ಕೇಳಯ್ಯ ಹುಲಿರಾಯ, ನಾನು ಮೆಟ್ಟಿದ ಭೂಮಿ ಬೆಳೆವುದು

`ಗೋವಿನ ಹಾಡು’ ಕನ್ನಡದ ಕಥನಗಳಲ್ಲಿ ಬಹುವಾಗಿ ಓದಿಸಿಕೊಂಡಿರುವಂತದ್ದು.  ಅಲ್ಲಿ ಬರುವ ಪುಣ್ಯಕೋಟಿಯೆಂಬ ಹಸು, ಅರ್ಬುತನೆಂಬ ಹುಲಿಗಳು  ಓದುಗರಿಗೆ ನಿರಂತರವಾಗಿ ಸಂಕೇತಗಳಾಗಿ ಒದಗುತ್ತ ಬಂದಿರುವುದನ್ನು ನೋಡಿದಾಗ ಆದೊಂದು ಉತ್ತಮ ಸಾಂಸ್ಕೃತಿಕ ಪಠ್ಯ ಎಂದು ಒಪ್ಪಬಹುದಾಗಿದೆ.  ಹಸು-ಹುಲಿಗಳು ವೈರುಧ್ಯದ ಅಂಶಗಳನ್ನು ಹೊಂದಿರುವ ಎರಡು ಪ್ರಾಣಿ ಸಂಕೇತಗಳು.  ಆವುಗಳ ದ್ವಂದ್ವಾತ್ಮಕ ಸ್ವರೂಪಗಳ ಕಾರಣದಿಂದಲೇ ಆವು ಕಾಲದ ವಿಶ್ಲೇಷಣೆಗೊಳಪಡುವ ಸಂದರ್ಭದಲ್ಲಿ ನಿರಂತರ ಸಂಕೇತಗಳಾಗುವ ಅವಕಾಶ ಹೊಂದಿವೆ.  ಅಲ್ಲದೆ ಪಠ್ಯದ ನೇಯ್ಗೆಯನ್ನು ನೋಡಿದರೆ, ಎರಡು ಧೃವಗಳ  ಇರುವಿಕೆಯ ಒತ್ತಡವನ್ನು ಸೂಚಿಸುವಂತಿದೆ. ಹೀಗಿರುವಲ್ಲಿ ಕಾಲದೇಶಗಳ ಸಾಂದರ್ಭಿಕ ಒತ್ತಡಗಳು, ಸಂಸ್ಕೃತಿ ಮತ್ತು  ಸಮಾಜದ ಪುನಾರಚನೆಯನ್ನು ಮಾಡುವಂತಹ ಒಳನೋಟಗಳ  ಹುಡುಕಾಟದಲ್ಲಿರುತ್ತ ವೈರುಧ್ಯಗಳ ಸ್ಥಿತಿಯನ್ನು  ತಮ್ಮ ತಮ್ಮ ನೆಲೆಗಟ್ಟಿನಲ್ಲಿ ಅನುಸಂಧಾನ ಮಾಡುವ ಸಾಧ್ಯತೆಗಳಿರುತ್ತವೆ. ಸಂಸ್ಕೃತಿ ಪಠ್ಯಗಳಲ್ಲಿರಬಹುದಾದ  ಬಹುಮುಖತ್ವನ್ನು ಕಡೆಗಣಿಸದೆ, ಬೇರೆ ಬೇರೆ ನೆಲೆಗಳಿಂದ ಪಠ್ಯವನ್ನು ನೋಡುವುದರಿಂದ ಆದರ ಅರ್ಥ ಮತ್ತು ಸಮಕಾಲೀನ ಸಂದರ್ಭಕ್ಕೆ ಒಗ್ಗುವ ಗುಣಗಳನ್ನು ವ್ಯಾಪಕವಾಗಿ ಹಿಗ್ಗೆಸಿಕೊಳ್ಳುವ ಆವಕಾಶಗಳು ಇರುತ್ತವೆ.  ಪುನರ್ ಪರಿಶೀಲನೆಯ ಕ್ರಮಗಳಾದರೋ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳ ಕಾರಣಗಳಿಂದಲೇ ಪ್ರೇರಿತವಾಗುತ್ತವೆಯಲ್ಲವೆ? ಈ ಹಿನ್ನೆಲೆಯಲ್ಲಿ ‘ಗೋವಿನ ಹಾಡು’ ಕಥನವು ಬೇರೆ ಬೇರೆ ನೆಲೆಗಳಿಂದ ವಿಶ್ಲೇಷಣೆಗೊಳಪಡುತ್ತಾ ಬಂದಿರುವುದು ಗಮನಾರ್ಹ. ಓದುಗರ ಓದು ಕಾಲದೇಶಗಳ ಒತ್ತಡಗಳಿಗೆ ಪಕ್ಕಾಗಿ ತಮ್ಮದೇ ಆದ  ಧೊರಣೆಗಳನ್ನು ಹೊಂದಿರುವ ಸಾಧ್ಯತೆಗಳನ್ನೂ ಈ ಕಥನ ಹೇಳುತ್ತ ಇರುವುದು ಕುತೂಹಲ ಹುಟ್ಟಿಸುತ್ತದೆ.

ಸಾಮಾನ್ಯವಾಗಿ ಮೊದಲ ಓದಿನಲ್ಲಿ ‘ಗೋವಿನ ಹಾಡು’  ಒಂದು ಶಿಶು ಕವನವಾಗಿ ಓದಲ್ಪಡುತ್ತದೆ. ಹಸುವಿನ ಮೇಲೆ ಎರಗಲು ಬಂದ ಹುಲಿ ಕ್ರೂರಿಯಾಗಿದ್ದು, ಹಸುವಿನ ಸತ್ಯವೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಬಂಧು ಬಳಗ’ ಎಂಬ ನೀತಿಯಿಂದ ಆದರ ಮನಸ್ಸು, ಪರಿವರ್ತನಗೊಂಡು ಸಾಯುತ್ತದೆ. ನೀತಿ ಮತ್ತು ಕಲೆಯು ನೀಡಬಹುದಾದ ರಂಜನೆಯು ಮೊದಲ ಓದಿಗೆ ಸಿಕ್ಕುಬಿಡುತ್ತದೆ.

ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಪುನರ್ ಪರಿಶೀಲನೆಗಳು, ಪುನರ್ ಓದುಗಳು ಕಾವ್ಯದ ಅರ್ಥವನ್ನು ಸದಾ ನಿರಚನೆಗೊಳಿಸುತ್ತಿರುತ್ತವೆ ಮತ್ತು ಹೊಸ ಆರ್ಥಗಳನ್ನು ಸ್ಥಾಪಿಸುತ್ತಾ ಹೋಗುತ್ತವೆ. ಸಾಂಸ್ಕೃತಿಕ ಪಲ್ಲಟಗಳ ಕಾಲದಲ್ಲಿಯಂತೂ ಈ ಪ್ರಕ್ರಿಯೆ ಸ್ಫೋಟಕವೆಂಬಂತೆ ಘಟಿಸುತ್ತಾ ಇರುತ್ತದೆ.  ಸ್ಥೂಲವಾದ ಆರ್ಥ ಆನೇಕ ಸ್ತರಗಳಲ್ಲಿ ಬಿಚ್ಚಿಕೊಳ್ಳಲಾರಂಭಿಸುತ್ತದೆ. ಕಾವ್ಯದ ಸಾಲುಗಳಲ್ಲಿರುವ ಮೌನದ ದನಿ, ನಿರೂಪಣಾ ದನಿಯ ಸೂಕ್ಷ್ಮ ಆಭಿವ್ಯಕ್ತಿಯ ಕಾಕು, ಮತ್ತು ಕೇಂದ್ರಗಳ ಬದಲಾವಣೆ (ಆಂದರೆ ಹುಲಿ- ಹಸು,  ಹಸು-ಹುಲಿ ಹೀಗೆ ಮಾಡಿಕೊಂಡಾಗ) ಇತ್ಯಾದಿಗಳು ಬೇರೆ ಆಯಾಮಗಳನ್ನು ಕೊಡುವ ಸಾಧ್ಯತೆಗಳಿರುತ್ತವೆ. ಆಗ ಕಥೆ ಹೊಸದಾಗಿ ಪ್ರಾರಂಭವಾಗುವಂತೆ ಕಾಣುತ್ತದೆ.

