ವಾಗ್ದೇವಿ – ೪

ವಾಗ್ದೇವಿ – ೪

ವಾಗ್ದೇವಿಯು ಬಾಗಿಲು ಹಾಕಿ ತಿಪ್ಪಾಶಾಸ್ತ್ರಿಯು ಹೇಳಿದ ಜಾತಕ ಭಾವವನ್ನು ಕುರಿತು ತಾಯಿಯ ಕೂಡೆ ಪ್ರಸ್ತಾಸಿಸುತ್ತಿರುವಾಗ ವೆಂಕಟಪತಿ ಆಚಾರ್ಯನು ಮೆಲ್ಲನೆ ಜಗಲಿಯಿಂದ ಕೆಳಗಿಳಿದು ಬಾಗಲಿಗೆ ಕೈತಟ್ಟಿ “ಭಾಗೀರಥಿ! ಭಾಗೀರಥಿ” ಎಂದು ಕರೆದನು.

“ಯಾರದು” ಎಂದು ವಾಗ್ದೇವಿಯು ಒಳಗಿನಿಂದ ಕೇಳಿದಳು.

“ನಾನು ವೆಂಕಟಪತಿ” ಎಂಬ ಉತ್ತರ ಸಿಕ್ಕಿತು.

“ಆಚಾರ್ಯರ ಸ್ವರದಂತೆ ನನ್ನ ಕಿವಿಗೆ ಕೇಳಿಸಿತು, ಮಗಳೇ! ಬೇಗ ಬಾಗಿಲು ತೆರೆ? ಎಂದು ಭಾಗೀರಥಿಯು ಕೊಟ್ಟ ಅನುಜ್ಞೆಗನುಸಾರವಾಗಿ ಸಾವಕಾಶ ಮಾಡದೆ ಅವಳು ಕದ ತೆರೆದಳು. ಆಚಾರ್ಯನ ಸವಾರಿಯು ಒಳಗೆ ಬಂದ ಹಾಗಾಯಿತು.

“ಇದೇನು, ಆಚಾರ್ಯರೇ! ಬಡವರಮನೆಗೆ ಭಾಗೀರಥಿ ಬಂದಂತಾ ಯಿತು. ಕೂರಿ” ಎಂದು ಮಣೆಯನ್ನು ಕೊಟ್ಟು, ವಾಗ್ದೇವಿಯು ಆಚಾರ್ಯರ ಕಾಲುಮುಟ್ಟಿ ನಮಸ್ಕಾರ ಮಾಡಿ, ಭಯಭಕ್ತಿಯಿಂದ ನಿಂತುಕೊಂಡಳು.

ಕೂರವ್ವಾ, ಕೂರು” ಎಂದು ಆಚಾರ್ಯನು ಅವಳನ್ನು ತನ್ನ ಸಮೀಪ ಕುಳ್ಳಿರಿಸಿಕೊಂಡು “ಸಣ್ಣದೊಂದು ಪ್ರಸ್ತಾಸ ಮಾಡುವದಕ್ಕಾಗಿ ಬಂದಿರುವೆನು, ಮನಸ್ಸಿದ್ದರೆ ಕೇಳಿಬಿಡು” ಎಂದು ಹೇಳಲು, ಅಪ್ಪಣೆಯಾ ಗಲೆಂದು ತಾಯಿಯೂ ಮಗಳೂ ಏಕರೀತಿಯಾಗಿ ಹೇಳಿಕೊಂಡರು.

ವೆಂಕಟಪತಿ- “ಹಾಂಗಾದರೆ ಸಂಕ್ಷೇಪವಾಗಿ ಹೇಳಿಬಿಡುತ್ತೇನೆ. ವಾಗ್ದೇವಿಯ ಮೇಲೆ ಶ್ರೀಪಾದಂಗಳವರು ಪೂರ್ಣ ಅನುಗ್ರಹವನ್ನಿಟ್ಟಿರುವರು. ಅದಕ್ಕೆ ಪ್ರತಿಯಾಗಿ ಅವಳ ಅಂತಃಕರಣವನ್ನು ಅವರು ಬಯ ಸುವರು.?

ವಾಗ್ದೇವಿ- “ಪೂರ್ವಾಶ್ರಮದಲ್ಲಿ ಅವರಿಗೆ ನಾನು ನಾದಿನಿ. ಈಗ ಅನಕಾ ಅವರ ಮಠದ ಶಿಷ್ಯಮಂಡಳಿಗೆ ಸೇರಿರುವವಳು. ಹೀಗಾಗಿ ಗುರುಗಳ ಪ್ರೀತಿಯು ನನ್ನ ಮೇಲೆ ಇರುವದು ಆಶ್ಚರ್ಯವೆಂದು ನಾನು ತಿಳುಕೊಳ್ಳುವದಿಲ್ಲ. ಬಡವಳಾದ ನನ್ನ ಮೇಲೆ ಗುರುಗಳ ಅನುಗ್ರಹವಾದದ್ದಕ್ಕಾಗಿ ಬಹಳ ಕೃತಜ್ಞತೆಯುಳ್ಳವಳಾಗಿರುತ್ತೇನೆ.?

ವೆಂಕಟಪತಿ- “ನನ್ನ ಮಾತಿನ ಅನ್ವಯ ತಿಳಿದವಳಂತೆ ನೀನು ಕೊಟ್ಟ ಪ್ರತ್ಯುತ್ತರಕ್ಕೆ ಮೆಚ್ಚಿದೆ. ಮಾತಿನ ಚಮತ್ಕಾರ ಹೀಗಿರಬೇಕು.”

ವಾಗ್ದೇವಿ- “ಆಚಾರ್ಯರೇ, ತಾವು ಅನ್ನ ತಿಂದಷ್ಟು ನಾನು ಉಪ್ಪು ತಿಂದವಳಲ್ಲ. ತಮ್ಮ ಮಾತಿನ ಅನ್ವಯ ನಿಜವಾಗಿ ಹ್ಯಾಂಗಿರೋದೋ ನಾನು ತಿಳಿದವಳಲ್ಲ. ತಿಳಿದಿದ್ದರೆ ತಮ್ಮ ಮಾತಿಗೆ ಸರಿಯಾದ ಪ್ರತ್ಯುತ್ತರ ಕೊಡುತ್ತಿದ್ದೆ.”

ವೆಂಕಟಪತಿ- “ಶ್ರೀಪಾದಂಗಳವರು ನಿನ್ನ ಮೇಲೆ ಮೋಹಪಟ್ಟಿರುವ ರೆಂಬ ತಾತ್ಪರ್ಯ ನಿನಗೆ ಸೂಚಿಸಿದೆ, ಮತ್ತೇನೂ ಅಲ್ಲ.”

ವಾಗ್ದೇವಿ- “ಧನ್ಯಳಾದೆನೆಂದು ನಾನು ಹೇಳಬೇಕೇ? ಆದರೆ ಯತಿಗಳ ಮೋಹ ಒಂದೇ ವಸ್ತುವಿನ ಮೇಲೆ ನೆಲೆಗೊಂಡಿರುವದೆಂಬ ಭರವಸೆ ಮಾಡ ಕೂಡದು. ಅದಲ್ಲದೆ ನಮ್ಮ ಶ್ರೀಪಾದಂಗಳವರು ಅತಿ ಪರಿಶುದ್ಧರೆಂಬ ಖ್ಯಾತಿಯು ಊರಲ್ಲೆಲ್ಲಾ ಹಬ್ಬಿಕೊಂಡಿದೆ. ಈಗ ಮಾತ್ರ ಅವರು ವಿಷಯಾ ತುರವುಳ್ಳ ವರೆಂಬ ಮಾತು ಪ್ರಚುರವಾದರೆ, ಬೆಡಗಿನಲ್ಲಿ ನನಗಿಂತಲೂ ಮಿಗಿಲೆನಿಸಿಕೊಳ್ಳುವ ಅನೇಕ ಸ್ತ್ರೀಗಳಿರುವಾಗ, ನನ್ನ ಮೇಲೆಯೇ ಅವರ ದೃಷ್ಟಿ ಬಿದ್ದ ಕಾರಣವೇನೋ ತಿಳಿಯದು.”

