ಪಂಪ ತನ್ನ ಭಾರತದ ಪ್ರಾರಂಭದಲ್ಲಿ ಆ ಕಾವ್ಯದ ಸ್ವರೂಪ ಮತ್ತು ಉದ್ದೇಶಗಳ ವಿಷಯವಾಗಿ ಕೆಲವು ಮಾತುಗಳನ್ನು ಹೇಳುತ್ತಾನಷ್ಟೆ. ಆ ಸಂದರ್ಭದಲ್ಲಿ ಬರುವ ಪ್ರಸಿದ್ಧ ಪದ್ಯವೊಂದನ್ನು ಸಾಮಾನ್ಯವಾಗಿ ವಿಮರ್ಶಕರು ಅರ್ಥೈಸುತ್ತಿರುವ ಕ್ರಮ ವಿವಾದಸ್ಪದ ಎನಿಸುತ್ತದೆ. ಅದಕ್ಕೆ ಸಂಬಂಧಿಸಿದ್ದು ಈ ಟಿಪ್ಪಣಿ. ಪದ್ಯ ಹೀಗಿದೆ:

ವ್ಯಾಸಮುನೀಂದ್ರ ರುಂದ್ರವಚನಾಮೃತವಾರ್ಧಿಯನೀಸುವೆಂ ಕವಿ
ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ|
ವಾಸಮನೆಯ್ದೆ ಪೇಳ್ದಿಪೆನದಲ್ಲದೆ ಗರ್ವಮೆ ದೋಷಮಳ್ತುಗಂ
ದೋಷಮೆ ಕಾಣೆನೆನ್ನರುವ ಮಾಳ್ಕೆಯೆ ಪೇಳ್ದೆನಿದಾವ ದೋಷಮೋ||

ಈ ಪದ್ಯವನ್ನು ಸಾಮಾನ್ಯವಾಗಿ ವಿವರಿಸಿಕೊಂಡು ಬಂದಿರುವ ರೀತಿ ಇದು:

ನಾನು ಮುನಿಶ್ರೇಷ್ಠರಾದ ವ್ಯಾಸರ ವಿಸ್ತಾರವಾದ ಕಾವ್ಯಮೃತಸಾಗರವನ್ನು ಈಜುತ್ತೇನೆ. ಆದರೆ ನಾನು ಕವಿವ್ಯಾಸ ಎಂಬ ಜಂಭ ನನಗಿಲ್ಲ. ಗುಣಾರ್ಣವನಾದ ಅರಿಕೇಸರಿಯ ಸಜ್ಜನಿಕೆ ನನ್ನ ಮನಸ್ಸನ್ನು ಹೊಕ್ಕಿರುವುದರಿಂದ (ಅವನ ಸಲುವಾಗಿ) ಈ ಕಾವ್ಯವನ್ನು ಹೇಳುತ್ತಿದ್ದೇನೆ ಅಷ್ಟೆ. ಗರ್ವ ಮಾಡಿದ್ದಾದರೆ ದೋಷ. ಪ್ರೀತಿಗೆ ದೋಷವಿದೆಯೆ? ತಿಳಿಯೆನಲ್ಲ! ನನಗೆ ತಿಳಿದ ರೀತಿಯಿಂದ ನಾನು ಈ ಕಾವ್ಯವನ್ನು ಹೇಳುತ್ತೇನೆ, ಅಷ್ಟೆ. ಇದರಲ್ಲಿ ದೋಷ ಏನಿದೆ?

ಈ ವಿವರಣೆಯ ಪ್ರಕಾರ ಪಂಪ ‘ನಾನು ಮುನಿಶ್ರೇಷ್ಠರಾದ ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯಸಾಗರವನ್ನು ಈಜುತ್ತೇನೆ’ ಎಂದು ಹೇಳಿದಂತಾಗುತ್ತದೆ ಹೀಗೆ ಅರ್ಥ ಮಾಡುವ ವಿಧಾನವನ್ನು ‘ಎ’ ಎಂದು ಕರೆಯೋಣ. ಕುವೆಂಪು ರವರ ತಪೋನಂದನ (ಪಂಪನಲ್ಲಿ ಭವ್ಯತೆ ಎಂಬ ಲೇಖನ ನೋಡಿ), ಡಿ.ಎಲ್.ಎನ್. ರ್ ಪಂಪಭಾರತ ದೀಪಿಕೆ, ಪುಟ. ೭-೮, ತೀನಂಶ್ರೀ ರವರ ಸಮಾಲೋಕನ (ಅಮರವಾಣಿ) “ವ್ಯಾಸಮುನೀಂದ್ರರುಂದ್ರವಚನಾಮೃತವಾರ್ಧಿಯನೀಸುವೆಂ’ ಎನ್ನುವುದು ಪಂಪಭಾರತದ ಒಂದು ವಾಕ್ಯ.”, ಎನ್. ಅನಂತರಂಗಾಚಾರ್ ರವರ ಪಂಪಭಾರತಂ (ಗದ್ಯಾನುವಾದ) ಪು. ೭೩ (ಪರಿಷತ್ತಿನ ಪಂಚವಾರ್ಷಿಕ ಯೋಜನೆಯ ಪುಸ್ತಕ ಮಾಲೆ – ೮೮), ಇವರೆಲ್ಲ ಈ ಅರ್ಥಕ್ರಮವನ್ನೇ ಒಪ್ಪುತ್ತಾರೆ. ಮೊದಲ ವಾಕ್ಯಕ್ಕೆ ಮೇಲೆ ಕೊಟ್ಟಿರುವ ಅರ್ಥದಿಂದ ಬೇರೆಯಾದ ಅರ್ಥ ಮಾಡುವುದು ಸಾಧ್ಯವಿದೆ. ಮತ್ತು ಆ ಅರ್ಥವೇ ಪದ್ಯದ ಒಟ್ಟು ಅಶಯಕ್ಕೆ, ಪಂಪನ ಭಾಷಾ ಬಳಕೆಯ ರೀತಿಗೆ ಹೆಚ್ಚು ಹೊಂದುತ್ತದೆ ಎನ್ನಬಹುದು. ಈ ಭಿನ್ನ ವಿವರಣೆಯ ಕ್ರಮವನ್ನು ‘ಬಿ’ ಎಂದು ಕರೆಯೋಣ. ‘ಬಿ’ಯ ಪ್ರಕಾರ ಮೊದಲ ವಾಕ್ಯ ಮುಗಿಯುವುದು ‘ಈಸುವೆಂ’ ಎಂಬ ಪದದ ಕೊನೆಗಲ್ಲ, ‘ಗರ್ವಮೆನಗಿಲ್ಲ’ ಎಂಬ ಪದದ ಕೊನೆಗೆ. ಅಗ ‘ವ್ಯಾಸ ಮಹರ್ಷಿಗಳ ಈ ವಿಸ್ತಾರ ಕಾವ್ಯಸಾಗರವನ್ನು ಈಜಿಬಿಡುತ್ತೇನೆ ಎಂಬ ಗರ್ವವಾಗಲೀ, ನಾನು ಇನ್ನೊಬ್ಬ ಕವಿವ್ಯಾಸ ಎಂಬ ಅಹಮ್ಮಾಗಲೀ ನನಗಿಲ್ಲ. ನಾನು ಕಾವ್ಯ ಹೇಳುತ್ತಿರುವುದು ಅರಿಕೇಸರಿಯ ಒಳ್ಳೆಯತನಕ್ಕೆ (ಪ್ರೀತಿಗೆ) ಮಾರುಹೋಗಿ, ಅಷ್ಟೇ’ ಎಂದು ಅರ್ಥವಾಗುತ್ತದೆ. ಮುಂದೆ ಬರುವ (ಗರ್ವವಾದರೆ ದೋಷ, ಪ್ರೀತಿಗೆ ದೋಷವೆ? ನನಗೆ ತಿಳಿದ ರೀತಿಯಲ್ಲಿ ಈ ಕಾವ್ಯ ಹೇಳುತ್ತೇನೆ. ಅದರಲ್ಲಿ ದೋಷವೇನಿದೆ? ಎಂಬ) ಮಾತುಗಳು ಈ ವಿನಯಕ್ಕೆ ಪೋಷಕವಾಗಿ ನಿಲ್ಲುತ್ತವೆ. ‘ಎ’ ಅರ್ಥವಿಧಾನದ ಪ್ರಕಾರ “ನಾನು ಇನ್ನೊಬ್ಬ ಕವಿವ್ಯಾಸ’ ಎನ್ನುವುದು ಮಾತ್ರ ಗರ್ವದ ಮಾತು. ‘ಬಿ’ಯ ಪ್ರಕಾರ ‘ಇಂಥ ಮಹಾಸಾಗರವನ್ನು ನಾನು ಈಜುತ್ತೇನೆ’ ಎನ್ನುವುದೂ ಗರ್ವದ ಮಾತು.

