ಪದ್ಯಗದ್ಯಗಳ ರಾಷ್ಟ್ರೀಯತೆ

ಪದ್ಯಗದ್ಯಗಳ ರಾಷ್ಟ್ರೀಯತೆ

‘ಫ್ರಾನ್ಸ್ ಗದ್ಯದ ದೇಶ. ಬೊಸ್ವೆ, ಪಾಸ್ಕಲ್, ಮೊಂತೆಸ್ಕ್ಯೂಗೆ ಹೋಲಿಸಿದರೆ ಜಗತ್ತಿನ ಗದ್ಯ ಲೇಖಕರು ಏನೂ ಅಲ್ಲ. ಬರಹದ ಎಲ್ಲಾ ಪ್ರಕಾರಗಳಲ್ಲಿಯೂ ಗದ್ಯವೆನ್ನುವುದು ಅತ್ಯಂತ ಕಡಿಮೆ ಚಿತ್ರಕವೂ ಮೂರ್ತವೂ ಆದುದು. ಅದೇ ರೀತಿ ಅತ್ಯ೦ತ ಹೆಚ್ಚು ಅಮೂರ್ತವೂ ಪಾರದರ್ಶಕವೂ ಪರಿಶುದ್ಧವೂ ಆದುದು; ಅರ್ಥಾತ್, ಅತ್ಯಂತ ಕಡಿಮೆ ವಸ್ತುಶವೂ, ಅತಿ ಹೆಚ್ಚು ಮುಕ್ತವೂ, ಎಲ್ಲಾ ಮನುಷ್ಯರಿಗೂ ಸರ್ವಸಮಾನವೂ, ಅತ್ಯಂತ ಮಾನವೀಯವೂ ಆದುದು. ಗದ್ಯವೆಂದರೆ ಯೋಚನೆಯ ಕೊನೆಯ ರೂಪ, ಅಸ್ಪಷ್ಟವೂ ಜಡವೂ ಆದ ಮನೋಲಹರಿಯಿಂದ ಎಷ್ಟೋ ದೂರವಿದ್ದೂ, ಕ್ರಿಯಾಶೀಲತೆಗೆ ಅತಿ ಸಮೀಪದ್ದೂ ಆದುದು. ಮೂಕ ರೂಪಕತೆಯಿಂದ ಪದ್ಯಕ್ಕೆ, ಪದ್ಯದಿಂದ ಗದ್ಯಕ್ಕೆ ಬಂದ ಹಾದಿ, ಮನಸ್ಸುಗಳ ಸಮಾನತೆಯ ಕಡೆಗಿನ ಒ೦ದು ಬೆಳವಣಿಗೆಯಾಗಿದೆ; ಒಂದು ರೀತಿಯಲ್ಲಿ ವೈಚಾರಿಕ ಸಮತಟ್ಟುಗೊಳಿಸುವಿಕೆ. ಮುಂದೆ, ಪೌರಾತ್ಯ ಜಾತಿವರ್ಗಗಳ ನಿಗೂಢ ಶ್ರೇಣೀಕರಣದಿಂದ ಧೀರ ಶ್ರೀಮಂತ ವರ್ಗ ಹುಟ್ಟಿಕೊಳ್ಳುತ್ತದೆ; ಅಲ್ಲಿಂದ ಆಧುನಿಕ ಪ್ರಜಾಪ್ರಭುತ್ವ. ನಮ್ಮ ದೇಶದ ಪ್ರಜಾಪ್ರಭುತ್ವವಾದಿ ಜಾಯಮಾನ ಅದರ ಗಮನಾರ್ಹವಾದ ಗದ್ಯಗುಣದಲ್ಲಿ ಕಾಣಿಸುವಷ್ಟು ಸಷ್ಟವಾಗಿ ಇನ್ನು ಯಾವುದರಲ್ಲಿಯೂ ಕಾಣಿಸುವುದಿಲ್ಲ, ಮತ್ತು ನಿಜಕ್ಕೂ ತನ್ನ ಈ ಗುಣದಿಂದಲೇ ಅದು ಇಡೀ ಬೌದ್ಧಿಕ ಜಗತ್ತನ್ನು ಸಮಾನತೆಯ ಕಡೆಗೆ ಏರಿಸುವುದಕ್ಕೆ ಬಾಧ್ಯವಾಗುವುದು.’

