ನನ್ನ ಹಾದಿಯಲ್ಲಿ ಹೂವ ಚೆಲ್ಲಿ
ಸ್ವರ್ಗದ ದಾರಿಯನು
ಸುಗಮ ಗೊಳಿಸಿದವರಾರು?

ಮೇಲೆ ಮೇಲೆ
ನೀಲ ಗಗನಕ್ಕೇರಿಸಿ
ಮಿನುಗುವ ತಾರೆ ಮಾಡಿದವರಾರು?

ಈ ಹಕ್ಕಿಗೆ ಗುಟುಕನು ಕೊಟ್ಟು
ಗೂಡ ಬಿಟ್ಟು ಮೇಲೆ ಹಾರಲು
ರೆಕ್ಕೆಗಳಿಗೆ ಬಲವ ತುಂಬಿದವರಾರು?

ಪ್ರೀತಿ ವಾತ್ಸಲ್ಯದಿಂದ
ನಾಳೆಗಾಗಿ ಬೆಳಕ ಚೆಲ್ಲಿ
ಕಿರಣ ಮಾಲೆಯಲ್ಲಿ ನನ್ನ ಸೇರಿಸಿದವರಾರು?

ಈ ಕೊರಳಿಗೆ ಚಿಲಿಪಿಲಿ ಸ್ವರವ ತುಂಬಿ
ನಾ ಹಾಡುವ ಹಾಡಿಗೆ
ರಾಗ ಮಾಲಿಕೆ ಕಟ್ಟಿದವರಾರು?

ನಾಡು ನುಡಿಗಾಗಿ
ಎನ್ನ ಹೃದಯ ಸದಾ
ಮಿಡಿಯುವಂತೆ ಚೈತನ್ಯ ತುಂಬಿದವರಾರು?
*****