ಗೋವಿನ ಹಾಡನ್ನು ಓದುವ ಹೊತ್ತಿನಲ್ಲೇ ಆದಕ್ಕೆ ಸುದೀರ್ಘವಾದ ಓದಿನ ಇತಿಹಾಸ ಇದೆ ಎನ್ನುವುದನ್ನು ಗಮನಿಸಬೇಕು. ಕನ್ನಡ ಸಂಸ್ಕೃತಿಯ ಪಠ್ಯ ಎಂದು ಪರಿಗಣಿಸಲಾಗಿರುವ ಕಥನ ಇದಾಗಿರುವುದರಿಂದ ಪ್ರತಿಯೊಂದು ಓದಿಗೂ ಆಯಾ ಕಾಲದ ಸಾಮಾಜಿಕ ಸಾಂಸ್ಕೃತಿಕ ಒತ್ತಡಗಳಿವೆ.  ಹಸುವನ್ನು ಕೇಂದ್ರವಾಗಿರಿಸಿಕೊಂಡ ಓದುಗಳು, ಹುಲಿಯನ್ನು ಕೇಂದ್ರವಾಗಿರಿಸಿಕೊಂಡ ಓದುಗಳು ಎಂದು ಅವನ್ನು ಸ್ಥೂಲವಾಗಿ ವಿಭಜಿಸಬಹುದಾದರೆ, ಪ್ರತಿಯೊಂದು ಓದಿಗೂ ನಾನು ಮೇಲೆ ಹೇಳಿದ ಕಾರಣಗಳಿರುವುದು ಸ್ಪಷ್ಟ.  ಹುಲಿ-ಹಸುವಿನ ಆದ್ಯತೆಗಳನ್ನು ಮಾಡಿಕೊಳ್ಳುವುದರ ಮೂಲಕವೇ ಒಂದು ತಾತ್ವಿಕ ನಿಲುವನ್ನು ಪ್ರತಿಪಾದಿಸುವ ಯತ್ನಗಳು ನಡೆದಿರುತ್ತವೆ.  ಈ ಕಾರಣದಿಂದಲೇ ಓದುಗಳನ್ನು ಪ್ರಭಾವಿಸಿರುವ ಆಂಶಗಳಲ್ಲಿ ಒತ್ತಾಯ ಮತ್ತು ರಾಜಕೀಯ ಪ್ರೇರಣೆಗಳು ಎದ್ದು ಕಾಣುತ್ತದೆ.

ಪುಣ್ಯಕೋಟಿಯನ್ನು ಕೇಂದ್ರವಾಗಿಟ್ಟುಕೊಂಡು ಓದುವ ಓದಿನಲ್ಲಿ ಪುತಿನ ಆ ಕಥನದ ಮೌಲ್ಯವಿವೇಚನೆ ಮಾಡುತ್ತಾರೆ.  ಆ ಕಥಾಸಂವಿಧಾನದಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಅಂಶಗಳನ್ನು ಗುರುತಿಸಲು ಬಯಸುತ್ತಾರೆ.  ಗಾಂಧೀಜಿ ಬಳಸಿದ ಯಶಸ್ವೀ ಮಾದರಿಗಳಲ್ಲಿ ಅಹಿ೦ಸೆ ಮತು ಸತ್ಯಾಗ್ರಹಗಳು ಮುಖ್ಯವಾದವು. ಹಿಂಸೆಯು ಆಹಿಂಸೆಯ ಪ್ರತಿರೋಧದಿಂದ ದಮನಗೊಳ್ಳುತ್ತದೆ ಹಾಗೂ ತನ್ನನ್ನು ತಾನು ಹಿಂಸೆ ಮಾಡಿಕೊಳ್ಳುವ ಕ್ರಮವು ಹಿಂಸೆಯ ಜಿಗುಟುತನವನ್ನು ಕಡಿಮೆ ಮಾಡುತ್ತದೆ. ಇದನ್ನು ಗಾಂಧಿ ಸೌಮ್ಯ ಮನಃಪರಿವರ್ತನಾ ವಿಧಾನವಾಗಿ ಬಳಸಿದರು.  ಆಧ್ಯಾತ್ಮಿಕ ಮೌಲ್ಯಗಳಾಗಿರುವ ಇವನ್ನು ಅವರು ರಾಜಕೀಯ ಮೌಲ್ಯಗಳನ್ನಾಗಿ ಪರಿವರ್ತಿಸಿಕೊಂಡರು. ಇದರಿಂದ ಅಹಿಂಸೆಯ ಮತ್ತು ಸತಾಗ್ರಹದ ಮೌಲ್ಯಗಳು ಸಾಮಾಜಿಕ ಜೀವನದ ಪರಿಧಿಯನ್ನು ಹೆಚ್ಚಿನ ವ್ಯಾಪ್ತಿಯನ್ನು ಪಡೆದುಕೊಂಡವು. ಇಲ್ಲಿ ಒಂದು ಆಂಶ ಗಮನಿಸಬೇಕು. ಅದೆಂದರೆ, ಸ್ವಯಂಹಿಂಸೆ ಮತ್ತು ಸತ್ಯಾಗ್ರಹಗಳ ಅಹಿಂಸಾ  ನಿಲುವುಗಳನ್ನು ಗಾಂಧೀಜಿ ರಾಜಕೀಯ ಶಸ್ತ್ರಗಳಾಗಿ ಬಳಸುತ್ತಿದ್ದ ಸಂದರ್ಭದಲ್ಲಿಯೇ ಅವರ ಸಮಕಾಲೀನರಲ್ಲಿ ಹಲವರು ಉಗ್ರಗಾಮಿ ನಿಲುವುಗಳನ್ನು ಇಟ್ಟುಕೊಂಡು ಹಿಂಸಾತ್ಮಕ  ಧೋರಣೆಗಳಿಂದ ಹಕ್ಕೊತ್ತಾಯ ಮಾಡುತ್ತಿದರು.  ಅವರ ಹೋರಾಟಗಳು ಯಶಸ್ವಿಯಾದುದು ಹಿಂಸೆಯನ್ನು ಅದರ ವಿರೋಧಿ ಭಾವದಿಂದ ಎದುರುಗೊಂಡಿದ್ದರಿಂದಲೇ.  ಪುತಿನ ಆವರಿಗೆ ಈ ಸಾರ್ಥಕತೆಯು ಸೂಕ್ತವಾಗಿದೆ. ಅವರ ಮುಂದೆ ಇದ್ದ ಗಾಂಧೀ ಮಾರ್ಗದ ಸತ್ಯಾಗ್ರಹ ಮತ್ತು ಸಜ್ಜನಿಕೆಯ ವಿಧಾನಗಳು ಪುತಿನ ಆವರಿಗೆ  ಮುಖ್ಯವಾಗಿರುವುದರಿಂದ ಹಸುಕೇಂದ್ರಿತ  ನೋಟವು ಪ್ರಸ್ತುತವಾಗಿದೆ. ಸತ್ಯಕ್ಕಾಗಿ ನಿಲ್ಲುವ ಹಸು, ಹುಲಿಯ ಮನಸ್ಸು ಪರಿವರ್ತನೆ ಮಾಡಬಲ್ಲ ಚೈತನ್ಯ ಹೊಂದಿರುತ್ತದೆಂದು ಆವರು ಭಾವಿಸುತ್ತಾರೆ. ಆಲ್ಲದೆ ಪುನರುಜ್ಜೀವನಕಾಲದ ಮೌಲ್ಯಗಳಿಂದಾದ ಆಧ್ಯಾತ್ಮಿಕ ಶಕ್ತಿಯು ಜೀವವನ್ನು ವಿಶ್ವಪ್ರಜ್ಞೆಗೆ ಮುಟ್ಟಿಸುವ ಸತ್ಯವುಳ್ಳದ್ದು ಎಂದು ಪುತಿನ ಗುರುತಿಸುತ್ತಾರೆ.  ಅ ಮೂಲಕ ರಾಜಕೀಯ ಆಶಯಗಳ ರಾಮರಾಜ್ಯದ ಪರಿಕಲ್ಪನೆಯತ್ತ ಪಠ್ಯದ ಓದನ್ನು ತಂದು ನಿಲ್ಲಿಸುತ್ತಾರೆ. ಅವರ ಮಾತುಗಳಲ್ಲಿ ಹೀಗೆ ವ್ಯಕ್ತವಾಗಿದೆ: “…ಆದು ಅಹಿಂಸೆಯ ಶುದ್ಧ ಮತ್ತು ಆವಿರ್ಭೂತವಾಗಲಿರುವ ಸ್ಥಿತಿ-ಮಾನವ ಇನ್ನೂ ಪಡೆದುಕೊಳ್ಳಬೇಕಾದುದು, ಬಹುಶಃ ಗಾಂಧೀಜಿ ಕನಸು ಕಂಡ ಸ್ಥಿತಿ. ವ್ಯಕ್ತಿ ಪ್ರಜ್ಞೆ ಮತ್ತು ವ್ಯಕ್ತಿತ್ವದ ಪ್ರತಿಭಟನೆಯನ್ನು ದಾಟಿ ವಿಶ್ವಪ್ರಜ್ಞೆಗೆ ಏರಲಿರುವ ದಿವ್ಯಪ್ರಯತ್ನ… ತಮ್ಮನ್ನು ಹಿಂಸಿಸುವುದರ ಬಗೆಗೆ ಇಂತಹ ಸೌಮ್ಯಸುಂದರ ನಡತೆ ಹುತಾತ್ಮರಿಗಿರುವುದು  ಆಪೂರ್ವ… ” (ಪುತಿನ ಸಮಗ್ರ ಗದ್ಯ: ಪು೮೬೧-೨)

