“ಎಲ್ಲಾ ತಿಂಡಿಯು ನನಗೇ ಬೇಕು
ಎಲ್ಲಾ ಹಣ್ಣೂ ನನಗೇ ಬೇಕು
ಆರಿಗು ಚೂರನು ಗೀರನು ಕೊಡೆನು”
ಕೊಡೆನೆನ್ನುತ ಎಳ ಮಗ ಹರಮಾಡಿದನು.

“ಅಣ್ಣನು ತಮ್ಮನು ಎಲ್ಲರು ಇರುವರು
ಅಕ್ಕನು ತಂಗಿಯು ಎಲ್ಲರು ಇರುವರು
ನಾನೂ ಅಮ್ಮಾ ಎಲ್ಲರು ಇರುವೆವು
ಒಂದಿಷ್ಟಿಷ್ಟನು ನಮಗೂ ಕೊಡಬೇಕು.”

“ಆರಿಗು ಕೊಡೆನು ಎಲ್ಲವು ನನ್ನದು ?”
ಎನ್ನುತ ಎಳ ಮಗ ಹಠಮಾಡಿದನು;
ಅಣ್ಣ ತಮ್ಮ ಅಕ್ಕ ತಂಗಿ
ಎವೆಯಿಕ್ಕದೆ ತಿಂಡಿಯ ನೋಡಿದರು.

ಅಪ್ಪನ ಕೈಹಿಡಿದೆಳೆಯುತ ಕೇಳುತ
ಎಳ ಮಗು ಕೈಯಿಂದೆಳೆಯಲು ಹೋಗಿ
ನನಗೇ ತನಗೇ ಎಂದಳುತಿರಲು
ತಂದೆಯು ಮಗನನ್ನು ಮುದ್ದಿಸಿ ಆಡಿದನು.

“ಬಾರಲೆ ರನ್ನ ! ಹೊಳಪಿನ ಚಿನ್ನ !
ನಗುತಾ ಕೊಟ್ಟರೆ ನೀನೇ ಜಾಣ
ಅಳುತಾ ಕೊಟ್ಟರೆ ನೀನೇ ಕೋಣ
ಕೊಡದಿರೆ ನೀನೆನ್ನಯ ಮಗನಲ್ಲಣ್ಣ.”

ಲೋಕದ ತಂದೆಯು ಮಗುವಿನ ತಂದೆಗೆ
“ಅಹುದಲೆ ಮಗನೇ!” ಎನುತಿಂತೆಂದನು
“ನಾ ಹೇಳಲು ಕಹಿ, ನೀ ಹೇಳಲು ಸಿಹಿ
ಎಲ್ಲಿಯು ನಡೆಸುವ ಮಕ್ಕಳು ಬಹುಕಡಮೆ.

ನಗುತಾ ಕೊಟ್ಟರೆ ಅವನೇ ಜಾಣ
ಅಳುತಾ ಕೊಟ್ಟರೆ ಅವನೇ ಕೋಣ
ಏನೋ ಎಂತೋ ಏನೂ ಕೊಡದಿರೆ
ಅವನೇನೂ ನನ್ನಯ ಮಗನಲ್ಲಣ್ಣ.”
*****