ಓದುಗಸ್ನೇಹಿ ಗ್ರಂಥಪಾಲಕರು

ಓದುಗಸ್ನೇಹಿ ಗ್ರಂಥಪಾಲಕರು

ಒಮ್ಮೆ ನಾನು ಈ ಅಂಕಣದಲ್ಲಿ ಓದುಗ ವಿರೋಧಿ ಗ್ರಂಥಪಾಲಕರ ಕುರಿತು ಬರೆದಿದ್ದೆ. ಅದರಲ್ಲಿ ನಾನು ಎಲ್ಲ ಗ್ರಂಥಪಾಲಕರೂ ಓದುಗ ವಿರೋಧಿ ಎಂದು ಹೇಳಿದಂತೆ ಅರ್ಥಮಾಡಿಕೊಂಡು ಕೆಲ ಗ್ರಂಥಪಾಲಕರು ನನ್ನ ಮೇಲೆ ಈಮೇಲ್ ಮೂಲಕ ಪ್ರಹಾರ ನಡೆಸಿದರು. ನನಗೆ ಆಧುನಿಕ ಗ್ರಂಥಾಲಯಗಳ ಬಗ್ಗೆ ಏನೂ ಗೊತ್ತಿಲ್ಲ, ನನ್ನ ಲೇಖನ ಹಳೆಯ ಕಾಲದ ನನ್ನ ಪ್ರತ್ಯೇಕ ಅನುಭವಗಳ ಮೇಲೆ ಬರೆದುದು, ಈ ಲೇಖನದಿಂದಾಗಿ ಗ್ರಂಥಪಾಲಕ ವೃತ್ತಿಗೆ ಆಘಾತವಾಗಿದೆ. ಕೆಟ್ಟ ಅಧ್ಯಾಪಕರ ಕುರಿತು ನೀವು ಯಾಕೆ ಬರೆಯುತ್ತಿಲ್ಲ, ಈಗಿನ ಕಾಲದಲ್ಲಿ ಗ್ರಂಥಪಾಲಕರೆಂದರೆ ಯುನಿವರ್ಸಿಟಿ ಪ್ರಾಧ್ಯಾಪಕರಿಗೆ ಸಮಾನ ಎನ್ನುವುದು ಗೊತ್ತಿದೆಯೇ ಎಂದು ಮುಂತಾಗಿ ನನ್ನ ಮೇಲೆ ಕಿಡಿ ಕಾರಿದರು – ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟನೋಡಿಕೊಂಡ ಎಂಬ ಹಾಗೆ. ಒಬ್ಬರಂತೂ, ನಿಮಗೆ ಯುನಿವರ್ಸಿಟಿಗಳ ಬಗ್ಗೆ ಸ್ವಲ್ಪ ಗೊತ್ತಿದೆಯೆಂದು ಕಾಣುತ್ತದೆ ಎಂಬ ರಿಯಾಯಿತಿ ತೋರಿದರು. ಇವರೆಲ್ಲರೂ ಮಂಗಳೂರು ಉಡುಪಿ ಕಡೆಯವರಾಗಿದ್ದರು ಎನ್ನುವುದು ವಿಶೇಷ. ಇದೇ ಪ್ರದೇಶಕ್ಕೆ ಸೇರಿದವನಾದ ನನ್ನ ಬಗ್ಗೆ ಅವರು ಯಾರಿಗೂ ಏನೂ ಗೊತ್ತಿಲ್ಲ ಎನ್ನುವುದು ಸ್ಪಷ್ಟವಾಯಿತು. ಅದು ಅವರ ಸಾಮಾನ್ಯ ಜ್ಞಾನಕ್ಕೆ ಬಿಟ್ಟ ವಿಷಯ. ಆದರೆ ನನ್ನ ಲೇಖನವನ್ನು ಸರಿಯಾಗಿ ಓದುವ ಮತ್ತು ಆಶಯವನ್ನು ಗ್ರಹಿಸುವ ತಾಳ್ಮೆಯನ್ನು ಈ ವಿದ್ಯಾವಂತರು ತೋರಿರಲಿಲ್ಲ ಎನ್ನುವುದು ಆಶ್ಚರ್ಯಕರ. ಯಾವ ಒಳ್ಳೆಯ ಗ್ರಂಥಪಾಲಕರೂ ಸಿಟ್ಟಿಗೇಳುವ ಯಾವ ಮಾತನ್ನೂ ನಾನು ಅದರಲ್ಲಿ ಬರೆದಿರಲಿಲ್ಲ. ನಮ್ಮ ಗ್ರಂಥಾಲಯಗಳು ಇನ್ನಷ್ಟು ಒಳ್ಳೆಯದಾಗಲಿ ಎಂಬ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದ ಹೊರತು ಇನ್ನೇನೂ ನನ್ನ ಮನಸ್ಸಿನಲ್ಲಿ ಇರಲಿಲ್ಲ. ಎಲ್ಲಾ ಗ್ರಂಥಪಾಲಕರೂ ಓದುಗ ವಿರೋಧಿಗಳೆಂದು ಹೇಳುವುದಕ್ಕೆ ನಾನೇನು ಹುಚ್ಚನೇ? ಒಂದು ಗ್ರಂಥಾಲಯವೆಂದರೆ ಅದು ಗ್ರಂಥಪಾಲಕರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ-ಗ್ರಂಥಾಲಯವಿರುವುದು ಓದುಗರಿಗೋಸ್ಕರ ಎನ್ನುವುದನ್ನು ನೆನಪಿಸಿಕೊಂಡರೆ ಇಲ್ಲಿ ಚರ್ಚೆಗೆ ಕಾರಣವಿಲ್ಲ.

ಆ ನನ್ನ ಲೇಖನದಲ್ಲಿ ನನಗೆ ಗೊತ್ತಿದ್ದ ಒಬ್ಬ ಒಳ್ಳೆಯ ಗ್ರಂಥಪಾಲಕರ ಕುರಿತೂ ಸೂಚನೆ ನೀಡಿದ್ದೆ. ಇದನ್ನು ಗ್ರಹಿಸಿದ ಕತೆಗಾರ ಎಂ. ಎಸ್. ಶ್ರೀರಾಮ್ ನೀವು ಎಲ್. ಎಸ್. ರಾಮಯ್ಯನವರ ಕುರಿತಾಗಿಯೇ ಒಂದು ಲೇಖನ ಬರೆಯಬೇಕು ಎಂದು ಸೂಚಿಸಿದರು. ಕಾರಣ ನನ್ನ ಮನಸ್ಸಿನಲ್ಲಿದ್ದುದು ಸೀಫ್ಲ್‌ನ ಗ್ರಂಥಪಾಲಕರಾಗಿದ್ದ ಶ್ರೀ ಎಲ್. ಎಸ್. ರಾಮಯ್ಯ. ನನ್ನನ್ನು ಹುಡುಕಿಕೊಂಡು ಸೀಫ್ಲ್‌ಗೆ ಬರುತ್ತಿದ್ದ ಶ್ರೀರಾಮ್ ತಮ್ಮ ಕೆಲವೇ ಭೇಟಿಗಳಲ್ಲಿ ರಾಮಯ್ಯನವರ ಕ್ರಿಯಾಶೀಲತೆಗೆ ಮನಸೋತವರಲ್ಲಿ ಒಬ್ಬರಾಗಿದ್ದರು ಎನ್ನುವುದನ್ನು ಆರಂಭದಲ್ಲೇ ಹೇಳಿಬಿಡುತ್ತೇನೆ. ನಾನು ಹೈದರಾಬಾದಿನ ಸೆಂಟ್ರಲ್ ಇನ್ಲ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ (ಸೀಫ್ಲ್)ಗೆ ಉನ್ನತ ವ್ಯಾಸಂಗಕ್ಕೆಂದು ಬಂದು ನಂತರ ಅಲ್ಲೇ ಅಧ್ಯಾಪಕ ವೃತ್ತಿಗೆ ಸೇರಿ ಕೆಲಸ ಮಾಡಿದ ಅವಧಿಯುದ್ದಕ್ಕೂ ರಾಮಯ್ಯ ಈ ಸಂಸ್ಥೆಯ ಗ್ರಂಥಾಲಯದಲ್ಲಿ ಪ್ರಧಾನ ಗ್ರಂಥಾಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಸೀಫ್ಲ್ ಲೈಬ್ರರಿ ಇಂದು ಇಡೀ ದೇಶದಲ್ಲಿ ಹೆಸರುವಾಸಿಯಾದ ಸಂಸ್ಥೆ. ಇದನ್ನು ಈ ಸ್ಥಿತಿಗೆ ತಂದವರು ರಾಮಯ್ಯ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆಲ್ಲ ಗೊತ್ತು. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಒಂದು ಗ್ರಂಥಾಲಯ ಹೇಗೆ ಬೆಳೆಯುತ್ತದೆ ಎನ್ನುವುದು ಸ್ವಾರಸ್ಯಕರ ವಿಷಯ. ನಿಜ, ಯುಜಿಸಿಯ ಸಹಾಯಧನ ಬೇಕು; ಆದರೆ ಸಿಕ್ಕಾಬಟ್ಟೆ ಪುಸ್ತಕಗಳನ್ನು ಖರೀದಿಸುವುದರಿಂದ ಒಂದು ಸಂಯೋಜಿತ ಗ್ರಂಥಾಲಯ ನಿರ್ಮಾಣಗೊಳ್ಳುವುದಿಲ್ಲ. ಆಯಾ ವಿದ್ಯಾಸಂಸ್ಥೆಯಲ್ಲಿ ನಡೆಯುವ ಬೋಧನೆ ಮತ್ತು ಸಂಶೋಧನೆಗೆ ಪೂರಕವಾಗಿ ಪುಸ್ತಕಗಳನ್ನು ಮತ್ತು ಸಂಶೋಧನಾ ಪತ್ರಿಕೆಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಗ್ರಂಥಪಾಲಕರು ಪ್ರಾಧ್ಯಾಪಕರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಪುಸ್ತಕ ಮಾರುವವರು ತಮ್ಮಲ್ಲಿರುವ ಪುಸ್ತಕಗಳನ್ನು ತಲೆ ಮೇಲೆ ಹಾಕಿ ಹಣ ಕಸಿದುಕೊಂಡು ಹೋಗುತ್ತಾರೆ. ಗ್ರಂಥಾಲಯ ಯಾವ ದಿಗ್ದರ್ಶನವೂ ಇಲ್ಲದೆ ಬಾತುಕೊಳ್ಳುತ್ತದಲ್ಲದೆ ಬೆಳೆದಿರುವುದಿಲ್ಲ. ರಾಮಯ್ಯ ಯಾವ ಸದ್ದುಗದ್ದಲವಿಲ್ಲದೆ ಅನನ್ಯ ಕಾಳಜಿಯಿಂದ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಂಥಾಲಯವನ್ನು ಬೆಳೆಸಿದವರು. ಆದ್ದರಿಂದಲೇ ಇಂದು ಇಂಗ್ಲಿಷ್ ಭಾಷಾಬೋಧನೆ, ವ್ಯಾಕರಣ, ಭಾಷಾವಿಜ್ಞಾನ, ಇಂಗ್ಲಿಷ್ ಸಾಹಿತ್ಯ ಮತ್ತು ವಿಮರ್ಶೆ ಮುಂತಾದ ವಿಭಾಗಗಳಲ್ಲಿ ಕೆಲಸ ಮಾಡುವುದಕ್ಕೆ ಸೀಫ್ಲ್ ಸಂಸ್ಥೆ ಒಂದು ವಿಶಿಷ್ಟ ಸಂಪನ್ಮೂಲ ಕೇಂದ್ರ ಆಗಿರುವುದು.

ರಾಮಯ್ಯನವರು ಸ್ವತಃ ಈ ಗ್ರಂಥಾಲಯವನ್ನು ಬೆಳೆಸಿದ್ದರಿಂದಲೂ ತಮ್ಮ ಕೆಲಸದಲ್ಲಿ ಅವರಿಗೆ ಅತೀವ ಪ್ರೀತಿಯಿದ್ದುದರಿಂದಲೂ ಇಲ್ಲಿನ ಏಕದೇಶ ಎಲ್ಲಾ ಪುಸ್ತಕ ಮತ್ತು ಮಾಹಿತಿಗಳ ಕುರಿತೂ ಅವರಿಗೆ ಪರಿಜ್ಞಾನವಿದ್ದಿತು. ಯಾವೊಂದು ಪುಸ್ತಕ ಎಲ್ಲಿದೆಯೆನ್ನುವುದು ಅವರ ಬೆರಳ ತುದಿಯಲ್ಲಿದ್ದ ಸಂಗತಿ. ತಾವು ಮುಖ್ಯ ಗ್ರಂಥಪಾಲಕರಾಗಿದ್ದು, ತಮ್ಮ ಕೈಕೆಳಗೆ ಕೆಲಸ ಮಾಡುವ ಅನೇಕ ಸಹಾಯಕ ಗ್ರಂಥಪಾಲಕರಿದ್ದಾಗಿಯೂ, ರಾಮಯ್ಯ ಪ್ರತಿ ದಿನವೂ ಇಡೀ ಗ್ರಂಥಾಲಯದಲ್ಲಿ ಓಡಾಡಿಕೊಂಡಿರುತ್ತಿದ್ದವರು. ಬೇಕಾದ ಪುಸ್ತಕವೊಂದು ರ್‍ಯಾಕಿನಲ್ಲಿಲ್ಲ, ಅದು ಹೊರಗೂ ಹೋಗಿಲ್ಲ ಎಂದಿದ್ದರೆ ರಾಮಯ್ಯನವರಿಗೆ ತಿಳಿಸಿದರೆ ಸಾಕು-ಆ ಪುಸ್ತಕ ಕಳೆದು ಹೋಗಿಲ್ಲವೆಂದಾದರೆ ಅವರು ಅದನ್ನು ಯಾವುದೋ ಮಾಯೆಯಿಂದ ಎಂಬಂತೆ ಹುಡುಕಿ ಕೊಡುತ್ತಿದ್ದರು. ನಮ್ಮದು ಮುಕ್ತಪ್ರವೇಶದ ಲೈಬ್ರರಿ; ಎಂದರೆ ಓದುಗರು ಪುಸ್ತಕದ ರ್‍ಯಾಕುಗಳಿಗೆ ಹೋಗಿ ತಮಗೆ ಬೇಕಾದ್ದನ್ನು ಆರಿಸಿಕೊಂಡು ಮೇಜಿಗೆ ಬಂದು ಓದಬಹುದಾದಂಥದು. ಇಂಥ ಕಡೆ ಕೆಲವೊಮ್ಮೆ ಓದುಗರ ಪರಮೋಶಿಯಿಂದ ಪುಸ್ತಕಗಳು ತಪ್ಪಾಗಿ ಮತ್ತೆಲ್ಲೋ ಹೋಗಿ ಕುಳಿತಿರುತ್ತವೆ. ಕೆಲವೊಮ್ಮೆ ಸಹಾಯಕರೇ ತಪ್ಪು ಕರೆಸಂಖ್ಯೆಗೆ ಪೋಣಿಸಿಟ್ಟಿರುತ್ತಾರೆ. ರಾಮಯ್ಯ ಅವರಿಗೆ ಈ ತಪ್ಪುಗಳ ಸಾಧ್ಯತೆಗಳು ಗೊತ್ತಿದ್ದುವು; ಆದ್ದರಿಂದಲೇ ಪುಸ್ತಕಗಳು ಎಲ್ಲಿ ಹೋಗಿ ಕುಳಿತಿರಬಹುದು ಎಂಬ ಬಗ್ಗೆ ಅವರಿಗೊಂದು ಆರನೆಯ ಐಂದ್ರಿಯ ಜ್ಞಾನ ಬೆಳೆದುಬಂದಿತ್ತು. ಮುಖ್ಯವಾದ ವಿಷಯವೆಂದರೆ ಅವರು ಯಾವುದೇ ಕೆಲಸವನ್ನೂ ಸಣ್ಣದು ದೊಡ್ಡದು ಎಂದು ನೋಡದೆ ತಾವೇ ಖುದ್ದಾಗಿ ಮಾಡುತ್ತಿದ್ದುದು. ರಾಮಯ್ಯನವರಿಗೆ ಸ್ವತಃ ಡಾಕ್ಟರೇಟ್ ಇರಲಿಲ್ಲ; ಯಾಕೆಂದರೆ ಡಾಕ್ಟರೇಟು ಶೋಕಿಯಾಗುವ ಕಾಲಕ್ಕಿಂತ ಮೊದಲಿನವರು ಅವರು. ಆದರೂ ಅವರು ಅದೆಷ್ಟೋ ಡಾಕ್ಟರೇಟುಗಳ ಸೃಷ್ಟಿಗೆ ಪರೋಕ್ಷವಾಗಿ ಕಾರಣರಾದರು. ಕೇವಲ ಸೀಫ್ಲ್ ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲ, ಭಾರತದ ಎಲೆಲಿಂದಲೋ ಬರುವ ಸಂಶೋಧನ ವಿದ್ಯಾರ್ಥಿಗಳಿಗೆ ಅವರು ತಮ್ಮ ವೇಳೆ ಮತ್ತು ಸಲಹೆಯನ್ನು ಧಾರಾಳವಾಗಿ ನೀಡುತ್ತಿದ್ದರು. ಅಪರಿಚಿತರಿಗೆ ಲೈಬ್ರರಿಯಲ್ಲಿ ತಾವೇ ಖುದ್ದಾಗಿ ಮಾರ್ಗದರ್ಶನ ಮಾಡುತ್ತಿದ್ದರು.

ಆಕರ ಪಟ್ಟಿಗಳನ್ನು, ಆಕರ ಗ್ರಂಥಗಳನ್ನು (Bibiliography) ತಯಾರಿಸುವುದು ರಾಮಯ್ಯನವರಿಗೆ ಪ್ರಿಯವಾದ ಕೆಲಸ. ಸೀಫ್ಲ್‌ನಲ್ಲಿ ಯಾವುದೇ ವಿಚಾರಸಂಕಿರಣದ ಘೋಷಣೆಯಾಗಲಿ, ಆ ವಿಷಯದ ಕುರಿತು ಅವರು ಆಕರ ಪಟ್ಟಿಯೊಂದನ್ನು ಸಿದ್ಧಪಡಿಸಿ ಸಂಕಿರಣದ ವೇಳೆಗೆ ಹಂಚಲು ಒದಗಿಸಿಕೊಡುತ್ತಿದ್ದರು. ಒಮ್ಮೆ ನಾನೇ ಏರ್ಪಡಿಸಿದ “ಭಾಷಾವಿಜ್ಞಾನದಲ್ಲಿ ವಿವರಣೆ? (Explanation in Linguistics) ಎಂಬ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ರಾಮಯ್ಯ ಇಂಥ ಆಕರ ಪಟ್ಟಿಯೊಂದನ್ನು ಒದಗಿಸಿದುದು ನನ್ನ ವೈಯಕ್ತಿಕ ಅನುಭವ. ಇಂಥ ಕಾಲಿಕ ಆಕರ ಪಟ್ಟಿಗಳನ್ನಲ್ಲದೆ ಇಂಗ್ಲಿಷ್ ಭಾಷಾಬೋಧನೆ, ಭಾಷಾವಿಜ್ಞಾನ, ಸಾಹಿತ್ಯ ಮತ್ತು ವಿಮರ್ಶಾಕ್ಷೇತ್ರಗಳಲ್ಲೂ ರಾಮಯ್ಯ ಆದಷ್ಟೂ ಸಮಗ್ರವಾದ ಆಕರ ಗ್ರಂಥಗಳನ್ನು ತಾವೊಬ್ಬರಾಗಿ ಅಥವಾ ಸಹಮನಸ್ಕರ ಜತೆ ಸೇರಿ ಸಿದ್ಧಗೊಳಿಸಿ ಪ್ರಕಟಿಸಿದ್ದಾರೆ. ಕೆಲವೊಮ್ಮೆ ಅವಕ್ಕೆ ಪ್ರಾಧ್ಯಾಪಕರ ಕೈಯಿಂದ ಪ್ರವೇಶಿಕೆಗಳನ್ನೂ ಬರೆಸಿದ್ದಾರೆ. ಹೀಗೆ ರಾಮಯ್ಯ ಸಿದ್ಧಗೊಳಿಸಿದ ನಾಲ್ಕು ಸಂಪುಟಗಳ ದ್ರಾವಿಡ ಭಾಷಾವಿಜ್ಞಾನ ಆಕರಗ್ರಂಥ ಇಲ್ಲಿ ನಮೂದಿಸಲೇಬೇಕಾದ ಕೃತಿ. ಗುಡ್ಡಗಾಡು ಜನಾಂಗದ ಭಾಷೆಗಳಿಗೆ ಸಂಬಂಧಿಸಿಯೂ (Tribal Linguistics) ಅವರು ಇತರರ ಸಹಕಾರದೊಂದಿಗೆ ಆಕರಗ್ರಂಥ ರಚಿಸಿದ್ದಾರೆ. ಇದೆಲ್ಲವನ್ನೂ ಅವರು ಕಂಪ್ಯೂಟರ್ ಹಾಗೂ ಇಂಟರ್ನೆಟ್ ವ್ಯಾಪಕ ಬಳಕೆಗೆ ಬರುವ ಮುನ್ನವೇ ಮಾಡಿದರು ಎನ್ನುವುದು ಹೆಚ್ಚಿನ ಸಂಗತಿ.

