ಇಳಾ – ೩

ಇಳಾ – ೩

ಚಿತ್ರ: ರೂಬೆನ್ ಲಗಾಡಾನ್

ಹಾಸ್ಟಲಿನಲ್ಲಿದ್ದ ತನ್ನ ವಸ್ತುಗಳನ್ನೆಲ್ಲ ತುಂಬಿಕೊಂಡು ಬಂದಿದ್ದ ಇಳಾ ಸಕಲೇಶಪುರದಿಂದ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮನೆ ತಲುಪಿದಳು. ಬಂದವಳೇ ರೂಮು ಸೇರಿ ತನ್ನ ವಸ್ತುವನ್ನೆಲ್ಲ ಹಾಕಿ ಅಜ್ಜಿಯನ್ನು ಹುಡುಕಿಕೊಂಡು ಬಂದಳು. ಅಜ್ಜಿ ದೇವರ ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದು ‘ಈಗ ಬಂದ್ಯೇನೆ ಪುಟ್ಟ. ತಡೀ ಊಟ ಕೊಡ್ತೀನಿ’ ಅಂತ ಪೂಜೆ ಮುಂದುವರೆಸಿದರು. ಸೀದಾ ಅಡುಗೆ ಮನೆಗೆ ಬಂದರೆ ಆಶ್ಚರ್ಯ ಕಾದಿತ್ತು. ನೀಲಾ ಕೋಸಂಬರಿಗೆ ಸೌತೆಕಾಯಿ ಹೆಚ್ಚುತ್ತಿದ್ದಳು. ‘ಈಗ ಬಂದ್ಯಾ? ಕೈಕಾಲು ತೊಳ್ಕೊಂಡು ಬಾ. ಸೌತೆಕಾಯಿ ಕೋಸಂಬರಿ ನಿನಗಿಷ್ಟ ಅಂತ ಮಾಡಿದ್ದೀನಿ’ ಅಂದಳು.

‘ನಾನು ದಾರೀಲೆ ಊಟ ಮಾಡ್ಕೊಂಡು ಬಂದೆ. ನಂಗೆ ಊಟ ಬೇಡ’ ನೀಲಾಳ ಮುಖ ನೋಡದೆ ಉತ್ತರಿಸಿ ರೂಮಿಗೆ ಬಂದು ಬಾಗಿಲು ಹಾಕಿಕೊಂಡು ಮಲಗಿಬಿಟ್ಟಳು. ಇಂದವಳ ಹೃದಯ ಒಡೆದು ಹೋಗುವಂತಿತ್ತು. ತನ್ನೆಲ್ಲ ಆಶಾಗೋಪುರವನ್ನು ಉರುಳಿಸಿ ಅದರ ಅವಶೇಷದ ಮೇಲೆ ಒಂಟಿಯಾಗಿ ದಿಗ್ಭ್ರಾಂತಿಯಿಂದ ನಿಂತಿದ್ದಾಳೆ. ಅವಳ ಕನಸು… ಅವಳ ಆಸೆ… ಅವಳ ಸಂತೋಷ… ಅವಳ ಗುರಿ-ಎಲ್ಲಾ ಉರಿದು ಭಸ್ಮವಾಗಿವೆ. ಇಂದವಳು ತಬ್ಬಲಿಯಂತೆ ಭಾಸವಾಗಿ ಮುಂದಿನ ದಿನಗಳೆಲ್ಲ ಕತ್ತಲು, ಬರೀ ಕತ್ತಲು ಎನಿಸತೊಡಗಿ ಅವಳೆದೆಯನ್ನು ಬಗೆದು ಹಾಕಿದಂತಾಗಿ ಬೆಚ್ಚಿ ಎದ್ದು ಕುಳಿತಳು. ತಾನು ಬಲಹೀನವಾಗಬಾರದು. ತಾನು ಸೋಲಬಾರದು, ತನ್ನೆದೆ ಕಲ್ಲಿನಂತೆ ಗಟ್ಟಿಯಾಗಬೇಕು. ತಾನು ನಿಲ್ಲಬೇಕು. ದೃಢವಾಗಿ ನಿಲ್ಲಬೇಕು. ನಿಂತು ಗೆಲ್ಲಬೇಕು. ಪದೇ ಪದೇ ಮನಸ್ಸಿಗೆ ಹೇಳಿಕೊಳ್ಳುತ್ತ ಒಡೆದು ಭಿದ್ರವಾಗಿದ್ದ ಕನಸುಗಳ ಅಳಿಸಿ, ಅಲ್ಲಿ ಬೇರೊಂದು ಕನಸು ಹೆಣೆಯಲು ಬಯಸಿದಳು. ಪ್ರಯತ್ನಿಸಿದಳು. ಊಹೂ ಆಗಲೇ ಇಲ್ಲ. ಕತ್ತಲು ಕತ್ತಲಾದ ಅಲ್ಲಿ ಕನಸುಗಳು ನಿಲ್ಲಲೇ ಇಲ್ಲ. ನಾನು ಸೋಲಲ್ಲ. ನಾನು ಸೋಲಬಾರದು. ಉಕ್ಕಿ ಬರುತ್ತಿದ್ದ ಕಣ್ಣೀರನು ಒತ್ತಾಯವಾಗಿ ತಡೆಯುತ್ತಿದ್ದಾಳೆ. ದುಃಖ ಅದಿಮಿಡುವ ಪ್ರಯತ್ನದಲ್ಲಿ ಗಂಟಲ ನರಗಳೆಲ್ಲ ಉಬ್ಬಿವೆ. ಇವತ್ತಿನಿಂದಲೇ ಈ ದುಃಖ ಗಂಟಲಲ್ಲೇ ನಿಂತುಬಿಡಲಿ, ಯಾರ ಮುಂದೂ ತಾನು ಅಳಬಾರದು, ಅತ್ತು ಬಲಹೀನಳಾಗಬಾರದು. ಇದು ನನ್ನ ಮೊದಲ ಜಯ.

ರಾತ್ರಿ ಎಲ್ಲಾ ಮಲಗಿರುವ ಹೊತ್ತು, ಅದೇನೋ ನೆನಪಾಗಿ ದಿಗ್ಗನೆದ್ದ ಇಳಾ, ಅಪ್ಪ ಇಡುತ್ತಿದ್ದ ರೆಕಾರ್ಡುಗಳ ಬೀರು ತೆಗೆದು ಒಂದೊಂದೇ ರೆಕಾರ್ಡುಗಳನ್ನು ಪರಿಶೀಲಿಸಿದಳು. ಬ್ಯಾಂಕುಗಳಿಂದ ಬಂದ ನೋಟೀಸುಗಳು, ತೋಟ ಅಡವಿಟ್ಟಿರುವ ದಾಖಲೆಗಳು, ಎಷ್ಟು ಎಕರೆ ತೋಟವಿದೆ, ಗದ್ದೆ ಇದೆ. ಖಾಲಿ ಜಾಗ ಎಷ್ಟಿದೆ ಎಂದು ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ನೋಡಿದಳು. ಸುಮಾರು ೨೪ಎಕರೆ ಜಾಗ ೧೫ ಎಕರೆ ಕಂಡಿಷನ್ ಇರುವ ಕಾಫಿ ತೋಟ ೫ ಎಕರೆ ಗದ್ದೆ, ೪ ಎಕರೆ ಖಾಲಿಜಾಗ, ಎಲ್ಲದರ ಮೇಲೂ ಸಾಲವಿದೆ. ಬೆಳೆ ಬೆಳೆದು ತೀರಿಸುತ್ತೇವೆ ಎಂದರೆ ಬದುಕಿರುವ ತನಕ ಬಡ್ಡಿ ಕಟ್ಟಲು ಮಾತ್ರ ಸಾಧ್ಯ. ಏನಾದರೂ ಮಾರಿ ತೀರಿಸುತ್ತೇವೆ ಎಂದರೆ ಬೆಲೆಬಾಳುವಂತದ್ದೇನು ಇಲ್ಲ. ಕಾರು ಮಾರಿಯಾಗಿದೆ. ಚಿನ್ನವನ್ನೆಲ್ಲ ಮಾರಿಯಾಗಿದೆ. ಜಮೀನು ಮಾರಿದರೆ ಸಾಲಕ್ಕೆ ಎಲ್ಲ ಪಾವತಿಯಾಗಿ ಉಳಿಯುವುದೆಷ್ಟು? ಅದರಲ್ಲಿ ಮುಂದಿನ ಬದುಕು ಸಾಧ್ಯವೆ? ಭವಿಷ್ಯ ಶೂನ್ಯವೆನಿಸಿ ಅಧೀರಳಾದಳು.

