ಉತ್ತರಣ – ೮

ಉತ್ತರಣ – ೮

ಆತಂಕ ತಂದ ಅಚಲನ ನಿರ್ಧಾರ

ಅಚಲ ಸಂಪಾದಿಸಲು ತಯಾರಾಗಿ ನಿಂತ ಹುಡುಗನೆನ್ನುವ ದೃಷ್ಟಿಯಿಂದ ಅವನನ್ನು ಅವಳು ನೋಡಿರಲೇ ಇಲ್ಲ. ಅವಳ ಮನದಾಳದಲ್ಲಿ ಚಿಕ್ಕ ಅಚಲನೇ ಓಡಿಯಾಡುತ್ತಿದ್ದ. ಕಳೆದ ಮೂರು ವರುಷದಲ್ಲೂ ಅವಳ ಕಣ್ಣ ಮುಂದೆ ಓಡಾಡುತ್ತಿದ್ದುದು ಚಿಕ್ಕ ಹುಡುಗನೇ. ಒಮ್ಮೆಲೇ ಬಂದು ನೋಡಿದಾಗ ಅಚಲ ಬೆಳೆದ ಎತ್ತರ ಅವಳಲ್ಲಿ ಅಚ್ಚರಿಯನ್ನುಂಟು ಮಾಡಿತ್ತಾದರೂ ಅವಳ ಮನೋಪಟಲದ ಮೇಲೆ ಮೂಡಿದ್ದ ಚಿಕ್ಕ ಅಚಲ ಮರೆಯಾಗಿರಲಿಲ್ಲ. ಅಚಲನ ಮಾತನ್ನು ಕೇಳಿದ ಅನುರಾಧ ಕಣ್ಣು ತುಂಬಾ ತಮ್ಮನನ್ನು ನೋಡುತ್ತಾಳೆ! ಮನದೊಳಗಿನ ಚಿಕ್ಕ ಚಿತ್ರವನ್ನು ಹೊರದೂಡಿ ಈಗಿನ ಯುವಕನ ಚಿತ್ರ ಮೂಡುತ್ತದೆ. ಆನಂದನಿಗಿಂತಲೂ ಎತ್ತರಕ್ಕೆ ಬೆಳೆದು ಬಿಟ್ಟಿದ್ದಾನೆ ಅಚಲ! ಚಿಗುರು ಮೀಸೆ! ಕರಾಟೆ, ಈಜು, ಬೆಳಗಿನ ಓಟ, ಎಲ್ಲವನ್ನೂ ಕ್ರಮವಾಗಿ ನಡೆಸಿಕೊಂಡು ಬಂದು, ಅದರ ಪರಿಣಾಮದಿಂದ ಮೈಗೂಡಿಸಿಕೊಂಡ ಕಟ್ಟುಮಸ್ತಾದ ದೇಹ ಎದ್ದು ತೋರುತ್ತದೆ. ಈ ಹುಡುಗ ಹೆಸರಿಗೆ ತಕ್ಕಂತೆ ಅಚಲನೇ. ಇವನನ್ನು ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದೆನಿಸುತ್ತದೆ. ಇಷ್ಟು ಬೆಳೆದು ನಿಂತಿದ್ದರೂ ಆ ಮುಖದಲ್ಲಿ ಮಾತ್ರ ಇನ್ನೂ ಬಾಲಿಶ ಮುಗ್ಧತೆಯೇ ಇದೆ ಎಂದು ಅನಿಸದಿರಲಿಲ್ಲ

ತಮ್ಮನನ್ನು ನೋಡಿ ಮೈಮರೆತ ಅನುರಾಧ ವಾಸ್ತವಕ್ಕೆ ಬಂದು “ಅಚ್ಚೂ, ಇಲ್ಲಿ ನನ್ನ ಹತ್ತಿರ ಕುಳಿತುಕೋ.” ಎಂದಾಗ ಚಿಕ್ಕ ಮಗುವಿನಂತೇ ಅಕ್ಕನ ಬಳಿ ಕುಳಿತುಕೊಂಡವನನ್ನು ನೋಡಿ ಅನುರಾಧಳ ಹೃದಯ ಅಭಿಮಾನದಿಂದ ಬೀಗುತ್ತದೆ. ಅಚಲನೇ ನಗುತ್ತಾ, “ನೋಡಕ್ಕ, ಪೂರ್ಣಿಮಾಕ್ಕ ಹೇಗೆ ಒಣಗಿ ಹೋಗಿದ್ದಾಳೆ. ಅವಳು ನಗುವುದನ್ನು ಮರೆತೇ ಬಿಟ್ಟಹಾಗಿದೆ. ನಗು ಬಿಡು, ಮಾತು ಎಷ್ಟು ಆಡುತ್ತಾಳೆ ಕೇಳು. ನಾನು ಕೆಲಸಕ್ಕೆ ಸೇರಿದ ಕೂಡಲೆ ಮೊದಲ ಕೆಲಸ ಅವಳನ್ನು ಅವಳು ಹೊತ್ತುಕೊಂಡಿರೋ ಜವಾಬ್ದಾರಿಯಿಂದ ತಪ್ಪಿಸಿ ಅವಳ ಮೇಲೆ ಹೊಸ ಜವಾಬ್ದಾರಿ ಹೊರಿಸುವುದು. ಅವಳೀತನಕ ನಮ್ಮೆಲ್ಲರಿಗಾಗಿ ಒದ್ದಾಡಿದ್ದು ಸಾಕು. ಅಕ್ಕ ನೀನೇ ಅವಳಿಗೊಂದು ಹುಡುಗ ನೋಡು, ಆಮೇಲಿನ ಜವಾಬ್ದಾರಿ ನನಗೆ”.

“ಹುಚ್ಚು ಹುಡುಗ! ತಲೆತುಂಬಾ ಏನೇನೋ ಯೋಚನೆ ಈಗಲೇ ತುಂಬಿಸಿಕೊಂಡ ಹಾಗಿದೆಯಲ್ಲಾ? ನಿರೂಪಮಾ ನೋಡು, ಏನನ್ನಾದರೂ ತಲೆಗೆ ಹಚ್ಚಿಕೊಂಡಿದ್ದಾಳೆಯೇ?”

“ಅವಳಿನ್ನೂ ಚಿಕ್ಕವಳು. ಎರಡು ವರುಷ ಕಳೆಯಲಿ. ಪೂರ್ಣಿಮಾಕ್ಕ ಮದುವೆಯಾಗಿ ಹೋದ ಮೇಲೆ ಅವಳೇ ಅಪ್ಪ ಅಮ್ಮನ್ನ ನೋಡಿಕೊಳ್ಳಬೇಕಲ್ಲ? ನಾನೂ ದೂರ ಹೋಗುತ್ತೇನೆ. ಆಗ ಅವರಿಗೆ ಅವಳೇ ಜತೆಯಲ್ಲವೇ? ಆದರೆ ಒಂದು-ಅವಳು ಕೆಲಸಕ್ಕೆ ಮಾತ್ರ ಸೇರುವುದು ಬೇಡ. ತಂದೆ ತಾಯಿಯ ಜವಾಬುದಾರಿ ನನಗಿರಲಿ. ಪೂರ್ಣಿಮಾಕ್ಕನಿಗೇ ಅದು ಕೊನೆಯಾಗಲಿ.

“ಅಲ್ಲ ಅಚ್ಚೂ, ನೀನು ದೂರ ಹೋಗುತ್ತೀ ಅಂದಿಯಲ್ಲಾ? ಹಾಗೆಂದರೇನು? ಎಲ್ಲಿ ಹೋಗುತ್ತಿ?”

ಆಶ್ಚರ್ಯ ಮೈವೆತ್ತು ಇಬ್ಬರೂ ಒಮ್ಮೆಲೇ ತಮ್ಮನನ್ನು ಪ್ರಶ್ನಿಸುತ್ತಾರೆ.

“ದೂರ ಅಂದರೆ-ಕೆಲಸಕ್ಕೆ, ಅಕ್ಕಾ, ನಾನೀತನಕ ನನ್ನ ಯೋಚನೆಗಳನ್ನು ಯಾರೊಡನೆಯೂ ಹೇಳಿರಲಿಲ್ಲ. ನೀನು ಬಂದ ಮೇಲೆಯೇ ಎಲ್ಲರಿಗೂ ಹೇಳೋಣವೆಂದು ಬಾಯಿ ಮುಚ್ಚಿದ್ದೆ. ನಾನು ವಾಯುದಳಕ್ಕೆ ಆಯ್ಕೆಯಾಗಿದ್ದೇನೆ. ಆರು ತಿಂಗಳ ಹಿಂದೆ ಹೆಸರು ದಾಖಲು ಪಡಿಸಿದ್ದೆ. ಇಂಟರ್‌ವ್ಯೂ ಎಲ್ಲಾ ಕೆಲವು ಸಮಯದ ಹಿಂದೆಯೇ ಮುಗಿಯಿತು. ಕಳೆದ ವಾರದಲ್ಲಷ್ಟೇ ನನಗೆ ಆರ್ಡರ್ ಸಿಕ್ಕಿತು. ಹೇಳಿದರೆ ಎಲ್ಲರೂ ಗಲಾಟೆ ಮಾಡುತ್ತಾರೆ ಎಂದು ಯಾರಿಗೂ ಹೇಳಲಿಲ್ಲ. ಒಂದೂವರೆ ವರುಷದ ತರಬೇತಿ ಮುಗಿದ ಕೂಡಲೇ ಕೈತುಂಬಾ ಸಂಬಳ ಸಿಗುತ್ತದೆ. ಒಂದೂವರೆ ವರುಷದ ತನಕ ನಾನೇನೂ ಸಹಾಯ ಮಾಡಲಾರನೆಂದೇ ಬೇಸರ. ಅದರ ನಂತರ ಚಿಂತೆಯಿಲ್ಲ. ಅಪ್ಪ ಅಮ್ಮ ಯಾವ ಯೋಚನೆಯನ್ನೂ ಮಾಡಬೇಕಾಗಿಲ್ಲ.”