ಸೀಫ್ಲ್‌ಗೂ ನೋಮ್ ಚಾಮ್‌ಸ್ಕಿಯ ರೂಪಾಂತರ ವ್ಯಾಕರಣಕ್ಕೂ ಬಹಳ ಹಿಂದಿನ ನಂಟು. ಇದನ್ನು ಮನಗಂಡ ರಾಮಯ್ಯ ಎಂಬತ್ತರ ದಶಕದಲ್ಲಿ ಚಾಮ್‌ಸ್ಕಿ ಆಕರ ಪುಸ್ತಕವೊಂದನ್ನು ಪ್ರಕಟಿಸಿದರು. ಇದೇ ಜಗತ್ತಿನಲ್ಲಿ ಚಾಮ್‌ಸ್ಕಿಯ ಕುರಿತಾದ ಮೊತ್ತ ಮೊದಲ ಆಕರ ಪುಸ್ತಕ! ಇದನ್ನು ಕಳಿಸಿದ್ದಕ್ಕೆ ಖುದ್ದು ಚಾಮ್‌ಸ್ಕಿಯೇ ರಾಮಯ್ಯ ಅವರಿಗೆ ಕೃತಜ್ಞತಾಪೂರ್ವಕ ಪತ್ರ ಬರೆದಿದ್ದರು. ಚಾಮ್‌ಸ್ಕಿ ಆಕರ ಪುಸ್ತಕದಲ್ಲಿ ಚಾಮ್‌ಸ್ಕಿಯ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಲೇಖನ ಮತ್ತು ಪುಸ್ತಕಗಳ ಮಾಹಿತಿ ಮಾತ್ರವಲ್ಲದೆ ಈತನ ರಾಜಕೀಯ ವಿಶ್ಲೇಷಣೆಗೆ ಸಂಬಂಧಿಸಿದ ಉಲ್ಲೇಖನಗಳೂ ಇವೆ.

ರಾಮಯ್ಯ ಅವರು ತಾವಾಗಿಯೇ ಮೇಲೆ ಬಿದ್ದು ಜನರನ್ನು ಮಾತಾಡಿಸಿ ಕೊಂಡು ಹೋಗುವವರಲ್ಲ. ಅವರು ಒಂದು ರೀತಿಯಲ್ಲಿ ಸ್ವಯಂಶೂನ್ಯರು. ಆದರೂ ಅವರಿಗೆ ಭಾರತದ ಉದ್ದಗಲದ ವಿದ್ವಾಂಸರ, ಕವಿಗಳ, ಲೇಖಕರ ಪರಿಚಯವಿದ್ದಿತು; ಅದಕ್ಕಿಂತಲೂ ಹೆಚ್ಚಾಗಿ ಈ ಮಂದಿಗೆ ರಾಮಯ್ಯರ ಪರಿಚಯವಿದ್ದಿತು ಎಂದೂ ಹೇಳಬಹುದು – ಅಯ್ಯಪ್ಪ ಪಣಿಕ್ಕರ್, ಸಿ. ಡಿ. ನರಸಿಂಹಯ್ಯ, ಅನಂತಮೂರ್ತಿ, ಬಾಲಚಂದ್ರ ನೆಮಾಡೆ, ವಿದ್ಯಾನಿವಾಸ ಮಿಶ್ರ, ನಾಮ್ವರ್ ಸಿಂಗ್, ಅಮಿಯಾದೇವ್ ಮುಂತಾದವರಿಗೆಲ್ಲ ರಾಮಯ್ಯ ಬೇಕಾದವರೇ. ರಾಜಾರಾವ್, ಏ. ಕೆ. ರಾಮಾನುಜನ್, ಬ್ರಜ್ ಕಚ್ರು, ಯಮುನಾ ಕಚ್ರು, ಎಸ್. ಎನ್. ಶ್ರೀಧರ್ ಮುಂತಾದ ಅನಿವಾಸಿ ಭಾರತೀಯ ವಿದ್ವಾಂಸರು ಕೂಡಾ ರಾಮಯ್ಯ ಅವರನ್ನು ಬಹಳವಾಗಿ ಹಚ್ಚಿಕೊಂಡವರು.

ಒಬ್ಬ ಗ್ರಂಥಪಾಲಕ ಎಂದರೆ ಆತ ಒಂದು ವಿಶ್ವಕೋಶದ ಹಾಗೆ. ರಾಮಯ್ಯ ಅಂತೂ ಆ ರೀತಿಯವರು. ಉಂಬರ್‍ಟೊ ಎಕೋ ಆಗಲಿ ಐಸಾಕ್ ಬಾಲ್ಶೆವಿಸ್ ಸಿಂಗರ್ ಆಗಲಿ, ಕ್ಲಾಡ್ ಲೆವಿಸ್ಟ್ರೌಸ್ ಆಗಲಿ ರೊಮಾನ್ ಯಾಕೊಬ್ಸನ್ ಆಗಲಿ ಅವರಿಗೆ ಗೊತ್ತಿರದ ಹೆಸರುಗಳಲ್ಲ. ಕಾರಣ ಲೈಬ್ರರಿಗೆ ಈ ಲೇಖಕರ ಕೃತಿಗಳನ್ನು ತರಿಸಿದವರೇ ಅವರು. ಯಾರಾದರೊಬ್ಬ ಅಧ್ಯಾಪಕರು ಹೊಸ ಕ್ಷೇತ್ರವೊಂದರಲ್ಷಿ ಕೆಲಸ ಮಾಡುತ್ತಿದ್ದಾರೆಂದು ಗೊತ್ತಾದ ತಕ್ಷಣ ರಾಮಯ್ಯ ಅವರ ನೆರವಿಗೆ ಬರುತ್ತಿದ್ದರು. ಒಮ್ಮೆ ನಮ್ಮ ಹಿರಿಯ ಸಹೋದ್ಯೋಗಿಯೊಬ್ಬರು ಮಾರ್ಕಿಸಂ ಬಿಟ್ಟು ಇಂಡಾಲಜಿಯಲ್ಲಿ (ಪುರಾಭಾರತೀಯ ಅಧ್ಯಯನ) ಆಸಕ್ತಿ ಹೊಂದಿದರು. ರಾಮಯ್ಯ ಅವರಿಗೋಸ್ಕರ ಹಲವಾರು ಅಮೂಲ್ಯ ಪುಸ್ತಕಗಳನ್ನು ತರಿಸಿ ಗ್ರಂಥಾಲಯಕ್ಕೆ ಸೇರಿಸಿದರು. ಈ ಕುರಿತು ಕೆಲವರಿಂದ ಟೀಕೆ ಬಂದರೂ ಅವರು ಕಿವಿಗೊಡಲಿಲ್ಲ. ಈಗ ಸೀಫ್ಲ್‌ನಲ್ಲಿ ಸೆಂಟರ್ ಫಾರ್ ಇಂಡಿಯಾಸ್ಸಡೀಸ್ ಎಂಬ ಶಾಖೆಯೇ ಇದೆ.

ರಾಮಯ್ಯ ಗ್ರಂಥಪಾಲನೆಯನ್ನು ಒಂದು ವೃತ್ತಿಯನ್ನಾಗಿ ಮಾತ್ರ ಮಾಡಿಕೊಂಡವರಲ್ಲ, ಪ್ರೀತಿಯನ್ನಾಗಿ ಮಾಡಿಕೊಂಡವರು. ಗ್ರಂಥಪಾಲನೆ ಆಧುನಿಕ ಕೀಲಿ ಕೈ ಎನ್ನುವುದು ಅವರ ನಂಬಿಕೆ; ಆದ್ದರಿಂದ ಅದೊಂದು ಕೊನೆಯಲ್ಲ, ಮೊದಲು, ಒಂದು ಸೇವೆ. ಈ ಕಾರಣದಿಂದ ರಾಮಯ್ಯ ಹೈದರಾಬಾದ್ ಶಹರದಲ್ಲಿ ಹಿಂದಿನಿಂದಲೂ ತಮ್ಮದೇ ಆದ ಒಂದು ಗ್ರಂಥಪಾಲನಾ ಶಿಕ್ಷಣ ಸಂಸ್ಥೆಯನ್ನೂ ನಡೆಸುತ್ತ ಬಂದಿದ್ದಾರೆ; ಸೀಫ್ಲ್‌ನಿಂದ ನಿವೃತ್ತರಾದ ಮೇಲೆಯೂ ಅವರು ತಮ್ಮೀ ಜ್ಞಾನ ಪ್ರಸರಣ ಕಾರ್ಯವನ್ನು ಕೈಬಿಟ್ಟಿಲ್ಲ. ಅದೆಷ್ಟೋ ಮಂದಿ ಗ್ರಂಥಪಾಲಕರನ್ನು ಅವರು ತಯಾರುಗೊಳಿಸಿದ್ದಾರೆ. ರಾಮಯ್ಯನವರ ಕೆಲಸದ ವೈಖರಿಯನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಇದರಲ್ಲೇನೂ ಅದ್ಭುತವಾದ ಜಾದೂ ಇಲ್ಲ. ಅವರು ಯಾವುದೇ ಕ್ಷಣವನ್ನು ಹಾಳುಗೆಡವದೆ ತಮ್ಮ ದೈನಂದಿನವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಲೇ ಇಷ್ಟೊಂದು ಸಾಧನೆಯನ್ನು ಮಾಡಲು ಸಾಧ್ಯವಾದುದು. ಆದರೆ ಅವರಂತೆ ಅವರ ಸಹಾಯಕರೆಲ್ಲರೂ ಇದ್ದರೇ ಎಂದರೆ ಉತ್ತರ ಸುಲಭವಲ್ಲ. ಮನುಷ್ಯರು ನೋಡಿ ಕಲಿಯುತ್ತಾರೆ ಎಂದು ನಾವು ಅಂದುಕೊಳುತ್ತೇವೆ. ಒಬ್ಬ ನಿಷ್ಠಾವಂತ, ಸೇವಾಕಾಂಕ್ಷಿ ಉದ್ಯೋಗಿಯಿದ್ದರೆ ಉಳಿದವರು ಆತನನ್ನು ಅನುಸರಿಸುತ್ತಾರೆ ಎನ್ನುವುದು ಭ್ರಮೆ. ಆತ ಹಾಗಿರುವುದೇ ಉಳಿದವರಿಗೊಂದು ಕಿರಿಕಿರಿಯಾಗಬಹುದು. ರಾಮಯ್ಯ ಇದ್ದ ಸಂಸ್ಥೆಯೂ ಇದಕ್ಕೆ ಅಪವಾದವಲ್ಲ. ಮೈಗಳ್ಳರ ವಿರುದ್ಧ ನಿಮ್ಮ ಅಧಿಕಾರ ಉಪಯೋಗಿಸಬಾರದೇ ಎಂದು ನಾನವರನ್ನು ಒಮ್ಮೆ ಕೇಳಿದ್ದೆ. ಅದಕ್ಕವರು ಹೇಳಿದ ಉತ್ತರ ನನಗಿನ್ನೂ ನೆನಪಿದೆ: ಉಪಯೋಗಿಸಿದ ತಕ್ಷಣ ಅದು ಕಳೆದುಹೋಗುತ್ತದೆ, ಉಪಯೋಗವಾದೀತು ಎನ್ನುವವರೆಗೆ ಇರುತ್ತದೆ. ಇಂಥ ಮಾತು ಒಂದು ಸಂವೇದನಾಶೀಲ ಮನಸ್ಸಿನಲ್ಲಿ ಮಾತ್ರವೇ ಮೂಡಿಬರುವುದು ಸಾಧ್ಯ.

ಇಂಥ ಆದರ್ಶ ನನ್ನ ಮುಂದಿರುತ್ತ, ಕೆಲ ಓದುಗವಿರೋಧಿ ಗ್ರಂಥಪಾಲಕರ ಬಗ್ಗೆ ನಾನು ಬರೆದೆನೆಂದು ನನ್ನ ಮೇಲೆ ಸಾಂಘಿಕವಾಗಿ ಹರಿಹಾಯ್ದವರ ಕುರಿತಾಗಿ ನಾನು ಏನುಮಾಡುವುದಕ್ಕಾಗುತ್ತದೆ-Hang it low ಎನ್ನುವುದಕ್ಕೆ ಬದಲಾಗಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಗುಳ
Next post ನನ್ನೊಳಗಿನ ನಾನು…

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…