ಹಸುಕೇಂದ್ರವನ್ನು ಬದಲಾಯಿಸಿ ಹುಲಿಕೇಂದ್ರದ ನೆಲೆಯಲ್ಲಿ ಪಠ್ಯವನ್ನು ಓದುವಾಗ ಧೋರಣೆಗಳು ಭಿನ್ನವಾಗುತ್ತದೆ. ಈ ದೃಷ್ಟಿಕೋನದಿಂದ ಕಾಣುವ ರಾಜಕಾರಣವು ಸಾಂಸ್ಕೃತಿಕವಾದುದು. ಒಂದು ಸಂಸ್ಕೃತಿಯು ಉಜ್ವಲ ಎನ್ನುವಂತೆ ಮಾಡಿ, ಇನ್ನೊಂದು ಸಂಸ್ಕೃತಿಯನ್ನು ಕೀಳುಗಳೆದು ನೋಡುವ ವಿಧಾನ ಎನ್ನಿಸುವಂತೆ ಮಾಡುತ್ತದೆ. ಮೊಗಳ್ಳಿ ಗಣೇಶ ಮತ್ತು ಹಿರೇಮಠ ಆವರುಗಳು ಎತ್ತಿಕೊಳ್ಳುವ ಚರ್ಚೆಯ ವಿಷಯ ಇದು.  ಹಸು ಗುಂಪಿನ ಹಸಿವನ್ನು ಮುಂದು ಮಾಡುವ ವಾದವು ಹುಲಿಯ ಹಸಿವನ್ನು ಪರಿಗಣಿಸುವುದಿಲ್ಲವೇಕೆ?  ಎಂಬುದು ಪ್ರಶ್ನೆಯಾಗುತ್ತದೆ.  ಹುಲಿಯನ್ನು ಹಸುವನ್ನು ತಿನ್ನಲು ಬಯಸಿದ್ದೇ ಆಪರಾಧ ಎನ್ನುವಂತೆ ಕೊನೆಯಲ್ಲಿ ನೆಗೆದು ಬಿದ್ದು ಸಾಯುವಂತೆ ಮಾಡುವುದೇಕೆ?  ಹಸು-ಹುಲಿಗಳೆರಡೂ ದಟ್ಟಕಾನನದಲ್ಲಿ ವಾಸಿಸುವ ಪ್ರಾಣಿಗಳು.  ಹುಲಿಯ ಆಹಾರ ಹಸು.  ಹಸುವಿನ ಸಂತತಿಯನ್ನು ಉಳಿಸುವ ಭರದಲ್ಲಿ ಹುಲಿ ತನ್ನ ಪ್ರಕೃತಿ ಸಹಜ ಆಹಾರದ ಆಯ್ಕೆಯನ್ನು ಬಿಟ್ಟುಕೊಡುವ ಸ್ಥಿತಿ ಉಂಟಾಗುವುದು ಸಾಂಸ್ಕೃತಿಕ ರಾಜಕಾರಣದ ಧೋರಣೆಗಳಿಂದ ಮತ್ತು ರಾಜಕಾರಣದ ಹುನ್ನಾರಗಳು ನ್ಯಾಯ ನಿರ್ಣಯವನ್ನು ಏಕಪಕ್ಷೀಯವಾಗಿ ಮಾಡಲೆತ್ನಿಸುತ್ತಾ ತಮ್ಮದನ್ನು ಹೇರಲು ಬಯಸುತ್ತಿವೆ.  ಅಲ್ಲಿರುವ ನ್ಯಾಯ ನಿರ್ಣಯಕ್ಕೆ ಪ್ರಮಾಣಗಳು ದೊರೆಯುತ್ತಿರುವುದು ಹಸುವಿನ ಕಡೆಯಿಂದ ಹೊರತಾಗಿ ಹುಲಿಯ ಕಡೆಯಿಂದಲ್ಲ. ಹಸುವಿಗೆ ಕರುಣೆ ತೋರಲು ಭೂಮಿಕೆ ಸಜ್ಜಾಗಿರುವಂತೆ ಸತ್ಯದ ಬಗೆಗಿನ ಆದರ ಪ್ರೇಮವನ್ನು ಹೇಳಲಾಗಿದೆ.  ಇದು ಒತ್ತಾಯವೂರ್ವಕವೆನಿಸುತ್ತದೆ.  ಹುಲಿ ಕೇಂದ್ರಿತ ಈ ದೃಷ್ಟಿಕೋನವು ಹೊಳೆಯಿಸುವ ಪ್ರಧಾನ-ಆಧೀನ ಸಂಸೃತಿಗಳ ಸಂಘರ್ಷಮಯ ಸ್ಥಿತಿ ಮತ್ತು ಒಳಗೆ ಹುದುಗಿರುವ ರಾಜಕಾರಣವನ್ನು ಬಯಲು ಮಾಡುವ ಆಶಯ- ಇವು ಗೋವಿನ ಹಾಡು ಕಥನದ ವಿಕಲ್ಪಗಳನ್ನು ಸ್ಪಷ್ಟವಾಗಿಯೇ ಹೊರತೋರುವಂತೆ ಮಾಡುತ್ತಿವೆ.

ಮತ್ತೆ ಹಸುಕೇಂದ್ರಿತ ದೃಷ್ಟಿಕೋಣಕ್ಕೆ ಬರೋಣ. ಹಸು-ಹುಲಿಗಳನ್ನು ಲಿಂಗ ರಾಜಕಾರಣದ ಸಂದರ್ಭ <ಲನ್ಗ್=ಎನ್ಗ್|ಫ಼ೊನ್ತ್=”ಆರಿಅಲ್”>(ಚೊನ್ತೆ಼ತ್)<ಲನ್ಗ್=ಕನ್|ಫ಼ೊನ್ತ್=”ಭ್ರ್‍ಃ ಖನ್ನದ”>ದಲಿಟ್ಟು ನೋಡುವಾಗ ಹಸುವಿನ ಕಥನ ಒಂದು ಹೆಣ್ಣಿನ ನೆಲೆಯದ್ದಾಗಿ, ಸ್ತ್ರೀತ್ವ ತಾಯ್ತನ ಮತ್ತಿತರ ಸ್ತ್ರೀ ಸಂಬಂಧಿತ ಆಂಶಗಳನ್ನು ಹೊಳೆಯಿಸುವುದಾಗುತ್ತದೆ.  ಪಠ್ಯದ ಓದಿನಲ್ಲಿ ಹೆಣ್ತನವನ್ನು ಕುರಿತ ಪೂರ್ವಾಗ್ರಹಗಳು ಇರುವಂತೆಯೇ ಹೆಣ್ಣಿನ ವಿಶಿಷ್ಟ ಜೈವಿಕತೆಯ ನೆಲೆ ಮತ್ತು ಮನಸ್ಸಿನ ಸಂಕೀರ್ಣಲಯಗಳನ್ನು ಕುರಿತ ದನಿಗಳೂ ಕೇಳುತ್ತವೆ. ಲಿಂಗರಾಜಕಾರಣದ ಸಿಕ್ಕುಗಳನ್ನು ಬಿಡಿಸಿಕೊಂಡು, ಸ್ತ್ರೀತ್ವದ ಬಗೆಗೆ, ಮಾತೃತ್ವದ ಬಗೆಗಿನ ದನಿಗಳನ್ನು ಗುರುತಿಸಿಕೊಳ್ಳಬೇಕು. ಇದು ಕಷ್ಟಸಾಧ್ಯವಾದ ಕೆಲಸ.  ಆದರ ಪ್ರಸ್ತುತ ಸಮಕಾಲೀನ ಸಾಮಾಜಿಕ ಸಂದರ್ಭಗಳ
ಕಾಲದಲ್ಲಿಯೂ ಸ್ತ್ರೀ ಆಸ್ತಿತ್ವವನ್ನು ಮರುಪರಿಶೀಲನೆಗೆ ಬಲಪಡಿಸುತ್ತ, ನಿಜವಾದುದನ್ನು ಸ್ಥಾಪಿಸಬೇಕಾದ ಸವಾಲುಗಳು ನಮ್ಮ ಮುಂದೆ ಇದ್ದೇ ಇರುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ಹಾಗಾಗಿ ಗೋವಿನ ಹಾಡು ಕಥನವನ್ನು ಸೂಕ್ಷ್ಮಸ್ತರಗಳುಳ್ಳ ಪಠ್ಯವನ್ನಾಗಿ ನೋಡುವ ಆವಶ್ಶಕತೆ ಇದೆ ಎಂದು ಹೇಳಬಹುದು.  ಈ ಹಿನ್ನೆಲೆಯಲ್ಲಿ ಪಠ್ಯವು ಧ್ವನಿಸುವ ರಾಜಕಾರಣದ ಅಂಶಗಳನ್ನು ಮೊದಲು ಚರ್ಚಿಸಿ, ನಂತರ ಆದರೊಳಗಿರುವ ಮೌನದನಿಗಳಲ್ಲಿ ಅಭಿವ್ಯಕ್ತವಾಗುವ ಸ್ತ್ರೀವಿಶಿಷ್ಟತೆಯನ್ನು ಗಮನಿಸುವ ಯತ್ನವನ್ನಿಲ್ಲಿ ಮಾಡಲಾಗಿದೆ.

ಕಥನವು ಆರಂಭವಾಗುವುದು ದಟ್ಟಕಾನನದ ವರ್ಣನೆಯಿಂದ. ಅದಕ್ಕೂ ಮೊದಲು `ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯ’ ಪ್ರಸ್ತಾಪ ಇದೆ. ಹತ್ತಾರು ಪ್ರಾಣಿಗಳು ಸ್ವಚ್ಛಂದವಾಗಿ ಕಾನನದಲ್ಲಿವೆ.  ಈ ಪರಾಧೀನತೆಯನ್ನು ಒಪ್ಪಿಕೊಂಡು ಹೆಣ್ಣ ಹೆಸರುಗಳನ್ನು ಹೊತ್ತ ಗಂಗೆ, ಗೌರಿ, ತುಂಗಭದ್ರೆ, ಅಂಗನಾಮಣಿಯರೆಲ್ಲ ಇದ್ದಾರೆ.  ಈ ವಿರೋಧಾಭಾಸದೊಂದಿಗೆ ಕಥನ ಪ್ರಾರ೦ಭವಾಗುತ್ತದೆ. ಆನಂತರ ಹಾಲು ಕರೆಯುವ ಕ್ರಿಯೆಯ ವರ್ಣನೆ ಇದೆ. ಎಲ್ಲಾ ಹಸುಗಳನ್ನು ಪ್ರೀತಿಯಿಂದ ಕರೆಯುವ ಗೊಲ್ಲನ ಮುಂದೆ ಹಾಲು `ಚೆಲ್ಲಿ ಸೂಸಿ ಆಲ್ಲಿ ತುಂಬಿತು ಬಿಂದಿಗೆ’ ಎಂದು ಹಾಲು ತುಳುಕುತ್ತದೆ.  ಹಾಲನ್ನು ಹಕ್ಕಾಗಿ ಮಾಡಿಕೊಳ್ಳುವ ಗೊಲ್ಲನ ಕ್ರಿಯೆ ಶೋಷಣೆಯಂತೆ ಕಾಣಿಸದೇ ಇರುವಂತೆ ಪಠ್ಯದ ಕಥನ ವಿವರಗಳನ್ನು ವಿಜೃಂಭಿಸುವಂತೆ ಮಾಡುತ್ತದೆ.

ಪುತಿನ ತಮ್ಮ ಪ್ರಬಂಧದಲ್ಲಿ ಕಾಣುವಂತೆ ಗೋವಿನ ಕತೆಯು ಹೃದಯಸ್ಪಶಿಯಾಗಿದ್ದು, ಮಾತೃಪ್ರೇಮ ಮತ್ತು ವಾತ್ಸಲ್ಯ ಮುಂತಾದ ಮೂಲಭಾವಗಳಿಂದ ಸೊಗಸಾಗಿ ಚಿತ್ರಿಸಲ್ಪಟ್ಟಿವೆ. ಈ ಗುಣಗಳನ್ನು ಮನುಷ್ಯತ್ವಕ್ಕೇ ಆನ್ವಯಿಸುವ ಗುಣಗಳಾಗಿ ನೋಡದೆ ಹೆಣ್ಣಿನ, ಅವಳ ತಾಯ್ತನದ ಸ್ಥಿತಿಗೆ ಅಂಟಿಸುವುದು ಲಿಂಗರಾಜಕಾರಣದ ಪರಿಯೇ ಆಗುತ್ತದೆ.  ಒಂದು ರೀತಿಯಲ್ಲಿ ಇದೊಂದು ಸೀಮಿತಗೊಳಿಸುವ ಧೋರಣೆ.  ಹೆಣ್ತನ ಎಂದ ಕೂಡಲೇ ಕೆಲವೇ ಕೆಲವು ಗುಣಗಳಿಗೆ ಕಟ್ಟಿಹಾಕುವ ಹುನ್ನಾರವನ್ನು ನೋಡಬೇಕಾಗುತ್ತದೆ.

ಕಥನದ ತುಂಬ ಬರುವ ಜೈವಿಕ ಕುರುಹುಗಳನ್ನು ಸೂಚಿಸುವ ಪದಗಳಿರುವುದು ಗಮನಕ್ಕೆ ಬರುತ್ತದೆ.  ಗೋವು, ತಾಯಿ, ಮೊಲೆ- ಈ ಕುರುಹುಗಳು ಜೈವಿಕ ನಿರ್ದೇಶನಗಳು.  ಕಥನದ ಮೂಲ ಕ್ರೈಸಿಸ್ ನಿಂತಿರುವುದೇ ಪುಣ್ಯಕೋಟಿ ತನ್ನ ಮಗುವಿಗೆ ಹಾಲೂಡಿಸಿ ಬರುವೆ ಎಂದು ಕೇಳಿಕೊಳ್ಳುವ ಅಂಶದಲ್ಲಿ.  ಮಗು ಹಾಲಿಗಾಗಿ ಕಾಯುತ್ತ ಇದೆ.  ಈ ಜೈವಿಕ ಹೊಣೆಗಾರಿಕೆಯು ಹೆಣ್ಣಿನ ಮನಸ್ಸಿನಲ್ಲಿ ಸದಾ ಜಾಗ್ಯತವಾಗಿರುವಂತೆ ಮಾಡುವ ಒತ್ತಡಗಳನ್ನು ನೋಡಬೇಕು.  ಹಾಗೆಯೇ ತಾಯ್ತನದ ವೈಭವೀಕರಣವನ್ನು ಮಾಡುವ ಆಂಶಗಳನ್ನು ಗಮನಿಸಬೇಕು.

ಪುಣ್ಯಕೋಟಿ ಪ್ರವೇಶವಾಗುವುದು ಒಂದು ತೀವ್ರ ಸನ್ನಿವೇಶದಲ್ಲಿ.  ಹಸುಗಳೆಲ್ಲವೂ ಕೈ ತಪ್ಪಿ ಹೋಗಿವೆ ಎಂದು ಹುಲಿಯು ಆತಂಕ ಮತ್ತು ಚಡಪಡಿಕೆಯಲ್ಲಿರುವಾಗ ಪುಣ್ಯಕೋಟಿ ಬರುತ್ತಿದೆ:
ಕನ್ನೆಮಗನ ಪಡೆದ ಪಶುವು
ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಯೆಂಬ ಪಶುವು
ಚೆನ್ನಾಗಿ ತಾ ಬರುತ್ತಿರೆ.

ಹಸಿದ ಹೆಬ್ಬುಲಿಗೆ ಎದುರಾಗಿ ಕಂದನ ಕನಸು ಕಾಣುವ ತಾಯಿಯ ಪ್ರವೇಶವಾಗುವುದೇ ಒಂದು ಸಾಂದರ್ಭಿಕ ಕರುಣೆಯನ್ನು ಹುಟ್ಟಿಹಾಕುವಂತದ್ದು.  ಹಸಿದ ಹುಲಿಯು ಹಾರಿ ಒಯ್ಯನೆ ತಿನ್ನುವೆನೆಂದು ಹೇಳುವಾಗ, ಪುಣ್ಯಕೊಟಿಯ ಕೊನೆಯ ಬೇಡಿಕೆ ಹೀಗಿದೆ:
ಒಂದು ಬಿನ್ನಹ ಹುಲಿಯರಾಯನೆ
ಕಂದನೈದನೆ ಮನೆಯ ಒಳಗೆ
ಒಂದು ನಿಮಿಷದಿ ಮೊಲೆಯಕೊಟ್ಟು
ಬಂದು ನಾನಿಲ್ಲಿ ನಿಲ್ಲುವೆ …..