ಹೀಗೆಂದು ನುಡಿದದ್ದು ಜೂಲ್ಸ್ ಮಿಶಲೆ (Jules Michelet), ಹತ್ತೊಂಬತ್ತನೆಯ ಶತಮಾನದ ಫ್ರಾನ್ಸಿನ ಮಹಾ ಇತಿಹಾಸಕಾರ, ತನ್ನ ಜಾಗತಿಕ ಇತಿಹಾಸದ ಅವತರಣಿಕೆಯಲ್ಲಿ, ಕಾಲ ೧೮೩೧. ರೊಲಾನ್ ಬಾರ್ತ್‌ನ ಮಿಶಲೆ ಎಂಬ ಪುಸ್ತಕದಲ್ಲಿ ಇದು ಉದ್ಧೃತ. ೧೮೩೧ ಎಂದರೆ ಜರ್ಮನಿಯ ಬಹುದೊಡ್ಡ ತತ್ವಜ್ಞಾನಿ ಹೆಗೆಲ್ ಸತ್ತ ವರ್ಷ, ಹಾಗೂ ಫ್ರಾನ್ಸಿನ ಮಹಾಕ್ರಾಂತಿ ನಡೆದು ೩೧ ವರ್ಷಗಳು ಸಂದಿವೆ. ಎರಡು ಜಾಗತಿಕ ಮಹಾಯುದ್ಧಗಳ ಮಧ್ಯಕಾಲವೂ ಹೌದು. ಇಂಥ ಸಂದರ್ಭದಲ್ಲಿ ಈ ವಿಚಿತ್ರ ಇತಿಹಾಸಜ್ಞ ಫ್ರಾನ್ಸಿನಲ್ಲಿ ಮೂಡಿಬರುತ್ತಾನೆ. ಇತಿಹಾಸದ ರಚನೆಯಲ್ಲಿ ಕಾವ್ಯಾತ್ಮಕತೆಯನ್ನು, ರೂಪಕತೆಯನ್ನು, ಮೂರ್ತತೆಯನ್ನು ಹತ್ತಿಕ್ಕುವುದೇ ಅವನಿಗೊಂದು ಸವಾಲಾಗುತ್ತದೆ. ಯಾಕೆಂದರೆ, ಇತಿಹಾಸದ ಉದ್ದಕ್ಕೂ ಗದ್ಯವು ಪದ್ಯದಿ೦ದ ವಿಕಸನಗೊಳ್ಳುತ್ತಲೇ ಬಂದಿದೆಯೆನ್ನುವುದು ಅವನ ಮತ. ಮಾತ್ರವಲ್ಲ; ಇತಿಹಾಸ ಕೂಡಾ ಈ ವಿಕಸನವನ್ನು ತನ್ನದೇ ಬೆಳವಣಿಗೆಯಲ್ಲಿ ತೋರಿಸುತ್ತದೆ ಕೂಡಾ. ಮಿಶಲೆ ಗದ್ಯವನ್ನು ಎಷ್ಟೊಂದು ಹೊಗಳುತ್ತಾನೆ ನೋಡಿ: ಅದು ವೈಚಾರಿಕತೆಯ ಬೆಳವಣಿಗೆಯ ಅಂತಿಮ ರೂಪ, ಎಲ್ಲ ಏರುತಗ್ಗುಗಳನ್ನೂ ಸಮತಟ್ಟುಗೊಳಿಸಿ ಸಾಮಾಜಿಕ ಹಾಗೂ ಬೌದ್ದಿಕ ಸಮಾನತೆಯನ್ನು ಸಾಧಿಸುವ ವಿಧಾನ. ಪದ್ಯವಾದರೆ ಹಾಗಲ್ಲ, ಅದು ಪ್ರಾಚ್ಯದ ನಿಗೂಢ ಜಾತಿವರ್ಗಗಳ ಶ್ರೇಣೀಕರಣದ ಕಾಲಕ್ಕೆ ಸಂಬಂಧಿಸಿದುದು. ಇವೆರಡರ ಮಧ್ಯೆ ಧೀರ ಶ್ರೀಮಂತ ವರ್ಗ ಹುಟ್ಟಿಕೊಳ್ಳುತ್ತದೆ. ನಂತರ ಅದು ಪ್ರಜಾಪ್ರಭುತ್ವಕ್ಕೆ ಎಡೆಮಾಡುತ್ತದೆ. ಹೀಗೆ ಪದ್ಯದಿಂದ ಗದ್ಯದತನಕದ ಬರಹದ ಬೆಳವಣಿಗೆ ಮಾನವ ಇತಿಹಾಸದ ಬೆಳವಣಿಗೆಗೆ ಕಾರಣ ಮಾತ್ರವೂ ಅಲ್ಲ, ಅದನ್ನು ಆಡಿತೋರಿಸುತ್ತದೆ ಕೂಡ!

ಇತಿಹಾಸದ ಕುರಿತಾದ ಮಿಶಲೆಯ ಈ ವಿಚಾರ ಮೂಲತಃ ಇವನಿಗಿಂತ ಒಂದು ಶತಮಾನ ಹಿಂದಣ ಫ್ರೆಂಚ್ ದಾರ್ಶನಿಕ ವೋಲ್ಟೇರನಿಂದಲೇ ಸುರುವಾಗುತ್ತದೆ. ವೋಲ್ಟೇರನ ಪ್ರಕಾರ ಮನುಷ್ಯ ಭಾಷೆಗಳೆಲ್ಲವೂ ಆದಿಯಲ್ಲಿ ಪದ್ಯರೂಪದಲ್ಲಿದ್ದಂಥವು ಮತ್ತು ಮನುಷ್ಯನ ಮೂಲ ವಿಕಾರಗಳಾದ ಭಯ, ಭೀತಿ, ಪ್ರೀತಿ, ಕಾಮ, ಅಚ್ಚರಿ ಮುಂತಾದ ಭಾವಗಳ ಪ್ರಕಟಣೆಗೆ ಉದ್ಗಾರರೂಪದಲ್ಲಿ ಉಪಯೋಗವಾಗುತ್ತಿದ್ದಂಥವು. ಆದ್ದರಿಂದಲೇ ಪ್ರಾಚೀನ ರೂಪದಲ್ಲಿ ಭಾಷೆ ಹೆಚ್ಚೆಚ್ಚು ಮೂರ್ತವೂ, ಪ್ರತಿಮಾ ಮತ್ತು ರೂಪಕನಿಷ್ಠವೂ ಆಗಿ ತೋರುವುದು. ಭಾಷೆಗೆ ಕಾಲಕ್ರಮೇಣ ವೈಚಾರಿಕ ರೂಪ ಬಂದುದು ನಾಗರಿಕತೆಯ ವಿಕಸನದೊಂದಿಗೆ. ಪರೀಕ್ಷಿಸಿ ನೋಡಿದರೆ, ಈಗಲೂ ಕೂಡಾ ನಾವು ಯಾವುದೇ ನೈಸರ್ಗಿಕ ಭಾಷೆಯಲ್ಲಿ ಅದರ ಈ ಪುರಾರೂಪಗಳನ್ನು ಕಾಣಬಹುದು.

ವೋಲ್ಟೇರನಾಗಲಿ, ಮಿಶಲೆಯಾಗಲಿ ಪದ್ಯ ಗದ್ಯಗಳನ್ನು ಧ್ರುವ ರೂಪದಲ್ಲಿ ನೋಡುವುದಿಲ್ಲ; ಬದಲಿಗೆ ಇಬ್ಬರೂ ವಿಕಸನರೂಪದಲ್ಲಿ ನೋಡುತ್ತಾರೆ. ಆದ್ದರಿಂದ ಅವು ಪರಸ್ಪರ ವಿರುದ್ಧವೆಂದು ತಿಳಿಯಬಾರದು. ಇತಿಹಾಸದ ಬೆಳವಣಿಗೆಗೆ ವೈರುಧ್ಯಗಳ ಸಂಘರ್ಷದ ರೂಪ ನೀಡಿದ್ದು ಹೆಗೆಲ್ ಮತ್ತು ನಂತರ ಕಾರ್ಲ್ ಮಾರ್ಕ್ಸ್. ವೋಲ್ಟೇರ್ ಮತ್ತು ಮಿಶಲೆಗೆ ಇತಿಹಾಸ ಸಂಘರ್ಷದಿಂದ ಬೆಳೆಯುವ ವಿದ್ಯಮಾನವಲ್ಲ; ವಿಕಸನದಿಂದ ಬೆಳೆಯುವಂಥದು. ಮಾತ್ರವಲ್ಲ; ಹೀಗೆ ಬೆಳೆಯುವಾಗ ಹಿಂದಿನ ರೂಪ ಪೂರ್ತಿಯಾಗಿ ಅಳಿಸುತ್ತದೆ ಎಂದೂ ಇಲ್ಲ; ಅಲ್ಲಲ್ಲಿ ಅಂಥ ರೂಪಗಳು ಮುಂದರಿಯಬಹುದು. ಆದ್ದರಿಂದಲೇ ಗದ್ಯ ಮೂಡಿಬಂದ ಮೇಲೂ ಪದ್ಯ (ಅರ್ಥಾತ್ ಭಾಷೆಯ ರೂಪಕಶಕ್ತಿ) ನಾಶವಾಗುವುದಿಲ್ಲ.

ಇಂಗ್ಲೆಂಡ್‌ನಲ್ಲಿ ಹದಿನೇಳನೆಯ ಶತಮಾನದ ಆರಂಭದಲ್ಲಿ ಶೆಕ್ಸ್‌ಪಿಯರ್‌ ಪದ್ಯ ಗದ್ಯ ಎರಡೂ ಶೈಲಿಗಳನ್ನು ತನ್ನ ನಾಟಕಗಳಿಗೆ ಉಪಯೋಗಿಸಿಕೊಳ್ಳುತ್ತಾನೆ. ಆದರೆ ಪದ್ಯ ಶೈಲಿಯನ್ನು ಭಾವನಾತ್ಮಕವಾಗಿ ಪ್ರಮುಖವಾದ ಪಾತ್ರ ಮತ್ತು ಸನ್ನಿವೇಶಗಳಿಗೂ, ಗದ್ಯ ಶೈಲಿಯನ್ನು ಸಾಧಾರಣ ಪಾತ್ರ ಮತ್ತು ಸನ್ನಿವೇಶಗಳಿಗೂ ಬಳಸುತ್ತಾನೆ. ರಾಜಕೀಯವಾಗಿ ಹೇಳುವುದಾದರೆ, ಶೆಕ್ಸ್‌ಪಿಯರ್ ಬರೆಯುತ್ತಿದ್ದ ಕಾಲ ಒಂದು ರೀತಿಯ ಉದಾರವಾದಿ ಸಾಮ್ರಾಟಶಾಹಿ, ಅರ್ಥಾತ್ ಮಾನವತಾವಾದಿ ಪ್ರಭುತ್ವ. ಆದ್ದರಿಂದಲೇ ಇಲ್ಲಿ ವೈಚಾರಿಕತೆ ಪದ್ಯಕ್ಕೆ ದೂರವಾದುದಲ್ಲ, ಹಾಗೂ ಗದ್ಯವೆನ್ನುವುದು ಸಮಾನತೆಯ ಸಾಧನವೂ ಅಲ್ಲ. ಆದರೂ ಶೆಕ್ಸ್‌ಪಿಯರ್‌ ಪದ್ಯದ ಹುಸಿ ಗಾಂಭೀರ್ಯವನ್ನು ಗದ್ಯದ ಮೊನೆಯಿಂದ ಚುಚ್ಚುತ್ತಿರುವುದನ್ನೂ ನಾವು ಅವನ ನಾಟಕಗಳಲ್ಲಿ ಕಾಣುತ್ತೇವೆ! ಶೇಕ್ಸ್‌ಪಿಯರನ ಸಮಕಾಲೀನ ಫ್ರಾನ್ಸಿಸ್ ಬೇಕನ್ ಆಗಲೇ ಗದ್ಯವನ್ನು ಉತ್ತಮ ಮಟ್ಟದ ವೈಚಾರಿಕ ವಿಶ್ಲೇಷಣೆಗೆ ಹೊಸೆದುಕೊಳ್ಳುತ್ತಿರುವುದೂ ಗಮನಾರ್ಹವೇ. ಮುಂದಿನ ಶತಮಾನಗಳಲ್ಲಿ ಗದ್ಯ ಹೆಚ್ಚು ಹೆಚ್ಚಾಗಿ ಬಳಕೆಯಾಗುತ್ತ ಹೋಗುತ್ತ ಆಧುನಿಕತೆಯ ಹರಿಕಾರನಾಗುತ್ತದೆ. ಶಾಲೆ ಕಾಲೇಜುಗಳಲ್ಲಿ ಲ್ಯಾಟಿನ್‌ಗೆ ಬದಲು ಇಂಗ್ಲಿಷ್ ಭಾಷೆ ಮಾಧ್ಯಮವಾಗುವುದೂ ಇದಕ್ಕೆ ಸಂವಾದಿಯಾದ ಬೆಳವಣಿಗೆ.

ಇಂದು ನಮಗೆ ಆಧುನಿಕತೆಯೆಂದರೆ ಗದ್ಯ, ಗದ್ಯ ಎಂದರೆ ಆಧುನಿಕತೆ ಎಂಬಂತಾಗಿದೆ. ಈ ಸಮೀಕರಣ ಎಷ್ಟು ವ್ಯಾಪಕವಾಗಿದೆಯೆರದರೆ ‘ಆಧುನಿಕ ಕಾವ್ಯ’ (ಅರ್ಥಾತ್ ಈಗ ಬರೆಯಲಾಗುವ ಪದ್ಯ) ಕೂಡಾ ತನ್ನ ಪೂರ್ವದ ಛಂದೋಬದ್ದತೆ, ಗೇಯತೆ, ಲಯವೇ ಮುಂತಾದ ಗುಣಗಳನ್ನು ಬಿಟ್ಟುಕೊಟ್ಟು ಗದ್ಯದ ಧಾಟಿಯನ್ನು ಸ್ವೀಕರಿಸುವುದು