‘ಬಿ’ಯ ಅರ್ಥವೇ ಸರಿಯೆನಿಸುವುದಿಲ್ಲವೆ? ಅಲ್ಲದೆ ಅದನ್ನು ಪೋಷಿಸುವ ಅಂಶಗಳು ಪದ್ಯದೊಳಗೇ ದೊರೆಯುತ್ತವೆ. ಕವಿತೆಯ ಒಟ್ಪು ಭಾವ ವಿನಯಸೂಚಿಯಾದದ್ದು. “ಕವಿ ಸ್ವಾಹಂಕಾರ ಖಂಡನೆಯನ್ನು ಈ ಪದ್ಯದಲ್ಲಿ ಮಾಡಿಕೊಂಡಿದ್ದಾನೆ.” (ಡಿ. ಎಲ್. ಎನ್. :ಪಂಪಭಾರತ ದೀಪಿಕೆ, ಪು. ೮) ಆದ್ದರಿಂದ (ಅವನು ಸಮರ್ಥನೇ ಆಗಿದ್ದರೂ) ಸಾಮರ್ಥ್ಯವನ್ನು ಹೇಳಿಕೊಳ್ಳುವ ಯಾವ ಮಾತೂ ಈ ಪದ್ಯದಲ್ಲಿ ಬರಬಾರದು. ಪದ್ಯದ ಪ್ರಧಾನ ಆಶಯಕ್ಕೇ ಅದು ವಿರೋಧವಾದದ್ದು. ಇರುವ ಸಾಮರ್ಥ್ಯವನ್ನೂ ಇಲ್ಲವೆಂಬಂತೆ ನುಡಿಯುವುದೇ ಇಲ್ಲಿಯ ವಿನಯದ ಧಾಟಿಗೆ ಹೊಂದುವಂಥದು.

ಈಜುತ್ತೇನೆ ಎಂಬ ಪದಕ್ಕೆ ಕವಿ ಬಳಸುವ ಕರ್ಮಪದವನ್ನು ಗಮನಿಸಬೇಕು. ಅದು ‘ವ್ಯಾಸಮುನೀಂದ್ರರುಲದ್ರವಚನಾಮೃತವಾರ್ಧಿ’ ಆರೇಳು ಶಬ್ದಗಳು ಕೂಡಿ ಆದ ಒಂದು ಪ್ರೌಢ ಸಂಸ್ಕೃತ ಸಮಾಸ. ಸ್ವರದ ಏಳುಬೀಳುಗಳಿಂದ, ರಕಾರದ ಒತ್ತಕ್ಷರಗಳ ಬಿರುಸಿನಿಂದ ಕೂಡಿ ಸಾಗರದ ದುರ್ಗಮತೆಯನ್ನು ಧ್ವನಿಸುವ ದೀರ್ಘಪದ.

