕೋ ಅವಳ ಬಗ್ಗೆ ಬಹಳ ಮರುಕವೆನಿಸಿತ್ತು. ಅವಳ ಈ ಎಲ್ಲ ಸುತ್ತಾಟ, ಅಸ್ವಸ್ಥತೆಗೆ ಈ ತಬ್ಬಲಿತನವೇ ಕಾರಣವಿರಬಹುದು ಎನಿಸಿತ್ತು.

ಮರೀನಾ ಅಂದು ತಿಳಿನೀಲಿ ಬಣ್ಣದ ಸೀರೆ, ಬಿಳಿಯ ಬ್ಲೌಸು ತೊಟ್ಟು ಕೊಂಡಿದ್ದಳು.

“ಆದಷ್ಟು ಬೇಗನೆ ಬರುತ್ತೇನೆ,” ಎಂದಿದ್ದ ಅವನು.
“ಶಿಬಿರದ ಬಗ್ಗೆ ಯೋಚಿಸಬೇಡಿ” ಎಂದಿದ್ದಳು ಮರೀನಾ.
ಬಸ್ಸು ಬಂದು ಧೂಳೆಬ್ಬಿಸುತ್ತ ನಿಂತಿತು. ಇಳಿಯುವವರ, ಹತ್ತುವವರ ನೂಕುನುಗ್ಗಲು. ಬೇಗ ಬನ್ನಿ ಎಂದು ಕಂಡಕ್ಟರ್ ಒದರುತ್ತಿದ್ದ.
“ಬೈ,” ಎಂದಳು ಅವಳು.
“ಬೈ,”
ಬಸ್ಸು ಮರೆಯಾಗುವ ತನಕವೂ ಮರೀನಾ ನಿಂತಿದ್ದಳು.
“ವಾಂಟ್ ಎ ಡ್ರಿಂಕ್?” ಮೆಸ್ಕರೆನ್ನಾ ಕೇಳಿದರು.
ಬೇಡವೆಂದ. ಮಸ್ಕರೆನ್ನಾ ಒಂದು ಗ್ಲಾಸು ವಿಸ್ಕಿ ತೆಗೆದುಕೊಂಡರು. ಅರವಿಂದ ಅವರ ಮುಖ ನೋಡಿದ, ಕಣ್ಣುಗಳು ಊದಿಕೊಂಡಿದ್ದುವು. ಸುಕ್ಕುಗಟ್ಟುತ್ತಿರುವ ಚರ್ಮ, ಈ ಮನುಷ್ಯನ ಬಗ್ಗೆ ಆತಂಕವಾಯಿತು.

“ಮರೀನಾ ಎಂದಾದರೂ ತನ್ನ ಬಗ್ಗೆ ನಿಮ್ಮಲ್ಲಿ ಹೇಳಿಕೊಂಡಿದ್ದಳೆ?” ಮೆಸ್ಕರೆನ್ನಾ ಕೇಳಿದರು.
ಅರವಿಂದ ಅರ್ಥವಾಗದೆ ನೋಡಿದ.

“ಚಿತ್ರಕಲೆಯಲ್ಲಿ ಹೇಗೆ ಆಸಕ್ತಿ ಹುಟ್ಟಿತು ಎಂದು ಹೇಳಿದ್ದಳೆ?” ನೆನಪಾಯಿತು, ಒಬ್ಬ ಪೈಂಟರ್ ಬಗ್ಗೆ ಹೇಳಿದ್ದಳು. ಆತ ಆಕೆಯ ಚಿತ್ರ
ಬಿಡಿಸಿದ್ದ….
ಮೆಸ್ಕರೆನ್ನಾ ಹೇಳಿದರು

“ಆಗ ನಾವೆಲ್ಲ ಮಂಗಳೂರಲ್ಲಿದ್ದೆವು, ನಮ್ಮ ಮನೆಯ ಸಮೀಪ ಒಬ್ಬ ಆರ್ಟಿಸ್ಟ್ ಇದ್ದ. ಗಡ್ಡ ಮೀಸೆ ಹಿಪ್ಪಿ ತಲೆಗೂದಲು ಬಿಟ್ಟುಕೊಂಡಿದ್ದ. ಅವನ ಹೆಸರೇನೆಂದು ನನಗೆ ನೆನಪಿಲ್ಲ. ಮರೀನಾಳಿಗೆ ಅದು ಹೇಗೋ ಅವನ ಪರಿಚಯವಾಗಿತ್ತು. ಅವನನ್ನು ಹಚ್ಚಿಕೊಂಡಳು. ಈಗ ಅನಿಸುತ್ತದೆ-ಆಕೆಗೆ ಬಹುಶಃ ಸ್ನೇಹ, ಮನುಷ್ಯ ಸ್ನೇಹ ಬೇಕಾಗಿದ್ದಿರಬಹುದು ಎಂದು. ಅವನ ಸ್ಟೂಡಿಯೋಗೆ ದಿನಾ ಹೋಗುತ್ತಿದ್ದಳು. ಅವನಲ್ಲಿ ಚಿತ್ರಕಲೆ ಅಭ್ಯಾಸಮಾಡುತ್ತೇನೆ ಎನ್ನುತ್ತಿದ್ದಳು. ನಾನು ಅವಳ ಮನನೋಯಿಸಬಾರದೆಂದು ಸುಮ್ಮನಿದ್ದೆ. ಒಂದು ದಿನ ಸುಮ್ಮನೆ ಈ ಆರ್ಟಿಸ್ಸಿನ ಸೂಡಿಯೋಗೆ ಹೋದೆ. ಒಂದು ಅಟ್ಟದ ಮೇಲಿತ್ತು. ಸ್ಕೂಡಿಯೋ ವಸತಿ ಎಲ್ಲ ಒಂದೇ ಕೋಣೆಯಲ್ಲಿ ಸಾಮಾನುಗಳೆಲ್ಲಾ ಸಿಕ್ಕಾಪಟ್ಟೆ ಬಿದ್ದು ಕೊಂಡಿದ್ದುವು. ಒಂದೆಡೆ ಗೋಡೆಗೆ ಕ್ಯಾನ್ವಾಸ್‌ಗಳನ್ನು ಜೋಡಿಸಿಡಲಾಗಿತ್ತು. ಪೂರ್ಣ, ಅಪೂರ್ಣ ಚಿತ್ರಗಳು, ಸ್ಕೆಚ್ಚುಗಳು ಅಲ್ಲಲ್ಲಿ ಇರಿಸಿದ ಪೈಂಟಿಂಗ್ ಸಲಕರಣೆಗಳು, ಈ ಗೊಂದಲದ ನಡುವೆ ಮಂಚದ ಮೇಲೆ ಮರೀನಾ ಅರೆನಗ್ನಳಾಗಿ ಮಲಗಿದ್ದಳು. ಅವಳ ಗೆಳೆಯ ಚಿತ್ರ ಬಿಡಿಸುತ್ತಿದ್ದ. ನಾನು ಬಂದುದು ಮರೀನಾಳಿಗೆ ಕಾಣಿಸುವಂತಿರಲಿಲ್ಲ. ಆದರೆ ಅವನಿಗೆ ಕಾಣಿಸಿತು. ಚಿತ್ರ ಬಿಡಿಸುತ್ತಿದ್ದ ಕೈ ತಟಸ್ಥವಾಯಿತು. ಮರೀನಾ ತಟ್ಟನೆ ಎದ್ದು ಕುಳಿತಳು. ನಾನು ಸಿಟ್ಟಿನಿಂದ ಕುದಿಯುತ್ತಿದ್ದೆ. ಬಟ್ಟೆ ತೊಟ್ಟುಕೊಂಡು ಮನೆಗೆ ಹೋಗುವಂತೆ ಅವಳಿಗೆ ಅಪ್ಪಣೆ ಮಾಡಿದೆ. ಅವಳು ಡ್ಯಾಡಿ! ಎಂದೇನೊ ಹೇಳಲು ಪ್ರಯತ್ನಿಸಿದಳು. ಕೋಣೆಯಿಂದ ಹೊರಗೆ ಹಾಕಿದೆ. ಆತ ಬೆರಗಾಗಿ ನಿಂತೇ ಇದ್ದ. ಒಬ್ಬ ನ್ಯಾಯಾಧೀಶನಲ್ಲದಿರುತ್ತಿದ್ದರೆ ನಾನೇನು ಮಾಡುತ್ತಿದ್ದೆನೋ. ಅವನಿಗೆ ಹೇಳಿದೆ, ಮೈನರ್ ಹುಡುಗಿಯನ್ನು ಹೀಗೆ ಉಪಯೋಗಿಸುವುದು ಶಿಕ್ಷಾರ್ಹ ಅಪರಾಧ. ಈ ಪ್ರದೇಶ ಬಿಟ್ಟು ಹೊರಟು ಹೋಗುತ್ತೀಯಾ ಅಥವಾ ಜೈಲಿಗೆ ಹೋಗುತ್ತೀಯಾ ಯಾವುದು ಇಷ್ಟ ನಿನಗೆ? ತಾನು ಮರೀನಾಳ ದುರುಪಯೋಗ ಮಾಡಲು ಎಂದೂ ಬಯಸಿರಲಿಲ್ಲ; ತನಗೆ ಕಲೆಯಲ್ಲಿ ಮಾತ್ರ ಆಸಕ್ತಿ-ಎಂದೂ ಹೇಳಿದ. ಮರುದಿನ ಅವನು ಸ್ಟುಡಿಯೋ ಖಾಲಿಮಾಡಿ ಹೊರಟು ಹೋದುದಾಗಿ ತಿಳಿಯಿತು.”