ಇಬ್ಬರಿಗೂ ಆಘಾತವಾಗುತ್ತದೆ ಅಚಲನ ಮಾತು ಕೇಳಿ. ಇಬ್ಬರೂ ಸ್ಥಬ್ಧರಾಗುತ್ತಾರೆ. ಹೃದಯ ಬಿರಿಯುತ್ತದೆ, ಕಣ್ಣು ಮಂಜಾಗುತ್ತದೆ. ಗಂಟಲ ನರಗಳುಬ್ಬಿ ನೋವು ತುಂಬುತ್ತದೆ. ಅಚಲ ಪ್ರಾಯದಲ್ಲಿ ಇನ್ನೂ ಹುಡುಗನೆಂದೇ ಹೇಳಬೇಕು. ದೇಹ ಬೆಳೆದಿದೆ! ಹಾಗಂತ ಎಲ್ಲಾ ಜವಾಬ್ದಾರಿ ಹೊರುವ ಪ್ರಾಯವಲ್ಲ ಅವನದ್ದು! ಆದರೂ ಎಷ್ಟು ಅರಿವು ಅವನಲ್ಲಿದೆ! ಅಣ್ಣನಿಗೇಕೆ ಈ ಅರಿವಿಲ್ಲ? ಇಬ್ಬರ ಹೃದಯವೂ ಬೊಬ್ಬಿಡುತ್ತದೆ.

ಅನುರಾಧ ಉಂಟಾದ ಶಾಕ್‌ನಿಂದ ಸಾವರಿಸಿಕೊಂಡು “ಅಚೂ, ಎಂಥಾ ಯೋಚನೆ ನಿನ್ನದು? ಯಾರನ್ನೂ ಕೇಳದೇ ಈ ನಿರ್ಧಾರ ಹೇಗೆ ಕೈಗೊಂಡೆ?

“ನೀನು ವಾಯುದಳಕ್ಕೆ ಸೇರಲೇಬೇಕೇ? ಅಪ್ಪ ಅಮ್ಮ ಇದಕ್ಕೊಪ್ಪಿಯಾರೇ? ಅವರ ಮೇಲೆ ಇದರ ಪರಿಣಾಮ ಏನಾಗಬಹುದೆಂದು ಯೋಚಿಸಿದ್ದೀಯಾ? ನಿನಗೆ ಬೇರೆ ಏನೂ ಕೆಲಸ ಸಿಗಲಾರದೆ? ಯಾಕೆ ಈ ದುಡುಕಿನ ನಿರ್ಧಾರ?”

ಅವರನ್ನು ಒಪ್ಪಿಸುವ ಭಾರ ನಿನ್ನದು ಅಕ್ಕಾ, ನಾನು ಬರೇ ಒಬ್ಬ ಸಾಮಾನ್ಯ ಪದವೀಧರ. ಇಲ್ಲೇ ಎಲ್ಲಾದರೂ ಒಂದು ಕೆಲಸಕ್ಕೆ ಸೇರುವುದೆಂದರೆ ಹೆಚ್ಚೆಂದರೆ ಒಂದು ಕಾರಕೂನನ ಕೆಲಸ ಸಿಗಬಹುದು. ಅದು ನನಗಿಷ್ಟವಿಲ್ಲ. ನಾನು ಆಟಗಾರನಾದುದರಿಂದ ಯಾವ ಅಡಚಣೆಗಳಿಲ್ಲದೆಯೇ ಆಯ್ಕೆಯಾಯಿತು. ನನ್ನನ್ನು ನೋಡಿದ ಇಂಟರ್‌ವ್ಯೂ ಕಮಿಟಿಯವರಿಗೆ ಎಷ್ಟು ಖುಷಿಯಾಗಿದೆ ಗೊತ್ತಾ?” ಎಂದು ತನ್ನ ಎದೆಯಗಲಿಸಿ ಕೈಯ ಸ್ನಾಯುಗಳನ್ನು ಹಿಗ್ಗಿಸಿ ತನ್ನ ದೇಹದ ಸೌಂದರ್ಯವನ್ನು ತಾನೇ ಅಭಿಮಾನ ಪೂರ್ವಕವಾಗಿ ಮೆಚ್ಚಿಕೊಳ್ಳುತ್ತಾನೆ. ಯಾರಾದರೂ ಮೆಚ್ಚುವ ದೇಹ ಅವನದ್ದು. ಅಚಲ ಇಷ್ಟು ಸುಂದರ ಯುವಕನೆಂದು ಆ ಕ್ಷಣವಷ್ಟೇ ಅವನ ಅಕ್ಕಂದಿರಿಬ್ಬರಿಗೂ ಅರಿವಾದದ್ದು. ಅಚಲನ ಮಾತಿನಿಂದ ಸಿಟ್ಟಿಗೆದ್ದ ಪೂರ್ಣಿಮಾ, “ಆಹಾ! ಸಾಕು ನಿನ್ನ ಜಂಭ. ದೊಡ್ಡ ದೇಹ ಬೆಳೆಸುವವ; ಇವನೊಬ್ಬ ಬಾರೀ ದೇಶೋದ್ಧಾರಕ್ಕೆ ಹೊರಟು ನಿಂತಿದ್ದಾನೆ!” ಎಂದು ತನ್ನ ಮನದ ನೋವನ್ನೆಲ್ಲಾ ಕಾರುತ್ತಾಳೆ.

ತಮ್ಮ ವಾಯುದಳಕ್ಕೆ ಸೇರುವುದು ಅವಳಿಗೆ ಇಷ್ಟವಿಲ್ಲದ ಸಂಗತಿ, ರಕ್ಷಣಾ ಪಡೆಯಲ್ಲಿರುವವರಿಗೆ ಜೀವದ ಗ್ಯಾರಂಟಿಯಿಲ್ಲ. ಅಲ್ಲದೇ ದೂರದಲ್ಲಿರೋ ಅವನ ಸಂಬಂಧಿಕರಿಗೆ ಮನಸ್ಸಿಗೆಂದೂ ಶಾಂತಿಯಿರೋದಿಲ್ಲ. ಅಷ್ಟಿಲ್ಲದ ಕೆಲಸ ಎಷ್ಟು ದೊಡ್ಡದಾದರೂ ಯಾರಿಗೆ ಬೇಕು?