ವೆಂಕಟಪತಿ– “ಆ ಕಾರಣವನ್ನು ಕಾಲಾನುಭಾಗದಲ್ಲಿ ನೀನೇ ಅವ ರಿಂದ ತಿಳಿಯುವದು ನ್ಯಾಯವಾದ ಮಾರ್ಗವೆಂದು ನನಗೆ ತೋರುತ್ತದೆ. ಶ್ರೀಪಾಂಗಳವರ ಕಡೆಯಿಂದ ನಾನು ಈಗ ಬಂದಿರುವ ಉದ್ದೇಶವೇನೆಂಬುದು ನಿನಗೆ ಚನ್ನಾಗಿ ತಿಳಿಯಬಂತಲ್ಲ. ಇನ್ನು ತಡಮಾಡದೆ ಒಂದು ಖಂಡಿತವಾದ ಉತ್ತರವನ್ನು ಕೊಟ್ಟು ಬಿಟ್ಟರೆ, ಅವರಿಗೆ ಅದನ್ನು ಅರಿಕೆ ಮಾಡಿ ಬಿಡುವೆನು.

ವಾಗ್ಧೇವಿ–“ನಾನೇನು ಉತ್ತರಕೊಡಲಿ!?

ವೆಂಕಟಪತಿ– “ಹಾಗಾದರೆ ನಿನ್ನ ಪ್ರೀತಿಗೆ ಅವರು ಪಾತ್ರರಾಗುವ ನಿರೀಕ್ಷೆಯು. ವ್ಯರ್ಥವೆಂದು ತಿಳಿಸಿಬಿಡುತ್ತೇನೆ — ರಾತ್ರಿಯಾಯಿತು; ಹೋಗಲೇ?”

ಭಾಗೀರಧಿ– “ಆಚಾರ್ಯರೇ! ಅವಸರ ಮಾಡಲಾಗದು. ಅವಳು ಕೈಕಾಲಲ್ಲಿ ಬದ್ಧವಾದರೇನಾಯಿತು? ಅವಳು ಮಗುವಲ್ಲವೆ? ಇನ್ನೂ ಬುದ್ಧಿ ತಿಳಿದವಳಲ್ಲ. ಯಾವ ಮಾತಿಗೆ ಯಾವ ಉತ್ತರ ಕೊಡಬೇಕೆಂಬ ಜ್ಞಾನ ಅವಳಿಗದೆ ಏನು? ತಾವು ಸಿಟ್ಟು ಮಾಡಿ ಹೊರಟುಬಿಟ್ಟರೆ ಶ್ರೀಪಾದಂಗಳ ಸಂಕಲ್ಪಕ್ಕೆ ಹಾನಿಬಾರದೇ?”

ವೆಂಕಟಪತಿ– “ನಾನು ಸಿಟ್ಟು ತಾಳಲಿಲ್ಲ. ವಾಗ್ದೇವಿಯ ಉತ್ತರವು ಗುರುಗಳ ಕಾರ್ಯಕ್ಕೆ ಹಿತವಾದ್ದಲ್ಲವೆಂದು ಮಂದಟ್ಟಾದ ಕಾರಣ ಹೋಗ ಲಿಕ್ಕೆ ಹೊರಟೆ; ಮತ್ತೇನಲ್ಲ”