ಸ್ವಲ್ಪ ಹೊತ್ತಿನ ನಂತರ ಅವರೆಂದರು :
“ಅವನು ಹೊರಟು ಹೋದುದಕ್ಕೆ ನನಗೆ ಸಮಾಧಾನವಾಯಿತು ನಿಜ. ಆದರೆ ಆ ದಿನದಿಂದ ನಾನು ಮಗಳ ಮೇಲಿನ ಅಧಿಕಾರವನ್ನು ಮಾತ್ರ ಕಳೆದುಕೊಂಡ ಹಾಗೆ ಅನಿಸಿತು. ಮರೀನಾಳ ಲವಲವಿಕೆ ಮಾಯವಾಗಿತ್ತು. ಬಹಳ ಮೂಡಿಯಾಗತೊಡಗಿದಳು. ಒಳಗಿಂದೊಳಗೇ ಅವಳು ನನ್ನನ್ನು ದ್ವೇಷಿಸುತಿದ್ದಾಳೆ ಅನಿಸತೊಡಗಿತು ನನಗೆ…”

ಮೆಸ್ಕರೆನ್ನಾ ಮಾತಾಡುತ್ತಲೇ ಇದ್ದರು.
ಆದರೆ ಯಾವುದೂ ಅರವಿಂದನನ್ನು ಸಮಾಧಾನಗೊಳಿಸುವಂತಿರಲಿಲ್ಲ. ಕೊನೆಗೆ ಅವನು ಅಲ್ಲಿಂದೆದ್ದು ತನ್ನ ಕೋಣೆಗೆ ಬಂದ. ಮರೀನಾ ರಾಜಶೇಖರನೊಂದಿಗೆ ಓಡಿಹೋಗಿದ್ದಾಳೆ ಎಂಬ ವಿಚಾರ ಅವನಲ್ಲಿ ಅಸೂಯೆ ಮೂಡಿಸಿತ್ತು. ಹಾಗಿರಲಾರದು ಅಂದುಕೊಂಡ. ಅವಳೇನಾದರೂ ಚೀಟಿ ಬಿಟ್ಟುಹೋಗಿರಬಹುದೇ ಎಂದು ಬಾಗಿಲ ಸಂದಿಗಳಲ್ಲಿ ಹುಡುಕಿದ. ಅಂಥದೇನೂ ಇರಲಿಲ್ಲ. ಒಂದೆರಡು ಕಾಗದ ಪತ್ರಗಳಿದ್ದುವು, ಯಾರದೋ ಮದುವೆ ಆಮಂತ್ರಣಗಳು, ಬಯಲಾಟದ ಒಂದು ಕರಪತ್ರ-ನಾಗೂರು ಹೈಸ್ಕೂಲಿನ ಸಹಾಯಾರ್ಥ ಎಂದಿತ್ತು.

ಕೋಣೆ ತುಂಬ ಧೂಳು, ಕಸ, ಅವನ ಜಗತ್ತು ಮತ್ತೆ ಒಮ್ಮೆಲೆ ಸಂಕುಚಿತಗೊಂಡಿತ್ತು. ರಾಜಶೇಖರ, ಮರೀನಾ ಎಲ್ಲ ಕನಸು ಹರಿದಂತೆ ಹರಿದಿದ್ದರು. ಈ ಕಸ, ತೊಳೆಯದೆ ಇಟ್ಟಿದ್ದ ಪಾತ್ರೆಗಳ ಮೇಲೆ ಓಡಾಡುತ್ತಿರುವ ಈ ಜಿರಳೆಗಳು ಇವು ಮಾತ್ರ ವಾಸ್ತವ. ಆದರೂ ಅದೆಂಥ ಕನಸು! ಅದರ ಗಾಯಗಳನ್ನು ಬಿಟ್ಟೆಹೋಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾರ್ತಾಧಿಕಾರಿ
Next post ಓ ತಾಯಿ!

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…