ಪ್ರೊಫೆಶನಲಿಸಂ ಎಂಬ ಮಾಯೆ

ಪ್ರೊಫೆಶನಲಿಸಂ ಎಂಬ ಮಾಯೆ

ವೃತ್ತಿಪರತೆ ಎನ್ನುವುದು ಇಂದು ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ದಿನನಿತ್ಯದ ಸಂಗತಿಗಳಾದ ಆಡುಗೆ, ಹೊಲಿಗೆ, ಪಾಠ ಹೇಳುವುದು, ಕೂದಲು ಕತ್ತರಿಸಿಕೊಳ್ಳುವುದರಿಂದ ಹಿಡಿದು ಕ್ರಿಕೆಟ್‍ನಂತಹ ಕ್ರೀಡೆಗಳ ತನಕವೂ ಈ ಪ್ರವೃತ್ತಿ ಇಣುಕುತ್ತಿದೆ. ಕಡೆಗೆ ಸಂಬಂಧಗಳನ್ನು ನಿರ್ವಹಿಸುವುದೂ ಕೂಡ ವೃತ್ತಿ ಪರತೆಯನ್ನು ಹೊಂದಿದ ಸಂಗತಿಯಾಗುತ್ತಿದೆ. ಹಾಗಾಗಿ ಇಂದು ಮುದ್ರಣಗೊಳ್ಳುತ್ತಿರುವ ಹಲವಾರು ಪುಸ್ತಕಗಳಲ್ಲಿ ಹೌ..ಟು… ಸೀರಿಸ್‍ಗೆ ಸೇರಿದ ಪುಸ್ತಕಗಳೇ ಹೆಚ್ಚು ಪ್ರಕಟಗೊಳ್ಳುತ್ತಿವೆ. ವಿಷಯ ಹೀಗಿರುವಾಗ ಸಾಹಿತ್ಯ ವೃತ್ತಿಪರತೆಯ ಪ್ರಭಾವಗಳಿಂದ ಪಾರಾಗಿದೆ ಎಂದು ಖಂಡಿತಾ ಹೇಳುವಂತಿಲ್ಲ. ಕಸುಬುದಾರಿಕೆಯನ್ನು ಮೆರೆಸುವ ಪ್ರಶಸ್ತಿ ವಿಜೇತ ಕೃತಿಗಳನ್ನು ಒಮ್ಮೆ ನೋಡಿದರೆ ಅದರ ಹಿಂದೆ ಏಜೆಂಟ್‍ಗಳ ಪರಿಶ್ರಮ ಬರಹಗಾರನ ಪರಿಶ್ರಮಕ್ಕೆ ಮಿಗಿಲೆಂಬಂತೆ ಇರುವುದು ಕಾಣುತ್ತದೆ. ಓದುಗವಲಯದ ಮುಂದೆ ಕೃತಿಗಳನ್ನು ಓದಿ, ಎಲ್ಲೆಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕೆಂಬುದನ್ನು ಲೇಖಕ ಇಂದು ಸಂತೋಷದಿಂದಲೇ ಒಪ್ಪಿಕೊಂಡು ಮಾಡುತ್ತಾನೆ. ಯಾವ ಬಗೆಯ ಓದುಗರಿಗೆ ಬರೆಯುತ್ತಿದ್ದೇನೆಂಬ ಶ್ರದ್ದಾಪೂರ್‍ವಕ ಧೋರಣೆ ಇಂದು ಜಾಗತಿಕ ಮಟ್ಟದ ಲೇಖಕರಿಗೆಲ್ಲ ಇದೆ. ಮಾರುಕಟ್ಟೆ ಮತ್ತು ಓದಿನ ಕ್ರಿಯೆಗಳನ್ನು ಅಲಕ್ಷಿಸಿ ಅವರು ಬರೆಯುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಸಾಹಿತ್ಯದ ಓದಿನಲ್ಲಿ ಬರಹದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರೊಫೆಶನಲಿಸಂ ನಿಧಾನವಾಗಿ ಅನೂಹ್ಯವಾದ ಸೃಜನಶೀಲ ನೆಲೆಗಳನ್ನು ಗುರುತಿಸಿ, ಅವನ್ನು ಬೇಟೆಯಾಡಿ, ಬಳಸಿಕೊಳ್ಳುವುದು ಹೇಗೆಂದು ಹುಡುಕುತ್ತಿದ್ದೆ ಯೇನೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ.