ಆನಿವಾರ್ಯವಾಗಿಬಿಟ್ಟಿತು. ಸಾಹಿತ್ಯವಿಮರ್ಶೆ ಸಹಾ ಪದ್ಯದ ಪರಂಪರಾಗತ ರೂಪಶಿಲ್ಪಕ್ಕಿಂತ ಇದನ್ನು ಮೀರುವ ತಂತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಧ್ವನಿಲಯದ ಬದಲಿಗೆ ವಿಚಾರಲಯ, ಸಂಗತದ ಬದಲಿಗೆ ಅಸಂಗತ, ಬಂಧದ ಬದಲಿಗೆ ಬಿರುಕು ಹೆಚ್ಚು ಆಧುನಿಕವೆನಿಸುವುದು ಇವೆಲ್ಲವೂ ಪದ್ಯಪರಂಪರೆಯನ್ನು ಮೀರಿ ಬೆಳೆಯುವ ಪ್ರಯತ್ನಗಳು ಎಂಬ ಕಾರಣಕ್ಕೆ. ಗದ್ಯ, ಪ್ರಜಾಪ್ರಭುತ್ವ, ಸಮಾನತೆ, ವೈಚಾರಿಕತೆ, ಆಧುನಿಕತೆ ಮುಂತಾದ ವಿಷಯಗಳ ಈ ಪ್ಯಾಕೇಜು ವಸಾಹತು ದೇಶಗಳನ್ನು ಪ್ರವೇಶಿಸಿದ್ದು ತಡವಾಗಿಯೇ ಸರಿ. ಇದಕ್ಕೆ ನಮ್ಮ ಭಾರತೀಯ ಸಮಾಜವೂ ಹೊರತಲ್ಲ. ಪಾಶ್ಚಾತ್ಯ ದೇಶಗಳಿಗೆ ಇವನ್ನು ಅರಗಿಸಿ ಕೊಳ್ಳುವುದಕ್ಕೆ ಹಿಡಿದ ಕಾಲಮಾನದ ಕಾಲಂಶ ಸಮಯ ಕೂಡಾ ಈ ವಸಾಹತು ದೇಶಗಳಿಗೆ ದೊರಕಿಲ್ಲ. ತಾಂತ್ರಿಕ ಪುರೋಗಮನದಲ್ಲಿ ಇಂಥ ತೀವ್ರಗತಿಯ ವಿದ್ಯಮಾನವನ್ನು ನಾವು ಕಾಣುತ್ತೇವೆ; ಆದರೆ ಈಗ ನಾವು ಮಾತಾಡುತ್ತಿರುವುದು ತಾಂತ್ರಿಕ ಸ೦ಗತಿಗಳಲ್ಲ, ವೈಚಾರಿಕ ಸಂಗತಿಗಳು. ಆದ್ದರಿಂದಲೇ ಮಾನಸಿಕವಾಗಿ ನಾವಿಂದು ತೀವ್ರತರದ ಗೊಂದಲದಲ್ಲಿರುವುದು. ತಡವಾಗಿ ಬಂದ ಆಧುನಿಕತೆಯ ಈ ಘಾತದಿಂದ ನಾವಿನ್ನೂ ಚೇತರಿಸಿಕೊಳ್ಳುವ ಮೊದಲೇ ಆಧುನಿಕೋತ್ತರವೆನ್ನುವ, ಬಹುಶಃ ಇದುವರೆಗೆ ಯಾರೂ ಕಲ್ಪಿಸಿರದಂಥದೊಂದು ಇತಿಹಾಸದ ಮಜಲು, ನಮ್ಮ ಲೋಕದ ಕ್ಷಿತಿಜದಲ್ಲಿ ಕಾಣಿಸಿಕೊಂಡೂ ಆಯಿತು! ಇದು ಒಂದು ರೀತಿಯಲ್ಲಿ ಹಿಂದಣ ಸಂಗತಿಗಳಿಗೆ ಮತ್ತೆ ಜಾಗಮಾಡಿಕೊಟ್ಟು, ಆಧುನಿಕತೆಯ ರೂಕ್ಷತೆಯನ್ನು ಹದಗೊಳಿಸಿ, ಜೀವನವನ್ನು ಹಸನಾಗಿಸುವ ಒಂದು ಅಗತ್ಯದ ಬರಾವು ಎನ್ನಬಹುದಾದರೂ ಇದರಿಂದ ನಮ್ಮ ಪದಗತಿಯ ತಾಳ ತಪ್ಪಿದೆಯೆನ್ನುವುದರಲ್ಲಿ ಸಂದೇಹವಿಲ್ಲ.