ದೊಡ್ಡಪ್ಪ ಹೇಳಿದಂತೆ ತಾನು ಡಾಕ್ಟರ್ ಓದಲು ಸಾಧ್ಯವೆ? ಅಸಾಧ್ಯದ ಮಾತು. ಏನೋ ಕನಿಕರದಿಂದ ದೊಡ್ಡಪ್ಪ ಓದಿಸುವೆನು ಎಂದಿರಬಹುದು. ಆದರೆ ಆಗಿ ಹೋಗದ ಮಾತು ಅದು. ಇನ್ನು ಮದುವೆ ಮಾಡಿಕೊಂಡುಬಿಟ್ಟರೆ, ಬದುಕು ಸೆಟ್ಲಾಗಬಹುದಲ್ಲವೆ? ಆದರೆ ತನಗೆ ಸಿಗುವವನು ಎಂತಹವನೋ. ನನ್ನ ಜೊತೆಗೆ ಅಮ್ಮನನ್ನೂ ನೋಡಿಕೊಳ್ಳುವಂತಹವನಾಗಬೇಕು. ಬರಿಕೈಲಿ ಹೋಗುವ ತನ್ನನ್ನ ನೋಡಿಕೊಳ್ಳುವುದು ಕಷ್ಟಸಾಧ್ಯ. ಇನ್ನು ಅಮ್ಮನನ್ನು ನೋಡಿಕೊಳ್ಳುವನೇ? ಅವನ ಮುಂದೆ ತಾನು ದಾಸಿಯಂತೆ ನಿಲ್ಲಬೇಕೇ? ತನ್ನಂಥ ಮನಸ್ಸಿನವಳು ಸ್ವಾಭಿಮಾನ ಮರೆತು ಗಂಡನ ಮುಂದಾದರೂ ತಗ್ಗಿ ನಡೆಯಲು ಅಸಾಧ್ಯದ ಮಾತು. ಎಲ್ಲಿಯೂ ಯಾರಿಗೂ ಬಗ್ಗದ ಜೀವವಿದು. ಸೆಟೆದು ನಿಂತೇ ಅಭ್ಯಾಸ. ಈಗ ಅಸಹಾಯಕಳಾಗಿ ಮದುವೆಯಾಗಿ ಮಗು ಹೆತ್ತು ಸಾಮಾನ್ಯ ಹೆಣ್ಣಿನಂತಿರಲು ತನ್ನಿಂದ ಸಾಧ್ಯವೇ? ಸಾಧ್ಯವಿಲ್ಲ ಎಂದಾದರೆ ಮುಂದಿನ ಬದುಕು ಹೇಗೆ? ತಲೆ ಕೆಟ್ಟು ಹೋದಂತಾಗಿ ಗಟ್ಟಿಯಾಗಿ ತಲೆ ಹಿಡಿದುಕೊಂಡು ಕುಳಿತುಬಿಟ್ಟಳು. ಅದೆಷ್ಟು ಹೊತ್ತು ಹಾಗೆ ಕುಳಿತಿದ್ದಳೋ, ಅಜ್ಜಿ ಎದ್ದು ಬರುವ ಶಬ್ಬ ಕೇಳಿಸಿ ಮೆಲ್ಲನೆ ಲೈಟು ಆರಿಸಿ ತನ್ನ ರೂಮು ಸೇರಿಕೊಂಡಳು.

ಬ್ಯಾಂಕಿಗೆ ಹೋಗಿ ಎಷ್ಟು ಸಾಲ ಕಟ್ಟಬೇಕು, ಬಡ್ಡಿ ಎಷ್ಟು ಅಂತ ಕೇಳಿ ತಿಳಿದುಕೊಂಡು ಬರಬೇಕೆಂದು ಹಾನುಬಾಳಿಗೆ ಹೊರಟಳು. ಯಾವಾಗಲೂ ಕಾರಿನಲ್ಲಿಯೇ ಓಡಾಡುತ್ತಿದ್ದವಳು ಈಗ ನಡೆದುಕೊಂಡು ಹೋಗುವುದು ಕಷ್ಟವೆನಿಸಿತು. ದಾರಿಯಲ್ಲಿ ಸಿಕ್ಕವರೆಲ್ಲ ಅಯ್ಯೋ ಪಾಪ ಅಂತ ತನ್ನ ಕಡೆ ನೋಡುತ್ತಿದ್ದಾರೆ ಎನಿಸಿ ಮುಜುಗರಕ್ಕೊಳಗಾದಳು. ತಮ್ಮೂರಿನಿಂದ ಎರಡು ಕಿಲೋ ಮೀಟರ್ ಹಾನುಬಾಳಿಗೆ, ನಡೆದೇ ಹೋಗೋಣವೆಂದು ನಿರ್ಧರಿಸಿದ್ದಳು. ಆದರೆ ಎಂದೂ ಅಷ್ಟು ದೂರ ನಡೆಯದ ಅವಳ ಸುಕೋಮಲ ಶರೀರ ಮುಂದೆ ನಡೆಯಲಾರೆ ಎಂದು ಮುಷ್ಕರ ಹೂಡಿ ಮರದ ಕೆಳಗೆ ಕುಳಿತುಬಿಟ್ಟಳು. ಯಾವುದೋ ಬೈಕು ಸದ್ದಾದಂತಾಗಿ ಧಡಕ್ಕನೆ ಎದ್ದು ನಿಂತು ಪ್ರಯಾಸದಿಂದಲೇ ಹೆಜ್ಜೆ ಹಾಕಲಾರಂಭಿಸಿದಳು.

‘ಅರೆ, ಇಳಾ ಯಾಕೆ ನಡ್ಕೊಂಡು ಹೋಗ್ತಾ ಇದ್ದೀಯಾ? ಬಸ್ಸಿತ್ತಲ್ಲ ಈಗ…’ ಪಕ್ಕದ ತೋಟದ ವಿನಾಯಕ ಬೈಕು ನಿಲ್ಲಿಸಿ ಕೇಳಿದ.

‘ಹೌದಾ, ನಂಗೆ ಗೊತ್ತಿರಲಿಲ್ಲ. ಲೇಟಾಗುತ್ತೆ ಅಂತ ನಡ್ಕೊಂಡು ಹೋಗ್ತಾ ಇದ್ದೆ’ ಸುಸ್ತಾಗಿ ಹೇಳಿದಳು.

‘ನಿನ್ನ ಕೈಲಿ ನಡೆಯೋಕ್ಕೆ ಆಗುತ್ತಾ, ನಾನು ಬಿಡ್ತೀನಿ, ಎಲ್ಲಿಗೆ ಹೋಗಬೇಕು?’ ಕೇಳಿದ.

‘ಬ್ಯಾಂಕಿಗೆ ಹೋಗಬೇಕು’ ಎಂದಳು ಮೆಲ್ಲಗೆ. ‘ಸರಿ ಕೂತ್ಕೊ, ನಾನೂ ಆ ಕಡೆನೆ ಹೋಗ್ತಾ ಇದ್ದೀನಿ. ಕೆಲ್ಸ ಮುಗಿಸಿ ಬಾ. ಬರುವಾಗ ಕರ್ಕೊಂಡು ಬರ್ತ್ತೀನಿ’ ಎಂದ. ವಿಧಿ ಇಲ್ಲದೆ ಇಳಾ ಬೈಕ್ ಏರಿದಳು. ತನ್ನ ಅಸಹಾಯಕ ಸ್ಥಿತಿಗೆ ಅಳು ಬರುವಂತಾದರೂ ಅಳದೆ ನಗುವ ವ್ಯರ್ಥ ಪ್ರಯತ್ನ ನಡೆಸಿದಳು. ಬ್ಯಾಂಕಿನ ಮುಂದೆ ನಿಲ್ಲಿಸಿದ ವಿನಾಯಕ. ‘ಇಳಾ, ನೀನು ಯಾಕೆ ಬ್ಯಾಂಕಿಗೆ ಹೋಗ್ತಾ ಇದ್ದೀಯಾ ಅಂತ ನಾನು ಊಹಿಸಬಲ್ಲೆ. ಸಾಲದ ಜೊತೆ ಅದರ ಬಡ್ಡಿಯೂ ಸೇರಿ ತೀರಿಸೋಕೆ ಆಗದಷ್ಟು ಸಾಲ ಜಾಸ್ತಿ ಆಗಿರುತ್ತೆ. ನಿಂಗೆ ಒಂದು ಸಲಹೆ ಕೂಡಬಲ್ಲೆ. ನಿಮ್ಮ ಖಾಲಿ ಜಾಗ ಇದೆಯಲ್ಲ ನಾಲ್ಕು ಎಕರೆ ಅದನ್ನು ರೆಸಾರ್ಟ್ ಮಾಡೋಕೆ ಒಬ್ಬ ಪಾರ್ಟಿ ರೆಡಿ ಇದ್ದಾರೆ. ಕೈತುಂಬಾ ಹಣ ಕೊಡ್ತಾರೆ. ನಿಮ್ಮಪ್ಪ ಇದ್ದಾಗ ಕೊಡಲ್ಲ ಅಂತಲೇ ಬಂದ್ರು. ಅವತ್ತೇ ಕೊಡೋಕ್ಕೆ ಒಪ್ಪಿಕೊಂಡಿದ್ರೆ ಸಾಯೋ ಪ್ರಸಂಗವೇ ಬರ್ತ ಇರಲಿಲ್ಲ. ನಿಮ್ಮಪ್ಪಂಗೆ ಹುಚ್ಚು ಆದರ್ಶ. ರೆಸಾರ್ಟ್ ಅಂದ್ರೆ ಕುಣಿತ, ಕುಡಿತ, ವ್ಯಭಿಚಾರ… ಅಂತ ತಿಳ್ಕೊಂಡು ಇಲ್ಲೆಲ್ಲ ಅದಕ್ಕೆ ಅವಕಾಶ ಕೊಡಲ್ಲ ಅಂತ ಹಾರಾಡಿದರು. ಬೇರೆಯವರಿಗೂ ಕೊಡದ ಹಾಗೆ ತಲೆ ಕೆಡಿಸಿದರು. ಆದ್ರೆ ಅವರೇ ಹೋಗಿಬಿಟ್ಟರು. ಈಗ ನೀನೂ ಅವರಂತೆ ಆದರ್ಶ ಅಂತ ಕೂರಬೇಡ. ನೀನು ಬದುಕುವುದನ್ನು ಕಲಿ. ನಾನೇ ನಿಮ್ಮ ಮನೆಯ ಹತ್ರ ಬರೋಣ ಅಂತ ಇದ್ದೆ. ಆದ್ರೆ ನಿಮ್ಮ ತಾಯಿ ಇರ್ತಾರೆ, ಅವರು ಒಪ್ಪೊಲ್ಲ ಅಂತ ಸುಮ್ಮನಾಗಿದ್ದೆ. ಈಗ ನೀನೇ ಸಿಕ್ಕಿದ್ದೀಯಾ… ಯೋಚ್ನೆ ಮಾಡು, ಬರ್‍ತೀನಿ. ಒಬ್ಳೆ ಹೋಗಬೇಡ. ಕಾಯುತ್ತಾ ಇರು ಬರ್ತ್ತೀನಿ’ ಎಂದು ಹೇಳಿ ಬುರ್ರೆಂದು ಹೋಗಿಯೇ ಬಿಟ್ಟಾಗ ಕ್ಷಣ ಹಾಗೆಯೇ ನಿಂತುಬಿಟ್ಟಳು.

