‘ಅಸ್ಪೃಶ್ಯ ಚಂಡಾಲ ಪಂಚಮ ಹೊಲೆಯ’ರೆಂದು
ದೂರವಿಟ್ಟಿಹೆವಲ್ಲ ನಮ್ಮ ಸಮ ಸೋದರರ?
ಅನ್ಯತ್ರವಿಲ್ಲದಿಹ ಹೊಲೆಯದೇನವರ?
ನಾವೆ ಮಾಡಲು ಹೇಸುವೆಮ್ಮ ಸೇವೆಯನಿಂದು
ಅವರು ಮಾಡುತಲಿಹುದೆ ಅವರಿಗಂಟಿದ ಹೊಲೆಯೆ?
ಸಲ್ಲದಿಲ್ಲದ ಸತ್ತ ಶಾಸ್ತ್ರದಾಧಾರವನು
ಕೊಟ್ಟು, ಅವರಿಗೆ ಹುಟ್ಟು ಹೊಲೆಯ ಭಾರವನು
ಹೇರೆ ನಾವೊಪ್ಪಿಹೆವು: ಇದುವೆ ಧರ್ಮದ ನೆಲೆಯೆ?
ಎನಿತೊ ಶತಮಾನಂಗಳಿಂದವರ ನಾವ್ ತುಳಿದು
ಗೈದ ಪಾಪದ ಫಲವೆ ನಮ್ಮ ಇಂದಿನ ದಾಸ್ಯ:
ನಮ್ಮೊಳೊಬ್ಬೊಬ್ಬನೂ ಇಂದು ತಾನಸ್ಪೃಶ್ಯ
ಆ ದೇವನಿದಿರಿನಲಿ: ನಮಗವನು ಕಡುಮುಳಿದು
ನಮ್ಮನಿರಿಸಿಹ ದೂರ, ಬಯಸಿ ನಮ್ಮಯ ಆತ್ಮಶುದ್ಧಿ;
ನಾವ್ ಶುದ್ಧರಾಗಲೊಲಿವನು: ಅಂದು ಬಿಡುಗಡೆಯ ಸಿದ್ಧಿ.
*****