ದೇವಕಿಯ ಮೇಲೊಂದು ಕತೆ
ಬರೆಯಲು ಕುಳಿತೆ ಗರ್ಭದಲ್ಲಿ
ಮಗು ಹೊತ್ತೂ ಹೊತ್ತೂ ಹೆರುವ
ಗದ್ದಲದಲ್ಲಿಯೇ ಇದ್ದ ದೇವಕಿ
ನಿನಗೆ ಕೇಳಿಸಲಿಲ್ಲವೆ ಆ ಕಂಸನ
ಆರ್ಭಟ! ಜೊತೆ ಜೊತೆಗೇ ಶ್ರೀ ಕೃಷ್ಣನ
ಅಳು, ಒಳ್ಳೆಯದರ ಜೊತೆ ಜೊತೆಗೇ
ಕೆಟ್ಟದ್ದೂ ಇರುತ್ತದೆ ಎಂದು ನಂಬಿಯೇ
ಮತ್ತೆ ಮತ್ತೆ ವಸುದೇವನ ಜೊತೆ
ಮಲಗಿದೆಯಾ ಒಂದು ಮಗುವಿನ
ತಲೆ ಒಡೆದ ರಕ್ತದ ಕೆಂಪಿನೊಂದಿಗೇ
ಹೊಸ ಮಗುವಿನ ಹೆರಿಗೆಯ ಕೆಂಪ
ಬೆರೆಸಿದೆಯಾ, ಬಲು ಗಟ್ಟಿಗಿತ್ತಿ ನೀನು
ನಮಗೂ ಎರೆಯೇ ಆ ನಿನ್ನ ಬಾಡದ
ಮೈಯ, ಹೆರುವ ಒಡಲ, ಕರಗದ
ದುಃಖದ ಸರಪಳಿಯೊಳಗೇ ಬಿಗುರುವ
ತಾಯ್ತನವ.
*****