ವಿನಾಯಕನ ಬಗ್ಗೆ ಮನೆಯಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವಿಲ್ಲ ಅಂತ ಗೊತ್ತಿತ್ತು. ಅಪ್ಪನಿಗಂತೂ ವಿನಾಯಕನ ತಲೆ ಕಂಡ್ರೆ ಆಗ್ತಾ ಇರಲಿಲ್ಲ. ಒಂದು ಕಾಲದಲ್ಲಿ ಅವನ ತಂದೆ-ತಾಯಿ ತಮ್ಮ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದು ಅರ್ಧ ಎಕರೆ ಕಾಫಿ ತೋಟ ಮಾತ್ರ ಅವರಿಗಿತ್ತು. ವಿನಾಯಕ ವಯಸ್ಸಿಗೆ ಬಂದ ಮೇಲೆ ಆದ್ಹೇಗೆ ದುಡಿದನೋ? ಇವತ್ತು ಹತ್ತು ಎಕರೆ ಕಾಫಿ ತೋಟ ಮಾಡ್ಕೊಂಡು ಶ್ರೀಮಂತನಂತೆ ಓಡಾಡುತ್ತಿರುತ್ತಾನೆ. ಈ ಆಸ್ತಿ ಸಂಪಾದನೆಯ ಹಿಂದೆ ಯಾವುದೋ ಆಕೃತ್ಯವೇ ಇರಬೇಕು ಅಂತ ಎಲ್ಲರ ಸಂದೇಹ.

ಕಪ್ಪು ಹಣ ದಂದೆ ಮಾಡ್ತಾನೆ ಅಂತ ಕೆಲವರು ಅಂದರೆ, ಶ್ರೀಗಂಧದಂತಹ, ಬೆಲೆಯುಳ್ಳ ಮರಗಳನ್ನು ಕದ್ದು ಸಾಗಿಸುತ್ತಾನೆ ಅಂತಾರೆ ಕೆಲವರು. ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸಕ್ಕೆಂದು ದೂರದೂರದ ಊರುಗಳಿಂದ ಬರುವ ಹದಿಹರೆಯದ ಹೆಣ್ಣು ಮಕ್ಕಳ ತಂದೆ-ತಾಯಿಯರಿಗೆ ಹಣದ ಆಮಿಷ ಒಡ್ಡಿ ಅವರನ್ನು ಮುಂಬೈಗೊ, ಮತ್ತೆಲ್ಲಿಗೊ ಸಾಗಿಸುತ್ತಾನೆ… ಕೆಲಸ ಕೊಡಿಸುವ ಅಥವಾ ಮದುವೆ ಮಾಡುವ ಆಸೆ ತೋರಿಸಿಯೂ ಹೆಣ್ಣುಮಕ್ಕಳ ಮಾರಾಟ ಮಾಡ್ತಾನೆ. ಇಲ್ಲದಿದ್ದರೆ ನ್ಯಾಯವಾಗಿ ಸಂಪಾದನೆ ಮಾಡಿ ತೋಟ ಕೊಂಡು ಆಸ್ತಿ ಮಾಡೋಕೆ ಸಾಧ್ಯಾನಾ ಅಂತ ದೊಡ್ಡಪ್ಪ, ಅಪ್ಪನ ಸಂಬಂಧಿಗಳೆಲ್ಲ ಮಾತಾಡಿಕೊಳ್ಳುವುದು ಇಳಾಗೆ ಗೊತ್ತಿತ್ತು.

ವಿನಾಯಕನ ಬಗ್ಗೆ ಇಳಾಗೂ ಒಳ್ಳೆ ಅಭಿಪ್ರಾಯವಿರಲಿಲ್ಲ. ಆದರೂ ನಡ್ಕೊಂಡು ಬರುತ್ತಿದ್ದ ಆ ಪರಿಸ್ಥಿತಿಯಲ್ಲಿ ಯಾರು ಬಂದು ಕರೆದಿದ್ರೂ ಬರೋಕೆ ಅವಳ ಮನಸ್ಸು ಸಿದ್ಧವಾಗಿತ್ತು. ಹಾಗೆಂದೇ ವಿನಾಯಕ ಕರೆದ ಕೂಡಲೇ ಅವನ ಹಿಂದೆ ಬೈಕ್ ಹತ್ತಿ ಬಂದುಬಿಟ್ಟಿದ್ದಳು. ಇಲ್ಲಿ ಬ್ಯಾಂಕಿನ ಬಳಿ ಇಳಿದು ಅವನ ಮಾತು ಕೇಳಿದ ಮೇಲೆ ತಾನು ತಪ್ಪು ಮಾಡಿದೆ, ಅವನ ಜೊತೆ ಬರಬಾರದಿತ್ತು. ಮತ್ತೆ ಅದೇ ತಪ್ಪು ನನ್ನಿಂದ ಆಗಬಾರದು ಅಂದುಕೊಂಡು ಬೇಗ ಬ್ಯಾಂಕಿನಲ್ಲಿ ವಿಚಾರಿಸಿ ಬಸ್ಸಿಗೆ ಹೊರಟು ಬಿಡಬೇಕು ಅಂತ ಬ್ಯಾಂಕಿನೊಳಗೆ ಹೋದಳು. ಬ್ಯಾಂಕ್ ಮ್ಯಾನೇಜರ್ ರಜೆಯಲ್ಲಿರುವುದಾಗಿ, ಅಲ್ಲಿದ್ದವರು ಹೇಳಿದಾಗ ಬಂದಿದ್ದು ವ್ಯರ್ಥವಾಯಿತಲ್ಲ. ವಿನಾಯಕ ಬರುವುದರೊಳಗೆ ಹೊರಟುಬಿಡಬೇಕು ಅಂತ ಬೇಗ ಬೇಗ ಹೊರಬಂದು ಬಸ್ಸಿಗಾಗಿ ವಿಚಾರಿಸಿದಳು. ಹಾಗೆ ವಿಚಾರಿಸುವಾಗಲೇ ಟೆಂಪೋ ಸಕಲೇಶಪುರ ಅಂತ ಕೂಗುತ್ತ ಇರೋದು ಕೇಳಿ ಟೆಂಪೋ ಬಳಿ ಓಡಿದಳು. ಟೆಂಪೋ ಹತ್ತಿದ ಮೇಲೆಯೇ ಅವಳಿಗೆ ಸಮಾಧಾನವಾಗಿದ್ದು. ಟೆಂಪೋ ಇಳಿದ ಮೇಲೂ ಅರ್ಧ ಕಿಲೋಮೀಟರ್ ನಡೆಯಬೇಕು. ಬಿಸಿಲಿನಲ್ಲಿ ನಡೆದುಕೊಂಡು ಬರುವಷ್ಟರಲ್ಲಿ ಹಣ್ಣಾಗಿ ಹೋದಳು. ಒಂದೇ ದಿನಕ್ಕೆ ಸುಸ್ತಾಗಿ ಹೋಯಿತಲ್ಲ, ಇನ್ನು ಇಲ್ಲೆಯೇ ಇದ್ದು ನಾನು ಗೆಲ್ಲಲು ಸಾಧ್ಯವೇ-ಆತಂಕಿಸಿದಳು. ಆದರೂ ಇಂತದಕ್ಕೆಲ್ಲ ನಾನು ಹೊಂದಿಕೊಳ್ಳಲೇಬೇಕು. ಬಸ್ಸು, ಟೆಂಪೋ ಅಂತ ಕಾಯುತ್ತ ಸಮಯ ಹಾಳು ಮಾಡುವ ಬದಲು ತಾನೂಂದು ಟೂ ವ್ಹೀಲರ್ ತಗೋಬೇಕು. ಯಾವುದಾದರೂ ಸೆಕೆಂಡ್ ಹ್ಯಾಂಡ್ ಇದ್ರೆ ನೋಡಿ ಅಂತ ದೊಡ್ಡಪ್ಪನಿಗೆ ಹೇಳಬೇಕು ಅಂತ ನಿಶ್ಚಯಿಸಿಕೊಂಡಳು. ಮನೆಯೊಳಗೆ ಬಂದ ಕೂಡಲೇ ಅಂಬುಜಮ್ಮ, ನೀಲಾ ಇವಳಿಗಾಗಿಯೇ ಕಾಯುತ್ತ ಕುಳಿತುಕೊಂಡಿರುವುದು ಕಾಣಿಸಿತು.

‘ಮ್ಯಾನೇಜರ್ ಸಿಕ್ಕಿದ್ರ, ಏನು ಹೇಳಿದ್ರು’ ನೀಲಾ ತಕ್ಷಣವೇ ಮಗಳನ್ನು ಕೇಳಿದಳು. ‘ಅಜ್ಜಿ ಒಂದ್ಲೋಟ ನೀರು ಕೊಡು. ಸುಸ್ತಾಗಿದೆ’ ನೀಲಾಳ ಮಾತಿಗೆ ಉತ್ತರ ಕೊಡದೆ ಅಜ್ಜಿಯನ್ನು ಕೇಳಿದಳು.

‘ನೀನು ಸುಸ್ತಾಗಿ ಈ ಬಿಸಿಲಲ್ಲಿ ಬರ್ತೀಯಾ ಅಂತಾನೇ ನಿಂಬೆ ಶರಬತ್ತು ಮಾಡಿ ಫ್ರಿಜ್ಜಿನಲ್ಲಿಟ್ಟಿದ್ದೆ ತಾಳು ತರ್ತೀನಿ. ಮೊದ್ಲು ಕುಡಿದು ಸುಧಾರಿಸಿಕೊ, ಆಮೇಲೆ ಮಾತಾಡುವಂತೆ’ ಅಂತ್ಹೇಳಿ ಫ್ರಿಜ್ಜಿನಿಂದ ಶರಬತ್ತು ತಂದುಕೊಟ್ಟರು. ಗಬಗಬನೆ ಕುಡಿದವಳೇ ಲೋಟವನ್ನು ಕೆಳಗಿಟ್ಟು, ಸೋಫಾದ ಹಿಂದಕ್ಕೊರಗಿ ಕಣ್ಮುಚ್ಚಿದಳು. ಮಾತನಾಡುವ ಉತ್ಸಾಹವೇ ಅವಳಲ್ಲಿ ಇಲ್ಲದ್ದು ಕಂಡು ನೀಲಾ ದೊಡ್ಡಮ್ಮನ ಮುಖ ನೋಡಿದಳು. ಅವಳಿಗೆ ಬೇಸರ ಆಗಿದೆ ಅಂತ ಗೊತ್ತಾದ್ರೂ ‘ಸುಮ್ಮನಿರು, ಅವಳೇ ಹೇಳಲಿ’ ಅಂತ ಸನ್ನೆ ಮಾಡಿದರು.

ಸ್ವಲ್ಪ ಹೊತ್ತು ಹಾಗೆ ಇದ್ದ ಇಳಾ ನಂತರ ‘ಅಜ್ಜಿ ಬ್ಯಾಂಕಿನಲ್ಲಿ ಮ್ಯಾನೇಜರ್ ರಜೆ ಅಂತೆ, ಹಂಗಾಗಿ ಏನೂ ವಿಚಾರಿಸೋಕೆ ಆಗಲೇ ಇಲ್ಲ. ಅಪ್ಪನ ಇನ್ಶೂರೆನ್ಸ್ ಪಾಲಿಸಿಗಳೆಲ್ಲ ಎಲ್ಲಿವೆಯೋ ಅದನ್ನೊಮ್ಮೆ ನೋಡಿ ಅಪ್ಲೈ ಮಾಡಬೇಕು. ನಾನೊಂದು ಮೊದಲು ಗಾಡಿ ತಗೋಬೇಕು. ಇಲ್ಲದಿದ್ದರೆ ಇಲ್ಲಿ ಓಡಾಡೋಕೆ ಆಗಲ್ಲ’ ಅಜ್ಜಿಯನ್ನು ಉದ್ದೇಶಿಸಿ ಹೇಳಿ ರೂಮಿಗೆ ಎದ್ದು ಹೊರಟುಬಿಟ್ಟಾಗ ನೀಲಾ ಪೆಚ್ಚಾಗಿಹೋದಳು.

ಕಣ್ಣಲ್ಲಿ ನೀರು ತುಂಬಿಕೊಂಡು ಕೆನ್ನೆ ಮೇಲೆ ಹರಿಯತೊಡಗಿದಾಗ, ಅಂಬುಜಮ್ಮ ‘ಏನಾಯ್ತು ಅಂತ ಅಳ್ತಾ ಇದ್ದೀಯಾ ನೀಲಾ. ಅವಳು ಹೊರಗೆ ಹೋಗಿ ಬಂದು ಸಾಕಾಗಿದ್ದಾಳೆ. ಅಲ್ಲೇನು ಬೇಸರ ಆಗಿದೆಯೋ, ನೀನು ಬೇರೆ ಹೀಗೆ ಅತ್ತು ಅವಳಿಗೆ ಬೇಸರ ತರಿಸಬೇಡ, ಎದ್ದೇಳು ಊಟ ಮಾಡೋಣ. ಪಾಪ ಇಳಾ ಅದೆಷ್ಟು ಹಸಿದಿದ್ದಾಳೊ’

ನೀಲಾಳ ಬಗ್ಗೆ ಯಾವ ಕನಿಕರವೂ ತೋರಿಸದೆ ನಿರ್ದಾಕ್ಷಿಣ್ಯವಾಗಿ ಎದ್ದು ಅಡುಗೆ ಮನೆಗೆ ನಡೆದಾಗ ನೀಲಾ ತಾನೇ ತಪ್ಪು ತಿಳಿಯುತ್ತಿದ್ದೇನೆಯೋ, ದೊಡ್ಡಮ್ಮನಿಗೆ ಇಳಾಳ ಬಗ್ಗೆ ಯಾವ ತಪ್ಪು ಕಾಣುತ್ತಿಲ್ಲ ಎಂದಾಗ ನನಗೇಕೆ ಇಳಾಳ ವರ್ತನೆ ತಪ್ಪು ಎನಿಸುತ್ತಿದೆ. ತಾನೇ ಸರಿ ಇಲ್ಲವೇ… ಎಂಬ ಗೊಂದಲದಲ್ಲಿ ಮುಳುಗಿದಳು.

ಅದನ್ನೇ ಮನಸ್ಸಿನಲ್ಲಿಟ್ಟುಕೊಳ್ಳಬಾರದೆಂದು ನೀಲಾ ಮೋಹನ ಇಟ್ಟಿದ್ದ ಎಲ್‌ಐಸಿ ಪಾಲಿಸಿಗಳ ಬಾಂಡ್‌ಗಳನ್ನು ಹುಡುಕಿ ತೆಗೆದು ಟೇಬಲ್ ಮೇಲೆ ಇರಿಸಿದಳು.

‘ಇಳಾ ಎಲ್‌ಐಸಿ ಬಾಂಡ್‌ಗಳನ್ನು ಟೇಬಲ್ ಮೇಲೆ ಇರಿಸಿದ್ದೇನೆ, ನೋಡು’ ಊಟಕ್ಕೆ ಕುಳಿತಿದ್ದ ಮಗಳಿಗೆ ಹೇಳಿದಳು.

ಇಳಾ ಉಭಾ ಶುಭ ಎನ್ನದೆ. ಊಟ ಮಾಡತೊಡಗಿದಳು. ಊಟ ಮುಗಿಸಿ ಬಂದವಳೇ ಟೇಬಲ್ ಮೇಲಿದ್ದ ಬಾಂಡ್‌ಗಳನ್ನು ಪರಿಶೀಲಿಸಿದಳು. ಬರುವ ಮೊತ್ತ ಸಾಕಷ್ಟು ಇದೆ. ಆದ್ರೆ ಸಾಲ ತೀರಿಸುವಷ್ಟಿಲ್ಲದಿದ್ದರೂ ಮುಂದಿನ ದಾರಿಯಲ್ಲಿ ಹೆಜ್ಜೆ ಇಡಲು ಹಿಂಜರಿಯಬೇಕಿಲ್ಲ ಎಂಬ ಮನವರಿಕೆಯಿಂದ ಒಂದಿಷ್ಟು ಸಮಾಧಾನವಾಯಿತು. ಇಳಾಗೆ ನಾಳೇನೇ ಇವನ್ನೆಲ್ಲ ತಗೊಂಡು ಎಲ್‌ಐಸಿ ಆಫೀಸಿಗೆ ಹೋಗಬೇಕು, ಬೇಗ ಕೆಲಸವಾದರೆ ಹಣ ಬೇಗ ಸಿಗುತ್ತದೆ. ಮೊದಲು ಸಾಲ ಎಷ್ಟು ತೀರಿಸೋಕೆ ಸಾಧ್ಯವೋ ನೋಡಬೇಕು. ಆ ಮ್ಯಾನೇಜರ್ ಯಾವಾಗ ಬರ್ತಾರೋ, ಫೋನ್ ನಂಬರಾದ್ರೂ ತೆಗೆದುಕೊಂಡು ಬರಬೇಕಿತ್ತು. ಎಂಥ ಕೆಲಸ ಆಯ್ತು. ಬ್ಯಾಂಕಿಗೆ ಹೋಗಿಯೂ ಫೋನ್ ನಂಬರ್ ತೆಗೆದುಕೊಳ್ಳದೆ ಬಂದೆನಲ್ಲ, ನಾಳೆ ಮತ್ತೇ ಹೋಗಬೇಕಲ್ಲಪ್ಪ-ಚಿಂತೆ ಮೂಡಿತು.

ನೀಲಾ ಮಗಳ ಮುಂದೆ ಬಂದು ಕುಳಿತಳು. ತಕ್ಷಣವೇ ಇಳಾ ಎದ್ದು ಬಾಂಡ್‌ಗಳನ್ನೆಲ್ಲ ಒಂದು ಕವರ್‌ಗೆ ಹಾಕಿಕೊಂಡು ಬ್ಯಾಗಿನಲ್ಲಿ ಹಾಕಿಕೊಳ್ಳುತ್ತ ‘ನಾಳೆ ಎಲ್‌ಐಸಿ ಆಫೀಸಿಗೆ ಹೋಗಿಬರ್ತೀನಿ’ ಎಂದು ತಲೆ ತಗ್ಗಸಿಯೇ ಹೇಳಿ ತನ್ನ ರೂಮಿನತ್ತ ಹೊರಟಳು.

ಮುಖ ಕೊಟ್ಟು ಮಾತನಾಡಲಿಲ್ಲ ಮಗಳು ಅನ್ನೋದು ಮತ್ತೂ ಸ್ಪಷ್ಟವಾಗಿ ಹೋಯಿತು ನೀಲಾಳಿಗೆ. ದುಡುಕುವುದು ಬೇಡ… ತನ್ನದೇ ತಪ್ಪು ತಿಳುವಳಿಕೆ ಇರಬಹುದು. ಮಗಳು ಟೆನ್ಷನ್‌ನಲ್ಲಿದ್ದಾಳೆ. ಮನೆಯ ಸಮಸ್ತ ಹೊರೆ ಅವಳ ತಲೆ ಮೇಲೆ ಬಿದ್ದಿದೆ. ಅಪ್ಪನ ಸಾವು, ನನಸಾಗದ ತನ್ನ ಕನಸು, ಮುಂದಿನ ಭವಿಷ್ಯ. ಇವೆಲ್ಲ ಅವಳನ್ನು ಹಣ್ಣು ಮಾಡುತ್ತಿದೆ. ಈ ಪುಟ್ಟ ವಯಸ್ಸಿನಲ್ಲಿಯೇ ತನ್ನ ಮಗು ಏನೆಲ್ಲ ಅನುಭವಿಸಬೇಕಾಗಿ ಬಂದಿದೆ. ಗೆಳತಿಯರೊಟ್ಟಿಗೆ ಹಾಡಿ, ಕುಣಿದು ಸಂತೋಷದಿಂದ ಇರಬೇಕಾದ ಸಮಯದಲ್ಲಿ ಮನೆಯ ಸಮಸ್ಯೆ ಹೊತ್ತು ಅದರ ಪರಿಹಾರಕ್ಕಾಗಿ ಹೋರಾಡಬೇಕಾದ ವಿಪರ್ಯಾಸ ಪರಿಸ್ಥಿತಿ. ಏನು ಪಾಪ ಮಾಡಿ ತನ್ನ ಹೊಟ್ಟೆಯಲ್ಲಿ ಹುಟ್ಟಿದ್ದಾಳೋ-ವಿಷಾದಗೊಂಡಳು.

ಸಂಜೆ ಸುಂದರೇಶ್‌ರವರು ಎಲ್‌ಐಸಿ ಏಜೆಂಟ್‌ರನ್ನು ಕರ್ಕೊಂಡು ಮನೆಗೆ ಬಂದರು. ‘ನೋಡಮ್ಮ ನೀಲಾ, ಮೋಹನ್ ಎಲ್ಲಾ ಎಲ್‌ಐಸಿ ಪಾಲಿಸಿನೂ ಇವ್ರ ಹತ್ರವೇ ತಗೊಂಡಿದ್ದು. ಎಲ್ಲಾ ಪ್ರೊಸಿಜರ್ ಅನ್ನೂ ಇವರು ಮಾಡಿಕೊಡ್ತಾರೆ. ಎಲ್ಲೆಲ್ಲಿ ಸೈನ್ ಹಾಕಬೇಕೋ ಹಾಕಿಬಿಡು. ಎಲ್ಲಾ ಪಾಲಿಸಿಗಳಿಗೂ ನೀಲಾದ್ದೇ ನಾಮಿನಿ ಇದೆ. ಇವ್ರೂ ನಮ್ಮ ಸ್ನೇಹಿತರೇ. ಬೇಗ ಎಲ್ಲಾ ಸೈನ್ ಮಾಡಿ ಆದಷ್ಟು ಬೇಗ ಹಣ ಬರೋ ಹಾಗೆ ಮಾಡ್ತಾರೇ’ ಅಂತ ಹೇಳಿದರು. ಇಳಾಗೆ ಒಂದು ದೊಡ್ಡ ಹೊರೆ ತಲೆಮೇಲಿಂದ ಇಳಿದ ಹಾಗಾಯಿತು.

ಎಲ್‌ಐಸಿ ಏಜೆಂಟ್ ಆನಂದ್- ‘ಹೌದು ಮೇಡಂ, ನೀವು ಇದಕ್ಕಾಗಿ ಆಪೀಸ್‌ಗೆ ಅಲಿಬೇಕಾಗಿಲ್ಲ. ಮೋಹನ್ ನಂಗೆ ಒಳ್ಳೆ ಫ್ರೆಂಡಾಗಿದ್ದರು. ಅವರ ಸ್ನೇಹಿತನಾಗಿ ನಾನು ಅಷ್ಟೂ ಮಾಡದೇ ಇದ್ರೆ ಹೇಗೆ. ಬಾಂಡ್‌ಗಳ್ನೆಲ್ಲ ಕೊಡಿ ಮೇಡಂ. ಏನೇ ಆಗಲಿ ಮೋಹನ್ ಹೀಗೆ ಮಾಡಿಕೊಳ್ಳಬಾರದಿತ್ತು. ಈಗ ಸ್ವಲ್ಪ ರಿಸ್ಕ್ ಇದೆ. ಆದ್ರೂ ನಾನೆಲ್ಲ ನೋಡಿಕೊಳ್ತೀನಿ. ನೀವೇನೂ ಯೋಚ್ನೆ ಮಾಡಬೇಡಿ. ನಿಮ್ಗೆ ಹಣ ಕೈ ಸೇರೊವರೆಗೂ ನಾನು ನನ್ನ ಕೆಲ್ಸ ಅಂತ ಪ್ರಯತ್ನಿಸುತ್ತೇನೆ. ಬೇಗ ಆಗುತ್ತೆ- ಅಂತ ಹೇಳಿದ.

ನೀಲಾಗೂ ನೆಮ್ಮದಿ ಎನಿಸಿತು. ಮಗಳು ಓಡಾಡಿ ಕಷ್ಟಪಡುವುದು ತಪ್ಪಿತು. ಆನಂದ್ ಮೋಹನನ ಸ್ನೇಹಿತರೇ ಆಗಿದ್ದು, ಹಿಂದೆ ಮೋಹನನ ಜೊತೆ ಮನೆಗೆ ಆಗಾಗ್ಗೆ ಬರ್ತಾ ಇದ್ದು, ಎಲ್‌ಐಸಿ ಏಜೆಂಟ್ ಆಗಿರುವುದರಿಂದ ಆನಂದ್ ತಮ್ಮ ಕೆಲಸ ಮಾಡಿಕೊಡುವ ಭರವಸೆ ಮೂಡಿತು. ಹೇಗೋ ಒಂದೊಂದೇ ಸಮಸ್ಯೆಗಳು ಪರಿಹಾರವಾದರೆ ಸಾಕು ಅಂತ ಮೌನವಾಗಿಯೇ ಸಮ್ಮತಿಸಿದಳು.

ಇಳಾ ತಾನು ಇಟ್ಟುಕೊಂಡಿದ್ದ ಬಾಂಡ್‌ಗಳನ್ನೆಲ್ಲಾ ಆನಂದ್ ಕೈಗೆ ಕೊಟ್ಟಳು. ಇನ್ನೊಂದು ತಿಂಗಳಲ್ಲಿ ಹಣ ಬರುವಂತೆ ಮಾಡುವ ಆಶ್ವಾಸನೆ ನೀಡಿ ಎಲ್ಲೆಲ್ಲಿ ಸಹಿ ಮಾಡಿಸಿಕೊಳ್ಳಬೇಕು ಅಲ್ಲೆಲ್ಲ ಸಹಿ ಮಾಡಿಸಿಕೊಂಡು ಆನಂದ್ ಹೊರಟು ನಿಂತ. ಆನಂದನನ್ನು ಕಳುಹಿಸಿಕೊಟ್ಟು ಒಳ ಬಂದ ಸುಂದರೇಶ್ ಇಳಾಳನ್ನು ಉದ್ದೇಶಿಸಿ- ‘ಏನು ತೀರ್ಮಾನ ತಗೊಂಡಿದೀಯಾ ಇಳಾ. ಎಂಬಿಬಿ‌ಎಸ್ ಮಾಡೋಕೆ ಆಗದೆ ಇದ್ರೆ ಡಿಗ್ರಿನಾದ್ರೂ ಮಾಡಿಕೋ. ಎಂ.ಎಸ್ಸಿ ಮಾಡಿಕೊಂಡ್ರೆ ಕಾಲೇಜಿನಲ್ಲಿ ಕೆಲಸ ಸಿಗುತ್ತೆ. ಇಲ್ಲಿ ಏನೋ ಒಂದು ವ್ಯವಸ್ಥೆ ಮಾಡೋಣ. ಎಲ್‌ಐಸಿದೂ ಹಣ ಬಂದ್ರೆ ಒಂದಿಷ್ಟು ಬಡ್ಡೀಗೆ ಕಟ್ಟಿ ಉಳಿದಿದ್ದನ್ನು ನಿನ್ನ ಓದಿಗೆ ಇಡೋಣ’ ಸುಂದರೇಶ್ ಕೇಳಿದರು.

‘ಕಾಲೇಜಿಗೆ ಹೋಗಲ್ಲ ಅಂತ ತೀರ್ಮಾನ ಮಾಡಿದ್ದೀನಿ, ದೊಡ್ಡಪ್ಪ. ಕರಸ್ಪಾಂಡನ್ಸ್‌ನಲ್ಲಿ ಡಿಗ್ರಿ ತಗೋತೀನಿ. ನಾನು ಇಲ್ಲೇ ಇರ್ತೀನಿ’ ಮೆಲ್ಲಗೆ ಹೇಳಿದಳು. ‘ಇಲ್ಲಿ ಇದ್ದು ಏನು ಮಾಡ್ತೀಯಾ. ಮದ್ವೆನೂ ಬೇಡ ಅಂತೀಯಾ. ಅಮ್ಮ-ಮಗಳು ಒಬ್ಬರ ಮುಖ ಒಬ್ಬರು ನೋಡಿಕೊಂಡು ಅಳ್ತಾ ಇರ್ತೀರಾ. ನೀನು ಇಲ್ಲಿ ಇರಬೇಡ. ಕಾಲೇಜಿಗೆ ಹೋಗು’ ಆಜ್ಞೆ ದನಿಯಲ್ಲಿ ನುಡಿದರು.

‘ಇಲ್ಲ ದೊಡ್ಡಪ್ಪ, ಹಾಸ್ಪೆಲ್ ಖಾಲಿ ಮಾಡ್ಕೊಂಡು ಬಂದುಬಿಟ್ಟಿದ್ದೀನಿ. ನಾನು ತೋಟ ನೋಡ್ಕೋತೀನಿ’ ಸಣ್ಣ ದನಿಯಲ್ಲಿ ಹೇಳಿದಳು.

‘ತೋಟ ನೋಡ್ಕೋತೀಯಾ ನೀನು’ ಗಟ್ಟಿಯಾಗಿ ನಕ್ಕರು.

‘ಅದು ಅಷ್ಟು ಸುಲಭ ಏನಮ್ಮಾ?’ ನಿಮ್ಮಪ್ಪನಂತ ಅಪ್ಪನೇ ಸೋತು ಮಣ್ಣಾಗಿಹೋದ. ನಿನ್ನಂತ ಹೂವಿನಂತ ಹುಡುಗಿ ಮಣ್ಣಿನ ಜೊತೆ ಏಗೋಕೆ ಸಾಧ್ಯಾನಾ? ಅದೆಲ್ಲ ಆಗದ ಹೋಗದ ಮಾತು. ಕಾಲೇಜು ಅಥವಾ ಮದ್ವೆ ಎರಡರಲ್ಲಿ ಒಂದು ತೀರ್ಮಾನ ಮಾಡ್ಕೋ. ಏನಮ್ಮಾ ನೀಲಾ ನೀನು ಏನು ಹೇಳ್ತೀಯ?’

ನೀಲಾಗೂ ಶಾಕ್ ಆಗಿತ್ತು ಮಗಳ ಮಾತು ಕೇಳಿ. ಭಾವನ ಅನಿಸಿಕೆಯೇ ಅವಳದ್ದು. ಡಿಗ್ರಿನಾದ್ರೂ ಮಾಡಲಿ ಅಂತ ಅವಳೂ ಅಂದುಕೊಂಡಿದ್ದಳು. ಇಷ್ಟು ಬೇಗ ಮದ್ವೆ ಅಂತೂ ಬೇಡ. ಆದ್ರೆ ಇಳಾ ಇದೇನು ಹೇಳ್ತಾ ಇದ್ದಾಳೆ. ಅವಳು ತೋಟ ನೋಡ್ಕೋತಾಳಾ? ತೀರಿಸೋಕೆ ಆಗದೆ ಇರೋ ಅಷ್ಟು ಸಾಲ ಇದೆ. ಪರಿಸ್ಥಿತಿ ಹೀಗಿರುವಾಗ ತೋಟದ ಬಗ್ಗೆ ಏನೂ ಗೊತ್ತಿಲ್ಲದ ಇವಳು ತೋಟ ನೋಡ್ಕೋತಾಳಾ. ಹುಚ್ಚು ಹುಡುಗಿ. ತೋಟ ಮಾಡಿಸೋದು ಅಂದ್ರೆ ಡ್ರೆಸ್ ಮಾಡಿಕೊಂಡು ಕಾಲೇಜಿಗೆ ಹೋದಷ್ಟು ಸುಲಭ ಅಂದುಕೊಂಡಿದ್ದಾಳೆ. ಪಾಪ ಮಗು ಅದು. ಅದಕ್ಕೇನು ಗೊತ್ತಾಗುತ್ತೆ.

‘ಅವಳಿಗೇನು ಗೊತ್ತಾಗುತ್ತೆ ಭಾವ. ಓದ್ತಾ ಇದ್ದ ಮಗು ಅಪ್ಪಂಗೆ ಹೀಗಾಯ್ತಲ್ಲ ಅಂತ ಏನೇನೋ ಹೇಳ್ತಾಳೆ. ಈ ವರ್ಷ ಅಂತು ಕಾಲೇಜಿಗೆ ಹೋಗೋಕೆ ಆಗಲ್ಲ. ಅಲ್ಲಿವರೆಗೂ ಮನೆಯಲ್ಲೇ ಇರ್ತಾಳೆ. ಇಲ್ಲಿಯೇ ಪರೀಕ್ಷೆಗೆ ಓದಿ ಪಿಯುಸಿ ಮಾಡಿಕೊಳ್ತಾಳೆ. ಮುಂದಿನ ವರ್ಷ ಕಾಲೇಜಿಗೆ ಸೇರಿಸಿದರೆ, ಆಯ್ತು’ ಅಂದಳು ನೀಲಾ.

‘ಸರಿ ಹಾಗಾದ್ರೆ, ಇಲ್ಲಿಯೇ ಓದಿಕೊಳ್ಳಲಿ. ತೋಟ ಗೀಟ ಅಂತ ತಲೆ ಕಡಿಸಿಕೊಳ್ಳಬೇಡ ಇಳಾ ನಾನು ಬರ್ತೀನಿ. ಸಕಲೇಶಪುರಕ್ಕೆ ಹೋಗಬೇಕು’ ಎಂದು ಹೊರಟು ನಿಂತರು. ಸರಿ ಎನ್ನುವಂತೆ ಎದ್ದು ನಿಂತು ಬೀಳ್ಕೊಟ್ಟರು.

ಭಾವ ಅತ್ತ ಹೋಗುತ್ತಿದ್ದಂತೆ ‘ಇಳಾ ನೀನು ಏನು ಮಾಡ್ತಾ ಇದ್ದೀಯಾ ಅಂತಾ ಗೊತ್ತಾ, ತೋಟ ನೋಡ್ಕೋತೀನಿ ಅಂತ ಅಷ್ಟು ಸುಲಭವಾಗಿ ಹೇಳ್ತಾ ಇದ್ದೀಯಲ್ಲ. ಈ ತೀರ್ಮಾನ ತಗೊಳ್ಳೊಕ್ಕೆ ಯಾರು ನಿಂಗೆ ಅನುಮತಿ ಕೊಟ್ಟರು. ನಿಮ್ಮಪ್ಪ ಮಾತ್ರ ಸತ್ತಿದ್ದಾರೆ, ನಾನಿನ್ನೂ ಬದುಕಿದ್ದೀನಿ ಕಣೆ’ ನೀಲಾ ವ್ಯಥಿತಳಾಗಿ ಹೇಳಿದರೆ ಅದೊಂದು ರೀತಿಯಾಗಿ ತಾಯಿಯನ್ನು ನೋಡಿದ ಇಳಾ ಒಂದೂ ಮಾತಾಡದೆ ಒಳಹೋಗಿಬಿಟ್ಟಳು.

‘ದೊಡ್ಡಮ್ಮಾ… ದೊಡ್ಡಮ್ಮಾ… ಬನ್ನಿ ಇಲ್ಲಿ’ ಕೂಗು ಹಾಕಿದಳು. ಹಿತ್ತಲಲ್ಲಿದ್ದ ಅಂಬುಜಮ್ಮ ಗಾಭರಿಯಾಗಿ, ದಡದಡನೆ ಬಂದು-

‘ಏನಾಯ್ತು ನೀಲಾ, ಯಾಕೆ ಹಾಗೆ ಕೂಕ್ಕೊಂಡೆ, ಇಳಾ ಎಲ್ಲಿ. ನಿಮ್ಮ ಭಾವ ಹೋದ್ರಾ…’ ಒಂದೇ ಸಮನೆ ಪ್ರಶ್ನೆ ಹಾಕಿದರು ಅಂಬುಜಮ್ಮ.

‘ಗಾಭರಿ ಆಗುವಂತದ್ದು ಏನೂ ಇಲ್ಲ ದೊಡ್ಡಮ್ಮ- ಕೂತ್ಕೊಳ್ಳಿ ಸ್ವಲ್ಪ’ ಸಾವಧಾನವಾಗಿ ಅವರು ಕೂರೋ ತನಕ ಸುಮ್ಮನಿದ್ದ ನೀಲಾ –

‘ದೊಡ್ಡಮ್ಮ, ಇಳಾ ಅವರ ದೊಡ್ಡಪ್ಪನ ಮುಂದೆ ಏನು ಹೇಳಿದ್ಳು ಗೊತ್ತಾ. ಅವಳು ಮತ್ತೇ ಓದೋಕೆ ಕಾಲೇಜಿಗೆ ಹೋಗುವುದಿಲ್ಲವಂತೆ. ತೋಟ ಮಾಡ್ತಾಳಂತೆ. ಅವರಪ್ಪನಿಗೆ ಆಗದೆ ಇರೋದನ್ನ ಇವಳು ಮಾಡ್ತಾಳಂತೆ. ನೋಡಿದ್ರಾ ದೊಡ್ಡಮ್ಮ. ಇವಳು ಹೇಗೆ ಆಡ್ತಾ ಇದ್ದಾಳೆ ಅಂತ. ನಾನು ಯಾಕೆ ಹೀಗೆ, ನಿಂಗೆ ಯಾರು ಪರ್ಮಿಷನ್ ಕೋಟ್ಟೋರು. ನಾನಿನ್ನೂ ಬದುಕಿದೀನಿ. ಅಂದ್ರೆ ಅದೆಷ್ಟು, ನಿರ್ಲಕ್ಷ್ಯವಾಗಿ ನನ್ಕಡೆ ನೋಡ್ಕೊಂಡು ಹೋದಳು ಅಂತ. ನಿಮ್ಗೆ ಆರ್ಥವಾಗ್ತಾ ಇಲ್ಲಾ ದೊಡ್ಡಮ್ಮ. ಅವಳಿಗೆ ನನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ. ಮೋಹನ ಸತ್ತಾಗಿನಿಂದಲೂ ನನ್ನ ಜೊತೆ ಒಂದೇ ಒಂದು ಮಾತಾಡಿಲ್ಲ ದೊಡ್ಡಮ್ಮ’ ನೀಲಾ ಅಳುವಂತೆ ಹೇಳಿದಳು.

ಈ ವಿಚಾರ ಅಂಬುಜಮ್ಮನ ಗಮನಕ್ಕೂ ಬಂದಿತ್ತು. ಆದರೆ ತನ್ನ ತಿಳುವಳಿಕೇನೇ ಸರಿ ಇಲ್ಲವೇನೋ ಅಂತ ಅಂದುಕೊಂಡು ಆ ವಿಚಾರವನ್ನು ಮನಸ್ಸಿನಿಂದ ತೆಗೆದುಹಾಕಿದ್ದರು. ನಮ್ಮೊಂದಿಗೆ ಅಷ್ಟೊಂದು ಪ್ರೀತಿಯಿಂದ ಮಾತಾಡುತ್ತಾಳೆ. ದೊಡ್ಡಪ್ಪನ ಜೊತೆ ಅಷ್ಟೊಂದು ಪ್ರೀತಿಯಿಂದ ನಡ್ಕೋತಾಳೆ. ಆದರೆ ತಾಯಿ ಜೊತೆ ಯಾಕೆ ಇಳಾ ಮಾತೇ ಆಡ್ತಾ ಇಲ್ಲ. ಮೊದ್ಲೇ ನೀಲ ನೊಂದಿದ್ದಾಳೆ. ಮೋಹನನ ಸಾವಿನ ದುಃಖವೇ ಆರಿಲ್ಲ. ಇನ್ನು ಇರೋ ಒಬ್ಬ ಮಗಳು ಹೀಗೆ ನಡ್ಕೊಂಡುಬಿಟ್ಟರೆ ಅವಳು ಎಲ್ಲಿ ಹೋಗಬೇಕು? ಬಿಸಿಯಲ್ಲಿಯೇ ಇದನ್ನು ವಿಚಾರಿಸಬೇಕು. ಮೊಳಕೆಯಲ್ಲಿಯೇ ಈ ಅಸಮಾಧಾನಗಳನ್ನು ಚಿವುಟಿ ಹಾಕಿಬಿಡಬೇಕು. ಅಂಥ ಅಸಮಾಧಾನ ಏನಿದೆ ತಾಯಿ ಮೇಲೆ ಮಗಳಿಗೆ. ಇರೋರು ಇವರಿಬ್ಬರು. ಒಬ್ಬರಿಗೊಬ್ಬರು ಅವರುಗಳೇ ಆಸರೆ ತಾನೇ. ಈ ಇಳಾ ಅದ್ಯಾಕೆ ಹಾಗೆ ವರ್ತಿಸುತ್ತಿದ್ದಾಳೆ. ಬುದ್ಧೀ ಹೇಳಬೇಕು ಅಂದ್ಕೊಂಡು-

‘ಇಳಾ, ಇಳಾ, ಬಾ ತಾಯಿ ಇಲ್ಲಿ, ನಿನ್ಹತ್ರ ಮಾತಾಡಬೇಕು’ ಇಳಾ ರೂಮಿನ ಹತ್ತಿರ ಹೋಗಿ ಕರೆದರು. ‘ಅಜ್ಜಿ ನಾನು ಮಲ್ಕೊಂಡಿದ್ದೀನಿ, ನನ್ನ ಡಿಸ್ಟರ್ಬ್‌ ಮಾಡಬೇಡ’ ಅಲ್ಲಿಂದಲೇ ಹೇಳಿದಳು.

‘ಇಷ್ಟು ಹೊತ್ತಿನಲ್ಲಿ ಎಂತದ್ದು ಮಲಗುವುದು ಏಳು, ದೀಪ ಹಚ್ಚೋ ಸಮಯ, ಈ ಸಮಯದಲ್ಲಿ ಮಲಗಬಾರದು ಎದ್ದೇಳು’ ಬಲವಂತಿಸಿದರು.

‘ಹೋಗಜ್ಜಿ, ಸಾಕಾಗಿ ಹೋಗಿದೆ. ಮೈಕೈಯಲ್ಲಾ ನೋವು, ಇವತ್ತೊಂದು ದಿನ ನನ್ನ ಬಿಟ್ಟುಬಿಡು ಅಜ್ಜಿ ಪ್ಲೀಸ್’ ಮುದ್ದುಗರೆದಳು.

‘ಏಳು ಚಿನ್ನಾ, ನಿನ್ನತ್ರ ಒಂದು ವಿಷಯ ಮಾತಾಡಬೇಕು. ನಾಳೆ ಅಂತ ಮುಂದೂಡುವುದು ಬೇಡ, ಬಾ ಚಿನ್ನ’ ಅವಳ ಎರಡೂ ಕೈಗಳನ್ನು ಎತ್ತಿ ಮಗುವನ್ನು ತಬ್ಬಿಕೊಳ್ಳುವಂತೆ ತಬ್ಬಿಕೊಂಡು ಏಳಿಸಲು ಯತ್ನಿಸಿದರು.

‘ಥೂ ಈ ಅಜ್ಜಿ ಒಂದು, ನೆಮ್ಮದಿಯಾಗಿ ಮಲಗೋಕು ಬಿಡುವುದಿಲ್ಲ, ಅದೇನು ಅಂತ ಮಹತ್ಕಾರ್ಯದ ಮಾತೋ ಆಡಬೇಕಾಗಿರುವುದು’ ಗೊಣಗುಡುತ್ತ ಅಜ್ಜಿಯಿಂದ ಕೈ ಬಿಡಿಸಿಕೊಂಡು ಎದ್ದಳು.

ಶೂನ್ಯದತ್ತ ದೃಷ್ಟಿನೆಟ್ಟು ನೀಲಾ ಸುಮ್ಮನೆ ಕುಳಿತಿದ್ದಳು. ಅವಳ ಎದುರಿಗೆ ಇಳಾ ಬಂದು ಕುಳಿತಳು. ಅಜ್ಜಿ ಇಳಾಳಾ ಪಕ್ಕ ಕುಳಿತು ‘ಪುಟ್ಟಾ ನಿಮ್ಮಮ್ಮ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ನೀನು ಅವಳ ಜೊತೆ ನಿಮ್ಮ ಅಪ್ಪ ಸತ್ತಾಗಲಿಂದ ಮಾತಾಡ್ತಾನೇ ಇಲ್ವಂತೆ, ನೀನೇ ಏನು ಬೇಕಾದ್ರೂ ತೀರ್ಮಾನ ತಗೊತ್ತಿದ್ದಿಯಂತೆ, ಅಮ್ಮನ್ನ ಏನೂ ಕೇಳ್ತಾ ಇಲ್ವಂತೆ, ಯಾಕೆ ಪುಟ್ಟಾ, ಅಮ್ಮನ ಮೇಲೆ ನಿಂಗ್ಯಾಕೆ ಕೋಪ, ಅಮ್ಮ ಮೊದ್ಲೆ ದುಃಖದಲ್ಲಿದ್ದಾಳೆ. ಆವಳ್ನ ಯಾಕೆ ನೋಯಿಸ್ತೀಯಾ’ ಕಳಕಳಿಯಿಂದ ಮೊಮ್ಮಗಳ ನೆತ್ತಿ ಸವರುತ್ತ ಕೇಳಿದರು.

‘ನಂಗ್ಯಾಕೆ ಅಜ್ಜಿ ಕೋಪ, ನಂಗೆ ಯಾರ ಮೇಲೂ ಕೋಪ ಇಲ್ಲಾ, ನನ್ನ ಮೇಲೆ ನಂಗೆ ಕೋಪ’ ಎತ್ತಲೋ ನೋಡುತ್ತ ಹೇಳಿದಳು. ಆ ಧ್ವನಿಯಲ್ಲಿ ನೋವಿನ ಎಳೆ ಇತ್ತು. ತಟ್ಟನೆ ಇತ್ತ ತಿರುಗಿದ ನೀಲಾ ಮತ್ಯಾಕೆ ನನ್ನ ಜೊತೆ ಮಾತಾಡ್ತ ಇಲ್ಲಾ. ನನ್ನ ಮುಖ ನೋಡ್ತ ಇಲ್ಲಾ, ನನ್ನ ಏನೂ ಕೇಳ್ದೆ ಹಾಸ್ಟಲಿನಿಂದ ರೂಮು ಖಾಲಿ ಮಾಡ್ದೆ. ನಾನು ಸತ್ತುಹೋಗಿದ್ದೀನಿ ಅಂತ ತಿಳ್ಕೊಂಡಿದ್ದೀಯಾ’ ಧ್ವನಿ ಕೊಂಚ ಬಿರುಸಾಗಿತ್ತು. ಅದಕ್ಕೂ ಏನೂ ಉತ್ತರ ಹೇಳದೆ ಇಳಾ ಸುಮ್ಮನೇ ಕುಳಿತಿದ್ದಳು.

‘ಮಾತಾಡು ಪುಟ್ಟ, ಏನಾದ್ರೂ ಹೇಳು. ನಾನು ಗಮನಿಸಿದ್ದೇನೆ, ನೀನು ನೀಲಾನ ಜೊತೆ ಮಾತಾಡ್ತ ಇಲ್ಲ, ಅವಳ ಕಡೆ ನೋಡ್ತಾನೂ ಇಲ್ಲ ಅಂತ ನಂಗೂ ಗೊತ್ತಾಗಿದೆ. ಯಾಕಪ್ಪಾ ನಿಂಗೆ ಅಮ್ಮನ ಮೇಲೆ ಬೇಸರ, ಹೇಳೋ ಬಂಗಾರ’ ತಮ್ಮೆಡೆಗೆ ಎಳೆದುಕೊಂಡು ಇಳಾಳನ್ನು ಪ್ರಶ್ನಿಸಿದರು.

‘ಮುದ್ದು, ನಿಂಗೆ ಅಮ್ಮನ್ನ ಬಿಟ್ರೆ ಬೇರೆ ಯಾರಿದ್ದಾರೆ ಹೇಳು. ಅವಳಿಗೆ ನೀನು, ನಿನಗೆ ಆವಳೇ ಆಸರೆ ತಾನೆ, ಹೀಗೆ ಮನಸ್ಸಿನಲ್ಲಿ ಏನೋ ಇಟ್ಕೊಂಡು ಅಮ್ಮನ್ನ ನೋಯಿಸಬೇಡ ಕಣೆ, ಅದೇನು ನಿನ್ನ ಮನಸ್ಸಿನಲ್ಲಿದೆ ಅಂತ ಹೇಳಿಬಿಡು’ ಬಲವಂತಿಸಿದರು. ಕಾತರದಿಂದ ನೀಲಾ ಕೂಡ ಮಗಳತ್ತಲೇ ದೃಷ್ಟಿ ನೆಟ್ಟಿದ್ದಳು. ‘ಅಮ್ಮಂಗೆ ನನ್ನ ನೆನಪಾದ್ರೂ ಇದೆಯಾ ಅಜ್ಜಿ, ನಂಗೆ ಬೇರೆ ಯಾರೂ ಇಲ್ಲಾ ಅಂತ ಅಮ್ಮಂಗೆ ಗೊತ್ತಿದ್ರೆ, ಅಪ್ಪನ ಜೊತೆ ಅಮ್ಮನೂ ಹೋಗೋಕೆ ಮನಸ್ಸು ಮಾಡ್ತಾ ಇದ್ಲಾ, ಅಪ್ಪ ಸತ್ತೋಗಿರೋ ವಿಚಾರ ಗೊತ್ತಾದ ಕೂಡ್ಲೇ ನಾನು ಒಂಟಿಯಾಗ್ತೀನಿ ಅಂತ ಯೋಚ್ನೆ ಕೂಡ ಮಾಡದ ಸಾಯೋಕೆ ಹೋಗಿದ್ರಲ್ಲ, ಆಗ ನನ್ನ ನೆನಪಾಗಿರಲಿಲ್ಲವಾ, ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರೂ ಅಮ್ಮನೂ ಅಪ್ಪನ ಜೊತೆ ಹೋಗಿ ಆಗಿರುತ್ತಿತ್ತು. ನಾನು ತಬ್ಬಲಿಯಾಗಿಯೇ ಈ ಪ್ರಪಂಚದಲ್ಲಿ ನಿಲ್ಲಬೇಕಿತ್ತಲ್ಲ, ಮಗಳು ಅನ್ನೋ ಮಮಕಾರವಿಲ್ಲದೆ ಅಮ್ಮ ಯಾವತ್ತು ಬೇಕಾದ್ರೂ ಅಪ್ಪನತ್ರ ಹೋಗಬಹುದು, ಅದಕ್ಕೆ ನಾನು ಇವಾಗಿನಿಂದಲೇ ಅಮ್ಮ ಇಲ್ಲದೆ ಜೀವನ ಮಾಡೋಕೆ ಕಲಿತಾ ಇದ್ದೀನಿ’ ಏರುಪೇರಿಲ್ಲದೆ ಇಳಾ ಹೇಳ್ತಾ ಇದ್ರೆ ನೀಲಾಳ ಜೊತೆ ಅಂಬುಜಮ್ಮ ಕೂಡ ಗಟ್ಟಿಯಾಗಿ ಅತ್ತುಬಿಟ್ಟರು.

‘ಅಯ್ಯೋ ಚಿನ್ನ ನನ್ನ ಕ್ಷಮಿಸಿಬಿಡು. ನಾನು ದೊಡ್ಡ ತಪ್ಪು ಮಾಡ್ತ ಇದ್ದೆ. ದೇವರೇ ನನ್ನ ಉಳಿಸಿದ್ದಾನೆ. ಮತ್ತೆಂದೂ ಇಂಥ ತಪ್ಪು ಮಾಡಲ್ಲ ಇಳಾ, ನಂಗೆ ಆ ಘಳಿಗೇಲಿ ಅದೇನು ಮಂಕು ಕವಿದಿತ್ತೋ, ಮೋಹನ ಇಲ್ಲದೆ ಬದುಕು ನಂಗೂಬೇಡಾ ಅನ್ನಿಸಿಬಿಟ್ಟಿತ್ತು. ಆದ್ರೆ ನಿನ್ನ ಆ ಕ್ಷಣ ನೆನೆಸಿಕೊಳ್ಳದೆ ಎಂಥ ದೊಡ್ಡ ತಪ್ಪು ಮಾಡಿಬಿಟ್ಟೆ, ನಾನೂ ಇಲ್ಲದೆ, ಮೋಹನ ಇಲ್ಲದೆ- ಒಂಟಿಯಾಗಿ ನೀನಿರ್ತೀಯಾ ಅನ್ನೋ ಕಲ್ಪನೆ ಕೂಡ ನನ್ನಿಂದ ಕಲ್ಪಿಸೋಕೆ ಆಗ್ತಾ ಇಲ್ಲಾ. ಈಗ ನಂಗೆ ಅರ್ಥವಾಗ್ತಾ ಇದೆ. ನಿನ್ನ ನೋವು ನಂಗೆ ಗೊತ್ತಾಯ್ತು. ನನ್ನ ಕ್ಷಮ್ಸಿ ಬಿಡು ಇಳಾ’ ಮಗಳ ಕಾಲಬಳಿ ಕುಳಿತು ಅವಳ ತೊಡೆ ಮೇಲೆ ತಲೆ ಇರಿಸಿ ಬಿಕ್ಕಿ ಬಿಕ್ಕಿ ಅತ್ತಳು.

ಇಳಾ ಕೂಡಾ ಕಣ್ಣೀರಿಡ್ತಾ ಇದ್ದಾಳೆ. ಅಮ್ಮ ಮಗಳು ಇಬ್ರೂ ಸಾಕಷ್ಟು ಅತ್ತರು. ಇಬ್ಬರ ಮನಸ್ಸಿನ ಕಲ್ಮಶಗಳೆಲ್ಲ ಕಣ್ಣೀರಿನ ಮೂಲಕ ತೊಡೆದು ಹೋಗಲಿ ಅಂತ ಅಂಬುಜಮ್ಮ ಹನಿಗಣ್ಣಾಗಿ ನೋಡುತ್ತ ಸುಮ್ಮನಿದ್ದುಬಿಟ್ಟರು. ಒಂದಿಷ್ಟು ಹೊತ್ತು ಅತ್ತ ತಾಯಿ-ಮಗಳು ಸಮಾಧಾನಗೊಂಡವರಂತೆ ಕಣ್ಣೀರು ಒರೆಸಿಕೊಂಡರು.

‘ಚಿನ್ನ, ಇನ್ನೂ ನನ್ನ ಕ್ಷಮಿಸಲ್ವಾ, ಯಾವುದೋ ಆವೇಶದಲ್ಲಿ ನಿನ್ನ ಕ್ಷಣ ಮರೆತದಕ್ಕೆ ಇಷ್ಟು ದೊಡ್ಡ ಶಿಕ್ಷೆ ಕೊಡಬೇಡಾ ಕಣೆ, ನನಗೆ ಉಳಿದಿರೋಳು ನೀನೊಬ್ಳೆ. ನಿಮ್ಮಪ್ಪ ಅಂತೂ ನಮ್ಮ ಕೈ ಬಿಟ್ಟು ಹೋದ್ರು, ನೀನಾದ್ರೂ ನನ್ನ ಪಾಲಿಗೆ ಇದ್ದೀಯಾ ಅನ್ನೊ ಸಮಾಧಾನದಲ್ಲಿ ಬದುಕ್ತಾ ಇದ್ದೇನೆ, ನನ್ನ ದೂರ ಇಟ್ಟು ಕೊಲ್ಲಬೇಡ್ವೆ’ ಮಗಳನ್ನು ಬೇಡಿಕೊಂಡಳು.

‘ಅಮ್ಮಾ ಅಮ್ಮ’ ಅಂತ ಇಳಾ ನೀಲಾಳ ಕೊರಳನ್ನು ತಬ್ಬಿದಳು.

ಅಂತೂ ಮಗಳು ತಾಯಿ ಜೊತೆ ಮಾತಾಡಿಬಿಟ್ಟಳು. ಸಧ್ಯ ಇಷ್ಟು ಬೇಗ ಅಮ್ಮ ಮಗಳ ಮುನಿಸು ಕೊನೆಗೊಂಡಿತಲ್ಲ ಅಂತ ಸಂತಸಪಟ್ಟ ಅಂಬುಜಮ್ಮ.

‘ಸಾಕು ಏಳಿ, ಇಷ್ಟು ಅತ್ತದ್ದು ಸಾಕು. ಅಮ್ಮನೂ ತಪ್ಪು ಮಾಡಿದ್ಲು, ಅಮ್ಮನಂತೆ ಮಗಳಲ್ವಾ, ಮಗಳೂ ತಪ್ಪು ಮಾಡಿದಳು. ಇನ್ನು ಮೇಲಾದ್ರೂ ಅದನ್ನೆಲ್ಲ ಮರೆತು ಮುಂದೇನು ಮಾಡಬೇಕೊ ಮಾತಾಡಿಕೊಳ್ಳಿ, ಎದ್ದೇಳಿ ಅತ್ತು ಅತ್ತು ಸಾಕಾಗಿದ್ದೀರಾ, ಬಿಸಿ ಬಿಸಿ ಕಾಫಿ ತರ್ತೀನಿ’ ಎನ್ನುತ್ತ ಒಳ ಹೋಗಿ ಮೂರು ಲೋಟ ಕಾಫಿ ತಂದು ಇಬ್ಬರಿಗೂ ಒಂದೊಂದು ಲೋಟ ಕೊಟ್ಟು ತಾವು ಒಂದು ಲೋಟ ಹಿಡಿದು ಕುಳಿತರು. ಒಂದು ಪ್ರಕರಣ ಸುಖಾಂತ್ಯ ಕಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸ್ಪೃಶ್ಯನಾರು?
Next post ಮಿಂಚುಳ್ಳಿ ಬೆಳಕಿಂಡಿ – ೪೦

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys