Home / ಕವನ / ಕವಿತೆ / ದೀಪಾವಳಿ ದಿನ

ದೀಪಾವಳಿ ದಿನ

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ
ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ!
ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?!
ಆದಿಶೇಷನ ತೆರದಿ ಭುಸುಗುಟ್ಟುವೆ!
ಕಣ್ಣು ಗುಡ್ಡೆ… ನಿಗಿ, ನಿಗಿ… ಉರಿವ ಕುಡಿಕೆ, ಬಾಣ!
ಕೈ, ಕಾಲು, ತಲೆ, ಭೂ ಚಕ್ರ…


ಇಲ್ಲ: ಮೊದಲಿಗರು: ಆದಿಗರು: ಮಹಾಧೀರರು:
ಈ ಮಾದಿಗರೇ…
ಈಗ ಇವರು ಕೊಳಗೇರಿಗರು
ಇವರೀಗ-ತಮ್ಮ ತ್ಯಾಗ, ಬಲಿದಾನಕ್ಕೆ, ಬೇಸತ್ತು ಕಣ್ಣೀರಿಡುತ್ತಾ,
ದೀಪಾವಳಿ ಸೂತಕದ ದಿನವಾಗಿದೆ!
ಹೆತ್ತಮ್ಮನ ಭೂಮಿಗೆಪ್ಪು ಕೊಟ್ಟು
ಬಲಿ ಚಿಕ್ರವರ್ತಿನ ಬಲಿಗೊಟ್ಟು
ಹುಟ್ಟು ಹುಟ್ಟಿಸಿದ ತಪ್ಪಿಗೆ,
ಹಟ್ಟಿಲಿರುವ ಪ್ರಾರಬ್ಧ ಕರ್ಮ ನಮ್ಮದು!


ರಾಜ್ಯ ಕಳಕೊಂಡು,
ಬಲಿನ ಮುಂದಿಟ್ಟುಕೊಂಡು,
ತಿರುಬೋಕಿಯಾಗಿ, ದೀಪಾವಳಿ ಹೇಗೆ ಆಚರಿಸುವುದು!?
ಕೊಟ್ಟ ಮಾತಿಗೆ ಕಟ್ಟು ಬಿದ್ದು,
ಪಾತಾಳ ಕಾಣುವುದು ಬಲಿಗೆ ಬೇಕಿತ್ತೇ?
ಬಲಿನ ಕಳಕೊಂಡ ದಿನ,
ನಲಿ ನಲಿದು, ಊರುಕೇರಿ ಕೊಳ್ಳೆ ಹೊಡೆದು,
ಪಟಾಕಿ ಸುಡುವುದು ಯಾರಿಗಾಗಿ?!


ಶಿವದಾರ, ಜನಿವಾರ, ಉಡುದಾರವ
ಹೆಣ್ಣೂ, ಹೊನ್ನು, ಮಣ್ಣು, ಕಣ್ಣು, ಕದ್ದ ಕತೆ ತಿಳೀದೇ?
ಬ್ರಿಟಿಶರ ತಲೆ ಹಿಡಿದು, ತಲೆ ಒಡೆದು, ಗದ್ದುಗೆ ಏರಿದವರೇ,
ಹಳೆದ್ದನ್ನೆಲ್ಲ ತಿರುಚಿ, ಹೊಸದನ್ನು ಗಿಳಿ ಪಾಠವಾಗಿಸಿ,
ವಿಧಾನಸೌಧ, ಪರ್ಲಿಮೆಂಟಲಿ ಕುಂತು,
ಕಣ್ಣೊರೆಸಲು ಮೀಸಲಾತಿ ತಂದವರೇ,
ಜಾತಿ ಜಾತಿಗೆ ಹಿಂದುಳಿಯಲು ಪೈಪೋಟಿ ಮಾಡಿದವರೇ,
ಮಗಳನ್ನಿತ್ತು, ಮಣೆಯನ್ನಿತ್ತರೂ ಮಾದಿಗರಾಗಿ ಉಳಿದದ್ದು ತಿಳಿಯದೇ?!
ಕಾಮಧೇನು ಕೊಟ್ಟು, ನಗಚಕ್ರವಿತ್ತು,
ಸತ್ತ ದನವ ತಿನ್ನುವುದು, ಗೊತ್ತಿಲ್ಲವೇನು??
ಇರುವುದೆಲ್ಲ ನಿಮಗೆ ಕೊಟ್ಟು, ಜೀತಕ್ಕಿರುವುದು ಸುಳ್ಳೇನು?


ನಮ್ಮೆಲ್ಲ ನೋವು, ಆ ಅಲ್ಲನೊಬ್ಬನೇ ಬಲ್ಲ
ಬೆಲ್ಲದಾ ಮಾತುಗಳಿಗೆಲ್ಲ ಹಲ್ಲು ಕಳ್ಕೊಂಬರಿಲ್ಲ!
ಹರ… ಹರಾಽ.. ಬೆಳೆಯಿತಲ್ಲಾ ಹುಲ್ಲು, ಈ ನಿಮ್ಮ ನಾಲಿಗೆ ಮೇಲೆಲ್ಲ…
ತಲೆ ತುಂಬಾ ಜಾತಿ, ಮತದಾ ಭೀತಿ! ಕೋತಿ ನಿಮ್ಮ ಬುದ್ಧಿ…
ಮೈತುಂಬಾ ವಿಭೂತಿ ಪಟ್ಟೆ ಖ್ಯಾತಿ,
ಅಣ್ಣ ಬಸವಣ್ಣನ ಹೆಸರು ಮುಂದಿಟ್ಟುಕೊಂಡು,
ಖಾದಿ, ಖಾಕಿ, ಖಾವಿ ತೊಟ್ಟುಕೊಂಡು,
ದನ, ಜನರ ಕತ್ತು ಕೊಯ್ಯುವಾ ಕಸರತ್ತು ನಿಂತಿಲ್ಲವೇಕೇ?
ಇರುಳು ಕಂಡ ಬಾವಿಗೆ, ಹಗಲು ಬೀಳಿಸಿದ ಕೀರ್ತಿ, ನಿಮ್ಮದಲ್ಲವೇ?!


ಬದುಕ ಕಲಿಸಿದ, ಗುರು ಜಾಂಬವಗೆ, ಕೇರೀಲಿ ಬಿಟ್ಟ ಗುಟ್ಟೇನು?
ಕೆಂಡು ಉಂಡು, ಕೆಂಡ ಉಗುಳುವ ನಮಗೆ, ಭಸ್ಮಾದುಂಡೆ ಯಾಕೇ?
ಶಕ್ತಿವಂತರು ಮೋಸ್ದಾಟಲಿ, ಬಲಿ ತೆಗೆದ ದಿನವೇ, ದೀಪಾವಳಿಯೇಕೇ?
ಮೈಚರ್ಮ ಸುಲಿಸಿಕೊಂಡು, ಮೈಲಾರ ಸೇರಿಕೊಂಡು,
ಮೆಟ್ಟು ತುಳಿದ ತಪ್ಪಿಗೆ, ಕರೆಬಾನಿಲಿ ಬಿದ್ದದ್ದು, ಮರೆತ್ತಿರೇನು?
ಏಳುಕೋಟಿ ನುಂಗಿ, ಏಳು ಬೆಟ್ಟದಲಿ, ಅಡಗಿದ್ದೇ ಪವಾಡವೇನು?
ಸೃಷ್ಠಿಕರ್ತನ ಸೃಷ್ಠಿಸಿ, ಕೇರೀಲುಳಿದವರ ಗೋಳು, ಕೇಳದೇನು?
ಈ ನೆಲ, ಜಲ, ಜನ, ಮನೆ, ಮಠ, ಯುಕ್ತಿ, ಶಕ್ತಿ ಜಾಂಬುವನದಲ್ಲವೇ?
ಶಿವಗೆ ಮದುವೆ ಮಾಡಿ, ಶವ ಹೊತ್ತು, ತಿರುಗಿದ ಕತೆ, ನೆಪ್ಪಿಲ್ಲವೇ?
ಏನೆಲ್ಲ ತಿದ್ದಿ, ಕೋಟೆ, ಮಠ, ಮಾನ್ಯಗಳ ಕೆಡಿವಿ…
ಅಟ್ಟ ಹಾಸದಿ, ಮೆಟ್ಟಿ ಮೆರೆದ ತಪ್ಪಿಗೆ, ಬಲಿಗೆ ಬಲಿ ಸಿದ್ಧ…
ಜೋಕಾಲೀಲಿ, ಇನ್ನೆಶ್ಟು ದಿನವಿಲ್ಲಿ, ಜೀಕುವಿರಿ?!
ಗಡಿಗೆ ಬಾಣದಿ, ಸಿಡಿವ ದಿನವಿಲ್ಲಿ, ದೀಪಾವಳಿ.


ವಾಮನ ರೂಪದಿ, ತುಳಿದ ಕಾಲ ಕೋಪದಿ ಹುಡುಕುವೆ,
ಕರಾ ಕರಾ ರಂಪಿಗೆ ಕೈಯೊಳ್ ಈಗೋ ಕುಳಿತ್ತಿರುವೆ,
ಪಾಲೀಶ್ ಮಾಡುತಾ, ಕಾಲನು ಕೊಯ್ದೆ ಇಕ್ಕುವೆ!
ಕಟುಕನು ನಾ! ಪ್ರಾಣಿಗಳ ತಲೆಗಳ ತರಿವೆ ದಿನ ನಾ
ತುಳಿದ ಕಾಲ ತರಿವೆ ಸುಲಭದೀ ಬಿಡೆ ನಾ!
ದರ್ಜಿಯಾಗಿ ಗರ್ಜಿಸುವೆ! ನವರಂಧ್ರಗಳ ಹೊಲಿವೆ
ಬಲಿ ತುಳಿದ ಕಾಲನು! ಬಿಡದೆ ಕತ್ತರಿಸುವೆ!
ಗಂಟೆ, ಜಾಗಟೆ, ವಾಲಗ, ಆರತಿ, ತೀರ್ಥಪ್ರಸಾದಗಳೇಕೆ?
ತ್ರಿಶೂಲದಿ ಬಲಿಯ ತುಳಿದ ಕಾಲ ಇರಿವೆ!
ಗಡ್ಡ, ಮೀಸೆ, ತಲೆಗಳಾ, ಬೋಳಿಸಿ, ಬೋಳಿಸಿ,
ಬಲಿ ತುಳಿದಾ…
ಪಾದ ಹುಡುಕಿ ತೆಗೆವೆ, ರುಂಡ ಮುಂಡವಾ ಕರಕರನೇ…
ನೇಗಿಲಯೋಗಿ, ಬಲಿಯ ತುಳಿದವನ ಹುಡುಕಿ, ಮಾಡುವೆ…
ನೇಗಿಲ ಕುಳಕೇ ಬಲಿ!
ಬಟ್ಟೆ ಒಗೆವೆ ಬಲಿ ತುಳಿದ ಪಾದವ
ಸಿಕ್ಕರೆ ಬಟ್ಟೆ ತೆರದಿ ಒಗೆವೆ ಕಾಲಿಡಿದು!
ಅಡಿಗೆ ಭಟ್ಟನು ಹುಡುಕುತಲಿರುವೆ… ತುಳಿದ ಕಾಲ,
ಸಿಕ್ಕರೆ ಹಚ್ಚುವೆ ತರಕಾರಿಯಂದದಿ!
ಬೇಯಿಸಿ ಬಿಡುವೆ ಪಾಯಸದಿ!
ವೈದ್ಯನಾಗಿ ಮೃತ್ಯುರೂಪವ ತಾಳುವೆನೀಗಲೇ…
ಶಿಕ್ಷಕನಾಗಿ ಹುಡುಕುವೆ ಕಾಲ!
ದಶಾವತಾರವೇ ನಾಡಿಗೆ, ಸಿಡಿಮದ್ದೀಗ
ವರ್ಷ ವರ್ಷದಿ, ಚರಮಗೀತೆ ಹಾಡಿರಿ ನೀವೆಲ್ಲ
ಬಲಿಗೆ ಬಲಿ, ಆದ ದಿನವೇ, ದೀಪಾವಳಿ ನಮಗೆಲ್ಲ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...