ಸಾವಿನ ಬಾಗಿಲ ಬಳಿ ನಿಂತ ಸನ್ನಿವೇಶದಲ್ಲಿಯೂ ಹಸುವು ನೆನೆಯುತ್ತಿರುವುದು ತನ್ನ ಹಾಲುಕೊಡುವ ಹೊಣೆಗಾರಿಕೆಯನ್ನು!  ತನ್ನ ಕೊನೆಯ ಕರ್ತವ್ಯ ಅದೆಂದು ಭಾವಿಸಿದಂತೆ ಹುಲಿಯಲ್ಲಿ ಪ್ರಾಣದ ಅನುಮತಿ ಬೇಡುತ್ತಿದೆ.  ಇದಕ್ಕಾಗಿ ಸತ್ಯದ ಮಾತನ್ನೂ ಮುಂದಿಡುತ್ತದೆ. ಇದರೊಂದಿಗೆ ತಾಯ್ತನವನ್ನು ಸತ್ಯದ ಮಾತಿನೊಂದಿಗೆ ಬೆಸೆದು ಸ್ಥಿರಗೊಳಿಸುತ್ತಿದೆ.  ಹಾಲುಕೊಡುವ, ಕಂದನನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ತಾಯ್ತನಕ್ಕೆ ಬಾಧ್ಯಸ್ತವಾಗಿಸುವುದು ಜೈವಿಕ ಒತ್ತಡ.  ಅದನ್ನು ಮಮತೆ, ಕರುಣೆಯ ಗುಣಗಳಿಂದ ಮಾತೃವಾತ್ಸಲ್ಯವನ್ನು ತೋರಬೇಕಾದ ಒತ್ತಡಗಳಲ್ಲಿ ಇರಿಸುವುದು ಧೋರಣೆಯ ಸಂಕೇತ.  ಪುಣ್ಯಕೋಟಿಯ ಕಂದ ಕೇಳುವ ಪ್ರಶ್ನೆಯನ್ನು ನೋಡಿ, `ಆರ ಮೊಲೆಯನು ಕುಡಿಯಲಮ್ಮ?  ಆರ ಸೇರಿ ಬದುಕಲಮ್ಮ?’  ಎಂದು ತಾಯಿಯನ್ನು ಕರು ಜೈವಿಕ ಪೂರೈಕೆಯ ವಸ್ತುವಾಗಿ ನೋಡುತ್ತಲಿದೆ.

ಈ ಬಗೆಯ ಸ್ಥಿರೀಕರಣಗಳು ಮತ್ತು ಹೊಣೆಗಾರಿಕೆಗಳನ್ನು ರಾಜಕಾರಣದ ಅಂಶಗಳೆಂಬಂತೆಯೇ ನೋಡಬೇಕಾಗುತ್ತದೆ.  ತಾಯ್ತನ ಮತ್ತು ಹೆಣ್ತನಗಳಿಗೆ ಕೆಲವೇ ಕೆಲವು ಸ್ಥಿರಗೊಂಡ ಭಾವಗಳಿಲ್ಲ.  ಅವನ್ನು ಮೀರಿ ಆವು ಕ್ರಿಯಾಶೀಲ ಸತ್ಯಗಳನ್ನು ಹೊಂದಿರುತ್ತವೆ.  ವ್ಯಕ್ತಿ ವಿಶಿಷ್ಟತೆಯು ಚೌಕಟ್ಟುಗಳನ್ನು ಮೀರಿ ಬೆಳೆಯುವುದರಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ.  ಈ ನಿಟ್ಟಿನಲ್ಲಿ ಪಠ್ಯದ ಓದನ್ನು ಸ್ವಲ್ಪ ವಿಸ್ತರಿಸಿಕೊಂಡು ಆವರಣಗಳನ್ನು ಸರಿಸಿ ಓದಿದರೆ, ತಾಯ್ತನದ ಸಂಕೀರ್ಣಲಯಗಳನ್ನು ಕಾಣಬಹುದು.

ಪುಣ್ಯಕೋಟಿಯು ತಾಯಿಯೂ ಹೌದು, ಹೆಣ್ಣೂ ಹೌದು.  ಅದು ಸ್ವಯಂ ಪೂರ್ಣತೆಯನ್ನು ಸಾಧಿಸಿಕೊಳ್ಳುವುದು ಈ ವ್ಯಕ್ತಿತ್ವಗಳಿಂದಲೇ.  ಅದನ್ನು ದುರ್ಬಲ ಶಕ್ತಿಯೆಂದು ತೋರುವ ಕರುಣಾಜನಕ ಪ್ರಸಂಗಗಳನ್ನು ಮೀರಿ ಕಥನದೊಳಗಿನ ಮೌನದನಿಗಳು ಬೇರೇನನ್ನೋ ಸೂಚಿಸುತ್ತಿವೆ.

ಆದಿಮ ಸಮಾಜಗಳಲ್ಲಿ ಪ್ರಚಲಿತವಿತ್ತು ಎಂದು ಹೇಳಲಾದ ಮಾತೃ ಪ್ರಧಾನ ಸಂಸ್ಕೃತಿಯನ್ನು ಪುನಃ ಆಧ್ಯಯನ ಮಾಡಲಾಗುತ್ತಿದ್ದು, ಫಲವಂತಿಕೆಯ ಸಂಕೇತವಾದ ಸಮೃದ್ದಿ ಮತ್ತು ವ್ಯಕ್ತಿತ್ವದ ಸ್ವಯಂಪೂರ್ಣತೆಯನ್ನು ವಿಶೇಷವಾಗಿ ಗುರುತಿಸಲಾಗುತ್ತಿದೆ.  ದೇಬಿಪ್ರಸಾದ್ ಚಟ್ಟೋಪಾಧ್ಯಾಯ, ಕೋಸಾಂಬಿಯಂತಹ ಭೌತವಾದಿ ಚಿಂತಕರು ಚಾರಿತ್ರಿಕವಾಗಿ ಮಹತ್ವ ಪಡೆಯಬಲ್ಲ ಆಂಶಗಳನ್ನು ಈ ನಿಟ್ಟಿನಲ್ಲಿ ತೋರಿಸಿದ್ದಾರೆ.  ಫಲವಂತಿಕೆಯ ಮಿಥಿಕಗಳು ಸಾರುವಂತೆ ಜೈವಿಕ ವಿಶಿಷ್ಟತೆಗಳು ಹೊರಗೆ ಕಾಣುತ್ತವೆ. ಶಕ್ತಿಸಾಮರ್ಥ್ಯಗಳು ಆನೂಹ್ಯವಾಗಿ ಬಲಗೊಂಡು ಗುಪ್ತಗಾಮಿನತ್ವದಿಂದ ಆಮೂರ್ತನೆಲೆಯಲ್ಲಿ ಪ್ರವಹಿಸುತ್ತಿರುತ್ತವೆ. ಹಲವಾರು ಜನಪದ ಕಾವ್ಯಗಳಲ್ಲಿಯೂ ಹೆಣ್ಣಿನ ಮತ್ತು ತಾಯ್ತನಗಳನ್ನು ಸಂಕೀರ್ಣನಿಲಯಗಳ ಸ್ವರೂಪದಲ್ಲಿ ಗ್ರಹಿಸಲಾಗಿದೆ. ಅಂದರೆ ಏಕಶಿಲಾರೂಪದ ಗ್ರಹಿಕೆಯಾಗಿ ಹೆಣ್ಣಿನ ತಾಯ್ತನವನ್ನು ನೋಡದೆ ಇರುವುದು.  ಸಾಕುವ, ಸಲಹುವ ಹೊಣೆಗಾರಿಕೆಗಳು, ಮೃದುತ್ವಗಳ ಆವರಣಗಳನ್ನು ಮೀರಿ ಒಳಗಿನ ವ್ಯಕ್ತಿತ್ವದ ಸತ್ವವನ್ನು ನೋಡುವ ದಿಸೆಯಲ್ಲಿ ಲಂಕೇಶರ `ಅವ್ವ’ ಕವನದ ತಾಯಿಯ ಸ್ವರೂಪ ನಮಗೆ ಸಹಾಯ ಮಾಡೀತು.  ಬನದ ಕರಡಿಯಂತಹ, ಕಪ್ಪುನೆಲದಂತಹ ವ್ಯಕ್ತಿತ್ವದ ಚಹರೆಗಳು ತಾಯಿಯಲ್ಲಿ ಇರುವುದು ಸಹಜ ಎನ್ನಿಸುತ್ತದೆ.  ತಾಯ್ತನದಲ್ಲಿ ವಾತ್ಸಲ್ಯವು ಒಂದು ಮುಖ್ಯ ಭಾವವಾದರೆ, ಆದಕ್ಕೆ ಹಲವಾರು ಸಂಚಾರಿ ಭಾವಗಳಿರಬಹುದಾದ ಸಾಧ್ಯತೆಗಳನ್ನು ಹುಡುಕಬೇಕಾಗುತ್ತದೆ. ಈಗಾಗಲೇ ಹೇಳಿದಂತೆ ರಾಜಕಾರಣದ ವಾಸನೆಯುಳ್ಳ ಓದಿಗೆ ಲಭ್ಯವಾಗದ ಆನೇಕ ಮೌನದ ದನಿಗಳು ಪಠ್ಯದಲ್ಲಿ ಕಂಡುಬರುವುದನ್ನು ನಾವು  ಗುರುತಿಸಬಹುದು.

ಪುಣ್ಯಕೋಟಿ ಮೊದಲು ಪ್ರವೇಶವಾಗುವ ಹೊತ್ತಿಗೆ, ಹುಲಿಯ ಕ್ಕೆಯಿಂದ ಎಲ್ಲಾ ಹಸುಗಳು ತಪ್ಪಿಸಿಕೊಂಡು ಬಿಟ್ಟಿರುತ್ತವೆ. ಪುಣ್ಯಕೋಟಿ ಸಿಕ್ಕು ಬೀಳುವುದಕ್ಕೆ ಕಾರಣ ಅದು ತನ್ನ ಕಂದನನ್ನು ನೆನೆದುಕೊಂಡು ಬರುತ್ತಿರುವುದು.  ಹುಲಿಯು ಹಸುವನ್ನು ಅಡ್ಡಗಟ್ಟಿ ಹಸುವನ್ನು `ತಿನ್ನುವೆ’ ಎಂದಿತು, ಆದರೆ ತಿಂದೇ ಬಿಡುವುದಿಲ್ಲ.  ಪುಣ್ಯಕೋಟಿ ಆಗ ತನ್ನ ತಾಯ್ತನವನ್ನು ಬಳಸಿ ಹುಲಿಯ ಕ್ಕೆಯಿಂದ ಕ್ಷಣಕಾಲ ಪಾರಾಗಲು ಯತ್ನಿಸುತ್ತದೆ.  ಆದಕ್ಕಿಂತಲು ಮುಂಚೆ ಆದು ತನ್ನ ಉಳಿವನ್ನು ಎಷ್ಟು ಸಮರ್ಥವಾಗಿ ಪ್ರತಿಪಾದಿಸುತ್ತದೆ ಎಂಬುದನ್ನು ಕಾವ್ಯದಲ್ಲಿ ನೋಡಬೇಕು.
ಹಾಳು ಮಾಡುವ ಗರತಿಯಲ್ಲ
ಬೀಳು ಮಾಡುವ ಗೈಮೆಯಲ್ಲ …
ನಾನು ಮೆಟ್ಟಿದ ಭೂಮಿ ಬೆಳೆವುದು
ಶಾನೆ ಕ್ಷೀರವ ಕೊಡುವೆ ನಿತ್ಯವು …

ಇಲ್ಲಿರುವ ಪ್ರತಿ ಸಾಲೂ ತನ್ನ ಇರುವಿಕೆಯ ಗೌರವವನ್ನು ಎತ್ತಿ ಹೇಳುತ್ತಿದೆ. ಆದನ್ನು ಹುಲಿಗೆ ಮನದಟ್ಟು ಮಾಡಿ ತನ್ನ ಜೀವದ ಪರ ವಾದ ಮಾಡುವ ಹಸು ಹೇಳುತ್ತದೆ:
ಆಡವಿಯೊಳಗಣ ಹುಲ್ಲ ಮೇಯುವೆ
ಮಡುವಿಯೊಳಗಣ ನೀರ ಕುಡಿಯುವೆ.

ಹೀಗಿರುವಾಗ ನಿನ್ನದೇನು ಹಂಗು ಎಂದು ಹುಲಿಗೆ ಆದು ಪರೋಕ್ಷವಾಗಿ ಸವಾಲು ಹಾಕುತ್ತದೆ.  ಇದಾದ ನಂತರವೂ ಪೀಡಿಸುವ ಹುಲಿಗೆ, ತನ್ನ ತಾಯ್ತನದ ಗುರಾಣಿಯನ್ನೊಡ್ಡಿ ಸ್ವಲ್ಪಕಾಲವಾದರೂ ಪಾರಾಗಲು ಬಯಸುತ್ತಿದೆ.  ಹುಲಿಗೆ ಬೇಕಾದ ತನ್ನ ದೇಹವನ್ನು ತಾಯ್ತನದ ಮುಸುಕಿನಲ್ಲಿ ಮರೆಮಾಡಲು ಪ್ರಯತ್ನಿಸುತ್ತಿದೆ ಹಸು.  ಇದರಿಂದ ಹುಲಿಯ ಆವೇಗಕ್ಕೆ ತಾತ್ಕಾಲಿಕವಾದರೂ ತಡೆಯೊಡ್ಡಿದಂತಾಗಿದೆ.

ಸತ್ಯಾಗ್ರಹವನ್ನಿಟ್ಟುಕೊಂಡ ಹಸುವು ಹುಲಿಯು ಹತ್ತಿರ ಬರುತ್ತದೆ.  ತನ್ನ ದೇಹವನ್ನೊಪ್ಪಿಸಲು ಬಂದನೆಂದು ಹೇಳುತ್ತಾ, ಹುಲಿಯನ್ನು ಕರೆಯುತ್ತದೆ:
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಕೊಬ್ಬುಗಳಿವೆಕೊ
ಉಂಡು ಸಂತಸಗೊಂಡು ನೀ ಭೂ
ಮಂಡಲದೊಳು ಬಾಳಯ್ಯ

ಆರ್ಪಣೆಯ ಮಾತುಗಳೆಂಬಂತೆ ಕಾಣುವ ಈ ಮಾತುಗಳಲ್ಲಿ ದಾಳಿಯ ನೆರಳು ಇಣುಕುತ್ತಿದೆ!  ಹಸು ತನ್ನ ದೇಹವನ್ನು ಮುಂದೊಡ್ಡುತ್ತಾ, ಹುಲಿಯ ಮನಸ್ಸಿಗೆ ನಾಟುವಂತೆ ಹೇಳುತ್ತಿದೆ- ‘ನೀನು ಇದಕ್ಕೆ ತಾನೇ ಕಣ್ಣುಹಾಕಿದ್ದು, ಬಾ ತೆಗೆದುಕೋ’ ಎಂದು ಪದಗಳಲ್ಲಿ ದೇಹವನ್ನು ವಾಚ್ಯವಾಗಿ ಬಿಡಿಸಿ, ಬಿಡಿಸಿ ಇಡುತ್ತಿದೆ. `ಖಂಡ’, `ಕೊಬ್ಬು’, `ಮಾಂಸ’ ಪದಗಳನ್ನು ಹುಲಿಯ ಸ್ವರೂಪವನ್ನು ಚುಚ್ಚಲೆಂದೇ ಬಳಸುವಂತಿದೆ.  ಹುಲಿಯ ಮನಸ್ಸನ್ನು ಬೇಧಿಸುತ್ತಲೇ ಹುಲಿಯ ಸಾವನ್ನು ನೇತ್ಯಾತ್ಮಕವಾಗಿ ನಿರೀಕ್ಷಿಸುತ್ತಿದೆ, ಹಸು.  ತನ್ನ ಕುಲಕ್ಕೆ ಎರವಾಗಬಲ್ಲ ಹುಲಿಯ ಉಳಿವನ್ನು, ಹಾಗೇ ತನ್ನ ಉಳಿವಿನ ಸಮರ್ಥನೆಯನ್ನು ಏಕಕಾಲಕ್ಕೆ ಮುಂದುಮಾಡುತ್ತಿದೆ. ತಾಯ್ತನವನ್ನೇ ಮುಂದು ಮಾಡಿಕೊಂಡು ಕರ್ಣನಲ್ಲಿ ಜೀವಭಿಕ್ಷೆಗೆ ಬಂದ ಕುಂತಿಯು ಸಂಕೀರ್ಣ ವಕ್ತಿತ್ವವನ್ನು ತೋರುವಂತೆ, ಪುಣ್ಯಕೋಟಿ ತನ್ನ ದೇಹ ಮತ್ತು ತಾಯ್ತನಗಳಿಂದಲೇ ಉಳಿವಿನ ಪ್ರಶ್ನೆಯನ್ನು ಎದುರಿಸುತ್ತಿದೆ. ಆದು ಹುಡುಕುವ ಒಳದಾರಿಗಳಲ್ಲಿ ಆನೂಹ್ಯವಾದರೂ ಪ್ರಯೋಗಿಸಿ ಸವಾಲನ್ನು ಗೆಲ್ಲುವ ಚೈತನ್ಯ ಕಾಣುತ್ತದೆ.

ಹೀಗೆಂದು ಹೇಳುತ್ತಿರುವಾಗಲೇ ಹಸುವು ಒಡ್ಡಿದ ಸತ್ಯದ ಮಾತನ್ನು ಓರೆಗೆ ಹಚ್ಚಬೇಕಾಗುತ್ತದೆ. ತುಂಬ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ನೈತಿಕತೆಯ ಪ್ರಶ್ನೆಯಿದೆ. ತನ್ನ ಕಂದನ ಹಸಿವೆ ತಣಿಸಲೆಂದು ಬರುವ ತಾಯಿಗೆ, ಏಳುದಿನಗಳಿಂದ ಹಸಿವೆಯಿರುವ ಹುಲಿಯ ಹಸಿವೆಯ ಅರಿವಾಗದೇ ಹೋಯಿತೇ?  ಹಸಿವಿನ ಸಮಸ್ಯೆ ಮತ್ತು ಆಳಿವು-ಉಳಿವಿನ ಸಮಸ್ಯೆಗಳು ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಮುಖ್ಯವಾಗಿ ಕಾಡುವಂತವು.  ಇವೆರಡರಿಂದ ಬಿಡುಗಡೆ ಇಲ್ಲ.  ಹುಲಿಯ ಆಹಾರವನ್ನು ತಪ್ಪಿಸಿ, ಹಸು ಜಯಶಾಲಿಯಾಗಿ ನಿಲ್ಲುವುದು ಅಭಾಸ ಎನ್ನಿಸುವುದಿಲ್ಲವೇ?  ಹಸು ಪ್ರತಿಪಾದಿಸುವ ನ್ಯಾಯವು ಯಾವ ಬಗೆಯದು?  ಲೌಕಿಕ ನ್ಯಾಯಗಳು ಕಾಲದೇಶಗಳಿಂದ ಪರಿಮಿತಿಯಲ್ಲಿ ರೂಪು ಗೊಂಡಿರುತ್ತವೆ.  ನ್ಯಾಯಾನ್ಯಾಯಗಳ ಪ್ರಶ್ನೆಯನ್ನು ಸಂಪೂರ್ಣವಾಗಿ ಸಾಪೇಕ್ಷವಾಗಿ ನೋಡಬಹುದಾಗಿದೆ.  ಕಾನೂನುಗಳನ್ನು ಮಾಡುವ ಸಾಂಸ್ಕೃತಿಕ ಶಕ್ತಿಕೇಂದ್ರಗಳು ತಮಗೆ ಬೇಕಾದಂತೆ ನಿರೂಪಿಸಿರುತ್ತವೆ ಎಂಬುದೂ ಪರಿಗಣಿಸುವ ಆಂಶ.  ಲೌಕಿಕ ನ್ಯಾಯ ನಿರ್ಣಯಗಳು ಒಂದು ಪದರದಲ್ಲಿರುವುದಿಲ್ಲ.  ಬಹುವಾಗಿ ಅವು ನಿರ್ಣಯಿಸಲ್ಪಡುವವರ ಮೇಲೆ ನಿಂತಿರುತ್ತವೆ.  ಅರ್ಥೈಸುವಿಕೆಯಿಂದಲೇ ನ್ಯಾಯಗಳ ವ್ಯಾಖ್ಯಾನಗಳು ನಿಲ್ಲುತ್ತವೆ.
ಈ ದೃಷ್ಟಿಯಲ್ಲಿ ಹುಲಿಯು ಹಸಿವಿಗಿಂತ ಕ್ರೂರಿ ಎನ್ನುವುದಕ್ಕಿಂತ ಹುಲಿ ಸ್ವಚ್ಛಂದವಾದುದು.  ತನ್ನದೇ ಇಚ್ಛೆಯಿಂದ ತನ್ನ ಹಸಿವನ್ನು, ಬದುಕನ್ನು ನಿರ್ಧರಿಸುವ ಶಕ್ತಿಯುಳ್ಳದ್ದು.  ಹಬ್ಬಿದಾ ಮಲೆಮಧ್ಯದೊಳಗೆ ಅರ್ಬುತನೆಂದೆಂಬ ವ್ಯಾಘ್ರನು ಎಂಬ ಸಾಲನ್ನು ಉದಾಹರಿಸಬಹುದು.  ಆದರೆ ಹಸುವಿನ ಜೀವ ನಾನಾ ರೀತಿಯ ಹೊಣೆಗಾರಿಕೆಗಳಿಂದ ಕೂಡಿದೆ.  ಗೊಲ್ಲನಿಗೆ ಹಾಲು ಕರೆಯಬೇಕು, ಕಂದನಿಗೆ ಹಾಲುಣಿಸಬೇಕು- ಹೀಗೆ ಪರಾಧೀನವಾಗಿರುವ ಹಸುವಿಗೆ ತನ್ನ ಉಳಿವು, ಅಸ್ಮಿತೆಯ ಸವಾಲನ್ನು ಬಹಳ ಕಷ್ಟದಿಂದ ಸ್ಥಾಪಿಸಬೇಕಾಗಿದೆ. ಆದ್ದರಿಂದ ಅದು ಒಳದಾರಿಗಳಲ್ಲಿ ತನ್ನ ನ್ಯಾಯದ ಬಲವನ್ನು ಹುಡುಕಾಡುತ್ತದೆ.

ಕೆ.ವಿ. ಸುಬ್ಬಣ್ಣ ಗೋವಿನ ಹಾಡನ್ನು ಕುರಿತು ಬರೆಯುವಾಗ ಕೇಡಿನ ಸ್ವರೂಪವನ್ನು ಬ್ಲೇಕ್‍ನ `ಟೈಗರ್’ ಪದ್ಯಕ್ಕೆ  ಹೋಲಿಸುತ್ತಾರೆ.  ಬ್ಲೇಕ್‍ನ `ಟೈಗರ್’ ಸಂಕೀರ್ಣವೂ, ಸ್ವಯಂಪೂರ್ಣವೂ ಆದಂತೆ ತೋರುವಾಗ, ಆವನಲ್ಲಿ ಮೂಡಿದ ಒಂದು ಪ್ರಶ್ನೆಯೆಂದರೆ ಕುರಿಯನ್ನು ಸೃಷ್ಟಿಸಿದ ಕರ್ತನೇ ಹುಲಿಯನ್ನೂ ಸೃಷ್ಟಿಸಿದನೇ?- ಎಂಬುದು<ಲನ್ಗ್=ಎನ್ಗ್|ಫ಼ೊನ್ತ್=”ಆರಿಅಲ್”> (ಡಿದ್ ಹೆ ವ್ಹೊ ಮದೆ ಥೆ ಲಮ್ಬ್ ಮಕೆ ಥೀ?)<ಲನ್ಗ್=ಕನ್> ಸುಬ್ಬಣ್ಣ ಆವರಲ್ಲೂ ನಿರ್ವಿವಾದವಾಗಿ ಹುಲಿ ಕೇಡಿನ ಸಂಕೀರ್ಣ ಸ್ವರೂಪ. ಅದರ ನಾಶ ಪುಣ್ಯಕೋಟಿಯ ಸಾತ್ವಿಕ ಶಕ್ತಿಗೆ ಸಂದ ಜಯ.

ತಾತ್ವಿಕ ಜಿಜ್ಞಾಸೆಯ ಅಮೂರ್ತ ಸ್ವರೂಪದಲ್ಲಿ ನಿಂತು ತಡಕಾಡುವಾಗ ಜನಪದದಲ್ಲಿ ಬರುವ ಪುಣ್ಯಕೋಟಿಯ ಕಥೆ ನ್ಯಾಯ ನಿರ್ಣಯಗಳನ್ನು ಹೊಸದಾಗಿ ವಿಶ್ಲೇಷಿಸುವಂತಿರುವುದು ಆದ್ಭುತವಾಗಿ ಕಾಣುತ್ತದೆ.

ಕಂಬಾರರ `ಶಿಖರ ಸೂರ್ಯ’ ಕಾದಂಬರಿಯಲ್ಲಿ ಪುಣ್ಯಕೋಟಿಯ ಕಥೆಯ ಉಲ್ಲೇಖ ಇದೆ.  ಮುಖ್ಯವಾಗಿ ಕಂಬಾರರ ಕಾದಂಬರಿಯು ಮಾತೃಸಂಸ್ಕೃತಿಯ ಪರವಾದ ದೃಷ್ಟಿಕೋನದಲ್ಲಿ ರಚಿತವಾಗಿದೆ.  ಮಾತೃಸಂಸ್ಕೃತಿಯ ಸಮಾಜಗಳು ಬಿಂಬಿಸುವ ಮೌಲ್ಯ ಮತ್ತು ಜೀವನ ದ್ಯಷ್ಟಿಗಳನ್ನು ಅದು ವಿಶ್ಲೇಷಿಸುತ್ತದೆ.  ಅವ್ವ ಸಂಸ್ಕೃತಿಯ ಹಿನ್ನೆಲೆಯಲ್ಲಿ ಕೇಳಲಾದ ಪುಣ್ಯಕೋಟಿ ಕಥೆಯು ಹೀಗಿದೆ:  ಪುಣ್ಯಕೋಟಿಯನ್ನು ಹುಲಿಯು ಆಕ್ರಮಿಸಿ ನಿಂತಾಗ ಅದು ಓಡಿ ಬ್ರಹ್ಮನ ಹತ್ತಿರ ಹೋಯಿತಂತೆ.  ಬ್ರಹ್ಮ ವಿಷ್ಣುವಿನ ಹತ್ತಿರ ಹೋಗಲು ತಿಳಿಸಿದ.  ಆವನೂ ಸೋತ, ಶಿವನೂ ಸೋತ.  ಕೊನೆಗೆ ಅಮ್ಮನ ಹತ್ತಿರ ಬಂದಿತು ಹಸು. `ಅಮ್ಮ’ ಪುಣ್ಯಕೋಟಿಯನ್ನು ಪೂಜೆಯ ಮನೆಯಲ್ಲಿ ಅಡಗಿಸಿಟ್ಟಳಂತೆ.  ಹುಲಿರಾಯ ಬಂದು, “ಅಮ್ಮಾ, ಪುಣ್ಯಕೋಟಿ ಒಳಗೆ ಅಡಗಿರುವಳೋ” ಎಂದು ಕೇಳಿತಂತೆ.  ಆಗ ಅಮ್ಮ “ಖರೇ ಹೇಳಲೋ, ಖೋಟ್ಟಿ ಹೇಳಲೋ” ಎಂದು ಕೇಳಿದಾಗ, ಹುಲಿ “ಖರೇನೆ ಹೇಳು” ಅಂದಿತಂತೆ.  ಆಗ ಅಮ್ಮ “ಪುಣ್ಯಕೋಟಿ ಇಲ್ಲಿಗೆ ಬಂದಿಲ್ಲವಲ್ಲಪ್ಪ” ಎಂದು ಹೇಳಿದಳಂತೆ.  ಆಗ ಅಲ್ಲಿ ಕೂತವರಿಗೆಲ್ಲ ಜೋಗಿಣಿ ಪ್ರಶ್ನೆ ಹಾಕುತ್ತಾಳೆ.  “ಅಲ್ಲಪ, ಅಮ್ಮಾ ಖರೇನೆ ಅಂದು ಖೊಟ್ಟಿ ಹೇಳಿದಂಗಾಗಲಿಲ್ಲವೇನಪ್ಪ?” ಎಂದು.  ಆಮೇಲೆ ವಿವರಿಸುತ್ತಾಳೆ. ಅಮ್ಮಾ ಖರೇ ಎಂದಿದ್ದು ಯಾಕೆಂದರೆ ಬ್ರಹ್ಮ, ವಿಷ್ಣು, ಶಿವ ಮೂವರೂ ಹೊಣೆಗೇಡಿಗಳು ತಾಯಿಯನ್ನು ತಿಳಿಯದವರು.  ಆದರೆ ಅಮ್ಮನಿಗೆ ಗೊತ್ತಾಯಿತು ಸತ್ಯ ಯಾವುದು? ಕರುವನ್ನು ಪೊರೆಯಲು ತಾಯಿಯ ಜೀವಬೇಕೆಂಬ ತಾಯಿಯ ಖೊಟ್ಟಿಯೇ ಸತ್ಯ.  ತಾಯಿಯ ಜೀವವೇ ಸತ್ಯ.  ಹೀಗಿರುವುದರಿಂದಲೇ ನಾವು ಇಲ್ಲಿದೀವಿ… (ಶಿಖರಸೂರ್ಯ ಪು.೩೨೩)

ಪುಣ್ಯಕೋಟಿಯ ಈ ಕಥೆಯ ನ್ಯಾಯನಿರ್ಣಯವು ಮಾತೃತ್ವದ ಆಧಾರದ ಮೇಲೆ ಪ್ರತಿಪಾದಿಸಲ್ಪಟ್ಟಿವೆ. ತಾಯ್ತನದ ಮೌಲ್ಯಗಳಿಂದ ನಿರ್ಣಯಿಸಲ್ಪಟ್ಟದ್ದಾಗಿದೆ.

ತಾತ್ವಿಕವಾಗಿಯಾದರೂ ಹೆಣ್ಣು-ಗಂಡು, ಹಸು-ಹುಲಿಗಳ ನಡುವೆ ಸಂಘರ್ಷಗಳು ಇದ್ದೇ ಇವೆ.  ಅವುಗಳ ನ್ಯಾಯ ನಿರ್ಣಯವನ್ನು ಪ್ರತಿಪಾದಿಸುವವರು ಯಾರು ಎಂಬುದರ ಮೇಲೆ ಆವುಗಳ ಸತ್ಯಾಸತ್ಯತೆಗಳು ನಿರ್ಧರಿಸಲ್ಪಡುತ್ತವೆ.  ಗೋವಿನ ಹಾಡುವಿನ ಕಥನದೊಳಗೆ ಪುಣ್ಯಕೋಟಿ ತನ್ನ ದೇಹ, ತಾಯ್ತನದ ಬಲದಿಂದಲೇ ತನ್ನ ವಿರೋಧಿ ಜಗತ್ತನ್ನು ಎದುರಿಸುವ ಸಂಕೀರ್ಣ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ.  ಫ್ರೆಂಚ್ ಸ್ತ್ರೀ ವಾದಿಗಳು ನಿರೂಪಿಸುವ ವಾದವನ್ನು ಇಲ್ಲಿ ಬೆಂಬಲಕ್ಕೆ ಪಡೆದುಕೊಳ್ಳುವುದಾದರೆ, ಹೆಣ್ಣಿನ ದೇಹವು ಒಂದು ಇತ್ಯಾತ್ಮಕ ಶಕ್ತಿ ಎಂದು ಒಪ್ಪಿಕೊಳ್ಳುವ ಹಂತವನ್ನು ಈ ಕಥನವು ನಿರೂಪಿಸುತ್ತಿದೆ. ಲೈಂಗಿಕತೆಯ ಯಾವ ಕುರುಹುಗಳಿಂದ ದಮನಗೊಂಡ ಚೈತನ್ಯವಿತ್ತೋ, ಆದನ್ನೇ ಸೃಜನಾತ್ಮಕ, ಸಂಕೀರ್ಣತೆಗಳ ಸ್ತರಕ್ಕೆ ವಿಸ್ತರಿಸಿಕೊಳ್ಳುವ ಮಟ್ಟವನ್ನು ಆದು ತಿಳಿಸಿಕೊಡುವಂತಿದೆ.  ಪುಣ್ಯಕೋಟಿಯ ಕಥನದಲ್ಲಿ ಸ್ವಚ್ಛಂದ ಪರಿಸರವೂ ಇದೆ.  ನಿಯಂತ್ರಣಕ್ಕೊಳಪಟ್ಟ ಪರಿಸರವೂ ಇದೆ.  ಇವೆರಡೂ ಕುತೂಹಲಕಾರಿ ಆಂಶಗಳು.  ಗೋವುಗಳು ಇಲ್ಲಿ ಪರಾಧೀನವಾಗಿವೆ.  ಅದನ್ನು ಮೀರಿ ಪುಣ್ಯಕೊಟಿ ತನ್ನ ಉಳಿವನ್ನು ನಿರೂಪಿಸಲು ಬಯಸುತ್ತಿದೆ.  ವಾಪಸು ಹೋಗಿ ಹುಲಿಯ ಮುಂದೆ ನಿಂತು, ಕ್ರೈಸಿಸ್ ಅನ್ನು ಎದುರಿಸಲು ಮುನ್ನಡೆಯುತ್ತಿದೆ. ಈ ಧೈರ್ಯವು ಹೆಣ್ಣು ದೇಹದ್ದೇ ಆಗಿ, ಆದರ ಮಾನಸಿಕ ಬಲದ ಸಂಕೇತವೂ ಆಗಿ, ಅಂತಿಮವಾಗಿ ನ್ಯಾಯವನ್ನು ತನ್ನ ಪಾಲಿಗೆ ಪಡೆದುಕೊಳ್ಳುವ ಶಕ್ತಿಯಾಗಿರುವುದು ಸಾಮಾನ್ಯ ಸಂಗತಿಯಾಗಿ ಪರಿಗಣಿಸುವುದಲ್ಲ.

ಪರಾಮರ್ಶನ ಗ್ರಂಥಗಳು :
೧. ಗೋವಿನ ಹಾಡು.
೨. ಪುತಿನ ಸಮಗ್ರ ಗದ್ಯ.
೩. ಆದಿಮ- ಮೊಗಳ್ಳಿ ಗಣೇಶ್.
೪. ಹೆಣ್ಣು-ಹೆಂಗಸು, ಎಚ್. ಎಸ್. ಶ್ರೀಮತಿ.
೫. ಲೋಕಯುಕ್ತ – ದೇಬಿಪ್ರಸಾದ್ ಚಟ್ಟೋಪಧ್ಯಾಯ
೬. ಕವಿರಾಜಮಾರ್ಗ ಮತ್ತು ಕನ್ನಡ ಕಥನ, ಕೆ.ವಿ. ಸುಬ್ಬಣ್ಣ.
೭. ಸ್ತ್ರೀ ವಾದ – ಬಿ.ಎನ್.ಸುಮಿತ್ರಾಬಾಯಿ.
೮. ಶಿಖರಸೂಯ೯- ಚಂದ್ರಶೇಖರ ಕಂಬಾರ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಗುಳ ಪಾಡಿರಮ್ಮಾ
Next post ಹೊಸ ದಿಗಂತ

ಸಣ್ಣ ಕತೆ

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…