ಗದ್ಯವೆಂದರೆ ಎಲ್ಲವೂ ಒಂದಾಗಿ ವಿಲೀನಗೊಳ್ಳುವುದರ ಫಲ, ಸಂಕಲನ ಗೊಳ್ಳುವುದರ ಫಲವಲ್ಲ ಎಂಬಷ್ಪರಮಟ್ಟಿಗೆ ಗದ್ಯವು ಪದ್ಯಕ್ಕಿಂತ ಉತ್ಕೃಷ್ಟವಾದ್ದು ಎನ್ನುವುದು ಮಿಶಲೆಯ ಅಭಿಪ್ರಾಯ. ಮಧ್ಯ ಫಾನ್ಸಿನ ಮಧ್ಯಕಾಲೀನ ಫ್ರೆಂಚ್ ರಾಜನಲ್ಲಿ ಎಲ್ಲವೂ ವಿಲೀನವಾಗುತ್ತವೆ, ಎಲ್ಲ ಹೊಲಿಗೆ ಗುರುತುಗಳೂ ಅಳಿಯುತ್ತವೆ. ಯಾವುದೇ ಮೂಲದ, ಯಾವುದೇ ಗುಣದ ಸುಳುಹು ಕೂಡಾ ಉಳಿಯುವುದಿಲ್ಲ. ಒ೦ದು ಶೂನ್ಯತೆಯಿರುತ್ತದೆ, ಆದ್ದರಿಂದ ಎಲ್ಲವೂ ನಯವಾಗಿರುತ್ತದೆ. ಗದ್ಯವೆನ್ನುವುದು ಹೀಗೆ ಅಳಿಸುವಿಕೆಯ ನಿರ್ಮಾಣ. ಇದಕ್ಕೆ ಮಿಶಲೆ ನೀಡುವ ನೈತಿಕ ಹೆಸರೆಂದರೆ ಐಕ್ಯತೆ (unity). ಐಕ್ಯತೆಯ ಅಪರಿಪೂರ್ಣ ಆವೃತ್ತಿಯೇ ಸಂಯುಕ್ತತೆ (union). ಮಿಶಲೆಯ ಶೈಲಿಸಂಹಿತೆಯ ಪ್ರಕಾರ, ಸಂಯುಕ್ತತೆಯೆನ್ನುವುದು ಕೀಳಾದ ಸ್ಥಿತಿ; ಯಾಕೆಂದರೆ ಸಂಯುಕತೆ ತಾನು ಸಂಯೋಜಿಸಬಹುದಾದ, ಆದರೆ ಅಳಿಸಲಾರದ, ಗುಣಗಳನ್ನು ಒಟ್ಟುಸೇರಿಸುತ್ತ ಹೋಗುತ್ತದೆ. ಘಟಕವಿಶಿಷ್ಪತೆಗಳನ್ನು ನಿರ್ಮಿಸುವ ಎಲ್ಲ ಸ್ಮೃತಿಯನ್ನೂ ಅಳಿಸುಹಾಕುವ ಮಟ್ಟಿಗೆ ಐಕ್ಯತೆ ಸಂಯುಕ್ತತೆಗಿ೦ತ ಶ್ರೇಷ್ಠವಾದ್ದು. ಯಾಕೆಂದರೆ, ಈ ಅಳಿಸಿದ್ದರಿಂದ ಉಂಟಾಗುವ ಶೂನ್ಯತೆಯೇ ಸ್ವಾತಂತ್ರ್ಯ: ಇಲ್ಲಿ ನಾವು ಬೇಕಾದ್ದನ್ನು ಹೊಸತಾಗಿ ನಿರ್ಮಿಸಿಕೊಳ್ಳಬಹುದು. ಸಂಯುಕ್ತತೆಯಲ್ಲಿ ಹಾಗಲ್ಲ; ಅಲ್ಲಿ ಇಂಥ ನಿರ್ವಾತ ಪ್ರದೇಶ ಇರುವುದಿಲ್ಲ, ಯಾಕೆಂದರೆ ಘಟಕಗಳು ತಮ್ಮ ಮೂಲಗಳ ಕುರಿತಾದ ನೆನಪುಗಳನ್ನು ಮರೆತಿರುವುದಿಲ್ಲ; ಆದ್ದರಿಂದ ಇಲ್ಲಿ ಸ್ವಾತಂತ್ರ್ಯವೂ ಕೂಡಾ ಸಂಪೂರ್ಣವಾಗಿ ಇರುವುದಿಲ್ಲ. ಅಂಥ ಕಡೆ ಹೊಸತನ್ನು ನಿರ್ಮಿಸುವುದು ಕಷ್ಟ. ಚರಿತ್ರೆಯಲ್ಲಿ ಸ೦ಯುಕ್ತತೆಗೆ ಅನೇಕ ಉದಾಹರಣೆಗಳಿವೆ, ಆದರೆ ಐಕ್ಯತೆಗೆ ಫ್ರಾನ್ಸ್, ಒಂದೇ ಉದಾಹರಣೆ, ಅದರಲ್ಲೂ ೧೮೯೦ರ ಫೆಡರೇಶನ್, ಎನ್ನುತ್ತಾನೆ ಮಿಶಲೆ. ಈ ಇಡೀ ‘ರಾಜಕೀಯ’ ಕಲ್ಪನೆಯಲ್ಲಿ ಗದ್ಯವು ಐಕ್ಯತೆಗೂ ಪದ್ಯವು ಸಂಯುಕ್ತತೆಗೂ ಸಂವಾದಿಯಾಗಿ ಬಂದಿದೆಯೆನ್ನುವುದನ್ನು ಗಮನಿಸಬೇಕು.