ಭಾಗೀರಥಿ– “ಆಚಾರ್ಯರೇ! ನಿಧಾನವಾಗಿ ಕೇಳಬೇಕು. ನಾವು ಕೇವಲ ಬಡವರು. ಉಳುಕೊಳ್ಳಲಿಕ್ಕೆ ಸ್ವಂತ ಮನೆಯಾಗಲೇ ಉಣ್ಣು ತಿನ್ನಲಿಕ್ಕೆ ಕಟ್ಟಿಟ್ಟ ಬದುಕಾಗಲೀ ಉಳ್ಳವರಲ್ಲ. ವಾಗ್ದೇವಿಯ ಗಂಡನು ಅವಳ ಪೂರ್ವಾರ್ಜಿತ ಕರ್ಮದಿಂದ ಪಶುವಿನಂತೆ ಹೆಡ್ಡ. ಅದರೂ ಅವಳು ಪತಿ ಭಕ್ತಿಬಿಟ್ಟು ಪರಪುರುಷನ ಮೋರೆಯನ್ನು ಈ ವರೆಗೆ ನೋಡಿದವಳಲ್ಲ. ಶ್ರೀಪಾದಂಗಳವರ ಅನುಗ್ರಹ ಅವಳಮೇಲೆ ಆದ್ದು ನಮ್ಮ ಪೂರ್ವಪುಣ್ಯವೇ ಸರಿ. ಪರಂತು ಲೋಕಾಪವಾದಕ್ಕೆ ಯಾರೂ ಬೀಳಬಾರದು. ಎಷ್ಟು ಸಣ್ಣ ಕಾರ್ಯವಾದರೂ, ಅದರ ಪೂರ್ವಾಪರವನ್ನು ಸರಿಯಾಗಿ ಗ್ರಹಿಸದೆ, ಪತಂಗವು ಬೆಂಕಿಯಲ್ಲಿ ಬೀಳುವಂತೆ ಅಡ್ಡಾದಿಡ್ಡಿಯಾಗಿ ನಡೆದರೆ ಇತ್ತಟ್ಟಿಗೂ ನಾಳೆ ಬಾಧಕ ಬಾರದೇ? ಗುರುಗಳಿಗೆ -ವಾಗ್ದೇವಿಯ ಮೇಲೆ ಮನಸ್ಸಾಯಿ ತೆಂದು ತಮ್ಮ ಅಫ್ಸಣೆಯಾಯಿತು. ಮುಂದಿನ ಕೆಲಸ ಹ್ಯಾಗೆ ನಡಿಯಬೇಕು, ಏನೆಂಬ ವಿವರವೆಲ್ಲಾ ತಮ್ಮಿಂದ ತಿಳಿಯುವದರ ಮೊದಲು ತಮಗೆ ನಾವು ಹ್ಯಾಗೆ ಖಂಡಿತ ಉತ್ತರ ಕೊಡೋಣ? ಒಬ್ಬ ವೇಶ್ಯಾ ಸ್ತ್ರೀಯ ಕೂಡೆ ತಾವು ಇಂಥಾ ಪ್ರಶ್ನೆ ಕೇಳಿದರೆ ಅವಳು ಏನೂ ಅಂಜಿಕೆ ಇಲ್ಲದೆ ತತ್‌ಕ್ಷಣ ತನ್ನ ಮನಸ್ಸಿನ ಭಾವವನ್ನು ಅರಿಕೆಮಾಡಿ ಬಿಡುವಳು. ಯಾಕೆಂದರೆ ಅದು ಅವಳ ವೃತ್ತಿಗೆ ಒಪ್ಪಿದ ಕೆಲಸ. ನಮ್ಮ ಸಂಗತಿಯು ಹಾಗಲ್ಲವಷ್ಟೆ? ಉಭಯ ಕಡೆಯಲ್ಲಿಯೂ ಮರ್ಯಾದೆಗೆ ಹಾನಿ ಬರ ಬಾರದಲ್ಲಾ. ನಾವು ತಮ್ಮ ಮಠದ ಶಿಷ್ಯರು, ಸ್ವಜಾತಿಯವರು. ಹೀಗಿರು ವಾಗ ತಮ್ಮ ಯಜಮಾನರ ಗೌರವವೂ ಕೀರ್ತಿಯೂ ಎಷ್ಟರ ಮಟ್ಟಿಗೆ ತಮ್ಮ ಕಾಪಾಡುವಿಕೆಯಲ್ಲಿ ಇರಬೇಕಾದ್ದೆಂದು ನಾನು ಹೇಳಬೇಕೇ? ಹಾಗೆಯೇ ತಮ್ಮ ಬಡ ಆಶ್ರಿತರಾದ ನಮ್ಮ ಮರ್ಯಾದೆಯು ಹಾಳಾಗದಂತೆ ನೋಡಿಕೊಳ್ಳುವ ಜಾಗ್ರತೆ ಯಾರು ತಕ್ಕೊಳ್ಳಬೇಕಾದ್ದೆಂದು ತಾವು ತಿಳಕೊಂದ್ದೀರೋ ಕಾಣೆ!

ವೆಂಕಟಪತಿ– “ಸರಿ! ಸರಿ! ನೀನು ಹೇಳಿದ ಮಾತು ಅಲ್ಲವೆನ್ನು ವರ್ಯಾರು? ಇತ್ತಟ್ಟಿಗೂ ಮಾತಿನವಾಸಿ ಬಾರದಂತೆಯೂ, ಊರಲ್ಲಿ ಜನರು ಬಿಟ್ಟು ಆಡದಂತೆಯೂ ಎತ್ತುಗಡೆ ಮಾಡುವದು ನನ್ನ ಕೆಲಸವೇ. ಅದನ್ನು ಎಂದಾದರೂ ಮರೆಯಲಾರೆ.”

ಭಾಗೀರಥಿ– “ನಾವು ನಡಿಯಬೇಕಾದ ಕ್ರಮ ಅಪ್ಪಣೆಯಾಗಲಿ”

ವೆಂಕಟಪತಿ- “ತಾಯಿ. ಮಗಳಾದ ನಿಮ್ಮಿಬ್ಬರ ಮನೋಗತ ಮುಂದಾಗಿ ನಾನು ತಿಳಿಯದೆ ಮುಂದಿನ ಪ್ರಸ್ತಾಪವೊಂದೂ ಮಾಡವಲ್ಲೆ.”

ಭಾಗೀರಥಿ– “ವಾಗ್ದೇವಿ! ನಿನ್ನ ಮನಸ್ಸಿನ ತಾತ್ಪರ್ಯ ಈಗಲೇ ಹೇಳಿಬಿಡು. ನಾಳೆ ‘ಅಮ್ಮಾ ನೀನು ಮಾಡಿ ಹಾಕಿದ ವ್ಯಾಪಾರವಿದು’ ಎಂದು ನನ್ನನ್ನು ದೂರಲಾಗದು.”

ವಾಗ್ದೇವಿ– “ನಾನು ಏನೂ ಅರಿತವಳಲ್ಲ. ನಿನ್ನ ಅಪ್ಪಣೆಯಂತೆ ನಡೆಯುವದೇ ನನ್ನ ಮತ. ಅದರೂ ಅಪ್ಪಯ್ಯನ ಕೂಡೆ ಮುಂದಾಗಿ ಮಾತನಾಡದೆ, ನಮ್ಮ ಮನಸ್ಸಿಗೆ ಬಂದಂತೆ ಆಚಾರ್ಯರಿಗೆ ಉತ್ತರ ಕೊಟ್ಟುಬಿಡುವದು ನ್ಯಾಯವೇನು’?

ಭಾಗೀರಥಿ–“ಆ ಯೋಚನೆ ನಿನಗೆ ಬೇಡ. ಅದೆಲ್ಲಾ ನಾನು ಸುದಾರಿಸಿಬಿಡುವೆನು. ನಾವು ಹೇಳುವ ಮಾತು ಯಾವದಾದರೂ ಅವರು ಈ ವರೆಗೆ ಒಪ್ಪದ್ದುಂಟೇನು?”

ವಾಗ್ದೇವಿ– “ಹಾಗಾದರೆ ಆಚಾರ್ಯರ ಕೂಡೆ ಸಕಲ ವಿಷಯ ಗಳಲ್ಲಿಯೂ ನೀನೇ ಮಧ್ಯಸ್ಥಿಕೆ ಮಾಡಿದರೆ ಸಾಕೆಂದು ನನ್ನ ಮನಸ್ಸಿಗೆ ತೋರುತ್ತದೆ. ಸುಮ್ಮಗೆ ಅವರ ಸಮಯವನ್ನು ಹಾಳು ಮಾಡಬಾರದು.”