ಉತ್ಸಾಹದ ಚಿಲುಮೆಯಂತೆ, ಉಕ್ಕಿ ಉಕ್ಕಿ ಹರಿಯುವ ಭಾವನೆಗಳನ್ನು ಅಡೆತಡೆಯಿಲ್ಲದೇ ಅಚಲ ಅಕ್ಕಂದಿರ ಮುಂದಿಟ್ಟಿದ್ದ. ಅವನ ಉತ್ಸಾಹಕ್ಕೆ ತಣ್ಣೀರೆರಚುವಷ್ಟು ಕಠಿಣತೆ ಅನುರಾಧಳಲ್ಲಿ ಮೂಡಲಿಲ್ಲ. ಅವಳಿಗೂ ಅವನು ವಾಯುದಳಕ್ಕೆ ಸೇರುವುದು ಕನಸಲ್ಲೂ ಒಪ್ಪಲಾಗದ ಸಂಗತಿ. ಏನೂ ಆಗೋದಿಲ್ಲವೆಂಬ ಧೈರ್ಯ ತೋರಿಸಿಕೊಂಡರೂ ಮನದಾಳದಲ್ಲಿ ವಾಯುದಳವೆಂದರೆ ಹುದುಗಿ ಕುಳಿತಿರೋ ಭಯ ಆಳವಾದದ್ದು. ಪಾಕಿಸ್ತಾನದೊಡನೆ ಹೋರಾಡುವಾಗಿನ ವಿವರಗಳನ್ನೆಲ್ಲಾ ಅವಳಿನ್ನೂ ಮರೆತಿಲ್ಲ. ಓದಿದ ಘಟನೆಗಳೆಲ್ಲಾ ಇಂದೂ ಅವಳ ಮನದಲ್ಲಿ ಅಚ್ಚೊತ್ತಿದೆ. ಎಲ್ಲರಿಗೂ ಹಾಗೆಯೇ ಯಾವ ತಾಯಿ, ಯಾವ ಅಕ್ಕ, ಯಾವ ತಂಗಿ, ಯಾವ ಹೆಂಡತಿ ಆ ಕೆಲಸವನ್ನು ಇಷ್ಟಪಟ್ಟಾಳು? ಆದರೆ ಎಲ್ಲರೂ ಹೀಗೇ ಯೋಚಿಸಿದರೆ ಯಾವ ಗಂಡಸೂ ಸೇನೆಯಲ್ಲಿ ಭರ್ತಿಯಾಗಲಿಕ್ಕಿಲ್ಲ. ಅಚಲ ಎಷ್ಟೊಂದು ಉತ್ಸಾಹದಿಂದ, ಆತ್ಮವಿಶ್ವಾಸದಿಂದ ವಾಯುದಳಕ್ಕೆ ಸೇರಲು ಸನ್ನದ್ಧನಾಗಿದ್ದಾನೆ! ಅದನ್ನು ತಡೆದು, ಅವನನ್ನು ನಿಲ್ಲಿಸುವುದು ನ್ಯಾಯವೇ? ಸಾಧ್ಯವೇ? ಹುಚ್ಚು ನೆರೆಗೆ ದಂಡೆ ಕಟ್ಟಿದ ಹಾಗಾಗೋದಿಲ್ಲವೆ? ಇಲ್ಲೇ ಏನಾದರೂ ಒಂದು ಕೆಲಸ ಸಿಕ್ಕಿ ಕೆಲಸಕ್ಕೆ ಸೇರಿದನೆಂದು ಎಣಿಸುವಾ. ಅದರಲ್ಲಿ ಅವನಿಗೆ ತೃಪ್ತಿ ಸಿಗಲಿದೆಯೇ? ಇಷ್ಟವಿಲ್ಲದ ಕೆಲಸದಲ್ಲಿ ಅವನ ಜೀವನ ಸಾಗಬೇಕೇ? ತೃಪ್ತಿಯಿಲ್ಲದ ಕೆಲಸವನ್ನು ಮಾಡಿದರೆ ಉತ್ಸಾಹ, ಜೀವನದಲ್ಲಿನ ಒಲವು ಎಲ್ಲಾ ಮರೆಯಾಗುತ್ತದೆ. ಆಗ ಅವನು ಜೀವಂತ ಹೆಣವಾಗುತ್ತಾನೆ. ಮಾಡುವ ಕೆಲಸದಲ್ಲಿ ಯಾರಿಗಾದರೂ ಸಂಪೂರ್ಣ ತೃಪ್ತಿಯಿರಬೇಕು. ಆದರೆ ಅಚಲ ವಾಯುದಳಕ್ಕೆ ಸೇರುವೆನೆಂದಾಗ ಖುಷಿಪಡಲು ಸಾಧ್ಯವೇ? ಅಪ್ಪ ಅಮ್ಮ ಇದನ್ನು ಹೇಗೆ ಸ್ವೀಕರಿಸಿಯಾರು? ಮೊದಲೇ ಒಬ್ಬ ಮಗ ದೂರವಾದನೆಂದು ನೊಂದಿದ್ದಾರೆ. ಬೆಂದಿದ್ದಾರೆ. ಈಗ ಇವನು ದೇಶದ ಒಂದು ಮೂಲೆಗೆ ಹೋಗಿ ತನ್ನ ಜೀವವನ್ನೇ ಪಣವಾಗಿಟ್ಟು ಕೆಲಸ ಮಾಡುವೆನೆಂದರೆ ಅವರಿಗೆ ಎಷ್ಟು ಸಂಕಟವಾದೀತು? ನಿರಾಶೆಯಾದೀತು! ಆದರೆ ಈ ಮಹಾನುಭಾವನೋ ಮೊದಲೇ ನಿರ್ಧರಿಸಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡು ಕೊನೆಯ ಗಳಿಗೆಯಲ್ಲಿ ಹೆತ್ತವರ ಒಪ್ಪಿಗೆ ಯಾಚಿಸುತ್ತಿದ್ದಾನೆ! ಈಗ ನಾನೇನು ಮಾಡಲಿ? ಇವನಿಗೆ ಹೇಗೆ ತಿಳಿಸಿಹೇಳಲಿ? ಹೇಗೆ ಅಪ್ಪ ಅಮ್ಮನನ್ನು ಸಮಾಧಾನಿಸಲಿ? ಅನುರಾಧ ಒದ್ದಾಡುತ್ತಾಳೆ.

ಈ ಒದ್ದಾಟದಲ್ಲೇ ಅವಳ ಒಂದು ಮನಸ್ಸು ಸಮಾಧಾನ ಹೇಳುತ್ತದೆ. ವಾಯುದಳವೆಂದರೆ ಹೆದರಿಕೆ ಯಾಕೆ? ಡಿಲ್ಲಿಯಲ್ಲಿ ನಮ್ಮ ಮನೆಯ ಎದುರಿಗಿದ್ದ ಲೀನಾಳ ಅಣ್ಣನ ಗೆಳೆಯ ನೆನಪಿಗೆ ಬಂದಿದ್ದರು. ಅವರು ವಾಯುದಳದಲ್ಲೇ ಇರುವವರು. ಜೀವನದ ಸರ್ವ ಸುಖವೂ ತನ್ನ ಜೀವನದಲ್ಲಿದೆ ಎನ್ನುವಷ್ಟು ಖುಷಿಯಲ್ಲಿದ್ದವರು. ಮದುವೆಯಾಗಿ ಎರಡು ಮುದ್ದಾದ ಮಕ್ಕಳ ತಂದೆ. ನಲವತ್ತು ವರುಷ ಕಳೆದಿದ್ದರೂ ಇಪ್ಪತ್ತು ವರುಷದ ಲವಲವಿಕೆ ಅವರಲ್ಲಿತ್ತು. ಎಲ್ಲರನ್ನೂ ಬಡಿದೆಬ್ಬಿಸಿ ಮಾತನಾಡಿಸುವ ವಿಚಿತ್ರ ಶಕ್ತಿ ಅವರಲ್ಲಿತ್ತು. ಅದೂ ಪಾಕಿಸ್ತಾನದ ಯುದ್ಧವಾಗುವಾಗಲೇ ಅವರು ಗಡಿಯಲ್ಲಿದ್ದರಂತೆ. ಏನಾಗಿದೆ ಅವರಿಗೆ? ಆಯುಷ್ಯವೊಂದು ಚೆನ್ನಾಗಿದ್ದರೆ ಏನೂ ಆಗೋದಿಲ್ಲ. ನಾವೆಲ್ಲಾ ಹೆದರಿ ಹೆದರಿಯೇ ಅಚಲನಂಥ ಹುಡುಗರ ಉತ್ಸಾಹಕ್ಕೆ ಕೊಳ್ಳಿಯಿಡುತ್ತೇವೆ. ಇದು ಸರಿಯೇ? ಈಗ ಆ ಮನುಷ್ಯ ಸಿವಿಲ್ ಏರಿಯಾದಲ್ಲೇ ಇರುವುದು. ಡಿಲ್ಲಿಯಲ್ಲಿ ಈಗ ರಾಷ್ಟ್ರಪತಿಯವರ ರಕ್ಷಣಾದಳದಲ್ಲಿದ್ದಾರೆ. ಎಂಥಾ ಒಳ್ಳೆ ಜೀವನವಿದೆ ಅವರಿಗೆ! ಹಾಗೇ ಆಗಬಾರದೇಕೆ? ಕೆಟ್ಟದ್ದನ್ನೇ ಯಾಕೆ ಯೋಚಿಸಬೇಕು? ವಾಯುದಳಕ್ಕೆ ಸೇರಿದ ಎಲ್ಲರ ಹಣೆಯಲ್ಲೂ ಸಾವೇ ಬರೆದಿದೆಯೇ? ಆದರೂ ಸಾವಿಗೆ ಅತೀ ಸಮೀಪದ ಜೀವನವಲ್ಲವೇ ಅದು? ಸಾವಿಗೆ ಹತ್ತಿರವಾಗಿರಲು ಯಾರಿಗೆ ಮನಸ್ಸಿದೆ? ಅನುರಾಧಳ ಮನಸ್ಸು ಯಾವ ನಿರ್ಧಾರಕ್ಕೂ ಬರದೇ ಹೊಯ್ದಾಡುತ್ತದೆ.