ಮಿಶಲೆ ತನ್ನ ಈ ಸಿದ್ಧಾಂತವನ್ನು ಮುಂದೊತ್ತಿದ್ದು ಯುರೋಪಿನಲ್ಲಿ ರಾಷ್ಟ್ರೀಯತೆಯ ಕಲ್ಪನೆ ವಿಕಸನಗೊಳ್ಳುತ್ತಿದ್ದ ಕಾಲದಲ್ಲಿ ಎನ್ನುವುದು ಆಕಸ್ಮಿಕವೇನಲ್ಲ. ಶುದ್ಧಾಂಗ ರಾಷ್ಟ್ರೀಯತೆ ಒಂದೇ ಭೂಭಾಗ, ಒಂದೇ ಜನ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ನಂಬಿಕೆಯನ್ನು ಪ್ರತಿಪಾದಿಸುತ್ತದೆ. ಆದರೆ ಇಂಥ ಸ್ಥಿತಿ ಯಾವತ್ತೂ ಅಸಾಧ್ಯವಾದ್ದರಿಂದ ಅದು ಯಾವಾಗಲೂ ಅಸಹನೆಯಿಂದ ಒಳಗೂಡಿಯೂ ಇರುವಂಥದು. ‘ಜನಾಂಗ ಶುದ್ಧೀಕರಣ’ (ethnic cleaning) ಎ೦ಬ ಹಿಂಸಾತ್ಮಕ ಪ್ರಕ್ರಿಯೆ ಆರಂಭವಾಗುವುದೇ ಇಲ್ಲಿಂದ. ಇದರ ಘೋರ ಪರಿಣಾಮಗಳನ್ನು ತೀರಾ ಈಚಿನತನಕವೂ ಜಗತ್ತು ಕಂಡಿದೆ. ಇದು ಯಾವತ್ತೂ ಕಣ್ಣಿಗೆ ಕಾಣಿಸುವ ರೀತಿಯದೂ ಆಗಿರಬೇಕಾದ್ದಿಲ್ಲ; ಅಲ್ಪಸ೦ಖ್ಯಾತ ಆಸೆ ಆಕಾಂಕ್ಷೆಗಳಿನ್ನು ಹುಟ್ಟುವ ಮೊದಲೇ ಕಿತ್ತುಹಾಕುವ ಪರಿಸ್ಥಿತಿಯ ನಿರ್ಮಾಣವೊಂದೇ ಸಾಕಾಗುತ್ತದೆ. ಯಾಕೆಂದರೆ ಮಿಶಲೆ ಹೇಳುವ ಐಕ್ಯತೆಯ ದಾರಿಯಲ್ಲಿ ಘಟಕ ವಿಶಿಷ್ಟತೆಗಾಗಲಿ, ನೆನಪಿಗಾಗಲಿ ಸ್ಥಾನವಿರುವುದಿಲ್ಲ. ಯಾಕೆಂದರೆ, ಐಕ್ಯತೆಯೆಂದರೆ ಅದೊಂದು ರಾಸಾಯನಿಕ ಕ್ರಿಯೆ. ಅದು ಯಾವುದೇ ಘಟಕವೂ ಘಟಕವಾಗಿ ಉಳಿಯಲು ಬಿಡುವುದಿಲ್ಲ. ಹಾಗೂ ಒಮ್ಮೆ ಐಕ್ಯಗೊಂಡರೆ ಆಮೇಲೆ ಮೊದಲಿನ ಸ್ಥಿತಿಗೆ ಬರುವುದೂ ಸಾಧ್ಯವಾಗದು. ಆದರೆ ಜಗತ್ತು ಇಂದು ಕಂಡುಕೊಂಡ ಪ್ರಕಾರ, ಐಕ್ಯತೆಯಷ್ಟು ಪರಿಶುದ್ಧವಲ್ಲದ ಸಂಯುಕ್ತತೆಯೇ ಕಡಿಮೆ ಹಿಂಸೆಯದು. ಯಾಕೆಂದರೆ ಇದರಲ್ಲಿ ಪ್ರತಿಯೊಂದು ಘಟಕವೂ ತನ್ನದೇ ಜನಾಂಗೀಯ ನೆನಪನ್ನು ಕಾಯ್ದುಕೊಳ್ಳಬಹುದಾಗಿದೆ. ಆಧುನಿಕೋತ್ತರ ಸ್ಥಿತಿ ಇದುವೇ.

ಈ ಹಿನ್ನೆಲೆಯಲ್ಲಿ, ಈಚೆಗೆ ಭೈರಪ್ಪನವರ ಆವರಣ ಕಾದಂಬರಿಯ ಕುರಿತು ಅನಂತಮೂರ್ತಿ ಮತ್ತು ಭೈರಪ್ಪತನವರ ನಡೆದ ವಿಚಾರಗಳ ವರಸೆ ಸೈದ್ಧಾಂತಿಕವಾಗಿ ಮಹತ್ವದ್ದು. ಅನಂತಮೂರ್ತಿಯರು ಭೈರಪ್ಪನವರು ಕಾದಂಬರಿಕಾರರಲ್ಲ, ಡಿಬೇಟರ್ (‘ಚರ್ಚಾಪಟು’); ಅವರು ಕಾದಂಬರಿಗೆ ಸಾಹಿತ್ಯಿಕ ಅವಕಾಶವನ್ನೇ ಕೊಡದ ಕಾರಣ, ಅದು ಕಾವ್ಯಾತ್ಮಕತೆಯನ್ನು ಕಳೆದುಕೊಂಡು, ಪೂರ್ವೋದ್ಧೇಶಕ್ಕೆ ಸಾಧನವಾದಂತಿದೆ ಎಂಬ ಅರ್ಥದ ಮಾತುಗಳನ್ನು ಆಡಿದರು. ಭೈರಪ್ಪತನವರು ತಾನು ಇತಿಹಾಸವನ್ನು ಕೈಗೆತ್ತಿಕೊಂಡದ್ದರಿಂದ ಕಾವ್ಯಾತ್ಮಕತೆಯನ್ನು ಬೇಕೆಂದೇ ದೂರವಿರಿಸಿದೆ, ಕಾದಂಬರಿಯ ಮೂಲಕ ‘ಸತ್ಯಾನ್ವೇಷಣೆ’ ನಡೆಸುವುದಷ್ಟೆ ತನ್ನ ಉದ್ದೇಶವಾಗಿತ್ತು ಎಂದರು. ಗದ್ಯ ಪದ್ಯಗಳ ಕುರಿತು ಮಿಶಲೆ ನಡೆಸುವ ವ್ಯಾಖ್ಯಾನದ ನೆಲೆಯಿಂದ ನೋಡಿದರೆ, ಈ ಲೇಖಕರ ತಾತ್ವಿಕ ಭಿನ್ನತೆಗೊಂದು ಅರ್ಥಬರುತ್ತದೆ. ಭೈರಪ್ಪನವರಿಗೆ ಗದ್ಯ ಆಗುಮಾಡುವ ತಾರ್ಕಿಕ ಸ್ಪಷ್ಟತೆ ಬೇಕು; ಅದರಲ್ಲಿ ಕಾವ್ಯಾತ್ಮಕತೆಯನ್ನು ತಂದರೆ ಅದರಿಂದ ‘ಸತ್ಯ’ದ ಅನ್ವೇಷಣೆಗೆ ತೊಂದರೆಯಾಗುತ್ತದೆ. ಎಂದರೆ, ಅದನ್ನು ಓದುಗರು ನಿಜವೆಂದು ಒಪ್ಪಿಕೊಳ್ಳುವುದಿಲ್ಲ. ಮೂಲದಲ್ಲಿದು ಕಾವ್ಯ ಮತ್ತು ಸತ್ಯ ಪರಸ್ಪರ ದೂರವೆನ್ನುವ ಪ್ಲೇಟೋ ಸಿದ್ಧಾ೦ತ. ಸತ್ಯಾನ್ವೇಷಣೆಗೆ ಭೈರಪ್ಪನವರು ಬಳಸಿಕೊಳ್ಳುವ ‘ಚರ್ಚೆ’ಯ ವಿಧಾನವೂ ಕೂಡಾ ಸಾಕ್ರೆಟಿಕ್ ಎನ್ನುವುದು ಗಮನಾರ್ಹ. ಅನಂತಮೂರ್ತಿಯವರಿಗೆ ಇಂಥ ಸತ್ಯ ಸತ್ಯವೇ ಅಲ್ಲ, ಅದಕ್ಕಾಗಿ ಬಳಸುವ ಸಾಹಿತ್ಯ ಸಾಹಿತ್ಯವೂ ಅಲ್ಲ; ಬದಲು ಈ ಮೊದಲೇ ಸಿದ್ದಪಡಿಸಿ ಇಟ್ಟುಕೊಂಡಂಥ ಸಿದ್ಧಾಂತವೊಂದನ್ನು ಓದುಗರ ಮೇಲೆ ಹೇರುವ ಕಾರ್ಯಕ್ರಮ. ಅನಂತಮೂರ್ತಿ ಸಾಹಿತ್ಯದ ಸ್ವಾಯತ್ತತೆಗೆ ಒತ್ತು ನೀಡುತ್ತಾರೆ. ಕಾದಂಬರಿ ಗದ್ಯ ಪ್ರಕಾರವಾದರೂ-ಆದ್ದರಿಂದಲೇ-ಸ್ವತಃ ಲೇಖಕನ ನಿಯಂತ್ರಣದಿಂದ ಮುಕ್ತವಾಗಿರಬೇಕಾಗುತ್ತದೆ. ಕಾವ್ಯಾತ್ಮಕವಾಗಿರುವುದೇ ಈ ಮುಕ್ತತೆಯ ವಿಧಾನ. ಮಿಶಲೆಯ ದೃಷ್ಟಿಯಿ೦ದ ಭೈರಪ್ಪನವರ ರಾಷ್ಟ್ರೀಯತೆ ಐಕ್ಯತೆಗೂ, ಅನಂತಮೂರ್ತಿಯವರದು ಸಂಯುಕ್ತತೆಗೂ ಹತ್ತಿರವಾದಂತೆ ನನಗೆ ತೋರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂ ದೇವ್ರು ಮುನಿಯ
Next post ಮಾಯದ ನೋವು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys