ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ
ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ;
ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ
ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ.
ಕಣ್ತೆರೆದ ಬದುಕು ಬೆಳಕಿನ ಪಾತ್ರದಲಿ ಚಲಿಸಿ,
ತೆವಳುತ್ತ ಬಲಿಯುತ್ತ ಏರುವುದು ಶಿಖರವನು ;
ಕಾಡುವುವು ಗ್ರಹಣ ಆ ತೇಜದೇಳ್ಗೆಯ ಸೆಣಸಿ,
ಕೆಡಿಸುವನು ಕಾಲ ತಾನೇ ಒಮ್ಮೆ ಕೊಟ್ಟುದನು.
ಯೌವನದ ಏಳಿಗೆಯ ತಲೆಗೆ ತಡೆಮೊಳೆ ಹೊಡೆದು
ಚೆಲುವಿನಾ ಹಣೆಯಲ್ಲಿ ಗೆರೆಗಳನು ಕೊರೆಯುವನು,
ಬಾಳು ನೀಡಿದಪೂರ್ವ ವಸ್ತುಗಳ ನುಂಗುವನು,
ಬಿಡದೆ ಕುಡುಗೋಲಿಂದ ಎಲ್ಲವನು ಸವರುವನು.
ಆದರೇನಂತೆ ನಿನ್ನನು ಹೊಗಳುವೀ ಕವಿತೆ
ಉಳಿವುದೆಂದೊ ಕ್ರೂರಿ ಕಾಲನಿಗೂ ಸಿಗದಂತೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 60
Like as the waves make towards the pebbled shore