ಭಾಗೀರಥಿ— “ವಾಗ್ದೇವಿಗನಕಾ ಶ್ರೀಪಾದಂಗಳವರ ಪಾದಾರವಿಂದ ಸೇವೆಯನ್ನು ಮಾಡಿಕೊಂಡಿರಲಿಕ್ಕೆ ತುಂಬಾ ಮನಸ್ಸಿದೆ. ನನ್ನ ಮನಸ್ಸಿನ ಭಾವ ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ನಮ್ಮ ಯಜಮಾನರ ಆಕ್ಷೇಪ ನಿವಾರಣೆಮಾಡುವದು ಪ್ರಯಾಸವಲ್ಲ. ಅದೆಲ್ಲಾ ನಾನು ನೋಡಿಕೋಥೇನೆ. ವಾಗ್ದೇವಿಯ ಪತಿಯು ಈ ವಿಚಾರದಲ್ಲಿ ವಿಘ್ನಕಾರಕನಾಗಲಾರನು. ಈ ವರಿಗೆ ನಡೆದಂತೆಯೇ ಏಕ ಗೃಹಕೃತ್ಯದಲ್ಲಿಯೇ ಇರಬೇಕಲ್ಲದೆ ಒಬ್ಬರು ಇನ್ನೊಬ್ಬರನ್ನಗಲಿ ಇರಲಿಕ್ಕಾಗುವುದಿಲ್ಲ. ಇದು ವರೆಗೆ ನಾವು ದರಿದ್ರಾವಸ್ಥೆಯೆನ್ನೆನುಭವಿಸಿ ಸಾಕಾಯಿತು. ದೊಡ್ಡವರನ್ನು ಆಶ್ರಯಿಸಿದ ಮೇಲೆ ದಾರಿದ್ರ್ಯವು ಪುನರಪಿ ನಮ್ಮನ್ನು ಸೋಕಬಾರದು. ಎಷ್ಟು ಹೀನವೃತ್ತಿ ಮಾಡುವದಾದವರೂ ಸುಖದೊರಕಬೇಕು. ವಿಷಯಾಭಿಲಾಷೆ ಮಾಡುವ ಗಂಡಸರ ಮನಸ್ಸು ಕೆಸುವಿನ ಎಲೆಯ ಮೇಲೆ ನಿಂತ ನೀರಿನಂತಿರುವುದು. ಶ್ರೀಪಾದಂಗಳವರ, ‘ಮಮತೆಯು ಪ್ರಕೃತ ವಾಗ್ದೇವಿಯ ಮೇಲೆ ಎಷ್ಟು ಸಂಪೂರ್ಣತೆಯುಳ್ಳದ್ದಾಗಿದ್ದರೂ ಮನಸ್ಸಿನ ಬಯಕೆಯು ತೀರಿದ ಮೇಲೆ ಅನ್ಯಸ್ತ್ರೀಯರ ಮಾಯಾಜಾಲದಲ್ಲಿ’ ಅವರು ಸಿಲುಕಲಾರರೆಂಬ ನಂಬಿಕೆ ಇಡಕೂಡದು. ಒಮ್ಮೆ ಹಾಗಾದರೆ ಯತಿಗಳಿಗೆ ವಾಗ್ದೇವಿಯ ಹಂಬಲೇ ಇರ ಲಾರದು. ಆಗ ನಾವೆಬ್ಲರೂ ದಾರಿಯಲ್ಲಿ ಬೀಳಬೇಕಾಗುವುದು. ಆದಕಾರಣ ತಮ್ಮ ಅನುಜ್ಞೆ ಹ್ಯಾಗಾಗುತ್ತದೆಂದು ನೋಡುತ್ತೇನೆ.”

ವೆಂಕಟಪತಿ- “ಅಮ್ಮಾ, ನಿನ್ನ ಅಭಿಪ್ರಾಯ ಒಂದಿಷ್ಟಾದರೂ ಲೋಪ ವಿಲ್ಲದೆ ಹೇಳಿಬಿಡು. ನಾನು ನನ್ನ ಯಜಮಾನರ ಕಾರ್ಯಸಾಧನೆಗೋಸ್ಕರ ನಿಮ್ಮ ಬಳಿಗೆ ಬಂದಿರುವೆನು. ನಿಮ್ಮ ಒಳ್ಳಿತನ್ನು ಗಳಿಸಿಕೊಳ್ಳಲಿಕ್ಕೆ ಮುಂಜಾ ಗ್ರತೆ ತಕ್ಕೊಳ್ಳ ಬೇಕಾದ್ದು ನೀವೇಸರಿ, ನಿಮ್ಮ ಅಪೇಕ್ಷೆಯನ್ನು ಬಾಯಿ ಯಿಂದಲೇ ತಿಳಿಯುವದೆಕ್ಕೆ ನಾನು ಆಶೆಪಡುತ್ತೇನೆ. ವಿಹಿತಮಾರ್ಗವು ಅದೇಸರಿ.?

ಭಾಗೀರಥಿ- “ನಾನಿನ್ನೇನು ಹೇಳಲಿ, ಸರ್ವವನ್ನು ಬಲ್ಲವರಾದ ತಮಗೆ ನಾನು ಹೆಚ್ಚಿಗೆ ಅರಿಕೆ ಮಾಡಲಿಕ್ಕೆ ಶಕ್ತಳಲ್ಲ.”

ವೆಂಕಟಪತಿ- “ಪರಶು ಕಬ್ಬಿಣಕ್ಕೆ ಸ್ಪರ್ಶವಾದ ಮೇಲೆ ಅದು ಚಿನ್ನ ವಾಗುವದಲ್ಲದೆ ಪೂರ್ವವತ್‌ ಕಬ್ಬಿಣ ಎಂದಾದರೂ ಆಗುವದೇ. ಶ್ರೀಪಾದಂ ಗಳವರ ಸೇವೆಯಲ್ಲಿ ಅಮರಿದ ಮೇಲೆ ನಿಮಗೆ ದಾರಿದ್ರ್ಯವೆಲ್ಲಿಂದ ಕಾಡುವದು? ನಿಮಗೆ ವಾಸ್ತವ್ಯಕ್ಕೆ ಯೋಗ್ಯವಾದ ಒಂದು ದೊಡ್ಡಮಮನೆಯನ್ನು ಸೋಪಸ್ಕರ ಗಳ ಸಮೇತ ಲವಕಾಲದಲ್ಲಿ ಸಿದ್ಧಪಡಿಸುವೆನು. ಊಟಕ್ಕೆ ಬೇಕಾಗುವ ಅಕ್ಕಿ ಮೊದಲಾದ ವಿಶಿಷ್ಟ ಪದಾರ್ಥಗಳು ಅನುದಿನ ನಿಮ್ಮ ಮನೆಬಾಗ ಲಿಗೆ ಬಂದು ಬೀಳುವಂತೆ ಆವಾವ ಭೂಮಿ ವಕ್ಲುಗಳಿಗೆ ನೇಮಿಸಿಡುತ್ತೇವೆ. ಇನ್ನೇನು ಅಪೇಕ್ಷೆಯದೆ?”

ಭಾಗೀರಥಿ- “ಶ್ರೀಪಾದಂಗಳವರಿಗೆ ದೊಡ್ಡ ಕೋಟಿಯಂತಿರುವ ಮಠವಿದೆ. ಅದರಲ್ಲಿ ನಮ್ಮಂಥಾ ಸಾವಿರ ಕುಟುಂಬಗಳು ಅವರಿಗೇನೊಂದು ಅನಾನುಕೂಲತೆಯಾಗದಂತೆ ವಾಸ್ತವಿಸಿಕೊಂಡಿರಲಿಕ್ಕೆ ಸಂದರ್ಭವಿದೆ. ನಿತ್ಯವು ವಾಗ್ದೇವಿಯು ಶ್ರೀಪಾದಂಗಳವರನ್ನು ಅಗಲದೆ ಅವರ ದೃಷ್ಟಿಯು ಅವರ ಹೆಸರಿನಂತೆ ಅನ್ಯ ಸ್ತ್ರೀಯರ ಮೇಲೆ ಬಿದ್ದರೂ ಅವರ ಮನಸ್ಸನ್ನು ತನ್ನ ಕಡೆಗೇನೇ ಎಳಕೊಳ್ಳಲಿಕ್ಕೆ ಸುಲಭವಾಗುವ ಹಾಗೆ ಅವರ ಸಮೀಪ ದಲ್ಲಿಯೇ ಇರಬೇಕು. ಆದ ಪ್ರಯುಕ್ತ ನಮಗೆಲ್ಲರಿಗೂ ಮಠದಲ್ಲಿಯೇ ಆಶ್ರಯ ಸಿಗಬೇಕು. ನಮ್ಮವರಿಗೂ ವಾಗ್ದೇವಿಯ ಗಂಡಗೂ ಮಠದಲ್ಲಿ ಅವರ ಯೋಗ್ಯತೆಗೆ ತಕ್ಕವಾದ ಉದ್ಯೋಗಗಳನ್ನು ಕೊಡಬೇಕು. ಆವಾಗ ನೋಡುವ ಜನರಿಗೆ ಅಡ್ಡಾದಿಡ್ಡಿಯಾಗಿ ಆಡಲಿಕ್ಕೆ ಆಸ್ಪದವಾಗಲಾರದು. ಇದಕ್ಕೂ ಮಿಕ್ಕಿ ವಾಗ್ದೇವಿಯ ಅಪೇಕ್ಷೆ ಯಾವದಾದರೂ ಇರುವದಾದರೆ ಅವಳನ್ನೇ ವಿಚಾರಿಸಿಕೊಳ್ಳಿ.”

ವೆಂಕಟಪತಿ–“ನಿಮ್ಮ ಅಪೇಕ್ಷೆ ಯಾವದೂ ಅಸಾಧಾರಣವೆಂದು ಹೇಳಲಾರೆ. ವಾಗ್ದೇವಿ! ನೀನು ಪ್ರತ್ಯೇಕವಾಗಿ ಬಯಸುವದೇನಾದರೂ ಇದೆಯೇ?”

ವಾಗ್ದೇವಿ– “ನನ್ನಲ್ಲಿ ಗಂಡು ಸಂತತಿ ದೇವರು ಅನುಗ್ರಹಿಸಿದರೆ ಚೊಚ್ಚಲು ಮಗನು ಮುಂದಿನ ಯತಿಪಟ್ಟಕ್ಕೆ ಬರುವಂತೆ ಅವನಿಗೆ ಶ್ರೀಪಾದಂಗಳವರು ಆಶ್ರಮಕೊಟ್ಟು ಶಿಷ್ಯನಾಗಿಮಾಡಬೇಕು. ಈ ವಾಗ್ದಾ ನವನ್ನು ಪಟ್ಟದ ದೇವರ ಮುಂದೆ ಮಾಡಿದನಕ ನಾನು ಮುಂದಿನ ಪ್ರಸಂಗಕ್ಕೆ ಒಡಂಬಡುವವಳಲ್ಲ. ಬೇರೆ ಪ್ರಸ್ತಾಪವೆಲ್ಲಾ ಅಮ್ಮ ಹೇಳಿದಂತೆಯೇ ಸರಿ. ಅವಳ ಮಾತಿಗೆ ಅಡ್ಡಬರಲಾರೆ.”

ವೆಂಕಟಪತಿ–“ವಾಗ್ದೇವಿ ಹೇಳಿದ ಮಾತು ಈಗಲೇ ಶ್ರೀಪಾದಂಗ ಳವರ ಕಿವಿಗೆ ಬಿದ್ದರೆ ಅವರು ಏನು ಹೇಳುವರೋ! ಕ್ರಮೇಣ ಅದರ ನಿಷ್ಕರ್ಷೆ ಮಾಡಬಹುದೆಂದು ನನ್ನ ಅಭಿಪ್ರಾಯ. ಈಗ ಅವಸರವೇನು?”

ಭಾಗೀರಥಿ:–“ಮಗಳೇ, ಆಚಾರ್ಯರ ಮಾತಿಗೆ ಮರ್ಯಾದೆ ಕೊಡು; ಅವರು ನಮ್ಮ ಶುಭವನ್ನೇ ಚಿಂತಿಸುವವರಲ್ಲವೇ??

ವಾಗ್ದೇವಿ– “ಒಲ್ಲೆ ನಾನು ಕೇಳುವ ವರವು ಮುಂದಾಗಿಯೇ ಅನುಗ್ರಹಿಸೋಣಾಗಲಿ.?

ವೆಂಕಟಪತಿ– “ಹೆಚ್ಚು ಎಳದರೆ ತುಂಡು ಆಗಲಿಕ್ಕಿಲ್ಲವೇ?”

ವಾಗ್ದೇವಿ–“ಆಗಲಿ. ನನ್ನ ಪತಿ ಸೇವೆಯಲ್ಲಿಯೇ ನಾನು ಇದ್ದು ಕೊಳ್ಳುನೆನು. ಯತಿಯ ಆಶ್ರಯವೇ ಬೇಡ”

ವೆಂಕಟಪತಿ– “ಭಾಗೀರಥಿ ಅಮ್ಮಾ, ನೀವು ಇನ್ನೊಮ್ಮೆ ನಿಮ್ಮ ಮಗಳಿಗೆ ಬುದ್ಧಿ ಹೇಳಿಬಿಡಿ. ದೇವರ ಮುಂದೆ ಯತಿಗಳು ವಾಗ್ದಾನ ಕೊಡ ಬೇಕಾಗಿ ವಾಗ್ದೇವಿ ಮಾಡುವ ಹಟ ಹೆಚ್ಚಿನದೆಂದು ನಿಮ್ಮ ಮನಸ್ಸಿಗೆ ತೋರದೆ ಹೋಗದು. ಕಾಲಾನುಭಾಗದಲ್ಲಿ ಅವಳ ಮನೋರಥವು ಪೂರ್ಣ ವಾಗದೆ ಉಳಿಯದು. ಈಗಲೇ ಆ ಪ್ರಸ್ತಾಸ ಮಾಡುವದು ಪರಿಷ್ವಾರವಲ್ಲ. ಅವಳನ್ನು ನೀವು ಒಳಗೆ ಕರಕೊಂಡು ಹೋಗಿ ಅವಳ ಬುದ್ಧಿಯನ್ನು ತುಸು ತಿದ್ದಿ ಬಿಟ್ಟರೆ ಆಗುತ್ತಿತ್ತು”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಮರ್‍ಥ್ಯ
Next post ಈ ಗತಿಶೀಲ ಜಗದಲ್ಲಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…