ಭಯವೇತಕೆ ಮನವೇ
ಬದುಕು ಬಯಲಿನಾಟದ ನಿಲುವು ||

ಹುಟ್ಟಿರಲು ಭಯಕಾಡಲಿಲ್ಲ
ಮೆಟ್ಟಿರಲು ಭಯವೆಂಬುದಿಲ್ಲ
ಬರಲು ಮುಪ್ಪು ಭಯವೇತಕೆ
ಸಾವು ನೇರಳಿನಾಟದೆ ಬೆಪ್ಪನಾದೆ ನೀನು ||

ಪಾಪಿ ನಾನು ಪುಣ್ಯ ಧಾರೆ ಎರೆದು
ಧರ್‍ಮಕರ್‍ಮ ಪಕಳೆ ತೆರೆದು
ತಾನು ಆನು ನೀನು ಎಂದೆಲೆಯ ಬುತ್ತಿ ಹೊತ್ತು
ಸಂತೆಗೆ ನಡೆವಾಗ ಭಯ ಪಡಲಿಲ್ಲ ||

ಹೆಣ್ಣು ಹೊನ್ನು ಮಣ್ಣಿನ ಮಾಯವು
ಕಂಡು ಕಾಣದಾಗಿನ ಜಾಲವ ಬೀಸಿ
ಅಂತರ ಮಂಥರ ಜಪತಪ ಕಾಯಕ
ಕಂಕಣಬದ್ಧ ಸಂತರ ಭಕುತಿ ಕಾಣಲಿಲ್ಲ ||

ಮಾನ ಸಮ್ಮಾನಕೆ ಮಣಿಯದೆ
ಕಾನನ ಪಶುಪಕ್ಷಿ ಜಾತಕ ಅರಿಯಲು
ಕಾರಣ ನಿನ್ನ ನೀನು ಅರಿಯದೆ ಬಾಳಿನ
ಹಸಿರ ಕಿವುಚಿ ತಬ್ಬಿಬ್ಬಾದೆ ಏತಕೆ ||
*****