ನಿಧಾನವಾಗಿ ನುಡಿಯುತ್ತಾಳೆ! “ಅಚ್ಚೂ, ನಮ್ಮ ಮನಸ್ಸಿನಲ್ಲಿ ನೀನಿನ್ನೂ ಚಿಕ್ಕ ಮಗುವೇ. ನೀನು ಎತ್ತರಕ್ಕೆ ಬೆಳೆದಿರಬಹುದು! ನಮ್ಮೆಲ್ಲರಿಗಿಂತಲೂ ಬುದ್ಧಿವಂತನಾಗಿರಬಹುದು. ಆದರೂ ನೀನು ನಮ್ಮಿಂದ ದೂರ ಹೋಗುತ್ತೀ ಅಂದರೆ ನಮಗಾರಿಗೂ ಸಂತಸವಿಲ್ಲ. ಸಮ್ಮತಿಯಿಲ್ಲ. ನೀನು ಆರಿಸಿರೋ ಕೆಲಸದಿಂದ ನಿನಗೆ ತೃಪ್ತಿಯಿರಬಹುದು. ಆದರೆ ಒಂದು ಮಾತು. ತಂದೆ ತಾಯಿಯ ವಿಚಾರಕ್ಕೂ ಸ್ವಲ್ಪ ಯೋಚಿಸಬೇಡವೇ? ಅವರಿಗೆ ಇದರಿಂದ ಯಾವ ರೀತಿಯ ಆಘಾತವಾಗಬಹುದೆಂಬುದನ್ನಾದರೂ ಯೋಚಿಸಿರುವೆಯಾ?”

“ಅವರು ಯಾಕೆ ವಿರೋಧಿಸಬೇಕಕ್ಕ? ನಮ್ಮ ಆಯುಷ್ಯ ಗಟ್ಟಿಯಾಗಿದ್ದರೆ ವಾಯುದಳವಾದರೇನು? ಯುದ್ಧ ಭೂಮಿಯಲ್ಲೇ ಇದ್ದರೇನು? ಆಯುಷ್ಯವಿಲ್ಲದಿದ್ದರೆ ಇಲ್ಲೂ ಅಕಾಲ ಮೃತ್ಯುವನ್ನಪ್ಪೋದಿಲ್ಲವೇ? ನೋಡು ಈಗ ಬೆಂಗಳೂರಲ್ಲೇ ನಡೆಯುತ್ತಿರುವ ಅಪಘಾತಗಳನ್ನೇ ಲೆಕ್ಕ ಹಾಕು. ಈಗ ನಮ್ಮ ಕಣ್ಣೆದುರಿಗೇ, ಗಂಗಾರಾಮ್ ಕಟ್ಟಡ ಕುಸಿದು ಎಷ್ಟು ಜನ ಸತ್ತರು. ಅದೂ ಎಂಥಾ ಭಯಾನಕ ಸಾವು! ಚಿತ್ರಹಿಂಸೆಗೂ ಮೀರಿದ ಸಾವು ಕೆಲವರದ್ದು. ಕಳೆದ ವರುಷ ಸರ್ಕಸ್ ಟೆಂಟ್‌ಗೇ ಬೆಂಕಿ ಬಿತ್ತು. ಅಲ್ಲೂ ಸಾವಿನ ನೃತ್ಯ! ಅದರ ಮೊದಲು ಬರೇ ಸಾರಾಯಿ ಕುಡಿದು ಕೆಲವರು ಸತ್ತರು. ಅದಕ್ಕೂ ಮುಂಚೆ, ಸಿಟಿಮಾರ್ಕೆಟಿನಲ್ಲಿ ದೀಪಾವಳಿ ದಿನವೇ ಅಂಗಡಿಗಳಿಗೆಲ್ಲಾ ಬೆಂಕಿ ಹಿಡಿದು ಸಾವನ್ನಪ್ಪಿದವರೆಷ್ಟು? ಯಾಕೆ-ರೈಲ್ವೆ ಅಪಘಾತವಾಗಿ ಎಷ್ಟು ಜನ ಸಾಯುತ್ತಿಲ್ಲ? ಬಸ್ಸು ಮಗುಚಿ ಸಾಯೋರಿಲ್ಲವೆ? ಬಿಡು, ಸ್ಕೂಟರ್, ಬೈಕ್‌ನಲ್ಲಿ ಇಲ್ಲಿಲ್ಲೇ ಓಡಾಡುತ್ತಿರುವಾಗ ಸಾಯೋದಿಲ್ಲವೇ? ಬರೇ ಕಾಲು ದಾರಿಯಲ್ಲಿ ತಮ್ಮಷ್ಟಕ್ಕೆ ನಡೆದು ಹೋಗುತ್ತಿರುವವರ ಮೇಲೆ ವಾಹನ ಹರಿದು ಸತ್ತ ಘಟನೆಗಳಿಲ್ಲವೇ? ವಾಯುದಳದಲ್ಲಿ ಆಗಾಗ ಅಪಘಾತಗಳಾಗುತ್ತವೆಯೆಂದು ತಾನೇ ಭಯ? ವಿಮಾನ ಅಪಘಾತಗಳು ವಾಯುದಳದಲ್ಲಿ ಮಾತ್ರ ಆಗೋದಲ್ಲ. ಎಲ್ಲಾ ಕಡೆ ಆಗುತ್ತವೆ. ದಿನಾಲೂ ಸುದ್ದಿ ಕೇಳುತ್ತಲೇ ಇರುತ್ತೇವೆ. ಹಾಗಂತ ವಿಮಾನದಲ್ಲಿ ಕುಳಿತುಕೊಳ್ಳುವುದನ್ನು ಜನರು ನಿಲ್ಲಿಸುವರೇ? ಕಳೆದ ವರುಷ ಮಂಗಳೂರಲ್ಲಿ ವಿಮಾನ ಬಿತ್ತು. ಏನಾಯ್ತು? ಒಬ್ಬರಿಗೂ ಗಾಯ ಕೂಡಾ ಆಗಿಲ್ಲ. ಯಾಕೆ? ಎಲ್ಲರದ್ದೂ ಆಯುಷ್ಯ ಬಲವಾಗಿತ್ತು. ಮೃತ್ಯು ನಾವು ಎಣಿಸಿದ ಹಾಗೆ ಬರೋದಿಲ್ಲಕ್ಕಾ, ವರುಷಗಟ್ಟಲೆ ಕಾಯಿಲೆಯಿಂದ ನರಳುತ್ತಿರುವವರು ಸಾಯಬೇಕೆಂದು ದಿನಾ ಹಂಬಲಿಸುತ್ತಿದ್ದರೂ ಸಾಯುವರೇ? ಕೆಲವೊಮ್ಮೆ ಸಾವು ಅದಾಗಿಯೇ ನಮಗರಿವಿಲ್ಲದೇ ಹುಡುಕಿಕೊಂಡು ಬರುತ್ತದೆ. ನಮ್ಮನ್ನು ಇಲ್ಲವಾಗಿಸುತ್ತದೆ. ಹಾಗೆಂದು ಯಾರೂ ಅಡಗಿ ಕುಳಿತುಕೊಳ್ಳುವುದಿಲ್ಲವಲ್ಲಾ?”

ಅಚಲನ ವಾಗ್ಸರಣಿ ಅನುರಾಧಳ ಬಾಯಿಗೆ ತಡೆಯಾಗಿ ನಿಲ್ಲುತ್ತದೆ. ಮಾತೇ ಹೊರಡೋದಿಲ್ಲ. ಏನು ವಾದಿಸುತ್ತಾನೆ ಹುಡುಗ! ಮೂರು ವರುಷದ ಹಿಂದೆ ಬರೇ ಚೆಲ್ಲು ಚೆಲ್ಲಾಗಿದ್ದ. ಈಗ ಮಾತನಾಡುವುದನ್ನು ನೋಡಿದರೆ ಯಾರ ಬಾಯನ್ನೂ ಮುಚ್ಚಿಸುವ ಹಾಗಾಗಿದ್ದಾನೆ! ಯಾವ ವಕೀಲನಿಗೆ ಕಮ್ಮಿ ಇವನು? ಅಲ್ಲದೇ ಅವನು ಹೇಳುವುದರಲ್ಲಿ ತಪ್ಪೇನಿದೆ? ಅವನೆಂದಂತೆ ಆಯುಷ್ಯ ಗಟ್ಟಿಯಿದ್ದರೆ ಬೆಂಕಿಗೆ ಬಿದ್ದರೂ ಎದ್ದು ಬರಬಹುದು. ಪ್ರಹ್ಲಾದನ ಹಾಗೆ, ಯಾವ ಬೆಂಕಿಯೂ ಅವನನ್ನು ಸುಡಲಾರದು. ಕುಸಿದ ಗಂಗಾರಾಮ್ ಕಟ್ಟಡದ ಅಡಿಯಿಂದ ಮೂರು ನಾಲ್ಕು ದಿನದ ನಂತರವೂ ಬದುಕಿದ್ದ ಜನರನ್ನೇ ಎಳೆದು ತೆಗೆಯಲಿಲ್ಲವೇ? ಆಯುಷ್ಯವೊಂದಿದ್ದರೆ ಯಾರಿಗೂ ಯಾವ ರೀತಿಯಲ್ಲೂ ಸಾವು ತಟ್ಟದು. ಅದಕ್ಕೆಲ್ಲಾ ಹೆದರಿದರೆ ಮೂಢತನವಲ್ಲದೇ ಮತ್ತೇನು? ನನ್ನ ಆಯುಷ್ಯವೆಲ್ಲಾ ಅವನಿಗಿರಲಿ. ಅವನು ಆರಿಸಿರೋ ಜೀವನದಲ್ಲಿ ಅವನಿಗೆ ಆಸಕ್ತಿಯಿದೆ. ದೇಶ ಭಕ್ತಿಯಿದೆ ಎಂದು ಮನದಲ್ಲೇ ಹಾರೈಸುತ್ತಾಳೆ. ಅವನ ನಿರ್ಧಾರ ಅಚಲವಾದದ್ದು ಎಂದು ಅವಳಿಗೆ ಮನದಟ್ಟಾಗುತ್ತದೆ. ಅವನನ್ನು ಈಗ ವಿರೋಧಿಸಿದರೆ ಪ್ರಯೋಜನವಿಲ್ಲವೆನ್ನುವ ಅರಿವೂ ಅವನ ಮುಖದಲ್ಲಿನ ದೃಢತೆ ನೋಡಿ ಅವಳಿಗಾಗುತ್ತದೆ.

