ದ್ರಾವಿಡ ಭಾಷಾಧ್ಯಯನ: ಮರಿಯಪ್ಪ ಭಟ್

ದ್ರಾವಿಡ ಭಾಷಾಧ್ಯಯನ: ಮರಿಯಪ್ಪ ಭಟ್

ಪ್ರೊಫೆಸರ್ ಮರಿಯಪ್ಪ ಭಟ್ ಅವರ ಆಯ್ದ ಇಂಗ್ಲಿಷ್ ಲೇಖನಗಳ ಮತ್ತು ಭಾಷಣಗಳ ಸಂಕಲನವೊಂದು Dravidic Studies ಎ೦ಬ ಹೆಸರಲ್ಲಿ ಈಚೆಗೆ ಪ್ರಕಟವಾಗಿದೆ. ಮರಿಯಪ್ಪ ಭಟ್ಟರ ಮಗಳು ಡಾಕ್ಟರ್ ಶಾರದಾ ಜಯಗೋಪಾಲ್ ಸಂಪಾದಿಸಿ ಚೆನ್ನೈನ ಮರಿಯಪ್ಪ ಭಟ್ ಸಂಸ್ಮರಣ ಸಮಿತಿ ಪ್ರಕಟಿಸಿದ ಈ ಸಂಕಲನ ಕನ್ನಡದ ಶ್ರೇಷ್ಠ ವಿದ್ವಾಂಸರೊಬ್ಬರ ಹತ್ತು ಹಲವು ಆಸಕ್ತಿಗಳ ಒಂದು ಅಡ್ಡತುಂಡಿನಂತಿದೆ. ಕಾಸರಗೋಡು ಕಡೆಯ ಹವ್ಯಕ ಭಾಷಿಕರಾದ ಮರಿಯಪ್ಪ ಭಟ್ ಚೆನ್ನೈಗೆ ಹೋಗಿ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಓದಿ ಅಲ್ಲೇ ಕನ್ನಡ ಪ್ರೊಫೆಸರರಾಗಿ ನಿವೃತ್ತರಾದವರು. ಕನ್ನಡ, ಸಂಸ್ಕೃತ, ಇಂಗ್ಲಿಷ್, ಹವ್ಯಕ, ತುಳು, ತಮಿಳು, ತೆಲುಗು ಇತ್ಯಾದಿ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿಕೊಂಡ ಇವರು ಐವತ್ತರ ದಶಕದಲ್ಲೇ ಭಾಷಾವಿಜ್ಞಾನಕ್ಕೆ ತಮ್ಮನ್ನು ತಾವು ತೆರೆದುಕೊಂಡರು. ಐವತ್ತರ ದಶಕವೆಂದರೆ ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಆಧುನಿಕ ಭಾಷಾವಿಜ್ಞಾನ ಅಂಬೆಗಾಲಿರಿಸಿದ ಸಮಯ. ಆಗಿನಿಂದಲೇ ಈ ಹೊಸಜ್ಞಾನ ಶಾಖೆಯಿಂದ ಆಕರ್ಷಕರಾಗಿ ಅದರಲ್ಲಿ ತೊಡಗಿಸಿಕೊಂಡವರ ದೊಡ್ಡಪರಂಪರೆಯೇ ನಮ್ಮ ದೇಶದಲ್ಲಿದೆ; ಅಂಥವರ ಸಾಲಿನಲ್ಲಿ ಮರಿಯಪ್ಪ ಭಟ್ ಇದ್ದಾರೆ ಎಂದು ಬೇರೆ ಹೇಳಬೇಕಿಲ್ಲ.

ಮರಿಯಪ್ಪ ಭಟ್ಟರಂಥವರು ಕೇವಲ ವಿದ್ವಾಂಸರಾಗಿ ದಂತಗೋಪುರದಲ್ಲಿ ಕುಳಿತವರೂ ಅಲ್ಲ: ತಾವು ಕಲಿತುದನ್ನು ಇತರರಿಗೆ ಕಲಿಸುವ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮಾಡಿದವರೂ ಹೌದು. ಅವರ ಆಸಕ್ತಿಗಳೂ ಹಲವಾರು: ಕೇವಲ ಬೋಧನೆಯೇ ಅಲ್ಲದೆ, ಸಂಶೋಧನೆ, ಗ್ರಂಥಸಂಪಾದನೆ, ನಿಘಂಟು ರಚನೆ ಹಾಗೂ ಪರಿಷ್ಕರಣೆ, ಸಂಘಸಂಸ್ಥಾಪನೆ, ಉನ್ನತ ಶಿಕ್ಷಣ ಪ್ರಸರಣ ಮುಂತಾಗಿ ಹತ್ತು ಹಲವುಸಂಗತಿಗಳು. ಭಾಷಾವಿಜ್ಞಾನದಲ್ಲೂ ಅವರು ಧ್ವನಿ, ಪದ, ವಾಕ್ಯ ಮುಂತಾದ ಯಾವುದೇ ಒಂದು ಪ್ರಕಾರಕ್ಕೆ ಅಂಟಿಕೊಂಡವರಲ್ಲ: ಭಾಷೆಯನ್ನು ಇಡಿಯಾಗಿ ಕಲ್ಪಿಸಿದವರು ಅವರು. ಅದೇ ರೀತಿ, ಭಾಷಾಧ್ಯಯನವನ್ನು ಸೀಮಿತ ಅರ್ಥದಲ್ಲಿ ತೆಗೆದುಕೊಂಡವರೂ ಅಲ್ಲ: ‘ದ್ರವೀಡಿಕ್ ಸ್ಪಡೀಸ್’ನಲ್ಲಿ ಮಧ್ಯಯುಗದ ಕನ್ನಡ ಗಣಿತಕ್ಕೆ ಸಂಬಂಧಿಸಿ ಎರಡು ಲೇಖನಗಳಿವೆ! ಕನ್ನಡ ಅವರ ಅಧ್ಯಯನದ ಕೇಂದ್ರವಾದರೂ, ತಮ್ಮ ಕ್ಷೇತ್ರವನ್ನು ಭಾರತ ಮಾತ್ರವೇ ಅಲ್ಲ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಇರಾಣ ಮುಂತಾದ ಕಡೆ ಹಬ್ಬಿಕೊಂಡಿರುವ ಇಡೀ ದ್ರಾವಿಡ ಭಾಷಾ ಕುಟುಂಬಕ್ಕೆ-ಭಾಷೆ ಎಷ್ಟೇ ಸಣ್ಣದಾಗಿರಲಿ-ವಿಸ್ತರಿಸಿಕೊಳ್ಳುತ್ತಾರೆ. ದ್ರಾವಿಡ ಭಾಷಾಧ್ಯಯನ ಮಾಡುವವರಿಗೆ ಇಂಡೋ ಆರ್ಯನ್ ಭಾಷೆಗಳ ಜ್ಞಾನವೂ, ಇಂಡೋ ಆರ್ಯನ್ ಭಾಷಾಧ್ಯಯನ ಮಾಡುವವರಿಗೆ ದ್ರಾವಿಡಭಾಷೆಗಳ ಜ್ಞಾನವೂ ಅಗತ್ಯ ಎನ್ನುತ್ತಾರೆ, ಯಾಕೆಂದರೆ ಹಲವು ಶತಮಾನಗಳ ಸಂಪರ್ಕದಿಂದಾಗಿ ಎರಡೂ ಕುಟುಂಬಗಳ ಭಾಷೆಗಳು ಒಂದರಿಂದೊಂದು ಪ್ರಭಾವಿತವಾಗಿದ್ದು, ಯಾವ ಭಾಷೆಯನ್ನೂ ಇನ್ನೊಂದರ ಸಹಾಯವಿಲ್ಲದೆ ಅಭ್ಯಾಸಮಾಡುವಂತಿಲ್ಲ. ‘ಯಾವುದೇ ಭಾಷಾವಿಜ್ಞಾನ ವಿಭಾಗ, ಉತ್ತರದಲ್ಲಾಗಲಿ, ದಕ್ಷಿಣದಲ್ಲಾಗಲಿ, ಪೂರ್ವದಲ್ಲಾಗಲಿ, ಪಶ್ಚಿಮದಲ್ಲಾಗಲಿ, ಸರಿಯಾದ ಅಧ್ಯಾಪಕರು ಸಿಕ್ಕರೆ ಭಾರತದ ಎಲ್ಲಾ ಭಾಷೆಗಳ ಕೈಕಾರ್ಯಮಾಡಬೇಕು. ದ್ರವೀಡಿಯನ್‌ಗೆ ನಷ್ಟವೊದಗಿಸಿ ಇಂಡೋ ಆರ್ಯನ್‌ಗೆ, ಇಂಡೋ ಆರ್ಯನ್‌ಗೆ ನಷ್ಟವೊದಗಿಸಿ ದ್ರವೀಡಿಯನ್‌ಗೆ ಪ್ರೋತ್ಸಾಹ ಕೊಡುವುದರಿಂದ ಸಂಶೋಧನೆಗೂ ಸೈದ್ಧಾ೦ತೀಕರಣಕ್ಕೂ ಅಡ್ಡಿಯಾಗುವುದು. ಇವೆರಡೂ ಬೇರೆ ಬೇರೆ ಕುಟುಂಬಗಳಿಗೆ ಸೇರಿದ ಹಲವಾರು ಭಾಷೆಗಳನ್ನು ಅಭ್ಯಾಸಮಾಡುವುದರಿಂದ ಮಾತ್ರವೇ ಸಾಧ್ಯ’ ಎನ್ನುತ್ತಾರೆ ಅವರು ೧೯೭೫ರ ಐದನೆಯ ಅಖಿಲ ಭಾರತ ದ್ರವೀಡಿಯನ್ ಸಮ್ಮೇಳನದ To Dravidian Linguistics ಎ೦ಬ ತಮ್ಮ ಅಧ್ಯಕ್ಷ ಭಾಷಣದಲ್ಲಿ. ಇದು ಯಾಕೆ ಅಗತ್ಯ ಎನ್ನುವುದನ್ನು ಭಾವನಾತ್ಮಕವಾಗಿ ನೋಡದೆ, ವೈಜ್ಞಾನಿಕವಾಗಿಯೂ ತಾರ್ಕಿಕವಾಗಿಯೂ ಉದಾಹರಣೆಗಳೊಂದಿಗೆ ಅವರು ಸಾಧಿಸಿ ತೋರಿಸುತ್ತಾರೆ ಎನ್ನುವುದು ಮುಖ್ಯ. ತ್ರಿಭಾಷಾ ಸೂತ್ರವನ್ನು ಉತ್ತರ ಭಾರತದ ಉನ್ನತ ಶಿಕ್ಷಣದಲ್ಲೂ ಅನುಷ್ಠಾನಗೊಳಿಸತಕ್ಕದ್ದು ಎಂದು ಅವರು ಕರೆನೀಡುವುದೂ ಈ ದೃಷ್ಟಿಯಿಂದಲೇ. ದೆಹಲಿಯಲ್ಲಿ ದ್ರಾವಿಡಭಾಷಾ ಅಧ್ಯಯನ ಕೇಂದ್ರವೊಂದನ್ನು ಕೇಂದ್ರ ಸರಕಾರ ಸ್ಥಾಪಿಸಬೇಕು ಎಂದೂ ಮರಿಯಪ್ಪಭಟ್ ಇದೇ ಭಾಷಣದಲ್ಲಿ ಪುನರುಚ್ಚರಿಸುತ್ತಾರೆ.

ಭಾಷಾವಿಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಹೇಳುವುದಾದರೆ ಮರಿಯಪ್ಪಭಟ್ ಒಂದು ಸಂಧಿಕಾಲಕ್ಕೆ ಸೇರಿದವರು: ಬಾಷಾಶಾಸ್ತ್ರ (Philology) ಭಾಷಾಜ್ಞಾನಕ್ಕೆ(Linguistics) ಎಡೆಗೊಡುತ್ತಿದ್ದ ಕಾಲ ಅದು. ಅವರ ಭಾಷಾಧ್ಯಯನ ಕ್ರಮವನ್ನುರೂಪಿಸಿದ್ದು ಹತ್ತೊಂಬತ್ತನೇ ಶತಮಾನದ ಎರಡನೆಯ ಭಾಗದಲ್ಲಿ ಯುರೋಪಿನಲ್ಲಿ ಕಾಣಿಸಿಕೊಂಡ ತೌಲನಿಕ ಭಾಷಾಧ್ಯಯನ (Comparative Philology) ಎ೦ಬ ಜ್ಞಾನಶಾಖೆ. ಇದು ಮುಖ್ಯವಾಗಿ ಧ್ವನಿ ಮತ್ತು ಶಬ್ದರೂಪಗಳ ಚಾರಿತ್ರಿಕ ಹಾಗೂ ತೌಲನಿಕ ಅಧ್ಯಯನ ಕ್ರಮ. ಒಂದೇ ಕುಟುಂಬಕ್ಕೆ ಸೇರಿದ ಬೇರೆ ಬೇರೆ ಭಾಷೆಗಳಲ್ಲಿ ಪ್ರಚಲಿತವಿರುವ ರೂಪಗಳ ತೌಲನಿಕ ಅಧ್ಯಯನದ ಮೇಲಿಂದ ಈಗ ಮೂಲರೂಪದಲ್ಲಿ ಕಾಣಿಸಿಕೊಳ್ಳದ ಪ್ರಾಕೃತಿಕ (Proto) ರೂಪಗಳನ್ನು ಊಹಿಸುವುದು ಈ ಸಂಶೋಧನೆಯ ಸೈದ್ಧಾಂತಿಕವಾಗಿ ಸ್ವಾರಸ್ಯಕರವಾದ ಒಂದು ಪ್ರಧಾನ ಗುಣ. ಮರಿಯಪ್ಪ ಭಟ್ಟರ ಹಲವು ಲೇಖನಗಳಲ್ಲಿ ನಾವಿದನ್ನು ಕಾಣುತ್ತೇವೆ. ಆದರೆ ಅವರ ಲೇಖನಗಳ ನಿಜವಾದ ವೈಶಿಷ್ಟ್ಯತೆಯೆಂದರೆ, ಅವುಗಳೆಲ್ಲವೂ ಸಮಕಾಲೀನ ಭಾಷಾವಿಜ್ಞಾನದ ಬೆಳಕಿನಿಂದ ಪ್ರಕಾಶಮಾನವಾಗಿರುವುದು.

Sounds and prosodies of certain cognates in Dravidian ಎ೦ಬ ಲೇಖನದಲ್ಲಿ ಮರಿಯಪ್ಪ ಭಟ್ಟರು ಬ್ರಿಟಿಷ್ ಭಾಷಾ ವಿಜ್ಞಾನಿ ಜೆ. ಅರ್. ಫರ್ತ್‌ರ ಛಂದಸ್ಸಿದ್ಧಾ೦ತವನ್ನು ಹೇಗೆ ದ್ರಾವಿಡಭಾಷಾಧ್ಯಯನಕ್ಕೆ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಡುತ್ತಾರೆ. ಫರ್ತ್ ಕೆಲವು ಧ್ವನಿಗಳು ಕೇವಲ ಅಕ್ಷರವನ್ನಲ್ಲದೆ ಇಡಿಯಾದ ಶಬ್ದದ ಮೇಲೂ ಹರಡುತ್ತವೆ ಎಂಬ ಸಿದ್ಧಾಂತವನ್ನು ಪ್ರಚುರಪಡಿಸಿದವನು; ಹಕಾರ, ಯಕಾರ, ಅನುನಾಸಿಕ ಮುಂತಾದವುಗಳ ವರ್ತನೆಯನ್ನು ಅಧ್ಯಯನ ಮಾಡುವುದಕ್ಕೆ ಫರ್ತ್‌ನ ಸಿದ್ಧಾಂತ ತುಂಬಾ ಉಪಯುಕ್ತ. ಮರಿಯಪ್ಪ ಭಟ್ಟರು ಇದನ್ನು ಶಿಷ್ಟ ಕನ್ನಡ ಮತ್ತು ಹವ್ಯಕ ಕನ್ನಡದ ಹಾಗೂ ಸಂಸ್ಕೃತ ಮತ್ತು ತುಳುವಿನಲ್ಲಿನ ಅವುಗಳ ತದ್ಭವರೂಪಗಳನ್ನು ತುಲನೆ ಮಾಡಿ ವಿವರಿಸುತ್ತಾರೆ. ಉದಾಹರಣೆಗೆ,’ತಿ೦ಬವರು’ ಎಂಬ ಶಿಷ್ಪ ಕನ್ನಡ ಪದ (ಪ್ರಾದೇಶಿಕ) ಹವ್ಯಕದಲ್ಲಿ ‘ತಿಂಬೋರು’ಎಂದಾಗುತ್ತದೆ: ಎರಡೂ ಪದಗಳ ಮಾತ್ರೆಗಳು ಒಂದೇ (೫) ಆಗಿದ್ದರೂ, ಹವ್ಯಕ ಪದದಲ್ಲಿ `ಓ’ಷ್ಠ್ಯತ್ವ ಇಡೀ ಪದದ ವೈಶಿಷ್ಟ್ಯವಾಗಿರುವುದು ಗಮನಾರ್ಹ. ಅದೇರೀತಿ, ‘ಅಂತಹ’ ಎಂಬ ಶಿಷ್ಟ ಕನ್ನಡದ ಪದ ಹವ್ಯಕದಲ್ಲಿ ‘ಅಂಥ’ ಎಂದಾಗುತ್ತದೆ. ಇಲ್ಲಿ ೪ ಮಾತ್ರೆ ೩ ಮಾತ್ರೆಗಿಳಿದು, ‘ಹ’ಕಾರ ತನ್ನ ಧ್ವನಿಮಾ ಗುಣವನ್ನು ಕಳೆದುಕೊಂಡು’ತ’ಕಾರದ ಮೇಲೆ ಬರುವ ಛಂದೋಗುಣವಾಗುತ್ತದೆ.

Plural Suffixes in the Dravidian Languages ಎ೦ಬ ಲೇಖನದಲ್ಲಿ ಮರಿಯಪ್ಪಭಟ್ಟರು ಕನ್ನಡ, ತಮಿಳು, ಮಲಯಾಳ, ತೆಲುಗು ಮತ್ತು ತುಳು ಭಾಷೆಗಳಲ್ಲಿ ಬಹುವಚನ ಹೇಗೆ? ಎಲ್ಲಿಂದ ಬಂತು? ಎಂಬುದರ ಜಿಜ್ಞಾಸೆ ನಡೆಸುತ್ತಾರೆ. ಇಲ್ಲಿ ಕಾಲ್ಡ್‌ವೆಲ್ ತಮಿಳಿನ ಕುರಿತಾಗಿ ಮಾಡಿದ ಸೂಚನೆಯನ್ನು ಭಟ್ಟರು ದಕ್ಷಿಣಭಾರತದ ಎಲ್ಲಾ ಪ್ರಮುಖ ದ್ರಾವಿಡ ಭಾಷೆಗಳಿಗೂ ವಿಸ್ತರಿಸುತ್ತಾರೆ: ‘ಹಿಂದಿನ ಕವಿಗಳಾಗಲಿ ಕೃಷಿಕರಾಗಲಿ,ನಪುಂಸಕ ಪದಗಳಿಗೆ ಬಹುವಚನ ಹಚ್ಚುವುದು ಬಹಳ ಕಡಿಮೆ, ಹಾಗೂ ಏಕವಚನದ ನಾಮಪದಗಳನ್ನು ಅನಿಶ್ಚಿತ ಏಕ-ಬಹು ವಚನಾರ್ಥದಲ್ಲಿ, ಸಂದರ್ಭದ ಹೊರತಾಗಿವಚನದ ಬೇರೆ ಗುರುತಿಲ್ಲದೆ, ಉಪಯೋಗಿಸುವುದು ಅವರಿಗೆ ಇಷ್ಟ’ ಎನ್ನುತ್ತಾರೆ ಕಾಲ್ಡ್‌ವೆಲ್. ಆಳವಾದ ಅಭ್ಯಾಸವನ್ನು ಬಯಸುವ ತಮ್ಮ ಈ ಲೇಖನದಲ್ಲಿ ಭಟ್ಟರು ಬಹುವಚನ ಸೂಚಕವಾದ ‘ಅರ್’ (-ಅರು) ಮತ್ತು ‘ಕಳ್’ (-ಕಳು, ಗಳು)ಎರಡೂ ಅವ್ಯಯಗಳು ‘ರಳ’ಪಲ್ಲಟದ ಕಾರಣ ಆರಂಭದಲ್ಲಿ ಒಂದಾಗಿದ್ದು, ಕ್ರಮೇಣ ಎರಡಾಗಿ ಒಡೆದಿರಬಹುದು ಎಂಬ ಸಿದ್ಧಾಂತವನ್ನು ಮುಂದಿಡುತ್ತಾರೆ.

A Study of Cases iನ Dravidian Languages ಎ೦ಬ ಲೇಖನದಲ್ಲಿ ಮರಿಯಪ್ಪ ಭಟ್ಟರು ಬಹುಚರ್ವಿತವಾದ ವಿಭಕ್ತಿ ಸಮಸ್ಯೆಯನ್ನು ಎತ್ತಿಕೊಳ್ಳುತ್ತಾರೆ. ಇಲ್ಲಿಯೂ ಅವರು ಇಡೀ ವಿಭಕ್ತಿ ವಿಷಯವನ್ನು ಕನ್ನಡ, ತಮಿಳು, ಮಲಯಾಳ, ತೆಲುಗು ಮತ್ತು ತುಳು ಭಾಷೆಗಳಿಗೆ ವಿಸ್ತರಿಸಿ ಚರ್ಚಿಸುತ್ತಾರೆ, ಹಾಗೂ ಕಾಲ್ಡ್‌ವೆಲ್ ಮತ್ತು ಇತರ ವಿದ್ವಾಂಸರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡೇ ಮುಂದರಿಯುತ್ತಾರೆ. ಈ ವಿದ್ವಾ೦ಸರು ಹೇಳುವಂತೆ, ವಿಭಕ್ತಿ ಪ್ರತ್ಯಯಗಳು ಮೂಲದಲ್ಲಿ ಅರ್ಥಪೂರ್ಣ ಸ್ವತಂತ್ರ ಪದಗಳಾಗಿದ್ದಿರಬೇಕು. ಕಾಲಾಂತರದಲ್ಲಿ ಬೇರೆ ಬೇರೆ ದ್ರಾವಿಡ ಭಾಷೆಗಳು ಅವನ್ನು ಪ್ರತ್ಯಯಗಳಾಗಿ ಉಪಯೋಗಿಸಿದ್ದಿರಬಹುದು. ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳು ಪತ್ಯೇಕವಾಗಿ ಬೆಳೆಯುತ್ತ ಒಂದೇ ರೂಪದ ಮೂಲ ಪದಗಳನ್ನು ವಿಭಿನ್ನ ವಿಭಕ್ತಿಗಳ ಸೂಚಕವಾಗಿ ಬಳಸಿರುವುದೇ ಇದಕ್ಕೆ ಸಾಕ್ಷಿ. ದ್ರಾವಿಡ ಭಾಷೆಗಳಲ್ಲಿನ ವಿಭಕ್ತಿ ರೂಪಗಳು ಸ೦ಸ್ಕೃತಕ್ಕಿಂತ ಹೇಗೆ ಭಿನ್ನವಾಗಿವೆ ಎನ್ನುವುದನ್ನು ಕಾಣಬೇಕಾದರೆ ದ್ರಾವಿಡ ಭಾಷೆಗಳನ್ನು ನಾವು ಒಟ್ಟಾಗಿ ತೆಗೆದುಕೊಳ್ಳಬೇಕು: ದ್ರಾವಿಡ ಭಾಷೆಗಳಲ್ಲಿ ಲಿಂಗ ವಚನ ಪುರುಷ ವ್ಯತ್ಯಾಸವಿಲ್ಲದೆ ಎಲ್ಲ ನಾಮಪದಗಳಿಗೂ ಓಂದೇ ರೀತಿಯ ಪ್ರತ್ಯಯ ಬರುತ್ತದೆ; ಸಂಸ್ಕೃತದಲ್ಲಿ ಲಿಂಗ ವಚನ ಪುರುಷ ಗುಣಗಳಿಗೆ ಅನುಸಾರವಾಗಿ ವಿಭಕ್ತಿ ಪ್ರತ್ಯಯ ವ್ಯತ್ಯಾಸವಾಗುತ್ತದೆ. ಮಾತ್ರವಲ್ಲ; ದ್ರಾವಿಡ ಭಾಷೆಗಳಲ್ಲಿ ವಿಭಕ್ತಿ ನಿರ್ಣಯ ಸಂದರ್ಭವನ್ನು ಹೊಂದಿಕೊಂಡಿರುತ್ತದೆ, ಆದ್ದರಿಂದ ಇವುಗಳಲ್ಲಿ ವಿಭಕ್ತಿ ಪಲ್ಲಟ ನಿಯಮವಲ್ಲದೆ ಅಪವಾದವಲ್ಲ; ಇಲ್ಲೂ ಈ ಭಾಷೆಗಳು ಸಂಸ್ಕೃತಕ್ಕಿಂತ ಭಿನ್ನವಾಗಿವೆ.

ಮರಿಯಪ್ಪ ಭಟ್ಟರು ತೌಲನಿಕ ಭಾಷಾಶಾಸ್ತ್ರದ ಅರಣ್ಯದಲ್ಲಿ ಕಳೆದುಹೋಗದೆ ಹೊಸ ವಿಚಾರಗಳ ಬೆಳಕಿನತ್ತ ನೋಡಬಲ್ಲರು ಎನ್ನುವುದಕ್ಕೆ ಅವರು ಇದೇ ಲೇಖನದಲ್ಲಿ ಕನ್ನಡದ ಪಂಚಮೀ ವಿಭಕ್ತಿಯ ಕುರಿತು ಆಡುವ ಮಾತು ನಿದರ್ಶನ. _ ಸಾಕಷ್ಟು ಚರ್ಚೆಗೊಳಗಾಗಿರುವ ಈ ಪ್ರಶ್ನೆಗೆ (ಪಂಚಮೀ ವಿಭಕ್ತಿ ಇದೆಯೇ ಇಲ್ಲವೇ?) ಮರಿಯಪ್ಪಭಟ್ಟರು ನೀಡುವ ಉತ್ತರ ಸರಳವಾಗಿದೆ: ರೂಪದಲ್ಲಿ ಅದು ತೃತೀಯಾ ವಿಭಕ್ತಿಪತ್ಕಯದಂತೆ ಇದೆ (-ಇಂದ); ಆದರೆ ಅರ್ಥದಲ್ಲಿ ಬೇರೆಯೇ. ಹೀಗಿರುತ್ತ, ಕನ್ನಡದಲ್ಲಿ ಪ೦ಚಮೀ ವಿಭಕ್ತಿ ಇಲ್ಲ ಎನ್ನುವಂತಿಲ್ಲ. `ಕತ್ತಿಯಿಂದ ಕಡಿದ’ (ತೃತೀಯ) ಮತ್ತು `ಮನೆಯಿಂದ ಬಂದೆ’ (ಪಂಚಮೀ) ಎಂಬ ವಾಕ್ಯಗಳಲ್ಲಿ ‘ಇಂದ’ ಬೇರೆ ಬೇರೆ ಅರ್ಥಗಳಲ್ಲಿ ಉಪಯೋಗವಾಗಿದೆ.

ಮರಿಯಪ್ಪ ಭಟ್ಟರ ಇಂಥ ಪ್ರತಿಯೊಂದು ವಿಚಾರಗಳೂ ಬೀಜರೂಪವಾಗಿದ್ದು ಅವುಗಳಲ್ಲಿ ಮುಂದಿನ ಸಂಶೋಧನಾ ಸಾಧ್ಯತೆಗಳು ಹುದುಗಿವೆ. ಉದಾಹರಣೆಗೆ, ಅವರು ಸಂಖ್ಯಾವಾಚಕಗಳನ್ನಾಗಲಿ, ವಿಭಕ್ತಿಪ್ರತ್ಯಯಗಳನ್ನಾಗಲಿ ಚರ್ಚೆಗೆ ಎತ್ತಿಕೊಂಡಾಗ ಅವು ಹತ್ತುವ ಪದಗಳ ಅ೦ತ್ಯಸ್ವರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ; ಆದರೆ ದ್ರಾವಿಡ ಭಾಷೆಗಳಲ್ಲಿ, ಮುಖ್ಯವಾಗಿ ಕನ್ನಡದಲ್ಲಿ, ಪದದ ವರ್ಗ ಮಾತ್ರವಲ್ಲದೆ ಅ೦ತ್ಯ ಕೂಡಾ ಪ್ರತ್ಯಯಗಳನ್ನು ಆರಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕನ್ನಡದಲ್ಲಿ ಮೇಲ್ವರ್ಗದ (ಅರ್ಥಾತ್ ಮನುಷ್ ವರ್ಗದ) ಪದಗಳಿಗೆ ಮಾತ್ರವೇ ಬಹುವಾಚಕವಾದ’ಅರ್’ ಹತ್ತುತ್ತದೆ ಎನ್ನುವುದು ನಿಜವಾದರೂ, ಎಲ್ಲಾ ಮೇಲ್ವರ್ಗದ ಪದಗಳಿಗೂ ಅದು ಬರುವುದಿಲ್ಲ: ಪದಾಂತ ಉಕಾರವಾಗಿದ್ದಾಗ ಹೆಚ್ಚಾಗಿ `ಕಳ್’ ಬರುತ್ತದೆ. ಆದ್ದರಿ೦ದಲೆ ‘ಅಧ್ಯಾಪಕ’ ಮತ್ತು ‘ಗುರು’ ಒಂದೇ ವರ್ಗಕ್ಕೆ ಸೇರಿದ್ದರೂ, ಅವುಗಳ ಬಹುವಚನಗಳು `ಅಧ್ಯಾಪಕರು’ ಮತ್ತು ‘ಗುರುಗಳು’ ಎಂಬುದಾಗಿ ಬೇರೆ ಬೇರೆ ಆಗುತ್ತವೆ. `ಅಧ್ಯಾಪಕ’ ಅಕಾರಾಂತ, ‘ಗುರು’ ಉಕಾರಾಂತ ಎಂದಲ್ಲದೆ ಇದಕ್ಕೆ ಬೇರೊಂದು ಕಾರಣವಿಲ್ಲ. ‘ಅರಸ’ ಮತ್ತು `ಅರಸು’ ಎಂಬ ಪರ್ಯಾಯ ಪದಗಳನ್ನು ತೆಗೆದುಕೊಂಡರೆ, ಮೊದಲನೆಯದರ ಬಹುವಚನ ‘ಅರಸರು’ ಮತ್ತು ಎರಡನೆಯದರದು’ಅರಸುಗಳು’. ವಟುಗಳು, ಕ್ರೀಡಾಪಟುಗಳು, ಆಳುಗಳು ಮುಂತಾದ ಈ ರೀತಿಯ ಸಾಕಷ್ಟು ಪದಗಳಿವೆ. (‘ಮಗು’ವಿನ ವಿಚಾರದಲ್ಲಿ ಅದು ಹ್ರಸ್ವಗೊಂಡು ‘ಮಕ್ಕಳು’ಆಗುತ್ತದೆ!) ಆದರೆ ಗಂಡಸರು, ಹೆಂಗಸರು ಎಂಬಂಥ ಅಪವಾದಗಳನ್ನೂ ಗಮನಿಸತಕ್ಕದ್ದು. ಇನ್ನು ಮೇಲ್ವರ್ಗದ ಇಕಾರಾಂತ ಪದಗಳಲ್ಲಿ ಲಿಂಗ ಕೂಡಾ ನಿರ್ಣಾಯಕವಾಗಬಹುದು: ಉದಾಹರಣೆಗೆ, ವಿದ್ಯಾರ್ಥಿಗಳು (ಲಿಂಗ ಅಭೇದ),ವಿದ್ಯಾಥಿ೯ನಿಯರು (ಸ್ತ್ರೀಲಿಂಗ).

ಈ ಸಂಕಲನದಲ್ಲಿ ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ಲೇಖನಗಳೂ ಇದ್ದು, ಒಟ್ಟು ಪುಸ್ತಕ ಒಂದು ವಿಚಾರಗಳ ಖಣಿಯಂತಿರುವುದರಿಂದ ಯುವ ಸಂಶೋಧಕರು ಇದನ್ನು ಖಂಡಿತಕ್ಕೂ ಓದಬೇಕು. ಮರಿಯಪ್ಪ ಭಟ್ ಆಧುನಿಕತೆಯ ನಿರೀಕ್ಷೆಯಲ್ಲಿದ್ದ, ಹಾಗೂ ಅದಕ್ಕೆ ಕಾರಣರೂ ಆದ, ಒಬ್ಬ ‘ರಿನೇಸೆನ್ಸ’ (ಅರ್ಥಾತ್ ನವೋದಯ)ಮನುಷ್ಯ. ಪರಂಪರೆಯ ಸ೦ಪರ್ಕವನ್ನು ಇರಿಸಿಕೊಂಡೂ ಅವರು ಗೊಡ್ಡುಸನಾತನಿಗಳಲ್ಲ. ಅವರ ವಿಶಾಲವಾದ ಲಿಬರಲ್ ಮನೋಧರ್ಮ ಯಾರನ್ನೇ ಆದರೂ ತಟ್ಟನೆ ಒಳಗೊಳ್ಳುವಂಥದು. To Dravidian Linguistics ಭಾಷಣದ ಕೊನೆಯಲ್ಲಿ ಅವರು Time was Time is and time will be ‘ಸಮಯ ಇತ್ತು ಸಮಯ ಇದೆ ಮತ್ತು ಸಮಯ ಇರುತ್ತದೆ’ ಎಂಬ ಮಾತನ್ನು ಉದ್ದರಿಸುತ್ತ, ‘ಭೂತಕಾಲದಲ್ಲಿ ವಿಶ್ವಾಸ ಮತ್ತು ವರ್ತಮಾನದಲ್ಲಿ ಕ್ರಿಯಾಶೀಲತೆ ಇರಿಸಿಕೊಂಡು ಆಶಾಪೂರ್ಣಭವಿಷ್ಯದತ್ತ ಹೆಜ್ಜೆಯಿಡೋಣ’ ಎಂದು ಕರೆಕೊಡುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಗ್ಗಿ ತಳನಲ್ಲಿ ಪದ (ದುಮಸೋಲಣ್ಣಿರಾ)
Next post ಧಡೂತಿ ಸ್ನೇಹಿತ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…