ವ್ಯಾಸಕೃತಿಯ ಲೋಕೋತ್ತರತೆಯನ್ನು ಗೌರವಿಸುತ್ತಲೇ ಆ ಕೃತಿಸಮುದ್ರದ ಅಳ ಬೀಸುಗಳನ್ನೂ ಈ ಪದ ಸಮರ್ಥವಾಗಿ ಸೂಚಿಸುತ್ತದೆ. ವ್ಯಾಸ ಕೇವಲ ಕವಿಯಲ್ಲ, ಮುನಿ; ಬರಿ ಮುನಿಯಲ್ಲ , ಮುನೀಂದ್ರ; ಅವನ ಕೃತಿ ಅಂಥಿಂಥದಲ್ಲ ಸಾಕ್ಷಾತ್ ಸಮುದ್ರ; ಅಮೃತ ಸಮುದ್ರ; ಅಮೃತ ಮಹಾಸಮುದ್ರ. ವ್ಯಾಸಕೃತಿಯನ್ನು ಇಂಥ ಅದ್ಭುತ ಶರಧಿಯೆಂದು ವರ್ಣಿಸಿ ಅದೇ ಉಸಿರಿನಲ್ಲಿ ನಾನು ಅದನ್ನು ಈಜಿ ಮುಗಿಸುತ್ತೇನೆ ಎನ್ನುವುದು ತನ್ನ ಸಾಹಸವನ್ನು ಮೆರೆಯಬಯಸುವವನ ಭಾವಕ್ಕೆ ಹೊಂದುತ್ತದೆಯೇ ಹೊರತು ಅದನ್ನು ಮರೆಸಲು ಬಯಸುವವನ ಭಾವಕ್ಕಲ್ಲ. “ಏನೋ ನನಗೆ ತಿಳಿದ ಮಟ್ಟಿಗೆ ಭಾರತ ಹೇಳುತ್ತೇನೆ” ಎನ್ನುವಲ್ಲಿನ ನಮ್ರತೆಗೆ ಅದು ಹೊರತಾದದ್ದು. ಅಲ್ಲದೆ ಪದ್ಯದ ಉಳಿದ ಭಾಗದಲ್ಲಿ ದೇಸಿ ಮಾತಿನ ಚಿಕ್ಕವಾಕ್ಯಗಳ ಆಪ್ತ ನಿವೇದನೆಯ ಭಾಷೆಯಿದೆ. ಈ ಮಾತಿನಿಂದ ಪ್ರತೀತವಾಗುವ ಸೌಜನ್ಯಕ್ಕೂ ಈಜುವೆನೆಂಬ ಮಾತಿನಿಂದ ಸೂಚಿತವಾಗುವ ಧಾಷ್ಟ್ರ್‍ಯಕ್ಕೂ ಹೊಂದಿಕೆಯಿಲ್ಲ. ಆದಿಪುರಾಣದ ಆರಂಭದಲ್ಲಿಯೂ ಕವಿ “ಆಂ ಧೃಷ್ಟನೆನ್, ಈ ಕಥಾಬ್ದಿಯಮನೇಂ ಈಸಲ್ ಮನಂದಂದೆನೋ” ಎನ್ನುತ್ತಾನೆ. ಇಂಥ ಕೃತಿಗಳನ್ನು ಈಜುತ್ತೇನೆ ಎಂದು ಯೋಚಿಸುವುದೇ ಧಾಷ್ಟ್ಯವಾದರೆ ಲೋಕದ ಎದುರು ಹಾಗೆ ಆಡುವುದು (ಅವನ ದೃಷ್ಟಿಯಲ್ಲಿ) ಖಂಡಿತ ವಿನಯದ ನಡೆಯಲ್ಲ.