ಕಂಠ ತುಂಬಿ ಬರುತ್ತಿದ್ದರೂ ಬಾಯಿ ಬಿಡುತ್ತಾಳೆ. ‘ಅಚ್ಚೂ, ನೀನಂತೂ ನಿರ್ಧಾರ ಮಾಡಿ ಆಗಿದೆಯಲ್ಲ? ಅದಿರಲಿ, ನೀನು ಸೇರುವುದೇ ಅಂದಾದರೆ ಯಾವಾಗ ಸೇರಲಿಕ್ಕೆ?’

“ಮೊದಲು ಒಂದೂವರೆ ವರುಷದ ತರಬೇತಿಯಿದೆ. ಮೊದಲು ಡುಂಡಿಗಲ್‌ನಲ್ಲಿ. ಆಮೇಲೆ ಬೀದರಿನಲ್ಲಿ ಅದು ಮುಗಿದ ಮೇಲೆ ಎಲ್ಲಾದರೂ ಗಡಿ ಪ್ರದೇಶದಲ್ಲಿ ವಾಯುದಳದ ನೆಲೆಗೆ ಹಾಕುತ್ತಾರೆ, ಅಲ್ಲಿ ಕೆಲವು ವರುಷ ಕೆಲಸ ಮಾಡಿದರೆ ಮತ್ತೆ ನಾವು ಸಿವಿಲ್ ಏರಿಯಾಕ್ಕೆ ಎಲ್ಲಿಗಾದರೂ ಬರಬಹುದು. ಬೇರೆ ಬೇರೆ ರಾಜ್ಯಗಳ ಗವರ್‍ನರ್‍‌ಗಳ ರಕ್ಷಣಾದಳದಲ್ಲೂ ಇರಬಹುದು. ಅಕ್ಕಾ ಖಂಡಿತವಾಗಿಯೂ ಇದು ಹೆದರುವಂಥಾ ಜೀವನವಲ್ಲ. ಅದೊಂದು ಖುಷಿ ಪಡುವಂಥಾ ಜೀವನ! ಅದನ್ನು ನಾನು ಹೃದಯಪೂರ್ವಕವಾಗಿ ಆಯ್ದುಕೊಂಡಿದ್ದೇನೆ. ಬೇರೆ ಕೆಲಸಗಳಲ್ಲಿ ನನಗೆ ಆತ್ಮ ತೃಪ್ತಿ ಖಂಡಿತಾ ಸಿಗಲಿಕ್ಕಿಲ್ಲ. ಅಕ್ಕಾ, ಇನ್ನು ಎರಡು ತಿಂಗಳಲ್ಲಿ ನಾನು ಸೇರಬೇಕು. ಅಪ್ಪ ಅಮ್ಮನನ್ನು ಒಪ್ಪಿಸುವ ಒಂದು ಉಪಕಾರ ಮಾಡು. ತರಬೇತಿ ಸಮಯದಲ್ಲಿ ನನಗೆ ಸಂಬಳವಿಲ್ಲ. ಆದರೆ ಎಲ್ಲಾ ಖರ್ಚೂ ಅವರೇ ನೋಡಿಕೊಳ್ಳುತ್ತಾರೆ, ಡುಂಡಿಗಲ್ಲಿನ ತರಬೇತಿ ಮುಗಿದ ಕೂಡಲೇ ಸ್ವಲ್ಪ ದಿನದ ರಜೆಯಿದೆಯಂತೆ. ಆಗ ನಾನೇ ಬರುವೆನಲ್ಲ? ಅಕ್ಕಾ, ನಿನ್ನ ಹಾರೈಕೆ ನನಗಿದೆಯಲ್ಲ? ಎಲ್ಲರೂ ನನ್ನನ್ನು ಸಂತೋಷದಿಂದ ಕಳುಹಿಕೊಟ್ಟರೆ ನನ್ನ ಮನಸ್ಸಿಗೂ ಸಮಾಧಾನ. ಅದನ್ನು ಆಗುವಂತೆ ಮಾಡೋದು ನಿನ್ನ ಜವಾಬ್ದಾರಿ.” ಅಚಲ ಚಿಕ್ಕ ಮಗುವಿನಂತೆ ಗೋಗರೆದಾಗ ಅನುರಾಧ ಮೂಕಳಾಗುತ್ತಾಳೆ. ಅವನ ಸ್ವರದಲ್ಲಿನ ದೃಢತೆ ಅವಳ ಮನದೊಳಗೆ ಕೈ ಹಾಕಿ ಕಲಕಿದಂತಾಗುತ್ತದೆ.

“ಅಚ್ಚೂ ನೀನೆಲ್ಲಿದ್ದರೂ ನನ್ನ ಆಶೀರ್ವಾದ ಹಾರೈಕೆ ಇದ್ದೇ ಇದೆ.

I wish you good luck and successful long life.

ಕಣ್ಣಲ್ಲಿ ತುಂಬಿದ ನೀರು ಅಚಲನ ರೂಪ ಮರೆಮಾಡುತ್ತದೆ.

“ತುಂಬಾ ಉಪಕಾರವಾಯ್ತು ಅಕ್ಕ! ನೀನೊಬ್ಬಳು ಎಲ್ಲಾ ತಿಳಿದುಕೊಳ್ಳುವಿಯೆಂಬ ನಂಬುಗೆ ನನಗಿತ್ತು.” ಎಂದವನೇ ಬಾಗಿ ಅವಳ ಕಾಲು ಮುಟ್ಟಿ ನಗುತ್ತಾ ಹೊರಗೋಡುತ್ತಾನೆ. ಆ ನಡುಗೆಯಲ್ಲಿನ ಗೆಲುವನ್ನು ಅನುರಾಧಳೆಂದೂ ಮರೆಯಲಾರಳು.

ಅವನು ಹೊರಗೋಡಿದ ಕೂಡಲೇ ಪೂರ್ಣಿಮಾ “ಏನಕ್ಕಾ? ನೀನು ಹೀಗೆಂದರೆ ಅವನು ಖಂಡಿತಾ ಹೋಗಿಯೇ ಹೋಗುತ್ತಾನೆ.” ಎಂದು ಅಕ್ಷೇಪಿಸುತ್ತಾಳೆ.

ಅನುರಾಧ ನಿಧಾನವಾಗಿ ಬಿಡಿಸಿ ಬಿಡಿಸಿ ನುಡಿಯುತ್ತಾಳೆ. “ಪೂರ್ಣಿ, ಅವನ ಸ್ವರದಲ್ಲಿನ ನಿಶ್ಚಯ, ಮಾಡಿದ ನಿರ್ಧಾರದ ದೃಢತೆ ಗುರುತಿಸಲಿಲ್ಲವೇ ನೀನು? ಯಾರು ಏನು ಹೇಳಿದರೂ, ಅವನೀಗ ಅವನ ನಿರ್ಧಾರ ಬದಲಿಸೋದಿಲ್ಲ. ಯಾರ ಕಣ್ಣೀರೂ ಅವನನ್ನು ಅಲ್ಲಾಡಿಸೋದಿಲ್ಲ! ಅವನು ಹೋಗಿಯೇ ಹೋಗುತ್ತಾನೆ. ಹಾಗಿರುವಾಗ ಅವನ ಮನಸ್ಸಿಗೆ ಬೇಸರ ಉಂಟು ಮಾಡಿ ಯಾಕೆ ಕಳುಹಿಸುವುದು? ನಗುನಗುತ್ತಾ ಕೆಲಸಕ್ಕೆ ಸೇರಲಿ, ಅವನಿಗೆ ಏನೂ ಆಗೋದಿಲ್ಲ. ಅವನಿಗೆ ಅವನ ಜೀವನದಲ್ಲಿ ತೃಪ್ತಿಯಿರುತ್ತದೆ. ಮಾಡುವ ಕೆಲಸದಲ್ಲಿ ಸಂತೃಪ್ತಿ ಇಲ್ಲದಿದ್ದರೆ ಜೀವನದಲ್ಲಿ ನೆಮ್ಮದಿಯೇ ಇರೋದಿಲ್ಲ. ಅವನದೀಗ ಚಿಕ್ಕ ವಯಸ್ಸು. ಸ್ವಲ್ಪ ಸಮಯ ಅದರಲ್ಲಿರಲಿ. ಆಮೇಲೆ ಅವನೇ ಮನಸ್ಸು ಬದಲಾಯಿಸಿಯಾನು.”

ಪೂರ್ಣಿಮಾ ಏನೂ ಮಾತನಾಡೋದಿಲ್ಲ. ಅವಳಿಗೆ ಅಚಲ ವಾಯದಳಕ್ಕೆ ಸೇರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಪ್ರೀತಿಯ ತಮ್ಮ ಅವನು. ಅವನು ಮನೆಯಲ್ಲಿ ಇಲ್ಲದಿದ್ದರೆ ತುಂಬ ಬೇಜಾರು. ಅಣ್ಣ ಊರು ಬಿಟ್ಟು ಹೋದವನು ಎಲ್ಲರಿಂದಲೂ ದೂರವೇ ಆದ. ಯಾವ ಅನ್ಯೋನ್ಯತೆಯೂ ಅವನಲ್ಲಿ ಉಳಿದಂತಿಲ್ಲ. ಇವನೂ ದೂರ ಹೋದರೆ ಅಮ್ಮ ಅಪ್ಪನ ಗತಿ? ಎಲ್ಲಾ ಒಂದು ನೆಲೆಗೆ ಬಂದ ಮೇಲೆ ತಾನಂತೂ ಮದುವೆಯಾಗಿ ಹೋಗುವವಳು. ಮದುವೆಯಾಗದೇ ಉಳಿಯುವ ಇಚ್ಛೆ ನನಗಿಲ್ಲ. ಈಗ ಪರಿಸ್ಥಿತಿಯ ಒತ್ತಡಗಳಿಂದಾಗಿ ಹೀಗಿರುವುದು. ಎಲ್ಲಾ ಬಯಕೆಗಳಿಗೂ ಕಡಿವಾಣ ಹಾಕಿ ಸನ್ಯಾಸಿಯ ಹಾಗಿರುವುದು. ಮದುವೆಯಾಗಿ ಹೋದ ಮೇಲೆ ಅಪ್ಪ ಅಮ್ಮನ ಜತೆಗೆ ಯಾರಿರುವುದು ಎಂಬ ಯೋಚನೆಯೂ ಅವಳಿಗೆ ಇದೆ. ಅಚಲ, ಅವನ ಹೆಂಡತಿಯೇ ಅವರ ಜತೆಗಿರಬೇಕಲ್ಲ? ನಿರುಪಮಾಳ ಓದು ಮುಗಿಯಲು ಇನ್ನೂ ಮೂರು ವರುಷವಿದೆ. ಅವಳಂತೂ ಇನ್ನೂ ಮಗುವೇ. ಇಷ್ಟೆಲ್ಲಾ ತಲೆಬಿಸಿಗಳಿದ್ದರೂ ಅವಳಿಗಿನ್ನೂ ಜೀವನದ ನಿಗೂಢತೆಯ ಅರಿವು ಮೂಡಿಲ್ಲ.

ಪೂರ್ಣಿಮಾಳ ಯೋಚನೆ ಸಾಗುತ್ತದೆ. ಎರಡು-ಮೂರು ವರುಷದ ಹಿಂದೆ ಈ ಮನೆಯಲ್ಲಿ ಹೀಗೆ ಒದ್ದಾಟಗಳಿತ್ತೇ? ಇಲ್ಲ. ಯಾವಾಗ ನೋಡಿದರೂ ಕಿಸಿಪಿಸಿ ಮಾತು. ಗಿಲಿಗಿಲಿ ನಗು, ಈಗ ಯಾವಾಗ ನೋಡಿದರೂ ಯೋಚನೆಗಳು. ಎಲ್ಲರಿಗೂ ಯೋಚನೆಗಳೇ. ಅಪ್ಪ ಮನೆಯಲ್ಲಿ ಹಾಯಾಗಿರಬೇಕಾದ ಪ್ರಾಯದಲ್ಲಿ ದುಡಿಯುತ್ತಿದ್ದಾರೆ. ಅಮ್ಮ ಆರಾಮವಾಗಿರಬೇಕಾದ ಸಮಯದಲ್ಲಿ ಈ ಎಲ್ಲಾ ತಲೆಬಿಸಿಗಳಿಗೆ ತಲೆಬಾಗಿ, ಕುಗ್ಗಿದ್ದಾರೆ. ನಾವು ಅವರಿಗೆ ಐದು ಜನ ಮಕ್ಕಳು. ಹೀಗಿದ್ದೂ ಅವರಿಗೆ ಈ ರೀತಿಯ ಒದ್ದಾಟ. ಯಾಕೆ ಹೀಗೆ? ಸಾಯುವ ಕಾಲಕ್ಕೆ ಮಕ್ಕಳಿಂದ ಸುಖಜೀವನ ಸಿಗುತ್ತದೆ ಎಂದಲ್ಲವೇ ಇಷ್ಟು ಜನರನ್ನು ಹುಟ್ಟಿಸಿ, ಎಲ್ಲ ಸೌಕರ್ಯಗಳನ್ನೂ ತ್ಯಜಿಸಿ ಅವರನ್ನು ಸಾಕಿ ದೊಡ್ಡವರನ್ನಾಗಿ ಮಾಡಿದ್ದು? ಆದರೆ ಈಗ? ಅವರ ದುಡಿಮೆ, ಒದ್ದಾಟ, ಅವರಿಗಿದ್ದೇ ಇದೆ. ಮೊದಲಿಗಿಂತಲೂ ಜವಾಬ್ದಾರಿಗಳೂ ಜಾಸ್ತಿ, ದುಡಿತ ಜಾಸ್ತಿ. ಈ ಪ್ರಾಯದಲ್ಲಿ ಅವರಿಗಾದರೂ ದುಡಿಯಲು ಶಕ್ತಿ ಎಲ್ಲಿಂದ ಬರಬೇಕು? ಐದು ಜನರನ್ನು ಸಾಕಿ, ಅವರಿಗೆ ಬೇಕಷ್ಟು ವಿದ್ಯೆಯಿತ್ತು ಅವರನ್ನು ಒಂದು ನೆಲೆಗೆ ಮುಟ್ಟಿಸುವುದೇನು ಸುಲಭದ ಕೆಲಸವೇ? ಈಗಿನ ಹಾಗಿದ್ದರೆ ನಾವೆಲ್ಲಾ ಕಲಿಯಲಿಕ್ಕೇ ಇಲ್ಲವಿತ್ತು. ಬಾಲವಾಡಿಗೆ ಸೇರಬೇಕಾದರೆ ಶುರುವಾಗುತ್ತದೆ ಸೀಟಿಗಾಗಿ ಪರದಾಡಲು, ಈಗಿನವರು ಈ ಬವಣೆ ಬೇಡವೆಂದೇ ಒಂದೊ ಎರಡೋ ಸಾಕು ಎಂದು ಹೇಳುವುದಿರಬೇಕು. ಆದರೆ ಒಂದೇ ಇದ್ದಾಗ ಆ ಮಗ ಆನಂದಣ್ಣನಂತೇ ದೂರ ಸಿಡಿದು ನಿಂತರೆ ಆ ತಂದೆ ತಾಯಿಯರ ಗತಿಯೇನು? ಈಗ ಅಣ್ಣ ದೂರವಾದರೂ ನಾವು ನಾಲ್ಕು ಜನರಿಲ್ಲವೇ? ಹೆಚ್ಚು ಮಕ್ಕಳಿದ್ದರೆ ಒಟ್ಟಿನಲ್ಲಿ ಒಬ್ಬನಾದರೂ ಒದಗುತ್ತಾನೆ. ಅದು ಈಗಿನವರ ಅನುಭವಕ್ಕೆ ಬರಬೇಕಷ್ಟೇ. ಈಗ ಮಕ್ಕಳು ಕಡಿಮೆ ಸಾಕೆಂದವರು ಮುಂದೆ ಆದಷ್ಟು ಆಗಲಿ ಎಂದೂ ಯೋಚಿಸಬಹುದೇನೋ? ಒಟ್ಟು ಕಾಲದ ಮಹಿಮೆ, ನಾಣ್ಯ ಯಾವಾಗ ತಿರುಗುವುದೆಂದು ಯಾರಿಗೂ ತಿಳಿಯೋದಿಲ್ಲ!’

ಹೊರಗಿನಿಂದ ಕರೆಗಂಟೆ ಶಬ್ದ ಮಾಡಿದಾಗ ಪೂರ್ಣಿಮಾಳ ಯೋಚನೆ ಕಡಿದು ಬೀಳುತ್ತದೆ. ಯಾರೆಂದು ನೋಡಲು ಎದ್ದು ಹೋಗುತ್ತಾಳೆ.

ಅನುರಾಧಳ ಮನದೊಳಗೆ ಯೋಚನೆಯ ಘರ್ಷಣೆ ನಡೆಯುತ್ತದೆ. ಅಮ್ಮ ಅಪ್ಪ ಇವನ ಯೋಚನೆಗೆ ಒಪ್ಪಿಯಾರೇ? ಮೊದಲಿನ ಹಾಗಿದ್ದಿದ್ದರೆ ಬಿಡುತ್ತಿದ್ದರೇನೋ? ಈಗ ಒಬ್ಬ ಮಗ ದೂರಾಗಿ ಇಬ್ಬರಲ್ಲೂ ಧೈರ್ಯ ಕುಸಿದಿದೆ. ಇವನೂ ದೂರ ಹೋಗುವೆನೆಂದರೆ ಮೊದಲೇ ಕುಗ್ಗಿದ ಮನಸ್ಸು ಮತ್ತಷ್ಟು ದೃತಿಗೆಡಬಹುದು. ಆದರೂ ಅವರಿಗೆ ಇದನ್ನು ತಿಳಿಸಲೇಬೇಕಲ್ಲ? ನನ್ನ ತಲೆಗೆ ಈ ಭಾರ ಹಾಕಿ ಅವನು ನಿಶ್ಚಿಂತೆಯಿಂದ ಇರಬಹುದಿನ್ನು. ಇನ್ನೂ ಎರಡು ತಿಂಗಳಿದೆಯಲ್ಲಾ ನಿಧಾನವಾಗಿ ಹೇಳಿದರಾಯಿತು. ಎಲ್ಲಾದರೂ ಅವನು ಮನಸ್ಸು ಬದಲಾಯಿಸಿದರೆ? ದೇವರು ಯಾರ ಯಾರ ಭವಿಷ್ಯ ಯಾವ ಯಾವ ರೀತಿಯಲ್ಲಿ ರೂಪಿಸಿದ್ದಾನೋ ಯಾರಿಗೆ ಗೊತ್ತು? ನಾಳೆ ಅಚಲ ಅದರಲ್ಲೇ ಮೇಲೆ ಮೇಲೆ ಹೋಗಿ ಭುಜ ತುಂಬಾ ಬಹುಮಾನದ ಗುರುತುಗಳನ್ನು, ಕುತ್ತಿಗೆ ತುಂಬಾ ಪದಕಗಳನ್ನು ಹೇರಿಕೊಂಡು ಬಂದರೆ ಯಾರಿಗೆ ಸಂತೋಷವಾಗಲಿಕ್ಕಿಲ್ಲ? ಅವನು ಎಲ್ಲರಂತಲ್ಲ. ಅವನೆಲ್ಲಿದ್ದರೂ ಮೆರೆಯುತ್ತಾನೆ. ಅವನೊಂದು ನಕ್ಷತ್ರ, ಹೊಳೆಯುವ ನಕ್ಷತ್ರ, ಯೋಚಿಸುತ್ತಾ ಅವಳ ಕಣ್ಣು ಹನಿಗೂಡುತ್ತದೆ.

ಸಾವರಿಸಿಕೊಂಡು ಗಂಟೆ ಕಡೆ ನೋಡಿದಾಗ, ಗಂಟೆ ಐದು ಆಗಲಿಕ್ಕಾಗಿತ್ತು. ಅಮ್ಮ ಅಡುಗೆ ಮನೆಯಲ್ಲಿ ಕಾಫಿ ತಯಾರಿಸೋ ಶಬ್ದ ಕೇಳಿಸುತ್ತದೆ. ತಂದೆಯಿನ್ನೂ ಎದ್ದ ಹಾಗಿಲ್ಲ. ಈ ನಿರುಪಮಾ ಭಾನುವಾರವಾಗಿಯೂ ಎಲ್ಲಿ ಹೋಗಿದ್ದಾಳೆ? ವಿಪರೀತ ಬೇಜವಾಬ್ದಾರಿತನದ ಹುಡುಗಿ, ಮಕ್ಕಳಾಟಿಕೆ ಇನ್ನೂ ಹೋಗಿಲ್ಲ. ಸ್ವಲ್ಪ ತಿಳಿಹೇಳಬೇಕು. ಪೂರ್ಣಿಮಾ ಎಷ್ಟು ಗಂಭೀರಳಾಗಿದ್ದಾಳೆ! ಅಚಲ ಹೋಗುವ ಮೊದಲೇ ಶ್ರೀಕಾಂತನನ್ನು ತರಿಸಿ ಮದುವೆ ನಿಶ್ಚಯಿಸಿ ಬಿಡಬೇಕು. ಪೂರ್ಣಿಮಾ ಏನನ್ನುತ್ತಾಳೋ? ಹುಡುಗ ಸ್ವಲ್ಪ ಕಪ್ಪು, ತೆಳ್ಳಗಿದ್ದಾನೆ. ಆದರೂ ಒಳ್ಳೆಯ ಹುಡುಗ. ಪೂರ್ಣಿಮಾಳನ್ನು ಖಂಡಿತಾ ಸುಖವಾಗಿಡಬಲ್ಲ. ನೋಡೋಣ, ವರದಕ್ಷಿಣೆ ಎಷ್ಟು ಕೇಳುತ್ತಾರೋ? ಇವಳ ಮದುವೆ ಮುಗಿದರೆ ಮತ್ತೆ ನಿರುಪಮಾಳೊಬ್ಬಳೇ. ಅವಳದ್ದು ಚಿಂತಿಲ್ಲ. ಅಚಲನಿದ್ದಾನಲ್ಲ? ಎಲ್ಲರೂ ಮದುವೆಯಾಗಿ ಅವರವರಷ್ಟಕ್ಕೆ ನೆಲೆಸಿದರೆ ಅಪ್ಪ ಅಮ್ಮನ ಜತೆಗಾರಿರುವುದು? ನಮ್ಮದು ವರುಷಕ್ಕೊಂದು ಜಾಗ ಆನಂದ ದೂರದಲ್ಲಿದ್ದಾನೆ. ಅಚಲನೂ ಮದುವೆಯಾದ ಮೇಲೆ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾನೆ. ಈ ಮನೆಬಿಟ್ಟು ಹೋಗಲು ಇಬ್ಬರಿಗೂ ಇಷ್ಟವಾಗಲಿಕ್ಕಿಲ್ಲ. ಅದೂ ಒಂದು ಯೋಚಿಸಬೇಕಾದ ಸಂಗತಿಯೇ! ಅವರನ್ನು ಸಾಕುವುದು ಯಾರಿಗೂ ಭಾರವಾಗಲಿಕ್ಕಿಲ್ಲ. ಎಲ್ಲರೂ ಇಂತಿಷ್ಟೇ ಅವರ ಖರ್ಚಿಗೆ ಕೊಡುತ್ತಾ ಬಂದರೆ ಅವರಿಗೇನು ಕಮ್ಮಿಯಾಗುತ್ತದೆ? ಅಣ್ಣನಿಗೂ ಒಂದು ಕಾಗದ ಬರೆದರೇನು? ಅವನಿಲ್ಲಿಗೆ ಬಾರದೇ ಎಷ್ಟು ದಿನವಾಯಿತೆಂದು ಮೊದಲು ತಿಳಿದುಕೊಳ್ಳಬೇಕು. ಅವನಿಗೇಕೆ ಈ ರೀತಿಯ ನಿರಾಸಕ್ತಿ ತಂದೆ ತಾಯಿಯ ಮೇಲೆ? ಕೈತುಂಬಾ ಸಂಪಾದನೆಯಿದೆ. ಜೀವನದಲ್ಲಿ ನೆಮ್ಮದಿಯಲ್ಲಿರಬೇಕಾದ ಕಾಲದಲ್ಲಿ ಅಪ್ಪ ಅಮ್ಮನಿಗೆ ಇಲ್ಲದ ನೋವು ವ್ಯಥೆ ಅನುಭವಿಸಲಿಕ್ಕಾಯ್ತು. ವೃದ್ಧಾಪ್ಯದಲ್ಲಿ ಈ ವ್ಯಥೆಗಳೇ ಕಟ್ಟಿಟ್ಟ ಬುತ್ತಿಯೇನು?

ಕಣ್ಣು ಮುಂಚಿಕೊಂಡು ಯೋಚಿಸುತ್ತಿದ್ದರೂ ಹತ್ತಿರ ನಿರುಪಮಾ ಬಂದು ಕುಳಿತ ಅನುಭವವಾಗುತ್ತದೆ. ಮೆಲ್ಲನೇ ಕಣ್ಣು ತೆರೆದಾಗ ಬಿಸಿಲಲ್ಲಿ ಬಂದುದರಿಂದ ಕೆಂಪಗಾದ ನಿರುಪಮಾಳ ಮುಖ ಕಾಣಿಸುತ್ತದೆ.

“ಎಲ್ಲಿಗೆ ಹೋಗಿದ್ದೆ ಆ ಬಿಸಿಲಿಗೆ? ಇಡೀ ದಿನ ಸುತ್ತಾಟವೇ ಆಯ್ತಲ್ಲ ನಿನ್ನದು? ಭಾನುವಾರವಾದರೂ ಮನೆಯಲ್ಲಿರಬಾರದೇ?”

“ಮನೆಯೊಳಗೇ ಇದ್ದೆ. ಆದರೆ ಇಲ್ಲಲ್ಲ. ಪ್ರೇರಣಾಳ ಮನೆಯಲ್ಲಿ. ಕೇರಂ ಆಡ್ತಾ ಹೊತ್ತು ಹೋಗಿದ್ದೇ ತಿಳಿಯಲಿಲ್ಲ. ಮನೆಯಲ್ಲಿ ನೀವೆಲ್ಲಾ ಮಲಗಿರುವಾಗ ನಾನೊಬ್ಬಳೇ ಕೂತು ಮಾಡುವುದಾದರೂ ಏನೆಂದು ಹೋದುದು. ಸುಮ್ಮನಿದ್ದರೆ ಬೋರ್ ಆಗುವುದಿಲ್ಲವೇ?”

ಅನುರಾಧಳಿಗೆ ವಿಚಿತ್ರವೆನಿಸುತ್ತದೆ. ಮನೆಯಲ್ಲಿದ್ದರೆ ಬೋರ್ ಆಗುವುದೇ! ಹಾಗೆಂದರೇನು? ತನಗೆ ಮನೆಯಲ್ಲಿ ಎಂದೂ ಬೇಸರ ಬಂದಿರಲಿಲ್ಲ, ಇವಳಿಗೆ ಬೋರ್ ಅಂತೆ. ಈಗಿನ ಮಕ್ಕಳೇ ವಿಚಿತ್ರ!

“ಇನ್ನೂ ಆಟದಲ್ಲೇ ಇದ್ದೀಯಲ್ಲಾ? ಇಷ್ಟು ದೊಡ್ಡವಳಾದರೂ ಇನ್ನೂ ಚಿಕ್ಕ ಮಕ್ಕಳ ಹಾಗೆ ಕೇರಂ, ಅದು, ಇದೆಂದು ಆಡ್ತಾ ಇರು. ಸ್ವಲ್ಪವೂ ಜವಾಬ್ದಾರಿ ಬೆಳೆಯಬೇಡವೇ? ಭಾನುವಾರವಾದರೂ ಮನೆಯಲ್ಲಿದ್ದು ಅಮ್ಮನಿಗೆ ಸ್ವಲ್ಪ ಸಹಾಯ ಮಾಡಿದರೇನು?”

ಗದರಿಸಿದರೂ ಸಿಟ್ಟಾಗದೇ ನಿರುಪಮಾ ನಕ್ಕು ಬಿಟ್ಟಾಗ ಅನುರಾಧಳೇ ಪೆಚ್ಚಾಗುತ್ತಾಳೆ. ಈ ಬುದ್ಧಿಯಿಲ್ಲದ ಹುಡುಗಿಗೆ ತಿಳಿಸಿ ಹೇಳುವುದಾದರೂ ಹೇಗೆಂದು ತಿಳಿಯದೇ ಒದ್ದಾಡುತ್ತಾಳೆ. ನಾಳೆ ಪೂರ್ಣಿಮಾ ಮದುವೆಯಾಗಿ ಹೋದರೆ ತಾನಾಗಿಯೇ ಜವಾಬ್ದಾರಿ ವಹಿಸಿಕೊಳ್ಳಲೇಬೇಕಲ್ಲ? ಆಗ ಸರಿಯಾಗದೆಲ್ಲಿ ಹೋಗ್ತಾಳೆ? ಅಲ್ಲಿ ತನಕ ಹೀಗೆ ಇದ್ದರೆ ತಪ್ಪೇನು? ತಲೆಗೆ ಭಾರ ಬೀಳಲು ಶುರುವಾದರೆ ಮತ್ತೆ ಅದರಿಂದ ಬಿಡುಗಡೆ ತಪ್ಪಿದ್ದಲ್ಲ.

ಕಾಫಿಗೆಂದು ಅಮ್ಮ ಕರೆದಾಗ ತಟ್ಟನೇ ಎದ್ದ ಅನುರಾಧಗೆ ಹೊಟ್ಟೆಯಲ್ಲಿ ಛಳುಕು ಬಂದ ಹಾಗೆ ಆಗಿ “ಅಮ್ಮಾ” ಎಂದು ಕಿರಿಚಿಕೊಳ್ಳುತ್ತಾಳೆ. ಒಮ್ಮೆಲೇ ಹೊಟ್ಟೆ ತುಂಬಾ ಮಗು ಓಡಾಡಿದ ಅನುಭವವಾಗುತ್ತದೆ.

ಇವಳ ಬೊಬ್ಬೆಗೆ ಒಳಗೋಡಿ ಬಂದ ಸುಶೀಲಮ್ಮ ಗಾಬರಿಯಿಂದ “ಏನು ಅನು? ಏನಾಯ್ತು?” ಎಂದು ಕೇಳಿದರೂ, ಅವರ ಮನಸು ಅನುರಾಧಳಿಗೆ ದಿನ ತುಂಬಿರುವುದರಿಂದ ಹೀಗೇ ಇರಬೇಕೆಂದು ಊಹಿಸಿತ್ತು.

“ಏನಿಲ್ಲಮ್ಮಾ ನಿಮ್ಮ ಮೊಮ್ಮಗಳು ಕಾರುಭಾರು ಈಗಲೇ ತೋರಿಸುತ್ತಿದ್ದಾಳೆ. ಹೇಗೆ ಒದೆಯುತ್ತಾಳೆ. ಗಲಾಟೆಯಲ್ಲಿ ಈ ನಿರುಪಮಾಳಂತೇ ಆಗ್ತಾಳೇನೋ” ಎನ್ನುವಾಗ ಅಲ್ಲಿಗೆ ಬಂದ ಅಚಲ ಯಾಕಕ್ಕಾ ನನ್ನ ಹಾಗಿನ ಮಗ ಬೇಡ್ವ ನಿನಗೆ? ನೋಡ್ತಾ ಇರು. ನಿನಗೆ ಮಗನೇ ಆಗೋದು. ಅದೂ ನನ್ನ ಹಾಗೇನೇ ಎಲ್ಲಾ. ಹಟಮಾರಿ ಕೂಡಾ. ಮತ್ತೆ ನೀವೆಲ್ಲಾ ಹೇಳುತ್ತಿರಿ. ಇದು ಜೂನಿಯರ್‌ ಅಚಲನೆಂದು. ಎನ್ನುತ್ತಾ ನಗುವಾಗ ಸುಶೀಲಮ್ಮ ಗದರಿಸುತ್ತಾರೆ.

“ಸುಮ್ಮನಿರಿ, ಯಾರ ಹಾಗಿದ್ದರೂ ಚಿಂತಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡೋದೇ ನಿಮಗೆ ಗೊತ್ತು. ಒಮ್ಮೆ ಸುಖವಾಗಿ ಹೆರಿಗೆಯಾಗಲಿ.”

ಎಲ್ಲರೂ ನಗುತ್ತಾ ಕಾಫಿ ಕುಡಿಯುವಾಗ ಪೂರ್ಣಿಮಾ ಮಾತ್ರ ಸಪ್ಪೆಯಾಗಿರುವುದನ್ನು ಅನುರಾಧ ಗಮನಿಸುತ್ತಾಳೆ. “ಯಾಕೆ ಪೂರ್ಣಿಮಾ ಹೀಗಾಗಿದ್ದಾಳೆ? ಅವಳ ನಗು ಎಲ್ಲಿ ಅಡಗಿದೆ? ಹುಡುಗಿ ಯಾಕೆ ಹೀಗಾಗುತ್ತಿದ್ದಾಳೆ? ಹೊರಗಿನ ದುಡಿತ ಅವಳನ್ನು ಸಂಪೂರ್ಣ ಹಿಂಡಿದೆ. ಪಾಪ! ನಾನು ಈ ಪ್ರಾಯಕ್ಕೆ ಮದುವೆಯಾಗಿ ಹೋಗಿದ್ದೆ. ಆಗ ಹೀಗೆಲ್ಲಾ ತಾಪತ್ರಯಗಳಿತ್ತೇ? ಪೂರ್ಣಿಮಾಳಿಗೆಷ್ಟು ಜವಾಬ್ದಾರಿಗಳು! ಈಗ ಈ ಅಚಲನೊಬ್ಬ ದೊಡ್ಡ ಬಾಂಬ್ ಎಸೆದಿದ್ದಾನೆ. ಅವಳು ಮನಬಿಚ್ಚಿ ಮಾತನಾಡುವ ಹುಡುಗಿಯೂ ಅಲ್ಲ. ಏನೋ ಅವಳ ಮನದಲ್ಲಿ ಕೊರಗು ತುಂಬಿರಬೇಕು. ನಾನಾದರೂ ಅದನ್ನು ವಿಚಾರಿಸಬೇಕು. ನನ್ನ ಹತ್ತಿರವಲ್ಲದೇ ಬೇರಾರ ಹತ್ತಿರ ಹೇಳುತ್ತಾಳೆ ಅವಳು?” ಎಂದು ನಿರ್ಧರಿಸಿಕೊಳ್ಳುತ್ತಾಳೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಡು
Next post ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ

ಸಣ್ಣ ಕತೆ

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…