ಈ ಹಿಂದೆ ಸಾಹಿತ್ಯದ ಪರಿಭಾಷೆಯಲ್ಲಿ ಕಸುಬುದಾರಿಕೆ ಎಂಬುದಕ್ಕೆ ಬೇರೆಯದೇ ಅರ್ಥ ಇತ್ತು. ಸಾಹಿತ್ಯಕ್ಕೆ ಬೇಕಾಗುವ ವ್ಯುತ್ಪತ್ತಿ, ಭಾಷಾ ತಿಳಿವಳಿಕೆ ಮತ್ತು ಇವುಗಳನ್ನು ಬಳಸಿಕೊಳ್ಳುವ ಔಚಿತ್ಯ ಪ್ರಜ್ಞೆಗಳನ್ನೇ ಕಸುಬುದಾರಿಕೆಯ ಅಂಶಗಳೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇದನ್ನು ಮೀರಿದ ಕೆಮಿಸ್ಟ್ರಿಯೊಂದು ಕೃತಿಯ ಒಳಗೆ ಇದೆ ಎಂಬುದೂ, ಮತ್ತೆ ಅದು ಕೆಲಸ ಮಾಡದಿದ್ದರೆ ಎಲ್ಲವೂ ನಿಷ್ಪಲವೆಂಬ ಭಾವನೆ ಸಾರ್ವತ್ರಿಕವಾಗಿತ್ತು.

ನವನವೋನ್ಮೇಷ ಶಾಲಿಯಾದ ಗುಣ ಸಾಹಿತ್ಯಕ್ಕೆ ಒದಗುವುದು ಅದರಲ್ಲಿರುವ ಅಮೂರ್ತ, ಅನೂಹ್ಯ ನೆಲೆಗಳಿಂದ. ಆಶ್ಚರ್ಯ, ಅನುಭೂತಿಗಳು ಉಂಟಾಗುವುದು ಈ ಮೇಲೆ ತಿಳಿಸಿದ ಅಂಶಗಳ ಸಾನಿಧ್ಯದಲ್ಲೇ. ಒಂದು ರೀತಿಯಲ್ಲಿ ಅನೂಹ್ಯ ನೆಲೆಗಳ ಹುಡುಕಾಟವೇ ಸೃಜನಶೀಲ ಸಾಧ್ಯತೆ ಎಂದರೆ ಕೊಂಚ ರೊಮ್ಯಾಂಟಿಕ್ ಅನ್ನಿಸಬಹುದು. ಆದರೆ ಸಮಸ್ಯೆ ಇರುವುದು ಸಾಹಿತ್ಯದ ದ್ವಂದ್ವ ನಿಲುವಿನಲ್ಲಿ. ಅಂದರೆ ಭಾಷೆಯೆಂಬ ಮೂರ್ತ ಸ್ವರೂಪದಲ್ಲಿ ಮೈದಳೆಯಬೇಕಾದ ಅನಿವಾರ್ಯತೆ ಸಾಹಿತ್ಯಕ್ಕಿದೆ. ಆದರೆ ಅದನ್ನು ಮೀರಿ ಅಮೂರ್ತದಲ್ಲಿ ನೆಲೆಗೊಳ್ಳುವ ತುಡಿತ ಅದಕ್ಕೆ ಇದೆ. ಮೊದಲನೆಯ ಅಂಶ ಪೂರೈಸಲು ಸಾಹಿತ್ಯಕ್ಕೆ ಒಂದು ಕಸಬುದಾರಿಕೆಯ ಅವಶ್ಶಕತೆ ಇದೆ. ಆದರೆ ಅದರಲ್ಲೇ ವಿರಮಿಸಿ ಸಾಹಿತ್ಯ ನಮ್ಮನ್ನು ಮಾಂತ್ರಿಕ ನೆಲೆಗಳಿಗೆ ಕೊಂಡೊಯ್ಯದಿದ್ದರೆ, ಅದು ಕಸಬುದಾರಿಕೆಯ ಸುಂದರ, ಚಂದಗಾಣಿಸುವ ಸಾಫಲ್ಯದಲ್ಲಿ ನಿಂತುಬಿಡುತ್ತದೆ.

