ಹ್ಯಾಮ್ಲೆಟ್ಟು ನಾನಾಗಿ
ಕ್ವಿಕ್ಸೋಟನಾಗಿ
ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ
ಆಡಿದ್ದು
ಮೂರು ಬೀದಿಗಳ ಮಧ್ಯೆ ನಿಂತು
ಸಾಕ್ರೆಟಿಸ್ ಮರೆತದ್ದು
ನಾನು ಸಾರುವೆನೆಂದು
ಬೊಗಳಿದ್ದು
ಈ ಮನೀಷೆ
ಈ ಒಳತೋಟಿ
ಅನುಭವಿಸಿ ಅನುಭವಿಸಿ ಸೋತು ಸುಸ್ತಾಗಿ
ಯಶೋಧರೆಯ ಮಗ್ಗುಲಲಿ
ಹೊರಳಿದ್ದು
ಎಲ್ಲೊ ಏನೋ ಕಳೆದು ಹೋಗಿದೆಯೆಂದು
ಬೋಧಿವೃಕ್ಷದ ಕೆಳಗೆ
ಹುಡುಕಿದ್ದು
ಬುದ್ಧನಾದದ್ದು ಗೊಮ್ಮಟನಾದದ್ದು
ಕಲ್ಲಾಗಿ ಬಿದ್ದದ್ದು
ನನ್ನ ಕತೆ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)