“ಪಂಪನಿಗಿಂತ ಮುಂಚೆ ಇದ್ದ ಕವಿಯೊಬ್ಬ ಭಾರತವನ್ನು ಬರೆದು ತನ್ನನ್ನು ಕವಿವ್ಯಾಸನೆಂದೇ ಕರೆದುಕೊಂಡಿದ್ದನೆಂದೂ ಅಂಥ ಗರ್ವ ನನಗಿಲ್ಲ ಎಂದು ಪಂಪನು ಹೇಳಿದ್ದಾನೆಂದೂ ಕವಿಚರಿತೆಕಾರರಾದ ರಾ. ನರಸಿಂಹಾಚಾರ್ಯರ ಅಭಿಪ್ರಾಯ” ಎಂದು ಡಿ. ಎಲ್. ಎನ್. ಹೇಳುತ್ತಾರೆ. (ಅದೇ, ಪು. ೮) “ಮಹಾಭಾರತ ಕಥೆಗೆ ಸಂಬಂಧಪಟ್ಪ ಅನೇಕ ಪದ್ಯಗಳು (ಪಂಪಭಾರತದಲ್ಲಿಲ್ಲದಿರುವುವು) ನಾಗವರ್ಮನ ಕಾವ್ಯಾವಲೋಕನದಲ್ಲಿ ಉದಾಹೃತ ವಾಗಿರುವುದು ಈ ಅಭಿಪ್ರಾಯಕ್ಕೆ ಪೋಷಕ” ಎಂದು ಹೇಳಿ ಅವರೂ ಆ ಹೇಳಿಕೆಗೆ ಬೆಂಬಲ ಸೂಚಿಸುತ್ತಾರೆ. ಈ ‘ಕವಿವ್ಯಾಸ’ನನ್ನು ಕುರಿತ ಇನ್ನೂ ಒಂದು ಪ್ರಸ್ತಾಪವನ್ನು ಡಾ|| ಕೆ. ಕೃಷ್ಣಮೂರ್ತಿ ಪಂಪಭಾರತದಲ್ಲಿಯೇ ಗುರುತಿಸಿದ್ದಾರೆ (“ಪಂಪ ಒಂದು ಅಧ್ಯಯನ’ ಎಂಬ ಗ್ರಂಥದಲ್ಲಿ ಪ್ರಕಟವಾಗಿರುವ “ಪಂಪನಿಗಿದ್ದ ಸಂಸ್ಕೃತ ಹಿನ್ನೆಲೆ’ ಎಂಬ ಲೇಖನ.) ಇದು ನಿಜವಾದರೆ ‘ವ್ಯಾಸರ ರುಂದ್ರವಚನಾಮೃತ ಸಾಗರವನ್ನು ನಾನು ಈಜಿಬಿಡುತ್ತೇನೆ’ ಎನ್ನುವುದು ‘ಕವಿವ್ಯಾಸ’ ಜಂಬದ ಧೋರಣೆ. ನಾನು ಹಾಗೆಲ್ಲ ಜಂಬ ಕೊಚ್ಚುವವನಲ್ಲ, ತಿಳಿದ ಮಟ್ಟಿಗೆ ಹೇಳುವವನು ಎಂಬ ವಾಕ್ಯಾರ್ಥವೇ ಸರಿಯಾಗುತ್ತದೆ.

ಇನ್ನೂ ಒಂದು ಸಣ್ಣ, ಅದರೆ ಸಂಭಾವ್ಯವಾದ ಸಾಕ್ಷಿ ‘ಬಿ’ ಅರ್ಥಕ್ಕೆ ಪರವಾಗಿದೆ. ಪಂಪ ಕಾಳಿದಾಸನನ್ನು ಚೆನ್ನಾಗಿ ಓದಿಕೊಂಡವನು (ವಿಕ್ರಮೋರ್ವಶೀಯದ ಅಸ್ಯಾಸ್ಸರ್ಗವಿಧೌ (ಅಂಕ ೧, ಪದ್ಯ ೮) ಎಂಬ ಪದ್ಯವನ್ನೂ ಶಾಕುಂತಲದ ‘ಮೇಧಶ್ಛೇದ ಕೃಶೋದರಂ’ (ಅಂಕ ೨, ಪದ್ಮ ೫) ಎಂಬ ಪದ್ಯವನ್ನೂ ಪಂಪ ಭಾವಾನುವಾದ ಮಾಡಿ ತನ್ನ ಭಾರತದೊಳಗೆ ಹಾಕಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಂಪಭಾರತದ ೪-೭೫ ಮತ್ತು ೫-೪೭ ಪದ್ಯಗಳೊಡನೆ ಅವುಗಳನ್ನು ಹೋಲಿಸಿ ನೋಡಬಹುದು). ತನ್ನ ಮಹಾಕಾವ್ಯ ರಘುವಂಶದ ಆರಂಭದಲ್ಲಿ ಪೂರ್ವಕವಿಗಳಮ್ನ ಕೃತಿಗಳನ್ನು ಕುರಿತು ಹೇಳುವಾಗ ಬಳಸಿರುವ ಪ್ರಸಿದ್ಧ ಉಪಮೆಗಳನ್ನು ಅವನು ಗಮನಿಸದೆ ಇಲ್ಲ. ‘ತಿತೀರ್ಷುದುಸ್ತರಂ ಮೋಹಾತ್ ಉಡುಪೇನಾಸ್ಮಿ ಸಾಗರಂ’ (ರಘುವಂಶವೆಂಬ ಸಾಗರವನ್ನು ತೆಪ್ಪದಿಂದ ದಾಟುತ್ತೇನೆಂಬ ಭ್ರಮೆಗೆ ಬಿದ್ದೆನಲ್ಲ!) ಮತ್ತು ‘ಪ್ರಾಂಶುಬ್ಧೇ ಫಲೇ ಲೋಭಾತ್ ಉದ್ಬಾಹುರಿವ ವಾಮನ:’ (ಎತ್ತರವಾದವನ ಕೈಗೆ ಮಾತ್ರ ಸಿಗುವ ಫಲಕ್ಕೆ ದುರಾಸೆಯಿಂದ ಕೈ ಚಾಚಿದ ಕುಳ್ಳನಾದೆನಲ್ಲ!) ಎಂಬ ಎರಡು ಹೇಳಿಕೆಗಳೂ ಅವನ ಅರಿವಿನ ಹಿನ್ನೆಲೆಯಲ್ಲಿರುವುದು ತೀರ ಸಂಭವ. (ಪಂಪ ಕಾಳಿದಾಸನಂತೆಯೇ ಭಾರತ, ಆದಿಪುರಾಣ ಎರಡರಲ್ಲೂ ಕಾವ್ಯವನ್ನು ಸಾಗರವಾಗಿ ವರ್ಣಿಸಿದ್ದಾನೆ ಎನ್ನುವುದನ್ನು ಗಮನಿಸಬೇಕು) ತಾನು ಸಮರ್ಥನೆಂದು ಗೊತ್ತಿದ್ದರೂ ತನ್ನ ಸಮುದ್ರಾವತರಣದ ಮತ್ತು ಫಲಗಳಿಕೆಯ ಪ್ರಯತ್ನಗಳನ್ನು ತಾನೇ ಗೇಲಿ ಮಾಡಿಕೊಳ್ಳುವುದರ ಮೂಲಕ ಕಾಳಿದಾಸ ವಿನಯವನ್ನು ಮೆರೆಯುತ್ತಾನೆ. ಕಾಳಿದಾಸನನ್ನು ಮೆಚ್ಚಿಕೊಂಡವನು ಪಂಪ. “ಈ ಮಹಾಸಾಗರವನ್ನು ಈಜಿಮುಗಿಸುವೆನೆಂಬ ಜಂಭ ನನಗಿಲ್ಲ” ಎಂದು ಹೇಳುವುದೇ ಅವನ ಆಶಯವೂ ಅಗಿದ್ದಿರಬೇಕು ಎನ್ನಿಸುತ್ತದೆ.
*****

ಈ ಲೇಖನ ಡಾ. ಶಂ. ಬಾ. ಜೋಶಿಯವರಿಗೆ ಸಲ್ಲಿಸಲಾದ “ಅಧ್ಯಯನ’ ಎಂಬ ಅಭಿನಂದನ ಗ್ರಂಥದಲ್ಲಿ ಮೊದಲು ಪ್ರಕಟವಾಗಿದೆ.

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)