ಬರಹಗಾರನೊಬ್ಬ ಕಸಬುದಾರಿಕೆಯ ಹಂಗಿಲ್ಲದೆ ಬರೆಯಲಾರ. ಆದರೆ ಅದನ್ನೇ ಹೆಚ್ಚು ರೂಢಿಸಿಕೊಂಡಂತೆಲ್ಲ ಅವನ ಅಭಿವ್ಯಕ್ತಿ ಕ್ರಮಗಳಿಗೆ ನಿರ್ದಿಷ್ಟ ಸ್ಪರೂಪವೊಂದು ಸಿದ್ಧಿಸಿಬಿಡುತ್ತದೆ. ಪ್ರಜ್ಞಾಪೂರ್‍ವಕವಾಗಿ ಎಂಬಂತೆ ಸಿದ್ಧ ಸಂತೋಷಗಳ ಗುರಿಯನ್ನು ತಲುಪುವ ಅಪಾಯ ಅವನನ್ನು ಆವರಿಸಿಕೊಳ್ಳುತ್ತದೆ. ವೃತ್ತಿಪರತೆ ಕೊಡುವ ಕೌಶಲ, ಜೊತೆಯಲ್ಲಿಯೇ ಬರುವ ಏಕತಾನತೆಗಳಿಂದ ಪಾರಾಗುವುದು ಕಷ್ಟದ ವಿಷಯ. ಒಬ್ಬ ಸಾಧಾರಣ ಗೃಹಿಣಿ ಕೂಡ ಈ ತಾಕಲಾಟವನ್ನು ಅನುಭವಿಸುತ್ತಿರುತ್ತಾಳೆ. ಒಂದಳತೆಯ ಉಪ್ಪುಕಾರದ ಆಚೆ ಇನ್ನ್ಯಾವ ರುಚಿ ಆಡಗಿರಬಹುದೆಂದು ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿರುತ್ತಾಳೆ. ಹಾಗೇ ಒಬ್ಬ ಕ್ರಿಕೆಟ್ ಆಟಗಾರ ರಾಶಿ ರಾಶಿ ರನ್ನುಗಳನ್ನು ಪೇರಿಸಿದರೂ, ತನ್ನ ಆಟದೊಳಗಿನ ಮ್ಯಾಜಿಕ್ ನ್ನು ಕೊಂಡುಕೊಳ್ಳುವ ಚಡಪಡಿಕೆಯನ್ನು ಹೊಂದಿರುತ್ತಾನೆ. ಇನ್ನು ಬರಹಗಾರನಿಗೆ ಕೇಳಬೇಕೆ? ಅವನಿಗಂತು ಇದು ಜೀವನ್ಮರಣದ ಪ್ರಶ್ನೆಯೆ ಆಗಿರುತ್ತದೆ. ಪಂಪ ಚಂಪೂಕಾವ್ಯದ ಸಿದ್ಧಸೂತ್ರಗಳಾದ ಅಷ್ಟಾದಶವರ್ಣನೆಗಳನ್ನು ಕೈಬಿಡದೇ ಹೋದರೂ, ದೇಸಿಯಲ್ಲಿ ತನ್ನ ಸೃಜನಶೀಲ ಅಭಿವ್ಯಕ್ತಿ ಸಾಧ್ಯವಾದೀತೇನೋ ಎಂದು ಹುಡುಕಿದ. ಹೆಣ್ಣನ್ನು ವರ್‍ಣಿಸುವ ಕ್ರಮಬದ್ದ ಕಾವ್ಯ ಲಕ್ಷಣಗಳನ್ನು ಪರಂಪರೆ ನೀಡುತ್ತದೆ. ಭಾರದೆದೆಯ, ಬಡನಡುವಿನ, ತೊಂಡೆತುಟಿಯ, ಮೀನಿನ ಕಂಗಳಾಚೆ ಹೊಳೆವ ಯಾವುದೋ ಸೌಂದರ್ಯದ ವಿವರ ರೂಢಿಯನ್ನು ಬಿಟ್ಟುಕೊಡುವುದರಲ್ಲೇ ಸೃಜನಶೀಲತೆ ಹೊಳೆಯುತ್ತದೇನೊ.

ಕಾವ್ಯದ ಬಗ್ಗೆ ತೀವ್ರ ಆಸಕ್ತಿಯನ್ನಿಟ್ಟುಕೊಂಡಿದ್ದ ಪುತಿನ ಸಾಯುವ ಸ್ವಲ್ಪ ದಿನ ಮುಂಚೆ ಕಾವ್ಯದ ಬಗ್ಗೆಯೇ ಒಂದು ಸಂದರ್ಶನ ಕೊಟ್ಟರು. ಕಾವ್ಯದ ಮಾಂತ್ರಿಕ ಗುಣದ ಮೇಲ್ಮೆಯನ್ನು ಒಪ್ಪುವ ಪುತಿನ ಕೌಶಲಗಳಿಂದ ಆ ಭಾವ ಹುಟ್ಟಲಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳನ್ನು ಇಲ್ಲಿ ನೋಡುವುದಾದರೆ; “…
ಸುಂದರವಾಗಿ ಬರೆಯುವ ಕವಿಗೆ passion ಇರುವುದಿಲ್ಲ. ಒಂದು ಸುಭಾಷಿತ ಹೇಳುತ್ತದೆ- ‘ಎಲ್ಲಿ ಬೆಳದಿಂಗಳನ್ನು ಬಯ್ಯುವುದು ಇಲ್ಲವೋ, ದೂತಿಯ ಮಾತನ್ನು ಕೇಳುವುದು ಇಲ್ಲವೋ ಅದು ಪ್ರಣಯವಲ್ಲ’ -ಎಂದು. ಆದರೆ ಸ್ವಾಧೀನೆ, ಅನುಕೂಲೆ, ಸ್ವಗೃಹಿಣಿಯನ್ನು ನಿತ್ಯ ಕಲೆಯುವುದೊಂದು ವ್ರತ, ಅದು ಕಷ್ಟ. ಇದನ್ನು ಪ್ರೇಮ ಎನ್ನಲಾಗುವುದೇ? irrevarance ಇಲ್ಲದೆ ಸೌಂದರ್ಯವಿಲ್ಲ ಯಾಕೆಂದರೆ ರೂಢಿಯನ್ನು ಬಿಟ್ಟು ಮನಸ್ಸು ಎಡವುದರಲ್ಲೇ ತನ್ನ ಹಾಜರಿಯನ್ನು, ಅರ್ಥವನ್ನು ಗಳಿಸಿಕೊಳ್ಳುತ್ತದೆ….”. ಪುತಿನ ಪ್ರಕಾರ passion ಮತ್ತು irrevaranceಗಳು ರೂಢಿಯಿಂದ ಹುಟ್ಟವಂಥದಲ್ಲ. ಇವೆರೆಡರ ಗೈರುಹಾಜರಿ ವೃತ್ತಿಪರತೆಯ ಕುಶಲತೆ, ಚಂದಗಾಣಿಸುವಿಕೆಯನ್ನು ಮುಂದು ಮಾಡಬಹುದಷ್ಟೇ ಹೊರತು ಒಳಗಿನ ಚೈತನ್ಯವಲ್ಲ. ಇದರ ಜೊತೆ ಜೊತೆಯಲ್ಲೇ ಕಾವ್ಯ ಮಲಿನಗೊಂಡಷ್ಟೂ ಅದಕ್ಕೆ ಅಪೀಲಾಗುವ ಶಕ್ತಿ ಹೆಚ್ಚು ಎಂದು ಹೇಳಿದ ನೆರೂಡನ ಮಾತೂ ಇದೇ ಅರ್ಥವನ್ನು ದ್ವನಿಸುವಂತಿದೆ.
ಈ ಚರ್ಚೆ ಇಂದಿನದಲ್ಲ, ಹಳೆಯದು.

ಕಾವ್ಯಮೀಮಾಂಸೆ ಬೆಳೆದು ಬಂದ ದಾರಿಯಲ್ಲೇ ಇಂತದ್ದೊಂದು ಹುಡುಕಾಟದ ಹೆಜ್ಜೆ ಗುರುತುಗಳಿವೆ. ಮೀಮಾಂಸೆಯ ಚರ್ಚೆ ಆರಂಭವಾಗುವುದೇ ಮೂರ್ತಸ್ವರೂಪದಲ್ಲಿ. ಕಾವ್ಯವನ್ನು ಕಟ್ಟಡ, ಶಿಲ್ಪ ಎಂಬ ಗ್ರಹಿಕೆಯಲ್ಲಿ ಅದನ್ನು ಕಟ್ಟಲುಬೇಕಾದ ಅಗತ್ಯ ಪರಿಕರಗಳನ್ನು ಅದು ಗುರುತಿಸುತ್ತದೆ. ವ್ಯುತ್ಪತ್ತಿ, ಸಂರಚನೆಯ ಕೌಶಲ, ಭಾಷಾಜ್ಞಾನಗಳೆಲ್ಲ ಅಗತ್ಯ ಎಂಬ ವಾದ ಮುಂದಿಡುತ್ತಲೇ ಬರುವ ಮೀಮಾಂಸೆ, ಒಂದು ಹಂತದಲ್ಲಿ ಧ್ವನಿಯೆಂಬ ಪರಿಕಲ್ಪನೆಗೆ ಬಂದು ನಿಲ್ಲುತ್ತದೆ. ಇದುವರೆಗಿನ ಅಲಂಕಾರ, ರೀತಿ, ಔಚಿತ್ಯಗಳೆಂಬ ಕೌಶಲಗಳು ಅತ್ಯಗತ್ಯವೆಂದು ಹೇಳುತ್ತಿದ್ದ ಮೀಮಾಂಸೆ, ಈಗ ಧ್ವನಿಯೊಂದು ಇಲ್ಲದೇ ಹೋದರೆ ಇವೆಲ್ಲವೂ ಇದ್ದೂ ಏನೂ ಪ್ರಯೊಜನವಿಲ್ಲ ಎನ್ನುತ್ತದೆ. ಅಶರೀರವಾದ ಧ್ವನಿ ಆತ್ಮದಂತೆ, ಮೇಲೆ ಕಾಣುವುದಿಲ್ಲ ಒಳಗೆ ಜೀವಂತಿಕೆಯನ್ನು ತುಂಬುವುದು. ಇದನ್ನು ಬೆರಳಿಟ್ಟು ತೋರಿಸಲಾಗದು ಯಾಕೆಂದರೆ ಇದು ಅಮೂರ್ತ ಎಂದು ಹೇಳಿಬಿಡುತ್ತದೆ. ಅಲ್ಲಿಗೆ ಕಸುಬುದಾರಿಕೆಯನ್ನು ಮೀರಿದ ಮಾಂತ್ರಿಕತೆಯತ್ತ ಅದು ಬೆರಳು ತೋರಿಸಿದಂತಾಯಿತು.

ಕನ್ನಡ ನವೋದಯ ಸಂದರ್ಭದಲ್ಲಿ ನಡೆದ ಕಾವ್ಯ ಚರ್ಚೆಯನ್ನು ಗಮನಿಸಿದರೆ, ಆ ತಲೆಮಾರಿನ ಕವಿಗಳು ಅಮೂರ್ತವಾದ ಕಾವ್ಯದ ಸ್ವರೂಪವನ್ನು ದರ್ಶನದ ಪರಿಭಾಷೆಯಲ್ಲಿ ಕಂಡುಕೊಂಡಂತೆ ಕಾಣಿಸುತ್ತಾರೆ. ಕವಿ ಅಲ್ಲಿ ಋಷಿ ಸದೃಶ, ಬೆಳಕಿನ ಮಿಂಚನ್ನು ಕಾಣಲು ಧ್ಯಾನಿಸುತ್ತ ಕೂತವನು. ಹಾಗೆಂದ ಮಾತ್ರಕ್ಕೆ ಈ ಕವಿಗಳು ಮೂರ್ತವನ್ನೇ ಧ್ಯಾನಿಸುತ್ತ ವೃತ್ತಿಪರ ಕೌಶಲಗಳನ್ನು ಮರೆತೇಬಿಟ್ಟರು ಎಂದು ಹೇಳುವಂತಿಲ್ಲ. ತನ್ನ ಅನುಭೂತಿಯನ್ನು ಇತರರಿಗೆ ಹೊಳೆಯಿಸುವ ಆಶೆಯುಳ್ಳ ಅನುಭಾವಿ ಕೂಡ ಭಾಷೆಯ ಮೂರ್ತ ಸ್ವರೂಪದಲ್ಲೇ ತನ್ನ ಅನುಭವವನ್ನು ವಿವರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅನುಭೂತಿಯ ಮಿಂಚು ಕಾಣುವ ಹಂಬಲ ಇದ್ದ ಈ ಕವಿಗಳು ಅದನ್ನು ಕೌಶಲಪೂರ್ಣವಾಗಿ ಹೇಗೆ ಅಭಿವ್ಯಕ್ತಿಸಬಹುದು ಎಂಬುದರ ಬಗ್ಗೆಯೂ ಅಷ್ಟೇ ಆಸಕ್ತಿಯಿಟ್ಟುಕೊಂಡವರಾಗಿದ್ದರು. ಹಾಗಾಗಿ ನವೋದಯ ಕವಿಗಳ ವೃತ್ತಿಪರತೆಯನ್ನು ಅವರ ಕಾವ್ಯದಲ್ಲಿ ಕಾಣಬಹುದು.

ಅನುಭೂತಿ ತತ್ವವನ್ನು ಒಪ್ಪದ ನವ್ಯಕಾವ್ಯ ಕಾವ್ಯದೊಳಗಿನ ಮಾಂತ್ರಿಕ ಶಕ್ತಿಯ ಇರವನ್ನು ಅಲ್ಲಗಳೆದಂತೆ ಕಾಣುವುದಿಲ್ಲ. ತೀವ್ರ ಕ್ರಿಯಾಶೀಲತೆ ಮತ್ತು ಸಂವೇದನಾಶೀಲ ಭಾಷೆಯಲ್ಲಿ ಕಾವ್ಯದ ಮ್ಯಾಜಿಕ್ ಇರಬಹುದೆಂಬ ಹುಡುಕಾಟದಲ್ಲಿ ಈ ಕವಿಗಳಿದ್ದಾರೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಅಡಿಗರ ಮೋಹನ ಮುರಳಿಯ ಜನಪ್ರಿಯ ಸಾಲಿನಲ್ಲಿ ವ್ಯಕ್ತವಾಗುವ ತೀವ್ರವ್ಯಾಮೋಹ ಮತ್ತು ರೂಢಿಗಳನ್ನು ಬಿಟ್ಟು, ಅನೂಹ್ಯವಾದುದಕ್ಕೆಳೆಸುವ ವಾಂಛೆಯು ಒಂದು ಒಳ್ಳೆಯ ಉದಾಹರಣೆ ಯಾಗಬಲ್ಲುದು. ಸೃಜನಶೀಲತೆಯನ್ನುವುದು ಒಂದು ದೈವೀಕೃತ್ಯ ಎಂದು ನಂಬದೆ, ಅದನ್ನು ಮನಸ್ಸಿನ ನಿಗೂಢಗಳನ್ನು ಅರಿಸುವ ಕ್ರಿಯೆ ಎಂದು ನಂಬಿದ್ದ ಹಲವಾರು ಕವಿಗಳೇ ಈ ಗುಂಪಿನಲ್ಲಿದ್ದರು. ಅರ್ಥದ ಬಗ್ಗೆ ಕುತೂಹಲಿಗಳಾದ ಇವರು ಸಂಕೇತ, ಪ್ರತಿಮೆಗಳಲ್ಲಿ ಅಮೂರ್ತತೆಯನ್ನು ಕಂಡುಕೊಂಡರು. ಆದರೆ ಆಕೃತಿ ನಿಷ್ಟರಾದ ಈ ಕಾಲದ ಕವಿಗಳು ಸಾಧಿಸಿದ ಕಸಬುದಾರಿಕೆಯಂತು ಅಸಾಧಾರಣವಾದುದು!

ಬಂಡಾಯ ಮತ್ತು ಬಂಡಾಯೋತ್ತರ ಕಾಲದಲ್ಲಿ ಅನುಭೂತಿಗಾಗಲೀ, ಪಠ್ಯನಿಷ್ಟೆ ಅರ್ಥಕ್ಕಾಗಲೀ ವಿಶೇಷ ಮಹತ್ವದ ಇಲ್ಲ. ಪಠ್ಯದ ಏಕಸ್ವಾಮ್ಯತೆ ಈಗ ಉಳಿದಿಲ್ಲ. ಶುದ್ದ ಸಾಹಿತ್ಯದ ಪರಿಕಲ್ಪನೆ ಬದಲಾಗುತ್ತ ಬಂದು ತತ್ವಶಿಸ್ತುಗಳ ಅಧ್ಯಯನದ ಹಿನ್ನೆಲೆಯಲ್ಲಿ ಪಠ್ಯವನ್ನು ಸಾಂಸ್ಕೃತಿಕ ಪಠ್ಯ ಎಂದು ನೋಡಲಾಗುತ್ತಿದೆ. ಅಥವಾ ಜನಪ್ರಿಯ ಮಾದರಿಗಳಿಗೆ ಹತ್ತಿರ ತರುವುದು ಕೂಡ ಒಂದು ಕ್ರಮವಾಗುತ್ತಿದೆ. ಈ ಎರಡೂ ರೀತಿಗಳಲ್ಲಿ ವೃತ್ತಿಪರತೆಯ ಅಂಶವೇ ಮೇಲುಗೈ ಸಾಧಿಸುತ್ತಿದೆ. ಗಂಭೀರವಾದ ಇಲ್ಲವೇ ಲಘುವಾದ ಬರವಣಿಗೆಗಳೆರಡರಲ್ಲೂ ವೃತ್ತಿಪರತೆಯ ಪ್ರಭಾವವನ್ನು ಕಾಣಬಹುದು. ಪಠ್ಯವೊಂದನ್ನು ಸಾಂಸ್ಕೃತಿಕ ಪಠ್ಯವೆಂದು ನೋಡುವಾಗ ಅದನ್ನು ಸಾಮಾಜಿಕ, ಆರ್ಥಿಕ, ರಾಜಕೀಯ- ಈ ಮುಂತಾದ ಶಿಸ್ತುಗಳನ್ನು ಬಳಸುವುದರಿಂದ ಈ ಬಗೆಯ ಶಿಸ್ತುಗಳನ್ನೂ ತತ್ವಗಳನ್ನೂ ಕ್ರಮಬದ್ಧವಾಗಿ ತಿಳಿಯುವ ವೃತ್ತಿಪರತೆ ಬೇಕಾಗುತ್ತದೆ. ಇದು ಇನ್ನೊಂದು ರೀತಿಯಲ್ಲಿ ಪ್ರಜ್ಞಾಪೂರ್ವಕ ಘಟ್ಟ. ಬರಹಗಾರ ಹೆಚ್ಚು ಹೆಚ್ಚು ಪ್ರಜ್ಞಾಪೂರ್ವಕ ನೆಲೆಯನ್ನು ತಲುಪಿದಂತೆಲ್ಲ, ತನ್ನ ಗುರಿಗಳ ಬಗ್ಗೆ ಖಚಿತತೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತಾನೆ. ಇದರಿಂದ ನಿರೀಕ್ಷಿತ ಪರಿಣಾಮಗಳ ಪಠ್ಯವೊಂದು ಸೃಷ್ಟಿಯಾಗುತ್ತದೆ. ಮಾರ್ಕ್ಸ್‍ವಾದ, ಸ್ತ್ರೀವಾದ ಮುಂತಾದ ವಾದಗಳನ್ನು ಅನುಸರಿಸಿ ಬರೆಯುವ ಬರಹಗಾರರೆಲ್ಲ ಸಾಮಾನ್ಯವಾಗಿ ಪ್ರಜ್ಞಾಪೂರ್ವಕ ನೆಲೆಯಿಂದಲೇ ಹೊರಡುತ್ತಾರೆ. ಕಲೆ ಸಾಹಿತ್ಯವನ್ನು ಉಪಕರಣದಂತೆ ಬಳಸಿಕೂಳ್ಳುತ್ತಾ ಹೋಗುತ್ತಾರೆ. ಬರವಣಿಗೆಯೆನ್ನುವುದನ್ನು ಕಪ್ಪುಬಿಳುಪಿನ ಮಾದರಿಯಲ್ಲಿ ಗ್ರಹಿಸದೆ, ಅದರ ಸಂಕೀರ್ಣ ಸ್ವರೂಪದ ಅರಿವುಳ್ಳ ತತ್ವನಿಷ್ಟ ಬರಹಗಾರ ಮತ್ತೆ ತನ್ನ ತತ್ವದಾಚೆ ಇರಬಹುದಾದ ಬದುಕಿನ ಸಾಧ್ಯತೆಗಳತ್ತ ಕಣ್ಣುಹಾಯಿಸುತ್ತಾನೆ. ಇದು ಸೃಜನಶೀಲತೆಯ ಸಂಕೇತ. ಬ್ರೆಕ್ಟ್, ದೇವನೂರು ಮಹಾದೇವರಂತಹ ಹಲವಾರು ಲೇಖಕರು ತಾವು ನಂಬಿದ ತತ್ವದಾಚೆಗು ಬದುಕನ್ನು ಗ್ರಹಿಸುವ ಮೂಲಕ ಸೃಜನಶೀಲತೆಯ ಸಾಧ್ಯತೆಗಳನ್ನು ಉಳಿಸಿಕೆಟ್ಟನಿಂಡಿದ್ದಾರೆ.

ಇನ್ನು ಜನಪ್ರಿಯ ಮಾದರಿಗಳಿಗೆ ಬಂದರೆ ಸಾಹಿತ್ಯವನ್ನು ಇನ್ನಷ್ಟು ವೃತ್ತಿಪರತೆಗೆ ಕಟ್ಟಿಹಾಕುವ ಧಾವಂತದಲ್ಲಿ ಈ ಬಗೆಯ ಮಾದರಿಗಳು ಕೆಲಸ ಮಾಡುತ್ತಿರುತ್ತವೆ. ಸೃಜನಶೀಲತೆಯ ಅಂಶ ಇಲ್ಲಿ ಅಷ್ಟೊಂದು ಮುಖ್ಯವಾಗುವುದಿಲ್ಲ. ಸಿದ್ಧಸೂತ್ರಗಳಿಂದ ವೃತ್ತಿಪರನಾಗಿ ಬರೆಯುವ ಬರಹಗಾರನಿಗೆ ಇಲ್ಲಿ ಆದ್ಯತೆ. ಮೇಲಾಗಿ ಮಾರುಕಟ್ಟೆಯ ಪರಿಣಾಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುವ ಚಾಳಿ ಅಪ್ರಜ್ಞಾಪೂರ್ವಕ ನೆಲೆಗಳಿಂದ ಬರವಣಿಗೆ ಹುಟ್ಟುವ ಸಾಧ್ಯತೆಯನ್ನು ಕ್ಷೀಣಗೊಳಿಸುತ್ತದೆ. ಕಲೆಯ ನಿಯಮಾನುಸಾರ ರಚನೆ ಮಾಡುವುದು ಒಂದು ರೀತಿಯ ಏಕತಾನತೆಯನ್ನು ಸೃಷ್ಟಿಸುತ್ತವೆ. ಹೀಗೆ ನಮ್ಮ ಕಾಲದಲ್ಲಿ ವೃತ್ತಿಪರತೆಯನ್ನೇ ನೆಚ್ಚಿ ಬರವಣಿಗೆ ಹುಟ್ಟುತ್ತಿದೆಯೇನೋ ಎಂಬ ಅನುಮಾನ ಹುಟ್ಟುತ್ತದೆ.

ಇಷ್ಟಾಗಿಯೂ ಸಾಹಿತ್ಯದೊಳಗೆ ಇರಬಹುದಾದ ಕೆಮಿಸ್ಟ್ರಿಯ ಬಗ್ಗೆ, ವಿಸ್ಮಯಗಳ ನಂಬಿಕೆ ಕಳೆದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಜಯಂತ ಕಾಯ್ಕಿಣಿ ಹೇಳುವಂತೆ ಸಾಹಿತ್ಯದಲ್ಲಿ ‘ಬಿಟ್ಟಪದ’ಗಳಿರಬೇಕು, ಆಗ ಅದು ಹೆಚ್ಚು ಧ್ವನಿಸುತ್ತದೆ. ಅಂದರೆ spaceಗಳು ಇದ್ದಷ್ಟೂ ಸಾಹಿತ್ಯದ ಶಕ್ತಿ ಹೆಚ್ಚು. ಅವೇ ಅನೂಹ್ಯ ನೆಲೆಗಳು ಎಂತಲೂ ಗುರುತಿಸಬಹುದು. ರೂಢಿಗತ ಕೌಶಲಗಳಾಚೆ ನಮ್ಮನ್ನು ಅವು ಕರೆದೊಯ್ಯುತ್ತವೆ. ಅವನ್ನು ಹುಡುಕುವುದರಲ್ಲಿನ ರೋಮಾಂಚನ ಸ್ವಲ್ಪ ರೊಮ್ಯಾಂಟಿಕ್ ಅನ್ನಿಸಿದರೂ, ನಾವೆಲ್ಲ ಈ ಥ್ರಿಲ್‍ಗಾಗಿಯೇ ಸಾಹಿತ್ಯ ಓದುತ್ತಿರುತ್ತೇವೆ ಎಂದು ನನ್ನ ಅನ್ನಿಸಿಕೆ.
*****

One thought on “0

 1. ತುಂಬಾನೆ ಮಾಹಿತಿ ನೀಡುವ ಮತ್ತು ಒಂದು ನೆಲೆಯಲ್ಲಿ, ಸಾಹಿತ್ಯಕ್ಕೆ ಸೇರುವ ಆಶಾದೀಪ ಬೆಳಗಿಸಬಹುದಾದ ಬರಹ.ಲೇಖಕಿ ಮಂಡಿಸುವ ಎಲ್ಲಾ ಸಾದ್ಯತೆಗಳು ಅಸಾಧ್ಯಗಳೇನೂ ಅಲ್ಲ ಎನ್ನವ ಭಾವ ಹೊಮ್ಮಿ ಅನ್ವೇಷಣೆಯ ರೋಮಾಂಚನ ರೊಮ್ಯಾಂಟಿಕ್ ಆಗಿಸುವ ಕ್ರಿಯೆಯಲ್ಲಿ ಪ್ತತಿ ಬರಹಗಾರ ಪಾಲುಗೊಳ್ಳಬಹುದಾಗಿದೆ
  ಲೇಖಕಿ ಅಭಿನಂದಾರ್ಹರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರೂ ಇಲ್ಲದ ಜಾಗ
Next post ಎಚ್ಚರಿಕೆ

ಸಣ್ಣ ಕತೆ

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys